ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’

- ಮೊಗಳ್ಳಿ ಗಣೇಶ್

mogalliಪ್ರೊ.ಮೊಗಳ್ಳಿ ಗಣೇಶ್ ಅವರು ಸದ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊಗಳ್ಳಿ ಅವರು `ಬುಗುರಿ’ ಕಥೆಯ ಮೂಲಕ ಕನ್ನಡ ಕಥನ ಲೋಕದಲ್ಲಿ ಬೆರಗನ್ನು ಮೂಡಿಸಿ, ಕನ್ನಡ ನಿರೂಪಣೆಗೆ ಅವರದ್ದೇ ಆದ ನುಡಿಗಟ್ಟನ್ನು ಕೊಟ್ಟವರು.

ಕನ್ನಡ ಕಥನ ಪರಂಪರೆಯಲ್ಲಿ ದಲಿತಲೋಕದ ನೋವಿನ ಎಳೆಗಳನ್ನು ನುಡಿಸಿ ಆಳವಾಗಿ ಕಾಡುವ ಕಥನ ಮಾದರಿಯನ್ನು ರೂಪಿಸಿದವರು. ಮ್ಯಾಜಿಕ್ ರಿಯಲಿಜಮ್‍ನ ಮಾರ್‍ಕ್ವೇಜ್ ಮಾದರಿಯ ಕಥನವನ್ನು ಕನ್ನಡದಲ್ಲಿ ಅರ್ಥಪೂರ್ಣವಾಗಿ ಬೆಸೆದವರು. `ದಲಿತರು ಮತ್ತು ಜಾಗತೀಕರಣ’ ಕೃತಿಯ ಮೂಲಕ ಜಾಗತೀಕರಣವನ್ನು ಭಿನ್ನವಾಗಿ ನೋಡುವ ವಾಗ್ವಾದವನ್ನೇ ಹುಟ್ಟಿಸಿದ್ದರು. `ತಕರಾರು’ವಿನ ಮೂಲಕ ದಮನಿತ ಕಣ್ಣೋಟದ ವಿಮರ್ಶೆಯ ಭಿನ್ನ ಮಗ್ಗಲನ್ನು ಶೋಧಿಸಿದ್ದಾರೆ. ಕಟುತ್ವದ ಈ ವಿಮರ್ಶೆಯನ್ನು ಕೆಲವು ಮಿತಿಗಳ ಮಧ್ಯೆಯೂ ಸಾಹಿತ್ಯದ ವಿದ್ಯಾರ್ಥಿಗಳು ಒಮ್ಮೆ ಓದಬೇಕಾದ ಪುಸ್ತಕ.

ಜಾನಪದ ಅಧ್ಯಯನಕ್ಕೆ ತುಂಬಾ ಒಳನೋಟದ ವಿಶ್ಲೇಷಣೆಗಳನ್ನು ಅವರ `ಮೌಖಿಕ ಕಥನ’ `ದಲಿತ ಕಥನ’ `ಹಂಪಿ ಜೀವಜಾಲ ಜಾನಪದ’ `ಅವ್ಯಕ್ತ ಚರಿತ್ರೆ’ ಕೃತಿಗಳ ಮೂಲಕ ನೀಡಿದ್ದಾರೆ. ಆದರೆ ಈ ಕೃತಿಗಳು ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ. ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದ ಅವರ `ದಲಿತ ಪದಕಥನ’ ಭಾಷಾಧ್ಯಯನಕ್ಕೆ ಒಂದು ವಿಶಿಷ್ಠ ಸೇರ್ಪಡೆಯಾಗಿದೆ. ದಮನಿತ ಲೋಕದ ಒಳಗೆ ಒಂದು ಪದ ಹೇಗೆ ಬಹುರೂಪಿ ಅರ್ಥಗಳನ್ನು ಪಡೆದಿರುತ್ತದೆ, ಅದು ಕಾಲಾನಂತರದಲ್ಲಿ ಮೌಖಿಕ ಪರಂಪರೆಯೊಳಗೆ ಹೇಗೆ ರೂಪಾಂತರಗಳಿಗೆ ಒಳಗಾಗುತ್ತದೆ ಎನ್ನುವ ವಿಶಿಷ್ಠ ಒಳನೋಟಗಳನ್ನು ಈ ಬರಹಗಳು ಕೊಡುತ್ತವೆ. ಹಾಗಾಗಿ ಅನಿಕೇತನದಲ್ಲಿ ಪ್ರತಿ ವಾರ ಸರಣಿ ರೂಪದಲ್ಲಿ `ದಲಿತ ಪದ ಕಥನ’ ಪ್ರಕಟವಾಗುತ್ತದೆ. ಪ್ರಕಟಿಸಲು ಪ್ರೀತಿಯಿಂದ ಒಪ್ಪಿಗೆ ನೀಡಿದ ಪ್ರೊ.ಮೊಗಳ್ಳಿ ಗಣೇಶ್ ಅವರಿಗೆ ಅನಿಕೇತನ ಬಳಗ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಪದಕಥನ -೧: ಬಾಡು ಎಂದರೆ ಸಡಗರ

ಲ್ಲಿ ನಿರೂರಿಸುವ ಸವಿ. ಮನೆ ಮಂದಿ ಎಲ್ಲರೂ ಸುಖಪಟ್ಟು ಉಣ್ಣವ, ತಿನ್ನುವ, ಸಂಭ್ರಮಿಸುವ ಸಂಗತಿ. ಬಾಡು ಬಳಗವನ್ನೆಲ್ಲ ಸೇರಿಸುತ್ತಿತ್ತು. ‘ಬಾಡಿದ್ರೆ ಬಳಗ’ ಎಂಬ ನುಡಿಗಟ್ಟು ಬಾಡಿನ ಸಾಮಥ್ರ್ಯವನ್ನು ಧ್ವನಿಸುತ್ತಿತ್ತು. ಬಾಡೂಟ ಎಂದರೆ ನೆಂಟರು ದೂರದ ಊರಿಂದಲೂ ನಡೆದುಕೊಂಡೇ ಬರುತ್ತಿದ್ದರು. ಮಾರವ್ವನಿಗೆ ಸಲಗದಂತಹ ಕೋಣಗಳನ್ನು ಬಲಿಕೊಟ್ಟು ಕೇರಿಯಾದ ಕೇರಿಯೆಲ್ಲ ಬಾಡಿನ ಗಮಲಿನಿಂದ ತುಂಬಿ ಹೋಗುತ್ತಿತ್ತು. ಬಾಡಿನ ಜೊತೆಗೆ ಅನೇಕ ಸಂಗತಿಗಳು vಳುಕು ಹಾಕಿಕೊಳ್ಳುತ್ತಿದ್ದವು. ಬಾಡು ಬಾವಣಿಕೆಯಾಗಿತ್ತು. ಬಾವಣಿಕೆ ಎಂದರೆ ಅಥಿತಿ ಸತ್ಕಾರ. ಸತ್ಕಾರ ಪದ ಅಷ್ಟು ಯೋಗ್ಯವಾದುದಲ್ಲ. ಬಾವಣಿಕೆ ಎಂದರೆ ರಕ್ತ ಸಂಬಂಧವನ್ನು ಗಾಢವಾಗಿ ಹಂಚಿಕೊಳ್ಳುವುದು ಎಂಬಲ್ಲಿ ತನಕ ತನ್ನ ಅರ್ಥ ಸಾಧ್ಯತೆಯನ್ನು ವ್ಯಾಪಿಸಿಕೊಳ್ಳುತ್ತದೆ. ಬಾಡೂಟ ನಮ್ಮ ಅದೆಷ್ಟೋ ಜಗಳಗಳನ್ನು ಪರಿಹರಿಸುತ್ತಿತ್ತು. ಸಂಬಂಧಗಳನ್ನು ಬಲಪಡಿಸುತ್ತಿತ್ತು. ಹಾಗೆಯೇ ಆ ಬಾಡೂಟವೇ ಜಗಳಗಳಿಗೂ ದಾರಿ ಮಾಡುತ್ತಿತ್ತು. ತನಗೆ ಸರಿಯಾಗಿ ಬಾಡು ಹಾಕಲಿಲ್ಲ ಎಂದು ಅತ್ತೆ ಸೊಸೆಯರ ನಡುವೆ ಜಗಳ ಏರ್ಪಟ್ಟು ವಿಕೋಪಕ್ಕೆ ತಿರುಗುತ್ತಿದ್ದವು. ನೆರವಿಗಳಲ್ಲಿ ಬಾಡೂಟದ್ದೇ ಸರ್ವಾಧಿಕಾರವಾಗಿ ಬಿಡುತ್ತಿತ್ತು. ಬಾಡು ನಮ್ಮ ಬಾಳಿನ ಬಹುಮುಖ್ಯ ಅಗತ್ಯವಾಗಿತ್ತು. ಬಾಡಿಗಾಗಿ ಹತ್ತಾರು ತರದ ಪರದಾಟಗಳಿದ್ದವು. ನನ್ನ ಬಾಲ್ಯ ಕಾಲದಲ್ಲಿ ಎಮ್ಮೆ, ದನಗಳನ್ನು ವಾರಕ್ಕೊಮ್ಮೆ ಕೊಯ್ದು ಯಥೇಚ್ಚವಾಗಿ ಬಳಸುತ್ತಿದ್ದರು. ಬಾಡಿನ ಅಂಕಿತ ನಾಮದಿಂದಲೇ ಅನೇಕರು ಪ್ರಸಿದ್ದರಾಗಿದ್ದರು.

beeffoodಬಾಡಿನ ಬೋರಣ್ಣ, ಕುರಿಕಳ್‍ಕಾಳಣ್ಣ, ಹಂದಿಕಳ್ ತಿಮ್ಮಣ್ಣ, ಕೋಳಿಕಾಲ್ ಚಿಕ್ಕಣ್ಣ, ತ್ವಾಡದ ಕುರಿಯ, ಕೊತ್ತಿಯಂಕ್ಟ, ಬೋಟಿನಿಂಗ, ಈಲಿಚಿಕ್ಕ, ಗುಂಟ್ಕಾಯ್ ಬೋರ, ತಲೆಕಾಲ್ ಕಾಳ, ಉಡಿಬಾಡ್‍ನಾಗ, ಗೊಂಟ್ಮೂಳೆಕ್ಯಾತ ಹೀಗೆ ಕೇರಿಯ ಅನೇಕರನ್ನು ಬಾಡಿನ ಒಂದೊಂದು ಪ್ರಕಾರದಿಂದ ಗುರುತಿಸಿ ಕರೆಯಲಾಗುತ್ತಿತ್ತು. ಹಾಗೆ ಕರೆಯಬೇಡಿ ಎಂದು ಯಾರೂ ಆಕ್ಷೇಪಿಸುತ್ತಿರಲಿಲ್ಲ. ಯಾರಾದರೂ ಒಂದು ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿ ಅದಕ್ಕೆ ತಕ್ಕಮತೆ ವೈದ್ಯವಿದ್ಯಾ ಪಂಡಿತ ಎಂದು ಕರೆಸಿಕೊಂಡು ಸಂತೋಷ ಪಡುವಂತೆಯೇ ನಮ್ಮೂರ ಬಾಡಿನ ಪ್ರವೀಣರು ಬಾಡಿನ ಜೊತೆಯೇ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುತ್ತಿದ್ದರು. ಎಮ್ಮೆ, ಕೋಣ, ದನಗಳನ್ನು ಕೊಯ್ದು ಬಾಡನ್ನು ಹಂಚುವುದಕ್ಕಾಗಿಯೇ ಕೆಲವು ಯಜಮಾನರಿದ್ದರು. ಬಾಡ್ನೆಜಮಾನ ಎಂದೇ ಆತನನ್ನು ಕರೆಯಲಾಗುತ್ತಿತ್ತು. ಬಾಡಿನ ಮ್ಯಾನೇಜ್‍ಮೆಂಟನ್ನು ಆತನಿಗೆ ವಹಿಸಲಾಗಿತ್ತು. ಆತ ಬಾಯಲ್ಲೇ ಎಲ್ಲ ಲೆಕ್ಕ ಇಟ್ಟುಕೊಂಡು ಯಾರ್ಯಾರು ಎಷ್ಟೆಷ್ಟು ಬಾಡನ್ನು ಯಾವ ಯಾವಾಗ ಸಾಲ ಪಡೆದಿದ್ದಾರೆ ಎಂದು ಪಟಪಟನೆ ಹೇಳುತ್ತಿದ್ದ. ಬಾಡನ್ನು ಪಾಲು ಹಾಕುವವರು, ನಿಖರವಾಗಿ ಒಂದೊಂದು ಗುಡ್ಡೆಗೂ ಮಾಂಸದ ಎಲ್ಲ ಅವಯವಗಳನ್ನು ತುಂಡು ಮಾಡಿ ಹಂಚುತ್ತಿದ್ದರು. ಇನ್ನು ಎಮ್ಮೆ, ದನ ಕುರಿತಳ ಚರ್ಮ ಸುಲಿಯುವವರ ಆ ಕೆಲಸವನ್ನು ಮಾತ್ರ ಮಾಡಿ ಬಾಡಿನ ಗುಡ್ಡೆಗಳನ್ನು ಗಮನಿಸುತ್ತ ಕೂತಿರುತ್ತಿದ್ದರು. ದನ ಕೊಯ್ಯುವ ಪ್ರಕ್ರಿಯೇ ಒಂದು ಬಾಡಿನ ಉತ್ಸವವನ್ನೋ, ಜಾತ್ರೆಯನ್ನೋ ನೆರವೇರಿಸಿದಂತೆ ಮಾಡುತ್ತಿತ್ತು. ಕಳ್ಳು ಕಸದೆ ಜಠರಗಳನ್ನು ದೊಡ್ಡ ಮಂಕರಿಯಲ್ಲಿ ತುಂಬಿಕೊಂಡು ಹೋಗಿ ಕಸ ಸುರಿದು ಬರುವವನಿಗೆ ಒಂದು ಗುಡ್ಡೆ ಬಾಡು ಸಿಗುತ್ತಿತ್ತು. ತರಾವರಿ ಪಾತ್ರೆಗಳನ್ನು ಹಿಡಿದುಕೊಂಡು ಆಗಲೇ ಹೆಂಗಸರು ಬಂದು ನೆರೆದು ಬಾಡಿನ ವಿಲಾಸದಲ್ಲಿ ಮೈಮರೆಯುತ್ತಿದ್ದರು.

ಬಾಡನ್ನು ಬೇಯಿಸಲು ಇಟ್ಟ ಸ್ವಲ್ಪ ಹೊತ್ತಿಗೇ ಚೀಚಿ ಕೊಡು ಎಂದು ಹೈಕಳು ರಾಗತೆಗೆದು ಗೋಗರೆದು ಪೀಡಿಸುತ್ತಿದ್ದರು. ಚೀಚಿ ಎಂದರೆ ಬಾಡಿನ ಇನ್ನೊಂದು ಹೆಸರು. ‘ಛೀ ಛೀ’ ಎಂದು ಮಾಂಸಾಹಾರ ವಿರೋಧಿಗಳು ಅಸಹ್ಯದಿಂದ ವಾಕರಿಸಿದ್ದನ್ನೇ ನಮ್ಮವರು ‘ಚೀಚಿ’ ಎಂದು ಸಕಾರಾತ್ಮಕವಾಗಿಯೇ ಒಪ್ಪಿ ಬಳಸಿರಬೇಕು. ಬಾಡು ಬೇಯುತ್ತಿದ್ದಾಗ ಮನೆಯ ತುಂಬ ಲವಲವಿಕೆ ಚೆಲ್ಲಾಡುತ್ತಿತ್ತು. ಅಪರೂಪಕ್ಕೆ ಯಾರೊ ಬಾಡಿನ ಸಾರು ಮಾಡುವಾಗ ಅದರ ಗಮಲಿನಿಂದ ನೆರೆಹೊರೆಯ ಮನೆಯವರೆಲ್ಲ ತಮಗೂ ಬಾಡಿನ ಸಾರು ಸಿಗುವುದೆಂದು ಕಾತರಿಸುತ್ತಿದ್ದರು. ಒಂದು ವೇಳೆ ಬಾಡಿನ ಸಾರನ್ನು ನೀಡದಿದ್ದಾಗ ಮುನಿಸಿಕೊಳ್ಳುತ್ತಿದ್ದರು. ಜಗಳ ತೆಗೆದು ಅಸಮದಾನ ತೋರುತ್ತಿದ್ದರು. ಕೆಲವರು ಮನೆಗೆ ಬಂದು ಕೂತು ಬಿಡುತ್ತಿದ್ದರು. ಹೇಗಾದರೂ ಮಾಡಿ ಒಂದಿಷ್ಟು ಸಾರನ್ನು ಪಡೆದೇ ತೀರುತ್ತಿದ್ದರು. ಒಂದು ವೇಳೆ ಒಂದೇ ಮನೆಯ ಒಳಗೆ ಕಿತ್ತಾಡಿ ಬೇರೆ ಆಗಿ ಬಾಡಿನ ಸಾರು ಮಾಡಿ ಉಣ್ಣುವಾಗ ಜಗಳ ಮರೆತು ರಾಜಿ ಆಗುತ್ತಿದ್ದರು. ಒಂದು ವೇಳೆ ರಾಜಿಗೆ ಒಪ್ಪದಿದ್ದಾಗ ಬಲತ್ಕಾರದಿಂದ ರಾಜಿಸಂದಾನ ನಡೆಯುತ್ತಿತ್ತು. ಈ ರಾಜಿಯಲ್ಲಿ ಬಾಡಿನ ಸಾರೇ ಸಾರಥ್ಯ ವಹಿಸುತ್ತಿದ್ದುದು. ಬಾಡಿನ ಸಾರಿನಲ್ಲೇ ಹತ್ತಾರು ತರಗಳಿದ್ದವು. ಕೋಣದ ಬಾಡಿನ ರುಚಿಯನ್ನು ಜನ ಕೊಂಡಾಡುತ್ತಿದ್ದರು. ಕೋಳಿ, ಕುರಿ ಕೊಯ್ದು ಕೇರಿಗೆಲ್ಲ ಬಾಡು ಹಂಚಲಾಗುತ್ತಿರಲಿಲ್ಲ. ಹಾಗಾಗಿಯೇ ಎಮ್ಮೆ ದನಗಳನ್ನೂ ಕಡಿದು ಎಲ್ಲರ ಬಾಯಿಗೂ ಸಾಕಾಗುವಷ್ಟು ಬಾಡನ್ನು ಪಡೆಯಲಾಗುತ್ತಿತ್ತು.

ಹೀಗೆ ಎಮ್ಮೆ ದನಗಳನ್ನು ಕಡಿಯುವುದು ಅಷ್ಟು ಸಲೀಸಾದ ಕಾರ್ಯವಾಗಿರಲಿಲ್ಲ. ಬಾಡಿನ ಯಜಮಾನರು ಬಾಡಿನ ಮ್ಯಾನೇಜ್‍ಮೆಂಟಿನಲ್ಲಿ ತಪ್ಪೆಸಗಿದರೆ ಆತನಿಗೆ ಕೇರಿಯಾದ ಕೇರಿಯೇ ತಿರುಗಿ ಬೀಳುತ್ತಿತ್ತು. ಸಕಾಲದಲ್ಲಿ ಆತ ಮಾಂಸ ಒದಗಿಸಲಿಲ್ಲ ಎಂದು ಅವನಿಗೆ ಹತ್ತಾರು ತರದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿತ್ತು. ಎಮ್ಮೆ ದನಗಳು ಅಷ್ಟು ಸಲೀಸಾಗಿ ಸಿಗುತ್ತಿರಲಿಲ್ಲ. ನಾವು ಹಾಗೆ ಎಮ್ಮೆ ದನಗಳನ್ನು ತಿನ್ನುವುದರ ಬಗ್ಗೆಯೇ ಮೇಲಿನವರು ವಿಪರೀತ ಆಕ್ಷೇಪ ಎತ್ತುತ್ತಿದ್ದರು. ಕೆಲವೊಮ್ಮೆ ಕದ್ದು ನಮ್ಮ ದನ, ಕರು, ಎಮ್ಮೆ, ಕೋಣಗಳನ್ನು ತಿಂದಿದ್ದಾರೆ ಎಂದು ಪೊಲೀಸರಿಗೆ ಕಂಪ್ಲೇಂಟ್ ನೀಡುವುದಿತ್ತು. ಅವರ ಆರೋಪದಲ್ಲಿ ಒಂದಿಷ್ಟು ಉರುಳಿದ್ದುದು ನಿಜವೇ ಆಗಿತ್ತು. ಸಕಾಲಕ್ಕೆ ಎಮ್ಮೆಗಳು ಸಿಗಲಿಲ್ಲ ಎಂದಾಗ ಪಕ್ಕದ ಊರಿನ ಬಯಲುಗಳಲ್ಲೋ ಕೆರೆ ಮಾಳದಲ್ಲೋ ಮೇದು ಹಿಂದೆ ಬಿದ್ದ ಹಿಂಡಿನ ಎಮ್ಮೆಗಳನ್ನು ಹಿಡಿದು ತಂದು ರಾತ್ರಿ ವೇಳೆ ಕೊಯ್ದು ರಾತ್ರಿಯೇ ಅದರ ಕುರುಹು ಸಿಗದಂತೆ ಮಾಯಮಾಡುತ್ತಿದ್ದರು. ಬಾಡಿನ ಈ ಪರಿಯಿಂದಾಗಿಯೇ ಬಾಡಿನ ಯಜಮಾನ ಕೆಲವೊಮ್ಮೆ ತಲೆ ಮರೆಸಿಕೊಂಡು ಬಿಡುತ್ತಿದ್ದ. ಈ ಯಜಮಾನಿಕೆ ತನಗೆ ಸಾಕಾಗಿದೆ. ಇನ್ನು ಮುಂದೆ ಯಾರಾದರೂ ಈ ಯಜಮಾನಿಕೆಯನ್ನು ವಹಿಸಿಕೊಳ್ಳಿ ಎಂದು ಗೋಗರೆಯುತ್ತಿದ್ದ. ಪೊಲೀಸರು ಬಂದಾಗಂತು ಬಾಡಿನ ಯಜಮಾನ ದಿಕ್ಕಾಪಾಲಾಗಿ ಓಡಿ ಹೋಗಿ ತಲೆಮರೆಸಿಕೊಂಡು ರಾತ್ರಿ ವೇಳೆ ಮಾತ್ರ ಕೇರಿಗೆ ಬಂದು ಸೇರಿಕೊಳ್ಳುತ್ತಿದ್ದ. ಅವನ ಪರವಾಗ ಇಡೀ ಹೊಲಗೇರಿಯೇ ನಿಂತು ಸಮರ್ಥಿಸಿಕೊಳ್ಳುತ್ತಿತ್ತು. ಬಾಡಿನ ಬೋರಣ್ಣ ಅಂದರೆ ಬಾಡಿನ ಯಜಮಾನ ಈ ಕೃತ್ಯ ಎಸಗಿಲ್ಲ, ಅವನು ಯಾರ ಕೋಣವನ್ನು ಕದ್ದು ತಂದಿಲ್ಲ ಎಂದು ಪೊಲೀಸರ ಮುಂದೆ ಕೇರಿಯ ಹೆಂಗಸರು ವೀರಾವೇಶದಲ್ಲ ಗದ್ದಲ ಎಬ್ಬಿಸಿ ಬಂದಿದ್ದ ಪೇದೆಗಳೇ ಹೆದರಿ, ಎಲ್ಲಿ ಇನ್ನೂ ಹೆಚ್ಚು ಹೊತ್ತು ಪರಿಶೀಲನೆಗೆ ಇಳಿದರೆ ಇವರು ತಮ್ಮನ್ನೆ ಕೋಣದಂತೆ ಕೊಯ್ದು ತಿಂದುಬಿಡುವರೇನೊ ಎಂಬಂತೆ ಜಾಗ ಖಾಲಿ ಮಾಡುತ್ತಿದ್ದರು.

ಒಮ್ಮೆ ಹೀಗೆ ಪೇದೆಗಳು ಬಂದು ದಾಳಿ ಮಾಡಿದ್ದರು. ಪಡಸಾಲೆ ತುಂಬ ಗುಡ್ಡೆ ಬಾಡನ್ನು ಎಲ್ಲರ ಮನೆಗೂ ಹಂಚುವಂತೆ ಆಗತಾನೆ ಹಾಕಲಾಗಿತ್ತು. ಅಷ್ಟರಲ್ಲಿ ಪೊಲೀಸರು ದಾಳಿ ಮಾಡಿದ್ದರಿಂದ ಎಲ್ಲರೂ ಚದುರಿ ಓಡಿ ಹೋದರು. ಆ ಪೇದೆಗಳೂ ಬಾಡಿನ ಮೇಲೆಲ್ಲ ಸೀಮೆಎಣ್ಣೆ ಚೆಲ್ಲಿ ಈಗ ಅದ್ಹೇಗೆ ತಿಂತಿರೊ ತಿನ್ನಿ. ದನಾ ಎಮ್ಮೆ ಕೊಯ್ಯುಬಾರದು ಎಂದು ಎಷ್ಟು ಸಲ ನಿಮಗೆ ಹೇಳಬೇಕು ಎಂದು ಹೊರಟ್ಟಿದ್ದರು. ಸೀಮೆಎಣ್ಣೆ ಹಿಡಿದ ಬಾಡನ್ನು ನಾವು ತಿನ್ನಲು ಆಗದೆ ಬಹಳ ನೋವಾಗಿತ್ತು. ಕೆಲವರಂತು ಆ ಸೀಮೆಎಣ್ಣೆಯಾದ ಬಾಡನ್ನು ಹತ್ತಾರು ಬಾರಿ ತೊಳೆದಿದ್ದರೂ ವಾಸನೆ ಹೋಗಿರಲಿಲ್ಲ. ಮರುವಾರ ಮತ್ತೆ ಎರಡು ದಡಿ ಎಮ್ಮೆಗಳನ್ನು ಕಡಿದು ಹಂಚಿಕೊಳ್ಳುತ್ತಿದ್ದರು. ಮತ್ತೆ ಪೇದೆಗಳು ವೀರಾವೇಶದಿಂದ ನುಗ್ಗಿ ಎಂದರು. ಇದಕ್ಕೆ ಮೊದಲೇ ಸಿದ್ದವಾಗಿದ್ದ ಕೇರಿಯ ದಡಿಯ ಗಂಡಾಳುಗಳು ಪೇದೆಗಳ ಮೇಲೆ ಎರಗಿ ಬಿದ್ದ ಹಿಡಿದೆಳೆದು ಅದುಮಿ ಬಾಡಿನ ಗುಡ್ಡೆಗೆ ಹಾಕಿ ವಸಕಿ ಹಾಕಿ ಕಳ್ಳುಪಚ್ಚಿ ಗಲೀಜನ್ನೆ ಅವರ ಕೊರಳಿಗೆ ವಿಜಯ ಮಾಲೆಯಂತೆ ಹಾಕಿ ‘ನೀವೇ ತಿನ್ನಿ ಸ್ವಾಮಿ ನಮ್ ಬಾಡಾ’ ಎಂದು ಬಾಯಿಗೂ ತುರುಕಿ ಕಸರೆಯನ್ನು ಅವರ ತಲೆಗೊ ಮೆತ್ತಿದ್ದರು. ಆ ಪೇದೆಗಳು ಬಾಡಿನ ಬಗ್ಗಡವಾಗಿ ಹೋಗಿದ್ದರು. ಹೆಂಗಸರು ಆ ಎಮ್ಮೆ ಚರ್ಮಗಳನ್ನೇ ಆ ಇಬ್ಬರಿಗೂ ನಿಲುವಂಗಿ ತೊಡಿಸುವಂತೆ ಹೊದಿಸಿ ‘ವೋಗಿ ಸ್ವಾಮಿ ಇಪಟು’ ಎಂದು ನೂಕಿದ್ದರು.

ಇದಾದ ಮೇಲೆ ಯಾವ್ ಪೇದೆಯೂ ನಮ್ಮ ಬಾಡಿನ ಸಹವಾಸಕ್ಕೆ ಬಂದಿರಲಿಲ್ಲ. ಬಾಡಿನ ಸಾರನ್ನು ತಯಾರಿಸುತ್ತಿದ್ದವರೇ ಗಂಡಸರು. ಹಳೆಯ ಒಲೆಯಲ್ಲಿ ಎಮ್ಮೆ ದನ ಕೋಣ ಇತ್ಯಾದಿ ಮಾಂಸವನ್ನು ಬೇಯಿಸಲಾಗುತ್ತಿತ್ತು. ಮೇಕೆ ಕುರಿಗಳ ಮಾಂಸವನ್ನು ಮಾತ್ರ ಅಡುಗೆ ಮನೆಯ ಒಳಗೇ ಹೆಂಗಸರು ತಯಾರಿಸುತ್ತಿದ್ದರು. ಕೆಲವೊಮ್ಮೆ ತೋಡ- ಅಂದರೆ ಹೊಲಗದ್ದೆಗಳಲ್ಲಿ ದವಸಧಾನ್ಯ ತಿಂದು ಕೊಬ್ಬಿರುತ್ತಿದ್ದ ಇಲಿಗಳನ್ನು ಕೂಡ ಹಿಡಿದು ತಿನ್ನುತ್ತಿದ್ದರು. ಬೆಕ್ಕಿನ ಮಾಂಸವನ್ನು ಬಾಣಂತಿಯರಿಗಾಗಿ ತಯಾರಿಸಲಾಗುತ್ತಿತ್ತು. ಮೀನನ್ನು ನಾವು ಹೊಲಸ- ‘ವಲ್ಸು’ ಎಂದು ಕರೆಯುತ್ತಿದ್ದೆವು. ಮೀನು ಅಪರೂಪವಾಗಿತ್ತು. ಹಂದಿ ಮಾಂಸಕ್ಕಂತು ದೊಡ್ಡ ಪೈಪೋಟಿಯೇ ನಡೆದು ಬಾಡು ಸಿಗದಿದ್ದವರು ಕೈ ಕೈ ಮಿಲಾಯಿಸಿ ರಗಳೆ ತೆಗೆಯುತ್ತಿದ್ದರು. ವರ್ಷಕ್ಕೆ ಒಮ್ಮೆಯೊ ಎರಡು ಮೂರು ಬಾರಿಯೊ ಹಂದಿ ಮಾಂಸ ಸಿಗುತ್ತಿತ್ತು. ಸಾಕಿದ ಕೊಬ್ಬಿದ ಹಂದಿಗಳನ್ನು ಕೊಯ್ದು ಬಾಡು ಹಂಚುವುದೇ ಒಂದು ದೊಡ್ಡ ರಂಪವಾಗುತ್ತಿತ್ತು. ಹಂದಿಯನ್ನು ಕೋಳಿ ಕುರಿ ಕೊಯ್ದಷ್ಟು ಸಲೀಸಿರಲಿಲ್ಲ. ಹಂದಿ ಗಾಡಿಗರಿಂದ ಹಂದಿ ಖರೀದಿಸಿ ತಂದ ಅದನ್ನು ಕೊಯ್ಯುಲು ಸಾಹಸವನ್ನೇ ಮಾಡಬೇಕಿತ್ತು. ಅದರ ಕಾಲುಗಳನ್ನು ಕಟ್ಟಿ ಬೊಂಬಿಗೆ ನೇತುಹಾಕಿಕೊಂಡು ಬಂದು ಅದರ ಕತ್ತು ಕೊಯ್ಯುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಆ ಹಂದಿಯೇ ಇವರೆಲ್ಲರಿಗೂ ಸವಾಲು ಹಾಕಿ ಕೊಯ್ಯುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಆ ಹಂದಿಯೇ ಇವರೆಲ್ಲರಿಗೂ ಸವಾಲು ಹಾಕಿ ಕಿತ್ತುಕೊಂಡು ಓಡಿ ಹೋಗಲೆಂದು ಇಡೀ ಊರೇ ಮೊಳಗುವಂತೆ ಅರಚಿ ಊರನ್ನೆಲ್ಲ ಒಂದು ಮಾಡಿಬಿಡುತ್ತಿತ್ತು. ಅದರ ಕತ್ತುಕೊಯ್ದು, ಅದರ ಚರ್ಮಸೀದು, ಪೊರೆಯನ್ನು ಚಾಕುವಿನಿಂದ ಎರೆದು, ಕಡಿದು, ಪಾಲು ಮಾಡುವಷ್ಟುರಲ್ಲಿ ಸಾಕಾಗಿ ಹೋಗುತ್ತಿತ್ತು. ಹಂದಿಯ ಕಳ್ಳನ್ನು ತಿನ್ನುವವನೊಬ್ಬನಿದ್ದ. ಆತನಿಗೆ ಅದೇನು ಆ ಹಂದಿ ಕಳ್ಳಿನ ರುಚಿ ಹಿಡಿದಿತ್ತೋ, ಬೇಡ ಎಂದರೂ ಬಿಡದರೆ ಆ ಹಂದಿ ಕಳ್ಳಗಳನ್ನೆ ತಿಂದು ಹಂದಿಕಳ್ಳು ಎಂದೇ ಖ್ಯಾತನಾಮನಾಗಿದ್ದ ಕಟ್ಟೆಯಲ್ಲಿ ಹಂದಿಯ ಕಳ್ಳನ್ನೆಲ್ಲ ತೊಳೆದು ಗಬ್ಬೆಬ್ಬಿಸಿಬಿಡುತ್ತಿದ್ದ. ಹಂದಿ ಏನೇನು ತಿನ್ನುತ್ತದೆ ಎಂದು ಹೇಳಬೇಕಾಗಿಲ್ಲ. ಅಂತಹ ಹಂದಿ ಕಳ್ಳಲ್ಲಿ ಇನ್ನೇನು ತಾನೆ ಇರುವುದು, ಅಂತಹ ಕಳ್ಳನ್ನೂ ಬಿಡದ ಆ ಭೂಪ ಹಂದಿಕಳ್ಳನ್ನು ಈರುಳ್ಳಿ ಮೆಣಸಿನಕಾಯಿ ಎಣ್ಣೆಯ ಜೊತೆ ಉರಿದು ಬಕಬಕನೆ ಬಾಯಿಗೆ ತುಂಬಿಕೊಳ್ಳುತ್ತಿದ್ದ.

cowsಬಾಡು ಎಂದಾಗ ನಮ್ಮ ಕೇರಿಯ ನಾಯಿಗಳನ್ನು ನಾವು ಅನಿವಾರ್ಯವಾಗಿ ನೆನಪಿಸಿಕೊಳ್ಳತ್ತೇವೆ. ದನ ಕೊಯ್ದಾಗ ಕೇರಿಯ ನಾಯಿಗಳು ಬಂದು ನೆರೆದು ವೀರಾವೇಶದಲ್ಲಿ ಹೋರಾಡಿ ಗಡದ್ದಾಗಿ ತಿಂದು ನಲಿದು ತಮ್ಮ ವಾರಸುದಾರರ ಸುತ್ತಲೇ ಹೆಮ್ಮೆಯಿಂದ ತಿರುಗಾಡುತ್ತಿದ್ದವು. ಬಾಡು ಮಾಡಿದಾಗಂತು ನಾಯಿಗಳು ಮನೆ ಬಳಿ ಬಂದು ಅತ್ಯಂತ ನಿಷ್ಠೆಯಿಂದ ಆಸೆಯಿಂದ ಒಂದು ಮೂಳೆಯಾದರೂ ಸಿಗುವುದೆಂದು ಕಾದು ಕೂತಿರುತ್ತಿದ್ದವು. ವಯಸ್ಸಾದವರು ಮೂಳೆ ಕಡಿಯಲು ಆಗದಲ್ಲಾ ಎಂದು ವಿಷಾದ ಪಟ್ಟು ಈಲಿಯೆನ್ನೋ ಮೆತ್ತಗಿರುವ ಇಲುಗನ್ನೋ ದೋಡು ದವಡೆಯಲ್ಲಿಟ್ಟು ಲೊಚಗರಿಸಿ ಉರುಳಾಡಿಸಿ ನುಂಗುತ್ತಿದ್ದರು. ಸತ್ತವರ ಎಡೆಗೆ ಕಡ್ಡಾಯವಾಗಿ ಬಾಡೂಟವನ್ನು ಇಡಲೇಬೇಕಿತ್ತು. ಒಂದು ವೇಳೆ ಬಾಡಿಟ್ಟಿಲ್ಲ ಎಂದರೆ ಆ ಜೀವಕ್ಕೆ ಮುಕ್ತಿ ಇಲ್ಲ ಎಂದೇ ನಂಬಿರುತ್ತಿದ್ದೆವು. ಆ ಕಾಲದಲ್ಲಿ ಸತ್ತವರು ದೆವ್ವವಾಗಿ ಬಂದು ಬೇಕಾದ ಬಾಡಿನ ಊಟವನ್ನು ಕೇಳುತ್ತಿದ್ದರು. ಅಂತವರು ದೆವ್ವಕ್ಕಾಗಿ ಸಕತ್ತಾಗಿ ಬಾಡೂಟ ನೀಡಿ ಮತ್ತೆಂದೂ ಬಂದು ಬಾಡು ಕೇಳಬಾರದು ಎಂದು ಭಾಷೆ ತೆಗೆದುಕೊಳ್ಳುತ್ತಿದ್ದರು. ಕೆಲವರಂತು ಬಾಡಿನ ಆಸೆಯನ್ನು ದೆವ್ವಗಳ ಮೇಲೆ ಹೊರಸಿ ದೆವ್ವ ಬಂದಂತೆ ನಟಿಸಿ ಬೇಕಾದಷ್ಟು ಬಾಡು ತಿಂದು ತೇಗುತ್ತಿದ್ದರು. ಜನಕ್ಕೆ ಕಳ್ಳ ದೆವ್ವದ ನಟನೆ ತಿಳಿದು ಅದಕ್ಕೆ ತಕ್ಕ ತಂತ್ರವನ್ನೂ ಮಾಡುತ್ತಿದ್ದರು. ಹಸಿ ಬಾಡಿನ ಒಂದು ಗೊಂಟು ಮೂಳೆಯನ್ನೇ ತಟ್ಟೆಯಲ್ಲಿಟ್ಟು ನೀನು ದೆವ್ವ ತಾನೆ, ನಿನಗೆ ಬೇಯಿಸಿದ್ರೆ ಎಷ್ಟು ಬೇಯಿಸದೆ ಇದ್ರೆ ಎಷ್ಟು, ಹಸಿ ಬಾಡೇ ನಿನಗೆ ಸರಿ ತಿನ್ನು ಎಂದು ಬಾಯಿಗೆ ತುರುಕುತ್ತಿದ್ದರು. ಆಗ ದೆವ್ವ ನಾಪತ್ತೆಯಾಗುತ್ತಿತ್ತು. ಅಂದರೆ ದೆವ್ವ ಬಂದಂತೆ ನಟಿಸುತ್ತಿದ್ದವನೇ ಇಂಗುತಿಂದ ಮಂಗನಂತಾಗುತ್ತಿದ್ದ.

ವಯಸ್ಸಾದ ಕೆಲವರು ತಾನು ಇನ್ನೇನೊ ಸಾಯುವೆ ಎಂದು ಹೇಳಿ ಇಂತಿಂತಹ ಮಾಂಸದ ಊಟ ಬೇಕೆಂದು ಕೋರುತ್ತಿದ್ದರು. ಆಸೆ ತೀರದೆ ಸತ್ತರೆ ದೆವ್ವವಾಗುವುದು ಗ್ಯಾರೆಂಟಿ ಎಂದು ಸ್ವಲ್ಪವನ್ನಾದರೂ ಮಾಡಿ ಬಾಡೂಟ ಮಾಡಿಕೊಡಲಾಗುವುದಿತ್ತು. ಒಮ್ಮೆ ವಯಸ್ಸಾದವನೊಬ್ಬ ಹಂದಿ ಬಾಡಿನ ಸುಂಟಿಕೆ ತಿನ್ನಲು ಕೋರಿದ. ಹಂದಿಬಾಡಿನ ಸುಂಟಿಕೆ ಎಂದರೆ ಹಂದಿಯ ದೇಹದ ಹೊರ ಮೈ ಚರ್ಮ. ಈ ಚರ್ಮ ಎಷ್ಟು ಕೊಬ್ಬಿ ದಪ್ಪಗಿರುತ್ತದೆ ಎಂದರೆ ಆಲೂಗೆಡ್ಡೆಯ ತುಂಡಿನಂತೆ ಹಳದಿ ಬಣ್ಣದಲ್ಲಿ ಆ ಕೊಪ್ಪಿನ ಪದರವಿದ್ದು ಅದರ ತುದಿಗೆ ಮಾಂಸವಿರುತ್ತದೆ. ಈ ಹಳದಿಯಾಗಿ ಕಾಣುವ ಕೊಬ್ಬಿದ ದಪ್ಪ ಚರ್ಮದ ಪದರನ್ನೇ ಸುಂಟಿಕೆ ಎಂದು ಕರೆಯುವುದು. ಇದನ್ನು ಅರಗಿಸುವುದು ಕಷ್ಠ. ಇಂತಹ ಸುಂಟಿಕೆ ತಿಂದು ಸತ್ತಿದ್ದ ಆ ಮುದುಕನ ಹೆಸರು ಹೇಳಿಕೊಂಡೇ ಅವನ ದೆವ್ವ ತಮ್ಮ ಮೇಲೆ ಬಂದಿದೆ ಎಂದು ನಟಿಸಿ ಹಂದಿ ಮಾಂಸವನ್ನು ಕೆಲವರು ತಿಂದು ತಮ್ಮ ಆಸೆಯನ್ನು ತೀರಿಸಿಕೊಳ್ಳುತ್ತಿದ್ದರು. ನಾವು ಕೋಣದ ಮಾಂಸಕ್ಕೆ ಹೇಗೆ ವಿಪರೀತ ಆಸೆ ಪಡುತ್ತಿದ್ದೆವೊ ಅದರ ನೂರುಪಟ್ಟು ಹೆಚ್ಚಾಗಿ ಗೌಡರು ಹಂದಿ ಮಾಂಸಕ್ಕಾಗಿ ಹಾತೊರೆಯುತ್ತಿದ್ದರು. ನಾವು ಹೊಲೆಯರಾಗಿದ್ದರೂ ಹಂದಿ ಮಾಂಸವನ್ನು ತಿಂದ ಆದ ಮೇಲೆ ಇಡೀ ಮನೆಯನ್ನು ತೊಳೆದು ಸ್ನಾನ ಮಾಡಿ ದೇವರಿಗೆ ಕೈ ಮುಗಿದು ಶುದ್ಧ ಮಾಡಿಕೊಳ್ಳುತ್ತಿದ್ದೆವು. ನಮ್ಮವರಲ್ಲಿ ಎಲ್ಲರೂ ಹಂದಿ ತಿನ್ನುವಂತಿರಲಿಲ್ಲ. ಕೆಲವರಂತು ಹಂದಿಯ ಹೆಸರು ಹೇಳಿದರೇ ವಾಕರಿಕೆ ಪಡುತ್ತಿದ್ದರು. ನಮ್ಮ ದೇವರಿಗೆ ಹಂದಿ ಒಪ್ಪುವುದಿಲ್ಲ ಎಂದು ಹಂದಿ ಮಾಂಸವನ್ನು ನಿಷೇಧಿಸಿದ್ದರು. ಗೌಡರಲ್ಲೂ ಕೆಲವರು ಹಂದಿ ಬಾಡನ್ನು ತಿನ್ನುತ್ತಿರಲಿಲ್ಲ. ಅವರ ಕೇರಿಯವರಂತು ಹಂದಿ ಬಾಡಿನ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು.

ಕೊರಬಾಡು ಎಂಬ ವಿಶೇಷ ಒಂದಿದೆ. ಇದು ಒಣ ಮೀನನ್ನು ಸಂಗ್ರಹಿಸಿಟ್ಟುಕೊಂಡಂತೆಯೇ ಬಾಡನ್ನು ಒಣಗಿಸಿಟ್ಟುಕೊಳ್ಳುವ ಬಾಡಿನ ಒಂದು ಕ್ರಮ. ಹೆಚ್ಚುವರಿ ಬಾಡನ್ನು ಸರಗಳನ್ನಾಗಿ ಉದ್ದವಾಗಿ ಕೊಯ್ದು ಒಣಗಿಸಿ ಇಟ್ಟುಕೊಂಡು ಆಗಾಗ ಬೆಂಕಿಯಲ್ಲಿ ಸುಟ್ಟು ತಿನ್ನುವುದಕ್ಕೆ ಕೊರಬಾಡನ್ನು ಬಳಸುವರು. ಕೊರಡು ಎಂದರೆ ಒಣಗಿ ಒರಟಾಗಿ ನುಲದುಕೊಂಡದ್ದು. ಕೊರಬಾಡಿನಲ್ಲಿ ಕೊರದ ಮುಂದಿನ ಡಲಯವಾಗಿ ಬಾಡಿನ ಡಕಾರವೇ ಸಾಕಾಗಿ ಬಾಡಿನ ಕೊಂಡಿಯಾಗಿ ಕೊರಬಾಡಾಗಿ ಬಳಕೆಗೆ ಬಂದಿದೆ. ಬಾಡು ನಮ್ಮ ಆಹಾರದ ಒಂದು ಕೊಂಡಿ. ಬಾಡಿಲ್ಲದೆ ನಮ್ಮ ಬಾಲ್ಯಕ್ಕೆ ಅರ್ಥವೇ ಇರಲಿಲ್ಲ. ಬಾಡಿನ ಶಕ್ತಿ ನಮ್ಮ ಜೈವಿಕ ಸಂಗತಿ ಬಾಡಿನ ಬಗ್ಗೆ ಯಾರು ಏನೇ ಹೀಗಳೆದರೂ ನಾವು ನಮ್ಮ ಬಾಡನ್ನು ಬಿಟ್ಟಿರಲು ಸಾಧ್ಯವೇ ಇರಲಿಲ್ಲ. ದೇವರಿಗೂ ನಾವು ಬಾಡನ್ನೇ ಬಡಿಸುತ್ತಿದ್ದೆವು. ಬಾಡು ಭಾವನಾತ್ಮಕವಾದ ವಿಷಯ. ನಾವು ದನ, ಎಮ್ಮೆ, ಹಂದಿಗಳನ್ನು ತಿಂದಿದ್ದರಿಂದಲೇ ನಮ್ಮ ಹಸಿವು ನೀಗಿದೆ. ನಮ್ಮ ಜೈವಿಕತೆಗೆ ಬಾಳಿಕೆಗೆ ಶಕ್ತಿ ತಂದಿದೆ. ಈಗ ದನದ ಮಾಂಸವನ್ನು ನಿಷೇಧಿಸುವ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಇದು ಅಸಾಧ್ಯದ ಯತ್ನ. ಗೋಮಾಂಸವು ನಮ್ಮ ಆಹಾರದ ಹಕ್ಕು. ಅದು ಜೀವ ಸರಪಳಿಯ ಒಂದು ಅತ್ಯುಪಯುಕ್ತ ಆಹಾರ. ಗೋಮಾಂಸ ಎಂದರೆ ನಮಗೂ ಪವಿತ್ರವೇ. ಗೋವು ಮಾತ್ರ ಪವಿತ್ರ ಅಲ್ಲ ಅದರ ಬಾಡು ಕೂಡ ದೇವರೇ ನಮಗೆ ಕೊಟ್ಟಿರುವ ವರ ಎಂದು ಕೇರಿಯವರು ಈಗಲೂ ನಂಬುವುದಿದೆ. ಆಹಾರದ ಅಸ್ಪøಷ್ಯತೆಯೂ ಅಪರಾಧವೇ. ಬಾಡಿನ ಊಟ ನಮ್ಮ ಜೈವಿಕ ಕ್ರಮವೇ ವಿನಾ ಅದು ಯಾವ ಅಪರಾಧವೂ ಅಲ್ಲ. ಬಾಡು ಬಹಳ ಕಾಲದಿಂದಲೂ ನಮ್ಮ ಬಾಳಿನ ಒಂದು ಚೈತನ್ಯವಾಗಿ ಸಾಗಿ ಬಂದಿದೆ. ಆದಿ ಕಾಲದ ಮಾನವ ಸಮಾಜದ ಆಹಾರದ ಒಂದು ಹಂತವನ್ನು ಕಾಯ್ದುಕೊಂಡು ಬಂದಿರುವ ನಮ್ಮ ಕೇರಿಯ ಬಾಡು ಜಗತ್ತಿನ ಬಹುಪಾಲು ಸಮಾಜಗಳ ಆಹಾರವೂ ಹೌದು.

2 Responses to "ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’"

 1. Manjunath.P  October 3, 2016 at 6:14 pm

  olleya prayoga

  Reply
 2. Shivu  October 4, 2016 at 3:04 pm

  ಬಾಡಿದ್ರೆ ಬಳಗ ಲೇಖನವು ಬಹಳ ಅರ್ಥಪೂರ್ಣ ಹಾಗೂ ನೈಜತೆಯಿಂದ ಮೂಡಿದೆ….ಗ್ರಾಮೀಣ ಜನರ ಆಹಾರ ಪದ್ಧತಿಯ ಪ್ರತಿಬಿಂನದಂತಿದೆ..
  ಲೇಖಕರಿಗೆ ಧನ್ಯವಾದಗಳು….

  Reply

Leave a Reply

Your email address will not be published.