ಜೋಗಿ ಬಳಗ ಕಾಗಿ ಬಳಗ

-ಅರುಣ್ ಜೋಳದಕೂಡ್ಲಿಗಿ

DSC_1929 ಮರಿಯಮ್ಮನಹಳ್ಳಿಯಲ್ಲಿ ನೆಲೆಸಿದ ಮಂಜಮ್ಮ ಜೋಗತಿಯು ರಾಜ್ಯೋತ್ಸವ ಪ್ರಶಸ್ತಿ ಪಡೆದ ಜೋಗತಿ ಪರಂಪರೆಯ ಕಲಾವಿದೆ. ಇದೀಗ ರಾಜ್ಯವ್ಯಾಪಿ ಯಲ್ಲಮ್ಮನ ಜೋಗತಿ ಸಂಪ್ರದಾಯವನ್ನು ವಿಸ್ತರಿಸುತ್ತಿರುವ ಮುಖ್ಯ ಕಲಾತಂಡವೇ ಮಂಜಮ್ಮನದು. ಇಂತಹ ಮಂಜಮ್ಮನ ಜೀವನದ ಕಥೆ ನೋವಿನಲ್ಲಿ ಅದ್ದಿತೆಗೆದಂತಿದೆ. ಗಂಡು ಹೆಣ್ಣಾಗಿ ರೂಪಾಂತರ ಹೊಂದಿದಾಗ ಪುರುಷಪ್ರಧಾನ ಜಗತ್ತು ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದರ ಗ್ರಾಮಜಗತ್ತಿನ ನೋಟಕ್ರಮ ಇಲ್ಲಿದೆ. ಈ ಕಥನದಲ್ಲಿ ನಮ್ಮದೇ ಸಮಾಜದ ಮತ್ತೊಂದು ಮುಖವನ್ನು ನೋಡಿ ಬೆಚ್ಚಿ ಬೀಳುವ ಅನುಭವವಾಗುತ್ತದೆ. ನನ್ನದೇ ನಿರೂಪಣೆಯ ಮಂಜಮ್ಮ ಜೋಗತಿಯ ಆತ್ಮಕತೆ ಪಲ್ಲವ ಪ್ರಕಾಶನದ ಮೂಲಕ ಪ್ರಕಟಣೆಗೆ ಸಿದ್ದಗೊಳ್ಳುತ್ತಿದೆ. ಈ ಆತ್ಮಕಥನದ ಒಂದು ಭಾಗವನ್ನು  ಓದುಗರ ಜತೆ ಹಂಚಿಕೊಳ್ಳುತ್ತಿದ್ದೇನೆ.

ಮುಖ್ಯವಾಗಿ ಲಿಂಗಾಂತರಿ ಆತ್ಮಕಥನಗಳಾದ ರೇವತಿ ಮತ್ತು ಲಿವಿಂಗ್ ಸ್ಮೈಲ್ ವಿದ್ಯಾರ ಬದುಕಿನ ಕಥನಗಳು `ಹಿಜಿಡಾ’ ಬದುಕಿನ ನಗರದ ಹಿಂಸೆಯ ಕಥನವನ್ನು ಕಟ್ಟಿಕೊಟ್ಟಿವೆ. ಆದರೆ ಮಂಜಮ್ಮನ ಬದುಕಿನ ಕಥನ ಒಂದು ಸಾಂಸ್ಕøತಿಯ ಆಯಾಮವನ್ನು ಪಡೆದಿದೆ. ಅಂತೆಯೇ ಗ್ರಾಮಜಗತ್ತು ಯಲ್ಲಮ್ಮನ ಪರಂಪರೆಯ ನೆಲೆಯಲ್ಲಿ ಜೋಗತಿಯರನ್ನು ಹೇಗೆ ನೋಡುತ್ತದೆ ಎನ್ನುವ ನೋಟಕ್ರಮ ಇಲ್ಲಿದೆ. ಅಂತೆಯೇ ದೇಸಿ ರಂಗಭೂಮಿಯ ಯಲ್ಲಮ್ಮನ ನಾಟಕದ ಪಯಣದ ಕಥೆಯೂ ಕುತೂಹಲಕಾರಿಯಾಗಿದೆ. ಅಂತೆಯೇ ವಿವಿಧ ಏರಿಳಿತಗಳನ್ನು ಕಾಣುವ ಮಂಜಮ್ಮನ ಬದುಕಿನ ಕಥನ ಓದನ್ನು ನಿಲ್ಲಿಸಿ ಬಿಕ್ಕಳಿಸುವಂತೆ ಮಾಡುತ್ತದೆ.

ಈ ಕಥನದಲ್ಲಿ ಮರಿಯಮ್ಮನಹಳ್ಳಿಯ ಮುಸ್ಲಿಂ ಹುಸೇನಪ್ಪ `ತುಪ್ಪದಕುಡುಕಿ ಜೋಗಮ್ಮ’ ನಾಗಿ ಯಲ್ಲಮ್ಮನ ಗುಡಿಯನ್ನು ಕಟ್ಟಿ, ಜೋಗತಿಯರಂತೆ ಬದುಕಿ ಸಾವನ್ನಪ್ಪಿದಾಗ ಆ ಸಾವು ತಂದೊಡ್ಡಿದ ಬಿಕ್ಕಟ್ಟನ್ನು ಮಂಜಮ್ಮ ತನ್ನದೇ ದಾಟಿಯಲ್ಲಿ ಹೇಳಿದ್ದಾರೆ. ಲಿಂಗಾಂತರವು ಧರ್ಮ ಜಾತಿಯ ನೆಲೆಯಲ್ಲಿ ಪಡೆಯುವ ಸಾಮಾಜಿಕ ರೂಪಾಂತರದ ಎಳೆಗಳು ಇಲ್ಲಿ ಕಾಣುತ್ತವೆ. ಯು.ಆರ್.ಅನಂತಮೂರ್ತಿ ಅವರ `ಸಂಸ್ಕಾರ’ ಕಾದಂಬರಿಯನ್ನು ನೆನಪಿಸುವ ಈ ಕಥನವನ್ನು ಬೇಕಾದರೆ `ಲಿಂಗಾಂತರಿ ಸಂಸ್ಕಾರ’ ಎಂದೂ ಕರೆಯಬಹುದು. ಬರಹದ ಕೊನೆಗೆ ಬಾಲ್ಯದ ಒಂದಷ್ಟು ನೆನಪುಗಳೊಂದಿಗೆ ಕಾಲಂ ಮುಕ್ತಾಯವಾಗುತ್ತದೆ. ಮುಂದಿನದನ್ನು ಕೃತಿಯಲ್ಲಿ ಓದುವ ಕುತೂಹಲವನ್ನು ಕಾಪಿಟ್ಟುಕೊಳ್ಳಬೇಕಾಗಿ ಪುಟ್ಟ ಮನವಿ.

**

tuppada kudaki jogamma (2)ಮರಿಯಮ್ಮನಹಳ್ಳಿಯಲ್ಲಿ ತುಪ್ಪದ ಕುಡುಕಿ ಜೋಗಮ್ಮ ಅಂತ ಒಬ್ರಿದ್ರು. ಅವರು ಮುಸ್ಲೀಮರು. ಆತನ ಮೊದ್ಲ ಹೆಸರು ಹುಸೇನಪ್ಪ . ಇಲ್ಲಿ ತುಪ್ಪದ ಕುಡಿಕೇರು ಅನ್ನೋ ಮುಸ್ಲೀಂ ವಂಶಸ್ತರ ನಲವತ್ತು ಮನಿ ಇದಾವ. ಆ ಮನೆತನದ ಹುಸೇನಪ್ಪ ದೇವಿ ಜಗ ಹೊತ್ತು ಜೋಗತಿ ಆಗಿದ್ರು. ಆಮ್ಯಾಲೆ ತಮ್ಮ ಮುಸ್ಲೀಮರ ಓಣ್ಯಾಗ ಯಲ್ಲಮ್ಮನ ದೇವಸ್ಥಾನ ಕಟ್ಟಿಸಿದ್ಲು. ಆ ಜೋಗತಿ ಸೀರಿ ಉಟ್ಕಂಡ್ರ, ಹಳೇಕಾಲದ ಸಿನಿಮಾ ಹೀರೋಯಿನ್ ಕಂಡಂಗ ಕಾಣ್ತಿದ್ಲು. ಮೊದಲು ಆತ ದೇವಿ ಹೊತ್ತು ಸೀರಿ ಉಟ್ಟಾಗ ಅವರ ಸಂಬಂಧಿಕರೆಲ್ಲಾ ವಿರೋಧಿಸ್ಯಾರ. ಕೈಗೆ ಸಿಕ್ಕದ್ನ ತಗಂಡು ಹೊಡದು ಚಿತ್ರ ಹಿಂಸೆ ಕೊಟ್ಟಾರ. ಸೀರಿ ಕಿತ್ತು ರಂಪಾಟ ಮಾಡ್ಯಾರ. ಆದ್ರ ಆತ ಬಾಳ ಗಟ್ಟಿ. ಎಷ್ಟು ವಿರೋಧ ಬಂದ್ರೂನು ಮೈಟ್ ಮಾಡದಂಗ ದೇವಿ ಮುತ್ತು ಕಟ್ಟಿಸ್ಕಂಡು ಸೀರಿ ಉಟ್ಕಂಡು ಜೋಗತಿ ಆಗಿದ್ದ. ನೀನು ಸತ್ರ ನಮ್ಮ ಧರ್ಮದಾಗ ನಿನ್ನ ಸೇರಿಸ್ಕಳ್ಳಲ್ಲ ಅಂತೇಳಿ, ನಡು ಮಧ್ಯೆ ಆತನ ಸೀರಿ ಬಿಚ್ಚಿಸಿ ಮತ್ತೆ ಅಂಗಿ ಪಂಜಿ ಉಡಿಸಿದ್ರು. ಆದ್ರೂನೂ ಕೈಯಾಗ ಬಳಿ ಅಕ್ಯಂಡು ದೇವರ ಕೊಡ ಹೊತ್ಕಂಡು ಊರೂರು ತಿರುಗುತಿದ್ಲು.

ಯಲ್ಲಮ್ಮನ ದೇವಸ್ಥಾನ ಕಟ್ಟೋದಕ್ಕೂ ಆಯಮ್ಮ ದೊಡ್ಡ ಪೈಪೋಟಿ ಮಾಡಿದ್ಲು. ಮುಸ್ಲಿಮ್ ಜನಗಳು ನಮ್ಮ ಓಣಿಯಾಗ ಯಾವ ಕಾರಣಕ್ಕೂ ಯಲ್ಲಮ್ಮನ ಗುಡಿ ಕಟ್ಟೋಕೆ ಬಿಡಲ್ಲ, ಅಂತ ಕೋರ್ಟಲ್ಲಿ ದಾವೆ ಹೂಡಿದ್ರು. ಆಗ ಆಯಮ್ಮ ನನ್ನ ಜಾಗ ನನ್ನ ಕತಿ, ನಾನು ಏನಾದ್ರೂ ಮಾಡಿಕಂತೀನಿ ಅಂತ ಕೋರ್ಟು ಕಛೇರಿ ಅಲದು, ಕೇಸನ್ನ ತನ್ನಕಡಿಗೆ ಮಾಡಿಕಂಡು ಎಲ್ಲರನ್ನು ಎದುರು ಅಕ್ಯಂಡು ಗುಡಿ ಕಟ್ಟಿದ್ಲು.

ಹಿಂಗೆ ಗುಡಿ ಕಟ್ಕಂಡು, ಪೂಜೆ ಗೀಜೆ ಮಾಡಿಕಂಡು, ಊರಾಡಿಕಂಡು ಜೋಗಮ್ಮರು ಹೆಂಗ ಜೀವನ ಮಾಡ್ತಾರೋ ಹಂಗ ಮಾಡಿಕಂಡಿದ್ಲು. ಕೊನಿಗೆ ಆಕಿ ಧರ್ಮದವರು ಬೇಸತ್ತು, ಆಕಿ ಇದ್ದಂಗ ಇರ್ಲಿ ಬಿಡು ಅಂತ ಅವಳ ಪಾಡಿಗೆ ಬಿಟ್ಟಿದ್ರು. ಹೀಗೆ ಇರಬೇಕಾದ್ರೆ ಅರಾಮಿಲ್ದಂಗಾಗಿ ಒಂದು ದಿನ ತೀರೋದ್ಲು. ಆಗ ಆ ಹೆಣ ಮುಟ್ಟಾಕ ಅವರ ಸಂಬಂಧಿಕರು ಯಾರ್ಯಾರು ತಯಾರಿಲ್ಲ. ಆಕಿ ಹಿಂದೂ ದೇವ್ರ ಹೊತ್ತಾಳ ನಾವು ಮುಟ್ಟಲ್ಲ ಅಂದ್ರು. ಆಗ ಹಿಂದೂಗಳು ಆಕಿ ಹಿಂದೂ ದೇವ್ರ ಹೊತ್ರೇನಾತು, ಆತ ಹುಟ್ಟಿದ್ದು ಬೆಳದದ್ದೆಲ್ಲಾ ಮುಸ್ಲೀಮಿನ್ಯಾಗ ನಾವು ಯಾರು ಮುಟ್ಟಲ್ಲ ಅಂತಂದ್ರು. ಹಿಂಗಾಗಿ ಆ ಹೆಣ ಯಾರಿಗೂ ಬೇಡದ ಅನಾಥ ಆಗ್ಯಾತಿ. ಆಗ ನಾನು ಮರಿಯಮ್ಮನಹಳ್ಳಿಯಲ್ಲಿ ಇದ್ದೆ. ಜನ ಎಲ್ರು ಜೋಗಮ್ಮರಿಗೆ ಹೇಳ್ರಿ, ಅವರೆ ದಫನ್ ಮಾಡ್ತಾರೆ ಅಂತ ಅಂದಾರ. ಆಗ ತುಪ್ಪದ ಕುಡಿಕಿ ಜೋಗಮ್ಮನ ಮನೆಯವ್ರು ನಮ್ಮತ್ರ ಬಂದ್ರು. ಜೋಗಮ್ಮ ಸತ್ತಾಳ, ಆಕೀನ ನೀವಾ ಕ್ರಮವಾಗಿ ಮಣ್ಣ ಮಾಡ್ರಿ ಅಂದ್ರು.

ಆಗ ನಾವು ಸರಿಬಿಡು, ಆಕಿ ಯಾವ ಜಾತಿ ಧರ್ಮ ಆದರೇನು ಜೋಗತಿ ಕುಲಕ್ಕ ಸೇರ್ಯಾಳ ದೇವರು ಕಟ್ಟಿದ ಮ್ಯಾಲೆ, ಯಾವ ಜಾತಿ ಆದ್ರೂನು ನಾವು ಒಂದ ತಾಯಿ ಮಕ್ಕಳು ಇದ್ದಂಗ. ಜೋಗಿ ಬಳಗ ಕಾಗಿ ಬಳಗ ಯಾವಾಗ್ಲೂ ಒಂದೇ ಅನ್ಕೊಂಡ್ವಿ.  ಕಾಗೆಗಳು ಎಲ್ಲೇ ತಿರುಗಾಡಕ್ಕೋದ್ರೂ ಎಲ್ಲವೂ ಒಂದೇ ಕಡೆ ಇದ್ದು ಜೀವನ ಸಾಗಿಸ್ತವಲ್ಲ, ಒಂದು ಅಗುಳು ಅನ್ನ ಕಂಡ್ರೂನು ಹೆಂಗ ತನ್ನ ಬಳಗಾನ ಕೂಗಿ ಕರಿತಾವೋ ಹಂಗ ನಾವು. ಹಂಗಾಗಿ ಆಕೀನ ನಾವು ಹಿಂದೂ ಧರ್ಮಭೂಮ್ಯಾಗ ಮಣ್ಣು ಮಾಡತೀವಿ ಅಂತ ನಾನು ನಮ್ಮ ಜೋಗತಿಯರ್ನೆಲ್ಲಾ ಕರಕಂಡು ಹೋದೆ.

ತುಪ್ಪದ ಕುಡಿಕಿ ಜೋಗತಿ ಸಂಬಂಧಿಕರ ನಲವತ್ತು ಮನೆಗಳು ಇದ್ವು. ಹೆಚ್ಚುಕಮ್ಮಿ ಐದಾರು ನೂರು ಜನ ಸಂಬಂಧಿಕರು ಇದಾರ. ಇಷ್ಟಿದ್ರು ಒಬ್ರು ಆಕಿ ಹೆಣಾನ ಮುಟ್ಟಾಕ ಬರ್ಲಿಲ್ಲ. ಆಕಿ ಸತ್ತ ತಕ್ಷಣ ಟ್ರಂಕು ಗಂಟು ಎಲ್ಲಾನು ಬೆದಿಕ್ಯಾಡಿ  ಬಂಗಾರ, ಹಿತ್ತಾಳಿ, ತಾಮ್ರದ ಸಾಮಾನು, ಕೂಡಿಟ್ಟ ಹಣನೆಲ್ಲಾ ತಗಂಡಾರ. ಇದೆಲ್ಲ ಆದಮ್ಯಾಲೆ ನಮ್ಮತ್ರ ಬಂದು, ಆ ಜೋಗತಿನ ನಮ್ ಧರ್ಮದ ಪ್ರಕಾರ ನಾವು ಮುಟ್ಟಂಗಿಲ್ಲ, ನೀವಾ ದಫನ್ ಮಾಡ್ರಿ ಕರ್ಚು ಕೊಡ್ತೀವಿ ಅಂದ್ರು. ನನಿಗೆ ಕೆಟ್ಟ ಅನ್ನಿಸ್ತು ಆಕಿ ಗಳಿಸಿದ ಒಡವಿ, ಬಂಗಾರ, ಬಾಂಡೇ ಸಾಮಾನು ರೊಕ್ಕಕ್ಕ ಧರ್ಮ ಇಲ್ಲ, ಗಂಡು ಹೆಣ್ಣೆಂಬ ಭೇದ ಇಲ್ಲ, ಅವುನ್ನೆಲ್ಲಾ ಮುಟ್ಟಿ ತಗಂಡಾರ, ಎಂಗೈತಿ ನೋಡು ಆಕಿ ಜೋಗತಿ ಆಗಿ ಯಲ್ಲಮ್ಮನ್ನ ಹೊತ್ತು ಭಿಕ್ಷೆಬೇಡಿ ಮಾಡಿಸಿದ ಬೆಳ್ಳಿ ಬಂಗಾರ ರೊಕ್ಕಾ ಎಲ್ಲಾನು ಮುಟ್ತಾರ ಆದ್ರ ಆಕಿನ್ನ ಮುಟ್ಟಾಕ ಮಾತ್ರ ಧರ್ಮ ಅಡ್ಡಬಂದಾತಿ.  ಜೋಗತಿಯಾಗಿ ಸತ್ತಿದ್ದು ದೊಡ್ಡ ಸಮಸ್ಯೆ ಆಗ್ಯಾತಿ. ಹೆಣದ ಹತ್ರ ಹೋದ ನಮಿಗೂ ಅಳು ಬರಾಕತ್ತಿತ್ತು, ನಮ್ಮ ಹೆಣಗಳೂ ಹಿಂಗ ಎಲ್ಲಿ ಅನಾಥ ಅಕ್ಕಾವೋ ಅಂತ.

ಆಗ ನಾವು ಇರೋರೆ ಏಳೆಂಟು ಜನ ಜೋಗತಿಯರು. ಹೆಣ ಹೊತ್ತಕಂಡು ಹೋಗಾಕ ಆಗಲ್ಲ ಅಂತೇಳಿ, ಒಂದು ದೆಬ್ಬ ಬಂಡಿ ತರಿಸಿದ್ರಾತು ಅಂತ ಮಾತಾಡಿಕಂಡ್ವಿ. ಊರಲ್ಲಿದ್ದ ಒಂದು ದೆಬ್ಬಬಂಡಿಗೆ ಹೇಳಿದ್ವಿ. ಹೆಣನ ಮೈತೊಳಿಸಿ ಜೋಗತಿ ಸಂಪ್ರದಾಯದ ಪ್ರಕಾರ ಪೂಜಿಗೀಜಿ ಮಾಡಿ ನಾವು ಶವ ಊಣೋಕೆ ಅಂತ ತಯಾರಿ ಮಾಡಿಕೊಳ್ಳೋ ಹೊತ್ತಿಗೆ, ಹಿಂದೂ ಮಂದೆಲ್ಲಾ ಸೇರಿ `ಮುಸಲ್ಮಾನರ ಹೆಣ ತಂದು ನಮ್ಮ ಜನದ ಕಾಡಿನ್ಯಾಗ ಹೆಂಗ ಮಣ್ಣ ಮಾಡತಿ ನೀನು’ ಅಂತ ನನ್ನನ್ನ ಹಿರೇರು ಕೇಳಿದ್ರು. ಅವ್ರು ತಮ್ಮ ಹೊಟ್ಯಾಗ ಹುಟ್ಟಿದ ಮಗನ್ನೆ, ಅವರ ರುದ್ರಭೂಮ್ಯಾಗೆ ಊಣವಲ್ರು ನೀನು ಹೆಂಗ ನಮ್ಮ ಭೂಮ್ಯಾಗ ಊಣುತಿ ಅಂದು ಅಡ್ಡ ತರುಬಿದ್ರು.

ಇದನ್ನ ಕೇಳಿ, ನನಿಗೆ ಕೈ ಕಾಲು ತರ ತರ ಅಂತ ನಡುಗಾಕತ್ಯಾವ. ನಾವ್ ಬೇರೆ ಮಣ್ಣ ಮಾಡ್ತೀವಿ ಅಂತ ಒಪ್ಪಿಕ್ಯಂಡು ಬಿಟ್ಟೀವಿ. ಇವ್ರು ನೋಡಿದ್ರ ಬಿಡವಲ್ರು. ಏನು ಮಾಡಾಕು ಅನ್ನಾದೆ ದಿಕ್ಕು ತೋಚದಂಗ ಆತು. ಆ ಹೆಣನಾ ಎಲ್ಲಿ ಇಟ್ಟು ಬರಾಕು? ದೊಡ್ಡ ಸಮಸ್ಯೆ ಬಂತು. ಆಗ ನಾನು ಜನರ ಹತ್ರ ಮಾತಾಡಿದೆ. ಯಾಕ ಮಾಡಬಾರ್ದು? ಆಕಿ ನಮ್ಮ ಹಿಂದೂ ದೇವ್ರ ಆರಾಧಕಳು. ಹಿಂದೂ ದೇವ್ರನ್ನ ಪೂಜಿಸಿದಾಕಿ, ನಮ್ಮ ದೇವಿನ ಕೊಳ್ಳಾಗ ಕಟ್ಟಿಕಂಡಾಳ, ಯಲ್ಲಮ್ಮನ ದೇವ್ರ ಗುಡಿ ಕಟ್ಟಿಸ್ಯಾಳ. ಆಗ ಎಲ್ಲೋಗಿತ್ತು ನಿಮ್ಮ ಧರ್ಮ?  ಆವಾಗ ನೀವ್ಯಾಕ ನೀ ಹಿಂದು ದೇವ್ರನ್ನ ಪೂಜಿಸ್ಬೇಡವ್ವಾ, ನಮ್ಮ ದೇವ್ರಿಗೆ ಸರಿಬರಲ್ಲ ಅಂತ ಕೇಳಲಿಲ್ಲ? ಈಗ ಸತ್ತಾಗ ಹೆಂಗ ಆಕಿನ ಊಣಬ್ಯಾಡ್ರಿ ಅಂತೀರಿ ಅಂದೆ.

ಹಠಕ್ಕೆ ಬಿದ್ದೋರ ತರ, ನೀವೇನರಾ ಅನ್ರಿ ನಾನು ಹಿಂದೂ ಕಾಡಿನ್ಯಾಗ ಊಣಾದು ಅಂದೆ. ಆಗ ಅದಕ್ಕ ಬಾಳ ವಿರೋಧ ಬಂತು. ಇದನ್ನ ನೋಡಿ ನಾನು `ನೋಡ್ರಪ್ಪಾ ನೀವು ಹಿಂದೂ ಮಸಣದಾಗ ಊಣಬ್ಯಾಡ ಅಂತೀರಿ, ಅವ್ರು ಮುಸಲೀಮ ಮಸಣದಾಗ ಊಣ ಬ್ಯಾಡ ಅಂತಾರ, ಅಂಗಾರ ಈ ಹೆಣ ತಗಂಡು ನಾ ಏನು ಮಾಡ್ಲಿ? ಹೆಣಾನ ತಂದು ಬಸ್ ಸ್ಟ್ಯಾಂಡಿನ್ಯಾಗ ಇಡ್ತೀನಿ ನೀವೇನಾದ್ರೂ ಮಾಡ್ಕಳ್ರಿ ಅಂದು ಮನಿಗೆ ಬಂದೆ. ನಮಿಗೇನು ಬಸ್ ಸ್ಟ್ಯಾಂಡಿನಾಗ ಇಟ್ರ ಮುನಿಸಿಪಾಲ್ಟ್ಯಾರು ತಗಂಡೋಗಿ ಎಲ್ಲಿಗಾದ್ರೂ ಹಾಕ್ಲಿ ಅಂದೆ. ಇಷ್ಟೆಲ್ಲಾ ಜಗಳ, ರಿಸ್ಕ್ ಆಗಿದ್ದು ನೋಡಿ ನಾವೆಲ್ಲಾ ಮನಿಗೆ ಬಂದ್ವಿ.

ಊರಿನ ಯಜಮಾನ್ರೆಲ್ಲಾ ಸೇರಿ, ಆಕಿ ಹಿಂದೂ ದೇವ್ರನ್ನಾ ಹೊತ್ತಾಳ, ಗುಡಿ ಕಟ್ಟಿಸ್ಯಾಳ ಆಕಿನ ಹಿಂದೂ ರುದ್ರಭೂಮ್ಯಾಗ ಊಣಿದ್ರಾತು ಅಂತ ತೀರ್ಮಾನ ಮಾಡಿದ್ರಂತೆ.  ಆಗ ಅವರೆ ನಮ್ಮನ್ನ ಕರೀಯಾಕ ಬಂದ್ರು. ನಾವು ಬಂಡಿಗೆ ಹೇಳಿದ್ವೆಲ್ಲಾ, ಆ ಬಂಡಿನ ಊರವರೆ ಕ್ಯಾನ್ಸಲ್ ಮಾಡಿಸಿದ್ರು. ಬ್ಯಾಂಡ್ ತರಿಸಿ, ಸಿದಿಗಿ ಕಟ್ಟಿ ಪಟಾಕಿ ಹೊಡ್ಕಂಡು, ಮಂಡಾಳು ಚೆಲ್ಲಿಕಂಡು, ಹಿಂದೂ ಜನಾನೆ ಹೊತ್ಕಂಡು ನೂರಾರು ಜನ ಸೇರಿ ಆಯಮ್ಮನ ಶವಾನ ತಗಂಡೋಗಿ ಊಣಿ ಬಂದ್ವಿ. ಜೋಗಮ್ಮನೆ ಯಲ್ಲಮ್ಮನ ಫೋಟೋದ ಹಿಂದೆ ಹತ್ತು ಸಾವಿರ ಇಟ್ಟಿದ್ರಂತೆ ಅದನ್ನೆ ಸಂಸ್ಕಾರದ ಖರ್ಚಿಗೆ ಬಳಸಿದ್ವಿ.

ಆಮೇಲೆ ಮೂರು ದಿನದ ಕಾರ್ಯ, ಒಂಬತ್ತು ದಿನದ ಕಾರ್ಯ ಎಲ್ಲಾನೂ ಜೋಗತಿ ಸಂಪ್ರದಾಯದಂತೆ ನಾವೇ ಮಾಡಿಕಂಡ್ವಿ. ಅವರ ಸಂಬಂಧಿಕರು ಬಂದು ನಮ್ಮ ಧರ್ಮದಾಗ ಹಿಂದೂ ದೇವರು ಇರಬಾರ್ದು, ಅಂತ ನಮ್ಮನ್ನ ಕರ್ಕಂಡು ಹೋಗಿ ಆಯಮ್ಮನ ದೇವರ ಸಾಮಾನು, ದೇವಿ ಮೂರ್ತಿ ಎಲ್ಲಾನು ನಮಿಗೆ ಕೊಟ್ಟು, ದೇವಿ ಗುಡಿನ ಅವರ ಬಳಕೆಗೆ ಬಳಸಿಕೊಂಡ್ರು. ಇತ್ತೀಚಿಗೆ ಒಂದು ಸುದ್ದಿ ಕೇಳಿದೆ, ಪಟ್ಟಣ ಪಂಚಾಯಿತಿಯವರು ಅದೇ ಜಾಗದಾಗ ಯಲ್ಲಮ್ಮನ್ನ ಗುಡಿ ಕಟ್ಟಬೇಕಂತ ಮಾಡ್ಯಾರಂತೆ.

ಇಷ್ಟೆಲ್ಲಾ ಆದ್ರೂನು ನಾವು ಊಣಿ ಬಂದಾದಮೇಲೆ, ಅವರ ಸಂಬಂಧಿಕರು ಕಾಡಿಗೆ ಹೋಗಿ, ಆಕಿ ಗುದ್ದಿನ ಮ್ಯಾಲೆ ಸಮಾಧಿ ಕಟ್ಟಿಸ್ಯಾರ. ಸಮಾಧಿ ಮ್ಯಾಲ ಹುಸೇನಪ್ಪ ಅಂತ ಹೆಸರನ್ನ ಕೆತ್ತಿಸಿ ಕಲ್ಲು ಹಾಕಿ ಬಂದಾರ. ಸತ್ತು ದೇಹ ಕೊಳತ್ರೂನು ಅವರ ಮನಸ್ಸು ಜೋಗಮ್ಮ ಅಂತ ಒಪ್ಪಿಕೊಳ್ಳಂಗಿಲ್ಲ. ಈಗ ದಿವಸದ ದಿನ ಮುಸ್ಲೀಮರ ತರ ಎಲ್ಲಾ ಆಚರಣೆ ಮಾಡಿಕಂತ್ಯಾರ. ನೋಡು, ಸತ್ತ ಹೆಣದ ಮ್ಯಾಲ ಇಲ್ಲದ ಪ್ರೀತಿನ ಈಗ ಆಕಿ ಸಮಾಧಿಗೆ ತೋರಿಸ್ತಾರ, ಎಂಥಾ ಜಗತ್ತೋ..ಇದು.

ಆಯಮ್ಮ ಸತ್ತು ಎರಡು ವರ್ಷಕ್ಕ ಇಂತದ್ದೇ ಇನ್ನೊಂದು ಘಟನೆ ನಡೀತು. ಡಾಣಾಯಕನ ಕೆರೆಯ ಮುಸಲ್ಮಾನರ ಇಮಾಮ ಅಲಿ ಅನ್ನೋನು ಜೋಗತಿ ಆಗಿದ್ದ. ನಾವು ಆಕೀನ ವಿಶಾಲ ಅಂತ ಕರೀತಿದ್ವಿ.   ಆಕಿನೂ ಬಾಳ ಚೆಂದ ಇದ್ಲು. ಹೆಣ್ಣಮಕ್ಕಳನ್ನ ನೀವಳ್ಸಿ ತೆಗಿಯಂಗಿದ್ಲು. ಅವಳು ನಮ್ಮ ಜತೆ ಬರ್ತಾ ಇದ್ರೆ ಗಂಡಸರು ಕದ್ದು ನೋಡ್ತಿದ್ರು. ಅಷ್ಟಾಗಿ ಚೆಂದ ಇರದ ನಮ್ಮ ಕೆಲವು ಜೋಗತಿಯರಿಗೆ ಹೊಟ್ಟೆಕಿಚ್ಚೂ ಆಗ್ತಿತ್ತು. ಆಯಮ್ಮ ಯಾವಾಗ್ಲೂ ನಮ್ಮ ಜತೆ ಬರ್ತಿದ್ಲು. ಮುಸ್ಲಿಂ ಹಬ್ಬಗಳಲ್ಲಿ ಮಾತ್ರ ಹಣೆಗೆ ಬಂಡಾರ, ಕುಂಕುಮ ಹಚ್ಚತಾ ಇರ್ಲಿಲ್ಲ. ಆಗ ಮುಸಲ್ಮಾನರ ಹೆಣ್ಣಮಗಳ ಹಾಗೆ ವೇಷ ಹಾಕ್ತಿದ್ಲು. ನೋಡಿದವರಿಗೆ ಮುಸ್ಲೀಂ ಹೆಣ್ಣಮಗಳು ಅನ್ನೋವಂಗ ಕಾಣ್ತಿದ್ಲು. ಆಗ ಜೋಗತಿ ಗುರುತು ಸಿಗದಂಗೆ ಮುಚ್ಚುಮರೆ ಮಾಡಿಕೊಂಡಿರ್ತಿದ್ಲು. ಹಂಗಿದ್ರೂ ನಮಾಜು ಗಿಮಾಜಿಗೆ ಹೋಗ್ತಿರ್ಲಿಲ್ಲ. ಅಂದ್ರೆ ನಮಾಜಿಗೆ ಬಿಟ್ಟುಕೊಳ್ತಿರಲಿಲ್ಲ ಅನ್ಸುತ್ತೆ. ಈ ಬಗ್ಗೆ ನಮ್ಮತ್ರ ಅವಳು ಹೇಳಿರಲಿಲ್ಲ. ಆಕಿ ಸತ್ತಾಗ ಆದ ಘಟನೆ ನೆನಪಿಸ್ಕಂಡ್ರ, ಯಾವ ಜಾತಿ ಆದ್ರೇನು ಜೋಗತಿ ಮಾತ್ರ ಆಗಬಾರದು ಅನ್ನಿಸಿಬಿಡ್ತಿತ್ತು. ಈಗಲೂ ಈ ಘಟನೆ ನೆಪ್ಪಾದ್ರೆ ಕರುಳು ಕಿತ್ತು ಬರುತ್ತೆ. ಅಂತದ್ದೊಂದು ವಿಚಿತ್ರ ಘಟನೆ ನಡೀತು.

ಅವ್ರು ಅಣ್ಣ ತಮ್ಮ ಇಬ್ರಿದ್ರು. ಮೊದ್ಲು ಅವರೆಲ್ಲಾ ಚೆನ್ನಾಗೆ ಇದ್ರು. ಆಕೀನು ದುಡದದ್ದನ್ನೆಲ್ಲಾ ತಗಂಡೋಗಿ ಮನಿಗೆ ಕೊಡ್ತಿದ್ಲು. ಆಕಿ ದೇವರು ಹೊತ್ತು, ಅದೇ ದೇವಿ ಹೆಸರಲ್ಲಿ ಊರಾಡಿದ ಅಕ್ಕಿ ಜೋಳ ರೊಕ್ಕ ಎಲ್ಲಾನು ಅವರ ಮನಿಯಲ್ಲಿ ಬಳಸಿಕಳ್ತಿದ್ರು, ಕೊನಿಗೆ ಆಕಿದೂ ತುಪ್ಪದ ಕುಡಿಕಿ ಜೋಗಮ್ಮನ ಗತಿನೇ ಆಯ್ತು. ಆಕಿ ಸತ್ತಾಗ ಆಕಿ ತಮ್ಮನು ಕೂಡ ಮುಟ್ಟಲಿಲ್ಲ. ನಾನು ಮುಟ್ಟಿದ್ರ, ನಮ್ ಧರ್ಮದವ್ರು ನನ್ನ ಹೊರಾಗ ಇಡ್ತಾರ ಅಂತೇಳಿ ಡಾಣಾಯಕನ ಕೆರೆಯಿಂದ ಮರಿಯಮ್ಮನಳ್ಳಿಗೆ ಸೈಕಲ್ಲು ಅಕ್ಯಂಡು ಬಂದು ನಮಿಗೆ ಹೇಳಿದ.

ಆಗ್ಲೂ ನಾವು ಜೋಗ್ತೆರೆಲ್ಲಾ ಹೋದ್ವಿ. ಅಲ್ಲಿನೂ ಹಿಂದೂ ಜನ ನಮ್ಮ ರುದ್ರಭೂಮ್ಯಾಗ ಮಣ್ಣ ಮಾಡಂಗಿಲ್ಲ ಅಂತ ಎದುರಾದ್ರು. ಅಲ್ಲಿ ಆ ಊರಿನ ಯಜಮಾನ್ರು ನಮಿಗೆ ಪರಿಚಯ ಇರಲಿಲ್ಲ. ಅಲ್ಲಿ ಇಬ್ರು ದೇವದಾಸಿಯರಿದ್ರು, ಒಬ್ಬಾಕಿ ಹರಿಜನದವಳು ಮತ್ತೊಬ್ಬಾಕಿ ಬೇಡರ ಜಾತಿಯವ್ಳು. ಇವ್ರಿಬ್ರು ಹುಲಿಗೆಮ್ಮ ದೇವಿಗೆ ನಡಕಳ್ತಿದ್ರು. ಅವರಿಬ್ರೂ ಸ್ವಲ್ಪ ಗಟ್ಟಿ ಹೆಣಮಕ್ಳು. ಗಂಡು ಮಕ್ಳ ಎದುರು ನಿಂತು ಬಾಯಿ ಮಾಡಾಕ ಹಿಂದು ಮುಂದು ನೋಡ್ತಿರ್ಲಿಲ್ಲ. `ಅದೆಂಗ ನಮ್ಮ ಕಾಡಿನ್ಯಾಗ ಇಡಬ್ಯಾಡ ಅಂತೀರಿ? ಮನಿಯವ್ರು ಇಟ್ಕಳ್ಳಲ್ಲ ಅಂತಾರ, ನೀವು ಇಟ್ಕಳ್ಳಲ್ಲ ಅಂತೀರಿ, ಹಂಗಾರ ಬಯಲಿಗೆ ಬಿಸಾಕಿ ಬರಾಣೇನು..ನಾಯಿ ನರಿ ಪಾಲು ಆಗ್ಲೇನು? ನೀವ್ಯಾರು ನಮ್ಮ ಕಾಡಿನ್ಯಾಗ ಇಟ್ಕಳ್ಳಲ್ಲ ಅಂದ್ರ ನಮ್ಮ ಹೊಲದಾಗ ಇಟ್ಕಂತಿವಿ ಬಿಡು’ ಅಂದ್ರು.

ಊರ ಮುಂದೆ ಜನಾ ಅಂದ್ರ ಜನ. ನಾನು ಮರಿಯಮ್ಮನಳ್ಳಿಯಾಗ ಮುಸಲೀಮ ಜೋಗತೀನ ಹಿಂದೂ ಭೂಮ್ಯಾಗ ಮಣ್ಣು ಮಾಡೀನಿ ಅಂದ್ರೂನು ಕೇಳವಲ್ರು. ಜನ ಒಬ್ಬೊಬ್ರು ಒಂದೊಂದು ರೀತಿ ಬಾಯಿಗೆ ಬಂದಂಗೆ ಮಾತಾಡ್ತಿದ್ರು. `ನೋಡು ಮಂಜಮ್ಮ ನೀವು ಮರೆಮ್ಮನಳ್ಳಿಯಾಗ ಮಾಡಿದ್ದೀರಿ, ಇದು ಡಣಾಯಕನಕೇರಿ, ನಮ್ಮ ಊರಾಗ ಮಾಡಂಗಿಲ್ಲ. ಹಂಗ ಮಾಡಿದ್ರ ನಮ್ಮ ಊರಿಗೆ ಒಳ್ಳೇದಾಗಲ್ಲ ಅಂದ್ರು. ಮರೆಮ್ಮನಳ್ಳಿ ಪ್ಯಾಟಿ ಆದಂಗ ಅಕ್ಕಾತಿ, ಅದು ಮುಚ್ಚಿಕಂಡು ಹೊಕ್ಕಾತಿ. ನಮ್ಮದು ಹಳ್ಳಿ ಊರಕ್ಕಾತಿ ನಾವು ಊಣಾಕ ಬಿಡಲ್ಲ ಅಂತ ಪಟ್ಟು ಹಿಡದ್ರು.

ಆಗ ಇಬ್ರು ಹುಲಿಗೆಮ್ಮಾರ ಜಗಳ ಶುರು ಆಯ್ತು. ನಮ್ಮ ಹೊಲದಾಗ ಇಡ್ರಿ ಅಂತ ಒಬ್ಬಾಕಿ, ನಮ್ಮ ಹೊಲದಾಗ ಊಣ್ರಿ ಅಂತ ಒಬ್ಬಾಕಿ. ಅವ್ರು ಇಬ್ರ ಕಚ್ಚಾಡಕತ್ತಿದ್ರು. ಇದನ್ನ ನೋಡಿ ಊರ ಯಜಮಾನ್ರೆಲ್ಲಾ ಮಾತಾಡಿ ಕೊನಿಗೆ ಹಿಂದೂ ಭೂಮ್ಯಾಗ ಊಣಾಕ ಒಪ್ಪಿಕಂಡ್ರು. ಆಗ ನಾವೆ ಶವಸಂಸ್ಕಾರ, ದಿವಸ ಎಲ್ಲಾನು ಕ್ರಮವಾಗಿ ಮಾಡಿಕಂಡ್ವಿ. ಆದ್ರ ಅವರ ತಮ್ಮ ಆಕಿ ಹತ್ರ ಎಷ್ಟು ತಿಂದಾನೋ ಏನೋ ಆದ್ರ ಒಂದು ರೂಪಾಯಿನು ಕೊಡ್ಲಿಲ್ಲ. ನಾವೆ ಎಲ್ಲಾ ಹಂಚಿಕಿ ಹಾಕ್ಯಂಡು ಮಾಡಿದ್ವಿ.

ಹಿಂಗ ಒಬ್ಬೊಬ್ಬ ಗಂಡು ಜೋಗತಿಯರ ಹಿಂದೆನೂ ಲೆಕ್ಕ ಇಲ್ಲದಷ್ಟು ನೋವಿನ ಕತಿ ಐದಾವ. `ಆನೆ ಬದುಕಿದ್ರೂ ಸಾವಿರ, ಸತ್ರೂ ಸಾವಿರ’ ಅನ್ನೋ ಗಾದೆ ಮಾತೈತಿ. ಅದನ್ನೆ ನಮ್ಮ ಜೋಗತಿಯರ ಜೀವನದ ಬಗ್ಗೆ ಹೇಳೋದಾದ್ರ..`ಜೋಗತಿಯರು ಬದುಕಿದ್ರೂ ಕಷ್ಟ, ಸತ್ರೂನು ಕಷ್ಟ’ ಅನ್ನಬಹುದು.ಜೋಗ್ತೇರು ಸತ್ರನೆ ಇಷ್ಟು ಕಷ್ಟ ಐತಿ, ಇನ್ನು ಬದುಕಿದವರ ಪಾಡಂತೂ ಹೇಳಂಗಿಲ್ಲ. ನನ್ನ ಕತೀನು ಬಾಳ ಐತಿ. ಹೇಳಾಕ ಕುಂತ್ರ ದುಃಖ ತಡಿಯಾಕ ಅಗಲ್ಲ. ಬಳ ಬಳಾಂತ ಕಣ್ಣೀರು ಬರ್ತಾವ.

**
ನಾನು ಎಷ್ಟನೆ ಮಗನೋ ಗೊತ್ತಿಲ್ಲ..
ನಮ್ಮ ಸ್ವಂತ ಊರು ಕಲ್ಕಂಬ. ಜಿಲ್ಲೆ ತಾಲೂಕು ಬಳ್ಳಾರಿನೆ. ನಮ್ಮ ತಂದೇರು ಕಂಪ್ಲೀ ಪ್ಯಾಕ್ಟರಿಯಲ್ಲಿ ಕೆಲ್ಸ ಮಾಡ್ತಿದ್ರು. ಅಲ್ಲಿಂದ ಹೋಗಿ ಹರಿಹರ ಬಿರ್ಲಾ ಪ್ಯಾಕ್ಟರಿಗೆ ಸೇರಿಕಂಡ್ರು. ಅಯ್ಯನ ಹೆಸರು ಬಿ.ಹನುಮಂತಯ್ಯ ಶೆಟ್ಟಿ ತಾಯಿ  ಜಯಲಕ್ಷ್ಮಿ. ಅವರಿಗೆ ನಾವು ಎಲ್ಲಾ ಸೇರಿ ಒಟ್ಟು ಇಪ್ಪತ್ತೊಂದು ಜನ ಮಕ್ಕಳು. ಅದರಲ್ಲಿ ಈಗ ಇರೋದು ನಾಲ್ಕು ಜನ. ನಾನು ಎಷ್ಟನೇ ಮಗನೋ ನನಗೆ ಗೊತ್ತಿಲ್ಲ, ನಮ್ಮಮ್ಮನಿಗೆ ಗೊತ್ತು. ಒಟ್ಟು ಈಗ ಇರೋದ್ರಲ್ಲಿ ನಾನು ಎರಡ್ನೆಯವನು. ನಾವು ಐದು ಜನ ಇದ್ವಿ ನಮ್ಮ ತಮ್ಮ ಒಬ್ಬ ತೀರಿಕೊಂಡ. ಈಗ ಇರೋದು ನಮ್ಮಣ್ಣ ನಾನು ಇಬ್ಬರು ತಂಗೇರು.

mohini bhasmasura natakadalli-manjamma jogatiನಾನು ಹುಟ್ಟಿದ ಕತಿ ಒಂದೈತಿ. ನಾನು ಹುಟ್ಟಿರೋದು ಕಂಪ್ಲಿಯಾಗ. ಅಲ್ಲಿ ತೆಗ್ಗಿನ ಮಠ ಅಂತ ಐತಿ, ಆವಾಗ ಹುಲಿ ಹೈದರದಲ್ಲಿ ಇರೋ ನನ್ನ ದೊಡ್ಡಮ್ಮ ಆ ದಿನ  ಕಂಪ್ಲಿಗೆ ಬಂದಿದ್ರಂತೆ. ಆಗ ನಮ್ಮಪ್ಪ ಕಂಪ್ಲಿ ಪ್ಯಾಕ್ಟ್ರಿಲಿ ಕೆಲಸ ಮಾಡ್ತಿದ್ರು. ಆ ಹೊತ್ತಿನ್ಯಾಗ ನಾನು ನಮ್ಮಮ್ಮನ ಹೊಟ್ಯಾಗ ಇದ್ದೆ. ಅವತ್ತೇನೊ ಗಾಳಿ ಮೋಡ ಜಾಸ್ತಿ ಆಗಿತ್ತಂತೆ, ಗುಡುಗು ಸಿಡಿಲಿನ ಅರ್ಭಟ ಇತ್ತಂತೆ. ಇದಕ್ಕೆ ಹೆದರಿ ನಮ್ಮ ದೊಡ್ಡಮ್ಮ ನಮ್ಮ ಮನಿಯಾಗ ಉಳಿದಿದ್ರು. ದೊಡ್ಡಮ್ಮ ಹೆಂಗಂದ್ರ, ನಮ್ಮಪ್ಪರು  ಆರು ಜನ, ಅದರಲ್ಲಿ ಎಲ್ಲರಿಕಿನ್ನ ದೊಡ್ಡೋರ ಹೆಂಡ್ತಿ, ನಮ್ಮ ದೊಡ್ಡಪ್ಪ ಅವರನ್ನ ಬಿಟ್ಟಿದ್ರು, ಹಂಗಾಗಿ ಆಯಮ್ಮ ಹುಲಿಹೈದರ್‍ನಲ್ಲಿ ಹೋಟಲ್ ಇಟ್ಕಂಡಿದ್ರು. ಅವರು ನಮ್ಮ ರಿಲೇಷನ್ಸ್ ಮನೆಗಳಿಗೆ ಬರ್ತಾ ಇರ್ಲಿಲ್ಲ. ಆಯಮ್ಮ ಬಂದಾರ ಅಂತ ಗೊತ್ತಾದ್ರೆ ನಮ್ಮ ದೊಡ್ಡಪ್ಪ ನಮ್ಮ ಮನಿಗಳಿಗೆ  ಕಾಲು ಇಡ್ತಿರ್ಲಿಲ್ಲ. ದೊಡ್ಡಪ್ಪನಿಗೆ ದೊಡ್ಡಮ್ಮನ ಮೇಲೆ ಇಷ್ಟೊಂದು ವಿಪರೀತ ಸಿಟ್ಟಿತ್ತು. ಅದ್ಯಾಕೋ ನನಗೆ ಆಗ ತಿಳಿತಿರ್ಲಿಲ್ಲ.

ನಮ್ಮಯ್ಯ ಅತ್ತಿಗೆ  ಅಂತ ಪ್ರೀತಿ ಜಾಸ್ತಿ ಇಟ್ಕಂಡಿತ್ತು. ಗೌರವ ಕೊಡ್ತಿತ್ತು. ಹಿಂಗಾಗಿ ಕಂಪ್ಲಿಗೆ ಬಂದಾಗ ದೊಡ್ಡಮ್ಮ ನಮ್ಮ ಮನೆಗೆ ಬಂದು ಹೋಗೋದು ಮಾಡ್ತಿದ್ರು. ಅದರಂತೆ ಕಾಮನ್ನಾಗಿ ಅವತ್ತು ನಮ್ಮ ಮನಿಗೆ ಬಂದಾರ. ಅವತ್ತು ನಮ್ಮ ಅಮ್ಮಂಗೆ ಹೆರಿಗೆ ನೋವು ಕಾಣಿಸಿಕೊಂಡಾತಿ, ಅಮ್ಮನಿಗೆ ನನ್ನ ಅಣ್ಣನ ಹಿಂದೆ ಮೂರು ಮಕ್ಳು ಸತ್ತಿದ್ವಂತೆ. ಹಂಗಾಗಿ ಶಾಸ್ತ್ರ ಕೇಳಿಸಿದಾಗ, ಈಗ ಹುಟ್ಟೋ ಮಗುನಾ ಬೇರೆಯವ್ರ ಉಡಿಯಲ್ಲಿ ಹಾಕಿ, ನಾಕಾಣೆ ಎಂಟಾಣೆ ಇಸ್ಕಂಡ್ರ ಮಗು ದಕ್ಕುತ್ತೆ ಅಂತ ಹೇಳಿದ್ರಂತೆ. ಅವತ್ತೆ ಅಕಸ್ಮಾತಾಗಿ ನಮ್ಮ ದೊಡ್ಡಮ್ಮ ಮನಿಗೆ ಬಂದಿದೆ, ಆ ದಿನವೇ ಅಮ್ಮಗೆ ಹೆರಿಗೆ ಆಗಿದೆ. ಆಗ ಅಯ್ಯ ಯೋಚನೆ ಮಾಡಿ ಹೆಂಗೋ ಅತ್ತಿಗೆ ಇದೇ ಸಮಯಕ್ಕ ಮನಿಗೆ ಬಂದಾರ, ಶಾಸ್ತ್ರ ಹೇಳಿದಂಗೆ ಅತ್ತಿಗೆ ಉಡಿಯಾಗ ಮಗೂನ ಹಾಕಿದ್ರಾತು ಅಂತಂತೆ. ಇದು ನಮ್ಮಮ್ಮಗ ಇಷ್ಟ ಇಲ್ಲ. ಯಾಕಂದ್ರ ದೊಡ್ಡಮ್ಮ ಮಕ್ಕಳು ಇಲ್ಲದೆ ಬಂಜೆ ಅನ್ನಿಸ್ಕಂಡಿದ್ರು. ಅದುಕ್ಕ ಬಂಜೆ ಹುಡಿಯಾಗ ಮಗೂನ ಹಾಕೋದು ಹೆಂಗೆ? ಮಗು ಬದುಕುತ್ತೊ ಇಲ್ಲೊ ಅನ್ನೋ ಚಿಂತೆ ಅಮ್ಮನಿಗಿತ್ತಂತೆ.

ಆದ್ರೆ ಬೇರೆಯವರ ಉಡಿಗೆ ಹಾಕಿದ್ರೆ ಅತ್ತಿಗೆ ಮನಸ್ಸಿಗೆ ನೋವಾಗುತ್ತೆ ಅಂತೇಳಿ, ಈ ಕೂಸು ಸತ್ರೆ ಸಾಯಲಿ, ಬದುಕಿದ್ರೆ ಬದುಕಲಿ, ಕರ್ರಗ ಹೆಗ್ಣ ಇದ್ದಂಗೈತಿ ಅಂತ ಅತ್ತಿಗಿ ಉಡಿಯಾಗ ಆಕ್ಯಾರ. ಬದುಕಿದ್ರ ನೀನಾ ಸಾಕ್ಯವಂತೆ ಅಂದಾಗ ಉಡಿಯಲ್ಲಿ ಹಾಕಿಸ್ಕಂಡು ಶಾಸ್ತ್ರದಂತೆ ಅತ್ತಿಗೆ ಐದು ರೂಪಾಯಿ ಕೊಟ್ಟಾರ. ಈ ಪ್ರೀತಿ ನನ್ನ ದೊಡ್ಡಮ್ಮಗ ನನ್ನ ಮೇಲೆ ಯಾವಾಗ್ಲೂ ಇತ್ತು. ನನ್ನ ಮಗ ಅಂತಾನೆ ಕರೀತಿದ್ರು. ನಾನು ಆರನೆ ಕ್ಲಾಸು ಓದಬೇಕಾದ್ರೆ, ನಾನು ಹೋಗಿ ಸ್ವಲ್ಪ ದಿನ ಅವ್ರತ್ರಾನೆ ಇದ್ದೆ. ಆದರೆ ಯಾಕೋ ನನಿಗೆ ಸರಿ ಬರಲಿಲ್ಲ. ಹಂಗಾಗಿ ನಾನು ವಾಪಸ್ ಅಯ್ಯ ಅಮ್ಮನತ್ರನೆ ಬಂದೆ. ನಾನು ಜೋಗಮ್ಮ ಆದ ಮೇಲೆನೂ ನನ್ನ ಕರಕಂಡು ಹೋಗಿ, ರಾಟಿ ಕಲಿ, ಇಲ್ಲೆ ಇರು, ನನಗೂ ಆಸರೆ ಆಗುತ್ತೆ ಅಂತದ್ರು. ಆಗ್ಲೂ ನಾನು ಒಂದೆರಡು ತಿಂಗಳು ಇದ್ದು ವಾಪಸ್ ದಾವಣಗೆರೆಗೆ ಬಂದಿದ್ದೆ.

ನಮ್ಮಯ್ಯ ಬಿರ್ಲಾ ಪ್ಯಾಕ್ಟರಿಯಾಗ ಕೆಲ್ಸ ಮಾಡ್ತಾ ಇದ್ರು. ಅದನ್ನ ಹೊಸಪೇಟೆ ಬಿರ್ಲಾ ಪ್ಯಾಕ್ಟರಿ ಅಂತ ಕರೀತಿದ್ರು. ನಾವು ಆಗ ಚಿಕ್ಕಚಿಕ್ಕ ಮಕ್ಕಳು. ಪ್ಯಾಕ್ಟರಿಯಿಂದ ಸ್ವಲ್ಪ ದೂರÀ ಹೊಳೆದಂಡೆಗೆ ನಮ್ಮ ಮನೆ ಇತ್ತು. ಅದು ತುಂಗಭದ್ರಾ ನದಿ. ನಾನು ಚಿಕ್ಕ ಹುಡುಗ ಇದ್ದಾಗ ಹಳ್ಳದಿಂದ ಕಲ್ಲುಗಳನ್ನು ಹೊತ್ಕೊಂಡು ಬಂದು, ನನಗೆ ಬೇರೆ ಮನೆ ಮಾಡಿಕೊಡ್ರಿ ಅಂತ ಕೇಳ್ತಿದ್ನಂತೆ. ಹೊಳಿ ನಮ್ಮ ಮನೆಗಳಿಗೆ ಹತ್ರ ಇದ್ದಿದ್ರಿಂದ, ನಮ್ಮಮ್ಮ ಬಟ್ಟೆ ಹೊಗೆಯೋಕೆ ನಮ್ಮನ್ನ ಕರ್ಕೊಂಡು ಹೋಗ್ತಿದ್ರು. ನಮ್ಮನಿಯಾಗ ಸಣ್ಣದೊಂದು ಹಿತ್ತಾಳಿ ಗುಂಡಾಲು ಇತ್ತು. ಆ ಗುಂಡಾಲಿನ್ಯಾಗ ನೀರು ತಗೊಂಡು ಬರೋದು.. ಆ ಗುಂಡಾಲ್ನ ತಲೆ ಮೇಲೆ ಇಟ್ಕಂಡು ನೀರು ತರೋದು. ಕಲ್ಲುಗಳನ್ನೆಲ್ಲಾ ತಂದು ಸೈಡಿಗಾಕಾದು. ನನಗೆ ಮನೆ ಬ್ಯಾರೆ ಮಾಡಿಕೊಡ್ರಿ, ನಾವು ಹುಡುಗ್ರೆಲ್ಲಾ ಬೇರೆ ಇರ್ತೀವಿ ಅಂತ ಹಠ ಮಾಡೋದು ಇವನ್ನೆಲ್ಲಾ ಮಾಡ್ತಿದ್ದೆ.

ಹರಿಹರದಲ್ಲೇ ನನ್ನ ಸ್ಕೂಲಿಗೆ ಸೇರಿಸಿದ್ರು. ತಗ್ಗಿನ ಪ್ರದೇಶದಲ್ಲಿ ನಮ್ಮ ಮನೆಗಳಿದ್ವು. ಒಂದ್ಸಲ ಅಚಾನಕ್ ಮೇಲಿನ ಮನೆಗಳಿಗೆ ಬೆಂಕಿ ಬಿತ್ತು. ಅವತ್ತೆ ನಾನು ನಮ್ಮ ಮನೇಲಿ ಫುಲ್ ನೀರು ತುಂಬಿಸಿಟ್ಟಿದ್ದೆ, ಒಂದು ಲೋಟ ಸಹ ಬಿಟ್ಟಿರ್ಲಿಲ್ಲ. ಆಗ ನಮ್ಮಮ್ಮಂಗೆ  ಹೆರಿಗೆಯಾಗಿತ್ತು. (ತಂಗಿ ಯಶೋಧಗೆ). ಆವಾಗ್ಲೆ ನಮ್ಮ ಮನೆ ಬೆಕ್ಕು (ಈದಿತ್ತು) ಮರಿ ಹಾಕಿತ್ತು. ಬೆಂಕಿ ಬಿದ್ದ ಭಯದಲ್ಲಿ ನಮ್ಮಮ್ಮ ತನ್ನ ಕೂಸು ಬಿಟ್ಟು, ಬೆಕ್ಕಿನ ಮರಿಗಳ ಪುಟ್ಟಿ ತೊಗೊಂಡು ಕೆಳಗಿನ ದಿಬ್ಬದಲ್ಲಿರೋ ಮುಸ್ಲೀಮ್ಸ್ ಮನೇಲಿ ಇಟ್ಟು ಬಂದ್ಲು. ತನ್ನ ಕೂಸು ಬಿಟ್ಟು ಬೆಕ್ಕು ಸತ್ತೋಗ್ಬಿಡ್ತಾವ ಅಂತ ನನ್ನಮ್ಮ ಹೆದರಿಬಿಟ್ಟಿದ್ಲು. ಬೆಕ್ಕಿನ ಮರಿಗಳ್ನ ಜೋಪಾನ ಮಾಡಿದ ಮೇಲೆ, ತನ್ನ ಕೂಸನ್ನ ಹೊರಗೆ ತಗೊಂಡು ಬಂದಿದ್ಲು. ಅಕ್ಕಪಕ್ಕದ ಮನೆಯವರು, ಇದೆಂತ ಹೆಣ್ಣಮಗಳೋ..ಬೆಂಕಿ ಬಿದ್ದಾತಿ..ಕೂಸು ಬಿಟ್ಟು ಬೆಕ್ಕಿನ ಮರಿ ತಗೊಂಡೋಯ್ತಲ್ಲ ಅಂತ ಬೈದಿದ್ರು.

ಕಾಮನ ಹಬ್ಬದಾಗ ಅಮ್ಮ ನನಗೆ ಕಾಮನ ತರ ಡ್ರಸ್ ಮಾಡ್ತಿತ್ತು. ಬಿಳಿ ದೋತ್ರ ಅಂಗಿ ಹಾಕ್ಸಿ, ಜುಟ್ಟುಕಟ್ಟಿ ಹೂವಾ ಮುಡಿಸಿ, ತಾನೇ ಮಾಡಿದ ಕಲ್ಲಂಗಿಡಿ, ಕರುಬೂಜದ ಬೀಜದ ಪೆÇಪ್ಪಿನ ಹಾರ ಹಾಕ್ತಿದ್ಲು. ಮುಂಬತ್ತಿನ ಸುಟ್ಟು ನೀರೋಳಗ ಹನಿ ಹನಿ ಉದುರ್ಸಿ ಮತ್ತೆ ಅವನ್ನೆಲ್ಲಾ ಕಡಿಗೆ ತಗದು, ಅದರಾಗ ಸೂಜಿ ದಾರ ಪೆÇೀಣಿಸಿ ಏನೆಲ್ಲಾ ಮಾಡ್ತಿತ್ತು. ಆಗ ನಮ್ಮಮ್ಮ ನನ್ನ ಮಗನ್ನ ಕಾಮನ್ನ ಮಾಡೀನಿ.. ಕಾಮನ್ನ ಮಾಡೀನಿ ಅಂತ ಕೈ ಹಿಡಕಂಡು ಊರಲ್ಲೆಲ್ಲಾ ಸುತ್ತಾಡಿಸ್ತಿದ್ಲು.. ಸ್ಕೂಲಿಗೆ ಸೇರಿಸ್ಬೇಕಾದ್ರೂ ಹಂಗೆ ಕಾಯಿ ಊದಿನಕಡ್ಡಿ.. ಎಲ್ಲ ಪೂಜೆ ಸಾಮಾನು ತಗೊಂಡು ಹೋಗಿ, ಕೃಷ್ಣನ ವೇಷ ಹಾಕಿಸಿ, ಸರಸ್ವತಿ ಪೂಜೆ ಮಾಡಿಸಿ.. ಸ್ಕೂಲು ಮಕ್ಳು ಎಲ್ರುನ್ನು ಸೇರಿಸಿ..ಪಳಾರ ಹಂಚಿ, ಸ್ಕೂಲಲ್ಲಿ ಬಿಟ್ಟು ಬಂದಿದ್ರು. ಅದು ಸ್ವಲ್ಪ ನೆನಪಿದೆ.

Leave a Reply

Your email address will not be published.