ತಲೆಯ ರಕ್ಷಣೆಯೂ ಜೀವ ಹಾನಿಯೂ

-ನಾ. ದಿವಾಕರ

helmetsನಂಬಿಕೆ ಮನುಷ್ಯನಿಗೆ ಕ್ಲಿಷ್ಟ ಸಂದರ್ಭಗಳಲ್ಲಿ ಸಾಂತ್ವನ ನೀಡುವ ಒಂದು ಸಾಧನ. ತಮ್ಮ ಮುಂದಿನ ಹಾದಿ ಯಾವುದು ಎಂದು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಾಗದೆ ಇದ್ದಾಗ ಬಹುಪಾಲು ಜನರು ಯಾವುದೋ ಒಂದು ನಂಬಿಕೆಗೆ ಜೋತು ಬೀಳುತ್ತಾರೆ. ದೇವರು, ದೇವಾಲಯ, ಚರ್ಚು, ಮಸೀದಿ, ಗುರುದ್ವಾರ ಇವೆಲ್ಲವೂ ಸಹ ಇಂತಹ ಸಾಂತ್ವನದ ಕೇಂದ್ರಗಳಾಗಿ ರೂಪುಗೊಂಡ ನಂತರವೇ ಇಂದು ಔದ್ಯಮಿಕ ಜಗತ್ತಿನ ಒಂದು ಭಾಗವಾಗಿವೆ. ಕಳೆದ ಐವತ್ತು ವರ್ಷಗಳಲ್ಲಿ ಈ ನಂಬಿಕೆಗಳಿಗೆ ಮತ್ತಷ್ಟು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮಠಗಳು, ಆಧ್ಯಾತ್ಮಿಕ ಕೇಂದ್ರಗಳು, ಯೋಗ ಕೇಂದ್ರಗಳು ಸೃಷ್ಟಿಯಾಗಿವೆ. ಧರ್ಮ, ಸಂಪ್ರದಾಯ ಮತ್ತು ಆಧ್ಯಾತ್ಮ ಈ ಮೂರೂ ವಿದ್ಯಮಾನಗಳು ಜನಸಾಮಾನ್ಯರ ಮನೋನಿಗ್ರಹಕ್ಕೆ ನೆರವಾಗುವಂತೆಯೇ ನಂಬಿಕೆಗಳನ್ನು ಗಟ್ಟಿಗೊಳಿಸುವ ಕಾಂಕ್ರೀಟ್ ಮಿಶ್ರಣದಂತೆಯೂ ಕಾರ್ಯ ನಿರ್ವಹಿಸುತ್ತವೆ.

ಆಧುನಿಕ ಜಗತ್ತಿನ ತಲ್ಲಣಗಳು, ಆತಂಕಗಳು ಮತ್ತು ಪಲ್ಲಟಗಳು ನಾಗರಿಕರನ್ನು ಕಂಗಾಲಾಗಿಸುತ್ತವೆ. ಹಾಗಾಗಿ ಯಾವುದೇ ಸುರಕ್ಷತಾ ಸಾಧನಗಳು ಎದುರಾದರೂ ಜನರು ಕೂಡಲೇ ಅಪ್ಪಿಕೊಳ್ಳುತ್ತಾರೆ. ದ್ವಿಚಕ್ರ ವಾಹನದ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವ ನಿಯಮವನ್ನೇ ನೋಡಿ. ಆರಂಭದಲ್ಲಿ ಎಲ್ಲೆಡೆ ವಿರೋಧ ವ್ಯಕ್ತವಾದರೂ ಜನ ನಿಯಮ ಪಾಲಿಸಲು ಸಜ್ಜಾಗುತ್ತಾರೆ. ಜೀವ ರಕ್ಷಣೆ ಮುಖ್ಯವಲ್ಲವೇ ?

ವಾಹನದಲ್ಲಿ ಚಲಿಸುವ ಜನರು ತಮ್ಮ ಜೀವ ರಕ್ಷಿಸಿಕೊಳ್ಳಬೇಕಾದರೆ ಹೆಲ್ಮೆಟ್ ಧರಿಸುವುದು ಅತ್ಯಗತ್ಯ ಎಂಬ ನಂಬಿಕೆಯ ಬೀಜಗಳನ್ನು ಆಳುವ ವರ್ಗಗಳು ಬಿತ್ತುತ್ತವೆ. ನಿಜ, ಜನರೂ ಇದನ್ನು ಪಾಲಿಸುತ್ತಾರೆ. ಆದರೆ ಜೀವ ರಕ್ಷಣೆಗೆ ಮೂಲತಃ ಅಗತ್ಯವಾಗಿರುವುದು ಅಪಘಾತ ನಿಯಂತ್ರಣ ಅಲ್ಲವೇ ? ಹೆಲ್ಮೆಟ್ ಧರಿಸುವುದರಿಂದ ಅನಾಹುತ ನಿಯಂತ್ರಿಸಬಹುದು. ಅಪಘಾತ ನಿಯಂತ್ರಿಸಲಾಗುವುದಿಲ್ಲ. ಆದರೆ ಅಪಘಾತ ನಿಯಂತ್ರಿಸಲು ಏನು ಮಾಡಬೇಕು ? ಈ ಕುರಿತು ಸರ್ಕಾರ ಯೋಚಿಸುವುದೇ ಇಲ್ಲ. ರಸ್ತೆಗಳಲ್ಲಿ ಗುಂಡಿಗಳು ಇರಕೂಡದು, ಸಂಚಾರ ಸುಗಮವಾಗಿರಲು ರಸ್ತೆಗಳ ದುರಸ್ತಿ ಕಾಲಕಾಲಕ್ಕೆ ನಡೆಯುತ್ತಿರಬೇಕು, ಪಾದಚಾರಿಗಳಿಗೆ ನಡೆದಾಡಲು ಸಾಕಷ್ಟು ಸ್ಥಳಾವಕಾಶ ಇರಬೇಕು, ಮೋಟಾರ್ ವಾಹನಗಳಲ್ಲದೆ ಇತರ ವಾಹನ ಬಳಸುವವರಿಗೂ ಅವಕಾಶ ಇರಬೇಕು, ವಾಹನ ದಟ್ಟಣೆ ಕಡಿಮೆಯಾಗಬೇಕು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹೀಗೆ ಹಲವು ಬೇಕುಗಳು ನಾಗರೀಕರ ಮನದಾಳದಲ್ಲಿರುತ್ತವೆ.

ಆದರೆ ಆಳ್ವಿಕರಿಗೆ ಈ ಬೇಕುಗಳು ಬೇಡವಾಗುತ್ತವೆ. ಏಕೆಂದರೆ ಕಾರ್ಪೋರೇಟ್ ಔದ್ಯಮಿಕ ಜಗತ್ತು ಜನಸಾಮಾನ್ಯರ ಬೇಕುಗಳಿಗೆ ಬ್ರೇಕು ಹಾಕುತ್ತವೆ. “ ನಿಮ್ಮ ಬಳಿ ಹಣ ಇಲ್ಲವೇ, ಬನ್ನಿ 0% ಬಡ್ಡಿಯಲ್ಲಿ ಮಾಸಿಕ ಕಂತಿನ ಮೂಲಕ ಪಾವತಿಸಿ ವಾಹನ ಖರೀದಿಸಿ ” ಎಂದು ಜಾಹೀರಾತು ನೀಡುವ ಉದ್ಯಮಗಳ ಸಂಖ್ಯೆ ಏರುತ್ತಲೇ ಇದೆ. ಹಾಗಾಗಿ ಅಪಘಾತ ನಿಯಂತ್ರಣ ಸರ್ಕಾರದ ಆದ್ಯತೆಯಲ್ಲ, ಮಾಲಿನ್ಯ ನಿಯಂತ್ರಣವೂ ಅಲ್ಲ.. ಓಡಾಡುವ ಸಾರ್ವಜನಿಕರ ತಲೆಗಳನ್ನು ರಕ್ಷಿಸಿದರೆ ಸಾಕು. ಉದ್ಯಮಿಗಳು ಬೀಸುವ ಬಲೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇರುತ್ತದೆ. ವಾಹನಗಳು ಹೆಚ್ಚಾದಷ್ಟೂ ಹೆಲ್ಮೆಟ್ ಹೆಚ್ಚಾಗುತ್ತದೆ. ಹೆಲ್ಮೆಟ್ ಹೆಚ್ಚಾದಷ್ಟೂ ಲಾಭ ಹೆಚ್ಚಾಗುತ್ತದೆ. ಅಪಘಾತ ತಪ್ಪುವುದಿಲ್ಲ ಅನಾಹುತ ಕಡಿಮೆಯಾಗುತ್ತದೆ. ಆದರೆ ಪರಿಸರಕ್ಕೆ ಆಗುವ ಅನಾಹುತ ಯಾರ ಗಮನಕ್ಕೂ ಬಾರದೆ ಹೆಚ್ಚಾಗುತ್ತಲೇ ಇರುತ್ತದೆ.

ನಂಬಿಕೆ, ಧರ್ಮ, ಆಧ್ಯಾತ್ಮಗಳ ನಡುವೆ ಹೆಲ್ಮೆಟ್ ಪ್ರವೇಶವೇಕೆ ಎಂದು ಅಚ್ಚರಿಯಾಗಬಹುದು. ಆದರೆ ಇದೂ ಸಹ ಒಂದು ನಂಬಿಕೆಯ ಮಾದರಿ. ಹೆಲ್ಮೆಟ್ ಧರಿಸುವ ಮೂಲಕ ಅಪಘಾತದಿಂದಾಗುವ ಅನಾಹುತ ಕಡಿಮೆಯಾಗುತ್ತದೆ ಎಂಬ ನಂಬಿಕೆ. ಆದರೆ ಅಪಘಾತಗಳನ್ನು ನಿಯಂತ್ರಿಸುವ ಸಾಧನೆಗಳೇ ಇಲ್ಲವಾದಾಗ ತಲೆಗೆ ಮಾತ್ರವೇ ರಕ್ಷಣೆ ಸಾಕೇ. ಇತರ ಅಂಗಾಂಗಗಳ ಗತಿ ಏನು ? ಶಿರಸ್ತ್ರಾಣದ ಬದಲು ದೇಹಸ್ತ್ರಾಣ ಬಳಸಲು ಸಾಧ್ಯವೇ ? ಈ ಪ್ರಶ್ನೆಗಳ ನಡುವೆಯೇ ನಾಗರಿಕರು ಆಳುವ ವರ್ಗಗಳ ಮೇಲಿನ ನಂಬಿಕೆಯಿಂದ ನಿಯಮ ಪಾಲಿಸಲು ಆರಂಭಿಸುತ್ತಾರೆ. ಪ್ರಾಣ ಹೋದರೂ ಚಿಂತೆಯಿಲ್ಲ ತಲೆ ಉಳಿಸಿಕೊಳ್ಳಿ ಎಂದು ಹೇಳುವ ಮೆದುಳಿಲ್ಲದ ದನಿಗಳಿಗೆ ಅಪಘಾತಗಳೂ ಅನಿವಾರ್ಯವಾಗುತ್ತವೆ. ಜನಸಂಖ್ಯಾ ನಿಯಂತ್ರಣವೂ ಒಂದು ಆದ್ಯತೆಯಲ್ಲವೇ ? ಆದರೆ ಈ ನಡುವೆ ಬಲಿಯಾಗುವುದಾದರೂ ಏನು ? ಜನಸಾಮಾನ್ಯರಲ್ಲಿರಬೇಕಾದ ಶಿಸ್ತು ಸಂಯಮ, ಆಳ್ವಿಕರಲ್ಲಿರಬೇಕಾದ ಜನಪರ ಕಾಳಜಿ ಮತ್ತು ಜನಸಾಮಾನ್ಯರ ಅಮೂಲ್ಯ ಜೀವ.

ಅಪಘಾತಗಳಿಗೆ ಕಾರಣಗಳನ್ನು ಹುಡುಕುತ್ತಾ ಹೊರಟಾಗ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಹಲವಾರು ಆಯಾಮಗಳು ಕಂಡುಬರುತ್ತವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಹನ ಬಳಕೆ ಮಾನವ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದೆ. ವಾಹನ ಚಲಾಯಿಸುವುದು ನಿತ್ಯಕರ್ಮಗಳಲ್ಲಿ ಒಂದಾಗಿದೆ. ದೈಹಿಕ ಕಸರತ್ತು ಮಾಡಲು ಮುಂಜಾನೆ ವಾಕಿಂಗ್ ಹೋಗುವ ಪ್ರಭೃತಿಗಳು ತುಸುದೂರ ವಾಹನದಲ್ಲಿ ಹೋಗಿ ನಂತರ ಪಾರ್ಕುಗಳಲ್ಲಿ ಗಂಟೆಗಟ್ಟಲೆ ವಾಕಿಂಗ್ ಮಾಡುವ ದೃಶ್ಯ ಸಾಮಾನ್ಯ. ಮೈಸೂರಿನ ಕುಕ್ಕರಹಳ್ಳಿಯ ಬಳಿ ಒಮ್ಮೆ ನೋಡಿದರೆ ಎದೆ ಝಲ್ಲೆನ್ನುತ್ತದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಪರಿಸರದಲ್ಲಿ ಬೆಳ್ಳಂಬೆಳಗ್ಗೆಯೇ ಮಾಲಿನ್ಯವನ್ನು ಹರಡುವ ಸುಶಿಕ್ಷಿತರ ದಂಡೇ ಅಲ್ಲಿ ನೆರೆದಿರುತ್ತದೆ.

ಇನ್ನು ಆಧುನಿಕ ಯುಗದ ವಿದ್ಯಾರ್ಥಿಗಳಿಗೆ ತಮಗೆ ಸೃಷ್ಟಿಕರ್ತ ಎರಡು ಕಾಲು ನೀಡಿದ್ದಾನೆ ಎಂಬ ಪರಿಜ್ಞಾನವೇ ಇರುವುದಿಲ್ಲ. ಶಾಲೆಗೂ ವಾಹನ, ಟ್ಯೂಷನ್‍ಗೂ ವಾಹನ, ಪೇಟೆಗೂ ವಾಹನ ಅಗತ್ಯ. ಮೋಟಾರ್ ವಾಹನ ಕಾಯ್ದೆ 18 ವರ್ಷದ ಕೆಳಗಿನವರಿಗೆ ವಾಹನ ಚಾಲನಾ ಪರವಾನಗಿ ನೀಡುವುದಿಲ್ಲ. ಆದರೂ ಯಾವುದೇ ಹೈಸ್ಕೂಲು, ಪಿಯುಸಿ ಕಾಲೇಜುಗಳ ಮುಂದೆ ನೂರಾರು ವಾಹನಗಳು ಜಮಾಯಿಸಿರುತ್ತವೆ. ಈ ಬಗ್ಗೆ ಶಾಲೆಗಳೂ ಕ್ರಮ ಕೈಗೊಳ್ಳುವುದಿಲ್ಲ. ಪೊಲೀಸರೂ ಮೌನ ವಹಿಸುತ್ತಾರೆ.

ಆಧುನಿಕ ವಾಹನಗಳ ವೇಗಮಿತಿ (ಮಿತಿಯೇ ಇಲ್ಲದ ವೇಗ ಎಂದರೂ ಅಡ್ಡಿಯಿಲ್ಲ), ವಾಹನಗಳ ವಿನ್ಯಾಸ, ಆಧುನಿಕ ಯುವಕರ ಜೋಷ್, ಕುಟುಂಬಗಳಲ್ಲಿ ದೊರೆಯುವ ಅನಗತ್ಯ ಉತ್ತೇಜನ ಮತ್ತು ಅನಗತ್ಯ ಅವಸರ ಇವೆಲ್ಲವೂ ಸಹ ಅಪಘಾತದ ಪರಿಕರಗಳು. ಇವುಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಯಾರದು ? ಎಳೆ ವಯಸ್ಸಿನ ಬಾಲಕ ಬಾಲಕಿಯರೂ ವಾಹನ ಚಲಾಯಿಸುವಾಗ ನಮ್ಮ ಆಡಳಿತ ವ್ಯವಸ್ಥೆ ಏನು ಕ್ರಮ ಕೈಗೊಳ್ಳುತ್ತದೆ ? ಎಂದಾದರೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾಹನ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೇ ?

ಶಾಲೆಗಳಲ್ಲಾದರೂ ಮಕ್ಕಳಿಗೆ ಇದರ ಅಪಾಯಗಳನ್ನು ಮನದಟ್ಟು ಮಾಡಲಾಗಿದೆಯೇ ? ಶಾಲಾ ವಾಹನ, ಕ್ಯಾಬ್ , ಆಟೋಗಳನ್ನು ಹೊರತುಪಡಿಸಿದರೆ ಶಾಲಾ ಮಕ್ಕಳಿಗೆ ಅನ್ಯ ಮಾರ್ಗ ಯಾವುದಾದರೂ ಇದೆಯೇ ? ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದರ ಬಗ್ಗೆ ಯೋಚಿಸಿದೆಯೇ ? “ ನನ್ನ ಮಗನನ್ನು ನೋಡಿ ಎಳೆಯ ವಯಸ್ಸಿಗೇ ಎಷ್ಟು ಚೆನ್ನಾಗಿ ಗಾಡಿ ಓಡಿಸ್ತಾನೆ ” ಎಂದು ಹೆಮ್ಮೆ ಪಡುವ ಪೋಷಕರು ಈ ಕುರಿತು ಯೋಚಿಸುತ್ತಾರೆಯೇ ? ಪ್ರಶ್ನೆಗಳಿಗೆ ಕೊನೆಯೇ ಇಲ್ಲ.
ಈ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ಕಂಡುಕೊಳ್ಳದಿದ್ದರೆ ಅಪಘಾತಗಳಿಗೂ ಕೊನೆ ಇರುವುದಿಲ್ಲ.

Leave a Reply

Your email address will not be published.