ತೆಲುಗು ಸಾಹಿತ್ಯದಲ್ಲಿ ಬಸವಣ್ಣ

ಡಾ. ಬಾಡಾಲು ರಾಮಯ್ಯ ಅನು: ಡಾ. ಜಾಜಿ ದೇವೇಂದ್ರಪ್ಪ

ಭರತಖಂಡದಲ್ಲಿ ಶೈವವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ಅದರಲ್ಲಿಯೂ ಆಂಧ್ರಪ್ರದೇಶವು ಶೈವಧರ್ಮದ ನೆಲೆವೀಡಾಗಿದೆ. ಆಂಧ್ರಪ್ರದೇಶವನ್ನು ‘ತ್ರಿಲಿಂಗದೇಶ’ ಎಂಬ ಅಭಿದಾನದಿಂದ ಕರೆಯಲಾಗುತ್ತದೆ. “ತ್ರಿಲಿಂಗ ಎಂಬ ಶಬ್ದದಿಂದಲೇ ‘ತೆಲುಗು’ ಪದ ಬಂದಿದೆ ಎಂಬುದು ನಿಸ್ಸಂಶಯ”1 ಎಂದು ಆಚಾರ್ಯ ಶ್ರೀ ಗಂಟಿ ಸೋಮಯಾಜುಲು ಅಭಿಪ್ರಾಯಪಟ್ಟಿದ್ದಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಹಸ್ತಿ ಈ ಮೂರು ಶೈವಕ್ಷೇತ್ರಗಳ ನಡುವಿನ ಪ್ರದೇಶವೇ ತ್ರಿಲಿಂಗದೇಶ ಎಂದು ಅಪ್ಪಕವಿಯೂ ಹೇಳಿದ್ದಾನೆ. ಅಪ್ಪಕವಿಗಿಂತ ಮುಂಚೆ ವಿದ್ಯಾನಾಥನೆಂಬವನು ಅದೇ ಅಂಶವನ್ನು ತನ್ನ ‘ಪ್ರತಾಪರುದ್ರೀಯ’ದಲ್ಲಿ ಸೂಚಿಸಿದ್ದಾನೆ. ಇದರ ಸತ್ಯಾಸತ್ಯತೆಯೇನಿದ್ದರೂ ಈ ಆಂಧ್ರಪ್ರದೇಶವು ತ್ರಿಲಿಂಗ ದೇಶವೆಂದು “ಬೌದ್ಧರ ಕಾಲದಲ್ಲಿಯೇ ಪ್ರಸಿದ್ಧಿ ಪಡೆದಿತ್ತು. ಕ್ರಿ.ಶ. 150 ರಷ್ಟೊತ್ತಿಗೆ ಗ್ರೀಕ್ ಪ್ರವಾಸಿ ಟಾಲೆಮಿಗೆ ತ್ರಿಲಿಂಗದೇಶದ ಪರಿಚಯವಿದ್ದುದು ತಾರಾನಾಥನ ರಚನೆಯಿಂದ ತಿಳಿದು ಬರುತ್ತದೆ”2 ಎಂದು ಶ್ರೀ ಸೋಮಯಾಜುಲು ಹೇಳುತ್ತಾರೆ.

ದೇಶವು ತ್ರಿಲಿಂಗದೇಶ. ಇಲ್ಲಿನ ಭಾಷೆ ತೆಲುಗು. ಇದು ಸ್ವರಾಂತ ಭಾಷೆ. ಅಂದರೆ ನಾದಾತ್ಮಕವಾದಂತಹದು. ನಾದವು ಶಿವಸ್ವರೂಪವೆಂಬುದು ನಮ್ಮವರ ಭಾವನೆ. ಶಿವಪುರಾಣದಲ್ಲಿ “ಬಿಂದುಶ್ಶಕ್ತಿಶಿವೋನಾದಶ್ಶಿವಶಕ್ತ್ಯಾತ್ಮಕಂ ಜಗತ್” (ಶ್ಲೊ-87) ಎಂದಿದೆ.3 ಈ ದೇಶದಲ್ಲಿ ಜನಿಸಿದ ವ್ಯಕ್ತಿಗೆ ‘ಓಂ ನಮಃ ಶಿವಾಯ’ ಎಂಬ ಷಡಕ್ಷರದಿಂದ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಈ ನಾಡಿನ ಭಾಷಿಕರು ತಮ್ಮ ಆಚಾರ -ವಿಚಾರಗಳೆಲ್ಲವನ್ನೂ ಶಿವಾತ್ಮಕವೆಂದು ಭಾವಿಸುತ್ತಾರೆ. ಆದ್ದರಿಂದ ಭರತಖಂಡದಲ್ಲಿ ಇಂತಹ ವಿಶಿಷ್ಟ ಶೈವ ಲಕ್ಷಣವನ್ನು ಹೊಂದಿದ ದೇಶ ಮತ್ತೊಂದಿಲ್ಲ.
ಆಂಧ್ರಪ್ರದೇಶದಲ್ಲಿ ಆಳಿದ ರಾಜರೂ ಕೂಡ ಹೆಚ್ಚಾಗಿ ಶೈವರೇ. ಕ್ರಿ.ಶ. ಎರಡರಿಂದ ಏಳನೇ ಶತಮಾನದ ವರೆಗೆ ಆಡಳಿತ ನಡೆಸಿದ ಇಕ್ಷ್ವಾಕರು, ಸಾಲಂಕಾಯನರು, ವಿಷ್ಣು ಕುಂಡಿನರು, ಪಲ್ಲವರು ಮುಂತಾದ ವಂಶಸ್ಥರು ‘ಪರಮಮಹೇಶ್ವರ’ ಎಂಬ ಬಿರುದು ಪಡೆದಿದ್ದರೆಂಬುದು ಅವರ ಶಾಸನಗಳಿಂದಲೇ ತಿಳಿಯುತ್ತದೆ. 9ನೇ ಶತಮಾನದ ಪ್ರಾರಂಭದಲ್ಲಿದ್ದ ಚಾಳುಕ್ಯ ಭೀಮನು 108 ಶಿವದೇವಾಲಯಗಳನ್ನು ನಿರ್ಮಾಣ ಮಾಡಿದನೆಂಬ ಪ್ರತೀತಿಯಿದೆ. ಚೋಳರಾಜರೊಂದಿಗೆ ಸಂಬಂಧ ಹೊಂದಿದ್ದ ಚಾಲುಕ್ಯರು ಶೈವರಾಗಿದ್ದರು. ವಿಮಲಾದಿತ್ಯನ ಕುಮಾರನಾದ ರಾಜರಾಜನರೇಂದ್ರನು “ಜಗತ್ಪರಿಪೂಜ್ಯವಾದ ಈಶ್ವರಾಗಮಗಳ ಮೇಲೆ” ಇಚ್ಛೆಯನ್ನು ಉಳ್ಳವನಾಗಿದ್ದನು (ಆ.ಮ.ಭಾ.ಆದಿ ಪರ್ವ ಪ್ರ.ಭ.ಆ. ಪದ್ಯ-10). ಅವನು ಸದಾ “ಪಾರ್ವತೀಪತಿಪದಾಬ್ಜಧ್ಯಾನ ಮಹೋತ್ಸವನಾಗಿ” ಇದ್ದನೆಂದು ಆದಿಪರ್ವದ ಪ್ರಥಮಾಶ್ವಾಸದ 17ನೇ ಪದ್ಯ ಹೇಳುತ್ತದೆ. ಈ ರಾಜರಾಜನರೇಂದ್ರನೇ ನನ್ನಯನಿಗೆ ಆಂಧ್ರ ಮಹಾಭಾರತ ಬರೆಯಲು ಪ್ರೇರಣೆ ನೀಡಿದನು. ಇದರಿಂದಾಗಿ ನನ್ನಯನು ತನ್ನ ಕೃತಿಯನ್ನು ರಾಜರಾಜನರೇಂದ್ರನಿಗೆ ಅಂಕಿತಗೊಳಿಸಿದ್ದಾನೆ.
ಈತನ ಭಾರತದಲ್ಲಿ ಶೈವವನ್ನು ಕುರಿತಾಗಿ ಕೊಂಚ ವಿವರಣೆಯಿದೆ. ಈ ಶೈವವು ವೇದ ಪ್ರಾಮಾಣ್ಯವಾದದ್ದು. ಇದರ ಪ್ರಭಾವದಿಂದ ಅಶ್ರೌತವಾದ, ಕಾಪಾಲಿಕ, ಕಾಳಾಮುಖ ಮಹಾವ್ರತಾದಿ ಶೈವಶಾಖೆಗಳು ಉಂಟಾದವು.

basavanna1ನನ್ನೆಚೋಡ ಕವಿಯ ಕುಮಾರಸಂಭವ ಕಾವ್ಯ ಶಿವಾಧಿಕ್ಯವನ್ನು ಪ್ರತಿಪಾದಿಸುವ ಉತ್ತಮ ಕೃತಿಯಾಗಿದೆ. ಇದರಲ್ಲಿ ಶಿವಲೀಲೆಗಳಿವೆ. ಇಲ್ಲಿ ಶಿವ ಉರಿಲಿಂಗಮೂರ್ತಿಯಾಗಿ ವರ್ಣಿಸಲ್ಪಟ್ಟಿದ್ದಾನೆ. ದಕ್ಷಾದ್ವರಧ್ವಂಸ, ಪಾರ್ವತೀ ತಪಸ್ಸು, ಕುಮಾರೋದಯ ವೃತ್ತಾಂತ ಮುಂತಾದವು ಇಲ್ಲಿ ಬರುತ್ತವೆ. ಪ್ರಳಯದಿಂದ ಆರಂಭವಾಗುವ ಈ ಕಾವ್ಯ ಪ್ರಪಂಚ ಕಲ್ಯಾಣದಲ್ಲಿ ಮುಕ್ತಾಯವಾಗುತ್ತದೆ. ಶೈವದಲ್ಲಿ ಇದು ವಿಶಿಷ್ಟ ಲಕ್ಷಣ. ತಪಸ್ಸಿನಿಂದ ಪಾರ್ವತಿಯು ಮನ್ಮಥಾಂತಕನಾದ ಶಿವನಲ್ಲಿ ಇದು ವಿಶಿಷ್ಟ ಲಕ್ಷಣ. ತಪಸ್ಸಿನಿಂದ ಪಾರ್ವತಿಯು ಮನ್ಮಥಾಂತಕನಾದ ಶಿವನಲ್ಲಿ ಅರ್ಧಶರೀರಿಯಾಗಿ ಹೋಗುತ್ತಾಳೆ. ಇದರಿಂದ ಶಿವನ ಭಕ್ತಪರಾಧೀನತೆ ಎಂತಹದೆಂಬುದು ವ್ಯಕ್ತವಾಗುತ್ತದೆ. ಪ್ರಸಿದ್ಧ ಶಿವಾಚಾರ್ಯರಾಗಿ ಮೆರೆದ ಮಂಚನ, ಕೇತನ, ಶ್ರೀಪತಿ ಪಂಡಿತರು ಈ ಆಂಧ್ರದೇಶದಲ್ಲಿ ಜನಿಸಿ ಪ್ರಸಿದ್ಧರಾದರು. ಮಲ್ಲಿಕಾರ್ಜುನ ಪಂಡಿತಾರಾಧ್ಯ ‘ಶಿವತತ್ವಸಾರ’ವನ್ನು ತೆಲುಗಿನಲ್ಲಿ ಬರೆದಿದ್ದಾನೆ. ಇದು ನಿಗಮಾಗಮಗಳಲ್ಲಿ ಬರುವ ಶಿವತತ್ವಕ್ಕೆ ನಿಧಿ. ಈತನು ಬಸವಣ್ಣನಿಗೆ ಸಮಕಾಲೀನನಾಗಿದ್ದಾನೆ.

ಆಂಧ್ರ ಮಹಾಭಾರತದಲ್ಲಿ ಬರುವ ವೈದಿಕ ಶೈವವೇ ಪೋತನ, ಶ್ರೀನಾಥ ಮುಂತಾದ ಮಹಾಕವಿಗಳಿಗೆ ಮಾರ್ಗಸೂಚಿಯಾಯಿತು. ನನ್ನೆಚೋಡ, ಮಲ್ಲಿಕಾರ್ಜುನ ಪಂಡಿತರ ಶೈವವು ಪಾಲ್ಕುರಿಕೆ ಸೋಮನಾಥಾದಿ ಕವಿಗಳಿಗೆ ಮಾರ್ಗದರ್ಶಕವಾಗಿತ್ತು. ಇದರಿಂದಾಗಿ ಬಸವಣ್ಣನವರ ವೀರಭಕ್ತಿಯನ್ನು ಅವರು ಸವೈದಿಕವಾಗಿ ನಿರೂಪಿಸಿದರು. ತತ್ವದ ಮುಖೇನ ಭಕ್ತಿಯನ್ನು, ಸಮಾಜದಲ್ಲಿ ವರ್ಗರಾಹಿತ್ಯವನ್ನು, ಸಾಹಿತ್ಯದಿಂದ ಅನುಭವವನ್ನು ಬಸವಣ್ಣ ಪ್ರತಿಪಾದಿಸಿ ಸಮಾಜ-ಸಾಹಿತ್ಯ-ತತ್ವಗಳಲ್ಲಿ ಅಪೂರ್ವ ಬದಲಾವಣೆಯನ್ನು ತಂದನು. 800 ಸಂವತ್ಸರಗಳ ಹಿಂದೆ ತಂದ ಈ ಬಗೆಯ ಬದಲಾವಣೆಗಳು ಅತ್ಯಾಧುನಿಕ ಸಮಾಜಕ್ಕೂ ಅವಶ್ಯಕವಾಗಿವೆ. ತೆಲುಗು ಸಾಹಿತ್ಯದಲ್ಲಿ ಇಂಥ ಬಸವಣ್ಣನನ್ನು ಚಿತ್ರಿಸಿದ ಬಗೆಗೆ ಈ ಕೆಳಗಿನಂತೆ ತಿಳಿಯಬಹುದು.

1. ಪಂಡಿತಾರಾಧ್ಯ:

ಆಂಧ್ರಸಾಹಿತ್ಯದಲ್ಲಿ ಬಸವಣ್ಣನನ್ನು ಮೊದಲು ಸ್ತುತಿಸಿದವನು, ಮಲ್ಲಿಕಾರ್ಜುನ ಪಂಡಿತಾರಾಧ್ಯ. ಇವನು ಬಸವಣ್ಣನ ಸಮಕಾಲೀನನಾಗಿದ್ದನು. ಬಸವಣ್ಣನನ್ನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಆತನ ಮಹಿಮೆಗಳನ್ನು ಚೆನ್ನಾಗಿ ಕೇಳಿದ್ದನು. ಈತ ತೆಲುಗಿನಲ್ಲಿ ‘ಶಿವ ತತ್ವಸಾರ’ವನ್ನು ಬರೆದಿದ್ದು, ಕೋಮರಾಜು ಲಕ್ಷ್ಮಣರಾವ್ ಎಂಬುವವರು ಈ ಪುಸ್ತಕವನ್ನು 1922ರಲ್ಲಿ ಪರಿಷ್ಕರಿಸಿ ಪ್ರಕಟಿಸಿದರು. ಶ್ರೀ ನಿಡುದವೋಲು ವೆಂಕಟರಾವ್ ಅವರ ಬೃಹತ್ ಪೀಠಿಕೆಯಿಂದ ಕೃಷ್ಣಾ ಪತ್ರಿಕಾ ಕಾರ್ಯಾಲಯದವರು 1968ರಲ್ಲಿ ಇದನ್ನು ಪ್ರಕಟಪಡಿಸಿದರು. ಈ ಮುದ್ರಣದಲ್ಲಿ 489 ಪದ್ಯಗಳಿವೆ. ಶಿವ, ಅಜ, ರುದ್ರ, ಎಂಬ ಅಂಕಿತಗಳಲ್ಲಿ ಪಂಡಿತಾರಾಧ್ಯ ಶಿವತತ್ವವನ್ನು ಸುಂದರವಾಗಿ ಕಂದಪದ್ಯಗಳ ಮೂಲಕ ಹೇಳಿದ್ದಾನೆ. ಪುರಾತನ-ನೂತನ ಶಿವಭಕ್ತರನ್ನು ಸ್ತುತಿಸುವಾಗ ಬಸವಣ್ಣನನ್ನು ಮೂರು ಪದ್ಯಗಳಲ್ಲಿ ಕೀರ್ತಿಸಿದ್ದಾನೆ.
ಅಸಮೇಕ್ಷಣ ಶಿವಭಕ್ತುಂಡಮಸ ಶ್ರೇಷ್ಠುಡನಿ ಪಲಿಕಿ ಅನ್ಯುಲತೋಡನ್
ಬೋ ಸಪೋರೈ ಬಂಡಾರುವು ಬಸವಡು ವಿಸಮೆತ್ತಿ ತ್ರಾವಿ ಬ್ರತುಕಡೆ ರುದ್ರಾ||
(ಪ-431)
ವಸುಧನುಮೇಶುಡು ದೈವಮು ಪ್ರಸಾದಮು ಪವಿತ್ರಮೀಶು ಭಕ್ತುಲೆ ಕುಲಜುಲ್
ಪೊಸಪೋರೈ ಬಂಡಾರುವು ಬಸವನ ವಿಸಮೆತ್ತಿ ತ್ರಾವಿ ಬ್ರತುಕುಡೇ ರುದ್ರಾ ||
(ಪ-432)

ಈ ಪದ್ಯಗಳಲ್ಲಿ ಬಂದಿರುವ ‘ಬಂಡಾರುವು ಬಸವಡು ವಿಸಮೆತ್ತಿ ತ್ರಾವಿ ಬ್ರತಕಡೆ ರುದ್ರಾ’ ಎಂಬ ಮಾತು, ಬಸವಣ್ಣನು ವಿಷ ಕುಡಿದು ಪವಾಡ ಜರುಗಿಸಿದುದನ್ನು ದೃಢಪಡಿಸುತ್ತದೆ. ದೇವತೆಗಳಲ್ಲಿ ಶಿವ, ಭಕ್ತರಲ್ಲಿ ಪ್ರಹ್ಲಾದರು ಮಾತ್ರ ವಿಷ ಕುಡಿದ ಬಗ್ಗೆ ಪುರಾಣಗಳಿಂದ ತಿಳಿದು ಬರುತ್ತದೆ. ಆದರೆ ಬಸವಣ್ಣನು ವಿಷ ಕುಡಿದು ಬದುಕಿದನೆಂಬುದನ್ನು ಪಂಡಿತಾರಾಧ್ಯನ ಸಮಕಾಲೀನರು ನೋಡಿದ್ದರು. ನೋಡಿದ ಕೆಲವರು ಬಸವನ ಈ ಮಹತ್ವವನ್ನು ಪಂಡಿತಾರಾಧ್ಯರಿಗೆ ಹೇಳಿರಬೇಕು. ಬಸವಣ್ಣ ಕಳಿಸಿದ ವಿಭೂತಿಯ ಸ್ಪರ್ಶದಿಂದ ಈತನು ಕನ್ನಡ ಭಾಷೆ ಮಾತನಾಡಲಾರಂಭಿಸಿದನು. ಬಸವಣ್ಣನು ವಿಷ ಕುಡಿದನೆಂಬುದನ್ನು ಕೇಳಿ ವಿಶ್ವಾಸದಿಂದ ಈ ಮೂರು ಪದ್ಯಗಳಲ್ಲಿ ‘ಬಸವನು ವಿಷ ಕುಡಿದು ಬದುಕಿದ’ ನೆಂದು ಸಾರಿದನು.

ವಿಷ ಸೇವಿಸಿ ಬದುಕಿದ ಬಸವಣ್ಣ ಭಂಡಾರಿಯೆಂದು ಪಂಡಿತಾರಾಧ್ಯ ಸ್ಪಷ್ಟವಾಗಿ ಹೇಳುವುದರಿಂದ, ಬಿಜ್ಜಳನ ಹತ್ತಿರ ಭಂಡಾರ ಸಚಿವನಾಗಿದ್ದ ಬಸವನೇ ಈತನೆಂದು ತಿಳಿಯುತ್ತದೆ. ಬಸವಣ್ಣ ಹನ್ನೆರೆಡು ವರ್ಷಗಳ ಕಾಲ ಬಿಜ್ಜಳನ ಹತ್ತಿರ ಉದ್ಯೋಗಿಯಾಗಿದ್ದನೆಂಬುದಕ್ಕೆ ಕೆಲವಾರು ಆಧಾರಗಳಿವೆ. ವಿಷ ಸೇವಿಸಿ ಬದುಕಿದ ಬಸವ ಎಂತಹ ಶಿವಭಕ್ತನೆಂಬುದು ತಿಳಿಯುತ್ತದೆ. ಮೇಲಿನ ಮೂರು ಪದ್ಯಗಳಲ್ಲಿ ಈ ಭಕ್ತನ ಜೀವನದ ಆಶಯಗಳೆಂಥವೆಂಬುದು ನಮಗೆ ಸ್ಪಷ್ಟವಾಗುತ್ತದೆ. ಶಿವಭಕ್ತನೇ ಶ್ರೇಷ್ಠನು. ಶಿವನೇ ದೇವರು. ಪ್ರಸಾದವೇ ಪವಿತ್ರವಾದುದು, ಶಿವಭಕ್ತರೇ ಕುಲಜರು. ನಿರ್ಮಾಲ್ಯ (ದೇವರಿಗೆ ಅರ್ಪಿಸಿ ತೆಗೆದ ಹೂವು, ಪತ್ರೆ ಮುಂತಾದವು) ಸುಖವು ಲಿಂಗಧಾರಿಗಳಿಗೇ ಸಲ್ಲಬೇಕೆಂದು ಸಾರಿ, ಬಸವ ವಿಷ ಸೇವಿಸಿದ. ಈ ಪಂಚಧರ್ಮಗಳೇ ಬಸವಣ್ಣನಲ್ಲಿ ಪ್ರಧಾನವೆಂಬುದು ಪಂಡಿತಾರಾಧ್ಯನ ಅಭಿಪ್ರಾಯ. ತಾನು ಸ್ಥಾಪಿಸಿದ ಈ ಧರ್ಮ ಸಂರಕ್ಷಣೆಗಾಗಿ ಬಸವಣ್ಣ ವಿಷವನ್ನು ಕುಡಿಯುವ ಸಂದರ್ಭ ಸೃಷ್ಟಿಯಾಯಿತು. ಇದರಿಂದ ತಾನೂ ಬದುಕಿದ, ತಾನು ನಂಬಿದ ಧರ್ಮವನ್ನೂ ಭೂಮಿಯ ಮೇಲೆ ಬದುಕಿಸಿದ. ಇದರ ಪ್ರತಿಪಾದನೆಯಲ್ಲಿ ಬಸವಣ್ಣ ಎದುರಿಸಿದ ಸಾಮಾಜಿಕ ಕ್ರಾಂತಿ ಎಂಥದೆಂಬುದು ತಿಳಿಯುತ್ತದೆ. ಭಕ್ತರ ಶಕ್ತಿ, ತಮ್ಮ ಉದ್ಧಾರಕ್ಕಲ್ಲ, ಸಾಮಾಜಿಕ ಸಂರಕ್ಷಣೆಗೆ ಬಳಕೆಯಾಗಬೇಕು. ಬಸವಣ್ಣ ಮಹಾಮಹಿಮನೆಂಬುದು ಅವನ ವಚನಗಳಿಂದಲೇ ತಿಳಿಯಬಹುದು. 889ನೇ ವಚನದಲ್ಲಿ ಬಸವಣ್ಣ 88 ಮಹಿಮೆ (ಪವಾಡ) ಗಳನ್ನು ತೋರಿಸಿದನೆಂದು ಹೇಳಿಕೊಂಡಿದ್ದಾನೆ.

ನಡೆ-ನುಡಿಯಲ್ಲಿ ಶುದ್ಧವಾಗಿದ್ದ ಬಸವಣ್ಣನ ವಚನಗಳಲ್ಲಿ ವಿಷಸೇವಿಸಿದ್ದು ದೃಢವಾದರೆ ಪಂಡಿತಾರಾಧ್ಯನು ಬರೆದ ಪದ್ಯಗಳಿಗೆ ಮೌಲ್ಯ ಬರುತ್ತದೆ.
66ನೇ ವಚನದಲ್ಲಿ ‘ನೀನೊಲಿದರೆ ವಿಷ ಅಮೃತವಹುದಯ್ಯ’, 769, 770ನೇ ವಚನಗಳಲ್ಲಿ “ದೇವಾ ಶಂಕಿತನಿಗೆ ಪ್ರಸಾದವು ಕಾಳಕೂಟ ವಿಷ’ ಎಂದು ಹೇಳಿದ್ದಾನೆ. ಈ ಮೂರು ವಚನಗಳಿಂದ ಬಸವಣ್ಣನಿಗೆ ಪ್ರಸಾದದ ವಿಷಯದಲ್ಲಿರುವ ವಿಶ್ವಾಸವು ವ್ಯಕ್ತವಾಗುತ್ತದೆ. ಆದರೆ ಅವನು ವಿಷ ಕುಡಿದನೆಂಬ ಅಂಶ ಮೇಲಿನ ವಚನಗಳಿಂದ ಧ್ವನಿತವಾಗುವುದಿಲ್ಲ. ಆದರೆ 731ನೇ ವಚನದಲ್ಲಿ ವಿಷ ಕುಡಿದನೆಂಬ ಬಗ್ಗೆ ನಿದರ್ಶನವಿದೆ.
ಅಟ್ಟಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ
ಕೂಡಲ ಸಂಗಮದೇವಯ್ಯಾ, ನಿಮಗೆಂದಟ್ಟಡಿಗೆಯ
ನೀಡ ಕಲಿಸಿದಾತ ಕೆಂಬಾವಿಯ ಭೋಗಯ್ಯ.
ಎಂದು ಬಸವಣ್ಣ ಹೇಳಿದನು. ಮಾಡಿದ ವಿಷದಡಿಗೆಯನ್ನು ಶಿವನಿಗೆ ನಿವೇದಿಸಿ ಅದನ್ನು ಬಸವಣ್ಣ ಪ್ರಸಾದವೆಂದು ಗ್ರಹಿಸಿದನು. ಇದನ್ನು ಕೆಂಬಾವಿ ಭೋಗಯ್ಯ ಅವನಿಗೆ ಕಲಿಸಿದನಂತೆ. ಕಾರಣ, ಬಸವನ ವಿಷಪಾನ ವೃತ್ತಾಂತವು ನಿಜ ಘಟನೆಯಾಗಿದೆ. ಪಂಡಿತಾರಾಧ್ಯನ ಮಾತೂ ನಿಜವೇ.

ಪರರೊಂದಿಗೆ ಹೋರಾಡುತ್ತ, ಬಸವ ವಿಷಸೇವಿಸಿದನೆಂದು ಪಂಡಿತರಾಧ್ಯ ತಿಳಿಸಿದ್ದಾನೆ. ಇವನ ಪದ್ಯಗಳಲ್ಲಿ “ಹೊಸ ಹೋರಾಟ” ಎಂಬ ಪದ ಬಳಕೆಯಾಗಿದೆ. ಹೊಸ ಹೋರಾಟವೆಂದರೆ ಶಿವಪ್ರಸಾದದ ಮಹತ್ವವನ್ನು ಎತ್ತಿ ಹಿಡಿಯುವ ವಿಷಯವಾಗಿ ಈವರೆಗೂ ಯಾರಿಂದಲೂ ಸಾಧ್ಯವಾಗದ ಒಂದು (ಹೊಸ) ಘಟನೆಯನ್ನು ಬಸವಣ್ಣ ಆಚರಿಸಿ ತೋರಿದ. ಈ ಘಟನೆಯ ವಿವರಗಳನ್ನು ಪಂಡಿತಾರಾಧ್ಯ ವರ್ಣಿಸುವುದಿಲ್ಲ. ಆದರೆ ಬಸವಪುರಾಣದಲ್ಲಿ ಈ ಸಂಗತಿ ಸ್ಪಷ್ಟವಾಗಿದೆ.

ಬಸವಣ್ಣನ ಬಗೆಗೆ ಪಂಡಿತಾರಾಧ್ಯ ಸೂಚಿಸಿದ ಈ ಸಂಗತಿಗಳನ್ನೇ ಮುಂದೆ ಸೋಮನಾಥ ಗ್ರಹಿಸಿದನು. ಪಂಡಿತಾರಾಧ್ಯನ ದೃಷ್ಟಿಯಲ್ಲಿ ಬಸವನಿಗೆ ಶಿವನೇ ದೇವರು. ಸೂಕ್ಷ್ಮವಾಗಿ ಗ್ರಹಿಸಿದರೆ ಬಸವಣ್ಣನ ಶೈವದ ಸ್ವರೂಪ ಎಂತಹದೆಂಬುದನ್ನು ಪಂಡಿತಾರಾಧ್ಯ ಹೇಳಿದಂತಿದೆ. 472ನೇ ಪದ್ಯದಲ್ಲಿ ಬಸವಣ್ಣ ‘ವಸುಧೆಗುಮೇಶನೇ ದೈವ’ ಎನ್ನುವನು. ಉಮ ಎಂದರೆ ಪಾರ್ವತಿ, ತಪಸ್ಸಿನಿಂದ ಪಾರ್ವತಿ ಶಿವನ ಪತ್ನಿಯಾದಳು. ಆಕೆಯ ತಾಯಿಯಾದ ಮೇನಕೆಯು ಉ=ಓ ಚಿಕ್ಕವಳೇ ! ಮಾ=ತಪಸ್ಸು ಬೇಡವೆಂದು, ಪಾರ್ವತಿಯನ್ನು ವಿರೋಧಿಸಿದಳಂತೆ. ಆದರೆ ತಾಯಿಯ ಮಾತನ್ನು ಲೆಕ್ಕಿಸದೇ ತಪಸ್ಸು ಮಾಡಿ ನಿಶ್ಚಲ ಭಕ್ತಿಯಿಂದ ಶಿವನನ್ನು ಪತಿಯನ್ನಾಗಿ ಪಡೆದಳು. ಭಕ್ತಿ ಶಕ್ತಿ ಸ್ವರೂಪವೆಂದು ವೀರಾಗಮದಲ್ಲಿದೆ. ಉಮೇಶನೆಂದರೆ ಕೇವಲ ಶಿವನಲ್ಲ, ಶಕ್ತಿಯೊಂದಿಗೆ ಇರುವವನೆಂದು ಅರ್ಥ. ಬಸವಣ್ಣನವರ 502 ವಚನದಿಂದಲೇ ಶಿವನು, ಅದರಲ್ಲಿಯೂ ಬಸವಣ್ಣನಿಗೆ ಪ್ರತ್ಯಕ್ಷವಾದ ಶಿವನು ಅರ್ಧನಾರೀಶ್ವರನೆಂಬುದು ಸ್ಪಷ್ಟ. ಆದ್ದರಿಂದ ಬಸವಣ್ಣನ ಮತ ಶಕ್ತಿವಿಶಿಷ್ಟಾದ್ವೈತವೆಂಬುದು ಸತ್ಯಸಂಗತಿ. ಬಸವಣ್ಣ 527, 530 ನೇ ವಚನಗಳಲ್ಲಿ ಶಿವಾಧಿಕ್ಯವನ್ನು ನಿರೂಪಿಸುತ್ತಾ, ಸೋಮನಾಥನು ಏಕಾಂತರಾಮಯ್ಯ ಮುಂತಾದ ನೂತನ ಪುರಾತನರ ಕಥೆಗಳನ್ನು ಹೇಳುತ್ತಾನೆ.

ಶಿವಭಕ್ತರಿಗೆ ಯಾರೂ ಸಾಟಿಯಿಲ್ಲವೆಂದು ಬಸವಣ್ಣ 334, 604, 870 ನೇ ವಚನಗಳಲ್ಲಿ ತಿಳಿಸುತ್ತಾನೆ. ಅವರೊಂದಿಗೆ ಸರಸವು ಸಲ್ಲದೆಂದು 660ನೇ ವಚನದಲ್ಲಿ ಹೇಳಿದ್ದಾನೆ.
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕಿಬಿಡಿಸುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯಾಡುವಂತೆ
ಬಸವಣ್ಣನ ಈ ವಚನದಿಂದ ಶರಣರ ಮಹತ್ವ ತಿಳಿಯುತ್ತದೆ. ಕಾರಣ ಅವನನ್ನು ‘ಶಿವಭಕ್ತರಲ್ಲಿ ಅಸಮಶ್ರೇಷ್ಠ’ ನೆಂದು ಪಂಡಿತಾರಾಧ್ಯ ಕರೆದಿದ್ದಾನೆ.
ಅಗ್ರಜರಾದ ಬ್ರಾಹ್ಮಣರೇ ಶ್ರೇಷ್ಠರೆಂಬ ಭಾವನೆಯು ಸಾಧಾರಣವಾಗಿ ನಮ್ಮವರ ನಂಬಿಕೆ. ಆದರೆ ಜನನವನ್ನು ಹಿಡಿದು ಕುಲವನ್ನು ನಿರ್ಣಯಿಸಲಾಗದು, ಗುಣದಿಂದ ಯೋಗ್ಯತೆಯನ್ನು ನಿರ್ಣಯಿಸಬೇಕು, ಭಕ್ತರೇ ಸತ್‍ಕುಲಜರೆಂದು ಬಸವಣ್ಣ ಸಾರಿ ಹೇಳಿದ್ದಾನೆ.
ಡೋಹರನೆಂಬೆನೆ ಕಕ್ಕಯ್ಯನ
ಮಾದಾರನೆಂಬೆನೇ ಚೆನ್ನಯ್ಯನ – (ವಚ. ಸಂ-344)

ಅಂತೆಯೇ 595 ನೇ ವಚನದಲ್ಲಿ “ವಿಪ್ರಶತಕೋಟಿಗಳಿದ್ದಲ್ಲಿ ಫಲವೇನು? ಭಕ್ತಶಿಖಾಮಣಿ ಎಂದುದು ವಚನ’ ಎನ್ನುತ್ತಾನೆ. ಇದಕ್ಕೆ ತಕ್ಕಂತೆ ಪಂಡಿತಾರಾಧ್ಯ ಶಿವಭಕ್ತರೇ ಕುಲಜರೆಂದು ಹೇಳುವಲ್ಲಿ ಯಾವುದೇ ದೋಷವಿಲ್ಲ. ಸೋಮನಾಥನು ಈ ವಚನಗಳನ್ನು ನೋಡಿಯೇ ಬಸವಪುರಾಣದಲ್ಲಿ ನಾಲ್ಕು, ಐದು, ಏಳನೇ ಆಶ್ವಾಸಗಳಲ್ಲಿ ಕ್ರಮವಾಗಿ ಮಡಿವಾಳ ಮಾಚಯ್ಯ, ಕಿನ್ನರಿಬೊಮ್ಮಯ್ಯ ಮತ್ತು ಶಿವನಾಗಮಯ್ಯರ ಕಥೆಗಳನ್ನು ವಿಸ್ತರಿಸಿ ಹೇಳುವನು. ಲಿಂಗಧಾರಿ ಆಗದವನು ಶಿವನಿರ್ಮಾಲ್ಯ (ದೇವರಿಗೆ ಅರ್ಪಿಸಿ ತೆಗೆದ ಹೂವು, ಪತ್ರೆ ಮುಂತಾದವು)ಗಳನ್ನು ಹೊಂದಬಾರದೆಂದು ಪಂಡಿತಾರಾಧ್ಯ ಹೇಳುತ್ತಾನೆ. ಪ್ರಸಾದ ಪವಿತ್ರವೆಂದು ಬಸವಣ್ಣ 66, 731, 769, 770ನೇ ವಚನಗಳಲ್ಲಿ ತಿಳಿಸುತ್ತಾನೆ. ಇಲ್ಲಿ ಪಂಡಿತಾರಾಧ್ಯ ‘ನಿರ್ಮಾಲ್ಯ’ ಎನ್ನುತ್ತಾನೆ. ಬಸವಣ್ಣ ‘ಪ್ರಸಾದ’ ಎನ್ನುತ್ತಾನೆ. ಸ್ಥೂಲವಾಗಿ ಈ ಎರಡೂ ಒಂದೇ. ಶಿವಾರ್ಪಿತವಾದದ್ದು ಪ್ರಸಾದ ಇಲ್ಲವೇ ನಿರ್ಮಾಲ್ಯವೆನ್ನಬಹುದು. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಶಾಸ್ತ್ರದ ದೃಷ್ಟಿಗೆ ಈ ಎರಡರಲ್ಲೂ ಭೇದವಿದೆ. ನಿರ್ಮಾಲ್ಯವನ್ನು ಪ್ರಸಾದವನ್ನಾಗಿ ಮಾರ್ಪಡಿಸಿ, ಸಂಪ್ರದಾಯದಿಂದ ಬಸವಣ್ಣನಿಗೆ ಬೋಯಿ (ವಡ್ಡ)ಗಳೊಂದಿಗೆ ಕಲಹ ಉಂಟಾಯಿತು. ಸೋಮನಾಥ ಈ ಕಥೆಯನ್ನು ಪುರಾಣದಲ್ಲಿ ಬರೆಯುತ್ತಾನೆ.

ವಿಷದ ಅಡುಗೆಯನ್ನು ಪ್ರಸಾದವೆಂದು ಸ್ವೀಕರಿಸುವ ಮಾರ್ಗವನ್ನು ಬಸವಣ್ಣನು ಕೆಂಬಾವಿ ಭೋಗಯ್ಯನಿಂದ ತಿಳಿದುಕೊಂಡನೆಂದು 731ನೆಯ ವಚನದಿಂದ ತಿಳಿಯುತ್ತದೆ. ಪಂಡಿತಾರಾಧ್ಯ 418ನೇ ಪದ್ಯ ಭೋಗಯ್ಯನ ಕುರಿತು-
“ಕೆಂಬಾವಿ ಭೋಗಿದೇವುನಿ ವೆಂಬಡಿ ಚನಿವಚ್ಚಿ ವೀಡು ಪೀಠಂಬುಲ ಲಿಂ
ಗಂಬುಲ ವಡಿ ವಿಫ್ರುಲ ಲೀಲಂ ಬೊಗಡಗ ಗನಿನಟ್ಟಿ? ವತ್ಸಲತ್ವಮುಕಲದೇ”
ಎನ್ನುತ್ತಾನೆ. ಭೋಗಯ್ಯ ಶಿವಭಕ್ತ. ಊರಿನ ಶಿವಲಿಂಗಗಳೆಲ್ಲಾ ಆತನ
ಹಿಂದೆಯೇ ಹೋದವು. ಬ್ರಾಹ್ಮಣರೆಲ್ಲರೂ ಭಕ್ತನನ್ನು ಪ್ರಾರ್ಥಿಸಲಾಗಿ ಆತ ಪ್ರಸನ್ನನಾಗಿ ಮತ್ತೆ ಊರಿಗೆ ಬಂದನು. ಆತನೊಂದಿಗೆ ಲಿಂಗಗಳೆಲ್ಲ ಬಂದು ಯಥಾಸ್ಥಾನದಲ್ಲಿ ನೆಲೆನಿಂತವು. ಕೆಂಬಾವಿ ಭೋಗಯ್ಯ ಊರನ್ನು ಏಕೆ ಬಿಟ್ಟನೆಂಬುದು ಪಂಡಿತನ ಪದ್ಯದಿಂದ ನಮಗೆ ತಿಳಿಯುವುದಿಲ್ಲ. ಆದರೆ ಪಂಡಿತಾರಾಧ್ಯ ಚರಿತ್ರೆಯ ದೀಕ್ಷಾಪ್ರಕರಣದಲ್ಲಿ ಇದಕ್ಕೆ ವಿವರಣೆಯಿದೆ.
ಶಿವನೇ ಒಂದು ದಿನ ಹೆಣವನ್ನು ಭುಜದ ಮೇಲೆ ಹಾಕಿಕೊಂಡು ಭೋಗಯ್ಯನ ಮನೆಯನ್ನು ಪ್ರವೇಶಿಸಿದನು. ಆಗ ನಡೆದ ಘಟನೆ ಹೀಗಿದೆ.

………. ಖಂಡಂಬುಗಾ ಜೇಸಿ ಪಾಕಂಬು
ಸೇಸಿಯಾಬೈಯ್ಯನು ಶಿವಮೂರ್ತಿಕಿನಿ ನಾರಗಿಂಪಂಗ ಬೆಟ್ಟನಂತ ನಯ್ಯಗ್ರ
ಹಾರಂಬು ಭೂಸುರಲಂದರು ಗುಡಿ ಗುಂಡಲು ಬಡಿಯಲುಗೊನಿ ಪಾರಿ ಪಾರಿ
ಯೊಂಡೊರು ಗಡವಂಗ ಸುದ್ವøತ್ತಿ ನೇಗಿ ಯುಟ್ಟಲು ಸೆನಕ ನಯ್ಯಾಶುಮೂರ್ತಿಯುನು
ನಟ್ಟೆ ನಿರಾಕಾರುಡಗುಡುನು ಭೋಗಿದೇವಯ್ಯ ಯೂರು ದಾದೆರಲಂಗ ನಪುಡು
ಪೋವಂಗ ನಂತ ಕೆಂಬಾವಿ ಲಿಂಗಮುಲು ಭೋಗಯ್ಯವೆನುಕನು ಭುವಿ ಡೊಲ್ಲಿಡೊಲ್ಲಿ
ವೇಗಂಬು ಪೋವುಡು ವಿಪ್ರುಲು ಜನುಲು ನರಗಿ ಯಂದಂದ ಸಾಷ್ಟಾಂಗುಲೈ ಮ್ರೊಕ್ಕಿ
ಕರಮರ್ಥಿಂಬ್ರಾರ್ಥಿಂಪ ಗರುಣ ಭೋಗಯ್ಯ ನರುದುಗಾ ನಾಲಿಂಗಪರಿಕರುಡಗುಚು
ಮರಲಿ ಕೆಂಬಾವಿಕಿ ನರುಗುದೆಂಚುಡುನು ನಾಲಿಂಗಮುಲು ಭಕ್ತಿಕಟ ಶಾಸನಮುಗ
ನೋಲಿನ ನಿಲ್ಚೆ ನೊಂಡೊಂಟ ಬೀಠಮುಲ ನಟುಗಾನ ಭಕ್ತುಡೇ ಯಾಕೃತಿನುನ್ನ
ನಿಟಲ ನೇತ್ರುಡು ಕಾಕ ನಿಂದಿಂಪ ತಗುನೆ? (ದೀ.ಪ್ರ.ಪು.-132)

ಸತ್ತ ಹೆಣವನ್ನು ಪಾಕಮಾಡಿ ಭೋಗಯ್ಯ ಚಂಡಾಲ ರೂಪಧಾರಿಯಾದ ಶಿವನಿಗೆ ಬಡಿಸಿದನು. ಪದಾರ್ಥಗಳಲ್ಲಿ ಮಲಿನವಿರುವುದು ದ್ವಂದ್ವ ಪ್ರಪಂಚದಲ್ಲಿ ಸಹಜವೇ. ಆದರೆ ಭಕ್ತಿಯಿಂದ ಮಲಿನ ದ್ರವ್ಯವನ್ನರ್ಪಿಸಿದರೂ ಅದು ಶಿವಾರ್ಪಿತದಿಂದ ನಿರ್ಮಲವಾಗುತ್ತದೆ. ಆ ನಿರ್ಮಾಲ್ಯವನ್ನು ಶಿವಭಕ್ತನಾದವನೇ ತಿಳಿಯುತ್ತಾನೆ. ಪರರಿಗೆ ಅದು ಹಾಲಾಹಲ. ಸತ್ತ ಹೆಣದ ಮಾಂಸ ವಿಷಕಾರಕ, ಅಗ್ರಾಹ್ಯ. ಆದರೆ ಭೋಗಯ್ಯ ಅದನ್ನೆ ಪ್ರಸಾದವಾಗಿ ಮಾರ್ಪಡಿಸಿದ. ಘಂಟಾಕರ್ಣನು ಬ್ರಾಹ್ಮಣನನ್ನು ಕೊಂದು ಆ ಮಾಂಸವನ್ನು ಕೃಷ್ಣನಿಗೆ ನಿವೇದಿಸಿದಂತೆ ನಾಚನಸೋಮನ ‘ಉತ್ತರ ಹರಿವಂಶ’ ಕೃತಿಯು ಹೇಳುತ್ತದೆ. ಸಿರಿಯಾಳನು ತನ್ನ ಮಗನನ್ನೇ ಬೇಯಿಸಿ ಶಿವನಿಗೆ ಬಡಿಸಿದ. ಈ ಅಭಕ್ಷ್ಯಭೋಜ್ಯವು ಶಿವಾರ್ಪಿತವಾಗಿ ನಿರ್ಮಾಲ್ಯವಾಗುತ್ತದೆ. ಈ ನಿರ್ಮಾಲ್ಯವನ್ನು ಗ್ರಹಿಸುವ ಶಕ್ತಿ ಚಂಡೀಶ್ವರನಂತಹ ಭಕ್ತರಿಗಿದೆ. ಇಂಥ ಭಕ್ತಿಯೇ ಮುಖ್ಯವಾದದ್ದು, ಅರ್ಪಿಸುವ ವಸ್ತು ಮುಖ್ಯವಲ್ಲ. ಕಾಲ-ದೇಶ-ಪರಿಸರಕ್ಕೆ ತಕ್ಕಂತೆ ಆಹಾರ ವಿಹಾರಗಳಿರುತ್ತವೆ. ಆತ್ಮ ಶಕ್ತಿಯಿರುವ ಭಕ್ತನಿಗೆ ಆಹಾರ ವಿಹಾರಗಳು ಪ್ರತಿಬಂಧಕಗಳಲ್ಲ – ಎಂಬುದನ್ನು ಬಸವಣ್ಣ ಗ್ರಹಿಸಿದ್ದಾನೆ. ಇದನ್ನೇ ಭೋಗಯ್ಯನ ಕಥೆ ತಿಳಿಸುತ್ತದೆ.

ವಿಷ ಕುಡಿಯುವ ಸಂದರ್ಭದಲ್ಲಿ ಬಸವಣ್ಣ ನಿರ್ಮಾಲ್ಯವನ್ನು ಪ್ರಸಾದವನ್ನಾಗಿ ಬದಲಿಸಿದನು. ಶೈವಾಗಮಗಳ ಪ್ರಕಾರ ಶಿವನಿರ್ಮಾಲ್ಯವು ಚಂಡೀಶ್ವರನಿಗೆ ಮಾತ್ರ ಸಲ್ಲುತ್ತದೆ. ಈ ಚಂಡೀಶ್ವರ ಯಾರು? ಈತನ ವೃತ್ತಾಂತ ಏನೆಂಬುದು ತಿಳಿಯದು. ಶಿವ ನಿರ್ಮಾಲ್ಯದಲ್ಲಿರುವ ಈ ಆಚಾರ ನಮಗೆ ತಿಳಿಯುವುದಿಲ್ಲ. ಪಂಡಿತಾರಾಧ್ಯನ 477ನೇ ಪದ್ಯದಲ್ಲಿ ಚಂಡೀಶ್ವರುನಕುದನ ಯೆಂಗಿಲಿ ಯಿಚ್ಚಿನ ಕ್ರಿಯ ಶಿವುಡಿಚ್ಚೆನೆ ಜನುಲಕುಂಗೇವಲ ವದಾನ್ಯ ಜಡುಲಕುನೆಂದುನ್” (89. ಶಿ.ತ.ಸಾ.)
ತಂದೆಯ ತಲೆ ಹೊಡೆದು ಶಿವಭಕ್ತಿ ಮೆರೆದ ಚಂಡೀಶ್ವರನಿಗೆ ಶಿವನು ತನ್ನ ಎಂಜಲು ಕೊಟ್ಟನಂತೆ. ಶಿವನ ಆ ಎಂಜಲೇ ನಿರ್ಮಾಲ್ಯವಾಯಿತು. ಶಿವನಿರ್ಮಾಲ್ಯವು ಚಂಡೀಶ್ವರನಿಗೇ ಸಲ್ಲಬೇಕೆಂದು ನಿರ್ಧಾರವಾಯಿತು. ಆಗಮೋಕ್ತವಾಗಿ ನಿರ್ಮಿಸಿದ ಶ್ರೀಶೈಲಾದಿ ಪುಣ್ಯಕ್ಷೇತ್ರದ ಶಿವಾಲಯಗಳಲ್ಲಿ ಚಂಡೀಶ್ವರನಿಗೆ ಸಮರ್ಪಿಸಿದ ನಿರ್ಮಾಲ್ಯವು, ಚಂಡೀಶ್ವರನ ವಂಶಜರಾದ ಬೋಯಿ(ವಡ್ಡ) ಗಳಿಗೆ ಹೋಗುತ್ತಿತ್ತು. ದೇವಾಲಯದಲ್ಲಿ ಬೋಯಿಗಳು ಶಿವ ಕೈಂಕರ್ಯಕ್ಕೆ ನಿಯಮಿಸಲ್ಪಟ್ಟಿದ್ದರು. ಭಕ್ತರು ಅವರಿಗೆ ದತ್ತಿದಾನ ನೀಡಿದ್ದರು. ಚಂಡೀಶ್ವರನ ನಂತರ ಬಂದ ಬೋಯಿಗಳಿಗೆ ಪ್ರಸಾದದ ಮೇಲೆ ಹಕ್ಕು ಇತ್ತಾದರೂ ಭಕ್ತಿಯಲ್ಲಿರಲಿಲ್ಲ. ಬಸವಣ್ಣ ಶಿವನಿರ್ಮಾಲ್ಯವು ಬೋಯಿಗಳಿಗೆ ಸಲ್ಲಬಾರದೆಂದು ಪ್ರತಿಭಟಿಸಿದನು.

ನಿರ್ಮಾಲ್ಯ ಸುಖವು ಲಿಂಗಧಾರಿಗಳಿಗೇ ಸಲ್ಲಬೇಕೆಂದು ಬಸವಣ್ಣ ಪಟ್ಟುಹಿಡಿದನೆಂದು ಪಂಡಿತಾರಾಧ್ಯನ 433ನೇ ಪದ್ಯದಿಂದ ತಿಳಿಯುತ್ತದೆ. ಪಂಡಿತಾರಾಧ್ಯ ‘ನಿರ್ಮಾಲ್ಯ’ವೆನ್ನುತ್ತಾನೆಯೇ ಹೊರತು ‘ಪ್ರಸಾದ’ವೆಂದಿಲ್ಲ. 221 ನೇ ಪದ್ಯದಲ್ಲಿ “ನಿರ್ಮಾಲ್ಯ” ಸ್ವೀಕರಿಸುವುದು ಪರಮ ಶಿವಾಚಾರಪಥ. 216ನೇ ಪದ್ಯದಲ್ಲಿ “ಮಲದೇಹುಲಕು ಶಿವನಿರ್ಮಾಲ್ಯಮು ನಿಷಿದ್ಧಮು”, 222ನೇ ಪದ್ಯದಲ್ಲಿ “ಶಿವನಿರ್ಮಾಲ್ಯಮು ಶಿವಶಾಸ್ತ್ರಪುರಾಣ ವಚನ ಸಿದ್ಧಾಂತ ಗತಿಗ ಶಿವಭಕ್ತುಲುಗುಡುತು” ಎಂದು ತನ್ನ ಶಿವತತ್ವಸಾರದಲ್ಲಿ ಹೇಳಿದ್ದಾನೆ. ಮೇಲಿನ ಪದ್ಯಗಳಲ್ಲಿ ಶಿವನಿರ್ಮಾಲ್ಯವು ಶಿವಭಕ್ತರು ಗ್ರಹಿಸುವುದು ಶಿವಪುರಾಣ ಪ್ರಸಿದ್ಧವೆಂದು ತಿಳಿಯುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ನಿರ್ಮಾಲ್ಯಕ್ಕೂ ಪ್ರಸಾದಕ್ಕೂ ಭೇದವಿದೆ. ಭಕ್ತ ತನ್ನಲ್ಲಿದ್ದದನ್ನು ಶಿವನಿಗೆ ನಿವೇದಿಸುತ್ತಾನೆ. ಆ ಪದಾರ್ಥದೊಳಗಣ ಮಲಿನ ಆಗ ನಶಿಸಿ ನಿರ್ಮಾಲ್ಯವಾಗುತ್ತದೆ. ಭಗವಂತನು ಭಕ್ತರಿಗೆ ನೀಡಿದ್ದು ಪ್ರಸಾದವಾಗುತ್ತದೆ. ಇಲ್ಲಿ ಮಲಿನವೆಂಬ ಮಾತೇ ಇಲ್ಲ. ವೀರಶೈವರು ಪ್ರಸಾದವೆನ್ನುತ್ತಾರೆಯೇ ಹೊರತು ನಿರ್ಮಾಲ್ಯ ಎನ್ನುವುದಿಲ್ಲ. ಪ್ರಪಂಚದ ಪ್ರತಿ ಪದಾರ್ಥವೂ ಭಗವತ್ಪ್ರಸಾದವಾದುದೇ. ಈಶಾವಾಸ್ಯೋಪನಿಷತ್‍ನ ಈ ರಹಸ್ಯವನ್ನೇ ಇವರು ಗ್ರಹಿಸಿದರು. ಇವರಲ್ಲಿ ಪ್ರಸಾದಸ್ಥಲವೆಂದೇ ಷಟ್‍ಸ್ಥಲಗಳಲ್ಲಿದೆ. ಈ ದೃಷ್ಟಿಯಿಲ್ಲದ ಅನ್ಯಶೈವರಲ್ಲಿ ನಿರ್ಮಾಲ್ಯವು ಬರುತ್ತದೆ. ಈ ಕಾರಣದಿಂದ ಪಂಡಿತಾರಾಧ್ಯನು ವೀರಶೈವನಲ್ಲ ಎಂದು ಹೇಳಬಹುದು. ಪಂಡಿತಾರಾಧ್ಯ ಹೇಳಿದಂತೆಯೇ ಶಿವ ನಿರ್ಮಾಲ್ಯವು ಅಗ್ರಾಹ್ಯ ಎಂಬುದಕ್ಕೆ ಶಿವಪುರಾಣದಲ್ಲಿಯೇ ಆಧಾರವಿದೆ.
“ಅಗ್ರಾಹ್ಯಂ ಶಿವನೈವೇದ್ಯಂ ಪತ್ರಂ ಪುಷ್ಪಫಲಂ ಜಲಂ
ಸಾಲಿಗ್ರಾಮ ಶಿಲಾ ಸಂಗಾತ್ಸರ್ವಂ ಯಾತಿ ಪವಿತ್ರತಾಂ||||4
“ಲಿಂಗೋಪರಿಚಯದ್ದ್ರವ್ಯಂ ತದಗ್ರಾಹ್ಯಂ ಮುನೀಶ್ವರಾಃ
ಸುಪವಿತ್ರಂಚ ತದ್‍ಜ್ಞೇಯಂ ಯಲ್ಲಿಂಗ ಸ್ಪರ್ಶಬಾಹ್ಯತಃ ||”||
ಶಿವ ನೈವೇದ್ಯವಾಗುವ ಪತ್ರ, ಪುಷ್ಪ, ಜಲಗಳನ್ನು ಅನ್ಯರು ಗ್ರಹಿಸಬಾರದೆಂದು ಮೇಲಿನ ಶ್ಲೋಕಾರ್ಥ. ಅಂದರೆ ಸಂಪ್ರದಾಯದಲ್ಲಿ ಶಿವ ನಿರ್ಮಾಲ್ಯಕ್ಕೆ ಅಧಿಕಾರಿ ಚಂಡೀಶ್ವರ. ಈತನಿಗೆ ಸೇರಬೇಕಾದ ತೀರ್ಥಪ್ರಸಾದ ಬೇರೆ ಯಾರೂ ಮುಟ್ಟಬಾರದು. ಈ ಆಗಮ ಧರ್ಮವನ್ನು ಇಂದು ಸ್ಮಾರ್ತಾದಿ ಭಕ್ತರು ಅನುಸರಿಸುವರು.

“ಚಂಡಾಧಿಕಾರೋ ಯತ್ರಾಸ್ತಿದ್ಭೋಕ್ತವ್ಯಂ ನಮಾನವೈಃ
ಚಂಡಾಧಿಕಾರೋ ನೋಂiÀiತ್ರ ಭೋಕ್ತವ್ಯಂ ತಚ್ಚ ಭಕ್ತಿತಃ||5
ಚಂಡೀಶ್ವರನ ಅಧಿಕಾರವಿಲ್ಲದ ನೈವೇದ್ಯವನ್ನು ಮಾತ್ರ ಭಕ್ತರೆಲ್ಲ ಪರಿಗ್ರಹಿಸಬೇಕು. ಆದರೆ ಹೂ, ಹಣ್ಣು, ಪತ್ರೆ, ಜಲ, ಗಂಧ, ಅನ್ನ ಮುಂತಾದ ನಿತ್ಯೋಚಿತ ದ್ರವ್ಯಗಳ ಮೇಲೆ ಚಂಡೀಶ್ವರನಿಗೆ ಅಧಿಕಾರವಿದೆ. ಗೋಭೂಹಿರಣ್ಯರತ್ನಾದಿಗಳ ಮೇಲೆ ಆತನಿಗೆ ಅಧಿಕಾರವಿಲ್ಲವೆಂದು ಆಗಮದಲ್ಲಿದೆ. ಆಗಮೋಕ್ತವಾಗಿ ಶಿವಾಲಯಗಳಲ್ಲಿ ಸ್ಥಾಪಿಸಲ್ಪಟ್ಟ ಧ್ವಜಸ್ತಂಭ, ವೃಷಭ ಇತ್ಯಾದಿ ಚಂಡೀಶ್ವರನ ಪರಿವಾರ ದೇವತೆಗಳಿರುತ್ತವೆ. ಇಲ್ಲಿಯ ತಂತ್ರವೇ ಬೇರೆ. ಈ ತಂತ್ರವನ್ನನುಸರಿಸಿ ಚಂಡೀಶ್ವರನಿಗೆ ಸೇರಿದ ನಿರ್ಮಾಲ್ಯವು ಬೋಯಿಗಳಿಗೆ ಸಿಗುತ್ತದೆ. ಸಾಲಿಗ್ರಾಮಾದಿ ಶಿವಲಿಂಗಗಳು ಇರುವಲ್ಲಿ ಪ್ರಸಾದವನ್ನು ಪ್ರತಿಯೊಬ್ಬ ಭಕ್ತನು ತಪ್ಪದೇ ಪರಿಗ್ರಹಿಸಬೇಕು. ಇಲ್ಲಿ ಚಂಡೀಶ್ವರನಿರುವುದಿಲ್ಲ. ಇದು ವೈದಿಕ ಸಂಪ್ರದಾಯ. ಸ್ಮಾರ್ತರು ಸಾಲಿಗ್ರಾಮಾದಿಗಳಿಗೆ ನಿವೇದನೆಯಾದ ದ್ರವ್ಯವನ್ನು ಮಹಾಪ್ರಸಾದ ಎನ್ನುತ್ತಾರೆ.
ಬಾಣಲಿಂಗೇಚಲೌಹೇಚ ಸಿದ್ಧಲಿಂಗೇ ಸ್ವಯಂಭುವಿ
ಪ್ರತಿಮಾಸುಚ ಸರ್ವಾಸುನಚಂಡೋಧಿಕೃತೋ ಭವೇತ್ ||ಶ್ಲೋ-17||
ಶಿವಪುರಾಣದಲ್ಲಿನ ಮೇಲಿನ ಪದ್ಯದ ಅರ್ಥದಲ್ಲಿ, ಸಾಲಿಗ್ರಾಮವಿದ್ದಲ್ಲಿ ಚಂಡೀಶ್ವರನು ಇಲ್ಲ. ಅಲ್ಲಿನ ತೀರ್ಥಪ್ರಸಾದವನ್ನು ಎಲ್ಲರೂ ಗ್ರಹಿಸಬಹುದು. ಶಿವದೀಕ್ಷೆ ಪಡೆದ ಎಲ್ಲಾ ಭಕ್ತರು ನೈವೇದ್ಯವನ್ನು ಸೇವಿಸಬಹುದು. ಇದಕ್ಕೆ ಶಿವಪುರಾಣವೇ ಪ್ರಮಾಣ.
ಶಿವದೀಕ್ಷಾನ್ವಿತೋ ಭಕ್ತೋ ಮಹಾಪ್ರಸಾದಂಸ ಜ್ಞಿಕಂ
ಸರ್ವೇಷಾಮಪಿಲಿಂಗಾನಾಂ ನೈವೇದ್ಯಂ ಭಕ್ಷಯೇಚ್ಛುಭಂ ||
(ವಿ.ಸಂ.ಅಧ್ಯಾ-21, ಶ್ಲೋ-11)
ಆಗಮಪುರಾಣ ಸಂಪ್ರದಾಯವನ್ನನುಸರಿಸಿ ಚಂಡೀಶ್ವರನಂತಹ ಶಿವಭಕ್ತರಿಗೆ ನಿರ್ಮಾಲ್ಯವು ದೊರೆಯಬೇಕು. ಪಾರ್ಥಿವ ಲಿಂಗಗಳು ಆಗಮಾನುಸಾರಿಯಾಗಿ ಬಂದಿವೆ. ಸಾಲಿಗ್ರಾಮಾದಿ ಶಿವಲಿಂಗಗಳು ವೈದಿಕ ಸಂಪ್ರದಾಯವನ್ನೊಳಗೊಂಡಂಥವು. ವೈದಿಕ ಸಂಪ್ರದಾಯವನ್ನು ಗ್ರಹಿಸಿ ಬಸವಣ್ಣ ಪಾರ್ಥಿವಲಿಂಗ ಪೂಜೆಯನ್ನು ತ್ಯಜಿಸಿ, ಪ್ರಸಾದವನ್ನೇ ಪವಿತ್ರವೆಂದು ಭಾವಿಸಿದ.
ಇದರಿಂದಾಗಿ ದೇವಾಲಯಗಳ ಪ್ರಾಮುಖ್ಯತೆಯು ಕಡಿಮೆಯಾಯಿತು. ಪಾರ್ಥಿವಲಿಂಗ ಪೂಜೆಯು ಸಡಿಲಗೊಂಡಿತು. ವೈದಿಕ ಸಂಪ್ರದಾಯ ಸಾಲಿಗ್ರಾಮ ಲಿಂಗಗಳ ಪೂಜೆಯು ಅಧಿಕವಾಯಿತು. ಸ್ಮಾರ್ತರು ಇಂದಿಗೂ ಸಾಲಿಗ್ರಾಮ ಪೂಜೆಮಾಡಿ, ಅಲ್ಲಿ ಮಹಾಪ್ರಸಾದವನ್ನು ಗ್ರಹಿಸುತ್ತಾರೆ. ಶಿವಾಲಯಗಳಿಗೆ ಹೋಗಿ ನಿರ್ಮಾಲ್ಯವನ್ನು ಗ್ರಹಿಸುವುದಿಲ್ಲ. ಬಸವಣ್ಣ ಇಷ್ಟಲಿಂಗಪೂಜೆ ಏರ್ಪಾಡು ಮಾಡಿ, ಆ ಲಿಂಗ ಸದಾ ದೇಹದ ಮೇಲಿರುವಂತೆ ಮಾಡಿದನು. ಸ್ಮಾರ್ತರು ಶಿವಲಿಂಗವನ್ನು ಮಡಿಯಿಂದ ಪೂಜಿಸಿ, ಅದನ್ನು ಒಂದು ಕಡೆ ಇಡುತ್ತಾರೆ. ಇಷ್ಟಲಿಂಗಾರ್ಪಿತವಾದ ದ್ರವ್ಯವನ್ನು ಬಸವಣ್ಣ ಪ್ರಸಾದವೆಂದನು. ಆದರೆ ವೈದಿಕ ಸಂಪ್ರದಾಯದಲ್ಲಿ ಪ್ರಸಾದವು ಸರ್ವರಿಗೆ ಸಲ್ಲುವ ಬದಲು, ಚಂಡೀಶ್ವರನಂತಹ ಶಿವಭಕ್ತರಿಗೇ ಸಲ್ಲಬೇಕೆಂದು ಬಸವಣ್ಣ ಶಾಸನಿಸಿದನು (ಆಜ್ಞಾಪಿಸಿದನು). ಇಷ್ಟಲಿಂಗಾರ್ಚನೆ, ಪ್ರಸಾದದ ವಿಷಯದಲ್ಲಿ ಬಸವಣ್ಣ ಸಂಪ್ರದಾಯದೊಳಗಣ ಉತ್ತಮ ಅಂಶಗಳನ್ನು ಗ್ರಹಿಸಿ, ಕಾಲಾಂತರದಲ್ಲಿ ಆಚಾರಗಳನ್ನು ಮಾರ್ಪಾಡು ಮಾಡಿದನು.

ಪಂಡಿತಾರಾಧ್ಯರ ಕಾಲಕ್ಕಾಗಲೇ ನಿರ್ಮಾಲ್ಯವು ಚಂಡೀಶ್ವರನ ವಾರಸುದಾರರಾದ ಬೋಯಿಗಳಿಗೆ ದೊರೆಯುತ್ತಿತ್ತು. ಅವರಿಗೆ ಭಕ್ತಿಗಿಂತ ಭುಕ್ತಿಯ ಮೇಲೆ ಆಸಕ್ತಿಯಿತ್ತು. ಆಗ ಬಸವಣ್ಣ ಲಿಂಗಧಾರಿಯಾದವನೇ ಭಕ್ತ. ಅವನಿಗೆ ನಿರ್ಮಾಲ್ಯವು ಸೇರತಕ್ಕದೆಂದು ಪಟ್ಟು ಹಿಡಿದನೆಂಬುದು ‘ಶಿವತತ್ವಸಾರ’ದ 433ನೇ ಪದ್ಯವು ತಿಳಿಯಪಡಿಸುತ್ತದೆ. ಬಸವಣ್ಣನು ವಿಷ ಕುಡಿಯಲು ಇದೊಂದು ಕಾರಣವಾಯಿತು. ಸೋಮನಾಥ ಬಸವ ಪುರಾಣದ 7ನೇ ಆಶ್ವಾಸದಲ್ಲಿ ಬಸವಣ್ಣ ವಿಷವನ್ನು ಕುಡಿದ ಬಗ್ಗೆ ಬರೆಯುತ್ತಾನೆ. ಪ್ರಸಾದದ ಸಂಗತಿಯಲ್ಲಿ ಆತನಿಗೆ ಕಠೋರ ನಿಯಮಗಳಿದ್ದವು. ಬಸವಣ್ಣ ಪೂರ್ವಾಶ್ರಮದಲ್ಲಿ ಬ್ರಾಹ್ಮಣ. ಬೌದ್ಧಮತದ ಪ್ರಭಾವದಿಂದ ಬ್ರಾಹ್ಮಣರಲ್ಲಿ ಕೊಂಚ ಬದಲಾವಣೆ ಬಂದಿತ್ತು. ಆದರೆ ಯಜ್ಞ – ಯಾಗಾದಿಗಳಲ್ಲಿ ಗೋಹತ್ಯೆಯು ಸಂಪೂರ್ಣ ತೊಲಗಿರಲಿಲ್ಲ. ಬಸವಣ್ಣ ಈ ಯಾಗಾದಿಗಳನ್ನು ತೀವ್ರವಾಗಿ ಖಂಡಿಸಿದನು. ಬಸವಣ್ಣನ ಪ್ರಭಾವದಿಂದ ವೀರಶೈವರು ಮಾಂಸಹಾರ ವರ್ಜಿತರಾದರು. ಆಹಾರ, ವಿಹಾರದಲ್ಲಿ ಸಮಾನವಾದ ಕಟ್ಟಳೆಗಳಿದ್ದಾಗಲೇ ಸಂಬಂಧ ಬಾಂಧವ್ಯಗಳೂ ಸವಿಯಾಗಿರುತ್ತವೆ. ಕಾರಣವಾಗಿ ಬಸವಣ್ಣ ಸಾತ್ವಿಕ ಆಹಾರ ಭಕ್ತರಿಗೆ ಅಗತ್ಯ ಎಂದನು. ಶಿವಾರ್ಪಿತವಾಗದ ಯಾವೊಂದು ವಸ್ತುವನ್ನು ಭುಜಿಸಲಾರೆನೆಂದು ಪ್ರತಿಜ್ಞೆ ಮಾಡಿದ್ದನು. 783ನೇ ವಚನದಲ್ಲಿ –
ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದೆಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಲಿಂಗಾರ್ಪಿತವಲ್ಲದೆ ಉದಕವ ಮುಕ್ಕಳಿಸಿದೆನಾದೆಡೆ
ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯ
ಎನ್ನುತ್ತಾನೆ. ತನ್ನ ಈ ವ್ರತ ಸಾಗದಿದ್ದರೆ ‘ತಲೆದಂಡ ಕೊಡುವೆ ಸಂಗಯ್ಯಾ’ ಎನ್ನುವನು. ಪ್ರಸಾದದ ಪರ ಇಂತಹ ಕಠೋರ ನಿಯಮ ಇದ್ದವನಾದ್ದರಿಂದಲೇ ಬಸವಣ್ಣ ಬೋಯಿಗಳನ್ನು ಎದುರಿಸಿದನು. ವಿಷವನ್ನು ಕುಡಿದನು. ಕುಡಿದು ಬದುಕುವುದಲ್ಲದೇ ತನ್ನ ಧರ್ಮವನ್ನು (ನೀತಿಯನ್ನು) ಭೂಮಿ ಮೇಲೆ ಶಾಶ್ವತಗೊಳಿಸಿದನು.

ಕಲ್ಯಾಣದಲ್ಲಿ ಬಸವಣ್ಣನ ಭಕ್ತಿಯ ಪ್ರಭಾವದಿಂದ ಅನ್ಯ ಮತಗಳು ಅಸ್ತಂಗತವಾಗುವದಲ್ಲದೆ, ಶೈವದೊಳಗಿನ ಪ್ರಭೇದಗಳೂ ಕೂಡ ಕ್ರಮೇಣ ತೊಲಗಿದವು. ಚನ್ನಬಸವಣ್ಣನ ಈ ವಚನವೇ ಇದಕ್ಕೆ ಸಾಕ್ಷಿ.
“ಶೈವ ಸೈವರಗಾದ, ಪಾಶುಪತಿ ಪಥವನರಿಯ,
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ,
ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ||6 (ವ.ಸ.-545)
ಎಂಬುದಾಗಿ ಅನ್ಯಶೈವಗಳು ಹೇಗೆ ಕ್ಷೀಣಿಸಿದವೆಂಬುದನ್ನು ಹೇಳಿದ್ದಾನೆ. ಬಸವಣ್ಣನ ಪ್ರಭಾವದಿಂದ ಶೈವಾಗಮಗಳು ನೂತನ ಮಾರ್ಗವನ್ನು ತುಳಿದವು||7 ಲಕ್ಷ್ಮೇಶ್ವರದ ಶಾಸನವೊಂದರಲ್ಲಿ ಬರುವ ಕಾಲಾಮುಖ ವಿನೂತನ ಶೈವಾಗಮ ತಾತ್ಪರ್ಯಜ್ಞರಾಗಿ” ಎಂಬುದು ಕಾಳಾಮುಖರು ವೀರಶೈವರಾದುದನ್ನು ಸೂಚಿಸುತ್ತದೆ. ಬದಲಾವಣೆಗೆ ಕಾರಣವಾಗಿದ್ದ ಬಸವಣ್ಣನ ಪ್ರೇರಣೆಯನ್ನು ಸೋಮನಾಥನು ಬಸವಪುರಾಣದಲ್ಲಿ ಸೂಚಿಸಿದ್ದಾನೆ.
“ದೇವಲಕುಲು ಮಂತ್ರದೀಕ್ಷಾನ್ವಿತುಲನು
ಶೈವ ಪಾಶುಪತಾದಿ ಶಾಸನಧರುಲು
ವಾರಿವಾರಿಕ ಲಿಂಗವಂತುಲ ಚೂಚಿ
ವಾರಿವಾರಿಕ ಲಿಂಗವಂತುಲೈ ಕೂಡಿ” (ಬ.ಪು.-ಆ-8, ಪುಟ-539)
ಬಸವಣ್ಣನಿಗಿಂತ ಮುಂಚೆ ಇದ್ದವರು ಪಾಶುಪತ ಮತ್ತು ಶೈವರು. ಅವರೀಗ ಲಿಂಗಧಾರಿಗಳಾಗಿ ಪ್ರಸಾದೋಪಭೋಗಿಗಳಾದರು.

ಈ ಬದಲಾವಣೆಗೆ ಬಸವಣ್ಣನ ಪ್ರೇರಣೆಯೇ ಕಾರಣ. ಇಲ್ಲಿ ಶೈವರೆಂದರೆ ನಾಯನ್ಮಾರರ ಭಕ್ತಿಪಂಥಕ್ಕೆ ಸೇರಿದ ಶುದ್ಧಶೈವರು. ಕಾಳಾಮುಖ, ಪಾಶುಪತ, ಕಾಪಾಲಿಕ ಇವರು ಲಿಂಗಧಾರಿಗಳು ಅಲ್ಲವೆಂದು ವೇಟೂರಿ ಪ್ರಭಾಕರಶಾಸ್ತ್ರಿಯವರು ತಮ್ಮ ಬಸವಪುರಾಣ ಪೀಠಿಕೆಯಲ್ಲಿ ಬರೆದಿದ್ದಾರೆ. ಬಸವನಿಗಿಂತ ಮುಂಚೆ ಶಿವಾಲಯಗಳಿದ್ದ ಪೂಜಾರಿಗಳು ಲಿಂಗಧಾರಿಗಳಲ್ಲ. ದೇವಕುಲದವರು ಎಂದರೆ ಶಿವನನ್ನು ಪೂಜಿಸುವ ಪೂಜಾರಿಗಳು. ಈ ಪೂಜಾರಿಗಳಿಗೆ ಕೂಡ ಬೋಯಿಗಳಂತೆ ಶಿವನ ಚಂಡೀಶ್ವರನಿಗೆ ನಿವೇದಿತವಾದ ನಿರ್ಮಾಲ್ಯವು ದೊರೆಯುತ್ತಿತ್ತು. ಜೀವನೋಪಾಯಕ್ಕೆ ಶಿವನನ್ನು ಆರಾಧಿಸುವ ದೇವಕುಲರಿಗೆ ಆಗಮಗಳಲ್ಲಿಯೇ ಮನ್ನಣೆಯಿರಲಿಲ್ಲ. ಬಸವಣ್ಣ ನಿರ್ಮಾಲ್ಯದೊಳಗಿನ ಭಕ್ತಿಯನ್ನು ಗ್ರಹಿಸಿ, ಕೂಳಿಗಾಗಿ ಬಿದ್ದಿದ್ದ ದೇವಕುಲರನ್ನು ಬದಲಾಯಿಸಿದನು. ಅವರನ್ನು ಭಕ್ತರನ್ನಾಗಿಸಿ, ಲಿಂಗಧಾರಣೆ ಮಾಡಲಾಯಿತು. ಇದರಿಂದ ಅವರಿಗೆ ನಿರ್ಮಾಲ್ಯವು ಪ್ರಸಾದವಾಯಿತು. ಆದರೂ ಬಸವಣ್ಣನ ಪ್ರಭಾವಕ್ಕೆ ಬೋಯಿಗಳು ಬಗ್ಗಲಿಲ್ಲ. ಅವರು ಲಿಂಗಧಾರಿಗಳಾಗಲಿಲ್ಲ. ಅವರಿಗೆ ಕೆಲವು ಕಾಲದಿಂದ ಬರುತ್ತಿದ್ದ ನಿರ್ಮಾಲ್ಯ ದಕ್ಕಲಿಲ್ಲ. ಅಂದರೆ ಹೊಸದಾಗಿ ಲಿಂಗಧಾರಿಗಳಾದ ದೇವಕುಲರು ಬೋಯಿಗಳಿಗೆ ಶಿವನಿರ್ಮಾಲ್ಯ ಕೊಡಲಿಲ್ಲ. ಇದರಿಂದ ಅವರೊಂದಿಗೆ ಕಲಹ ಉಂಟಾಯಿತು. ಅಂದಿನ ರಾಜನಾದ ಬಿಜ್ಜಳನ ಹತ್ತಿರ ಹೋಗಿ ಬೋಯಿಗಳು ವ್ಯಾಜ್ಯಹೂಡಿದರು. ತಮಗೆ ನ್ಯಾಯ ಒದಗಿಸಬೇಕೆಂದು ಬಿಜ್ಜಳನನ್ನು ಪ್ರಾರ್ಥಿಸಿದರು.

“ಬಸವಯ್ಯ ತೋಯಂಪು ಭಕ್ತುಲಜೂಚಿ ವಸುಧದಾರುನು ಲಿಂಗವಂತುಲ ಮನುಚು ದೊಡಗಿ ಪ್ರಸಾದಂಬು ಗುಡುಚುಚುನ್ನಾರು ನಡರಗ ವೂಕಿಂಚುಕೈನನು ನಿಡರು”
(ಬ.ಪು.ಆಶ್ವಾ-7, ಪುಟ 541)
ಎಂದರು. ಬಸವನಿಂದಲೇ ಎಲ್ಲರು ಲಿಂಗಧಾರಿಗಳಾದರು. ನಮಗೆ ಪ್ರಸಾದ ಕೊಡುತ್ತಿಲ್ಲ. ನಾವು ಚಂಡೀಶ್ವರನ ವಾರಸುದಾರರು. ಈ ಹೊಸಮತದವರು ನಮ್ಮ ಬಾಯಿಗೆ ಮಣ್ಣು ಹಾಕಿದರು. ಎನ್ನಲು ಬಿಜ್ಜಳನು ಆಗ್ರಹಿಸಿ ಬಸವಣ್ಣನನ್ನು ಕರೆಯಿಸಿ ವಿಚಾರಿಸಿದನು. ಬಸವಣ್ಣ ‘ಚಂಡೀಶ್ವರನಿಗೆ ಭವನು ಕೊಟ್ಟದ್ದು ನಿಮಗೆ ಗೊತ್ತಿಲ್ಲ. ಪ್ರಾಣಲಿಂಗಗಳಲ್ಲಿ, ಬಾಣಲಿಂಗಗಳಲ್ಲಿ, ಪುಷ್ಯರಾಗಾದಿ ಲಿಂಗಗಳಲ್ಲಿಯೂ ಇಲ್ಲ. ಪ್ರಸಾದವು ಅಂಗಜಹರನಿಗೆ ಆಗಮೋಕ್ತವಾಗುತ್ತದೆ.” ಇಲ್ಲಿ ಸೋಮನಾಥನು ಶಿವಪುರಾಣದ ವಿದ್ಯೇಶ್ವರ ಸಂಹಿತೆಯ 17ನೇ ಶ್ಲೋಕವನ್ನೇ ಆಂಧ್ರೀಕರಿಸಿದ್ದಾನೆ. ಶಿವಾಲಯಗಳಲ್ಲಿರುವ ದೇವಕುಲರು ಈಗ ಲಿಂಗಧಾರಿಗಳಾದರು. ಬಾಣಲಿಂಗದಲ್ಲಿ ಚಂಡೀಶ್ವರನಿಗೆ ಈಗ ಸ್ಥಾನವಿಲ್ಲ. ಇಷ್ಟಲಿಂಗಧಾರಿಗಳಾದ ದೇವಕುಲರು ಶಿವಪ್ರಸಾದವನ್ನು ಈಗ ಮೊದಲಿನಂತೆ ಬೋಯಿಗಳಿಗೆ ಕೊಡುವ ಅಗತ್ಯವಿಲ್ಲ ಎಂದು ಬಸವಣ್ಣ ವಾದಿಸಿದನು. ಆಗ ಬೋಯಿಗಳು –
“ವಾರಣಾಸಿ ಗಯ ಕೇದಾರಂಬುನಂದು ಸೌರಾಷ್ಟ್ರ ಮುನನು ದಕ್ಷಾರಾಮುನನು
ಶ್ರೀಗಿರಿಯಂದುನು ಸೇತುಪುರೋಗಮಾಗಮ ಸ್ಥಾನಂಬುಲಂದೆಲ್ಲ ಮಾಕು
ಚೆಲ್ಲಗ ಮೀರೆಟ್ಲು ಚೆಲ್ಲಗನೀರು ಬಲ್ಲಿದಮೈನ ಮಾ ಪ್ರಾಣಂಬುಲೈನ
ವಿಡುತುಮುಗಾಕ ಮಾಮಡಿಕೂಟಿವೃತ್ತಿ ವಿಡುತುಮೇ ಯಿದಿಯೇಮಿ ವಿಪರೀತವೃತ್ತಿ”
(ಬ.ಪು.ಆ.-7, ಪುಟ-543)
ಎಂದು ರಾಜನೊಂದಿಗೆ ಅಳಲು ತೋಡಿಕೊಂಡರು. ಆಗಮೋಕ್ತವಾಗಿ ನಿಯಮಿಸಿದ ಶಿವಾಲಯದಲ್ಲಿ ಶಿವನಿರ್ಮಾಲ್ಯವು ಚಂಡೀಶ್ವರನ ವಾರಸುದಾರರಾದ ಬೋಯಿಗಳಿಗೆ ಸಿಗುತ್ತಿತ್ತು. ಇದು ಅವರ ‘ಕೂಳುವೃತ್ತಿ’ (ತೆಲುಗು-ಕೂಟಿವೃತ್ತಿ), (ಚಂಡೀಶ್ವರ ತನ್ನ ತಂದೆಯ ತಲೆಯನ್ನೇ ಹೊಡೆದು ಶಿವಭಕ್ತಿ ಮೆರೆದ. ಅವನ ಭಕ್ತಿಗೆ ಮೆಚ್ಚಿ ಶಿವ ತನಗೆ ನಿವೇದನೆಯಾದ ಪೂಜಾ ದ್ರವ್ಯಗಳು ಆತನಿಗೆ ಸೇರಬೇಕೆಂದು ಕಟ್ಟಾಜ್ಞೆ ಮಾಡಿದ. ಅಂದಿನಿಂದ ಆತನ ವಾರಸುದಾರರಾದ ಬೋಯಿಗಳಿಗೆ ಸಿಗುತ್ತಿತ್ತು). ಚಂಡೀಶ್ವರನ ಭಕ್ತಿಯನ್ನು ಇಂದಿಗೂ ಭಕ್ತರು ಕೊಂಡಾಡುತ್ತಾರೆ.

ದೇವಾಲಯಕ್ಕೆ ಹೋದ ಭಕ್ತರು –
“ಶಿವ ನಿರ್ಮಾಲ್ಯಕಾಧಾರ ಶಿವಾಜ್ಞಾ ಪರಿಪಾಲಕ
ಶಿವ ಸೇವಾಫಲಂ ದೇಹಿ ಚಂಡೀಶ್ವರ ನಮೋಸ್ತುತೇ’
ಎಂದು ಶಿವಧ್ಯಾನಾಸಕ್ತರಾಗಿ ಚಂಡೀಶ್ವರನನ್ನೂ ಸ್ತುತಿಸುತ್ತಾ, ತಮ್ಮ ಭಕ್ತಿಯನ್ನು ಶಿವನಿಗೆ ಮುಟ್ಟಿಸಬೇಕೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯವು ಇಂದಿಗೂ ಆಚರಣೆಯಲ್ಲಿದೆ. ಆದರೆ ಚಂಡೀಶ್ವರನ ವಾರಸುದಾರರಾದ ಬೋಯಿಗಳು ಇಂದು ಭಕ್ತಿಯಿಲ್ಲದೇ ಆಸೆಗಾಗಿ ಇಹರೆಂಬುದನ್ನು ಬಸವಣ್ಣ 427 ನೇ ವಚನದಲ್ಲಿ –
ಲಿಂಗಕ್ಕೆ ಹಿಡಿದ ಬೋನವ ಸಿಂಬಕ ತಿಂಬಂತೆ
ಸಮಯೋಚಿತವನರಿಯದೆ ಉದರವ ಹೊರೆವವರ
ನರಕದಲ್ಲಿಕ್ಕದೆ ಮಾಣ್ಬನೆ ಕೂಡಲಸಂಗಮದೇವಾ.
ಎಂದು ಹೇಳಿದ್ದಾನೆ. ಇದು ಬೋಯಿಗಳನ್ನುದ್ದೇಶಿಸಿ ಹೇಳಿದಂತಿದೆ. ಸಮಯ ಸಂದರ್ಭವನ್ನು ಅರಿಯದೆ ಅಂದರೆ ಕಾಲಕ್ಕೆ ತಕ್ಕಂತೆ ಬದಲಾಗದೆ ಬೋಯಿಗಳು ಮೂಢಾಚಾರದಲ್ಲಿಯೇ ಇದ್ದಾರೆಂಬುದು ಅರ್ಥ. ಬಸವಣ್ಣನ ದೃಷ್ಟಿಯಲ್ಲಿ ಚಂಡೀಶ್ವರನಂತಹ ಭಕ್ತರಿಗೆ ಪ್ರಸಾದವು ದೊರೆಯಬೇಕು. ಈ ಆಗಮ ಸಂಪ್ರದಾಯವನ್ನು ಅವನು ವಿರೋಧಿಸಲಿಲ್ಲ. ಆದರೆ ಕಾಲಾನುಸಾರಿ ಬದಲಾಗದ ಆತನ ವಾರಸುದಾರರನ್ನು ಬಸವಣ್ಣ ವಿರೋಧಿಸಿದನು. ಈ ರೀತಿ ದೇವಕುಲರೂ ಆಗಮ ಸಂಪ್ರದಾಯಬದ್ಧ ಪೂಜಾರಿಗಳಲ್ಲ. ಲಿಂಗಧಾರಿಗಳು, ಪ್ರಾಣಲಿಂಗದ ಸಾಂಗತ್ಯವನ್ನು ಹೊಂದಿದವರು. ಕಾರಣ ಅವರಿಗೆ ಸಲ್ಲುವ ಪ್ರಸಾದ ನಿಮಗೆ ದಕ್ಕುವದಿಲ್ಲ ಎಂದು ಬಸವಣ್ಣ ಹೇಳಿದನು. ಶ್ರೀಶೈಲಾದಿ ಶಿವಕ್ಷೇತ್ರಗಳು ಆಗಮಸಂಪ್ರದಾಯಕ್ಕೆ ಸೇರಿದಂಥವು. ಅಲ್ಲಿ ಚಂಡೀಶ್ವರನಿಗೆ ಸ್ಥಾನವಿದೆ. ನಿಮಗೆ ಆ ದೇವಾಲಯಗಳಲ್ಲಿ ‘ಮಡಿಕೂಳು ವೃತ್ತಿ’ ಇದೆ. ಆದರೆ ಮಾಹೇಶ್ವರ (ಲಿಂಗವಂತ)ರ ಮನೆಗಳಲ್ಲಿ ನಿಮಗೆ ಪ್ರಸಾದ ಯಾವಾಗಲೂ ಇಲ್ಲ. ಈಗ ನೀವು ದೇವಕುಲರಲ್ಲ, ಮಾಹೇಶ್ವರರೆಂದು –
ಆರಯಮುನು ಶೈವುಲೈನನೇಮಿ? ವೀರಮಾಹೇಶ್ವರಾಚಾರುಲೈರೇನಿ
ಗನುಕಸಿಂ ಬ್ರಾಣಲಿಂಗಪ್ರಸಾದಂಬು ಗೊನನಿತ್ತುರೇ ಮೀಕು ಕುಟಿಲಾತ್ಮುಲಾರ!
(ಬ.ಪು.-ಪುಟ-544)
ಎಂದು ಹೇಳಿದನು.

ಇದರಿಂದ ಕಲ್ಯಾಣದಲ್ಲಿ ಒಂದು ಕಾಲದಲ್ಲಿ ಶೈವರಾಗಿದ್ದವರು, ಮಾಹೇಶ್ವರರಾದರೆಂದು ತಿಳಿಯುತ್ತದೆ. ಈ ಮಾಹೇಶ್ವರರ ಮನೆಗಳಲ್ಲಿ ಬೋಯಿಗಳಿಗೆ ಪ್ರಸಾದವಿಲ್ಲ ಎಂದನು. ಇದು ಆಗಮ ವೈದಿಕ ಸಂಪ್ರದಾಯ ಬದ್ಧವೆಂದು ಬಸವಣ್ಣ ಹೇಳಿದನು. ಬಸವಣ್ಣನ ಮತದಲ್ಲಿ ಮಾಹೇಶ್ವರರಿಂದ ಶಿವಾರ್ಪಿತವಾದದ್ದು ಪ್ರಸಾದ. ಇಲ್ಲಿಯವರೆಗೆ ಕೀಳಾಗಿ ಭಾವಿಸಲ್ಪಟ್ಟಿದ್ದು ನಿರ್ಮಾಲ್ಯವಲ್ಲ, ನಿರ್ಮಾಲ್ಯವನ್ನು ಕುರಿತು –
ಅಥಯೇದಿಕ್ಷಿತಾ ಏವ ಪರಾರ್ಥಯಜನೇರತಾಃ
ತೇಹಿದೇವಲಕಾಃ ಪ್ರೋಕ್ತಾಃ ಸರ್ವಕರ್ಮವಿಗರ್ವಿತಾಃ|| || (ಶ್ಲೋಕ 16)-8
ಶಿವಾಗಾರಾದನ್ಯದೇಶಾ ತೇಷಾಂ ಸ್ಪರ್ಶೋಪದೋಷದಃ
ಶಿವಾರ್ಚಕತ್ವಾದೇ ತೇಷಾಂ ಶೈವತ್ವಂತು ಪರಿಸ್ಫುಟಂ || (ಶ್ಲೋ-17)
ಶಿವ ಕೈಂಕರ್ಯ ವಿಷಯಶ್ರದ್ಧಾ ಲೋಪಾದಿ ದೋಷತಃ
ತನ್ಮಲಾ ಇತ್ಯದೀರ್ಯಂತೇ ಸರ್ವಶಾಸ್ತ್ರೇಷು ಗೀಷ್ಪತೇ || (ಶ್ಲೋ-18)
ದೀಕ್ಷೆಯೆಲ್ಲವೂ, ಅನ್ಯರಿಗಾಗಿ ಶಿವನನ್ನು ಪೂಜಿಸುವುದಕ್ಕಾಗಿ ಇವರನ್ನು ದೇವಕುಲರೆನ್ನುವರು. ಇವರು ಸರ್ವಕರ್ಮ ವಿಗರ್ವಿತರು. ಶಿವದೀಕ್ಷೆಯಿಲ್ಲದೆ ಶಿವದ್ರವ್ಯವವನ್ನೂ ಭಕ್ಷಿಸುವುದರಿಂದ, ಶಿವಕೈಂಕರ್ಯದಿಂದ ಶ್ರದ್ಧೆಯಿಲ್ಲದವರಾದುದರಿಂದ “ತನ್ಮಲಾ” ಎಂದು ಶಾಸ್ತ್ರದಲ್ಲಿ ನಿಂದನೆಗೊಳಗಾದರು. ಇವರನ್ನೇ “ತಂಬಳರು” ಎನ್ನಬಹುದು. ಶಿವಾಲಯಗಳಲ್ಲಿ ಮಾತ್ರ ಇವರು ಸರ್ವಾರ್ಹರು ಉಳಿದಕಡೆ ಇವರ ಸ್ಪರ್ಶವೂ ದೋಷವಾಗುತ್ತದೆ.

ಶಿವಪೂಜೆಯನ್ನೇ ಮಡಿಕೂಳವೃತ್ತಿಯನ್ನಾಗಿ ಹೊಂದಿದವರು ದೇವಕುಲರು, ದೀಕ್ಷಿತನು ಕೂಡ ಶಿವಪೂಜೆ ಮಾಡುತ್ತಾನೆ. ಆದರೆ ಅವನು ಮಲಾಪಹಾದಿ, ದೀಕ್ಷೆ ಪಡೆದವನಾದ್ದರಿಂದ ಅವನು ದೇವಕುಲನು ಅಲ್ಲ, ನಿಂದಿತನು ಅಲ್ಲ. ಚಂದ್ರಜ್ಞಾನ ಆಗಮದ ಶ್ಲೋಕಭಾವದಂತೆಯೇ ಪಂಡಿತಾರಾಧ್ಯನು ಶಿವತತ್ವಸಾರದ 226 ನೇ ಪದ್ಯದಲ್ಲಿ ಬರೆದಿದ್ದಾನೆ. ಈ ದೇವಕುಲರು ಶಿವನಿರ್ಮಾಲ್ಯಕ್ಕಾಗಿ ಆಲಯದಲ್ಲಿ ನೆಲೆಯೂರಿದ ಬೋಯಿಗಳಿಂದ ನಿಂದಿತರಾದರು. ಚಂಡೀಶ್ವರನಂತಹ ಭಕ್ತರಿಗೇ ಶಿವನಿರ್ಮಾಲ್ಯ ಸೇರತಕ್ಕದೆಂಬ ಆಗಮ ಸಂಪ್ರದಾಯದ ಪರಮಾರ್ಥವೀಗ ವಿಸ್ತರಿಸಲ್ಪಟ್ಟಿತು. ಪವಿತ್ರವಾದ ನಿರ್ಮಾಲ್ಯ ಸೇರತಕ್ಕದೆಂಬ ಆಗಮ ಸಂಪ್ರದಾಯದ ಪರಮಾರ್ಥವೀಗ ವಿಸ್ತರಿಸಲ್ಪಟ್ಟಿತು. ಪವಿತ್ರವಾದ ನಿರ್ಮಾಲ್ಯ ಸ್ವೀಕರಣದಲ್ಲಿ ಬೋಯಿಗಳು, ದೇವಕುಲರು ಕೈಹಾಕಿದ್ದರಿಂದ ನಿರ್ಮಾಲ್ಯ ಸ್ವೀಕಾರದ ನಿಯಮ ಉಲ್ಲಂಘನೆ ಆಯಿತು. ಬಸವಣ್ಣ ಈ ನೈಚ್ಯಭಾವನೆಯನ್ನು ತೊಲಗಿಸಿ ನಿರ್ಮಾಲ್ಯವನ್ನು ಪ್ರಸಾದವಾಗಿ ಮಾರ್ಪಾಡು ಮಾಡಿದನು. ಈ ಬದಲಾವಣೆಯಿಂದ ದೇವಕುಲರು ಮಾಹೇಶ್ವರರಾದರು. ಬೋಯಿಗಳು ಬದಲಾಗದೇ ಭಕ್ತರಾಗದೇ ನಿರ್ಮಾಲ್ಯದಿಂದ ದೂರವಾದರು.
ಷಡ್ರಸೋಪೇತವಾದ ಆಹಾರವೇ ಶಿವನಿಗೆ ಪ್ರಸಾದವಲ್ಲ. ವಿಷವೂ ಕೂಡ ಪ್ರಸಾದ. ಮಲಭರಿತ ಪದಾರ್ಥ ನೈವೇದ್ಯವಾದರೆ ಅದು ನಿರ್ಮಲವಾಗುತ್ತದೆ. ಈ ನಿರ್ಮಲವಾದ ಪ್ರಸಾದವೇ ನಿರ್ಮಾಲ್ಯವಾಗಿ ಭಕ್ತರಿಗೆ ಸ್ವೀಕಾರ ಯೋಗ್ಯವಾಗುತ್ತದೆ. ಹೀಗೆ ಮಾತಿಗೆ ಮಾತು ಬೆಳೆದು, ನಮ್ಮ ಬಸವಣ್ಣ ಸಂಗಮದೇವನಿಗೆ ವಿಷವನ್ನು ನೈವೇದ್ಯ ಮಾಡಿದ. ನೀವು ಆ ಪ್ರಸಾದವನ್ನು ಸ್ವೀಕರಿಸಬಲ್ಲಿರಾದರೆ ಮಾಹೇಶ್ವರರ ಮನೆಯಲ್ಲಿಯೂ ಪ್ರಸಾದ ದೊರೆಯುತ್ತದೆ. ಆಗಲೇ ನಿಜವಾದ ಚಂಡೀಶ್ವರನ ಭಕ್ತರಾಗುವಿರಿ. ನಿಮಗೆ ಆ ಶಕ್ತಿ ಇಲ್ಲದ್ದರಿಂದ ಹೋಗಿರಿ – ಎಂದು ಬಸವಣ್ಣ ಬೋಯಿಗಳೊಂದಿಗೆ –
“ಸಂಗಮೇಶ್ವರುನ
ಕರ್ಪಿಂತು ಕಾಲಕೂಟಾದುಲು ನೇಡು ರಂಡ ಪ್ರಸಾದಂಬು ಗೊಂಡ
ಯಿಚ್ಚೆದಮು
ಪೊಂಡ ಯಿಂತಕು ಜಾಲಕುಂಡಿ” – (ಬ.ಪು.-ಆಶ್ವಾ-7, ಪುಟ-544)
ಎಂದು ಹೇಳುತ್ತಾನೆ. ಇದರಿಂದ ಬೋಯಿಗಳು ನಮ್ಮೆಲ್ಲರನ್ನು ಒಂದೆಡೆ ಕೊಲ್ಲಲು ಬಸವಣ್ಣ ಈ ಹುನ್ನಾರ ನಡೆಸಿದ್ದಾನೆಂದು ‘ಮೊದಲು ವಿಷವನ್ನು ನೀವು ಕುಡಿಯಿರಿ, ಸಾಯದಿದ್ದರೆ ನಾವು ಕುಡಿಯುತ್ತೇವೆ’ ಎಂದರು. ಬೋಯಿಗಳ ಈ ಮಾತನ್ನು ಬಸವಣ್ಣ ಅಂಗೀಕರಿಸಿ ವಿಷವನ್ನು ಸಂಗಮೇಶ್ವರನಿಗೆ ನೈವೇದ್ಯ ಮಾಡಿ, ತಮ್ಮ ಭಕ್ತರೊಂದಿಗೆ ಈಶ್ವರಾರ್ಪಿತವಾದ ವಿಷವನ್ನು ಪ್ರಸಾದವನ್ನಾಗಿ ಸ್ವೀಕರಿಸುವಾಗ ಬಸವಣ್ಣನ ಮಾತುಗಳು ಹೀಗಿವೆ-
“ಮಾ ಯೀಶು ಭಕ್ತುಲ ಮಹಿಮಲನ್ನಿಯುನು ಬೋಯಲಾರ!
ಮಿನುಂಡು ಬುಡಿಬುಳ್ಳುಮಾನಿ
ಕಂಟಿಮಿ ಕಾನಮು ವಿಂಟಿಮಿ ನುಂಟಿಮಿ ಲೇಮನುನುಕ್ತುಲು ವಲದು
ಅರಯಂಗ! ನಖಿಲ ಲೋಕಮುಲನು ಪರಮೇಶು ಭಕ್ತುಲು ಪರಮಪಾವನುಲು
ನದ್ವಿತೀಯುಂಡು ಪಿನಾಕಿಯೇ ಕರ್ತ ಸದ್ವಿಧಿ ನೇಮೆ ಪ್ರಸಾದ ಯೋಗ್ಯಲಮು
ನಿಟ್ಟದಿ ಗಾದನು ನಟ್ಟಿ ದ್ರೋಹುಲಕು ಗಟ್ಟಿತಿ ನೆಛಿಗೊಲ್ತು ಗಾಲ ಕೂಟಾಗ್ನಿ”
(ಬ.ಪು.ಪುಟ-7)
ಪಂಡಿತಾರಾಧ್ಯ ಹೇಳಿದ ‘ಶಿವಭಕ್ತನೇ ಅಸಮಶ್ರೇಷ್ಠ” “ವಸುಧೆಯೊಳಗುಮೇಶನೇ ದೈವ” “ಪ್ರಸಾದವೇ ಪವಿತ್ರ” ಎಂಬ ಅಂಶಗಳನ್ನೇ ಸೋಮನಾಥ ಈ ಸಂದರ್ಭದಲ್ಲಿ ಹೇಳುವನು
ದಂಡಿಯೈ ಬಸವನ ದಂಡನಾಯಕುಡು ಚಂಡೀಶನುತಡು ಶ್ರೀ ಸಂಗಮೇಶುನಕು
ಸರ್ಪಾಂಕುನಕು ದದ್ವಿಷಂಬು ಸದ್ಭಕ್ತಿ ದರ್ಪಮೆಲರ್ಪ ಸಮರ್ಪಣಸೇಸಿ
ಪಸಿಗ ಮೈ ನಾರಿಗಿಂಪಗ ನಾರ್ಚಿಪೇರ್ಚಿ….
“ವಿಷವ ಕುಡಿದೂ ಬಸವಯ್ಯ ಅಸಮಾನಲೀಲ ದಿವ್ಯಾಂಗನಾಗಿ ನಿಂತ” (ಪುಟ-559). ಇದರಿಂದ ಬೋಯಿಗಳು ತಣ್ಣಗಾದರು. ಭಕ್ತವೃಂದ ಬೆರಗಾಯಿತು. ಮೇಲಿನಂತೆ ಬಸವಣ್ಣ ಆಗಮ ಸಂಪ್ರದಾಯದ ರಹಸ್ಯವನ್ನು ಗ್ರಹಿಸಿ ಮೂಢನಂಬಿಕೆಯನ್ನು ದೂರಮಾಡಿದನು.

jaji  2 copyಈ ವಿಷಪಾನ ಘಟ್ಟದಿಂದ ಶಿವಭಕ್ತನಾದ ಬಸವನ ಭಕ್ತಿ, ಆ ಭಕ್ತಿಯಿಂದ ಆತನಲ್ಲಿ ಉಂಟಾದ ಅಸಾಧಾರಣ ಶಕ್ತಿ, ಅದರಿಂದ ಮೂಢಾಚಾರ ತೊಲಗಿಸಿದ ರೀತಿ ಇತ್ಯಾದಿಗಳಿಂದ ಪ್ರಭಾವಿತನಾಗಿ, ಕಲ್ಯಾಣದಲ್ಲಿ ಮಹಾತ್ಮನನ್ನಾಗಿ ಸಮಾಜೋದ್ಧಾರಕನನ್ನಾಗಿ, ವಿನೂತನ ಮತ ಸಂಸ್ಥಾಪಕನನ್ನಾಗಿ ಮಲ್ಲಿಕಾರ್ಜುನ ಪಂಡಿತಾರಾಧ್ಯ ಬಸವಣ್ಣನನ್ನು ಚಿತ್ರಿಸಿದ್ದಾನೆ. ಪಂಡಿತಾರಾಧ್ಯರು ಬಸವಣ್ಣನ ಕುರಿತು ಹೇಳಿದ ವಾಕ್ಯಗಳು ಕೇವಲ ಸ್ತೋತ್ರಗಳಲ್ಲದೇ ಸತ್ಯವೆಂಬುದಕ್ಕೆ ಬಸವಣ್ಣನ ವಚನಗಳಿಂದಲೇ ತಿಳಿದೆವು. ಆರಾಧ್ಯನ ಹಾದಿಯಲ್ಲಿಯೇ ಸೋಮನಾಥ ನಡೆದು, ಬಸವಣ್ಣನನ್ನು ಮಹೋಜ್ವಲ ಮೂರ್ತಿಯನ್ನಾಗಿ ಬಸವಪುರಾಣದಲ್ಲಿ ಚಿತ್ರಿಸಿದ. ಸೋಮನಾಥನ ದೃಷ್ಟಿಯಲ್ಲಿ ಬಸವಣ್ಣ ‘ಯಪರಶಿವ’ (ದ್ವಿತೀಯ ಶಂಭುವು), ನಂದೀಶ್ವರನ ಅವತಾರ. ತನ್ನ ಈ ಅಭಿಪ್ರಾಯಕ್ಕೆ ಅನುಗುಣವಾಗಿ ಬಸವಣ್ಣನ ವಚನಗಳು, ನಿಗಮಾಗಮ, ಪುರಾಣ ಇತಿಹಾಸಾದಿಗಳಿಂದ ಬಸವನ ಭಕ್ತಿಯು ಸವೈದಿಕವೆಂದು, ಆದರ್ಶಪ್ರಾಯವೆಂದು ಸೋಮನಾಥ ಕವಿ ತೆಲುಗಿನಲ್ಲಿ ಚಿತ್ರಿಸಿದನು.

ಈತನ ನಂತರ ಬಂದ ತೆಲುಗು ಕವಿಗಳಲ್ಲದೇ ಕನ್ನಡ ಕವಿಗಳೂ ಬಸವಣ್ಣನ ಕುರಿತು ಸೋಮನಾಥನ ವಿಷಯಗಳನ್ನು ಪ್ರಾಮಾಣಿಕವೆಂದು ತಿಳಿದರು. ಬಸವಣ್ಣನ ವಚನಗಳು ಪಂಡಿತನ ಪದ್ಯಗಳು ಬಹುಮಟ್ಟಿಗೆ ಸಮಾನ ಅಂಶಗಳನ್ನೊಳಗೊಂಡಿವೆ. ಇಬ್ಬರೂ ಭಕ್ತರೇ, ಆಚಾರ್ಯ ಪುರುಷರೇ. ಮಹಾತ್ಮರೇ. ಶಾಪಾನುಗ್ರಹ ಸಮರ್ಥರೇ ಆಗಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವರ ಸಿದ್ಧಾಂತಗಳಲ್ಲಿ ಅಂತರವೂ ಇದೆ. ವಚನಗಳಲ್ಲಿ ಸಮಯ ಬಂದಾಗ ಮಾತುಮಾತಿಗೆ ಸ್ಮøತಿ ಶ್ರುತಿ ವಾಕ್ಯಗಳಲ್ಲಿ ಬಸವಣ್ಣ ಪಂಡಿತಾರಾಧ್ಯನಂತೆಯೇ ಹೇಳುತ್ತಾನೆ. ಆದರೆ ಬಸವಣ್ಣ ಅನುಭವಿ, ಪಂಡಿತ ಶಾಸ್ತ್ರಜನ್ಯಸಂಸ್ಕಾರ ಹೊಂದಿದವನು. ಅನುಭವಕ್ಕೆ ತಕ್ಕಂತೆ ಬಸವಣ್ಣ ಶಾಸ್ತ್ರವನ್ನು ಸಂಸ್ಕರಿಸುತ್ತಾನೆ. ಪಂಡಿತ ಶಾಸ್ತ್ರಕ್ಕೆ ತಕ್ಕಂತೆ ಅನುಭವವನ್ನು ಅನ್ವಯಿಸುವನು. ಬಸವಣ್ಣನ ಭಕ್ತಿ ಪ್ರಗತಿಮಾರ್ಗ ಹಿಡಿದರೆ, ಪಂಡಿತನ ಭಕ್ತಿ ಸಂಪ್ರದಾಯಗಳಲ್ಲಿ ಸಂಪೂರ್ಣ ಮುಳುಗಲಿಲ್ಲ. ಭಕ್ತರಲ್ಲಿ ಇಬ್ಬರೂ ವರ್ಣಾಶ್ರಮ ಧರ್ಮವನ್ನು ಒಪ್ಪುವುದಿಲ್ಲ.

ಈ ವಿಷಯದಲ್ಲಿ ಬಸವಣ್ಣ ಅತಿವಾದಿ. ಪಂಡಿತಾರಾಧ್ಯ ಮಿತವಾದಿ. ಪಂಡಿತನು ಪಾಶುಪತ ಸಂಪ್ರದಾಯವನ್ನನುಸರಿಸಿದ ದ್ವೈತಿ. ಈತ ಬ್ರಾಹ್ಮಣರನ್ನು ವೇದಗಳನ್ನು ಗೌರವಿಸುತ್ತಾನೆ. ಬಸವಣ್ಣ ದ್ವೈತಭಾವವನ್ನು ಅನುಸರಿಸಿದರೂ ಬರಬರುತ್ತಾ ಅದ್ವೈತ ಭಾವದಿಂದ ಶ್ರುತಿಸ್ಮøತಿಗಳಿಗಿರುವ ಅನುಭವಕ್ಕೆ ಮಹತ್ವ ನೀಡುತ್ತಾನೆ. ಪಂಡಿತಾರಾಧ್ಯನದು ದ್ವೈತ ಶೈವವೇ ಹೊರತು ಅದ್ವೈತ ಸ್ಥಿತಿಗೆ ಬರುವುದಿಲ್ಲ. (ಪ.49ಶಿ.ತ.ಸಾ.) ಬಸವಣ್ಣನಿಗೂ ಮೊದಲು ಈ ಭಾವ ಇದ್ದಿತಾದರೂ ‘ಸಂಗಯ್ಯನಿಗೊಲಿದು ನದಿಯ ನದಿ ಕೂಡಿ’ ದಂತಾಯಿತಂತೆ (ವಚನ -627). ಬಸವಣ್ಣನಂತೆಯೇ ಪಂಡಿತಾರಾಧ್ಯನು ಪುರಾತನ ಭಕ್ತರಾದ ಬಾಣ, ಮಯೂರ, ಕಾಳಿದಾಸ. ಸಿರಿಯಾಳನನ್ನು ಕೀರ್ತಿಸುತ್ತಾನೆ. ಬಸವಣ್ಣನಂತೆಯೇ ಈತ ಕೂಡ ಮಡಿವಾಳ ಮಾಚಯ್ಯ, ಕಿನ್ನರ ಬೊಮ್ಮಯ್ಯ ಮುಂತಾದವರನ್ನು ಸ್ತುತಿಸುತ್ತಾನೆ. “ಕೂಡಲಸಂಗಮದೇವಾ” ಎಂದು ಬಸವಣ್ಣ ವಚನ ಹೇಳಿದರೆ, “ಶಿವಾ ರುದ್ರಾ” ಎಂದು ಕಂದದಲ್ಲಿ ಪಂಡಿತಾರಾಧ್ಯ ಪದ್ಯ ಹೇಳುತ್ತಾನೆ. ಸಂಪ್ರದಾಯವಾದಿಯಾದರೂ ಬಸವನೊಳಗಣ ಭಕ್ತಿ, ಶ್ರದ್ಧೆಯನ್ನು ಹೊಂದಿದವನಾಗಿದ್ದನೆಂದು ಪಂಡಿತಾರಾಧ್ಯ ಚರಿತ್ರೆಯೇ ಹೇಳುತ್ತದೆ.

One Response to "ತೆಲುಗು ಸಾಹಿತ್ಯದಲ್ಲಿ ಬಸವಣ್ಣ"

  1. makara  October 24, 2016 at 9:43 am

    Very Good Article about Veerashaivism. Translation is also nice 🙂

    Reply

Leave a Reply

Your email address will not be published.