ತೃಣಾವಾಂತರ -1 : ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ

- ಸೃಷ್ಟಿ ಮಾಧವ್

ಯಾವುದೋ ಮಾತಿನ ನಡುವೆ, `ಗದ್ದೆ ಮಾಡೋದು ನಿಲ್ಸಿದ್ದೀವಿ’ ಅಂತ ಅಮ್ಮ ಹೇಳ್ದಾಗ, ಅಪ್ರಯತ್ನಕವಾಗಿ ಪ್ರಶ್ನೆ ಹೊರಬಂತು

`ಯಾಕೆ?’

`ಹುಲ್ಲಿನ ದುಡ್ಡಾದ್ರೂ ಉಳಿದಿದ್ರೆ ಮಾಡ್ಬೋದಿತ್ತು. ಮಾಡಿದ್ರೆ ಬರೀ ಲಾಸ್. ಅದ್ರ ಬದ್ಲು, ಅಕ್ಕಿ ತಗೊಂಡು ಊಟ ಮಾಡೋದೇ ಒಳ್ಳೇದು. ಹ್ಯಾಗೂ ಇರೋದೇ ನಾವಿಬ್ರು,’ ಅಂತ ಅಣ್ಣ (ಅಪ್ಪ) ಹೇಳ್ದಾಗ, ಅದಕ್ಕೇನು ಹೇಳ್ಬೇಕೂಂತ ಗೊತ್ತಾಗಲಿಲ್ಲ.

ವರ್ಷಗಳು ಕಳೆದಹಾಗೆ, ಊರಿಗೆ ಹೋದಾಗಲೆಲ್ಲ ಒಬ್ಬೊಬ್ಬರದೇ ಗದ್ದೆಗಳು ಖಾಲಿ ಕಾಣಲು ಆರಂಭಿಸಿದವು. ಈಗೊಂದೆರೆಡು ಮೂರು ವರ್ಷಗಳ ಈಚೆಗೆ, ನಮ್ಮ ಮೂಡುಸಸಿಯ ಗದ್ದೆಬೈಲಿನಲ್ಲಿ ಒಬ್ಬರೂ ಭತ್ತ ಬೆಳೆದದ್ದನ್ನು ನೋಡಿಲ್ಲ. ಅದರ ಬದಲು, ಶುಂಠಿ ಬೆಳೆದದ್ದು ನೋಡಿ ಪಿಚ್ಚೆನಿಸಿತು.

ಹದಿನೈದು, ಇಪ್ಪತ್ತು ವರ್ಷಗಳ ಹಿಂದೆಯೇ ಮೂಡಿಗೆರೆ ತಾಲ್ಲೂಕಿನಲ್ಲಿರುವ ನಮ್ಮ ಕುಟುಂಬ ಆಧುನಿಕ ಬದುಕಿನ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಶುರುವಾಗಿತ್ತು. ಗಂಡು ಮಕ್ಕಳೆಲ್ಲ ಡಾಕ್ಟರ್, ಇಂಜೀನಿಯರ್ ಅಥವಾ ಬೆಂಗಳೂರಿನಲ್ಲಿ ಕೆಲಸ ಅಂತ ಊರು ಬಿಡೋಕೆ ಶುರುಮಾಡಿದ್ರು. ಹೆಚ್ಚಿನ ಹೆಣ್ಣುಮಕ್ಕಳು ಬೆಂಗಳೂರು ಅಥವಾ ಅಮೇರಿಕಾಗೆ ಮದುವೆಯಾಗಲು ಇಷ್ಟ ಪಡಲು ಶುರುಮಾಡಿದ್ದರೇ ಹೊರತು, ಅನುಕೂಲಸ್ತ ಪ್ಲಾಂಟರ್‌ಗಳನ್ನು ಮದುವೆಯಾಗೋಕ್ಕೆ ಇಷ್ಟಪಡುತ್ತಿರಲಿಲ್ಲ. ಐವತ್ತಕ್ಕೂ ಹೆಚ್ಚು ಮನೆಗಳಿರುವ, ಏಳೆಂಟು ತಲೆಮಾರಿನ ಚರಿತ್ರೆ ಹೊಂದಿರುವ ಕುಟುಂಬದ ಒಂದೊಂದು ಮನೆಗಳೂ ನಿಧಾನವಾಗಿ ವೃದ್ಧಾಶ್ರಮದ ಕಳೆ ಹೊರಲು ಶುರುಮಾಡಿದ್ದವು. ಹೆಚ್ಚು ಕಡಿಮೆ, ಅಲ್ಲಿಂದ ಶುರುವಾಯ್ತು ಭತ್ತದ ಗದ್ದೆಗಳ ಅವಸಾನ.

ಚಿಕ್ಕಂದಿನಿಂದ ಯೋಚಿಸುತ್ತಿದ್ದೆ…… ಈ ಭತ್ತದ ಗದ್ದೆಬಯಲುಗಳು ಅನ್ನೋ ವ್ಯವಸ್ಥೆ ಮಲೆನಾಡಿನಲ್ಲಿ ಹೇಗೆ ಹುಟ್ಟಿಕೊಂಡವು ಅಂತ. ಮೂರು ದಿಕ್ಕಿನಿಂದ ದಟ್ಟವಾದ ಹಸಿರು ಕಾಡುಗಳ ಮಧ್ಯ, ಕಣ್ಣುಹಾಯಿಸಿವಷ್ಟು ದೂರವೂ ಕಾಣುತ್ತಿರುತ್ತವೆ ಈ ಭತ್ತದ ಗದ್ದೆಬಯಲು. ಮಧ್ಯದಲ್ಲೆಲ್ಲೋ ಒಂದು ಹಳ್ಳವೋ, ನದಿಯೋ ಹರಿಯುತ್ತಿರುತ್ತದೆ. ಆಗಿನ ಮಳೆಗಾಲಗಳಲ್ಲಿ ಸೊಕ್ಕಿ, ಭಯಾನಕವಾಗಿ ಹರಿತ್ತಿದ್ದ ಈ ಹಳ್ಳಗಳು ಕೆಲವೊಮ್ಮೆ ಪ್ರಳಯವನ್ನೂ ಸೃಷ್ಟಿಸಿರುತ್ತಿದ್ದವು. ಮಳೆಗಾಲ ನಿಂತ ನಂತರ ಏನೂ ನೆಡೆದಿಲ್ಲ ಎನ್ನುವಂತೆ ಪ್ರಶಾಂತವಾಗಿ ಹರಿಯುತ್ತಿರುತ್ತಿದ್ದವು.

ಆಗೆಲ್ಲ ಅನ್ನಿಸ್ತಿತ್ತು… ಈ ಮಲೆನಾಡಿನ ಜೀವನದ ಸಂಗಮ ಸ್ಥಳವೇ ಈ ಗದ್ದೆಗಳು ಅಂತ. ಬೇಸಿಗೆಯಲ್ಲಿ ಹಳ್ಳಗಳು ಹೌದೋ ಅಲ್ವೋ ಅಂತ ಹರೀತ್ತಿರುತ್ತಿದ್ದವು. ಒಣಗಿದ ಗದ್ದೆಬಯುಗಳಂತೂ, ಕಂದು ಬಣ್ಣಕ್ಕೆ ತಿರುಗಿ, ಬೇಸಿಗೆಯ ಬಿರು ಬಿಸಿಲಲ್ಲಿ ಕಣ್ಣೇ ಬಿಡಲು ಆಗುತ್ತಿರಲಿಲ್ಲ. ಬದದ ಮೇಲಿದ್ದ ಒಣಗಿದ ಹುಲ್ಲುಗಳನ್ನು ಅಲ್ಲೊಂದು, ಇಲ್ಲೊಂದ ದನ ಮೇಯುತ್ತಿದ್ದವು. ದನಗಳನ್ನು ಗದ್ದೆ ಬಯಲಲ್ಲಿ ಮೇಯಲು ಬಿಟ್ಟ ದನ ಕಾಯೋ ಹುಡುಗರು ಮತ್ತೆ ರಜೆಗೆಂದು ಬಂದ ಸಾಹುಕಾರರ ಮಕ್ಕಳು, ಹಳ್ಳಗಳಲ್ಲಿ ಸಣ್ಣ ಸಣ್ಣ ಗುಂಡಿಗಳನ್ನ ಹುಡುಕಿ, ಅಲ್ಲಿ ಏಡಿ, ಮೀನುಗಳನ್ನು ಹಿಡಿಯೋ ಕಾರ್ಯಕ್ರಮ ಹಾಕಿಕೊಂಡಿರುತ್ತಿದ್ದರು. ಏಡಿ ಕೈಲೋ, ಔಲು ಮೀನು ಕೈಲೋ, ಕೈಗಳಿಗೆ ಗಾಯಮಾಡಿಕೊಂಡರೂ ಬಿಡದೆ, ಒಂದಿಷ್ಟನ್ನು ಅಲ್ಲೇ ಸುಟ್ಟು ತಿಂದರೇನೇ, ಆ ಶಿಕಾರಿಗೆ ಒಂದು ಗಮ್ಮತ್ತು.

ರಜೆ ಮುಗಿಯೋ ಹೊತ್ತಿಗೆ ಒಂದೆರೆಡು ಹದ ಮಳೆ ಬಂದಿರುತ್ತು. ನಿಧಾನವಾಗಿ ಗದ್ದೆಗಳಲ್ಲಿ ಚಟುವಟಿಕೆ ಶುರುವಾಗುತ್ತಿತ್ತು. ಒಂದೆರೆಡು ಎಕರೆ ಇರೋ ರೈತರು ಎತ್ತಿನ ಸಹಾಯದಿಂದ ಹೂಡಿದರೆ, ಸ್ಚಲ್ಪ ಅನುಕೂಸ್ಥರ ಗದ್ದೆಗಳಲ್ಲಿ, ಅವರ ಹಿಡುವಳಿಗೆ ತಕ್ಕ ಹಾಗೆ ಟಿಲ್ಲರ್ ಅಥವಾ ಟ್ರಾಕ್ಟರ್ ಗಳನ್ನು ಗದ್ದೆಗೆ ಇಳಿಸುತ್ತಿದ್ದರು. ಹಾಗೇನೇ, ಹಳ್ಳಗಳಿಂದ ಗದ್ದೆಗೆ ನೀರು ಬರುವ ಕಾಲುವೆಗಳನ್ನು ಸರಿ ಮಾಡಿಕೊಳ್ಳುತ್ತಿದ್ದರು.. ತಗ್ಗಿನ ಗದ್ದೆಯವರಿಗೆ ಅಷ್ಟು ಸಮಸ್ಯೆ ಇರುತ್ತಿರಲಿಲ್ಲ, ಆದರೆ, ಮಕ್ಕಿಗದ್ದೆಯವರಿಗೆ ಇದರ ಅಗತ್ಯ ಹೆಚ್ಚಾಗಿತ್ತು. ಇದೇ ಸಮಯಕ್ಕೆ ಸರಿಯಾಗಿ, ಅಷ್ಟು ದಿನ ಅಲ್ಲೊಂದು, ಇಲ್ಲೊಂದು ಕಾಣುತ್ತಿದ್ದ ಬೆಳ್ಳಕ್ಕಿಗಳು, ಸಾಲು ಸಾಲಾಗಿ ಹುಳ, ಹುಪ್ಪಟ್ಟೆ ಹಿಡಿಯೋಕೆ ಬಂದಿಳಿಯುತ್ತಿದ್ದವು. ಆಗಲೇ ಬೀಜದ ಭತ್ತ ತಂದು, ಗದ್ದೆಯ ಒಂದು ಭಾಗದಲ್ಲಿ ನೀರು ಕಟ್ಟಿ, ಅಗಾಡಿ ಹಾಕುತ್ತಿದ್ದರು.

ಆಷಾಡ ಮಳೆ ಧೋ ಅಂತ ಸುರಿಯೋಕೆ ಶುರುವಾದ ತಕ್ಷಣ, ಅಗಾಡಿಯಿಂದ ಸಸಿಗಳನ್ನು ಕಿತ್ತು ನಾಟಿ ಕೆಲಸ ಶುರುವಾಗುತ್ತಿತ್ತು. ಒಂದು ಕೈಯಲ್ಲಿ ಸಸಿಗಳ ಕಂತೆ ಹಿಡ್ಕೊಂಡು, ಇನ್ನೊಂದು ಕೈಯಲ್ಲಿ ಒಂದೊಂದನ್ನೇ ಸಾಲಾಗಿ ನೆಟ್ಟುಕೊಂಡು ಹೋಗೋದು ಒಂದು ಕಲೆ ಅಂತ ಅನ್ನಿಸ್ಥಿತ್ತು. ಮಲೆನಾಡಿನ ಆಷಾಡ ಮಾಸದಲ್ಲಿ ಹಗಲುಗಳೂ ಮುಸ್ಸಂಜೆಯಂತೆ ಇರುತ್ತವೆ. ಮನುಷ್ಯರನ್ನೇ ಆಚೀಚೆ ದೂಡುವ ಗಾಳಿ, ಕಾಲಿಟ್ಟಲ್ಲೆಲ್ಲ ನೀರು, ಕೆಸರು, ನೆಡೆಯುವಾಗ ಮರಗಳ ಮೇಲಿಂದ ತಲೆ ಮೇಲೆ ಬೀಳುವ ಮಳೆ ಹನಿಗಳು…ದೂರದಿಂದ ನೋಡಿದಾಗ, ಗದ್ದೆಬಯಲುಗಳು ಮತ್ತು ತೋಟಗಳ ಮೆಲೆ ಮೂಡುವ ಮಂಜಿನ ಸಾಲು. ಒಂದ್ಸಲ ನೋಡೋಕೆ ಖುಶಿಯಾದ್ರೂ, ಅಲ್ಲಿರೋ ಜನಗಳಿಗೆ ಒಮ್ಮೊಮ್ಮೆ ರೋಸಿ ಹೋಗಿರುತಿತ್ತು. ಆಷಾಡ ಮಾಸದಲ್ಲಿ, ಕಂಬಳಿ ಹೊದ್ದು, ಬಗ್ಗಿ ನಿಂತುಕೊಂಡು, ಹತ್ತಾರು ಹೆಣ್ಣುಮಕ್ಕಳು ನಾಟಿ ಮಾಡೋದನ್ನ ನೋಡಿ ಎಷ್ಟೋ ವರ್ಷಗಳಾಗಿವೆ.

ನಾಟಿ ಕೆಲಸ ಮುಗಿದ ಮೇಲೆ ಗದ್ದೆಯಲ್ಲಿ ನೀರು ಕಟ್ಟೋದು, ನೀರು ಒಡೆಯೋದು ಬಿಟ್ಟರೆ, ಅಷ್ಟೇನೂ ಕೆಲಸ ಇರೋದಿಲ್ಲ. ಆಗಾಗ ಕಳೆ ಕೀಳೋದು, ಒಂದೆರೆಡು ಸಲ ಗೊಬ್ಬರ, ಬಿಟ್ಟರೆ, ಪೈರು ಹಣ್ಣಾಗುವವರೆಗೆ ಅದರ ಪಾಡಿಗೆ ಅವಿರುತ್ತವೆ. ಎಲ್ಲರೂ ಸೇರಿ ದನಗಳು ಬೈಲಿಗೆ ಇಳಿಯದಂತೆ ನೋಡಿಕೊಳ್ಳುತ್ತಿದ್ದರು. ಇದರ ಮಧ್ಯ, ಹುಲ್ಲೇಡಿ ಸಾರು, ಕಲ್ಲೇಡಿ ಸಾರು, ಗದ್ದೆಯ ಬಾವಿಯಲ್ಲಿ ಗಾಳ ಹಾಕಿ ಕೊರೆ ಮೀನು ಹಿಡಿಯೋದು, ನಾಲೆಗಳಲ್ಲಿ ಬರೋ ಮಳಲಿಮೀನುಗಳ ಶಿಕಾರಿ ನೆಡೆಯುತ್ತಲೇ ಇರುತ್ತಿತ್ತು.

ದೊಡ್ಡ ಶಿಕಾರಿ ಮಾತ್ರ ಕೊನೇ ಬಾರಿಗೆ ನೀರೊಡೆಯುವಾಗ ಇರುತ್ತಿತ್ತು. ಮಾಗಿಯ ಕೊನೆಯಲ್ಲಿ, ತೆನೆಗಳು ಹಣ್ಣಾದಾಗ, ನೀರನ್ನೆಲ್ಲ ಹಳ್ಳಕ್ಕೆ ಬಿಡಬೇಕಾಗುತ್ತಿತ್ತು. ಆಗ, ಸಂದುಗೊಂದುಗಳಲ್ಲಿ ಅಡಗಿಕೊಂಡಿದ್ದ ಮೀನುಗಳೆಲ್ಲ ಹಳ್ಳದ ಕಡೆಗೆ ಧಾವಿಸುವಾಗ, ಬೈಲಿನಲ್ಲಿ ಯಾರ್ಯಾರ ಗದ್ದೆಗಳಿವೆಯೋ, ಅವರೆಲ್ಲ ಬಂದು ಸೇರುತ್ತಿದ್ದರು. ಬಲೆ, ಗೊರಬು, ಏನಾದ್ರೂ ಆಯ್ತು. ದೊಡ್ಡ ಮೀನುಗಳು ನಾಲೆಗಳಲ್ಲಿ ಕಂಡವೆಂದರೆ, ಕೈಲಿರುವ ಕತ್ತಿಯಲ್ಲಿ ಕಡಿಯುತ್ತಿದ್ದರು. ಆಗ ಸಿಕ್ಕುವ ಮೀನುಗಳಿಗೆ ಎಲ್ಲರೂ ಪಾಲುದಾರರೆ. ಗದ್ದೆ ಕುಯ್ಲಾದ ತಕ್ಷಣ, ಯಾರ್ಯಾರ ಗದ್ದೆಗಳಲ್ಲಿ ಬಾವಿಗಳನ್ನು ಮಾಡಿಕೊಂಡಿದ್ದರೋ, ಅವರೆಲ್ಲ ಬಾವಿ ಖಾಲಿ ಮಾಡೋಕೆ ಶುರುಮಾಡುತ್ತಿದ್ದರು. ಆಗ ಸಿಗೋ ಏಡಿ ಮೀನುಗಳನ್ನು ಕೆಲವೊಮ್ಮೆ ಊರಿಡೀ ಹಂಚುತ್ತಿದ್ದರು. ಆಗಿನ ತುಂಬಿದ ಮನೆಗಳಿಗೆ ಕೂಡ ಅಷ್ಟೊಂದು ಏಡಿ, ಮೀನು ಹೆಚ್ಚಾಗುತ್ತಿದ್ದವು.

ಒಕ್ಕಲಾಟ ಇನ್ನೊಂದು ಸಂಭ್ರಮ. ಅದು ಟಿಲ್ಲರ್ ನಲ್ಲಿ ಬೇಕಾದ್ರೂ ಆಗಬಹುದು, ಅಥವಾ ಎತ್ತುಗಳನ್ನು ಕಟ್ಟಿ ಬೇಕಾದ್ರೂ ಆಗಬಹುದು. ಆಗೆಲ್ಲ ಸಾಯಂಕಾಲದ ಮೇಲೆ ಒಕ್ಕಲಾಟ ಶುರುವಾಗುತ್ತಿತ್ತು. ಆಳುಗಳೂ ಅದನ್ನೇ ಬಯಸುತ್ತಿದ್ದರು ಅಂತ ಕಾಣುತ್ತೆ. ಹದಿನೈದು ದಿನಗಳ ಹಿಂದೆನೆ ಯಾರಾದ್ರು ಕಳ್ಳಭಟ್ಟಿ ಕಾಯಿಸುವವನಿಗೆ ಹೇಳಿರುತ್ತಿದ್ದರು. ಕೆಲವರು ಒಂದಿಪ್ಪತ್ತು ಕೇಜಿ ಬೆಲ್ಲ ತರಿಸಿ ಮನೆ ಹತ್ತಿರದ ಯಾವುದಾದರೂ ಸ್ಟೋರ್ ರೂಮಿನಲ್ಲಿ ಭಟ್ಟಿ ಇಳಿಸೋ ಕೆಲಸಕ್ಕೆ ಶುರು ಮಾಡಿಕೊಳ್ಳುತ್ತಿದ್ದರು. ರಾತ್ರಿಗೆ ಶರಾಬಿನ ಜೊತೆ, ಕೋಳಿಯೋ, ಹಂದಿಯೋ ಇರುತ್ತಿತ್ತು. ನಿಧಾನವಾಗಿ ಒಕ್ಕಲಾಟದ ಜಾಗಕ್ಕೆ ಟ್ರಾಕ್ಟರ್ ಗೆ ಅಳವಡಿಸೋ ಮಿಷೀನು ಬಂತೋ, ಒಕ್ಕಲಾಟದ ಸಂಭ್ರಮನೂ ನಿಧಾನವಾಗಿ ಕಣ್ಣು ಮುಚ್ಚತೊಡಗಿತು.

ಆದರೆ, ಬಯಲುಸೀಮೆಯಲ್ಲಿ ಬೆಳೆದಂತೆ ಎರಡು ಬೆಳೆಯನ್ನು ಬೆಳೆಯುವುದಾಗಲೀ, ಕರಾವಳಿಯಂತೆ ಮೂರು ಬೆಳೆ ತೆಗೆಯುವುದಾಗಲೀ, ಮಲೆನಾಡಿನಲ್ಲಿ ಸಾಧ್ಯವಿಲ್ಲ. ಹಾಗಾಗಿ, ಬಯಲುಸೀಮೆ ಮತ್ತು ಕರಾವಳಿಗೆ ಹೋಲಿಸಿದರೆ, ಮಲೆನಾಡಿನಲ್ಲಿ ಭತ್ತದ ಫಸಲು ಎಕರೆವಾರಿಗೆ ಕಮ್ಮಿ ಅಂತಲೇ ಹೆಳಬಹುದು.
ಇತ್ತೀಚೆಗೆ ಊರಿಗೆ ಹೋದಾಗ ಮೂಡುಸಸಿ ಬೈಲಿನ ಪಕ್ಕ ಕಾರು ನಿಲ್ಲಿಸಿದೆ. ಕೆಲವು ಕಡೆ ಶುಂಠಿ ಬೆಳೆದವರು ರೇಟ್ ಬರಲಿಲ್ಲ ಅಂತ ಹಾಗೇ ಬಿಟ್ಟು ಹೋಗಿದ್ದರು. ಇನ್ನುಳಿದಂತೆ, ಒತ್ತೊತ್ತಾಗಿ ಹುಲ್ಲುಗಳು ಮೊಣಕಾಲ ಎತ್ತರ ಬೆಳೆದು ನಿಂತಿದ್ದವು. ಹಾಗೇ ದೂರದವರೆಗೆ ಕಣ್ಣು ಹಾಯಿಸಿ ನೋಡಿದೆ. ತುದಿಯಾಲದ ಬೈಲು ಕೂಡೋ ಜಾಗದವರೆಗೂ, ಅಂಗೈಯಗಲದ ಹಸಿರು ಜಾಗ ಕಾಣಿಸಲಿಲ್ಲ.

ಮುಂಚೆಲ್ಲ ಇದೇ ಗದ್ದೆ ಬೈಲು ಇಳಿದು ದಾಟಿಕೊಂಡು ನಮ್ಮೂರಾದ ಮಾಕೋನಹಳ್ಳಿಗೂ ಹೋಗುತ್ತಿದ್ದೆ. ಯಾಕೋ, ಇಳಿಯೋಕೆ ಮನಸ್ಸು ಬರಲಿಲ್ಲ….

Leave a Reply

Your email address will not be published.