ತೃಣಾವಾಂತರ -3 : ಶುಂಠಿ ಅನ್ನೋ ಮಾಯೆ

- ಸೃಷ್ಟಿ ವಿನಯ್

Ginger-Plant

`ಎಲ್ ಹೋದ್ಯೋ…. ಹಿಂದ್ಗಡೆ ಬೇಲಿ ಹತ್ರ ಹೋಗಿ ಒಂದಿಷ್ಟು ಶುಂಠಿ ಕಿತ್ಕೊಂಡ್ ಬಾ ಅಂತ ಹೇಳಿ ಎಷ್ಟೋತ್ತಾಯ್ತು? ನಾನ್ ಅಡ್ಗೆ ಮಾಡಿ ಮುಗ್ಸೋದ್ ಎಷ್ಟೋತ್ತಿಗೆ,’ ಅಂತ ಅಮ್ಮ ಕೂಗಿದಾಗ, ಇನ್ನೇನು ಬೆನ್ನ ಮೇಲೆ ಎರಡು ಬೀಳ್ತದೆ ಅನ್ನೋದು ಗ್ಯಾರಂಟಿಯಾಗಿ, ಕಾಫೀ ಗಿಡಗಳ ಪಕ್ಕ ಬೇಲಿಯ ಕೆಳಗೆ ಬೆಳೆದ ಶುಂಠಿ ಗಿಡದ ಕಡೆಗೆ ಹೋಗ್ತಿದ್ದೆ.

ಶುಂಠಿಯೇನು ಆಕಾಶದಿಂದ  ದುತ್ತನೆ ನನ್ನೆದುರು ಬಂದು ನಿಂತ ಮಾಯೆಯೇನಲ್ಲ. ಅಣ್ಣ (ಅಪ್ಪ) ಡಾಕ್ಟರ್ ಆಗಿ, ಊರಿಂದೂರಿಗೆ ವರ್ಗವಾಗೋ ಕೆಲಸವಾದರೂ, ಹೋದಲ್ಲೆಲ್ಲ ಮನೆಗೆ ಬೇಕಾಗೋ ಕೊತ್ತಂಬರಿ ಸೊಪ್ಪು, ಶುಂಠಿ, ಸಣ್ಣ ಪುಟ್ಟ ತರಕಾರಿ ಗಿಡಗಳನ್ನ ನೆಡೋ ಅಭ್ಯಾಸವಿದ್ದ ಅಮ್ಮನಿಂದಾಗಿ, ಅದು ಬಾಲ್ಯ ಸ್ನೇಹಿತನಾಗೇ ಇತ್ತು. ನನ್ನ ಪ್ರಕಾರ, ಮಾಂಸದಡುಗೆ ಮಾಡುವಾಗ ಶುಂಠಿ ಕೀಳುವ ಅನಿವಾರ್ಯವಿರುತಿತ್ತೇ ಹೊರತು, ಅದಕ್ಕಿಂತ ಹೆಚ್ಚಿನ ಮಹತ್ವ ಇರಲಿಲ್ಲ.
ಭತ್ತದ ಗದ್ದೆಗಳ ಬಗ್ಗೆ ಅಪಸ್ವರ ಮೂಡುವ ಸಮಯದಲ್ಲಿ, ಗದ್ದೆಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಪ್ರಯೋಗಗಳು ಮಲೆನಾಡಿನಲ್ಲಿ ಶುರುವಾಯಿತು. ಕಾಫೀ ನಾಡಿನಲ್ಲಿ ಬಾಳೆ ಮತ್ತೆ ಅಡಿಕೆ ಸ್ವಲ್ಪ ಪಾಪ್ಯುಲರ್ ಆಗುತ್ತಿದ್ದಂತೆ, ಮಧ್ಯದಲ್ಲೆಲ್ಲೋ ಶುಂಠಿ ವಿಷಯ ಕೇಳಿ ಬರುತ್ತಿತ್ತು. ಅಷ್ಟೊತ್ತಿಗಾಗಲೇ ಬೆಂಗಳೂರು ಸೇರಿದ್ದ ನಾನು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.

ಮೊದಲ ಸಲ ಶುಂಠಿಯ ಬಗ್ಗೆ ಆಸಕ್ತಿ ಮೂಡಿದ್ದು, ಸೋಮವಾರಪೇಟೆಯಲ್ಲಿ ನನ್ನ ಸೋದರ ಮಾವನ ಮನೆಗೆ ಹೋದಾಗ. ಮಧ್ಯಾಹ್ನ ಊಟ ಮಾಡಿ ಗದ್ದೆ ಕಡೆಗೆ ಹೋದಾಗ, ಗದ್ದೆಯಲ್ಲಿ ಬೆಳೆದ ಯಾಲಕ್ಕಿ ಮತ್ತೆ ಬಾಳೆಗಿಡ ನೋಡ್ತಾ ಇದ್ದೆ. “ಮಾವ, ಹ್ಯಾಗಿದ್ಯೋ ಬಾಳೆಗೆ ರೇಟು?’ ಅಂತ ಹಾಗೇ ಕೇಳಿದೆ.

`ಪರ್ವಾಗಿಲ್ಲ… ಅಲ್ಲಿ ಕುಶಾಲನಗರದ ಹತ್ರ ಯಾರೋ ಶುಂಠಿ ಮಾಡಿದ್ರಂತೆ. ಒಂದೆಕರೆಗೆ ಎರಡು ಲಕ್ಷ ಏನೋ ಬಂತೂಂತ ಕ್ಲಬ್ ನಲ್ಲಿ ಮಾತಾಡ್ತಿದ್ರು,’ ಅಂದ.

`ಮತ್ತೆ ನೀನೂ ಅದೇ ಮಾಡೋದಲ್ವಾ?’ ಅಂತ ಕೇಳ್ದೆ.

`ಅದೇನೋ…. ಎರಡು ವರ್ಸ ಶುಂಠಿ ಬೆಳೆದ್ರೆ, ಗದ್ದೇಲಿ ಏನೂ ಬೆಳೆಯೋಕ್ಕಾಗಲ್ವಂತೆ. ಕೇರಳದಿಂದ ಮಾಪ್ಳೆಗಳು ಬಂದು ಇಲ್ಲೆಲ್ಲ ಗದ್ದೆನ ಲೀಸಿಗೆ ಕೇಳ್ತಿದ್ದಾರಂತೆ. ಸುಂಟಿಕೊಪ್ಪದ ಕಡೆ ಒಂದಿಬ್ರು ಕೊಟ್ಟಿರ್ಬೇಕೇನೋ,’ ಅಂದ.

`ಎರಡು ವರ್ಷದಲ್ಲಿ ಅದೇನಾಗುತ್ತೋ ಮಾರಾಯಾ ಅಂತದ್ದು? ಏನೂ ಬೆಳೆಯೋಕ್ಕಾಗ್ದೆ ಇರೋಹಾಗೆ,’ ಅಂತ ಕೇಳ್ದೆ.

`ಸರಿ ಗೊತ್ತಿಲ್ಲ. ಒಬ್ಬೊಬ್ರು ಒಂದೊದು ಥರ ಹೇಳ್ತಾರೆ. ಅದು ತುಂಬಾ ಹೀಟ್ ನೋಡು, ನೆಲದಲ್ಲಿದ್ನೆಲ್ಲ ಎಳ್ದು, ನೀರಿನ ಅಂಶ ಸೈತ ಬಿಡಲ್ಲಂತೆ. ಆಮೇಲೆ ಬರಡಾಗುತ್ತಂತೆ ನೆಲ. ಯಡವಾರೆ ರಾಜು ಹೇಳ್ತಿದ್ದ,’ ಅಂದ ನಮ್ಮ ಪ್ರಕಾಶ ಮಾವ.

`ಅಷ್ಟೊಂದು ಶುಂಠಿ ಬೆಳ್ದು ಏನು ಮಾಡ್ತಾರಂತೆ?,’ ಅಂದೆ.

`ನಂಗೊತ್ತಿಲ್ಲಪ್ಪ…. ಅದೇನೋ ಫಾರಿನ್ ಗೆ ಎಕ್ಸ್ ಪೋರ್ಟ್ ಮಾಡ್ತಾರಂತೆ. ಇಷ್ಟು ವರ್ಷ ಕೇರಳದಲ್ಲಿ ಮಾಡ್ತಿದ್ದರಂತೆ. ಈಗ ಕೊಡಗಿನ ಕಡೆ ಬರ್ತಾ ಇದ್ದಾರೆ,’’ ಅಂದ ಮಾವ.

ಅವತ್ತಿನ ಮಟ್ಟಿಗೆ ಪ್ರಕಾಶ್ ಮಾವನಿಗೆ ಶುಂಠಿ ಬಗ್ಗೆ ಎಷ್ಟು ಅರ್ಥವಾಗಿತ್ತೋ ಏನೋ ಗೊತ್ತಿಲ್ಲ. ನಂಗಂತೂ ಏನೂ ಅರ್ಥವಾಗಲಿಲ್ಲ. ಒಂದು ಮಾತು ಅನ್ನಿಸ್ತು… ಯಾಕೋ ಶುಂಠಿ ನಾನು ತಿಳಿದಷ್ಟು ಸರಳವಾದ ಸಂಬಾರ ಪದಾರ್ಥವಲ್ಲ ಅಂತ.

ವರ್ಷ ಕಳೆದಂತೆ ಊರಿಗೆ ಹೋದಾಗಲೆಲ್ಲ ಶುಂಠಿ ಬಗ್ಗೆ ಮಾತುಕಥೆ ಕೇಳೋದು ಜಾಸ್ತಿಯಾಯ್ತು. ಊರಿಗೆ ಹೋಗುವ ದಾರಿಯಲ್ಲಿ, ಅಲ್ಲಲ್ಲಿ ಭತ್ತದ ಗದ್ದೆ ಮಧ್ಯದಲ್ಲೋ, ರಸ್ತೆ ಬದಿಯ ಗದ್ದೆಗಳಲ್ಲೋ ಒಂದೊಂದು ಕೆಂಪು ಬಾವುಟಗಳು ಕಾಣಿಸೋಕೆ ಶುರುವಾಯ್ತು. ಮೊದಮೊದಲು ಇದೇನು ಅಂತ ಅಂತ ಅರ್ಥ ಆಗ್ತಿರಲಿಲ್ಲ. ಮುಂಚೆ ರೈತಸಂಘದವರ ಹಸಿರು ಬಾವುಟದ ಥರ, ಕಮ್ಯೂನಿಷ್ಟರೂ ಬಾವುಟಗಳನ್ನ ಹಾರಿಸೋಕೆ ಶುರುವಾಯ್ತಾ ಅಂತ ಯೋಚಿಸಿದ್ದೆ. ನಿಧಾನವಾಗಿ ಗೊತ್ತಾಯ್ತು, ಕೆಂಪು ಬಾವುಟ ಹಾರಿಸಿದ ಗದ್ದೆಗಳಲ್ಲಿ ಶುಂಠಿ ನೆಟ್ಟಿರುತ್ತಾರೆ, ಅಂತ. ಅಲ್ಲಿಯವರೆಗೆ ಗದ್ದೆಬೈಲುಗಳನ್ನ ಸೂಕ್ಷ್ಮವಾಗಿ ನೋಡದ ನಾನು, ಅಲ್ಲಿಂದ ಮುಂದೆ ಅದು ಭತ್ತನೋ ಅಥವಾ ಶುಂಠಿನೋ ಅಂತ ಗಮನಿಸತೊಡಗಿದೆ.

ನಿಧಾನವಾಗಿ ಇನ್ನೊಂದು ಸುದ್ದಿ ಚರ್ಚೆಯಲ್ಲಿ ಬರೋಕೆ ಶುರುವಾಯ್ತು….. ಕೇರಳದವರು ಬಂದು, ವರ್ಷಕ್ಕೆ, ಎಕರೆಗೆ ಇಷ್ಟು ಅಂತ ಗದ್ದೆಗಳನ್ನು ಗುತ್ತಿಗೆಗೆ ತಗೊಂಡು, ಶುಂಠಿ ಬೆಳೆಯೋಕೆ ಶುರುಮಾಡಿದ್ದಾರೆ ಅಂತ. ಈ ಕೆಂಪು ಬಾವುಟ ಕೇರಳದ ಕಮ್ಯುನಿಷ್ಟರ ಬಾವುಟನಾ? ಅಂತ ಯಾರಿಗೋ ಕೇಳಿದೆ. “ಅಲ್ಲಾ ಮಾರಾಯ… ಶುಂಠಿ ಬೆಳೆಯೋಕೆ ಈ ಪೆಸ್ಟಿಸೈಡ್ (ಕೀಟನಾಶಕ) ಜಾಸ್ತಿ ಹಾಕಬೇಕಾಗುತ್ತಲ್ಲ…. ಅದಕ್ಕೆ ಆ ಗದ್ದೆಗಳಿಗೆ ಮನುಷ್ಯರಾಗಲೀ, ದನಗಳಾಗಲೀ ಹೋಗ್ಬಾರ್ದೂಂತ ಕೆಂಪು ಬಾವುಟ ಹಾಕಿರ್ತಾರೆ,’’ ಅಂತ ಉತ್ತರ ಬಂತು. ಅದಕ್ಕೇನು ಹೇಳ್ಬೇಕೂಂತ ನಂಗೆ ಗೊತ್ತಾಗಲಿಲ್ಲ.

ಬರೀ ಕೇರಳದವರಲ್ಲ…. ಬೇರೆಯವರ ಗದ್ದೆ ಗುತ್ತಿಗೆಗೆ ತಗೊಂಡು ಶುಂಠಿ ಬೆಳೆಯೋಕೆ ಮೂಡಿಗೆರೆಯ ಸುತ್ತಮುತ್ತ ಕೆಲವು ಹುಡುಗರುಗಳೂ ಶುರು ಮಾಡಿದರು. ಅಲ್ಲಿಯವರೆಗೆ ನಾವು ತಿಳಿದಂತೆ, ಶುಂಠಿ ಬೆಳೆಗಾರರ ಕಾಮಧೇನು ಅಲ್ಲ ಅನ್ನೋ ಸತ್ಯ ನಿಧಾನವಾಗಿ ಹೊರಗೆ ಬಂತು. ಮನೆ ಮಟ್ಟಿಗೆ ತೋಟದ ಬೇಲಿಗಳ ಕೆಳಗೆ ಬೆಳೆಯೋ ಶುಂಠಿಗೂ, ವಾಣಿಜ್ಯ ಬೆಳೆಯಾಗಿ ಬೆಳೆಯುವ ಶುಂಠಿಗೂ ಬಹಳ ವ್ಯತ್ಯಾಸ ಇರುತ್ತದೆ.

ಮೊದಲಾಗಿ, ಭತ್ತದ ಗದ್ದೆಗಳಲ್ಲಿ ನೀರು ನಿಲ್ಲದಂತೆ ಚರಂಡಿಗಳನ್ನು ಹೊಡೆದುಕೊಂಡು, ಅದರ ಮೇಲೆ ಹುಲ್ಲು ಹಾಸಿ, ಹುಲ್ಲುಗಳ ಮಧ್ಯ ಶುಂಠಿ ನೆಡಬೇಕು. ಶುಂಠಿಗೆ ಅಕಾಲದಲ್ಲಿ ನೀರು ಬೇಕಾಗುವುದರಿಂದ, ಆ ವ್ಯವಸ್ಥೆಯನ್ನು ಭಾವಿ ತೋಡಿಕೊಂಡೋ, ಹಳ್ಳದಿಂದ ಹರಿಸಿಕೊಳ್ಳುವ ವ್ಯವಸ್ಥೆಯೋ, ಸರಿಯಾಗಿ ಇರಬೇಕು. ಮತ್ತೆ, ಮಾರುಕಟ್ಟೆಯಲ್ಲಿ ಸಿಗುವುದು ಹೈಬ್ರಿಡ್ ಶುಂಠಿ. ಅಲ್ಲಿಂದ ಶುರುವಾಗುತ್ತೆ…. ಶುಂಠಿ ಬಿತ್ತನೆ ತುಂಡಿನಿಂದ ಹಿಡಿದು, ಅದಕ್ಕೆ ಹಾಕುವ ರಸಗೊಬ್ಬರ, ಕ್ರಿಮಿನಾಶಕ ಎಲ್ಲಾದಕ್ಕೂ ದುಡ್ಡು ಸುರಿಯಬೇಕು. ದಿನಂಪ್ರತಿ ಅದರ ಆರೈಕೆ ಮಾಡಬೇಕು.

ಸಾಧಾರಣವಾಗಿ ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ಸಾಧಾರಣ ಒಂದುವರೆ ಲಕ್ಷ ಖರ್ಚಾಗುತ್ತದೆ. ಕೆಲವರು ಒಂದು ಎಕರೆಯಲ್ಲಿ ನಾನೂರು ಚೀಲ ಬೆಳೆದಿದ್ದೇವೆ ಎಂಡು ಹೇಳಿಕೊಂಡರೂ, ಸಾಧಾರಣವಾಗಿ ಇನ್ನೂರೈವತ್ತು ಚೀಲ ಬೆಳೆಯುತ್ತಾರೆ. ಚೀಲಕ್ಕೆ ಸಾವಿರ ರೂಪಾಯಿ ಬೆಲೆ ಸಿಕ್ಕಿದರೆ, ಎರಡೂವರೆ ಲಕ್ಷ ಬೆಲೆ ಸಿಕ್ಕಿ, ಎಕರೆಗೆ ಒಂದು ಲಕ್ಷ ರೂಪಾಯಿ ಉಳಿಯುತ್ತದೆ.

ಆದರೆ, ಎಲ್ಲಾ ಅಂದುಕೊಂಡಂತೆ ಆದಾಗ ಸರಿ. ಒಂದೈದ ಎಕರೆ ತೆಗೆದುಕೊಂಡು, ಸ್ವಂತ ಉಸ್ತುವಾರಿಯಲ್ಲಿ ಮಾಡುವವರಿಗೆ ಲೆಕ್ಕಾಚಾರ ಹೆಚ್ಚು ಕಡಿಮೆ ಸರಿ ಹೋಗುತ್ತದೆ. ಆದರೆ, ಇನ್ನೂ ಹೆಚ್ಚು ಜಾಗದಲ್ಲಿ, ಮೇಸ್ತ್ರಿಗಳನ್ನು ಇಟ್ಟು ಮಾಡುವವರಿಗೆ ಖರ್ಚು ಹೆಚ್ಚಾಗುತ್ತಾ ಹೋಗುತ್ತದೆ. ಮತ್ತೆ, ಮಾರ್ಚ್-ಏಪ್ರಿಲ್ ನಲ್ಲಿ ಶುಂಠಿ ಕಿತ್ತಾಗ, ಫಸಲು ಚೆನ್ನಾಗಿರುತ್ತದೆ. ಒಂದು ಸಲ ಮಳೆ ಹೊಡೆಯಲು ಶುರುವಾದರೆ, ಕರಗೋಕೆ ಶುರುವಾಗಿ, ಫಸಲು ಮತ್ತೆ ಅದರ ತೂಕ ಎರಡೂ ಖೋತ.
ಶುಂಠಿ ಕೀಳುವಾಗ ನಮ್ಮೂರ ಕಡೆ ಬರುವುದೆಲ್ಲ ಹರ್ಯಾಣ ಮತ್ತೆ ದೆಹಲಿಯಲ್ಲಿ ರಿಜಿಸ್ಟರ್ ಆಗಿರುವ ಟ್ರಕ್ ಗಳು. ಕೆಲವು ಸಲ ಮುಂಬಯಿಗೆ ಕಳುಹಿಸುತ್ತಾರೆ. ಆದರೆ, ರೇಟ್ ನಿರ್ಧಾರವಾಗುವುದು ದೆಹಲಿಯಲ್ಲೇ. ಬೆಳೆಗಾರನಿಗೆ ಇದರ ಮರ್ಮ ಗೊತ್ತಾಗೋದೇ ಇಲ್ಲ.

ಈ ಸಲ ಏಪ್ರಿಲ್ ನಲ್ಲಿ ಚೀಲಕ್ಕೆ ಮೂರುವರೆ ಸಾವಿರದವರೆಗೆ ಬೆಲೆ ಬಂದಿತ್ತಂತೆ. ಆದರೆ, ನಮ್ಮ ಮೂಡಸಸಿ ಬೈಲಿನಲ್ಲಿ ಗದ್ದೆಗಳನ್ನು ಗುತ್ತಿಗೆಗೆ ತೆಗೆದುಕೊಂಡು ಬೆಳೆದಿದ್ದ ಗೌಡರೊಬ್ಬರು, ಆಗ ಮಾರಲೇ ಇಲ್ಲ. ಸ್ಚಲ್ಪ ದಿನದಲ್ಲೇ ಒಂದೂಕಾಲು ಸಾವಿರಕ್ಕೆ ರೇಟ್ ಇಳಿಯಿತು. ಹಾಗೇ, ಮಳೆ ಬಂದು ಶುಂಠಿ ಕರಗೋಕೆ ಶುರುವಾಯ್ತು. ಕೊನೆಗೆ, ಕೀಳುವ ಖರ್ಚಿಗಿಂತ ಕಡಿಮೆ ರೇಟ್ ಬಂದು, ಗದ್ದೆಯಿಂದ ಶುಂಠಿ ಕೀಳದೆ ಬಿಟ್ಟರು, ಆದರೆ ಗುತ್ತಿಗೆಗೆ ಕೊಟ್ಟ ಗದ್ದೆ ಮಾಲಿಕರು ಅವರಿಗೆ ದಂಬಾಲು ಬೀಳುತ್ತಾರೆ. ಯಾಕೆಂದ್ರೆ, ಗದ್ದೆಯಿಂದ ಶುಂಠಿ ಕಿತ್ತು ಅದನ್ನ ಸರಿ ಮಾಡೋ ಕೆಲಸ ಗುತ್ತಿಗೆಗೆ ತಗೊಂಡವರದೇ ಅನ್ನೋದು ಮಾಲೀಕರ ವಾದ ಮತ್ತೆ ಆ ನಿಟ್ಟಿನಲ್ಲಿ ಮೊದಲೇ ಮಾತುಕತೆಯಾಗಿರುತ್ತದೆ. ಅಂತ ಸಮಯದಲ್ಲಿ, ಗದ್ದೆಗಳನ್ನ ಗುತ್ತಿಗೆಗೆ ತಗೊಂಡವರು ತಲೆ ತಪ್ಪಿಸಿಕೊಂಡು ಓಡಾಡುವುದು ಸರ್ವೇ ಸಾಮಾನ್ಯ.

ಶುಂಠಿ ಬೆಳೆದವರೆಲ್ಲ ದುಡ್ಡು ಮಾಡಿದ್ದಾರೆ ಅಂತ ಹೇಳೋಕ್ಕಾಗಲ್ಲ. ಅದೊಂಥರಾ ಜೂಜು ಇದ್ದಹಾಗೆ. ಒಂದು ವರ್ಷ ಮಾಡಿ ದುಡ್ಡು ಮಾಡಿದ ಹುಡುಗರು, ಜಾಸ್ತಿ ದುಡ್ಡು ಮಾಡ್ಬೇಕೂಂತ, ಜಾಸ್ತಿ ಜಾಗ ಗುತ್ತಿಗೆಗೆ ತಗೋತ್ತಾರೆ. ಅದ್ರಲ್ಲೇನಾದ್ರೂ ಲಾಸ್ ಆದ್ರೆ, ಅದನ್ನ ವಾಪಾಸ್ ಗಳಿಸೋಕೆ ಮತ್ತೆ ಗುತ್ತಿಗೆಗೆ ತಗೊಂಡು ಶುಂಠಿ ಬೆಳೆಯುತ್ತಾರೆ. ಆದರೆ, ಕೇರಳದವರು ಬಂದು ಗದ್ದೆ ಗುತ್ತಿಗೆಗೆ ತೆಗೊಳ್ಳೋದಂತೂ, ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗ್ತನೇ ಇದೆ. ಇತ್ತೀಚೆಗೆ ಮುಂಚೆ ಕಾಡಿನಂತೆ ಇದ್ದ ಜಾಗಗಳಲ್ಲೂ, ಕಾಡು ಕಡಿದು ಶುಂಠಿ ಬೆಳೆಯೋದು ಕಾಣಿಸಲು ಶುರುವಾಗಿದೆ. ಹಳ್ಳ ಹರಿಯದ ಜಾಗಗಳಲ್ಲಿ ಬೋರ್ ವೆಲ್ ತೋಡುವ ಆತಂಕಕಾರಿ ಬೆಳವಣಿಗೆಯೂ ಆರಂಭವಾಗಿದೆ. ನನಗನಿಸೋದೇನಂದ್ರೆ, ಮಲೆನಾಡ ಭತ್ತದ ಗದ್ದೆಗಳ ಅವಸಾನಕ್ಕೆ ಕೊನೆ ಮೊಳೆ ಹೊಡೆಯಲು ಬಂದಿರುವುದೇ ಶುಂಠಿ ಎಂಬ ವಾಣಿಜ್ಯ ಬೆಳೆ.

Leave a Reply

Your email address will not be published.