ಜ್ಞಾನಶಾಸ್ತ್ರೀಯ ಅಸಹಕಾರ ಮತ್ತು ನಿರ್ವಸಾಹತೀಯ ಸ್ವಾತಂತ್ರ್ಯ-3

-ವಾಲ್ಟೆರ್ ಡಿ. ಮಿಗ್ನೊಲೊ, ಅನು: ರಾಮಲಿಂಗಪ್ಪ ಟಿ.ಬೇಗೂರು

|||

CRITICAL PHOTOGRAPHY

CRITICAL PHOTOGRAPHY

ಒಂದು ಭಾಷೆಯನ್ನು ಮಾತನಾಡಬೇಕು ಎಂದರೆ ಅದರ ನಾಗರೀಕತೆಯ ಭಾರವನ್ನು ಹೊರಬೇಕು. ಹಾಗೆಯೇ ಶಿಸ್ತೀಯ ಜ್ಞಾನವನ್ನು ಸೃಷ್ಟಿಸುವ ಕೆಲಸದಲ್ಲಿ ತೊಡಗಬೇಕು. ಎಂದರೆ ಆ ಶಿಸ್ತಿನ ಭಾಷೆಯ ಮೇಲೆ ಪ್ರಭುತ್ವವನ್ನು ಎರಡು ಸ್ತರಗಳಲ್ಲಿ ಪಡೆಯಬೇಕು. ನೀವು ಸ್ಪ್ಯಾನಿಶ್, ಪೋರ್ಚುಗೀಸ್, ಅರೇಬಿಕ್, ಮಂಡಾರಿ, ಬೆಂಗಾಲಿ, ಎಕಾನ್ ಇಂತಹ ಭಾಷೆಗಳಲ್ಲಿ ಖಂಡಿತಾ ಸಮಾಜಶಾಸ್ತ್ರವನ್ನು ಸೃಷ್ಟಿಸಬಹುದು-ಬರೆಯಬಹುದು. ಆದರೆ ಹಾಗೆ ಮಾಡುವಾಗ ಮುಖ್ಯವಾಹಿನಿಯ ಚರ್ಚೆಗಳಿಂದ ನೀವು ಆಚೆ ಉಳಿಯುವ ತೊಡಕನ್ನು ಎದುರಿಸಬೇಕಾಗುತ್ತದೆ. ಅಂತಹ ಬರವಣಿಗೆ ಒಂದು ರೀತಿಯಲ್ಲಿ ‘ಸ್ಥಳೀಯ ಸಮಾಜಶಾಸ್ತ್ರ’ ಎನ್ನಿಸಿಕೊಳ್ಳುತ್ತದೆ. ಹೌದು; ಫ್ರೆಂಚ್, ಜರ್ಮನ್, ಇಂಗ್ಲಿಶ್‍ಗಳಲ್ಲಿ ಸಮಾಜಶಾಸ್ತ್ರ ಬರೆಯುವುದೂ ಕೂಡ ಸ್ಥಳೀಯವೇ. ಆದರೆ ವ್ಯತ್ಯಾಸ ಇರುವುದು ಎಲ್ಲಿ ಎಂದರೆ ಫ್ರೆಂಚ್, ಜರ್ಮನ್, ಇಂಗ್ಲಿಶ್  ಅಲ್ಲಿ ಬರೆದರೆ ನಿಮ್ಮನ್ನು ಜಗತ್ತಿನ ಅನೇಕ ವಿದ್ವಾಂಸರು ಓದುತ್ತಾರೆ. ಆದರೆ ಅಲ್ಲಿ ಬರೆದರೆ ನಿಮ್ಮನ್ನು ಯಾರೂ ಗಮನಿಸುವುದೇ ಇಲ್ಲ. ಆಗ ನಿಮ್ಮ ಬರವಣಿಗೆ ವಿಶ್ವದ ಗಮನ ಸೆಳೆಯಲು ಆ ಮೂರರಲ್ಲಿ ಯಾವುದಾದರೂ ಒಂದು ಭಾಷೆಗೆ ಅನುವಾದ ಆಗಲೇಬೇಕು. ಆಗ ಮಾತ್ರ ಅದು ಯೂರೋಪಿನ ಮತ್ತು ಸಂಯುಕ್ತ ಸಂಸ್ಥಾನದ ಹೃದಯದಲ್ಲಿ ಸ್ಥಾನ ಪಡೆದ ಪಾಶ್ಚಾತ್ಯ ಸಮಾಜಶಾಸ್ತ್ರ ಆಗುತ್ತದೆ. ಇಲ್ಲಿ ಹಲವು ವ್ಯತ್ಯಯಗಳು ಮತ್ತು ಸಮಸ್ಯೆಗಳು ಹಲವು ಬಾರಿ ಚರ್ಚೆಗೆ ಎತ್ತಿಕೊಳ್ಳಲ್ಪಟ್ಟಿವೆ. ಅವುಗಳಲ್ಲಿ ಮೂರನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.

ಮೊದಲನೆ ಉದಾಹರಣೆ ಪಾಲಿನ್ ಜೆ. ಹಾಂಟೋಂಜಿ ಮತ್ತು ಕ್ವಾಸಿ ವಿರೇಡು ಎಂಬ ಇಬ್ಬರು ಆಫ್ರಿಕಾದ ವಿದ್ವಾಂಸರು ಮತ್ತು ತತ್ವಜ್ಞಾನಿಗಳಿಗೆ ಸಂಬಂಧಿಸಿದ್ದು. ಇವರು ತೃತೀಯ ಜಗತ್ತಿನ ಬುದ್ಧಿಜೀವಿಗಳಲ್ಲಿ (1950ರಿಂದ 1990ರವರೆಗೆ) ಹೆಚ್ಚು ಚಾಲ್ತಿಯಲ್ಲಿದ್ದ ಪ್ರಶ್ನೆಯನ್ನು ಕೈಗೆತ್ತಿಕೊಂಡರು. ಮುಖ್ಯವಾಹಿನಿಯ ಬುದ್ಧಿಜೀವಿಗಳ ಚರ್ಚಾವಲಯದಲ್ಲಿ ಮತ್ತು ಪ್ರಕಾಶಕರಲ್ಲಿ ಅದು ಹೆಚ್ಚು ಚರ್ಚೆಗೆ ಬರದಿದ್ದರೂ ಅಂಚಿನ ವಲಯಗಳಲ್ಲಿ ಅದು ಅಕ್ಷರಶಃ ಮುಖ್ಯ ಸಮಸ್ಯೆಯಾಗಿ ಚಾಲ್ತಿಯಲ್ಲಿತ್ತು. 1960ರ ನಂತರ ಮುಖ್ಯವಾಹಿನಿಯ ಬೌದ್ಧಿಕ ಚರ್ಚೆಗಳಲ್ಲಿ ವಿಶೇಷವಾಗಿ ಮಾನವಿಕಗಳಲ್ಲಿ ಸಂರಚನರವಾದ ಮತ್ತು ಸಂರಚನೋತ್ತರವಾದಗಳು ಬೇರೆ ಬೇರೆ ರೂಪಗಳಲ್ಲಿ (ಮನೋವಿಶ್ಲೇಷಣೆ, ನಿರಚನೆ, ಜ್ಞಾನದ ಭೂಗರ್ಭಶಾಸ್ತ್ರ, ಸಂವಹನೀಯ ಕ್ರಿಯೆ) ಚಲಾವಣೆಯಲ್ಲಿದ್ದುವು. ಎರಡನೆ ಜಾಗತಿಕ ಯುದ್ಧದ ಪೂರ್ವದಲ್ಲಿ ವಿದ್ವತ್ ವಲಯದಲ್ಲಿ ಅಷ್ಟೇನೂ ಮಹತ್ವ ಪಡೆಯದೆ ಇದ್ದ ಸಮಾಜ ವಿಜ್ಞಾನಗಳು ಯುದ್ಧೋತ್ತರ ಕಾಲದಲ್ಲಿ ಒಳ್ಳೆಯ ಅಂತಸ್ತನ್ನು ಪಡೆದವು.

ಯೂರೋಪು (ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗಳು) ಜಗತ್ತಿನ ನಾಯಕತ್ವವನ್ನು ವಹಿಸಿದ್ದ ಕಾಲವು ಬದಲಾವಣೆಗೆ ಗುರಿಯಾಗಿ ಆ ಸ್ಥಾನವನ್ನು ಸಂಯುಕ್ತ ಸಂಸ್ಥಾನವು ವಹಿಸತೊಡಗಿದಾಗ ಸಮಾಜವಿಜ್ಞಾನಗಳು ಇದರ ಪರಿಣಾಮವೋ ಎಂಬಂತೆ ತಮ್ಮ ಅಂತಸ್ತಿನಲ್ಲಿ ಬಡ್ತಿ ಪಡೆದವು. 1980ರ ದಶಕದ ಆರಂಭದಲ್ಲಿ ಕಾರ್ಲ್ ಪ್ಲೆಖ್ ‘ಮೂರು ಜಗತ್ತುಗಳು ಮತ್ತು ವಿಜ್ಞಾನಶ್ರಮದ ವಿಭಜನೆ’ (ಪ್ಲೆಖ್: 1981, ಅಗ್‍ನ್ಯೂ 2007) ಎಂಬ ತನ್ನ ಲೇಖನದಲ್ಲಿ ಗುರ್ತಿಸಿರುವಂತೆ ಮೂರು ಜಗತ್ತುಗಳ ಭೌಗೋಳಿ-ರಾಜಕೀಯ ಮತ್ತು ಭೌಗೋಳಿ ಆರ್ಥಿಕ ವರ್ಗೀಕರಣವು ಸರಿಸುಮಾರು ಭೌಗೋಳಿ-ಜ್ಞಾನಶಾಸ್ತ್ರೀಯ ಅಥವಾ ವಿಜ್ಞಾನಶ್ರಮದ ವಿಭಜನೆಗೆ ಸಮಾನಾಂತರವಾಗಿಯೆ ಇದೆ. ಆದಾಗ್ಯೂ ಪ್ಲೆಖ್‍ನ ಲೇಖನವು ಕೇಂದ್ರದಿಂದ ಅಂಚಿನ ಕಡೆಗಿನ ಚಲನೆಯನ್ನು ಹಿಡಿಯುವ ‘ಕೇಂದ್ರಾಪಗಾಮಿ’ ಗುರುತಿಸುವಿಕೆಯೇ ಆಗಿದೆ. ಜಗತ್ತಿನ ಹೊಸ ವ್ಯವಸ್ಥೆಯ ಬಗೆಗೆ ಪ್ರಥಮ ಜಗತ್ತಿನ ವಿದ್ವಾಂಸರು ಏನು ಹೇಳುತ್ತಾರೆ ಎಂಬ ಬಗೆಗೆ ಅದು ಹೆಚ್ಚು ಕಾಳಜಿ ವಹಿಸುತ್ತದೆ. ಯಾವಾಗಲೂ ಈ ಪ್ರಥಮ ಜಗತ್ತಿನ ವಿದ್ವಾಂಸರು ಏಕಕಾಲಕ್ಕೆ ನಿರೂಪಿತ (ತೃತೀಯ ಜಗತ್ತಿನ ಯಾವುದಾದರೂ) ಮತ್ತು ನಿರೂಪಕ (ಪ್ರಥಮ ಜಗತ್ತಿನ) ಎರಡೂ ಸ್ಥಾನಗಳಲ್ಲಿ ಇರುವ ಸೌಲಭ್ಯ ಪಡೆದಿರುತ್ತಾರೆ. ಪರಿಣಾಮವಾಗಿ ತೃತೀಯ ಜಗತ್ತಿನ ವಿದ್ವಾಂಸರು ತಮ್ಮ ಬಗ್ಗೆ ತಾವೇ ಏನು ಭಾವಿಸುತ್ತಾರೆ ಮತ್ತು ಈ ಬಗ್ಗೆ ಅವರ ನಿಲುವು ಏನು ಎನ್ನುವುದು ಇಲ್ಲಿ ಲೆಕ್ಕಕ್ಕೆ ಬುರುವುದಿಲ್ಲ. ಅವರು ವರ್ಗೀಕೃತಗೊಂಡಿದ್ದಾರೆ: ಅದರ ಬಗ್ಗೆ ಅವರು ತಮ್ಮ ಪ್ರತಿಕ್ರಿಯೆ ಅಥವಾ ಅಭಿಪ್ರಾಯ ವ್ಯಕ್ತಪಡಿಸಬಹುದೇ ವಿನಾ ಅದರ ಮಾರ್ಪಾಡಿಗೆ ಅವರಿಗೆ ಅವಕಾಶ ಇಲ್ಲ. ಆದರೆ ಈಗ ಕಾಲ ಸನ್ನಿಹಿತವಾಗಿದೆ.

ತಿಳಿಯುವ ಮತ್ತು ಜ್ಞಾನದ ಭೌಗೋಳಿ-ರಾಜಕಾರಣ ಪ್ರಥಮ ಜಗತ್ತಿಗೆ ಮೂರನೆ ಜಗತ್ತು ನೀಡಿದ ಪ್ರತಿಕ್ರಿಯೆಗಳಲ್ಲಿ ಒಂದು ಮುಖ್ಯವಾದ ಪ್ರತಿಕ್ರಿಯೆ. ಈ ಜ್ಞಾನದ ಭೌಗೋಳಿ-ರಾಜಕಾರಣ ಬಯಲು ಮಾಡಿದ ಸಂಗತಿಯಾದರೂ ಯಾವುದು? ಅದೇ ಪ್ರಥಮ ಜಗತ್ತಿನ ಜ್ಞಾನಶಾಸ್ತ್ರೀಯ ಸವಲತ್ತು. ವಿಜ್ಞಾನಶ್ರಮದ ವಿಭಜನೆಯ ಮೂರು ಜಗತ್ತುಗಳಲ್ಲಿ ಪ್ರಥಮ ಜಗತ್ತು ನಿಜವಾಗಿಯೂ ವರ್ಗೀಕರಣವನ್ನು ಸೃಷ್ಟಿಸುವ ಮತ್ತು ಅದರ ಭಾಗವೂ ಆಗುವ ಸವಲತ್ತನ್ನು ಪಡೆದಿತ್ತು. ಇದರ ಪರಿಣಾಮವೆಂಬಂತೆ ಜ್ಞಾನದ ಉತ್ಪಾದನೆಯು ಯಾವತ್ತೂ ತನ್ನದೇ ಆದ ಭೌಗೋಳಿ-ರಾಜಕೀಯ ಸ್ಥಳವನ್ನು ಹೊಂದಿರುವುದಿಲ್ಲ ಮತ್ತು ಅದರ ಸ್ಥಳವು ಸದಾ ಅಮೂರ್ತವೂ ‘ಅತಿವಾಸ್ತವ’ವೂ ಆಗಿರುತ್ತದೆ. ಅದೇ ಕೊಲಂಬಿಯಾದ ತತ್ವಜ್ಞಾನಿ ಸ್ಯಾಂಟಿಯಾಗೋ ಕ್ಯಾಸ್ಟ್ರೋ ಗೊಮೇಜ್ (2007) ವಿವರಿಸಿರುವಂತೆ ‘ಶೂನ್ಯ ಬಿಂದುವಿನ ಮದ’. ಅದನ್ನು ಸಂಪೂರ್ಣ ಯಶಸ್ವಿಯಾಗಿ ಸಹಜೀಕರಣ ಮಾಡಲಾಗಿದೆ. ಹಾಂಟೋಂಜಿ ಹೀಗೆ ಹೇಳುತ್ತಾರೆ: …..ನನಗನ್ನಿಸುವಂತೆ ತೀರಾ ತೀರಾ ತುರ್ತಾಗಿ ಆಗಬೇಕಾಗಿರುವ ಕೆಲಸ ಏನೆಂದರೆ: ಆಫ್ರಿಕಾದ ವಿಜ್ಞಾನಿಗಳು ಅಥವಾ ಹೆಚ್ಚು ತೃತೀಯ ಜಗತ್ತಿನಲ್ಲಿರುವವರು ತಾವು ವಿಜ್ಞಾನಿಗಳಾಗಿ ಮಾಡುತ್ತಿರುವ ಪ್ರಯೋಗಗಳ ಅರ್ಥದ ಬಗ್ಗೆ ತಮ್ಮೊಳಗೆ ತಾವೇ ಪ್ರಶ್ನೆ ಮಾಡಿಕೊಳ್ಳಲಿ. ಒಟ್ಟಾರೆ ಪಾಂಡಿತ್ಯದಿಂದ ಹುಟ್ಟುವ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಆವರ ಪ್ರಯೋಗಗಳ ನಿಜವಾದ ಪಾತ್ರವೇನು ಮತ್ತು ಜಾಗತಿಕ ಮಟ್ಟದಲ್ಲಿನ ಜ್ಞಾನದ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಅದರ ಸ್ಥಾನವೇನು ಎಂಬುದನ್ನು ಅಗತ್ಯವಾಗಿ ಪ್ರಶ್ನೆ ಮಾಡಿಕೊಳ್ಳಲಿ. (1992).

ಆಫ್ರಿಕಾದ ಮತ್ತು ಇತರ ತೃತೀಯ ಜಗತ್ತಿನ ದೇಶಗಳ ‘ವೈಜ್ಞಾನಿಕ ಮತ್ತು ಪಾಂಡಿತ್ಯಕ ಅವಲಂಬನೆ’ಯ ಅನೇಕ ಆಯಾಮಗಳನ್ನು ಹಾಂಟೋಂಜಿ ಪ್ರಸ್ತಾಪಿಸಿದ್ದಾರೆ. ಈತ ಕೆಲವು ದೇಶಗಳಲ್ಲಿ ಇರುವ ಪ್ರಯೋಗಾಲಯಗಳು, ಗ್ರಂಥಾಲಯಗಳು, ಕಟ್ಟಡಗಳು ಇತ್ಯಾದಿ ಸೌಕರ್ಯಗಳ ಸ್ಥಿತಿಗತಿಯಲ್ಲಿನ ‘ಸುಧಾರಣೆ’ಗಳನ್ನು ಗುರ್ತಿಸುತ್ತಾನೆ. ಹಾಗೆ ಗುರ್ತಿಸುವಾಗ ತೃತೀಯ ಜಗತ್ತಿನ ದೇಶಗಳು ಹೇಗೆ ಪ್ರಥಮ ಜಗತ್ತಿನ ಕೈಗಾರಿಕಾ ದೇಶಗಳಿಗೆ ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಅಂಕಿಅಂಶಗಳನ್ನು ಪ್ರಯೋಗಾಲಯಗಳಿಗೆ ಒದಗಿಸುತ್ತಿವೆ ಎಂದು ಬಲವಾಗಿ ನಿರೂಪಿಸಿದ್ದಾನೆ. (ಪ್ರಯೋಗಾಲಯಗಳಿಗೆ ಎಂದರೆ ನೈಸರ್ಗಿಕ ವಿಜ್ಞಾನದ ವಾಸ್ತವ ಪ್ರಯೋಗಾಲಯಗಳಿಗೆ ಮತ್ತು ಸಮಾಜವಿಜ್ಞಾನದ ರೂಪಕಾತ್ಮಕ ಪ್ರಯೋಗಾಲಯಗಳಿಗೆ)
ಹಾಂಟೋಂಜಿಯ ತೀರ್ಮಾನ ಹೀಗಿದೆ: ಮೇಲೆ ಉಲ್ಲೇಖಿಸಿದಂತೆ ತೃತೀಯ ಜಗತ್ತಿನ ದೇಶಗಳಲ್ಲಿ ‘ಸೌಲಭ್ಯಗಳ ಅಭಿವೃದ್ಧಿ’ ಆಗುತ್ತಿದ್ದಾಗ್ಯೂ ‘ವೈಜ್ಞಾನಿಕ ಮಾದರಿಗಳು’ ಆಫ್ರಿಕದವರು ತಯಾರಿಸಿದುವಲ್ಲ. ಬದಲಿಗೆ ಅವು ಪಾಶ್ಚಾತ್ಯ ಯೂರೋಪಿನವರಿಂದ ಅಥವಾ ಸಂಯುಕ್ತ ಸಂಸ್ಥಾನದವರಿಂದ ತಯಾರಾದುವು. ಪರಿಣಾಮವಾಗಿ ‘ವೈಜ್ಞಾನಿಕ ಮಾದರಿಗಳು’ ಆಫ್ರಿಕಾದ ಕನಸಿಗೆ ಅಥವಾ ಅಗತ್ಯಕ್ಕೆ ಸ್ಪಂದಿಸದೆ ಅವು ಪಾಶ್ಚಾತ್ಯ ಅಗತ್ಯ ಮತ್ತು ಕನಸುಗಳಿಗೆ ಮಾತ್ರ ಸ್ಪಂದಿಸುತ್ತವೆ. (ಮುಖ್ಯವಾಗಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗರ ಮತ್ತು ಜೊತೆಯಲ್ಲಿಎರಡನೆ ಸಾಲಿನಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಾದ ಸ್ವೀಡನ್, ಬೆಲ್ಜಿಯಂ ಮತ್ತು ಹಾಲೆಂಡ್‍ನವರಿಗೆ). ಇನ್ನೂ ಮುಂದುವರೆದು ಆಫ್ರಿಕಾದ ವಿದ್ವಾಂಸರು ಪ್ರಥಮ ಜಗತ್ತಿನಲ್ಲಿ ಹುಟ್ಟಿದ, ಮುದ್ರಣಗೊಂಡ ಮತ್ತು ವಿತರಣೆಗೊಂಡ ವೃತ್ತಿಪರ ನಿಯತಕಾಲಿಕೆಗಳನ್ನೆ ಅವಲಂಬಿಸಿದ್ದಾರೆ. ಈ ಪರಿಸ್ಥಿತಿ ಹೊಸದೇನೂ ಅಲ್ಲ. ಹಾಂಟೋಂಜಿ ತಮ್ಮ ‘ವ್ಯಾಪಾರ ಮತ್ತು ವಸಾಹತೀಕರಣ’ ಎಂಬ ಪರಿಭಾಷೆಯ ಮೂಲಕ ಹೇಳುವಂತೆ ಅದು ವಸಾಹತುಶಾಹಿ/ಆಧುನಿಕತೆಯ ಸಂರಚನೆಯಲ್ಲೆ ಕೊರೆಯಲ್ಪಟ್ಟಿದೆ.

ಹೀಗಾಗಿ ತೃತೀಯ ಜಗತ್ತನ್ನು ಒಂದು ಅನುಬಂಧ ಎಂಬಂತೆ ನೋಡುವುದು ಸಹಜವೇ ಆಗಿದೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದನ್ನು ವ್ಯಾಪಾರ ಮತ್ತು ವಸಾಹತೀಕರಣದ ಮೂಲಕ ಒಳಗು ಮಾಡಿಕೊಳ್ಳುವುದು, ಅದಕ್ಕೊಂದು ‘ವೈಜ್ಞಾನಿಕ’ ಕಿಟಕಿಯನ್ನು ಇಡುವುದು ಕೂಡ ಸಹಜವೇ ಆಗಿದೆ. ಇಲ್ಲಿ ಬೌದ್ಧಿಕ ಮತ್ತು ವೈಜ್ಞಾನಿಕ ಶೋಷಣೆ ಮತ್ತು ಶ್ರೀಮಂತವಾದ ತೃತೀಯ ಜಗತ್ತಿನ ಸೌಕರ್ಯಗಳ ಕೊಳ್ಳೆ ಒಟ್ಟಿಗೆ ನಡೆಯುತ್ತವೆ. ಇಲ್ಲಿನ ಗುಟ್ಟುಗಳು ಮತ್ತಿತರ ಉಪಯುಕ್ತ ಮಾಹಿತಿಗಳ ಕೊಳ್ಳೆ ಮತ್ತು ಇದೆಲ್ಲ ಮಾಮೂಲು ಎಂಬಂತೆ ಅಲ್ಲಿನ ಮೆಟ್ರೋಪಾಲಿಟನ್ ನಗರಗಳ ಮ್ಯೂಸಿಯಂಗಳನ್ನು ತುಂಬಿಸಲು ಭಿನ್ನ ಭಿನ್ನ ಹಂತದಲ್ಲಿ ಇಲ್ಲಿನ ಕಲಾಕೃತಿಗಳ ಕೊಳ್ಳೆ ಎರಡೂ ಒಟ್ಟಿಗೇ ನಡೆಯುತ್ತವೆ. (1992).

ಶೀತಲ ಸಮರದ ಸಂದರ್ಭದಲ್ಲಿ ಇದು ನಿಜವಾದರೂ ಸೋವಿಯೆತ್ ಒಕ್ಕೂಟದ ಪತನ ಆದ ನಂತರ ಉಂಟಾದ ವೇಗವಾದ ‘ಜಾಗತೀಕರಣ’ದಿಂದಾಗಿ ಗಡಿಯಿಲ್ಲದ ಜಗತ್ತೊಂದು ಉಗಮವಾಗುತ್ತ ಎಲ್ಲ ಅಸಮಾನ ಭಿನ್ನತೆಗಳು ಇಲ್ಲವಾಗುತ್ತಿವೆ ಎಂಬ ಪ್ರತಿವಾದವನ್ನು ಇದಕ್ಕೆ ಹೂಡಬಹುದು. ಆದರೆ ನಿಜವೆಂದರೆ ‘ಜಾಗತಿಕ ಆರೋಗ್ಯ’ಕ್ಕೆ ತನ್ನ ವಿಶೇಷ ಸಂಚಿಕೆಯೊಂದನ್ನು ಮೀಸಲು ಇರಿಸಿದ ಹಾರ್ವರ್ಡ್ ಇಂಟರ್‍ನ್ಯಾಶನಲ್ ರಿವ್ಯೂ ಹೇಳುವಂತೆ: ಆದರ್ಶದ ನಡೆ ಯಾವುದು ಎಂದರೆ ಮುಂದುವರಿಯುತ್ತಿರುವ ದೇಶಗಳಲ್ಲಿ ಸಂಶೋಧನಾ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಅವುಗಳನ್ನು ಮುಂದುವರಿದ ದೇಶಗಳ ಸಂಸ್ಥೆಗಳೊಂದಿಗೆ ಜೊತೆಮಾಡಿ ತರಬೇತಿ ನೀಡುವುದು. ಸಂಸ್ಥೆಗಳ ಕಟ್ಟುವಿಕೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಪಶ್ಚಿಮದ ಸಂಶೋಧಕರಿಗೆ ಸಾಕಷ್ಟು ಸಮಯ ಮತ್ತು ಗೌರವವನ್ನು ನೀಡುವುದು. ಹಾಗೆಯೇ ಅವರಿಗೆ ತಕ್ಕಷ್ಟು ಹಣಕಾಸನ್ನೂ ಒದಗಿಸುವುದು. ಇಂತಹ ಸಹಯೋಗದ ಮೂಲಕವೆ ಡಯರಿಯಾ ಸಂಬಂಧಿ ರೋಗಗಳ ಸಂಶೋಧನಾ ಕೇಂದ್ರ (ಢಾಕ, ಬಾಂಗ್ಲಾದೇಶ) ಇಂತಹ ಸಾಕಷ್ಟು ಸಂಖ್ಯೆಯ ಸಂಸ್ಥೆಗಳು ಮುಂದುವರಿಯುತ್ತಿರುವ ದೇಶಗಳಲ್ಲಿ ಬೆಳವಣಿಗೆ ಕಂಡಿವೆ. (ಕ್ಯಾಶ್, 2005).

ಕ್ವಾಸಿ ವೈರೆಡು ಸರಿಸುಮಾರು ಇದೇ ವಲಯದಲ್ಲಿ ಅಧ್ಯಯನ ಮಾಡಿ ಉಲ್ಲೇಖ ನೀಡಿ ತಮ್ಮ ‘ಆಫ್ರಿಕಾದ ಭಾಷೆಗಳಲ್ಲಿ ಆಧುನಿಕ ಚಿಂತನೆಯ ರೂಪಗೊಳ್ಳುವಿಕೆ ಕೆಲವು ತಾತ್ವಿಕ ಸಂಗತಿಗಳು’ ಎಂಬ ಬರಹದಲ್ಲಿ ಬೇರೆಯದೇ ರೀತಿಯ ಕರೆಯನ್ನು ಕೊಟ್ಟಿದ್ದಾರೆ. ಆದರೆ ಇವರ ಕರೆ ಕಳೆದೆಹೋಗಿದೆ ಅಥವಾ ಮರೆತೆಹೋಗಿದೆ ಇಲ್ಲವೆ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಕ್ಯಾಶ್ ತಮ್ಮ ಲೇಖನದಲ್ಲಿ ಹೇಳಿರುವಂತೆ ‘ಹಿಂದುಳಿದ ದೇಶಗಳಿಗಾಗಿ ಮುಂದುವರಿದ ದೇಶಗಳಲ್ಲಿ ತಯಾರಾದ ಜಾಗತಿಕ ವಿನ್ಯಾಸಗಳು’ ಮತ್ತು ಪ್ರಯೋಗಾಲಯಗಳ ಹಣ, ತಂತ್ರಜ್ಞಾನ ಇತ್ಯಾದಿಗಳ ಜೋರು ಭರಾಟೆಯಲ್ಲಿ ವೈರೆಡು ಅವರ ಕರೆ ನಿಜಕ್ಕು ಕಳೆದೇ ಹೋಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಕಟಣೆಗಳು ದಕ್ಷಿಣವನ್ನು ಅಭಿವೃದ್ಧಿಪಡಿಸುವ (ಪರಿಣಿತರ) ಬಗ್ಗೆ ಪ್ರಕಟಿಸುತ್ತಿದ್ದ ಸಂದರ್ಭದಲ್ಲಿ ವೈರೆಡು ಅಂತಹವರು ‘ಮುನ್ನೆಲೆ’ಗೆ ಬರುವ ಸಾಧ್ಯತೆ ಇತ್ತು. ಆದರೆ ಅದು ಆಗಲಿಲ್ಲ. ಅದೇ ಲೇಖನದಲ್ಲಿ ಉಲ್ಲೇಖವಾಗಿರುವಂತೆ ಈ ಕೆಳಗಿನ ರೋಗದ ಮುನ್ಸೂಚನೆಯನ್ನು ನೋಡಿ:
‘ಹಾಗಾದರೆ ಮುಂದೆ ಮುಂದುವರಿಯುತ್ತಿರುವ ದೇಶಗಳಲ್ಲಿ ಆರೋಗ್ಯ ಸಂಬಂಧಿ ಸಂಶೋಧನೆಯ ಸಾಮಥ್ರ್ಯವನ್ನು ಹೆಚ್ಚಿಸಲು ಯಾವ ತಂತ್ರಗಾರಿಕೆಯನ್ನು ಮಾಡಬೇಕು? ಹಲವಾರು ತಂತ್ರಗಾರಿಕೆಗಳು ಮತ್ತು ಗುರಿಗಳೇನೋ ಇವೆಯಾದರೂ ಆ ಯಾವುದೂ ಏಕಾಂಗಿಯಾಗಿ ಸಾಕಾಗುವಂಥವಲ್ಲ.

ಜಾಗತಿಕ ಆರೋಗ್ಯ ಸಂಶೋಧನೆಯ ಕಾರ್ಯಸೂಚಿಯು ದಕ್ಷಿಣ ಮತ್ತು ಉತ್ತರ ಎರಡರಿಂದಲೂ ತಯಾರಾಗಬೇಕು. ಆದರೆ ಮುಂದುವರಿಯುತ್ತಿರುವ ದೇಶಗಳ ಸಂಶೋಧನಾ ಅಗತ್ಯಗಳು ಮತ್ತೆ ಮತ್ತೆ ಹೊರಗಿನಿಂದಲೆ ನೀಡಲ್ಪಡುತ್ತಿವೆ ಮತ್ತು ನಿರ್ಧರಿಸಲ್ಪಡುತ್ತಿವೆ. ಅಭಿವೃದ್ಧಿಯ ಸುವರ್ಣನಿಯಮವೇ ‘ಯಾರಲ್ಲಿ ಚಿನ್ನ ಇದೆಯೊ ಅವರೇ ನಿಯಮಗಳನ್ನೂ ಮಾಡುತ್ತಾರೆ’ ಎಂಬುದೇ ಜಾರಿಗೆ ಬರುತ್ತಿದೆ. ಇದು ವಿಶೇಷವಾಗಿ ಸ್ಥಳೀಯ ಆರೋಗ್ಯ ಸಂಶೋಧನೆಗೆ ಸಂಬಂಧಿಸಿದಂತೆ ನಿಜವಾಗಿದೆ. ಅಂದರೆ ಯಾವ ಪ್ರಶ್ನೆ, ಸಮಸ್ಯೆಗಳ ಬಗ್ಗೆ ಸ್ಥಳೀಯ ಪರಿಣಿತರು ಗಮನ ಹರಿಸಲು ಬಯಸುತ್ತಾರೊ ಅವು ಹೊರಗಿನವರಿಗೆ ಮುಖ್ಯವೇ ಅಲ್ಲ. ಹೊರಗಿನ ಆರೋಗ್ಯ ತಜ್ಞರು ಬೇರೆಲ್ಲೋ ಮಾಡಿದ ಅಧ್ಯಯನ, ಸಂಶೋಧನೆಗಳನ್ನೆ ಅಗತ್ಯ ಇಲ್ಲದಿದ್ದರೂ ಇಲ್ಲೂ ಮಾಡಲು ಬಯಸುತ್ತಾರೆ. ಏಕೆಂದರೆ ಅವರಿಗೆ ಅಗತ್ಯ ಇರುವ ವೈದ್ಯಕೀಯ ವ್ಯವಸ್ಥೆಗಳನ್ನು ಮತ್ತು ದುಡಿಮೆಗಳನ್ನು ಸ್ಥಾಪಿಸಲು ಇದು ಬೇಕಾಗಿರುತ್ತದೆ. ಓ.ಆರ್.ಟಿ. (ಅಂದರೆ ಓರಲ್ ರಿಹೈಡ್ರೇಶನ್ ಥೆರಪಿ, ಬಾಯಿಂದ ನೀರು ಕುಡಿಸುವ ಚಿಕಿತ್ಸೆ) ಮೇಲೆ ಹಲವಾರು ದೇಶಗಳಲ್ಲಿ ನಡೆದ ಅಧ್ಯಯನಗಳು ಈ ಕುರಿತ ಅಂತಾರಾಷ್ಟ್ರೀಯ ಸಾಹಿತ್ಯಕ್ಕೆ ಬಹಳ ಕಡಿಮೆ ಕಾಣಿಕೆಯನ್ನು ನೀಡಿವೆ. ಆದರೆ ಇದರಿಂದ ಆಯಾ ದೇಶಗಳ ಶಿಶುತಜ್ಞರಿಗೆ ಆಮಶಂಕೆ ಭೇದಿಯನ್ನು ನಿಯಂತ್ರಿಸಲು ಇದು ಎಷ್ಟು ಮುಖ್ಯ ಎಂಬುದು ಮನವರಿಕೆ ಆಗಿದೆಯಷ್ಟೆ.9
ವೈರೆಡು ಕೊಟ್ಟ ಕರೆ ಈ ಕೆಳಗಿನಂತಿದೆ:

ಪರಿಕಲ್ಪನಾತ್ಮಕವಾಗಿ ಮಾತನಾಡುವುದಾದರೆ: ಅಂತಿಮ ನಡೆ ಏನಾಗಬೇಕು ಅಂದರೆ ‘ಆಫ್ರಿಕದವರೆ ನಿಮ್ಮಲ್ಲೆ ಕಂಡುಕೊಳ್ಳಿ’ (1992) ವೈರೆಡು ಅವರ ವಾದವನ್ನು ಸಮಗ್ರವಾಗಿ ನೀವು ತಿಳಿಯಲು ಸಮಯ ಇಲ್ಲದಿದ್ದರೆ: ಅವರು ವಿಜ್ಞಾನವು ಎಕಾನ್ ಅಥವಾ ಲ್ಯುಒನಲ್ಲೆ ಸಂಭವಿಸಬೇಕು ಎಂದು ಹೇಳುತ್ತಾರೆ ಎಂದು ನೀವು ಭಾವಿಸಬೇಕಿಲ್ಲ. ಇನ್ನೆಂದೂ ಸಿಗದ ಹಾಗೆ ಕಳೆದುಹೋಗಿರುವ ಜಗತ್ತನ್ನು ಪಡೆಯಬಯಸುವ ಮತ್ತು ಆ ಬಗ್ಗೆ ಕನಸು ಕಾಣುವ ಆಫ್ರಿಕದ ತತ್ವಜ್ಞಾನಿಗಳ ಎದುರು (ಅಂದರೆ ನಿಮ್ಮ ಪ್ರಕಾರ ಸಾಂಪ್ರದಾಯಿಕ, ಸಾರಾಂಶವಾದಿ ಮತ್ತು ಸೌಂದರ್ಯವಿಲ್ಲದ, ಕಾಲವೇ ತಿಳಿದಿರದ ಆಫ್ರಿಕದ ತತ್ವಜ್ಞಾನಿಗಳ ಎದುರು) ನಿಮ್ಮ ಸಂರಚನೋತ್ತರ ನಗುವನ್ನು ಹಾಗೇ ಕಾಪಾಡಿಕೊಳ್ಳಿ. ವೈರೆಡು ಏನು ಹೇಳುತ್ತಾರೆ ಎಂಬ ಬಗ್ಗೆ ಸ್ವಲ್ಪವಾದರೂ ಸಾವಧಾನದಿಂದ ಗಮನ ಹರಿಸೋಣ: ಅವರು ಯಾವುದಕ್ಕೂ ವಾಪಸು ಮರಳಿ ಎಂದು ಹೇಳುವುದಿಲ್ಲ. ಇವೊ ಮೊರೇಲ್ ಕೂಡ ‘ಆಯಿಲುಗೆ ಮರಳಿ’ ಎಂಬುದನ್ನು ಹೇಳಲಿಲ್ಲ. ಅಂದರೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳು ಆಧುನಿಕತೆಯ ಬೆಳೆಯನ್ನು ಇಲ್ಲಿ ಬೆಳೆಯುವುದಕ್ಕಿಂತ ಸುಮಾರು ಇಪ್ಪತ್ತು ವರ್ಷಗಳ ಮೊದಲೆ ಆಧುನಿಕತೆಯ ಬೀಜಗಳನ್ನು ತಂದು ಬಿತ್ತಿದ್ದ ಸ್ಪೆಯ್ನ್‍ನವರಿಗು ಮುಂಚಿನ ಸ್ಥಿತಿಯೆ ‘ಆಯಿಲು’. ಆ ‘ಆಯಿಲು’ಗೆ ಮರಳಿ ಎಂದು ವೈರೇಡು ಏನೂ ಹೇಳಿಲ್ಲ.

ನೋಡಿ ಚೈನಾ ಮತ್ತು ಇಂಡಿಯಾಗಳು ಕೂಡ ತಮ್ಮ ‘ಹಿಂದಿನ ಕಾಲಕ್ಕೆ ಮರಳುವುದು’ ಎಂಬುದೇನನ್ನೂ ಮಾಡುತ್ತಿಲ್ಲ. ಐ.ಎಂ.ಏಫ್.ನಿಂದ ಆಗಲೀ ಅಥವಾ ವೈಟ್‍ಹೌಸ್ ಇಲ್ಲವೇ ಯೂರೋಪಿಯನ್ ಒಕ್ಕೂಟದಿಂದ ಆಗಲೀ ನಾವು ‘ಕರಾರುವಕ್ಕು ಆಧುನಿಕ’ ಆಗಿ ಇರಲು ಏನು ಮಾಡಬೇಕು, ಆಧುನಿಕತೆಯ ರೈಲು ತಪ್ಪಿಸಿಕೊಳ್ಳದೆ ಇರಲು ಅಥವಾ ಅದರೆದುರು ವಿಫಲರಾಗದೆ ಇರಲು ಏನು ಮಾಡಬೇಕು ಎಂದು ಅಪ್ಪಣೆಗಾಗಿ ಏನೂ ಕಾಯುತ್ತಿಲ್ಲ. ವಾಲ್‍ಸ್ಟ್ರೀಟ್ ಆರ್ಥಿಕ ಕುಸಿತದ ನಂತರ ಆ ಬಗ್ಗೆ ಸಾಕಷ್ಟು ಹೇಳಿಕೆಗಳು ಮತ್ತು ಬರಹಗಳು ಬಂದಾಗಿದೆ. ಸಂಯುಕ್ತ ಸಂಸ್ಥಾನದ ಮಾದರಿಯು ಸೋತು ಬಿದ್ದಿದೆ ಮತ್ತು ಜಾಗತಿಕವಾಗಿ ಚರಿತ್ರೆಯು ಏಕಕೇಂದ್ರದಿಂದ ಬಹುಕೇಂದ್ರ ಜಗತ್ತಿನತ್ತ ಚಲಿಸುತ್ತಿದೆ ಎಂದೇ ಆ ಬರಹಗಳೆಲ್ಲ ಹೇಳಿವೆ. ವೈರೆಡು ಆಫ್ರಿಕದ ಮತ್ತು ತೃತೀಯ ಜಗತ್ತಿನ ವಿದ್ವಾಂಸರಿಗೆ ಮತ್ತು ಬುದ್ಧಿಜೀವಿಗಳಿಗೆ ‘ಜ್ಞಾನಶಾಸ್ತ್ರೀಯವಾಗಿ ಎಚ್ಚರವಾಗಿ ಎಂದು ಕರೆ ನೀಡಿದ್ದರು. ಆದು ಈಗಾಗಲೇ ಜಗತ್ತಿನಾದ್ಯಂತ ಆಗುತ್ತಿದೆ ಮತ್ತು ಹಬ್ಬುತ್ತಿದೆ.

Partha Chatterjeeಈ ವಿಚಾರಗಳ ನಂತರ ನಾವು ಎರಡನೆ ಉದಾಹರಣೆಗೆ ಚಲಿಸೋಣ. ಇಲ್ಲಿ ಭಾರತೀಯ ರಾಜಕೀಯ ಸಿದ್ಧಾಂತಿ ಪಾರ್ಥ ಚಟರ್ಜಿಯನ್ನು ಗಮನಿಸಬೇಕು. ಬಹು ಮುಖ್ಯವಾದ ಇವರ ಲೇಖನದಲ್ಲಿ ಜ್ಞಾನದ ಭೌಗೋಳಿ ಮತ್ತು ದೇಹ-ರಾಜಕಾರಣಗಳನ್ನು ಮುನ್ನೆಲೆಗೆ ತರುವ ಅಂದರೆ ಪರೋಕ್ಷವಾಗಿ ಪ್ಲೆಖ್‍ನಲ್ಲಿ ಇಲ್ಲದಿದ್ದ ಅಧ್ಯಾಯವೊಂದನ್ನು ನೋಡಬಹುದು. ವೈರೆಡು ಮತ್ತು ಹಾಂಟೋಂಜಿ ಅವರ ಅನುಭವಗಳಿಗೆ ಪ್ರತಿಯಾದ ಭಿನ್ನ ಇಂಡಿಯಾದ ಚರಿತ್ರೆಯಿಂದ ತೆಗೆದ ಉದಾಹರಣೆಯಿಂದ ಆತ ತನ್ನದೇ ದೃಷ್ಟಿಕೋನವನ್ನು ಮಂಡಿಸಿದ್ದಾರೆ. ಆತ ‘ಎರಡು ಭಾಷೆಗಳಲ್ಲಿ ಆಧುನಿಕತೆ’ಯ ಸಮಸ್ಯೆ ಏನು ಎಂಬುದನ್ನು ತನ್ನ ಎ ಪಾಸಿಬಲ್ ಇಂಡಿಯಾ ಎಂಬ ಪುಸ್ತಕದಲ್ಲಿ (1998) ಚರ್ಚಿಸಿದ್ದಾರೆ. ಇದು ಆತ ಬಂಗಾಳಿ ಭಾಷೆಯಲ್ಲಿ ಕಲ್ಕತ್ತಾದಲ್ಲಿ ನೀಡಿದ ಭಾಷಣದ ಇಂಗ್ಲಿಶ್ ರೂಪ. ಈ ರೂಪ ಬರಿ ಭಾಷಾಂತರ ಅಲ್ಲ: ಅದು ಜ್ಞಾನದ ಭೌಗೋಳಿ-ರಾಜಕಾರಣ ಮತ್ತು ಜ್ಞಾನಶಾಸ್ತ್ರೀಯ ಹಾಗೂ ರಾಜಕೀಯ ಬೇರ್ಪಡೆಯ ಸೈದ್ಧಾಂತಿಕ ಪ್ರತಿಬಿಂಬ.
ಉದ್ದೇಶಪೂರ್ವಕವಾಗಿ ಮತ್ತು ಯಾವುದೇ ಮುಲಾಜುಗಳೂ ಇಲ್ಲದೆ ಆ ಭಾಷಣದಲ್ಲಿ ಚಟರ್ಜಿ ‘ನಮ್ಮ ಆಧುನಿಕತೆ’ ಮತ್ತು ‘ಅವರ ಆಧುನಿಕತೆ’ಗಳ ನಡುವಿನ ವ್ಯತ್ಯಾಸವನ್ನು ಬಹಳ ಚೆನ್ನಾಗಿ ಗುರ್ತಿಸಿ ಮಾತಾಡಿದ್ದಾರೆ. (ಪ್ಲೆಖ್ ಗುರ್ತಿಸಿರುವಂತೆ) ಪ್ರಥಮ ಜಗತ್ತಿನ ಸಂರಚನೋತ್ತರ ಬುದ್ಧಿಜೀವಿಗಳು ಸಮರ್ಥಿಸಿರುವ ‘ಏಕೈಕ ಆಧುನಿಕತೆ’ಯನ್ನಾಗಲೀ ಅಥವಾ ‘ಇತರರ’ ‘ಅಂಚಿನ’, ‘ಅಲಕ್ಷಿತ’, ‘ಪರಿಧಿಯ’ ಇತ್ಯಾದಿ ಆಧುನಿಕತೆಗಳನ್ನಾಗಲೀ ಆಧರಿಸದೆ ಚಟರ್ಜಿಯವರು ‘ಅವರ ಆಧುನಿಕತೆ’ಯಿಂದ ಸಂಪೂರ್ಣ ಸ್ವತಂತ್ರವಲ್ಲದ (ಏಕೆಂದರೆ ಪಾಶ್ಚಾತ್ಯ ಆಕ್ರಾಮಕತೆ ಒಂದು ವಾಸ್ತವ ಹಾಗಾಗಿ) ‘ನಮ್ಮ ಆಧುನಿಕತೆ’ಯ ಸುಭದ್ರ ಅಡಿಪಾಯ ಒಂದನ್ನು ಯಾವುದೇ ನಾಚಿಕೆಪಡದೆ, ವಿಷಾದವಿಲ್ಲದೆ, ಪಶ್ಚಾತ್ತಾಪವೂ ಇಲ್ಲದೆ ಹಾಕಿದ್ದಾರೆ.

ಚಟರ್ಜಿಯವರ ವಾದದ ಪ್ರಮುಖ ಶಕ್ತಿ ಎಂದರೆ, ಇತರರಿಗಿಂತ ಭಿನ್ನವಾಗಿರುವುದು. ನೆಪೋಲಿಯನ್ನನ ನಂತರ 18ನೆ ಶತಮಾನದ ಅಂತ್ಯಕ್ಕೆ ವ್ಯಾಪಾರದ ಉದ್ದೇಶದಿಂದಲೂ ಮತ್ತು 19ನೇ ಶತಮಾನದ ಆರಂಭದಲ್ಲೆ ರಾಜಕೀಯವಾಗಿಯೂ ಏಷ್ಯಾ ಮತ್ತು ಆಫ್ರಿಕಾಗಳಿಗೆ ತಮ್ಮ ಗ್ರಹಣೇಂದ್ರಿಯಗಳ ಕಬಂಧ ಬಾಹುಗಳನ್ನು ಚಾಚಿದ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು ಬಹಳ ಮುಂಚೆಯೆ ಅಂದರೆ 15ನೆ ಶತಮಾನದಲ್ಲೆ ಇಂಡಿಯಾಕ್ಕೆ ಕಾಲಿಟ್ಟವು. ದಕ್ಷಿಣ ಆಫ್ರಿಕ ಮತ್ತು ಕೆರಿಬಿಯನ್ ಬುದ್ಧಿಜೀವಿಗಳಿಗಿಂತ ಭಿನ್ನವಾಗಿ ಚಟರ್ಜಿ ‘ಆಧುನಿಕತೆ’ಯನ್ನು ಪುನರುಜ್ಜೀವನ ಎಂದು ಕರೆಯದೆ ಜ್ಞಾನೋದಯ ಎಂದು ಕರೆದಿದ್ದಾರೆ. ಚಟರ್ಜಿ ಇಮ್ಯಾನುಯೆಲ್ ಕ್ಯಾಂಟನ ‘ಜ್ಞಾನೋದಯ ಎಂದರೆ ಏನು’ ಎಂಬುದನ್ನೆ ತಮ್ಮ ವಾದದ ಆಧಾರ ಸ್ಥಂಭವಾಗಿ ಇಟ್ಟುಕೊಂಡಿದ್ದಾರೆ. ಕ್ಯಾಂಟ್‍ನ ಪ್ರಕಾರ ಜ್ಞಾನೋದಯ ಎಂದರೆ ತನ್ನ ಅಪಕ್ವತೆಯನ್ನು ಮಾಗಿಸಿಕೊಳ್ಳುತ್ತ ಮನುಷ್ಯನು (ಮಾನವ ಎಂಬ ಅರ್ಥದಲ್ಲಿ) ಯುಗಯುಗಗಳನ್ನು ದಾಟುತ್ತ ಬಂದು ಸ್ವಾಂತಂತ್ರ್ಯವನ್ನು ಮುಟ್ಟುವುದು. ಕ್ಯಾಂಟನ ಲೇಖನಗಳನ್ನು ಓದುವಾಗ (ಉದ್ದೇಶ ಪೂರ್ವಕ ಆಗಿಯೋ ಅಥವಾ ಅಲ್ಲದೆಯೋ) ಚಟರ್ಜಿ ಕ್ಯಾಂಟನ ಮೌನವನ್ನು ಮತ್ತು ಮೈಕೇಲ್ ಫ್ಯುಕೋನ ಸಮೀಪದೃಷ್ಟಿಯನ್ನು ಪ್ರಸ್ತಾಪಿಸುತ್ತಾರೆ.

ಕ್ಯಾಂಟನ ಸ್ವಾತಂತ್ರ್ಯ ಮತ್ತು ಪರಿಪಕ್ವತೆ ಕಲ್ಪನೆಗಳ ವೈಭವೀಕರಣದಲ್ಲಿ ಮತ್ತು ಫ್ಯೂಕೋನ ವೈಭವೀಕರಣದಲ್ಲಿ ನಾವು ಸಿಲುಕಿಕೊಂಡಲ್ಲಿ ಒಂದು ತಾಪತ್ರಯ ಆಗುತ್ತದೆ. ಅಂದರೆ ಮನುಷ್ಯ ಮತ್ತು ಮಾನವೀಯತೆಯ ಕ್ಯಾಂಟನ ಕಲ್ಪನೆಯು ಪುನರುಜ್ಜೀವನದಿಂದ ಜ್ಞಾನೋದಯದವರೆಗೆ ಸಾಗಿ ಬಂದ ಯೂರೋಪಿನ ಮಾನವನ ಕಲ್ಪನೆಯನ್ನು ಆಧರಿಸಿದ್ದೇ ವಿನಹ ‘ಕಡಿಮೆ ಮಾನವತ್ವ’ ಹೊಂದಿದ್ದ (ಆದಿಮಾನವ) (ಯೂರೋಪಿನ ಹೃದಯದಾಚೆಗೆ ಅನ್ಯ ಜಗತ್ತಿನಲ್ಲಿ ನೆಲೆಸಿದ ಮಾನವರನ್ನು ಆಧರಿಸಿದ) ಪರಿಕಲ್ಪನೆ ಅಲ್ಲ ಎಂಬ ನಿಜಾಂಶವನ್ನು ಮರೆಯಬೇಕಾಗುತ್ತದೆ. ಹಾಗಾಗಿ ಜ್ಞಾನೋದಯ ಎಂದರೆ ಅದು ಎಲ್ಲರಿಗೂ ಆದದ್ದಲ್ಲ. ಹೀಗೆ ನೀವು ಕ್ಯಾಂಟನ ಅಥವಾ ಫ್ಯುಕೋನ ಸ್ಥಳೀಯ ಚರಿತ್ರೆ, ನೆನಪು, ಭಾಷೆ ಮತ್ತು ಸಾಕಾರಗೊಂಡ/ದೇಹಗೊಂಡ ಅನುಭವ ಇವೆಲ್ಲವನ್ನೂ ಒಂದು ಆಕಾರಕ್ಕೆ ತಂದುಕೊಳ್ಳದೇ ಹೋದರೆ ಇನ್ನೇನು ತಾನೆ ಮಾಡಬಲ್ಲಿರಿ? ಇನ್ನೇನೂ ಅಲ್ಲ; ಹೋಗಿ ಕ್ಯಾಂಟನ ಮತ್ತು ಫ್ಯೂಕೋನ ಒಂದೊಂದು ಜೊತೆ ಶೂಗಳನ್ನು ಕೊಂಡುಕೊಳ್ಳಿ. ಅಲ್ಲೆ ಕಾಲಿಡಿ, ಅಷ್ಟೆ ನಿಮ್ಮಿಂದಾಗುವುದು.

ಕ್ಯಾಂಟ್ ಮತ್ತು ಫ್ಯೂಕೋ ಇವರ ಒಳನೋಟಪೂರಿತ ವ್ಯಾಖ್ಯಾನದಲ್ಲಿ ನನಗೆ ನನ್ನ ವಾದದ ಮುಂದುವರಿಕೆಗೆ ಒಂದು ಅಂಶ ಬಹಳ ಮುಖ್ಯವಾದುದು ಎನ್ನಿಸುತ್ತದೆ. ಚಟರ್ಜಿಯವರು ಕ್ಯಾಂಟನನ್ನು ಸಂಕ್ಷೇಪಿಸಿ ನಿರೂಪಿಸುವಾಗ ‘ಜ್ಞಾನದ ಅನ್ವೇಷಣೆಯ ವಿಶ್ವಾತ್ಮಕ ನೆಲೆ’ಯಲ್ಲಿ ಆತ ಸಾರ್ವಜನಿಕ (ಖಾಸಗಿ ಅಲ್ಲ) ವಲಯದಲ್ಲಿ ನಿಲ್ಲುತ್ತಾನೆ ಎನ್ನುತ್ತಾರೆ. ಯಾರು ಜ್ಞಾನದ ಅನ್ವೇಷಣೆ ಮತ್ತು ಜಿಜ್ಞಾಸೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅರ್ಹತೆ ಹೊಂದಿರುತ್ತಾರೋ ಮತ್ತು ಆ ಸ್ವಾಂತಂತ್ರ್ಯವನ್ನು ಜವಾಬ್ದಾರಿಯುತವಾಗಿ ಯಾರು ಬಳಸಬಲ್ಲರೋ ಅವರಿಗೆ ಮಾತ್ರ ‘ಮುಕ್ತವಾಗಿ ಅಭಿವ್ಯಕ್ತಿಸುವ ಹಕ್ಕು’ ಇರಬೇಕು ಎಂದು ಕ್ಯಾಂಟ್ ಹಕ್ಕೊತ್ತಾಯ ಮಾಡುತ್ತಾನೆ ಮತ್ತು ವಾದಿಸುತ್ತಾನೆ ಎಂದು ಹೇಳುತ್ತಾರೆ. ಬದಲಿಗೆ ಈ ಬಗ್ಗೆ ಫ್ಯೂಕೋ (ಆತನದೇ ಸಂಶೋಧನೆಯ ಆಸಕ್ತಿ ಇದ್ದಾಗ್ಯೂ) ಏನನ್ನೂ ಹೇಳುವುದಿಲ್ಲ ಎಂದು ಹೇಳುತ್ತಾರೆ. ಚಟರ್ಜಿಯವರ ಈ ವಾದವನ್ನು ಅನುಸರಿಸಿ ನಾನು ಹೇಳಲು ಬಯಸುವುದು ಏನೆಂದರೆ; ಫ್ಯೂಕೋನಿಗೆ ವಸಾಹತೀಯ ಅನುಭವ ಮತ್ತು ವಸಾಹತೀಯ ಗಾಯದಿಂದ ಹುಟ್ಟಿದ ರಾಜಕೀಯ ಆಸಕ್ತಿ ಇವು ಇರಲಿಲ್ಲ. ಹಾಗಾಗಿ ಆತ ಆ ಸಮಸ್ಯೆಯನ್ನು ಚರ್ಚೆಗೆ ಎತ್ತಿಕೊಳ್ಳಲಿಲ್ಲ. ಆದರೆ ಚಟರ್ಜಿಯವರಿಗೆ ಈ ಅನುಭವವೂ ಇದ್ದುವು. ಹಾಗಾಗಿಯೇ ಇವರಿಗೆ ಈ ಇಬ್ಬರನ್ನೂ ದಾಟಿ ‘ಭಾವಿಸಲು’ ಮತ್ತು ‘ನೋಡಲು’ ಸಾಧ್ಯವಾಗಿದೆ. ಹೀಗಾಗಿ ಚಟರ್ಜಿ ಕ್ಯಾಂಟ್ ಮತ್ತು ಫ್ಯೂಕೋ ಇಬ್ಬರನ್ನೂ ಎದುರುಬದುರು ನಿಲ್ಲಿಸಿ ತಮ್ಮ ವಾದವನ್ನು ಉಪಸಂಹಾರ ಮಾಡುತ್ತಾರೆ.

ತಜ್ಞರೇ ಹೇಳುವಂತೆ ಶಿಕ್ಷಣ ಮತ್ತು ಕಲಿಕೆಯ ಕ್ಷೇತ್ರಕ್ಕೆ ಅನಿರ್ಬಂಧಿತ ಪ್ರವೇಶ ಇರಬೇಕೆಂಬ ತತ್ವವು ಸಾಮಾನ್ಯ ಸಾಮಾಜಿಕ ಒಪ್ಪಿಗೆಯ ಜೊತೆಜೊತೆಗೆ ಇರುವ ಸಂಗತಿಯಾಗಿ ಕಾಣುತ್ತಿದೆ…. ಬೇರೆ ಮಾತುಗಳಲ್ಲಿ ಹೇಳುವುದಾದರೆ ಜ್ಞಾನೋದಯದ ಮೂಲಕ ನಾವೆಲ್ಲರೂ ತಿಳಿದುಕೊಂಡಿರುವಂತೆ ಜ್ಞಾನದ ಕಾರಣಮೀಮಾಂಸೆಯನ್ನು ಪ್ರಯೋಗಿಸಲು ಇರುವ ಅನಿರ್ಬಂಧಿತ ಮತ್ತು ಜಾಗತಿಕವಾಗಿ ಎಲ್ಲರಿಗೂ ತೆರೆದ ಆಡುಂಬೊಲವಾಗಿ ನಮ್ಮ ನೆಲವಿದೆ. ಅಂದರೆ ನಾವು ಎಂದಾದರೂ ಯಾವ ವಿಷಯದ ಮೇಲೆ ಏನು ಮಾತನಾಡಬೇಕೆಂಬ ಹಕ್ಕು ಯಾರಿಗೆ ಇರಬೇಕು ಎಂಬ ಬಗ್ಗೆ ಆಂತರಂಗಿಕವಾಗಿ ಸ್ಪಷ್ಟ ವ್ಯತ್ಯಾಸವುಳ್ಳ ಅಧಿಕಾರದ ರಚನೆಯನ್ನು ಕಟ್ಟಿಕೊಂಡಿದ್ದೇವೇನು? (1998)

ಹಾಂಟೋಂಜಿ ಮತ್ತು ವೈರೆಡು ಆಫ್ರಿಕದ ನಿದರ್ಶನಗಳ ಮೂಲಕ ಹೇಳುವ ವಿಚಾರಗಳಿಗೆ ಚಟರ್ಜಿ ಸಹಮತ ವ್ಯಕ್ತಪಡಿಸುತ್ತಾರೆ. (ಪರಸ್ಪರ ಸ್ವತಂತ್ರವಾಗಿ ಇದ್ದಾಗ್ಯೂ, ‘ಪ್ರಭಾವ’ವು ಯೂರೋಪಿನಿಂದ ಸಂಯುಕ್ತ ರಾಷ್ಟ್ರಕ್ಕೆ ಅಲ್ಲಿಂದ ಆಫ್ರಿಕ ಮತ್ತು ಇಂಡಿಯಾಗಳಿಗೆ ಚಲಿಸಿದ್ದಾಗ್ಯೂ ಇವರಲ್ಲಿ ಸಹಮತವಿದೆ. ಆದರೆ ಆಫ್ರಿಕ ಮತ್ತು ಇಂಡಿಯಾಗಳ ಜೊತೆ ಸಂವಾದ ಇಲ್ಲವಷ್ಟೆ) ತೃತೀಯ ಜಗತ್ತು (ಪ್ಲೆಖ್‍ನ ಕಲ್ಪನೆಯಂತೆ) ಪ್ರಥಮ ಜಗತ್ತಿನ ಬಹುತೇಕ ಪಾಂಡಿತ್ಯದ ‘ಗ್ರಾಹಕ’ ಆಗಿದೆ. ಮತ್ತು ಚಟರ್ಜಿ ತನ್ನ ಆಫ್ರಿಕಾದ ಸಂಗಾತಿಗಳಂತೆಯೆ ತಮ್ಮ ವಾದವನ್ನು ನಮ್ಮ ಆಧುನಿಕತೆಯ ಚರಿತ್ರೆಯು ಬಿಡಿಸಲಾಗದಂತೆ ವಸಾಹತುವಾದದ ಚರಿತ್ರೆಯ ಜೊತೆ ಹೆಣೆದುಕೊಂಡುಬಿಟ್ಟಿದೆ ಎಂದು ಹೇಳುತ್ತಾರೆ. ಆ ಕಾರಣಕ್ಕಾಗಿ ‘ನಾವು’ ಜಾತಿ-ಜನಾಂಗೀಯ ಅಥವಾ ರಾಷ್ಟ್ರೀಯತಾ ತಾರತಮ್ಯಗಳ ಸಂಕೋಲೆಗಳಿಲ್ಲದ ಸ್ವತಂತ್ರ ಸಂಕಥನದ ವಿಶ್ವಾತ್ಮಕ ವಲಯವೊಂದು ವಾಸ್ತವವಾಗಿ ಇದೆ ಎಂದು ಯಾವತ್ತೂ ನಂಬಿಲ್ಲ. ಚಟರ್ಜಿ ತಮ್ಮ ವಾದವನ್ನು ಹೀಗೆ ಮುಗಿಸುತ್ತಾರೆ:

ಆಧುನಿಕ ಜ್ಞಾನ ಮತ್ತು ಆಧುನಿಕ ಅಧಿಕಾರಶಾಹಿಗಳ ನಡುವೆ ಪರಮಾಪ್ತ ಮತ್ತು ಬಿಡಿಸಲಾಗದ ಒಂದು ಸಂಬಂಧ ಇದೆ. ಹಾಗಾಗಿ ನಾವು ಈ ವಿಶ್ವಾತ್ಮಕ ಅಧುನಿಕತೆಯ ಗ್ರಾಹಕರಾಗಿಯೇ ಎಂದೆಂದಿಗೂ ಉಳಿಯಬೇಕಾಗುತ್ತದೆ. ಹಾಗೆಯೇ ನಾವು ಎಂದಿಗೂ ಗಂಭೀರವಾದ ಉತ್ಪಾದಕರಾಗಿ ಪರಿಗಣಿತ ಆಗುವುದೇ ಇಲ್ಲ ಎಂದು ಹೇಗೋ ಏನೂ ಆರಂಭದಿಂದಲೇ ನಾವು ಒಂದು ಒರಟು ಅಂದಾಜು ಮಾಡಿದ್ದೇವೆ. ಇದೇ ಕಾರಣಕ್ಕಾಗಿಯೇ ನಾವು ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಈ ವಿಶ್ವಾತ್ಮಕ ಆಧುನಿಕತೆ ಎಂಬ ಗೋಮುಖ ವ್ಯಾಘ್ರದಿಂದ ದೂರವಿರಲು ಮತ್ತು ನಮ್ಮದೇ ಆದ ಆಧುನಿಕತೆಯನ್ನು ಸೃಷ್ಟಿಸಿಕೊಳ್ಳಬಲ್ಲ ಅವಕಾಶಗಳನ್ನು ಕಲ್ಪಿಸಿಕೊಳ್ಳಲು ಹೆಣಗುತ್ತಿದ್ದೇವೆ. (1998).

17ನೇ ಶತಮಾನದ ಆದಿಭಾಗದಲ್ಲಿ ಮತ್ತು 18ನೆ ಶತಮಾನದ ದ್ವಿತೀಯಾರ್ಧದಲ್ಲಿ ಕ್ರೈಸ್ತಧರ್ಮವನ್ನೆ ತಮ್ಮ ಕೈಗೆ ತೆಗೆದುಕೊಂಡು ಗೌಮನ್ ಪೊಮ ಡಿ ಅಯಲ ಮತ್ತು ಒಟ್ಟೋಬ ಕುಗೊವಾನೊ ತಮ್ಮದೆ ವಾದ ಮಂಡಿಸಿದ್ದಾರೆ. ಅವಮಾನಿತರು ಅವಮಾನ ಮಾಡಿದವರ ಎದುರು ತಮ್ಮ ಸಂಕಷ್ಟವನ್ನು ತೋಡಿಕೊಳ್ಳುವ ರೀತಿ ಅವರು ಮಾಡದೆ ಯೂರೋಪಿನ ಕ್ರೈಸ್ತರಿಗೆ ಮುಖದ ಮೇಲೆ ಹೊಡೆದಂತೆ ಹೇಳುವ ದಾರಿಯನ್ನು ಅವರು ಹಿಡಿದಿದ್ದಾರೆ. ತವಾನ್‍ತಿನ್‍ಸುಯು (ಇಂಕಾ ಸಾಮ್ರಾಜ್ಯದ) ಇಂಡಿಯನ್ ಒಬ್ಬನಾದರೆ ಇನ್ನೊಬ್ಬ ಕೆರಿಬಿಯನ್ ದ್ವೀಪದವ (ಆಫ್ರಿಕದ ಮಾಜಿ ಗಲಾಮನಾಗಿದ್ದ) ಇವರಿಬ್ಬರೂ ನಂತರ ಲಂಡನ್ನಿಗೆ ಹೋಗಿ ಅಲ್ಲಿ ಯೂರೋಪಿನ ಆದರ್ಶಗಳ, ದರ್ಶನಗಳ, ಮತ್ತು ಸ್ವಾರ್ಥಪರ ಪ್ರವಾದಿತನಗಳ ಅಮಾನವೀಯತೆಗಳನ್ನು ಬಯಲು ಮಾಡಿದರು. ಇವರಿಬ್ಬರ ವಾದಕ್ಕೆ ಸರಿಸುಮಾರು ಹತ್ತಿರದ ವಾದದಂತೆಯೆ ಚಟರ್ಜಿಯವರ ವಾದ ಇದೆ. (ಮಿಗ್ನೇಲೊ, 2008)

ಹೌದು ನಿಜಕ್ಕು ಚಟರ್ಜಿಯವರಿಗೆ 19ನೆ ಶತಮಾನದಲ್ಲಿ ರಾಷ್ಟ್ರೀಯವಾದಿಗಳು ಮತ್ತು ಹಿಂದೂ ದೇಶವಾದಿಗಳಿಬ್ಬರೂ ಒಂದೇ ರೀತಿಯ ಹಕ್ಕು ಮಂಡಿಸಿದರೆಂಬ ಅರಿವಿದೆ. ‘ನಮ್ಮ’ ಆಧುನಿಕತೆಯ ಗುರುತಿಸಿಕೊಳ್ಳುವಿಕೆಯ ದಾರಿಯಲ್ಲಿನ ಅಪಾಯಗಳಿದ ಪಾರಾಗುವುದು ಎಂದರೆ ‘ಅವರ’ ಆಧುನಿಕತೆಯ ತೆಕ್ಕೆಗೆ ಹೋಗಿ ಬೀಳುವುದು ಎಂದಲ್ಲ. ಆಧುನಿಕತೆ ಎಂದರೆ ಧರ್ಮದ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳುವುದೂ ಹೌದು. ಇಮ್ಯಾನುಯೆಲ್ ಕ್ಯಾಂಟನಿಗೆ ಇಲ್ಲಿ ಧನ್ಯವಾದ ಹೇಳಬೇಕು. ಈಗ 1947ರಲ್ಲಿ ವಸಾಹತುಕಾರ ಬ್ರಿಟಿಶರನ್ನು ಅವರ ಸಂಸ್ಥೆಗಳನ್ನು ಮತ್ತು ಅವರ ಪ್ರಗತಿ ಮಾರ್ಗಗಳನ್ನು ಅಭಿವೃದ್ಧಿಯ ಮತ್ತು ನಾಗರೀಕತೆಯ ಹಾದಿಗಳನ್ನು ಭಾರತದಿಂದ ಹೊಡೆದೋಡಿಸಿ, ಸ್ವಾತಂತ್ರವನ್ನು ಗಳಿಸಿ ಒಂದು ಪಕ್ವತೆಯನ್ನು ತಲುಪಿರುವಾಗ ‘ನಮ್ಮದೇ’ ಆಧುನಿಕತೆಯನ್ನು ಕಂಡುಕೊಳ್ಳುವುದು ಹೇಗೆಂದು ಯೋಚಿಸೋಣ. ‘ನಮ್ಮದೇ’ ಬದುಕುವ ದಾರಿಗಳನ್ನು ಕುರಿತು ನಾವು ಚಿಂತಿಸೋಣ. ಇನ್ನೂ ಮುಂದುವರಿದು ಚಟರ್ಜಿಯ ಮಾತುಗಳನ್ನು ನನ್ನದೇ ಆದ ಪರಿಭಾಷೆಗೆ ಅನುವಾದ ಮಾಡಿ ಹೇಳುವುದಾದರೆ ‘ನಮ್ಮ ಬದುಕನ್ನೆ ನಿರ್ವಸಾಹತೀಕರಣ ಮಾಡಬೇಕೆಂದು ನಮಗೆ ಗೊತ್ತಿದೆ. ಹಾಗೆ ಮಾಡುವ ಮೂಲಕ ಜ್ಞಾನವನ್ನೂ ನಿರ್ವಸಾಹತೀಕರಣ ಮಾಡುವುದನ್ನು ಆರಂಭಿಸಬೇಕಿದೆ.’ ಹಾಂಟೋಂಜಿ ಮತ್ತು ವೈರೆಡು ಹೇಳಿದ್ದೂ ಕೂಡ ಇದೇ ಅಂಶಗಳನ್ನು. ಇದರಿಂದ ಈಗ ಮೂರನೆ ಉದಾಹರಣೆಯ ಕಡೆಗೆ ನಡೆಯಬಹುದು.

lindasmithಮಾವೋರಿ ರಾಷ್ಟ್ರೀಯಳಾದ ಲಿಂಡಾ ತುಹಿವಾಯಿ ಸ್ಮಿತ್ ನ್ಯೂಜಿಲೆಂಡಿನ ಮಾನವಶಾಸ್ತ್ರಜ್ಞೆ. ನ್ಯೂಜಿಲೆಂಡನ್ನು ಬ್ರಿಟಷರು ಆಳಲು ತೊಡಗಿದ ಕಾಲದಿಂದಲೂ ಮಾವೋರಿ ಪ್ರಜೆಗಳು ಇದೇ ನೆಲದಲ್ಲಿ ಸಹಬಾಳ್ವೆ ನಡೆಸುತ್ತಿದ್ದಾರೆ. 1833ರಲ್ಲಿ ಜೇಮ್ಸ್ ಬಸ್ಬಿ ಎಂಬುವವನು ‘ಅಧಿಕೃತ ಬ್ರಿಟಿಶ್ ರೆಸಿಡೆಂಟ್’ನನ್ನಾಗಿ ನ್ಯೂಜಿಲೆಂಡಿಗೆ ನೇಮಿಸಲಾಯಿತು. ಸ್ವತಃ ಬ್ರಿಟಿಶರಿಂದ, ಫ್ರೆಂಚರಿಂದ ಮತ್ತು ಅಮೆರಿಕದವರಿಂದ ಮತ್ತವರ ದುರಾಸೆಯ ಕಾರಣದಿಂದ ನ್ಯೂಜಿಲೆಂಡಿನಲ್ಲಿ ಉಂಟಾದ ಅತಂತ್ರ ಸ್ಥಿತಿಯನ್ನು ನಿಗ್ರಹಿಸಲು ಮಾವೋರಿ ಮುಖ್ಯಸ್ಥರುಗಳನ್ನು ಒಟ್ಟಾಗಿ ಸಂಘಟಿಸಲು ಅವನಿಗೆ ಸೂಚಿಸಲಾಯಿತು. ಎಲ್ಲರಿಗೂ ತಿಳಿದಿರುವಂತೆ ಮಾವೋರಿಗಳು ಎಂದೂ ಖಾಸಗಿ ಆಸ್ತಿ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಆದರೆ ಯೂರೋಪಿಯನ್ನರು ಹಾಗಲ್ಲ. 16ನೆ ಶತಮಾನದ ಆರಂಭದಿಂದಲೆ ಅವರ ‘ಹೊಸ ಜಗತ್ತು’ ನೆಲವನ್ನೆಲ್ಲ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಳ್ಳುವ ಹಸಿವನ್ನು ತೀವ್ರಗೊಳಿಸಿದೆ.

ಪ್ಲೆಖ್‍ನ ಲೇಖನದಲ್ಲಿ ಹೇಳಿರುವಂತೆ ‘ವಿಜ್ಞಾನಶ್ರಮದ ವಿಭಜನೆ’ಯ ಪ್ರಕಾರ ತೃತೀಯ ಜಗತ್ತಿನ ಅಧ್ಯಯನದ ಜವಾಬ್ದಾರಿಯನ್ನು ಮಾನವಶಾಸ್ತ್ರಕ್ಕೆ ವಹಿಸಲಾಗಿ ಅದು ಶೀತಲ ಸಮರದ ಸಂದರ್ಭದಲ್ಲಿ ಅಲ್ಲಿನ ‘ಜ್ಞಾನದ ರಾಜಕಾರಣ’ವನ್ನು ಕಂಡುಹಿಡಿಯಿತು. ಆದರೆ ಈಗ ಇರುವ ಮಾನವಶಾಸ್ತ್ರಜ್ಞರಲ್ಲಿ ಬಹುತೇಕರು ಯೂರೋ-ಅಮೆರಿಕದವರೆ ಆಗಿರುವುದು ಗುಟ್ಟೇನೂ ಅಲ್ಲ. ಆದಾಗ್ಯು ಮಾನವಶಾಸ್ತ್ರವು ಒಂದು ಶಿಸ್ತಾಗಿ ತನ್ನ ಅಸ್ತಿತ್ವವನ್ನು ತೃತೀಯ ಜಗತ್ತಿನಲ್ಲೆ ಕಂಡುಕೊಂಡಿತು ಎಂಬುದು ಸುಳ್ಳಲ್ಲ. ಪ್ರಥಮ ಜಗತ್ತಿನ ಮಾನವಶಾಸ್ತ್ರಜ್ಞನ ‘ಅಧ್ಯಯನ ವಸ್ತು’ವೇ ತಾನಾದಾಗ ತೃತೀಯ ಜಗತ್ತಿನ ಮಾನವಶಾಸ್ತ್ರಜ್ಞ/ಜ್ಞೆ ಏನು ತಾನೆ ಮಾಡಬೇಕು? ಇಂತಹ ಇಕ್ಕಟ್ಟಿನ ಸಂದರ್ಭದ ಬಗ್ಗೆ ಮೇಲೆ ಉಲ್ಲೇಖಿಸಿದ ಹಾಂಟೋಂಜಿಯ ಲೇಖನದಲ್ಲು ಚರ್ಚಿಸಲಾಗಿದೆ. ಇದಕ್ಕೆ ಒಂದು ಸರಳ ಉತ್ತರ ಯಾವುದೆಂದರೆ ತೃತೀಯ ಜಗತ್ತಿನ ಮಾನವಶಾಸ್ತ್ರಜ್ಞ ಪ್ರಥಮ ಜಗತ್ತಿನ ಮಾನವಶಾಸ್ತ್ರಜ್ಞ ಮಾಡುವ ಕೆಲಸವನ್ನೆ ಮಾಡುತ್ತಾನೆ ಮತ್ತು ಅದೇ ಪ್ರಶ್ನೆಗಳನ್ನೆ ಇಟ್ಟುಕೊಂಡು ತನ್ನ ಸುತ್ತ ನೆಲೆಸಿರುವ ತನ್ನ ದೇಶದವರನ್ನೆ ‘ಅಧ್ಯಯನ’ ಮಾಡುತ್ತಾನೆ. ನಿರ್ದಿಷ್ಟ ದೇಶಕ್ಕೆ ಸಂಬಂಧಿಸಿದಂತೆ ಅಧ್ಯಯನ ಸ್ವರೂಪವು ತನ್ನ ಉದ್ದೇಶಿತ ಜನತೆ ‘ಸ್ಥಳೀಯ’ವೋ ಅಥವಾ ‘ಯೂರೋಪೀಯ’ವೋ ಎಂಬುದರ ಮೇಲೆ ವ್ಯತ್ಯಾಸ ಹೊಂದುತ್ತದೆ. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ತೃತೀಯ ಜಗತ್ತಿನ ದೇಶಗಳಲ್ಲಿ ಉದಾಹರಣೆಗೆ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ ಇಂತಹ ಕಡೆ ಇರುವ ಮಾನವಶಾಸ್ತ್ರಜ್ಞರು ಯೂರೋಪಿನಿಂದ ಬಂದವರೇ ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಸಾಧಾರಣವಾಗಿ ಅಂತಿಮ ಫಲಿತಾಂಶವು ಏನಾಗಿರುತ್ತದೆ ಎಂದರೆ; ತೃತೀಯ ಜಗತ್ತಿನ ಮಾನವಶಾಸ್ತ್ರೀಯ ಸಂಶೋಧನೆಯು ಪ್ರಥಮ ಜಗತ್ತಿನಲ್ಲಿ ಭೋದನೆಯಾಗುವ ಮತ್ತು ಆಚರಣೆಯಲ್ಲಿ ಇರುವ ಮಾನವಶಾಸ್ತ್ರಕ್ಕೆ ಅವಲಂಬಿ ಆಗಿಯೂ ಮತ್ತದಕ್ಕೆ ಆನುಷಂಗಿಕ ಆಗಿಯೂ ರೂಪಗೊಳ್ಳುತ್ತದೆ ಮತ್ತು ಬಾಳುತ್ತದೆ. ಮತ್ತೇನೂ ಹೊಸದಾಗಲೀ ಗಮನಾರ್ಹ ಆದುದಾಗಲೀ ಅಲ್ಲಿ ಸೃಷ್ಟಿ ಆಗುವುದಿಲ್ಲ.

ಗಮನಾರ್ಹವಾದ ಹೊಸತನ ಯಾವಾಗ ಬರುತ್ತದೆ ಎಂದರೆ; ಯಾರೋ ಒಬ್ಬಾಕೆ ಮಾನವಶಾಸ್ತ್ರಜ್ಞಳಾಗಿ ಮಾವೋರಿಗಳನ್ನು ಅಧ್ಯಯನ ಮಾಡುವುದಕ್ಕಿಂತ ಮಾವೋರಿಯೆ ಮಾನವಶಾಸ್ತ್ರಜ್ಞಳಾದಾಗ ಮತ್ತು ತನ್ನದೇ ಅಧ್ಯಯನವನ್ನು ಆಚರಣೆಗೆ ತಂದಾಗ ಬರುತ್ತದೆ. ಲಿಂಡಾ ಸ್ಮಿತ್‍ಳ ‘ನಿರ್ವಸಾಹತೀಕರಣ ವಿಧಾನಗಳು: ಸಂಶೋಧನೆ ಮತ್ತು ವಿಶಿಷ್ಟ ಜನತೆ’ (1999) ಇಲ್ಲಿನ ಒಂದು ಉಲ್ಲೇಖದಿಂದ ಇದನ್ನು ವಿವರಿಸುತ್ತೇನೆ. ಆಕೆಯ ಬರಹದ ಮೊದಲ ಅಧ್ಯಾಯ ‘ಮಾನವೀಯ ಆಗಿ ಇರುವುದರ ಬಗ್ಗೆ’ ಇದರಿಂದ ಆರಿಸಿದ ಒಂದು ಚಿಕ್ಕ ಭಾಗ ಇಲ್ಲಿದೆ: ನಾವು ನಮ್ಮ ಮಿದುಳುಗಳನ್ನು ಅಥವಾ ಬೌದ್ಧಿಕತೆಯನ್ನು ಬಳಸಲಾರೆವು ಎಂಬುದು ನಮ್ಮಂತಹ ಆದಿಮ ಜನಾಂಗದ ಬಗ್ಗೆ ಇದ್ದ ಪೂರ್ವಾಗ್ರಹಗಳಲ್ಲಿ ಒಂದು. ನಾವು ಏನನ್ನೂ ಕಂಡುಹಿಡಿಯಲಾರೆವು, ಯಾವುದೇ ಸಂಸ್ಥೆಯನ್ನು ಹುಟ್ಟುಹಾಕಲಾರೆವು ಅಥವಾ ಇತಿಹಾಸವನ್ನು ನಿರ್ಮಿಸಲಾರೆವು. ನಮಗೆ ಕಲ್ಪನಾಶಕ್ತಿಯೂ ಇಲ್ಲ, ತುಂಬಾ ಮೌಲಿಕವಾದ ಯಾವುದನ್ನೂ ನಮ್ಮಿಂದ ಉತ್ಪಾದಿಸಲೂ ಆಗದು. ನೈಸರ್ಗಿಕ ಜಗತ್ತಿನ ಭೂಮಿ ಮೊದಲಾದ ಯಾವುದೇ ರೀತಿಯ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದೂ ನಮಗೆ ಗೊತ್ತೇ ಇರಲಿಲ್ಲ. ನಾಗರೀಕತೆಯ ‘ಕಲೆಗಳು’ ನಮ್ಮಲ್ಲಿ ಆಚರಣೆಯಲ್ಲೆ ಇರಲಿಲ್ಲ. ಇಂತಹ ಮೌಲ್ಯಗಳಾವುವೂ ಇಲ್ಲದ್ದರಿಂದ ನಮಗೆ ನಾವೆ ಅಪಾತ್ರರಾದೆವು. ಅಂದರೆ ಕೇವಲ ನಾಗರೀಕತೆಯಿಂದ ಮಾತ್ರವಲ್ಲ ಮನುಷ್ಯರು ಎಂದು ಕರೆಸಿಕೊಳ್ಳಲೂ ಅಯೋಗ್ಯರಾದೆವು. ಅಂದರೆ ನಾವು ಪೂರ್ಣವಾದ ಮನುಷ್ಯರಲ್ಲ. ನಮ್ಮಲ್ಲಿ ಕೆಲವರಂತೂ ಕನಿಷ್ಟ ಪಕ್ಷ ಅರೆಮಾನವರು ಎಂದು ಕೂಡ ಕರೆಸಿಕೊಳ್ಳಲು ಯೋಗ್ಯರಾಗಿರಲಿಲ್ಲ. ಇಲ್ಲಿ ಸಾಮ್ರಾಜ್ಯವಾದವು ಬಂದು ಆವರಿಸಿಕೊಳ್ಳವುದಕ್ಕು ಮುಂಚೆಯೆ; ಮನುಷ್ಯತ್ವ ಎಂದರೆ ಏನು ಎಂಬುದನ್ನು ನಿರ್ಧರಿಸುವ ಚಿಂತನೆಗಳು ಅದಾಗಲೇ ಅಧಿಕಾರ ಕೇಂದ್ರದ ಮೂಲಕ ನಿರ್ಧಾರವಾಗಿದ್ದವು. ಮತ್ತು ಜನರನ್ನು ಯಾರು ಮಾನವರು ಮತ್ತು ಯಾರು ಮಾನವರಲ್ಲ ಎಂದು ನಿರ್ಣಯಿಸುವ ಸೂತ್ರಗಳು ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಸಂಕಥನಗಳಲ್ಲಿ ಸೇರಿಕೊಂಡುಬಿಟ್ಟಿದ್ದವು. (1999).

ಇಲ್ಲ: ಈಗ ಆಕೆ ಪಶ್ಚಾತ್ಯ ಮಾನವಶಾಸ್ತ್ರವನ್ನು ಅಭ್ಯಾಸ ಮಾಡುತ್ತಿಲ್ಲ. ಆಕೆ ಮಾವೋರಿ ಲೋಕವಿಜ್ಞಾನ ಮತ್ತು ವಿಚಾರಪರಂಪರೆಗಳಿಗೆ ಮಾನವಶಾಸ್ತ್ರದ ಸಾಧನಗಳನ್ನು ಬೆಸೆಯುತ್ತ, ತರ್ಕಸರಣಿಯ ಭೂಗೋಳವನ್ನು ಬದಲಿಸುತ್ತಿದ್ದಾಳೆ. ಚೈನಾ ಒಂದು ಬಂಡವಾಳವಾದಿ ರಾಷ್ಟ್ರ. ಆದರೆ ಅದು ಪಾಶ್ಚಾತ್ಯ ಬಂಡವಾಳವಾದದ ಅನುಸರಣೆಯನ್ನು ಮಾಡುತ್ತಿದೆ ಎಂದು ನಾನು ಹೇಳುವುದಿಲ್ಲ. ಖಂಡಿತವಾಗಿಯೂ ಮಾವೋರಿಗಳನ್ನು ಗಮನಿಸುತ್ತ ತಮ್ಮ ಸ್ವಸಹಾಯಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಹಿತಾಸಕ್ತಿ ಯೂರೋಪಿನ ಮಾನವಶಾಸ್ತ್ರಜ್ಞರಲ್ಲಿ ಇರುವಂತೆ ಅದೇ ಹಿತಾಸಕ್ತಿ ಲಿಂಡಾ ಅವರಲ್ಲೂ ಇದೆ. ಇಲ್ಲಿನ ಒಂದೇ ವ್ಯತ್ಯಾಸ ಏನೆಂದರೆ ಇನ್ನೆಂದೂ ಪಾಶ್ಚಾತ್ಯರಿಗೆ ಮಾವೋರಿಗಳು ಪ್ರಯೋಗಪಶುಗಳಾಗಿ ಒದಗುವ ಸುಲಭದ ತುತ್ತಲ್ಲ. ಈಗ ನಿಮಗೆ ಅಸ್ಮಿತೆಯ ರಾಜಕಾರಣ ಮತ್ತು ಜ್ಞಾನಶಾಸ್ತ್ರೀಯ ರಾಜಕಾರಣಗಳ ಅಂತಃಸಂಬಂಧಗಳ ಸುಳುಹು ಸಿಕ್ಕಿರಬಹುದು. ನೀವೊಬ್ಬ ಮಾವೋರಿ ಮತ್ತು ಮಾನವಶಾಸ್ತ್ರಜ್ಞ ಎರಡೂ ಆಗಿದ್ದಲ್ಲಿ ಖಂಡಿತವಾಗಿಯೂ ನೀವೊಬ್ಬ ಕರಿಯ ಕೆರಿಬಿಯನ್ ಅಥವಾ ಆಯ್ಮಾರ ಅಥವಾ ಮಾವೋರಿ ಎಂಬುದನ್ನು ಒಂದೋ ಅಡಗಿಸಿಡುತ್ತೀರಿ ಇಲ್ಲವೇ ನಿರ್ವಸಾಹತುವಾದಿ ಆಯ್ಕೆಯನ್ನು ಆಯ್ದುಕೊಳ್ಳುತ್ತೀರಿ. ಶಾಸ್ತ್ರವನ್ನು (ಮಾನವಶಾಸ್ತ್ರ) ಬೆಳೆಸಲು ಶ್ರಮಿಸುವುದಕ್ಕಿಂತ ‘ಮಾವೋರಿ’ ಜನತೆಯನ್ನು ಬೆಳೆಸಲು ಜ್ಞಾನವನ್ನು ಸೃಷ್ಟಿಸಲು ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ. ತಮ್ಮನ್ನು ತಾವು ಗಟ್ಟಿಗೊಳಿಸಿಕೊಳ್ಳಲು ಅಥವಾ ಸ್ವಹಿತ ಕಾಯ್ದುಕೊಳ್ಳಲು ಆಗದಿದ್ದರೆ ಯಾರಾದರೂ ಯಾಕೆ ತಾನೆ ಶಾಸ್ತ್ರಗಳನ್ನು ಬೆಳೆಸಲು ಆಸಕ್ತಿ ತಾಳಬೇಕು ಹೇಳಿ?

karl_marx (1)ಲಿಂಡಾ ಸ್ಮಿತ್‍ಳಂತೆ ನೀವು ನಿರ್ವಸಾಹತೀಯ ಆಯ್ಕೆಯಲ್ಲಿ ತೊಡಗಿ, ಮಾನವಶಾಸ್ತ್ರವನ್ನು ನಿಮ್ಮ ಸೇವೆಗೆ ಬಳಸಿಕೊಂಡಲ್ಲ, ನೀವು ತರ್ಕಸರಣಿಯ ಭೂಗೋಳವನ್ನು ಬದಲಿಸಲೂ ಯತ್ನಿಸಬಹುದು; ಹಾಗೆಯೆ ಭೌಗೋಳಿ-ರಾಜಕಾರಣ ಮತ್ತು ದೇಹ-ರಾಜಕಾರಣಗಳಲ್ಲು ತೊಡಗಿಸಿಕೊಳ್ಳಬಹುದು; ಯೂರೋ ಅಮೆರಿಕ ಮೂಲದವರಾದ ಮಾವೋರಿ ಅಲ್ಲದ ಕೆಲವು ಮಾನವಶಾಸ್ತ್ರಜ್ಞರು ಇದ್ದಾರೆ, ಅವರು ನಿಜವಾಗಿಯೂ ನಮ್ಮ ಪರ ಇದ್ದಾರೆ: ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರ ಬಗ್ಗೆ ಅವರಿಗೆ ವಿರೋಧವಿದೆ: ಇದನ್ನು ಸರಿಪಡಿಸಲೆಂದೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ನೀವು ವಾದಿಸಬಹುದು. ಅಂತಹ ಉದಾಹರಣೆಗಳಿದ್ದರೆ ಖಂಡಿತಾ ಆ ಮಾನವಶಾಸ್ತ್ರಜ್ಞರು ಎರಡೆರಡು ದಾರಿಗಳಲ್ಲಿ ನಡೆಯುತ್ತಿದ್ದಾರೆ ಎಂದೇ ನೀವು ತಿಳಿಯಬೇಕು. ಇಲ್ಲದಿದ್ದರೆ ಆಗ ನೀವು ಏಕಕಾಲಕ್ಕೆ ಫಾದರ್ ಬಾರ್ತೊಲೋಮಿ ಡ ಲ ಕಾಸ ಮತ್ತು ಮಾರ್ಕ್ಸ್ ವಾದ ಎರಡರ ಜೊತೆಗೂ ನಿಲ್ಲಬಹುದು. ( ಮಾರ್ಕ್ಸ್ ವಾದ ಯೂರೋಪಿನ ಸಮಸ್ಯೆಗಳನ್ನು ಕುರಿತು ಪ್ರತಿಕ್ರಿಯಿಸುವ ಯೂರೋಪಿನವರದ್ದೆ ಆದ ಶೋಧ) ಹೆಣ್ಣೇ ಆಗಲಿ ಗಂಡೆ ಆಗಲೀ ಮಾರ್ಕ್ಸ್ ವಾದ ಮನುಷ್ಯರ ‘ಬಣ್ಣ’ದ ಬಗ್ಗೆ ಮಾತಾಡುವಾಗ ಮಾನವಶಾಸ್ತ್ರದಂತೆಯೆ ಮಾತಾಡುತ್ತದೆ. ಮಾವೋರಿಯಾಗಿ (ಅಥವಾ ಐಮೆ ಸಿಸೇರೇ ಅಥವಾ ಫ್ರಾನ್ಜ್ ಫ್ಯನಾನ್‍ನಂತೆ ಆಯ್ಮಾರ ಅಥವಾ ಆಫ್ರೋ ಕೆರಿಬಿಯಾದವರಾಗಿ) ಇರುವುದು ಎಂದರೆ ಅದು ಅಷ್ಟು ಸರಳವಾದುದಲ್ಲ. ಯಾಕೆಂದರೆ ಮಾಕ್ರ್ಸ್‍ವಾದವು ಅಲ್ಲಿನ ಜನಾಂಗೀಯ ಶ್ರೇಣೀಕರಣಗಳ, ಪಿತೃಪ್ರಧಾನ ಮತ್ತು ಭಿನ್ನಲಿಂಗಿ-ಪ್ರಮಾಣೀಯ ಶ್ರೇಣೀಕರಣಗಳ ಬದಲು ವರ್ಗಸಂಬಂಧಗಳಿಗೇ ಪ್ರಾಶಸ್ತ್ಯ ನೀಡುತ್ತದೆ. ಆಗ ಬೇರೆಯವರು ಮಾವೋರಿ ಅಥವಾ ಆಯ್ಮಾರ ಮಾನವಶಾಸ್ತ್ರಜ್ಞರ ಮಾರ್ಗದರ್ಶನಕ್ಕಾಗಿ ಬೇಡಿಕೊಂಡು ನಿರ್ವಸಾಹತೀಕರಣದ ಆಯ್ಕೆನ್ನು ಆಶ್ರಯಿಸಬೇಕಾಗುತ್ತದೆ. ಅಸ್ಮಿತೆಯ ರಾಜಕಾರಣವು ಅಸ್ಮಿತೆಗಾಗಿ ರಾಜಕಾರಣಕ್ಕಿಂತ ಭಿನ್ನವಾದುದು. ಮೊದಲನೆಯದು ಯಾರು ಬೇಕಾದರೂ ಇಚ್ಛೆಪಟ್ಟಲ್ಲಿ ಸೇರಿಕೊಳ್ಳಬಹುದಾದ ವಲಯವಾದರೆ ಎರಡನೆಯದು ಹಾಗಲ್ಲ. ಅದು ನಿರ್ದಿಷ್ಟ ಚಹರೆಯನ್ನು ಹೊಂದುವುದಕ್ಕೆ ಯತ್ನಿಸುತ್ತದೆ.

ಆಂಗ್ಲೀಯ ಹಿನ್ನೆಲೆಯಿಂದ ಬಂದ ನ್ಯೂಜಿಲೆಂಡಿನ ಮಾನವಶಾಸ್ತ್ರಜ್ಞರಿಗಿಂತ ಮಾವೋರಿ ಮಾನವಶಾಸ್ತ್ರಜ್ಞರು ಹೆಚ್ಚಿನ ಜ್ಞಾನಶಾಸ್ತ್ರೀಯ ವಿಶೇಷಾಧಿಕಾರ ಪಡೆದಿರುತ್ತಾರೆ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಆದರೆ ನ್ಯೂಜಿಲೆಂಡಿನಲ್ಲಿ ನೆಲೆಸಿರುವ ಆಂಗ್ಲೀಯ ಮಾನವಶಾಸ್ತ್ರಜ್ಞನಿಗೆ ಮಾವೋರಿ ಸ್ಥಳೀಯ ಜನತೆಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂದು ಮಾರ್ಗದರ್ಶನ ಮಾಡುವ ಯಾವುದೇ ಹಕ್ಕು ಇಲ್ಲ ಎಂದಷ್ಟೆ ನಾನು ಹೇಳುತ್ತೇನೆ. ಹಾರ್ವರ್ಡ್ ಇಂಟರ್‍ನ್ಯಾಶನಲ್ ರಿವ್ಯೂನಲ್ಲಿ ವ್ಯಕ್ತವಾಗಿರುವಂತೆ ಸಂಯುಕ್ತ ಸಂಸ್ಥಾನದ ಪರಿಣಿತರ ಒಂದು ಗುಂಪು ಈಗಲೂ ನಾವು ‘ಮುಂದುವರಿಯುತ್ತಿರುವ ರಾಷ್ಟ್ರ’ಗಳಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ನಿರ್ಧರಿಸಬಲ್ಲೆವು ಎಂದು ಭಾವಿಸುವುದೇ ಇಲ್ಲಿನ ಮುಖ್ಯವಾದ ಸಮಸ್ಯೆ. ಸಾಮ್ರಾಜ್ಯಶಾಹಿ ಮತ್ತು ಬಂಡವಾಳವಾದಿ ವಿಶ್ವವಿಜ್ಞಾನದ ಕಾರಣಕ್ಕಾಗಿ ಇದನ್ನು ನಂಬುವ ಕೆಲವು ಸ್ಥಳೀಯರು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಇದ್ದಾರೆ ಎಂಬುದೂ ನಿಜ. ಅವರನ್ನು ಹಾಗೆ ಅಂದರೆ ಯಾವುದು ಮುಂದುವರಿದ ರಾಷ್ಟ್ರಗಳಿಗೆ ಒಳ್ಳೆಯದೋ ಅದು ನಮಗೂ ಒಳ್ಳೆಯದು ಮತ್ತು ಅದರಿಂದ ನಾವೂ ಅವರ ಮಟ್ಟಕ್ಕೆ ಏರಬಹುದು ಎಂದು ನಂಬುವಂತೆ (ಅಥವಾ ನಂಬಿದವರಂತೆ ನಟಿಸುವಂತೆ) ಮಾಡಲಾಗಿದೆ. ಯಾಕೆಂದರೆ ಈ ವಸಾಹತುವಾದಿಗಳಿಗೆ ‘ಅಲ್ಲಿಗೆ ಹೇಗೆ ಹೋಗುತ್ತಲೇ ಇರಬಹುದು’ ಎಂಬುದು ಚೆನ್ನಾಗಿ ಗೊತ್ತಿದೆ. ವೈರೆಡು ತತ್ವವನ್ನು (ಆಫ್ರಿಕದವರೆ ನಿಮ್ಮಲ್ಲೆ ಕಂಡುಕೊಳ್ಳಿ ಎಂಬ ತತ್ವವನ್ನು) ಅನುಸರಿಸಿ ಹೇಳುವುದಾದರೆ: ಮಾವೋರಿಗಳಿಗೆ ಯಾವುದು ಒಳ್ಳೆಯದು ಎಂಬುದನ್ನು ಒಬ್ಬ ಹಾರ್ವರ್ಡ್ ವಿದ್ವಾಂಸ ಅಥವಾ ನ್ಯೂಜಿಲೆಂಡಿನಲ್ಲಿ ನೆಲೆಸಿರುವ ಆಂಗ್ಲೀಯ ಬಿಳಿ ಮಾನವಶಾಸ್ತ್ರಜ್ಞ ತಿಳಿಯುವುದಕ್ಕಿಂತ ಚೆನ್ನಾಗಿ ಮಾವೋರಿಯೇ ತಿಳಿಯಬಲ್ಲ. ಹಾಗೆಯೇ ಹಾರ್ವರ್ಡಿನ ಪರಿಣಿತನಿಗೆ/ಳಿಗೆ ನಿಮಗೆ ಯಾವುದು ಒಳ್ಳೆಯದು ಎಂದು ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ಹೇಳುವಾಗ ಅವರಿಗೆ ಅಥವಾ ಅವರವರಿಗೆ ಜನತೆಗೆ ಯಾವುದು ಒಳ್ಳೆಯದು ಎಂದು ಬಹಳ ಚೆನ್ನಾಗೇ ತಿಳಿದಿರುತ್ತದೆ.

ಲಿಂಡಾ ಸ್ಮಿತ್ ಅವರ ಉದ್ಧರಣೆಗೆ ಮರಳಿ ಬಂದು ಮೇಲೆ ಉಲ್ಲೇಖಿಸಿದ ವಾಕ್ಯವೃಂದದ ಬಗ್ಗೆ ಒಂದು ತಕರಾರು ಎತ್ತುವುದಕ್ಕು ಸಾಧ್ಯವಿದೆ. ‘ನಾವು’ ಎಂಬ ಕಲ್ಪನೆಯು ಮಾವೋರಿಯಾಗಿ ಇರುವುದು ಎಂಬ ಸಾರಾವಾದಿ ಪರಿಕಲ್ಪನೆಯನ್ನು ನಿರಾಕರಿಸುತ್ತದೆ. ಅಥವಾ ಆಧುನಿಕೋತ್ತರವಾದಿ ಸಿದ್ಧಾಂತಗಳು ವಾಸ್ತವವಾಗಿ ಏಕರೂಪ ಮತ್ತು ಸುಸಂಬದ್ಧ ವಿಷಯಗಳ ಕಲ್ಪನೆಗೆ ಬಂದು ನಿಲ್ಲುತ್ತಿದ್ದುದರಿಂದ ವ್ಯಕ್ತಿ ನೆಲೆಯಲ್ಲೆ ಆಗಲಿ ಇಲ್ಲವೆ ಸಮುದಾಯದ ನೆಲೆಯಲ್ಲೆ ಆಗಲಿ ಆ ಸಂದರ್ಭದಲ್ಲಿ ನಿಜಕ್ಕು ಈ ‘ನಾವು’ ಎಂಬ ಕಲ್ಪನೆಯು ತಾಳಿಕೆಯುಳ್ಳ ಕಲ್ಪನೆ ಅಲ್ಲ ಎಂಬ ತಕರಾರನ್ನು ನೀವು ತೆಗೆಯಬಹುದು. ಆದರೆ…. ಇಲ್ಲಿ ಚಟರ್ಜಿಯನ್ನು ನೆನಪಿಸಿಕೊಳ್ಳಿ: ಭಾಷೆಗಳನ್ನು, ನೆನಪುಗಳನ್ನು ಮತ್ತು ಪಾಶ್ಚಾತ್ಯ ಆಧುನಿಕತೆಯ ಲೋಕವಿಜ್ಞಾನವನ್ನೂ ‘ಅವರ’ ಆಧುನಿಕತೆಯ ಒಂದು ಆಕಾರಕ್ಕೆ ತಂದು ನಿಲ್ಲಿಸಿಕೊಳ್ಳುವುದು ಆಧುನಿಕ ಪಾಶ್ಚಾತ್ಯ ಶಿಸ್ತುಗಳಿಗೆ ತುಂಬಾ ಆರಾಮದಾಯಕ ಮತ್ತು ಒಳ್ಳಯದೇ. ಇದು ಆಧುನಿಕ ವಸಾಹತುಶಾಹಿಗೆ ಅಧ್ಯಯನ ವಸ್ತುಗಳೆ ಆದ ಮತ್ತು ತಮ್ಮದೇ ‘ನಮ್ಮ’ ಆಧುನಿಕತೆಗಾಗಿ ಹಂಬಲಿಸುವ ಮಾವೋರಿ, ಐಮಾರ ಅಥವಾ ಘಾಣಾದ ತತ್ವಜ್ಞಾನಿ ಅಥವಾ ಕಲ್ಕತ್ತಾದ ಭಾರತೀಯ ಇಂಥವರಿಗೆ ಖಂಡಿತಾ ಅನುಕೂಲಕರ ಅಲ್ಲ. ಇವರು ವ್ಯಾನ್‍ಗಾರ್ಡ್ ಆಧುನಿಕೋತ್ತರ ವಿಮರ್ಶಕರ ಅಥವಾ ಹಿಂದುಳಿದವರನ್ನು ಮುಂದೆ ತರುವ ಪಾಶ್ಚಾತ್ಯ ಪರಿಣತರ ಮಾತುಗಳನ್ನು ಕೇಳಕೂಡದು. ಆಗ ಜ್ಞಾನದ ಭೌಗೋಳಿ-ರಾಜಕಾರಣವು ಮುನ್ನೆಲೆಗೆ ಬರುತ್ತದೆ. ಇಲ್ಲೆಲ್ಲ ಜಗತ್ತಿನಲ್ಲಿ ಹಲವು ರೀತಿಯ ‘ನಮ್ಮ ಆಧುನಿಕತೆಗಳು’ ಇವೆ. ಘಾನಾದ, ಇಂಡಿಯಾದ, ಮಾವೋರಿಯ, ಆಫ್ರೋ-ಕೆರಿಬಿಯಾದ, ಉತ್ತರ ಆಫ್ರಿಕಾದ, ಇಸ್ಲಾಮಿಕ್ ವೈವಿದ್ಯದ ಹಲವು ‘ನಮ್ಮ ಆಧುನಿಕತೆಗಳು’ ಇವೆ. ಆದರೆ ಭಿನ್ನತೆಗಳ ನಡುವೆ ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಮತ್ತು ಸಂಯುಕ್ತ ರಾಷ್ಟ್ರಗಳಲ್ಲಿ ಒಂದೇ ಒಂದು ‘ಅವರ’ ಆಧುನಿಕತೆ ಇದೆ.
ತರ್ಕಸರಣಿಯ ಭೂಗೋಳವನ್ನು ಬದಲಾಯಿಸುವುದು ಮತ್ತು ಜ್ಞಾನದ ಭೌಗೋಳಿ ರಾಜಕಾರಣವನ್ನು ಕಾರ್ಯಗತಗೊಳಿಸುವುದು ಎಂದರೆ ಏನು ಎಂದು ನಿಮಗೆ ಈಗ ಮನದಟ್ಟಾಗಿದೆ ಎಂದುಕೊಂಡಿದ್ದೇನೆ. ಇದನ್ನು ತಿಳಿದರೆ ಸಾಮಾನ್ಯವಾಗಿ (ಅಥವಾ ಪ್ರತಿಯೊಂದೂ ಸ್ಥಳೀಯ ಚರಿತ್ರೆಗೆ ನಿರ್ದಿಷ್ಟವಾಗಿ) ನಿರ್ವಸಾಹತೀಯ ಆಯ್ಕೆ ಎಂದರೆ ಏನು ಎಂಬುದು ಕೂಡ ತಿಳಿಯುತ್ತದೆ. ಅಂದರೆ: (ಪ್ರಾಥಮಿಕವಾಗಿ ನಾನು ಈಗಾಗಲೇ ನೀಡಿರುವ ಮೂರು ಉದಾಹರಣೆಗಳಲ್ಲಿ ತಿಳಿಸಿರುವಂತೆ) ಜ್ಞಾನಶಾಸ್ತ್ರೀಯ ಅಸಹಕಾರದಲ್ಲಿ ತೊಡಗುವುದು. ಜ್ಞಾನಶಾಶ್ತ್ರೀಯ ಅಸಹಕಾರವು ಅಗತ್ಯವಾಗಿ ನಾಗರೀಕ ಅಸಹಕಾರವೇ ಆಗಬೇಕು. (ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್) ಅಂದರೆ ಅದು ನಾಗರೀಕ ಅಸಹಕಾರದಂತೆ ಪ್ರತೀಕಾರರಹಿತ ಆಗಿರಬೇಕು.

ಆಧುನಿಕ ಪಾಶ್ಚಾತ್ಯ ಜ್ಞಾನಶಾಸ್ತ್ರದ (ನೆನಪಿಸಿಕೊಳ್ಳಿ, ಗ್ರೀಕ್ ಮತ್ತು ಲ್ಯಾಟಿನ್ ಹಾಗೂ ಆರು ಸಾಮ್ರಾಜ್ಯಶಾಹಿ ಮತ್ತು ಆಧುನಿಕ ಯೂರೋಪಿನ ಭಾಷೆಗಳ ಎದುರಿನ) ನಾಗರೀಕ ಅಸಹಕಾರವು ಕೇವಲ ಸುಧಾರಣೆಯನ್ನು ತರಬಲ್ಲುದೇ ವಿನಃ ರೂಪಾಂತರಗಳನ್ನು ಉಂಟುಮಾಡಲಾರದು. ಈ ಒಂದು ಸರಳ ಕಾರಣಕ್ಕಾಗಿ ನಿರ್ವಸಾಹತೀಯ ಚಿಂತನೆಯ ಕಾರ್ಯ ಮತ್ತು ನಿರ್ವಸಾಹತೀಯ ಆಯ್ಕೆಯ ಅನುಷ್ಠಾನ ಇವುಗಳು ಇಪ್ಪತ್ತೊಂದನೆ ಶತಮಾನದಲ್ಲಿ ಜ್ಞಾನಶಾಶ್ತ್ರೀಯ ಬೇರ್ಪಡುವಿಕೆಯಿಂದ ಮತ್ತು ಜ್ಞಾನಶಾಶ್ತ್ರೀಯ ಅಸಹಕಾರದ ಕ್ರಿಯೆಗಳಿಂದ ಮಾತ್ರ ಆರಂಭ ಆಗಬಲ್ಲುವು.

ಮುಂದುವರೆಯುವುದು 

Leave a Reply

Your email address will not be published.