ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ

-ಡಾ. ಅರುಂಧತಿ ಚಂದ್ರಶೇಖರ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ನಡೆದು ಬಂದ ಹಾದಿ– ಕೈಬರಹದ ಪ್ರಮಾಣ ಪತ್ರದಿಂದ ಕಾಗದ ರಹಿತ ಪ್ರಮಾಣ ಪತ್ರದವರೆಗೆ 

amendmentsಶಿಕ್ಷಣ, ಉದ್ಯೋಗ ಹಾಗೂ ಇತರೆ ಕ್ಷೇತ್ರಗಳಲ್ಲಿ ಜಾತಿ ಆಧಾರಿತ ಮೀಸಲಾತಿಯ ಆರಂಭದೊಂದಿಗೆ ಸರ್ಕಾರಗಳಿಂದ ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆ ಸಹಾ ಜಾರಿಗೆ ಬಂದಿರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲು ವಿವಿಧ ಕಾನೂನುಗಳಿದ್ದು, ಪ್ರಮಾಣ ಪತ್ರಗಳನ್ನು ಅಂಗೀಕರಿಸುವ ಅಧಿಕಾರವನ್ನು ನಿಗಧಿತ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಮತ್ತು ಅದರಡಿ ರಚಿಸಲಾದ ನಿಯಮಗಳು ಮತ್ತು ತಿದ್ದುಪಡಿಗಳನ್ವಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅಂಗೀಕರಿಸುವ ಅಧಿಕಾರ ತಹಶೀಲ್ದಾರರಿಗೆ ನೀಡಲಾಗಿರುತ್ತದೆ.  ಕರ್ನಾಟಕದಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಈ ಪ್ರಮಾಣ ಪತ್ರಗಳನ್ನು ಮೂರು ಹಂತದಲ್ಲಿ ಒದಗಿಸಿರುವುದನ್ನು ನಾವು ಕಾಣಬಹುದು, ನೆಮ್ಮದಿ ಪೂರ್ವ ಹಂತ, ನೆಮ್ಮದಿ ಯೋಜನೆಯ ಹಂತ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯ ಹಂತ.

ನೆಮ್ಮದಿ ಪೂರ್ವ ಹಂತ:

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಮತ್ತು ಅದರಡಿ ರಚಿಸಲಾದ ನಿಯಮಗಳು ಮತ್ತು ತಿದ್ದುಪಡಿಗಳನ್ವಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು 2006 ರವರೆಗೂ ತಾಲ್ಲೂಕು ಮಟ್ಟದಲ್ಲಿ ಒದಗಿಸಲಾಗುತ್ತಿತ್ತು. ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಲಿಖಿತ ಅರ್ಜಿಗಳನ್ನು ದಾಖಲೆಗಳೊಂದಿಗೆ ತಾಲ್ಲೂಕು ಕಛೇರಿಗೆ ಸಲ್ಲಿಸಬೇಕಾಗಿತ್ತು. ನಂತರದಲ್ಲಿ ಅರ್ಜಿಯ ಸಂಸ್ಕರಣೆ ಹಾಗೂ ಕ್ಷೇತ್ರ ಪರಿಶೀಲನಾ ವರದಿಯ ನಂತರ ಅರ್ಜಿ ಅಂಗೀಕರಿಸಿ, ತಹಶೀಲ್ದಾರರು ಸಹಿ ಮಾಡಿದ ಪ್ರಮಾಣ ಪತ್ರವನ್ನು ನಾಗರೀಕರು ತಹಶೀಲ್ ಕಛೇರಿಯಲ್ಲಿಯೇ ಪಡೆಯಬೇಕಾಗಿತ್ತು. ಇಲ್ಲಿ ಕೈಬರಹದ ಅರ್ಜಿಗಳ ಸ್ಥಿತಿ ಅರಿಯಲು ಸಾರ್ವಜನಿಕರು ತಾಲ್ಲೂಕು ಕಛೇರಿಗೆ ಬರಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಹಣ ಹಾಗೂ ಸಮಯ ವ್ಯರ್ಥವಾಗುತ್ತಿದ್ದುದಲ್ಲದೆ ಕೈಬರಹದ ಅರ್ಜಿಗಳ ಸ್ಥಿತಿಯನ್ನು ಅರಿಯಲು ಯಾವುದೇ ಅವಕಾಶವಿಲ್ಲದ ಕಾರಣ ತಾಲ್ಲೂಕು ಕಛೇರಿಯಲ್ಲಿ “ಪರಿಚಿತರಿದ್ದ”ವರ ಅರ್ಜಿಗಳು ಬೇಗನೆ ಸಂಸ್ಕರಣೆಗೊಂಡು ಅನುಮೋದನೆಯಾಗುತ್ತಿದ್ದು, ಉಳಿದಂತಹ ಅರ್ಜಿಗಳು ತಿಂಗಳಾನುಗಟ್ಟಲೇ ಬಾಕಿ ಉಳಿದಿರುತ್ತಿದ್ದವು.

ನೆಮ್ಮದಿ ಯೋಜನಾ ಹಂತ:

log      2006 ರಲ್ಲಿ ಇ-ಆಡಳಿತ ಇಲಾಖೆಯು ಈ ಸೇವೆಯನ್ನು ಗಣಕೀಕರಣಗೊಳಿಸಿ ಸಾರ್ವಜನಿಕರಿಗೆ ಒದಗಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಒದಗಿಸಲು, ದೇಶದಲ್ಲಿಯೇ ಮೊಟ್ಟಮೊದಲ ಗಣಕೀಕೃತ ಗ್ರಾಮೀಣ ಸೇವೆಯನ್ನು ರೂಪಿಸಲಾಯಿತು. ನೆಮ್ಮದಿ ಯೋಜನೆಯಡಿಯಲ್ಲಿ ಹೋಬಳಿ ಮಟ್ಟದಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ (Public Private Partnership Model) 800 ಟೆಲಿ ಕೇಂದ್ರಗಳನ್ನು ಪ್ರಾರಂಭಿಸಲಾಯಿತು.

ಈ ಟೆಲಿ ಕೇಂದ್ರಗಳು ಸಾರ್ವಜನಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಮತ್ತು ಇದೇ ತರಹದ ಇತರ 29 ಸೇವೆಗಳನ್ನು ಒದಗಿಸುತ್ತಿದ್ದವು. ಈ ಯೋಜನೆಯಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅರ್ಜಿ ಮತ್ತು ಬೆಂಬಲ ದಾಖಲೆಗಳನ್ನು ಟೆಲಿ ಕೇಂದ್ರಗಳಲ್ಲಿ ಸ್ವೀಕರಿಸಿ ಅವುಗಳ ಮಾಹಿತಿಯನ್ನು ತಂತ್ರಾಂಶದ ಮುಖಾಂತರ ತಾಲ್ಲೂಕು ಕಛೇರಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಸದರಿ ಅರ್ಜಿಯ ಪರಿಶೀಲನೆ ಹಾಗೂ ಸಂಸ್ಕರಣೆ ನಂತರ ತಹಶೀಲ್ದಾರರು ಗಣಕೀಕೃತವಾಗಿ ಸಹಿ ಮಾಡಿದ ಪ್ರಮಾಣ ಪತ್ರವನ್ನು ಹೋಬಳಿ ಮಟ್ಟದ ಟೆಲಿ ಕೇಂದ್ರಗಳಲ್ಲಿ ಸುರಕ್ಷಿತ ಹಾಳೆಯ ಮೇಲೆ ಮುದ್ರಿಸಿ ಹಾಲೋಗ್ರಾಂ ಅಳವಡಿಸಿ ನೀಡಲಾಗುತ್ತಿತ್ತು.

ಜನರಿಗೆ ಶೀಘ್ರವಾಗಿ ಹಾಗೂ ಹೋಬಳಿ ಮಟ್ಟದಲ್ಲಿಯೇ ಸೇವೆಗಳನ್ನು ಒದಗಿಸುವಲ್ಲಿ ಈ ಯೋಜನೆಯು ಬಹಳ ಮಟ್ಟಿಗೆ ಯಶಸ್ವಿಯಾದರೂ ಸಹಾ ಖಾಸಗಿ ಸಹಭಾಗಿಗಳು ಮತ್ತು ಸ್ಥಳೀಯ ಕಂದಾಯಾಧಿಕಾರಿಗಳ ನಡುವಿನ ಸಮನ್ವಯದ ಕೊರತೆ, ಅನುಭವವಿಲ್ಲದ ಹಾಗೂ ಹೆಚ್ಚಿನ ಕೌಶಲ್ಯವಿಲ್ಲದ ಗಣಕಯಂತ್ರ ನಿರ್ವಾಹಕರು, ಅಸಮರ್ಪಕ ವಿದ್ಯುತ್ ವ್ಯವಸ್ಥೆ, ತಂತ್ರಾಂಶದ ಸಮಸ್ಯೆಗಳು ಮುಂತಾದ ಸಮಸ್ಯೆಗಳಿಂದಾಗಿ  ಈ ಯೋಜನೆಯು ಸಂಪೂರ್ಣ ಯಶಸ್ವಿಯನ್ನು ಕಂಡಿರುವುದಿಲ್ಲ. ಆದಾಗ್ಯೂ ಸಹಾ, ಗಣಕೀಕರಣಗೊಂಡ ಅರ್ಜಿಗಳ ಮೇಲೆ ನಿಗಾವಹಿಸಲು ಹಾಗೂ ಅದರ ಸ್ಥಿತಿಯನ್ನು ಅರಿಯಲು ಸಾರ್ವಜನಿಕರಿಗೆ ಅನುಕೂಲವಾಯಿತು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ರಡಿಯಲ್ಲಿ ತಂದ ಕಾರಣ ತಹಶೀಲ್ದಾರರು ಅರ್ಜಿಗಳನ್ನು 21 ಕೆಲಸದ ದಿನಗಳಲ್ಲಿ ವಿಲೇ ಮಾಡುವುದು ಕಡ್ಡಾಯವಾಯಿತು.

ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆ ಹಂತ:

ನೆಮ್ಮದಿ ಯೋಜನೆಯಲ್ಲಿ ಕಂಡು ಬಂದ ಪ್ರಮುಖ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರವು 2012 ರಲ್ಲಿ ಈ ಯೋಜನೆಯನ್ನು ಕಂದಾಯ ಇಲಾಖೆಗೆ ವಹಿಸಿಕೊಡಲು ತೀರ್ಮಾನಿಸಿತು. ದಿನಾಂಕ: 25.12.2012 ರಂದು ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ರಾಜ್ಯದ 769 ಹೋಬಳಿ ಕೇಂದ್ರಗಳಲ್ಲಿ ಆರಂಭವಾಯಿತು. ಹೋಬಳಿ ಮಟ್ಟದಲ್ಲಿ ನಾಗರೀಕರಿಗೆ ಪಾರದರ್ಶಕ, ವಿಶ್ವಾಸಾರ್ಹ ಮತ್ತು ಕೈಗೆಟುವ ದರಗಳಲ್ಲಿ ಕಂದಾಯ ಸೇವೆಗಳನ್ನು ಖಾಸಗಿ ಸಹಭಾಗಿತ್ವವಿಲ್ಲದೇ ಸರ್ಕಾರದ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಹೋಬಳಿ ಮಟ್ಟದ ಕೇಂದ್ರಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಛೇರಿ ಎಂದು ಹೆಸರಿಸಲಾಗಿದೆ.

ಸದರಿ ನಾಡಕಛೇರಿಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಸುಮಾರು 36 ವಿವಿಧ ಬಗೆಯ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಅರ್ಜಿದಾರರು ಹೋಬಳಿ ಮಟ್ಟದ ನಾಡಕಛೇರಿ/ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ನಂತರ (ಲಿಖಿತ ಅರ್ಜಿಯ ಅವಶ್ಯಕತೆ ಇರುವುದಿಲ್ಲ. ಅರ್ಜಿದಾರರು ಮೌಖಿಕವಾಗಿ ನೀಡಿದ ಮಾಹಿತಿಯನ್ನು ಆಪರೇಟರ್ ಗಣಕೀಕರಿಸುತ್ತಾರೆ), ಅರ್ಜಿಗಳು ಸಂಸ್ಕರಣೆ ಆಗಿ ಪರಿಶೀಲನಾ ನಂತರ ವಿದ್ಯುನ್ಮಾನವಾಗಿ ಸಹಿ ಮಾಡಲ್ಪಡುತ್ತಿದ್ದು, ಸದರಿ ಪ್ರಮಾಣ ಪತ್ರಗಳನ್ನು ನಾಡಕಛೇರಿಯಲ್ಲಿ ಸುರಕ್ಷಿತ ಸ್ಟೇಷನರಿ ಮೇಲೆ ಮುದ್ರಿಸಿ, ಹಾಲೋಗ್ರಾಂ ಅಳವಡಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು.

seal-of-karnataka-ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ ಆನ್ ಲೈನ್ ಸೇವೆಗಳನ್ನು ಆರಂಭಿಸಿರುವುದರಿಂದ ಅಂತರ್ಜಾಲ ವ್ಯವಸ್ಥೆಯಿಂದ ಯಾವುದೇ ವ್ಯಕ್ತಿಯು ತನ್ನ ಮನೆಯಿಂದ ಅಥವಾ ಪ್ರಪಂಚದ ಯಾವುದೇ ಭಾಗದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಅರ್ಜಿಯು ಸಂಬಂಧಿತ ತಾಲ್ಲೂಕು ಕಛೇರಿಯಲ್ಲಿ ಸಂಸ್ಕರಣೆಗೊಂಡು ಗಣಕೀಕೃತವಾಗಿ ಅನುಮೋದನೆಯಾದ ನಂತರ, ಪ್ರಮಾಣ ಪತ್ರವನ್ನು ಅಂಚೆ ಮೂಲಕ ಅರ್ಜಿದಾರರಿಗೆ ಕಳುಹಿಸುವ ವ್ಯವಸ್ಥೆ ಇರುತ್ತದೆ.

2012 ರಲ್ಲಿ ಆರಂಭವಾದ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ಸುಲಲಿತವಾಗಿ ಹಾಗೂ ಸಮರ್ಥವಾಗಿ ವಿತರಿಸಲು ಕೈಗೊಂಡ ಕ್ರಮಗಳು ಈ ಕೆಳಕಂಡಂತಿರುತ್ತದೆ:

 1. ಎಲ್ಲಾ ಕೇಂದ್ರಗಳಿಗೂ ನೂತನ ಯಂತ್ರಾಂಶಗಳನ್ನು ಒದಗಿಸಿರುವುದು.
 2. ಪ್ರತಿ ನಾಡಕಛೇರಿಯಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿನ ನಿರಂತರ ಲೋಡ್ ಶೆಡ್ಡಿಂಗ್ ಎದುರಿಸಲು ಅಗತ್ಯವಾದ 6:00 ಗಂಟೆ ಬ್ಯಾಕ್ ಅಪ್ ನೀಡುವ ಸೋಲಾರ್ ಘಟಕಗಳ ಸ್ಥಾಪನೆ.
 • ಕೇಂದ್ರಗಳಿಗೆ ಅಗತ್ಯವಾದ ಅಂತರ್ಜಾಲ ಸಂಪರ್ಕ ಒದಗಿಸಲು ಬಿ.ಎಸ್.ಎನ್.ಎಲ್ ಮುಖಾಂತರ ಪ್ರತ್ಯೇಕ VPNoBB ಸಂಪರ್ಕ ಒದಗಿಸಿರುವುದು.
 1. ದಿನಾಂಕ: 22.02.2012 ರ ಸಮಾಜ ಕಲ್ಯಾಣ ಇಲಾಖೆಯ ಅಧಿಸೂಚನೆಯಂತೆ, ಜಾತಿ ಪ್ರಮಾಣ ಪತ್ರವು ಜೀವಿತಾವಧಿಗೆ ಅಥವಾ ರದ್ದುಪಡಿಸುವವರೆಗೆ ಹಾಗೂ ಆದಾಯ ಪ್ರಮಾಣ ಪತ್ರವು 5 ವರ್ಷದ ಅವಧಿಗೆ ಸಿಂಧುವಾಗಿರುತ್ತದೆಂದು ಪ್ರಮಾಣ ಪತ್ರಗಳ ಮೇಲೆಯೇ ಮುದ್ರಿಸಲು ಆರಂಭಿಸಲಾಯಿತು. ಇದರಿಂದಾಗಿ ಪ್ರತಿ ವರ್ಷ ಶಾಲಾ ದಾಖಲಾತಿ ಇತ್ಯಾದಿಗಾಗಿ ಅರ್ಜಿದಾರರು ನಾಡಕಛೇರಿಗೆ ಅಲೆಯುವ ಪ್ರಮೇಯ ತಪ್ಪಿದಂತಾಯಿತು.
 2. ಪ್ರತಿಯೊಂದು ಅರ್ಜಿ ಸ್ವೀಕೃತವಾದಾಗಲೂ ಹಾಗೂ ಅಂತಿಮ ಪ್ರಮಾಣ ಪತ್ರ/ಹಿಂಬರಹ ಸಿದ್ಧವಾದಾಗಲೂ ಅರ್ಜಿದಾರರಿಗೆ ಎಸ್.ಎಂ.ಎಸ್ ಮುಖಾಂತರ ಮಾಹಿತಿ ನೀಡುವ ಸೇವೆಯನ್ನು ಆರಂಭಿಸಲಾಗಿದೆ. ಹಾಗೆಯೇ, ಸಾರ್ವಜನಿಕರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬ ಬಗ್ಗೆ ಎಸ್.ಎಂ.ಎಸ್ ಮುಖಾಂತರ ಮಾಹಿತಿ ಪಡೆಯಬಹುದಾಗಿರುತ್ತದೆ. (KA NK ಸ್ವೀಕೃತಿ ಸಂಖ್ಯೆ ಎಂದು ಟೈಪ್ ಮಾಡಿ 51969 ಗೆ ಎಸ್.ಎಂ.ಎಸ್ ಕಳುಹಿಸಬೇಕಾಗಿರುತ್ತದೆ).
 3. ಅರ್ಜಿದಾರರು ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ತಿಳಿಯಲು ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ ನಾಡಕಛೇರಿ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದಾಗಿರುತ್ತದೆ ಹಾಗೂ ಪ್ರಮಾಣ ಪತ್ರದ ನೈಜತೆಯನ್ನು ಸಹಾ ವೆಬ್ ಸೈಟ್ (www.nadakacheri.karnataka.gov.in) ನಲ್ಲಿ ಪರಿಶೀಲಿಸಬಹುದಾಗಿರುತ್ತದೆ.
 • ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಿಗಾಗಿ ಹೆಚ್ಚುವರಿ ಅರ್ಜಿ ಬರುವುದು ವಿದ್ಯಾರ್ಥಿಗಳಿಂದ, ಶಾಲಾ, ವಿದ್ಯಾರ್ಥಿ ನಿಲಯಗಳ ದಾಖಲಾತಿ ಹಾಗೂ ವಿದ್ಯಾರ್ಥಿ ವೇತನ ಸಲುವಾಗಿ, ಹೀಗಾಗಿ ಹೆಚ್ಚುವರಿ ವಿದ್ಯಾರ್ಥಿಗಳು ಪ್ರತಿ ಶೈಕ್ಷಣಿಕ ವರ್ಷದ ಏಪ್ರಿಲ್ – ಜುಲೈವರೆಗೆ ನಾಡಕಛೇರಿಗಳಿಗೆ ಅರ್ಜಿ ಸಲ್ಲಿಸಲು ಅಲೆದಾಡುವುದನ್ನು ಕಾಣಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ 2014-15 ರ ಶೈಕ್ಷಣಿಕ ವರ್ಷದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ 1.03 ಕೋಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲೆಗಳಲ್ಲಿಯೇ ಲ್ಯಾಮಿನೇಟ್ ಮಾಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
 • ಓವರ್ ದ ಕೌಂಟರ್ ಸೇವೆ: ಓ.ಟಿ.ಸಿ ಅಥವಾ ಓವರ್ ದ ಕೌಂಟರ್ ಸೇವೆಯು ನಾಗರೀಕ ದತ್ತ ಸಂಚಯವನ್ನು ನಿರ್ಮಿಸಿ, ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ತಕ್ಷಣದಲ್ಲಿಯೇ ಸೇವೆಯನ್ನು ಒದಗಿಸುವುದರ ಮೂಲಕ ದಕ್ಷತೆಯನ್ನು ಹೆಚ್ಚಿಸುವ ಒಂದು ಸಾಧನ. ಜಾತಿ ಪ್ರಮಾಣ ಪತ್ರದ ಸಿಂಧುತ್ವವು ಜೀವಿತಾವಧಿಗೆ ಹಾಗೂ ಆದಾಯ ಪ್ರಮಾಣ ಪತ್ರದ ಸಿಂಧುತ್ವವು ಐದು ವರ್ಷಗಳವರೆಗೆ ಇರುವುದರಿಂದ ಸಾರ್ವಜನಿಕರು ಈ ಮೊದಲೇ ಪ್ರಮಾಣ ಪತ್ರವನ್ನು ಪಡೆದಿದ್ದಲ್ಲಿ, ಅವರ ಹೆಸರು ಮತ್ತು ವಿಳಾಸದ ಆಧಾರದ ಮೇಲೆ ಅದನ್ನು ನಾಡಕಛೇರಿ ದತ್ತಾಂಶದಲ್ಲಿ ಶೋಧಿಸಿ, ಯಾವುದೇ ವಿಳಂಬವಿಲ್ಲದೇ ಪ್ರಮಾಣ ಪತ್ರವನ್ನು ಕೌಂಟರ್ ನಲ್ಲೇ ನೀಡಲು ಕ್ರಮವಹಿಸಲಾಗಿದೆ.

ಈ ರೀತಿಯಾಗಿ ಕೈಬರಹದ ಅರ್ಜಿ ಹಾಗೂ ಪ್ರಮಾಣ ಪತ್ರದ ವಿತರಣೆ ಹಂತದಿಂದ ಗಣಕೀಕೃತಗೊಂಡು ಡಿಜಿಟಲ್ ಸಹಿ ಮಾಡಿ ಪ್ರಮಾಣ ಪತ್ರ ವಿತರಿಸುವ ಹಂತದವರೆಗೂ ವಿಧಾನದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದರೂ ಸಹಾ ಸುರಕ್ಷಿತ ಹಾಳೆಯ ಮೇಲೆ ಈ ಪ್ರಮಾಣ ಪತ್ರಗಳನ್ನು ಮುದ್ರಿಸಿ ಹಾಲೋಗ್ರಾಂ ಅಳವಡಿಸಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.

ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಾಮಾನ್ಯವಾಗಿ ಶಿಕ್ಷಣ ಅಥವಾ ಇತರೆ ಇಲಾಖೆಗಳಿಂದ ಸೌಲಭ್ಯವನ್ನು ಪಡೆಯಲು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಗಣಕೀಕೃತವಾಗಿ ಅನುಮೋದಿಸಲ್ಪಟ್ಟ ಪ್ರಮಾಣ ಪತ್ರಗಳನ್ನು ನೀಡುವ ಬದಲಾಗಿ ಕಾಗದ ರಹಿತ ಪ್ರಮಾಣ ಪತ್ರ ಸೇವೆಯನ್ನು ಆರಂಭಿಸಲು ಸರ್ಕಾರವು ಚಿಂತನೆ ನಡೆಸಿತು. ಕಾಗದ ರಹಿತ ಪ್ರಮಾಣ ಪತ್ರ ಸೇವೆಯೆಂದರೆ ಮುದ್ರಿತ ಪ್ರಮಾಣ ಪತ್ರದ ಬದಲಿಗೆ ಸಾರ್ವಜನಿಕರಿಗೆ ಒಂದು ವಿಶಿಷ್ಟ ಸಂಖ್ಯೆ (ಪ್ರಮಾಣ ಪತ್ರದ ಸಂಖ್ಯೆ) ನೀಡುವುದು. ಸದರಿ ಸೇವೆಯಡಿಯಲ್ಲಿ ಅರ್ಜಿದಾರರಿಗೆ ಪ್ರಮಾಣ ಪತ್ರದ ಗಣಕೀಕೃತ ಸಂಖ್ಯೆಯನ್ನು ಎಸ್.ಎಂ.ಎಸ್ ಮೂಲಕ ನೀಡಲಾಗುತ್ತಿದ್ದು, ಅರ್ಜಿದಾರರು ಈ ಸಂಖ್ಯೆಯನ್ನು ಬೇರೆ ಇಲಾಖೆಯಲ್ಲಿ ಸೌಲಭ್ಯ ಪಡೆಯಲು ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬೇಕಾಗಿರುತ್ತದೆ.

ಸಂಬಂಧಿಸಿದ ಇಲಾಖೆಯವರು ಈ ಗಣಕೀಕೃತ ಸಂಖ್ಯೆಯ ಪ್ರಮಾಣ ಪತ್ರದ ಸಿಂಧುತ್ವ/ನೈಜತೆಯನ್ನು ನಾಡಕಛೇರಿ ದತ್ತಾಂಶದಲ್ಲಿ ಅಥವಾ ಎಸ್.ಎಂ.ಎಸ್ ಮೂಲಕ ಪರಿಶೀಲಿಸಬಹುದಾಗಿರುತ್ತದೆ. ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಲು ಒಟ್ಟಾಗಿ ಎಲ್ಲಾ ಪ್ರಮಾಣ ಪತ್ರದ ನೈಜತೆಯನ್ನು ಪರಿಶೀಲಿಸಬೇಕಾಗಿದ್ದಲ್ಲಿ, ನಾಡಕಛೇರಿ ದತ್ತಾಂಶದಲ್ಲಿ ಲಭ್ಯವಿರುವ ಮಾಹಿತಿಯನ್ನು ಒದಗಿಸಲಾದ ವೆಬ್ ಸರ್ವೀಸ್ ಮೂಲಕ ಪರಿಶೀಲಿಸಬಹುದಾಗಿದೆ.

ಈ ಕುರಿತಂತೆ, ದಿನಾಂಕ: 30.10.2015 ರ ಸರ್ಕಾರಿ ಆದೇಶದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ನೀಡುವ ಸೌಲಭ್ಯಗಳಿಗಾಗಿ ಮುದ್ರಿಸಿದ ಮೂಲ ಪ್ರಮಾಣ ಪತ್ರವನ್ನು ಕಡ್ಡಾಯಪಡಿಸದೇ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯ ಕಾಗದ ರಹಿತ ಪ್ರಮಾಣ ಪತ್ರ ಸೇವೆಯಡಿ ಪ್ರಮಾಣ ಪತ್ರಗಳಿಗೆ ನೀಡುವ ವಿಶಿಷ್ಟ ಸಂಖ್ಯೆಯನ್ನು ಅಂಗೀಕರಿಸಿ, ಪ್ರಮಾಣ ಪತ್ರದ ನೈಜತೆಯನ್ನು ನಾಡಕಛೇರಿ ವೆಬ್ ಸೈಟ್/ವೆಬ್ ಸರ್ವೀಸ್ ಮೂಲಕ ಪರಿಶೀಲಿಸಿ, ಸಾರ್ವಜನಿಕರಿಗೆ/ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆದೇಶಿಸಲಾಗಿರುತ್ತದೆ.

6ಸದರಿ ಸರ್ಕಾರಿ ಆದೇಶದಲ್ಲಿ ಎಲ್ಲಾ ಇಲಾಖೆಗಳು ಕಾಗದ ರಹಿತ ಸೇವೆಯನ್ನು ಅಂಗೀಕರಿಸಬೇಕೆಂದು ಸೂಚಿಸಿದ್ದರೂ ಸಹಾ ಸಾರ್ವಜನಿಕರು ಕೋರಿದ್ದಲ್ಲಿ, ಸುರಕ್ಷಿತ ಹಾಳೆ ಹಾಗೂ ಹಾಲೋಗ್ರಾಂಗಳಿಲ್ಲದೇ ಪ್ರಮಾಣ ಪತ್ರಗಳನ್ನು ವಿತರಿಸಲು ಅವಕಾಶ ನೀಡಲಾಗಿರುತ್ತದೆ ಹಾಗೂ ಸಾರ್ವಜನಿಕರು/ಇಲಾಖೆಗಳು ಸಹಾ ಅಗತ್ಯವಿದ್ದಲ್ಲಿ ನೇರವಾಗಿ ನಾಡಕಛೇರಿ ವೆಬ್ ಸೈಟ್ ನಿಂದ ಪ್ರಮಾಣ ಪತ್ರವನ್ನು ಮುದ್ರಿಸಿಕೊಳ್ಳಬಹುದಾಗಿರುತ್ತದೆ.

ಹೀಗೆ ಮುದ್ರಿಸಿದ ಪ್ರಮಾಣ ಪತ್ರಗಳಲ್ಲಿ “ಈ ಪ್ರಮಾಣ ಪತ್ರದ ನೈಜತೆಯನ್ನು ಪರಿಶೀಲಿಸಲು ನಾಡಕಛೇರಿ ವೆಬ್ ಸೈಟ್ www.nadakacheri.karnataka.gov.in ಗೆ ಪ್ರವೇಶ ಹೊಂದಿ ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸುವುದು ಅಥವಾ ಎಸ್.ಎಂ.ಎಸ್ ಸಂಖ್ಯೆ 51969 ಗೆ KA NK Certificate Number ಎಂದು ಎಸ್.ಎಂ.ಎಸ್ ಮಾಡುವುದು” ಎಂಬ ಟಿಪ್ಪಣಿಯಿದ್ದು, ಇದು ನಕಲಿ ಪ್ರಮಾಣ ಪತ್ರಗಳ ಹಾವಳಿ ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಇದು ಸಂಪೂರ್ಣ ಕಾಗದ ರಹಿತ ಸೇವೆಯಾಗದಿದ್ದರೂ ಸಹಾ ಆ ನಿಟ್ಟಿನಲ್ಲಿ ಒಂದು ಉತ್ತಮ ಹೆಜ್ಜೆಯಾಗಿರುತ್ತದೆ.

ಕಾಗದ ರಹಿತ ಪ್ರಮಾಣ ಪತ್ರದ ಸೇವೆಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯ ವಿಧಾನವನ್ನು ಸರಳೀಕೃತಗೊಳಿಸುವುದಲ್ಲದೇ ಸಾರ್ವಜನಿಕರಿಗೆ ವಿವಿಧ ಇಲಾಖೆಗೆ ಅಲೆದಾಡಬೇಕಾದ ವೆಚ್ಚ ಹಾಗೂ ಸಮಯವನ್ನು ಕಡಿತಗೊಳಿಸುತ್ತದೆ ಮತ್ತು ಮುದ್ರಣ ವೆಚ್ಚವನ್ನೂ ತಗ್ಗಿಸುತ್ತದೆ, ಈ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಸಾರ್ವಜನಿಕರು ಅಂಗೀಕರಿಸಿ ಕಾಗದ ಪ್ರಮಾಣ ಪತ್ರಗಳ ಮೇಲೆ ಅವಲಂಬಿಸದಿದ್ದಲ್ಲಿ, ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳು ಪ್ರಮಾಣ ಪತ್ರಗಳ ಪ್ರತಿಗಾಗಿ ಅರ್ಜಿದಾರರಿಗೆ ಕಡ್ಡಾಯಪಡಿಸದಿದ್ದಲ್ಲಿ, ಕರ್ನಾಟಕದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇವೆಗಳು ಸಂಪೂರ್ಣವಾಗಿ ಕಾಗದ ರಹಿತವಾಗುವುದು ಕಂಡಿತ.

ಟಿಪ್ಪಣಿ – ಹೆಚ್ಚಿನ ವಿವರಗಳಿಗಾಗಿ ನಾಡಕಛೇರಿ ವೆಬ್ ಸೈಟ್ www.nadakacheri.karnataka.gov.in ಗೆ ಭೇಟಿ ನೀಡಬಹುದಾಗಿದೆ.

 

7 Responses to "ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ"

 1. Rajashekar  January 30, 2016 at 2:13 pm

  ತುಂಬಾ ಉಪಯುಕ್ತವಾದ ಲೇಖನ, ಒಂದು ಚಿಕ್ಕ ಸೂರಿನಲ್ಲಿ (ಪಡಸಾಲೆ/ನಾಡಕಚೇರಿ) ಹಲವಾರು ಸೇವೆಗಳು ಅತಿಯಾಗಲಿಲ್ಲವೇ ? ಕಾರಣ, ಪಡಸಾಲೆ/ನಾಡಕಚೇರಿಯು ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ಬೇರೆ ಬೇರೆ ಇಲಾಖೆಗಳ ತಂತ್ರಾಂಶದ ಮೇಲೆ ಅವಲಂಭಿತವಾಗಿರುತ್ತದೆ, ಉದಾಹರಣೆಗೆ ಆರ್ ಟಿ ಸಿ ಯನ್ನು ಪಡೆಯಲು ಭೂಮಿ ತಂತ್ರಾಂಶ, 11E ಸ್ಕೆಚ್ ಪಡೆಯಲು ಮೋಜಿಣಿ ತಂತ್ರಾಂಶ….ಹೀಗೆ ಹಲವು, ಕಾರಣಾಂತರಗಳಿಂದ ಯಾವುದೊ ಒಂದು ಇಲಾಖೆಯ ತಂತ್ರಾಂಶವು ಕಾರ್ಯ ನಿರ್ವಹಿಸದೆ ಹೋದರೆ ಸಾರ್ವಜನಿಕರು/ಜನ ಪ್ರತಿನಿಧಿಗಳು ನಿಂದಿಸುವುದು ಪಡಸಾಲೆ/ನಾಡಕಚೇರಿಯನ್ನೇ ಎನ್ನುವುದು ಸಾಮಾನ್ಯ …..

  Reply
 2. ರಾಘವೇಂದ್ರ ಪರಾಳಶೆಟ್ಟಿ  July 15, 2016 at 8:34 pm

  olleya lekana. dhanyavadagalu

  Reply
 3. Ravi Kumar  February 10, 2017 at 1:25 pm

  Jathi mathu aadhaya pramana pathra

  Reply
 4. MAHANTESH IRAPPA NAIKODI  February 10, 2017 at 1:26 pm

  Enkam cast

  Reply
 5. Nagaraj naik  February 10, 2017 at 2:08 pm

  Supar artical..mahithi nididakke danyavada..

  Reply
 6. Satish Chavan  February 10, 2017 at 6:14 pm

  Good

  Reply
 7. SOMASHEKHAR R BANDIWADDAR  January 6, 2018 at 6:47 pm

  Really good Article

  Reply

Leave a Reply

Your email address will not be published.