ಜನತೆಯ ಮಧುರಮೈತ್ರಿ ಹಿಂದು ಮತ್ತು ಇಸ್ಲಾಂ ಸಂಸ್ಕೃತಿ-ಕುವೆಂಪು

ಇಸ್ಲಾಂ ಸಂಸ್ಕೃತಿ -ಮೂಲ ಲೇಖಕ: ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ : ಅನುವಾದಕ: ಬಿ.ಎಂ. ಶ್ರೀಕಂಠಯ್ಯ, ಈ ಕೃತಿಗೆ ಕುವೆಂಪು ಬರೆದ ಮುನ್ನುಡಿಯು ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಹಾಗಾಗಿ ಇದನ್ನು ಹೊಸ ಓದುಗರಿಗಾಗಿ ಮರುಪ್ರಕಟಿಸಲಾಗಿದೆ.

Kuvempu-347x325ಭರತವರ್ಷದ ಇತಿಹಾಸವನ್ನು ‘ನಿರಂತರವಾದ ಸುಲಿಗೆಯ ಕಥೆ’ ಎಂಬೊಂದು ಮಾತಿನಲ್ಲಿ ಬಣ್ಣಿಸಬಹುದು. ಈ ವರ್ಣನೆ ಮುಸ್ಲಿಂ ಪ್ರಾಬಲ್ಯದ ಮಧ್ಯಕಾಲದ ಇತಿಹಾಸಕ್ಕೂ ಅನ್ವಯಿಸುತ್ತದೆ. ಮುಸ್ಲಿಮರಿಗೂ  ಆತ್ಮವೃತ್ತವೂ ಈ ಮಾತಿನ ಸತ್ಯತೆಯನ್ನೇ ಸಮರ್ಥಿಸುತ್ತದೆ. ಸಾರಾಂಶ: ಮುಸ್ಲಿಮರು ಯಾವುದೋ ಒಂದು ಒತ್ತಡದ ಫಲವಾಗಿಯೊ, ಹಣದಾಸೆಯಿಂದಲೊ, ನೆಲದಾಸೆಯಿಂದಲೊ ಇಲ್ಲಿ ಕಾಲೂರಿ, ನೆಲಸಿ ನಿಂತು, ತಮ್ಮ ಪ್ರಭುತ್ವ ಕಟ್ಟಿದ್ದು; ಕಟ್ಟುವಾಗ ಅನಿವಾರ್ಯವಾಗಿ ನಡೆದ ಯುದ್ಧಗಳಿಗೆ ಮೂಲಕಾರಣಗಳು ಬೇರೆಯಾಗಿದ್ದರೂ, ಅವುಗಳಲ್ಲಿ ಮತಾವೇಶದ ಬಣ್ಣದೆಳೆಯೂ ಸೇರಿಕೊಂಡದ್ದುಂಟು.

ಹೀಗೆ ಭಾರತ ಚರಿತ್ರೆ ಸುಲಿಗೆ ಸೆಣಸುಗಳ ಕಥೆ ಎಂಬುದು ವಾಸ್ತವವಾದದ್ದು. ಆದರೆ, ಈ ಪ್ರಾಚೀನ ರಾಷ್ಟ್ರದ ಸುದೀರ್ಘಾವಧಿಯ ಚರಿತ್ರೆಯನ್ನು ಅನ್ಯ ದೇಶಗಳ ಚರಿತ್ರೆಯೊಡನೆ ಹೋಲಿಸಿದಲ್ಲಿ. ಇಲ್ಲಿ ನಡೆದ ಯುದ್ಧಗಳ ಸಂಖ್ಯೆ ಅತೀವ ಅಲ್ಪವೆನಿಸೀತು. ಇದನ್ನು ಸಮರಕಥೆ ಎನ್ನುವುದಕ್ಕಿಂತಲೂ ಒಂದು ಸಮನ್ವಯಸಾಧನೆಯ ಕಥೆ, ಆರ್ಯ ಸಂಸ್ಕೃತಿಯ ನಿರಂತರವೂ ಅವ್ಯಾಹತವೂ ಅದ್ವಿತೀಯವೂ ಆದ ದಿಗ್ವಿಜಯದ ಪರಂಪರೆಯ ಕಥೆ ಎನ್ನುವುದು ಹೆಚ್ಚು ಸಮಂಜಸವಾದೀತೆಂದು ವಿಚಾರಮತಿಗೆ ವೇದ್ಯವಾಗುತ್ತದೆ. ಹಿರಿಯ ಸಂಸ್ಕೃತಿಯ ಅಕ್ಷಯನಿಧಿಯಾದ ಪ್ರಾಚೀನ ಗ್ರೀಸ್ ದೇಶ ರೋಮನರ ಪಶುಬಲಕ್ಕೆ ಮಣಿಯಿತು, ರಾಜಕೀಯದಲ್ಲಿ.

ಆದರೆ ವಿಜಿತ ಗ್ರೀಕ್ ಸಂಸ್ಕೃತಿಯ ಶ್ರೀಮಂತ ವೈಭವಕ್ಕೆ ಆ ರೋಮನ್ ಮಸ್ತಕ ಗೌರವದಿಂದ ಮಣಿಯಬೇಕಾಯಿತು. ಭಾರತ ವಿಜೇತರ ಸ್ಥಿತಿಯೂ ಹಾಗೆಯೆ ಆಯಿತು. ರಣರಂಗದಲ್ಲಿ ಹಿಂದುಗಳು ಮುಸ್ಲಿಮರ ಆಘಾತಕ್ಕೆ ಬಾಗಿದ್ದುಂಟು; ರಣಲಕ್ಷ್ಮಿ ಮುಸ್ಲಿಮರಿಗೆ ಆಗಾಗ್ಗೆ ವಿಜಯಮಾಲೆ ಹಾಕಿದ್ದುಂಟು. ರಾಜಕೀಯ ರಂಗದಲ್ಲಿ ಮುಸ್ಲಿಂ ಸಾರ್ವಭೌಮತ್ವಕ್ಕೆ ಹಿಂದು ಸ್ವಾಧೀನತೆ ಕೆಲಕಾಲ ಸೆರೆಯಾದದ್ದುಂಟು. ಆದರೆ ಆರ್ಯ ಸಂಸ್ಕೃತಿಗೆ ಮುಸ್ಲಿಮರು ಚಿರಕಾಲವೂ ಸೆರೆಯಾಗಿ ಹೋದರು. ಪರಸ್ಪರ ಘರ್ಷಣೆಯಿಂದ ದೊರೆತ ತಾತ್ಕಾಲಿಕವಾದಿ ಲೌಕಿಕ ಜಯಕ್ಕಿಂತಲೂ ಒಂದರ ಹೃದಯಕಾಂತಿಗೆ ಮತ್ತೊಂದು ಮಾರುಹೋದ ಗೆಲುವೇ ಶಾಶ್ವತವಲ್ಲವೆ?

ಇಂದು ಪ್ರಚಾರದಲ್ಲಿರುವ ಭರತಖಂಡದ  ಇತಿಹಾಸ ಗ್ರಂಥಗಳೆಲ್ಲ ಹಿಂದು ಮುಸ್ಲಿಮರಿಗೆ ನಡೆದ ಹೋರಾಟಗಳಿಗೂ ನೈಸರ್ಗಿಕ ಕಾರಣಕ್ಕಾಗಿ ಬಂದ ಭಿನ್ನತೆಗಳಿಗೂ  ಅಸ್ವಾಭಾವಿಕವಾದ ಪ್ರಾಧಾನ್ಯ ಕೊಟ್ಟಿವೆ. ಆದರೆ ಈ ಸಮರ ಕಥೆಯನ್ನು ನೆನೆಯುವ ಹವ್ಯಾಸದಲ್ಲಿ ಎರಡೂ ಜನ ಕೂಡಿ ಬಾಳಿ ಕಟ್ಟಿದ ಸಮರಸ ಕಥೆಯನ್ನು ಮರೆತಿವೆ. ಇಲ್ಲ ಕೈ ಬಿಟ್ಟಿವೆ. ರಾಜಮನೆತನಗಳ ಉದಯಾಭ್ಯುದಯ ಪತನಗಳ ಕಥೆಯನ್ನು ವಿಸ್ತೃತರೂಪದಲ್ಲಿ ಲಂಬಿಸಿ ಉಲ್ಲೇಖಿಸುತ್ತವೆ; ಹೊರನಾಡುಗಳಿಂದ ತೆರೆತೆರೆಯಾಗಿ ಬಂದ ತಂಡ ತಂಡಗಳ ವಿಜಯಯಾತ್ರಾ ಪರಂಪರೆಗಳನ್ನೂ ಉಗ್ರ ದಬ್ಬಾಳಿಕೆ ಸುಲಿಗೆ ಕೊಲೆ ಕ್ರೌರ್ಯಗಳನ್ನೂ ಒತ್ತಿ ಒತ್ತಿ ಬಿತ್ತರಿಸುತ್ತವೆ. ಆದರೆ ಇಲ್ಲಿ ನೆಲಸಿ ನಿಂತ ಜನಾಂಗಗಳ ಘನಿಷ್ಠವಾದ ಸಂಸರ್ಗದಿಂದ ಅನಿವಾರ್ಯವಾಗಿ ಆವಿರ್ಭವಿಸಿದ ಸಂಸ್ಕೃತಿ ಶ್ರೀಸಂವರ್ಧನೆಯ ಅಮೋಘವಾದ ಆಖ್ಯಾನದ ಉಲ್ಲೇಖವೆ ಸಾಕಷ್ಟು ಪ್ರಮಾಣದಲ್ಲಿ ನಡೆದಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.

ಪ್ರಚಲಿತ ಭಾರತೇತಿಹಾಸ ಗ್ರಂಥಗಳಲ್ಲಿ ಉಲ್ಲೇಖನಾಭಾವದಿಂದಾದ ಅನಾಹುತ ಅಷ್ಟಿಷ್ಟಲ್ಲ. ಈಗ ನಮಗೆ ಬಂದಿರುವ ಸಂಸ್ಕೃತಿ ಶುದ್ಧ ಹಿಂದೂ ಸಂಸ್ಕೃತಿ, ಅದು ವಿಕಾಸಗೊಂಡದ್ದು ಮುಸ್ಲಿಂ ಪೂರ್ವದ, ಅಚ್ಚ ಹಿಂದೂ ಯುಗದಲ್ಲಿ  ಎಂಬ ಭಾವನೆ ಹಿಂದುಗಳನೇಕರಲ್ಲಿ ಮನೆ ಮಾಡಿದೆ. ಮುಸ್ಲಿಮರಿಗೂ ತಮ್ಮ ಸಂಸ್ಕೃತಿಯನ್ನು ಕುರಿತು ಇದೇ ತೆರನಾದ ಭ್ರಾಂತಿ ಬಲವಾಗಿದೆ.

ಈ ಶತಮಾನಗಳ ದೀರ್ಘಾವಧಿಯಲ್ಲಿ ಎರಡೂ ಜನರ ಸಂಸ್ಕೃತಿಗಳೂ ಯಮಳ ನದಿಗಳಂತೆ ಜೊತೆಜೊತೆಗೆ ಸಾಗಿಯೂ ಒಂದನ್ನೊಂದು ವರ್ಧಿಸದೆ, ಒಂದರ ಮುನ್ನಡೆಗೆ ಮತ್ತೊಂದು ನೆರವಾಗದೆ ಒಂದನ್ನೊಂದು ಸಂಗಮಿಸದೆ ಅಪರಿಚಿತರಂತೆ ಮಾರ್ಮಲೆತು ಮೊಗದಿರುಹಿ ದೂರದೂರವೆ ನಿಲ್ಲುವುದು ಅಸಾಧ್ಯವೆಂಬ ಮಾತು ಎಂತಹರಿಗೂ ಸುಸಂವೇದ್ಯ. ಆದರೆ ಇಂದು ಏನಾಗಿದೆ? ಹಿಂದುಗಳು ಮುಸ್ಲಿಮರು ಇಬ್ಬರಲ್ಲೂ ವಿಶೇಷತಃ ಇಸ್ಲಾಂ ಬಂಧುಗಳಲ್ಲಿ ಪ್ರತ್ಯೇಕತಾ ಮನೋಭಾವ ಉಲ್ಬಣವಾಗಿ, ಪರಸ್ಪರ ಸಂದೇಹಕ್ಕೂ ತಿರಸ್ಕಾರಕ್ಕೂ ವಿದ್ವೇಷ ದೃಷ್ಟಿಗೂ ಅವಕಾಶವಿತ್ತಿರುವುದರ ಮೂಲಕಾರಣ. ಮುಖ್ಯವಾಗಿ ಇತಿಹಾಸ ಬುದ್ಧಿಲೋಪ. ಇಂದಿನ ಭರತಖಂಡದ ಸಂಸ್ಕೃತಿ ವಿಕಾಸಕ್ಕೆ ಪ್ರೇರಕ ಶಕ್ತಿ ಇಲ್ಲಿಯ ಹಿಂದೂ ಮುಸ್ಲಿಮಾದ ಎಲ್ಲ ಜನತೆಯ ಮಧುರಮೈತ್ರಿ ಸಹಕಾರಗಳೆಂಬುದರ ಅರಿವಿಲ್ಲದಿರುವುದೆ ನಮ್ಮ ಬೀಳಿಗೆ ಕಾರಣವಾಗಿದೆ. ಈ ಅಜ್ಞಾನ ಕಾರ್ಕೋಟಕ ತನ್ನ ಪ್ರತ್ಯೇಕತಾಭಾವದ ಹೆಡೆಯನ್ನೆತ್ತಿ ಇಂದು ರಾಜಕೀಯದಲ್ಲಿ ವಿರೂಪಕಾರಕವಾದ ಮಾರಕ ವಿಷವನ್ನು ಕಾರಿ, ಅಖಂಡ ರಾಷ್ಟ್ರಪುರುಷನನ್ನು ಇಬ್ಭಾಗಮಾಡಿದೆ.

kan_santha_sharif1ಇದು ರಾಷ್ಟ್ರದ ದುರದೃಷ್ಟ. ಭಾರತಮಹಾಮಾನಸದಲ್ಲಿ ಆರ್ಷೇಯ ಸಂಸ್ಕೃತಿಯೊಡನೆ ಅನ್ಯ ಸಂಸ್ಕೃತಿಗಳು ಮಧುರವಾಗಿ ಕೂಡಿ, ಕೊಂಡು, ಕೊಟ್ಟು, ಬೆಳೆದು, ಬೆಳಗಿ ಬಾಳಿದುದನ್ನು ಅರಿಯದೆ ಹೋದುದು ನಿಜವಾಗಿಯೂ ನಮ್ಮ ನಾಡಿನ ದೌರ್ಭಾಗ್ಯ. ವಿಚಾರಿಸಿ ನೋಡಿದರೆ ಒಂದು ರಾಷ್ಟ್ರದ ತಿರುಳಿರುವುದು ಅಲ್ಲಿ ಸಂಧಿಸಿದ ವಿವಿಧ ಜನಾಂಗಗಳ ಸಮರಸ ಜೀವನದಿಂದ ಹೊಮ್ಮುವ ಸಂಸ್ಕೃತಿಯ ಸಾರಸೌರಭದಲ್ಲಿ.

ಅಂತೆಯೇ ಭರತವರ್ಷವು ಇತಿಹಾಸ ಪೂರ್ವಕಾಲದಿಂದಲೂ ನಾನಾ ಜನಾಂಗಗಳ ನಾಗರಿಕತೆ ಸಭ್ಯತೆಗಳ ಸುಂದರ ಸಮನ್ವಯ ಮಂದಿರವಾಗಿದೆ. ತನ್ನದೊಂದು ಅವಿಚ್ಛಿನ್ನ ಇತಿಹಾಸ ಪರಂಪರೆಯಿರುವ ಪ್ರಾಚೀನ ನಾಗರಿಕತೆಯೆಂದರೆ ಪ್ರಾಯಃ ಚೀಣವನ್ನು ಬಿಟ್ಟರೆ ಈ ಭರತ ಖಂಡದ ನಾಗರಿಕತೆಯೆ. ಉಳಿದ ನಾಗರಿಕತೆಗಳು ಹಲವು ಹೇಳಹೆಸರಿಲ್ಲದಂತೆ ಅಳಿದಿವೆ. ಈ ಭಾರತೀಯ ಆರ್ಯಸಂಸ್ಕೃತಿ ಉಳಿದದ್ದು ಹೆಚ್ಚಲ್ಲ; ಉಳಿದು, ವರ್ಧಿಷ್ಣುವಾಗಿ, ಆತ್ಮವರ್ಚಸ್ಸಿನಿಂದ ಬೆಳಗಿದುದು ಇದರ ಹಿರಿಮೆ. ಶಕ ಹೂಣಾದಿ ನೂರಾರು ಭಿನ್ನಭಿನ್ನ ಜನಾಂಗಗಳು ಒತ್ತಿ ಬಂದು ಸೆಣಸಿ, ರಕ್ತಸುರಿಸಿ, ಕೊನೆಗೆ ಈ ಸಂಸ್ಕೃತಿಗೆ ಮಾರುಹೋಗಿ, ಮಾರ್ಪಟ್ಟು, ರಕ್ತಬಂಧುಗಳಾಗಿ ಲೀನವಾಗಿವೆ, ಈ ಪುಣ್ಯ ಸನಾತನ ಆರ್ಯಭೂಮಿಯಲ್ಲಿ!

ಭಾರತ ರಾಷ್ಟ್ರಲಕ್ಷ್ಮಿ ಆ ಅನ್ಯರನ್ನೂ ನಿಜಸಂತಾನದಂತೆ ಕಂಡು ವಿಶ್ವಪ್ರೇಮದ ತನ್ನ ಮಡಿಲಲ್ಲಿ ಹಾಕಿಕೊಂಡಿದ್ದಾಳೆ. ಭೌತವಾದ ರಾಜಕೀಯ ಕರ್ಮರಂಗದ್ಲಲಿ ಯಾವೊಂದು ನೆರೆನಾಡಿನ ನೆತ್ತಿಯ ಮೇಲೆಯಾಗಲಿ ತನ್ನ ದೋರ್ದಂಡ ದರ್ಪದ ವಿಜಯವೈಜಯಂತಿಯನ್ನು ಮೆರೆಸದಿದ್ದರೂ, ಎಲ್ಲ ದಾಳಿಗಳನ್ನೂ ಎಲ್ಲ ಘರ್ಷಣೆಗಳನ್ನೂ ದಿಟ್ಟತನದಿಂದ ಎದುರಿಸಿ, ಸಾಗರೋಪಮವಾಗಿ ಮೇಲ್ವಾಯ್ತು ಬಂದ ಎಲ್ಲ ವಿಜೇತ ಜನಾಂಗಗಳ ಸಂಸ್ಕೃತಿ ಸತ್ವವನ್ನೂ ಅಗಸ್ತ್ಯ ಮಹಾಮುನಿಯಂತೆ ಆಪೋಷಿಸಿ, ಐಕ್ಯವಾಗಿಸಿ, ಆತ್ಮಶ್ರೀಯಿಂದ ಬೆಳಗಿ. ಹಿಮಾಚಲದಂತೆ ಅಚಲವಾಗಿ ನಿಂತ ಈ ಸನಾತನವೂ ನಿತ್ಯ ನೂತನವೂ ಆದ ಭಾರತೀಯ ಸಂಸ್ಕೃತಿಯ ಜೀವಸತ್ವ ಅಡಗಿರುವುದೆಲ್ಲಿ? ತನ್ನತನಕ್ಕೆ ಚ್ಯುತಿ ಬಾರದಂತೆ ಕಾಲಕ್ಕೆ ತಕ್ಕಂತೆ ಪರಿವರ್ತನಶೀಲವಾಗಿ ಹೊಸತನ್ನು ಹೊಂದಿಸಿಕೊಳ್ಳುವ ಒಂದು ಮನೋವೈಶಾಲ್ಯದಲ್ಲಿ: ಭಿನ್ನತೆಗಳಲ್ಲಿ ಏಕತೆಯನ್ನು ಕಾಣುವ ಒಂದು ಸಮಷ್ಟಿದೃಷ್ಟಿಯಲ್ಲಿ; ಸಾರ್ವಕಾಲಿಕವೂ ಸಾರ್ವ ದೇಶಿಕವೂ ಆದ ಒಂದು ಉದಹಾರ ವಿಶ್ವಮತ ತತ್ವದಲ್ಲಿ; ಎಲ್ಲಕ್ಕೂ ಮಿಗಿಲಾಗಿ, ಸರ್ವಗ್ರಾಸಿಯಾದ ಸಚ್ಚಿದಾನಂತ ಸಾಕ್ಷಾತ್ಕಾರದ ಪೂರ್ಣಯೋಗದ ಸ್ವಾನುಭವಸಾಕ್ಷಿಯಲ್ಲಿ!

ಬೃಹದ್ ವಿಶಾಲವಾದ ಭರತಖಂಡದ ವಿರಾಡ್ರೂಪಿಯಾದ ಪ್ರಕೃತಿ ಸೌಂದರ್ಯದಲ್ಲಿ ದೃಷ್ಟಿ ಗೋಚರವಾಗುವ ಒಂದು ವೈವಿಧ್ಯ ಈ ರಾಷ್ಟ್ರದ ಸಂಸ್ಕೃತಿಯಲ್ಲಿಯೂ ಸಹಸ್ರ ಸಹಸ್ರ ವರ್ಣರಂಜಿತವಾಗಿ ಮೈದೋರಿದೆ. ಈ ಸಂಸ್ಕೃತಿ ವಿಸ್ತಾರದಲ್ಲಿ ಆಳದಲ್ಲಿ ಹಿಂದೂ ಮಹಾಸಾಗರಕ್ಕೆ ಹೋಯ್ ಕಯ್; ಔನ್ನತ್ಯದಲ್ಲಿ ಭವ್ಯತೆಯಲ್ಲಿ ಸಹ್ಯಾದ್ರಿ ವಿಂಧ್ಯ ಹಿಮಾಚಲ ಸ್ಪರ್ಧಿ; ಗರಿಮೆಯಲ್ಲಿ ಗೌರೀಶಂಕರದಂತೆ ಗಗನವಿಹಾರಿ. ಇದು ಒಬ್ಬ ವ್ಯಕ್ತಿಯ ವಾಣಿಯಲ್ಲ. ಈ ಆ ಪಂಥದ ಕುಬ್ಜ ದೃಷ್ಟಿಯಲ್ಲ. ಇದು ಅನುಭವ ಸಮೂಹಗಳ ಉದಾರವಾದ ಸಮಷ್ಟಿ ದೃಷ್ಟಿ. ಇಲ್ಲಿ ಪ್ರಕೃತಿಶಕ್ತಿಗಳ ಉಪಾಸನೆಯಿಂದ ಹಿಡಿದು ನಿರ್ಗುಣ ಬ್ರಹ್ಮಾರಾಧನೆಯ ವರೆಗೆ ಎಲ್ಲ ಶ್ರದ್ಧೆಗೂ ಸ್ಥಾನವುಂಟು. ಇಲ್ಲಿ ಜೈನ ನಿರೀಶ್ವರವಾದಕ್ಕೆ ಎಡೆಯಿರುವಂತೆ ಬೌದ್ಧವಿಜ್ಞಾನವಾದಕ್ಕೂ ಚಾರ್ವಾಕ ನಾಸ್ತಿಕವಾದಕ್ಕೂ ಅವಕಾಶವಿದೆ. ಮುಸ್ಲಿಮನಾದರೆಯೇ ಮುಕ್ತಿ, ಕ್ರೈಸ್ತನಾದರೆಯೇ ಮೋಕ್ಷ, ಮೋಕ್ಷಕ್ಕೆ ಮತಾಂತರೀಕರಣವೇ ಮಾರ್ಗ ಎಂಬ ಹೃದಯಾಂಧದುರಭಿಮಾನ ಇಲ್ಲಿ ಸಲ್ಲದು. ಅವನಾವ ಮತಾನುಯಾಯಿಯಾಗಿರಲಿ ಪರಿಶುದ್ಧಾತ್ಮಕನಾದ ಭಕ್ತನಿಗೆ ಈಶನೊಲಿವುದು ಖಂಡಿತವೆಂಬ ಶ್ರದ್ಧೆಯುಳ್ಳದ್ದು. ಎಲ್ಲವನ್ನೂ ಒಳಕೊಳ್ಳುವ ಈ ಸಂಸ್ಕೃತಿ ಧರ್ಮದ ಕಡಲುಹರಹಿನ ಔದಾರ್ಯ ‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎಂಬ ವೇದೋಕ್ತಿಯಲ್ಲಿ ಸೂತ್ರರೂಪದಲ್ಲಿ ಮೊಳೆದೋರಿದೆ. ಎಲ್ಲ ಧರ್ಮಶ್ರದ್ಧೆಗಳಲ್ಲಿಯೂ ಸತ್ಯದ ಕಿಡಿಯಿದೆ. ಅವು ಭಿನ್ನ ಭಿನ್ನದೃಷ್ಟಿಗೆ ಕಂಡ ವಿರಾಟ್ ಸತ್ಯದ ವಿವಿಧ ಮುಖಗಳು ಮಾತ್ರ. ಶೈವರು ಶಿವನೆಂದಾಗಲಿ, ವೇದಾಂತಿಗಳು ಬ್ರಹ್ಮನೆಂದಾಗಲಿ, ಬೌದ್ಧರು ಬುದ್ಧನೆಂದಾಗಲಿ, ನೈಯಾಯಿಕರು ಕರ್ತನೆಂದಾಗಲಿ, ಮೀಮಾಂಸಕರು ಕರ್ಮ ಎಂದಾಗಲಿ, ಜೈನರು ಅರ್ಹತ್ ಎಂದಾಗಲಿ ಕರೆಯಲಿ. ಅವರು ಉಪಾಸನೆ ಸಲ್ಲಿಸುವ ಸರ್ವ ವಿಭುಶಕ್ತಿ ಒಂದೆಯೆ ಸತ್ಯ.

ಇಂಥ ಸಂಸ್ಕೃತಿಯ ನರುಗಂಪು ಬಹುಹಿಂದೆಯೆ ಭಾರತದ ಹೊರಗಡೆ ಎಲ್ಲ ದೂರದೇಶಗಳ ಮೂಲೆ ಮೂಲೆಗೂ ಹಬ್ಬಿತು. ಇಲ್ಲಿ ಹುಟ್ಟಿದ ಬೌದ್ಧಮತದ ವಿಚಾರಧಾರೆ ಅನ್ಯದೇಶಗಳನ್ನು ಹೊಕ್ಕಂತೆ ಪಶ್ಚಿಮದಲ್ಲಿ ಅರೇಬಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಜ್ಯಗಳನ್ನೂ ಸೋಕಿತು. ಕುರಾನ್ ತತ್ವಮಾತೃಕೆಯಿಂದ ಸಂಭವಿಸಿದ ಸೂಫಿ ಪಂಥ ಗ್ರೀಕ್ ತತ್ವ ಪ್ರಭಾವಕ್ಕೆ ಒಳಗಾದಂತೆಯೇ ಹಿಂದೂ ವಿಚಾರಧಾರೆಯಿಂದಲೂ ರೂಪಾಂತರ ಹೊಂದಿದೆ. ಆದ್ದರಿಂದಲೇ ಸೆಮೆಟಿಕ್ ಮತಗಳಲ್ಲಿ ಕಾಣಬರದ ಬ್ರಹ್ಮಾತ್ಮ ಐಕ್ಯದ ಮಾತು ಸೂಫಿ ಪಂಥದಲ್ಲಿ ಕಂಡು ಬರುತ್ತದೆ. ಈ ಆಧ್ಯಾತ್ಮ ತತ್ವವಾಹಿನಿಯಂತೆಯೆ ಇತರ ತತ್ವವಾಹಿನಿಗಳೂ ಭಾರತದಿಂದ ಹೊರತೆ ಹರಿದು ಅರಬಸ್ಥಾನ ಮುಂತಾದ ಮಧ್ಯಪ್ರಾಚ್ಯದೇಶಗಳ ಮೇಲೆ ಪ್ರಭಾವ ಬೀರಿದ್ದುವು.

ಇಂಥ ಪ್ರಬಲ ವರ್ಚಸ್ಸಿನ ಭಾರತ ಸಂಸ್ಕೃತಿಯ ಪ್ರದೀಪಕಾಂತಿ ಭಾರತಕ್ಕೆ ಇಸ್ಲಾಂ ಮತ ಸಂಸ್ಕೃತಿಗಳು ಅಡಿಯಿಟ್ಟ ಕಾಲಕ್ಕೆ ಸ್ವಲ್ಪಮಟ್ಟಿಗೆ ಕಳೆಗುಂದಿತ್ತು. ಈ ಸಂಸ್ಕೃತಿಯ ಔದಾರ್ಯದ ಫಲವಾಗಿಯೆ ಏಕದೇವತಾರಾಧನೆಯ ಜೊತೆಜೊತೆಗೆ ಅನೇಕ ಕ್ಷುದ್ರದೇವತೆಗಳ ಉಪಾಸನೆಯೂ ನಾಡಿನಲ್ಲಿ ಸರ್ವತ್ರ ಪ್ರಚಲಿತವಾಗಿ, ಜನತೆ ಧರ್ಮದ ತಿರುಳನ್ನೇ ಮರೆತಿತ್ತು. ವರ್ಣವ್ಯವಸ್ಥೆ ವಿರಸಕ್ಕಿಟ್ಟುಕೊಂಡು ಅವ್ಯವಸ್ಥೆಯಾಗಿ ಪರಿಣಮಿಸಿತ್ತು. ಒಂದು ಕಾಲಕ್ಕೆ ಸಮಾಜದ ಭದ್ರತೆಗೆ ರಕ್ಷಾಪ್ರಾಯವಾಗಿದ್ದ ವರ್ಣವ್ಯವಸ್ಥೆ ಬರುಬರುತ್ತಾ ಭಾರತೀಯ ಐಕ್ಯತೆಯ ಕೊರಳಿಗೆ ಉರುಲಾಯ್ತು. ಜನ ಉತ್ಸಾಹಹೀನರಾಗಿ ಪೌರುಷಜೀವನವನ್ನು ತ್ಯಜಿಸಿದ್ದರು.

ಹೀಗೆ ಆರ್ಯಸಂಸ್ಕೃತಿಯ ಸೂರ್ಯನು ಅಜ್ಞಾನ ರಾಹುಗ್ರಸ್ಥನಾಗಿ ನಿಸ್ತೇಜನಾಗಿದ್ದ ಅವಧಿಯಲ್ಲಿ ಇದನ್ನು ಇಸ್ಲಾಂ ಸಂಸ್ಕೃತಿ ಸಂಧಿಸಿತು, ಘರ್ಷಿಸಿತು. ಈ ಘರ್ಷಣೆಯಿಂದ ಆರ್ಯಸಂಸ್ಕೃತಿ ಮತ್ತು ಧರ್ಮಗಳ ಆತ್ಮಪರೀಕ್ಷಣ ನಡೆಯಿತು. ಜೀವನೋತ್ಸಾಹದಿಂದ ಸಪ್ರಾಣವಾದ ನವತಾರುಣ್ಯದ ಇಸ್ಲಾಂ ಧರ್ಮದ ಅನುಯಾಯಿಗಳು ಆಧ್ಯಾತ್ಮರಂಗಕ್ಕಿಂತಲೂ ಹೆಚ್ಚಾಗಿ ಲೌಕಿಕ ಕರ್ಮರಂಗದಲ್ಲಿ ವಿಜೃಂಭಿಸಿದರು. ಸರ್ವಸಮಾನತೆ ಮತ್ತು ಏಕೇಶ್ವರವಾದ ಇಸ್ಲಾಂ ಧರ್ಮದ ಈ ಎರಡು ಬೀಜಮಂತ್ರಗಳು ಆ ಅನುಯಾಯಿಗಳ ಐಕ್ಯತೆಗೆ ಅಡಿಗಲ್ಲಾಗಿವೆ. ಇಂಥ ನವಧರ್ಮ ಸಂಸ್ಕೃತಿಯ ಸಂಸರ್ಗದಿಂದ ಆರ್ಯಧರ್ಮಾನುಯಾಯಿಗಳು ಮಂಪರದಿಂದ ಎಚ್ಚತ್ತರು. ಆಲೋಚಿಸಿದರು. ಜೀವನ ಜಿಹಾಸೆಯನ್ನು ತೊರೆದು ಸಾಹಸೋತ್ಸಾಹದಿಂದ ಲೌಕಿಕ ರಂಗಕ್ಕೆ ಇಳಿದರು. ಜಾತಿಪಂಥದ ಹರಕುಬೊಂತೆಯನ್ನು ಕಿತ್ತೊಗೆದು ಉಚ್ಚನೀಚ ಭೇದರಹಿತ ಉದಾರಭಕ್ತಿಯ ಬಾವುಟವನ್ನು ಬಾನಿಗೆತ್ತಿದರು. ಹೀಗೆ ಆರ್ಯ ಜೀವನ ಹಸನಾಗಿ, ಆರ್ಯ ಸಂಸ್ಕೃತಿಶ್ರೀ ವರ್ಧಿಸಲು ಇಸ್ಲಾಂ ಸಂಸ್ಕೃತಿ ಪ್ರಚೋದನೆಯಿತ್ತಿತು.

ಭಾರತೀಯ ಸಂಸ್ಕೃತಿ ಇಸ್ಲಾಂ ಸಂಸ್ಕೃತಿಯ ಮಾನ್ಯಾಂಶವನ್ನು ಬಿಚ್ಚೆದೆಯಿಂದ ಮೈಗೂಡಿಸಿಕೊಂಡರೂ, ಅದಕ್ಕೆ ಮಣಿಯದೆ, ಅದಕ್ಕೂ ಭಾರತೀಕರಣದ ಮುದ್ರೆಯೊತ್ತಿತು. ಮಾನವ ಸಮಾಜದಲ್ಲಿ ಭಾವದೊಡನೆ ಭಾವದ ಸಮ್ಮಿಳನವಾದಾಗ ನವಚೈತನ್ಯ ಹೊಮ್ಮುತ್ತದೆ. ಮುಸ್ಲಿಮರ ಜಯಮುಷ್ಟಿ ಕಾಲಕ್ರಮದಲ್ಲಿ ಸಡಲಿ ಹಿಂದೂ ಮುಸ್ಲಿಮರಲ್ಲಿ ಚಿಗುರಿದ ಸೌಹಾರ್ದದ ಬೆಳೆಯಲ್ಲಿ ಈ ನವಚೈತನ್ಯವನ್ನು ಗುರುತಿಸಬಹುದಾಗಿದೆ. ಈ ಸಮನ್ವಯಕ್ರಿಯೆ ಪಠಾಣರ ಕಾಲದಿಂದ ಕ್ರಮವಾಗಿ ಸಾಗಿ, ಮೊಗಲರ ಕಾಲಕ್ಕೆ ಮೇಲ್ನೆಲೆ ಮುಟ್ಟಿತು. ವಿಶೇಷವಾಗಿ ಉತ್ತರ ಭಾರತದ ಮುಸ್ಲಿಮ ಹಿಂದುಗಳಿಬ್ಬರ ಜೀವನ ಪದ್ಧತಿಗಳಲ್ಲಿ, ಧರ್ಮರಂಗದಲ್ಲಿ, ಕಲಾಕ್ಷೇತ್ರದಲ್ಲಿ, ಸಾಮಾಜಿಕ ಜೀವದಲ್ಲಿ, ಗೃಹಜೀವನದಲ್ಲಿ, ವೇಷಭೂಷಗಳಲ್ಲಿ ಪರಸ್ಪರ ಪ್ರಭಾವ ಎದ್ದು ಕಾಣುತ್ತದೆ. ಇಸ್ಲಾಂ ಸಂಸ್ಕೃತಿಯ ಭಾರತೀಕರಣಗೊಂಡ ರೂಪಗೊಂಡ ಈ ನವೀನ ಜೀವನ ರೀತಿಯನ್ನು ಬಾಬರನು ‘ಹಿಂದೂಸ್ತಾನಿ ರೀತಿ’ ಎಂದು ಹೆಸರಿಸಿದ್ದಾನೆ.

ಈ ಇಸ್ಲಾಂ ಸಂಸ್ಕೃತಿಯ ಭಾರತೀಕರಣವು ಲೋಕೋತ್ತರ ಫಲವನ್ನೇ ಕೊಟ್ಟಿತು. ದೂರದರ್ಶಿಯಾದ ಮೊಗಲರ ಮೂಲಪುರುಷ ಬಾಬರನು ಈ ಎರಡು ಜನಾಂಗಗಳಲ್ಲಿ ಮೂಡಬೇಕಾದ ಸಹಕಾರವನ್ನು ಗುರುತಿಸಿಕೊಂಡು ಹಿಂದುಗಳನ್ನು ಪ್ರೀತಿ ಗೌರವಗಳಿಂದ ನಡಸಿಕೊಂಡರೇನೆ ಭಾರತದಲ್ಲಿ ಮೊಗಲ ಸಾಮ್ರಾಜ್ಯ ಸ್ಥಾಯಿಯಾದೀತೆಂದು ತನ್ನ ಉಯಿಲಿನಲ್ಲಿ ನಚ್ಚಿನ ಪುತ್ರ ಹುಮಾಯೂನನಿಗೆ ಸಂದೇಶವಿತ್ತಿದ್ದಾನೆ. ಈ ಉಪದೇಶದಂತೆ ಅಕ್ಬರ ಸಾಮ್ರಾಟನು ಹಿಂದೂ ಜೀವನದಲ್ಲಿ ಒಂದಾಗಿ ಪಾಲುಗೊಂಡು, ಬರುವ ತಲೆಮಾರುಗಳಿಗೆ ಮೇಲ್ಪಂಕ್ತಿ ಹಾಕಿದನು. ಹಿಂದುಗಳ ಮೇಲಿನ ಅಪಮಾನಕರವಾದ ತೆರಿಗೆಗಳನ್ನು ತೆಗೆದುಹಾಕಿ, ಅವರನ್ನೂ ಆತ್ಮೀಯರಾಗಿ ಕಂಡು, ಹಿಂದೂ ಧರ್ಮಪಾಲಕರೆಂದು ಹೆಸರಾಂತ ರಾಜಪುತ್ರ ಮನೆತನಗಳೊಡನೆ ಸ್ನೇಹ ಸಂಬಂಧದ ಜೊತೆಗೆ ರಕ್ತಬಾಂಧವ್ಯವನ್ನೂ ಬೆಳೆಸಿದನು. ಅವನ ತರುವಾಯ ಬಂದ ಜಹಾಂಗೀರ್, ಷಹಜಹಾನ್ ಇವರು ಹೆಸರಿಗೆ ಮೊಗಲರಾದರೂ ವಾಸ್ತವವಾಗಿ ರಾಜಪೂತ ಬಳ್ಳಿಯ ಸುಳಿಗಳು. ಹಿಂದುಗಳ ವಿಶಾಲಮತಿ ಅಕ್ಬರನ ಸ್ನೇಹಾಶ್ರಯದಲ್ಲಿ ಮೊಗಲ ಸಾಮ್ರಾಜ್ಯದ ಭದ್ರತೆಗೆ ರಕ್ಷಕರೂ ಪಾಲಕರೂ ಆದರು. ಅಕ್ಬರನದು ಬಹ ದೂರದೃಷ್ಟಿ. ಅಸಹನೀಯ ಮತವೈಷಮ್ಯವನ್ನು ತೊಡೆದುಹಾಕಿ ಎಲ್ಲರೂ ಏಕಧರ್ಮವನ್ನು ಪಾಲಿಸುವ ಒಂದು ಜನಾಂಗದ ನಿರ್ಮಾಣದ ಕನಸೇ ಅವನ ಹೃದಯಮಂದಿರದಲ್ಲಿ ಮೂಡಿದ ‘ದೀನಿ ಇಲ್ಲಾಹಿ’ ಮತ.  ಈ ಜೀವನದೀಪ್ತಿಯಿಂದ ಉದ್ದೀಪಿತರಾಗಿ ಮುನ್ನಡೆದ ಜಹಾಂಗೀರ್, ಷಹಜಹಾನರು ಹಿಂದುಗಳ ಹೃದಯವನ್ನು ಸೂರೆಗೊಂಡು, ಭಾರತದಲ್ಲಿ ಮೆರೆಸಿದ ರಸೋಜ್ವಲ ಕಲಾವೈಭವದ ಕೀರ್ತಿ ದಿಗಂತ ವ್ಯಾಪ್ತಿಯಾಯ್ತು.

kabirಇದೇ ಸಮನ್ವಯ ಸೌಹಾರ್ದ ಗೀತೆಯನ್ನು ಅಮೀರ್ ಖುಸ್ರು, ರಾಮಾನಂದ, ಕಬೀರ್, ನಾನಕ, ಚೈತನ್ಯರ ಜೀವನಗಳು ಹಾಡಿವೆ. ಸೂಫಿ ಪಂಥದಲ್ಲಿಯೂ ಬಂಗಾಳ ಮಹಾರಾಷ್ಟ್ರಗಳಲ್ಲಿ ಮೈದೋರಿದ ಭಕ್ತಿ ಪಂಥಗಳಲ್ಲಿಯೂ ಪ್ರಕಟವಾದ ಸಮನತಾಭಾವಗಳು ಪೂರ್ವೋಕ್ತ ಸಮನ್ವಯದೃಷ್ಟಿಯ ಪ್ರತಿಬಿಂಬಗಳಾಗಿವೆ. ಅಕ್ಬರನ ಫತೇಪೂರ್ ಸಿಕ್ರಿಯಲ್ಲಿ ಕಾಣುವ ರಜಪೂತ ರೀತಿ, ಲೋಕವನ್ನೇ ಸೂರೆಗೊಂಡಿರುವ ಅದ್ಭುತ ಕಲಾಕೃತಿ ತಾಜಮಹಲ್ ನಲ್ಲಿ ಮೈತಳೆದ ಹಿಂದೂ ಪಂಚರತ್ನ ರೀತಿಯ ವಿನ್ಯಾಸ ಇವು ಮುಸ್ಲಿಮರ ಇರಾನೀ ಶಿಲ್ಪರೀತಿಗೆ ತೊಡಿಸಿದ ಭಾರತೀಯ ಶಿಲ್ಪಕಲೆಯ ಮಕುಟಗಳು. ಈ ಭಾರತೀಕರಣದ ಮತ್ತೊಂದು ಕಾಣಿಕೆಯೆಂದರೆ, ಅಖಂಡ ಭಾರತಕ್ಕೆ ಸಂಯುಕ್ತ ಭಾಷೆಯಾಗಬಹುದಾದ ಹಿಂದೂಸ್ಥಾನಿ.

ಇಷ್ಟಾದರೂ ಹಿಂದು ಮುಸ್ಲಿಮರ ಪ್ರತ್ಯೇಕತೆಯ ಪಲ್ಲವಿಯನ್ನೇ ಹಾಡುವವರ ಸಂದೇಹವು ಬಯಲಾಗುವಂತಹ ಒಂದು ನಿದರ್ಶನವನ್ನು ಬಂಗಾಳೀ ಸಾಹಿತ್ಯ ಚರಿತ್ರೆಯಲ್ಲಿ ನಾವು ಕಾಣಬಹುದಾಗಿದೆ. ವಂಗ ಸಾಹಿತ್ಯದ ಪ್ರಾರಂಭ ಕಾಲದಿಂದಲೂ ಬಂಗಾಳಿ ಮುಸ್ಲಿಮರು ಅಲ್ಲಿಯ ಬೌದ್ಧ ವೈಷ್ಣವ ಶಾಕ್ತೇಯ ಶೈವ ನಾಥಯೋಗಿಗಳೊಡನೆ ಸಮಜೋಡಿಯಾಗಿ ನಿಂತು ಸಾಹಿತ್ಯಕ್ಷೇತ್ರದಲ್ಲಿ ಅನುಪಮವಾಗಿ ದುಡಿದಿದ್ದಾರೆ, ಅವರ ಅನನ್ಯವಾದ ದೇಶಭಾಷಾಪ್ರೇಮಕ್ಕೆ ಸಂಕುಚಿತ ಜಾತಿಪಂಥವೂ ಭಂಗ ತರಲಿಲ್ಲ. ನಿಜವಾಗಿ ನೋಡಿದರೆ, ವಂಗ ಸಾಹಿತ್ಯದ ಸತ್ವವಾಹಿನಿ ಕಾಲಸೂರ್ಯನ ಜಳಕ್ಕೆ ಬತ್ತದೆ, ಅತಿ ಸಂಸ್ಕೃತೀಕರಣದ ಆಣೆಕಟ್ಟಿನಲ್ಲಿ ಬಂಧಿತವಾಗದೆ, ನಿರ್ಮಲತರವಾಗಿ ಹರಿದಿರುವುದು ಬಂಗಾಳೀ ಮುಸ್ಲಿಂ ಜೀವನನಾಡಿಯಲ್ಲಿ ಎಂದು ತಿಳಿದವರು ಹೇಳುತ್ತಾರೆ. ಇತಿಹಾಸವೂ ಅದನ್ನು ಸಮರ್ಥಿಸುತ್ತಿದೆ, ಭಾಷೆಯ ವಿಚಾರವಾಗಿ ಇತ್ತೀಚೆಗೆ ಇತ್ಯರ್ಥವಾದ ಪಾಕಿಸ್ತಾನದ ಬಂಗಾಳಿಗಳ ದೃಢನಿರ್ಧರದಲ್ಲಿ.

ಆ ಸಂಗತಿ ಕನ್ನಡನಾಡಿನ ಕನ್ನಡ ಮುಸ್ಲಿಂ ಬಾಂಧವರ ಕಣ್ಣು ತೆರೆಸಿದರೆ ಸಾಕು. ಅವರೂ ಈ ಸ್ವತಂತ್ರಭಾರತದಲ್ಲಿ ಮೂಡಿರುವ ನವಚೈತನ್ಯವನ್ನು ಕಂಡುಕೊಂಡು, ತಮ್ಮ ದೇಶಭಾಷೆ ಕನ್ನಡವನ್ನೇ ವ್ಯವಹಾರ ಭಾಷೆಯನ್ನಾಗಿ ಒಪ್ಪಿ, ತಮ್ಮ ವಿಶಿಷ್ಟವಾದ ಕಾಣಿಕೆಯನ್ನು ನಾಡ ಬೆಳೆಸಿನ ಭಾಗ್ಯಕ್ಕೆ ನಿವೇದಿಸಲಿ, ಅಂತಹ ಮಂಗಳೋದಯಕ್ಕೆ ನಾಂದಿಯಂತೆ ಮೂಡಿದ ಈ ಕನ್ನಡದ ‘ಇಸ್ಲಾಂ ಸಂಸ್ಕೃತಿ’ ಗ್ರಂಥ.

ಈ ನವೋದಯದ ನಾಂದಿಯನ್ನು ಹಾಡಿ ಕನ್ನಡನಾಡು ನುಡಿಗಳ ಏಳಿಗೆಗಾಗಿ ತಮ್ಮ ಬಾಳೆಲ್ಲವನ್ನೂ ಬೇಳಿದ ದಿವಂಗತ ‘ಶ್ರೀ’ಯವರ ಪ್ರೇರಣೆಯಿಂದಲೇ ಈ ಕೃತಿ ಕನ್ನಡಿಗರಿಗೆ ಲಭಿಸುವಂತಾಯ್ತು. ಶ್ರೀ ಶ್ರೀಕಂಠಯ್ಯನವರ ಕೋರಿಕೆಯನ್ನು ನಡಸಿ, ಇದರ ಮೂಲಕೃತಿಯನ್ನು ಆಂಗ್ಲಭಾಷೆಯಲ್ಲಿ ಬರೆದುಕೊಡುವ ಉಪಕಾರ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಪರ್ಷಿಯನ್ ಪ್ರೊಫೆಸರಾಗಿದ್ದ ಶ್ರೀ ಮಹಮದ್ ಅಬ್ಬಾಸ್ ಷೂಸ್ತ್ರಿಯವರು ಕನ್ನಡಿಗರ ಕೃತಜ್ಞತೆಗೆ ಚಿರಕಾಲವೂ ಪಾತ್ರರು. ಮೂಲಕೃತಿಯನ್ನು ಪ್ರೇರಿಸಿ ಬರಸಿದ್ದಲ್ಲದೆ ಅದರ ಕನ್ನಡ ಅನುವಾದದ ಭಾರವನ್ನು ವಹಿಸಿ, ಕೃತಿ ಉತ್ತಮೋತ್ತಮವಾಗುವಂತೆಯೂ ಕನ್ನಡ ವಾಙ್ಮಯದ ಶ್ರೀಮಂತತೆಯ ಅಭಿವೃದ್ಧಿಗೆ ನೆರವಾಗುವಂತೆಯೂ ಸಾಧನೆಗೈದ ದಿವಂಗತ ಬಿ.ಎಂ.ಶ್ರೀಯವರಿಗಂತೂ ಕನ್ನಡ ಎಂದೆಂದಿಗೂ ಋಣಿ.

 

Leave a Reply

Your email address will not be published.