ಜ್ಞಾನಶಾಸ್ತ್ರೀಯ ಅಸಹಕಾರ ಮತ್ತು ನಿರ್ವಸಾಹತೀಯ ಸ್ವಾತಂತ್ರ್ಯ-4

-ವಾಲ್ಟೆರ್ ಡಿ. ಮಿಗ್ನೊಲೊ, ಅನು: ರಾಮಲಿಂಗಪ್ಪ ಟಿ.ಬೇಗೂರು

ಎಲ್ಲಾ ಮೂರು ದೃಷ್ಟಾಂತ (ಮತ್ತು ನಾಲ್ಕನೆಯದಾಗಿ ನನ್ನದೇ ವಾದದಲ್ಲಿ ಕೂಡ) ಜ್ಞಾನದ ಭೌಗೋಳಿ-ರಾಜಕಾರಣವನ್ನು ಒತ್ತುಕೊಟ್ಟು ಗುರುತಿಸಿದ್ದೇನೆ. ತುಂಬಾ ತೀವ್ರವಾಗಿ ಅದು ನನ್ನನ್ನು ಕಾಡಿದೆ. ಇದರ ಜೊತೆಗೆ ಜ್ಞಾನದ ದೇಹ-ರಾಜಕಾರಣ ಕೂಡ ಪ್ರಸ್ತಾಪವಾಗಿದೆ. ಜ್ಞಾನದ ದೇಹ-ರಾಜಕಾರಣ ಎಂದರೆ ಏನು? ಇದನ್ನು ಖಚಿತವಾಗಿ ವಿವರಿಸಲು ಫ್ರಾನ್ಜ್ ಫ್ಯನಾನ್ ಸಹಾಯ ಪಡೆಯುವುದೇ ಒಳ್ಳೆಯದು. ಹೋಮಿ ಬಾಬಾ ಅವರ ಫ್ಯನಾನ್ ಓದನ್ನು ಎತ್ತಿಕೊಳ್ಳದೆ ಲೀವಿಸ್ ಗೋರ್ಡಾನ್ ಮತ್ತು ಸಿಲ್ವಿಯ ವಿಂಟರ್ ಇವರ ಫ್ಯನಾನ್ ಓದುಗಳನ್ನು ಎತ್ತಿಕೊಂಡು ಅದನ್ನು ವಿವರಿಸುತ್ತೇನೆ.

ಮೊದಲಿಗೆ ಇದು ನನ್ನದಲ್ಲ ಎಂದು ಒಂದು ಹಕ್ಕುನಿವೃತ್ತಿ ಘೋಷಣೆ ಮಾಡುವ ಅಗತ್ಯವಿದೆ. ಮೈಕೇಲ್ ಫ್ಯೂಕೋನ ಜೀವ-ರಾಜಕಾರಣ ಪರಿಕಲ್ಪನೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಪ್ರತಿಚರ್ಚೆಗಳು ಆಗಿವೆ. ಪ್ರಭುತ್ವವು ಜನಸಂಖ್ಯಾ ನಿಯಂತ್ರಣಕ್ಕೆ ಬಳಸಿದ ಒಂದು ಹೊಸ ಹತ್ಯಾರವೆ ಜೀವ-ರಾಜಕಾರಣ. ಇದು ಆಧುನಿಕ ರಾಷ್ಟ್ರಗಳ ಉಗಮದ ಜೊತೆಜೊತೆಗೇ ಜನ್ಮ ತಾಳಿತು. ಫ್ಯೂಕೋ ಇದನ್ನು ಯೂರೋಪಿನಲ್ಲಿ ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ. ಆದರೆ ಇದು ವಸಾಹತು ನಾಡುಗಳಿಗೂ ಹಬ್ಬಿತು. ಇದರ ಹಿನ್ನೆಯಲ್ಲಿ ಸರಿಸುಮಾರು 19ನೆ ಶತಮಾನದ ಅಂತ್ಯಭಾಗದಲ್ಲಿ ನಿರ್ಧಿಷ್ಟವಾಗಿ ಅರ್ಜೆಂಟೈನಾದಲ್ಲಿ (ಸಾರ್ವತ್ರಿಕವಾಗಿ ದಕ್ಷಿಣ ಅಮೆರಿಕದಲ್ಲಿ) ಜಾರಿಗೊಳಿಸಿದ ಸುಸಂತಾನಶಾಸ್ತ್ರದ (ಉತ್ತಮ ಸಂತಾನ ಪಡೆಯುವ ವಿಜ್ಞಾನದ) ಪರಿಣಾಮಗಳನ್ನು ತೀರಾ ತಡವಾಗಿ ಅಧ್ಯಯನ ಮಾಡಲಾಯಿತು.

walter mignolo

walter mignolo

ಯೂರೋಪಿನ ಜೀವ-ರಾಜಕಾರಣ ಮತ್ತು ವಸಾಹತುಗಳಲ್ಲಿದ್ದ ಜೀವ-ರಾಜಕಾರಣಗಳಲ್ಲಿ (ಜೀವ-ರಾಜಕೀಯವಾಗಿ ರಾಷ್ಟ್ರಗಳು ನಿರ್ವಹಣೆ ಮಾಡುತ್ತಿದ್ದಾಗಲು) ಒಂದು ಸ್ಪಷ್ಟ ವ್ಯತ್ಯಾಸ ಇತ್ತು. ಅದು ಯಾವುದೆಂದರೆ ಲಿಂಡಾ ಸ್ಮಿತ್ ಗುರ್ತಿಸಿರುವಂತೆ ಕಡಿಮೆ ಮಾನವೀಯ, ಉಪಮಾನವೀಯ ಇತ್ಯಾದಿ ಜನಾಂಗಭೇದ ನೀತಿಯದ್ದು. ಆದರೆ ವಸಾಹತುಗಳ ಮೇಲೆ ಪ್ರಯೋಗಿಸಿದ ಈ ಜೀವ-ರಾಜಕಾರಣ ತಂತ್ರಗಳು ಬೂಮರ್ಯಾಂಗಿನಂತೆ ಯೂರೋಪಿಗೂ ವಾಪಸು ತಿರುಗೇಟು ನೀಡಿದವು ಎಂಬುದನ್ನು ನಾವು ಮರೆಯುವಂತಿಲ್ಲ. ಇದೇ ಯೂರೋಪೇತರ ಜನರ ಮೇಲೆ ಪ್ರಯೋಗಿಸಿದ ವಸಾಹತೀಯ ಜೀವ-ತಂತ್ರಗಳನ್ನು ಯಹೂದಿ ಜನಾಂಗವನ್ನು ನಿಯಂತ್ರಿಸಲು ಮತ್ತು ನಿರ್ನಾಮ ಮಾಡಲು ಕೂಡ ಬಳಸಿಕೊಂಡದ್ದನ್ನು ಈಗಾಗಲೇ ಸಾಕಷ್ಟು ಜನ ಚರ್ಚಿಸಿದ್ದಾರೆ ಕೂಡ. ಈ ಪರಿಸ್ಥಿತಿಯು ಯೂರೋಪಿನ ಇತಿಹಾಸದಲ್ಲಿ ವಸಾಹತುಗಳು ದ್ವಿತೀಯ ದರ್ಜೆಯ ಅಥವಾ ಅಂಚಿನ ಯಕಃಶ್ಚಿತುಗಳಲ್ಲ ಎಂಬ ಸತ್ಯವನ್ನು ಎತ್ತಿ ತೋರಿಸುತ್ತದೆ. ಮತ್ತು ತರ್ಕಸರಣಿಯ ಭೂಗೋಳವನ್ನು ಪಲ್ಲಟಿಸುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಆಧುನಿಕ ಯೂರೋಪಿನ ರೂಪಗೊಳ್ಳುವಿಕೆಯಲ್ಲಿ ವಸಾಹತೀಯ ಇತಿಹಾಸಕ್ಕೆ ಸ್ಥಾನವೇ ಇಲ್ಲವಾಗಿದೆ.

ಹೀಗೆ ದೇಹ-ರಾಜಕಾರಣವು ಜೀವ-ರಾಜಕಾರಣದ ಕರಾಳ ಮಗ್ಗುಲು ಮತ್ತು ಕಾಣದ ಉಳಿದರ್ಧವಾಗಿದೆ. ವಿಕಾಸ ಹೊಂದಿಲ್ಲದ ಕಡಿಮೆ ಮಾನವರು ಎಂದು ನಮ್ಮನ್ನು ಹೆಸರಿಸಲಾಗಿದೆ ಮತ್ತು ವ್ಯಾಖ್ಯಾನಿಸಲಾಗಿದೆ ಎಂದು ತಿಳಿದ ಜನರಿಂದ ಕ್ರಿಯೆಗಿಳಿದ ನಿರ್ವಸಾಹತೀಯ ತಂತ್ರಜ್ಞಾನಗಳನ್ನೂ ಈ ದೇಹ-ರಾಜಕಾರಣವು ವಿವರಿಸುತ್ತದೆ. ನಮ್ಮನ್ನು ‘ಕಡಿಮೆ ಮಾನವರು’ ಎಂದು ಹೆಸರಿಸಿದ ಕ್ರಿಯೆಯೇ ಮೂಲಭೂತವಾಗಿ ಅಮಾನವೀಯ ಆದುದು ಎಂದೂ ಇವರು ತಿಳಿದಿದ್ದಾರೆ. ಹೀಗೆ ಸಾಮ್ರಾಜ್ಯಶಾಹಿ ಕಾರ್ಯವಾಹಿಗಳಲ್ಲಿ, ಸಂಸ್ಥೆಗಳಲ್ಲಿ, ಜ್ಞಾನಗಳಲ್ಲಿ ಮಾನವೀಯತೆಯೇ ಇರಲಿಲ್ಲ ಮತ್ತು ಅವರಿಗೆ ಇಷ್ಟವಾಗದೆ ಇರುವ ಜನರನ್ನು ಕಡಿಮೆ ಮಾನವರು ಎಂದು ನಿರ್ಧರಿಸುವ ದುರಹಂಕಾರ ಅವರಲ್ಲಿತ್ತು ಎಂದೂ ಇವರು ಗುರ್ತಿಸಿದ್ದಾರೆ. ಹೀಗೆ ದೇಹ-ರಾಜಕಾರಣವು ನಿರ್ವಸಾಹತೀಯ ಚಿಂತನೆ, ನಿರ್ವಸಾಹತೀಯ ಕಾರ್ಯ ಮತ್ತು ನಿರ್ವಸಾಹತೀಯ ಆಯ್ಕೆ ಇವುಗಳ ಅವಿಭಾಜ್ಯ ಅಂಗವಾಗಿದೆ.

ಪ್ಲೆಖ್ ಗುರ್ತಿಸಿದಂತಹ ಸಾಮ್ರಾಜ್ಯಶಾಹಿ ವಿಜ್ಞಾನಶ್ರಮದ ವಿಭಜನೆಯನ್ನು ವಿರೋಧಿಸಿ ಜ್ಞಾನದ ಭೌಗೋಳಿ-ರಾಜಕಾರಣವು ಚಾರಿತ್ರಿಕವಾಗಿ ತೃತೀಯ ಜಗತ್ತಿನಲ್ಲೆ ಹೊರಹೊಮ್ಮಿತು. ನಾಗರೀಕ ಹಕ್ಕುಗಳ ಚಳವಳಿಯ ಪರಿಣಾಮವೆಂಬಂತೆ ಸಂಯುಕ್ತ ಸಂಸ್ಥಾನದಲ್ಲಿಯೆ ಜ್ಞಾನದ ದೇಹ-ರಾಜಕಾರಣವು ತನ್ನ ಹೆಚ್ಚಿನ ಪ್ರಣಾಳಿಕೆಗಳನ್ನು ಹೊಂದಿತ್ತು. ಜ್ಞಾನದ ದೇಹ-ರಾಜಕಾರಣದ ಮುಖ್ಯ ಕಾರ್ಯವಾಹಿಗಳು ಯಾರಾಗಿದ್ದರು? ಸ್ತ್ರೀಯರು. ಅದೂ ಮೊದಲಿಗೆ ಬಿಳಿಯ ಸ್ತ್ರೀಯರು. ನಂತರ ಇತರ ಬಣ್ಣದ ಸ್ತ್ರೀಯರು ಸೇರಿಕೊಂಡರು. (ಭೌಗೋಳಿ-ರಾಜಕಾರಣಕ್ಕೆ ಇದರ ಸಂಬಂಧ ಬೆಸೆದವರು, ತೃತೀಯ ಜಗತ್ತಿನ ಸ್ತ್ರೀಯರು); ಲ್ಯಾಟಿನೋ ಮತ್ತು ಲ್ಯಾಟಿನಾ ವಿದ್ವಾಂಸರು ಮತ್ತು ಹೋರಾಟಗಾರರು; ಮುಖ್ಯವಾಗಿ ಆಫ್ರೋ- ಅಮೆರಿಕದವರು ಮತ್ತು ಸ್ಥಳೀಯ ಅಮೆರಿಕದವರೂ ಆನಂತರ ಅದಕ್ಕೆ ಸೇರಿಕೊಂಡರು.

ಪರಿಕಲ್ಪನಾತ್ಮಕವಾಗಿ ಜ್ಞಾನದ ದೇಹ-ರಾಜಕಾರಣವು ಮೊದಲಿಗೆ ಫ್ರಾನ್ಜ್ ಫ್ಯನಾನ್‍ನ ‘ಬ್ಲಾಕ್ ಸ್ಕಿನ್ ವೈಟ್ ಮಾಸ್ಕ್ಸ್’ ಕೃತಿಯ ಆಂತರ್ಯದಲ್ಲೆ ಹೊರಹೊಮ್ಮಿತು.
19ನೆ ಶತಮಾನದ ಕೊನೆಕೊನೆಯ ಭಾಗದ ಸಂವಿಧಾನವಾದಿ ಪ್ರವೃತ್ತಿಗೆ ಪ್ರತಿಕ್ರಿಯೆ ಎಂಬಂತೆ, ಫ್ರಾಯ್ಡ್‍ನು ಮನೋವಿಶ್ಲೇಷಣೆಯ ಮೂಲಕ ವ್ಯಕ್ತಿಯ ವೈಯಕ್ತಿಕ ಅಂಶವನ್ನ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದ. ಜೀವವಿಕಾಸ ಸಿದ್ಧಾಂತಕ್ಕೆ ಬದಲಿಯಾಗಿ ಆತ ವ್ಯಕ್ತಿವಿಕಾಸ ದೃಷ್ಟಿಕೋನವನ್ನು ಮುಂದು ಮಾಡಿದ. ಆದರೆ ಕರಿಯ ಮಾನವರನ್ನು ಪರಕೀಯಗೊಳಿಸುವ ಕ್ರಿಯೆಯು ವೈಯಕ್ತಿಕ ಪ್ರಶ್ನೆ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಜೀವವಿಕಾಸ ಮತ್ತು ವ್ಯಕ್ತಿವಿಕಾಸಗಳ ಜೊತೆಯಲ್ಲೆ ಸಮಾಜವಿಕಾಸವೂ ಇದೆಯಲ್ಲವೆ? ಒಂದು ಬಗೆಯಲ್ಲಿ ಲ್ಯಾಕೊಂಟೆ ಮತ್ತು ಡ್ಯಾಮೆ ಇವರನ್ನು ಅನುಸರಿಸಿ ಹೇಳುವುದಾದರೆ, ಇದೊಂದು ಸಮಾಜ ವಿಶ್ಲೇಷಣಾತ್ಮಕ ಪ್ರಶ್ನೆಯೆ ಹೌದು.10 (1967, (1952)).

ಫ್ಯನಾನ್‍ನ ಸಮಾಜ ವಿಕಾಸವಾದವು ಮಾನವನ ‘ಸ್ವಭಾವ’ದ ಬಗೆಗಿನ ವೈಜ್ಞಾನಿಕ ಕಲ್ಪನೆಗಳು ಮತ್ತು ತೀರ್ಮಾನಗಳಿಗೆ ಒಂದು ಇತಿಶ್ರೀಯನ್ನು ಹಾಡಿತು. ಮತ್ತು ವಿಕಾಸವಾದದಿಂದ ನರವಿಜ್ಞಾನದವರೆಗಿನ ವೈಜ್ಞಾನಿಕ ಸಿದ್ಧಾಂತಗಳ ಮಿತಿಗಳೇನು ಎಂದು ತಿಳಿಸಿತು. ಮತ್ತು ಅವುಗಳ ‘ಮಾನವ ಸ್ವಭಾವ’ದ (ಮನುಷ್ಯತ್ವದ ಸ್ಥಿತಿಯ) ಕುರಿತ ಪ್ರಶ್ನೆಗೆ ತೀರ್ಪುಗಳನ್ನು ಕೊಡುವ ಸಾಮಥ್ರ್ಯವನ್ನು ನಿರಾಕರಿಸಿತು. ಅಂದರೆ ಜೀವವಿಕಾಸದಿಂದ ನರವಿಜ್ಞಾನದವರೆಗೆ ವೈಜ್ಞಾನಿಕ ಸಿದ್ಧಾಂತಗಳಿಗೆ ನರಮಂಡಲ ವ್ಯವಸ್ಥೆಯಿಂದ ಹೊಮ್ಮಿದ ಜೀವಂತ ಅಂಗಾಂಶಗಳ ವಸ್ತುರೂಪತೆ ಬಗ್ಗೆ ಏನೂ ಹೇಳುವ ಶಕ್ತಿಯೆ ಇಲ್ಲ ಎಂದರ್ಥವಲ್ಲ. ಆದರೆ ಇಲ್ಲಿಂದ ಮುಂದಕ್ಕೆ ‘ಮಾನವ ಸ್ವಭಾವ’ದ ಬಗ್ಗೆ ತೀರ್ಪು ನೀಡಲು ಅವುಗಳು ಇನ್ನೂ ಸಾವಿರಾರು ಮೈಲುಗಳ ದೂರ ಸಾಗಬೇಕಾಗಿದೆ. ಇನ್ನೂ ಮುಂದುವರಿದು ಹೇಳುವುದಾದರೆ ಸಮಾಜ ವಿಕಾಸವಾದವು ಈ ಜಗತ್ತು ದೇವರಿಂದ ಸೃಷ್ಟಿಯಾಗಿದೆ ಅಥವಾ ಮಹಾಸ್ಪೋಟದಿಂದ (ಬಿಗ್ ಬ್ಯಾಂಗ್‍ನಿಂದ) ಸೃಷ್ಟಿಯಾಗಿದೆ ಎಂಬ ಎರಡೂ ಸೃಷ್ಟಿಮೂಲಗಳಲ್ಲಿ ತನ್ನನ್ನು ಗುರ್ತಿಸಿಕೊಳ್ಳುವುದಿಲ್ಲ. ಬದಲಿಗೆ ಇದು ಪುನರುಜ್ಜೀವನ ಪ್ರತಿಪಾದಿಸಿದ ಮಾನವ ಕಲ್ಪನೆ, ಮನುಷ್ಯ ಜೀವಿಗಳ ಕಲ್ಪನೆ ಎದುರಿಗೆ ನೀಗ್ರೋಗಳನ್ನು ಕೆಳಮಟ್ಟದಲ್ಲಿ ಇರಿಸಿದ ಆಧುನಿಕ ವಸಾಹತೀಯ ಜಗತ್ತು ರೂಪಗೊಂಡಿರುವುದರಲ್ಲಿ ತನ್ನ ಉಗಮವನ್ನು ಗುರ್ತಿಸಿಕೊಂಡಿದೆ. ಅಂದರೆ ಇಲ್ಲಿ ಜೀವವಿಕಸನೀಯ ಅಥವಾ ವ್ಯಕ್ತಿವಿಕಸನೀಯ ಜ್ಞಾನಗಳು ಇಲ್ಲ. ಇದೇ ಸಮಾಜ ವಿಕಾಸವಾದ. ಒಮ್ಮೆ ಪ್ಯಾರಿಸ್‍ನಲ್ಲಿ ಫ್ಯನಾನ್ ನಡೆದು ಹೋಗುತ್ತಿರುವಾಗ ಒಂದು ಮಗು ತನ್ನ ತಾಯಿಗೆ ‘ಓಹ್ ಅಮ್ಮ, ಅಲ್ನೋಡು, ನೀಗ್ರೋ!’ ಎಂದು ಅಚ್ಚರಿ ಮತ್ತು ಬೆರಗಿನಿಂದ ಹೇಳಿತ್ತಂತೆ. ಜೀವವಿಕಸನೀಯ ಅಥವಾ ವ್ಯಕ್ತಿವಿಕಸನೀಯ ಜ್ಞಾನಗಳು ಇಂತಹ ಅನುಭವದ ಪ್ರಸಂಗವನ್ನು ವಿವರಿಸಲಾರವು ಇದನ್ನು ಸಮಾಜವಿಕಾಸ ತತ್ವ ಮಾತ್ರ ವಿವರಿಸಬಲ್ಲುದು. ಈ ಅನುಭವದ ಕ್ಷಣವೊಂದಕ್ಕೆ ಫ್ಯನಾನ್ ಒಂದಿಡೀ ಅಧ್ಯಾಯವನ್ನೆ ಮೀಸಲಿಟ್ಟಿದ್ದಾನೆ.

ಆ ಅಧ್ಯಾಯವು ಇಂಗ್ಲಿಶಿಗೆ ‘ಕಪ್ಪುತನದ ನಿಜಾಂಶ’ ಎಂದು ಭಾಷಾಂತರವಾಗಿದೆ. ತುಂಬಾ ಖಚಿತವಾದಿ, ಜೀವಸ್ವಭಾವಿ ಭಾಷಾಂತರವಾದ ಅದು ಓದುಗನನ್ನು ನಿಜಾಂಶದ ಕಡೆಗೆ ನೋಡು ವ್ಯಕ್ತಿಸ್ವಭಾವೀಯ ಪ್ರಶ್ನೆಗಳನ್ನು ಕೇಳಬೇಡ ಎಂದು ಒತ್ತಾಯಿಸುತ್ತದೆ. ಫ್ರೆಂಚ್‍ನಲ್ಲಿ ಆ ಅಧ್ಯಾಯದ ತಲೆಬರಹವು ‘ಲೆ,ಕ್ಸ್‍ಪೀರಿಯನ್ಸೆ ವೆಸು ದು ನೊಯಿರ್’ ಎಂದು ಇದೆ. ಫ್ರೆಂಚಿನ ತಲೆಬರಹವು ನಿಜಾಂಶವನ್ನು ಮುಂದು ಮಾಡದೆ ಅನುಭವವನ್ನು ಮುಂದು ಮಾಡುತ್ತದೆ. ಅಂದರೆ ಅದು (ಜಾಗತಿಕ ಮಾನವ ಹಕ್ಕುಗಳ ಘೋಷಣೆಯಲ್ಲಿ ಹೇಳಿರುವಂತೆ) ಜಾಗತಿಕ ಮನುಷ್ಯತ್ವದ ಕಲ್ಪನೆಯನ್ನು ಸೃಷ್ಟಿಸಿದ ಆಧುನಿಕ ಮತ್ತು ಆಧುನಿಕೋತ್ತರ ಚಿಂತನೆಗಳು ಮತ್ತು ಯೂರೋಪಿನವರ ಯಜಮಾನೀಯ ಜ್ಞಾನಗಳು ಕಟ್ಟಿಕೊಟ್ಟ ‘ಮನುಷ್ಯ ಜೀವಿ’ ಕಲ್ಪನೆಯನ್ನು ಆಧರಿಸಿದ ‘ಸಾರ್ವತ್ರಿಕ ಅನುಭವ’ ಅಲ್ಲ. ತುಂಬಾ ಸ್ಥಳವಿಶಿಷ್ಟ ಮತ್ತು ಜನಾಂಗವಿಶಿಷ್ಟ ಅನುಭವ. (ಜ್ಞಾನ ಅಲ್ಲ, ಅನುಭವ).

ಎಲ್ಲಾ ಸರಿ, ಒಂದೇ ಒಂದು ಫ್ಯನಾನ್ ಹೇಳುವ ಅಪ್ರಸ್ತುತ ಸಂಗತಿ ಎಂದರೆ ಕರಿಯರಿಗೆ (ಹ್ಯಾಮ್‍ನ ಮಕ್ಕಳು) ಕ್ರೈಸ್ತಧರ್ಮವು ಬಂದು ತಗಲಿಕೊಂಡಲ್ಲಿನಿಂದ ‘ನೀಗ್ರೋನ ಜೀವಿಸಿದ ಅನುಭವ’ವು ಆಧುನಿಕ ವಸಾಹತೀಯ ಜಗತ್ತಿನ ಜನಾಂಗೀಯ ಅಚ್ಚಿನಿಂದಲೆ ರೂಪಗೊಂಡಿದೆ ಎಂಬುದು; ಅಲ್ಲದೆ ನಿಜಾಂಶವೆಂದರೆ ‘ಗುಲಾಮಗಿರಿ ಮತ್ತು ಕರಿಯತನಗಳನ್ನು ಬೇರ್ಪಡಿಸಲು ಆಗದು’ ಎಂಬಂತೆ ಬೆಸೆದುಕೊಂಡಿದ್ದ 16ನೆ ಶತಮಾನದ ಸಂದರ್ಭದಲ್ಲಿ ಸ್ಥಳಗಳನ್ನು ಮತ್ತು ಜನಗಳನ್ನು ವರ್ಗೀಕರಿಸಿ ಇಟ್ಟಿದ್ದರ ಹಿಂದಿದ್ದ ಜ್ಞಾನಶಾಸ್ತ್ರೀಯ ಮುಂಚೂಣಿ ಶಕ್ತಿ ಎಂದರೆ ಅದು ಕ್ರೈಸ್ತಧರ್ಮವೇ ಆಗಿದೆ ಎಂಬುದು. ಇದನ್ನು ಒಪ್ಪಲಾಗದು. ಆನಂತರದಲ್ಲಿ ನೀಗ್ರೋ ಒಬ್ಬನ ’ಜೀವಿಸಿದ ಅನುಭವ’ವನ್ನು ಯಾವಾಗಲೂ ಬಿಳಿಯನೊಬ್ಬನ ಕಿರುಗಣ್ಣ ನೋಟವೊಂದರಿಂದಲೆ ಕಟ್ಟಬಹುದು ಎಂಬಂತೆ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಆಯಾಮಗಳನ್ನು ನಿರ್ಧಿಷ್ಟವಾಗಿ ರೂಪಿಸಲಾಗಿದೆ ಎಂದು ಫ್ಯನಾನ್ ಹೇಳುತ್ತಾನೆ.

ಸಿಲ್ವಿಯಾ ವಿಂಟರ್ ಫ್ಯನಾನ್‍ನ ಪರಿಕಲ್ಪನಾತ್ಮಕ ಮತ್ತು ಅನುಭವಾಧಾರಿತ ನಿದರ್ಶನವನ್ನು ಬೀಜರೂಪಿಯಾಗಿ ಹೀಗೆ ಕಟ್ಟಿಕೊಡುತ್ತಾಳೆ: ಫ್ಯನಾನ್ ಸಮಾಜವಿಕಾಸವಾದ ಎಂಬ ವಿವರಣಾತ್ಮಕ ಪರಿಕಲ್ಪನೆಯನ್ನು ‘ನೀಗ್ರೋ ಆಗಿ ಇರುವುದು ಎಂದರೆ ಅರ್ಥವೇನು?’ ಎಂದು ಪ್ರಶ್ನೆ ಎತ್ತುವ ಮೂಲಕ ತನ್ನದೇ ಸ್ವಂತ ಪ್ರಶ್ನೆಯನ್ನು ಯಾರದ್ದೋ ಮೂರನೆಯವರ ಪ್ರತಿಕ್ರಿಯೆ ಎಂಬಂತೆ ಮಂಡಿಸಿದ್ದಾನೆ. ಈ ಕಾರಣಕ್ಕಾಗಿ ಈ ಪ್ರಶ್ನೆಯ ಮೂಲಕ ಸಮಾಜವಿಜ್ಞಾನ, ನರವಿಜ್ಞಾನ ಅಥವಾ ಇಂತಹ ಯಾವುದೇ ಶಿಸ್ತುಗಳ ಆಯುಧಾಗಾರ ಬಳಸಿ ‘ನೀಗ್ರೋ’ಗಳನ್ನು ಅಧ್ಯಯನ ಮಾಡಲಾಗದು. ಆದರೆ ಇಲ್ಲಿ ಮುಖ್ಯವಾಗಿ ಜ್ಞಾನದ ನಿರ್ವಸಾಹತೀಕರಣಕ್ಕಾಗಿ ಜ್ಞಾನದ ನಿರ್ಮಾಣದಲ್ಲಿ ತೊಡಗಿರುವುದು ಒಂದು ನೀಗ್ರೋ ದೇಹವೇ ಎಂಬುದು ಮುಖ್ಯ. ಅದೂ ತನ್ನ ಅಸ್ತಿತ್ವದ ವಸಾಹತೀಯ ಹೊಣೆ ಹೊತ್ತಿರುವ ನೀಗ್ರೋ ದೇಹ. ಒಂದು ನೆಲೆಯಲ್ಲಿ ಫ್ಯನಾನ್ ನಡೆಯು ಜ್ಞಾನಶಾಸ್ತ್ರೀಯ ಬೇರ್ಪಡೆ ಮತ್ತು ಜ್ಞಾನಶಾಸ್ತ್ರೀಯ ಅಸಹಕಾರವೇ ಆಗಿದೆ. ರಾಜಕಾರಣ ಮತ್ತು ಜ್ಞಾನಶಾಸ್ತ್ರಗಳಲ್ಲಿ ನಿರ್ವಸಾಹತೀಕರಣ ಆಯ್ಕೆಗೆ ನಿಜಕ್ಕು ಹಾರಲು ರೆಕ್ಕೆ ಬಂದಿದೆ.

ಮುಂದುವರೆಯುವುದು 

Leave a Reply

Your email address will not be published.