ಜೇಟ್ಲಿ ಕ್ಲೀನ್ ಬೋಲ್ಡ್ – ಬಟ್ ನಾಟೌಟ್!!

-ದೊಡ್ಡಿಪಾಳ್ಯ ನರಸಿಂಹಮೂರ್ತಿ

jaitley-1ಅರುಣ್ ಜೈಟ್ಲಿಯವರು ಸದಾಕಾಲ ತಾವು ಮಹಾ ಚಾರಿತ್ರ್ಯವಂತರು ಎಂಬ ಹಮ್ಮಿನಿಂದಲೇ ವ್ಯವಹರಿಸುತ್ತಿದ್ದರು. ಈ ಹಿಂದೆ ಯಾವುದೇ ಹಗರಣಗಳಲ್ಲಿ ಜೈಟ್ಲಿ ಹೆಸರು ಕೇಳಿಬರದಿದ್ದುದು (ಭಾಗಿಯಾಗಿಲ್ಲ ಎಂದರ್ಥವಲ್ಲ; ಸಿಕ್ಕಿಹಾಕಿಕೊಂಡಿರಲಿಲ್ಲ ಎಂದರ್ಥದಲ್ಲಿ) ಇವರ ದಾಷ್ಟ್ರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಮಾಧ್ಯಮ ನಿರ್ವಹಣೆಯ ಕಲೆ ಚನ್ನಾಗಿ ಕರಗತವಾಗಿದ್ದುದರಿಂದ ಇವರು ಒಂದು ದಶಕಕ್ಕೂ ಹೆಚ್ಚು ಕಾಲ ಮಾಧ್ಯಮಗಳಲ್ಲಿ ಮಿಂಚಿದ್ದೇ ಮಿಂಚಿದ್ದು.

ಹೀಗಿದ್ದ ಜೈಟ್ಲಿ ಕೊರಳಿಗೆ ಹಗರಣವೊಂದು ಸುತ್ತಿಕೊಂಡಿದೆ. ಸಾಕ್ಷಾತ್ ಪ್ರಧಾನಿ ಮೋದಿ ಮತ್ತು ಇಡೀ ಕೇಂದ್ರ ಸರ್ಕಾರ ಜೈಟ್ಲಿ ಬೆನ್ನ ಹಿಂದೆ ನಿಂತಿದ್ದರೂ ಕೂಡ ಜೈಟ್ಲಿ ಗಂಡಾಂತರದಿಂದ ಪಾರಾಗಿದ್ದಾರೆ ಎಂದು ಹೇಳಿಲಿಕ್ಕಾಗದು. ಯಾಕೆಂದರೆ ಈ ಹಗರಣದ ಒಳಸುಳಿಗಳು ಅಷ್ಟು ಜಟಿಲವಾಗಿವೆ.

ಹಿನ್ನೆಲೆ:
ಡಿಡಿಸಿಎ (ಡೆಲ್ಲಿ & ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಷಿಯೇಷನ್) ಎಂಬ ಕ್ರಿಕೆಟ್ ಸಂಸ್ಥೆಯೊಂದಿದೆ. ಸಾಮಾನ್ಯವಾಗಿ ಈ ಕ್ರಿಕೆಟ್ ಸಂಸ್ಥೆಗಳಿಗೂ ಹಗರಣಗಳಿಗೂ ಭಾರೀ ನಂಟು. ಹಾಗಾಗಿಯೇ ಈ ಕ್ರಿಕೆಟ್ ಸಂಸ್ಥೆಗಳ ಆಯಕಟ್ಟಿನ ಹುದ್ದೆಗೆ ಭಾರೀ ಪೈಪೋಟಿ ಇರುತ್ತದೆ. ಕ್ರಿಕೆಟ್‍ನ ಸುತ್ತ ಹರಿಯುವ ಝಣಝಣ ಕಾಂಚಾಣದ ಮಹಿಮೆಯೇ ಅಂಥಾದ್ದು. ನಮ್ಮ ಕೇಂದ್ರ ಸರ್ಕಾರದ ಹಣಕಾಸು ಸಚಿವ ಮಾನ್ಯ ಅರುಣ್ ಜೈಟ್ಲಿಯವರು ಕೂಡ 1999 ರಿಂದ 2013ರವರೆಗೆ ಸುದೀರ್ಘಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಅವರು ಕ್ರಿಕೆಟ್ ಸಂಸ್ಥೆಗೆ ಅಧ್ಯಕ್ಷರಾಗಿದ್ದಿದ್ದು ಕೇವಲ ‘ಕ್ರೀಡಾ ಪ್ರೇಮ’ ಮತ್ತು ಕ್ರೀಡೆಗೆ ‘ಸೇವೆ’ ಸಲ್ಲಿಸುವ ಕಾರಣಕ್ಕಾಗಿ ಮಾತ್ರ ಎಂದು ನಾವೆಲ್ಲಾ ನಂಬಬೇಕೆಂದು ಜೈಟ್ಲಿ ಮತ್ತು ಬಿಜೆಪಿ ಕೂಟದ ಆಗ್ರಹ. ಆದರೆ ಅಗೆದಂತೆಲ್ಲಾ ಮತ್ತಷ್ಟು ಕೊಳಕು ಹೊರಬಿದ್ದು ಡಿಡಿಸಿಎ ಮತ್ತು ಜೈಟ್ಲಿ ಸಂಬಂಧ ಒಂದು ದೊಡ್ಡ ತಿಪ್ಪೆಗುಂಡಿಯಂತಾಗಿದೆ. ಜೈಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರಗಳು ನಡೆದಿವೆ ಎಂಬುದು ಈಗಿನ ವಿವಾದದ ಕೇಂದ್ರ ಬಿಂದು.
ಡಿಡಿಸಿಎ ಗೆ ಸಂಬಂಧಿಸಿದ ಕೆಲವು ವಾಸ್ತವಾಂಶಗಳನ್ನು ಪರಿಶೀಲಿಸೋಣ.

ಇತರೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗಿಂತ ಭಿನ್ನವಾಗಿ ಡಿಡಿಸಿಎ, ಕಂಪನಿ ಕಾಯ್ದೆಯಡಿ ರಿಜಿಸ್ಟರ್ ಆಗಿರುವ ಖಾಸಗಿ ಸಂಸ್ಥೆಯಾಗಿದೆ. ಇದರಲ್ಲಿ ಒಟ್ಟು 4,600 ಮಂದಿ ಸದಸ್ಯರಿದ್ದು ಅವರಲ್ಲಿ ಸುಮಾರು 300 ಮಂದಿ ಕಾರ್ಪೊರೇಟ್ ಸದಸ್ಯರು.

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತಾನು ಒಳಪಡುವುದಿಲ್ಲ ಎಂದು ಡಿಡಿಸಿಎ ಉದ್ದಕ್ಕೂ ಪ್ರತಿಪಾದಿಸುತ್ತಾ ಬಂದಿದೆ. ಹೀಗಾಗಿ ಸಂಸ್ಥೆಯ ಆಂತರಿಕ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಬೇಕಾದ ಅಗತ್ಯವಿಲ್ಲ ಎಂಬುದು ಅದರ ವಾದ. ಆದರೆ ಈ ಕ್ರಿಕೆಟ್ ಸಂಸ್ಥೆ ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದು ಆರ್‍ಟಿಐ ವ್ಯಾಪ್ತಿಗೆ ಒಳಪಡುತ್ತದೆ ಎಂದು ತನಿಖಾ ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ. ಬಚ್ಚಿಡುವಂಥ ವ್ಯವಹಾರಗಳು ಏನೂ ಇಲ್ಲದಿದ್ದ ಮೇಲೆ ಡಿಡಿಸಿಎ ಸಂಸ್ಥೆ ಮಾಹಿತಿಗಳನ್ನು ಯಾಕೆ ಮುಚ್ಚಿಡುತ್ತಿದೆ ಎಂಬುದು ಅಷ್ಟು ಅರ್ಥವಾಗದ ರಹಸ್ಯವೇನಲ್ಲ ಬಿಡಿ.

ಅಂದಹಾಗೆ ಈ ಹಗರಣ ಹೊರ ಬಂದಿದ್ದು ಈಗ ಫೋಕಸ್‍ನಲ್ಲಿರುವ ದೆಹಲಿಯ ಎಎಪಿ ಸರ್ಕಾರ ಅಥವ ಅದರ ಸಿಎಂ ಕೇಜ್ರಿವಾಲ್‍ರಿಂದ ಅಲ್ಲ. ಇದು ಹೊರಬಂದಿದ್ದು ಕೀರ್ತಿ ಆಜಾದ್ ಎಂಬ ಮಾಜಿ ಕ್ರಿಕೆಟಿಗರೊಬ್ಬರಿಂದ; ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಿಹಾರ ರಾಜ್ಯದ ದರ್ಬಾಂಗ್ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿರುವ ಸಂಸದ ಎಂಬುದು ಇನ್ನಷ್ಟು ಕುತೂಹಲಕಾರಿ ಸಂಗತಿ. ಡಿಡಿಸಿಎಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಹಾಗೂ ಅರುಣ್ ಜೈಟ್ಲಿ ಪಾತ್ರದ ಬಗ್ಗೆ ಸುಮಾರು ಒಂದು ದಶಕ ಕಾಲದಿಂದಲೂ ಕೀರ್ತಿ ಆಜಾದ್ ಅವರು ಪದೇ ಪದೇ ಪ್ರಶ್ನೆ ಎತ್ತುತ್ತಾ ಬಂದಿದ್ದಾರೆ.

kಕೀರ್ತಿ ಆಜಾದ್ ಅವರ ನಿರಂತರ ಪ್ರಯತ್ನದ ಫಲವಾಗಿ ಡಿಡಿಸಿಎ ತನಿಖೆಯನ್ನು ಎಸ್‍ಎಫ್‍ಐಒ (ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆರ್ಗನೈಸೇಷನ್) ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಸಂಸ್ಥೆ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ. ವಿಪರ್ಯಾಸವೆಂದರೆ ಈ ಇಲಾಖೆಯನ್ನು ಹಣಕಾಸು ಸಚಿವಾಲಯದಡಿ ವಿಲೀನಗೊಳಿಸಿರುವುದರಿಂದ ಸದ್ಯ ಈ ತನಿಖಾ ಸಂಸ್ಥೆ ಮಾನ್ಯ ಜೇಟ್ಲಿಯವರ ಮುಷ್ಠಿಯಲ್ಲೇ ಇದೆ. ಇದು ಆಶ್ಚರ್ಯವೆನಿಸಿದರೂ ಇದೇ ವಾಸ್ತವ. ಹಣಕಾಸು ದುರ್ಬಳಕೆ, ತೆರಿಗೆ ವಂಚನೆ, ಟೆಂಡರ್ ನಿಯಮಾವಳಿಗಳ ಉಲ್ಲಂಘನೆ, ಕಳಂಕಿತ ಆಡಿಟರ್‍ಗಳ ನೇಮಕ, ಸದಸ್ಯತ್ವ ನಿರ್ವಹಣೆಯಲ್ಲಿ ಅಕ್ರಮಗಳು, ಟಿಕೆಟ್ ವಿತರಣೆಯಲ್ಲಿ ಭ್ರಷ್ಟಾಚಾರ ಹೀಗೆ ಆ ಪಟ್ಟಿಯಲ್ಲಿ ಹಲವು ಗಂಭೀರ ಅಂಶಗಳಿವೆ.
ಎಸ್‍ಎಫ್‍ಐಒ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇವಾಗಿರುವಂತೆ ಇಷ್ಟೆಲ್ಲಾ ಅಕ್ರಮಗಳ ಬಗ್ಗೆ ಪದೇ ಪದೇ ದೂರುಗಳು ಬಂದಾಗ್ಯೂ ಅವುಗಳನ್ನು ತಡೆಗಟ್ಟಲು ಸಾಸಿವೆ ಕಾಳಿನಷ್ಟು ಪ್ರಯತ್ನವನ್ನೂ ಮಾಡಲಾಗಿಲ್ಲ. ಅಂದಹಾಗೆ ಇದನ್ನೆಲ್ಲಾ ಮಾಡಬೇಕಿದ್ದುದ್ದು ಮಾನ್ಯ ಜೇಟ್ಲಿಯವರೆ. ಉಣ್ಣೋ ತಟ್ಟೆಯನ್ನೇ ಬಿಸಾಕಲು ಅವರಿಗೆ ಹೇಗೆ ಮನಸ್ಸು ಬಂದೀತು?

ಈ ಅಕ್ರಮಗಳಲ್ಲಿ ಪ್ರಮುಖವಾದುದು ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಸಂಬಂಧಿಸಿದ್ದು.
• ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಭೂಮಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ಕ್ಕೆ ಸೇರಿದ್ದು ಅದನ್ನು ಗುತ್ತಿಗೆ ಆಧಾರದಲ್ಲಿ ಡಿಡಿಸಿಎ ಸಂಸ್ಥೆಗೆ ನೀಡಲಾಗಿತ್ತು. ಆಶ್ಚರ್ಯವೆಂದರೆ ಈ ಗುತ್ತಿಗೆ ಕರಾರು 2002ಕ್ಕೆ ಮುಕ್ತಾಯಗೊಂಡಿದ್ದು, ಕಳೆದ 13 ವರ್ಷಗಳಿಂದ ಡಿಡಿಸಿಎ ಎಂಬ ಖಾಸಗಿ ಸಂಸ್ಥೆ ಈ ಭೂಮಿಯನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಈ ಬಗ್ಗೆ ಡಿಡಿಎ ಈವರೆಗೂ ಬಾಯೇ ಬಿಚ್ಚಿಲ್ಲ ಎಂಬುದಕ್ಕೆ ಅಕ್ರಮ ಒಳ ಒಪ್ಪಂದಗಳನ್ನು ಬಿಟ್ಟರೆ ಸ್ಯಕ್ಕೆ ಬೇರೆ ಯಾವ ಕಾರಣಗಳೂ ಕಂಡು ಬರುತ್ತಿಲ್ಲ.
• ತಾನು ಅಕ್ರಮವಾಗಿ ಸ್ವಾಧಿನದಲ್ಲಿರಿಸಿಕೊಂಡಿರುವ ಭೂಮಿಯ ಮೇಲೆ ಯಾವುದೇ ಅಧಿಕಾರ ಇಲ್ಲದಿದ್ದಾಗ್ಯೂ ಡಿಡಿಸಿಎ ಕಳೆದ ಐದಾರು ವರ್ಷಗಳಲ್ಲಿ ಸುಮಾರು 500 ಕೋಟಿಗಳನ್ನು ಕಟ್ಟಡ ನಿರ್ಮಾಣ ಮತ್ತು ನವೀಕರಣ ಕಾಮಗಾರಿಗಳಿಗಾಗಿ ವೆಚ್ಚ ಮಾಡಿದೆ. ಅಂದರೆ ಪ್ರತಿ ವರ್ಷ ಸರಾಸರಿ 100 ಕೊಟಿಗಳು! ಈ ದಾಷ್ಟ್ರ್ಯ ಮತ್ತು ಧೈರ್ಯ ಡಿಡಿಸಿಎಯನ್ನು ನಿಯಂತ್ರಿಸುತ್ತಿರುವ ಕಾರ್ಪೊರೇಟ್ ಮಂದಿಗೆ ಎಲ್ಲಿಂದ ಬಂದಿದೆ? ಯಾವುದೇ ಸರಕಾರ ಬಂದರೂ ಅವರೆಲ್ಲ ತಮ್ಮ ಕಿಸೆಯಲ್ಲಿರುತ್ತಾರೆ ಎಂಬ ಧೈರ್ಯ ತಾನೇ? ಹಾಗಾದರೆ ಪ್ರಜಾತಂತ್ರದ, ಸಂವಿಧಾನದ ಕತೆಯೇನು?

ನಮ್ಮ ಪ್ರಜಾತಂತ್ರದಲ್ಲಿ ಕೆಲವರು ಹೆಚ್ಚು ಸಮಾನರು ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಅಷ್ಟೆ.
• 13 ಸ್ಥಳಗಳಲ್ಲಿ ಅಕ್ರಮ, ಕಾನೂನು ಬಾಹಿರ ಕಟ್ಟಡಗಳನ್ನು ನಿರ್ಮಿಸಿರುವುದಾಗಿ ಸ್ಥಳ ತನಿಖೆಯಿಂದ ಬಹಿರಂಗವಾಗಿದೆ.
• ಹಲವಾರು ಸಂದರ್ಭಗಳಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು, ಅಧಿಕೃತ ಒಪ್ಪಿಗೆಯಿಲ್ಲದೆ ನಗದು ರೂಪದಲ್ಲಿ ಸಂದಾಯ ಮಾಡಲಾಗಿರುವುದನ್ನು ಆಡಿಟಿಂಗ್ ವರದಿಯಲ್ಲಿ ಪತ್ತೆಯಾಗಿದೆ.
• ವಿಧಾನ್ ಇನ್ಫ್ರಾಸ್ಟ್ರಕ್ಚರ್, ಶ್ರೀರಾಮ್ ಟ್ರೇಡ್‍ಕಾಂ ಮತ್ತು ಮ್ಯಾಪಲ್ ಇನ್‍ಫ್ರಾ ರಿಯಾಲಿಟಿ ಎಂಬ ಕಂಪನಿಗಳಿಗೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳದಿದ್ದಗ್ಯೂ ಮುಂಗಡ ಹಣ ಪಾವತಿ ಮಾಡಲಾಗಿದೆ.
• ಪ್ರತಿವರ್ಷ ಡಿಡಿಸಿಎ ಸರಾಸರಿ 30 ಕೋಟಿ ರೂಪಾಯಿಗಳನ್ನು ಕ್ರಿಕೆಟ್ ಉತ್ತೇಜನದ ಹೆಸರಿನಲ್ಲಿ ಪಡೆದುಕೊಳ್ಳುತ್ತಿದ್ದು, ಅದರ ವೆಚ್ಚದ ಬಗ್ಗೆ ಸರಿಯಾದ ದಾಖಲೆಗಳನ್ನು ನಿರ್ವಹಿಸಿಲ್ಲ.
ಹೀಗೆ ತಾನು ಪಟ್ಟಿ ಮಾಡಿರುವ 23 ಅಂಶಗಳ ಅಕ್ರಮಗಳ ಪಟ್ಟಿಯನ್ನು ಎಸ್‍ಎಫ್‍ಐಒ ಸೂಕ್ತ ತನಿಖೆಗೆ ಒಳಪಡಿಸುತ್ತದೆಯೇ? ತಮ್ಮದೇ ಇಲಾಖೆಯ ಪ್ರಭಾವಿ ಮಂತ್ರಿಯ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತದೆಯೆ? ಎಂಬುದನ್ನು ಊಹಿಸಿಕೊಳ್ಳುವುದು ಅಂಥಾ ಕಷ್ಟವೇನಲ್ಲ.

ಇತ್ತೀಚೆಗೆ ಡಿಡಿಸಿಎ ಭ್ರಷ್ಠಾಚಾರದ ಹೋರಾಟಕ್ಕೆ ಈ ಕೀರ್ತಿ ಆಜಾದ್ ಜೊತೆಗೆ ಬಿಶನ್ ಸಿಂಗ್ ಬೇಡಿ ಎಂಬ ಮತ್ತೊಬ್ಬ ಕ್ರೀಡಾಪಟುವೂ ಸೇರಿಕೊಂಡಿರುವುದರಿಂದ ಜೇಟ್ಲಿ ವಿರುದ್ಧದ ದನಿ ಗಟ್ಟಿಗೊಂಡಿದೆ. ಈ ಇಬ್ಬರೂ ಸೇರಿ ಇದುವರೆಗೆ ವಿವಿಧ ಸಂದರ್ಭಗಳಲ್ಲಿ ಸುಮಾರು 200 ಪತ್ರಗಳನ್ನು ಬರೆದಿದ್ದಾರೆ.
ಈ ಪತ್ರಗಳಲ್ಲಿರುವುದೆಲ್ಲಾ ಇಷ್ಟೆ; ಡಿಡಿಸಿಎ ನಲ್ಲಿ ನಡೆಯುತ್ತಿರುವ ಅಕ್ರಮಗಳ ವಿವರಣೆ ಹಾಗೂ ಅವುಗಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಮಾತ್ರ. ಈ ಬಹುಪಾಲು ಪತ್ರಗಳನ್ನು ಅವರು ಮಾನ್ಯ ಜೇಟ್ಲಿಯವರಿಗೆ ಡಿಡಿಸಿಎ ಅಂದಿನ ಅಧ್ಯಕ್ಷರಾಗಿದ್ದ ಅವಧಿಯಲ್ಲೂ, ಸಚಿವರಾಗಿರುವ ಅವಧಿಯಲ್ಲೂ ಬರೆದಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ಮೋದಿಗೂ ಹಲವು ಪತ್ರ ಬರೆದಿದ್ದಾರೆ. ಕೆಲವೊಮ್ಮೆ ಪತ್ರಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ. ಆದರೆ ಜೇಟ್ಲಿಯಾಗಲಿ, ಭ್ರಷ್ಟಾಚಾರದ ವಿರುದ್ಧ ಟಿವಿ ಪೇಪರ್‍ಗಳಲ್ಲಿ ಭಾರೀ ಪೋಸು ಕೊಟ್ಟ ಮೋದಿಯಾಗಲಿ ಈ ಕೂಗನ್ನು ಕನಿಷ್ಟ ಪಕ್ಷ ಕೇಳಿಸಿಕೊಳ್ಳುವ ಗೋಜಿಗೂ ಹೋಗಲಿಲ್ಲ. ಹೇಗಿದ್ದರೂ ಅವರ ನಿಘಂಟಿನಲ್ಲಿ ಕಾಂಗ್ರೆಸ್ ಅಥವ ಇತರೆ ಪಕ್ಷಗಳು ಮಾಡಿದ ಭ್ರಷ್ಟಾಚಾರಗಳು ಮಾತ್ರ ಭ್ರಷ್ಟಾಚಾರ ಎನಿಸಿಕೊಳ್ಳುತ್ತವೆ; ತಮ್ಮ ಪಕ್ಷದವರೇ ಮಾಡುವ ಭ್ರಷ್ಟಾಚಾರಗಳಿಗೆ ‘ವಿರೋಧ ಪಕ್ಷಗಳ ಅಪಪ್ರಚಾರ’ವೆಂಬ ವಿಶೇಷ ಅರ್ಥವನ್ನು ಈಗಾಗಲೇ ಜಾರಿ ಮಾಡಲಾಗಿದೆ.

ಬಿಜೆಪಿ ಪಕ್ಷದವರ ನಡೆಯಲ್ಲಿ ಅಂಥಾ ಆಶ್ಚರ್ಯವಾದುದೇನೂ ಇಲ್ಲ ಬಿಡಿ. ಆದರೆ ಈ ಮಾಧ್ಯಮಗಳಿಗೆ ಕನಿಷ್ಟ ಮಾನ ಮರ್ಯಾದೆಯಾದರೂ ಬೇಡವೆ? ಆಡಳಿತ ಪಕ್ಷದ ಸಂಸದರೊಬ್ಬರು ಪ್ರಮುಖ ಸಚಿವರ ಬಗ್ಗೆ ಭ್ರಷ್ಟಾಚಾರದ ಗಂಭೀರ ಆರೋಪ ಮಾಡುತ್ತಿದ್ದರೂ, ಆ ಬಗ್ಗೆ ಬಹಿರಂಗ ಪತ್ರ ಬರೆಯುತ್ತಿದ್ದರೂ ಅವೆಲ್ಲವನ್ನೂ ನಮ್ಮ ಮಾಧ್ಯಮಗಳು ಕುಂಡೆ ಕೆಳಗೆ ಹಾಕಿ ಕೂತಿದ್ದು ಮಾತ್ರ ಅಕ್ಷಮ್ಯ ಅಪರಾಧ. ಡಿಡಿಸಿಎ ದಲ್ಲಿ ತೊಡಗಿಕೊಂಡಿರುವ ಕಾರ್ಪೊರೇಟ್ ಕುಳಗಳಿಗೂ ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವ ಕುಳಗಳಿಗೂ ನಡುವಿನ ಬಾಂಧವ್ಯಗಳ ಬೆಸುಗೆಯೇ ಅಂಥಾದ್ದು.

ಕೇಜ್ರಿವಾಲ್ ಎಂಟ್ರಿ
ಕೀರ್ತಿ ಆಜಾದ್ ಅವರ ಹೋರಾಟ ಈ ಹಂತದಲ್ಲಿದ್ದಾಗ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಡಿಡಿಸಿಎ ಸಂಸ್ಥೆ ಹಾಗೂ ಕ್ರಿಕೆಟ್ ಮೈದಾನ ಇತ್ಯಾದಿ ಸ್ವತ್ತುಗಳು ದೆಹಲಿ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತವೆಯಾದ್ದರಿಂದ ಈ ಬಗ್ಗೆ ಎಎಪಿ ಸರ್ಕಾರ ತನಿಖೆ ಕೈಗೊಂಡಿದೆ. ಅದಕ್ಕಾಗಿ ಒಂದು ತನಿಖಾ ಆಯೋಗವನ್ನು ನೇಮಿಸಿದೆ. ಸದರಿ ತನಿಖಾ ಆಯೋಗ ತನ್ನ ವರದಿಯನ್ನು ಕೊಟ್ಟಿದ್ದೂ ಆಗಿದೆ.
ಹೀಗೆ ದಿನಗಳು ಕಳೆದಂತೆಲ್ಲಾ ಕ್ರಮೇಣ ತನ್ನ ಕೊರಳಿಗೆ ಉರುಳಾಗುತ್ತಿರುವ ಕೇಜ್ರಿವಾಲ್ ಸರ್ಕಾರವನ್ನು ಬೆದರಿಸಿ, ಮಟ್ಟ ಹಾಕಲು ಜೇಟ್ಲಿ ಮತ್ತು ಮೋದಿ ಸರ್ಕಾರ ಏನೆಲ್ಲ ಕಸರತ್ತು ನಡೆಸುತ್ತಿದೆ. ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ರೈಡು ಮಾಡಿಸಿದರು; ಉಹೂಂ, ಕೇಜ್ರಿವಾಲ್ ಜಗ್ಗಲಿಲ್ಲ. ಜೇಟ್ಲಿ ಅಕ್ರಮಗಳ ವಿರುದ್ಧ ತನಿಖೆ ನಡೆಸಿಯೇ ಸಿದ್ಧ ಎಂದು ಘಂಟಾಘೋಷವಾಗಿ ಘೋಷಿಸಿಬಿಟ್ಟರು. ಜೇಟ್ಲಿಗೆ ಮುಖ ಉಳಿಸಿಕೊಳ್ಳಲು ಗತ್ಯಂತರ ಇಲ್ಲದಂತಾಗಿ ಈಗ ಮಾನನಷ್ಟ ಮೊಕದ್ದಮೆ ಹೂಡುವ ತಂತ್ರ ಬಳಸಿದ್ದಾರೆ.

ಇತ್ತ ಕೇಜ್ರಿವಾಲ್ ಮತ್ತಿತರರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಂತೆ ಮತ್ತೊಂದು ನಾಟಕೀಯ ಬೆಳವಣಿಗೆ ನಡೆಯಿತು. ಈ ಮೊದಲಿನಿಂದಲೂ ಜೇಟ್ಲಿ ಅಕ್ರಮಗಳ ವಿರುದ್ಧ ಸಮರ ಸಾರಿದ್ದ ಕೀರ್ತಿ ಆಜಾದ್ ಪತ್ರಿಕಾ ಗೋಷ್ಠಿ ನಡೆಸಿ, ತನ್ನ ಮೇಲೆಯೂ ಮಾನನಷ್ಟ ಮೊಕದ್ದಮೆ ಹಾಕುವಂತೆ ಬಹಿರಂಗವಾಗಿ ಸವಾಲು ಹಾಕಿದರು. ಈ ಎಲ್ಲ ಪರಿಣಾಮಗಳಿಂದಾಗಿ ದಿಕ್ಕೇ ತೋಚದಂತಾದ ಮೋದಿ ಪಟಾಲಂ ಸದ್ಯಕ್ಕೆ ಕೀರ್ತಿ ಆಜಾದ್‍ರನ್ನು ಬಿಜೆಪಿಯಿಂದ ಅಮಾನತ್ತು ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

ಆದರೆ ಇದು ಬಾಣಲೆಯಿಂದ ಬೆಂಕಿಗೆ ಹಾರಿದಂತಾಗಿದೆ. ಇದೇ ಸಂದರ್ಭವನ್ನು ಕಾಯುತ್ತಿದ್ದಂತೆ ಬಿಜೆಪಿಯ ಮತ್ತೊಬ್ಬ ಮುಖಂಡ ಶತೃಘ್ನ ಸಿನ್ಹಾ ಬಿಜೆಪಿ ನಾಯಕತ್ವದ ವಿರುದ್ಧ ಹರಿಹಾಯ್ದಿದಾರೆ. ಬಿಜೆಪಿಯ ಮಾರ್ಗದರ್ಶಕ ಮಂಡಳಿಯಲ್ಲಿರುವ ಅಡ್ವಾಣಿ, ಜೋಷಿ ಮುಂತಾದ ಹಿರಿಯರು ಬಹಿರಂಗವಾಗಿ ಆಜಾದ್ ಪರ ಬ್ಯಾಟಿಂಗ್‍ಗೆ ಇಳಿದಿದ್ದಾರೆ. ಇದು ಬಿಜೆಪಿಯಲ್ಲಿರುವ ಭೀನ್ನಮತೀಯ ಬಣಗಳ ಕಚ್ಚಾಟವನ್ನು ಮತ್ತಷ್ಟು ಹೆಚ್ಚಿಸಿದೆ.

ಮೋದಿ ಮತ್ತು ಅವರ ಪಟಾಲಂ ಮುಖ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದಂತೂ ನಿಚ್ಚಳ. ಇದರ ಭಾಗವಾಗಿ ಬಿಜೆಪಿ ವಕ್ತಾರರು “ಅರುಣ್ ಜೈಟ್ಲಿಯವರಿಗೆ ಕ್ಲೀನ್ ಚಿಟ್” ಎಂಬ ಸುದ್ದಿಯನ್ನು ಉತ್ಪಾದಿಸುತ್ತಿದ್ದಾರೆ. ತನಿಖಾ ವರದಿಯಲ್ಲಿ ಅರುಣ್ ಜೇಟ್ಲಿಯವರ ಹೆಸರಿನ ಪ್ರಸ್ತಾಪವೇ ಇಲ್ಲವೆಂದು ತುತ್ತೂರಿ ಊದಿದ ಬಿಜೆಪಿ ವಕ್ತಾರರ ಮಾತನ್ನು ಎಲ್ಲ ಮಾಧ್ಯಮಗಳು ದಶದಿಕ್ಕುಗಳಿಗೂ ಪ್ರಚುರಪಡಿಸುತ್ತಿವೆ. ಆದರೆ ವಾಸ್ತವದಲ್ಲಿ ಎಸ್‍ಎಫ್‍ಐಓ, ನ್ಯಾಯಾಲಯ ನೇಮಕ ಮಾಡಿದ ಇಬ್ಬರು ಜಡ್ಜ್‍ಗಳ ಕಮಿಟಿ, ಡಿಡಿಸಿಎ ಹಗರಣದ ಸತ್ಯ ಶೋಧನಾ ಸಮಿತಿ – ಹೀಗೆ ಎಲ್ಲವೂ ಡಿಡಿಸಿಎಯಲ್ಲಿ ಅರುಣ್ ಜೇಟ್ಲಿ ನೇತೃತ್ವದಲ್ಲಿ ಭಾರೀ ಅಕ್ರಮಗಳು, ಅವ್ಯವಹಾರಗಳು ನಡೆದಿರುವುದನ್ನೇ ಎತ್ತಿತೋರಿಸುತ್ತಿವೆ.

“ಅರುಣ್ ಜೈಟ್ಲಿಯವರು ಮುಚ್ಚಿಡಲು ಏನೂ ಇಲ್ಲದಿದ್ದರೆ ದೆಹಲಿ ಸರ್ಕಾರ ಕೈಗೊಂಡಿರುವ ತನಿಖೆಯನ್ನು ಎದುರಿಸಲು ಸಿದ್ದರಾಗಲಿ, ತನಿಖೆಗೆ ಸಹಕಾರ ನೀಡಲಿ” ಎಂದು ಎಎಪಿ ವಕ್ತಾರರು ಸವಾಲು ಹಾಕುತ್ತಿದ್ದಾರೆ. ಪಕ್ಷದ ವಕ್ತಾರರಿಂದ “ಕ್ಲೀನ್ ಚಿಟ್” ಸರ್ಟಿಫಿಕೇಟ್ ಪಡೆದುಕೊಳ್ಳುವ ಬದಲು ತನಿಖಾ ಆಯೋಗದ ಮುಂದೆ ಹಾಜರಾಗಿ ಕ್ಲೀನ್ ಚಿಟ್ ಪಡೆಯಲಿ ಎಂಬ ಸವಾಲನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಜೇಟ್ಲಿ ಇಲ್ಲ. ಡಿಡಿಸಿಎಯ ಅಕ್ರಮಗಳು ಜೇಟ್ಲಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿರುವುದಂತೂ ಸತ್ಯ.

ಈ ಮಧ್ಯೆ ಹೆಸರಾಂತ ನ್ಯಾಯಾಧೀಶರು ಮತ್ತು ಮಾಜಿ ಸಾಲಿಸಿಟರ್ ಜನರಲ್ ಆಗಿದ್ದ ಗೋಪಾಲ್ ಸುಬ್ರಮಣ್ಯನ್ ಅವರು ದೆಹಲಿ ಸರ್ಕಾರ ನೇಮಿಸಲಿರುವ ಡಿಡಿಸಿಎ ಅಕ್ರಮಗಳ ತನಿಖಾ ಆಯೋಗದ ಮುಖ್ಯಸ್ಥರಾಗಲು ಒಪ್ಪಿದ್ದಾರೆ. ಮುಖ್ಯಮಂತ್ರಿಗೆ ಅವರು ಬರೆದಿರುವ ಪತ್ರದಲ್ಲಿ ದೆಹಲಿ ಸರ್ಕಾರಕ್ಕೆ ಇಂಥಾ ತನಿಖೆ ಕೈಗೊಳ್ಳುವ ಅಧಿಕಾರವಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ತಮಾಷೆ ನೋಡಿ. ಈ ಹಿಂದೆ ಖುದ್ದು ಮೋದಿ ಸರ್ಕಾರ ಡಿಡಿಸಿಎ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ “ಈ ಬಗ್ಗೆ ತನಿಖೆ ನಡೆಸಬೇಕೆಂದು ದೆಹಲಿ ಸರ್ಕಾರಕ್ಕೆ ಬರೆದ ಒಂದು ಪತ್ರದಲ್ಲಿ ತಿಳಿಸಿತ್ತು. ಅದರಂತೆ ನಾವು ಈಗ ತನಿಖೆ ಕೈಗೊಂಡಿದ್ದೇವೆ. ಈಗ ತಮ್ಮ ನಿಲುವಿನಿಂದ ಹಿಂದೆ ಸರಿದು ಈಗ ದೇಶದ ಜನರ ಮುಂದೆ ಮೋದಿ ಸರ್ಕಾರ ನಗೆಪಾಟಲಿಗೀಡಾಗಬಾರದು” ಎಂದು ಕೇಜ್ರಿವಾಲ್ ಕುಟುಕಿದ್ದಾರೆ.

ಕೇಜ್ರಿವಾಲ್ ಸವಾಲನ್ನು ನೇರವಾಗಿ ಎದುರಿಸಲಾಗದ ಮೋದಿ ಸರ್ಕಾರ ಮತ್ತೊಂದೆಡೆ ಗವರ್ನರ್ ಜಂಗ್‍ರನ್ನು ಛೂ ಬಿಟ್ಟಿದೆ. “ದೆಹಲಿ ಒಂದು ಪೂರ್ಣ ಪ್ರಮಾಣದ ರಾಜ್ಯವಲ್ಲವಾದ್ದರಿಂದ ತನಿಖಾ ಆಯೋಗ ರಚಿಸುವ ಅಧಿಕಾರವಿಲ್ಲ” ಎಂಬುದು ಲೆ.ಗವರ್ನರ್ ನಜೀಬ್‍ಜಂಗ್ ವಾದ. ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುಪ್ರಿಂ ಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ಮಾರ್ಕಂಡೇಯ ಕಟ್ಜು ಅವರು ನಜೀಬ್‍ಜಂಗ್ ಅವರ ವಾದವನ್ನು ತಳ್ಳಿಹಾಕಿ ದೆಹಲಿ ಸರ್ಕಾರಕ್ಕೆ ತನಿಖೆ ಕೈಗೊಳ್ಳುವ ಎಲ್ಲ ಅಧಿಕಾರವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

fiಹೀಗೆ ದೆಹಲಿ ಸರ್ಕಾರಕ್ಕೆ ತನಿಖೆ ನಡೆಸುವ ಅಧಿಕಾರ ಇದೆಯೋ ಇಲ್ಲವೋ ಎಂಬುದು ಈಗ ಒಂದಷ್ಟು ಚರ್ಚೆಯಲ್ಲಿರುವ ವಿಚಾರ. ಆದರೆ ಇಲ್ಲಿ ಒಂದು ಪ್ರಕರಣವನ್ನು ಉಲ್ಲೇಖಿಸಬಹುದು. ಸಿಎನ್‍ಜಿ ಹಗರಣದ ಬಗ್ಗೆ ದೆಹಲಿ ಸರ್ಕಾರ ರಚಿಸಿರುವ ಆಯೋಗದ ತನಿಖೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 23ರಂದು ಹೊರಡಿಸಿರುವ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ನಿರಾಕರಿಸಿದೆ. ಹೀಗೆ ಇದು ದೆಹಲಿ ಸರ್ಕಾರದ ವ್ಯಾಪ್ತಿಯ ವಿಚಾರ ಎಂಬುದು ಸ್ಪಷ್ಟ. ಮುಂದಿನ ದಿನಗಳಲ್ಲಿ ಜೇಟ್ಲಿ ವಿಚಾರಣೆಗೆ ಒಳಗಾಗುವುದು ಬಹುತೇಕ ಖಚಿತ.

ಹೀಗೆ ವಿರೋಧಿ ದನಿಯನ್ನು ಮಟ್ಟ ಹಾಕುವುದೊಂದೇ ಜೈಟ್ಲಿಯವರ ಮುಂದಿರುವ ಆಯ್ಕೆ. ಇದ್ದಕ್ಕಿದ್ದಂತೆ ನಾಟಕೀಯವೆಂಬಂತೆ ಜಾರಿ ನಿರ್ದೇಶನಾಲಯ(ಇ.ಡಿ) ದಿಡೀರನೆ ಎದ್ದು, ಓಡಾಟ ಶುರುವಿಟ್ಟುಕೊಂಡಿದೆ. ಇದು ಹಣಕಾಸು ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಅತ್ಯಂತ ಶಕ್ತಿಶಾಲಿ ಸಂಸ್ಥೆ. ಇಂಥಾ ಇ.ಡಿ. ಯಿಂದ ಆಯ್ದ ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ದಾಳಿಗಳು ವ್ಯವಸ್ಥಿತವಾಗಿ ಆರಂಭವಾಗಿವೆ. ಇಲ್ಲಿ ಬಹಳ ಸರಳವಾದ ಪ್ರಶ್ನೆಯೆಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 18 ತಿಂಗಳ ಕಾಲ ಈ ಇ.ಡಿ ಯಾಕೆ ಸುದೀರ್ಘ ನಿದ್ರೆಯಲ್ಲಿತ್ತು ಎಂಬುದು.

ಇತ್ತ ಮಾಧ್ಯಮಗಳಲ್ಲಿ ಬಿಂಬಿತರಾಗಿರುವಂತೆ ಈ ಪ್ರಕರಣ ಜೇಟ್ಲಿ – ಕೇಜ್ರಿವಾಲ್ ನಡುವಿನ ಜಟಾಪಟಿ ಎಂದುಕೊಂಡರೂ, ಕೇಜ್ರಿವಾಲ್ ಈಗಾಗಲೇ ಮೊದಲ ಸುತ್ತಿನ ಗೆಲುವು ದಾಖಲಿಸಿಯಾಗಿದೆ. ಮುಂದಿನ ಸುತ್ತುಗಳು ಹೇಗೆ ಪರ್ಯಾವಸಾನಗೊಳ್ಳಲಿವೆ ಎಂಬುದನ್ನು ಈಗಲೇ ಹೇಳುವುದು ಕಷ್ಟ ಸಾಧ್ಯ. ಆದರೆ ಮೋದಿ ಸರ್ಕಾರಕ್ಕೆ ಪೀಕಲಾಟ ತಂದಿರುವುದು ಮಾತ್ರವಲ್ಲದೆ, ನಿರ್ದಿಷ್ಟವಾಗಿ ಜೇಟ್ಲಿಗೆ ಇದು ಉರುಳಾಗಿ ಸಂಭವಿಸುವ ಅಪಾಯವನ್ನು ತಳ್ಳಿಹಾಕುವಂತಿಲ್ಲ.

ಜೈಟ್ಲಿ ಚರಿತ್ರೆಯ ಜಟಿಲತೆ
ಅರುಣ್ ಜೈಟ್ಲಿ ವಿದ್ಯಾರ್ಥಿ ದೆಸೆಯಿಂದಲೂ ಸಂಘ ಪರಿವಾರದ ಸಖ್ಯದಲ್ಲೇ ಬೆಳೆದವರು. ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲುವಾಸ ಅನುಭವಿಸಿದ್ದು ಇವರ ಕೆರಿಯರ್‍ಗೆ ಭದ್ರ ಬುನಾದಿಯಾಗಿ ಪರಿಣಮಿಸಿತು. ನಂತರ ಜೈಪ್ರಕಾಶ್ ನಾರಾಯಣ್ ಅವರ ಚಳವಳಿಯಲ್ಲಿ ಕಾಣಿಸಿಕೊಂಡು, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲಿ ಭದ್ರ ನೆಲೆ ಕಂಡುಕೊಂಡವರು.

ದಶಕಗಳ ಕಾಲ ವೃತ್ತಿಪರ ವಕೀಲರಾಗಿದ್ದವರು. ಅದರಲ್ಲೂ ಕಾರ್ಪೊರೇಟ್ ಸಂಬಂಧಿ ಪ್ರಕರಣಗಳಲ್ಲಿ ಇವರದು ಎತ್ತಿದ ಕೈ. ಬಿಜೆಪಿ ಪಕ್ಷ ಉದ್ದಕ್ಕೂ ದೇಶಭಕ್ತಿ, ಸ್ವದೇಶಿ ಮುಖವಾಡಗಳನ್ನು ಹಾಕುತ್ತಿದ್ದರೂ, ಜೈಟ್ಲಿಯವರು ಮಾತ್ರ ವಿದೇಶಿ ಕಂಪನಿಗಳಾದ ಪೆಪ್ಸಿ, ಕೋಕೋಕೋಲಾದಂಥ ಕಂಪನಿಗಳ ಪರವಾಗಿ ವಕಾಲತ್ತು ವಹಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ. ಹಾಗೆಯೇ ಕಾಂಗ್ರೆಸ್ ನಾಯಕ ಮಾಧವ್‍ರಾವ್ ಸಿಂಧಿಯಾ, ಜನತಾ ದಳದ ಶರದ್ ಯಾದವ್ ಮುಂತಾದವರ ಕೇಸುಗಳಲ್ಲೂ ವಕಾಲತ್ತು ವಹಿಸಿದ್ದಾರೆ. ಹೀಗೆ ಎಲ್ಲ ಪಕ್ಷಗಳ ಆಯ್ದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಇವರ ವೈಶಿಷ್ಟ್ಯ.

ಹಾಗೆಯೇ ರಾಜಕೀಯ ತಂತ್ರಗಾರಿಕೆಯಲ್ಲಿ ಇವರದು ಎತ್ತಿದ ಕೈ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಉಸ್ತುವಾರಿ ವಹಿಸಿ ಗೆಲುವು ತಂದುಕೊಟ್ಟ ಖ್ಯಾತಿ ಜೈಟ್ಲಿಯವರದು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡ್ಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಜಯಭೇರಿ ಬಾರಿಸಲು ಜೈಟ್ಲಿ ತಂತ್ರಗಳೇ ಕಾರಣ ಎಂದು ರಾಜಕೀಯ ಪಂಡಿತರು ಷರಾ ಬರೆದಿದ್ದರು. ಆ ದಿನಗಳಲ್ಲಿ ನಡೆದ ಆಪರೇಷನ್ ಕಮಲದಲ್ಲೂ ಜೈಟ್ಲಿ ತಂತ್ರಗಾರಿಕೆ ಕೆಲಸ ಮಾಡಿತ್ತು. ಅಷ್ಟೇ ಏಕೆ? 2002ರ ಗುಜರಾತ್ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ಭಾರೀ ಬಹುಮತ ಗಳಿಸಲು ಜೈಟ್ಲಿ ವ್ಯೂಹತಂತ್ರಗಳು ಸಾಕಷ್ಟು ಕೆಲಸ ಮಾಡಿದ್ದವು. ಮೋದಿ – ಅದಾನಿ ಜೋಡಿಗೆ ಜೈಟ್ಲಿ ಮೊದಲಿನಿಂದಲೂ ಅತ್ಯಂತ ಆಪ್ತ.

ಇಂತಿಪ್ಪ ಜೈಟ್ಲಿ ಮಹಾನುಭಾವರು ಹಲವು ಬಾರಿ ಮಂತ್ರಿ, ಮಹೋದಯರಾಗಿ ರಾರಾಜಿಸಿದ್ದರೂ ಎಂದಿಗೂ ನೇರವಾಗಿ ಚುನಾವಣಾ ಅಖಾಢಕ್ಕಿಳಿದಿರಲೇ ಇಲ್ಲ. ಈ ಚಾಣಾಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೃತಸರ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಸ್ಪರ್ಧಿಸಿ ಮಣ್ಣುಮುಕ್ಕಿದ್ದು ವಿಪರ್ಯಾಸವೇ ಸರಿ. ಸದ್ಯ ಬಿಜೆಪಿ ಪಕ್ಷ ಇವರನ್ನು ಗುಜರಾತ್‍ನಿಂದ ರಾಜ್ಯಸಭೆಗೆ ಆರಿಸಿ ಕಳಿಸಿದೆ. ರಾಜ್ಯಸಭಾ ನಾಯಕ ಸ್ಥಾನಮಾನ ಕೂಡ ಸದ್ಯ ಇವರ ಮುಡಿಯಲ್ಲೇ ಇದೆ.

ವಾಜಪೇಯಿ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಕಾನೂನು ಮತ್ತು ನ್ಯಾಯ ಸೇವೆ ಇಲಾಖೆ, ರಕ್ಷಣಾ ಇಲಾಖೆಗಳಿಗೂ ಅಲ್ಪಾವಧಿ ಮಂತ್ರಿಯಾಗಿದ್ದವರು. ಈಗ ಹಾಲಿ ಹಣಕಾಸು ಸಚಿವ, ಮಾಹಿತಿ ಮತ್ತು ಪ್ರಚಾರ ಇಲಾಖೆಯೂ ಹಾಲಿ ಇವರ ಕೈಯಲ್ಲೇ ಇದೆ. ಹೀಗೆ ಜೈಟ್ಲಿ ಪಟ ಎತ್ತರೆತ್ತರಕ್ಕೆ ಹಾರುತ್ತಿದೆ.
ಹೀಗಿರುವಾಗ ಡಿಡಿಸಿಎ ಹಗರಣ ಹೊರಬಂದಿದೆ. ಹಗರಣದ ತನಿಖೆಗೆ ಕೇಜ್ರಿ ಸರ್ಕಾರಕ್ಕೆ ಒಂದಷ್ಟು ಕನಿಷ್ಟ ಅವಕಾಶಗಳು ಸಿಕಗಕರೂ ಸಾಕು; ಈ ಹಗರಣವನ್ನು ಮತ್ತಷ್ಟು ಅಗೆದಂತೆಲ್ಲಾ ಮತ್ತಷ್ಟು ಅಸ್ತಿಪಂಜರಗಳು ಹೊರಬರುವ ಸಾಧ್ಯತೆ ನಿಚ್ಚಳವಾಗಿದೆ. ಎತ್ತರದಲ್ಲಿ ಹಾರುತ್ತಿರುವ ಜೈಟ್ಲಿ ಎಂಬ ಗಾಳಿಪಟದ ಸೂತ್ರ ತುಂಡಾಗಿ ನೆಲ ಕಚ್ಚಲಿದೆ.

Leave a Reply

Your email address will not be published.