ದಲಿತ ಪದಕಥನ -8 : ಸಕಲ ಜೀವಿಗಳಿಗೂ ಸಂಬಂಧಿಸಿದ್ದು ಈ ಭೂಮಿ

- ಮೊಗಳ್ಳಿ ಗಣೇಶ್

ಭೂಮಿ
ನಮ್ಮ ಪಾಲಿಗೆ ಭೂಮಿಯು ಒಂದು ಕನಸು. ತುಂಡು ಭೂಮಿಗಾಗಿ ನಮ್ಮಲ್ಲಿ ಅನೇಕರು ಹತ್ತಾರು ವರ್ಷಗಳ ಕಾಲ ಭೂಮಾಲೀಕರ ಹೊಲಗದ್ದೆಗಳಲ್ಲಿ ಜೀತ ಮಾಡಿ ಕೊನೆಗೂ ಒಡೆಯರು ಭೂಮಿ ಕೊಡದೆ ಸತ್ತಿದ್ದಕ್ಕೆ ಜೀವಂತ ದಾಖಲೆಗಳಿವೆ. ಚೋಮನ ದುಡಿ ಕಾದಂಬರಿಯಲ್ಲಿ ಬರುವ ಚೋಮನ ಬಗ್ಗೆ ಶಿವರಾಮ ಕಾರಂತರು ಆದ್ರ್ರವಾಗಿ ಚಿತ್ರಿಸುವ ಬಗೆಯು ದಲಿತರ ಭೂಮಿಯ ಕನಸು ಯಾವ ಮಟ್ಟದ್ದು ಎಂಬುದನ್ನು ಮಾರ್ಮಿಕವಾಗಿ ಧ್ವನಿಸುತ್ತದೆ. ನಮ್ಮವರು ‘ಭೂಮ್ತಾಯಿ’ ಎಂದು ಭೂಮಿಯನ್ನು ಕರೆದು ತಾವು ಭೂಮಿ ತಾಯಿಯ ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಭೂಮಿಯ ಮಕ್ಕಳಾದ ನಮಗೆ ಭೂಮಿಯೇ ಇರಲಿಲ್ಲ. ಭೂಮಿಯ ಮೇಲೆ ನಾವು ಹಕ್ಕು ಚಲಾಯಿಸಿದರೆ ಊರಿಂದಲೇ ಎತ್ತಂಗಡಿ ಮಾಡಿಸುವ ಪ್ರಸಂಗಗಳು ಏರ್ಪಡುತ್ತಿದ್ದವು. ಭೂಮಿಗೂ ನಮಗೂ ನೇರ ಸಂಬಂಧವಿತ್ತು. ಸದಾ ಭೂಮಿಯಲ್ಲಿ ದುಡಿದೇ ಬದುಕಬೇಕಿತ್ತು.

By Yann (Own work) [GFDL (http://www.gnu.org/copyleft/fdl.html) or CC BY-SA 4.0-3.0-2.5-2.0-1.0 (http://creativecommons.org/licenses/by-sa/4.0-3.0-2.5-2.0-1.0)]

By Yann (Own work) [GFDL (http://www.gnu.org/copyleft/fdl.html) or CC BY-SA 4.0-3.0-2.5-2.0-1.0 (http://creativecommons.org/licenses/by-sa/4.0-3.0-2.5-2.0-1.0)]

ಹೀಗಾಗಿ ಭೂಮಿ ಎಂದರೆ ದುಡಿಮೆ ಎಂತಲೂ, ಬದುಕು ಎಂತಲೂ, ಅನ್ನ ಎಂತಲೂ, ನೆಲೆ ನಿಲ್ಲಲು ಇರುವ ಒಂದು ದೈವ ಎಂತಲೂ ಭಾಸವಾಗುತ್ತಿತ್ತು. ಊರ ಮೇಲಿನವರ ಫಲಭರಿತ ಹೊಲಗದ್ದೆಗಳನ್ನು ಕಣ್ಣ ತುಂಬ ತುಂಬಿಕೊಳ್ಳುತ್ತಿದ್ದೆವು. ನಮ್ಮ ಪಾಲಿಗೆ ಯಾಕೆ ಭೂಮಿಯೇ ಇಲ್ಲ ಎಂದು ಕೇಳಿದರೆ, ಒಂದು ಕಾಲಕ್ಕೆ ಎಲ್ಲಾ ಹೊಲಗದ್ದೆಗಳೂ ನಮ್ಮವೇ ಆಗಿದ್ದವು. ಹೊಲಗಳನ್ನೇ ಬದುಕು ಮಾಡಿಕೊಂಡು ಹೊಲಗಳಲ್ಲೇ ಇದ್ದಿದ್ದರಿಂದಲೇ ನಮಗೆ ಹೊಲೆಯರು ಎಂಬ ಹೆಸರು ಬಂದಿದ್ದುದು. ನಮ್ಮ ಹೊಲಗಳನ್ನೆಲ್ಲ ವಕ್ಕಲಿಗರು ಕಿತ್ತುಕೊಂಡರು. ಆವತ್ತಿನಿಂದ ನಮಗೆ ಯಾವ ಹೊಲಗದ್ದೆಗಳೂ ಇಲ್ಲವಾದವು ಎಂಬ ಭಾವನಾತ್ಮಕವಾದ ಕಥೆಯನ್ನು ಹಿರಿಯರು ಹೇಳಿ ಅದರಲ್ಲೇ ಒಂದು ರಮ್ಯ ಸಮಾದಾನವನ್ನು ಮಾಡಿಕೊಳ್ಳುತ್ತಿದ್ದರು. ತೋಟಿ ತಳವಾರ ಕುಳವಾಡಿಗಳಿಗೆ ಮಾತ್ರ ಒಂದಿಷ್ಟು ವ್ಯರ್ಥ ಜಮೀನುಗಳನ್ನು ಕೊಡಲಾಗಿತ್ತು. ಆ ಜಮೀನುಗಳನ್ನು ಅವರ್ಯಾರೂ ವ್ಯವಸಾಯ ಮಾಡಲು ಬಳಸುತ್ತಿರಲಿಲ್ಲ ಮೇಲಿನವರೇ ಆ ಜಮೀನುಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು.

ಭೂಮಿಯೇ ಚಾಪೆ, ಆಕಾಸವೇ ಹೊದಿಕೆ ಎಂದು ನಿಟ್ಟುಸಿರು ಬಿಡುವುದಿತ್ತು. ಹೇಗೊ ಪೂರ್ವಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ನಮ್ಮ ಜಮೀನುಗಳನ್ನು ಉಳ್ಳವರು ತರಾವರಿ ತಂತ್ರ ಮಾಡಿ ಕಿತ್ತುಕೊಳ್ಳದೆ ಬಿಡುತ್ತಿರಲಿಲ್ಲ. ಒಂದು ಕಾಲಕ್ಕೆ ನಮ್ಮ ಊರಿನ ಎಂಡದ ಸಾಹುಕಾರರೊಬ್ಬರು ನಮ್ಮ ಕೇರಿಯವರನ್ನು ಉಪಾಯದ ಪ್ರೀತಿಯಲ್ಲಿ ಕರೆದು ಮೂಗಿನ ತನಕ ಎಂಡ ಕುಡಿಸಿ ಪತ್ರಕ್ಕೆ ಸಹಿ ಮಾಡಿಸಿಯೋ, ಹೆಬ್ಬಟ್ಟಿನ ಗುರುತನ್ನು ಒತ್ತಿಸಿಕೊಂಡೊ ಕಳುಹಿಸಿ ಅವರ ಜಮೀನನ್ನು ಲಪಟಾಯಿಸುತ್ತಿದ್ದರು. ಒಂದು ವೇಳೆ ವಿಧವೆಯರಾಗಿದ್ದರೆ ಅವರನ್ನು ಸುಲಭವಾಗಿ ಹೆದರಿಸಿ ಭೂಮಿ ಕಸಿದುಕೊಳ್ಳುತ್ತಿದ್ದರು. ಯಾವುದಾವುದೊ ಸುಳ್ಳು ಲೆಕ್ಕ ತೋರಿಸಿ ಆಸ್ತಿಪಾಸ್ತಿಯನ್ನು ಬರೆಸಿಕೊಳ್ಳುವುದೂ ಇತ್ತು. ಇನ್ನೂ ಏಕಾಏಕೀ ಒಂದು ದಿನ ಬೇಲಿಯನ್ನು ಕಿತ್ತುಹಾಕಿ ಇದು ತಮ್ಮ ಹೊಲ ಎಂದು ಅತಿಕ್ರಮಿಸುವುದೂ ನಡೆಯುತ್ತಿತ್ತು. ಊರುಬಿಟ್ಟು ಹೋದವರ ತುಂಡು ಹೊಲಗಳನ್ನು ಅಕ್ಕ ಪಕ್ಕದ ಯಾರಾದರೂ ಸಲೀಸಾಗಿ ತಮ್ಮದನ್ನಾಗಿಸಿಕೊಳ್ಳುತ್ತಿದ್ದರು ಕೆಲವೊಮ್ಮೆ ಬೇಕಂತಲೇ ದಂಡ ಹಾಕಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು. ಮದುವೆಗೊ, ತಿಥಿಗೊ ಸಾಲಕೊಟ್ಟು ಅದಕ್ಕೆ ಸಮನಾಯಿತು ಎಂದು ಒಳ್ಳೊಳ್ಳೆಯ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿತ್ತು. ಮತ್ತೆ ಊರ ಗೌಡರೂ, ಶಾನುಬೋಗರೂ ಕರಾಮತ್ತು ಮಾಡಿ ಜಮೀನು ಪತ್ರಗಳನ್ನೇ ನಾಶಪಡಿಸಿ ಹೊಸದಾಗಿ ದಾಖಲೆ ಸೃಷ್ಟಿಸಿ ಆ ಮೂಲಕವೂ ಭೂಮಿಯನ್ನು ಅತಿಕ್ರಮಿಸುತ್ತಿದ್ದರು. ಉಂಬಳಿಯಾಗಿ ಬಿಟ್ಟಿದ್ದ ಜಮೀನಾಗಲಿ, ಗೋಮಾಳವಾಗಲಿ, ಕುಳುವಾಡಿಗಳ ಭೂಮಿಯಾಗಲಿ, ಇನಾಮು ಜಮೀನಾಗಲಿ ಹೀಗೆ ಒದಗಿ ಬಂದಿದ್ದ ಭೂ ದಾಖಲೆಗಳನ್ನೆ ನಾಶಪಡಿಸಿ ಅವನ್ನೆಲ್ಲ ತಮ್ಮದನ್ನಾಗಿಸಿಕೊಂಡ ಪ್ರಕರಣಗಳು ಈಗಲೂ ನಡೆಯುತ್ತಿವೆ. ಹಳೆಯ ಕಾಲದಲ್ಲೂ ಹೀಗೆ ದಲಿತರ ಎಷ್ಟೋ ಆಸ್ತಿಪಾಸ್ತಿಗಳು ಪರಬಾರೆ ಆದಿದ್ದಿವೆ.

ಭೂಮ್ತಾಯಿ ಜೊತೆ ಗುದ್ದಾಡ್ಕಂದು ತಿಂದ್ರೆ ಯಾವ್ ಕಾಯ್ಲೆಕಸಾಯ್ಲೆನೂ ಇಲ್ಲ ಎಂದು ದುಡಿಮೆಯಲ್ಲೇ ಮುಳುಗಿದ್ದವರು ಹೇಳುವ ಮಾತಾಗಿತ್ತು. ನಮ್ಮ ಜಮೀನುಗಳನ್ನು ಕಸಿದುಕೊಳ್ಳಲಾಗಿದೆ ಎಂಬ ನೆನಪೇ ಎಷ್ಟೋ ಜನಕ್ಕೆ ಇರಲಿಲ್ಲ. ಕೆಲವೊಮ್ಮೆ ಸ್ವತಃ ತಮ್ಮವರೇ ತಮ್ಮ ಬೇಜವಾಬ್ದಾರಿತನದಿಂದ ಭೂಮಿ ಕಳೆದುಕೊಂಡಿದ್ದರು. ಬಾಡಿಗಾಗಿ ಭೂಮಿಯನ್ನೇ ಬಿಟ್ಟುಕೊಟ್ಟವರಿದ್ದರು. ಬಾಯಿರುಚಿಗೆ ಬಿದ್ದು ಹೋಟೆಲುಗಳಲ್ಲಿ ಸಾಲ ಮಾಡಿ ತಿಂದು ಚಿಲ್ಲರೆ ಕಾಸಿಗೆಲ್ಲ ಜಮೀನು ಕಳೆದುಕೊಂಡವರು ಅದೆಷ್ಟೋ. ಎಂಡದ ಸಲುವಾಗಿ ಆ ತುಂಡು ಭೂಮಿಯಲ್ಲಿ ತಾನೇನು ಬೆಳೆಯುವುದು ಎಂದು ಒಂದು ಸೀಸೆ ಎಂಡಕ್ಕಾಗಿ ತುಂಡು ಜಮೀನನ್ನು ಬಿಟ್ಟುಕೊಟ್ಟಿದ್ದರು. ಇನ್ನು ಯಾವುದಾವುದೊ ಕರ್ಚುಗಳಿಗಾಗಿ ಜಮೀನು ಅಡವಿಟ್ಟು ಹಿಂತಿರುಗಿ ಬಿಡಿಸಿಕೊಳ್ಳದೆ ಕೈಚೆಲ್ಲಿದ್ದೂ ಇದೆ. ಹಾಗೆಯೇ ವಿಪರೀತ ಬಡ್ಡಿ ಬೆಳೆಸಿ ಏನು ಮಾಡಿದರೂ ಸಾಲ ತೀರಿಸಲು ಸಾಧ್ಯವಿಲ್ಲ ಎಂಬ ಬಿಕ್ಕಟ್ಟು ನಿರ್ಮಿಸಿ ಜಮೀನುಗಳನ್ನು ವಶಪಡಿಸಿಕೊಂಡದ್ದು ಬೇರೆ. ಜೂಜಾಟಕ್ಕೂ ತಮ್ಮ ಭೂಮಿ ಕಳೆದುಕೊಂಡವರು ನಮ್ಮ ಕೇರಿಯಲ್ಲಿದ್ದರು. ಎಂಡ ಬಾಡಿನ ವಿಚಾರದಲ್ಲೇ ಬಹಳಷ್ಟು ಆಸ್ತಿಪಾಸ್ತಿಗಳು ನಮ್ಮವರ ಪಾಲಿಗೆ ಇಲ್ಲವಾದವು. ಪಾಲಿಗೆ ಎಂದು ಜಮೀನು ಕೊಟ್ಟಾಗಲೂ ಜಮೀನುಗಳು ಕೈತಪ್ಪುತ್ತಿದ್ದವು. ಬರಗಾಲ ಬಂದಾಗಂತು ಮೊದಲು ಕಾಣುತ್ತಿದ್ದ ಪರಿಹಾರ ಎಂದರೆ ಭೂಮಿಯನ್ನು ಮಾರಿಕೊಳ್ಳುವುದು ಎಂದೇ. ಮೇಲಿನವರು ಕೊಟ್ಟಷ್ಟು ಕಾಸಿಗೆ ಬರಗಾಲದಲ್ಲಿ ನಮ್ಮವರ ಜಮೀನುಗಳು ಬೇರೆಯವರ ಪಾಲಾಗುತ್ತಿದ್ದವು.

ಹೀಗೆ ಸಲೀಸಾಗಿ ಭೂಮಿಯನ್ನು ಕಳೆದುಕೊಳ್ಳುವಷ್ಟು ಕೆಟ್ಟ ಸ್ಥಿತಿಯಲ್ಲಿ ದಲಿತರು ಇದ್ದರು. ಕೆಟ್ಟ ಸ್ಥಿತಿ ಎನ್ನುವುದನ್ನು ಇಲ್ಲಿ ಬೇರೆಯಾಗಿ ಭಾವಿಸಬೇಕು. ನಮ್ಮವರು ಅನಿವಾರ್ಯವಾಗಿ ಭೂಮಿ ಮಾರಿಕೊಂಡರೆ ಮಾತ್ರ ಊರಲ್ಲಿ ಜಾಗ, ಇಲ್ಲ ಎಂದರೆ ಇಲ್ಲ ಎಂಬ ಒತ್ತಡವನ್ನು ಭೂಮಾಲೀಕ ವ್ಯವಸ್ಥೆಯು ಪರೋಕ್ಷವಾಗಿ ರೂಪಿಸಿತ್ತು. ‘ನಿಮ್ಮಂತವರಿಗಲ್ಲ ಭೂಮಿ’ ಎಂಬ ಅಲಿಖಿತ ನಿಯಮ ಮತ್ತು ನಂಬಿಕೆಯನ್ನು ಹೇರಲಾಗಿತ್ತು. ಒಂದು ವೇಳೆ ವ್ಯವಸಾಯ ಮಾಡಿದರೂ ಬೆಳೆ ಕೈಗೆ ಸಿಗದಂತೆ ಕೇಡು ಬಗೆಯುವುದಿತ್ತು. ತಮ್ಮ ದನ, ಕರ, ಕುರಿ, ಎಮ್ಮೆಗಳನ್ನು ಬಿಟ್ಟು ಮೇಯಿಸಿ ತೊಂದರೆ ಕೊಡುವುದಿತ್ತು. ಪ್ರತಿಭಾರಿಯೂ ಹೊಲಗದ್ದೆಗಳ ಬದುವನ್ನು ವಿಸ್ತರಿಸಿ ಒತ್ತುವರಿ ಮಾಡಿಕೊಂಡು ಕಾಟಕೊಡಲಾಗುತ್ತಿತ್ತು. ಪ್ರಶ್ನಿಸಿದರೆ ದೊಡ್ಡ ಜಗಳ, ಹೊಡೆತ, ಅಪಮಾನ, ಹಿಂಸೆ ಇದ್ದೇ ಇರುತ್ತಿದ್ದವು. ಪೈಪೊಟಿ ನೀಡಿದರೆ ಬೆಳೆದ ಬೆಳೆಯನ್ನು ರಾತ್ರಿವೇಳೆ ಕದ್ದುಬಿಡುವುದು. ಕಡಿದು ಹಾಕುವುದು, ಬೆಂಕಿ ಹಚ್ಚುವುದು ಇತ್ಯಾದಿ ನಾಶ ಕ್ರಿಯೆಗಳನ್ನು ಮಾಡಲಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ದಲಿತರು ಈ ವ್ಯವಸಾಯ, ಈ ಭೂಮಿ ಈ ಕಷ್ಟನಷ್ಟವೇ ಬೇಡ ಎಂದು ಭೂಮಿ ಮಾರಿಕೊಳ್ಳುತ್ತಿದ್ದರು. ಇಂತದನ್ನು ನೋಡಿಯೇ ಎಷ್ಟೋ ಜನ ಬಡವರು ತಾವಿನ್ನೇನು ತಾನೆ ಮಾಡುವುದು ಎಂದು ಚಿಂತೆಗೊ, ಸಂಕಟಕ್ಕೂ ದಾಸರಾಗಿ ಕುಡಿದು ಭೂಮಿಯನ್ನು ಮಾರಿಬಿಡುತ್ತಿದ್ದರು.

ಭೂಮಿತಾಯಿ ಎಲ್ಲವನ್ನೂ ತನ್ನ ಹೊಟ್ಟೆಯಲ್ಲಿ ಹಾಕಿಕೊಳ್ಳುವಳು ಎಂಬ ವಿಶ್ವಾಸ ನಮ್ಮವರಲ್ಲಿತ್ತು. ನಾವು ಎಲ್ಲೇ ಹೋದರೂ ಯಾವತ್ತಿಗಾದರೂ ನಾವು ಅವಳ ಜೊತೆಯೇ ಮಲಗಿ ಮಣ್ಣಲ್ಲಿ ಮಣ್ಣಾಗುವುದು. ಈ ಭೂಮಿ ನನ್ನದೊ, ಅವರದೊ, ಯಾರದೊ ಎಂಬುದು ಮುಖ್ಯವಲ್ಲ. ಈ ಭೂಮಿತಾಯಿಯ ಜೊತೆ ತಾನು ಹೇಗೆ ಬದುಕಿದೆ ಎನ್ನುವುದೇ ಮುಖ್ಯ. ಎಲ್ಲರೂ ಮಣ್ಣಿಗೇ ಹೋಗುವುದು. ನಮ್ಮ ಆಸ್ತಿ ಪಾಸ್ತಿ, ಹೊಲ ಗದ್ದೆ, ತೋಟತುಡಿಕೆ ಇವನ್ನೆಲ್ಲ ನಾವು ಇಲ್ಲೇ ಈ ಭೂಮಿ ತಾಯಿಯ ಪಾಲಿಗೇ ಬಿಟ್ಟು ಹೋಗಬೇಕು. ಭೂಮಿಯನ್ನು ನಾವು ಹೊತ್ತುಕೊಂಡು ಎಲ್ಲಿಗೂ ಓಡಿ ಹೋಗಲು ಸಾಧ್ಯವೇ ಇಲ್ಲ. ಈ ಭೂಮಿಯನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ನಾಶವಾದರೂ ಈ ಭೂಮಿ ಇಲ್ಲೇ ಹೀಗೇ ಶಾಸ್ವತವಾಗಿ ಇರುತ್ತದೆ. ಭೂಮಿಯ ಮೇಲೆ ನಮ್ಮದು ಎನ್ನುವುದು ಯಾವುದು ಇಲ್ಲ. ಆದರೆ ಇದ್ದಷ್ಟು ಕಾಲ ಈ ಭೂಮಿಯ ಮೇಲೆ ನಾವು ಯಾವ ಒಳ್ಳೆಯ ಗುಣವನ್ನು ಬಿಟ್ಟು ಹೋದೆವು ಎನ್ನುವುದೇ ಬದುಕಿನ ಸಾರ್ಥಕತೆ.

ಈ ಲೋಕದಲ್ಲಿ ನೆಲೆಸಿರುವ ಸಕಲ ಜೀವಿಗಳಿಗೂ ಸಂಬಂಧಿಸಿದ್ದು ಈ ಭೂಮಿ. ಇರುವೆಗೂ ಈ ಭೂಮಿಯಲ್ಲಿ ಪಾಲಿದೆ. ಗಿಡಮರ, ಪ್ರಾಣಿ ಪಕ್ಷಿ, ಹುಳು ಉಪ್ಪಟ್ಟೆ ಇವೆಲ್ಲವೂ ಭೂಮಿ ತಾಯಿಯ ಮಕ್ಕಳೇ. ಈ ತಾಯಿಯನ್ನು ಏನು ಮಾಡಿದರೂ ನಾಶಪಡಿಸಲು ಆಗದು. ನಾಶಪಡಿಸಲು ಮುಂದಾದವರೇ ಮಣ್ಣಾಗಿ ಹೋಗುವರು. ಭೂಮಿತಾಯಿ ಸೈರಣೆ ಕಳಕೊಂಡರೆ ಯಾರು ಬದುಕಬಲ್ಲರು. ಭೂಮಿ ತಾಯಿಯನ್ನು ಛೀ ತೂ ಎಂದು ಉಗಿಯಬಹುದು. ಅವಳಿಗೆ ಒದ್ದೂ ಬಿಡಬಹುದು. ಅವಳ ಮೇಲೆ ಹೇಸಿಗೆಯನ್ನು ಮಾಡಬಹುದು. ಅಷ್ಟಾಗಿಯೂ ಅವಳು ಎಂದಾದರೂ ನಮ್ಮನ್ನು ದಂಡಿಸಿರುವಳೇನು. ಕೊನೆಗೂ ನಾವು ಎಡವಿ ಬಿದ್ದರೆ ನಮ್ಮನ್ನು ಹಿಡಿದು ಎತ್ತಿ ನಿಲ್ಲಿಸುವವಳೂ ಅವಳೇ ಸತ್ತಾಗ ಯಾರಿಗೂ ಬೇಡವಾದ ಹೆಣವಾದಾಗಲೂ ಆಕೆಯೇ ತನ್ನ ಒಡಲೊಳಕ್ಕೆ ಕರೆದುಕೊಂಡು ಮುಚ್ಚಿಕೊಳ್ಳುವಳು. ಈ ಮಣ್ಣೀನ ಋಣವನ್ನು ಈ ಭೂಮಿಯ ತಾಯ್ತನವನ್ನು ನಾವು ಯಾರಾದರೂ ಹಿಂತಿರುಗಿ ಸಾಲದಂತೆ ತೀರಿಸಬಹುದೇ?

ಇದು ನಮ್ಮ ತಾತನ ಚಿಂತನೆಯಾಗಿತ್ತು. ಎಪ್ಪತ್ತರ ದಶಕದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಇಂದಿರಾಗಾಂಧಿ ಅವರ ಖಾನೂನು ಜಾರಿಯಾದಾಗ ನಮ್ಮ ತಾತ ಕಳೆದುಕೊಂಡಿದ್ದ ಜಮೀನನ್ನು ಊರ ಮೇಲುಜಾತಿಯವರ ಬಳಿ ಮರಳಿ ಪಡೆಯಲಿಲ್ಲ. ಭೂಮಿಗೆ ಯಾರೂ ಮಾಲೀಕರಲ್ಲ, ಒಡೆಯರಲ್ಲ, ಹಕ್ಕುದಾರರಲ್ಲ ಎಂದ ಮೇಲೆ ಒಂದು ಕಾಲಕ್ಕೆ ನನ್ನ ಪಾಲಿಗೆ ಬಂದಿದ್ದ ಆ ಭೂಮಿಯನ್ನೆಲ್ಲ ಈಗ ಇನ್ನಾರೊ ತನಗೆ ಬೇಕೆಂದು ಆಸೆಯಲ್ಲಿ ಇಟ್ಟುಕೊಂಡಿರುವಾಗ ಅದನ್ನು ಹಿಂತಿರುಗಿ ಪಡೆದು ನಾನು ತಾನೆ ಯಾವ ಸುಖ ಪಡುವುದಿದೆ ಎಂದು ನಮ್ಮ ತಾತ ವೇದಾಂತ ಆಡಿದ್ದ. ನಮ್ಮ ತಾತನಂತೆಯೇ ಕೇರಿಯ ಎಷ್ಟೋ ಜನ ಮೇಲುಕೇರಿಯವರ ಬಳಿ ತಮ್ಮ ಜಮೀನುಗಳನ್ನು ಕಾನೂನು ರೀತ್ಯ ಹಿಂತಿರುಗಿ ಪಡೆಯಲು ಮುಂದಾಗಿರಲಿಲ್ಲ. ಭೂಮಿಯ ಮೇಲೆ ನಮ್ಮವರಿಗೆ ಧ್ಯಾನವಿತ್ತೇ ಹೊರತು ದುರಾಸೆ ಇರಲಿಲ್ಲ. ಮತ್ತೊಬ್ಬರಿಂದ ಜಮೀನು ಕಸಿದುಕೊಳ್ಳಬೇಕು ಎಂಬ ಸಂಚನ್ನು ಮಾಡಿರಲಿಲ್ಲ. ಆಸ್ತಿಪಾಸ್ತಿ ಸಂಪತ್ತುಗಳ ಗೊಡವೆಯೇ ಅವರಿಗೆ ಇರಲಿಲ್ಲ. ಭೂಮಿಯನ್ನು ಉತ್ತು ಬಿತ್ತು ಹಸುನು ಮಾಡಿ ಅದರ ಚೆಲುವನ್ನು ಕಂಡು ಸಂತೋಷ ಪಡುವುದರಲ್ಲೇ ಹೆಚ್ಚು ಮಗ್ನರಾಗಿದ್ದರು.

ತಮಗೂ ಒಂದು ತುಂಡು ಜಮೀನು ಇರಬೇಕು ಎಂಬ ಬಯಕೆ ಇರುತ್ತಿದ್ದುದು, ಈ ಭೂಮಿಯ ಮೇಲೆ ತಾನು ವಾಸಮಾಡುವ ನೆಲೆಯ ಮೇಲೆ ತನ್ನದೊ ಒಂದು ಗುರುತಿದೆ ಎಂಬ ಚಹರೆಯ ಸಲುವಾಗಿಯೇ ಹೊರತು ಭೂ ಮಾಲೀಕರಾಗಿ ಮೆರೆಯಲು ಅಲ್ಲ. ದಲಿತರಿಗೆ ಸಂಪೂರ್ಣ ಜಮೀನೇ ಇರಲಿಲ್ಲ ಎಂದೇನಲ್ಲ. ಜಮೀನು ಇದ್ದವರು ತಮ್ಮ ಜಮೀನುಗಳನ್ನು ಎಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದರು ಎಂದರೆ ಅವರ ಭೂಮಿಯೇ ಅವರಿಗೆ ಏಳೇಳು ಲೋಕಗಳೂ ಆಗಿದ್ದವು. ಆ ಒಂದು ತುಂಡು ನೆಲವೇ ಅವರ ಕಾಯಕದ ಪ್ರಪಂಚವಾಗಿತ್ತು. ಆ ಒಂದೇ ಒಂದು ತುಂಡು ಭೂಮಿಯನ್ನು ಅವರು ಮಕ್ಕಳಿಗಿಂತಲೂ ಮಿಗಿಲಾಗಿ ಸಲಹುತ್ತಿದ್ದರು. ಅವರ ಸರ್ವಸ್ವವೇ ಅವರ ಪುಟ್ಟದೊಂದು ಹೊಲವೊ, ಗದ್ದೆಯೊ, ತೋಟವೊ ಆಗಿರುತ್ತಿತ್ತು. ಹಗಲೂ ರಾತ್ರಿ ಹೊಲದಲ್ಲೇ ಕಾಲ ಕಳೆಯಲು ಬಯಸುತ್ತಿದ್ದರು. ಆ ಹೊಲದಲ್ಲಿ ದುಡಿದು ಅದರಲ್ಲೇ ಅನ್ನದ ದಾರಿಯನ್ನೂ ಬಾಳುವೆಯ ಬೆಳಕನ್ನು ಕಂಡುಕೊಳ್ಳುತ್ತಿದ್ದರು. ಸತ್ತಾಗ ಈ ಮಣ್ಣಿಗೇ ತಂದು ತನ್ನ ದೇಹವನ್ನು ಊಳಿ ಎಂದು ಬೇಡಿಕೊಳ್ಳುತ್ತಿದ್ದರು.

ಭೂಮಿ ಪೂಜೆಯ ಆಚರಣೆಗಳಲ್ಲಿ ನಮ್ಮವರು ದಿವ್ಯತೆಯನ್ನು ಮೈದುಂಬುತ್ತಿದ್ದರು. ಬಿತ್ತನೆಗೆ ಮುನ್ನ ಭೂಮಿಯನ್ನು ಪೂಜಿಸುತ್ತಿದ್ದೆವು. ಬಿತ್ತಿ ಬೆಳೆಬಂದಾಗಲೂ ಅದೇ ಹೊಲಗಳಿಗೆ ಪೂಜಿಸುತ್ತಿದ್ದೆವು. ಕೊಯ್ಲು ಮಾಡುವಾಗಲೂ ‘ಭೂತಾಯೀ ನೀ ಕೊಟ್ಟಿದ್ದನ್ನು ಕೊಯ್ಲು ಮಾಡಿಕೊಳ್ಳುತ್ತಿದ್ದೇವೆ. ನಿನ್ನ ಅಪ್ಪಣೆ ಬೇಕವ್ವ’ ಎಂದು ಬೇಡುತ್ತಿದ್ದರು. ಬೇಸಿಗೆಯ ಬಿರುಬಿಸಿಲಲ್ಲಿ ಭೂಮಿತಾಯಿಗೆ ತಂಪಾಗಲಿ ಎಂದು ಬೆಲ್ಲದ ಅನ್ನ ಮಾಡಿ ಪೂಜಿಸಿ ಭೂಮಿಗೆ ಎಡೆ ಇಟ್ಟು ‘ಭೂತಾಯೀ ನೀನು ಕೊಟ್ಟದ್ದನ್ನು ನಿನಗೂ ಕೊಡುತ್ತಿದ್ದೇವೆ ಉಣ್ಣವ್ವ’ ಎಂದು ವಿನಂತಿಸುತ್ತಿದ್ದರು. ಭೂಮಿಯನ್ನು ಪರರಿಗೆ ಮಾರುವಾಗ ಆ ಭೂಮಿಯನ್ನು ದೀರ್ಘ ದಂಡ ನಮಸ್ಕಾರದಲ್ಲಿ ಪ್ರಾರ್ಥಿಸಿ ಗೌರವ ಸಲ್ಲಿಸಿ ಇನ್ನು ಮುಂದೆ ನೀನು ಬೇರೆಯವರ ಪಾಲಾದೆಯವ್ವಾ ಎಂದು ದುಃಖಿಸುತ್ತಿದ್ದರು. ಭೂಮಿ ತಾಯಿಯನ್ನು ನಂಬಿದ ಯಾರೂ ಕೂಡ ಎಂದೆಂದಿಗೂ ಆಳಾಗುವುದಿಲ್ಲ ಎಂದೇ ನಮ್ಮವರು ಭಾವಿಸಿದ್ದರು. ತುಂಬಿದ ಫಲದ ಹೊಲಗಳನ್ನು ತುಂಬಿದ ಬಸುರಿಗೆ ಹೋಲಿಸುತ್ತಿದ್ದರು.

ಫಲವತ್ತಾದ ಹೊಲದಲ್ಲಿ ಯಾವುದೇ ಚಪ್ಪಲಿ ಮೆಟ್ಟಿಕೊಂಡು ಹೋಗುವಂತಿರಲಿಲ್ಲ. ಅಂತಹ ಫಸಲಿನ ಭೂಮಿಯಲ್ಲಿ ನಿಂತು ಯಾವ ಕೆಟ್ಟ ಯೋಚನೆಯನ್ನು ಮಾಡಬಾರದು ಎಂದು ಹಿರಿಯರು ಹೇಳುತ್ತಿದ್ದರು. ಕನ್ನೆ ನೆಲ ಎಂಬ ಮಾತೊಂದಿತ್ತು. ಈ ಮಾತನ್ನು ಪ್ರಾಯದ ಮೈನೆರೆದ ಹೆಣ್ಣಿನ ದೇಹಕ್ಕೂ ಹೋಲಿಸಲಾಗುತ್ತಿತ್ತು. ಹೊಸದಾಗಿ ವ್ಯವಸಾಯಕ್ಕೆ ಹಚ್ಚಿದ ಭೂಮಿಯನ್ನು ಕನ್ನೆ ನೆಲೆ ಎಂದು ಕನ್ನೆಯ ಜೊತೆ ಸಮೀಕರಿಸುತ್ತಿದ್ದರು. ಮಳೆಗೂ ಫಲಸಮೃದ್ಧಿಯ ಸಂಬಂಧಗಳನ್ನು ಜೋಡಿಸಲಾಗುತ್ತಿತ್ತು. ಫಲವಂತಿಕೆಯ ಅದೆಷ್ಟೊ ಆಚರಣೆಗಳು ಭೂಮಿಯ ವ್ಯವಸಾಯದ ಜೊತೆ ಬೆಳೆದಿವೆ. ಹೊಸದಾಗಿ ಮದುವೆ ಆದವರು ಫಲತುಂಬಿದ ಹೊಲದಲ್ಲಿ ಕೂಡಿದರೆ ಬೇಗ ಗರ್ಭಕಟ್ಟುವುದು ಎಂದು ನಂಬಲಾಗುತ್ತಿತ್ತು. ಭೂಮಿತಾಯಿ ಎದೆ ಹಾಲೇ ಹರಿವ ಜಲ ಎಂದು ಹೇಳುತ್ತಿದ್ದರು. ಭೂಕಂಪವನ್ನು ಭೂಮಿತಾಯಿ ಸಿಟ್ಟು ಎಂದು ತಿಳಿಯಲಾಗಿತ್ತು. ಮಕ್ಕಳು ಆಟವಾಡುವಾಗ ಬಿದ್ದರೆ ಅವರಿಗೆ ನೋವೇ ಆಗುವುದಿಲ್ಲ ಎಂಬ ವಿಶ್ವಾಸವಿತ್ತು. ಮಕ್ಕಳು ಕಾಲು ಜಾರಿ ಎಡರು ತೊಡರಾಗಿ ಬಿದ್ದೇ ಬಿಡುವರು ಎಂದು ಆ ಭೂಮಿ ತಾಯಿಯೇ ನೋವಾಗದಂತೆ ನೋಡಿಕೊಳ್ಳುವಳು ಎಂದು ಹೆಂಗಸರು ಗಾಢವಾಗಿ ನಂಬಿದ್ದರು.

By mtkopone (http://www.flickr.com/photos/mtkopone/3146168459/) [CC BY 2.0 ]

By mtkopone (http://www.flickr.com/photos/mtkopone/3146168459/) [CC BY 2.0 ]

ಭೂಮಿಯ ಬಗ್ಗೆ ಮೋಹ, ದಾಹ, ಧ್ಯಾನ, ಪ್ರೀತಿ, ವಿಶ್ವಾಸ ಅಪಾರವಾಗಿದ್ದ ರಿಂದಲೇ ನಮ್ಮ ಕೇರಿಯವರು ಭೂಮಿಯನ್ನು ಒಂದು ಖಾಸಗಿ ಆಸ್ತಿ ಎಂದು ತಿಳಿಯಲಿಲ್ಲ. ಇದ್ದ ಭೂಮಿಯನ್ನೂ ಉದಾರವಾಗಿ ಹಾಗೂ ಉದಾಸೀನವಾಗಿ ಬಿಟ್ಟುಕೊಟ್ಟು ಬಿಟ್ಟರು. ಈಗ ಭೂಮಿಯೇ ಒಂದು ವಿರಾಟ್ ಮಾರುಕಟ್ಟೆಯಾಗಿ ಪರಿವರ್ತನೆಗೊಂಡು ಇದರಲ್ಲಿ ದಲಿತರು ಭೂಮಿ ತಾಯಿಯೇ ಇಲ್ಲದ ತಬ್ಬಲಿ ಮಕ್ಕಳಂತೆ ಎಲ್ಲೆಲ್ಲೋ ಬದುಕಿನ ಪಾಡನ್ನು ಹುಡುಕಾಡುತ್ತಿದ್ದಾರೆ. ನಮಗೀಗ ನಮ್ಮ ಭೂಮಿ ಬೇಕು ಎಂಬ ಜಾಗೃತಿ ದಲಿತರಲ್ಲಿ ಉಂಟಾಗುತ್ತಿರುವಲ್ಲಿ, ಸ್ವತಃ ರೈತರೇ ಇದೇ ಭೂಮಿಯನ್ನು ನಂಬಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ. ದಲಿತರ ಹೋರಾಟಗಳು ಭೂಮಿಯನ್ನು ಸಮನಾಗಿ ಹಂಚಿ ಎಂದರೆ ಅದನ್ನು ರಾಜಕೀಯ ಉದ್ಯಮಿಗಳು ಬೃಹತ್ ಅಭಿವೃದ್ಧಿ ಬಂಡವಾಳವಾಗಿ ಹೇಗೆ ಖಾಸಗೀಕರಿಸಬಹುದು ಎಂದು ಜಾಗತಿಕವಾದ ನೀಲಿ ನಕ್ಷೆಗಳನ್ನು ತಯಾರಿಸಿ ಸ್ವತಃ ಸರ್ಕಾರಗಳೇ ವಿಶ್ವವಾಣಿಜ್ಯ ನೀತಿಗೆ ಭೂಮಿಯನ್ನು ಆರ್ಥಿಕ ಚಟುವಟಿಕೆಯ ವೇಷಗಳಲ್ಲಿ ಮಾರಲು ಮುಂದಾಗಿವೆ.

ಇಂತಲ್ಲಿ ಒಂದು ಕಾಲದಲ್ಲಿ ಹೊಲೆಮಾದಿಗರಿಗೆ ಇತ್ತೆಂದು ಹೇಳಲಾಗುವ ಭೂಮಿಯ ಹಕ್ಕು ಈಗ ಒಂದು ವಾಸ್ತವ ಅಧಿಕಾರವಾಗಿ ಮಾರ್ಪಡುವುದುಂಟೇ? ದಲಿತರ ಆಳದ ಹೋರಾಟದ ಆಶಯವೇ ಈ ಭೂಮಿಯನ್ನು ತಾಯಂತೆಯೇ ಭಾವಿಸಿ ತಾಯ್ತನದ ನೀತಿಯಲ್ಲಿ ಎಲ್ಲರೂ ಈ ತಾಯಿ ಫಲವನ್ನು ಸಮನಾಗಿ ಹಂಚಿ ಕೂಡಿ ಬಾಳಿ ಬದುಕಬೇಕು ಎಂಬುದು ಈ ಕಾಲದ ಹಳ್ಳಿಗಳ ದಲಿತ ಸಮಾಜಕ್ಕೆ ನಗರಗಳೇ ಬದುಕುಳಿಯಲು ಇರುವ ಸದ್ಯದ ದಾರಿ ಎಂದು ಕಾಣುತ್ತಿದೆ. ಇಷ್ಠಿದ್ದರೂ ನಮ್ಮ ಕೇರಿಗಳು ಎಂದೆಂದೂ ಭೂಮಿ ತಾಯಿಯ ಕರುಳ ಬಳ್ಳಿಯನ್ನು ತುಂಡು ಮಾಡಿಕೊಂಡೇ ಇಲ್ಲ. ಭೂಮಿಯ ಜೊತೆಗಿನ ನಮ್ಮ ಭಾವನಾತ್ಮಕ ಬೇರುಗಳು ನಾಶವಾಗಿಲ್ಲ. ಭೂಮಿಯ ಮೇಲಿನ ಯಾರೊಬ್ಬರೂ ಭೂಮಿಯ ಸಂಬಂಧವನ್ನು ಕಳೆದುಕೊಳ್ಳುವುದು ಸಾಧ್ಯವೇ ಇಲ್ಲ. ಕೊನೆಯ ಪಯಣದಲ್ಲೂ ಕೂಡ ನಾವು ಭೂಮಿ ತಾಯಿ ಒಡಲಿಗೇ ನಡೆಯುವುದು.

Leave a Reply

Your email address will not be published.