ತೆಲುಗು ಸಾಹಿತ್ಯದಲ್ಲಿ ಬಸವಣ್ಣ-2

ಡಾ. ಬಾಡಾಲು ರಾಮಯ್ಯ ಅನು: ಡಾ. ಜಾಜಿ ದೇವೇಂದ್ರಪ್ಪ

ಪಿಡುಪುರ್ತಿ ಸೋಮನ:
ಈತನ ಎರಡು ಕೃತಿಗಳಲ್ಲಿ, ಪದ್ಯ ಬಸವಪುರಾಣ ನಿರೂಪಿಸುವ ಬಸವಣ್ಣನ ಪಾತ್ರದಲ್ಲಿ ಬದಲಾವಣೆಯಿಲ್ಲ. ಆದರೆ ಪ್ರಭುಲಿಂಗಲೀಲೆಯಲ್ಲಿ18 ಕಂಡುಬರುವ ಬಸವಣ್ಣನ ಪ್ರಕೃತಿಯೇ ಭಿನ್ನವಾಗಿದೆ. ವೀರಶೈವನಿಗೆ ಆತ್ಮ ಷಟ್‍ಸ್ಥಲ, ಅಂಗಗಳು ಅಷ್ಟಾವರಣ, ಪ್ರಾಣಗಳು ಪಂಚಾಚಾರವೆಂದು ಒಂದು ಹೇಳಿಕೆಯಿದೆ.
ಸೋಮನಾಥ ಪಂಚಾಚಾರಗಳಿಂದ ಕೂಡಿದ ಅಷ್ಟಾವರಣಗಳನ್ನು ಅನುಸರಿಸುವವನೆಂದು ಬಸವಣ್ಣನನ್ನು ಚಿತ್ರಿಸಿದನು. ಆದರೆ ಷಟ್‍ಸ್ಥಲ ಸೋಪಾನಗಳಲ್ಲಿ ನಡೆಸಲಿಲ್ಲ. ಷಟ್‍ಸ್ಥಲ ಜ್ಞಾನಸಾಧನೆಯಲ್ಲಿರುವ ಬಸವಣ್ಣನನ್ನು ಪ್ರಭುಲಿಂಗಲೀಲೆಯಿಂದ ತಿಳಿಯಬಹುದು.
ಪಿಡುಪರ್ತಿ ಸೋಮನನ ಪ್ರಭುಲಿಂಗಲೀಲೆಯಲ್ಲಿ ಬರುವ ಬಸವಣ್ಣ ಧರ್ಮ ಸ್ವರೂಪಿಯಾದ ವೃಷಭಾವತಾರವೇ. ಇವನು ಹಿಂಗಳೇಶ್ವರ ಬಾಗೇವಾಡಿಯ ಮಾದರಸ,

ಮಾದಲಾಂಬೆಯರ ಗರ್ಭಸಂಜಾತನೇ. ಬಸವಪುರಾಣದಲ್ಲಿದ್ದಂತೆಯೇ ಜನಿಸಿದ ತಕ್ಷಣ ಸಂಗಮೇಶ್ವರನು ಬಂದು ಶಿಶುವಿಗೆ ಲಿಂಗಭಸ್ಮ ಧಾರಣೆ ನೆರವೇರಿಸಿದ, ಬಸವ ಎಂದು ನಾಮಕರಣ ಮಾಡವನು. ಸೋಮನಾಥ ಕವಿ ಬಸವಣ್ಣನ ಉಪನಯನವನ್ನು ತಿರಸ್ಕರಿಸುವನು. ಬಸವಣ್ಣ ಅಲ್ಲಮಪ್ರಭುವಿನ ಹತ್ತಿರ ಸಂಗಮೇಶ್ವರದಲ್ಲಿ ಉಪನೀತನಾದಂತೆ ಪಿಡುಪರ್ತಿಸೋಮನ ಆರಾಧ್ಯ ಸಂಪ್ರದಾಯದ ಪ್ರಕಾರ ಹೇಳುತ್ತಾನೆ. ಯಜ್ಞೋಪವೀತ, ಲಿಂಗಧಾರಣೆ ಎರಡೂ ಒಂದೇ ಬಾರಿ ನಡೆದವಂತೆ. ಆಂಧ್ರರಲ್ಲಿ ಇಂದಿಗೂ ಈ ಸಂಪ್ರದಾಯ ನಡೆದುಕೊಂಡುಬರುತ್ತಿದೆ.
ಕಲ್ಯಾಣದ ಪ್ರಭುವಾದ ಬಿಜ್ಜಳ ಅಜ್ಞಾತ ಲಿಪಿಯೊಂದನ್ನು (ಶಾಸನವನ್ನು) ಓದಲು ಬಸವಣ್ಣನನ್ನು ಕರೆಯುತ್ತಾನೆ. ಬಸವಣ್ಣ ಅದನ್ನು ಓದಿ, ಹತ್ತು ಕೋಟಿ ದ್ರವ್ಯವಿರುವ ಒಂದು ನಿಧಿಯನ್ನು ಬಿಜ್ಜಳನಿಗೆ ಸಂಪಾದಿಸಿಕೊಟ್ಟನು. ಬಿಜ್ಜಳ ಸಂತೋಷಗೊಂಡು ಬಸವಣ್ಣನಿಗೆ ಮಂತ್ರಿಪದವಿ ನೀಡಿದನು.

jaji  2 copyಬಲದೇವ ದಂಡನಾಯಕ ತನ್ನ ಮಗಳಾದ ಗಂಗಾಂಬೆಯನ್ನು ಬಸವಣ್ಣನಿಗೆ ಮದುವೆ ಮಾಡುವನು. ಜಂಗಮ ಸೇವಾನಿರತನಾಗಿದ್ದ ಬಸವಣ್ಣ ಗಂಗಾಂಬೆಯರಿಗೆ ಒಬ್ಬ ಪುತ್ರ ಜನಿಸಿದ. ಪ್ರಸಾದದೊಳಗಣ ಅಗಳು ತಿಂದ ಸಹೋದರಿ ನಾಗಲಾಂಬೆಗೆ ಗರ್ಭ ಕೂಡಿ ಚೆನ್ನಬಸವಣ್ಣ ಜನಿಸಿದ. ಸೋಮನಾಥನ ಕಾವ್ಯದ ಬಸವಣ್ಣ ಸೋದರಮಾವನಾದ ಬಲದೇವನ ಮರಣಾನಂತರ ಆಸ್ಥಾನದಲ್ಲಿ ರಾಜನಿಂದ ನೇಮಕವಾಗುತ್ತಾನೆ. ಅಲ್ಲಿ ಈ ಶಾಸನದ ಮಾತೇ ಬರುವುದಿಲ್ಲ. ನಲ್ಲನ ಗಂಡ್ಲ ನಾಗನಾರಾಧ್ಯ, ತುಮ್ಮಲಪಲ್ಲಿ ನಾಗಭೂಷಣ ಕವಿ ಅಜಾತ ಲಿಪಿಯುಳ್ಳ ಶಾಸನ ರಾಜಸ್ಥಾನದಲ್ಲಿ ಬಿದ್ದಿತ್ತೆಂದು ಹೇಳುತ್ತಾರೆ. ಈ ವಿಷಯದಲ್ಲಿ ಪಿಡುಪರ್ತಿ ಸೋಮನನಲ್ಲಿ ಈಶ್ವರ ಪ್ರಜ್ಞೆಯೇ ಪ್ರಧಾನವಾದದ್ದು, ಪಾಲ್ಕುರಿಕೆ ಸೋಮಣ್ಣನ ಬಸವಣ್ಣನಲ್ಲಿ ಈಶ್ವರ ಪ್ರಜ್ಞೆಯೇ ಪ್ರಧಾನವಾದದ್ದು, ಪಾಲ್ಕುರಿಕೆ ಸೋಮಣ್ಣನ ಬಸವಣ್ಣನಲ್ಲಿ ಈಶ್ವರ ಮಹಿಮೆಯಿದ್ದರೂ ಮಾವನವರ ಸ್ಥಾನದ ವಾರಸುದಾರತ್ವದಿಂದ ಆತನ ಚರಿತ್ರೆ ಲೌಕಿಕವಾಗಿದೆ. ಸದಾಚಾರ, ಗಣಾಚಾರಗಳಿಗೆ ತಕ್ಕ ಸನ್ನಿವೇಶಗಳು ಇಲ್ಲ. ಆದರೆ ನಿತ್ಯಾಚಾರಕ್ಕೆ ತಕ್ಕಂತೆ ಗುರುಲಿಂಗ ಜಂಗಮ ಪೂಜೆಯಲ್ಲಿ ಬಸವಣ್ಣ ತಲ್ಲೀನನಾಗಿದ್ದನು. ಪ್ರಭುಲಿಂಗಲೀಲೆ 8, 9ನೇ ಗತಿಯಲ್ಲಿ ಬರುವ ಬಸವಣ್ಣನ ಜೀವನವಿದು.

ಪ್ರಭುದೇವ ಬಸವಣ್ಣನ ಮನೆಗೆ ಬರುತ್ತಾನೆ. ಆಗ ಬಸವಣ್ಣ ಇಷ್ಟಲಿಂಗಾರ್ಚನೆಯಲ್ಲಿರುತ್ತಾನೆ. ಬಂದ ಜಂಗಮರನ್ನು ಪ್ರವೇಶಮಾಡಿಸೆಂದು ಬಸವಣ್ಣ ಅಪ್ಪಣ್ಣನಿಗೆ ಹೇಳಿರುತ್ತಾನೆ. ಮೊಗಸಾಲೆಗೆ ಬಂದ ಪ್ರಭುದೇವ, ಸಿದ್ಧರಾಮರನ್ನು ಅಪ್ಪಣ್ಣ ಆಹ್ವಾನಿಸಿಸುತ್ತಾನೆ. ಆಗ ಅಲ್ಲಮ ಪ್ರಭು-
“ಲೋನೇಡ ವೆಲಿಯೇಡ ಲೋಕಾನುಸಾರುಲೈ ದೊರಲಯಿಂಡ್ಲಕು ನರುಗನೇಲ ?
ಎಂದು ಹೇಳುತ್ತಾನೆ. ಈ ಸಂಗತಿಯನ್ನು ಅಪ್ಪಣ್ಣ ಬಸವನಿಗೆ ತಿಳಿಸುವನು. ಕೈಯಲ್ಲಿ ಇಷ್ಟಲಿಂಗವಿಟ್ಟುಕೊಂಡಿದ್ದ ಬಸವ ಈ ಮಾತುಗಳನ್ನು ಕೇಳಿ ಗಡ ಗಡ ನಡುಗಿದನು.
ಕಂಡು ಗರ್ವಂಬುನ ಕನ್ನುಲ ಗಾನಕುಂಡಿತಿನೋಕಾಕ? ಯೊಕಟಾಡಬೋಯಿ ಯೊಕಟಾಡಿತಿನೋ?
ಭಕ್ತಿಯುಕ್ತಿ ತಪ್ಪಿತಿನೋ? ಅಕಟಕಟಾ! ಪ್ರಭುವರುದೆಂಚಿ ಲೋಪಲಿಕಿ ರಾಕದೇಮೊ
ನಿಲ್ಚೆನು ವೆಲುಪಲನೆ ? ಯೆಕಲಕ್ಕೆಮಾಯೊಗಾನಿಪುಡು ನಾಭಕ್ತಿ”
(ಪ್ರ.ಲಿಂ.ಗತಿ 14 ಪುಟ -111)
ಎಂದು ಚಿಂತಿಸುವನು. ಮಡಿವಾಳ ಮಾಚಯ್ಯ, ಚೆನ್ನಬಸವಣ್ಣ, ಬಸವಣ್ಣನನ್ನು ಕ್ಷಮಿಸಬೇಕೆಂದು ಪ್ರಭುವನ್ನು ಬೇಡಿದರು. ಬಸವಣ್ಣ ತನ್ನ ತಪ್ಪನ್ನು ಮನ್ನಿಸಬೇಕೆಂದು ಹೀಗೆ ನುಡಿದನು-

ಭಾವಿಂಪನೇ ಪಶುಪಾಶ ಬದ್ದುಂಡ
ಪಶುಪತಿ ವೀವುನು ಪರಗಂಗ ಮರಿಯು
ಪಶುವು ರಕ್ಷಿಂಚುಟ ಪತಿಕಿ ಭಾವ್ಯಂಬು
ನಾನು(ಜೀವಿ) ಪಶುಪತಿ(ಶಿವ)ಗೆ ಬದ್ದವಾಗಿದ್ದೇನೆ. ಆದ್ದರಿಂದ ನನ್ನನ್ನು ರಕ್ಷಿಸುವ ಹೊಣೆ ಪಶುಪತಿಯದೇ
ಇಂಟಿಕಿ ಜಂಗಮಂ ಬೇತೆಂಚಿನಪುಡು ಕಂಟಿಕಿ ಬ್ರತಿಕಿತಿಗಾ ಯನಿ ಭಕ್ತಿ
ಚೇಯಕ, ಯರಚೇತ ಶಿವಲಿಂಗಪೂಜ ಚೇಯ ನೇಪೆದ್ದಲು ಚೆಪ್ಪಿರೋ ತಮಕು?

ಮನೆಗೆ ಜಂಗಮ ಬಂದಾಗ ಅವನನ್ನು ಉಪಚರಿಸದೇ ಅಂಗೈಯಲ್ಲಿ ಲಿಂಗವನ್ನಿಡಿದು ಪೂಜೆ ಮಾಡೆಂದು ನಿನಗೆ ಯಾರು ಹೇಳಿದರು ? ಎಂದು ಸೂಟಿಯಿಂದ ಬಸವನ ಇಷ್ಟಲಿಂಗವನ್ನು ಎತ್ತಿ ತಿವಿಯುವನು. ಜಂಗಮನು ಬಂದಾಗ ಎಲ್ಲವನ್ನು ತೊರೆದು ಆತನನ್ನು ಪೂಜಿಸುವುದೇ ಉತ್ತಮ ಶಿವಾಚಾರ.
ಕೊಟ್ಟುಂಡು ತಿಟ್ಟುಂಡು ಕೋಪಗಿಂಚುಂಡು ಎಟ್ಟೈನ ಮೀಪಾದಮಿಂಕನೇ ವಿಡುವ
ನನಿ ಬಸವನ್ನಯು ನಾ ಚೆನ್ನಬಸವ ಘನುಡು ವೇರೊಕ ಪಾದಕಮಲಂಬು ಪಟ್ಟ
(ಪ್ರ.ಲಿಂ.ಗತಿ 14, ಪುಟ-114)

ಹೊಡೆಯಿರಿ, ನಿಂದಿಸಿರಿ, ಕೋಪಿಸಿಕೊಳ್ಳಿರಿ, ಏನಾದರೂ ನಿಮ್ಮ ಪಾದಗಳನ್ನು ನಾನು ಬಿಡುವುದಿಲ್ಲವೆಂದು ಬಸವಣ್ಣ, ಚೆನ್ನಬಸವಣ್ಣ
ಪ್ರಭುವಿನ ಪಾದಕಮಲ ಹಿಡಿದರು. ಬಸವಪುರಾಣದಲ್ಲಿ ಶಿವನಾಗಮಯ್ಯ ಬೆರಳನ್ನು ಹಿಂಡಿದಾಗ, ಬಸವಣ್ಣ ಪಾದವನ್ನು ಹಿಡಿಯುವನು. ಅತ್ತ ಮಹಿಮೆ ಪ್ರಚಾರಕ್ಕೆ ತಕ್ಕಂತಿದೆ. ಇತ್ತ ಮಹಿಮೆಯಿಲ್ಲ, ಜ್ಞಾನಾರ್ಚನೆಗೆ ತಕ್ಕಂತಿದೆ. ಹೀಗೆ ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗಗಳ ಪ್ರಭಾವ, ಆ ಸ್ಥಳಗಳನ್ನು ಸ್ವೀಕರಿಸಿದ ಭಕ್ತ ಪಾಲಿಸಬೇಕಾದ ನಿಯಮಗಳನ್ನು ಬಸವಣ್ಣ ತಿಳಿದುಕೊಂಡು ಪಾಲಿಸುತ್ತಾನೆ. 16ನೇ ಇಷ್ಟಲಿಂಗ ಗತಿ 18ನೇ ಪ್ರಾಣಲಿಂಗ ಗತಿಗಳಲ್ಲಿ (ಗತಿ=ಅಧ್ಯಾಯ) ಬಸವಣ್ಣ ಆಯಾ ಸ್ಥಲ ಪ್ರಕೃತಿಗಳನ್ನು ತಿಳಿದುಕೊಂಡು ಆನಂದಿಸುತ್ತಾನೆ. ಬಸವಣ್ಣ ಪ್ರಭುವಿನ ಬರುವಿಕೆಗಾಗಿ 12 ಸಂವತ್ಸರಗಳ ಕಾಲ ಕಾಯ್ದುಕೊಂಡಿರುವುದು, ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗಿ ಶರಣ ಸ್ಥಳಗಳಲ್ಲಿನ ಅನುಭವಗಳನ್ನು ಹೊಂದುವದು, 22ನೇ ಗತಿಯಲ್ಲಿ ಪ್ರಭುವು ಶೂನ್ಯಸಿಂಹಾಸನ ಏರುವಾಗಿನ ಬಸವಣ್ಣನ ಸ್ಥಿತಿ, ಆಧ್ಯಾತ್ಮಿಕ ಪ್ರಗತಿ ಕ್ರಮವಾಗಿ ಹೇಳಲ್ಪಟ್ಟಿದೆ. ಭಾವಲಿಂಗ ಗತಿಯಲ್ಲಿ ಕೇವಲ ಪಂಚಾಕ್ಷರಿ ಮಂತ್ರ ಭಾವನೆಯಿಂದಲೇ ಪಂಚಕೋಶಾತೀತವಾಗುವ ಸ್ಥಿತಿಯನ್ನು ತಲುಪಿ ಜೀವಿಯು ಶರಣಸ್ಥಲಗಳಲ್ಲಿರುವನು. ಆಗಿನ ಶಕ್ತಿಯೇ ಬಸವಣ್ಣನಿಗಿದ್ದಿತಂತೆ.
…..ಮೃಡುನಿ ಭಕ್ತುಲಕೆಲ್ಲ ಮೇಟಿವಿ ನೀವು
ನೀದು ಭಾವನ ಚೇತನೇ ಗುರುಂಡಗುದು ನೀದು ಭಾವನ ಚೇತನೇ ಲಿಂಗಮಗುದು
ನೀದು ಭಾವನ ಚೇತನೇ ಜಂಗಮಂಬು ನೌದರು ನಿಜಮು ನೀ ಯಾಸಸೂ ಬಸವ,
ಶಿವಭಕ್ತರಲ್ಲಿ ನೀನೇ ಶ್ರೇಷ್ಠ. ಈ ಭಾವನಾಶಕ್ತಿಯಿಂದ ನೀನೇ ಗುರುಲಿಂಗ ಜಂಗಮನಾಗಬಲ್ಲೆ, ಇದು ಬಸವಣ್ಣನಿಗೆ ಪ್ರಭುದೇವರು ಹೇಳಿದ ಮಾತು.
ಈ ಸ್ಥಿತಿಯನ್ನು ಕೂಡ ಮೀರಿ ಮೋಕ್ಷಸ್ಥಿತಿಯನ್ನು ತಲುಪುವನು. ಲೌಕಿಕದೊಂದಿಗೆ ಸಂಪರ್ಕವಿಲ್ಲದೆ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಆತ್ಮನಾಗುವ ಬಸವಣ್ಣನನ್ನು ಪ್ರಭುಲಿಂಗಲೀಲೆಯಲ್ಲಿ ನೋಡಬಹುದು.

ಪ್ರಭುಲಿಂಗಲೀಲೆಯಲ್ಲಿ ಬಸವಣ್ಣನ ಅನೇಕ ವಚನಗಳು ಯಥಾವತ್ತಾದ ಅನುವಾದವಾಗಿದೆ. ಚಾಮರಸನನ್ನು ಸೋಮನ ಕೂಡ ಆಂಧ್ರೀಕರಿಸಿದ್ದಾನೆ. ಅವು ಆಧ್ಯಾತ್ಮಿಕ ಅನುಭೂತಿಯಿರುವ ವಚನಗಳು. ಬಸವನ 15ನೇ ವಚನದ ಭಾವವೇ ಪ್ರಭುಲಿಂಗಲೀಲೆಯಲ್ಲಿ ಹೀಗೆದೆ.
ತಲ್ಲಿಯ್ಯೆ ತನಯಯ್ಯೆ ತುರುಣಿಯ್ಯೆಮಾಯ
ಯೆಲ್ಲವಾರಲ ಭ್ರಮಿಯಿಂಪುಚುನುಂಡು (ಪ್ರ.ಲಿಂ.ಗತಿ. 3, ಪುಟ-24)
ತಾಯಿಯಾಗಿ ತನಯೆಯಾಗಿ ತರುಣಿಯಾಗಿ ಮಾಯೆ
ಯಾವಾಗಲೂ ಭ್ರಮಿಸುತ್ತಲಿದೆ.
ಅಂತೆಯೇ ಬಸವಣ್ಣನ 17ನೇ ವಚನದ ಅನುವಾದ-
ಮರಯಾಲಮುನಂಜೇಯ ಮರಚೆನೇನಿಯುನು ಗೊರತಗು ಗಾಕಾತ್ಮ ಗುರುನಿಚೇ ಸಾಮು ಗರಿಡಿಲೋನೇರ್ಬುಚು ಗಾಲುಚೇ ಮರವ ವೆರವುಕಾದನಿ ಚೆಪ್ಪ ವಿಹಿತಂಬುಗಾದೆ.
(ಗತಿ 14, ಪುಟ-112)
597ನೇ ವಚನದ ಅನುವಾದ-
ಬೆರಕಾಕು ದಿನಿ ಮೇಕ ಚೆಲರೇಗಿ ನೆಮರು ತರಚುಗಾ ಬೆಟ್ಟುವಿಧಂಬುನ ನಲ್ಪ
ಸುಖಮುನಂ ಜೊಕ್ಕ ಕಿಕ್ಷುರಸಂಬು ಗ್ರೋಲಿ ಸುಖಿಯಿಂಚು
ನೇನುಂಗು ಚೊಪ್ಪುನ ಭಕ್ತಿ
ರಸಮಾನಿ ಮುಕ್ತಿಂ ಜೇರಂಗಂಗೋರುನಟ್ಟಿ ರಸಿಕು
ಲಾಲಿಂಪುಡೀ ಪ್ರಭುಲಿಂಗ ಲೀಲ

ತೆಲುಗಿನಲ್ಲಿ ಬಸವಣ್ಣನ ಮೇಲೆ ದಾರ್ಶನಿಕ ದೃಷ್ಟಿಯಿಂದ ಗ್ರಂಥರಚನೆ ಮಾಡಿದವರು ಪಾಲ್ಕುರಿಕೆ, ಪಿಡುಪರ್ತಿ ಸೋಮನಾಥರು. ಪಾಲ್ಕುರಿಕೆ ಸೋಮನ ಷಟ್‍ಸ್ಥಲ ಸಿದ್ಧಾಂತದ ಗೊಡವೆಗೆ ಹೋಗದೆ ಪಂಚಾಚಾರ, ಅಷ್ಟಾವರಣ ಸಾಧನೆಯಲ್ಲಿ ನಿಂತ ಭಕ್ತನಂತೆ ಬಸವಣ್ಣನನ್ನು ಚಿತ್ರಿಸಿದನು. ಈತನ ಸಾಧನಾಚರ್ಯೆಗಳು ವಿಶೇಷವಾಗಿ ಬರುವುದಿಲ್ಲ. ಕಾರಣ ಪಾಲ್ಕುರಿಕೆಯ ರಚನೆಯೇ ಸರ್ವ ಜನಾಕರ್ಷಣವಾದುದು. ಪಿಡುಪರ್ತಿಯ ರಚನೆಯು ಸಿದ್ದಾಂತಗಳ ಮೇಲೆ ಅಭಿರುಚಿಯಿದ್ದವರಿಗೆ ಇಷ್ಟವಾಗುತ್ತದೆ.

ಮಹಾದೇವ ಕವಿ
ಪಾಲ್ಕುರಿಕೆ ಸೋಮನಾಥನನ್ನು ಅನುಸರಿಸಿಕೊಂಡು ಬಂದ ಕವಿಗಳು ಹಲವರಿದ್ದಾರೆ. ಅವರಲ್ಲಿ ಹೇಳಿಕೊಳ್ಳಬೇಕಾದವನೆಂದರೆ ಮಹಾದೇವ ಕವಿ. ಇವನು ಬಸವಪುರಾಣವನ್ನು ಪದ್ಯಕಾವ್ಯವಾಗಿ ಬದಲಾಯಿಸಿ ಬರೆದನು. ಅಪ್ರಕಟ ಕಾಗದ ಪ್ರತಿ. ಇದು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಪ್ರಾಚ್ಯ ಸಂಶೋಧನಾಲಯದಲ್ಲಿದೆ. ದ್ವಿಪದ ಗ್ರಂಥದಲ್ಲಿನ ಏಳು ಆಶ್ವಾಸಗಳಿಗೆ ಸರಿಯಾಗಿ ಇದರಲ್ಲಿಯೂ ಏಳು ಆಶ್ವಾಸಗಳಿವೆ. ನಾರದ ಕೈಲಾಸಕ್ಕೆ ಹೋಗುವುದರೊಂದಿಗೆ ಕಥೆ ಆರಂಭವಾಗುತ್ತದೆ. ಬಸವಣ್ಣನ ಜನನ, ಉಪನಯನ ನಿರಾಕರಣೆ, ವಿವಾಹ, ಸಂಗಮೇಶ್ವರಕ್ಕೆ ಪ್ರಯಾಣ- ಇದು ಪ್ರಥಮಾಶ್ವಾಸದಲ್ಲಿ ಬರುತ್ತದೆ. ಅಂತೆಯೇ ಉಳಿದ ಆರು ಆಶ್ವಾಸಗಳಲ್ಲಿ ಕಥಾ ಭಾಗಗಳು. ಘಂಟಾಕರ್ಣನ ಕಥೆ ಮಾತ್ರ 6ನೇ ಆಶ್ವಾಸದಲ್ಲಿ ಹೆಚ್ಚುವರಿಯಾಗಿ ಬರುತ್ತದೆ. ಮಹಾದೇವಕವಿಯ ಬಸವಣ್ಣ ಪಾಲ್ಕುರಿಕೆಯ ಸೋಮನಾಥನ ಬಸವಣ್ಣನ ಪ್ರತಿಬಿಂಬವೇ ಆಗಿದ್ದಾನೆ.

 ನಲ್ಲನಗಂಡ್ಲ ನಾಗನಾರಾಧ್ಯುಡು
ಇವನು ‘ಬಸವ ವಿಜಯ’ ಎಂಬ ಮೂರು ಆಶ್ವಾಸಗಳ ದ್ವಿಪದಿ ಕಾವ್ಯವನ್ನು ಬರೆದಿದ್ದಾನೆ. ಇದು ಅಪ್ರಕಟಿತ ಕಾವ್ಯ. ಇದೂ ಕೂಡ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನಾಲಯದಲ್ಲಿದೆ. ಈ ಪುಸ್ತಕದ ಗ್ರಂಥಾಲಯದ ಸಂಖ್ಯೆ ಆರ್.556. 127 ಪುಟಗಳಿರುವ ಕಾಗದ ಪ್ರತಿ. ಈ ಪ್ರತಿಯ ಲಿಪಿಕಾರ ಬಡಿಸೆಟ್ಟಿ ಮಲ್ಲಯ್ಯ. ಲಿಪಿಯ ಕಾಲ ರುಧಿರೋದ್ಗಾರಿ ಸಂ.ವೈಶಾಖ ಬಹುಳ ತೃತೀಯ ಭಾನುವಾರ. ಈ ಕಾಲ 17.02.1443, 07.05.1623, 06.05.1863 ಆಗಬಹುದು. ಅಕ್ಷರದ ಹೋಲಿಕೆಯಿಂದ ಇದು 17ನೇ ಶತಮಾನಕ್ಕೆ ಸೇರಿರಬಹುದೆಂದು ಊಹಿಸಬಹುದು.

ತುಮ್ಮಲಪಲ್ಲಿ ನಾಗಭೂಷನ ಕವಿ
ಇವನು ರಚಿಸಿದ ಬಸವ ವಿಜಯ ಮೂರು ಆಶ್ವಾಸಗಳಿರುವ ಪದ್ಯ ಕಾವ್ಯವಾಗಿದೆ. ನಾಗನಾರಾಧ್ಯ ನಾಗಭೂಷಣ ಕವಿಗಳ ಕಥೆಗಳಲ್ಲಿ ವ್ಯತ್ಯಾಸವಿಲ್ಲ. ಸೋಮನಾಥನನ್ನು ಇವರು ಸ್ಮರಿಸಿದ್ದಾರೆ. ಆದರೆ ಆತನ ಮಾರ್ಗವನ್ನು ಅನುಸರಿಸಿಲ್ಲ. ಸೋಮನಾಥನ ದಾರ್ಶನಿಕದೃಷ್ಟಿ, ಕವಿತಾಸಾಮಥ್ರ್ಯ ಇವನಲ್ಲಿ ಕಂಡುಬರುವುದಿಲ್ಲ. ಬಸವಪುರಾಣದಲ್ಲಿ ಹೇಳಿದ ರೀತಿಯಲ್ಲಿಯೇ ಶಿಲಾದನ ಕಥೆ, ನಂದಿಕೇಶ್ವರ ಜನನ ಇದರಲ್ಲಿಯೂ ಬರುತ್ತದೆ. ಆದರೆ ಇದರಲ್ಲಿ

ಅನಿಮಿಷಯ್ಯನ ಕಥೆಯೊಂದು ಬರುತ್ತದೆ. ನಂದೀಶ್ವರ ಅನಿಮಿಷಯ್ಯನಿಗೆ ಲಿಂಗವನ್ನು ಕೊಟ್ಟು ಕೈಲಾಸಕ್ಕೆ ಹೋಗುತ್ತಾನೆ. ಕೈಲಾಸದಲ್ಲಿ ಆತನನ್ನು ದ್ವಾರಪಾಲಕರು ತಡೆಯುವರು. ನಂದಿ ಲಿಂಗರಹಿತನಾಗಿ ಭವಿಯಾದನೆಂದು ಶಿವನಿಗೆ ದ್ವಾರಪಾಲಕರು ಹೇಳಿದರು. ನಂದಿಯನ್ನು ಭವಿಯೆಂದು ಭಾವಿಸಿದ ದ್ವಾರಪಾಲಕರನ್ನು ಭೂಮಿಯಲ್ಲಿ ಭವಿಗಳಾಗಿ ಚಾಳುಕ್ಯವಂಶದಲ್ಲಿ ಜನಿಸಿರೆಂದು ಶಿವನು ಶಪಿಸಿದನು.
“ಮೀರುನು ಯೇಲುಡು ರಾಜ್ಯಂಬು ಎನುಬದಿಯೇಂಡ್ಲು ವೃಷ
ಭುಂಡು ಮೀವೆಂಟ ವೇಡ್ಕ ಭೂಮಿಕಿವಚ್ಚಿ ಬಸವನ್ನ ಯನು ಪೇರ
ಬರಗಿ ಯತಡು ಮನುಚುಂಡು ಮಂಡೆಗ ಮಾದಿರಾಜಯ್ಯಕು
ತನಯುಡೈ ಮೀಕು ಪ್ರಧಾನಿಯಗುಚು
(ಬ.ವಿ.ಆ.1, ಪುಟ-10)
“ನೀವು ರಾಜ್ಯವಾಳಿರಿ. ವೃಷಭ ನಿಮ್ಮ ಹಿಂದೆ ಬಸವಣ್ಣ ಎಂಬ ಹೆಸರಲ್ಲಿ ಮಾದಿರಾಜಯ್ಯನ ಮಗನಾಗಿ ಜನಿಸಿ, ಎಂಟು ವರ್ಷ ಬಳಿಕ ಪ್ರಧಾನಮಂತ್ರಿಯಾಗಲಿ” ಎಂದು ಬಸವಣ್ಣನ ಜನ್ಮಕಾರಣವನ್ನು ಹೇಳಲಾಗಿದೆ.

ಬಿಜ್ಜಳನ ಆವರಣದಲ್ಲಿ ಇದ್ದಕ್ಕಿದ್ದಂತೆ ಒಂದು ರಾಗಿಯ ತಗಡು ಬಂದು ಬಿದ್ದಿತು. ಅದರಲ್ಲಿನ ಲಿಪಿಯನ್ನು ಯಾರೂ ಓದದಾದರು. ಬಸವಣ್ಣ ಅದನ್ನು ಓದಿ ನೃಪತಿಗೆ 5 ಕೋಟಿ ದ್ರವ್ಯ ಲಭಿಸುವಂತೆ ಮಾಡಿದ. ರಾಜ ಸಂತೋಷಗೊಂಡು ಮಂತ್ರಿಪದವಿ ನೀಡಿದ. ಆ ಪದವಿಯಲ್ಲಿ 12 ಸಂವತ್ಸರಗಳು ಮಾತ್ರ ಇರುವೆನೆಂದು ಬಸವಣ್ಣ ಹೇಳುವನು. ಬಿಜ್ಜಳ 10 ಸಂವತ್ಸರ ಮಾತ್ರ ರಾಜನಾಗಿರುತ್ತಾನೆಂದೂ, ಅಲ್ಲಯ್ಯ, ಮಧುಪಯ್ಯಗಳ ಕಾರಣವಾಗಿ ಒಬ್ಬ ಭಕ್ತ ಬಿಜ್ಜಳನನ್ನು ಕೊಲ್ಲುವುದಾಗಿಯೂ, ನಂತರ ಅಳಿಯ ಬಿಜ್ಜಳನು ರಾಜ್ಯಕ್ಕೆ ಬರುತ್ತಾನೆಂದೂ, ಆತನ ಹತ್ತಿರ ಚೆನ್ನಬಸವಣ್ಣ 25 ಸಂವತ್ಸರಗಳ ಕಾಲ ಪ್ರಧಾನಿಯಾಗಿರುತ್ತಾನೆಂದೂ, ಆ ಅಳಿಯ ಬಿಜ್ಜಳನನ್ನು ಮಡಿವಾಳ ಮಾಚಯ್ಯ ಕೊಲ್ಲುವನೆಂದೂ, ಮುಂದೆ ಕಲ್ಯಾಣ ಅರಾಜಕತೆಯಿಂದ ನಶಿಸುತ್ತದೆಂದೂ, ಪುಣ್ಯಕ್ಷೇತ್ರಗಳಾದ ಕಂಚಿಯಲ್ಲಿ ಗುಡಿಗೋಪುರಗಳು ಉರುಳಿಹೋಗುವವೆಂದೂ, ಸಮಾಜದಲ್ಲಿ ಸಂಬಂಧಗಳು ಕೆಡುವವೆಂದೂ ಇರುವ ಕಾಲಜ್ಞಾನವನ್ನು ಪ್ರಥಮಾಶ್ವಾಸದಲ್ಲಿ ಬಸವಣ್ಣ ಹೇಳುತ್ತಾನೆ.

ಕಲ್ಯಾಣದಲ್ಲಿ ವಿಚಿತ್ರ ರೋಗಗಳು ಹುಟ್ಟಿದವು. ಬಸವಣ್ಣ ಅವುಗಳನ್ನು ದೂರಮಾಡಿದನು. ಕಾಳವ್ವ ‘ಬಸವಾ’ ಎನ್ನಲಾಗಿ ಆಕೆಯನ್ನು ರಕ್ಷಿಸಿದ ಕಥೆಯಿದೆ. ತನ್ನ ಕಾಂತೆಯನ್ನು ರಮಿಸಿದ ಮಿಂಡ ಜಂಗಮನನ್ನು ಬಿಜ್ಜಳ ನೋಡಿ ಕೊಲ್ಲಿಸಿದನು. ಆ ಶವವನ್ನು ಬಸವನಿಗೆ ತೋರಿಸಲಾಗಿ ಬಸವಣ್ಣ ಆ ಜಂಗಮನನ್ನು ಬದುಕಿಸಿದನು. ಬಸವಣ್ಣನ ಆ ಶಕ್ತಿಯನ್ನು ಕಂಡು ಬಿಜ್ಜಳನು ಆಶ್ಚರ್ಯಚಕಿತನಾದನು.

ವೀರಶಂಕರದಾಸಿಮಯ್ಯನ ಒಂದೇ ದೃಷ್ಟಿಯಿಂದ, ಬಿಜ್ಜಳ ನಿರ್ಮಿಸಿದ ಗುಡಿಗೋಪುರದೊಂದಿಗೆ ಆ ರಾಜ್ಯವೇ ಭಸ್ಮಾವಶಿಷ್ಟವಾಗುತ್ತಿರಲು, ರಾಜಮಂತ್ರಿಗಳು ಪ್ರಾರ್ಥಿಸಲಾಗಿ, ಬಸವಣ್ಣ ಅದನ್ನು ಉಪಶಮನಗೊಳಿಸಿದ. ಇದರೊಂದಿಗೆ ಎರಡನೇ ಆಶ್ವಾಸ ಮುಗಿಯುತ್ತದೆ.

ತೃತೀಯ ಆಶ್ವಾಸದಲ್ಲಿ ಬಸವಣ್ಣನ ಮಹಿಮೆಯು ನಾಲ್ದೆಸೆಗೆ ವ್ಯಾಪಿಸುತ್ತದೆ. ಚೋಳರಾಜ ಬಸವಣ್ಣನನ್ನು ದರ್ಶಿಸಿ ಕೈಲಾಸಕ್ಕೆ ಹೋಗುತ್ತಾನೆ. ಬಸವಣ್ಣ, ತನ್ನ ಉಂಗುರವನ್ನು ತೆಗೆದು ಬಿಜ್ಜಳನ ಗದ್ದಿಗೆ ಮುಟ್ಟಿದ ತಕ್ಷಣ ಅದು ಭಸ್ಮವಾಗಿ ಹೋಯಿತು. ಇಲ್ಲಿ ಬಸವಣ್ಣ ದ್ವಿತೀಯ ಫಾಲನೇತ್ರನಂತೆ ಚಿತ್ರಿಸಲ್ಪಟ್ಟಿದ್ದಾನೆ. ಬಸವವಿಜಯ ಎಂಬ ಗ್ರಂಥನಾಮಕ್ಕೆ ತಕ್ಕಂತೆ ಇಲ್ಲಿ ಬಸವಣ್ಣನ ಮಹಿಮೆಗಳು ವರ್ಣಿಸಲ್ಪಟ್ಟಿವೆ. ಬಸವಣ್ಣನ ಅಪರೋಕ್ಷ ಜ್ಞಾನ ಮೊದಲ ಆಶ್ವಾಸದಲ್ಲಿ, ಅಸಾಧಾರಣ ಶಕ್ತಿಗಳು ಎರಡನೇ ಆಶ್ವಾಸದಲ್ಲಿ, ಎರಡನೇ ರುದ್ರನೆಂಬುದನ್ನು ಮೂರನೇ ಆಶ್ವಾಸದಲ್ಲಿ ಕೆಲವು ಉದಾಹರಣೆಗಳೊಂದಿಗೆ ನಿರೂಪಿತವಾಗಿವೆ. ಸೋಮನಾಥ ಉಲ್ಲೇಖಿಸದೇ ಇರುವ ಅನಿಮಿಷಯ್ಯನ ಕಥೆ, ಅಂಗುಳೀಯಕ ವೃತ್ತಾಂತ, ತಾಮ್ರಪಟ್ಟಿ ವಿಷಯ ಮುಂತಾದುವು ಈ ಬಸವವಿಜಯದಲ್ಲಿ ವರ್ಣಿಸಲ್ಪಟ್ಟಿವೆ. ಪಾಲ್ಕುರಿಕೆ ಸೋಮನಾಥ ಹೇಳಿದ ಕಿನ್ನರಯ್ಯ, ಶಂಕರದಾಸಿಮಯ್ಯ, ಮಡಿವಾಳ ಮಾಚಯ್ಯ ಮುಂತಾದ ಬಸವಣ್ಣನ ಸಮಕಾಲೀನ ಭಕ್ತರು ಇದರಲ್ಲಿ ಬರುತ್ತಾರೆ. ಆದರೆ ಅವರು ಪ್ರದರ್ಶಿಸುವ ಮಹಿಮೆಗಳು ಸೋಮನಾಥ ಹೇಳಿರುವುದಕ್ಕಿಂತಲೂ ಭಿನ್ನವಾಗಿದೆ.

Leave a Reply

Your email address will not be published.