ದಲಿತ ಪದಕಥನ -7 : ‘ಬಾಳೆಲ್ಲ ಬರಗಾಲವಾಯ್ತು’

- ಮೊಗಳ್ಳಿ ಗಣೇಶ್

ಬರ
‘ಬಾಳೆಲ್ಲ ಬರಗಾಲವಾಯ್ತು’ ಎಂಬ ಅಜ್ಜಿಯರು ಗೊಣಗುತ್ತಿದ್ದರು. ನಮಗೆ ಬರದ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಹಳೆ ಕಾಲದವರು ಬರಗಾಲದ ಬಗ್ಗೆ ಆಗಾಗ ಅಂಗಳದಲ್ಲಿ ಮೆಲುಕು ಹಾಕುವುದಿತ್ತು. ಮಳೆ ಬೆಳೆ ಇಲ್ಲ ಎಂದರೆ ಬರಗಾಲ ಎಂದಷ್ಟೇ ನಮ್ಮ ತಿಳಿವಳಿಕೆಯಾಗಿತ್ತು. ಬರಗಾಲದಲ್ಲಿ ಊರು ಬಿಟ್ಟು ಬಂಧು ಬಳಗ ಎಲ್ಲೆಲ್ಲೋ ಹೋಗಿ ನೆಲೆಸಿದ್ದನ್ನು ಕೇಳಿ ತಿಳಿದಿದ್ದೆವು. ಬರಗಾಲದಲ್ಲಿ ಸತ್ತ ದನಕುರಿಗಳನ್ನು ನಮ್ಮವರು ತಿಂದು ಬದುಕಿದ್ದರು. ಬರಗಾಲದ ಭೀಕರ ನೆನಪುಗಳನ್ನು ಕೇರಿಯು ಮರೆತೇ ಇರಲಿಲ್ಲ. ಬರಗಾಲದಲ್ಲಿ ಮಕ್ಕಳನ್ನೇ ಮಾರಿದವರಿದ್ದರು. ಬರದ ಬರೆಯನ್ನು ತಾಳದವರು ಮಕ್ಕಳ ಜೊತೆಗೇ ನೇಣು ಬಿಗಿದುಕೊಂಡಿದ್ದರು. ಎಷ್ಟೋ ಸಂಸಾರಗಳು ಅನಾಥವಾಗಿದ್ದವು. ಹಸಿದು ಹಸಿದು ಕೂತಲ್ಲೇ ಅಸುನೀಗಿದ್ದವರು ಬರಗಾಲದಲ್ಲಿ ಅದೆಷ್ಟೋ. ಉಳ್ಳವರ ಮುಂದೆ ದೈನೇಸಿಯಾಗಿ ಬೇಡಿ ಏನೂ ಸಿಗದೆ ಕೊನೆಗೆ ಕಳ್ಳತನಗಳಿಗೆ ಇಳಿದು ಹೊಟ್ಟೆಪಾಡಿಗಾಗಿ ಪರದಾಡಿದ್ದಕ್ಕೆ ಲೆಕ್ಕವೇ ಇಲ್ಲ. ಬರ ಎಂದರೆ ಬಡತನ, ಹಸಿವು, ಸಂಕಟ, ಹತಾಶೆ, ಸಾವು, ನೋವು ಎಂಬ ಭಾವಗಳೇ ಮೊದಲಾಗಿ ಬರುತ್ತವೆ. ಬರಗಾಲದಲ್ಲಿ ಮಕ್ಕಳ ಹಸಿವ ನೀಗಿಸಲು ಕೆಲವು ತಾಯಂದಿರು ಉಳ್ಳವರ ಗಂಡಸರ ಆಸೆ ತೀರಿಸಿ ಗಂಜಿಕಾಯಿಸಿ ಕುಡಿಸಿದ್ದರು.

FB_IMG_1475766924247ಬರಗಾಲದಲ್ಲಿ ಯಾರು ಯಾರಿಗೂ ಇರುವುದಿಲ್ಲ. ಹಂಚಿ ಉಣ್ಣುವುದು ಸಾಧ್ಯವೇ ಇಲ್ಲ ಎಂದು ಯಾರಾದರೂ ಭಾವಿಸಬಹುದು. ಆದರೆ ನಮ್ಮ ಕೇರಿಯವರು ಬರಗಾಲದಲ್ಲಿ ಒಗ್ಗಟ್ಟಾಗಿ ಹಸಿವನ್ನು ಹೆದರಿಸಿದ್ದರು. ಎತ್ತಪ್ಪನವರ ಮನೆಯ ರಾಸುಗಳು ಒಂದೊಂದಾಗಿ ಬರದ ಬಾದೆಯಲ್ಲಿ ಸಾಯುವಾಗ ಆ ಇಡೀ ಒಂದು ಎತ್ತನ್ನೇ ಕೇರಿಯು ಹಂಚಿಕೊಂಡು ತಿಂದಿತ್ತು. ಕೆರೆಗಳಲ್ಲಿ ಬೆಳೆದಿದ್ದ ಎಂತದೊ ಗೆಡ್ಡೆಗೆಣಸುಗಳನ್ನೆಲ್ಲ ಕಿತ್ತು ತಂದು ಒಟ್ಟಾಗಿ ಬೇಯಿಸಿಕೊಂಡು ಉಂಡಿದ್ದರು. ಕದ್ದು ತಂದಾಗ ಆ ಕಳ್ಳ ಮಾಲು ಯಾರಿಗೂ ತಿಳೀಯದಿರಲಿ ಎಂದು ಗುಂಪಾಗಿ ಕೂತು ಆ ರಾತ್ರಿಯೇ ತಿಂದು ಮುಗಿಸುತ್ತಿದ್ದರು. ದೇವನೂರು ಅವರ ಒಡಲಾಳ ಕಥೆಯಲ್ಲಿ ಇಂತದೇ ವಿವರಗಳು ದಟ್ಟವಾಗಿ ದಾಖಲಾಗಿವೆ. ಬರಗಾಲದಲ್ಲೇ ಹಲವು ಹಂತಗಳಿದ್ದುದನ್ನು ಹಿರಿಯರು ಮಾತನಾಡುತ್ತಿದ್ದರು. ‘ಗೊಡ್ಡು ಗಾಲ’ ಎಂದು ಬರಗಾಲದಲ್ಲಿ ಒಂದು ವಿಧವನ್ನು ವಿವರಿಸುತ್ತಿದ್ದರು. ‘ಗೊಡ್ದೊಡುದು ಬುಡ್ತು’ ಎಂದರೆ ಬರದ ವಿಪರೀತ ಹೊಡೆತ ಎಂದರ್ಥ. ‘ಗೊಟ್ಟಾಗೋಯ್ತು’ ಎಂದಾಗಲೂ ಇದೇ.ಸಂಯುಕ್ತ ಪದವನ್ನು ಮಾಡಿಕೊಳ್ಳುವುದು ಭಾಷೆಯೊಂದು ಬೆಳೆಯುವ ಕ್ರಮವನ್ನು ತೋರುತ್ತದೆ. ಬರ ಪದದ ಭಾವವು ಸುಡುವಂತದು. ಇದು ಬರ್ಬರತೆಗೆ ಹೆಚ್ಚು ಹತ್ತಿರವಾದದ್ದು. ಬರ ಪದಕ್ಕೂ, ಬರೆ ಶಬ್ಧಕ್ಕೂ ಭಾವ ಸಾಮ್ಯತೆ ಇದೆ. ಬರ ಹಿತವಾದ ದನಿಯಲ್ಲ. ಅದರಲ್ಲಿ ನೋವಿನ ಸಂಗತಿಯೇ ಹೆಚ್ಚು. ಬರೆ ಕೂಡ ಸುಡುವಂತದೇ. ಬರ್ಬರವಾದ ಕಾಲ ಎಂದು ಚರಿತ್ರೆಯ ಕರಾಳ ಕಾಲ ಘಟ್ಟವನ್ನು ಗುರುತಿಸುವುದಿದೆ.

ಹೀಗೆ ಬರ ಪದವು ಒಂದು ಕಾಲಮಾನದ ದುಸ್ಥಿತಿಯನ್ನು ಬಿಂಬಿಸುತ್ತದೆ. ಬರವು ಮನುಷ್ಯ ನಿರ್ಮಿತವಾದುದಲ್ಲ. ಅದು ನಿಸರ್ಗದ ಕಾಲ ಮಾನದ ವೈಪರೀತ್ಯದಿಂದಾಗುವ ಸಂಗತಿ. ಹಾಗಾಗಿ ಬರದ ಸ್ಥಿತಿಗೆ ಆ ಒಂದು ಕಾಲ-ಗಾಲವನ್ನು ಹೊಂದಿಸಿಯೇ ಬರಗಾಲ ಪದವನ್ನು ಬಳಸುವುದು. ಬರದ ಸ್ಥಿತಿ ಬದಲಾದಾಗಲೂ ಬರಗಾಲದ ನೆನಪಿರುತ್ತದೆ. ಆದರೆ ‘ಬಾಳೆಲ್ಲ ಬರಗಾಲವಾಯ್ತು’ ಎಂಬಲ್ಲಿ ನಿತ್ಯ ಬಾಳಿನ ನರಕದಲ್ಲಿ ನಲುಗಿದವರಿಗೆ ಬರ ಒಂದು ನಿರಂತರ ಸ್ಥಿತಿ ಎನಿಸಿದಾಗ ಅಂತವರ ಬಾಯಲ್ಲಿ ಬರ ಒಂದು ವಾಸ್ತವವೇ ಆಗಿಬಿಟ್ಟಿರುತ್ತದೆ. ಅಂತಹ ಬರದ ಬದುಕಿಗೆ ಬರಗಾಲದ ನಿರ್ದಿಷ್ಟ ಪರಿಣಾಮ ಇರುವುದಿಲ್ಲ. ಹಾಗಾಗಿಯೇ ಇಂತಲ್ಲಿ ಬರ ಎಂದರೆ ನಿಜಕ್ಕೂ ಬರ್ಬರತೆಯೇ ಆಗಿ ಬಿಟ್ಟಿರುತ್ತದೆ.

ಬಾಯಿದ್ದವರು ಬರದಲ್ಲಿ ಗೆದ್ದರು ಎಂಬ ಗಾದೆ ಮಾತಿದೆ ಅಲ್ಲವೆ? ಬರ ಇಲ್ಲದಿದ್ದಾಗಲೂ ನಮಗೆ ಬಾಯಿ ಇರಲಿಲ್ಲ. ಬಾಯಿ ಎಂದರೆ ಇಲ್ಲಿ ಮಾತು. ಮಾತು ಎಂದರೆ ಜೋರು ಮಾತು. ಜೋರು ಮಾತು ಎಂದರೆ ಉಳಿದವರ ಬಾಯಿ ಮುಚ್ಚಿಸುವ ಮಾತು. ಬಾಯಿ ಮುಚ್ಚಿಸುವ ಮಾತು ಎಂದರೆ ಬೇರೆಯವರ ಅನ್ನ ಕಿತ್ತುಕೊಳ್ಳುವ ಮಾತು. ಅನ್ನ ಕಿತ್ತುಕೊಳ್ಳುವ ಮಾತು ಎಂದರೆ ಆಕ್ರಮಣದ ಮಾತು. ಆಕ್ರಮಣದ ಮಾತು ಎಂದರೆ ಹತ್ತಿಕ್ಕುವ ಮಾತು. ಹತ್ತಿಕ್ಕುವ ಮಾತು ಎಂದರೆ ಹಲ್ಲೆ ಮಾಡುವ ಮಾತು. ಹಲ್ಲೆ ಮಾಡುವ ಮಾತು ಎಂದರೆ ಹತ್ಯೆ ಮಾಡುವ ಮಾತು. ಹತ್ಯೆ ಮಾಡುವ ಮಾತು ಎಂದರೆ ಭಾಷೆಯನ್ನೇ ಕಿತ್ತುಕೊಂಡು ಬಿಡುವ ಮಾತು. ಹೀಗೆ ಈ ಮಾತುಗಳನ್ನು ಮುಂದುವರಿಸಬಹುದಾದರೂ ಸದ್ಯಕ್ಕೆ ಈ ಮಾತನ್ನು ಇಲ್ಲಿಗೆ ನಿಲ್ಲಿಸಿ ಮೇಲೆ ಹೇಳುತ್ತಿದ್ದುದಕ್ಕೆ ಬರುವೆ. ಈ ಗಾದೆಮಾತು ನಮಗೆ ಅನ್ವಯಿಸುವಂತದಲ್ಲ. ಭಾಗಶಃ ಈ ಗಾದೆಯನ್ನು ಮಾತ್ರ ನಮ್ಮವರೇ ಬೇರೆಯವರನ್ನು ನೋಡಿ ಕಟ್ಟಿರಬೇಕು. ಈಗಲೂ ಬರಗಾಲ ನಮ್ಮ ಸಮಾಜದಲ್ಲಿ ಉಂಟು. ಮನುಷ್ಯತ್ವಕ್ಕೆ ಈಗ ವಿಪರೀತ ಬರಗಾಲ. ಬರಗಾಲದಲ್ಲಿ ಕುದುರೆ ಹಾಗೂ ಎತ್ತುಗಳ ಸಗಣಿಯಲ್ಲಿದ್ದ ಉರುಳಿಕಾಳುಗಳನ್ನು ಸೋಸಿ ಬಡವರು ತಿನ್ನುತ್ತಿದ್ದರು ಎಂದು ಗುಪ್ತರ ಸುವರ್ಣಯುಗದ ಬಗ್ಗೆ ಪ್ರವಾಸಿಗರು ಬರೆಯುತ್ತ ದಾಖಲಿಸುವರು. ಸುವರ್ಣ ಯುಗದಲ್ಲೂ ಇಂತಹ ಬರಗಾಲ ಇತ್ತು ಎಂದರೆ ಹೀಗೆ ಉರುಳಿಕಾಳನ್ನು ಎಕ್ಕಿ ತಿನ್ನುತ್ತಿದ್ದರು. ಅರ್ಥವಿತ್ತು. ‘ಕ್ಷಾಮಗಾಲ’ ಎಂದೂ ಕರೆಯುವುದಿತ್ತಾದರೂ ಈ ಪದವನ್ನು ನಾವು ಹೆಚ್ಚಾಗಿ ಬಳಸುತ್ತಿರಲಿಲ್ಲ. ಬರಗಾಲವನ್ನು ಎದುರಿಸಲು ಕೇರಿಯು ನಿಸರ್ಗವನ್ನೇ ಪ್ರಾರ್ಥಿಸುತ್ತಿತ್ತು. ಮಳೆ ಬಂದರೆ ಬರ ತೊಳೆದು ಹೋಗುವುದೆಂದು ಮಳೆರಾಯನನ್ನು ಕರೆಯುವ ಆಚರಣೆಗಳಿಗೆ ತೊಡಗುತ್ತಿದ್ದರು. ಪ್ರಖ್ಯಾತವಾದ ಮಳೆರಾಯನ ಒಂದು ಪದ ಅನೇಕರಿಗೆ ತಿಳಿದಿರಬಹುದು. ಈ ಜನಪದ ಗೀತೆಯನ್ನು ಬರಗಾಲ ಇಲ್ಲದಿದ್ದ ಕಾಲದಲ್ಲಿ ನಾವು ಹುಡುಗರು ಕೇಳಿ ಮರುಗಿದ್ದೆವು. ಬರಗಾಲದಲ್ಲಿ ಸ್ವಂತ ಮಕ್ಕಳನ್ನೇ ಮಾರಿ ಉಂಡು ನಂಜೇರಿ ಸತ್ತ ತಂದೆ ತಾಯಿಗಳ ವಿವರ ಆ ಗೀತೆಯಲ್ಲಿ ನೀಲಿಗಟ್ಟಿನ ಬರದ ಬರೆಯಂತೆ ದಾಖಲಾಗಿದೆ.

giddaಬರಗಾಲ ಪದದಲ್ಲಿ ಎರಡು ಪದಗಳಿವೆ ಎಂದರೆ ಅದೇನು ಅಂತಹ ವಿಶೇಷವಲ್ಲ. ಬರ ಎಂದರೆ ಏನರ್ಥ? ಇದು ಹೇಗೆ ರೂಪುಗೊಂಡಿದೆ? ಬರದ ಜೊತೆಗೆ ಗಾಲ-ಕಾಲ ಸಂಬಂಧ ಎಷ್ಟು ಅವಧಿವರೆಗೆ? ಬರ ಯಾವತ್ತೂ ಇರುವ ಬದುಕಿನಲ್ಲಿ ಬರದ ವಿವರಣೆ ಹೇಗೆ? ಇವನ್ನು ಒಂದಿಷ್ಟು ಗಮನಿಸುವ.
ಬರ ಪದವು ಬರ್ಬರ ಪದದಿಂದ ಬಂದಿರಬಹುದೆ? ಬರ್ಬರ ಎಂದರೆ ಕ್ರೂರವಾದ ಒಂದು ಸ್ಥಿತಿ. ಬರಡು ಎಂಬ ಇನ್ನೊಂದು ಪದವಿದೆ. ಇದಕ್ಕೆ ಬಂಜರು ಎಂಬ ಮತ್ತೊಂದು ಪದ ವಿವರಣೆ ಕೂಡಿಕೊಳ್ಳುವುದು. ಬರ ಎಂದರೆ ಸಾರ ಇಲ್ಲದ್ದು, ತೇವಾಂಶ ಇಲ್ಲದ್ದು ಎಂದರೂ ಸಲ್ಲುತ್ತದೆ. ಬರ್ಬತ ಪದದಲ್ಲಿಯೇ ಕ್ರೌರ್ಯದ ಧ್ವನಿಯಿದೆ. ಬರಗಾಲದ ಕ್ರೌರ್ಯವನ್ನು ಅನುಭವಿಸಿದವರು ಬರ್ಬರತೆಯಿಂದ ಪಾರಾಗಿ ಬಂದಂತೆಯೇ ಎಂದು ಒಪ್ಪಿಕೊಳ್ಳುವರು. ಸಾರವಿಲ್ಲದ ಕಾಲ ಎಂದರೆ ಮಳೆ ಇಲ್ಲದ ಕಾಲ. ಬರ ಎಂದರೆ ಒಣ ಮಾತಿಗೂ ಹೊಂದಿಕೆಯಾಗುತ್ತದೆ. ಮಳೆ ಇಲ್ಲವೆ ಬೆಳೆ ಒಣಗಿದಾಗ ಬರಗಾಲದ ಮಾತು ಸಲೀಸಾಗಿ ನಾಲಿಗೆಗೆ ಬರುತ್ತದೆ. ಬಿರುಬಿಸಿಲು ಕೂಡ ಬರದ ವಾತಾವರಣವನ್ನು ಸೃಷ್ಠಿಸುತ್ತದೆ. ಬರಡು ನೆಲ, ಬಂಜರು ಭೂಮಿ, ಬರಡುಗಾಲಕ್ಕೆ ಸಮೀಕರಿಸಲ್ಪಡುತ್ತವೆ. ಬರಸಿಡಿಲು ಎಂಬ ಇನ್ನೊಂದು ಪದವಿದೆ. ಬರಗಾಲದ ಸಿಡಿಲು ಬರಸಿಡಿಲು. ಬರಗುಡುಗು ಬರಸಿಡಿಲುಗಳು ಮಳೆ ತರಿಸುವುದಿಲ್ಲ ಎಂದು ಜನ ನಂಬುವರು. ಬರಗಾಲದಲ್ಲಿ ಗುಡುಗು ಸಿಡಿಲುಗಳು ಹತಾಶೆ ಹುಟ್ಟಿಸಿದ್ದರಿಂದ ಆ ಕಾಲಮಾನದಲ್ಲಿ ಬರಸಿಡಿಲು ಬರಗುಡುಗು ಪದಗಳನ್ನು ರೂಪಿಸಿಕೊಳ್ಳಲಾಗಿದೆ. ಬರನಾಟಿ ಎಂಬ ಇನ್ನೊಂದು ಪದವಿದೆ. ಒಣ ಬೇಸಾಯದ ರೀತಿಯಲ್ಲಿಯೇ ಒಣ ಭೂಮಿಯಲ್ಲೇ ಹೇಗೂ ರಾಗಿ ಪೈರನ್ನು ಇಟ್ಟು ಬೆಳೆಸುವುದಕ್ಕೆ ಬರನಾಟಿ ಎಂದು ಕರೆಯುತ್ತಾರೆ. ಬರ ಪದದ ಸಹಾಯದಿಂದ ಅದಕ್ಕೆ ಅನ್ವರ್ಥವಾಗುವ ಇತರೆ ಪದಗಳನ್ನು ಒಗ್ಗೂಡಿಸಿ ಎಂದರೆ ಆ ಜನ ಯಾರು? ಬಾಯಿದ್ದ ಜನಗಳೇ ಅವರೂ, ಅವರು ಮುಟ್ಟಿಸಿಕೊಳ್ಳದವರೇ ಆಗಿದ್ದರೆಂದು ಸುಲಭವಾಗಿ ತೀರ್ಮಾನಿಸಬಹುದು.

ಈಗ ಕಾಲ ಬದಲಾಗಿದೆ. ಬರಗಾಲ ಬಂದ ಕೂಡಲೇ ದಲಿತರು ಊರು ಬಿಡುತ್ತಾರೆ. ಪೇಟೆಗಳಿಗೆ ವಲಸೆ ಹೋಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. ರೈತರ ಬರದ ಸ್ಥಿತಿಗೆ ನಮಗೂ ದುಃಖವಿದೆ. ಆದರೆ ಆ ಕಾಲದಲ್ಲಿ ಬರದ ಬರಸಿಡಿಲಿಗೆ ಹೀಡಾಗಿ ಊರೂರ ಹೊಲಗೇರಿಗಳೇ ಸಾಮೂಹಿಕವಾಗಿ ನೆಲಕ್ಕುರುಳಿದಾಗ ಮೇಲು ಸಮಾಜ ಅದು ಹೇಗೆ ಸ್ವಂದಿಸಿತ್ತೋ; ಆ ಬಗ್ಗೆ ವಿವರಗಳು ತಕ್ಕುದಾಗಿ ಲಭ್ಯವಿಲ್ಲ. ಕೆರೆಕಟ್ಟೆ ಬಾವಿಗಳ ಕಟ್ಟಿಸಿದ ರಾಜ ಮಹಾರಾಜ ಅಸ್ಪøಷ್ಯರ ಕೇರಿಗಳಿಗೆ ಅದೇನು ಉಂಬಳಿ ಬಿಟ್ಟಿದ್ದರೂ ಗೊತ್ತಿಲ್ಲ. ‘ಬಡವಾರು ಸತ್ತಾರೆ ಸುಡುವುದಕೆ ಬೆಂಕಿಯು ಇಲ್ಲಾವೊ’ ಎಂಬ ಈ ಮಾತು ಬರಗಾಲದ ಸುಡುವಗ್ನಿಗಿಂತಲೂ ತೀವ್ರವಾಗಿ ದಹಿಸಬಲ್ಲದು. ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಮಳೆರಾಯನ ಪದಗಳಿವೆ. ಅಂತಹ ಹಾಡುಗಳನ್ನು ನಮ್ಮ ಕೇರಿಯು ಬೇಸಿಗೆಯ ಬೆಳದಿಂಗಳಲ್ಲಿ ಆಗಾಗ ಹಾಡುತ್ತಿತ್ತು. ಮಳೆ ಬೆಳೆ ಆದರೆ ಊರ ಗೌಡ ಸುಖವಾಗಿರುತ್ತಾನೆ, ಆತ ಸುಖವಾಗಿದ್ದರೆ ನಾವೂ ಸುಖವಾಗಿರುತ್ತೇವೆ ಎಂಬ ಈ ಮಾತಿನಲ್ಲಿ ಅನೇಕ ಸುಚ್ಯಾರ್ಥಗಳಿವೆ. ಬೆಂಕಿ ಬರಗಾಲ ಎಂಬ ಇನ್ನೊಂದು ಮಾತಿತ್ತು. ಎಲ್ಲೆಡೆ ಒಣಗಿ ಬಿಸಿಲ ತಾಪಕ್ಕೇ ಬೆಂಕಿ ಹೊತ್ತಿಕೊಂಡು ದಗದಗಿಸುವುದಿತ್ತು. ಅಂತಹ ಬರಗಾಲವನ್ನು ಬೆಂಕಿಬರಗಾಲ ಎಂದು ಕರೆಯುತ್ತಿದ್ದರು. ಅದು ಬಹಳ ಕ್ರೂರವಾಗಿತ್ತು. ಬರಗಾಲದಲ್ಲಿ ಯಾರಾದರೂ ಪುಣ್ಯಾತ್ಮರು ಅಂಬಲಿ ದಾನ ಮಾಡುವುದಿತ್ತು. ರಾಗಿ ಹಿಟ್ಟಿನಿಂದ ಪಾಯಸದಂತೆ ತಯಾರಿಸಿ ನೀಡುತ್ತಿದ್ದ ಅಂಬಲಿಯು ನಮ್ಮ ಕೇರಿಯ ಅದೆಷ್ಟೋ ಹಸಿವನ್ನು ತಣಿಸಿತ್ತು.

ಬರ ಪದವು ನಮ್ಮ ಪೂರ್ವಿಕರ ಬದುಕಿನಲ್ಲಿ ಬೆಸುಗೆಯಾಗಿ ಹೋಗಿತ್ತು. ಬರಗೆಟ್ಟವರು ಎಂದೇ ಹಿಂದಿನವರನ್ನು ಕರೆಯುತ್ತಿದ್ದುದು. ಬರಬಿಟ್ಟೋಯ್ತು ಎಂಬ ಮಾತಿದೆ. ಅಂದರೆ ಅವನ ಹಸಿವು ಅತ್ತುಕೊಂಡು ಓಡಿ ಹೋಯಿತು ಎಂಬುದಕ್ಕೆ ಸಮಾನಾರ್ಥವಾಗಿ ಬರ ಬಿಟ್ಟೋಯ್ತು ಎಂಬ ನುಡಿಯನ್ನು ಬಳಸುತ್ತಿದ್ದೆವು. ಇಷ್ಟ ಪಟ್ಟಿದ್ದು ಹೊಟ್ಟೆ ತುಂಬ ಸಿಕ್ಕಿದಾಗ ಬಹಳ ಕಾಲದಿಂದ ದಕ್ಕದೇ ಇದ್ದದ್ದು ಈಗ ದಕ್ಕಿತು ಎಂದು ಉಂಡ ಸಂತೃಪ್ತಿಯಿಂದ ಬರಬಿಟ್ಟೋಯ್ತು ಎಂದು ಹೇಳುತ್ತಿದ್ದರು. ಆಗೆಲ್ಲ ಬರಗಾಲ, ಈಗೇನೂ ತಕ್ಕಮಟ್ಟಿಗೆ ಹೊಟ್ಟೆ ಬಟ್ಟೆಗೆ ಒಂದಿಷ್ಟು ದಾರಿ ಆಗಿದೆ ಎಂಬ ಸಮಾದಾನದ ನುಡಿಗಳು ಈಗ ನಮ್ಮ ಕೇರಿಯಲ್ಲಿ ಕೇಳಿಸುತ್ತವೆ. ಬರ ಎಂದರೆ ಬದುಕುವ ಹೋರಾಟದ ಒಂದು ವಿರಾಟ್ ಸಂಗತಿ. ಮಳೆ, ಬೆಳೆ, ಅನ್ನ, ಆಹಾರ, ಬಟ್ಟೆ ಇತ್ಯಾದಿ ಇಷ್ಟೇ ಸಂಗತಿಗಳು ಬರವಾಗಿರಲಿಲ್ಲ. ಇಡೀ ಬಾಳುವೆಯ ಎಲ್ಲ ನೆಲೆಗಳಲ್ಲೂ ಬಹಿಸ್ಕøತಿರಾಗಿದ್ದರವರ ಬದುಕಿನ ಬರದ ಬರ್ಬರ ಸ್ಥಿತಿ ಈಗ ರೂಪಾಂತರಗೊಂಡಿದೆ. ಬರ ಕೇವಲ ಒಂದು ಪದ ಅಲ್ಲ, ಅದು ನಮ್ಮ ಹೋರಾಟದ ಪಾಡಿನ ಪ್ರತಿಧ್ವನಿಯೂ ಹೌದು.

Leave a Reply

Your email address will not be published.