ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ

-ನಾ ದಿವಾಕರ

ಸಾರ್ವಜನಿಕ ಜೀವನದಲ್ಲಿ ಮುಂದಿನ ಹಲವು ಪೀಳಿಗೆಗಳಿಗೆ ಮಾದರಿಯಾಗಿ ಹೊರಹೊಮ್ಮುವ ವ್ಯಕ್ತಿತ್ವಗಳನ್ನು ಒಂದು ಚೌಕಟ್ಟಿನಲ್ಲಿ ಸಿಲುಕಿಸಿ ಚಿತ್ರಪಟವನ್ನಾಗಿಸಿದಾಗ ಸಮಾಜ ಮತ್ತು ಆ ವ್ಯಕ್ತಿಗಳ ನಡುವಿನ ಕಂದರ ಸೃಷ್ಟಿಯಾದಂತೆ. ಇದರ ಮುಂದಿನ ಹಂತ ಎಂದರೆ ಅಂತಹ ವ್ಯಕ್ತಿಗಳ ಪ್ರತಿಮೆಯ ಸ್ಥಾಪನೆ. ಗೌರವಾದರಗಳನ್ನು ಪ್ರದರ್ಶಿಸುವ ಆಡಂಬರದ ಆಚರಣಾತ್ಮಕ ಧೋರಣೆಗೆ ಬಲಿಯಾಗುವ ವಿದ್ಯಮಾನ ಪ್ರತಿಮೆಯಲ್ಲಿ ಪರ್ಯವಸಾನಹೊಂದುತ್ತದೆ. ಈ ಪ್ರಕ್ರಿಯೆಯ ಶಿಖರ ಹಂತವೆಂದರೆ ಇಂತಹ ಆದರ್ಶಪ್ರಾಯ, ಆದರಣೀಯ ವ್ಯಕ್ತಿಗಳ ಹೆಸರಿನಲ್ಲಿ ನಿರ್ಮಿಸಲಾಗುವ ಸ್ಮಾರಕಗಳು. ಚಿತ್ರಪಟದಿಂದ ಸ್ಮಾರಕದವರೆಗಿನ ಪಯಣದಲ್ಲಿ ಸಾರ್ವತ್ರಿಕವಾಗಿ ಸ್ವೀಕೃತವಾಗಬಹುದಾದ ವ್ಯಕ್ತಿಗಳು ಸಾಮುದಾಯಿಕ ಚೌಕಟ್ಟಿನೊಳಗೋ, ಚಾರಿತ್ರಿಕ ಕೂಪದೊಳಗೋ ಅಥವಾ ಅಂಧ ಶ್ರದ್ಧೆಯ ಸಂಕೋಲೆಗಳಲ್ಲೋ ಬಂಧಿಯಾಗಿಬಿಡುತ್ತಾರೆ. ಪ್ರತಿಮಾ ಸಂಸ್ಕøತಿಯ ವೈಭವೀಕರಣದಲ್ಲಿ ಈ ವ್ಯಕ್ತಿಗಳ ಆದರ್ಶ, ತತ್ವ, ಸಿದ್ಧಾಂತ ಮತ್ತು ಅನುಕರಣೀಯ, ಅನುಸರಣೀಯ ಧೋರಣೆಗಳು ಸಮಾಧಿಯಾಗಿಬಿಡುತ್ತವೆ. ಇದು ಮನುಕುಲ ಕಂಡಿರುವ ಚಾರಿತ್ರಿಕ ಸತ್ಯ.

ಭಾರತದ ಸಾಮಾಜಿಕ, ಸಾಂಸ್ಕøತಿಕ ಸಂದರ್ಭದಲ್ಲಿ ನೋಡಿದಾಗ ಗಾಂಧಿ, ಅಂಬೇಡ್ಕರ್, ನಾರಾಯಣಗುರು, ಬಸವಣ್ಣ, ಕಬೀರ್, ವಿವೇಕಾನಂದ ಇನ್ನೂ ಮುಂತಾದ ಮಹನೀಯರು ಈ ರೀತಿ ಭೂಗತ ಸಿದ್ಧಾಂತಗಳ ಪ್ರವಾದಿಗಳಾಗಿದ್ದಾರೆ. ಪ್ರತಿಮಾ ಸಂಸ್ಕøತಿ ಮನುಕುಲಕ್ಕೆ ಅಂಟಿರುವ ಒಂದು ಸಾಂಕ್ರಾಮಿಕ ರೋಗ. ಸ್ಮಾರಕ ಸಂಸ್ಕøತಿ ಒಂದು ಅಂಟು ಜಾಢ್ಯ. ಇದಕ್ಕೆ ಯಾವ ಸಮಾಜವೂ ಹೊರತಾಗಿಲ್ಲ. ಯಾವ ಸಮುದಾಯವೂ ಹೊರತಾಗಿಲ್ಲ. ಮಾರ್ಗದರ್ಶಕ ವ್ಯಕ್ತಿಗಳನ್ನು ಸ್ಮರಿಸುವ ಸಂಸ್ಕøತಿಗೆ ಆಚರಣಾತ್ಮಕ ಸ್ವರೂಪ ನೀಡಿದಾಗ ಇಂತಹ ಅಭಾಸಗಳು ಸಹಜ. ಹಾರ, ತುರಾಯಿ, ಜೈಕಾರ ಮತ್ತು ಆರಾಧನೆಗಳ ಭರಾಟೆಯಲ್ಲಿ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ನೇಪಥ್ಯಕ್ಕೆ ಸರಿದರೆ, ಅವರ ತತ್ವ ಸಿದ್ಧಾಂತಗಳು ಮೌನವಾಗಿ ಭೂಗತವಾಗುತ್ತವೆ. ಮುಕ್ತ ವಾತಾವರಣದಲ್ಲಿ ಅಶರೀರವಾಣಿಯಂತೆ ಝೇಂಕರಿಸುವ ಮಹನೀಯರ ತತ್ವ ಸಿದ್ಧಾಂತಗಳು ಘೋಷಣೆಗಳಾಗಿಬಿಡುತ್ತವೆ. ಅನುಕರಣೀಯ ತತ್ವಗಳ ಸ್ಥಾನವನ್ನು ಅನುಸರಣೀಯ ಮಾದರಿಗಳು ಆಕ್ರಮಿಸುತ್ತವೆ. ಜಂಗಮ ರೂಪದ ತಾತ್ವಿಕ ಮೌಲ್ಯಗಳು ಸ್ಥಾವರಗಳ ಅಡಿಗಲ್ಲುಗಳಾಗಿ ನಿರ್ದಿಷ್ಟ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸುವ ಹಾಸುಗಲ್ಲುಗಳಾಗಿ ಕೊನೆಗೊಳ್ಳುತ್ತವೆ.
ಮೈಸೂರಿನ ಎನ್‍ಟಿಎಂ ಬಾಲಕಿಯರ ಶಾಲೆಯನ್ನು ರಾಮಕೃಷ್ಣ ಮಠಕ್ಕೆ ಪರಭಾರೆ ಮಾಡುವ ಮೂಲಕ ಅಲ್ಲಿ ವಿವೇಕಾನಂದ ಸ್ಮಾರಕವನ್ನು ನಿರ್ಮಿಸುವ ಸರ್ಕಾರದ ಇರಾದೆ ಮತ್ತು “ ವಿವೇಕ ” ಬಳಗದ ಒತ್ತಾಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮನದಾಳದಲ್ಲಿ ಮೂಡಿದ ಮಾತುಗಳನ್ನು ಮೇಲೆ ಉಲ್ಲೇಖಿಸಿದ್ದೇನೆ. ಹಲವು ವರ್ಷಗಳ ಬಳಿಕ ಈ ಸಮಸ್ಯೆ ಮತ್ತೊಮ್ಮೆ ಭುಗಿಲೆದ್ದಿದೆ. ಶಾಲೆಯನ್ನು ಮುಚ್ಚುವುದಿಲ್ಲ ಹತ್ತಿರದಲ್ಲೇ ಇರುವ ದೇವರಾಜ ಸರ್ಕಾರಿ ಶಾಲೆಯೊಡನೆ ವಿಲೀನಗೊಳಿಸುತ್ತೇವೆ ಎಂದು ಹೇಳುವುದು, ಪ್ರೀತಿಯಿಂದ ಅಪ್ಪಿಕೊಂಡು ಸ್ವಾಹ ಮಾಡಿದಂತೆಯೇ ಸರಿ. ಆದರೂ ಈ ಧೋರಣೆಗೆ ಸರ್ಕಾರದ ಒತ್ತಾಸೆಯಿದೆ, ಕೆಲವು ಹಿತಾಸಕ್ತಿಗಳ ಆಶಯವೂ ಇದೆ. ಇಲ್ಲಿ ಪ್ರಶ್ನೆ ಉದ್ಭವಿಸುವುದು ಶಾಲೆಯ ಮುಂದುವರಿಕೆ, ವಿಲೀನ ಅಥವಾ ಮಚ್ಚುವಿಕೆಯನ್ನು ಕುರಿತು ಅಲ್ಲ. ಮುಂದಿನ ಪೀಳಿಗೆಯ ಭದ್ರ ಬುನಾದಿಯನ್ನು ನಿರ್ಮಿಸುವ ಒಂದು ವಿದ್ಯಾ ಸಂಸ್ಥೆಯ ಸಮಾಧಿಯ ಮೇಲೆ, ವ್ಯಕ್ತಿ ಪೂಜೆ, ಆರಾಧನಾ ಸಂಸ್ಕøತಿಗಳನ್ನು ಪ್ರತಿರೋಧಿಸಿದ ಮಹನೀಯರ ಸ್ಮಾರಕವನ್ನು ನಿರ್ಮಿಸುವ ವೈಪರೀತ್ಯ ಇಲ್ಲಿ ಪ್ರಶ್ನಾರ್ಹವಾಗುತ್ತದೆ.

ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಶಾಲೆಯ ಕೋಣೆಯೊಂದರಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಶಾಲೆಯ ಸ್ವರೂಪವನ್ನೇ ಬದಲಿಸಿ ಸ್ಮಾರಕವನ್ನು ನಿರ್ಮಿಸುವುದು ಆರಾಧನಾ ಸಂಸ್ಕøತಿಯ ಪರಾಕಾಷ್ಠೆ . ಹಸಿದ ಹೊಟ್ಟೆಗೆ ಉಪನ್ಯಾಸ ನೀಡಬೇಡಿ, ಅನ್ನ ಕೊಡಿ ಎಂದ ದಾರ್ಶನಿಕ ವ್ಯಕ್ತಿಯನ್ನು ಸ್ಮರಿಸಲು, ಅರಿವಿನ ಹಸಿವು ನೀಗಿಸುವ ತಾಣವನ್ನು ಧ್ವಂಸ ಮಾಡಿ ಸ್ಮಾರಕ ನಿರ್ಮಿಸುವುದು ವಿವೇಕಾನಂದರಿಗೆ ಅವಮಾನ ಮಾಡಿದಂತಲ್ಲವೇ ? ಸ್ಮಾರಕವನ್ನು ನಿರ್ಮಿಸುವುದಾದರೂ ಯಾರು.ಮೈಸೂರಿನ ರಾಮಕೃಷ್ಣ ಮಠ. ಈ ಮಠದ ಸಾಮಾಜಿಕ ಕೊಡುಗೆಯಾದರೂ ಏನು ? ಜಾತಿವಾದ, ಮತೀಯವಾದ, ಕೋಮುವಾದ ಮತ್ತು ಸಾಂಸ್ಕøತಿಕ ಭಯೋತ್ಪಾದನೆಯಿಂದ ಜರ್ಝರಿತವಾಗುತ್ತಿರುವ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಠದ ಕೊಡುಗೆ ಏನಿದೆ ? ವೇದ, ಉಪನಿಷತ್ತು, ಸನಾತನ ಹಿಂದೂ ಧರ್ಮದ ಮೌಲ್ಯಗಳು ಮತ್ತು ಸಮಕಾಲೀನ ಸಂದರ್ಭದಲ್ಲಿ ಹಿಂದೂ ಧರ್ಮದ ರಕ್ಷಣೆ ಈ ಮೌಲ್ಯಗಳನ್ನು ಹೊರತುಪಡಿಸಿ ರಾಮಕೃಷ್ಣ ಮಠ ಮತ್ತು ವಿವೇಕಾನಂದರ ಅನುಯಾಯಿಗಳು ಒಂದು ಹೆಜ್ಜೆಯನ್ನಾದರೂ ಮುಂದಿರಿಸಿದ್ದಾರೆಯೇ ?

ನೂರಾರು ಎಕರೆ ಭೂಮಿಯನ್ನು ಪರಭಾರೆ ಮಾಡಿಕೊಂಡು ಶಿಕ್ಷಣ ಸಂಸ್ಥೆಯನ್ನು ನಡೆಸುವ ರಾಮಕೃಷ್ಣ ಮಠದಲ್ಲಿ ಶೋಷಿತರಿಗೆ, ಅಸ್ಪøಶ್ಯರಿಗೆ, ನಿರ್ಗತಿಕರಿಗೆ, ಅಕ್ಷರ ಕಲಿಯುವ ಆರ್ಥಿಕ ಸಾಮಥ್ರ್ಯ ಇಲ್ಲದವರಿಗೆ, ಪರಮಹಂಸ-ವಿವೇಕಾನಂದರ ಧಾರ್ಮಿಕ ನಿಲುವುಗಳನ್ನು ಸ್ವೀಕರಿಸದ ಸಮುದಾಯಗಳಿಗೆ ನಿಸ್ವಾರ್ಥತೆಯಿಂದ ಶಿಕ್ಷಣ ಒದಗಿಸಲು ಸಾಧ್ಯವೇ ? ಇದು ಸಾಧ್ಯವಿಲ್ಲ ಎಂದಾದಲ್ಲಿ ರಾಮಕೃಷ್ಣ ಮಠಕ್ಕೆ ವಿವೇಕಾನಂದರ ಸ್ಮಾರಕ ನಿರ್ಮಿಸುವ ನೈತಿಕ ಹಕ್ಕು ಇರುವುದಿಲ್ಲ. ನಿರ್ಮಿಸುವುದೇ ಆದಲ್ಲಿ ರಾಮಕೃಷ್ಣ ಮಠದ ಆವರಣದಲ್ಲೇ ನಿರ್ಮಿಸಬಹುದಲ್ಲವೇ ? ವಿವೇಕಾನಂದರು ಮೈಸೂರಿನಲ್ಲಿ ತಂಗಿದ್ದುದೇ ಆದಲ್ಲಿ ಮೈಸೂರು ನಗರವನ್ನೇ ವಿವೇಕಾನಂದ ಸ್ಮಾರಕ ನಗರ ಎಂದು ಪರಿಗಣಿಸಿ ತಮ್ಮ ಆತ್ಮ ತೃಪ್ತಿಯ ಹಪಾಹಪಿಯನ್ನು ನೀಗಿಸಿಕೊಳ್ಳಲಿ. ಈ ಹಪಾಹಪಿಗೆ ಒಂದು ಶಿಕ್ಷಣ ಸಂಸ್ಥೆ ಬಲಿಯಾಗಬೇಕೇ ? ಮಠದ ಈ ಕ್ರಮವನ್ನು ವಿವೇಕಾನಂದರು ಬದುಕಿದ್ದಿದ್ದಲ್ಲಿ ಒಪ್ಪುತ್ತಿದ್ದರೇ ಎಂಬ ಬಾಲಿಶ ಪ್ರಶ್ನೆ ಬೇಕಿಲ್ಲ, ವಿವೇಕ ಇರುವವರು ಒಪ್ಪಬಹುದೇ ಎಂಬ ವಾಸ್ತವದ ಪ್ರಶ್ನೆ ಇಲ್ಲಿ ಮಹತ್ತರವಾದುದು.

ಖ್ಯಾತ ಸಾಹಿತಿ, ವಿಶ್ವಮಾನವ ಸಂಸ್ಕøತಿಯ ಪ್ರತಿಪಾದಕರಾದ ಸಿಪಿಕೆಯಂತಹ ವಿದ್ವಾಂಸರೂ ಸಹ ಈ ಸಂದರ್ಭದಲ್ಲಿ ಸ್ಮಾರಕದ ಪರ ವಹಿಸಿರುವುದು ವ್ಯಕ್ತಿ ಆರಾಧನೆಯ ಒಂದು ನಿದರ್ಶನ. ಅನ್ನಭಾಗ್ಯಕ್ಕಿಂತಲೂ ವಿವೇಕ ಭಾಗ್ಯ ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂಬ ಸಿಪಿಕೆಯವರ ಹೇಳಿಕೆ ಬಾಲಿಶವಷ್ಟೇ ಅಲ್ಲ ಅರ್ಥಹೀನವೂ ಹೌದು. ಇಲ್ಲಿ ಯಾವ ವಿವೇಕ ಭಾಗ್ಯವನ್ನು ಕುರಿತು ಮಾತನಾಡುತ್ತಿದ್ದಾರೆ? ವಿವೇಕಾನಂದರನ್ನು ತಾತ್ವಿಕವಾಗಿ ಅರ್ಥ ಮಾಡಿಕೊಂಡವರು ಅನ್ನಭಾಗ್ಯಕ್ಕೂ “ ವಿವೇಕ ” ಭಾಗ್ಯಕ್ಕೂ ಸಂಬಂಧ ಕಲ್ಪಿಸುವುದಿಲ್ಲ. ವಿವೇಕಾನಂದರು ಭೋಧಿಸಿದ ನೀತಿ ಮತ್ತು ತತ್ವಗಳ ಅನುಷ್ಠಾನದ ನೆಲೆಯಲ್ಲಿನ ವಿವೇಕ ಭಾಗ್ಯ ನಮ್ಮ ದೇಶದ ತರುಣರಿಗೆ ಅವಶ್ಯವಾಗಿ ಬೇಕಾಗಿದೆ. ಆದರೆ ವಿವೇಕ ಸ್ಮಾರಕದ ಭಾಗ್ಯ ಅನಿವಾರ್ಯವೇನಲ್ಲ. ಹಾಗೊಂದು ವೇಳೆ ಸ್ಮಾರಕದ ಮೂಲಕ, ಪ್ರತಿಮೆಗಳ ಮೂಲಕ ದಾರ್ಶನಿಕರ ಮೌಲ್ಯಗಳನ್ನು ಬಿಂಬಿಸುವ ನೈತಿಕತೆ ನಮ್ಮ ಸಮಾಜಕ್ಕೆ ಇದ್ದುದೇ ಆದರೆ ಎಲ್ಲ ಗಾಂಧೀನಗರಗಳೂ ಸಹ ಸತ್ಯದ ಬೀಡು ಆಗಿರಬೇಕಿತ್ತಲ್ಲವೇ ?

ನಮಗೆ ಬೇಕಿರುವುದು ವಿವೇಕ ಭಾಗ್ಯವಲ್ಲ, ವಿವೇಕಾನಂದರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಭಾಗ್ಯ. ವಿವೇಕಾನಂದರ ದಾರ್ಶನಿಕತೆ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳು ಆಧುನಿಕ ಸಮಾಜದಲ್ಲಿ ಅವರಂತೆಯೇ ಜಂಗಮ ಸ್ವರೂಪದಲ್ಲಿ ಜನಮಾನಸದ ಆತ್ಮಗಳಲ್ಲೊಂದಾಗಬೇಕು. ವಿಪರ್ಯಾಸವೆಂದರೆ ಈ ಮೌಲ್ಯಗಳನ್ನು ಸ್ಥಾವರದ ಚೌಕಟ್ಟಿನಲ್ಲಿ ಸಮಾಧಿ ಮಾಡಲಾಗುತ್ತಿದೆ. ಭಾರತದ ಶ್ರೇಣೀಕ್ಥತ ಜಾತಿ ವ್ಯವಸ್ಥೆಯ ವಿಕೃತಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಮಾನವೀಯ ಸಂದೇಶ ನೀಡಿದ ವಿವೇಕಾನಂದರನ್ನು ಪ್ರತಿಮೆ ಸ್ಮಾರಕದೊಳಗೆ ಬಂಧಿಸುವ ವಿವೇಕ ಪ್ರಜ್ಞೆಯಾಗಲೀ, ವಿವೇಕ ಭಾಗ್ಯವಾಗಲೀ ಖಂಡಿತವಾಗಿಯೂ ನಮಗೆ ಅಗತ್ಯವಿಲ್ಲ. ಸಮಕಾಲೀನ ಸಂದರ್ಭದ ಹಿಂದೂ ಧರ್ಮ, ಹಿಂದುತ್ವ ಮತ್ತು ಹಿಂದೂ ಧಾರ್ಮಿಕ ವ್ಯಾಖ್ಯಾನಗಳಿಂದ ವಿವೇಕಾನಂದರನ್ನು ವಿಮುಕ್ತರನ್ನಾಗಿಸಿ, ಮತೀಯ ಸಂಕೋಲೆಗಳಿಂದ ಬಿಡಿಸುವುದು ನಮ್ಮ ಆದ್ಯತೆಯಾಗಬೇಕಿದೆ. ವಿವೇಕ ಸ್ಮಾರಕ ಈ ನಿಟ್ಟಿನಲ್ಲಿ ಜಂಗಮ ರೂಪದಲ್ಲೇ ಮುನ್ನಡೆಯಲಿ. ಸ್ಥಾವರದಲಿ ಬಂಧಿಯಾಗುವುದು ಬೇಡ.

Leave a Reply

Your email address will not be published.