ದಲಿತ ಪದಕಥನ -6 : ‘ಅವನಿಗೆ ಯಮಲೋಕ ಕಾಣಿಸ್ದೆ ಬಿಡುದಿಲ್ಲಾ’

- ಮೊಗಳ್ಳಿ ಗಣೇಶ್

ಯಮಲೋಕ
mogalli‘ಅವನಿಗೆ ಯಮಲೋಕ ಕಾಣಿಸ್ದೆ ಬಿಡುದಿಲ್ಲಾ’ ಎಂದು ನಮ್ಮಪ್ಪ ನನ್ನನ್ನು ಬಹಳಷ್ಟು ಸಲ ಹೊಡೆದು ಬಡಿದು ಸತಾಯಿಸುತ್ತಿದ್ದ. ಅಪ್ಪನ ಹಿಂಸೆಯೇ ದೊಡ್ಡ ಯಮಲೋಕವಾಗಿತ್ತು. ‘ಮನೆನೇ ಯಮಲೋಕ ಮಾಡಿದ್ದೀಯಲ್ಲೊ’ ಎಂದು ತಾತ ನನ್ನ ತಂದೆಯ ಜೊತೆ ಯಾವತ್ತೂ ತಗಾದೆ ತೆಗೆಯುತ್ತಿದ್ದ. ‘ಸಂಸಾರನೇ ಯಮಲೋಕವಾದ ಮ್ಯಾಲೆ ಮತ್ತಿನ್ಯಾವ ಯಮಲೋಕ ಇದ್ದಾದೂ’ ಎಂದು ನನ್ನ ತಾಯಿ ಹತಾಶೆಯಲ್ಲಿ ನುಡಿಯುತ್ತಿದ್ದಳು. ‘ವಲ್ಗೇರಿನೇ ಒಂದೆಮಲೋಕ’ ಎಂದು ಹೊರಗಿನವರು ವಿಷಾದದಲ್ಲಿ ಹೇಳುವುದಿತ್ತು. ಪಾಪಿಗಳ ಲೋಕ ಯಮಲೋಕ ಎಂದು ಹೇಳುತ್ತಲೇ ಇದ್ದಿದ್ದರಿಂದ ನಮ್ಮ ಕೇರಿಯೇ ಒಂದು ಯಮಲೋಕವಾಗಿರುವಂತೆ ಭಾಸವಾಗುತ್ತಿತ್ತು. ನಮ್ಮವರೆಲ್ಲ ಪಾಪಿಗಳು ಎಂದು ಒಪ್ಪಿಕೊಂಡಿದ್ದರು. ನಮ್ಮ ತಾತನಂತು ಆಗಾಗ ನಿಟ್ಟುಸಿರು ಬಿಟ್ಟು, ‘ಅಯ್ಯೋ, ಯಮಲೋಕ ಅಂದರೆ ಅದು ಎಲ್ಲೊ ಅಲ್ಲೆಲ್ಲೊ ಮರೇಲಿ ಅದೇ ಅನ್ಕಂದಿದ್ದೆ. ಅದು ಇಲ್ಲೇ ನನ್ಮನೇಲೇ, ನನ್ನ ಕೇರಿಲೇ ನನ್ನ ಕಣ್ಣ ಮುಂದೆನೇ ಕುಣೀತಾ ಅದಲ್ಲಪ್ಪಾ’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದ.

ಕೀಳು ಜಾತಿಯಲ್ಲಿ ಹುಟ್ಟಿದವರಿಗೆ ಯಮಲೋಕವೇ ಗತಿ ಎಂದು ನಂಬಿಸಲಾಗಿತ್ತು. ಹಾಗಾಗಿಯೇ ಸಣ್ಣವರಿದ್ದ ನಮಗೆ ಯಮಲೋಕದ ಬಗ್ಗೆ ಭಯಂಕರ ಕಲ್ಪನೆಗಳಿದ್ದವು. ಎಂತೆಂತದೊ ನರಕದ ಯಮ ಕಥೆಗಳ ಕೇಳಿ ನಮ್ಮ ಪುಟ್ಟ ಹೃದಯ ವಿಪರೀತವಾಗಿ ಬಡಿದುಕೊಳ್ಳುತ್ತಿತ್ತು. ಯಮ ಕಿಂಕರರ ಚಿತ್ರಹಿಂಸೆಯ ವಿವರಗಳು ತಲೆಯಲ್ಲಿ ಬಲವಾಗಿ ನೆಲೆಯೂರಿ ಅವು ಕನಸಿಗೆ ಬಂದು ತಿವಿಯುತ್ತಿದ್ದವು. ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಅದ್ದುವುದು. ಗರಗಸದಿಂದ ಕತ್ತು ಕೊಯ್ಯುವುದು, ಜೀವ ಇರುವಾಗಲೇ ರಣ ಹದ್ದುಗಳು ಕುಕ್ಕಿ ಕುಕ್ಕಿ ಕಿತ್ತು ತಿನ್ನುವುದು. ಈಟಿ, ಭರ್ಚಿಗಳಿಂದ ತಿವಿಯುವುದು. ಶಿವ ಶಿವಾ ಎಂತೆಂತೆದೊ ಶಿಕ್ಷೆಯ ವಿವರಗಳು ತುಂಬಿ ಹೋಗಿ ಸಾವಿನ ಬೀತಿ ಮತ್ತಷ್ಟು ದಾಳಿ ಮಾಡುತ್ತಿತ್ತು. ನಾವು ಸಾಯದೇ ಹಾಗೇ ಉಳಿದು ಯಮಲೋಕದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ವಿಚಾರಗಳು ಮೂಡುತ್ತಿದ್ದವು. ಯಾರಾದರೂ ಸತ್ತಾಗ ಮತ್ತೆ ಯಮಲೋಕದ ಕಲ್ಪನೆಗಳು ರುದ್ರ ಭೀಕರವಾಗಿ ಕುಣಿದು ಇಡೀ ಮನಸ್ಸೆಲ್ಲ ಕನಲುತ್ತಿತ್ತು. ಸತ್ತವರನ್ನು ಯಮ ಬಂದು ಕರೆದೊಯ್ಯುವನು ಎಂಬ ವಿವರದಿಂದಾಗಿ ಶವ ಸಂಸ್ಕಾರದಲ್ಲಿ ಭಾಗವಹಿಸಲು ಸಣ್ಣವರಿದ್ದ ನಮಗೆ ಭಯವಾಗುತ್ತಿತ್ತು. ಶವದ ಪಕ್ಕ ಹೋಗಲು ಹಿಂಜರಿಯುತ್ತಿದ್ದೆವು. ನಮ್ಮ ತಾತನಂತೂ ಒಮ್ಮೆ ವಿಪರೀತ ಜ್ವರಕ್ಕೆ ಪ್ರಜ್ಞೆ ತಪ್ಪಿದ್ದು ಮರುದಿನ ಎದ್ದಾಗ ತಾನು ಯಮಲೋಕಕ್ಕೆ ಹೋಗಿದ್ದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದ. ನಮ್ಮ ತಾತನ ಬಾಯಲ್ಲಿ ಮಾತ್ರ ಅಂತಹ ಕಲ್ಪನೆಯ ಯಮಲೋಕದ ಬಗ್ಗೆ ಬೇರೆಯದೇ ಆದ ಚಿತ್ರಗಳು ಸಿಕ್ಕಿದ್ದವು.

ಯಮಲೋಕದಲ್ಲಿ ಪೂರ್ವಿಕರು ಇರುತ್ತಾರೆ. ಅಲ್ಲೂ ಅದೇ ಬದುಕು ಮಾಡಿಕೊಂಡು ಇರುತ್ತಾರೆ. ಇಲ್ಲಿಂದ ಹೋದಾಗ ಹೇಗಿರುತ್ತಾರೊ, ಹಾಗೇ ಅಲ್ಲೂ ಇರುತ್ತಾರೆ. ಅಲ್ಲಿ ಹುಟ್ಟೂ ಇಲ್ಲ ಸಾವೂ ಇಲ್ಲಾ. ಅಲ್ಲಿ ಯಮನ ಮುಂದೆ ಸರಿಯಾಗಿ ಬಾಳಿ ಬದುಕಿದರೆ ಆಮೇಲೆ ಅವನು ಬೇಕಾದವರನ್ನು ಸ್ವರ್ಗಕ್ಕೆ ಕಳುಹಿಸುವನು. ತಪ್ಪು ಮಾಡಿದವರಿಗೆಲ್ಲ ಬುದ್ಧಿ ಕಲಿಸಿ ಸರಿಯಾದ ದಾರಿಗೆ ತಂದು ಒಂದು ಮುಕ್ತಿ ಕಾಣಿಸುವನು. ಇದು ತಾತ ಯಮಲೋಕದ ಬಗ್ಗೆ ನೀಡಿದ್ದ ವಿವರ. ಆದರೂ ಇಂತಹ ಉದಾರ ಚಿತ್ರಣವನ್ನು ನಾವು ಒಪ್ಪಲಾರದಾಗಿದ್ದೆವು. ಪಾಪ ಕಾರ್ಯಗಳನ್ನು ಮಾಡದೆ ನೀತಿವಂತರಾಗಿ ಬಾಳಲಿ ಎಂಬ ಮುನ್ನೆಚ್ಚರಿಕೆಯಿಂದ ಯಮಲೋಕದ ಬಗ್ಗೆ ಅತಿಯಾದ ವಿವರಗಳಿದ್ದವೆನಿಸುತ್ತದೆ. ಆದರೆ ಅಂತಹ ಯಾವ ಅಪರಾಧವನ್ನೂ ಮಾಡದಿದ್ದರೂ ಕಡ್ಡಾಯವಾಗಿ ನಮ್ಮನ್ನು ಯಮಲೋಕಕ್ಕೇ ಏಕೆ ನೂಕಲಾಗುತ್ತದೆ ಎಂಬ ನಮ್ಮ ಆತಂಕಕ್ಕೆ ಯಾರೂ ಸರಿಯಾದ ತಿಳಿವಳಿಕೆ ನೀಡುತ್ತಿರಲಿಲ್ಲ. ನರಕ ಪದವಂತೂ ಯಮಲೋಕದ ಶಿಕ್ಷೆಗೆ ಸಂಬಂಧಿಸಿದಂತೆ ಯಾವತ್ತೂ ಹೆದರಿಸುತ್ತಿತ್ತು.

‘ಯಮುನ್ಪಾದ ಸೇರ್ಕಂದ’, ‘ಯಮುನ್ಪಟ್ಣುಕೆ ವೋದ’, ‘ಯಮುನ್ಪಾಲಾದ’ ಎಂಬ ಈ ನುಡಿಗಟ್ಟುಗಳು ಸಾವಿಗೆ ಸಂಬಂಧಪಡುತ್ತಿದ್ದವು. ಸತ್ತವನ ಸಂಬಂಧವನ್ನು ಹೀಗೆ ಯಮನ ಜೊತೆ ಸಮೀಕರಿಸಲಾಗುತ್ತಿತ್ತು. ‘ಯಮುನ್ಕಾಟ ಕೊಡಬ್ಯಾಡ’, ‘ನನ್ಪಾಲ್ಗೆ ಇವ್ನೇ ಯಮ ಆಗವನೆ’ ಎಂಬ ಮಾತುಗಳು ಗಂಡನ ಕಾಟಕ್ಕೆ ಹೊಂದಿಕೆಯಾಗುತ್ತಿದ್ದವು. ಯಮಲೋಕ ಎಂಬ ಈ ಪದ ವ್ಯಾಪಕವಾಗಿ ಇಹದ ಬದುಕಿನ ನರಕದ ಪಾಡಿಗೆ ಅತ್ಯಂತ ಸಮರ್ಥವಾಗಿ ಅನ್ವಯವಾಗುವ ರೂಪಕ. ಅದರಲ್ಲೂ ಹೊಲಗೇರಿಯ ಬದುಕೇ ಯಮಲೋಕದ ನರಕದ ಚಿತ್ರಣವಾಗುತ್ತಿತ್ತು. ಸ್ವರ್ಗದ ಕಲ್ಪನೆಯೇ ನಮಗೆ ಬರುತ್ತಿರಲಿಲ್ಲ. ಆ ಬಗ್ಗೆ ನಮಗೆ ಕುತೂಹಲವೂ, ಆಸಕ್ತಿಯೂ ಇರಲೇ ಇಲ್ಲ. ಅದು ಸಂಪೂರ್ಣವಾಗಿ ನಮಗೆ ಬಾಗಿಲು ಮುಚ್ಚಿದ ಸಂಗತಿಯಾಗಿತ್ತು. ದೇವಾನುದೇವತೆಗಳ ಸ್ವರ್ಗದಲ್ಲಿ ನಮ್ಮಂತಹ ಪರಮ ಪಾಪಿಗಳಿಗೆ ಅವಕಾಶವಿರಲು ಸಾಧ್ಯವೇ ಇಲ್ಲ ಎಂಬ ಬಲವಾದ ತೀರ್ಮಾನ ಬಂದುಬಿಟ್ಟಿತ್ತು. ಕೆಲವು ಮುಪ್ಪಾದ ಹೆಂಗಸರಂತು ಯಮನನ್ನು ಏಕವಚನದಲ್ಲಿ ಬೈಯ್ದು ಅವನ ಆ ಯಮಲೋಕ ತನಗೆ ಯಾವ ಒಂದು ಲೆಕ್ಕಕ್ಕೂ ಇಲ್ಲ ಎಂದು ಯಮ ನನ್ನೇ ಟೀಕಿಸುತ್ತಿದ್ದರು. ಭಾಗಶಃ ಅವರು ಸತಿ ಸಾವಿತ್ರಿಗಿಂತಲೂ ಮಿಗಿಲಾದವರಿರಬೇಕು. ‘ಅಯ್ಯೋ, ವೋಗಯ್ಯಾ, ಯಮುನೊ ಗಿಮುನೊ, ನಾ ಕಾಣ್ದೆ ಇರುದೇ ನಿನ್ನೆಮ ಲೋಕಾಯೆಲ್ಲಾ ಸಿಕ್ಸೆನೂ ಯಿಲ್ಲೇ ತೀರಿಸ್ಕಂದಿವಿನಿ ಕನಾ. ನೀನ್ ಕೊಡೊ ಸಿಕ್ಷೆ ಅದ್ಯಾವ್ದಯ್ಯಾ. ವೋಗೋಗು. ಯೀಗ್ ಬಂದಿದ್ದಿಯಾ ಅಗ್ಗವಾ ಇಡ್ಕಂದು. ನಾನದ್ಯಾವ್ದೋ ಕಾಲ್ದೆಲೇ ಸತ್ತೋದೆ ಕನಾ’ ಎಂದು ಆ ಯಮನಿಗೆ ಮೂರು ಪೈಸೆಯ ಭಯ ಭಕ್ತಿಯನ್ನೂ ತೋರದೆ ಎಲೆ, ಅಡಿಕೆ, ಹೊಗೆ, ಸೊಪ್ಪು ಜಗಿಯುತ್ತ ಮಾತನಾಡಿಕೊಳ್ಳುತ್ತಿದ್ದರು.

ಯಮಲೋಕ ಪದ ಹೀಗೆ ನಮ್ಮ ಕೇರಿಯ ನಿತ್ಯ ಜೀವನದ ಜೊತೆ ಬಳಸುವ ಒಂದು ಮುಖ್ಯ ಪದವಾಗಿತ್ತು. ವಲಗೇರಿ ಹಾಗೂ ಯಮಲೋಕ ಒಂದಕ್ಕೊಂದು ಕೊಂಡಿ ಪದಗಳಂತೆ ಜೊತೆಗಿದ್ದವು. ಯಮ ಅನ್ನುವವನು ನಮಗೆಲ್ಲ ಬಹಳ ಪರಿಚಿತನೇನೊ ಎಂಬಷ್ಟು ಅವನ ಹೆಸರು ಕಿವಿಮೇಲೆ ಬಿದ್ದು ಬಿದ್ದು ದೊಡ್ಡವರಾಗುತ್ತಿದ್ದಂತೆಯೇ ಯಮ ನಮಗೆ ಸಾಮಾನ್ಯ ವ್ಯಕ್ತಿಯಂತಾಗಿ ಬಿಟ್ಟಿದ್ದ. ಯಮ ಮೂಲತಃ ಒಬ್ಬ ಪಶುಪಾಲಕ ನಾಯಕನಾಗಿದ್ದನೆನಿಸುತ್ತದೆ. ಯಮನಿಗೂ ಯೆಮ್ಮೆ(ಎಮ್ಮೆ)ಗೂ ನೇರ ಸಂಬಂಧವಿದೆ. ಯಮದಿಂದ ಯೆಮ್ಮೆ ಆಯಿತೊ, ಯೆಮ್ಮೆಯಿಂದ ಯಮ ಆಯಿತೊ. ಯೆಮ್ಮೆಗಳ ಪಾಲಕನಾಗಿದ್ದವನೇ ಯಮನಾಗಿರಬೇಕು. ಯೆಮೆಗೆ ನಂತರ ಒತ್ತು ಮೂಡಿ ಯೆಮ್ಮೆ ಆಗಿರಲಿಕ್ಕೂ ಉಂಟು. ಯಮ ಎಂಬ ನಾಮಪದವೇ ನಂತರದಲ್ಲಿ ಯೆ ಕಾರಕ್ಕೆ ಬಂದು ನಂತರ ಒತ್ತಕ್ಷರ ಪಡೆದು ‘ಯೆಮ್ಮೆ’ಯ ರೂಪ ಪಡೆದಿರಬಹುದು. ಈ ಯಮ ಪದವು ಅತ್ತ ಪ್ರಾಣಿ, ಇತ್ತ ಮಾನವ ಎರಡೂ ಬಗೆಯ ಅರ್ಥ ಸ್ವರೂಪವನ್ನು ಪಡೆದಿದೆ. ‘ನರಸಿಂಹ’ ಎಂಬಂತೆ ಯಮನ ಲೋಕದ ಪುರಾಣ ವಿವರ ಬೇರೆ. ಈ ಯಮನಿಗೆ ಒಂದು ಲೋಕ ಇತ್ತೆಂದು ಅರ್ಥ ಧ್ವನಿತವಾಗುತ್ತದೆ.

mahishasura1ಯಾವುದು ಆ ಲೋಕ? ಭಾಗಶಃ ತಪ್ಪಿತಸ್ಥರನ್ನು ದಂಡಿಸಿ ದುಡಿಸಿಕೊಳ್ಳುವ ಲೋಕವಾಗಿರಬಹುದು. ಯಮಲೋಕಕ್ಕೆ ಹೋಗುವ ಖಾತ್ರಿ ಇದ್ದದ್ದು ದುಡಿದು ದಂಡನೆಗೆ ಹೀಡಾಗುತ್ತಿದ್ದ ದಲಿತರಿಗೇ. ಪಶುಪಾಲಕ ಸಮಾಜದಲ್ಲಿ ಯಮ ಪಶುಪಾಲಕ ಸಮುದಾಯಗಳವರಿಗೆಲ್ಲ ಒಬ್ಬ ದಂಡಾಧಿಕಾರಿಯಂತಿದ್ದನೇನೊ ಅಥವಾ ಪಶುಪಾಲಕರ ಹಿತ ಕಾಯುವ ದಂಡನಾಯಕನಾಗಿರಬಹುದು. ಪಶುಪಾಲಕರ ನಡುವಿನ ಸಂಘರ್ಷಗಳನ್ನು ಈತ ಬಗೆಹರಿಸುತ್ತಿದ್ದಿರಬಹುದು. ಪಶುಪಾಲಕರಿಗೆ ತೊಂದರೆ ಕೊಡುತ್ತಿದ್ದವರ ಪಾಲಿಗೆ ಯಮ ಭಯಂಕರ ರೂಪವಾಗಿ ಮಾರ್ಪಟ್ಟಿರಬೇಕು. ದಕ್ಷಿಣ ಭಾರತದ ಅನೇಕ ಬುಡಕಟ್ಟುಗಳಿಗೆ ಎಮ್ಮೆಯು ಕುಲಚಿನ್ಹೆ, ಹಾಗೆಯೇ ದೈವದ ಪ್ರಾಣಿ. ನೀಲಗಿರಿಯ ತೋಡರಿಗೆ ಎಮ್ಮೆ ಜನಾಂಗೀಯ ಪ್ರಾಣಿ. ಸಂಬಂಧ ಕೂಡಿಸೋದಾದರೆ, ಕೋಣ ಹೊಲೆಮಾದಿಗರಿಗೆ ಸಂಬಂಧಪಡುತ್ತದೆ. ಕೋಣವಾಗಿ ಹುಟ್ಟಿ ಬನ್ನಿ, ನಿಮ್ಮನ್ನು ಬಲಿ ತೆಗೆದುಕೊಳ್ಳುವೆ ಎಂದು ಮಾರಮ್ಮ ಶಾಪ ಕೊಟ್ಟಿದ್ದಾಳಂತೆ. ಇದೇನೊ ಹಾಗೆ ಅತ್ತ ಇರಲಿ, ಮಹಿಷ ಮಂಡಲ ಎಂಬ ಒಂದು ಸಾಂಸ್ಕøತಿಕ ಪ್ರದೇಶವಿದೆ. ಅಂದರೆ ಅದು ಒಂದು ಪಶುಪಾಲನಾ ಪರವಾನಗಿ ಪಡೆದುಕೊಂಡ ಪ್ರದೇಶ ಎಂದರ್ಥ. ಮಹಿಷಪುರ ಮಹಿಸೂರಾಗಿ ನಂತರ ಅದು ಮೈಸೂರಾಗಿ ಅಂದರೆ ಮಹಿಷಾಶೂರನ ಊರಾಗಿ, ಈಗ ನಗರವಾಗಿ ಬೆಳೆದದ್ದರ ಐತಿಹ್ಯಗಳಿವೆ. ಪಶುಪಾಲಕರ ನಡುವಿನ ಈ ಮಹಿಷನ ಹಟ್ಟಿಕಾರ ವಿವರವನ್ನೇನಾದರೂ ಶಂಬಾ ಜೋಷಿಯವರು ವಿವರಿಸಿದ್ದಿದ್ದರೆ ಚೆನ್ನಾಗಿತ್ತು.

‘ಮಹಿಷಾ’ಶೂರನಿಗೂ ಯಮನಿಗೂ ಅಂತಹ ಸಂಬಂಧ ತಾಳಿಕೆ ಆಗದಿರಬಹುದು. ಆದರೆ ಮಹಿಷ ಎಂಬ ಅಶುರನ ಪಶುಪಾಲಕ ಸಂಬಂಧವನ್ನಂತು ನಿರ್ಲಕ್ಷಿಸುವಂತಿಲ್ಲ. ಆ ಮಟ್ಟಿಗೆ ಇವರಿಬ್ಬರೂ ಅಣ್ಣತಮ್ಮಂದಿರಂತೆ ಕಾಣುವರು. ಮೈಸೂರಿನ ಚಾಮುಂಡಿ ಬೆಟ್ಟದ ತಟದಲ್ಲಿರುವ ಮಹಿಷಾಶೂರನನ್ನು ಬಹಳ ಸಲ ನೋಡಿರುವೆ. ಈತ ನನ್ನ ಕಣ್ಣಿಗೆ ಎಂದೆಂದೂ ವಿಕಾರವಾಗಿ ಭಯಭೂತವಾಗಿ ಕಂಡಿಲ್ಲ. ಅಂತಹ ಆ ಮಹಿಷಾಶೂರ ಹೇಗೆ ಎಮ್ಮೆ ಕಾಯುತ್ತಿದ್ದನೊ, ಅವನಿಗೆ ಯಾಕೆ ಚಾಮುಂಡಿ ಮರಣ ದೇವಿಯಾಗಿ ಬಂದು ಸಂಹರಿಸಿದಳೊ. ಆ ಯಮ ಈ ವಿಚಾರದಲ್ಲಿ ಯಾವ ಪಾತ್ರ ವಹಿಸಿದ್ದನೊ ಎಂಬ ಕಥನ ಕುತೂಹಲ ಈಗಲೂ ಇಣುಕುತ್ತದೆ. ನಮ್ಮ ಕೇರಿಯವರು ಯಮಲೋಕದ ಧರ್ಮ, ಕರ್ಮ, ಪಾಪ, ಪುಣ್ಯ, ಸ್ವರ್ಗ, ನರಕದ ಕಥೆಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ಸತ್ತ ನಮ್ಮ ಪೂರ್ವಿಕರೆಲ್ಲ ಯಮಲೋಕದಲ್ಲಿ ಶಾಶ್ವತವಾಗಿ ಇರುವರಾದ್ದರಿಂದ ಸತ್ತ ಮೇಲೆ ತಾವು ಯಾವ ಭಯವೂ ಇಲ್ಲದೆ ಅವರ ಜೊತೆ ಸೇರಿಕೊಳ್ಳುತ್ತೇವೆ ಎಂಬ ಸಂಬಂಧಗಳ ಈ ಭಾವನೆಯೇ ಯಮಲೋಕವನ್ನು ಸಕಾರಾತ್ಮಕವಾಗಿ, ಜೀವನದ ಮತ್ತೊಂದು ಹಂತವಾಗಿಸಿದೆ. ಹಾಗಾಗಿ ನಮ್ಮ ಕೇರಿಯವರು ಯಮನ ಆ ಲೋಕವನ್ನೇ ತಮ್ಮ ಹಿರಿಯರ, ಸತ್ತವರ ಮತ್ತೊಂದು ಊರು ಎಂತಲೂ ತಮ್ಮ ಕೊನೆಯ ಇನ್ನೊಂದು ನೆಲೆ ಎಂತಲೂ ನಂಬಿದ್ದಾರೆ.

Leave a Reply

Your email address will not be published.