ದಲಿತನ ಮನೆಯ ಕೂಳು ಧನಿಕರ ಮನೆಯ ಕಾಳು

-ನಾ ದಿವಾಕರ

ydappaಆಹಾರ ಪದ್ಧತಿ ಮಾನವ ಸಮಾಜದ ಒಂದು ವಿಶಿಷ್ಟ ಅಂಗ. ಮಾನವನ ಉಗಮವಾದ ದಿನದಿಂದಲೂ ಆಹಾರ ಪದ್ಧತಿ ತನ್ನದೇ ಆದ ವಿಭಿನ್ನ ಆಯಾಮಗಳನ್ನು, ವಿಶಿಷ್ಟ ಸ್ವರೂಪಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಮಾನವನ ಅಭ್ಯುದಯದ ಹಾದಿಯಲ್ಲಿ ಕಾಣಲಾಗುವ ಮನ್ವಂತರಗಳನ್ನು, ಬದಲಾವಣೆಗಳನ್ನು, ಪರಿವರ್ತನೆಗಳನ್ನು ಸಮಾಜದ ಆಹಾರ ಪದ್ಧತಿಗಳಲ್ಲೂ ಕಾಣಬಹುದು. ಆಹಾರ ಸಾಮುದಾಯಿಕ ಪ್ರಜ್ಞೆಯಿಂದ ರೂಪುಗೊಳ್ಳುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ರೂಪುಗೊಂಡು ಸಾಮುದಾಯಿಕ ಸ್ವರೂಪ ಪಡೆಯುತ್ತದೆ. ಮತ್ತೊಂದೆಡೆ ಯಾವುದೇ ಕಾಲಘಟ್ಟದ, ಯಾವುದೇ ಪ್ರದೇಶದ ಆಹಾರ ಪದ್ಧತಿಯನ್ನು ಸಾರ್ವತ್ರೀಕರಿಸಲೂ ಸಾಧ್ಯವಿಲ್ಲ. ಗಡ್ಡೆ ಗೆಣಸುಗಳನ್ನು ತಿನ್ನುವ ಹಂತದಿಂದ ಮಾನವ ಸಮಾಜ ಪಿಜ್ಜಾಗಳವರೆಗೆ ನಡೆದಿರುವ ಹಾದಿಯಲ್ಲಿ ತಿನ್ನಬಹುದಾದ ಎಲ್ಲ ಚರಾಚರ ವಸ್ತುಗಳೂ ಮಾನವನ ಉದರ ಪ್ರವೇಶಿಸಿವೆ. ಆದರೆ ಮನುಕುಲ ಇದರಿಂದ ವಿನಾಶವಾಗಿಲ್ಲ. ಬೆಳೆಯುತ್ತಲೇ ಇದೆ. ಅಂದರೆ ಆಹಾರ ಒಂದು ಆಯ್ಕೆಯಷ್ಟೇ ಎಂದು ಅರ್ಥವಲ್ಲವೇ ? ಪ್ರಸಿದ್ಧ ಕಥೆಗಾರ್ತಿ ಕಮಲಾದಾಸ್ ತಮ್ಮ ಕಥೆಯೊಂದರಲ್ಲಿ ಹೇಳುವಂತೆ ಮಾನವ ಏನನ್ನಾದರೂ ಜೀರ್ಣಿಸಿಕೊಳ್ಳಬಲ್ಲ, ಆದರೆ ವ್ಯಕ್ತಿಯ ಬಾಯಿಂದ ಹೊರಡುವ ಮಾತುಗಳು ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಸಸ್ಯಾಹಾರ ಮತ್ತು ಮಾಂಸಾಹರದ ನಡುವೆ ಇರುವ ಸಂಕಥನಗಳನ್ನು ಈ ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾನವ ಸಮಾಜ ತನ್ನದೇ ಆದ ವಿಶಿಷ್ಟ ಆಹಾರ ಪದ್ಧತಿಗಳ ನಡುವೆಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡುಬಂದಿರುವುದನ್ನು ಕಾಣಬಹುದು. ದುರಂತ ಎಂದರೆ ವಿಶ್ವದ ಅತ್ಯಂತ ಶ್ರೇಷ್ಠ ತತ್ವಜ್ಞಾನಿಗಳ ಕರ್ಮಭೂಮಿ ಎಂದು ಹೇಳಲಾಗುವ (ಎಲ್ಲ ಸಂದರ್ಭಗಳಲ್ಲೂ ಇದು ಸತ್ಯ ಎನಿಸುವುದಿಲ್ಲ) ಇರಲಿ, ಭಾರತದಲ್ಲಿ ಇಂದು ಆಹಾರ ಸೇವನೆ ಮತ್ತು ಆಹಾರ ಪದ್ಧತಿ ಮಾನವೀಯ ಮೌಲ್ಯಗಳನ್ನು ನಿರ್ಧರಿಸುವ, ವ್ಯಕ್ತಿತ್ವವನ್ನು ನಿರ್ಮಿಸುವ ಮತ್ತು ಸಮಾಜದ ಸಾಂಸ್ಕøತಿಕ ಅಭ್ಯುದಯವನ್ನು ನಿರೂಪಿಸುವ ಮೂಲ ಧಾತುವಾಗಿ ಪರಿಣಮಿಸಿದೆ. ಮತ್ತೊಬ್ಬರು ಸೇವಿಸುವ ಆಹಾರ ಅವರ ಸಾಂಗತ್ಯ, ಸಾಮೀಪ್ಯ ಮತ್ತು ಸಾನಿಧ್ಯವನ್ನು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಂಸಾಹಾರಿಗಳಿಗೆ ಪ್ರವೇಶವಿಲ್ಲ ಎನ್ನುವ ಫಲಕಗಳು ಅಕ್ಷರ ರೂಪದಲ್ಲಿ ಕಾಣದಿದ್ದರೂ ತಾತ್ವಿಕವಾಗಿ ಕಾಣುತ್ತಿವೆ. ಮನುಷ್ಯನ ಸಾವಿಗೂ ಅವನು ಸೇವಿಸುವ ಆಹಾರಕ್ಕೂ ನೇರ ಸಂಬಂಧವನ್ನು ಕಲ್ಪಿಸುವ ವಿಕೃತ ಸಮಾಜವನ್ನು ನಾವಿಂದು ಕಾಣುತ್ತಿದ್ದೇವೆ. ಮನುಸ್ಮøತಿಯ ಕಾಲಘಟ್ಟದಿಂದ ಯೋಗಿಯ ಕಾಲಘಟ್ಟದವರೆಗಿನ ಭಾರತದ ಇತಿಹಾಸದಲ್ಲಿ ಆಹಾರ ಪದ್ಧತಿಯ ಮೇಲಿನ ಆಕ್ರಮಣ ತಾತ್ವಿಕತೆಯ ನೆಲೆಯಿಂದ ರಾಜಕಾರಣದೆಡೆಗೆ ನಡೆದುಬಂದಿರುವುದನ್ನು ಕಾಣುತ್ತಿದ್ದೇವೆ. ನಿಷಿದ್ಧತೆಯಿಂದ ಮರಣದಂಡನೆಯವರೆಗೆ ಆಹಾರ ಸೇವನೆ ಅಪರಾಧದ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ. ಜೊತೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜಾತಿ ಅಸ್ಮಿತೆಗಳನ್ನೂ ಆಹಾರ ಸೇವನೆಯ ನೆಲೆಯಲ್ಲೇ ತಿಳಿದುಕೊಳ್ಳುವ ಜಾಣ್ಮೆಯನ್ನೂ ನಮ್ಮ ಸಮಾಜ ರೂಢಿಸಿಕೊಂಡಿದೆ. ಹಾಗಾಗಿಯೇ ಆಧುನಿಕ ನಾಗರಿಕ ಸಮಾಜದಲ್ಲೂ ಅಗ್ರಹಾರ ಸಂಸ್ಕ್ರತಿ ಸದ್ದಿಲ್ಲದೆ ನುಸುಳಿದೆ.

ಇಷ್ಟಾದರೂ ಸಹಭೋಜನದ ಹಪಾಹಪಿ ನಮ್ಮ ಸಮಾಜವನ್ನು ಬಿಟ್ಟಿಲ್ಲ. ಒಟ್ಟಾಗಿ ಕುಳಿತು ಭೋಜನ ಸವಿಯುವ ಸಂಸ್ಕ್ರತಿ  ಒಂದು ಕುಟುಂಬದೊಳಗೂ ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಸ್ತರದಲ್ಲಿ ಸಹಭೋಜನದ ಹಪಾಹಪಿ ಹೆಚ್ಚಾಗುತ್ತಿರುವುದು ವಿಡಂಬನೆಯಾದರೂ ಸತ್ಯ. ಪೇಜಾವರರಂತಹ ಕಟ್ಟಾ ವೈದಿಕರೂ ಸಹ ತಮ್ಮೊಳಗಿಲ್ಲದ ಸಂವೇದನೆಯನ್ನು ಕಂಡುಕೊಳ್ಳಲು ಸಹಭೋಜನದ ಪ್ರಹಸನದಲ್ಲಿ ತೊಡಗಿಸಿಕೊಳ್ಳುವುದನ್ನು ಕಂಡಿದ್ದೇವೆ. “ ನಾವು ನಿಮ್ಮೊಂದಿಗಿದ್ದೇವೆ ” ಎಂದು ಎದೆ ತಟ್ಟಿ ಹೇಳುವ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿರುವ ಸಮಾಜವೊಂದು ಸಾಂಕೇತಿಕ ಸಹಭೋಜನದ ಮೂಲಕ, ಪಾದಯಾತ್ರೆಯ ಮೂಲಕ ತನ್ನ ಇರುವಿಕೆಯನ್ನು , ಪ್ರಸ್ತುತತೆಯನ್ನು ಮತ್ತು ಸ್ವೀಕೃತಿಯನ್ನು ಮನದಟ್ಟುಮಾಡಿಕೊಳ್ಳಲು ಯತ್ನಿಸುವ ಒಂದು ಪ್ರಯತ್ನವನ್ನು ಪೇಜಾವರರ ಪ್ರಹಸನದಲ್ಲಿ ಕಾಣಬಹುದು. ಇದೇ ಪ್ರಹಸನದ ಮತ್ತೊಂದು ಆಯಾಮವನ್ನು ನಮ್ಮ ರಾಜಕೀಯ ನಾಯಕರುಗಳ ಸಹಭೋಜನದ ಪ್ರಸಂಗಗಳಲ್ಲಿ ಕಾಣಬಹುದು.

hdkಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಡದಕಲ್ಲಹಳ್ಳಿಯ ಪ್ರಹಸನದಿಂದ ಆರಂಭಿಸಿದ ದಲಿತರೊಡಗಿನ ಸಹಭೋಜನದ ಅಭಿಯಾನ ಯಡಿಯೂರಪ್ಪನವರವರೆಗೂ ಮುಂದುವರೆದಿದೆ. ಊಟ ಎನ್ನುವುದು ಎಲೆಯ ಮೇಲೆ ಇರುವ ಅನ್ನದ ಕಾಳುಗಳು ಅಲ್ಲ. ಅದರ ಹಿಂದಿರುವ ಭಾವನೆ. ಈ ಭಾವನೆಗಳನ್ನು ಉಣಬಡಿಸುವವರ ಮನಸ್ಸಿನಂತೆಯೇ ಉಣ್ಣುವವರ ಮನಸ್ಸೂ ನಿಷ್ಕಲ್ಮಶವಾಗಿದ್ದಲ್ಲಿ ಮಾತ್ರ ಊಟ ಸಾರ್ಥಕತೆ ಪಡೆಯುತ್ತದೆ. ಇಲ್ಲವಾದಲ್ಲಿ ತಿನ್ನುವ ಅನ್ನವೂ ಕಸದಂತೆ ಕಾಣುತ್ತದೆ. ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸುವ ವೈದಿಕ ಕರ್ಮಠರು ತಮ್ಮ ಮೂಲ ಸ್ಥಾನದಲ್ಲಿ ದಲಿತರನ್ನು ಕುಳ್ಳಿರಿಸಿ ಊಟ ಬಡಿಸಲು ಸಾಧ್ಯವೇ ? ಈ ಪ್ರಶ್ನೆ ದಲಿತರನ್ನು ಕಾಡಿದರೆ ಬಹುಶಃ ಯಾವುದೇ ಮೇಲ್ಜಾತಿಯ ನಾಯಕರು ತಮ್ಮ ಮನೆಯಲ್ಲಿ ಊಟ ಮಾಡಬೇಕೆಂಬ ಹಪಾಹಪಿ ಇರುವುದಿಲ್ಲ. ಯಡಿಯೂರಪ್ಪ ದಲಿತರ ಮನೆಗೆ ಭೇಟಿ ನೀಡಿ ಹೋಟೆಲ್ ಊಟ ಮಾಡಿರುವುದನ್ನು ಬಿಡಿ, ಅವರ ಮನೆಯ ಅಡುಗೆ ಕೋಣೆಯಲಿ ಒಬ್ಬ ದಲಿತ ಶ್ರಮಜೀವಿಗೆ ಉಣಬಡಿಸಲು ಸಾಧ್ಯವೇ ? ಇದೂ ಸಾಂಕೇತಿಕ ಪ್ರದರ್ಶನವೇ ಆದರೂ ಇದರ ಸಾಧ್ಯತೆಯೇ ಸಂಚಲನ ಮೂಡಿಸುತ್ತದೆ ಅಲ್ಲವೇ ?

ಅಷ್ಟಕ್ಕೂ ದಲಿತರ ಮನೆಯಲ್ಲಿ ಊಟ ಮಾಡುವುದು ಜಾತಿಪ್ರಜ್ಞೆಯನ್ನು ತೊಳೆದುಹಾಕುವ ಕ್ರಾಂತಿಕಾರಿ ಪ್ರಕ್ರಿಯೆಯೇನಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಪ್ರಭಾವಳಿಯನ್ನು ಸುರಕ್ಷಿತವಾಗಿ ಕಾಪಾಡುತ್ತಲೇ ತಮ್ಮೊಳಗಿನ ಅಪರಾಧಿ ಪ್ರಜ್ಞೆಯನ್ನು ಕಳೆದುಕೊಳ್ಳುವ ನಾಟಕೀಯ ಪ್ರಹಸನವಾಗಿ ಇಂತಹ ವರ್ತನೆಗಳು ಕಂಡುಬರುತ್ತವೆ. ಗರ್ಭಗುಡಿ ಸಂಸ್ಕ್ರತಿಯನ್ನು ಪೋಷಿಸುವ ಮನಸುಗಳು ಇರುವವರೆಗೂ ಅಗ್ರಹಾರ ಸಂಸ್ಕ್ರತಿ  ನಶಿಸುವುದಿಲ್ಲ. ಅಗ್ರಹಾರ ಸಂಸ್ಕ್ರತಿ  ಕೇವಲ ಭೌಗೋಳಿಕವಲ್ಲ ಅದು ಮಾನಸಿಕ ನೆಲೆಯಲ್ಲೂ ಜೀವಂತವಾಗಿದೆ. ಇಲ್ಲಿ ದಲಿತ ಪ್ರಜ್ಞೆ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಭಾರತೀಯ ಸಮಾಜದಲ್ಲಿ ಶೋಷಣೆಯ ವಸ್ತುವಾಗಿದ್ದ ಜಾತಿ ಇಂದು ರಾಜಕೀಯ ಲಾಭನಷ್ಟಗಳ ಭೂಮಿಕೆಯಾಗುತ್ತಿದೆ. ಒಂದು ದಾರ ಧರಿಸುವ ಮೂಲಕ, ತುಂಡು ವಸ್ತ್ರ ಧರಿಸುವ ಮೂಲಕ, ಹಣೆಯ ಮೇಲಿನ ಚಿಹ್ನೆಗಳ ಮೂಲಕ ತಮ್ಮ ಅಸ್ಮಿತೆ , ಪ್ರತ್ಯೇಕತೆ ಮತ್ತು ಅಧಿಪತ್ಯ ಸಾಧಿಸುವ ಮನಸುಗಳು ಇರುವವರೆಗೂ ಒಂದೇ ತಟ್ಟೆಯಲ್ಲಿ ಉಣ್ಣುವುದೂ ಸಹ ನಾಟಕೀಯವೇ ಎನಿಸುತ್ತದೆ. ಕೇವಲ ಬೌದ್ಧಿಕ ಚಿಂತನೆ, ಭೌತಿಕ ನಡವಳಿಕೆ ಮತ್ತು ತಾತ್ವಿಕ ನಿಲುವುಗಳಿಂದ ಜಾತಿ ಪ್ರಜ್ಞೆ ನಶಿಸುವುದಿಲ್ಲ. ಸತ್ತು ಹೋಗಿರುವ ಸಂವೇದನೆಯನ್ನು ಬದುಕಿಸುವ ಮೂಲಕ ಇದು ಸಾಧ್ಯ.

FB_IMG_1477450421303ದಲಿತರ ಮನೆಯ ಕೂಳು ರಾಜಕಾರಣಿಗಳಿಗೆ ರಾಜಕೀಯ ಬಂಡವಾಳವಾಗುತ್ತದೆ. ಆದರೆ ನಿಜವಾದ ಬಂಡವಾಳ ಧನಿಕರ ಮನೆಯ ಕಾಳು ಒದಗಿಸುತ್ತದೆ. ಈ ಕಾಳುಗಳನ್ನು ಹೆಕ್ಕಿ ತಿನ್ನಲು ಕೂಳಿಕ್ಕುವ ದಲಿತರು ಬೇಕಾಗುತ್ತಾರೆ. ನಾವು ಅವರಿಗೆ ಕಾಳು ಹಾಕಲಾಗುವುದಿಲ್ಲ. ಅವರು ನಮ್ಮ ಮನೆಯ ಕೂಳಿಗೆ ಅರ್ಹರಲ್ಲ. ಅವರಿಗೆ ಕಾಳು ಹಾಕುವವರು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ನಮ್ಮೊಡನೆ ಕುಳಿತು ಕೂಳು ತಿನ್ನುವವರೂ ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ವಿಪರ್ಯಾಸವೆಂದರೆ ಊನ, ದಾದ್ರಿ, ಆಲ್ವಾರ್, ಸವಣೂರು, ಖೈರ್ಲಾಂಜಿ, ಕಂಬಾಲಪಲ್ಲಿ, ಕರಂಚೇಡು, ಬತಾನಿತೊಲ, ಲಕ್ಷಣಭಾತೆ, ರೋಹಿತ್ ವೇಮುಲ ಇವೆಲ್ಲ ಸಂಭವಿಸಿದ ನಂತರವೂ ದಲಿತ ಪ್ರಜ್ಞೆ ಜಾಗೃತಗೊಂಡಿಲ್ಲ. ಇದು ನಮ್ಮ ಮುಂದಿರುವ ಸವಾಲು.

Leave a Reply

Your email address will not be published.