ಚೀನಾ ಪ್ರವಾಸ-3: ಈಕೆಯ ಹೆಸರು ‘ಏಪ್ರಿಲ್’

-ಪ್ರೊ. ಎಂ. ಲೀಲಾವತಿ, ವಿಶ್ರಾಂತ ಪ್ರಾಧ್ಯಾಪಕರು

china photos 1ಯಾಂಥಾಯ್ ಊರಲ್ಲಿ ಕಾಗೆಗಳು ಕಾಣಲಿಲ್ಲ, ಗುಬ್ಬಿಗಳು ಯಥೇಚ್ಛವಾಗಿ ಕಂಡವು. ಗುಲಾಬಿ ಗಿಡಗಳು ಎತ್ತರವಾಗಿ ಪೊದೆ ಪೊದೆಯಾಗಿ ಬೆಳೆದಿದ್ದು, ಬಹುದೊಡ್ಡ ಗಾತ್ರದ ಹೂಗಳು ಬಿಟ್ಟಿದ್ದವು. ದಾಳಿಂಬೆ ಗಿಡಗಳೂ ಹೂಗಳಿಂದ ತುಂಬಿದ್ದು, ಒಂದೊಂದು ಹೂ ದೊಡ್ಡ ಗುಲಾಬಿಯ ಹೂವಿನಂತಿದ್ದು, ಹೂವಿನ ಆಕಾರವೇ ಮುಂದೆ ಹಣ್ಣಿನ ಸೈಜನ್ನು ಹೇಳುವಂತಿತ್ತು. ದೇಶದ ಉತ್ತರ ಭಾಗದಲ್ಲಿರುವ ಈ ಪ್ರದೇಶ ಭಾರತಕ್ಕೆ ಕಾಶ್ಮೀರವಿದ್ದಂತೆಯಿದೆ. ಚಳಿಗಾಲದಲ್ಲಿ ವಿಪರೀತ ಹಿಮ ಬೀಳುತ್ತದೆ. ನಾವು ಈಗ ನೋಡಿದ ಈ ಗಿಡಗಳ್ಯಾವುವೂ ಚಳಿಗಾಲದಲ್ಲಿರುವುದಿಲ್ಲ ಎಂದು ನನ್ನ ಮಗಳು ಹೇಳಿದಳು.

ನನ್ನ ಮಗಳ ಮನೆಗೆ ಕೆಲಸ ಮಾಡಲು ಒಬ್ಬರು ಹಿರಿಯ ಮಹಿಳೆ ಬರುತ್ತಿದ್ದರು. [ಅವಶ್ಯಕತೆಯಿಲ್ಲ ನಮಗೆ ಎಂದರೂ ಕೇಳದೆ ಬರುತ್ತಿದ್ದರು. ಅಲ್ಲಿಯೇ ತೋಟದಲ್ಲಿ ಪ್ಲ್ಯಾಟ್ ನರೈ ತೋಟದಲ್ಲಿ ಕೆಲಸ ಮಾಡುವವರು ಇವರು] ಸುಮಾರು 70 ರ ಗಡಿಯಲ್ಲಿದ್ದರು. ನೆಲವೊರೆಸಲು ಕೆಳಗಡೆಯ ನಲ್ಲಿಯಿಂದ ನೀರನ್ನು ತುಂಬಿಸಿಕೊಂಡು ಮೇಲಕ್ಕೆ ತರುವುದು ಆಕೆಯ ಅಭ್ಯಾಸ, ಮನೆ 4ನೇ ಮಹಡಿಯಲ್ಲಿತ್ತು. ಬೇಡವೆಂದರೂ ಕೇಳುತ್ತಿರಲಿಲ್ಲ. ಆಕೆಯೇ ಒರೆಸುವ ಬಟ್ಟೆಯನ್ನು ತರುತ್ತಿದ್ದರು. ಭಾಷೆ ಬಾರದಿದ್ದರಿಂದ ಹೆಚ್ಚು ಹೇಳದೆ ಸುಮ್ಮನಾಗಿದ್ದಳು ನನ್ನ ಮಗಳು. ಆಕೆ ಬಹು ಒಳ್ಳೆಯ ಹೆಣ್ಣು ಮಗಳು.

ಆ ವಯಸ್ಸಿನಲ್ಲಿ ಎಷ್ಟೊಂದು ಚಟುವಟಿಕೆಯಿತ್ತೆಂದರೆ, ಒಮ್ಮೆಯೂ ಬೇಸರದ ಆಯಾಸದ ಲಕ್ಷಣ ಮುಖದಲ್ಲಿರಲಿಲ್ಲ. ಸದಾ ಹಸನ್ಮುಖಿ. ವ್ಯಾಯಾಮದ ಅನಿವಾರ್ಯ ತನ್ನ ಆರೋಗ್ಯಕ್ಕೆ ವ್ಯಾಯಾಮವೇ ಸಹಕಾರಿ ಅಂತ ಹೇಳಿದ ಆಕೆ ತಾನು ಮಾಡುವ ವ್ಯಾಯಾಮವನ್ನು ನಮಗೆ ಮಾಡಿ ತೋರಿಸಿ ನಾವೂ ಪ್ರತಿದಿನ ಮಾಡುವಂತೆ ಪ್ರೀತಿಯಿಂದ ಒತ್ತಾಯಿಸುತ್ತಿದ್ದರು. ಶಿರಸಾನ, ಎರಡೂ ಕಾಲುಗಳನ್ನು ಸೊಂಟ ಬಗ್ಗಿಸದೆ ನಿರಾಯಾಸವಾಗಿ ಮೇಲೆತ್ತುವುದು. ಇಡೀ ದೇಹಕ್ಕೆ ವ್ಯಾಯಾಮವಾಗುವ ಹಲವು ರೀತಿಯ ವ್ಯಾಯಾಮಗಳನ್ನು ಆಕೆ ಮಾಡಿ ತೋರಿಸುತ್ತಿದ್ದರೆ ನಾವು ಬೆವರಿಳಿಸಿಕೊಳ್ಳುವಂತೆ ನೋಡುತ್ತಿದ್ದೆವು. ನೀಲಿ ಬಣ್ಣದ ಪಯಿಜಾಮ ಶರಟನ್ನು ಧರಿಸಿ ಬರುತ್ತಿದ್ದ ಆ ಹಿರಿಯರನ್ನು ಮರೆಯುವಂತೆಯೇ ಇಲ್ಲ. ಕಣ್ಣಿಗೆ ಕಟ್ಟಿದ ಹಾಗಿದ್ದಾರೆ. (ನೀರು ತುಂಬಿದ ಕಬ್ಬಿಣದ ಬಕೆಟ್ಟನ್ನು ಆಕೆ ನಾಲ್ಕನೇ ಮಹಡಿಗೆ ನಿರಾಯಾಸವಾಗಿ ಎತ್ತಿ ತರುತ್ತಿದ್ದರು)

china photos 3ನನ್ನ ಅಳಿಯನ ಆಫೀಸಿನ ಸಹೋದ್ಯೋಗಿ ಮಹಿಳೆಯೊಬ್ಬರು ಆಕೆಗೆ ಇಂಗ್ಲೀಷ್ ಬರುತ್ತಿದ್ದುದರಿಂದ ಅವರೇ ನಮ್ಮ ಲೋಕಲ್ ಟ್ರಿಪ್ಪಿಗೆ, ಬೀಜಿಂಗ್ ಗೆ ಹೊರಟಾಗ ಸಹಾಯ ಮಾಡುತ್ತಿದ್ದರು. ಅವರ ಹೆಸರು ಚೀನಿ ಭಾಷೆಯ ಉದ್ದ ಹೆಸರು. ಅದರ ಉಚ್ಛಾರಣೆಯ ತೊಂದರೆಯ ಕಾರಣ ಸಾಮಾನ್ಯವಾಗಿ ಇವರು ತಮ್ಮ ಹೆಸರಿನೊಡನೆ ಭಾರತೀಯರಿಗಾಗಿ (ವಿದೇಶಿಯರಿಗಾಗಿ) ಇಂಗ್ಲೀಷಿನ ಹೆಸರೊಂದನ್ನು ಇಟ್ಟು ಕೊಂಡಿರುತ್ತಾರೆ.

ಹಾಗೆ ಈಕೆಯ ಹೆಸರು ‘ಏಪ್ರಿಲ್’ ಎಂದಿತ್ತು. ಈಕೆಯೇ ನಮಗೆ ಲೋಕಲ್ ಟ್ರಿಪ್ಪಿಗೆ ಟ್ಯಾಕ್ಸಿವೊಂದನ್ನು ಗೊತ್ತು ಪಡಿಸಿಕೊಟ್ಟಿದ್ದರು. ಇದೇ ಟ್ಯಾಕ್ಸಿಯಲ್ಲಿ ಒಂದು ವಾರದವರೆಗೆ ನಾವು ಯಾಂಥಾಯ್ ಮತ್ತು ಸುತ್ತ ಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ಡ್ರೈವರ್ ನಾವು ಭಾರತೀಯರೆಂದು ತಿಳಿದು ನಮಗಾಗಿ ಟ್ಯಾಕ್ಸಿಯಲ್ಲಿ ಹಾಡುಗಳನ್ನು ಹಾಕಲು “ಶಾರೂಖ್” ಸಿನಿಮಾ ಹಾಡುಗಳನ್ನು ಬಹಳ ಕಷ್ಟಪಟ್ಟು ಹುಡುಕಿ ತಂದಿದ್ದ. [ನಮ್ಮ ಕಲಾವಿದರು ಹೇಗೆ ಭಾಷೆಯ ಹಂಗಿಲ್ಲದೆ ದೇಶ ದೇಶಗಳಿಗೆ ತಲುಪಿದ್ದಾರೆ. ಕಲೆಗಿರುವ ಅದ್ಭುತ ಶಕ್ತಿಯಿದು]

ಮೂನ್ ಗಾಡ್ ಎನ್ನುವ ಒಂದು ಸ್ಥಳ, ಇದೊಂದು ಸಮುದ್ರ ತೀರದಲ್ಲಿರುವ ಸ್ಥಳ, ಇಲ್ಲಿ ಚಂದ್ರನನ್ನು ಪೂಜಿಸುತ್ತಾರೆ. ಬಹು ದೊಡ್ಡ ಅರ್ಧ ಚಂದ್ರಾಕಾರದಲ್ಲಿ ನಿರ್ಮಿಸಿರುವ ಚಂದ್ರನ ಆಕೃತಿ ಇದರಲ್ಲಿ ಕಣ್ಣುಗಳನ್ನು, ಮೂಗು, ಬಾಯಿಯನ್ನು ಕೆತ್ತಲಾಗಿದೆ.

ಯವರ್ ದ್ಯೋದ್ವೀಪ ಎಂಬುದೊಂದು ಸುಂದರವಾದ ಸ್ಥಳ. ಇಲ್ಲಿ ಸಮುದ್ರದ ಮೇಲೆ ನಿರ್ಮಾಣಗೊಂಡಿರುವ ಅದ್ಭುತವಾದ ಅಣೆಕಟ್ಟೆಯಿದೆ. ಬೃಹತ್ ಗಾತ್ರದ ಕುದುರೆಗಳ ಉಕ್ಕಿನ ಶಿಲ್ಪವನ್ನು ನಿರ್ಮಿಸಿದ್ದಾರೆ. ಇಲ್ಲಿಯೇ ಒಂದು ಬಹುದೊಡ್ಡ ಉಕ್ಕಿನ ಫಲಕವನ್ನಿರಿಸಿ ಅದರಲ್ಲಿ ಎಲ್ಲಾ ದೇಶಗಳ ಬಾವುಟಗಳನ್ನು ನಿರ್ಮಿಸಿ ವಿಶ್ವ ಬ್ರಾತೃತ್ವದ ಸಂಕೇತದಂತೆ ಇರಿಸಿದ್ದಾರೆ. ಭಾರತದ ಭಾವುಟದ ಚಿನ್ಹೆಯನ್ನು ಕಂಡೆವು.

‘ಪಂಗಲಾಯ್’ ಎನ್ನುವ ಮತ್ತೊಂದು ಸ್ಥಳ ಯಾಂಥಾಯ್ ಯಿಂದ ಸುಮಾರು ಎಂಬತ್ತು ಕಿಲೋಮೀಟರ್ ದೂರದಲ್ಲಿದೆ. ಇದೊಂದು ನಯನ ಮನೋಹರವಾದ ಸ್ಥಳ. ‘ಏಳು ದೇವಾಲಯಗಳ ಜಾಗ’ ಎನ್ನುತ್ತಾರೆ. ಇಲ್ಲೊಂದು ಸಾಗರ ತೀರದ ಅರಣ್ಯ ನಿರ್ಮಿಸಿದ್ದಾರೆ. ಬಹುದೊಡ್ಡದೊಂದು ಅಕ್ವೇರಿಯಂ ನ್ನು ಇಡಲಾಗಿದೆ. ಮಾನವ ನಿರ್ಮಿತ ಅರಣ್ಯ (ಅಣುಕು ಅರಣ್ಯ) ದೊಳಗೆ ಪ್ರವೇಶಿಸುತ್ತಿದ್ದರಂತೆ. ಅದು ಅರಣ್ಯವೋ, ಸಮುದ್ರವೋ ಎನ್ನುವ ಗೊಂದಲವುಂಟಾಗುವಂತೆ ಮಾಡಿದ್ದಾರೆ. ವಿಚಿತ್ರವಾದ ಹಲವು ಜಾತಿಯ ಬೃಹದಾಕಾರದ ಮೀನುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಒಂದು ದೊಡ್ಡ ಕೊಠಡಿಯಲ್ಲಿ ಮೀನು ಸಿಂಹ ಮೀನೆಂದು ಫಲಕ ಹಾಕಲಾಗಿದ್ದು, ಅದು ನಿಜಕ್ಕೂ ಸಿಂಹದ ಹಾಗೆ ಗರ್ಜನೆ ಮಾಡುತ್ತಿದ್ದದ್ದನ್ನು ಕಂಡಾಗ ಪ್ರಕೃತಿಯ ವಿಶಿಷ್ಟ ಸೃಷ್ಟಿ ನಮ್ಮನ್ನು ಸ್ಥಂಭಿತರನ್ನಾಗಿಸಿತು.

ಇಲ್ಲಿಯೇ ಒಂದೆಡೆಯಲ್ಲಿ ಒಂದು ಥೀಯೇಟರ್ ಶೋ ನೋಡಿದೆವು. ಇಲ್ಲಿ ನಾವು ಕಂಡದ್ದು ದೊಡ್ಡದೊಂದು ಅಕ್ವೇರಿಯಂನೊಳಗೆ ಜಲಕನ್ಯೆಯರ ನೃತ್ಯ. ಸುಂದರ ಚೀನಿ ಹೆಣ್ಣು ಮಕ್ಕಳು ನೀರಿನೊಳಗೆ ಇಂಪಾದ ಸಂಗೀತದ ಹಿನ್ನೆಲೆಯಲ್ಲಿ ನರ್ತಿಸಿದುದೊಂದು ಅದ್ಭುತ ಕಾರ್ಯಕ್ರಮ. ಒಂದು ಘಂಟೆಯ ಅವಧಿಯ ಈ ಕಾರ್ಯಕ್ರಮದಲ್ಲಿ 5 ಜನ ಹುಡುಗಿಯರು ಭಾಗವಹಿಸಿ, ಮತ್ಸ್ಯ ಕನ್ಯೆಯರ (ಜಲಕನ್ಯೆಯರ) ಉಡುಪಿನಲ್ಲಿ ಸುಂದರವಾಗಿ ನೀರಿನೊಳಗೆ ನರ್ತಿಸಿದ ರೀತಿ ಒಂದು ರೋಚಕ ಅನುಭವವನ್ನು ನೀಡಿತು.

ಭಿನ್ನವಾದ ಏಳು ಪಗೋಡಗಳಲ್ಲಿ ಏಳು ದೇವತೆಗಳನ್ನು ಸ್ಥಾಪಿಸಿದ್ದಾರೆ. ಬೃಹದಾಕಾರದ ಕೆಂಪು ಬಣ್ಣಗಳ ಗಾಢ ಮೂರ್ತಿಗಳಿವು. ಕನ್ ಫೂಶಿಯಸ್, ಬುದ್ಧ ಹೀಗೆ ಅನೇಕ ಬೌದ್ಧ ಪಂಥಗಳ ಮೂರ್ತಿಗಳನ್ನು ನಿಲ್ಲಿಸಿದ್ದಾರೆ. ಕೆಂಪು ಬಣ್ಣವನ್ನು ಗಾಢವಾಗಿ ಬಳಿಯುವ, ಕೆಂಪು ವಸ್ತ್ರಗಳನ್ನು ಬಾವುಟದ ಹಾಗೆ ಶೃಂಗರಿಸುವುದು ಇವರ ಒಂದು ವಿನ್ಯಾಸದ ರೀತಿ. ಒಂದು ದಿನಪೂರ್ತಿ ಈ ಸ್ಥಳದಲ್ಲಿ ಕಳೆದದ್ದು ಆಹ್ಲಾದಕರ ಅನುಭವ. ಮದ್ಯಾಹ್ನ ಊಟದ ಸಮಯಕ್ಕೆ ಜೋರಾಗಿ ಮಳೆ ಬಂತು. ಊಟಕ್ಕೆ ಒಂದು ಮಳೆ ಬೀಳದ ಜಾಗವನ್ನು ಹುಡುಕಿ, ನಮ್ಮ ಊಟದ ಪರಿಕರಗಳನ್ನೆಲ್ಲ ಕಾರಿನಿಂದ ತಂದು ಇಟ್ಟಕೊಟ್ಟು ನಾವು ಆರಾಮಾಗಿ ಕುಳಿತು ತಿನ್ನುವ ವ್ಯವಸ್ಥೆಯನ್ನು ಮಾಡಿಕೊಟ್ಟು ನಂತರ ತನ್ನ ಊಟಕ್ಕೆ ಹೊರಟ ನಮ್ಮ ಡ್ರೈವರ್. ಅವನನ್ನು ನಮ್ಮೊಡನೆ ಊಟಕ್ಕೆ ನಿಲ್ಲುವಂತೆ ಹೇಳಿದರೂ ಅವನು ತನ್ನ ಊಟದ ವ್ಯವಸ್ಥೆ ಬೇರೆಯಿದೆ ಎಂದು ಹೊರಟುಬಿಟ್ಟ. ಅವನನ್ನು ನಂತರ ಎಲ್ಲಿ ನೋಡುವುದಪ್ಪಾ ಎನ್ನುವುದು ನಮ್ಮ ಸಮಸ್ಯೆ ಭಾಷೆ ಬಾರದಲ್ಲ ಅಂತ. ಆದರೆ ಅವನು ನಾವು ಊಟ ಮುಗಿಸುತ್ತಿದ್ದಂತೆ ಮತ್ತೆ ಬಂದು ನಮ್ಮ ಕ್ಯಾರಿಯರ್ ಗಳನ್ನು ಎಲ್ಲವನ್ನೂ ತೆಗೆದುಕೊಂಡು ಕಾರಿನೊಳಗಿರಿಸಿ ನಗುನಗುತ್ತಾ ಕರೆದೊಯ್ದ. ಪ್ರಯಾಣದುದ್ದಕ್ಕೂ ಕೇವಲ ನಗುವುದು ತಲೆಯಲ್ಲಾಡಿಸುವುದು, ಅಲ್ಲಲ್ಲಿ ಒಂದೊಂದು ಇಂಗ್ಲೀಷಿನ ಪದ (ಎಸ್, ನೋ) ಇದಿಷ್ಟನ್ನೇ ಅವನಾಡುತ್ತಿದ್ದರೂ ಬಹಳ ಆತ್ಮೀಯನಾಗಿದ್ದ. ನಮ್ಮ ಪ್ರಥಮ್ ನಿಗಂತೂ ಆತ್ಮೀಯವಾಗಿ ಹೋಗಿದ್ದ.

ಡಾಲ್ಫಿನ್ ಶೋ, ಸೀಲ್ ಶೋಗಳನ್ನು ನೋಡಿದೆವು. ಮನುಷ್ಯ ಈ ಪ್ರಾಣಿಗಳನ್ನು ತನಗೆ ಬೇಕಾಗುವಂತೆ ಕುಣಿಸಿ ಜನರನ್ನು ರಂಜಿಸುವ ಮುಖಾಂತರ ತನ್ನ ಜೀವನೋಪಾಯವನ್ನು ಕಂಡುಕೊಂಡ ಬುದ್ಧಿವಂತ ಪ್ರಾಣಿಯಾಗಿದ್ದಾನೆಯಲ್ಲ ಎನಿಸಿದುದು ಅದರೊಡನೆ ಇವುಗಳು ಮನುಷ್ಯನೊಡನೆ ಅವನ ಸಂಗಾತಿಯಾಗಿ ಹೊಂದಿಕೊಂಡಿರುವ ಬಗೆಗೆ ಅಚ್ಚರಿಯೂ ಹೌದು. [ಪ್ರಾಣಿಗಳನ್ನು ಹೊಂದಿಸಿಕೊಂಡು ಜೀವನೋಪಾಯ ಮಾಡುವುದು ಜಗತ್ತಿನಾದ್ಯಂತವಿರುವುದು ಎಲ್ಲರಿಗೂ ತಿಳಿದ ವಿಷಯವೇ] ಇದೆಲ್ಲ ಪ್ರವಾಸಿಗರನ್ನು ಸೆಳೆದು ತಮ್ಮ ಪ್ರವಾಸೋದ್ಯಮವನ್ನು ವೃದ್ಧಿಸಿಕೊಳ್ಳುವ ಬುದ್ಧಿವಂತಿಕೆ ಇಂದಿಗೆ ಅಗತ್ಯವೆನಿಸುತ್ತದೆ. ಭಾರತ ಈ ದಿಕ್ಕಿನಲ್ಲಿ ಸಾಧಿಸುವುದು ಬೆಟ್ಟದಷ್ಟಿದೆ. ನಮ್ಮ ಪ್ರಾಕೃತಿಕ ಸಂಪನ್ಮೂಲವನ್ನು ನಮ್ಮ ಪ್ರವಾಸೋದ್ಯಮದಲ್ಲಿ ಪರಿಣಾಮಕಾರಿಯಾಗಿ ವೃದ್ಧಿಪಡಿಸಿದರೆ ಜಗತ್ತಿನ ಪ್ರವಾಸೋದ್ಯಮಕ್ಕೆ ಭಾರತ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ವಾಲ್ ಕೆ ನೊದಿಂದ ಹೊರಟ ಲಾವಾರಸ ಗಟ್ಟಿಯಾದ ನಂತರ ಬೃಹದಾಕಾರದ ಶಿಲಾಕೃತಿಗಳಾಗುತ್ತವೆ. ಇಂಥಹವನ್ನು ಒಂದು ದೊಡ್ಡ ಕಟ್ಟಡದಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಇವುಗಳಲ್ಲಿ ಹಲವು ಶಿಲಾಕೃತಿಗಳಲ್ಲಿ ಕೆತ್ತನೆಯ ಕೆಲಸವನ್ನು ಮಾಡಿದ್ದಾರೆ. ಬುದ್ಧನ ಬದುಕಿನ ಹಲವು ಚಿತ್ರಗಳನ್ನು ಇದರಲ್ಲಿ ಕೊರೆಯಲಾಗಿದೆ. ಚೀನಾದ ಹಲವು ರಾಜ ಮನೆತನದ ಚಿತ್ರಗಳಿವೆ. ಪ್ರಕೃತಿಯ ಚಿತ್ರಣಗಳನ್ನು ಕೊರೆಯಲಾಗಿದೆ. ಒಂದು ಶಿಲೆಯಲ್ಲಿ ಈಶ್ವರನ ತಪೋಭಂಗಿ ನಮ್ಮನ್ನು ಅಚ್ಚರಿಗೊಳಿಸಿತು. ಹೇಗೆ ಈ ಚಿತ್ರವನ್ನು ಕೊರೆಯಲಾಗಿದೆ, ಈಶ್ವರ ಪರಿಕಲ್ಪನೆ ಇಲ್ಲಿ ಹೇಗೆ ಬಂತೆಂಬುದಕ್ಕೆ ನಮಗೆ ಮಾಹಿತಿ ಪಡೆಯಲಾಗಲಿಲ್ಲ. ಈ ಎಲ್ಲಾ ಶಿಲಾಕಲ್ಲುಗಳು ನೋಡುವುದಕ್ಕೆ ಪಾಲಿಶ್ ಹಾಕಿದ ಮರದ ಕೃತಿಗಳಂತೆ ಕಾಣುತ್ತವೆ. ರೋಸ್ ವುಡ್, ಟೀಕ್ ಉಡ್ ನಂತೆ ಕಾಣುತ್ತವೆ. ಆದರೆ ಇವೆಲ್ಲಾ ಲಾವಾರಸದ ಶಿಲೆಗಳೆಂದು ನಂತರ ತಿಳಿಯಿತು. (ಇಂಗ್ಲೀಷಿನ ವಿವರ ಫಲಕಗಳಿಲ್ಲ).

ಪಗೋಡಾಗಳೊಳಗೆ ಇರುವ ಬುದ್ಧ ಅವನ ಅನುಯಾಯಿಗಳು ಇವರ ಬೃಹದ್ ಮೂರ್ತಿಗಳಿಗೆ ಬಹು ಉದ್ದನೆಯ ಗಂಧದ ಕಡ್ಡಿಗಳನ್ನು ಹಚ್ಚಿರುತ್ತಾರೆ. ಹಚ್ಚಿದ ಈ ಗಂಧದ ಕಡ್ಡಿಗಳನ್ನು ಇಡಲು ವಿಹಾರದ ಆವರಭಣದಲ್ಲಿ ದೊಡ್ಡ ತೊಟ್ಟಿಗಳನ್ನು ಇರಿಸಿದ್ದಾರೆ. ಇಲ್ಲಿ ಹಚ್ಚಿಟ್ಟ ಈ ಊದುಗಡ್ಡಿಗಳನ್ನು ಉರಿದ ನಂತರದ ಬೂದಿಯಿಂದ ಮತ್ತೆ ಊದುಗಡ್ಡಿ ತಯಾರಿಸುತ್ತಾರಂತೆ. (ರೀ ಸೈಕಲಿಂಗ್) ಒಂದೊಂದು ಪಗೋಡಕ್ಕೂ 5-6 ಮಹಡಿಗಳಿರುತ್ತವೆ. ಗೋಡೆಗಳ ತುಂಬೆಲ್ಲ ಗಾಢಬಣ್ಣದ ಚಿತ್ತಾರಗಳಿಂದ ಅಲಂಕರಿಸಿರುತ್ತಾರೆ. ಕೆಲವು ಕಡೆಗಳಲ್ಲಿ ದೊಡ್ಡ ಗಾತ್ರದ ಕಪ್ಪೆಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಜನರು ದುಡ್ಡನ್ನು ಹಾಕಿ ಪ್ರಾರ್ಥಿಸುತ್ತಾರೆ. ಇದೊಂದು ಹರಕೆಯ ಪದ್ಧತಿ.

ಪಗೋಡಗಳ ವಿವಿಧ ಮಹಡಿಗಳಿಗೆ ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗೆ ಬೇಕಾದ ಹಾಗೆ ಎಲ್ಲಾ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಿದ್ದಾರೆ. ಎಲ್ಲಿಯೂ ಜನರ ಗೌಜುಗದ್ದಲವಿರುವುದಿಲ್ಲ. ಶಾಂತವಾಗಿ ಜನಸಮುದಾಯ ಸಾಗುತ್ತಿರುತ್ತದೆ. ಈ ಎಲ್ಲಾ ಆಲಯಗಳಿಗೆ ಹೊಂದಿಕೊಂಡಂತೆ ಇದ್ದರೂ ಪ್ರತ್ಯೇಕವಾಗಿರುವ ವ್ಯಾಪಾರಿ ಮಳಿಗೆಗಳೂ ಇವೆ. ಒಂದು ಮಳಿಗೆಗೆ ನಾವು ಭೇಟಿಕೊಟ್ಟು ಹೊರಟು ಲಿಫ್ಟ್ ಗೆ ಬಂದೆವು. ಇನ್ನೇನು ಲಿಫ್ಟ್ ಹೊರಡಬೇಕೆನ್ನುವಷ್ಟರಲ್ಲಿ ಒಬ್ಬ ಹೆಣ್ಣು ಮಗಳು ನಮ್ಮ ಕೂಗಿಕೊಂಡು ಬಂದಳು. ನಾವು ಏಕೆಂದು ನೋಡುತ್ತಿದ್ದಂತೆ ಆಕೆ ಒಂದು ಆಟದ ಉದ್ದನಯ ಬೆಲೂನ್ ಮಾದರಿಯ ಪ್ಲ್ಯಾಸ್ಟಿಕ್ ಆಟಿಕೆ ವಸ್ತುವೊಂದನ್ನು ಹಿಡಿದುಕೊಂಡು ಬಂದು ನನ್ನ ಮೊಮ್ಮಗಳ ಕೈಗೆ ಕೊಟ್ಟು ಅವಳನ್ನು ಮುದ್ದಿಸಿ ನಮಗೆ ಕೈಬೀಸಿ ಹೊರಟಳು. ನಮಗೆ ಅಚ್ಚರಿಯ ಉದ್ಗಾರದೊಡನೆ ಆ ಪ್ರೀತಿಯ ಮುಂದೆ ಮೂಕರಾಗಿ ನಿಂತಿದ್ದೆವು.

Leave a Reply

Your email address will not be published.