ಚೀನಾ ಪ್ರವಾಸ-2: ಇಂಗ್ಲಿಷ್ ಬಾರದ ಚೀನಿಯರು

-ಪ್ರೊ. ಎಂ. ಲೀಲಾವತಿ, ವಿಶ್ರಾಂತ ಪ್ರಾಧ್ಯಾಪಕರು

china photos 4ಯಾಂಥಾಯ್ ಒಂದು ಕಡಲತೀರದ ಊರು. ಎರಡು ಸಮುದ್ರ ತೀರಗಳಿವೆ. ಒಂದು ಊರಿನ ನಡುಗಡ್ಡೆಯಲ್ಲಿ ಮತ್ತೊಂದು ಊರಿನ ಒಂದು ಕಡೆಯ ಭಾಗದಲ್ಲಿ ಮೊದಲನೆಯದು ಹಳೆಯ ಮಾದರಿಯ  ಸುಂದರ ತಂಗುದಾಣಗಳನ್ನು ಹೊಂದಿದೆ. ಬ್ರಿಟಿಷ್ ಮಾದರಿಯ ಹೋಟೆಲ್ ಗಳು ಮತ್ತು ಒಂದು ಹಳೆಯ ಲಂಡನ್ ಸ್ಟ್ರೀಟ್ ನ್ನು ಹೋಲುವಂಥ ಉದ್ದನೆಯ ರಸ್ತೆಯಿದೆ. ತೀರ ಪ್ರದೇಶದಲ್ಲಿ ಮಕ್ಕಳಿಗೆ ಸುಂದರವಾದ ಉದ್ಯಾನ, ಆಟದ ವಿವಿಧ ಆಧುನಿಕ   ಪರಿಕರಗಳು ಓಡಾಡಲು ಅಚ್ಚುಕಟ್ಟಾದ ರಸ್ತೆಗಳು ಇವೆ.

ಮತ್ತೊಂದು ವಿಶೇಷವೆಂದರೆ ಕಡಲ ಅಂಚಿನ ಸಿಮೆಂಟ್ ಅಂಗಳದಲ್ಲಿ ಪ್ರತಿದಿನ ಸಂಜೆ ಸುಮಾರು 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಹಿರಿಯನಾಗರಿಕರು ವ್ಯಾಯಾಮದ ರೀತಿಯ ನೃತ್ಯಗಳನ್ನು ಮಾಡುತ್ತಿರುತ್ತಾರೆ. ಇಂಪಾದ ಹಿನ್ನೆಲೆ ಸಂಗೀತವಿರುತ್ತದೆ. ಈ ದೃಶ್ಯ ಚೀನಾದ ಬಹುತೇಕ ಎಲ್ಲ ನಗರಗಳಲ್ಲಿ ಕಾಣಿಸುತ್ತದೆ. ಅಂಗಡಿಗಳನ್ನು ಸಾಮಾನ್ಯವಾಗಿ ಸಂಜೆ 5-6 ಗಂಟೆಯ ಸಮಯಕ್ಕೆ ಮುಚ್ಚಿಬಿಡುತ್ತಾರೆ. ಅಂಗಡಿಯ ಮುಂಭಾಗದಿಂದ ವಿಶಾಲವಾದ ಪುಟ್ ಪಾತ್, ವಿಶಾಲವಾದ ರಸ್ತೆಗಳು (ಪುಟ್ ಪಾತ್) ವರೆಗೆ ಸುಮಾರು 20 ಅಡಿಗಳಷ್ಟು ಜಾಗವಿರುತ್ತದೆ. ಪುಟ್ ಪಾತ್ ಗಳಲ್ಲಿಯೂ ಸಂಜೆಯ ಹೊತ್ತು ವ್ಯಾಪಾರ ಮಾಡುತ್ತಾರೆ. ವಿಶಾಲವಾಗಿರುವ ಜಾಗವಾಗಿರುವುದರಿಂದ, ಪಾದಚಾರಿಗಳಿಗೆ ರೀತಿಯ ಫುಟ್ ಪಾತ್ ವ್ಯಾಪಾರ ಯಾವುದೇ ರೀತಿ ಕಿರಿಕಿರಿ ಮಾಡುವುದಿಲ್ಲ. ಇಲ್ಲಿ ಸಂಜೆಯಾಗುತ್ತಿದ್ದಂತೆ, ಹಿರಿಯ ನಾಗರಿಕರು ಹೆಂಗಸರು ಗಂಡಸರು ಎಲ್ಲರೂ ಬರುತ್ತಾರೆ. ಇಂಪಾದ ಸಂಗೀತದ ಹಿನ್ನೆಲೆಯಲ್ಲಿ ವ್ಯಾಯಾಮ ನೃತ್ಯವನ್ನು ಮಾಡುತ್ತಾರೆ. ಕಿರಿಯರೂ ಪಾಲ್ಗೊಳ್ಳುತ್ತಾರೆ.

ಯಾರು ಎಷ್ಟು ಹೊತ್ತಿಗಾದರೂ ಬಂದು ಸೇರಿಕೊಳ್ಳಬಹುದು ಎಷ್ಟು ಹೊತ್ತಿಗಾದರೂ ತೆರಳಬಹುದು. ಇದನ್ನು ಪ್ರತಿದಿನ ಕಟ್ಟುನಿಟ್ಟಾಗಿ ಮಾಡುತ್ತಿರುತ್ತಾರೆ. ಮಾಲ್ ಗಳು ರಾತ್ರಿ 11-12 ರವರೆಗೂ ತೆರೆದಿರುತ್ತದೆ. ಈ ಮಾಲ್ ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಮಾಲ್ ಅನ್ನು ತೆರೆಯುವ ಮುನ್ನ ಸುಮಾರು ಬೆಳಗ್ಗೆ 7 ರಿಂದ 8ರಿಂದ 9 ಗಂಟೆಯವರೆಗೆ ಈ ರೀತಿಯ ವ್ಯಾಯಾಮ ನೃತ್ಯ ಮಾಡುವುದು ಕಡ್ಡಾಯವಾಗಿರುತ್ತದೆ. ಮಾಲ್ ನ ಮುಂಭಾಗದಲ್ಲಿ ಎಲ್ಲರೂ ವ್ಯಾಯಾಮ ಮಾಡಿದ ನಂತರವೇ ಕೆಲಸಕ್ಕೆ ತೆರಳುತ್ತಾರೆ. ವ್ಯಾಯಾಮದ ಬಗೆಗೆ ಬಹಳ ಕಾಳಜಿಯನ್ನು ವಹಿಸುತ್ತಾರೆ.

ನನ್ನ ಮಗಳ ಮನೆಯು ಇದ್ದದ್ದು ನಗರದ ಹೃದಯ ಭಾಗದಲ್ಲಿ ಅಲ್ಲಿ ಸಾವಿರಾರು ಪ್ಲಾಟ್ ಗಳಿದ್ದವು. ಇವರು ಇದ್ದದ್ದು 5ನೇ ಮಹಡಿಯಲ್ಲಿ ಅಲ್ಲಿಗೆ ಲಿಫ್ಟ್ ವ್ಯವಸ್ಥೆ ಇಲ್ಲ. ಅದು ಹೆಚ್ಚಾಗಿ ಹಳೆಯ ತಲೆಮಾರಿನ ಚೀನಿಯರು ಇರುವ ಪ್ರದೇಶ. ಬಹಳಷ್ಟು ಹಿರಿಯ ನಾಗರೀಕರು ಇದ್ದಾರೆ. ಕುಟುಂಬ ವ್ಯವಸ್ಥೆ ಭಾರತೀಯರ ಹಾಗೆಯೇ ಇದೆ. ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಸಾಕಷ್ಟು ಒಟ್ಟು ಕುಟುಂಬಗಳು ಅಲ್ಲಿ ನೆಲೆಸಿದ್ದವು. ಬೆಳಗಿನ ಜಾವ 5 ಗಂಟೆಗೆ ಅವರ ವಾಕಿಂಗ್ ಪ್ರಾರಂಭವಾಗುತ್ತಿತ್ತು. ನಂತರ ಒಂದೆಡೆ ಬಯಲಲ್ಲಿ ನಿಂತು ಅಂಗೈಗಳನ್ನು ಪರಸ್ಪರ ಹೊಡುದುಕೊಳ್ಳುವುದು. ಕೆನ್ನೆಗಳಿಗೆ ಹೊಡೆದುಕೊಳ್ಳುವುದು, ತೋಳು, ತೊಡೆಗಳಿಗೆ ಹೊಡೆದುಕೊಳ್ಳುವುದು ಇವರ ವ್ಯಾಯಾಮದ ಬಹುಮುಖ್ಯ ರೀತಿ.

ಹೀಗೆ ಮಾಡುವುದರಿಂದ ರಕ್ತ ಚಲನೆಗೆ ಸಹಕಾರಿಯಾಗುತ್ತದೆಂದು ಇವರ ತಿಳುವಳಿಕೆ. ಸಂಜೆಗೆ ಮೊಮ್ಮಕ್ಕಳನ್ನಾಡಿಸುವ ಅಜ್ಜ-ಅಜ್ಜಿಯರು, ಚಿಕ್ಕ ಮಕ್ಕಳು, ಹರಟೆ ಹೊಡೆಯುವ ಹೆಂಗಳೆಯರು ಕಾಣಸಿಗುತ್ತಿದ್ದರು. ಎಲ್ಲರಿಗೂ ನಮ್ಮನ್ನು ನೋಡುವುದೇ ಕುತೂಹಲ. ಭಾಷೆ ಬಾರದು ಎಲ್ಲವೂ ಕೈಸನ್ನೆಯ ಭಾಷೆಯೇ. ನಾನು ಉಟ್ಟ ಸೀರೆ ಅವರಿಗೆ ಅಚ್ಚರಿಯ ಉಡುಪಾಗಿತ್ತು. ಅದರ ಬಗೆಗೆ ಕೈಸನ್ನೆಯ ವಿವರಣೆ ನನಗೆ ಒಂದು ರೀತಿಯ ಆಂಗಿಕ ಅಭಿನಯವಾಗಿತ್ತು.

ಇಂಗ್ಲೀಷ್ ಈ ಜನಕ್ಕೆ ಬರುವುದಿಲ್ಲ. ಆಡ ಆಡಲು ಬರುವ ಪುಟ್ಟಮಕ್ಕಳಿಗೆ ನನ್ನ ಮೊಮ್ಮಕ್ಕಳನ್ನು ಆಡಿಸುವ ಆಸೆ. ಹೂವುಗಳನ್ನು ಕಿತ್ತು ತಂದು ನನ್ನ ಪುಟ್ಟ ಮೊಮ್ಮಗಳ ಕೈಗೊ ಕೊಟ್ಟು ಆಟ ಆಡಿಸುವ ಪುಟ್ಟ ಹೆಣ್ಣು ಮಕ್ಕಳ ಗುಂಪೊಂದು. ಮತ್ತೊಂದು ಗಂಡು ಮಕ್ಕಳ ಗುಂಪು ನನ್ನ ಮೊಮ್ಮಗನನ್ನು ಉಯ್ಯಾಲೆಯಲ್ಲಿ ಆಡಿಸುವುದು, ಜಾರಬಂಡಿಯಲ್ಲಿ, ಜಿಮ್ನಾಸ್ಟಿಕ್ ಪರಿಕರಗಳಲ್ಲಿ ಆಡಿಸುವುದು ನಡೆಯುತ್ತಿತ್ತು. ಆ ಹುಡುಗರು ಕೇವಲ ನಗು, ತಲೆ, ಕೈ ಆಡಿಸುವುದು ಹೀಗೆ ಆಟದ ನಡುವಿನ ಭಾಷೆಯಾಗಿರುತ್ತಿತ್ತು.

china photos 1ನಮ್ಮ ಪ್ರಥಮ್ ಅವರೊಡನೆ ಇಂಗ್ಲೀಷಿನಲ್ಲಿ ಏನನ್ನಾದರೂ ಕೇಳಿದರೆ ಕೂಡಲೇ ಆ ಹುಡುಗರು ಸ್ವಲ್ಪ ದೂರಕ್ಕೆ ತೆರಳಿ ಮತ್ತೆ ಬಂದು ಉತ್ತರ ಕೊಡುತ್ತಿದ್ದರು. ಅವರು ಹಾಗೆ ಮಾಡುತ್ತಿದ್ದುದ್ದು ಏಕೆಂದರೆ ಇವನು ಕೇಳಿದ ಇಂಗ್ಲೀಷಿನ ಪ್ರಶ್ನೆಗೆ ಅವರುಗಳು ತಮ್ಮ ಭಾಷೆಯಲ್ಲಿ ಚರ್ಚಿಸಿ ಇಂಗ್ಲೀಷಿನಲ್ಲಿ ಉತ್ತರವನ್ನು ಸಿದ್ಧಪಡಿಸಿಕೊಂಡು ಬಂದು ಉತ್ತರಿಸುತ್ತಿದ್ದದ್ದು ಬಹಳ ತಮಾಷೆಯಾಗಿ ಒಂದು ರೀತಿಯ ಆತ್ಮೀಯ ಕಾಳಜಿಯಾಗಿಯೂ ಕಾಣುತ್ತಿತ್ತು. ಈಗೀಗ ಚೀನಾದ ಶಾಲೆಗಳಲ್ಲಿ ಇಂಗ್ಲೀಷನ್ನು ಕಲಿಸಲಾಗುತ್ತಿದೆ. ಹೀಗಾಗಿ ಈ ಮಕ್ಕಳು ಮಾತನಾಡುವ ಪ್ರಯತ್ನ ಮಾಡುತ್ತಾರೆ. ಶಾಲೆಗಳಲ್ಲಿ ಇವರ ವಿಶಿಷ್ಟ ಯುದ್ಧಕಲೆಗಳಾಗಿರುವ ‘ಕುಂಗ್ ಪೂ’ ಕರಾಟೆಗಳನ್ನು ಕಲಿಸುತ್ತಾರೆ. ಇದೊಂದು ರೀತಿಯ ಕಡ್ಡಾಯ ತರಬೇತಿಯಾಗಿಯೂ ಇರುತ್ತದೆಯಂತೆ. ಸಾಮಾನ್ಯವಾಗಿ ಇವು ಪ್ರಾಥಮಿಕ ತರಬೇತಿಗಳಾಗಿರುತ್ತವೆ. ಪಠ್ಯದ ಹಾಗೆ ವಿಶೇಷ ಪರಿಣತಿಗೆ ವಿಶೇಷ ತರಗತಿಗಳು ಇರುತ್ತವೆ.

ಕೊರಿಯನ್ನರ ಶಾಲೆಗಳಲ್ಲಿ ಇತ್ತೀಚೆಗೆ ಇಂಗ್ಲೀಷ್ ಮೀಡಿಯಂ ಅನ್ನು ರೂಢಿಗೆ ತಂದಿದ್ದಾರೆ. ಆದರೆ, ಚೀನಿಯರೇ ನಡೆಸುವ ಶಾಲೆಗಳಲ್ಲಿ ಚೀನಿ ಭಾಷೆಯಲ್ಲಿಯೇ ಕಲಿಸುತ್ತಾರೆ. ನಮ್ಮಲ್ಲಿಯ ಹಾಗೆಯೇ ನರ್ಸರಿ ಶಾಲೆಗಳಿಂದಲೇ ವಿದ್ಯಾಭ್ಯಾಸ ಆರಂಭವಾಗುವುದು. ವೈದ್ಯಕೀಯ, ವಿದ್ಯಾಭ್ಯಾಸ, ಎಂಜಿನಿಯರಿಂಗ್ ಹೀಗೆ ಎಲ್ಲಾ ತಾಂತ್ರಿಕ ವಿದ್ಯಾಭ್ಯಾಸವೂ ಚೀನಿ ಭಾಷೆಯಲ್ಲೇ ನಡೆಯುತ್ತದೆ. ಇಲ್ಲಿಯ ವೈದ್ಯರಿಗೆ (ಬಹುತೇಕ) ಇಂಗ್ಲೀಷ್ ಬರುವುದಿಲ್ಲ. ಕಂಪ್ಯೂಟರ್ ಬಳಕೆ, ಆಧುನಿಕ ತಂತ್ರಜ್ಞಾನ ಎಲ್ಲವೂ ಚೀನಿ ಭಾಷೆಯಲ್ಲಿಯೇ ನಡೆಸುತ್ತಿರುವರು. ಜಾಗತೀಕರಣದ ಹಿನ್ನೆಲೆಯಲ್ಲಿ ಈಗ ಇಂಗ್ಲೀಷ್ ಇಲ್ಲಿಯೂ ಪ್ರವೇಶ ಪಡೆಯುತ್ತಿದೆ. ಸರ್ಕಾರಿ ಶಾಲೆಗಳು ಸುವ್ಯವಸ್ಥೆಯಲ್ಲಿವೆ. ಅಧಿಕ ಪ್ರಮಾಣದ ಸರ್ಕಾರಿ ಶಾಲೆಗಳ ನಡುವೆ ಈಗೀಗ ಖಾಸಗಿ ಶಾಲೆಗಳು ತಲೆಯೆತ್ತಿವೆ.

ಆದರೆ, ನಮ್ಮಲ್ಲಿರುವಂತೆ ವ್ಯಾಪಾರಿ ಶಾಲೆಗಳಾಗಿಲ್ಲ. ಇಲ್ಲಿ ಚೀನಿಯರು ನಡೆಸುವ ಶಾಲೆಗಳ ಜೊತೆಗೆ ಕೊರಿಯನ್ನರು ನಡೆಸುವ ಶಾಲೆಗಳು ಇವೆ. ಇಲ್ಲಿ ಇಂಗ್ಲೀಷನ್ನು ಕಲಿಸುವ ಪರಿಪಾಠವಿದೆ. ಇತ್ತೀಚೆಗೆ ಒಂದು ಇಂಟರ್ ನ್ಯಾಷನಲ್ ಸ್ಕೂಲ್ ಇಲ್ಲಿ ಪ್ರಾರಂಭವಾಗಿದೆ. ಇಲ್ಲಿಯ ಜನ ಅಮೇರಿಕನ್ ಇಂಗ್ಲೀಷಿನ ಬಗೆಗೆ ಹೆಚ್ಚು ಒಲವು ತೋರುತ್ತಾರೆ. ಉಡುಪುಗಳೂ ಸಹಾ ಅಮೇರಿಕಾ ಶೈಲಿ. ಮತ್ತೊಂದು ಬೀಚ್ ‘ಕೈಫಾಚು’ ಎನ್ನುವ ಸ್ಥಳದಲ್ಲಿದೆ. ಇದು ಆಧುನಿಕ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಕಡಲ ತೀರದ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಹಿರಿಯರಿಗೆ ಕಿರಿಯರಿಗೆ ವಯೋಮಾನಕ್ಕೆ ತಕ್ಕಂತೆ ವಿಹಾರದ ಪರಿಕರಗಳನ್ನು ಸಂಯೋಜಿಸಿರುವುದೊಂದು ವಿಶೇಷ. ಸಣ್ಣ ಸಣ್ಣ ದೋಣಿ ವಿಹಾರದ ತಾಣಗಳು, ಸಣ್ಣ ಕಾರುಗಳು, ಮೋಟಾರ್ ಗಾಡಿಗಳನ್ನು ಓಡಿಸುವ ವಿಹಾರಿ ರಂಜನೆಗಳಿವೆ. ಇಲ್ಲಿಗೆ ನಾವು ಟ್ಯಾಕ್ಸಿವೊಂದರಲ್ಲಿ ಹೋಗಿದ್ದೆವು ಟ್ಯಾಕ್ಸಿಯಿಂದ ಇಳಿದ ನಾವು ನಮ್ಮ ಪಾಡಿಗೆ ಕಡಲ ತೀರದುದ್ದಕ್ಕೂ ಮಕ್ಕಳನ್ನಾಡಿಸುತ್ತಾ ಹೊರಟೆವು. ಸುಮಾರು ಅರ್ಧ ಗಂಟೆಯ ನಂತರ ನಮ್ಮನ್ನು ಯಾರೋ ಹೋ, ಹೋ, ಧೋ, ಧೋ ಎಂದು ಕೂಗಿ ಕರೆಯುವುದು ದೂರದಲ್ಲಿ ಕಾಣಿಸಿತು. ಯಾರೆಂದು ನಾವು ನೋಡಿ ನಮ್ಮನ್ನು ಕರೆಯುತ್ತಿರುವುದು`ಬುದ್ಧನ ವಿವಿಧ ರೀತಿಯ ವಿಗ್ರಹಗಳನ್ನು ಮಾರುತ್ತಾರೆ. (ಹ್ಯಾಪಿಮ್ಯಾನ್ ಮಾದರಿಯವು)

ನಂಬಿಕೆಗಳು ಮನುಷ್ಯನ ಬದುಕಿಗೆ ಅನಿವಾರ್ಯ. ಆದರೆ, ಅವು ಮೌಢ್ಯವಾಗಬಾರದು. ಆದರೆ ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲಿಯೂ ಒಂದಲ್ಲ ಒಂದು ರೀತಿಯ ಮೌಢ್ಯ ನಂಬಿಕೆಗಳು ಇದ್ದೇ ಇವೆ. ಇದಕ್ಕೆ ಈ ದೇಶವೂ ಹೊರತೇನಲ್ಲ ಎನಿಸಿತು. ಕಪ್ಪೆ, ಬೆಕ್ಕು, ಡ್ರ್ಯಾಗನ್, ಮೀನು, ಆನೆ ಈ ಮುಂತಾದ ಪ್ರಾಣಿಗಳು ಕೆಲವು ರೀತಿಯ ಸಣ್ಣ ಸಸ್ಯಗಳು ಇವುಗಳನ್ನು ಇಲ್ಲಿ ಶಕುನಗಳಾಗಿಯೇ ಸಂಕೇತಗಳನ್ನಾಗಿಯೇ (ಬದುಕಿನ ಭರವಸೆಗೆ) ನಂಬಿರುವುದು ಒಂದು ರೀತಿಯ ಪ್ರಕೃತಿಯ ಆರಾಧನೆಯೇ ಎಂದೆನಿಸುತ್ತದೆ. ವಿಶಾಲವಾದ ಬೀಚ್ ಬದಿಯ ರಸ್ತೆಗಳ ಒಂದು ಭಾಗದಲ್ಲಿ ಮಣ್ಣಿನಿಂದ ತಯಾರಿಸಿದ, ಪಿಂಗಾಣಿಯ ಅನೇಕ ಸುಂದರ ಬೊಂಬೆಗಳನ್ನು ಮಾರುತ್ತಿದ್ದರು. ಸಾಮಾನ್ಯವಾಗಿ ಎಲ್ಲಾ ಸುಂದರ ಬೊಂಬೆಗಳಲ್ಲಿಯೂ ಚೀನಿಯರ ‘ಫೆನ್ ಶೂ’ಗಳು ಅಳವಡಿಕೆಯಾಗಿರುತ್ತಿದ್ದವು. ಇವು ಒಂದು ಮಾದರಿಯ ಶಂಭದ ಸಂಕೇತಗಳಾಗಿರುತ್ತವೆ ಎಂಬುದು ಇವರ ನಂಬಿಕೆ. ಇಲ್ಲಿಯೂ ಗಾಢ ಕೆಂಪು ಬಣ್ಣ, ಹಳದಿ, ಹಸಿರುಗಳನ್ನು ಬಳಸಿರುತ್ತಾರೆ. ಭಾರತದಲ್ಲಿ ಈಗ ಪ್ರಚಲಿತವಾಗಿರುವ ಚೀನಿಯರ ‘ಫೆನ್ ಶೂ’ರೀತಿಗೂ ಇಲ್ಲಿಯ ರೀತಿಗೂ ವ್ಯತ್ಯಾಸವಿರುವಂತೆ ಕಂಡಿತು. ಎಷ್ಟಾದರೂ ಇಲ್ಲಿಯದು ವರಿಜಿನಲ್ ನಮ್ಮ ವ್ಯಾಪಾರಸ್ಥರು ಇವುಗಳ ಕೃತಕ ಅನುಕರಣೆ ಮಾಡಿರುತ್ತಾರೆ. (ಬಹುತೇಕ) ಮನೆಗಳ ಬಾಗಿಲಿಗೆ ಬೆಕ್ಕಿನ ಚಿತ್ರವನ್ನು ಅಂಟಿಸಿರುತ್ತಾರೆ.

ಇದು ಶುಭ ಸೂಚಕ ಹಾಗೂ ಅನಿಷ್ಟ ಪರಿಹಾರಕ ಎನ್ನುವ ಪರಂಪರಾಗತದೆಂದು ಖಚಿತ ಪಡಿಸಿಕೊಂಡು ಸಮೀಪಿಸಿದರೆ ನಾವು ಬಂದ ಟ್ಯಾಕ್ಸಿ ಡ್ರೈವರ್ ಕೂಗುತ್ತಿದ್ದಾರೆ. ಅವನು ನಮ್ಮ ಮಗುವಿನ ತಳ್ಳುಗಾಡಿಯನ್ನು ಕೈಯಲ್ಲಿ ಹಿಡಿದು ಕೂಗಿ ಕರೆಯುತ್ತಿದ್ದ. ಆಗ ನಮಗೆ ಅರಿವಾಯಿತು ನಾವು ಗಾಡಿಯನ್ನು ಟ್ಯಾಕ್ಸಿಯಲ್ಲಿ ಮರೆತಿದ್ದೆವೆಂದು. ಆತ ಪಾಪ, ಹಿಂದಿರುಗಿ ಬಂದು ನಮ್ಮನ್ನು ಕರೆದು ಗಾಡಿಯನ್ನು ಕೊಟ್ಟು ಹೊರಟಾಗ ‘ಥ್ಯಾಂಕ್ಸ್’ ಹೇಳಿದ್ದು ಅವನ ದೊಡ್ಡ ನಗುವಿನಿಂದ ಸ್ವೀಕೃತವಾಯಿತೆಂದು ಅರ್ಥ ಮಾಡಿಕೊಂಡು ಅವನಿಗೆ ತುಂಬು ಹೃದಯದ ನಮನ ಸಲ್ಲಿಸಿದೆವು. ಭಾಷೆ ಬಾರದ ನಾಡಿನಲ್ಲೂ ಪ್ರಮಾಣಿಕ ಹೃದಯಗಳ ಮಿಡಿತ ಮನುಷ್ಯತ್ವದ ಸೊಗಡು ನಮಗೆ ಆಗಾಗ ಆಗುತ್ತಿತ್ತು.

china photos 2ನಮ್ಮ ಚಿಕ್ಕಪೇಟೆ, ಅವಿನ್ಯೂ ರೋಡಿನ ಹಾಗೆ ಅಲ್ಲಿಯೂ ವ್ಯಾಪಾರಿ ಸ್ಥಳಗಳು ಇವೆ. ಹಾಗೆಯೇ ಕಿಕ್ಕಿರಿದ ಅಂಗಡಿಗಳು, ವ್ಯಾಪಾರ ನಡೆದದ್ದೆಲ್ಲ ಕ್ಯಾಲಿಕ್ಯುಲೇಟರ್ ಮುಖಾಂತರವೇ. [ಭಾಷೆ ಬಾರದ ನಮ್ಮೊಂದಿಗೆ]ನಮ್ಮಲ್ಲಿ ಸಿಕ್ಕುವ ಸೀಬೆ, ದಾಳಿಂಬೆ, ಕಿತ್ತಳೆ, ಬಾಳೆ, ದ್ರಾಕ್ಷಿ, ಸೇಬು ಮುಂತಾದ ಎಲ್ಲಾ ಹಣ್ಣುಗಳೂ ಇಲ್ಲಿ ಸಿಗುತ್ತವೆ. ಪುಟ್ಟ ಪುಟ್ಟ ರುಚಿಯಾದ ಕಿತ್ತಲೆ ಹಣ್ಣುಗಳ ಒಂದು ವಿಶಿಷ್ಟ ಜಾತಿಯನ್ನು ನಾವಿಲ್ಲಿ ಕಂಡು ಕೊಂಡು ರುಚಿ ನೋಡಿದೆವು. ಬಹುಸಿಹಿಯಾಗಿದ್ದವು. ಹಲಸಿನ ಹಣ್ಣುಗಳೂ ಇಲ್ಲಿವೆ. ಆದರೆ ನಮ್ಮ ಹಣ್ಣಿನ ಹಾಗಿಲ್ಲ ಆಕಾರದಲ್ಲಿ ಸಣ್ಣದಾಗಿ ಅದರ ಮೇಲಿನ ಮುಳ್ಳುಗಳು ಸ್ವಲ್ಪ ದಪ್ಪಗೆ ವಿರಳವಾಗಿರುತ್ತವೆ. ಅದನ್ನು ನಮ್ಮ ಹಣ್ಣಿನಷ್ಟು ರುಚಿಯಿಲ್ಲ. ‘ಡ್ಯ್ಯಾಗನ್ ಫ್ರೂಟ್’ ಒಂದು ಇಲ್ಲಿನ ವಿಶಿಷ್ಟ ಹಣ್ಣು. ಡ್ಯ್ಯಾಗನ್ ಆಕಾರವನ್ನು ಹೋಲುವ ಕೆಂಪು, ಹಳದಿ ಮಿಶ್ರಿತ ಹಣ್ಣು, ಹುಳಿ, ಸಿಹಿ ಮಿಶ್ರಿತ ರುಚಿ. ಮಾವಿನ ಹಣ್ಣುಗಳೂ ಇದ್ದವು. ಆದರೆ ನಮ್ಮ ಹಣ್ಣಿನ ಹಾಗೆ ಅಷ್ಟು ರುಚಿಯಿರಲಿಲ್ಲ. (ಇವುಗಳಲ್ಲಿ ಕೆಲವು ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಾರೆ.) ‘ಕಿವಿ’ ಹಣ್ಣು ಸಿಗುತ್ತದೆ. ಇದರ ರಸವನ್ನು ಮಾರುವುದು ಇಲ್ಲಿ ಸಹಜ.

ಸೋಯಾ ಹಾಲನ್ನು ಇಲ್ಲಿ ಬಹಳಷ್ಟು ಉಪಯೋಗಿಸುತ್ತಾರೆ. ಕುಡಿಯಲು ಬಹುಳ ರುಚಿಯಾಗಿರುತ್ತದೆ. (ಅಮೇರಿಕಾದ ವಾಲ್ ಮಾರ್ಟ್ ಗಳು ಇಲ್ಲಿ ಕಾಲಿಟ್ಟು ತಮ್ಮ ಪ್ರಭುತ್ವ ಸ್ಥಾಪಿಸಿದೆ) ಹಸುವಿನ ಹಾಲನ್ನು ಮಾರುವ ಹೆಣ್ಣು ಮಕ್ಕಳು ಸಾಕಷ್ಟು ಜನರಿದ್ದಾರೆ. ಪ್ಲ್ಯಾಸ್ಟಿಕ್ ಚೀಲಗಳಲ್ಲಿ ನಮಗೆ ಬೇಕಷ್ಟು ಹಾಲುಗಳನ್ನು ಹಾಕಿಕೊಡುತ್ತಾರೆ. ನನ್ನ ಮಗಳಿಗೆ ಹೀಗೆ ಒಬ್ಬ ಹೆಣ್ಣು ಮಗಳು ನಿತ್ಯ ಹಾಲು ಕೊಡುತ್ತಿದ್ದಳು. ಅವಳ ಮಗಳು ಪದವಿ ತರಗತಿಯಲ್ಲಿ ಓದುತ್ತಿದ್ದಳು. ಆದರೆ, ಈಕೆಯೇ ಪುಟ್ಟ ಹುಡುಗಿಯ ಹಾಗೆ ಬಹು ಹಸನ್ಮುಖಿಯಾಗಿದ್ದಳು. ವ್ಯಾಯಾಮದ ಕಾರಣ ಇವರ ವಯಸ್ಸು ತಿಳಿಯುವುದೇ ಕಷ್ಟ. ‘40’ ರ ಹರೆಯದವರು ‘20’ ವಯಸ್ಸಿನವರಾಗಿ ಕಾಣುತ್ತಾರೆ.

ಇವರೆಲ್ಲಾ ಸಾಮಾನ್ಯವಾಗಿ ದೊಡ್ಡ ದನಿಯ ಮಾತುಗಾರರು. ದೂರದಿಂದ ನೋಡುವವರಿಗೆ ಜಗಳವಾಡುವಂತೆ ಭಾಸವಾಗುತ್ತದೆ. ವ್ಯಾಪಾರದಲ್ಲಿ ಮೋಸ ಕಾಣಲಿಲ್ಲ. ಆದರೆ, ಹೇಳಿದ ಬೆಲೆಗೆ ಕಟ್ಟು ಬೀಳುತ್ತಾರೆ. ನೋ. ನೋ ಎಂದರೆ ಅಲ್ಲಿಗೆ ಮುಗಿಯಿತು. ತರಕಾರಿ ಹಣ್ಣುಗಳ ಮಾರುಕಟ್ಟೆಯಂತು ಬಹು ವಿಶಾಲವಾಗಿ ಅಚ್ಚುಕಟ್ಟಾಗಿರುತ್ತದೆ. ಬೆಲೆ ಕಡಿಮೆ ಕೆಲವೊಮ್ಮೆ ರಸ್ತೆಯ ತಿರುವುಗಳಲ್ಲಿ ಕಲ್ಲಂಗಡಿ, ಖರಬೂಜ, ಚೆರ್ರಿ ಹಣ್ಣುಗಳನ್ನು ತರಕಾರಿಯನ್ನು ಟ್ರಕ್ಗಳಲ್ಲಿ ತುಂಬಿಕೊಂಡು ಮಾರುತ್ತಾರೆ. ರೈತರೇ ನೇರವಾಗಿ ಮಾರಾಟ ಮಾಡುವ ಜಾಗಗಳು ಇವು. ಚೆರ್ರಿ ಹಣ್ಣುಗಳನ್ನು ಕೆಂಪು ಬಣ್ಣದಲ್ಲಿ ಮಾತ್ರ ನೋಡಿದ್ದೆವು ಹಾಗೂ ಅದರ ಗಾತ್ರ ಗೋಲಿಯ ಗಾತ್ರ. ಆದರೆ, ಇಲ್ಲಿ ಹಳದಿ ಬಣ್ಣದ ಚೆರ್ರಿಗಳು ಹಾಗೂ ಗೋಲಿ ಗಾತ್ರಕ್ಕಿಂತಲೂ ದೊಡ್ಡದನ್ನು ಕಂಡೆವು ಚೆರ್ರಿ ಹಣ್ಣಿನ ಕಾಲವಾಗಿತ್ತು. ನಾವೂ ಹೋಗಿದ್ದ ಸಂದರ್ಭ. ಹಾಗಾಗಿ ಚೆರ್ರಿ ತೋಟಗಳನ್ನು ನೋಡಿದೆವು. ಹಣ್ಣನ್ನು ಗೊಂಚಲಾಗಿ ತುಂಬಿಕೊಂಡಿದ್ದ ತೋಡಗಳಂತೂ ನಯನ ಮನೋಹರ.

ಆಹಾರ ಪ್ರಿಯರಾಗಿರುವ ಚೀನೀಯರು ರಸ್ತೆಗಳಲ್ಲಿ ನಡೆದು ಹೋಗುವಾಗ ಕಡ್ಡಿಗೆ ಚುಚ್ಚಿದ ಕೋಳಿಮಾಂಸದ ತುಣುಕುಗಳು, ಭೀಫ್ ನ ತುಣುಕುಗಳು, ಪೋರ್ಕ್ ತುಣುಕುಗಳನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ ಆರಾಮವಾಗಿ ಹೋಗುತ್ತಿರುತ್ತಾರೆ. ದೊಡ್ಡ ದೊಡ್ಡ ಫೂಡ್ ಸ್ಟ್ರೀಚ್ ಗಳು ಇರುತ್ತವೆ. ಇಲ್ಲಿ ಅನೇಕ ಅಂಗಡಿಗಳಿರುತ್ತವೆ. ನಮಗೆ ಬೇಕಾದದ್ದನ್ನು ಕೇಳಿದರೆ ಅಲ್ಲಿಯೇ ಬಿಸಿಬಿಸಿಯಾಗಿ ವಿವಿಧ ರೀತಿಯ ಮಾಂಸದ ತುಣುಕುಗಳನ್ನು ವಿಶೇಷವಾದ ಓವನ್ ನಲ್ಲಿ (ಚಾಪ್ ಸ್ಟಿಕ್) ಫ್ರೈ ಮಾಡಿ ಕಡ್ಡಿಗೆ ಚುಚ್ಚಿ ಕೊಡುತ್ತಾರೆ. ಇದನ್ನು ಐಸ್ ಕ್ರೀಂನ ಹಾಗೆ ಸವಿಯುತ್ತಾರೆ. ನಾವು ಚಿಕನ್ ತುಣುಕುಗಳನ್ನು ಹೀಗೆಯೇ ಸವಿದೆವು. ನಂದನ ಮತ್ತು ಪ್ರಥಮ್ ಇಬ್ಬರಿಗೂ ಇದು ಅತ್ಯಂತ ಪ್ರಿಯವಾದ ಆಹಾರವಾಗಿತ್ತು. ಅದೆಷ್ಟು ‘ಚೀರು ಸ್ಟಿಕ್’ ಗಳನ್ನು ತಿಂದರೇ ಲೆಕ್ಕವೇ ಇಲ್ಲ. ‘ಚೀರು’ ಎಂದರೆ ಚೀನೀ ಭಾಷೆಯಲ್ಲಿ ‘ಕೋಳಿ’ (ಚಿಕನ್) ಎಂದರ್ಥ. ಕುರಿ, ಮೇಕೆ, ಆಡು ಇವುಗಳ ಮಾಂಸವೂ ಸಿಗುತ್ತವೆ. ಆದರೆ ಸ್ವಲ್ಪ ಕಡಿಮೆ.

ಜಲಚರಗಳಂತೂ ತುಂಬಿ ತುಳುಕುತ್ತವೆ. ವಿವಿಧ ಜಾತಿಯ ಮೀನುಗಳು, ಕಪ್ಪೆಗಳು, ಏಡಿಗಳು ಹೀಗೆ ಅನೇಕವು. ಒಂದು ಇಂಥಹುದೇ ಪುಡ್ ಸ್ಟ್ರೀಟ್ ಗೆ ನಾವು ಹೋದಾಗ ಅಲ್ಲಿಯ ವಿಚಿತ್ರ ವಾಸನೆ ತಾಳಲಾರದೆ ಅಲ್ಲಿಂದ ಓಟ ಕಿತ್ತೆವು. ನಮ್ಮ ಪ್ರಥಮ್ ನಂತೂ ಇನ್ನೇನು ಕಕ್ಕಿಯೇ ಬಿಡುವವನಿದ್ದ. ಚೀನೀಯರ ‘ಪ್ರಾಥಮಿಕ’ ಆಹಾರಗಳ ಮಳಿಗೆಗಳು ಇಲ್ಲಿದ್ದವು. ಒಣಗಿಸಿದ ವಿವಿಧ ರೀತಿಯ ಮೀನುಗಳು ಹಾವುಗಳ ಹಾಗೆ ಕಾಣ್ಣುತ್ತಿದ್ದಂತವು, ಇವೆಲ್ಲಾ ಇಲ್ಲಿ ಇದ್ದವು. ಯಾಂಥಾಯ್ ನಿಂದ ಬೀಜಿಂಗ್ ಗೆ ವಿಮಾನದಲ್ಲಿ ಪಯಣಿಸುವಾಗ ಪ್ರಯಾಣಿಕರಿಗೆ ‘ಬರ್ಗರ್’ ಕೊಟ್ಟರು. ಅವು ‘ಬೀಫ್ ಬರ್ಗರ್’ ಎಂದು ನಮಗೆ ಅವರು ಹೇಳಿದಾಗ ನಾವು ತಿನ್ನುವುದಿಲ್ಲ ಎಂದು ತಿಳಿದ ಅವರು ನಮಗೆ ಹುರಿದ ಖಾರ ಹಚ್ಚಿದ ದೊಡ್ಡ ಗಾತ್ರದ ಕಡಲೆಕಾಯಿ ಬೀಜಗಳನ್ನು ಕೊಟ್ಟರು. ಇದು ಬಹಳ ರುಚಿಯಾಗಿತ್ತು. ನಂತರ ಯಾಂಥಾಯ್ ನ ಅಂಗಡಿಗಳಲ್ಲಿ ಮಾಲುಗಳಲ್ಲಿ ಈ ಬೀಜಗಳನ್ನು ನಾವು ಕೊಂಡು ತಿಂದೆವು. (ಪೀನಟ್ಸ್) (ನಮ್ಮ ಕಾಂಗ್ರೆಸ್ ಕಡಲೆಕಾಯಯ ಬೀಜದ ಹಾಗೆಯಿದ್ದರೂ ಅದಕ್ಕಿಂತ ರುಚಿಯಾಗಿತ್ತು.) ಕೆಂಪು ಒಣ ಮೆಣಸಿನ ಕಾಯಿಯನ್ನು ತರಿತರಿಯಾಗಿ ಪುಡಿಮಾಡಿ (ಎಣ್ಣೆಯಲ್ಲಿ ಬೀಜವನ್ನು ಕರಿದು) ಉಪ್ಪಿನೊಡನೆ ಹದವಾಗಿ ಬೆರೆಸಿರುತ್ತಾರೆ. ಇವರು ಆಹಾರದಲ್ಲಿ ಖಾರ ಕಡಿಮೆ ಬಳಸುತ್ತಾರೆ. ಹೋಟೆಲ್ ಗಳಲ್ಲಿ ಹೀಗೆ ತರಿಯಾದ ಮೆಣಸಿನಕಾಯಿ ಪುಡಿಯನ್ನು ಪುಟ್ಟ ಬಾಟಲ್ ಗಳಲ್ಲಿ ತುಂಬಿಸಿಟ್ಟಿರುತ್ತಾರೆ, ಬೇಕಾದರೆ ಬಳಸುವಂತೆ. ಈ ಮೆಣಸಿನ ಪುಡಿಯೂ ರುಚಿಯಾಗಿರುತ್ತದೆ.

ಇಲ್ಲಿಯ ಜನರ ಆಹಾರವನ್ನು ಕುರಿತಂತೆ ಬಹಳವಾಗಿ ಎಲ್ಲರೂ ಮಾತನಾಡುತ್ತಾರೆ. ಸೂರ್ಯನಿಗೆ ಬೆನ್ನು ಮಾಡಿ ಚಲಿಸುವ ಎಲ್ಲಾ ಪ್ರಾಣಿಗಳನ್ನು ಇವರು ತಿನ್ನುತ್ತಾರೆ ಎನ್ನುತ್ತಾರೆ. ಸಂಜೆಯ ಹೊತ್ತು ಫುಟ್ ಪಾತ್ ಗಳಲ್ಲಿ ಸುಸಜ್ಚಿತವಾಗಿ ತೆರೆದುಕೊಳ್ಳುವ ಹೋಟೆಲ್ ಗಳು ಹಾಗೂ ಹೋಟೆಲ್ ಗಳ ಸಂಕೀರ್ಣ ಇಲ್ಲೆಲ್ಲ ಏನೆಲ್ಲಾ ಪಾಕಗಳು ಸಿದ್ಧವಾಗುತ್ತಿರುವ ದೃಶ್ಯ ಎದ್ದು ಕಾಣುತ್ತಿರುತ್ತದೆ. ಆದರೆ, ಜಲಚರಗಳನ್ನೆಲ್ಲ ತಿನ್ನುವ ಇವರು ಸಸ್ಯ, ತರಕಾರಿಗಳನ್ನು ಯಥೇಚ್ಛವಾಗಿ ತಿನ್ನುತ್ತಾರೆ. ದೊಡ್ಡ ಸೈಜಿನ ಕಡಲೆ ಬೀಜಗಳನ್ನು ಬೇಯಿಸಿ ಅದರೊಡನೆ ಪಾಲಾಕ್ ಜಾತಿಯ ಸೊಪ್ಪು, ಉಪ್ಪನ್ನು ಹಾಕಿ ಬೇಯಿಸಿ ತಿನ್ನುವುದು ಇವರ ಸಸ್ಯಾಹಾರದ ಒಂದು ತಿನಿಸು. ಇಲ್ಲಿ ಬೆಳೆಯುವ ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಎಲ್ಲವೂ ದೊಡ್ಡದಾಗಿರುತ್ತದೆ. ಈರುಳ್ಳಿ ಹೂಗಳಂತೂ ಮಾರುದ್ದವಿರುತ್ತದೆ. ಇದು ಇವರ ಪ್ರಿಯವಾದ ತರಕಾರಿ. ತರಕಾರಿ, ಹಣ್ಣುಗಳು ಬಹಳ ಕಡಿಮೆ ಬೆಲೆ. ಒಟ್ಟಾರೆಯಾಗಿ ಇಲ್ಲಿನ ಜೀವನ ನಿರ್ವಹಣೆ ಖರ್ಚು ಭಾರತಕ್ಕಿಂತ ಕಡಿಮೆ ಎನಿಸಿತು. ಅಕ್ಕಿ ನಮ್ಮ ಬಾಸುಮತಿಯಂತೆಯೇ ಇರುತ್ತದೆ. ಬೇಯಿಸಿದಾಗ ಸ್ವಲ್ಪ ಅಂಟುವಂತೆಯಿರುತ್ತದೆ. ಈ ಅಕ್ಕಿಯಿಂದ ಇವರು ಒಂದು ರೀತಿಯ ಬ್ರೆಡನ್ನು ತಯಾರಿಸುತ್ತಾರೆ.

ಇದು ಇವರ ಸಾಮಾನ್ಯವಾದ ಪ್ರಿಯವಾದ ಆಹಾರ, ಚಿಪ್ಪನ್ನು ಬೇಯಿಸಿ ಅದರೊಳಗಿನ ಮಾಂಸವನ್ನು ತಿನ್ನುತ್ತಾರೆ. ಕಡಲ ಅಂಚಿನ ಬಂಡೆಗಳಲ್ಲಿ ಅಂಟಿಕೊಂಡಿರುವ ಚಿಪ್ಪುಗಳನ್ನು ಪ್ಲಾಸ್ಟಿಕ್ ಕವರ್ ಗಳನ್ನು ಹಿಡಿದು ಸಂಗ್ರಹಿಸಿಕೊಳ್ಳುತ್ತಿರುವ ದೃಶ್ಯ ಬಹಳಷ್ಟು ಕಡೆಯಲ್ಲಿ ಕಂಡು ಬಂದಿತು. ರಸ್ತೆ ಬದಿಯ ಹೋಟೆಲ್ ಗಳಲ್ಲಿಯೂ ಈ ರೀತಿ ಚಿಪ್ಪುಗಳನ್ನು ಬೇಯಿಸುವ ದೃಶ್ಯ ಸಾಮಾನ್ಯವಾದದ್ದು ಆಗಿತ್ತು. ಡಕ್ ರೆಸ್ಟೋರೆಂಟ್, ರಯಾಬಿಟ್ ರೆಸ್ಟೋರೆಂಟ್ ಗಳೂ ಅಲ್ಲಲ್ಲಿ ಇರುತ್ತವೆ. ಈ ರೆಸ್ಟೋರೆಂಟ್ ಗಳೆಲ್ಲ ಬಹು ಸುಸಜ್ಜಿತವಾಗಿರುತ್ತವೆ. ಚೀನಿಯರು ಭೋಜನ ಪ್ರಿಯರು. ಸಸ್ಯಾಹಾರವನ್ನು ಕೇಳಿದರೆ ಅನ್ನ ಅದರೊಟ್ಟಿಗೆ ಕಡಲೆಕಾಯಿ ಬೀಜ, ಸೊಪ್ಪನ್ನು ಬೇಯಿಸಿ ಕೊಡುತ್ತಾರೆ. ತರಕಾರಿಗಳನ್ನು ಬೇಯಿಸಿ ಕೊಡುತ್ತಾರೆ. ಮಾಂಸಾಹಾರಿಗಳಿಗಂತೂ ಇಲ್ಲಿ ಸುಗ್ಗಿ. ತಂಬಾಕು ಸೇವನೆಯೂ ಅಧಿಕ. ಬಹಳಷ್ಟು ಚೀನೀಯರು ಬೀಡಿಯನ್ನು ಸೇದುತ್ತಾರೆ. ರಸ್ತೆಗಳಲ್ಲಿ ಸೇದುವುದಿಲ್ಲ. ಕೆಲವು ರಸ್ತೆಯ ತಿರುವುಗಳಲ್ಲಿ ಬೀದಿ ಸೇದುವುದನ್ನು ಕಂಡೆವು. ಬಹುಶಃ ಇದು ಬೀಡಿ ಸೇದುವ ಜಾಗಗಳಾಗಿದ್ದಿರಬೇಕು. ಹೋಟಲ್ ಗಳಲ್ಲಿ, ಬೇಕರಿಗಳಲ್ಲಿ ಸಿಗರೇಟ್ ಸೇದುವ ಪ್ರತ್ಯೇಕ ಕೊಠಡಿಗಳಿರುತ್ತವೆ. ಅಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳೂ ಇಬ್ಬರೂ ಸಿಗರೇಟ್ ಸೇವುದನ್ನು ನೋಡಿದೆವು.

ಇಲ್ಲಿ ‘ವೈನ್’ ನ್ನು ಪ್ಲ್ಯಾಸ್ಟಿಕ್ ಕವರ್ ಗಳಲ್ಲಿ ತುಂಬಿಸಿಕೊಂಡು ಹೋಗುವುದನ್ನು ಸಾಮಾನ್ಯವಾಗಿ ಕಾಣುತ್ತಿದ್ದೆವು. ಮೊದಲ ಬಾರಿಗೆ ನೋಡಿದಾಗ ಎಣ್ಣೆಯನ್ನು ಹೀಗೆ ಒಯ್ಯುತ್ತಾರೆ ಎಂದು ಕೊಂಡಿದ್ದೆವು. ಆಮೇಲೆ ಅದು ‘ವೈನ್’ ಅಂತ ಗೊತ್ತಾಯಿತು. ಆದರೆ ಯಾರೂ ರಸ್ತೆ ಮೇಲೆ ಕುಡಿದು ತೂರಾಡಿದ್ದನ್ನು ಕಾಣಲಿಲಲ್ಲ. ವಯಸ್ಸಾದ ಗಂಡಸರು ಹೊರಹೊರಡುವಾಗ ತಮ್ಮೊಡನೆ ಒಂದು ಸಣ್ಣ ಸ್ಟೂಲ್ ನ್ನು ಒಯ್ಯುತ್ತಾರೆ. ಹಾದಿ ಬದಿಯಲ್ಲಿ ತಮಗೆಲ್ಲಿ ಕೂಡ ಬೇಕೋ ಅಲ್ಲಿ ಅದ ಸ್ಮರಿಸಿ ಕುಳಿತುಕೊಳ್ಳುತ್ತಾರೆ. ರಸ್ತೆ ಬದಿಗಳಲ್ಲಿ, ತಿರುವುಗಳಲ್ಲಿ ಹೀಗೆ ತಮ್ಮದೇ ಸಣ್ಣ ಸಣ್ಣ ಕುರ್ಚಿಗಳನ್ನು ಹಾಕಿ ಕುಳಿತು ಸಣ್ಣ ಸಣ್ಣ ಚೌಕಾಕಾರದ ಮರದ ತುಂಡುಗಳನ್ನಿರಿಸಿಕೊಂಡು ಒಂದು ಬಗೆಯ ಆಟವಾಡುತ್ತಿರುತ್ತಾರೆ. [ಇದೊಂದು ರೀತಿಯ ಜೂಜಾಟ] ಯಾರೂ ಜಗಳವಾಡಿದ್ದಾಗಲೀ ಪೊಲೀಸರ ನಿಯಂತ್ರಣವಾಗಲೀ ನಮಗೆ ಕಾಣಲಿಲ್ಲ.

ನಾವು ಗಮನಿಸಿದ ಮತ್ತೊಂದು ವಿಶೇಷವೆಂದರೆ ಬ್ಯೂಟಿಪಾರ್ಲರ್ ಗಳಲ್ಲಿ ಮಾಲೀಕರು ಹೆಣ್ಣು ಮಕ್ಕಳು ಕೆಲಸ ಮಾಡುವವರು ಗಂಡು ಮಕ್ಕಳು. ಒಂದು ದಿನ ರಸ್ತೆ ಬದಿಯಲ್ಲಿ ನಾವು ನಡೆದು ಹೋಗುತ್ತಿರುವಾಗ ಅಂಗಡಿಯ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬ ನಮ್ಮನ್ನು ನೋಡಿದ ಕೂಡಲೇ “ಮೆರಜೂತಾ ಹೈಜಪಾನಿ ” ಎನ್ನುವ ಹಿಂದಿ ಸಿನಿಮಾದ ಹಾಡಿನ ತುಣುಕೊಂದನ್ನು ಹಾಡಿ ನಮಗೆ ಭಾರತೀಯರ ಹಾಗೆ ಕೈ ಮುಗಿದು ವಂದಿಸಿದ. ಭಾಷೆ ಬಾರದ ಅವನು ನಮ್ಮನ್ನು ಭಾರತೀಯರೆಂದು ತಾನು ಗುರುತಿಸಿದ್ದೇನೆ ಎಂದು ಹೀಗೆ ಹೇಳಿಕೊಂಡಿದ್ದ. ರಾಜ್ ಕುಪೂರ್ ಹೀಗೆಯೇ ರಷ್ಯಾ ದೇಶದಲ್ಲಿ ಪ್ರಚಲಿತರಾದ್ದದ್ದು ನಮಗೆ ತಕ್ಷಣ ನೆನಪಾಯಿತು. ಅವರನ ಸಮಯ ಪ್ರಜ್ಞೆ ನಮ್ಮಲ್ಲಿ ತಿಳಿನಗು ಚಿಮ್ಮಿಸಿತು. ನಾವೂ ಅವನಿಗೆ ಪ್ರತಿ ನಮಸ್ಕರಿಸಿ ಅಲ್ಲಿಂದ ತೆರಳಿದೆವು.

ನಮ್ಮ ಮನೆಯ ಬಳಿಯಿದ್ದ ಅಂಗಡಿ ಮುಂಗಟ್ಟಿನ ಮುಂದೆ ಪ್ರತಿದಿನ ನಡೆಯುವ ಸಂಜೆಯ ನೃತ್ಯ ವ್ಯಾಯಾಮವನ್ನು ನೋಡಲು ನಾವು ಹೋಗಿ ನಿಂತಿದ್ದೆವು. ನಮ್ಮನ್ನು ನೃತ್ಯ ಮಾಡುವಂತೆ ಅವರು ಆಹ್ವಾನಿಸಿದರು. ನನ್ನ ಮಗಳು ನಂದನ ನೃತ್ಯ ಕಲಾವಿದೆ. ಅವಳು ಅವರಿಗೆ ಪರಿಚಯವೂ ಆಗಿದ್ದಳು. ಅವಳು ಅವರೊಡನೆ ನೃತ್ಯದ ಹೆಜ್ಜೆಗಳನ್ನು ಹಾಕುತ್ತಾ ತಾನೊಂದು ಹೊಸ ರೀತಿಯ ಹೆಜ್ಜೆಗಳನ್ನು ವ್ಯಾಯಾಮದ ರೀತಿಯಲ್ಲಿ ಹೇಳಿಕೊಟ್ಟ ಕೂಡಲೇ ಅವರೂ ಅವಳಂತೆ ಹೆಜ್ಜೆ ಹಾಕಿ ಚಪ್ಪಾಳೆ ಮುಖಾಂತರ ತಮ್ಮ ಸಂತಸವನ್ನು ಸೌಹಾರ್ದತೆಯನ್ನು ಸೂಚಿಸಿದರು. ಇದು ದೇಶ ದೇಶಗಳ ಜನ ಸಾಮಾನ್ಯರ ಸಹಜ ಸ್ವಭಾವ. ಇದನ್ನು ಹೀಗೆಯೇ ಪೋಷಿಸುವ ಮನಸ್ಸು ಎಲ್ಲರಲ್ಲಿ ಮೂಡಿದರೆ, ಟಾಲ್ ಸ್ಟಾಯ್, ಕುವೆಂಪು ಮುಂತಾದವರ ವಿಶ್ವ ಮಾನವ ಪ್ರಜ್ಞೆ ಸಾಕಾರವಾಗುತ್ತದೆ ಎನಿಸಿತು. ಸಂಜೆಯ ತಂಪುಗಾಳಿ ಬೀಸುತ್ತಿತ್ತ. ನಾವು ಮಗವನ್ನು ಸ್ವೆಟರ್ ಹಾಕದೆ ಎತ್ತಿಕೊಂಡು ನಿಂತಿದ್ದೆವು. ಒಬ್ಬ ಹಿರಿಯ ಮಹಿಳೆ ನಮ್ಮ ಬಳಿ ಬಂದು ‘ಪಾಪ’ ‘ಪಾಪ’ ಎನ್ನುತ್ತ ಮಗುವಿಗೆ ಸ್ವೆಟರ್ ಹಾಕಿಲ್ಲ, ಹಾಕಬೇಕು ಎನ್ನುವುದನ್ನು ಯಥಾಪ್ರಕಾರ ಕೈಸನ್ನೆಯಿಂದ ತೋರಿಸಿದರು. ಆಗ ಅವರ ಕಾಳಜಿ ಹಾಗೂ ನಮ್ಮಲ್ಲಿರುವ ‘ಪಾಪ’ ಪದ ಅವರಲ್ಲಿಯೂ ಇರುವುದು ನಮಗೆ ಅಚ್ಚರಿ ಮೂಡಿಸಿತು. [ಪಾಪ ಎಂದು ಉಚ್ಛರಿಸುವ ರೀತಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು.]

ನಮ್ಮ ಮನೆಯ ಕೆಳ ಅಂತಸ್ತಿನಲ್ಲಿ ಒಂದು ಮನೆ ಪಾಠದ ಶಾಲೆಯಿತ್ತು. ಅಲ್ಲಿಯೂ ಗಣಿತ ಮತ್ತು ವಿಜ್ಞಾನವನ್ನು ಹೇಳಿಕೊಡುತ್ತಿದ್ದರು. ಆದರೆ ಅದೆಲ್ಲ ಚೀನೀ ಭಾಷೆಯಾಗಿತ್ತು. ಮನೆ ಪಾಠದ ವ್ಯವಸ್ಥೆ ಇಲ್ಲಿಯೂ ಇದೆಯಲ್ಲಾ ಎಂದು ಕೊಂಡೆವು. ಕಂಪ್ಯೂಟರ್ ನ್ನು ಎಲ್ಲಾ ಕ್ಷೇತ್ರದಲ್ಲಿಯೂ ಬಳಸುತ್ತಾರೆ. ಆದರೆ ಅವರ ಭಾಷೆಯಲ್ಲಿಯೇ. ನಮ್ಮ ಫ್ಲ್ಯಾಟಿನ ಆಟದ ಮೈದಾನದಲ್ಲಿ ಮಕ್ಕಳು ಸಂಜೆ ಆಡುವಾಗ ಒಮ್ಮೆಮ್ಮೆ ನಾವು ಹೋಗುತ್ತಿದ್ದೆವೆಂದು ಆಗಲೇ ತಿಳಿಸಿದ್ದೇನೆ. ಹೀಗೆ ಒಮ್ಮೆ ಒಂದು ಹುಡುಗಿಯನ್ನು ಮಾತನಾಡಿಸಿದೆವು. ಅವಳಿಗೆ ಇಂಗ್ಲೀಷ್ ಬರುತ್ತಿತ್ತು. ನಮ್ಮ ಫ್ಲ್ಯಾಟಿನ ಹಿಂಬದಿ ರಸ್ತೆಯ ಮನೆಯ ಹುಡುಗಿ ಆಕೆ. ಆಕೆಯ ಕುಟುಂಬದ ವಿವರ ಕೇಳಿದಾಗ ಅವಳ ತಾಯಿ ಶಾಲೆಯಲ್ಲಿ ಇಂಗ್ಲೀಷ್ ಟೀಚರ್, ಅವಳ ತಂದೆ ಆಫೀಸಿನಲ್ಲಿ ಕೆಲಸ, ಅಜ್ಜ, ಅಜ್ಜಿ ಇದ್ದಾರೆ ಎಂದು ಹೇಳಿ ಈದಿನ ತನ್ನ ತಂದೆ ಅಡುಗೆ ಸಿದ್ಧತೆಯಲ್ಲಿದ್ದಾರೆ. ತಾಯಿ ವಾಕಿಂಗ್ ಗೆ ಬಂದಿದ್ದಾರೆ ಎಂದು ಹೇಳಿದಳು. ಅವರ ಮನೆಯಲ್ಲಿ ತಂದೆ ತಾಯಿಯರು ಮನೆಗೆಲಸವನ್ನು ಹೀಗೆ ಹಂಚಿಕೊಂಡು ಮಾಡುವ ಒಂದು ವ್ಯವಸ್ಥೆಯ ಬಗೆಗೆ ಆ ಮಗು ಹೇಳಿದ್ದು, ಭಾರತೀಯರಲ್ಲಿ ಅನೇಕರು ಇದರ ಅನುಕರಣೆಗೆ ಇದ್ದಾರಲ್ಲ ಎನಿಸಿತು. ಇಲ್ಲಿ ಸಾಮಾನ್ಯವಾಗಿ ಇಬ್ಬರೂ ದುಡಿಯವುದರಿಂದ ಈ ಹೊಣೆಗಾರಿಕೆ ಎಲ್ಲಾ ಮನೆಗಳಲ್ಲೂ ಇದೆ.

ಈಗ ನಾನು ಹೇಳಿದುದು ಬಹಳಷ್ಟು ವಿಷಯ ಕೆಲವೊಮ್ಮೆ ಸಣ್ಣದು ಎನಿಸಬಹುದೇನೋ, ಆದರೆ ಈ ಸಣ್ಣ ವಿಷಯಗಳೇ ಬಹು ಪ್ರಾಥಮಿಕವಾದದ್ದು ಹಾಗೂ ಸೂಕ್ಷ್ಮವಾದದ್ದು, ಅನಿವಾರ್ಯವಾದದ್ದು ಎಂದು ನನ್ನ ಭಾವನೆ. ಮೌಲ್ಯರಹಿತ ಬದುಕಿ ವೃತ್ತಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ‘ಸಣ್ಣವು’ ಎನ್ನಿಸಿಕೊಳ್ಳುವ ಇವುಗಳು ಬಹು ಅನಿವಾರ್ಯ ಎನಿಸಬೇಕಿದೆ.

Leave a Reply

Your email address will not be published.