ತಮಿಳುನಾಡಿನಲ್ಲಿ ರಾಜಕೀಯ ಅಸಾಂವಿದಾನಿಕ ಬಿಕ್ಕಟ್ಟು!

-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

selvamತಮಿಳುನಾಡಿನಲ್ಲಿ ಈಗ ಸೃಷ್ಠಿಯಾಗಿರುವುದು ಸಾಂವಿದಾನಿಕ ಬಿಕ್ಕಟ್ಟೇನಲ್ಲ! ಬದಲಿಗೆ ಅಲ್ಲಿನ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರೇ ಸ್ವತ: ಸೃಷ್ಠಿಸುತ್ತಿರುವ ಬಿಕ್ಕಟ್ಟಾಗಿದೆ. ಯಾಕೆಂದರೆ ಸಂವಿದಾನದ ಚೌಕಟ್ಟಿನಲ್ಲಿ ನಡೆಯಬೇಕಾದ ರಾಜ್ಯಪಾಲರು ತಮ್ಮ ಹಿಂದಿನ ರಾಜಕೀಯ ವಾಸನೆಗಳಿಗೆ ಬಲಿಯಾದಾಗ ಇಂತಹ ಘಟನೆಗಳು ಮರುಕಳಿಸುತ್ತವೆ. ಎ.ಐ.ಎ.ಡಿ.ಎಂ.ಕೆ. ಪಕ್ಷದ ಶಾಸಕರು ಶಶಿಕಲಾರವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದ ತಕ್ಷಣವೇ  ತಮಿಳುನಾಡಿನ ಮುಖ್ಯಮಂತ್ರಿಗಳಾದ ಪನ್ನೀರ್ ಸೆಲ್ವಂ ರಾಜ್ಯಪಾಲರಿಗೆ ತಮ್ಮ ರಾಜಿನಾಮೆ ನೀಡುತ್ತಾರೆ. ತಕ್ಷಣವೇ ಅದನ್ನು ಅಂಗೀಕರಿಸುವ  ರಾಜ್ಯಪಾಲರು ಸೆಲ್ವಂ ಅವರನ್ನು ಕರೆದು ರಾಜಿನಾಮೆಯ ಹಿಂದಿನ ಯಾವ ಕಾರಣಗಳನ್ನೂ ಕೇಳುವುದಿಲ್ಲ. ಹಾಗೆ ಕರೆದು ಕಾರಣಗಳನ್ನು ಮತ್ತು ಅವರ ರಾಜಿನಾಮೆಯ ಹಿಂದಿರಬಹುದಾದ ವಾಸ್ತವತೆಯನ್ನು ರಾಜ್ಯಪಾಲರು ಅರ್ಥಮಾಡಿಕೊಳ್ಳಲೇಬೇಕೆಂಬ ನಿಯಮವೇನು ಇಲ್ಲವೆಂಬುದು ನಿಜ.

ನಂತರದಲ್ಲಿ ಶಶಿಕಲಾರವರು ಪ್ರಮಾಣವಚನ ಸ್ವೀಕರಿಸಲು ಸಕಲ ಸಿದ್ದತೆಗಳನ್ನೂ ಸರಕಾರಿ ಅಧಿಕಾರಿಗಳು ಮಾಡತೊಡಗುತ್ತಾರೆ. ಈ ಸಮಯದಲ್ಲಿ ಕೊಯಮತ್ತೂರಿನಲ್ಲಿ ಇದ್ದ ರಾಜ್ಯಪಾಲರು ಚೆನ್ನೈಗೆ ಆಗಮಿಸಿ ಶಶಿಕಲಾರವರಿಗೆ ಪ್ರಮಾಣವಚನ ಬೋದಿಸಲು ಸಮಯ ನಗದಿಪಡಿಸಿ ತಮ್ಮ ಸಂವಿದಾನದತ್ತ ಕರ್ತವ್ಯವನ್ನು ನಿಬಾಯಿಸುತ್ತಾರೆಂದೇ ಎಲ್ಲರೂ ಬಾವಿಸಿದ್ದರು. ಆದರೆ ಪ್ರಮಾಣವಚನ ಸಭೆಯ ಬಗ್ಗೆ ಯಾವುದೇ ಸೊಲ್ಲೆತ್ತದ ರಾಜ್ಯಪಾಲರ ಬಂದುಗಳ ಮದುವೆಯ ನೆಪದಲ್ಲಿ  ಕೊಯಮತ್ತೂರಿನಿಂದ ನೇರವಾಗಿ ದೆಹಲಿಗೆ ಹೋಗುತ್ತಾರೆ. ರಾಜ್ಯಪಾಲರನ್ನು ಕಾಯುತ್ತಿದ್ದ ಶಶಿಕಲಾರವರಿಗೆ ತೀವ್ರವಾದ ನಿರಾಸೆ ಉಂಟಾಗುತ್ತದೆ.

ಈ ನಡುವೆ ಕೇವಲ ಎರಡೇ ದಿನದಲ್ಲಿ, ಉಸ್ತುವಾರಿ ಮುಖ್ಯಮಂತ್ರಿಗಳಾಗಿದ್ದ ಪನ್ನೀರ್ ಸೆಲ್ವಂ  ರಾಜಿನಾಮೆಯ ತಮ್ಮ ನಿರ್ದಾರದ ಹಿಂದೆ ಶಶಿಕಲಾರವರ ಒತ್ತಡವಿದ್ದು ತಾವು ರಾಜಿನಾಮೆ ಹಿಂಪಡೆಯುವುದಾಗಿ ಘೋಷಿಸಿ, ತಮಿಳು ಜನತೆಯಲ್ಲಿ ವಿಸ್ಮಯ ಮೂಡಿಸುತ್ತಾರೆ. ಈ ಹೇಳಿಕೆ ನೀಡುವುದಕ್ಕೆ ಮೊದಲು ಜಯಲಲಿತಾ ಸಮಾದಿಯ ಬಳಿ ಹೋಗಿ ಗಂಟೆಗಟ್ಟಲೆ ದ್ಯಾನಸ್ಥರಾಗಿ ಕೂತು ಅಮ್ಮನ ಆತ್ಮ ತಮಗೀ ಸಂದೇಶವನ್ನು ನೀಡಿದೆ ಎಂದು ಸಾರ್ವಜನಿಕವಾಗಿ ಪ್ರಕಟಿಸುತ್ತಾರೆ. ಇವೆಲ್ಲ ಬೆಳವಣಿಗೆಗಳ ನಡುವೆಯೇ ಶಶಿಕಲಾರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸದಂತೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುತ್ತದೆ. ಇಷ್ಟರಲ್ಲಿ ಎ.ಐ.ಎ.ಡಿ.ಎಂ.ಕೆ. ಪಕ್ಷ ಸ್ಪಷ್ಟವಾಗಿ ಎರಡು ಹೋಳುಗಳಾಗಿ ಒಂದು ಬಣ ಶಶಿಕಲಾರವರನ್ನು ಇನ್ನೊಂದು ಬಣ ಪನ್ನೀರ್ ಸೆಲ್ವಂ ಅವರನ್ನು ತಮ್ಮು ನಾಯಕರೆಂದು ಬಿಂಬಿಸುತ್ತ ಹೇಳಿಕೆ ಪ್ರತಿಹೇಳಿಕೆಗಳಲ್ಲಿ ಮುಳುಗುತ್ತವೆ. ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಅವುಗಳತ್ತ ನೋಡೋಣ:

ಪಕ್ಷದ ಶಾಸಕಾಂಗ ಸಭೆಯಲ್ಲಿ ಶಶಿಕಲಾರವರ ಹೆಸರನ್ನು ಸ್ವತ: ಪನ್ನೀರ್ ಸೆಲ್ವಂ ಅವರೇ ಸೂಚಿಸಿದ್ದು ಯಾಕೆ? ರಾಜಿನಾಮೆ ನೀಡಬೇಕಾದ ಒತ್ತಡದಲ್ಲಿರುವ ಯಾವ ವ್ಯಕ್ತಿಯೂ ಹಾಗೆ ಇನ್ನೊಬ್ಬರ ಹೆಸರನ್ನು ಸೂಚಿಸುವುದು ಸಾದ್ಯವೇ ಇಲ್ಲ. ಮುಖ್ಯಮಂತ್ರಿಯ ಅಧಿಕಾರದ ಕುರ್ಚಿಯಲ್ಲಿ ಕೂತು ಇಡೀ ಶಾಸಕಾಂಗ  ಕಾರ್ಯಾಂಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡ ಯಾವುದೇ ವ್ಯಕ್ತಿ ಶಶಿಕಲಾರಂತಹ ಸಾಂವಿದಾನಿಕ ಚೌಕಟ್ಟಿನ ಆಚೆಯಿರುವ ವ್ಯಕ್ತಿಗೆ ಹೆದರುವ ಅಗತ್ಯ ಇರಲಿಲ್ಲ.  ಸೆಲ್ವಂ ಶಶಿಕಲಾರವರಿಂದ ಯಾವುದಾದರು ರೀತಿಯ ಬ್ಲಾಕ್ ಮೆಯಿಲ್ಲಿಗೆ ಒಳಗಾಗಿದ್ದರಾ ಎಂದು ಸಾಮಾನ್ಯರು ಕೇಳುವ ರೀತಿಯಲ್ಲಿ ಸೆಲ್ವಂ ನಡೆದುಕೊಂಡರು. ನಂತರದಲ್ಲಿ ನಡೆದದ್ದು ಅಪ್ಪಟ ರಾಜಕೀಯದ ತಂತ್ರಗಾರಿಕೆ.  ಸಂವಿದಾನಕ್ಕೆ ಬದ್ದರಾಗಿರಬಹುದಾದ ರಾಜ್ಯಪಾಲರೊಬ್ಬರು   ಮಾಡಬಹುದಾಗಿದ್ದ ಕೆಲಸವೆಂದರೆ. ಚೆನ್ನೈಗೆ ಬಂದು ಶಶಿಕಲಾರವರಿಗೆ ಪ್ರಮಾಣವಚನ ಬೋದಿಸಿ, ನಿರ್ದಿಷ್ಟ ದಿನಗಳ ಒಳಗೆ ಸದನದಲ್ಲಿ ತಮ್ಮ ಬಹುಮತ ಸಾಬೀತು ಪಡಿಸಿ ತೋರಿಸಲು ಸೂಚನೆ ನೀಡುವುದಾಗಿತ್ತು. ಆದರೆ ಘನತೆವೆತ್ತ ರಾಜ್ಯಪಾಲರು ಆ ಕೆಲಸ ಮಾಡದೆ ದೆಹಲಿಯಿಂದ ತಮ್ಮ ಮೂಲ ಕರ್ತವ್ಯದ ರಾಜ್ಯವಾದ ಮುಂಬೈಗೆ ಹೋಗಿ ಕೂತರು. ಇದರಿಂದ ಅರ್ಥವಾಗುವ ವಿಚಾರವೆಂದರೆ, ಅವರಿಗೆ ಶಶಿಕಲಾ ಮುಖ್ಯಮಂತ್ರಿಯಾಗುವುದು ಬೇಕಿರಲಿಲ್ಲ ಎನ್ನುವುದು! ಅಂದರೆ ಕೇಂದ್ರ ಸರಕಾರದ ಗೃಹ ಇಲಾಖೆಯ ಆಣತಿ ಮತ್ತು ನಿರ್ದೇಶನದಂತೆ ಕೆಲಸ ಮಾಡುವ ರಾಜ್ಯಪಾಲರು ಶಶಿಕಲಾ ವಿಷಯದಲ್ಲಿ ಕೇಂದ್ರದಿಂದ ಸೂಚನೆಗಳನ್ನು ಪಡೆದೇ ಇಂತಹ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆಂಬುದು ಬಹುತೇಕ ಸತ್ಯಕ್ಕೆ ಹತ್ತಿರವಾದ ವಿಚಾರ. ಇಲ್ಲದೇ ಹೋದಲ್ಲಿ ಶಶಿಕಲಾರವರ ಪ್ರಮಾಣವಿಚಾರದಲ್ಲಿ ವಿಳಂಬನೀತಿ ಅನುಸರಿಸಲು ರಾಜ್ಯಪಾಲರಿಗೆ ಯಾವುದೆ ಹಕ್ಕು ಇರಲಿಲ್ಲ.   ಇದು ಒತ್ತಟ್ಟಿಗಿರಲಿ. ಹಾಗಿದ್ದರೆ  ಇದ್ದಕ್ಕಿದ್ದ ಹಾಗೆ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ದ ಬಂಡಾಯ ಏಳಲು ಕಾರಣಗಳೇನು ಎಂಬುದನ್ನು ಅವಲೋಕಿಸಿದರೆ ಮಾತ್ರ ನಮಗೆ ಸೆಲ್ವಂ ನಿಜಬಣ್ಣ ಅರ್ಥವಾಗುತ್ತದೆ:

ಬಾಹ್ಯ ಬೆಂಬಲ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಾಜಪದಂತಹ ಪಕ್ಷ ಪನ್ನೀರ್ ಸೆಲ್ವಂ ಅವರ ಈ ನಡೆಯ ಹಿಂದಿನ ದೊಡ್ಡ ಶಕ್ತಿಯಾಗಿದೆ.  ಜಲ್ಲಿಕಟ್ಟು ವಿಷಯದಲ್ಲಿ ರಾಜ್ಯದಾದ್ಯಂತ ನಡೆದ ಬಾರಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರದಾನಮಂತ್ರಿ ನರೇಂದ್ರಮೋದಿಯವರು ಸೆಲ್ವಂ ಕೇಳಿದಾಕ್ಷಣ ಅವರನ್ನು ಬೇಟಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಸಹಾಯಕವಾಗಿ ಕೆಲಸ ಮಾಡಿದ್ದು ಕೂಡ ಇದೇ ಹಿನ್ನೆಲೆಯಲ್ಲಿ. ತಮಿಳುನಾಡಲ್ಲಿ ರಾಜಕೀಯ ಅಸ್ಥಿತ್ವ ಹೊಂದಿರದ ಬಾಜಪಕ್ಕೆ ಸೌಮ್ಯಸ್ವಬಾವದ ಸೆಲ್ವಂ ಮೂಲಕ ತಮಿಳುನಾಡಲ್ಲಿ ನೆಲೆ ಕಂಡುಕೊಳ್ಳುವ  ಉದ್ದೇಶವಿದ್ದು ಅದಕ್ಕೆ ಪೂರಕವಾಗಿಯೇ ಅದು ಶಶಿಕಲಾ ಮುಖ್ಯಮಂತ್ರಿಯಾಗದಂತೆ ತಡೆಯಲು ಪ್ರಯತ್ನಿಸುತ್ತಿದೆ. ಇದರ ಜೊತೆಗೆ ಸೆಲ್ವಂಗೆ ಬೆಂಬಲ ನೀಡುವಂತೆ ಮಾಡಿ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು ಒಡೆದು ಅದರ ಲಾಭ ಪಡೆಯಲು ಡಿ.ಎಂ.ಕೆ.ಪ್ರಯತ್ನಿಸುತ್ತಿದ್ದು, ಅದರ ನಾಯಕರಾದ ಸ್ಟಾಲಿನ್ ಹಲವು ಬಾರಿ ಅವರನ್ನು ಬೇಟಿ ಮಾಡಿ ಸೌಹಾರ್ದಯುತ ಸಂಬಂದಕ್ಕೆ ತಾವು ಸಿದ್ದರಾಗಿರುವುದಾಗಿ ಹೇಳಿಕೆ ನೀಡಿದ್ದರು.

sasikalaತಕ್ಷಣಕ್ಕೆ ದೊರಕಿದ ಜನಪ್ರಿಯತೆಯ ಅಮಲು: ಇನ್ನು ವಾರ್ದಾ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ, ಜಲ್ಲಿಕಟ್ಟು ಪ್ರತಿಭಟನೆಯ ವಿಷಯದಲ್ಲಿ ಮತ್ತು ಎನ್ನೂರು ಎಣ್ಣೆ ಸೋರಿಕೆಯಾದ ಸಂದರ್ಭದಲ್ಲಿ ಸೆಲ್ವಂ ತೆಗೆದುಕೊಂಡ ನಿರ್ದಾರಗಳು ಸಾಮಾನ್ಯ ಜನರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದವು. ಜೊತೆಗೆ ರಾಜಕೀಯವಾಗಿ ಕಳೆದುಕೊಳ್ಳಲು ಸೆಲ್ವಂ ಅವರಿಗೆ ಏನೂ ಇರಲಿಲ್ಲ, ಬದಲಿಗೆ ಇಂತಹದೊಂದು ಬಂಡಾಯದಿಂದ ರಾಜ್ಯಮಟ್ಟದಲ್ಲಿ ತಮ್ಮದೇ ಆದ ರಾಜಕೀಯ ಸ್ಥಾನ ಪಡೆಯುವ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಈ ಅವಕಾಶವನ್ನು ಸೆಲ್ವಂ ಬಳಸಿಕೊಳ್ಳಲು ತೀರ್ಮಾನಿಸಿದ್ದರು.

ಹೆಚ್ಚಿದ ಶಶಿಕಲಾರವರ ಮೇಲಿನ ಜನರ ಆಕ್ರೋಶ: ಶಾಸಕರುಗಳ ಸದ್ಯದ ನಿಲುವು ಏನೇ ಇರಲಿ. ಸಾಮಾನ್ಯ ಜನರಲ್ಲಿ ಶಶಿಕಲಾ ಬಗ್ಗೆ ಅಷ್ಟೇನು ಉತ್ತಮ ಅಭಿಪ್ರಾಯ ಇರದೇ ಹೋಗಿದ್ದನ್ನು ಅರ್ಥಮಾಡಿಕೊಂಡ ಸೆಲ್ವಂ ಜನರ ಈ  ಬಾವನೆಗಳನ್ನು ತಮಗೆ ಅನುಕೂಲಕರವಾಗಿರುವಂತೆ ಬಳಸಿಕೊಳ್ಳಲು ತಯಾರಾದರು. ಇವೆಲ್ಲದರುಗಳ ಒಟ್ಟು ಪರಿಣಾಮವೇ ಪನ್ನೀರ್ ಸೆಲ್ವಂ ಬಂಡಾಯ ಎನ್ನಬಹುದು.

ಇವೆಲ್ಲ ಏನೇ ಇರಲಿ, ಇದೀಗ ರಾಜ್ಯಪಾಲರು ಕಾದು ನೋಡುವ ತಂತ್ರಕ್ಕೆ ಶರಣಾಗಿರುವಂತೆ ಕಾಣುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಶಿಕಲಾ ವಿರುದ್ದ ಅಕ್ರಮ ಆಸ್ತಿಗಳಿಕೆಯ ಪ್ರಕರಣದ ತೀರ್ಪು ಹೊರಬೀಳಲಿದ್ದು ಅದನ್ನು ನೋಡಿಕೊಂಡು ಶಶಿಕಲಾರವರಿಗೆ ಪ್ರಮಾಣವಚನ ಬೋದಿಸುವ ಬಗ್ಗೆ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳುವ ಸೂಚನೆಗಳು ರಾಜಭವನದಿಂದ ದೊರಕುತ್ತಿವೆ.

ಇಲ್ಲಿ ಕೆಲವರು ಶಶಿಕಲಾ ಮೇಲಿರುವ ಕೇಸಿನ ಬಗ್ಗೆ ಮಾತಾಡುತ್ತ ಅವರು ಮುಖ್ಯಮಂತ್ರಿಯಾದ ನಂತರ ಅವರ ವಿರುದ್ದ ತೀರ್ಪು ಬಂದರೆ ಮುಜುಗರವಾಗುವ ದೃಷ್ಠಿಯಿಂದ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂದೂ, ಇದು ರಾಜಕೀಯ ನೈತಿಕತೆಯ ವಿಷಯವೆಂದು ವ್ಯಾಖ್ಯಾನಿಸುತ್ತಿದ್ದಾರೆ. ಹೀಗೆ ವಾದಿಸುತ್ತಿರುವವರು ಒಂದನ್ನು ಮರೆಯುತ್ತಿದ್ದಾರೆ: ರಾಜ್ಯಪಾಲರ ಹುದ್ದೆ ಇರುವುದು ತಮಗೆ ಸಂಬಂದಿಸಿದ ರಾಜ್ಯದಲ್ಲಿ ಸಂವಿದಾನಕ್ಕೆ ಯಾವ ಚ್ಯುತಿಯೂ ಬಾರದಂತೆ ನೋಡಿಕೊಳ್ಳಲು ಮತ್ತು ಸಂವಿದಾನದತ್ತ ಅಧಿಕಾರವನ್ನು ಬಳಸಿಕೊಳ್ಳುವುದಾಗಿದೆ. ಮುಂದೆ ಬರಬಹುದಾದ ತೀರ್ಪನ್ನು ಕಾಯುತ್ತ ಶಾಸಕಾಂಗ ಪಕ್ಷದ ಮತ್ತದರ ನಾಯಕರ  ಹಕ್ಕುಗಳನ್ನು ಮೊಟಕುಗೊಳಿಸುವುದಲ್ಲ.

ಬಹುಶ: ರಾಜ್ಯಪಾಲರುಗಳು ತಮ್ಮನ್ನು ನೇಮಿಸಿದ ಪಕ್ಷವೊಂದರ ಋಣ ತೀರಿಸಲು ಮಾಡುವ ಇಮತಹ ಅಸಂವಿದಾನಿಕ  ಕೆಲಸ ಇದೇ ಮೊದಲೇನಲ್ಲ.  ಕಳೆದ ವರ್ಷ ಉತ್ತರಕಾಂಡದಲ್ಲಿ, ಅರುಣಾಚಲ ಪ್ರದೇಶದಲ್ಲಿಯೂ ಇಂತಹ  ನಕಾರಾತ್ಮಕ ಕಾರ್ಯನಿರ್ವಹಿಸಿದ ರಾಜ್ಯಪಾಲರುಗಳನ್ನು ನಾವು ನೋಡಬಹುದಾಗಿದೆ. ಈ ವಿಷಯದಲ್ಲಿ ಕಾಂಗ್ರೇಸ್ ಮತ್ತು ಬಾಜಪ ಎರಡೂ ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿ ಒಂದೇ ತೆರನದ್ದಾಗಿದೆ ಎನ್ನುವುದೇ ನಮ್ಮಫೆಡರಲ್ ವ್ಯವಸ್ಥೆಯ ದುರಂತ ಎನ್ನಬಹುದು.

 

Leave a Reply

Your email address will not be published.