ಜೆನರಿಕ್ ಔಷಧಿಗಳ ಪ್ರಶ್ನೆ

  ಅನು: ಶಿವಸುಂದರ್

ವೈದ್ಯರು ಔಷಧಿಗಳನ್ನು ಸೂಚಿಸುವಾಗ ಅದರ ಜೆನರಿಕ್ (ಮೂಲ ವರ್ಗೀಕರಣದ) ಹೆಸರುಗಳನ್ನೇ ಬಳಸಬೇಕೆಂಬ ಕ್ರಮ ಅಷ್ಟೊಂದು ವಿವೇಚನೆಯಿಂದ ಕೂಡಿದ ತೀರ್ಮಾನವಲ್ಲ.

ಎಸ್. ಶ್ರೀನಿವಾಸನ್ ಬರೆಯುತ್ತಾರೆ:

thಇನ್ನು ಮುಂದೆ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಅದರ ಜೆನರಿಕ್ ಹೆಸರನ್ನು ಸೂಚಿಸುವುದು ಕಡ್ಡಾಯವೆಂಬ ಪ್ರಧಾನಮಂತ್ರಿಯವರ ಹೇಳಿಕೆಯು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಅದು ಅಷ್ಟೊಂದು ವಿವೇಚನಾಯುಕ್ತ ಕ್ರಮವೂ ಅಲ್ಲ. ಮತ್ತು ಅದು ಸಾರ್ವಕನಿಕ ಆರೋಗ್ಯವು ಎದುರಿಸುತ್ತಿರುವ ನಿಜವಾದ ಬಿಕ್ಕಟ್ಟಿನಿಂದ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದ ಮತ್ತು ಕೈಗೆಟಕುವ ಬೆಲೆಯಲ್ಲಿ ಔಷಧಗಳು ದೊರಕದಂಥ ನಿಜವಾದ ಸಮಸ್ಯೆಗಳಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ.

೧,೦೦,೦೦ ಕೋಟಿ ರೂಪಾಯಿಗಳಿಗಿಂತ ಹೆಚ್ಚಿರುವ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಶೇ.೯೦ರಷ್ಟು ಔಷಧಿಗಳು ಅವುಗಳ ಬ್ರಾಂಡ್ ಹೆಸರಿನಲ್ಲೇ ಮಾರಾಟವಾಗುತ್ತವೆ. ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಔಷಧಿಗಳನ್ನು ವಿವರಿಸುವಷ್ಟು ಮತ್ತು ಸೂಕ್ತವಾದಷ್ಟು  ಜೆನರಿಕ್ ಹೆಸರುಗಳೇ ಲಭ್ಯವಿಲ್ಲ. ಅವುಗಳಲ್ಲಿ ಅರ್ಧದಷ್ಟು – ೫೦,೦೦೦ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು- ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಫಿಕ್ಸೆಡ್ ಡೊಸ್ ಕಾಂಬಿನೇಷನ್- ಎಫ್‌ಡಿಸಿ-ಎರಡು ಅಥವಾ ಮೂರು ಔಷಧಿ ವಸ್ತುಗಳನ್ನು ನಿಗದಿತ ಪ್ರಮಾಣದಲ್ಲಿ ಸಂಯೋಜಿಸಿ ಸಿದ್ಧಪಡಿಸುವ ಔಷಧ- ಅನುವಾದಕನ ಟಿಪ್ಪಣಿ) ಔಷಧಿಗಳಾಗಿವೆ. ಹಲವಾರು ಎಫ್‌ಡಿಸಿಗಳು ಎಂಟು ಅಥವಾ ಒಂಭತ್ತು ಔಷಧಿಗಳ ಸಂಯೋಜನೆಗಳಾಗಿರುತ್ತವೆ. ಮಾರುಕಟ್ಟೆಯಲ್ಲಿ ಸಾವಿರಾರು ಎಫ್‌ಡಿಸಿ ಬ್ರಾಂಡುಗಳಿರುತ್ತವೆ. ಹೀಗಾಗಿ ಪ್ರತಿಯೊಂದು ಎಫ್‌ಡಿಸಿ ಔಷಧಿಯ ಜನರಿಕ್ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಬರೆಯುವುದು ಕಾರ್ಯಸಾಧುವಲ್ಲದ ಸಂಗತಿಯಾಗಿದೆ.

ಒಂದು ವೇಳೆ ವೈದ್ಯರು ಒಂದೇ ಔಷಧ ವಸ್ತು ಇರುವ ಔಷಧಿಗಳ ಜನರಿಕ್ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಬರೆದುಕೊಟ್ಟರೂ ಔಷಧಿ ವ್ಯಾಪಾರಿ ಆ ಜನರಿಕ್ ಔಷಧವನ್ನು ಹೊಂದಿರುವ ಯಾವ ಬ್ರಾಂಡಿನ ಮಾರಾಟದಿಂದ ತನಗೆ ಹೆಚ್ಚು ಕಮಿಷನ್ ಸಿಗುವುದೋ ಆ ಔಷಧವನ್ನಷ್ಟೇ ಮಾರುತ್ತಾರೆ ಮತ್ತು ಅದೇ ಜನರಿಕ್ ಔಷಧ ವಸ್ತು ಹೊಂದಿದ್ದರೂ ತನಗೆ ಹೆಚ್ಚು ಕಮಿಷನ್ ಸಿಗದ ಬ್ರಾಂಡಿನ ಔಷಧಿಯ ದಾಸ್ತಾನನ್ನೇ ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಕಡಿಮೆ ಬೆಲೆಗೆ ಔಷಧವನ್ನು ಜನರಿಗೆ ತಲುಪಿಸಬೇಕೆಂಬ ಮೂಲ ಉದ್ದೇಶವೇ ವಿಫಲಗೊಂಡಂತಾಗುತ್ತದೆ. ಅಷ್ಟು ಮಾತ್ರವಲ್ಲ. ಇದರಿಂದಾಗಿ ನಮ್ಮ ಗಮನವು ಮಾರುಕಟ್ಟೆಯ ಸಲುವಾಗಿ  ಔಷಧಿ ಉತ್ಪಾದಕ ಕಂಪನಿಗಳು ಅನುಸರಿಸುವ ಅನೈತಿಕ ಮಾರುಕಟ್ಟೆ ಮಾರ್ಗಗಳಿಂದ ಔಷಧಿ ಅಂಗಡಿಯವರು ಅನುಸರಿಸುವ ಅನೈತಿಕ ಮಾರ್ಗಗಳ ಕಡೆ ಹರಿಯುತ್ತದೆ. ಇದರಿಂದ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ. ಮತ್ತು ಔಷಧಿ ಉದ್ಯಮವು ಸಹ ಯಥಾರೀತಿ  ಮುಂದುವರೆಯುತ್ತದೆ. ವೈದ್ಯಕೀಯ ಚಿಕಿತ್ಸೆಯ ಒಟ್ಟಾರೆ ವೆಚ್ಚದಲ್ಲಿ ಔಷಧಿಗಳ ಮೇಲಿನ ವೆಚ್ಚವೇ ಶೇ.೫೦-೮೦ ರಷ್ಟಾಗುವುದೂ ಮುಂದುವರೆಯುತ್ತದೆ.

ಇದಲ್ಲದೆ ಭಾರತ ಸರ್ಕಾರವು ಜನೌಷಧಿ ಎಂಬ ಯೋಜನೆಯನ್ನೂ ಪ್ರಾರಂಭಿಸಿದೆ. ಈ ಔಷಧಿ ಅಂಗಡಿಗಳಲ್ಲಿ ಸಾಧ್ಯವಾದಷ್ಟೂ ಜನರಿಕ್ ಹೆಸರಿರುವ ಔಷಧಿಗಳನ್ನೂ ಮಾತ್ರ ಮಾರಲಾಗುತ್ತದೆ  ಮತ್ತು ಆ ಮೂಲಕ ಸಾರ್ವಜನಿಕ ಕ್ಷೇತ್ರದ ಔಷಧಿ ಕಂಪನಿಗಳಿಗೆ ಅಲ್ಲಿ ಪ್ರಾಶಸ್ತ್ಯವನ್ನು ಕೊಡಲಾಗುತ್ತದೆ. ಆದರೆ ಇಂಥಾ ಜನರಿಕ್ ಔಷಧಿ ಅಂಗಡಿಗಳು ಹೆಚ್ಚಿಲ್ಲ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ೮ ಲಕ್ಷಕ್ಕೂ ಹೆಚ್ಚು ಚಿಲ್ಲರೆ ಔಷಧಿ ಮಾರಾಟ ಅಂಗಡಿಗಳಿದ್ದರೆ ಹೆಚ್ಚೆಂದರೆ ೩೦೦೦ದಷ್ಟು ಮಾತ್ರ ಜನೌಷಧಿ ಮಳಿಗೆಗಳಿವೆ. ಗ್ರಾಮೀಣ ಪ್ರದೇಶದಲ್ಲಂತೂ ಇದು ಇನ್ನೂ ಕಡಿಮೆ.

ಜನೌಷಧಿಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್- ಡಿಟಿಎಬಿ (ಔಷಧಗಳ ತಾಂತ್ರಿಕ ಸಲಹಾ ಸಮಿತಿ) ೨೦೧೬ರ ಮೇ ತಿಂಗಳಲ್ಲಿ ಸಭೆ ಸೇರಿ ಡ್ರಗ್ಸ್ ಅಂಡ್ ಕಸ್ಮೆಟಿಕ್ಸ್ ಆಕ್ಟ್ -೧೯೪೦ (ಔಷಧಿ ಮತ್ತು ಸೌಂದರ್ಯ ವರ್ಧಕಗಳ ಕಾಯಿದೆ)ನ  ೬೫ (೧೧ ಎ) ವಿಧಿನಿಯಮಕ್ಕೆ ಒಂದು ತಿದ್ದುಪಡಿ ತರಲು ಯೋಚಿಸಿತ್ತು. ಆ ಪ್ರಸ್ತಾವಿತ ತಿದ್ದುಪಡಿಯು ವೈದ್ಯರು ಸೂಚಿಸುವ ಔಷಧಿಗಳ ಜನರಿಕ್ ಹೆಸರನ್ನು ಮತ್ತು ಸೂಚಿಸಲಾದ ಬ್ರಾಂಡ್ ಹೆಸರಿಗೆ ಪರ್ಯಾಯವಾದ ಇತರ ಬ್ರಾಂಡುಗಳ ಹೆಸರನ್ನು ಔಷಧಿ ಅಂಗಡಿಗಳಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯ ಮಾಡುತ್ತಿತ್ತು. ಆದರೆ ಒಂದು ಜನರಿಕ್ ಔಷಧಿಯ ಜೈವಿಕ ಲಭ್ಯತೆಯು (ಬಯೋ ಅವೈಲಬಿಲಿಟಿ) ಸೂಚಿಸಲಾದ ಬ್ರಾಂಡಿನ ಔಷಧಿಯಷ್ಟು ಉತ್ತಮವಾಗಿರಲಾರದು ಎಂಬ ಕಾರಣವನ್ನು ಮುಂದೊಡ್ಡಿ ಡಿಟಿಎಬಿ ಈ ಸಲಹೆಯನ್ನು ತಿರಸ್ಕರಿಸಿತು. (ಬಯೋ ಅವೈಲಬಿಲಿಟಿ-ಜೈವಿಕಲಭ್ಯತೆ-ಎನ್ನುವುದು ದೇಹದ ಪರಿಚಲನೆಯ ವ್ಯವಸ್ಥೆಯಲ್ಲಿ ಬೆರೆತುಹೋಗಿ ತಾನು ಪರಿಣಾಮ ಬೀರಬೇಕಾದ ಗಮ್ಯ ಸ್ಥಳದಲ್ಲಿ ಲಭ್ಯವಾಗುತ್ತಾ ಚಿಕಿತ್ಸಿಕವಾಗಿ ಕ್ರಿಯಾಶೀಲವಾಗಿರಬೇಕಾದ ಔಷಧಿಯ ಪ್ರಮಾಣವೆಷ್ಟೆಂಬ ಅಳತೆಯಾಗಿದೆ.

ಬಯೋಈಕ್ವಲೆನ್ಸ್ – ಜೈವಿಕಸಮಪ್ರಮಾಣ-ವೆಂದರೆ ಎರಡು ವಿವಿಧ ಔಷಧಿಗಳ, ಉದಾಹರಣೆಗೆ ಒಂದು ಜನರಿಕ್ ಔಷಧಿ ಮತ್ತು ಬ್ರಾಂಡ್ ಔಷಧಿಗಳ, ಬಯೋಅವೈಲಬಿಲಿಟಿ-ಜೈವಿಕ ಲಭ್ಯತೆಯ ಹೋಲಿಕೆಯ ಪ್ರಮಾಣ). ಇದರ ಅರ್ಥವೇನೆಂದರೆ ಔಷಧಿ ಸಂಬಂಧೀ ವ್ಯವಹಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸರ್ಕಾರದ ಒಂದು ಅತ್ಯುನ್ನತ ಸಮಿತಿಗೆ ತನ್ನದೇ ಸರ್ಕಾರದ ಉದ್ಯಮಗಳಲ್ಲಿ ಉತ್ಪಾದನೆಯಾಗುವ ಔಷಧಿಗಳ ಬಗ್ಗೆ ವಿಶ್ವಾಸವಿಲ್ಲ. ಆದರೆ ಈ ಡಿಟಿಎಬಿಯು ಕೆಲವು ವರ್ಗದ ಔಷಧಿಗಳಿಗೆ ಅವುಗಳ ಒಳಹೊಕ್ಕುವ (ಪರ್ಮೀಯಬಿಲಿಟಿ) ಮತ್ತು ಕರಗುವ (ಸಾಲ್ಯುಬಿಲಿಟಿ) ಸಾಮರ್ಥ್ಯಗಳನ್ನು ಆಧರಿಸಿ ಜೈವಿಕಲಭ್ಯತೆ ಮತ್ತು ಜೈವಿಕಸಮಪ್ರಮಾಣತೆಯಿಂದ ವಿನಾಯತಿಯನ್ನು ನೀಡಬಹುದಿತ್ತು. ಆರೋಗ್ಯ ಸೇವೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಹಲವಾರು ದೇಶಗಳಲ್ಲಿ ಇದೇ ಮಾರ್ಗವನ್ನು ಅನುಸರಿಸಲಾಗುತ್ತಿದೆ. ಈ ಜೈವಿಕಲಭ್ಯತೆ ಮತ್ತು ಸಮಪ್ರಮಾಣತೆಯ ಪರೀಕ್ಷೆಗಳು ಅತ್ಯಗತ್ಯವಾಗುವುದು ನಿರ್ಣಾಯಕ ಪ್ರಮಾಣವುಳ್ಳ ಔಷಧಿಗಳಿಗೆ ಮತ್ತು ತುಂಬಾ ಸೀಮಿತ ಚಿಕಿತ್ಸಕ ವ್ಯಾಪ್ತಿಯನ್ನು (ಥೆರಾಪಟಿಕ್ ರೇಂಜ್) ಹೊಂದಿರುವಂಥಾ ಔಷಧಿಗಳಿಗೆ ಮಾತ್ರ. ಅವುಗಳ ಸಂಖ್ಯೆ ಬಹಳ ಕಡಿಮೆ.

ಆದರೆ ಡಿಟಿಎಬಿ ಗೆ ಜನರಿಕ್ ಔಷಧಿಗಳಿಗೆ ಇರಬೇಕಾದಷ್ಟು ಜೈವಿಕಲಭ್ಯತೆ ಮತ್ತು ಸಮಪ್ರಮಾಣತೆ ಇರುತ್ತದೆಂಬ ಬಗ್ಗೆಯೇ ಮೂಲಭೂತ ಸಂದೇಹವಿದ್ದಂತಿದೆ. ಪ್ರಾಯಶಃ ಡಿಟಿಎಬಿಗೆ ಭಾರತದ ಔಷಧೀಯ ನಿಯಂತ್ರಣಾ ಸಂಸ್ಥೆಗಳು ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಹೇರಬಲ್ಲವೆಂಬ ಬಗ್ಗೆಯೇ ವಿಶ್ವಾಸವಿದ್ದಂತಿಲ್ಲ.

ತಮಿಳುನಾಡು ಮತ್ತು ರಾಜಸ್ಥಾನದ ಸರ್ಕಾರಗಳು ಪ್ರತಿವರ್ಷವೂ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಜನರಿಕ್ ಔಷಧಿಗಳನ್ನು ಪಡೆದುಕೊಳ್ಳುತ್ತವೆ. ಆ ರಾಜ್ಯಗಳಲ್ಲಿ ಉತ್ತಮವಾದ ಗುಣಮಟ್ಟ ನಿಯಂತ್ರಣಾ ವ್ಯವಸ್ಥೆ ಇರುವುದರಿಂದ ಆ ರಾಜ್ಯಗಳ  ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಕೋಟ್ಯಾಂತರ ಜನರಿಕ್ ಔಷಧಿಗಳು ಬಳಕೆಯಲ್ಲಿವೆ. ಈ ಎರಡು ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿರುವ ಈ ಯಶಸ್ವೀ ಔಷಧಿ ಪೂರಣ ವ್ಯವಸ್ಥೆಯೇ ಜನರಿಕ್ ಔಷಧಿಗಳು ಎಂದಿಗೂ ಉತ್ತಮ ಪರ್ಯಾಯವಾಗಲಾರದೆಂಬ ಆತ್ಮಘಾತುಕ ವಾದಗಳನ್ನು ಸುಳ್ಳೆಂದು ಸಾಬೀತುಪಡಿಸುತ್ತದೆ. ಈ ಸತ್ಯವು ದೇಶಾದ್ಯಂತ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಒದಗಿಸುವುದರಲ್ಲಿ ಇರುವ ಅಗಾಧ ಸಮಸ್ಯೆಗಳನ್ನೇನೂ ನಿರಾಕರಿಸುವುದಿಲ್ಲ. ಆದರೆ ವಿಷಾದದ ಸಂಗತಿಯೆಂದರೆ, ಬ್ರಾಂಡ್ ಔಷಧಿಗಳಿಗೆ ಹೋಲಿಸಿದರೆ ಜನರಿಕ್ ಔಷಧಿಗಳಲ್ಲಿ ಸಾಮಾನ್ಯವಾಗಿ ಜೈವಿಕಲಭ್ಯತೆಯ (ಬಯೋವೈಲಬಿಲಿಟಿ) ಕೊರತೆಯಿರುತ್ತದೆಂದು ಔಷಧ ಕ್ಷೇತ್ರದ ಉದ್ಯಮಿಗಳು ಮಾಡುತ್ತಿರುವ ಅಪಪ್ರಚಾರವನ್ನು ಯಥಾವತ್ತಾಗಿ ಸ್ವೀಕರಿಸುತ್ತಿರುವ ವೈದ್ಯಕೀಯ ವೃತ್ತಿಯಲ್ಲಿನ ಟೀಕಾಕಾರರು ಬಡ ರೋಗಿಗಳಿಗಂತೂ ದೊಡ್ಡ ಅನ್ಯಾಯವನ್ನೇ ಮಾಡುತ್ತಿದ್ದಾರೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ-ಎಂಸಿಐ (ಭಾರತೀಯ ವೈದ್ಯಕೀಯ ಪರಿಷತ್ತು) ೨೦೧೬ರ ಅಕ್ಟೊಬರ್‌ನಲ್ಲಿ ವೈದ್ಯರುಗಳ ನೀತಿ ಸಂಹಿತೆಯಲ್ಲಿ ಒಂದು ತಿದ್ದುಪಡಿಯನ್ನು ತಂದಿದೆ. ಅದರ ಪ್ರಕಾರ ಪ್ರತಿ ವೈದ್ಯರು ಔಷಧಿಯನ್ನು ಸೂಚಿಸುವಾಗ ಅವುಗಳ ಜನರಿಕ್ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು…ಮತ್ತು ಔಷಧಿಗಳ ಬಳಕೆ ಮತ್ತು ಸೂಚನೆಗಳು ತರ್ಕಬದ್ಧವಾಗಿದೆಯೆಂಬುದನ್ನು ಆಕೆ/ಆತ ಖಾತರಿಪಡಿಸಿಕೊಳ್ಳಬೇಕು. ಆದರೆ ಈ ತರ್ಕಬದ್ಧತೆಯನ್ನು ಅಳತೆ ಮಾಡಲು ಅಗತ್ಯವಿರುವ ಒಂದು ಚೌಕಟ್ಟೇ ಇಲ್ಲದಿರುವಾಗ ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಯನ್ನು ಎಂಸಿಐ ಹೇಗೆ ನಿಯಂತ್ರಿಸುತ್ತದೆಂಬುದು ಯಾರ ಊಹೆಗೂ ನಿಲುಕುತ್ತಿಲ್ಲ.

ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಗಳು ವೈದ್ಯ, ಔಷಧ ಮಾರಾಟಗಾರ, ನಿಯಂತ್ರಕ ಮತ್ತು ಬಳಕೆದಾರನ ಮೇಲೆ ಅವಲಂಬಿಸಿರುತ್ತದೆ. ಔಷಧಿಗಳ ತರ್ಕಬಧ್ಹ ಬಳಕೆಗೆ ಇರುವ ಕೆಲವು ಕನಿಷ್ಠ ಅಗತ್ಯಗಳೆಂದರೆ: ಶೆಡ್ಯೂಲ್ ಜಿ, ಎಚ್, ಎಚ್೧ ಮತ್ತು ಎಕ್ಸ್ ಔಷಧಿಗಳು ಅಂಗಡಿ ಮುಂಗಟ್ಟೆಗಳ ಮೇಲೆ ಸಲಭವಾಗಿ ಲಭ್ಯವಿರಬಾರದು ಮತ್ತು ವೈದ್ಯರ ಸಲಹೆ ಇಲ್ಲದೆ ಕೊಡಲೂ ಬಾರದು; ವೈದ್ಯರು ಮತ್ತು ಅವರ ವೃತ್ತಿಪರ ಸಂಸ್ಥೆಗಳು ಹಾಗೂ ನಿಯಂತ್ರಕರುಗಳು ಆಂಟಿಬಯೋಟಿಕ್ಸ್ ಮತ್ತು ಕೆಲವು ಕೀಲಕ ಔಷಧಿಗಳ ದುರ್ಬಳಕೆಯಾಗದಂತೆ ನಿಗಾವಹಿಸಬೇಕು; ಮತ್ತು ಎಲ್ಲಾ ತರ್ಕರಹಿತ/ಹಾನಿಕಾರಕ/ನಿಷ್ಪ್ರಯೋಜಕ ಎಫ್‌ಡಿಸಿ ಮತ್ತು ಅವೈಜ್ನಾನಿಕ ಏಕ ಔಷಧಯುಕ್ತ ಔಷಧಿಗಳು ಚಲಾವಣೆಯಾಗದಂತೆ ಖಾತರಿಪಡಿಸಿಕೊಳ್ಳಬೇಕು.  ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಗೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಮತ್ತು ವೈದ್ಯರುಗಳು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪೇಟೆಂಟ್ (ಬೌದ್ಧಿಕ ಆಸ್ತಿ ಹಕ್ಕು)ನಿಂದ ಮುಕ್ತವಾದ ಔಷಧಿಗಳ ಬ್ರಾಂಡಿಂಗ್ ಅನ್ನು ಪ್ರೋತ್ಸಾಹಿಸಬಾರದು. ಹಲವು ದೇಶಗಳು ಈ ನೀತಿಯನ್ನು ಈಗಾಗಲೇ ಚಾಲ್ತಿಯಲ್ಲಿಟ್ಟಿವೆ. ೧೯೭೫ರ ಹಾಥಿ ಸಮಿತಿ ವರದಿಯೂ ಸಹ ಬ್ರಾಂಡಿಂಗ್ ನ ವಿರುದ್ಧ ಶಿಫಾರಸ್ಸು ಮಾಡಿತ್ತು.

೨೦೦೩ರಲ್ಲಿ ಸುಪ್ರೀಂ ಕೋರ್ಟು ಆದೇಶಿಸಿದಂತೆ ಜೀವ ರಕ್ಷಕ ಔಷಧಿಗಳ ಪಟ್ಟಿಯನ್ನು ವಿಸ್ತರಿಸುವುದು ಮತ್ತು ಅವುಗಳ ಬೆಲೆಯನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ೨೦೧೩ರ ಮಾರುಕಟ್ಟೆ ಆಧಾರಿತ ಔಷಧಿ ಬೆಲೆ ನಿಯಂತ್ರಣಾ ಆದೇಶವು (ಡ್ರಗ್ ಪ್ರೈಸ್ ಕಂಟ್ರೋಲ್ ಆರ್ಡರ್- ಡಿಪಿಸಿಒ) ಈ ಉದ್ದೇಶಗಳ ಒಂದು ದೊಡ್ಡ ವಿಡಂಬನೆಯಂತಿದೆ. ಏಕೆಂದರೆ ಇದು ಔಷಧ ಕಂಪನಿಗಳು ತಮ್ಮ ಔಷಧಿಗಳ ಮೇಲೆ ಶೇ.೨೦೦೦-೩೦೦೦ ದಷ್ಟು (ಮತ್ತು ಕೆಲವೊಮ್ಮೆ ಶೇ.೧೦,೦೦೦ದಷ್ಟು ) ಲಾಭವನ್ನು ಪಡೆದುಕೊಳ್ಳಲು ಅವಕಾಶ ನೀಡುವ ರೀತಿಯಲ್ಲಿ ಅವುಗಳ ಗರಿಷ್ಠ ಬೆಲೆಯ ಮಿತಿಯನ್ನು ನಿಗದಿಗೊಳಿಸಿದೆ. ಇದನ್ನು ಬದಲಿಸಿ ವೆಚ್ಚಾಧಾರಿತವಾಗಿ ಬೆಲೆಯನ್ನು ನಿಗದಿ ಮಾಡುವ ೧೯೯೫ರ ಡಿಪಿಸಿಒ ಜಾರಿಗೆ ಬರಬೇಕು.

ಇವುಗಳಲ್ಲಿ, ಎಲ್ಲಾ ರಾಜ್ಯಗಳಲ್ಲೂ ರಾಜಸ್ಥಾನ ಮತ್ತು ತಮಿಳುನಾಡುಗಳಲ್ಲಿ ಜಾರಿಯಲ್ಲಿರುವ ರೀತಿಯಲ್ಲೇ ಉಚಿತ ಔಷಧಿ ಮಾದರಿಯನ್ನು ಅನುಸರಿಸುವುದಕ್ಕೆ ಮೊಟ್ಟಮೊದಲ ಆದ್ಯತೆ ನೀಡಬೇಕು. ಸರ್ಕಾರವು ಸಾರ್ವಜನಿಕ ಕ್ಷೇತ್ರದ ಔಷಧಿ ಕಾರ್ಖಾನೆಗಳಲ್ಲಿ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಬದಲಿಗೆ ಅವಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಬೇಕು ಹಾಗೂ ಮತ್ತಷ್ಟು ಹೊಸಹೊಸರೀತಿಯಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ದಾರಿಗಳನ್ನು ಹುಡುಕಬೇಕು. 

ಕೃಪೆ: Economic and Political Weekly;      April 29, 2017. Vol. 52. No. 17

Leave a Reply

Your email address will not be published.