ದಲಿತ ಪದಕಥನ -5 :ರಾತ್ರಿ ಎಂದರೆ ನಮ್ಮ ಪಾಲಿಗೆ ಒಂದು ಕನಸು

- ಮೊಗಳ್ಳಿ ಗಣೇಶ್

ರಾತ್ರಿ
mogalliರಾತ್ರಿ ಎಂದರೆ ನಮ್ಮ ಪಾಲಿಗೆ ಒಂದು ಕನಸು, ಒಂದು ನಿರಾಳ ನಿದ್ದೆ, ಅಂಗಳದ ಪರಸಂಗದ ಬೆಳದಿಂಗಳು. ಸುಖ-ದುಃಖದ ಹಾಡುಪಾಡು ಆಗಿತ್ತು. ಹಗಲು ನಮಗೆ ಅಷ್ಟೇನು ಆಪ್ತವಾಗಿರಲಿಲ್ಲ. ಹೊತ್ತು ಮುಳುಗಿದಾಗಲೇ ಕೇರಿಯಲ್ಲಿ ರಾತ್ರಿಯು ಸಡಗರವಾಗಿ ಇಳಿದುಬರುತ್ತಿದ್ದುದು. ಕೂಲಿ ಮಾಡಿ ಬಂದು ಲಗು ಬಗೆಯಲ್ಲಿ ಸಾಧ್ಯವಾದದ್ದನ್ನು ಬೇಯಿಸಿ ಉಂಡು ಮಲಗುವಾಗ ರಾತ್ರಿಯ ತಾರೆಗಳ ಆಕಾಶವು ನಮ್ಮ ಪಾಲಿಗೆ ರಮ್ಯ ಮಾಂತ್ರಿಕ ಸ್ವರ್ಗವಾಗಿ ಕಾಣುತ್ತಿತ್ತು. ಇಡೀ ಕೇರಿ ದಣಿದು ಬಂದು ರಾತ್ರಿಯ ತೆರೆಯನ್ನು ಹೊದ್ದುಕೊಂಡು ಮಲಗಿ ಬಿಡುತ್ತಿತ್ತು.

ಕೆಲವೊಮ್ಮೆ ಅದೇ ರಾತ್ರಿಗಳು ನಮ್ಮ ಪಾಲಿಗೆ ದುಸ್ವಪ್ನವಾಗಿಯೂ ಪರಿಣಮಿಸುತ್ತಿದ್ದವು. ಅಪ್ಪ ಅಮ್ಮಂದಿರ ಜಗಳವೊ, ಬಂಧುಬಳಗದ ಗದ್ದಲವೊ, ಹೊರಗಿನವರ ದುರಾಕ್ರಮಣವೊ ಇಡೀ ರಾತ್ರಿಯನ್ನು ದ್ವಂಸ ಮಾಡಿ ಬಿಡುತ್ತಿದ್ದವು. ಅಂತಹ ರಾತ್ರಿಗಳು ಬಾರದಿರಲಿ ಎಂದು ಪ್ರಾರ್ಥಿಸಿಯೇ ನಾವು ಮಲಗುತ್ತಿದ್ದುದು. ಸಂಜೆಗತ್ತಲು ಮುಗಿದು, ಉಣ್ಣುವ ಹೊತ್ತು ಕಳೆದು, ಮಲಗುವ ಹೊತ್ತಾದ ಕಾಲವನ್ನೇ ನಾವು ರಾತ್ರಿ ಎಂದು ಕರೆಯುತ್ತಿದ್ದುದು. ನಮ್ಮ ಪಾಲಿಗೆ ರಾತ್ರಿ ಎಂದರೆ ಹೆಚ್ಚೆಂದರೆ ಹತ್ತು ಗಂಟೆಗೆ ಮುಗಿದು ಹೋಗುತ್ತಿತ್ತು. ಹಳ್ಳಿಯ ಆ ಕಾಲಕ್ಕೆ ರಾತ್ರಿಯ ಹತ್ತುಗಂಟೆಯೇ ಎಷ್ಟೋ ಹೊತ್ತಿನಂತೆ ಭಾಸವಾಗುತ್ತಿತ್ತು. ಅಮವಾಸ್ಯೆಯ ರಾತ್ರಿಗಳಂದು ನಾವು ಬೀದಿಯನ್ನು ದಾಟಿ ಆಚೆ ಹೋಗುತ್ತಿರಲಿಲ್ಲ. ದಟ್ಟವಾದ ಕತ್ತಲಲ್ಲಿ ಒಂಟಿಯಾಗಿ ನಡೆದರೆ ದೆವ್ವಗಳು ಹಿಡಿದುಕೊಳ್ಳುತ್ತವೆ ಎಂಬ ಪ್ರತೀತಿ ಇತ್ತು.

ರಾತ್ರಿ ಕಾಲದಲ್ಲೇ ನಮಗೆ ದೆವ್ವಗಳ ಕಥೆಗಳು ಬಾವಲಿಗಳಂತೆ ರೆಕ್ಕೆ ಬೀಸಿ ಮನದೊಳಗೆ ಹಾರಾಡಿ ಹೆದರಿಸುತ್ತಿದ್ದುದು. ರಾತ್ರಿಗೂ, ದೆವ್ವಗಳಿಗೂ ಏನೊ ಒಂದು ರಮ್ಯ ಮಾಂತ್ರಿಕ ಸಂಬಂಧ. ಮಾಟಮಂತ್ರದವರಂತು ಅಮವಾಸೆ ಹಾಗೂ ಹುಣ್ಣಿಮೆಯ ರಾತ್ರಿಗಳನ್ನೇ ಕಾಯುತ್ತಿದ್ದರು. ನಮಗೂ ಕೂಡ ಈ ಎರಡು ರಾತ್ರಿಗಳೆಂದರೆ ಕೇಡು ದೈವಗಳ ರಾತ್ರಿಗಳೆಂದೇ ತಿಳಿಯುತ್ತಿತ್ತು. ರಾತ್ರಿ ಎನ್ನುವುದೇ ಅನೇಕ ಬಗೆಯ ಕಥೆಗಳ ಕಾಲವಾಗಿತ್ತು. ಅದೆಷ್ಟೊಂದು ಜನಪದ ಕತೆಗಳನ್ನು ರಾತ್ರಿಗಳಲ್ಲಿ ಆಲಿಸಿದ್ದೆವೊ ಲೆಕ್ಕವೇ ಇಲ್ಲ. ನೆಂಟರಿಷ್ಟರು ಬಂದಾಗಂತೂ ‘ಸಪ್ಪಟ್ಟು ಸರ್ರಾತ್ರಿವರೆಗೂ’ ಮಾತು ಕಥೆಗಳು ಅಂಗಳದಲ್ಲಿ ನಡೆಯುತ್ತಿದ್ದವು. ಹಗಲು ನಮಗೆ, ನಮ್ಮವರಿಗೆ ದುಡಿಮೆಯ ಸಮಯವಾಗಿತ್ತು. ಹಾಗಾಗಿಯೇ ಹಗಲಿನಲ್ಲಿ ಕಥೆ ಹೇಳಿಕೊಳ್ಳುವುದು ಒಂದು ನಿಷೇಧವಾಗಿತ್ತು. ಪದವಾಡಲು ಹಗಲಿನಲ್ಲಿ ಅವಕಾಶವಿತ್ತು. ಕಥೆಗೆ ರಾತ್ರಿಯೇ ಬರಬೇಕಾಗಿತ್ತು. ಹಗಲಿನಲ್ಲಿ ಪರಸಂಗವ ಹೇಳಿದರೆ ಹಾವು ಚೇಳು ಬರುತ್ತವೆ ಎಂದು ಹೆದರಿಸುತ್ತಿದ್ದರು. ರಾತ್ರಿಯೊ ತರಾವರಿ ಕಥೆಗಳ ಕಾಡೇ ಆಗಿತ್ತು. ಯಾವುದೊ ಏಳು ಸಮುದ್ರಗಳ ಆಚೆಯ ಏಳು ಬೆಟ್ಟಗಳ ಮರೆಯ ಚೆಲುವೆ. ಅಂತದೇ ಇನ್ನೊಬ್ಬ ರಾಜಕುಮಾರ. ಅವರಿಬ್ಬರ ಪ್ರೇಮ ಮಿಲನ.

ಯಾವುದೊ ಶಾಪದಿಂದ ಬೇರ್ಪಡುವ ವಿದಾಯದ ವಿರಹ. ಕಷ್ಟ-ನಷ್ಟ, ಸುಖ-ದುಃಖ, ಯಾವುದೊ ಮಾಂತ್ರಿಕ ವರಬಲ. ಮತ್ತೆ ಮಿಲನವಾಗುವ ಸುಖದ ಕನಸು ಇವೆಲ್ಲವೂ ರಮ್ಯಾದ್ಬುತವಾಗಿ ರಾತ್ರಿಯಲ್ಲಿ ಆಕಾಶದ ವಿಶಾಲ ರಂಗಸಜ್ಜಿಕೆಯಲ್ಲಿ ನಮ್ಮ ಮನದಂಗಣದಲ್ಲಿ ಪ್ರತಿಫಲಿಸಿ ಲೀನವಾಗುತ್ತಿದ್ದ ಪರಿಗೆಲ್ಲ ಒಂದು ವೇದಿಕೆಯಾಗಿ ರಾತ್ರಿಯು ನಮ್ಮೊಳಗೆ ದಿವ್ಯವಾಗಿ ಮೂಡುತ್ತಿತ್ತು. ಭಾಗಶಃ ಸೂರ್ಯೋದಯವು ಅಷ್ಟು ಬಗೆಯಲ್ಲಿ ಗಾಢವಾಗಿ ನಮ್ಮೊಳಗೆ ಮಿಡಿದು ಮೂಡುತ್ತಿರಲಿಲ್ಲ. ರಾತ್ರಿಯೇ ನಮ್ಮ ಪಾಲಿಗೆ ಅನಂತವಾದ ಆಕಾಶವನ್ನು ದಿವ್ಯವಾಗಿ ತೋರುತ್ತಿದ್ದುದು. ಆ ಬಗೆಯ ಆಕಾಶದಲ್ಲಿ ನಾವು ಅದೆಷ್ಟು ಸಲ ರಮ್ಯ ಮಾಂತ್ರಿಕ ಚಾಪೆಗಳ ಮೇಲೊ, ಮರದ ಕುದುರೆಯ ಮೇಲೊ, ಯಾವುದೊ ಹಕ್ಕಿಯ ಬೆನ್ನ ಮೇಲೊ ಹಾರಿ ಹೋಗಿದ್ದಿದೆ. ಹಗಲು ರಮ್ಯವಾಗಿರಲು ಸಾಧ್ಯವೇ ಇರಲಿಲ್ಲ. ಎಷ್ಟೋ ಸಲ ಆ ಹಗಲೇ ನಮಗೆ ನರಕದಂತೆ ಭಾಸವಾಗುತ್ತಿತ್ತು. ವಾಸ್ತವದ ನರಕಕ್ಕೆ ಕನ್ನಡಿ ಹಿಡಿದಂತೆ ಸೂರ್ಯ ತಲೆ ಮೇಲೆ ಅಡ್ಡಾಡುತ್ತಿದ್ದ. ರಾತ್ರಿಯ ತಾರೆಗಳು, ಚಂದಮಾಮ ತಂಪೆರವಂತೆ ದಣಿದ ಮನಕ್ಕೆ ಆರ್ಧವಾಗಿ ಬಂದು ಸೇರಿಕೊಳ್ಳುತ್ತಿದ್ದವು. ಹಾಗಾಗಿಯೇ ಬೆಳದಿಂಗಳ ಪದಗಳನ್ನಾಡುವ ಪ್ರಾಯದ ಹೆಣ್ಣುಮಕ್ಕಳು ರಾತ್ರಿಯ ಅಂಗಳದಲ್ಲಿ ಕೋಲು ಪದವಾಡುತ್ತ ಕುಣಿದು, ನಲಿದು ಕುಪ್ಪಳಿಸುತ್ತಿದ್ದುದು.

moonನಮ್ಮವರ ಮಾತುಕಥೆಗಳು ರೆಕ್ಕೆ ಬಿಚ್ಚುತ್ತಿದ್ದುದು ರಾತ್ರಿಗಳಲ್ಲೇ. ಭಾಗಶಃ ಇಡೀ ಮೌಖಿಕ ಪರಂಪರೆಯ ರಮ್ಯ ಮಾಂತ್ರಿಕ ನಿರೂಪಣೆಗಳು ರಾತ್ರಿಗಳಲ್ಲೇ ನಮ್ಮವರಿಂದ ವ್ಯಕ್ತವಾಗಿರಬಹುದು. ಅಂತಹ ರಮ್ಯಾದ್ಭುತ ಕಥೆಗಳನ್ನು ಕಟ್ಟಲು, ಹಾಡಲು ನಮ್ಮ ಕೇರಿಯಲ್ಲಿ ಹೆಂಗಸರಿಗೆ ಪೈಪೋಟಿಯೇ ನಡೆಯುತ್ತಿತ್ತು. ಇದರಿಂದ ಕನ್ನಡ ಭಾಷೆಗೆ ನಮ್ಮ ಕೇರಿಗಳಿಂದ ಏನೇನು ಸಾಧ್ಯವಾಗಿರಬಹುದು ಎಂಬುದನ್ನು ಲೆಕ್ಕಹಾಕಿ. ಊರ ಬೇರೆಯವರ ಕೇರಿಗಳು ಸದ್ದಡಗಿ ಮಲಗಿದ್ದಾಗಲೂ ನಮ್ಮವರ ಕೇರಿಗಳಲ್ಲಿ ಏನಾದರೂ ಒಂದು ಕಥೆಯೊ, ಗೋಳೊ, ಗಲಭೆಯೊ ಏನೊ ಒಂದು ಶಾಬ್ಧಿಕಾಲಯ ಸಾಧ್ಯವಾಗಿರುತ್ತಿತ್ತು. ಇಡೀ ಊರು ಮಲಗಿ ಗೊರಕೆ ಹೊಡೆಯುತ್ತಿದ್ದಾಗಲೂ ಜೀವನದಲ್ಲಿ ಬೇಸತ್ತು ಎಂಡ ಕುಡಿದೊ, ಯಾವುದೊ ಅಮಲಲ್ಲಿ ಮುಳುಗಿಯೊ ಎಂತದೊ ಒಂದು ಪದವನ್ನೊ, ಒಂದು ತಕರಾರಿನ ಉಪವಾಸವನೋ ಮೊಳಗಿಸುತ್ತಲೇ ಇರುತ್ತಿದ್ದವರು ಇಡೀ ರಾತ್ರಿಯನ್ನು ಜೀವಂತವಾಗಿಟ್ಟಿರುತ್ತಿದ್ದರು. ಈ ವಿಚಾರದಲ್ಲಿ ನಮ್ಮೂರ ಕೇರಿಯ ಅನೇಕರಿಗೆ ರಾತ್ರಿಯೇ ಮಾತಿಗೆ ಒಂದು ಕೊಂಡಿಯಾಗುತ್ತಿದ್ದುದು. ಯಾರು ಕೇಳಲಿ, ಬಿಡಲಿ ಇಡೀ ರಾತ್ರಿಗೇ ತನ್ನೆಲ್ಲ ಬದುಕಿನ ಏರು-ಪೇರು, ಸೋಲು-ಗೆಲುವು, ದುಃಖ-ಸುಖಗಳನ್ನು ಒಪ್ಪಿಸಿಕೊಂಡು ತರಾವರಿ ಲಯದಲ್ಲಿ, ಶೈಲಿಯಲ್ಲಿ ಮಾತನಾಡುತ್ತಿದ್ದ ಪರಿ ಒಂದು ಕನಸಿನಂತೆಯೇ ಭಾಸವಾಗುತ್ತಿತ್ತು. ಇಡೀ ಹಂಗಲೆಲ್ಲ ತೆಪ್ಪಗಿದ್ದು ರಾತ್ರಿ ವೇಳೆ ಬಾಯಿ ಬಿಡುತ್ತಿದ್ದ ಅಂತವರು ದೆವ್ವ ಭೂತಗಳ ಜೊತೆ ಮಾತನಾಡುವರು ಎಂದು ಆಕ್ಷೇಪಿಸುವುದಿತ್ತು.

ಅದೇ ರಾತ್ರಿಯು ದೆವ್ವ ಭೂತಗಳು ಸಂಚರಿಸುವ ಕಾಲ ಎಂದೂ ಗುರುತಾಗಿತ್ತು. ‘ಸರೊತ್ತು’ ಮಧ್ಯರಾತ್ರಿಯ ಪದವಾಗಿತ್ತು. ಕಲ್ಲು ನೀರು ಕರಗುವ ಹೊತ್ತು ಎಂದರೆ ನಟ್ಟಿರುಳಾಗಿತ್ತು. ಈ ವೇಳೆಯಲ್ಲಿ ಅಡ್ಡಾಡಿದರೆ ದುಷ್ಟ ಶಕ್ತಿಯ ಬಾಯಿಗೆ ತುತ್ತಾಗುತ್ತೇವೆ ಎಂಬ ಭಯ ದಟ್ಟವಾಗಿತ್ತು. ಕಳ್ಳರು ಮಾತ್ರ ರಾತ್ರಿಯ ಯಾವ ವೇಳೆಯನ್ನೂ ಲೆಕ್ಕಿಸುತ್ತಿರಲಿಲ್ಲ. ಅವರಿಗೆ ಅಂತಹ ಅಪಾಯಕಾರಿ ಇರುಳ ವೇಳೆಯೇ ಬೇಕಾಗಿದ್ದುದು. ಕಳ್ಳರ ಬಾಯಲ್ಲಿ ತೆರೆದುಕೊಳ್ಳುತ್ತಿದ್ದ ರಾತ್ರಿಯ ರೋಚಕತೆಯೇ ಬೇರೆ. ಅವರು ರಾತ್ರಿಯ ದುಷ್ಟ ಶಕ್ತಿಗಳನ್ನೆಲ್ಲ ಗೆಳೆಯರನ್ನಾಗಿಸಿಕೊಂಡಿರುತ್ತಿದ್ದರು. ಅದು ಹೇಗೋ ಕಾಣೆ. ಆದರೆ ಯಾವ ಅಮವಾಸ್ಯೆಯ ರಾತ್ರಿಯ ಕಾರ್ಗತ್ತಲನ್ನೂ ಅವರ ಕಣ್ಣುಗಳು ಸೀಳಿಕೊಂಡು ಎಲ್ಲವನ್ನೂ ಕಾಣಬಲ್ಲವಾಗಿದ್ದವು. ರಾತ್ರಿಗಳಿಂದಾಗಿಯೇ ತಮ್ಮ ಜೀವನ ಎಂದು ಅಂತವರು ಹೇಳಿಕೊಳ್ಳುತ್ತಿದ್ದರು. ರಾತ್ರಿಯು ಎಷ್ಟೋ ಗುಪ್ತ ಸಂಬಂಧಗಳಿಗೂ ದಾರಿ ತೋರುತ್ತಿತ್ತು. ಹಾಗೆಯೇ ಅಪರಾಧಗಳಿಗೂ, ನೀರವ ರಾತ್ರಿಯ ಮೌನದಲ್ಲಿ ಗೂಬೆಗಳು ಕೂಗಿಕೊಂಡಾಗಂತೂ ಸಾವು ಅಡ್ಡಾಡುತ್ತಿದೆ ಎಂದೇ ಹೆದರುತ್ತಿದ್ದೆವು. ರಾತ್ರಿಗೂ, ಗೂಬೆಗಳಿಗೂ ಮಾಂತ್ರಿಕವಾದ ನಂಬಿಕೆಗಳಿವೆ. ರಾತ್ರಿಯ ದುಷ್ಟದೈವಗಳು ಹೇಳಿಕೊಟ್ಟದ್ದನ್ನು ಗೂಬೆಗಳು ಸಾರುತ್ತವೆ ಎಂದು ಹೇಳಲಾಗುತ್ತಿತ್ತು. ಸತ್ತ ಪೂರ್ವಿಕರು ಕೇರಿಗಳಿಗೆ ರಾತ್ರಿ ವೇಳೆ ಬಂದು ಸಂಚರಿಸುವರು ಎಂಬ ಪ್ರತೀತಿ ಇತ್ತು. ಊರ ದೈವಗಳೂ, ಜೋತಮ್ಮಂದಿರೂ ತಿರುಗಾಡುವ ಹೊತ್ತಾಯಿತೆಂದು ಅಂಗಳದಿಂದ ಕದಲಿ ಮನೆ ಒಳಗೆ ಹೋಗಿ ಕದ ಮುಚ್ಚಿಕೊಳ್ಳುವುದು ಸಾಮಾನ್ಯವಾಗಿತ್ತು. ರಾತ್ರಿಯ ಲೋಕವೇ ಅಸಹ್ಯವಾಗಿತ್ತು. ಹೆಚ್ಚು ಕಡಿಮೆ ರಾತ್ರಿಯು ಒಂದು ಕನಸಿನಂತೆಯೇ ಮುಗಿದು ಹೋಗುತ್ತಿತ್ತು. ಮತ್ತೆ ಮರು ರಾತ್ರಿಯ ಮಾಂತ್ರಿಕತೆಗಾಗಿ ನಾವು ಕಾಯುತ್ತಲೇ ಇದ್ದೆವು.

ರಾತ್ರಿಯು ನಮ್ಮ ಕೇರಿಯ ಸೃಜನಶೀಲತೆಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿತ್ತು. ನರಳುವ ಎಷ್ಟೋ ಕನವರಿಕೆಗಳು ರಾತ್ರಿಯೇ ನಮ್ಮವರ ಜೊತೆ ಮಗ್ಗಲು ಬದಲಿಸುತ್ತಿದ್ದುದು. ಇರುಳು ಕಳೆದು ಹಗಲು ಯಾಕಾದರೂ ಇಷ್ಟು ಬೇಗ ಬಂತಪ್ಪಾ ಎಂಬ ಉದ್ಗಾರಗಳು ಮುಂಜಾವಿಗೇ ಕೇಳಿಸುತ್ತಿದ್ದವು. ‘ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಿಹುದು ಬಾನ ಬಣ್ಣ… ಏಳು ಚಿನ್ನಾ ಬೆಳಗಾಯಿತು ಅಣ್ಣಾ’ ಎಂಬ ಸೂರ್ಯೋದಯದ ಭಾವ ದೀಪ್ತಿಯನ್ನು ಮೈದುಂಬಿಕೊಳ್ಳುವ ಪರಿಗೂ, ನೆನ್ನೆಯ ಗತದ ನಮ್ಮವರ ಮುಂಜಾವಿನ ವಿಷಾದದ ಹಗಲಿಗೂ ಎಷ್ಟೊಂದು ವ್ಯತ್ಯಾಸವಿದೆ. ‘ಕೊಕ್ಕೋ ಕೋಳಿ ಹುಂಜವೇ ಕೂಗಬೇಡ ತಾಳು. ಸಮಾದಿಯಿಂದ ಈಗ ತಾನೆ ಎದ್ದುಬಂದ ಪೂರ್ವಿಕರು ಕನಸಲ್ಲಿ ಕೂತು ಮಾತನಾಡುತ್ತಿದ್ದಾರೆ ತಾಳು. ಕರೆಯಬೇಡ ಸೂರ್ಯನ. ಹೀಗೇ ಇನ್ನೊಂದಿಷ್ಟು ಹೊತ್ತು ತಡೆದುಕೊ ಸೂರ್ಯನ’ ಎಂದು ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಪದ್ಯ ಬರೆದಿದ್ದೆ. ಒಬ್ಬ ಲೇಖಕನಾಗಿ ನಾನು ‘ರಾತ್ರಿ’ಯ ಚಿತ್ರಗಳನ್ನು ಎಷ್ಟೊಂದು ಬಗೆಯಲ್ಲಿ ಕಟ್ಟಿಕೊಟ್ಟಿರುವೆ ಎಂಬುದನ್ನು ಕೆಲವರಾದರೂ ಸಾಹಿತ್ಯಾಭ್ಯಾಸಿಗಳು ಬಲ್ಲರು. ಅದು ನನಗೆ ಬಂದದ್ದು ನನ್ನ ಊರು ಕೇರಿಯ ಜನಾಂಗದ ರಾತ್ರಿಯ ಸಂಬಂಧಗಳಿಂದ.

ಹಾಗೆ ನೋಡಿದರೆ, ಹಗಲು ಜ್ಞಾನ ಸಂಕೇತ, ಇರುಳು ಅಜ್ಞಾನ ಪ್ರತಿನಿಧಿ ನಮ್ಮ ಕೇರಿಗೆ ಇರುಳೇ ಸುಪ್ತಪ್ರಜ್ಞೆಯ ಬೆಳಗಾಗಿತ್ತು. ಪೂರ್ವಿಕರ ಅರಿವಿನ ಸಮಯವಾಗಿತ್ತು. ಹಾಗೆಯೇ ಎಷ್ಟೋ ನಮ್ಮವರ ಕಲೆ, ಸಂಗೀತ, ನೃತ್ಯ, ಆಚರಣೆಗಳ ಹಾಗೂ ವೈವಿಧ್ಯ ಅಭಿವ್ಯಕ್ತಿಗಳ ಸಕಾಲವಾಗಿತ್ತು. ರಾತ್ರಿಯನ್ನು ನಾವು ಯಾವತ್ತೂ ಕೆಟ್ಟ ಕಾಲ ಎಂದು ಭಾವಿಸಲಾರೆವು. ನಮ್ಮ ಕೇರಿಯ ಗಾಯಗಳು, ಅಪಮಾನಗಳು, ಹಸಿವಿನ ಸಂಕಟಗಳು, ಭಾವದೀಪ್ತಿಯ ಸೃಜನಶೀಲ ಬೆಳಗುಗಳು ರೂಪುಗೊಂಡಿರುವುದೇ ರಾತ್ರಿಗಳಿಂದ. ರಾತ್ರಿಯು ಪಾಪಿಗಳ, ಕರ್ಮಿಗಳ, ಅನಾಥರ ದುಃಖವನ್ನು ಆಲಿಸಿರಬಹುದು. ಹಾಗಾಗಿಯೇ ಅಂತವರು ರಾತ್ರಿಗಳಲ್ಲೇ ಹೃದಯವನ್ನು ತೆರೆದುಕೊಂಡು ಕತ್ತಲಿಗೆ ಹಾಡಿಕೊಂಡು, ಹಗಲ ಬೆಳಕಲ್ಲಿ ಮರೆಮಾಚಿಕೊಂಡು ಮೂಕವಾಗಿ ಉಳಿಯುವುದು.

Leave a Reply

Your email address will not be published.