ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ

FB_IMG_1494772314490 “ನಮ್ಮ ನಾಡು-ನುಡಿಗಳು ಇಂದು ಒಂದು ನಿರ್ಧಾರಾತ್ಮಕ ಕ್ಷಣದಲ್ಲಿ ನಿಂತಿವೆ. ಜಾಗತೀಕರಣ, ತೀವ್ರ ಬಂಡವಾಳಶಾಹಿ, ಮುಂದುವರಿದ ದೇಶಗಳ ಆರ್ಥಿಕ ಶೋಷಣೆ ಮತ್ತು ಸಾಂಸ್ಕøತಿಕ ರಾಜಕಾರಣಗಳ ಕವಲು ಹಾದಿಯಲ್ಲಿ ನಿಂತಿರುವ ನಾವು ಈ ತನಕ ನಿರೂಪಿಸಿಕೊಂಡು ಬಂದಿರುವ ರಾಷ್ಟ್ರ ಮತ್ತು ಆಧುನಿಕತೆಗಳ ಕಲ್ಪನೆಗಳನ್ನು ವಿಶ್ಲೇಷಿಸಿಕೊಂಡು ನಮಗೆ ಬೇಕಾದ ಆಧುನಿಕತೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಆ ಆಧುನಿಕತೆಯು ಜನಪರ, ಪರಿಸರ ಸ್ನೇಹಿ, ಯುದ್ಧ ವಿರೋಧಿ, ವರ್ಗ, ಜಾತಿ, ಲಿಂಗ ತಾರತಮ್ಯ ವಿರೋಧಿ, ವಿವಿಧ ಜನ, ಜನಾಂಗ, ಗುಂಪು, ಪಂಗಡಗಳ ಸಾಮಾಜಿಕ ಅಸ್ಮಿತೆಯನ್ನೂ ಸಾಂಸ್ಕøತಿಕ ಅನನ್ಯತೆಯನ್ನೂ ಕಾಪಾಡುವ ಆಧುನಿಕತೆಯಾಗಿರಬೇಕು. ವಿಭಿನ್ನತೆಗಳನ್ನೂ, ವ್ಯತ್ಯಾಸಗಳನ್ನೂ ಮಾನ್ಯ ಮಾಡುತ್ತಲೇ ನಮ್ಮ ರಾಷ್ಟ್ರೀಯ ಮತ್ತು ಕನ್ನಡದ ಅಸ್ಮಿತೆಗಳನ್ನು, ಅಂದರೆ ನಾಡು ನುಡಿಗಳನ್ನು ನಾವು ಕಟ್ಟಬೇಕಾಗಿದೆ. ಇಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬರಹಗಳು ಮತ್ತು ಅವುಗಳನ್ನು ಬರೆಯುವ ಲೇಖಕರು ಈ ಹಿನ್ನೆಲೆಯಿಂದ ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಎಲ್ಲ ಬರಹಗಳೂ ಮೂಲಭೂತವಾಗಿ ರಾಜಕೀಯವಾಗಿವೆ. ಸ್ವಹಿತಾಸಕ್ತಿ, ಪಟ್ಟಭದ್ರ ಹಿತಾಸಕ್ತಿ, ಅಧಿಕಾರ ರಾಜಕಾರಣ, ಸಾಂಸ್ಥಿಕವಾಗಿ ಜಡಗೊಂಡ ಧಾರ್ಮಿಕ, ರಾಜಕೀಯ ಮತ್ತು ಮೂಲಭೂತವಾದಿ ವಿಚಾರಧಾರೆಗಳ ವಿರುದ್ಧ ಸಾಹಿತ್ಯ ಯಾವಾಗಲೂ ದಂಗೆ ಏಳುತ್ತದೆ ಮತ್ತು ದಂಗೆ ಎದ್ದಿದೆ. ಈ ಅರ್ಥದಲ್ಲಿ ಸಾಂಸ್ಥಿಕ ಜಡತೆಗಳ ವಿರುದ್ಧ ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ” ಎಂದು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಶಿವರಾಮ ಪಡಿಕ್ಕಲ್ ಹೇಳಿದರು.

ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ವು ಹೊನ್ನಾವರದ ಕೆರೆಕೋಣದಲ್ಲಿ ಹಮ್ಮಿಕೊಂಡ ‘ನಾಡು-ನುಡಿಯ ಪುನರ್ ನಿರೂಪಣೆ: ಹೊಸತಲೆಮಾರು’ ಎನ್ನುವ ವಿಷಯದ ಕುರಿತ ಸಹಯಾನ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಂದುವರಿದು, ಅವರು “ಇಂದು ನಾವಿರುವುದು ಯುರೋಪಿನ ಜ್ಞಾನ ಪರ್ವದ ಕಾಲದಲ್ಲಿ ವಿಕಾಸಗೊಂಡ ಆಧುನಿಕತೆÀ ಅಥವಾ ವಸಾಹತುಶಾಹಿಯ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ರೂಪುತಳೆದ ರಾಷ್ಟ್ರ ಕೇಂದ್ರಿತ ಆಧುನಿಕತೆಯ ಯುಗದಲ್ಲಿ ಇಲ್ಲ. ನಾವಿರುವುದು ಜಾಗತಿಕ ಮತ್ತು ಭೌಗೋಳಿಕ ಆಧುನಿಕತೆಯ ಅಲ್ಲ ಆಧುನಿಕತೆಗಳ ಸಂದರ್ಭದಲ್ಲಿ. ಇಲ್ಲಿ ಒಂದು ಯಜಮಾನ ಕಥನವಿಲ್ಲ, ಏಕರೂಪೀ ಅಸ್ಮಿತೆಯಿಲ್ಲ, ಐಕ್ಯಕೊಂಡ ವ್ಯಕ್ತಿತ್ವ ಅಥವಾ ವಕ್ತøತ್ವವಿಲ್ಲ. ಇದು ಅನೇಕ ಅಸ್ಮಿತೆಗಳ, ಅನೇಕ ವ್ಯಕ್ತಿತ್ವಗಳ, ವಕ್ತøತ್ವಗಳ ಮತ್ತು ಆಧುನಿಕತೆಗಳ ಕಾಲ. ಯಜಮಾನ ಸಂಕಥನಗಳನ್ನು ಪ್ರಶ್ನಿಸಿ, ಅವುಗಳಿಗೆ ಸೆಡ್ಡು ಹೊಡೆದು ಸವಾಲೊಡ್ಡಿ ವಿಭಿನ್ನ ರೀತಿಯ ಸಂಕಥನಗಳ ಸಾಧ್ಯತೆಯನ್ನು ಆಗು ಮಾಡುವ ಬರಹಗಳನ್ನು ಇಂದಿನ ಲೇಖಕರು ಬರೆಯುತ್ತಿದ್ದಾರೆ. ನಾಡು ಮತ್ತು ನುಡಿಗಳು ಸರ್ವ ಜನಾಂಗದ ಸುಂದರ ತೋಟ ಮತ್ತು ನೂರು ಮರ ನೂರು ಸ್ವರ ಎನ್ನುವ ಮಾತನ್ನು ಹಿಂದೆಂದಿಗಿಂತಲೂ ತೀವ್ರವಾಗಿ ಇಂದಿನ ಲೇಖಕರು ನಿರೂಪಿಸುತ್ತಿದ್ದಾರೆ.

ನಮ್ಮ ನಾಡು ನುಡಿಗಳು ಆಧುನಿಕಗೊಂಡು ಅರಳಿದುದು ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ, ಅದು ತಂದ ಆಧುನಿಕತೆಯ ಪರಿಪ್ರೇಕ್ಷ್ಯದಲ್ಲಿ ಮತ್ತು ರಾಷ್ಟ್ರೀಯತೆಯ ನಂಟಿನಲ್ಲಿ. ಭಾರತ ರಾಷ್ಟ್ರ ಮತ್ತು ಕನ್ನಡ ನಾಡು ಎನ್ನುವ ಮಹಾಕಲ್ಪನೆಯಲ್ಲಿ ಭಾಷಿಕ, ಜನಾಂಗಿಕ, ಲಿಂಗಭೇದದ, ಪ್ರಾದೇಶಿಕ ಮತ್ತು ಜಾತೀಯ ವೈವಿಧ್ಯಗಳನ್ನು ಕರಗಿಸಿ ಆಧುನಿಕ ಸಮಾನತಾ ಸಮಾಜವನ್ನು ಕಟ್ಟುವುದು ರಾಷ್ಟ್ರೀಯವಾದಿಗಳ ಕನಸಾಗಿತ್ತು. ಆಧುನಿಕತೆಯು ಆಧುನಿಕ ಪೂರ್ವ ಸಮಾಜದ ವೈರುಧ್ಯಗಳನ್ನು ಕರಗಿಸಿ ಸಮಾನತಾ ಸಮಾಜವನ್ನು ನಿರ್ಮಿಸಬಲ್ಲದು ಎನ್ನುವುದು ಅವರ ನಂಬಿಕೆ ಆಗಿತ್ತು. ಆ ಕನಸು ಸಮಾಜದ ಮೇಲುಸ್ತರದ ಜನರಿಂದ, ಸಾಂಸ್ಕøತಿಕ ಗಣ್ಯರಿಂದ ರೂಪಿತವಾದುದರಿಂದಾಗಿ ಸಾಮಾಜಿಕ ಕ್ರಾಂತಿಯನ್ನು ತಳಮಟ್ಟದ ಸಾಮಾಜಿಕ ಪರಿವರ್ತನೆಯನ್ನು ತರಲು ಸಾಧ್ಯವಾಗಿಲ್ಲ. ರಾಷ್ಟ್ರ ಮತ್ತು ಆಧುನಿಕತೆಗಳ ನಿರೂಪಣೆಯಲ್ಲಿ ಗಣ್ಯವರ್ಗಗಳು ಮುಂದಿಟ್ಟ ರೂಪಕಗಳು ಇಂದು ಬಿಕ್ಕಟ್ಟಿಗೆ ಸಿಲುಕಿದೆ. ಆಧುನಿಕತೆಯನ್ನು ಹೊಸ ತಲೆಮಾರು ಪುನರ್ ನಿರೂಪಿಸುವಾಗ ಈ ಪ್ರತಿಮೆಗಳ ವಿಶ್ಲೇಷಣೆ ಮತ್ತು ಪುನರ್‍ನಿರೂಪಣೆ ಅಗತ್ಯ.

DSC_1756(1)ಇಂದು ನಾವು ಬಹುಮುಖ ಚಿಂತನೆ, ಬಹುಮುಖಿ ವಿಚಾರಧಾರೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ವಿವಿಧ ಸಾಂಸ್ಕøತಿಕ ಅಸ್ಮಿತೆಗಳಿಗೆ ಮನ್ನಣೆ ಸಾಮಾಜಿಕ ಅನ್ಯಾಯ ಅಸಮಾನತೆಗಳ ವಿರೋಧ, ಸ್ತ್ರೀ ಸ್ವಾತಂತ್ರ್ಯ, ಪರಿಸರ ಪ್ರೇಮಿ ಬಹಿರಂಗÀದ ಆರ್ಥಿಕ ಪ್ರಗತಿಯ ಜೊತೆಗೇ ಅಂತರಂಗದ ಪರಿಶುದ್ಧತೆಯನ್ನು ಕಾಪಾಡುವ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಾಡು-ನುಡಿಗಳ ಕನಸಿನಿಂದ ಕೂಡಿದ ಸಂಕಥನಗಳನ್ನು ಯಜಮಾನ ಸಂಸ್ಕøತಿ ಮತ್ತು ಅಧಿಕಾರಗಳು ಮುಂದಿಡುವ ಏಕರೂಪೀ ಸಂಕಥನಗಳಿಗೆ ಎದುರು ಸಂಕಥನಗಳನ್ನು ಪ್ರತಿ ಸಂಕಥನಗಳನ್ನು ನಿರೂಪಿಸಬೇಕಾಗಿದೆ.” ಎಂದರು.

ಸಾಹಿತ್ಯೋತ್ಸವವನ್ನು ಉದ್ಘಾಟಸಿದ ಕತೆಗಾರ ಕಾ. ತ. ಚಿಕ್ಕಣ್ಣ ಮಾತನಾಡಿದ ಸಮಾಜದ ಮೌಲ್ಯಗಳನ್ನು ಕಟ್ಟುವ ಕೆಲಸ ಆಗಬೇಕು. ನಾಡು ರಾಷ್ಟ್ರ ಧರ್ಮ ಭಾಷೆ ಇವು ಪರಸ್ಪರರನ್ನು ಬೆಸೆಯಲು ಹುಟ್ಟಿಕೊಂಡವು. ಆದರೆ ಈಗ ಅವುಗಳನ್ನು ಬಳಸಿ ಒಡೆಯುವ ಕೆಲಸ ನಡೆಯುತ್ತಿದೆ. ಬದಲಾಗಿ ಬೆಸೆಯುವ ಯಾನವೂ ಯುವಜನರಿಂದ ನಡೆಯಬೇಕಾಗಿದೆ. ಬಾವುಟ ಭಾಷಣಗಳೆಲ್ಲ ಬಾಹ್ಯ ಜಗತ್ತು. ಜೀವನದ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕೆಲಸ ಅಂತರಂಗದಲ್ಲಿ ಆಗಬೇಕಾಗಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡ ಸಮುದಾಯ ಕರ್ನಾಟಕದ ಅಧ್ಯಕ್ಷರಾದ ಎ. ಅಚ್ಯುತ ಮಾತನಾಡಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಕೃಷಿಕರು ಮತ್ತು ಕೃಷಿ ರಂಗ ಸಂಕಟದಲ್ಲಿದೆ. ಇದನ್ನು ಪರಿಹರಿಸುವ ಬದಲು ಏಕಮುಖೀ ಸಂಸ್ಕøತಿಯನ್ನು ಹೇರುವ ಮೂಲಕ ರಾಜಕೀಯ ತಲ್ಲಣವ್ನುಂಟುಮಾಡಲಾಗುತ್ತಿದೆ. ಇದರಿಂದ ಹೊರಬರಲು ಯುವಕರು ಸಹಯಾನದ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಯಾನದ ಕಾರ್ಯದರ್ಶಿ ಡಾ. ವಿಠ್ಠಲ ಭಂಡಾರಿ ಈ ಸಲದ ಸಹಯಾನ ಸಾಹಿತ್ಯೋತ್ಸವದಲ್ಲಿ ನಮ್ಮ ಕಾಲದ ಸಾಹಿತ್ಯ ರಾಷ್ಟ್ರ ಭಾಷೆ ಹಾಘೂ ಸಾಂಸ್ಕøತಿಕ ವೈವಿಧ್ಯಗಳ ಪ್ರಶ್ನೆಗಳನ್ನು ಹೊಸತಲೆಮಾರು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನೇ ಮುಖ್ಯ ಪ್ರಶ್ನೆಯಾಗಿ ಚರ್ಚಿಸಬೇಕೆಂದಿದ್ದೇವೆ. ಇಂದಿನ ಸಾಹಿತ್ಯ ಕಲ್ಪಿಸುವ ನಾಡು ನುಡಿಯ ಸ್ವರೂಪ ಎಂತಹುದು, ಈ ಕಲ್ಪನೆಯ ಹಿಂದಿನ ತಾತ್ವಿಕ ಗೃಹಿಕೆಗಳು, ಒತ್ತಾಸೆಗಳು ಯಾವುವು, ಈ ಕಲ್ಪನೆಯನ್ನು ಸಾಧ್ಯವಾಗಿಸಿದ ಸಾಂಸ್ಕøತಿಕ ಸನ್ನಿವೇಶ ಯಾವೆಲ್ಲ ಪ್ರಶ್ನೆಗಳನ್ನು ಮುಂದಿಡುತ್ತಿದೆ ಸಾಹಿತ್ಯ ಈ ಪ್ರಶ್ನೆಗಳನ್ನು ಹಏಗೆ ನಿಭಾಯಿಸುತ್ತದೆ, ವಿಸ್ತಾರವಾದ ಓದುಗ ವರ್ಗದ ಪಾತ್ರವೇನು ಎನ್ನುವ ಪ್ರಶ್ನೆಯಾಧಾರದಲ್ಲಿ ಒಂದು ಚರ್ಚೆಯನ್ನು ಹುಟ್ಟುಹಾಕಲು ಈ ಸಲದ ಸಹಯಾನ ಸಾಹಿತ್ಯೋತ್ಸವ ಬಯಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಯಾನದ ಪರಿಚಯ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರಾರಂಭದಲ್ಲಿ ಸಹಯಾನದ ಕಾರ್ಯಾಧ್ಯಕ್ಷ ವಿಷ್ಣು ನಾಯ್ಕ ಸ್ವಾಗತಿಸಿದರೆ ಚಿಂತನದ ಕಿರಣ ಭಟ್ ವಂದಿಸಿದರು. ನಂತರ ನಡೆದ ಸಂವಾದದಲ್ಲಿ ಡಾ. ಮಲ್ಲಿಕಾರ್ಜುನ ಮೇಟಿ ಮತ್ತು ಬಿ. ಪೀರ್ ಭಾಷಾ ಇವರು ನಾಡು ಮತ್ತು ನುಡಿಯ ಪುನರ್ ನಿರೂಪಣೆಯ ಕುರಿತು ಮಾತನಾಡಿದರು. ಸಂವಾದದಲ್ಲಿ ಡಾ. ನಾಗಪ್ಪ ಗೌಡ, ಡಾ. ಕಿರಣ ಗಾಜನೂರು, ಡಾ. ಆರ್. ಛಲಪತಿ, ಡಾ. ಜಿ.ಎಂ. ಗಣೇಶ, ಕೃಷ್ಣಪ್ಪ ಕೊಂಚಾಡಿ, ವಾಸುದೇವ ಬೆಳ್ಳೆ, ಡಾ. ಅನಸೂಯಾ ಕಾಂಬಳೆ, ಡಾ. ಎಚ್. ಎಸ್ ಅನುಪಮಾ, ಡಾ. ಜಯಪ್ರಕಾಶ ಶೆಟ್ಟಿ, ರಮಾನಂದ ಅಂಕೋಲಾ, ಎಸ್. ವೈ ಗುರುಶಾಂತ ಮುಂತಾದವರು ಪಾಲ್ಗೊಂಡು ಚರ್ಚೆಯನ್ನು ಅರ್ಥಪೂರ್ಣ ಗೊಳಿಸಿದರು. ಕಾವ್ಯಶ್ರೀ ನಾಯ್ಕ ಗೋಷ್ಠಿಯನ್ನು ನಿರ್ವಹಿಸಿದರು.

Leave a Reply

Your email address will not be published.