ತರಗತಿಯ ಒಳಹೊರಗೆ ರಾಮದಾಸ್ ಕಲಿಸಿದ ಪಾಠಗಳು

-ಡಾ. ಬಂಜಗೆರೆ ಜಯಪ್ರಕಾಶ್

krd ನಾನು ಮೈಸೂರಿಗೆ ಹೋದದ್ದು 1982ರಲ್ಲಿ. ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಬಿಎ ಕಲಿಯಲು ದೂರದ ಚಿತ್ರದುರ್ಗದಿಂದ ಅಲ್ಲಿಗೆ ಬಂದಿದ್ದೆ. ಜನಪರ ಚಳುವಳಿಗಳು ಚಿತ್ರದುರ್ಗ ಜಿಲ್ಲೆಯಲ್ಲೂ ಆಗ ಒಂದಷ್ಟು ಚಾಲ್ತಿಯಲ್ಲಿದ್ದವು. ನಾನು ಪಿಯುಸಿ ಓದುವಾಗ ಗೋಕಾಕ್ ವರದಿ ಚಳುವಳಿಯ ಅಬ್ಬರ ದುರ್ಗದಲ್ಲಿ ಕಂಡುಬಂದಿತ್ತು. ಡಾ.ರಾಜ್ ಮತ್ತು ಸಾಹಿತಿಗಳ ತಂಡ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಿತ್ತು. ಅದು ಬಿಟ್ಟರೆ ದಲಿತ ಸಂಘರ್ಷ ಸಮಿತಿಯ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ್ದವು. ನನಗೆ ಈ ಯಾವ ಸಂಘಟನೆಗಳೊಂದಿಗೂ ನೇರ ಸಂಪರ್ಕವಿರಲಿಲ್ಲ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಟುವಟಿಕೆಗಳಲ್ಲಿ ಒಂದು ವರ್ಷದಷ್ಟು ಕಾಲ ಸಂಪರ್ಕವಿತ್ತು. ಗ್ರಾಮಗಳಲ್ಲಿ ಅದು ಸಂಘಟಿಸುವ ಸ್ವಯಂ ಸೇವಾ ಶಿಬಿರಗಳಲ್ಲಿ ಪಾಲ್ಗೊಂಡು ಕೆಲವು ಹಳ್ಳಿಗಳಲ್ಲಿ ಕಸ ಬಾಚಿದ್ದೆ. ನಂತರ ಬೇಗನೆ ಅದರ ಧೋರಣೆಗಳ ಬಗ್ಗೆ ಭಿನ್ನಾಭಿಪ್ರಾಯ ಹುಟ್ಟಿ ಅದರಿಂದ ದೂರವಾಗಿದ್ದೆ. ಇಷ್ಟು ಬಿಟ್ಟರೆ ನನಗೆ ಚಳುವಳಿಗಳ ಜೊತೆ ನೇರ ಸಂಪರ್ಕ ಇರಲಿಲ್ಲ.

ಗೋಕಾಕ್ ವರದಿ ಚಳುವಳಿ ಬಿಸಿ ಆಗಿನ್ನೂ ಆರತೊಡಗಿತ್ತು. ಮೈಸೂರಲ್ಲಿ ವಿದ್ಯಾರ್ಥಿಗಳ ನಡುವೆ ಚರ್ಚಿತವಾಗುತ್ತಿದ್ದ ಚಳುವಳಿಯ ಹೀರೋಗಳ ಪಟ್ಟಿಯಲ್ಲಿ ರಾಮದಾಸ್ ಹೆಸರು ತಪ್ಪದೆ ಇರುತ್ತಿತ್ತು. ಗುಂಡೂರಾವ್ ಮೈಸೂರಿಗೆ ಬಂದಾಗ ಸಭೆಯೊಂದರಲ್ಲಿ ಸಾರ್ವಜನಿಕವಾಗಿ ಮುಖ್ಯಮಂತ್ರಿಯ ಕೊರಳಪಟ್ಟಿಗೆ ಕೈಹಾಕಿ ಜಗಳ ಮಾಡಿದ್ದರಂತೆ ಎಂಬುದು ನಮ್ಮ ನಡುವೆ ಹಬ್ಬಿದ್ದ ದಂತ ಕಥೆ. ಈ ಕಥೆಯನ್ನು ನಮಗೆ ಬಿತ್ತರಿಸಿದವನು ಹೊನಕೆರೆ ನಂಜುಂಡೇಗೌಡ. ಹೊಸದಾಗಿ ರೂಪುಗೊಳ್ಳತೊಡಗಿದ್ದ ನಮ್ಮ ಸ್ನೇಹಿತರ ಗುಂಪಿನಲ್ಲಿ ಮೈಸೂರಿಗನಾಗಿದ್ದ ನಂಜುಂಡೇಗೌಡ ಮೈಸೂರಿನ ಬೀದಿಗಳ ಬಗ್ಗೆ, ಹೋಟೆಲುಗಳ ಬಗ್ಗೆ, ಜನಗಳ ಬಗ್ಗೆ ಈ ಬಗೆಯ ಕಥನಗಳನ್ನು ಹೇಳುವ ಮುಖಾಂತರ ನಮ್ಮಲ್ಲಿ ಮೈಸೂರಿನ ಬಗ್ಗೆ ಬೆರಗನ್ನು ಮೂಡಿಸುತ್ತಿದ್ದ.

ರಾಮದಾಸ್ ಅವರ ತರಗತಿಗಳಲ್ಲಿ ಎಷ್ಟು ಕಟ್ಟುನಿಟ್ಟು ವರ್ತನೆಯವರು ಎಂಬುದನ್ನೂ ಹಲವು ರೀತಿಯಲ್ಲಿ ಆತ ವರ್ಣಿಸಿದ್ದ. ರಾಮದಾಸ್ ಬಗ್ಗೆ ಈ ಬಗೆಯ ದಂತ ಕಥೆಗಳು ನಿಜವಿರಬೇಕೆಂದು ನಮಗೂ ಅನ್ನಿಸತೊಡಗಿತ್ತು. ಅವರ ನಿರ್ದಾಕ್ಷಿಣ್ಯ ಮಾತುಗಾರಿಕೆ, ಕಂಚಿನ ಕಂಠ, ದನಿ ಏರಿಸಿ ಮಾತನಾಡುವ ರೀತಿ, ನಗಲು ಬರುವುದಿಲ್ಲವೇನೋ ಎಂಬಂತೆ ಮುಖ ಬಿಗಿದುಕೊಂಡಿರುತ್ತಿದ್ದ ಅವರ ಪೈಲ್ವಾನ್ ಆಕೃತಿಯ ದೇಹ ಇವೆಲ್ಲ ನಮ್ಮ ಭಯಮಿಶ್ರಿತ ಗೌರವವನ್ನು ಹೆಚ್ಚಿಸಿದ್ದವು. ಗಂಭೀರ ವಿಚಾರಗಳನ್ನು ಮಂಡಿಸುತ್ತಾ, ಜಾಗೃತರಾಗಿರುವಂತೆ, ಪ್ರತಿಭಟನೆಯ ಗುಣ ಬೆಳಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದರು. ಅವರ ತರಗತಿಗಳಲ್ಲಿ ಕಪಿಚೇಷ್ಟೆ ಮಾಡಲು ಅವಕಾಶವಿಲ್ಲದಿರುವುದರಿಂದ ಗಂಭೀರವಾಗಿ ಕೂತು, ಸಾಕಾಗಿ ಮುಖ ಜೋಲು ಬಿಟ್ಟುಕೊಂಡಂತಾಗುತ್ತಿದ್ದೆವು.

ಅಂತಹ ಸಂದರ್ಭದಲ್ಲಿ ರಾಮದಾಸ್ ನಮ್ಮನ್ನೆಲ್ಲಾ ಅರ್ಧ ಹಾಸ್ಯ ಅರ್ಧ ಲೇವಡಿಯಿಂದ ನಗಿಸುತ್ತಿದ್ದರು. ಸಾಮಾನ್ಯವಾಗಿ ಹುಡುಗರನ್ನು ಛೇಡಿಸಲು ಬಳಸುತ್ತಿದ್ದ ಹೇಳಿಕೆ ‘ಕುತ್ತಿಗೆ ತುಂಬ ಬೆಡ್‍ಶೀಟ್ ಹೊದ್ಕಂಡು ಮಲ್ಗಿಬಿಡ್ತೀರಿ ಅಲ್ವೇನ್ರಿ’ ಎಂಬುದಾಗಿತ್ತು. ಅದನ್ನು ಅವರು ಸಾಭಿನಯವಾಗಿ ಕೈಕಾಲು ಆಡಿಸಿ ಹೇಳುತ್ತಿದ್ದ ರೀತಿಯಿಂದಾಗಿ ವಿದ್ಯಾರ್ಥಿಗಳೆಲ್ಲ ಗೊಳ್ಳೆಂದು ನಗುತ್ತಿದ್ದರು. ಇಂತಹ ಸಂದರ್ಭಗಳನ್ನು ಬಿಟ್ಟರೆ ಮಿಕ್ಕಂತೆ ಅವರ ತರಗತಿ ಸದಾ ಗಂಭೀರ ನಿರೂಪಣೆಯಿಂದ ಕೂಡಿರುತ್ತಿತ್ತು. ನಡುನಡುವೆ ಸಮಾಜದ, ರಾಜಕಾರಣದ ಟೀಕೆ ಬಂದು ಹೋಗುತ್ತಿತ್ತು. ಅದು ನಮಗೆ ಚಿಂತನೆ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಪರೋಕ್ಷವಾಗಿ ಒದಗುತ್ತಿದ್ದ ತರಬೇತಿಯಂತಾಗುತ್ತಿತ್ತು.

ವಿದ್ಯಾರ್ಥಿಗಳಾದವರು ಅಸಡ್ಡಾಳವಾಗಿ ಕಾಣುವಂತಿರಬಾರದು ಎಂಬುದು ಅವರ ಮತ್ತೊಂದು ಪ್ರತಿಪಾದನೆ. ಅವರ ಉಡುಗೆ ತೊಡುಗೆಗಳಲ್ಲಿ ಸದಾ ಒಂದು ಅಚ್ಚುಕಟ್ಟುತನವಿರುತ್ತಿತ್ತು. ಆದರ್ಶವಾದಿಗಳಾಗಿರುವುದೆಂದರೆ ವೈಯಕ್ತಿಕ ವಿಷಯಗಳಿಗೆ ಅಷ್ಟು ಗಮನ ಕೊಡದ ಸನ್ಯಾಸಿಗಳಂತಿರಬೇಕು ಎಂದುಕೊಂಡಿದ್ದ ನಮ್ಮ ಅರೆಬರೆ ತಿಳಿವಳಿಕೆಗೆ ಈ ಪ್ರತಿಪಾದನೆ ಅಚ್ಚರಿದಾಯಕವಾಗಿದ್ದುದು ಮಾತ್ರವಲ್ಲ, ಸಂತೋಷ ಕೊಡುವಂತಾದ್ದೂ ಆಗಿತ್ತು.

ನಮ್ಮ ಯೌವನದ ವಯಸ್ಸಿಗೆ ಆಕರ್ಷಕರಾಗಿ ಕಾಣಬೇಕೆಂಬ ಬಯಕೆಯೂ, ಆದರ್ಶವಂತರಾಗಿರಬೇಕೆಂಬ ಹಂಬಲವೂ ಒಟ್ಟೊಟ್ಟಿಗೆ ಇದ್ದವು. ಅದರಲ್ಲಿ ಯಾವುದನ್ನೂ ತ್ಯಾಗ ಮಾಡಬೇಕಾದ ಅಗತ್ಯವಿಲ್ಲ ಎಂಬ ವಾದದಿಂದ ನಾವು ಬಹುಮಟ್ಟಿಗೆ ಪ್ರಭಾವಿತರಾದೆವು. ಆದರ್ಶವಂತರಾಗಿರುವುದೆಂದರೆ ಹುಡುಗಿಯರ ಕಡೆ ನೋಡದಂತಹ, ಅವರ ಬಗ್ಗೆ ಕುತೂಹಲವನ್ನೂ ಇಟ್ಟುಕೊಳ್ಳದಂತಹ ನಿರ್ವ್ಯಾಮೋಹಿಗಳಾಗಿರಬೇಕು ಎಂಬಂತಹ ನಿಲುವೂ ನಮ್ಮ ನಡುವೆ ಚಾಲ್ತಿಯಲ್ಲಿತ್ತು. ಅದೆಲ್ಲ ಶೋಕಿಲಾಲರ ಅಥವಾ ಪೋಲಿ ಪಟಾಲಂಗಳ ಬಾಬತ್ತಾದ್ದರಿಂದ ನಾವು ಹಾಗಿರಲು ಸಾಧ್ಯವಿಲ್ಲ ಎಂದುಕೊಂಡಿದ್ದೆವು. ನವತರುಣರಾಗಿದ್ದ ನಮಗೆ ಈ ನಿರ್ಣಯ ಅತ್ಯಂತ ವೇದನೆಯ ಸಂಗತಿಯಾಗಿತ್ತು.

ಆದರ್ಶವಂತರಾಗಿರಬೇಕೆಂಬ ನಿಲುವೇನೋ ಸರಿ. ಆದರೆ ವಿರಾಗಿಗಳಾಗಿರುವುದೆಂದರೆ ಸ್ವಲ್ಪ ಕಷ್ಟ. ಅದು ಪ್ರಾಮಾಣಿಕತೆಯ ನಿಲುವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಒಮ್ಮೆ ತರಗತಿಯಲ್ಲಿರುವಾಗ ರಾಮದಾಸ್ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹೇಳುತ್ತಾ, ತಮ್ಮ ಸಹಪಾಠಿ ಹುಡುಗಿಯರ ಗಮನ ಸೆಳೆಯಲು ತಾವು ಸಹಪಾಠಿಗಳು ಸ್ಪರ್ಧೆಗಿಳಿಯುತ್ತಿದ್ದುದನ್ನು ವಿವರಿಸಿದರು.

ನಾವು ಆ ತರಗತಿಯಲ್ಲಿ ಇನ್ನಿಲ್ಲದಷ್ಟು ಉತ್ಸಾಹ ಪ್ರಕಟಿಸಿದೆವು. ನಾವು ಯಾರನ್ನು ಕಲ್ಲು ಮನಸ್ಸಿನ ಹೋರಾಟಗಾರ ಎಂದುಕೊಂಡಿದ್ದೆವೋ ಅಂತಹ ಮೇಷ್ಟ್ರು ಒಂದು ವಯಸ್ಸಿನಲ್ಲಿ ಹುಡುಗಿಯರನನ್ನು ಮೆಚ್ಚಿಸಲು ಪ್ರಯತ್ನಪಟ್ಟವರಾಗಿದ್ದರೆಂಬುದನ್ನು ಹಾಗೂ ಅದೇನೂ ಅನೈತಿಕ ವಿಷಯವಲ್ಲ ಎಂಬಷ್ಟು ಗೆಲುವಿನಿಂದ ವಿವರಿಸಿದ್ದನ್ನೂ ನೋಡಿ, ನಮ್ಮ ಪ್ರಣಯ ಭಾಗ್ಯದ ಹಾದಿಯನ್ನು ಮುಚ್ಚಬೇಕಿಲ್ಲವೆಂದು ಹರ್ಷವಾಯಿತು. ಹುಡುಗಿಯರ ಬಗ್ಗೆ ನಮಗಿರುವ ಆಸಕ್ತಿ ಅಪರಾಧವಲ್ಲವೆಂದಾಯಿತು. ನಮ್ಮ ಮನಸ್ಸು ಬಹಳ ನಿರಾಳವಾಯಿತು.

ಹಾಗೆ ನೋಡಿದರೆ ನಾವು ಕ್ರಾಂತಿಕಾರಿಗಳೆಂದು ಪೋಸು ಕೊಡಬೇಕೆಂಬ ಬಯಕೆಯ ಮೂಲದಲ್ಲಿ ಈ ಹುಡುಗಿಯರ ಎದುರು ಹೀರೋಗಳಾಗಬೇಕು ಎಂಬ ಅಂಶವೂ ಸೇರಿತ್ತು. ಹುಡುಗಿಯರನ್ನು ಬಿಟ್ಟು ಕ್ರಾಂತಿ ಮಾಡುವುದೆಂದರೆ ಹೇಗೆ. ಅಥವಾ ಕೇವಲ ಹುಡುಗಿಯರಿಗಾಗಿ ಆದರ್ಶಗಳನ್ನು ತ್ಯಜಿಸಿದ ಹುಲುಮಾನವರಾಗುವುದು ಮೆಚ್ಚಿಸಲು ಕಪಿ ಚೇಷ್ಟೆ ಮಾಡುವುದಾಗಲಿ, ಅವರನ್ನು ಚುಡಾಯಿಸುವಂತಹ ಘನತೆಹೀನ ವರ್ತನೆ ತೋರಿಸುವುದಾಗಲೀ ಮಾಡಬಾರದೆಂದೂ, ಅವರ ಬಳಿ ಸಹಜ ಸ್ನೇಹದಲ್ಲಿರುವುದು ಮತ್ತು ನಿಜವಾದ ಪ್ರೇಮಕ್ಕಾಗಿ ಬಯಸುವುದು ತಪ್ಪಲ್ಲ ಎಂಬಂತಹ ನೈತಿಕ ಜೀವನಪ್ರೀತಿಯ ಹಾದಿಯ ಅರಿವು ನಮಗೆ ರಾಮದಾಸರ ಬೋಧನೆಗಳಿಂದ ಮೂಡತೊಡಗಿತು. ಹಾಗೆ ನೋಡಿದರೆ ಪ್ರೇಮಿಸಿ ಅಂತರ್ಜಾತಿಯ ಮದುವೆ ಆಗುವುದೂ ಕೂಡ ಕ್ರಾಂತಿಕಾರಿಯಾದ ಕೆಲಸ ಎಂಬುದು ಗೊತ್ತಾಗಿ ಕ್ರಾಂತಿ ಮಾಡಲು ಹಾಗೂ ಸಾಧ್ಯವಾದರೆ ಯಾರನ್ನಾದರೂ ಪ್ರೇಮಿಸಲು ನಮ್ಮ ಗೆಳೆಯರ ತಂಡ ಉತ್ಸಾಹಭರಿತವಾಯಿತು.

ಇಂತಹ ವಿಷಯಗಳನ್ನು ವಿದ್ಯಾರ್ಥಿಗಳ ಎದುರು ಚೂರೂ ಲಂಪಟ ಭಾವನೆ ಮೂಡದಂತೆ ಚರ್ಚಿಸಬಲ್ಲವರಾಗಿದ್ದ ರಾಮದಾಸ್ ತರಗತಿ ಇಲ್ಲದಾಗ ಕ್ಯಾಂಟೀನಿಗೆ ಬರುವುದು, ನಾವು ಕಂಡರೆ ಕಾಫಿ ಕೊಡಿಸುವುದು, ಸಿಗರೇಟು ಸೇದುವವರಿಗೆ ಸಿಗರೇಟು ಸೇದಲು ಕೊಡುವುದು ಮಾಡುತ್ತಿದ್ದರು. ಕಾಲೇಜಿನ ಮೇಷ್ಟರ ಎದುರಿಗೆ ಸಿಗರೇಟು ಸೇದುವುದೆಂಬುದು ಭಯಂಕರ ಕ್ರಾಂತಿಕಾರಿ ವರ್ತನೆಯಾಗಿ ಕಾಣುತ್ತಿತ್ತು ನಮಗೆ. ಅದರಲ್ಲೂ ಸಿಗರೇಟು ಸೇದುವ ಹಂಬಲವಿದ್ದು ಅದನ್ನು ಕೊಳ್ಳಲು ಕಾಸಿಲ್ಲದವರಾಗಿದ್ದ ನಮ್ಮಂತಹವರಿಗೆ ರಾಮದಾಸ್ ಎಷ್ಟು ಅಭಿಮಾನದ ಮೇಷ್ಟ್ರಾಗಿ ಬಿಟ್ಟರೆಂದರೆ ಅವರು ಬಿಡುವಾಗಿ ಸಿಕ್ಕುವುದನ್ನೇ ಬಹಳ ಆಸೆಯಿಂದ ಕಾಯುತ್ತಿದ್ದೆವು.

ನಾನು ಮಹಾರಾಜಾದಲ್ಲಿ ಮೊದಲ ವರ್ಷದ ವಿದ್ಯಾ.ರ್ಥಿಯಾಗಿದ್ದಾಗಲೇ ಕವನ ಸಂಕಲನವೊಂದನ್ನು ತರಲು ಸಿದ್ಧತೆ ನಡೆಸಿದೆ. ಅವು ಆವರೆಗೂ ಎಲ್ಲಿಯೂ ಪ್ರಕಟವಾಗಿರಲಿಲ್ಲ. ಗೆಳೆಯರ ಮುಂದೆ ಓದಿ ತೋರಿಸಿದ ಹಸಿ ಬಿಸಿ ಅಭಿವ್ಯಕ್ತಿಗಳವು. ಗೆಳೆಯರೆಲ್ಲ ತಲಾ ನೂರು ರೂಪಾಯಿ ದೇಣಿಗೆಯೊಂದಿಗೆ ಈ ಕೃತಿಯನ್ನು ಪ್ರಕಟಿಸುವುದಾಗಿ ಮುಂದೆ ಬಂದರು. ಆ ಸಂಕಲನದಲ್ಲಿ ನನ್ನ ಕವಿತೆಗಳಲ್ಲದೆ ಹೆಡತಲೆ ದೇವನಾಯಕ ಎಂಬ ನನ್ನ ಹಾಸ್ಟೆಲ್ ಸಹವಾಸಿಯ ಕವಿತೆಗಳೂ ಇರುವುದೆಂದು ನಿರ್ಣಯವಾಯಿತು. ಹಾಗೆ ಇಬ್ಬಿಬ್ಬರು ಸೇರಿ ಸಂಕಲನವೊಂದನ್ನು ತರುವುದು ಒಂದು ಸಾಹಿತ್ಯಿಕ ಪರಿಪಾಠವೋ ಅಲ್ಲವೋ ಎಂಬುದು ಕೂಡ ಗೊತ್ತಿಲ್ಲದ ಸಾಹಿತ್ಯ ಹವ್ಯಾಸಿಗಳು ಆಗ ನಾವು. ಸಂಕಲನ ತರಲು ಹಣ ಒದಗಿತೆಂದಾದೊಡನೆ ಅದಕ್ಕೊಂದು ಮುನ್ನುಡಿ ಬರೆಸಲು ಮುಂದಾದೆ ನಾನು.

kramರಾಮದಾಸ್ ಅವರ ಬಳಿಗೆ ನನ್ನ ಕವಿತೆಗಳ ಕಟ್ಟು ತೆಗೆದುಕೊಂಡು ಹೋಗಿ ಓದಲು ಕೊಟ್ಟೆ. ಅವರು ಒಂದೆರಡು ವಾರಗಳ ನಂತರ ಕವಿತೆಗಳನ್ನು ತಿದ್ದಿ ಹಿಂದಿರುಗಿಸಿದರು. ಅಲ್ಲಲ್ಲಿ ಕವಿತೆಗಳ ಕೆಳಗೆ ಟಿಪ್ಪಣಿ ಹಾಕಿದ್ದರು. ಬರೆಯುವ ಹವ್ಯಾಸ ಬೆಳೆಸಿಕೊಂಡು ಹೋಗುವಂತೆ ಮೆಚ್ಚುಗೆಯ ಮಾತನಾಡಿದರು. ಆ ಸಂಕಲನಕ್ಕೊಂದು ಮುನ್ನುಡಿ ಬರೆಯುವಂತೆ ಅವರನ್ನು ಕೇಳಿಕೊಂಡೆ. ಕವಿ ಅಥವಾ ವಿಮರ್ಶಕರಾಗಿ ಹೆಸರಾಗಿರುವವರ ಬಳಿ ಮುನ್ನುಡಿ ಬರೆಸುವುದು ಸೂಕ್ತ ಎಂದು ಹೇಳಿ ಕೆಲವರ ಹೆಸರುಗಳನ್ನೂ ಸೂಚಿಸಿದರು.

ಅವರಿಗೆ ನನ್ನಂತಹ ಹುಡುಗು ಕವಿಯ ಸಂಕಲನಕ್ಕೆ ನಾಲ್ಕು ಮಾತು ಬರೆಯುವುದು ಕಷ್ಟದ ವಿಷಯವಾಗಿರಲಿಲ್ಲ. ಆದರೆ ಅದು ಯಾಕೋ ಅವರನ್ನವರು ಸಾಹಿತಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಪಟ್ಟಂತೆ ಕಾಣುತ್ತಿರಲಿಲ್ಲ. ಅವರಿಗೆ ಸಾಹಿತ್ಯಾಸಕ್ತಿ ಕಡಿಮೆಯೇನಿರಲಿಲ್ಲ. ಆದರೆ ಅದನ್ನು ಅವರು ಬರವಣಿಗೆಗೆ ತರಲಿಲ್ಲ. ನಾನು ಅಷ್ಟು ವರ್ಷಗಳ ಕಾಲದ ಪರಿಚಯದಲ್ಲಿ ಅವರು ಬರೆದ ಕಥೆ, ಕವಿತೆ, ಲೇಖನ ಯಾವುದನ್ನೂ ಕಂಡಿಲ್ಲ. ವಾಚಕರ ವಾಣಿಗೆ ಪತ್ರ, ಹೋರಾಟಗಳ ಕರಪತ್ರ ಮುಂತಾದವುಗಳನ್ನು ಅವರು ಆಗಾಗ ಬರೆಯುತ್ತಿದ್ದುದು ಬಿಟ್ಟರೆ ಅವರು ಭಾಷಣ ಮಾಡಿದ್ದೇ ಹೆಚ್ಚು. ಆ ಭಾಷಣಗಳನ್ನೆಲ್ಲ ಸಂಗ್ರಹಿಸಿ ದಾಖಲಿಸುವುದು ಸಾಧ್ಯವಿದ್ದಿದ್ದರೆ ಅವರ ವೈಚಾರಿಕ ನಿಲುವುಗಳು, ಸಾಮಾಜಿಕ ಸ್ಪಂದನ ಮತ್ತು ಸಾಹಿತ್ಯ ಸಂವೇದನೆಗಳನ್ನು ಈಗಿನ ತಲೆಮಾರಿಗೆ ತಲುಪಿಸಬಹುದಾಗಿತ್ತು.

ರಾಮದಾಸ್ ಹೋರಾಟಪ್ರಿಯ ಮನೋಭಾವದವರಾಗಿದ್ದರೂ, ಸಾಹಿತ್ಯ ಚಟುವಟಿಕೆಗಳನ್ನು ಎಂದೂ ಲಘುವಾಗಿ ನೋಡುತ್ತಿರಲಿಲ್ಲ. ಸಾಹಿತ್ಯದ ಸಭೆಗಳಿಗೆ ತಪ್ಪದೆ ಬಂದು ಭಾಗವಹಿಸುತ್ತಿದ್ದರು. ಆದರೆ ಅವರ ಒಲವು ಹೆಚ್ಚಾಗಿದ್ದುದು ಸಾಮಾಜಿಕ ಕ್ರಿಯಾಶೀಲತೆಯ ಕಡೆಗೆ. ಉತ್ತಮವಾಗಿ ಬರೆದರಷ್ಟೇ ಸಾಲದು, ಸಾಮಾಜಿಕ ಕಳಕಳಿಯೂ ಇರಬೇಕು ಎಂಬುದನ್ನು ಅವರು ಸಾಹಿತ್ಯದ ತರಗತಿಗಳಲ್ಲೇ ಹೇಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಸಾಹಿತ್ಯಿಕ ಸಂವೇದನೆಯಿಲ್ಲದ, ವೈಚಾರಿಕ ಚಿಂತನೆಗಳ ನೆಲೆಗಟ್ಟಿಲ್ಲದ ಹೋರಾಟದ ಬಡಬಡಿಕೆಯನ್ನೂ ಮೆಚ್ಚಿಕೊಳ್ಳುತ್ತಿರಲಿಲ್ಲ. ಅವರ ಗ್ರಹಿಕೆಯಲ್ಲಿ ಶ್ರೇಷ್ಠ ಸಾಹಿತ್ಯ ಸಂವೇದನೆಯೆಂಬುದು ಅತ್ಯುತ್ತಮ ಸಾಮಾಜಿಕ ಸ್ಪಂದನವನ್ನು ಒಳಗೊಂಡಿರುತ್ತದೆಯಾದರೆ, ಅತ್ಯುತ್ತಮ ಸಾಮಾಜಿಕ ಕಳಕಳಿಯೆಂಬುದು ಶ್ರೇಷ್ಠ ಸಾಹಿತ್ಯಿಕ, ಸಾಂಸ್ಕøತಿಕ ಅಭಿರುಚಿಗಳನ್ನು ಒಳಗೊಂಡಿರುವಂತಾದ್ದಾಗಿತ್ತು.

ಇವುಗಳಲ್ಲಿ ಎಷ್ಟನ್ನೋ ಅವರು ನಮಗೆ ಬಾಯಿ ಬಿಟ್ಟು ಬೋಧಿಸಿದರು. ಮತ್ತೆಷ್ಟನ್ನೋ ಅವರ ಒಡನಾಟದಲ್ಲಿ ನಮ್ಮಷ್ಟಕ್ಕೆ ನಾವು ಕಂಡುಕೊಂಡು ಅನುಸರಿಸಲು ಪ್ರಯತ್ನಿಸಿದೆವು. ಎಂಬತ್ತರ ದಶಕದ ಆರಂಭದಲ್ಲಿ ಪ್ರಾರಂಭವಾದ ನನ್ನ ಶಿಷ್ಯತ್ವ ಅವರ ಕಡೆಗಾಲದವರೆಗೂ ಮುಂದುವರಿದಿತ್ತು. ಈ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳಿಂದ ಅವರ ಜೊತೆ ಚಟುವಟಿಕೆಗಳಲ್ಲಿ ನಿಕಟವಾಗಿರದೇ ಇದ್ದ ಕಾಲಾವಧಿಯೂ ಇದೆ.

ರಾಮದಾಸ್ ಅವರ ಬಗ್ಗೆ ನಾವೆಲ್ಲ ಅಭಿಮಾನ ಬೆಳೆಸಿಕೊಂಡ ಕಾರಣಗಳು ಏನಿರಬಹುದು ಎಂಬುದನ್ನು ಅರ್ಥೈಸಿ ಹೇಳಲು ಈಗ ನನಗೆ ಪೂರ್ಣವಾಗಿ ಸಾಧ್ಯ ಅನಿಸುತ್ತಿಲ್ಲ. ಅಭಿಮಾನ ಬೆಳೆದದ್ದು ಹೌದು. ಅವರ ಜೊತೆ ನಾವು ಹುಡುಗಾಟಿಕೆಯಿಂದ ವರ್ತಿಸಲು ಸಾಧ್ಯವಿರಲಿಲ್ಲ. ಯಾವುದೇ ವಿಷಯವನ್ನು ಚರ್ಚಿಸಬಹುದಾಗಿತ್ತಾದರೂ ಅದನ್ನು ಲಘು ಮಾತುಕತೆಯನ್ನಾಗಿಸಲು ಸಾಧ್ಯವಿರಲಿಲ್ಲ. ನಗೆಚಾಟಿಕೆಯ ವರ್ತನೆಗಳಿಗೆ ಅವರ ಬಳಿ ಅವಕಾಶವಿರುತ್ತಿರಲಿಲ್ಲ. ಅವರೇ ಯಾವಾಗಲಾದರೂ ನಗು ಮುಖದವರಾಗಿ ನಮ್ಮನ್ನು ರೇಗಿಸಿದರೆ ನಾವು ಪೆಚ್ಚು ಮುಖದಲ್ಲಿ ಹಿ… ಹ್ಹಿ… ಎನ್ನುತ್ತಿದ್ದೆವೇ ಹೊರತು ತೀರಾ ಇತ್ತೀಚಿನವರೆಗೂ ಅವರ ಬಳಿ ನಾವಾಗಿ ಯಾವುದೇ ನಗೆಚಾಟಿಕೆ ಮಾಡಿದವರಲ್ಲ.

ಅವರ ಸ್ವಭಾವದಲ್ಲಿ ಗಾಂಭೀರ್ಯ ಎದ್ದು ಕಾಣುತ್ತಿತ್ತು. ನಮ್ಮ ಅಭಿಪ್ರಾಯಗಳನ್ನು ಸಲೀಸಾಗಿ ಒಪ್ಪಿ ಆ ಮೂಲಕ ನಮ್ಮನ್ನು ಸಂತುಷ್ಟಗೊಳಿಸುವ ವಿಧಾನವೂ ಅವರದಾಗಿರಲಿಲ್ಲ. ಭಾಷಣ ಮಾಡಿದಾಗಲೂ ಅವರ ಮಾತಿನಲ್ಲಿ ರಂಜನೀಯ ಅಂಶಗಳು ಇರುತ್ತಿದ್ದುದೇ ಕಮ್ಮಿ. ಹೋರಾಟದ ಬದ್ಧತೆ, ಕೆಚ್ಚು ಮೂಡಿಸುವಂತಹ ಮಾತುಗಳೇ ಹೆಚ್ಚಾಗಿರುತ್ತಿದ್ದವು. ಯಾವುದೇ ಜನಪರ ಹೋರಾಟದ ಸಭೆ ಅಥವಾ ಚಳುವಳಿ ಇದ್ದಾಗಲೂ ಅವರದೊಂದು ಭಾಷಣ ಇದ್ದೇ ಇರುತ್ತಿತ್ತು. ಅವರ ಬಳಿ ಶಿಷ್ಯತ್ವ ಒಪ್ಪಿಕೊಂಡ ಹಲವಾರು ಅಧಿಕಾರಿಗಳು, ರಾಜಕಾರಣಿಗಳು ಇದ್ದರು. ಅವರ ಬಗ್ಗೆ ವಿನಾ ಪ್ರಸ್ತಾಪ ತರುವುದಾಗಲೀ, ವೈಯಕ್ತಿಕ ಸಮಸ್ಯೆಗಳಿಗೆ ಅವರ ಮರ್ಜಿ ಕೇಳುವುದಾಗಲೀ ರಾಮದಾಸ್ ಮಾಡಿದಂತೆ ನನಗೆ ಎಂದೂ ಕಂಡಿಲ್ಲ.

ಹಾಗೆ ನೋಡಿದರೆ ನಾನು ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವವರೆಗೆ ಅವರ ಸಾಮಾಜಿಕ ಆದರ್ಶಗಳ ಅಭಿಮಾನಿಯಾಗಿರಲಿಲ್ಲ. ಅವರದು ಲೋಹಿಯಾವಾದಿ ನಿಲುವು. ನಾನು ಆ ಹೊತ್ತಿಗಾಗಲೇ ಗೆಳೆಯ ನಂಜುಂಡೇಗೌಡನ ದೆಸೆಯಿಂದ ಎಸ್‍ಎಫ್‍ಐನ ಸಂಘಟನೆಗೆ ಸೇರಿಕೊಂಡಿದ್ದೆ. ಅದೇನೂ ನನ್ನ ವೈಯಕ್ತಿಕ ಆಯ್ಕೆಯಾಗಿರಲಿಲ್ಲ. ಎಸ್‍ಎಫ್‍ಐನ ಧೋರಣೆ ಸಿದ್ಧಾಂತಗಳನ್ನು ಮೆಚ್ಚಿ ಅದಕ್ಕೆ ಸೇರಿಕೊಂಡೆ ಎಂದು ಹೇಳಲೂ ಸಾಧ್ಯವಿಲ್ಲ. ಅದು ಪ್ರಗತಿಪರ ಸಂಘಟನೆ ಎಂಬುದು ಮಾತ್ರ ಆಗ ನನಗೆ ಗೊತ್ತಾಗಿತ್ತು. ನಂತರದಲ್ಲಿ ಅದು ಸಿಪಿಎಂ ಪಕ್ಷದ ವಿದ್ಯಾರ್ಥಿ ಸಂಘಟನೆ ಎಂಬುದು ಗೊತ್ತಾಯಿತು. ಬಡವರ ಪರವಾದ, ದುಡಿಯುವ ಜನರ ರಾಜ್ಯ ಬರಬೇಕೆಂದು ಪ್ರತಿಪಾದನೆ ಮಾಡುತ್ತಿದ್ದ ಸಿಪಿಎಂ ಪಕ್ಷದ ಧೋರಣೆಗಳ ಬಗ್ಗೆ ನನಗೆ ಅಭಿಮಾನವೂ ಉಂಟಾಯಿತು.

ಇತರೆ ಪ್ರಗತಿಪರ ಸಂಘಟನೆಗಳ ಬಗ್ಗೆಯೂ ನನಗೆ ಇಂತಹ ಅಭಿಮಾನವೇ ಉಂಟಾಗುತ್ತಿತ್ತು. ಆದರೆ ಒಂದು ಪಕ್ಷ, ಒಂದು ಸಿದ್ಧಾಂತಕ್ಕೆ ಬದ್ಧರಾದವರು ಇತರೆ ಸಂಘಟನೆಗಳ ನಿಲುವುಗಳನ್ನು ಟೀಕಿಸುತ್ತಾ ನಮ್ಮ ಸಂಘಟನೆಯ ಧ್ಯೇಯ ಧೋರಣೆಗಳನ್ನು ಮಾತ್ರ ಎತ್ತಿಹಿಡಿಯಬೇಕು ಎಂಬ ಪರಿಪಾಠವನ್ನು ನಂತರದಲ್ಲಿ ಕಲಿತುಕೊಂಡೆ. ಲೋಹಿಯಾವಾದಿಗಳು, ಅಂಬೇಡ್ಕರ್‍ವಾದಿಗಳು ಮುಂತಾದವರನ್ನು ಈ ಬಗೆಯ ಟೀಕೆಯಿಂದ ಹೊರಗಿಡಬೇಕೆಂದು ನಾನು ಪಕ್ಷದ ಮೀಟಿಂಗ್‍ಗಳಲ್ಲಿ ವಾದಿಸುತ್ತಿದ್ದೆನಾದರೂ ಅದಕ್ಕೆ ಸಮರ್ಥವಾದ ಸೈದ್ಧಾಂತಿಕ ಕಾರಣಗಳನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಕ್ರಾಂತಿಯ ಈಡೇರಿಕೆಗೆ ಇವರೆಲ್ಲ ಅಡ್ಡ ಬರುವವರು ಎಂಬುದನ್ನು ಮಾಕ್ರ್ಸ್‍ವಾದಿ ಸಿದ್ಧಾಂತದ ಆಧಾರದಲ್ಲಿ ಹಿರಿಯ ಕಾಮ್ರೇಡ್‍ಗಳು ಹೇಳುವಾಗ ನನ್ನ ಬಾಯಿ ಕಟ್ಟಿಹೋಗುತ್ತಿತ್ತು. ಲೋಹಿಯಾವಾದಿಗಳು ಮತ್ತು ಅಂಬೇಡ್ಕರ್ ವಾದಿಗಳ ಬಗ್ಗೆ ನನ್ನೊಳಗೆ ಹುಟ್ಟುವ ಮಮಕಾರಕ್ಕೆ ನನ್ನ ಪೆಟ್ಟಿಬೂಷ್ರ್ವಾ ಹಿನ್ನೆಲೆ ಕಾರಣವೇ ಹೊರತು ಭಾರತದ ಕ್ರಾಂತಿಗೆ ಅವರು ಅಡ್ಡ ಬರುವವರಾದರೆ ಅವರನ್ನು ಟೀಕಿಸುವುದು ತಪ್ಪಲ್ಲ ಎಂದು ಸಮಾಧಾನ ಮಾಡಿಕೊಳ್ಳುವುದನ್ನು ಕಲಿತುಕೊಂಡೆ.

ಈ ನಡುವೆ ನಾನು ರಾಮದಾಸ್ ಅವರನ್ನು ನಿಜವಾದ ಕ್ರಾಂತಿಕಾರಿ ಮಾದರಿಯಾಗಿ ಮೆಚ್ಚಿಕೊಂಡಿದ್ದೆ. ಅವರು ಲೋಹಿಯಾವಾದಿ ಇತ್ಯಾದಿ ನನಗೆ ಗೊತ್ತಿರಲಿಲ್ಲ. ಅವರು ತರಗತಿಗಳಲ್ಲಾಗಲೀ, ಹೊರಗಿನ ಸಭೆಗಳಲ್ಲಾಗಲೀ ಯಾವುದೋ ಒಂದು ಸಿದ್ಧಾಂತವನ್ನು ಉಲ್ಲೇಖಿಸಿ ಮಾತಾಡಿದಂತೆ ನನಗೆ ಆಗ ಅನಿಸುತ್ತಿರಲಿಲ್ಲ. ಒಟ್ಟಾರೆಯಾಗಿ ಹೋರಾಟದ ಪ್ರವೃತ್ತಿಯಿರಬೇಕು. ಅದು ಜನಸಾಮಾನ್ಯರ ಪರವಾದ ನಿಲುವಾಗಿರಬೇಕು ಎಂದು ಮಾತ್ರ ಅವರು ಪ್ರತಿಪಾದಿಸುತ್ತಿದ್ದಾರೆಂದು ಭಾವಿಸಿದ್ದೆ.

ಎಸ್‍ಎಫ್‍ಐ ಪ್ರಥಮ ಮೈಸೂರು ಜಿಲ್ಲಾ ಸಮ್ಮೇಳನಕ್ಕಾಗಿ ಧನ ಸಂಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ರಾಮದಾಸ್ ಅವರ ಬಳಿಯೂ ಧನಸಹಾಯ ಕೇಳೋಣವೆಂದು ನಮ್ಮ ಸಂಘಟನೆಗೆ ಆಗ ರಾಜ್ಯಾಧ್ಯಕ್ಷರಾಗಿದ್ದವರಿಗೆ ಹೇಳಿದೆ. ಆತ ಒಪ್ಪಲಿಲ್ಲ. ರಾಮದಾಸ್ ಸಿಪಿಎಂ ಪಕ್ಷದ ನಿಲುವುಗಳನ್ನು ಬೆಂಬಲಿಸುವುದಿಲ್ಲವೆಂದು ಆತ ಹೇಳಿದರು.

ನಾನು ಎಸ್‍ಎಫ್‍ಐ ಸಂಘಟನೆಗೆ ಓಡಾಡುತ್ತಿದ್ದುದು ಅವರಿಗೆ ಗೊತ್ತಿತ್ತು. ತರಗತಿಗಳಲ್ಲಾಗಲೀ ಅಥವಾ ಹೊರಗೆ ಭೇಟಿಯಾದಾಗಲಾಗಲೀ ಅವರೆಂದೂ ಅದನ್ನು ಆಕ್ಷೇಪಿಸಿ ಮಾತನಾಡಿರಲಿಲ್ಲ. ಅಲ್ಲದೆ ಅವರು ಈ ಮೊದಲು ನಮ್ಮ ಗೆಳೆಯರ ಗುಂಪಿನ ಬಗ್ಗೆ ತೋರಿಸುತ್ತಿದ್ದ ವಿಶ್ವಾಸದಲ್ಲೂ ವ್ಯತ್ಯಾಸವಾಗಿರಲಿಲ್ಲ.

ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಹುಡುಗರೆಂದು ನಮ್ಮನ್ನು ಅವರು ಸ್ವಲ್ಪ ಹೆಚ್ಚೇ ಆದರಿಸುತ್ತಿದ್ದಾರೆಂದು ನಮಗೆ ಅನಿಸುತ್ತಿತ್ತು. ಹೀಗಿರುವಾಗ ನಾವು ಮಾಡುತ್ತಿರುವ ವಿದ್ಯಾರ್ಥಿ ಸಂಘಟನೆಯ ಸಮ್ಮೇಳನಕ್ಕೆ ಅವರು ಸಣ್ಣ ಪ್ರಮಾಣದಲ್ಲಾದರೂ ಧನ ಸಹಾಯ ಮಾಡೇ ಮಾಡುತ್ತಾರೆಂಬುದು ನನ್ನ ಅನಿಸಿಕೆಯಾಗಿತ್ತು. ಈ ನಡುವೆ ವಿದ್ಯಾರ್ಥಿಗಳು ನಡೆಸಿದ ಕೆಲವು ಕಾರ್ಯಕ್ರಮಗಳಿಗೆ ಅವರು ಧನ ಸಹಾಯ ನೀಡಿದ್ದನ್ನು ನಾನು ಕಂಡಿದ್ದೆ.

ರಾಮದಾಸ್ ಅವರು ಅಧ್ಯಾಪಕರ ಕೊಠಡಿಯಲ್ಲಿದ್ದಾಗ ಅವರನ್ನು ಎಸ್‍ಎಫ್‍ಐ ಅಧ್ಯಕ್ಷರ ಜೊತೆ ಹೋಗಿ ಕಂಡೆ. ಅವರು ವಿಶ್ವಾಸಪೂರ್ವಕವಾಗಿ ಮಾತನಾಡಿಸಿದರು. ನಮ್ಮ ಸಂಘಟನೆಯ ರಾಜ್ಯ ಮುಖಂಡರನ್ನು ಪರಿಚಯಿಸಿದೆ. ಹಾರ್ದಿಕವಾಗಿ ಮಾತನಾಡಿಸಿದರು. ನಾನು ಬಂದ ಉದ್ದೇಶ ತಿಳಿಸಿದೆ. ಅವರು ನನ್ನ ಬಗ್ಗೆ ಇರುವ ವ್ಯಕ್ತಿಗತ ಪ್ರೀತಿಯಿಂದಲಾದರೂ ಖಾಲಿ ಕೈಯಲ್ಲಿ ಕಳುಹಿಸುವುದಿಲ್ಲವೆಂಬುದು ನನ್ನ ಕನಿಷ್ಠ ನಿರೀಕ್ಷೆಯಾಗಿತ್ತು. ಆದರೆ ಹಾಗಾಗಲಿಲ್ಲ. ಅವರು ಸಿಪಿಎಂ ಪಕ್ಷದ ರಾಜಕೀಯ ನಿಲುವುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತೊಡಗಿದರು. ಟ್ರೇಡ್ ಯೂನಿಯನ್‍ಗಳಿಂದ ಸಂಗ್ರಹಿಸಿದ ಹಣದಿಂದ ಸಮ್ಮೇಳನ ನಡೆಸಿ ಎಂದರು. ಸಾಂಕೇತಿಕವಾಗಿಯಾದರೂ ಹಣ ನೀಡಿ ಎಂದು ನಾನು ಕೇಳಿದೆ. ಅವರು ಸುತಾರಾಂ ಒಪ್ಪಲಿಲ್ಲ. ನನಗೆ ಮುಖಭಂಗವಾಗಿತ್ತು. ಅವರು ಎಷ್ಟೋ ಸಲ ನಮ್ಮ ಗುಂಪಿಗೆಲ್ಲಾ ಕಾಫಿ ತಿಂಡಿ ಕೊಡಿಸಿದ್ದರು. ಅಷ್ಟು ಹಣ ಕೊಟ್ಟಿದ್ದರೂ ಸಾಕಾಗಿತ್ತು. ನಾನು ಅವರ ವಿದ್ಯಾರ್ಥಿ. ನನ್ನ ಬೇಡಿಕೆಯನ್ನು ಅವರು ನಿರಾಕರಿಸಲಿ. ಆದರೆ ನಮ್ಮ ಸಂಘಟನೆಯ ರಾಜ್ಯ ಮಟ್ಟದ ಮುಖಂಡರು ಬಂದಿರುವಾಗ, ಅದೂ ಅವರು ಬೇಡ ಎಂದು ಹೇಳಿದರೂ ನಾನೇ ಕರೆದುಕೊಂಡು ಬಂದಿರುವಾಗ ಆ ಮಟ್ಟಿಗಾದರೂ ನನ್ನ ಮರ್ಯಾದೆ ಉಳಿಸಬೇಕಾಗಿತ್ತು ಎಂದು ಅಂದುಕೊಂಡೆ.

ಒಂದು ಪ್ರಗತಿಪರ ಸಂಘಟನೆ ಹಣ ಕೇಳಿದಾಗ ಶಾಸ್ತ್ರಕ್ಕಾದರೂ ಸ್ವಲ್ಪ ಹಣ ಕೊಡದಿರುವಷ್ಟು ಹಠ ಯಾಕೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ನನ್ನ ಜೊತೆ ಬಂದಿದ್ದವರು ಅದರ ಹಿಂದಿನ ರಾಜಕೀಯವನ್ನು ವಿವರಿಸಿದರು. ಅವರು ಲೋಹಿಯಾವಾದಿಗಳು ನಮ್ಮ ಮಾಕ್ರ್ಸ್‍ವಾದದ ಕಾರ್ಮಿಕರ ಸರ್ವಾಧಿಕಾರ ಎಂಬುದನ್ನು ಅವರು ಒಪ್ಪುವುದಿಲ್ಲ. ವರ್ಗ ಹೋರಾಟಕ್ಕಿಂತ ಜಾತಿ ಹೋರಾಟವೇ ಮುಖ್ಯ ಎನ್ನುತ್ತಾರೆ. ಅವರದು ಅರಾಜಕವಾದ. ನಿಯಮಬದ್ಧವಾಗಿ ಪಕ್ಷ ಕಟ್ಟುವುದನ್ನು, ಕಟ್ಟುನಿಟ್ಟಾದ ನಿಯಮಗಳಿಗೆ ಬದ್ಧರಾಗಿ ಸದಸ್ಯರು ಇರಬೇಕೆಂದು ಹೇಳುವುದನ್ನು ಅವರು ಗೇಲಿ ಮಾಡುತ್ತಾರೆ. ಸಣ್ಣ ಪ್ರಮಾಣದ ಖಾಸಗಿ ಬಂಡವಾಳ ಇರಬೇಕು ಎನ್ನುತ್ತಾರೆ, ಇತ್ಯಾದಿ. ಅವೆಲ್ಲ ನನಗೆ ಎಷ್ಟರಮಟ್ಟಿಗೆ ಅರ್ಥವಾದವೋ ಗೊತ್ತಿಲ್ಲ. ಆದರೆ ರಾಮದಾಸ್ ಮುಲಾಜಿಲ್ಲದೆ ತಮಗೆ ಸಮ್ಮತಿ ಇಲ್ಲದಿರುವುದನ್ನು ಬೆಂಬಲಿಸಲು ನಿರಾಕರಿಸುತ್ತಾರೆ ಎಂಬುದು ಗೊತ್ತಾಯಿತು.

ನಂತರದಲ್ಲಿ ಅವರು ಕಂಡಾಗ ನಾನು ಸಹಜವಾಗಿ ಮುಜುಗರಕ್ಕೊಳಗಾಗಿದ್ದೆ. ನನಗೆ ಮುಖಭಂಗ ಮಾಡಿದರು ಎಂಬುದಕ್ಕಿಂತ ಅವರಿಗೆ ಬೇಡದ ಇಕ್ಕಟ್ಟಿನ ಮಾತುಕತೆಯ ಸನ್ನಿವೇಶವೊಂದನ್ನು ಸೃಷ್ಟಿಸಿದ್ದೆನಲ್ಲ ಎಂಬುದೇ ನನ್ನ ಮುಜುಗರಕ್ಕೆ ಕಾರಣವಾಗಿತ್ತು. ರಾಮದಾಸ್ ಮಾತ್ರ ಬೇಸರಗೊಂಡಿದ್ದವರ ಹಾಗೆ ಕಾಣಲಿಲ್ಲ. ಸಮ್ಮೇಳನ ಹೇಗೆ ನಡೆಯಿತು ಎಂಬುದನ್ನು ವಿಚಾರಿಸಿದರು. ಎಸ್‍ಎಫ್‍ಐಗೆ ಯಾಕೆ ಸೇರಿಕೊಂಡೆ ಎಂದು ಬೈಯಬಹುದೆಂಬುದು ನನ್ನ ಹೆದರಿಕೆಯಾಗಿತ್ತು. ಅವರು ಹಾಗೆನ್ನಲಿಲ್ಲ. ಮತ್ತೆ ಎಂದಿನಂತೆ ತರಗತಿಗೆ ಸಂಬಂಧಿಸಿದ ಅಥವಾ ಕಾಲೇಜಿಗೆ ಸಂಬಂಧಿಸಿದ ಏನಾದರೂ ಕೆಲಸ ನಿರ್ವಹಿಸುವ ತಂಡಗಳಿಗೆ ನನ್ನನ್ನು ಕರೆಯುವುದು ತಪ್ಪಿಸಲಿಲ್ಲ.

ಬಿಎಯಲ್ಲಿ ನಾನು ಕನ್ನಡ ಮಾಧ್ಯಮದಲ್ಲೆ ಉತ್ತರಿಸಿ ರ್ಯಾಂಕ್ ಪಡೆದುಕೊಂಡೆ. ಕನ್ನಡ ಭಾಷಾ ವಿಷಯದಲ್ಲಿ ಆ ಸಾಲಿನ ವಿಶ್ವವಿದ್ಯಾಲಯ ಪದವಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ನಾನು ಪಡೆದಿದ್ದೆ. ಇದಕ್ಕಾಗಿ ವಿಶ್ವವಿದ್ಯಾಲಯ ಕೊಡುವ ದತ್ತಿ ಬಹುಮಾನದ ಚಿನ್ನದ ಪದಕವೂ ನನಗೆ ಸಿಕ್ಕಿತ್ತು. ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರಾಮದಾಸರು ಇದರಿಂದ ಬಹಳ ಸಂತೋಷಪಟ್ಟರು.

ನಾನು ಮಹಾರಾಜಾ ಕಾಲೇಜಿನಲ್ಲಿ ಓದು ಮುಗಿಸಿ ಗಂಗೋತ್ರಿಗೆ ಹೋದ ಮೇಲೂ ಕನ್ನಡದಲ್ಲೆ ಬರೆದು ರ್ಯಾಂಕ್ ಗಳಿಸಿದ್ದರ ಬಗ್ಗೆ, ಭಾಷಾ ವಿಷಯದಲ್ಲಿ ಚಿನ್ನದ ಪದಕ ಪಡೆದ ಬಗ್ಗೆ ನಮ್ಮ ನಂತರದ ಬ್ಯಾಚಿನ ತರಗತಿಗಳಲ್ಲಿ ಅವರು ಅಭಿಮಾನದಿಂದ ಮಾತನಾಡಿದ್ದನ್ನು ಕಿರಿಯ ವಿದ್ಯಾರ್ಥಿಗಳು ನನಗೆ ಹೇಳಿದರು. ಕೇವಲ ಹೋರಾಟದ ಹೆಸರಿನಲ್ಲಿ ಬೀದಿ ಅಲೆಯುತ್ತಾ ಸಮಯ ಪೋಲು ಮಾಡುವ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ವಿದ್ಯಾಭ್ಯಾಸ, ಜೀವನದ ಜವಾಬ್ದಾರಿ ನಿರ್ವಹಣೆ ಹಾಗೂ ಸಾಮಾಜಿಕ ಕಾಳಜಿಗಳು ಇವುಗಳಲ್ಲಿ ಎಲ್ಲದರ ಬಗ್ಗೆಯೂ ಹೊಣೆಯರಿತು ನಡೆಯುವ ವಿಧಾನವನ್ನೇ ಅವರು ಹೆಚ್ಚು ಇಷ್ಟಪಡುತ್ತಿದ್ದರು.

ಈ ನಡುವೆ ನನ್ನ ಮಾಕ್ರ್ಸ್‍ವಾದಿ ರಾಜಕೀಯದ ಬಗ್ಗೆ ಅವರ ಮನಸ್ಸಿನಲ್ಲಿದ್ದುದು ವಿಮರ್ಶೆಯೇ ಹೊರತು ಹೀಯಾಳಿಕೆಯಲ್ಲ ಎಂಬುದು ನನಗೆ ನಿಚ್ಚಳವಾಗತೊಡಗಿತ್ತು. ಹಾಗಾಗಿ ಅವರನ್ನು ಮಾತನಾಡಿಸುವಾಗ ಉಂಟಾಗುತ್ತಿದ್ದ ಅಳುಕೂ ಸಹ ಮಾಯವಾಯಿತು. ನಾನು ಬೀದರ್‍ನ ಕೊಳಾರ ಕೈಗಾರಿಕಾ ಪ್ರದೇಶದ ಮಾಲಿನ್ಯದ ವಿರುದ್ಧ ಹೋರಾಟ ಸಂಘಟಿಸುತ್ತಾ ತೀವ್ರ ಪೊಲೀಸ್ ದೌರ್ಜನ್ಯಕ್ಕೆ ಗುರಿಯಾಗಿ ಬಂಧನದಲ್ಲಿದ್ದಾಗ ಬಂಧನದ ವಿರುದ್ಧ ಮೈಸೂರಿನಲ್ಲಿ ದನಿಯೆತ್ತಿದವರಲ್ಲಿ ರಾಮದಾಸ್ ಪ್ರಮುಖರಾಗಿದ್ದರು. ಅವರು ನಾನು ಪ್ರತಿಪಾದಿಸುತ್ತಿದ್ದ ತೀವ್ರಗಾಮಿ ಕ್ರಾಂತಿಕಾರಿ ರಾಜಕೀಯ ನಿಲುವುಗಳನ್ನು ಒಪ್ಪುತ್ತಿರಲಿಲ್ಲ.

ಆದರೆ ನಾನು ಮೈಸೂರಿಗೆ ಬಂದಾಗಲೆಲ್ಲ ಅವರನ್ನು ಭೇಟಿಯಾಗುವುದು ತಪ್ಪಿಸುತ್ತಿರಲಿಲ್ಲ. ನಾವು ಭೇಟಿಯಾದಾಗ ನಮ್ಮ ನಡುವೆ ಸೈದ್ಧಾಂತಿಕ ಚರ್ಚೆಗಳನ್ನೆತ್ತುವ ಗೊಡವೆಗೆ ಅವರು ಹೋಗುತ್ತಿರಲಿಲ್ಲ. ಅದು ಹೇಗೂ ಬದಲಾಗದಷ್ಟು ಬಲವಾಗಿದೆ ಎಂದವರು ತೀರ್ಮಾನಿಸಿದ್ದರು. ಆದರೆ ಸಿದ್ಧಾಂತಗಳಿಂದಾಗಿ ನಮ್ಮ ಗುರುಶಿಷ್ಯ ಬಾಂಧವ್ಯದ ನಡುವೆ ದೊಡ್ಡ ತಡೆಗೋಡೆಯೇನೂ ನಿರ್ಮಾಣವಾಗಿರಲಿಲ್ಲ.

ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಎರಡು ವರ್ಷಗಳು ನನ್ನ ಪಾಲಿಗೆ ಮಹತ್ತರ ಸಾಮಾಜಿಕ ಪಾಠಗಳನ್ನು ಕಲಿಸಿದ ಅವಧಿಯಾಗಿತ್ತು. ಆ ಹೊತ್ತಿಗೆ ನಾನು ಎಸ್‍ಎಫ್‍ಐ ಸಂಘಟನೆಯಿಂದ ಹೊರಬಂದಿದ್ದೆ. ಹಾಗಾಗಿ ಈ ಮೊದಲು ಕಡಿಮೆ ಸಂಪರ್ಕದಲ್ಲಿದ್ದ ರೈತ ಚಳುವಳಿ, ವಿಚಾರವಾದಿ ಒಕ್ಕೂಟ, ಜಾತಿ ವಿನಾಶ ಆಂದೋಲನ, ರಟ್ನಹಳ್ಳಿ ಅಣುಸ್ಥಾವರ ವಿರೋಧಿ, ಒಕ್ಕೂಟ, ಬರ ಪರಿಹಾರ ಸಮಿತಿ, ವಿಶ್ವಕನ್ನಡ ಸಮ್ಮೇಳನ ವಿರೋಧಿ ಒಕ್ಕೂಟ ಮುಂತಾದ ಹಲವಾರು ಚಳುವಳಿಗಳ ಜೊತೆ ನಿಕಟವಾಗಿ ಬೆರೆತು ಕ್ರಿಯಾಶೀಲನಾದೆ.

ಈ ಎಲ್ಲಾ ಚಟುವಟಿಕೆಗಳಲ್ಲಿ ರಾಮದಾಸ್, ದೇವನೂರು ಮಹಾದೇವ, ಗೋವಿಂದಯ್ಯ, ರಾಮಲಿಂಗಂ, ಹಿ.ಶಿ.ರಾಮಚಂದ್ರೇಗೌಡ, ಶಿವರಾಮ ಕಾಡನಕುಪ್ಪೆ, ಶ್ರೀರಾಮ್ ಮುಂತಾದ ಹಲವರು ಕ್ರಿಯಾಶೀಲರಾಗಿದ್ದರು. ದಿನಬಿಟ್ಟು ದಿನ, ಕೆಲವು ಸಲ ದಿನವೂ ಇವರೆಲ್ಲರೊಂದಿಗೆ ನಾವು ಗಂಗೋತ್ರಿಯ ಗಾಂಧಿಭವನದಲ್ಲಿ ಸಭೆ ನಡೆಸುತ್ತಿದ್ದೆವು. ತೀವ್ರ ಚಟುವಟಿಕೆಗಳ ಕೇಂದ್ರ ಬಿಂದುವಂತಿರುತ್ತಿದ್ದರು. ಒಟ್ಟಿಗೇ ಸೇರಿ ಕೆಲಸ ಮಾಡುತ್ತಿದ್ದಾಗಲೂ ಹಲವರಿಗೆ ರಾಮದಾಸ್ ಅವರ ಧೋರಣೆಗಳು ಅಷ್ಟು ಒಪ್ಪಿಗೆಯಾಗುತ್ತಿರಲಿಲ್ಲ. ಕೆಲವು ಸಲ ಇದರಿಂದ ಸಭೆಗಳಲ್ಲಿ ವಾಗ್ವಾದವಾಗುತ್ತಿತ್ತು.

ವಾದ ವಿವಾದ, ಭೇದ ಭಿನ್ನಾಭಿಪ್ರಾಯ ಇವುಗಳ ನಡುವೆಯೇ ಸಾಮಾಜಿಕ ಕಾರಣಕ್ಕಾಗಿ ಒಂದಾಗಿ ಕೆಲಸ ಮಾಡುವುದು ಹೇಗೆಂಬುದನ್ನು ಆ ಗುಂಪಿನಲ್ಲಿ ನಾನು ಕಲಿಯತೊಡಗಿದ್ದೆ. ವಿಶ್ವ ಕನ್ನಡ ಸಮ್ಮೇಳನ ವಿರೋಧಿ ಒಕ್ಕೂಟದ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ನಾವೆಲ್ಲಾ ವಿಶ್ವ ಸಮ್ಮೇಳನದ ಹಿಂದಿನ ದಿನದಿಂದ ಹಿಡಿದು ಅದು ಮುಗಿದ ಮಾರನೇ ದಿನದವರೆಗೆ ಪೊಲೀಸರ ಅತಿಥಿಗಳಾಗಿ ಜೈಲಿನಲ್ಲಿದ್ದೆವು. ಮೈಸೂರಿನ ಪ್ರಗತಿಪರ ಲೇಖಕರು ಹಾಗೂ ಮುಖಂಡರಲ್ಲಿ ಬಹುಪಾಲು ಜನ ಹಾಗೆ ಬಂಧನಕ್ಕೊಳಗಾಗಿದ್ದರು. ಜೈಲಿನಲ್ಲೇ ನಾವು ಅಧ್ಯಯನ ಶಿಬಿರ ನಡೆಸಿದೆವು. ಅಲ್ಲಿ ರಾಮದಾಸ್ ನಮ್ಮ ಜೊತೆ ಮತ್ತಷ್ಟು ಆಪ್ತತೆಯಿಂದ ಬೆರೆತರು. ರಾತ್ರಿ ಎಷ್ಟೋ ಹೊತ್ತಿನವರೆಗೆ ನಾವೆಲ್ಲಾ ಗುಂಪಾಗಿ ಅವರ ಹೋರಾಟದ ವಿವಿಧ ಅನುಭವಗಳನ್ನು ಕೇಳಿಸಿಕೊಳ್ಳುತ್ತಿದ್ದೆವು.

ಜೈಲಿನಲ್ಲಿ ಇರುವಾಗ ಸಿಗರೇಟು, ಬೀಡಿ ಚಟವಿರುವವರಿಗೆ ಅದರ ಸರಬರಾಜು ಒದಗಿಸುವುದೇ ಒಂದು ಮುಖ್ಯ ವಿಷಯವಾಗಿತ್ತು. ಸ್ವತಃ ಸಿಗರೇಟು ಪ್ರಿಯರಾದ ರಾಮದಾಸ್ ಸಿಗರೇಟು ರೇಷನ್ ಹಂಚಿಕೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಬಂಧನಕ್ಕೊಳಗಾಗದೆ ಹೊರಗಡೆ ಇದ್ದ ನಮ್ಮ ಹೋರಾಟದ ಹಿತೈಷಿಗಳು ಹಾಗೂ ರಾಮದಾಸ್ ಮತ್ತಿತರರ ಗೆಳೆಯರು ಜೈಲಿನಲ್ಲಿದ್ದ ನಮಗೆ ಸಿಗರೇಟು, ಹಣ್ಣು ಹಂಪಲು ಇತ್ಯಾದಿಗಳನ್ನು ತಂದುಕೊಡುತ್ತಿದ್ದರು. ಬೆಳಿಗ್ಗೆ ಎದ್ದೊಡನೆ ನಮ್ಮೆಲ್ಲರಿಗೂ ಸಮಾನವಾಗಿ ಒಂದು ನಿಗದಿತ ಪ್ರಮಾಣದಲ್ಲಿ ಸಿಗರೇಟು ಮತ್ತು ಬೀಡಿಗಳನ್ನು ರಾಮದಾಸ್ ಹಂಚುತ್ತಿದ್ದರು. ಪೊಲೀಸರು ತಂದು ಕೊಟ್ಟ ಭರ್ಜರಿ ಊಟ ಮಾಡುವುದನ್ನು ಬಿಟ್ಟರೆ ನಮಗೆ ಬೇರೆ ಕೆಲಸವಿರುತ್ತಿರಲಿಲ್ಲ. ಹಾಗಾಗಿ ಬೀಡಿ, ಸಿಗರೇಟು ರೇಷನ್ ಬಹಳ ಬೇಗನೆ ಮುಗಿದುಹೋಗುತ್ತಿತ್ತು.

banjagereರಾಮದಾಸ್ ಬಳಿ ಇರುವ ಸಿಗರೇಟು ಸಂಗ್ರಹದಿಂದ ಹೆಚ್ಚಿನ ಪಾಲನ್ನು ಕೇಳುವಂತಿರಲಿಲ್ಲ. ಅವರಿವರನ್ನು ಕಾಡುತ್ತಾ, ಬೇಡುತ್ತಾ ಓಡಾಡುತ್ತಿದ್ದ ನನ್ನಂತಹವರ ಮೇಲೆ ಅವರಿಗೆ ಕರುಣೆ ಹುಟ್ಟಿ, ಒಮ್ಮೊಮ್ಮೆ ಅವರ ಪಾಲಿನಿಂದಲೇ ಒಂದು ಸಿಗರೇಟನ್ನು ಕೊಡುತ್ತಿದ್ದುದೂ ಉಂಟು.

ರಾಮದಾಸ್ ಅವರ ಶ್ರೀಮತಿ ನಿರ್ಮಲಾ ನಾವು ಜೈಲಿನಲ್ಲಿದ್ದಾಗ ಅಲ್ಲಿರುವವರಿಗೆಲ್ಲಾ ಆಗುವಷ್ಟು ಬಗೆಬಗೆಯ ಅಡುಗೆ ಮಾಡಿ ತಂದು ಕೊಡುತ್ತಿದ್ದುದೂ ನನಗೆ ನೆನಪಿಗೆ ಬರುತ್ತಿದೆ. ನಮ್ಮ ಹುಡುಗರ ಗುಂಪಿಗೆ ಆ ದಿನಗಳು ಬಹಳ ಸ್ಮರಣೀಯ ಅನುಭವವನ್ನು, ತಿಳುವಳಿಕೆಯನ್ನು, ಸಾಂಘಿಕ ಜೀವನದ ಕಷ್ಟ ಸುಖಗಳ ಪರಿಚಯವನ್ನು ಒದಗಿಸಿದವು.

ಜೈಲಿನಿಂದ ಹೊರಬಂದ ಕೆಲವು ದಿನ ನಮಗೆ ಮತ್ತೆ ಜೈಲಿಗೇ ಹೋಗಿ ಅದೇ ರೀತಿಯ ರಸವತ್ತಾದ ದಿನಗಳನ್ನು ಕಳೆಯಬೇಕೆಂಬ ಆಸೆ ಉಂಟಾಗುತ್ತಿತ್ತು. ಬೇರೆ ಬೇರೆ ಸಂಘಟನೆಗಳ ಬೇರೆ ಬೇರೆ ಸಿದ್ಧಾಂತಗಳ ಕ್ರಿಯಾಶೀಲರೆಲ್ಲಾ ಒಂದಾಗಿ ಬೆರೆತು ಕನ್ನಡ ನಾಡು ನುಡಿಯ ಉಳಿವಿಗೆ ಜನಪರ ನಿಲುವಿನಿಂದ ನಡೆಸಿದ ಅಂತಹ ಹಲವು ಹೋರಾಟಗಳಲ್ಲಿ ರಾಮದಾಸ್ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರರಾಗಿದ್ದರು. ಕ್ಲಾಸಿನಲ್ಲಿ ಪಾಠ ಮಾಡುತ್ತಿರುವಷ್ಟೇ ಗಂಭೀರವಾಗಿ ಅವರು ಇಂತಹ ಸಂದರ್ಭಗಳಲ್ಲಿ ಭಾಷಣಗಳನ್ನೂ ಮಾಡುತ್ತಿದ್ದರು. ಸಾಮಾನ್ಯವಾಗಿ ಸಭೆಯ ಭಾಷಣಗಳಲ್ಲಿ ಅವರದೇ ಹೈಲೈಟ್. ಸಂದರ್ಭಕ್ಕನುಸಾರವಾಗಿ, ಖಚಿತವಾಗಿ ತಮ್ಮ ನಿಲುವುಗಳನ್ನು ಮಂಡಿಸುತ್ತಾ ಕೇಳುಗರನ್ನು ಪ್ರಭಾವಿಸುತ್ತಿದ್ದ ಅವರ ಮಾತಿನ ರೀತಿ ನಮ್ಮೆಲ್ಲರಿಗೆ ಬಹಳ ಇಷ್ಟವಾಗುತ್ತಿತ್ತು.

ಪೊಲೀಸರ ಜೊತೆ ವಾದ ವಿವಾದ ಮಾಡುವುದಿರಲಿ, ನಮ್ಮ ಚಳವಳಿಗಳ ವಿರೋಧಿಗಳೊಂದಿಗೆ ವಾಗ್ವಾದ ನಡೆಸುವುದಿರಲಿ ಅವುಗಳಲ್ಲಿ ರಾಮದಾಸ್ ಹಾಜರಿದ್ದರೆಂದರೆ ನಮ್ಮೆಲ್ಲರಿಗೆ ವಿಚಿತ್ರ ಧೈರ್ಯ ಮತ್ತು ಸ್ಫೂರ್ತಿ ಉಂಟಾಗುತ್ತಿತ್ತು. ಅವರು ತರಗತಿಯಲ್ಲಿ ನಮಗೆ ಯಾವ ಪಾಠ ಮಾಡಿದರು ಎಂಬುದು ಬಹಳ ಅಸ್ಪಷ್ಟವಾಗಿ ಮಾತ್ರ ನೆನಪಲ್ಲಿದೆ. ಆದರೆ ಅವರು ನಮ್ಮೊಂದಿಗೆ ತರಗತಿಗಳ ಹೊರಗೆ ಮಾತನಾಡಿದ ಮಾತು, ಒಡನಾಡಿದ ಸನ್ನಿವೇಶಗಳು, ನಡೆಸಿದ ವಾದ ವಿವಾದಗಳು, ಹೋರಾಟದ ಹಾದಿಯಲ್ಲಿ ತುಂಬಿದ ಪ್ರೇರಣೆಗಳು ಇವೆಲ್ಲ ಸ್ಪಷ್ಟವಾಗಿ ಮನದಲ್ಲಿ ಅಚ್ಚೊತ್ತಿವೆ. ಇಂತಹ ಘಟನೆಗಳನ್ನು ವಿವರಿಸುತ್ತಾ ಹೋದರೆ ಅದೇ ಒಂದು ಪುಸ್ತಕದಷ್ಟಾಗಿ ಬಿಡುತ್ತದೆ. ಈಗ ಇಲ್ಲಿ ಅದನ್ನೆಲ್ಲಾ ವಿವರವಾಗಿ ಬರೆಯಲು ಸಾಧ್ಯವಿಲ್ಲ.

ನಾನು ನನ್ನ ವಿದ್ಯಾಭ್ಯಾಸ ಹಾಗೂ ಸಾಮಾಜಿಕ ಕ್ರಿಯಾಶೀಲತೆಯ ಅಭ್ಯಾಸ ಇವುಗಳ ಸಂದರ್ಭದಲ್ಲಿ ಏನನ್ನೇ ನೆನಪಿಸಿಕೊಂಡರೂ ಆ ನೆನಪಿನ ಬಹಳ ದೊಡ್ಡ ಭಾಗವಾಗಿ ರಾಮದಾಸ್ ತುಂಬಿಕೊಂಡಿರುತ್ತಾರೆ. ಶಿಷ್ಯನಾಗಿ ಇಂತಹವರೆಲ್ಲರ ಒಡನಾಟದಲ್ಲಿ ಬೆಳೆದೆ ಎಂಬುದೇ ನನ್ನೊಳಗೆ ಈ ಗಳಿಗೆಗೂ ಅತ್ಯಂತ ಕೃತಜ್ಞತೆಯ ಭಾವನೆಯನ್ನು ಉಂಟುಮಾಡುತ್ತಿದೆ. ರಾಮದಾಸ್ ಅವರು ಇದನ್ನು ಓದಲು ಇಲ್ಲಿಲ್ಲದಿರುವ ಸಮಯದಲ್ಲಿ ನಾನು ಸಲ್ಲಿಸಬಹುದಾದ ಗುರು ಕಾಣಿಕೆಯೆಂದರೆ ಈ ಹೃದಯಪೂರ್ವಕ ಕೃತಜ್ಞತೆಯೇ ಆಗಿದೆ.

Leave a Reply

Your email address will not be published.