ತೃಣಾವಾಂತರ -2 : ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ

- ಸೃಷ್ಟಿ ಮಾಧವ್

“ಅಲ್ಲಾ ಕಣ್ರಾ… ಒಂದ್ವರ್ಷನಾದ್ರೂ ಅಲ್ಲಿರೀ ಅಂದ್ರೆ…. ಮುಂದಿನ್ ವರ್ಷ ನೋಡಾನ… ನಮ್ ಲೈನ್ ಗೇ ಬರೀವ್ರಂತೆ.’’

“ಇದೊಳ್ಳೇ ಕಥಿಯಾಯ್ತಲ್ಲಾ ಗೌಡ್ರೇ… ಮನೀ ಮಟ್ಟಿಗೂ ಗದ್ದೇ ಮಾಡಕ್ಕಿಲ್ಲ ಅಂದ್ರೆ, ನಾವೇನ್ ಮಾಡಾದು? ನೀವೇನೇ ಹೇಳಿದ್ರೂ, ನಾವ್ ಹೋಗಾಕ್ಕಿಲ್ಲ ಬಿಡಿ. ನಿಮ್ ಲೈನಾಗೆ ಇರಾದಿದ್ರೆ ನೋಡಿ, ಇಲ್ಲಾ ನಾವ್ ಲೆಕ್ಕ ಮಾಡಿಸ್ಕೊಂಡು ಬೇರೆ ಕಡೆ ನೋಡ್ಕಾತ್ತೀವಿ.’’

ನಾವೆಲ್ಲ ಚಿಕ್ಕವರಿದ್ದಾಗ ಇಂಥಾ ಸಂಭಾಷಣೆಗಳಿಗೇನೂ ಕಡಿಮೆ ಇರಲಿಲ್ಲ. ಕಾಫೀ ಬೆಳೆಯೇ ಪ್ರಧಾನವಾದರೂ, ಗದ್ದೆಯಲ್ಲಿ ಭತ್ತ ಬೆಳೆಯೋದಿಲ್ಲ ಅನ್ನೋರ ಮನೆಗೆ ಕೆಲಸದವರು ಹೋಗೋಕ್ಕೆ ಒಪ್ಪುತ್ತಿರಲಿಲ್ಲ. ಕೆಲವು ಸಲ, ಸಂಬಂದಿಕರ ಮನೆಗೆ ಆಳುಗಳು ಕಮ್ಮಿಯಾದಾಗ, ತಮ್ಮ ಮನೆಯ ಆಳುಗಳನ್ನ ಕಳುಹಿಸುವುದು ನೆಡೆದುಕೊಂಡು ಬಂದ ಪದ್ದತಿ. ಭತ್ತ ಬೆಳೆಯದವರ ಮನೆಗೆ ಹೋಗಲು ಮಾತ್ರ ಆಳು ಮಕ್ಕಳು ಸುತಾರಾಂ ಒಪ್ಪುತ್ತಿರಲಿಲ್ಲ.

ಸಂತೆಯ ಹಿಂದಿನ ದಿನ ಸಾಯಂಕಾಲ ಬಟವಾಡೆ ನೆಡೆಯುತ್ತಿತ್ತು. ಹೆಚ್ಚಿನ ಆಳುಗಳು, ದುಡ್ಡು ಹಿಡ್ಕೊಂಡು, ಅಕ್ಕಿ ಕೊಡೋಕೆ ಕೇಳ್ತಿದ್ರು. ಬಟವಾಡೆ ದಿನ ಅಕ್ಕಿಗಾಗಿ ಆಳುಗಳು ಸಾಹುಕಾರರ ಜೊತೆ ಜಗಳಕ್ಕೆ ನಿಲ್ಲೋದು ಸರ್ವೇ ಸಾಮಾನ್ಯವಾಗಿರುತ್ತಿತ್ತು. “ಅವ್ನ ಮನೀಲಿರೋದು ಮೂರೇ ಜನ. ನನ್ ಮನೀಲಿ ಐದು. ಇಬ್ರಿಗೂ ಐದ್ ಸೇರು ಅಕ್ಕಿ ಅಂದ್ರೆ ಹೆಂಗ್ ಗೌಡ್ರೇ? ಜನ್ ಜಾಸ್ತಿ ಇರ್ವಾಗ ಅಕ್ಕಿ ಜಾಸ್ತಿ ಬೇಕಾಗಲ್ವಾ?,’’ ಅಂತ ಜಗಳಕ್ಕೆ ನಿಲ್ಲೋ ಆಳುಗಳೇ ಜಾಸ್ತಿ. ಗೌಡ್ರೂ ಅಷ್ಟೆ…. ಪೂರ್ತಿ ದುಡ್ಡು ಬೇಕು ಅಂತ ಕೇಳೋರಿಗೆ ಕೊಡೋಕೆ ತಯಾರಿದ್ದರೂ, ಎಲ್ಲರ ಕಣ್ಣೂ ಅಕ್ಕಿ ಮೇಲಿರುತ್ತಿತ್ತು. ಎಲ್ಲಾ ಅಕ್ಕಿನೂ ಆಳುಗಳಿಗೇ ಅಳೆದುಕೊಟ್ಟರೆ, ಮನೆಗೂ ಬೇಕು, ಮತ್ತೆ ಸ್ವಲ್ಪ ಮಾರೋಕೂ ಬೇಕು. ಒಟ್ಟಾರೆ, ಬಟವಾಡೆ ಮುಗಿಯೋ ಹೊತ್ತಿಗೆ, ಗೌಡರುಗಳು ಬೆವರೊರಸಿಕೊಂಡೇ ಒಳಗೆ ಬರಬೇಕಿತ್ತು.

ಮುಂಚೆ ಭತ್ತಕ್ಕೆ ಸರ್ಕಾರ ಲೆವಿ ಹಾಕಿದಾಗಲಂತೂ, ಭತ್ತ ಬೆಳೆಯುವವರ ಗೋಳು ಯಾರಿಗೂ ಬೇಕಾಗಿರಲಿಲ್ಲ. ಲೆವಿಗೆ ಭತ್ತ ಕೊಡೋ ಇನ್ಸ್‌ಪೆಕ್ಟರ್ ಗಳ ಕಾಟ. ಲೆವಿ ಕೊಟ್ಟರೆ, ಬೆಳೆದವನ ಮನೆಯಲ್ಲೇ ಉಪವಾಸ. ನನ್ನ ಚಿಕ್ಕಪ್ಪ ಶಶಿಧರಣ್ಣ ಹೇಳಿದ ಕಥೆ ಯಾವಾಗಲೂ ನೆನಪಿಗೆ ಬರುತ್ತದೆ. ಗೆಂಡೆಹಳ್ಳಿಯಲ್ಲಿರೋ ನಮ್ಮ ರೈಸ್ ಮಿಲ್ಲಿನಲ್ಲಿ ಆಗಾಗ ಲೆವಿ ಸಂಗ್ರಹಿಸಲು ಇನ್ಸ್‌ಪೆಕ್ಟರ್‌ಗಳು ಬಂದು ಹೊಂಚು ಹಾಕುತ್ತಾ ಕೂರಿರ್ತಿದ್ದರಂತೆ. ರೈತರು ಎತ್ತಿನ ಗಾಡಿಯಲ್ಲಿ ಭತ್ತ ಹಾಕಿಕೊಂಡು ಬಂದ ತಕ್ಷಣ, ಆ ಭತ್ತವನ್ನು ಲೆವಿಗೆ ಜಮಾ ಮಾಡುವುದಲ್ಲದೆ, ಅವರ ಮೇಲೆ ಕೇಸ್ ಬೇರೆ ಹಾಕುತ್ತಿದ್ದರಂತೆ. ಕೇಸ್ ಹಾಕಬಾರದು ಅಂತಾದರೆ, ದುಡ್ಡು ಪೀಕಬೇಕು. ಇನ್ಸ್‌ಪೆಕ್ಟರ್‌ಗಳು ಬಂದಿದ್ದು ಗೊತ್ತಾದರೆ, ಊರಿನವರು ಯಾರೂ ಮಿಲ್ಲಿನ ಕಡೆ ತಲೆ ಹಾಕುತ್ತಿರಲಿಲ್ಲವಂತೆ.

ಒಂದ್ಸಲ, ಈ ಇನ್ಸ್‌ಪೆಕ್ಟರ್ ಬಂದಿದ್ದು ಗೊತ್ತಿಲ್ಲದ ರೈತನೊಬ್ಬ ಭತ್ತ ತಗೊಂಡು ಮಿಲ್ಲಿನ ಕಡೆ ಬಂದಿದ್ದಾನೆ. ಲೆವಿಗಾಗಿ ಬಂದಿದ್ದಾರೆ ಅಂತ ಗೊತ್ತಾದ ತಕ್ಷಣ, ಗಾಡಿ ತಿರುಗಿಸಿ ಬೇಗ ಓಡಿಸೋಕೆ ಹೋಗಿದ್ದಾನೆ. ಇನ್ಸ್‌ಪೆಕ್ಟರ್ ಸಹ ಬಿಡದೆ, ತನ್ನ ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದಾನೆ. ಶಬ್ದಕ್ಕೆ ಹೆದರಿದ ಎತ್ತುಗಳು, ಕಲ್ಲುಗಳ ಮೇಲೆ ಎರ್ರಾಬಿರ್ರಿಯಾಗಿ ಓಡಿವೆ. ಆಯತಪ್ಪಿ ಬಿದ್ದ ರೈತನ ತಲೆ ಮೇಲೆ ಗಾಡಿ ಹಾದು, ಅಲ್ಲೇ ಸತ್ತು ಹೋಗಿದ್ದಾನೆ. ಇಂದಿನ ಲೆಕ್ಕದಲ್ಲಿ ಅದು ಅಂತರಾಷ್ಟ್ರೀಯ ಸುದ್ದಿಯಾಗಬೇಕಿತ್ತು. ಅವತ್ತು, ಪೇಪರ‌್‌ನಲ್ಲೂ ಬರಲಿಲ್ಲವಂತೆ.

ಇದೆಲ್ಲ ನಾವು ಚಿಕ್ಕವರಿದ್ದಾಗಿನ ಮಾತು ಈಗ ನೆನೆಸಿಕೊಂಡರೆ ನಗು ಬರುತ್ತದೆ. “ಅಕ್ಕಿ ಕೊಡೋಕೆ ಯಾರ ಕೈಲಿದೆ? ತಗೊಳ್ಳೋಕೆ ಯಾರಿದ್ದಾರೆ ಮಾರಾಯ? ಆಳುಗಳಿಗೆ ಗೌರ್ಮೆಂಟ್ ಅಕ್ಕಿ ಕೊಡ್ತಾದೆ. ಮುಂಚಿನಂಗೆ ಒಟ್ಟಿನ ಮನೆಗಳೂ ಇಲ್ಲ, ಮನೇಲಿ ಆಳುಗಳು ಊಟಕ್ಕೆ ನಿಲ್ಲೋದಿಲ್ಲ. ತಿಂಗಳಿಗೆ ಅಪ್ಪಪ್ಪಾ ಅಂದ್ರೆ ಒಂದಿಪ್ಪತೈದು-ಮೂವತ್ತು ಕೆಜಿ ಸಾಕು. ಅಂಗ್ಡಿಯಿಂದ ತಂದ್ರಾಯ್ತಪ್ಪಾ’’ ಅಂತ ನಗ್ತಾರೆ ಅಷ್ಟೆ.

ಹೌದು…. ಮಲೆನಾಡಿನಲ್ಲಿ ಗದ್ದೆ ಇದ್ದವರ ಪೈಕಿ ಶೇಕಡ 80ರಷ್ಟು ಜನ ಗದ್ದೆ ಮಾಡುವುದನ್ನು ನಿಲ್ಲಿಸಿದ್ದಾರೆ ಅಂದರೆ ಆಶ್ಚರ್ಯವಾಗಬಹುದು. ಯಾಕೆಂದರೆ, ಗ್ಲೋಬಲೈಸೇಶನ್ ಅನ್ನೋ ಸುನಾಮಿಯಲ್ಲಿ, ಗದ್ದೆ ಮಾಡಲು ಬೇಕಾಗಿದ್ದ ಎಲ್ಲಾ ಕಾರಾಣಗಳೂ ಮಲೆನಾಡ ಸಂಸ್ಕೃತಿಯಿಂದ ಕೊಚ್ಚಿ ಹೋಗಿವೆ.

ಮಲೆನಾಡ ಮನೆಗಳಲ್ಲಿ ದನಕರುಗಳಿಲ್ಲದೇ ಹೋದರೆ ಹೆಣ್ಣು ಕೊಡುವವರು ಹಿಂದೆ, ಮುಂದೆ ನೋಡುವ ಕಾಲವನ್ನು ನಾವೂ ನೋಡಿದ್ದೇವೆ. ಏನಿಲ್ಲದಿದ್ದರು ಬತ್ತದ ಹುಲ್ಲು ದನಕರುಗಳಿಗೆ ಬೇಕಾದ್ದರಿಂದ ಗದ್ದೆ ಮಾಡಲೇಬೇಕಾದ ಪರಿಸ್ಥಿತಿ ಇರುತ್ತಿತ್ತು. ಕಾಲ ಕಳೆದಂತೆ, ಸ್ವಂತಕಲ್ಲದಿದ್ದರೂ ಬಾಡಿಗೆಗೆ ಬರುವ ಟಿಲ್ಲರ್, ಟ್ರಾಕ್ಟರ್ ಗಳು, ಡೈರಿ ಹಾಲು ಸಿಗೋಕೆ ಶುರುವಾದ ಮೇಲೆ ದನಕರುಗಳ ಮೇಲಿನ ಅವಲಂಬನೆ ಕಡಿಮೆಯಾಗತೊಡಗಿದವು. ಸ್ವಲ್ಪ ಕಾಲ ಹಾಲಿಗಾಗಿ ಎಂದು ಜರ್ಸಿ ದನಗಳನ್ನು ಕೆಲವರು ಸಾಕಿದರೂ, ಆಮೇಲೆ ಅವೂ ಕಣ್ಮರೆಯಾದವು. ದನಗಳಿಲ್ಲದ ಮೇಲೆ ಹುಲ್ಲು ಇಟ್ಟುಕೊಂಡು ಏನು ಮಾಡೋದು?

ಮಲೆನಾಡಿನ ಜೀವನವೂ ಅಮೂಲಾಗ್ರ ಬದಲಾವಣೆಗಳನ್ನು ಕಂಡಿವೆ. ಮೊದಲೆಲ್ಲ, ಕೆಲವು ಕುಟುಂಬಗಳು ತಲತಲಾಂತರದಿಂದ ಒಂದೇ ಮನೆಯಲ್ಲಿ ಕೆಲಸಕ್ಕಿರುತ್ತಿದ್ದರು. ನಾವು ನೋಡಿದ ಹಾಗೆ, ಮಕ್ಕಳನ್ನು ಆಡಿಸಲು ಬಂದ ಸಣ್ಣ ಹುಡುಗರ ತಂದೆ ತಾಯಂದಿರು ಲೈನಿನಲ್ಲಿದ್ದರೆ, ಹುಡುಗರು ಮನೆಯಲ್ಲಿರುತ್ತಿದ್ದರು. ಅಲ್ಲಿಂದ ಮುಂದೆ ಈ ಹುಡುಗರಲ್ಲಿ ಕೆಲವರು ದನ ಕಾಯೋಕೆ ಹೋದರೆ, ಕೆಲವರು ಮನೆ ಹತ್ತಿರವೇ ಅಡುಗೆ ಮತ್ತೆ ಇನ್ನೂ ಸಣ್ಣ, ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದು, ಮೆಲ್ಲಗೆ ಟಿಲ್ಲರ್, ಟ್ರಾಕ್ಟರ್ ಡ್ರೈವಿಂಗೆ ಕಲಿಯುತ್ತಿದ್ದರು. ಅಲ್ಲಿಂದ ಮುಂದೆ ಕಾರು ಡ್ರೈವರ್ ಆಗಿಯೋ, ಮೇಸ್ತ್ರಿಯಾಗಿಯೋ ಬಡ್ತಿ ದೊರೆಯುತ್ತಿತ್ತು. ಅಷ್ಟು ಹೊತ್ತಿಗೆ ಮಕ್ಕಳೆಲ್ಲ ದೊಡ್ಡವರಾಗಿ ಆಸ್ತಿ ಪಾಲಾದಾಗ, ದೊಡ್ಡ ಗೌಡರ ಹತ್ತಿರವೇ ಉಳಿಯುವವರು ಹೆಚ್ಚಿನವರಿದ್ದರು. ಆದರೆ, ದನ ಕಾಯಲು ಹೋಗುವವರು ತೋಟದ ಕೆಲಸಕ್ಕೆ ಬರುತ್ತಿದ್ದರು. ತೋಟದ ಕೆಲಸಕ್ಕೆ ಬರುವವರಲ್ಲಿ ಕೆಲವರು ಗದ್ದೆ ಕೆಲಸದಲ್ಲಿ ಪ್ರವೀಣರಾದರೆ, ಕೆಲವರು ತೋಟದ ಕೆಲಸಗಳಲ್ಲಿ. ಕೆಲವರು ಮರ ಹತ್ತಿ ಮಾಡಬೇಕಾದ ಕೆಲಸಗಳಲ್ಲಿ ಚಾಣಾಕ್ಷರಾಗಿರುತ್ತಿದ್ದರು.

ನಿಧಾನವಾಗಿ ಸರ್ಕಾರ ಬಡಜನರಿಗೆ ಮನೆಗಳನ್ನು ಹಂಚಲು ಶುರುವಾದ ಮೇಲೆ, ಸಾಹುಕಾರರ ಮನೆ ಲೈನಿನಿಂದ ಆಳುಗಳು ನಿಧಾನವಾಗಿ ಖಾಲಿಯಾಗಿ, ಜನತಾ ಸೈಟುಗಳಿಗೆ ವರ್ಗಾವಣೆಯಾದರು. ವರ್ಷವಿಡೀ ಒಂದೇ ಮನೆ ಕೆಲಸಕ್ಕೆ ಬರುವವರ ಸಂಖ್ಯೆ ಕಮ್ಮಿಯಾಗಿ, ಅದರ ಬದಲು ಕಾಂಟ್ರಾಕ್ಟ್ ಕೆಲಸಗಳು ಶುರುವಾದವು. ತಮ್ಮ ಲೈನಿಗೆಂದು ಕಾಫೀ ಪ್ಲಾಂಟರ್ ಗಳು ಬಯಲುಸೀಮೆ ಕಡೆಯಿಂದ ಜನಗಳನ್ನು ಕರೆತರಲು ಶುರು ಮಾಡಿದರು. ಸಾಹುಕಾರರ ಮಕ್ಕಳಂತೆ, ಆಳುಗಳ ಮಕ್ಕಳು ಸಹ ಬೆಂಗಳೂರು, ಮಂಗಳೂರು ಕಡೆಗೆ ಕೆಲಸ ಹುಡುಕಿಕೊಂಡು ಹೊರಡಲಾರಂಭಿಸಿದರು. ಹೆಚ್ಚಿನವರು ಹೋಟೆಲ್, ಬೇಕರಿ, ಆಟೋ, ಕಾರ್ ಡ್ರೈವಿಂಗ್ ಕೆಲಸಗಳಿಗೆ ಸೇರುವವರೇ. ಈ ಬದಲಾವಣೆಯ ನೆಡುವೆ, ಕೆಸರಿನಲ್ಲಿ ನಿಂತು ಗದ್ದೆ ಕೆಲಸ ಮಾಡುವವರ ಮತ್ತು ದನ ಕಾಯುವವರ ಸಂತತಿ ನಶಿಸಿಹೋಯಿತು. ಹಾಗೇ, ಭತ್ತದ ತಳಿಗಳಲ್ಲಿ ಸಹ ಸಂಶೋಧನೆಗಳು ಶುರುವಾದವು. ಮೊದಲಾದರೆ, ಭತ್ತದ ಗದ್ದೆಗೆ, ಸಗಣಿ, ಕೋಳಿಗೊಬ್ಬರ ಹಾಕಿದರೆ ಸಾಕಿತ್ತು. ಈ ಹೈಬ್ರಿಡ್ ತಳಿಗಳು ಬಂದ ಮೇಲೆ, ಅವಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಹಾಕಬೇಕಾಗಿತ್ತು. ನಾವು ನೋಡುವ ಹೊತ್ತಿಗೆ, ಈ ಹೈಬ್ರಿಡ್ ತಳಿಗಳು ನಮ್ಮ ಗದ್ದೆಬಯಲುಗಳನ್ನು ಆವರಿಸಿಕೊಂಡಾಗಿತ್ತು. ಹಾಗೇ, ಟಿಲ್ಲರ್ ಮತ್ತು ಟ್ರಾಕ್ಟರ್‌ಗಳು, ಗದ್ದೆಗೆ ಸಾಗುವಳಿಯ ಬಂಡವಾಳವನ್ನು ಹೆಚ್ಚು ಮಾಡಿದವೇ ಹೊರತು, ಆದಾಯದ ಮೇಲೆ ಅಂತಹಾ ಪರಿಣಾಮವನ್ನು ಬೀರಲಿಲ್ಲ. ಗೊಬ್ಬರ, ಕೀಟನಾಶಕ ಮತ್ತು ಟ್ರಾಕ್ಟರ್ ಗಳು ತೋಟದ ಕೆಲಸಕ್ಕೂ ಉಪಯೋಗಿಸುತ್ತಿದ್ದಿದ್ದರಿಂದ, ಪ್ಲಾಂಟರ್ ಗಳು ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ನಿಧಾನವಾಗಿ ಇದರ ಬಿಸಿ ತಟ್ಟಲು ಶುರುವಾಯ್ತು. ಜಾಗತೀಕರಣ ಶುರುವಾದ ಮೊದಲ ದಿನಗಳಲ್ಲೇ ಸರ್ಕಾರ ಮಾಡಿದ ಮೊದಲ ಕೆಲಸ ಎಂದರೆ, ಗೊಬ್ಬರದ ಮೇಲಿನ ಸಬ್ಸಿಡಿ ತೆಗೆದದ್ದು. ನಿಧಾನವಾಗಿ, ಒಂದೊಂದೇ ಬದಲಾವಣೆ ಬರಲು ಶುರುವಾದವು. ಕೃಷಿಗೆ ಭವಿಷ್ಯವಿಲ್ಲ ಅನ್ನೋದನ್ನ ನಾನು ಕಾಲೇಜಿನ ದಿನಗಳಿಂದ ಕೇಳುತ್ತಲೇ ಬಂದಿದ್ದೇನೆ. ಅದಕ್ಕೆ ಪೂರಕವಾಗಿ, ಊರಿನಿಂದ ಯುವಕರು ಒಬ್ಬೊಬ್ಬರೇ ಖಾಲಿಯಾಗಿ ಪಟ್ಟಣ ಸೇರಿದರು, ಇಷ್ಟೆಲ್ಲದರ ಮಧ್ಯ ಬದಲಾವಣೆಯಾಗದಿದ್ದದ್ದು ಒಂದೇ…. ಭತ್ತದ ಬೆಲೆ. ಬಂಡವಾಳ ನೂರು ಪಟ್ಟು ಹೆಚ್ಚಾದಾಗ, ಭತ್ತ ಬೆಳೆದವರಿಗೆ, ಬೆಲೆ ಹತ್ತು ಪಟ್ಟು ಸಹ ಹೆಚ್ಚಲಿಲ್ಲ. ಅಲ್ಲಿಯವರೆಗೆ ಹುಂಡಿ ಲೆಕ್ಕದಲ್ಲಿ ನೆಡೆಯುತ್ತಿದ್ದ ಭತ್ತದ ಕೃಷಿಯನ್ನು ಬಂಡವಾಳ ಮತ್ತು ಉತ್ಪತ್ತಿಯ ದೃಷ್ಟಿಯಲ್ಲಿ ನೋಡುವುದು ಅನಿವಾರ್ಯವಾಯ್ತು.

ಒಂದು ಕಾಲದಲ್ಲಿ ಎಕರೆಗೆ ಹದಿನೆಂಟು, ಇಪ್ಪತ್ತು ಕ್ವಿಂಟಾಲ್ ಬೆಳೆಯುತ್ತಿದ್ದವರು ಸಹ ಭತ್ತದ ಬೆಳೆ ಕೈಬಿಟ್ಟು ಹತ್ತು-ಹದಿನೈದು ವರ್ಷಗಳಾಗಿವೆ. ಬೇಲೂರಿನ ಹತ್ತಿರದ ಗೆಂಡೇಹಳ್ಳಿಯಲ್ಲಿರುವ ನಮ್ಮ ರೈಸ್ ಮಿಲ್ ಒಟ್ಟಾರೆ ನೆಡೆಯುತ್ತಿದೆ ಹೊರತು, ಅದು ಎಷ್ಟು ದಿನ ನೆಡೆಸುತ್ತೇವೆ ಅನ್ನುವುದರ ಬಗ್ಗೆ ನಮಗ್ಯಾರಿಗೂ ಗ್ಯಾರಂಟಿ ಇಲ್ಲ. ಆಗಲ್ಲ ಕಣ್ರಿ. ನಮ್ಮೂರಲ್ಲಿ ರಾಜೇಗೌಡ್ರು ಭತ್ತ ಬೆಳೇಯೋದ್ರಲ್ಲಿ ತುಂಬಾ ಆಸಕ್ತಿ ಇದ್ದವರು. ಅವರೇ ಬಿಟ್ಟು ಹತ್ತು-ಹನ್ನೆರೆಡು ವರ್ಷ ಆಗಿರಬಹುದು. ನಾನೂ ಸಹ ಹದಿನೈದು ವರ್ಷದಿಂದ ಗದ್ದೆ ಮಾಡಿಲ್ಲ. ಕೊನೆ ಸಲ ಮಾಡ್ದಾಗ, ಎಕರೆಗೆ ಏಳೆಂಟು ಸಾವಿರ ಲಾಸ್ ಆಗಿತ್ತು ನೋಡಿ. ಆಗ ಆಳುಗಳ ಸಂಬಳ ಕಮ್ಮಿ ಇತ್ತು. ಈಗಿನ ರೇಟಿನಲ್ಲಿ ಆಳುಗಳಿಗೆ ಸಂಬಳ ಕೊಟ್ಟು ಹ್ಯಾಗೆ ಮಾಡ್ಸೋದು ಹೇಳಿ. ಮುಂಚೆ ಎಲ್ಲ ತಿಂಗಳಿಗೆ ಮೂವತ್ತು ಕ್ವಿಂಟಾಲ್ ಅಕ್ಕಿ ಮಿಲ್ ಮಾಡಿಸ್ತಿದ್ವಿ. ಮನೆಯಲ್ಲಿ ಅಷ್ಟೊಂದು ಜನ ಇರ್ತಿದ್ರು. ಈಗೆಲ್ಲ ಮಕ್ಕಳು ಹಾಸ್ಟೆಲ್ ನಲ್ಲಿ ಇರ್ತಾರೆ… ಗಂಡ ಹೆಂಡತಿ ಮತ್ತೆ ನಾಯಿಗಳಿಗೆ ಎಷ್ಟು ಬೇಕಾಗುತ್ತೆ ಹೇಳಿ, ಅದಕ್ಕೆ ಅಂತ ಇಷ್ಟೆಲ್ಲ ತಲೆ ಹಾಳು ಮಾಡ್ಕೊಂಡು, ದುಡ್ಡು ಕೂಡ ಕಳ್ಕೋಳ್ಳೋಕೆ ಯಾರು ರೆಡಿ ಇದ್ದಾರೆ ಹೇಳಿ?’’ ಅಂತ ಕೆಂಜಿಗೆ ಪ್ರದೀಪ್ ಕೇಳಿದಾಗ, ಬಯಲುಸೀಮೆಯಲ್ಲಿ ಭತ್ತ ಬೆಳದಷ್ಟು ಸುಲಭ ಅಲ್ಲ ಅಂತ ಅನ್ನಿಸ್ತು.

ಎಲ್ಲದಕ್ಕಿಂತ ಕಷ್ಟ ನಾಟಿ ಮಾಡೋದು. ಈಗ ಜನ ಸಿಗೋಲ್ಲ ಅಂತ, ನಾಟಿ ಮಡೋ ಮಿಷಿನ್ ಗಳು ಬಂದಿವೆ. `ಅದಕ್ಕೇನಂತಾರೋ?’ ಅಂತ ನನ್ನ ಮಿತ್ರ ಮಡಿಕೇರಿ ಹತ್ತಿರದ ಚಟ್ಟಳ್ಳಿಯ ಅಪ್ಪಣ್ಣನನ್ನು ಕೇಳಿದೆ. `ಗೊತ್ತಿಲ್ಲ ಕಣೋ… ನಾನಂತೂ ಪ್ಯಾಡಿ ಟ್ರಾನ್ಸ್ ಪ್ಲಾಂಟೇಶನ್ ಮಿಷಿನ್ ಅಂತ ಕರೀತೀನಿ,’ ಅಂದ. ಅದರಿಂದ ನಾಟಿ ಕೆಲಸ ಸುಲಭ ಆಗಿದೆ ಅಂತ ತೋರಿಸೋಕೆ, ಒಂದು ಸಣ್ಣ ವಿಡಿಯೋ ಸಹ ಕಳುಹಿಸಿದ. ಗದ್ದೆ ಕೆಲಸಕ್ಕೆ ಜನಗಳನ್ನು ಹುಡುಕಿ, ಹುಡುಕಿ, ರೋಸಿ ಹೋಗಿ ಇದನ್ನ ತಂದು ಇಟ್ಕೊಂಡಿದ್ದಾನೆ ಅಂತ ಅನ್ನಿಸ್ತು.

“ಕೆಲ್ಸ ಏನೋ ಸುಲಭ ಆಗ್ತದೆ ಕಣೋ… ಅದಕ್ಕೆ ಒಂದೆರೆಡು ಲಕ್ಷ ಕೊಟ್ಟು, ವರ್ಷಕ್ಕೆ ಒಂದ್ ದಿನ ಉಪಯೋಗ್ಸಿದ್ರೆ, ಲೆಕ್ಕಾಚಾರ ಸರಿ ಆಗಲ್ಲ. ಮತ್ತೆ ಮುಂದಿನ ವರ್ಷ ಉಪಯೋಗ್ಸೋ ಹೊತ್ತಿಗೆ, ಮತ್ತೆ ಸರ್ವಿಸ್ಸು, ಮಣ್ಣು, ಮಸಿ ಅಂತ ಇನ್ನೊಂದಿಷ್ಟು ಖರ್ಚು ಬರುತ್ತೆ ಹೊರ್ತು, ಅದೇನು ಟಿಲ್ಲರ್ ಥರ ಬೇರೆದಕ್ಕೆ ಉಪಯೋಗ್ಸೋಕ್ಕಾಗಲ್ಲಲ್ಲ,’’ ಅಂತ ನಮ್ಮ ಕುಟುಂಬದವರೇ ಆದ ಶಶಿಧರಣ್ಣ ಹೇಳಿದ್ರು.

“ಇವೆಲ್ಲ ಕಮ್ಯೂನಿಟಿ ಬೇಸ್ಡ್ ಇರ್ಬೇಕು ಕಣೋ… ಆದ್ರೆ, ನಮ್ಮವರ್ಯಾರೂ ಇವನ್ನ ಸರಿ ಮಾಡೋದಿಲ್ಲ. ಆ ತುದಿಯಾಲದ ಕಡೆಯವರ್ಯಾರೋ ಬಾಡಿಗೆಗೆ ಕೊಡೋಕೆ ಅಂತ ಒಂದು ಮಿಷಿನ್ ತಂದಿಟ್ಕೊಂಡಿದ್ದಾರೆ. ಜನಗಳು ನಾಟಿ ಮಾಡೋದಾದ್ರೆ, ಅಗಾಡಿ ಸಸಿಗಳು ಇಪ್ಪತೈದು, ಮೂವತ್ತು ದಿನ ಆಗಿರಬೇಕು. ಇವೆಲ್ಲ ಆದ್ರೆ, ಹನ್ನೆರೆಡೇ ದಿನ ಅಗಾಡಿಯಲ್ಲಿ ಇರಬೇಕು. ಆಮೇಲೆ ಆದ್ರೆ ಪ್ರಯೋಜನ ಇಲ್ಲ. ಇಲ್ಯಾರೋ ಒಬ್ರು ಇದೇ ಥರ ಮಿಷಿನ್ ಬಾಡಿಗೆಗೆ ಕೇಳಿದ್ರಂತೆ. ಅವ್ರೂ ಇಂಥಾ ತಾರೀಕು ಅಂತ ಕೊಟ್ಟಿದ್ರಂತೆ. ಅದಕ್ಕೆ ಸರಿಯಾಗಿ ಇವ್ರು ಅಗಾಡಿ ಹಾಕ್ಕೊಂಡಿದ್ದಾರೆ. ಇವ್ರಿಗೆ ಬರೋಕ್ಕಿಂತ ಮುಂಚೆ ದೇವಲಕೆರೇಲಿ ಇನ್ನೊಬ್ರಿಗೆ ಬಾಡಿಗೆಗೆ ಹೋಗೋಕೆ ಮಾತಾಗಿತ್ತಂತೆ. ಅವ್ರು ಅಲ್ಲಿಗೆ ಹೋದ್ಮೇಲೆ ಗೊತ್ತಾಯ್ತಂತೆ… ಈ ಮಿಷಿನ್ ಬರೋ ವಿಷ್ಯ ಗೊತ್ತಾಗಿ, ಅಲ್ಲಿ ಊರವ್ರೆಲ್ಲ ಅಗಾಡಿ ಮಾಡ್ಕೊಂಡು ಕಾಯ್ತಿದ್ರಂತೆ. ಏನೇ ಮಾಡಿದ್ರೂ, ಇಡೀ ಗದ್ದೆಬೈಲಿನ ನಾಟಿ ಆದ ಹೊರ್ತು ಗದ್ದೆಯಿಂದ ಮಿಷಿನ್ ತೆಗೆಯೋಕೆ ಬಿಡಲ್ಲ ಅಂತ ಗಲಾಟೆ ಮಾಡಿದ್ರು. ಅವ್ರು ಅಲ್ಲಿ ಮುಗ್ಸಿ, ಇಲ್ಲಿಗೆ ಬರೋ ಹೊತ್ತಿಗೆ, ಇವರ ತಾರೀಖು ಕಳ್ದು ಹದಿನೈದು ದಿನ ಆಗಿತ್ತು. ಅಗಾಡಿನೂ ವೇಸ್ಟು, ಗದ್ದೆ ಹೂಡಿ ಸರಿ ಮಾಡ್ಕೊಂಡಿದ್ದೂ ಲಾಸು. ಹೀಗಾದ್ರೆ, ಯಾರು ಗದ್ದೆ ಮಾಡ್ತಾರೆ ಹೇಳು,’’ ಅಂತ ಕೇಳಿದ್ರು.

ಅವರ ಮನೆ ಮುಂದಿನಿಂದ ಹಾಳುಬಿದ್ದ ಮೂಡಸಸಿ ಗದ್ದೆಬೈಲು ಕಾಣುತ್ತಿತ್ತು. “ಎಲ್ಲರೂ ಒಂದೊಂದು ರೌಂಡು ಶುಂಠಿ ಬೆಳೆಯೋಕೆ ಕೊಟ್ಟಾಯ್ತು. ಇನ್ನೊಂದ್ಮೂರ್ ನಾಲ್ಕು ವರ್ಷ ಬಿಟ್ಟು, ತೋಟ ಕೂರ್ಸೋಕ್ಕೆ ಆಗುತ್ತಾ ಅಂತ ನೋಡ್ಬೇಕು,’’ ಅಂತ ಶಶಿಧರಣ್ಣ ಹೇಳ್ದಾಗ, ಇಲ್ಲಿ ಇನ್ಯಾವತ್ತೂ ಭತ್ತದ ಗದ್ದೆ ನೋಡೋದಿಲ್ಲ ಅನ್ನೋದು ಖಾತ್ರಿಯಾಯ್ತು.

Leave a Reply

Your email address will not be published.