ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಕು.ಸ.ಮಧುಸೂದನನಾಯರ್  ರಂಗೇನಹಳ್ಳಿ

ಸೋನಿಯಾ ಗಾಂದಿ!

1984ರ ಅಕ್ಟೋಬರ್31-ಅದೊಂದು ದಿನದವರೆಗೂ ಆಕೆ ತನ್ನ ಫೈಲಟ್ ಗಂಡ ಮತ್ತು ಎರಡು ಮಕ್ಕಳ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಸಾಮಾನ್ಯ ಮಹಿಳೆ!ವಿಶ್ವದ ಶಕ್ತಿಶಾಲಿರಾಷ್ಟ್ರವೊಂದರ ಪ್ರದಾನಮಂತ್ರಿಯ ಸೊಸೆಯಾಗಿದ್ದರೂ ತನ್ನ ಪಾಡಿಗೆ ತಾನುಬದುಕುತ್ತ   ರಾಜಕಾರಣದ ಯಾವ ಸೋಂಕನ್ನೂ ಅಂಟಿಸಿಕೊಳ್ಳದಂತೆ ಬದುಕಿದಾಕೆ.

ಆದರೆ ಅದೊಂದು ದಿನ ಪ್ರದಾನಿಯಾಗಿದ್ದ ತನ್ನಗಂಡನ ತಾಯಿ  ಹತ್ಯೆಗೀಡಾದಾಗ ಕಂಗೆಟ್ಟು ಕೂತ ಗಂಡನ ತೋಳುಗಳನ್ನ  ಬಳಸಿ ಹಿಡಿದು ಆತನಿಗೆ ಆಸರೆ ನೀಡಿ ಸಾಂತ್ವಾನ ಹೇಳಬೇಕಾಗಿ ಬಂತು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳೆಲ್ಲ ರಾಜೀವ್ ಗಾಂದಿಯವರನ್ನುಪಕ್ಷದ ಅದ್ಯಕ್ಷರನ್ನಾಗಿಸಿ ಪ್ರದಾನಮಂತ್ರಿಯನ್ನಾಗಿ ಮಾಡಲು ಹೊರಟಾಗ  ಆಕೆ ಮೊದಮೊದಲು ಹೆದರಿದಂತೆ ಕಂಡಿದ್ದು ಸಹ ತನ್ನ ಕುಟುಂಬದ ರಕ್ಷಣೆಯ ದೃಷ್ಠಿಯಿಂದಲೆ! ಆದರೆ ಕಾಂಗ್ರೇಸ್ಸಿಗೆ ರಾಜೀವ್ ಅನಿವಾರ್ಯವಾಗಿದ್ದರು. ಗಂಡ ದೇಶದ ಪ್ರದಾನಿಯಾದ ಮೇಲೂ ಆಕೆ ಸಕ್ರಿಯ ರಾಜಕಾರಣದ   ಪ್ರಜ್ವಲ ಬೆಳಕಿನಿಂದ ದೂರ ಉಳಿದು ತನ್ನ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾಕೆ.

  ಕಾಲ  ಆಕೆಯನ್ನು ಹಾಗೇ ಉಳಿಯಗೊಡಲಿಲ್ಲ. ಐದಾರು ವರ್ಷಗಳಲ್ಲಿ ಭಯೋತ್ಪಾದಕರ ಆತ್ಮಹತ್ಯಾದಾಳಿಗೆ ಗಂಡನೂ ಬಲಿಯಾದಾಗ ನಿಜಕ್ಕೂ ಆಕೆ ಕಂಗಾಲಾಗಿ ಹೋಗಿದ್ದರು. ಕೊನೆಯ ಬಾರಿಗೆ ತಬ್ಬಿ ಅಳಲೂ ಗಂಡನ ದೇಹ ಸಿಗದಂತಹ  ಅಸಹಾಯಕ ಸ್ಥಿತಿಯದು. ತನ್ನೆರಡು ಪುಟ್ಟ ಮಕ್ಕಳನ್ನು ಎದುರು ನಿಲ್ಲಿಸಿಕೊಂಡು ಗಂಡನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದಾಗ ಆಕೆಗೆ ಎದುರಾದದ್ದು ಮತ್ತದೇ ಕಾಂಗ್ರೇಸ್ಸಿನ ಹಿರಿಯ ನಾಯಕರುಗಳು. ಪಕ್ಷದ ನಾಯಕತ್ವ ವಹಿಸಿ, ಅದಾಗ  ಅರ್ದ ಮುಗಿದಿದ್ದ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸಲು  ಕೋರಿದವರಿಗೆ ದೊರಕಿದ್ದು ಆಕೆಯ ನಯವಾದ ನಿರಾಕರಣೆ.  ಕೇವಲ ಎಂಟು ವರ್ಷಗಳ ಅವಧಿಯಲ್ಲಿ ಅತ್ತೆ ಮತ್ತು ಗಂಡನನ್ನು  ಭಯೋತ್ಪಾದಕತೆಯಲ್ಲಿ ಕಳೆದುಕೊಂಡ ಯಾವುದೇ ಹೆಣ್ಣು ಮಗಳೂ ಮಾಡಬಹುದಾದ್ದನ್ನೇ ಆಕೆಯೂ ಮಾಡಿದ್ದರು.. ತನ್ನ  ಮಕ್ಕಳ ರಕ್ಷಣೆಯ ದೃಷ್ಠಿಯಿಂದ ಆಕೆ ನೇಪಥ್ಯದಲ್ಲೇ ಉಳಿಯಲು ತೀರ್ಮಾನಿಸಿದ್ದರು. ರಾಜೀವ್ ನಿದನಾನಂತರ ಆಕೆ ಇಟಲಿಗೆ ಓಡಿಹೋಗುತ್ತಾರೆಂದು ಅಸಡ್ಡೆಯಿಂದ ಮಾತಾಡುತ್ತಿದ್ದ ವಿರೋಧಿಗಳ ಬಾಯಿ ಮುಚ್ಚಿಸುವಂತೆ ಆಕೆ ಇಂಡಿಯಾದಲ್ಲೆ ಇದ್ದು ಬದುಕು ಕಟ್ಟಿಕೊಳ್ಳತೊಡಗಿದ್ದರು.

ಆದರೆ  ಗಾಂದಿ ಕುಟುಂಬದ ನಾಯಕತ್ವ ಇರದ ಕಾಂಗ್ರೇಸ್ ನಿದಾನವಾಗಿ ಒಡೆದ ಮನೆಯಾಗತೊಡಗಿತ್ತು. ಸೀತಾರಾಮ ಕೇಸರಿಯಂತವರು ಸೋನಿಯಾರವರನ್ನು ನಿರ್ಲಕ್ಷಿಸ ತೊಡಗಿದ್ದರು. ಮತೀಯವಾದವನ್ನು ಪೋಷಿಸಿಕೊಂಡು ಬರುತ್ತಿದ್ದ ಬಾಜಪ ಬಲಗೊಳ್ಳತೊಡಗಿತ್ತು. ಗಾಂದಿ ಕುಟುಂಬದ ಮೇಲಿನ ದ್ವೇಷವನ್ನೇ ರಾಜಕೀಯ ಎಂದುಕೊಂಡ ತೃತೀಯ ರಂಗ  ಅದಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಸೋನಿಯಾ ರಾಜಕೀಯಕ್ಕೆ ಬಾರದೇ ಹೋದರೆ ಕಾಂಗ್ರೇಸ್ಸಿಗೆ ಉಳಿಗಾಲವಿಲ್ಲವೆಂಬ ಸತ್ಯ ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ದೊಡ್ಡ ನಾಯಕರುಗಳವರೆಗು ಅರ್ಥವಾಗ ತೊಡಗಿತು. ಮತ್ತೆ ಮತ್ತೆ ಆ ನಾಯಕರುಗಳು ಸೋನಿಯಾರ ಮನೆಬಾಗಿಲನ್ನು ತಟ್ಟತೊಡಗಿದ್ದರು.  ತಮ್ಮ ಕುಟುಂಬದ ಸದಸ್ಯರೊಬ್ಬರು ಈಗ  ಕಾಂಗ್ರೇಸ್ಸಿನ ನಾಯಕತ್ವ ವಹಿಸದೆ ಹೋದಲ್ಲಿ ಪಕ್ಷ ಬಹುಕಾಲ ಉಳಿಯಲಾರದೆಂಬ ಸತ್ಯ ಸೊನಿಯಾರಿಗೂ ಮನದಟ್ಟಾಗ ತೊಡಗಿತ್ತು. ಯಾರಿದ್ದರು ಗಾಂದಿ ಕುಟುಂಬದಲ್ಲಿ?.  ರಾಹುಲ್ ಮತ್ತು ಪ್ರಿಯಾಂಕ ಇನ್ನೂ ಚಿಕ್ಕವರು. ಹಾಗಾಗಿ ಸೋನಿಯಾ   ನಾಯಕರುಗಳ  ಮಾತಿಗೆ ಮಣಿಯಲೇ ಬೇಕಾಗಿಬಂತು..

ಪತಿ ನಿದನವಾದ ಏಳು ವರ್ಷಗಳ ನಂತರ ಆಕೆ  ಕಾಂಗ್ರೇಸ್ಸಿನ ಅದ್ಯಕ್ಷರಾದರು. ಆಕೆ ಅದ್ಯಕ್ಷರಾದ ನಂತರ ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಪಕ್ಷ ಸೋಲುಣ್ಣಬೇಕಾಯಿತು. ಅದು ಬಾಜಪ ತನ್ನ ಮತೀಯವಾದದಿಂದ ಏರುಗತಿಯಲ್ಲಿ ಬೆಳೆಯುತ್ತಿದ್ದ ಸಮಯ. ದೇಶದ ಹಲವು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡ ಬಾಜಪ ಎನ್.ಡಿ.ಎ. ಹೆಸರಿನಲ್ಲಿ   ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಇನ್ನೇನು ಸೋನಿಯಾಗಾಂದಿಯವರ ಕಥೆ ಮುಗಿಯಿತೆಂದು ವಿರೋಧಿಗಳು ಕುಹಕವಾಡುತ್ತಿದ್ದ ಸಮಯದಲ್ಲಿಯೇ ಸೋನಿಯಾ ಇಂಡಿಯಾದ ಪಕ್ಷ ರಾಜಕಾರಣವನ್ನು ನಿದಾನವಾಗಿ ಅರ್ಥ ಮಾಡಿಕೊಳ್ಳತೊಡಗಿದ್ದರು.  ಏಕಾಂಗಿಯಾಗಿ ಸ್ಪದರ್ಿಸಿ ಬಾಜಪವನ್ನು ಸೋಲಿಸಿ ಅಧಿಕಾರ ಹಿಡಿಯುವುದು ಕಷ್ಟವೆಂಬುದನ್ನು  ಅವರು ಅರಿತುಕೊಳ್ಳತೊಡಗಿದ್ದರು.   ಕೋಮುವಾದವನ್ನು ವಿರೋಧಿಸುತ್ತಿದ್ದ ಪ್ರಾದೇಶಿಕ ಪಕ್ಷಗಳನ್ನು ಗುರುತಿಸಿ  ಯು.ಪಿ.ಎ. ಎನ್ನುವ ಮೈತ್ರಿಕೂಟವನ್ನು ರಚಿಸಿಕೊಂಡು 2004ರ ಚುನಾವಣೆ ಎದುರಿಸಿದರು.

ಬಾರತ ಪ್ರಕಾಶಿಸುತ್ತಿದೆ ಎಂಬ ಬಾಜಪ ಹೇಳಿಕೆಯನ್ನು ಸುಳ್ಳುಮಾಡಿ ಗೆದ್ದು  ಸೋನಿಯಾರಿಗೆ ಅಗ್ನಿ ಪರೀಕ್ಷೆಯೊಂದು  ಎದುರಾಗಿದ್ದು ಅದರಲ್ಲಿ ಸೋನಿಯಾ ಗೆದ್ದು ಭಾರತೀಯರ ಮಟ್ಟಿಗೆ ನಿಜವಾದ ನಾಯಕಿ ಎನಿಸಿಕೊಂಡರು. ತಾನೇ ಪ್ರದಾನಿಯಾಗುವ ಅವಕಾಶ ಇದ್ದಾಗ್ಯು ಅದನ್ನು ನಿರಾಕರಿಸಿ ತ್ಯಾಗಮಯಿ ಎನಿಸಿಕೊಂಡರು. ಸೋನಿಯಾ ಪ್ರದಾನಿಯಾದರೆ ತಾವು ತಲೆಬೋಳಿಸಿಕೊಳ್ಳುತ್ತೇವೆಂದೆಲ್ಲ  ಕೂಗಾಡಿದ ವಿರೋಧ ಪಕ್ಷಗಳ ಬಗ್ಗೆ ಸೋನಿಯಾರಿಗೆ ಅರಿವಿತ್ತು ಅನಿಸುತ್ತೆ. ಹೇಗಾದರು ಸರಿ ಎಂದು ಆಕೆ ಪ್ರದಾನಿಯಾಗಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ವಿರೋಧಪಕ್ಷಗಳ ಉದ್ದೇಶದ ಬಗ್ಗೆ  ಮತ್ತು ಈ ವಿಚಾರದಲ್ಲಿ ತಾನು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆಯೆಂಬುದು ಗೊತ್ತಿದ್ದ ಸೋನಿಯಾ ಪ್ರದಾನಿ ಪದವಿಯನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಿ ತಮ್ಮ ಚಾಣಾಕ್ಷತೆ ಮೆರದಿದ್ದರು. ಸಿಂಗ್ ಅವರನ್ನು ವಿರೋಧಿಸಲು ವಿರೋದಪಕ್ಷಗಳಿಗೆ ಕಾರಣಗಳೇ ಇರಲಿಲ್ಲ. ನಂತರ 2009ರಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತಂದ ಸೋನಿಯಾರವರು ಸತತವಾಗಿ ವಿರೋಧಪಕ್ಷಗಳ ಟೀಕಾಸ್ತ್ರಗಳಿಗೆ ತುತ್ತಾಗ ಬೇಕಾಗಿ ಬಂತು. ಅವರ ವಿದೇಶಿ ಮೂಲದ ಬಗ್ಗೆ ಪದೆಪದೆ ಮಾತಾಡುತ್ತ ವೈಯುಕ್ತಿಕವಾಗಿ ಅವರ ಚಾರಿತ್ರಹರಣ ಮಾಡಲು ಯತ್ನಿಸಿದ ಬಾಜಪ ಕೊನೆಗೂ 2014ರಲ್ಲಿ ನರೇಂದ್ರ ಮೋದಿಯವರ  ನಾಯಕತ್ವದಲ್ಲಿ  ಕೇಂದ್ರದಲ್ಲಿ ಅಧಿಕಾರ ಹಿಡಿಯಿತು.

2010 ರ ನಂತರ ಅವರನ್ನು ಕಾಡತೊಡಗಿದ ಅನಾರೋಗ್ಯ  ಕಾಂಗ್ರೇಸ್ಸಿಗೆ ಸಾಕಷ್ಟು ನಷ್ಟವನ್ನುಂಟು ಮಾಡಿತು ಜೊತೆಗೆ ಕಾಂಗ್ರೇಸ್ಸಿನ ಮಿತ್ರ ಪಕ್ಷಗಲ ಮಿತಿಮೀರಿದ ಭ್ರಷ್ಟಾಚಾರ ಕಾಂಗ್ರೇಸ್ಸಿನ ಶುದ್ದ ಇಮೇಜಿಗೆ ಧಕ್ಕೆ ತಂದಿತು. 2014 ರಚುನಾವಣೆಯ ಹೊತ್ತಿಗೆ ಆಕೆ ಮೊದಲ ಹಾಗೆ ರಾಷ್ಟ್ರದಾದ್ಯಂತ ಮಿಂಚಿನಂತೆ ಸಂಚರಿಸಿ ಪ್ರಚಾರ ಮಾಡಲು ಸಾದ್ಯವಾಗದೆ ಅನುಭವಿ ರಾಹುಲರನ್ನೇ ಪಕ್ಷ ನಂಬಿಕೊಳ್ಳಬೇಕಾಯಿತು. 2014ರ ಸೋಲಿನ ನಂತರದ ಈ ಮೂರು ವರ್ಷಗಳ ಅವಧಿ ನಿಜಕ್ಕೂ ಸೋನಿಯಾರವರಿಗೆ ಅತ್ಯಂತ ಕಷ್ಟದ ದಿನಗಳೆನ್ನಬಹುದಾಗಿದೆ. ಒಂದೊಂದೇ ರಾಜ್ಯಗಳನ್ನು ಸೋಲುತ್ತಾ ಬರುತ್ತಿರುವುದು ಒಂದು ಕಡೆಯಾದರೆ, ಪುತ್ರ ರಾಹುಲರಿಗೆ ಅದ್ಯಕ್ಷ ಪದವಿ ಕೊಡಬೇಕೇ ಬೇಡವೇ ಎಂಬ ಗೊಂದಲ ಮತ್ತೊಂದೆಡೆ, ಇದರ ಜೊತೆ ದಿನೇ ದಿನೇ ಅವರನ್ನು ಕೃಶವಾಗಿಸುತ್ತಿರುವ ಅನಾರೋಗ್ಯ ಸೋನಿಯಾ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳನ್ನು ಮೆತ್ತಗೆ ಮಾಡಿದಂತೆ ಕಾಣುತ್ತಿದೆ. ಇದೀಗ ಅವರು ಕಾಂಗ್ರೇಸ್ಸಿನ ಅದ್ಯಕ್ಷ ಗಾದಿಯಿಂದ ಇಳಿಯುತ್ತಿದ್ದಾರೆ.

ಎಲ್ಲಾ ಸಾಮಾನ್ಯ  ಹೆಣ್ಣು ಮಕ್ಕಳಂತೆ ತನ್ನ ಕುಟುಂಬಕ್ಕೆಸೀಮಿತವಾಗಿದ್ದ ಸೋನಿಯಾರ ರಾಜಕೀಯ ಪ್ರವೇಶ ಈ ದೇಶವನ್ನು ಒಂದಷ್ಟು ಕಾಲವಾದರೂ ಮತೀಯ ಶಕ್ತಿಗಳಿಂದ ಕಾಪಾಡಿತು ಎಂಬುದಂತು ಸೂರ್ಯಸತ್ಯ! ಅದಕ್ಕಾಗಿ ಕಾಂಗ್ರೇಸ್ಸಿಗರು ಮಾತ್ರವಲ್ಲದೆ, ಈ ದೇಶದ ಜಾತ್ಯಾತೀತ ನೇಯ್ಗೆಯನ್ನು  ಉಳಿಸಿಕೊಳ್ಳಲು ಬಯಸುವ  ಎಲ್ಲಾ ಭಾರತೀಯರು ಸೋನಿಯಾರವರಿಗೆ ದನ್ಯವಾದ ಹೇಳಲೇಬೇಕು.

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ!

 

Leave a Reply

Your email address will not be published.