ಟಿಪ್ಪು : ಮತಾಂಧರು ಯಾರು ?

ಟಿಪ್ಪು ಒಬ್ಬ ಕ್ರೂರಿ ಹಾಗೂ ಮುಸ್ಲಿಂ ಮತಾಂಧ ರಾಜನೆಂಬ ಪ್ರಚಾರ ಇಂದು ನಿನ್ನೆಯದಲ್ಲ. ಮೊದಲು ಈ ಪ್ರಚಾರ ನಡೆಸಿದವರು ಸ್ವಯಂ ಬ್ರಿಟಿಷರೇ. ಟಿಪ್ಪುವಿನ ದೇಶಪ್ರೇಮಿ ಸೈನ್ಯದಿಂದ ಎರಡುಬಾರಿ ಸೋತು ಇನ್ನೆರಡು ಬಾರಿ ಮೋಸ ಹಾಗೂ ಕುತಂತ್ರಗಳಿಂದಲೇ ಗೆದ್ದ ಬ್ರಿಟಿಷರಿಗೆ ಟಿಪ್ಪುವಿನ ವ್ಯಕ್ತಿತ್ವವೇ ದೊಡ್ಡ ಸವಾಲಾಗಿತ್ತು. ಆ ವ್ಯಕ್ತಿತ್ವವನ್ನು ಹಾಳುಗೆಡವಿದಷ್ಟೂ ಅದಕ್ಕೆ ಅಪಕೀರ್ತಿ ತಂದಷ್ಟೂ ಬ್ರಿಟಿಷರ ವಸಾಹತುಶಾಹಿ ಶೋಷಣೆ ನಿರಂತರವಾಗಿ ಮುಂದುವರೆಯುವುದು ಸಾಧ್ಯವಿತ್ತು. ಆದ್ದರಿಂದಲೇ ತಮ್ಮ ವಸಾಹತುಶಾಹಿ ಕುತಂತ್ರ ನೀತಿಗೆ ತಕ್ಕಂತೆ ಒಂದಿಷ್ಟೂ ತಳಬುಡವಿಲ್ಲದ ಹಸೀಸುಳ್ಳು, ಅರ್ಧಸತ್ಯಗಳನ್ನು ಬೆರೆಸಿ, ಟಿಪ್ಪು ಮತಾಂಧನೆಂಬ ಪ್ರಚಾರ ನಡೆಸಿದರು. ಇತಿಹಾಸ ಬರೆಯುವವರು ಯಾವಾಗಲೂ ಗೆದ್ದವರೇ ಆದ್ದರಿಂದ ಇದೇ ಇತಿಹಾಸ ಬ್ರಿಟಿಷ್ ವಸಾಹತುಶಾಹಿ ಇರುವ ತನಕ ಮುಂದುವರೆಯಿತು.

TipuSultan1947ರಿಂದ ಈ ದೇಶದ ಚುಕ್ಕಾಣಿ ಹಿಡಿದವರು ಸಾಮ್ರಾಜ್ಯಶಾಹಿಗಳಿಗೆ ಶರಣಾದ ದಲ್ಲಾಳಿಗಳೇ ಆದ್ದರಿಂದ ಟಿಪ್ಪುವಿನ ರಾಜಿರಹಿತ ವಸಾಹತುಶಾಹಿ ವಿರೋಧಿ, ಊಳಿಗಮಾನ್ಯ ವಿರೋಧಿ ಮೌಲ್ಯಗಳ ಆದರ್ಶ ಮಾದರಿಯಾಗದಂತೆ ನೋಡಿಕೊಂಡರು. ಆದ್ದರಿಂದಲೇ ಟಿಪ್ಪುವಿನ ವಿರುದ್ಧದ ಅಪಪ್ರಚಾರಕ್ಕೆ ಉತ್ತೇಜನವನ್ನು ನೀಡಿದರು.

ಇನ್ನು ಟಿಪ್ಪು ಮತಾಂತರಿಯೆಂದು ಪ್ರಚಾರ ಮಾಡುತ್ತಿರುವ ಮೂರನೆಯ ಗುಂಪಿನವರು ಹಿಂದೂ ಫ್ಯಾಸಿಸ್ಟರು. ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಈ ಗುಂಪಿನ ದೃಷ್ಟಿಕೋನ ಏನೆಂಬುದಕ್ಕೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅವರ ಗ್ರಹಿಕೆಯೇನೆಂದು ಅರ್ಥಮಾಡಿಕೊಂಡರೆ ಸಾಕಾಗುತ್ತದೆ. ಸಂಘ ಪರಿವಾರದ ಹಿಂದೂವಾದಿ ಬರಹಗಾರ ನಾಗೇಶ್ ಓಕ್ “1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಮುಸ್ಲಿಂ ದೊರೆಗಳು ತಮ್ಮ ಕಳೆದುಹೋದ ಗದ್ದುಗೆಯನ್ನು ಮತ್ತೆ ಪಡೆದುಕೊಳ್ಳಲು ಹೂಡಿದ ಸಂಚೆಂದು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿ ಸಿಪಾಯಿದಂಗೆಯನ್ನು ಹತ್ತಿಕ್ಕಿದ್ದಕ್ಕೆ ನಾವು ಬ್ರಿಟಿಷರಿಗೆ ಋಣಿಯಾಗಿರಬೇಕು” ಎಂದು ಬರೆಯುತ್ತಾನೆ. ಅದೇ ರೀತಿ ಇದೇ ಸಂಘ ಪರಿವಾರದವರೇ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬ್ರಿಟಿಷರಿಗೆ ಸಹಕರಿಸಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಹತ್ತಿಕ್ಕಿದರು. ಈಗಲೂ ಇದೇ ಫ್ಯಾಸಿಸ್ಟರೇ ಜನತೆಯನ್ನು ಹಿಂದೂ-ಮುಸ್ಲಿಂ ಎಂದು ಒಡೆದು ಸಾಮ್ರಾಜ್ಯಶಾಹಿಗಳ ಲೂಟಿಗೆ ರತ್ನಗಂಬಳಿ ಹಾಸಿರುವವರು. ಅವರ ಪ್ರಕಾರ ಭಾರತವನ್ನಾಳಿದ ಯಾವುದೇ ಮುಸ್ಲಿಂ ರಾಜನೂ ಭಾರತೀಯ ರಾಜನೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೀಗ ಮುಸ್ಲಿಮರು ಯಾರೂ ದೇಶಪ್ರೇಮಿಗಳಲ್ಲ. ಪಾಕಿಸ್ತಾನಿ ಏಜೆಂಟರು ಎಂಬುದೇ ಅವರ ವಾದ. ಇತಿಹಾಸದ ಈ ವಕ್ರೀಕರಣ ಹಾಗೂ ಫ್ಯಾಸಿಸ್ಟ್ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಗೋಬೆಲ್ಸನಂತೆ ಸುಳ್ಳುಗಳ ಸರಮಾಲೆಯನ್ನು ಪ್ರಚಾರ ಮಾಡುವುದೇ ಅವರ ಆಯುಧಗಳು. ಇವರ ಯಾವೊಂದು ವಾದವನ್ನೂ ಆಳವಾಗಿ ಪರಿಶೀಲಿಸಿದರೂ ಅವರ ಹಸೀಸುಳ್ಳು ಚಿತ್ರಗಳು ಬಹಳ ಬೇಗನೆ ಬಯಲಿಗೆ ಬೀಳುತ್ತವೆ.

ಹೀಗಿರುವಾಗ ಟಿಪ್ಪುವಿನ ಆಳ್ವಿಕೆಯ ಊಳಿಗಮಾನ್ಯ ವಿರೋಧಿ ಕ್ರಮಗಳ ಭಾಗವಾಗಿ ಮಠ-ಮಾನ್ಯಗಳ ಹಿಡುವಳಿಗೆ ಬ್ರಾಹ್ಮಣರೇ ಬಹುಪಾಲು ನಿಯಂತ್ರಿಸುತ್ತಿದ್ದ ಗ್ರಾಮೀಣ ಭೂಮಿಯ ಮೇಲಿನ ಅಧಿಕಾರಕ್ಕೆ ಹಾಗೂ ಪಾರಂಪರಿಕವಾಗಿ ಅವರು ನಡೆಸಿಕೊಂಡು ಬಂದ ಜಾತಿ ದೌರ್ಜನ್ಯಕ್ಕೆ ಬಲವಾದ ಪೆಟ್ಟುಕೊಟ್ಟು ಬ್ರಾಹ್ಮಣಶಾಹಿಯ ರೆಕ್ಕೆಪುಕ್ಕಗಳನ್ನು ಕತ್ತರಿಸಿದಕ್ಕೆ ಟಿಪ್ಪುವಿನ ವಿರುದ್ಧ ಸುಳ್ಳುಗಳ ಕಂತೆಯ ಅಪಪ್ರಚಾರ ನಿರೀಕ್ಷಿತವೇ. ಅದೇ ರೀತಿ ಕರಾವಳಿ ತೀರದ ಗೌಡ ಸಾರಸ್ವತ ಬ್ರಾಹ್ಮಣರ ಒಂದು ಭಾಗ ಮೊದಲಿನಿಂದಲೂ ಪೋರ್ಚುಗೀಸರ ದಲ್ಲಾಳಿಗಳಾಗಿ ನಂತರ ಅವರಲ್ಲಿ ಕೆಲವರು ಕ್ರಿಶ್ಚಿಯನ್ನರಾಗಿ ಮತಾಂತರ ಹೊಂದಿದ್ದರು. ನಂತರ ಅವರೇ ಬ್ರಿಟಿಷರ ದಲ್ಲಾಳಿಗಳಾಗಿ ಟಿಪ್ಪು ಮೊದಲಿಟ್ಟ ವಸಾಹತುಶಾಹಿ ವಿರೋಧಿ ಕ್ರಮಗಳನ್ನು ವಿರೋಧಿಸುತ್ತಾ ಬ್ರಿಟಿಷರ ಜೊತೆ ಶಾಮೀಲಾಗಿ ದೇಶದ್ರೋಹವೆಸಗಿದ್ದರು. ಆಗ ಟಿಪ್ಪು ಈ ದಲ್ಲಾಳಿ ಸಮುದಾಯವನ್ನು ಕರಾವಳಿ ತೀರದಿಂದ ಎತ್ತಂಗಡಿ ಮಾಡಿಸಿದ್ದು ನಿಜ. ಇಂದು ಈ ದಲ್ಲಾಳಿ ವರ್ಗವೂ ಸಹ ಹಿಂದೂ ಫ್ಯಾಸಿಸ್ಟರ ಜೊತೆ ದನಿಗೂಡಿಸಿ ಟಿಪ್ಪು ಮುಸ್ಲಿಂ ಮತಾಂಧ, ಮತಾಂತರಿಯೆಂದು ಪ್ರಚಾರ ಮಾಡುತ್ತಿದ್ದಾರೆ.

Tippu-1ಈ ಹಿಂದೂ ಫ್ಯಾಸಿಸ್ಟರ ವಾದಗಳ ಸುಳ್ಳು, ಪೊಳ್ಳುಗಳನ್ನು ಕೆದಕುತ್ತಾ ಕೂಡುವ ಅಗತ್ಯವಿಲ್ಲವಾದರೂ ಅಂದಿನ ಐತಿಹಾಸಿಕ ಸಂದರ್ಭದಲ್ಲಿ ಇಸ್ಲಾಮ್ ಧರ್ಮ ಹಾಗೂ ಟಿಪ್ಪು ವಹಿಸಿದ ಪ್ರಗತಿಪರ ಜಾತಿ ನಿರಾಕರಣ ಪಾತ್ರವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈಗಾಗಲೇ ವಿವರಿಸಿದಂತೆ ಅಂದಿನ ಸಮಾಜದಲ್ಲಿ ಬ್ರಾಹ್ಮಣಶಾಹಿ ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಸಾಂಸ್ಕøತಿಕವಾಗಿ ಇಡೀ ಜನತೆಯನ್ನು ಶೋಷಿಸುತ್ತಿತ್ತು. ಜೀವವಿರೋಧಿ ಜಾತಿ ಪದ್ದತಿಯಡಿ ನಾಡಿನ ಜನತೆ ಗುಲಾಮರಂತೆ ಪಶುಗಳಂತೆ ಬದುಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಟಿಪ್ಪು ತಂದ ಊಳಿಗಮಾನ್ಯ ವಿರೋಧಿ ಸುಧಾರಣೆಗಳು ಬ್ರಾಹ್ಮಣಶಾಹಿಯ ಆರ್ಥಿಕ-ಸಾಮಾಜಿಕ-ರಾಜಕೀಯ ಹಿಡಿತವನ್ನು ಸಡಿಲಿಸಿ ರೈತರನ್ನುವಿಮೋಚನೆ ಮಾಡಿದವು. ಅಲ್ಲದೇ ಟಿಪ್ಪುವಿನ ಪ್ರಭುತ್ವ, ಸೈನ್ಯ ಹಾಗೂ ಇತರ ಇಲಾಖೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಶೋಷಿತ ಜಾತಿಗಳಿಗೆ ಸೇರಿದ ಜನತೆಗೆ ವಿಮೋಚನೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದನ್ನು ಈಗಾಗಲೇ ಗಮನಿಸಿದ್ದೇವೆ. ಮನ್ರೋ ಗುರುತಿಸಿರುವಂತೆ, ಈ ಶೋಷಿತ ಜನತೆಯ ವಿಮುಕ್ತಗೊಂಡ ಸ್ಪೂರ್ತಿಯನ್ನು, ಟಿಪ್ಪುವಿನ ಅಜೇಯ ಬಲ ತಂದುಕೊಟ್ಟಿತೇ ವಿನಃ ಹಳೆಯ ಬ್ರಾಹಣಶಾಹಿ ಹಿಡಿತವೇ ಇದ್ದಿದ್ದರೆ, ಮೈಸೂರು ಸೈನ್ಯ ಬಹಳ ಬೇಗನೆ ಧೂಳೀಪಟವಾಗುತ್ತಿತ್ತು.

ಅಲ್ಲದೇ ಮೈಸೂರು ಪ್ರಾಂತದಲ್ಲಿ ಮೊಟ್ಟಮೊದಲ ಬಾರಿಗೆ ಮುಸ್ಲೀಮರು ಅರಸರಾಗಿದ್ದರು. ಅವರು ಊಳಿಗಮಾನ್ಯತೆಯ ಕಡು ಶತೃಗಳೂ ಆಗಿದ್ದರಿಂದ ಅವರು ಪಾಲಿಸುತ್ತಿದ್ದ ಮುಸ್ಲಿಂಧರ್ಮ ಆಗಿನ್ನು ಹಳ್ಳಿಯ ಊಳಿಗಮಾನ್ಯತೆಯ ಜೊತೆ ರಾಜಿಯಾಗಿರಲಿಲ್ಲ. ಮೇಲಾಗಿ ಇಸ್ಲಾಂ ಧರ್ಮದ ಮೂಲಭೂತ ಚೌಕಟ್ಟಿನಲ್ಲಿ ಜಾತಿ ವ್ಯವಸ್ಥೆಗೆ ಸ್ಥಾನವಿರಲಿಲ್ಲ. ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಶೋಷಿತ ಜಾತಿಗಳಿಗೆ ಸೇರಿದ ಜನತೆ ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಇದರಲ್ಲಿ ಬಲವಂತದ ಮತಾಂತರದ ಮಾತೇ ಇರಲಿಲ್ಲ.

ಇನ್ನು ವ್ಯಕ್ತಿಯಾಗಿ ಟಿಪ್ಪು ಇಸ್ಲಾಂ ಧರ್ಮದಲ್ಲಿ ಶ್ರದ್ಧೆ ಉಳ್ಳವನಾಗಿದ್ದರೂ ಮತಾಂಧನಾಗಿರಲಿಲ್ಲ ವೆಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆತನ ಸೈನಿಕ ಹಾಗೂ ನಾಗರೀಕ ಆಡಳಿತ ವರ್ಗದ ಪ್ರಮುಖ ಸ್ಥಾನಗಳಲ್ಲಿ ಹಿಂದೂಗಳಿದ್ದರು. ಟಿಪ್ಪುವಿನ ಆಡಳಿತದಲ್ಲಿ ಟಿಪ್ಪುವಿನ ನಂತರ ಅತ್ಯಂತ ಪ್ರಮುಖನಾಗಿದ್ದುದು ದಿವಾನ್ ಪೂರ್ಣಯ್ಯನೇ. ಆತನ ಕಾಲದಲ್ಲಿ ಯಾವ ಹಿಂದೂ ದೇವಾಲಯಗಳನ್ನೂ ಹಾಳುಗೆಡವಲಿಲ್ಲ. ಬದಲಿಗೆ ಹಿಂದೂ ಧರ್ಮಾವಲಂಬಿಗಳಾದ ಮರಾಠರು ಶೃಂಗೇರಿ ಮಠವನ್ನು ಕೊಳ್ಳೆ ಹೊಡೆದಾಗ ಅದನ್ನು ರಕ್ಷಿಸಿ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಿದವನು ಮುಸ್ಲಿಂ ಧರ್ಮಾನುಯಾಯಿ ಟಿಪ್ಪುವೇ. ಶ್ರೀರಂಗಪಟ್ಟಣದ ರಂಗನಾಥ ದೇವಸ್ಥಾನ, ಮೇಲುಕೋಟೆ ದೇವಸ್ಥಾನಗಳು ಕೆಲವು ಉದಾಹರಣೆಗಳು ಮಾತ್ರ.

Tippu-1ವಾಸ್ತವವಾಗಿ ಟಿಪ್ಪು ಅನುಸರಿಸಿದ್ದು ಮೂಲಭೂತವಾದಿ ಇಸ್ಲಾಂ ಧರ್ಮವನ್ನಲ್ಲ. ಬದಲಿಗೆ ಸುಧಾರಿತ ಇಸ್ಲಾಂ ಧರ್ಮವನ್ನು ಸಾರುವ ಸೂಫಿ ಪಂಥದ ಇಸ್ಲಾಂ ಅನ್ನು ಟಿಪ್ಪು ಅನುಸರಿಸಿದ. ವಾಸ್ತವವಾಗಿ ಟಿಪ್ಪುವಿನ ಹೆಸರೇ ಟಿಪ್ಪು ಔಲಿಯಾ ಎಂಬ ಸೂಫಿ ಧರ್ಮ ಪ್ರಚಾರಕನ ಹೆಸರಿಂದ ಪಡೆದದ್ದು. ಟಿಪ್ಪುವಿನ ಗ್ರಂಥಾಲಯದಲ್ಲಿ ಹಲವಾರು ಸೂಫಿ ಪಂಥದ ಧರ್ಮಗ್ರಂಥಗಳು ದೊರೆತವಲ್ಲದೇ ಟಿಪ್ಪುವೇ ಖುದ್ದು ಮೂಲಭೂತವಾದಿ ಮೌಲ್ವಿಗಳಿಗಿಂತ ಖ್ವಾಜಾ ಬಂದೇ ನವಾಜರಂಥ ಸೂಫಿ ಸುಧಾರಕರ ಅನುಯಾಯಿಯಾಗಿದ್ದ. ವಿಲ್ಕ್ಸ್ ಎಂಬ ಬ್ರಿಟಿಷ್ ಇತಿಹಾಸಕಾರ ಬರೆದಂತೆ ಹೈದರಾಲಿ ಅರ್ಧ ಹಿಂದುವಂತೆಯೇ ನಡೆದುಕೊಳ್ಳುತ್ತಿದ್ದ. ಸ್ಕ್ವಾಟ್ಜ್ ಎಂಬ ಇಂಗ್ಲೀಷ್ ಪಾದ್ರಿ ಬರೆದಂತೆ ಜನತೆ ಯಾವ ಧರ್ಮ ಅನುಸರಣೆ ಮಾಡುತ್ತಾರೆ ಎಂಬುದು ಆತನಿಗೆ ನಗಣ್ಯವಾಗಿತ್ತು. ಹೈದರಾಲಿಗೆ ಖುದ್ದು ಒಂದು ಧರ್ಮವಿಲ್ಲ. ಅದೇ ರೀತಿ ಜನರ ಧರ್ಮದ ಬಗ್ಗೆಯೂ ಆತ ತಲೆಕೆಡಿಸಿಕೊಂಡಿರಲಿಲ್ಲ.

ಹೀಗೆ ಟಿಪ್ಪುವಾಗಲಿ, ಹೈದರಾಲಿಯಾಗಲಿ ಮತಾಂಧರೂ ಆಗಿರಲಿಲ್ಲ ಹಿಂದೂ ಅಥವಾ ಕ್ರೈಸ್ತ ಧರ್ಮ ವಿರೋಧಿಗಳೂ ಆಗಿರಲಿಲ್ಲ. ಅವರು ಪರಧರ್ಮ ಸಹಿಷ್ಣುಗಳು ಮಾತ್ರವಲ್ಲ ಪರಮ ಸಮಾಜ ಸುಧಾರಕರೂ ಆಗಿದ್ದರು. ಧರ್ಮ ಮತಾಂತರ ಇತ್ಯಾದಿ ಸಂಗತಿಗಳಿಗಿಂತ ಅವರ ಜೀವನ ಧ್ಯೇಯ ಬ್ರಿಟಿಷ್ ವಸಾಹತುಶಾಹಿಗಳನ್ನು ಭಾರತದಿಂದ ಹೊಡೆದೋಡಿಸಿ ಕರ್ನಾಟಕದ ಐತಿಹಾಸಿಕ ಮುನ್ನಡೆಗೆ ತ್ವರಿತಗತಿ ಒದಗಿಸುವುದೇ ಆಗಿತ್ತು. ಹೀಗಾಗಿ ಆ ದಾರಿಯಲ್ಲಿ ಅಡ್ಡಬಂದ ಪಾಳೇಗಾರರು, ಮಠಮಾನ್ಯಗಳು, ಜಾತಿಪದ್ದತಿಗಳು, ಬ್ರಾಹ್ಮಣಶಾಹಿಗಳು, ದಲ್ಲಾಳಿ ವ್ಯಾಪಾರಿಗಳು ಎಲ್ಲರನ್ನೂ ಅವರು ಹತ್ತಿಕ್ಕಿದರು. ಈ ಎಲ್ಲಾ ಕ್ರಮಗಳು ಅಂದಿನ ಸಾಮಾಜಿಕ ಮುನ್ನಡೆಗೆ ಇನ್ನಷ್ಟು ಶಕ್ತಿ ನೀಡಿದವು ಎಂಬುದನ್ನು ಮರೆಯುವಂತಿಲ್ಲ. ಇಷ್ಟಾದರೂ ಪರಮ ದೇಶಪ್ರೇಮಿ ಟಿಪ್ಪುವನ್ನು ಹಿಂದೂ ಫ್ಯಾಸಿಸ್ಟ್‍ವಾದಿಗಳು ಮತಾಂಧನೆಂದು ಏಕೆ ಪ್ರಚಾರ ಮಾಡಿತ್ತಿದ್ದಾರೆಂಬುದನ್ನು ಅರಿಯುವ ಅಗತ್ಯವಿದೆ.

ಟಿಪ್ಪು ಜಾತಿ ಹಾಗೂ ಬ್ರಾಹ್ಮಣಶಾಹಿ ವಿರೋಧಿ. ಹಿಂದೂವಾದಿಗಳು ಅದರ ಪ್ರತಿಪಾದಕರು. ಟಿಪ್ಪು ಮಠಮಾನ್ಯಗಳ ಮಾನ್ಯತೆಯನ್ನು ರದ್ದುಗೊಳಿಸಿದ. ಹಿಂದೂವಾದಿಗಳು ಅದನ್ನು ಈಗಲೂ ಜೀವಂತ ಇರಗೊಡಬಯಸುತ್ತಾರೆ. ಟಿಪ್ಪು ಎಲ್ಲಕ್ಕಿಂತ ಹೆಚ್ಚಾಗಿ ಅಪ್ರತಿಮ ದೇಶಪ್ರೇಮಿ, ವಸಾಹತುಶಾಹಿ ವಿರೋಧಿ. ಹಿಂದುತ್ವವಾದಿ ಸಂಘಪರಿವಾರದವರು ಪರಮ ಸಾಮ್ರಾಜ್ಯಶಾಹಿ ಗುಲಾಮರು.ಟಿಪ್ಪು, ದೇಶಪ್ರೇಮ-ಸ್ವಾಭಿಮಾನ-ಸ್ವಾತಂತ್ರ್ಯಗಳ ಆಧಾರದ ಮೇಲೆ ನಾಡನ್ನು ಕಟ್ಟಲು ಪ್ರಯತ್ನಿಸಿದ. ಹಿಂದೂವಾದಿಗಳು ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಸಾಮ್ರಾಜ್ಯಶಾಹಿಗಳ ಗುಲಾಮಿ ಪರಾವಲಂಬಿತನದೆಡೆ ದೇಶವನ್ನು ದೂಡುತ್ತಿದ್ದಾರೆ.

ಒಟ್ಟಿನಲ್ಲಿ ಟಿಪ್ಪುವಿನ ಬದುಕು ಹಾಗೂ ಮೌಲ್ಯಗಳು ಹಿಂದೂ ಫ್ಯಾಸಿಸ್ಟರ ದೇಶದ್ರೋಹ, ನಾಡದ್ರೋಹ ಹಾಗೂ ಪ್ರತಿಗಾಮಿ ಮೌಲ್ಯಗಳನ್ನು ಬಯಲಿಗಿಡುತ್ತವೆ. ಹಾಗೂ ಫ್ಯಾಸಿಸ್ಟ್ ರಾಜ್ಯ ಸೃಷ್ಟಿಸುವ ಅವರ ಉದ್ದೇಶಕ್ಕೆ ಅಡ್ಡ ಬರುತ್ತದೆ. ಆದ್ದರಿಂದ ತಮ್ಮ ಹಿಂದೂ ಫ್ಯಾಸಿಸ್ಟ್ ಯೋಜನೆಯ ಭಾಗವಾಗಿಯೇ ಈ ಅಪಪ್ರಚಾರಕ್ಕೆ ಹಿಂದೂ ಫ್ಯಾಸಿಸ್ಟರು ಮುಂದಾಗಿದ್ದಾರೆ. ಆದ್ದರಿಂದಲೇ ನಿಜವಾದ ದೇಶಪ್ರೇಮಿಗಳು, ಪ್ರಗತಿಪರರೆಲ್ಲರೂ ಟಿಪ್ಪುವಿನ ವಿರುದ್ಧದ ಹಿಂದೂ ಫ್ಯಾಸಿಸ್ಟ್ ಪ್ರಚಾರವನ್ನು ಪ್ರತಿಭಟಿಸಿ ಹಿಮ್ಮೆಟ್ಟಿಸಬೇಕಾಗಿದೆ.

4 Responses to "ಟಿಪ್ಪು : ಮತಾಂಧರು ಯಾರು ?"

 1. Sudu  November 4, 2016 at 6:24 am

  ಟಿಪ್ಪುವಿನ ಬಗ್ಗೆ ನಾನು ಬಹಳಷ್ಟು ಅಧ್ಯಯನವನ್ನೇನ್ನೂ ಮಾಡಿಲ್ಲ. ಆದರೆ ಸ್ವಭಾವತಃ ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಯಾವುದೇ ಲೇಖನವನ್ನು ಬರೆಯುವಾಗ ಪೂರ್ವಗ್ರಹದಿಂದ ಕೂಡಿದ ಲೇಖನಗಳನ್ನು ಸೋಸುವುದು ನನ್ನ ವೃತ್ತಿಯಲ್ಲಿ ಅವಶ್ಯಕ ಕೂಡ. ಒಬ್ಬ ಲೇಖ(ಕನ /ಕಿಯ ) ಋಜುತ್ವ ಅವನು /ಅವಳು ಎಷ್ಟು ವಸ್ತುನಿಷ್ಠವಾಗಿ ತನ್ನ ಅಭಿಪ್ರಾಯವನ್ನು ಮುಂದಿಡುತ್ತಾರೆ ಎಂಬುದರ ಮೇಲೆ ಅವಲಂಬಿಸುತ್ತೆ. ನೀವು ಟಿಪ್ಪುವಿನ ಮೊದಲು ಬ್ರಾಹ್ಮಣರು ಮಠ ಮಾನ್ಯ ಗಾಲ ಮೂಲಕ ಊಳಿಗಮಾನ್ಯ ಪದ್ಧತಿ ಯನ್ನು ಪೋಷಿಸುತ್ತಿದ್ದರು, ಟಿಪ್ಪು ಅದನ್ನು ತೊಡೆದುಹಾಕಿದ ಅಂತ ಹೇಳಿದ್ದೀರಿ, ಆದರೆ ಆಗಿನ ಕಾಲದ ಮತ್ತು ಮುಂದಿನ ಮೈಸೂರು ಸಂಸ್ಥಾನದಲ್ಲಿ ಇದ್ದ ಅಧಿಕಾರಿಗಳ ಆತ್ಮಕಥನಗಳನ್ನು ಓದಿದರೆ ನಿಮ್ಮ ಹೇಳಿಕೆ ಬಾಲಿಶ ಅನಿಸುವುದು.
  ಅಂತೆಯೇ, ನಿಮ್ಮ ಎರಡನೇ ಪರಿಚ್ಛೇದದಲ್ಲಿ ೧೯೪೭ ರಲ್ಲಿ ಬಂದವರೂ ವಸಾಹತುಶಾಹಿಗಾಲ ಗುಲಾಮರೇ ಎಂದಿದ್ದೀರಿ. ನಿಮ್ಮ ಒಟ್ಟು ಲೇಖನದಲ್ಲಿ ಒಬ್ಬ ಮನ ಕಲಕಿದ ವ್ಯಕ್ತಿಯ ಗೊಂದಲ ಕಾಣುತ್ತೆ ವಿನಃ ಒಂದು ಭಾಷೆಯ ಹರಹು ಅಥವಾ ಸ್ಫುಟತೆ ಇಲ್ಲ. ನಿಮ್ಮ ಪ್ರಕಾರ ಕಾಂಗ್ರೆಸ್ಸಿಗರು ವಸಾಹತುಶಾಹಿಯ ಗುಲಾಮರು, ಜನಸಂಘದವರು ಫ್ಯಾಸಿಸ್ಟರು, ಕಮ್ಯುನಿಸ್ಟರಂತೂ ಈಗ ಸತ್ತೇ ಹೋಗಿದ್ದಾರೆ, ಒಂದಲ್ಲ ಹಲವು ದೇಶಗಳಲ್ಲಿ ಕಮ್ಯುನಿಸ್ಟ್ ಸಿದ್ದಾಂಥ ಕೆಲಸ ಮಾಡುವದು ಇಲ್ಲ ಎಂದು ಸಾಬೀತಾಗಿದೆ. ಹೀಗಿದ್ದಾಗ ನಿಮ್ಮ ಕರೆ ಯಾರಿಗೆ?

  Reply
  • admin  November 9, 2016 at 10:33 pm

   Dear Sudu,

   ನಾನು ಯಾವುದೇ ವಿಷಯದ ಕುರಿತು ಓದುವಾಗ ಆ ವಿಷಯದ ಬಗ್ಗೆ ಇರುವ ವಿಭಿನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಹೀಗಾಗಿ ಈ ಲೇಖನ ಓದುವಾಗಲೂ ಇದಕ್ಕೆ ಬಂದಿರುವ ಪ್ರತಿಕ್ರಿಯೆ ಸಹಜವಾಗಿ ನನ್ನ ಗಮನ ಸೆಳೆಯಿತು.
   ನಿಮ್ಮ ಪ್ರತಿಕ್ರಿಯೆಯ ಮೂರು ಪ್ರಮುಖ ವೈರುಧ್ಯಗಳಿವೆ ಎಂದು ನನಗನಿಸಿತು.

   1) “ಟಿಪ್ಪುವಿನ ಬಗ್ಗೆ ನಾನು ಬಹಳಷ್ಟು ಅಧ್ಯಯನವನ್ನೇನ್ನೂ ಮಾಡಿಲ್ಲ” ಎಂದು ಹೇಳಿಕೊಂಡಿದ್ದೀರಿ. ತಮ್ಮ ಜ್ಞಾನದ ಕೊರತೆಯನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದು ಒಂದು ದೊಡ್ಡ ಗುಣ. ನಿಮಗೆ ಅಭಿನಂದನೆಗಳು.
   ಆದರೆ ಮುಂದಿನ ವಾಕ್ಯಗಳಲ್ಲೇ ತಾವು ತೀರ್ಪುಗಳನ್ನು ಕೊಡಲು ಆರಂಭಿಸಿಬಿಟ್ಟಿದ್ದೀರಿ. “ಅಧಿಕಾರಿಗಳ ಆತ್ಮಕತನ” ಓದಿ ಮೇಲಿನ ಲೇಖಕರ ವಿಚಾರ ಬಾಲಿಶತನದ್ದು ಎಂದು ಆಶ್ಚರ್ಯಕರವಾದ ಫರ್ಮಾನು ಹೊರಡಿಸಿಬಿಟ್ಟಿದ್ದೀರಿ. ಟಿಪ್ಪು ಬಗ್ಗೆ ಹೆಚ್ಚು ಅಧ್ಯಯನ ಮಾಡದಿದ್ದರೂ ಕೂಡ!!
   ಹಾಗಾದರೆ ಬಾಲಿಶತನ ಯಾರದ್ದು??

   2) “ಒಂದಲ್ಲ ಹಲವು ದೇಶಗಳಲ್ಲಿ ಕಮ್ಯುನಿಸ್ಟ್ ಸಿದ್ದಾಂಥ ಕೆಲಸ ಮಾಡುವದು ಇಲ್ಲ ಎಂದು ಸಾಬೀತಾಗಿದೆ” ಎಂದು ಸಾರುವ ಮೂಲಕ ತಾವು ಈ ಲೇಖನಕ್ಕೆ ಸಂಬಂಧಪಡದ ವಿಷಯವನ್ನು ಎಳೆದು ತಂದಿದ್ದೀರಿ. ನಿಮ್ಮ ತಲೆಯಲ್ಲಿರುವ ಪೂರ್ವಗ್ರಹವನ್ನು ಜಾಹೀರುಪಡಿಸಿದ್ದಕ್ಕಾಗಿ ಧನ್ಯವಾದಗಳು.
   ಆದರೆ ಕಮ್ಯುನಿಸ್ಟ್ ಸಿದ್ಧಾಂತ ಕೆಲಸ ಮಾಡುತ್ತೋ ಇಲ್ಲವೋ ಎಂಬುದು ಇಲ್ಲಿ ಚರ್ಚೆಯ ವಿಚಾರವೇ ಆಗಿರಲಿಲ್ಲ ಎಂಬುದನ್ನು ವಿನಮ್ರವಾಗಿ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

   “ಪೂರ್ವಗ್ರಹದಿಂದ ಕೂಡಿದ ಲೇಖನಗಳನ್ನು ಸೋಸುವುದು ನನ್ನ ವೃತ್ತಿಯಲ್ಲಿ ಅವಶ್ಯಕ ಕೂಡ” ಎಂದು ಘೋಷಿಸಿಕೊಂಡಿದ್ದೀರಿ. ತಮ್ಮ “ಸೋಸುವ” ಕ್ರಮದಲ್ಲಿ ಮತ್ತು “ಸೋಸುವ” ಪರಿಕರದಲ್ಲಿ ಏನೋ ದೋಷವಿರುವುದು ಎದ್ದು ಕಾಣುತ್ತಿದೆ. ಯಾಕೆಂದರೆ ಸೋಸಬೇಕಾದ ವಸ್ತುವಿನಲ್ಲಿ ಇಲ್ಲದ ಹೊಸ ವಿಚಾರ ದಿಡೀರನೇ ಎಲ್ಲಿಂದಲೋ (ತಮ್ಮ ತಲೆಯಿಂದ) ಬಂದು ಸೇರ್ಪಡೆಯಾಗುತ್ತಿದೆ. ಸರಿಪಡಿಸಿಕೊಳ್ಳಲು ಸಾಧ್ಯವೆ? ಪ್ರಯತ್ನಿಸಿ. ಯಾಕೆಂದರೆ ಅದು ನಿಮ್ಮ “ವೃತ್ತಿಯಲ್ಲಿ ಅವಶ್ಯಕ ಕೂಡ”!!

   3) “ನಿಮ್ಮ ಕರೆ ಯಾರಿಗೆ?” ಎಂಬ ನಿಮ್ಮ ಪ್ರಶ್ನೆಯ ಹಿಂದಿನ ತರ್ಕದ ಬಗ್ಗೆ ಅಳಬೇಕೋ, ನಗಬೇಕೋ ತಿಳಿಯುತ್ತಿಲ್ಲ. ನಿಮ್ಮ ಪ್ರಕಾರ ಈ ದೇಶದ ಪ್ರಜೆಗಳು ಒಂದೋ ಕಾಂಗ್ರೆಸ್‍ನವರಾಗಿದ್ದಾರೆ, ಇಲ್ಲವೇ ಜನಸಂಘದ ಹಿನ್ನೆಯವರಾಗಿದ್ದಾರೆ ಅಥವ ಕಮ್ಯುನಿಸ್ಟರಾಗಿದ್ದಾರೆ. ಈ ಮೂರು ವರ್ಗದವರನ್ನು ಬಿಟ್ಟರೆ ಕರೆಕೊಡಲು ಇನ್ನಾರೂ ಉಳಿದಿಲ್ಲ.

   ನೀವು ಹೆಸರಿಸಿದ ಈ ಮೂರೂ ಕೆಟಗರಿಗಳನ್ನು ಒಟ್ಟು ಸೇರಿಸಿದರೂ ಈ ದೇಶದ ಜನಸಂಖ್ಯೆಯ ಶೇಕಡ 10ರ ಸಮೀಪಕ್ಕೂ ಸುಳಿಯುವುದಿಲ್ಲ. ಈ ಯಾವುದೇ ಪಕ್ಷ – ಸಿದ್ಧಾಂತಕ್ಕೆ ಸೇರದ ಶೇ.90ಕ್ಕಿಂತಲೂ ಹೆಚ್ಚಿರುವ ಜನರನ್ನು ತಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದರೆ ಏನು ಹೇಳುವುದು? ನಿಮ್ಮ ಈ ತಿಳುವಳಿಕೆ ಮತ್ತು ತರ್ಕದ ಬಗ್ಗೆ ತೀವ್ರ ಅನುಕಂಪ ಮೂಡುತ್ತದೆ.

   ಕೊನೆಯದಾಗಿ ಒಂದು ಪ್ರಶ್ನೆ.
   “ಒಟ್ಟು ಲೇಖನದಲ್ಲಿ ಒಬ್ಬ ಮನ ಕಲಕಿದ ವ್ಯಕ್ತಿಯ ಗೊಂದಲ ಕಾಣುತ್ತೆ” ಎಂಬುದು ಲೇಖಕರ ಬಗ್ಗೆ ತಮ್ಮ Judgement.
   ತಣ್ಣಗೆ ಯೋಚಿಸಿ ನೋಡಿ. ಗೊಂದಲದಲ್ಲಿರುವ “ಮನ ಕಲಕಿದ ವ್ಯಕ್ತಿ” ಯಾರು??
   -ದೊಡ್ಡಿಪಾಳ್ಯ ನರಸಿಂಹಮೂರ್ತಿ

   Reply
   • admin  November 11, 2016 at 10:00 am

    ಪ್ರಸ್ತುತ ದಿನಮಾನದಲ್ಲಿ ಟಿಪ್ಪು ಸುಲ್ತಾನ ಏನು ಮತ್ತು ಏನಲ್ಲ ಎಂಬ ಬಗ್ಗೆ ಹುಟ್ಟಿಕೂಂಡಿರುವ ಚರ್ಚೆಗಳು ಬಿರುಸನ್ನು ಪಡೆದುಕೋಳ್ಳುತ್ತಿವೆ. ಟಿಪ್ಪುವಿನ ಪರ ಮತ್ತು ವಿರುದ್ದವಾಗಿ ಪತ್ರಿಕೆಗಳಲ್ಲಿ ರಾಜಕೀಯವಾಗಿ ವಿಷಯ ಪ್ರಸ್ತಾಪವಾಗುತ್ತಿದೆ. ಅವರ ಹೆಸರಿನಲ್ಲಿ ನಡೆಯುವಂತಹ ಭಾಷಣ ಪ್ರತಿಭಟನೆಗಳು ಸಹ ಶಬ್ದಮಾಲಿನ್ಯಕ್ಕೆ ಎಡೆಮಾಡಿಕೊಡುತ್ತಿವೆ. ಈ ಎಲ್ಲ ದೃಷ್ಟಾವಳಿಗಳನ್ನು ನೋಡಿದರೆ ಟಿಪ್ಪು ಕಳೆದು ಹೋಗುತ್ತಿರುವನೆಂಬುದು ಸ್ಪಷ್ಟವಾಗಿ ಕಾಣುತ್ತದೆ ಜೂತೆಗೆ ಆಂತಕವೂ ಆಗ್ತಿದೆ ಇಲ್ಲಿ ನಮಗೆ ಕಾಣುವ ಪ್ರಶ್ನೆ ಎಂದರೆ ಟಿಪ್ಪು ಯಾರ ಪ್ರತಿನಿಧಿ? ಎಂಬುದಾಗಿದೆ ಏಕೆಂದರೆ ವಯಕ್ತಿಕವಾಗಿ ಅವರು ಯಾವುದೇ ಧರ್ಮವನ್ನು ಪಾಲಿಸಲಿ, ಓರ್ವ ರಾಜನಾಗಿ ಅವನ ಕಾರ್ಯವೈಖರಿ ಹೇಗಿತ್ತು? ಎಂಬುದು ಸಹ ಕಾಡುತ್ತದೆ ಆತನ ಸಚಿವ ಸಂಪುಟದಲ್ಲಿ ಉನ್ನತಸ್ಥಾನ ಪಡೆದವರೆಲ್ಲರೂ ಹಿಂದುಗಳೆ ಆಗಿದ್ದರು ಎಂಬುದು ಸ್ಪಷ್ಟವಿಚಾರ, ಒಂದು ವೇಳೆ ಟಿಪ್ಪು ಮತಾಂದನಾಗಿದ್ದರೆ ಆತನ ಆಸ್ಥಾನದಲ್ಲಿದ್ದ ದಿವಾನ ಕೃಷ್ಣರಾವ ಹಣಕಾಸು ಮಂತ್ರಿಯಾಗಿ, ಪೂರ್ಣಯ್ಯ ಕಂದಾಯ ಮಂತ್ರಿಯಾಗಿ, ಶಿವಾಜಿ ಮತ್ತು ರಾಮರಾವ ರವರು ಅಶ್ವಧಳದ ದಂಡನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಆನಂತರದಲ್ಲಿ ಲಾಲಾ ಮಹ್ತಾಬ್‍ರಾಯ್ ಹರಿಸಿಂಗ್ ನರಸಿಂಹರಾವ್ ಶ್ರೀನಿವಾಸರಾವ್ ಮುಂತಾದ ವ್ಯಕ್ತಿಗಳು ಇಸ್ಲಾಮಿಗೆ ಮತಾಂತರಗೊಳ್ಳದೆ ಹಿಂದೂಗಳಾಗಿದ್ದುಕೊಂಡೆ ಉನ್ನತ ಸ್ಥಾನಮಾನ ಪಡೆದವರಾಗಿದ್ದಾರೆ ಇದೇಲ್ಲಾ ಹೇಗೆ ಎಂಬ ಪ್ರಶ್ನೆ ಹುಟ್ಟುವುದು ಸಹಜವಾಗಿದೆ.
    1791 ರಲ್ಲಿ ರಘುನಾಥರಾವ್ ನೇತೃತ್ವದ ಮರಾಟ ದಾಳಿಕೋರರು ಶೃಂಗೇರಿಯ ಶಾರದ ಮಂದಿರಕ್ಕೆ ಹಾನಿ ಮಾಡಿ ಪಲ್ಲಕ್ಕಿಯನ್ನು ಹೋತ್ತೋಯ್ದಾಗ ಅದನ್ನು ಪುನ: ಸ್ಥಾಪಿಸಿದ್ದು ಟಿಪ್ಪುವಾಗಿದ್ದಾರೆ, ದಾಳಿಯ ಸಂಧರ್ಭದಲ್ಲಿ ಶೃಂಗೇರಿಯಲ್ಲಿದ್ದ ಶಂಕರಾಚಾರ್ಯರು ತಪ್ಪಿಸಿಕೊಂಡು ಕಾರ್ಕಳದಲ್ಲಿ ಆಶ್ರಯ ಪಡೆದಿರುತ್ತಾರೆ. ಆದರೆ ಟಿಪ್ಪು ಅವರನ್ನು ಪುನ: ಕರೆದುತರುತ್ತಾನೆ ನಂತರದಲ್ಲಿ ಮಂದಿರವನ್ನು ರಕ್ಷಿಸಲಿಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲಿಗೆ ನಿಲ್ಲಿಸುತ್ತಾನೆ, ಅದೇ ರಿತಿಯಾಗಿ ನಂಜನಗೂಡು ತಾಲೂಕಿನಲ್ಲಿರುವ ಶ್ರಿ.ಲಕ್ಷ್ಮೀಕಾಂತ ಮಂದಿರ, ಮತ್ತು ಶ್ರೀ.ಕಣ್ವೇಶ್ವರ ಮಂದಿರ ಮೇಲುಕೋಟೆಯ ನಾರಾಯಣಸ್ವಾಮಿ ಮಂದಿರ, ಶ್ರೀರಂಗ ಪಟ್ಟಣದ ಶ್ರೀರಂಗನಾಥನ ಮಂದಿರಗಳಿಗೆ ಸಹ ಅಗತ್ಯ ನೇರವು ನೀಡಿದ ವ್ಯಕ್ತಿಯಗಿದ್ದಾನೆ, ಕೇರಳದ ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195ಹೇಕ್ಟೆರ ಜಮೀನು ಕೊಟ್ಟಿದ್ದು ಸಹ ಟಿಪ್ಪು ಆಗಿದ್ದಾರೆ.
    ಹಾಗಾದರೆ ಟಿಪ್ಪು ದೇಗುಲಗಳ ಭಂಜಕನಾಗಿದ್ದರೆ ಎಲ್ಲಾ ದೇವಾಲಯಗಳು ಇರುತ್ತಿರಲಿಲ್ಲಾ ಎಂಬುದು ಸ್ಪಷ್ಟ. ಅರಮನೆಯ ಸಮೀಪದಲ್ಲಿರುವ ನರಸಿಂಹ ಮತ್ತು ಗಂಗಾಧರ ಮಂದಿರಗಳು ಇರುವದಕ್ಕೆ ಸಾದ್ಯವಿತ್ತೆ? ಹಾಗೆ ನೋಡಿದರೆ ಟಿಪ್ಪು ಸುಲ್ತಾನ ಕೇವಲ ರಾಜ ಮಾತ್ರ ಅಲ್ಲ ಮನುಷ್ಯ ಕೊಡಾ ಆಗಿದ್ದ ಆದ್ದರಿಂದ ಯಾವುದೆ ಮನುಷ್ಯನಲ್ಲಿಯ ಸಹಜ ದೌರ್ಬಲ್ಯಗಳಿಂದ ಆತನನ್ನು ನೋಡಬೆಕಾದ ಅಗತ್ಯವಿಲ್ಲ ರಾಜನೆಂಬ ವಿಚಾರದಲ್ಲಿ ಹಿಂದುಗಳ ವಿರುದ್ದ ಕ್ರಮ ಕೈಗೊಂಡಿರಬಹುದು ಕ್ರೈಸ್ತರ ವಿರುದ್ದವು ಕ್ರಮ ಜರುಗಿಸರಬಹುದು ಮುಸ್ಲಿಂರ ಮೋಹರಂ ಮೇರವಣಿಗೆ ಅದಕ್ಕೆ ಸಂಬಂದಿಸಿದ ಆಚರಣೆಗಳನ್ನು ನೀಷೇದಿಸಿದ್ದ ಹಾಗೆಂದ ಮಾತ್ರಕ್ಕೆ ಮುಸ್ಲಿಂ ವಿರೋದಿ ಎಂದು ಕರೆಯಬಹುದೇ?
    ಆಡಳಿತಾತ್ಮಕವಾಗಿ ಕೈಗೊಂಡಿರುವ ಕ್ರಮಗಳನ್ನು ಹಿಂದು-ಮುಸ್ಲಿಂ-ಕ್ರೈಸ್ತ ಎಂದು ವಿಭಜಿಸಿ ವಿಶ್ಲೇಷಣೆ ಮಾಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯವಾಗುತ್ತೆ?. ಒಟ್ಟಾರೆಯಾಗಿ ದುರಂತ ಎಂದರೆ ಟಿಪ್ಪುವಿನ ಬಗ್ಗೆ ಓದುವ ಮತ್ತು ಹೇಳುವ ಸಹನೆ ಯಾರಲ್ಲಿಯೂ ಕಾಣಿಸುತ್ತಿಲ.್ಲ ಟಿಪ್ಪುವಿನ ಬೆಂಬಲಿಗರು ಮತ್ತು ವಿರೋಧಿಗಳಲ್ಲಿ ಕೇವಲ ವೈಭವೀಕರಣದ ಮಾತುಗಳಷ್ಟೇ ಕೇಳಿಬರುತ್ತಿದೆ. ನಿಜವಾದ ಟಿಪ್ಪು ಖಂಡಿತ ಇದರಾಚೇಗೆ ಇಧಾನೇ ಎಂಬುದು ಸತ್ಯ ಟಿಪ್ಪು ಒಂದು ಧರ್ಮಕ್ಕೆ ಸೇರಿದ ರಾಜನಲ,್ಲ ಅವನು ಸಾಮ್ರಾಜ್ಯದಲ್ಲಿಯ ಎಲ್ಲರ ರಾಜ ಆತನ ಸರಿತಪ್ಪುಗಳನ್ನು ಸಹಜವಾಗಿ ಸ್ವಿಕರಿಸುತ್ತಲೆ ಜಯಂತಿ ಆಚರಣೆ ಔಚಿತ್ಯವಾದ ಚರ್ಚೆಗೆ ಒಳಪಡಬೇಕಾಗಿದೆ. ಇದರ ಆಚರಣೆಯಿಂದ ಮುಸ್ಲಿಂರಿಗಾದ ಪ್ರಯೋಜನ ಏನು ಎಂಬುದನ್ನು ಅವಲೋಕನ ಮಾಡಿಕೋಳ್ಳಬಹುದ ಒಟ್ಟಿನಲ್ಲಿ ಟಿಪ್ಪು ಒಂದು ದಿನದ ಮಹಾನ್ ಆಗುವುದು ರಾಜಕೀಯದ ಅಗತ್ಯವೋ ಅಥವಾ ಜನರ ಅಗತ್ಯವೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ.
    -ಲಿಂಗರಾಜ ಎಸ್ ಹಂಚಿನಮನಿ
    -8722084344

    Reply
    • admin  November 11, 2016 at 10:03 am

     ಸಾಮ್ರಾಟನ ಆಸ್ಥಾನದಲ್ಲಿ ಮತಾಂಧತೆಯ ಕೂಗು

     ಟಿಪ್ಪು ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ದಾಳವಾಗಿದ್ದಾನೆ. ಎಡ ಬಲಗಳ ತಿಕ್ಕಾಟದಲ್ಲಿ, ಮತೀಯತೆ-ಸೆಕ್ಯುಲರ್ ತತ್ವಗಳ ಘರ್ಷಣೆಯ ನಡುವೆ, ಇತಿಹಾಸ-ವಾಸ್ತವಗಳ ದ್ವಂದ್ವದಲ್ಲಿ ಟಿಪ್ಪು ವಿರಾಜಮಾನನಾಗಿದ್ದಾನೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದಿರಬಹುದಾದ ಪ್ರಮಾದಗಳನ್ನು ಸಮಕಾಲೀನ ಸಾಮಾಜಿಕ ಸಂದರ್ಭದೊಡನೆ ಸಮೀಕರಿಸುವ ಅಪಾಯವನ್ನು ಅರಿಯಬೇಕಾದರೆ ಬಹುಶಃ ಟಿಪ್ಪು ವಿವಾದ ಒಂದು ಸ್ಪಷ್ಟ ಭೂಮಿಕೆಯಾಗುತ್ತದೆ. ವಿಶ್ವದ ಇತಿಹಾಸದಲ್ಲಿ ಎಲ್ಲ ಜನಸಮುದಾಯಗಳಿಗೂ ಸಂತೃಪ್ತಿಯಾಗುವಂತೆ ರಾಜ್ಯಭಾರ ನಡೆಸಿದ ರಾಜ ಮಹಾರಾಜರ ಆಡಳಿತವನ್ನು ಕಾಣಲಾಗುವುದಿಲ್ಲ. ಏಕೆಂದರೆ ರಾಜ, ಮಹಾರಾಜ, ಸಾಮಂತ, ಸಾಮ್ರಾಟ ಮತ್ತು ಪಾಳೇಗಾರರ ಮೂಲ ಅಸ್ತಿತ್ವ ಇದ್ದುದು ತಾವು ಆಕ್ರಮಿಸಿದ ಭೂ ಪ್ರದೇಶವನ್ನು ತಮ್ಮ ಅಧಿಪತ್ಯದಲ್ಲಿ ಉಳಿಸಿಕೊಳ್ಳುವುದರಲ್ಲಿಯೇ ಹೊರತು ಆ ಪ್ರಾಂತ್ಯಗಳಲ್ಲಿನ ಸಮಸ್ತ ಜನತೆಯ ಹಿತಾಸಕ್ತಿಯಲ್ಲಿ ಅಲ್ಲ. ರಾಜಪ್ರಭುತ್ವ ವ್ಯವಸ್ಥೆಯ ಔದಾರ್ಯ ಮತ್ತು ಅನುಕಂಪಗಳನ್ನು ಸಮಕಾಲೀನ ಸಂದರ್ಭದ ಪ್ರಜಾಸತ್ತಾತ್ಮಕ ಧೋರಣೆಯೊಡನೆ ಸಮೀಕರಿಸುವುದು ಇತಿಹಾಸಕ್ಕೆ ಅಪಚಾರ ಎಸಗಿದಂತೆ, ಮಾತ್ರವಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನೂ ಅವಮಾನಿಸಿದಂತೆ. ತನ್ನ ಸ್ವಾರ್ಥ ಹಿತಾಸಕ್ತಿ ಇಲ್ಲದೆ ಯಾವುದೇ ಒಬ್ಬ ದೊರೆ ತನ್ನ ಕುಟುಂಬದವರ ಏಳಿಗೆಯನ್ನು ಕುರಿತು ಸಹ ಯೋಚಿಸಿರಲಾರ. ಇದು ಅಧಿಕಾರ ರಾಜಕಾರಣದ ಮೂಲ ಲಕ್ಷಣ.
     ಇಂದು ನಾವು ಪ್ರಜಾತಂತ್ರ ವ್ಯವಸ್ಥೆಯ ಉನ್ನತ ಹಂತ ತಲುಪಿದ್ದೇವೆ. ಸಮ ಸಮಾಜ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ , ಪ್ರಜಾ ಆಡಳಿತ, ಸಾರ್ವಭೌಮ ಪೌರತ್ವ ಇವೇ ಮುಂತಾದ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದೇವೆ. ಅಧಿಕಾರಸ್ಥ ರಾಜಕಾರಣಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಈ ಮೌಲ್ಯಗಳು ನಶಿಸಿಹೋಗುತ್ತಿದ್ದರೂ ಜನಸಾಮಾನ್ಯರಲ್ಲಿ ಇನ್ನೂ ಜೀವಂತವಾಗಿದೆ. ತಮ್ಮ ಅಧಿಕಾರ ವ್ಯಾಪ್ತಿಯನ್ನು ಉಳಿಸಿಕೊಳ್ಳಲು, ಅಧಿಪತ್ಯವನ್ನು ಕಾಪಾಡಲು ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಆಳ್ವಿಕರು ಔದಾರ್ಯದ ನೆಲೆಯಲ್ಲಿ ಜನಸಾಮಾನ್ಯರಿಗೆ ಒದಗಿಸುವ ಸವಲತ್ತುಗಳು, ಸೌಕರ್ಯಗಳು ಮತ್ತು ರಿಯಾಯಿತಿಗಳು ಶೋಷಿತ, ದಮನಿತ ಶ್ರಮಿಕ ವರ್ಗಗಳ ಬಾಳನ್ನು ಹಸನಾಗಿಸುವುದೋ ಇಲ್ಲವೋ ಎನ್ನುವುದು ಚರ್ಚಾಸ್ಪದ. ಆದರೆ ಈ ಔದಾರ್ಯದ ಉರುಳು ಪ್ರಜೆಗಳನ್ನು ಸ್ಥಾಪಿತ ವ್ಯವಸ್ಥೆಯೊಂದಿಗೆ ಬಂಧಿಸುವುದರೊಂದಿಗೇ ಆಳ್ವಿಕರ ಅಸ್ತಿತ್ವವನ್ನೂ ಕಾಪಾಡುತ್ತದೆ. ಈ ಔದಾರ್ಯ ಮತ್ತು ಅನುಕಂಪಗಳ ನಡುವೆಯೇ ಆಧುನಿಕ ದೊರೆಗಳು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತೀಯ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಜನಸಾಮಾನ್ಯರ ನಡುವಿನ ಕಂದರಗಳನ್ನು ಹಿಗ್ಗಿಸುತ್ತಲೇ ಹೋಗುತ್ತಿರುವುದನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಂಡಿದ್ದೇವೆ.
     ಯಾವುದೇ ರೀತಿಯ ಅಡಳಿತ ವ್ಯವಸ್ಥೆ ಇರಲಿ, ಆಳ್ವಿಕರಿಗೆ ಭೂಪ್ರದೇಶದ ಮೇಲಿನ ವ್ಯಾಮೋಹ ಒಂದೇ ರೀತಿಯದ್ದಾಗಿರುತ್ತದೆ. ಮಾನವ ಮತ್ತು ಭೂಮಿಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ತುಣುಕು ಭೂಮಿಗಾಗಿ ಹಾತೊರೆಯುವ ಸಾಮಾನ್ಯ ಮನುಷ್ಯನ ಹಪಾಹಪಿಯ ಹಿಂದೆ ಬದುಕುವ ವಾಂಛೆ ಮಾತ್ರವೇ ಇರುತ್ತದೆ. ಬಿಮಲ್ ರಾಯ್ ಅವರ ದೋ ಬೀಘಾ ಜಮೀನ್ ಚಿತ್ರದಲ್ಲಿ ಇದರ ಹೃದಯಸ್ಪರ್ಶಿ ಚಿತ್ರಣವನ್ನು ಕಾಣಬಹುದು. ತನ್ನ ಬದುಕು ಕಟ್ಟಿಕೊಳ್ಳಲು ಮಾನವ ಭೂಮಿಯನ್ನು ಆಶ್ರಯಿಸುತ್ತಾನೆ, ನೈಸರ್ಗಿಕ ಸಂಪನ್ಮೂಲಗಳನ್ನು ಆಶ್ರಯಿಸುತ್ತಾನೆ. ನಿಸರ್ಗವನ್ನು ಪೂಜಿಸುತ್ತಾನೆ. ನೆಲ, ಜಲ, ವಾಯು ಮತ್ತು ಅರಣ್ಯ ಸಂಪತ್ತುಗಳು ಮಾನವನ ಅಭ್ಯುದಯಕ್ಕಾಗಿಯೇ ಇರುವ ಆಕರಗಳು ಎಂದು ಭಾವಿಸುತ್ತಾನೆ. ಆದರೆ ಈ ಸಂಪನ್ಮೂಲಗಳ ಮೇಲೆ ತನ್ನ ಅಧಿಪತ್ಯ ಸಾಧಿಸುವ ಮೂಲಕ ಒಂದು ಪ್ರಭುತ್ವ ಜನಸಾಮಾನ್ಯರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಂಪತ್ತಿನ ಸಮಾನ ವಿತರಣೆಯೇ ಜೀವಾಳವಾಗಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲೇ ಈ ಅಧಿಪತ್ಯ ಮತ್ತು ಅತಿಕ್ರಮಣ ಧೋರಣೆ ದಟ್ಟವಾಗಿರುವಾಗ ಇನ್ನು ಸರ್ವಾಧಿಕಾರದ ಮೂರ್ತ ಸ್ವರೂಪವಾದ ರಾಜಪ್ರಭುತ್ವದಲ್ಲಿ ಇಲ್ಲದಿರಲು ಹೇಗೆ ಸಾಧ್ಯ. ಪ್ರಭುತ್ವದ ಔದಾರ್ಯ ಮತ್ತು ಅನುಕಂಪ ಈ ನಿಯಂತ್ರಣದ ಕೀಲಿಗಳೇ ಹೊರತು, ಹೃದಯಸ್ಪರ್ಶಿ ಸಂವೇದನೆಯ ಸೂಚಕವಲ್ಲ. ಇದು ಟಿಪ್ಪು ಕಾಲಕ್ಕೂ ಸತ್ಯ, ಅಕ್ಬರನ ಕಾಲಕ್ಕೂ ಸತ್ಯ, ಮೋದಿ ಯುಗಕ್ಕೂ ಅಷ್ಟೇ ಸತ್ಯ.
     ಆದರೂ ನಾವು ಶತಮಾನಗಳ ಹಿಂದಿನ ಸಾಮ್ರಾಟರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅರಸುತ್ತಿದ್ದೇವೆ. ಸಾಮ್ರಾಟರ ಔದಾರ್ಯದಲ್ಲಿ ಪ್ರಜಾತಂತ್ರದ ಛಾಯೆಯನ್ನು ಕಾಣಲಿಚ್ಚಿಸುತ್ತಿದ್ದೇವೆ. ನಿಜ, ಇತಿಹಾಸದಲ್ಲಿ ಆಗಿ ಹೋದ ದೊರೆಗಳು , ಯಾವುದೇ ಧರ್ಮಕ್ಕೆ ನಿಷ್ಠರಾಗಿರಲಿ, ತಾವು ಆಕ್ರಮಿಸಿದ ಪ್ರಾಂತ್ಯದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಧರ್ಮ ಮತ್ತು ಧಾರ್ಮಿಕ ನೆಲೆಗಳನ್ನು ಅಧಿಪತ್ಯದ ಭೂಮಿಕೆಗಳಂತೆಯೇ ಪರಿಗಣಿಸಿದ್ದಾರೆ. ಅಷ್ಟೇಕೆ ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲೂ ಇದೇ ವಿದ್ಯಮಾನವನ್ನು ಕಾಣಬಹುದು. ಕಾರಣ ಸ್ಪಷ್ಟ. ಭಾರತದಲ್ಲಿ ಜನಸಾಮಾನ್ಯರನ್ನು ಒಂದುಗೂಡಿಸಲು ಧರ್ಮ ಎಷ್ಟು ಸಹಕಾರಿಯಾಗುವುದೋ , ಜನರಲ್ಲಿ ಒಡಕು ಉಂಟುಮಾಡಲೂ ಅಷ್ಟೇ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೇವಾಲಯ, ಮಸೀದಿ, ಇಗರ್ಜಿ, ಮಠ ಮಾನ್ಯಗಳು ಕೇಂದ್ರ ಬಿಂದುಗಳಾಗುತ್ತವೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ, ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊತ್ತುಕೊಂಡೇ, ಈ ಹೀನ ರಾಜಕಾರಣವನ್ನು ಕಂಡಿದ್ದೇವೆ. ಖಾಲಿಸ್ತಾನ ಚಳುವಳಿ, ಶಹಬಾನೋ ಪ್ರಕರಣ, ಬಾಬ್ರಿ ಮಸೀದಿಯ ಧ್ವಂಸ, ರಾಮಮಂದಿರ ವಿವಾದ, ಈದ್ಗಾ ಮೈದಾನದ ವಿವಾದ, ಬಾಬಾ ಬುಡನ್‍ಗಿರಿ ವಿವಾದ ಗೋದ್ರಾ , ಗುಜರಾತ್ ಹೀಗೆ ಧಾರ್ಮಿಕ ನೆಲೆಗಳು ಮತ್ತು ಮತೀಯ ಅಸ್ಮಿತೆಗಳು ರಾಜಕೀಯ ಅಧಿಪತ್ಯಕ್ಕೆ ಚಿಮ್ಮುಹಲಗೆಗಳಾಗಿರುವುದನ್ನು ಕಂಡಿದ್ದೇವೆ. ಇದೇ ಧೋರಣೆಯನ್ನು ಟಿಪ್ಪುವಿನಂತಹ ಎರಡು ಶತಮಾನಗಳ ಹಿಂದಿನ ಸಾಮ್ರಾಟನಲ್ಲಿ ಕಂಡರೆ ಅಚ್ಚರಿಯೇಕೆ. ಸ್ವಾಭಾವಿಕ ಎನಿಸಬೇಕಲ್ಲವೇ ?

     18ನೆಯ ಶತಮಾನದ ಸಾಮ್ರಾಟನೊಬ್ಬನನ್ನು ಸಮಕಾಲೀನ ಪ್ರಜಾತಂತ್ರದ ನೆಲೆಯಲ್ಲಿಟ್ಟು, ಆಧುನಿಕ ಆಡಳಿತ ವ್ಯವಸ್ಥೆಯ ಮಾನದಂಡಗಳ ಮುಖೇನ ವ್ಯಾಖ್ಯಾನಿಸುವುದು ಸಮರ್ಥನೀಯವಲ್ಲ. ಏಕೆಂದರೆ ಟಿಪ್ಪು ಪ್ರಜಾತಂತ್ರ ವ್ಯವಸ್ಥೆಯ ಹರಿಕಾರನಲ್ಲ. ಅಥವಾ ಸಮತಾ ಸಮಾಜದ ಪ್ರತಿಪಾದಕನೂ ಆಗಿರಲಿಲ್ಲ. ಆದರೆ ಇತರ ರಾಜರುಗಳಂತೆ ಸಾಮಾಜಿಕವಾಗಿ ನಿಷ್ಕ್ರಿಯನೂ ಆಗಿರಲಿಲ್ಲ. ಒಬ್ಬ ಸಾಮ್ರಾಟನಾಗಿ ಟಿಪ್ಪು ಕೈಗೊಂಡ ಜನಾನುರಾಗಿ ಕ್ರಮಗಳು ಸಮಕಾಲೀನ ರಾಜಕಾರಣಕ್ಕೆ ಮಾರ್ಗದರ್ಶಕವಾಗುವಂತಿರುವುದು ಚಾರಿತ್ರಿಕ ಸತ್ಯ. ಅವನ ಆಳ್ವಿಕೆಯಲ್ಲಿ ಎಷ್ಟೇ ಜನಪರ ಕಾಳಜಿ ಕಂಡುಬಂದಿದ್ದರೂ ಒಬ್ಬ ಸಾಮ್ರಾಟ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಅನುಸರಿಸಬೇಕಾದ ಎಲ್ಲ ಮಾರ್ಗಗಳನ್ನೂ ಟಿಪ್ಪು ಅನುಸರಿಸಿರಬಹುದು. ತಾನು ಆಕ್ರಮಿಸಿದ ಪ್ರದೇಶದ ಮೇಲೆ ಅಧಿಪತ್ಯ ಸಾಧಿಸಲು ಪೂಜಾಸ್ಥಳಗಳನ್ನು ಆಕ್ರಮಿಸುವುದು, ಧ್ವಂಸ ಮಾಡುವುದು, ಜನಸಾಮಾನ್ಯರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಕೆಲವು ವಾಮಮಾರ್ಗಗಳನ್ನು ಅನುಸರಿಸುವುದು ರಾಜಪರಂಪರೆಯ ವಿಶಿಷ್ಟ ಲಕ್ಷಣ. ಮಲಬಾರ್ ಮತ್ತೊ ಕೊಡಗು ಪ್ರಾಂತ್ಯಗಳಲ್ಲಿ ಟಿಪ್ಪು ನಡೆಸಿದ ಮತಾಂತರ ಮತ್ತು ಹತ್ಯಾಕಾಂಡಗಳನ್ನೇ ಪ್ರಧಾನವಾಗಿ ನೋಡುವ ಮುನ್ನ ಈ ಪ್ರಾಂತ್ಯಗಳಲ್ಲಿ ಬೇರೂರಿದ್ದ ಪಾಳೆಗಾರಿಕೆ ಮತ್ತು ಭೂಮಾಲೀಕರ ಅಟ್ಟಹಾಸವನ್ನು ಟಿಪ್ಪು ಮಟ್ಟ ಹಾಕಿದ್ದನ್ನೂ ಗಮನಿಸಬೇಕಾಗುತ್ತದೆ.
     ಇತಿಹಾಸದ ಯಾವುದೇ ಕಾಲಘಟ್ಟದಲ್ಲೂ, ಯಾವುದೇ ಸಾಮ್ರಾಟನೂ ಎಲ್ಲ ಜನಸಮುದಾಯಗಳನ್ನು ಸಂತೃಪ್ತಿಗೊಳಿಸಿರುವ ಉದಾಹರಣೆಗಳಿಲ್ಲ. ಹಾಗಾಗಿ ಒಂದು ನಿರ್ದಿಷ್ಟ ಸಾಮುದಾಯಿಕ ದೃಷ್ಟಿಕೋನದಿಂದ ಇತಿಹಾಸವನ್ನು ಕೆದಕಿ ಒಬ್ಬ ಜನಾನುರಾಗಿ ಸಾಮ್ರಾಟನನ್ನು ಖಳನಾಯಕನಂತೆ ಬಿಂಬಿಸುವುದು ಸಮರ್ಥನೀಯವಲ್ಲ. ಬ್ರಿಟೀಷರ ವಿರುದ್ಧ ಸೊಲ್ಲೆತ್ತದೆ ತಮ್ಮ ಮೈಸೂರು ಸಂಸ್ಥಾನದ ಅಸ್ತಿತ್ವ ಉಳಿಸಿಕೊಳ್ಳಲು ರಾಜೀ ಮಾಡಿಕೊಂಡ ಮೈಸೂರು ಒಡೆಯರು, ಸ್ವಾತಂತ್ರ್ಯಾನಂತರ ಭಾರತದೊಡನೆ ವಿಲೀನಗೊಳ್ಳುವುದನ್ನೂ ವಿರೋಧಿಸಿ ರಾಮಸ್ವಾಮಿ ಎಂಬ ಯುವಕನ ಬಲಿದಾನ ನೀಡಿದ್ದು ಈಗ ಇತಿಹಾಸ. ಆದರೂ ಒಡೆಯರ್ ಆಡಳಿತದ ಅನೇಕ ಜನಪರ ಯೋಜನೆಗಳು, ಚಿಂತನೆಗಳನ್ನು ನಾವು ನೆನೆಯುತ್ತೇವೆ. ಒಡೆಯರ್ ವಂಶಜರಿಗೆ ವ್ಯತಿರಿಕ್ತವಾಗಿ ಬ್ರಿಟೀಷರ ವಿರುದ್ಧ ವೀರೋಚಿತ ಹೋರಾಟ ನಡೆಸಿ ಹುತಾತ್ಮನಾದ ಟಿಪ್ಪು ಏಕೆ ಸ್ಮರಣೀಯನಾಗಬಾರದು ?
     ಸರ್ಕಾರ ಟಿಪ್ಪು ಜಯಂತಿ ಆಚರಿಸುವುದು ಒಂದು ರಾಜಕೀಯ ತಂತ್ರಗಾರಿಕೆಯಷ್ಟೆ. ದುರಂತವೆಂದರೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿದ ಒಬ್ಬ ಸಾಮ್ರಾಟನನ್ನು ಮತೀಯ ಅಸ್ಮಿತೆಯಿಂದ ನೋಡಲಾಗುತ್ತಿದೆ. ಆಡಳಿತಾರೂಢ ಪಕ್ಷಕ್ಕೆ ಟಿಪ್ಪು ಮುಸ್ಲಿಂ ಪ್ರತಿನಿಧಿಯಾಗಿ ಕಂಡರೆ ಸಂಘಪರಿವಾರಕ್ಕೆ ಹಿಂದೂ ವಿರೋಧಿಯಾಗಿ ಕಾಣುತ್ತಾನೆ. ಈ ಎರಡೂ ನೆಲೆಗಳಲ್ಲಿ ಸಮಾನವಾದ ಅಂಶವೆಂದರೆ ಮತೀಯ ರಾಜಕಾರಣವಷ್ಟೆ. ಆಧುನಿಕ ಭಾರತದಲ್ಲಿ ಜಯಂತಿಗಳ ಆಚರಣೆಗಳು ಜಾತಿ ಮತ್ತು ಮತೀಯ ನೆಲೆಯಲ್ಲೇ ಅನಾವರಣಗೊಳ್ಳುತ್ತಿರುವುದು ವಾಸ್ತವ. ಇತಿಹಾಸದ ಹೆಜ್ಜೆ ಗುರುತುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವ ಪ್ರಯತ್ನಗಳಿಗೆ ಟಿಪ್ಪು ಸಹ ಬಲಿಯಾಗುತ್ತಿರುವುದು ದುರಂತವಷ್ಟೆ. ಟಿಪ್ಪು ಸುಲ್ತಾನನನ್ನು ಅಳಿಸಿಹಾಕಬಹುದು ಆದರೆ ಆತನ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುವುದು ಸಾಧ್ಯವಿಲ್ಲ.
     -ನಾ ದಿವಾಕರ

     Reply

Leave a Reply

Your email address will not be published.