ಚಿನ್ನದ ಕನ್ನಡಕ

ವಿಕಾಸ ಆರ್ ಮೌರ್ಯ

big_ambedkar102“ಏ ಬೇಗ ಬೇಗ ಕಸ ಹೊಡೀರಿ. ಉಸ್ತವದಲ್ಲಿ ಒಂದು ಕಸ ಕಾಣಂಗಿಲ್ಲ” ಹನುಮಕ್ಕ ಒದರುತ್ತಾ ಸಂಗಡಿಗರಿಗೆ ಕೂಗಿ ಕೂಗಿ ಹೇಳುತ್ತಿದ್ದಳು. ಅವರೂ ಹರಿಬರಿಯಲ್ಲಿ ಸಂದಿಗುಂದಿಯಲ್ಲಿರುವ ಕಸವನ್ನೆಲ್ಲಾ ಹುಡುಕಿ ಗುಡ್ಡೆ ಹಾಕುತ್ತಿದ್ದರು. ಹನುಮಪ್ಪ ಇನ್ನಿಬ್ಬರೊಂದಿಗೆ ಗಬ್ಬು ನಾರುತ್ತಿದ್ದಂತಹ ಮ್ಯಾನ್ ಹೋಲಿಗೆ ಇಳಿದಿದ್ದ. ಕಸವೆಲ್ಲಾ ರಸವಾಗಿ ಜೀವವಾಯುವಿನ ಜೊತೆಗೆ ಪ್ರಾಣಹಾನಿ ವಾಯುಗಳೂ ಹೆಚ್ಚಿದ್ದದ್ದು ವಾಸನೆಯಿಂದಲೇ ತಿಳಿಯುತ್ತಿತ್ತು. ಅದಕ್ಕೆ ‘ಅಣ್ಣಾ ಉಸ್ರು ಕಟ್ಟುದ್ರೆ ಹೊರಿಕ್ಕೆ ಬಂದ್ಬುಡು’ ಎನ್ನುತ್ತಿದ್ದ ಸೂರಿ ಅಲ್ಲೆ ಹೊರಗೆ ಕೂತು ‘ಆಗಾಗ ಅಣ್ಣಾ, ಹನುಮಂತಣ್ಣ’ ಎಂದು ಮಾತನಾಡಿಸುತ್ತಿದ್ದ. ಹನುಮಂತಣ್ಣ ಒಳಗಿನಿಂದಲೇ ‘ಈ ಬೇವರ್ಸಿ ಸರ್ಕಾರಗಳು ಅಭಿವೃದ್ಧಿ ಅಬಿವೃದ್ಧಿ ಅಂತವೆ ಇದೇ ನೋಡ್ಲಾ ಸೂರಿ ಅಬಿವೃದ್ಧಿ’ ಎನ್ನುತ್ತಾ ಹರಿವಿಗೆ ಕಟ್ಟಿಕೊಂಡಿದ್ದ ಹೊಲಸನ್ನು ಗುದ್ದಲಿಯಿಂದ ಬಾಚಿ ಸೂರಿಗೆ ನೀಡುತ್ತಿದ್ದ. ಸೂರಿಯೂ ಅದನ್ನು ತಳ್ಳುವ ಗಾಡಿಯೊಳಗೆ ಸುರಿಯುತ್ತಾ ‘ಹೌದೇಳಣ್ಣ ಈ ಬಡ್ಡೆತ್ತವ್ಕೆ ಕೋಟಿಗಟ್ಲೆ ಕಿಲೋಮೀಟರ್ ದೂರದಲ್ಲಿರೋ ಗ್ರಹಗಳತ್ರ ಹೋಗಕ್ಕಾಯ್ತದೆ ಭೂಮಿ ಮ್ಯಾಲಿರೋ ನಮಂ್ಮತೋರತ್ರ ಬರಕ್ಕಾಗಕ್ಕಿಲ್ಲ. ಇರೋ ಭೂಮೀನ ಹಾಳು ಮಾಡ್ಕಂಡು ಇಲ್ದೆ ಇರೋ ಭೂಮೀನ ಹುಡುಕಕ್ಕೊಂಟವ್ರೆ ನೋಡು’ ಎಂದ. ಅವನ ಮಾತು ಕೇಳಿ ಆಶ್ಚರ್ಯದಿಂದ ಹನುಮಂತಣ್ಣ ‘ಪರ್ವಾಗಿಲ್ವೆ.. ಬಾಳ ತಿಳ್ಕಂಡಿದೀಯ ಕನ್ಲಾ’ ಎಂದ. ‘ಏನೂ ಇಲ್ಲ ಮಣ್ಣು. ನಮ್ಮಪ್ಪ ಓದ್ಸು ಅಂದ್ರೆ ಅವ್ನ ಕೆಸುಕ್ಕೆ ಹಾಕ್ಕಂಡಾ. ಆದ್ರೆ ದಿನಾ ಪೇಪರ್ ನೋಡದು ಬುಟ್ಟಿಲ್ಲ ನೋಡಣ್ಣ. ಅದೊಂದು ನಂಗೆ ಒಲಿದು ಬಂದದೆ’ ಎಂದ. ಜಗತ್ತಿನ ವಿಷಯಗಳೆಲ್ಲವ ಅವರ ಮಾತಿನಲ್ಲಿ ವಿಮರ್ಶೆಗೊಳಗಾಗುತ್ತಿದ್ದವು. ತನ್ನ ಬಳಿಯಲ್ಲಿ ಕಸ ಹೊಡೆದುಕೊಂಡು ಬಂದ ಹನುಮಕ್ಕನನ್ನು ‘ಅಕ್ಕೋ..’ ಎಂದು ಕೂಗಿ ‘ಎಷ್ಟು ಕೊಟ್ಟಕ್ಕಾ ಉಸ್ತವುಕ್ಕೇ’ ಎಂದ.
‘ಈ ಸಲಿ ಇನ್ನೂರು ಕೊಟ್ಟೀನಿ ಕನಾ’
‘ಪರ್ವಾ ಇಲ್ವೆ. ಜಾಸ್ತಿನೇ ಕೊಟ್ಟಿದ್ದಿ. ಅದೇನ್ ಹೊಸ ಖುಸಿ ಈ ಸಲಿ’
‘ಹೋದ ಸಲಿ ಮಾರಮ್ಮನ ಮೂಗುತಿಗೆ ಎಷ್ಟು ಕೊಟ್ಯಪ್ಪ ನೀನು’
‘ನೂರುಪ್ಪಾಯಿ’
‘ಮತ್ತೆ, ಕಣ್ಣಿಗೆ ಕಾಣದಿರೋ ಮಾರಮ್ಮುಂಗೆ ನೂರು ಕೊಡಬೇಕಾರೇ ಕಣ್ಣಿಗೆ ಕಾಣೋ ದೇವುರ್ಗೆ ಇನ್ನೂರು ಕೊಡಬಾರದೇನು?’
‘ಮೇಸ್ತ್ರಿ ಮುನಿಯಣ್ಣ ಖುಸಿಯಾಗಿರ್ತನೆ ಮತ್ತೆ’
‘ಖುಸಿಯಾಗಿಲ್ದೆ ಇನ್ನೇನು? ಈ ವರ್ಷ ಉಸ್ತವುಕ್ಕೆ ಅಂಬೇಡ್ಕರ್ ಮೂರ್ತಿಗೆ ಚಿನ್ನದ ಕನ್ನಡಕ ಮಾಡುಸ್ತೀನಂತ ಧರ್ಮಣ್ಣ ಹೇಳಿದ್ನಲ್ಲ ಅದುಕ್ಕೆ ನಮ್ಮ ದುಡ್ಡುನ್ನುವೆ big_ambedkar102ಅದುಕ್ಕಾಕಕ್ಕೆ ಹೇಳಿ ಅಂದಿದ್ದುಕ್ಕೆ ಒಪ್ಕಂಡ್ನಂತೆ. ಅದುಕ್ಕೆ ನಾನು ಇನ್ನೂರು ಕೊಟ್ನಪ್ಪ. ಕನ್ನಡಕ ಮಾಡ್ಸಕ್ಕೆ’
‘ಓ ಹಂಗಾರೆ ನಾನು ಕೊಡ್ತೀನಕ್ಕೋ’ ಹೊರಬಂದ ಹನುಮಂತಪ್ಪನನ್ನು ಸೂರಿ ಕೈ ಹಿಡಿದು ಮೇಲೆತ್ತಿ ರಸ್ತೆ ತುಂಬಾ ಕಸ ತುಂಬಿಕೊಳ್ಳಲು ತಳ್ಳುವ ಬಂಡಿಯನ್ನು ನೂಕಿಕೊಂಡು ಹೊರಟ.

ಬೆಳಿಗ್ಗೆ ಸರಿಯಾಗಿ ಎಂಟು ಗಂಟೆಗೆ ಅಂಬೇಡ್ಕರ್ ರಸ್ತೆ ಕಳೆ ಕಟ್ಟಿತ್ತು. ಬಣ್ಣದ ಕಾಗದಗಳು ಲೈಟ್ ಕಂಬಗಳನ್ನು ಒಂದು ಸುತ್ತು ತಬ್ಬಿಕೊಂಡು ಮುನ್ನಡೆದಿದ್ದವು. ಪ್ರತಿ ಲೈಟು ಕಂಬಕ್ಕೆ ನೇತು ಹಾಕಿದ ಬ್ಯಾನರುಗಳಲ್ಲಿ ಪ್ರತಿ ಮೂಲೆಯಲ್ಲಿ ಅಂಬೇಡ್ಕರರ ಭಾವಚಿತ್ರ ಹಾಕಿಸಿ ಸಂವಿಧಾನ ಶಿಲ್ಪಿ ಎಂದು ಹೆಸರು ಬರೆದಿತ್ತು. ಅದಕ್ಕೆ ಕೈ ಮುಗಿದು ನಿಂತ ಜನನಾಯಕರ ಪಕ್ಕದಲ್ಲಿ ದಲಿತರ ಬಂಧು, ಬಡವರ ಕಣ್ಮಣಿ, ದಲಿತ ನಾಯಕ, ದಲಿತ ಸಿಂಹ, ದಲಿತ ಚಿರತೆ ಮುಂತಾದ ಬಿರುದುಗಳ ಜೊತೆ ಅವರ ಹೆಸರಿತ್ತು. ಅವರ ಕಾಲ್ಕೆಳಗೆ ಮುಂಡವಿಲ್ಲದ ರುಂಡಗಳಿದ್ದವು. ಪ್ರತಿ ರುಂಡದ ಕೆಳಗೆ ಅದರ ಯಜಮಾನನ ಹೆಸರು ಬರೆಯಲಾಗಿತ್ತು. ಸಾಲಾಗಿ ದನಿಯೆತ್ತಿದ್ದ ಮೈಕುಗಳು ‘ನಮಿಸಿರಿ ಇಗೋ ಅಂಬೇಡ್ಕರಿವರು, ಶರಣು ಹೇಳಿರಯ್ಯಾ’ ಎಂದು ಕಂಬಾರರು ಬರೆದ ಹಾಡು ಹಾಡುತ್ತಿದ್ದವು.
ರಸ್ತೆಯ ಆರಂಭದಲ್ಲಿದ್ದ ಗಣೇಶನ ಗುಡಿಯ ಮುಂದೆ ಟ್ರ್ಯಾಕ್ಟರ್ ಬೆಳ್ಳಿಯ ಪಲ್ಲಕ್ಕಿಯನ್ನು ಅಡ್ಡಡ್ಡವಾಗಿ ಹೊತ್ತು ನಿಂತಿತ್ತು. ಪಲ್ಲಕ್ಕಿ ಬೆಳ್ಳಿಯದ್ದು ಎಂದು ಕಾಣುವಂತೆ ಅಲ್ಲಲ್ಲಿ ತೆಳುವಾಗಿ ತರಹೇವಾರಿ ಹೂವುಗಳನ್ನು ಪೋಣಿಸಲಾಗಿತ್ತು. ಪಲ್ಲಕ್ಕಿಯ ಮಧ್ಯ ಭಾಗದಲ್ಲಿ ಅಂಬೇಡ್ಕರರ ಆಳೆತ್ತರದ ಕನ್ನಡಕ ಹಾಕಿಲ್ಲದ ಪ್ರತಿಮೆ ನಿಂತಿತ್ತು. ಟ್ರ್ಯಾಕ್ಟರಿನ ಸುತ್ತ ‘ಸಿರಿವಂತರ ಸಿರಿತನ ದರಿದ್ರರ ಬಡತನದಲ್ಲಿದೆ. ಅದನ್ನು ನಿವಾರಿಸಲು ದುಡಿಯುವವರೆಲ್ಲರೂ ಜಾತಿ ಮತಗಳನ್ನು ಬಿಟ್ಟು ಸಂಘಟಿತರಾಗಬೇಕು’ ‘ನನ್ನ ಜನ ಆಳುವ ವರ್ಗವಾಗಬೇಕು. ರಾಜ್ಯಾಧಿಕಾರ ದಾಸ್ಯತನವನ್ನು ನಾಶ ಪಡಿಸುವ ಕೀಲಿಕೈ’ ‘ಗುಲಾಮನಿಗೆ ನೀನು ಗುಲಾಮನೆಂದು ಅರಿಯುವಂತೆ ಮಾಡುವುದೇ ಶಿಕ್ಷಣ’ ಎಂಬ ಅಂಬೇಡ್ಕರರ ಉಕ್ತಿಗಳು ಸಂದೇಶ ಸಾರುತ್ತಿದ್ದವು. ಪಲ್ಲಕ್ಕಿಯ ಕಮಾನು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂದು ಹೇಳುತ್ತಿತ್ತು.

ತಮಟೆ ಸದ್ದಿಗೆ ಕೇಕೆ ಹಾಕಿಕೊಂಡು ಕುಣಿಯುತ್ತಿದ್ದ ಜನಸ್ತೋಮ ದೇವಸ್ತಾನದೊಳಗಿನ ಗಂಟೆ ಸದ್ದಿಗೆ ನಿಶ್ಯಬ್ದವಾಯಿತು. ತಮಟೆ ಸದ್ದು ಮಾತ್ರ ನಿಲ್ಲಲಿಲ್ಲ. ಪೂಜಾರಿ ಕೈಗಂಟೆ ಅದುರುವಂತೆ ತಮಟೆ ಸದ್ದು ಮಾಡುತ್ತಲೇ ಇತ್ತು. ಧರ್ಮ ಜೋರಾಗಿ ಹಾಕ್ರಲೇ ಬಡ್ಡೆತ್ತವಕ್ಕೆ ಎಂದಾಗ ತಮಟೆ ಸದ್ದು ನಿಂತಿತು. ಅಷ್ಟೊತ್ತಿಗೆ ಪೂಜೆಯೂ ಮುಗಿದು ಪೂಜಾರಿ ‘ಅಂಬೇಡ್ಕರಾಯ ನಮಃ’ ಎಂದದ್ದು ಮಾತ್ರ ಸ್ಪಷ್ಟವಾಗಿ ಕೇಳಿಸಿತ್ತು. ಆರತಿ ಹಿಡಿದು ಹೊರಬಂದ ಪೂಜಾರಿ ತಟ್ಟೆಗೆ ಧರ್ಮನ ಜೇಬಿನಿಂದ ಸಾವಿರ ರೂಪಾಯಿ ನೋಟು ಬಿತ್ತು. ಅವನ ಹಣೆಗೆ ಕುಂಕುಮವಿಟ್ಟು, ಕಿವಿಗೆ ಹೂವನ್ನಿಟ್ಟು, ತಲೆಯ ಮೇಲೆ ಗಂಟೆಯನಿಟ್ಟು ಮುಂದೆ ನಡೆದ ಪೂಜಾರಿಗೆ ಭರ್ಜರಿ ಕಲೆಕ್ಷನ್ನಾಯಿತು. ಟ್ರ್ಯಾಕ್ಟರನ್ನೂ ಬೆಳಗಿದ ಆರತಿ ಕನ್ನಡಕವಿಲ್ಲದೆ ತೋರು ಬೆರಳನ್ನು ಮೇಲೆತ್ತಿ ನಿಂತಿದ್ದ ಅಂಬೇಡ್ಕರರನ್ನೂ ಬೆಳಗಿತು. ಮಂತ್ರ ಘೋಷಗಳ ನಡುವೆ ಗಣೇಶನ ಪಾದದ ಬಳಿಯಲ್ಲಿ ಪೂಜೆಗೊಳಗಾಗಿದ್ದ ಚಿನ್ನದ ಕನ್ನಡಕವನ್ನು ಪೂಜಾರಿ ಅಂಬೇಡ್ಕರರಿಗೆ ತೊಡಿಸಿದ. ಚಪ್ಪಾಳೆ ತಟ್ಟಿದರು. ತಮಟೆ ಸದ್ದು ಮೊಳಗಿತು. ‘ವಿಘ್ನ ವಿನಾಯಕನಿಗೆ.. ಜೈ, ಡಾಕ್ಟರ್ ಬಿ. ಆರ್. ಅಂಬೆಡ್ಕರ್‍ರವರಿಗೆ.. ಜೈ, ದೀನಬಂಧು ಧರ್ಮಣ್ಣನಿಗೇ.. ಜೈ’ ಎನ್ನುವ ಉದ್ಘೋಷಗಳು ತೇಲಿದವು.

‘ಅಣ್ಣಾ.. ಮೆರವಣಿಗೆ ಸ್ಟಾರ್ಟ್ ಮಾಡಕ್ಕೇಳಣ್ಣ’ ಅಲ್ಲೊಬ್ಬ ಅಂದ.
‘ತಡಿರೋ ರೇವಣ್ಣಗೌಡ್ರು ಬಂದ್ಬುಡ್ಲಿ’ ಎಂದ ಧರ್ಮ.
buddhaಅಂದು ಧರ್ಮ ಟಾಪ್ ಟು ಬಾಟಮ್ ಬಿಳಿ ಬಟ್ಟೆಯಿಂದ ಭರ್ಜರಿಯಾಗಿಯೇ ಕಾಣುತ್ತಿದ್ದ. ಹಣೆಯ ಮೇಲೆ ಅಡ್ಡವಾದ ಕೆಂಪು ಕುಂಕುಮ. ಎರಡು ಕಿವಿಗಳ ಕೆಳಗೆ ಬಿಳಿ ವಿಭೂತಿ, ಕೊರಳಲ್ಲಿ ಆಂಜನೇಯನ ಮೂರ್ತಿ ಹೊಂದಿದ್ದ ಚಿನ್ನದ ಸರ. ಎಡಗೈಗೆ ವಾಚು, ಬಲಗೈಲಿ ಕೆಂಪು ಅರಿಶಿನ ಬಣ್ಣದ ತರಹೇವಾರಿ ದಾರಗಳು ಮತ್ತು ಪಂಚಲೋಹದ ಕಡಗ. ಇದ್ದ ಹತ್ತು ಕೈ ಬೆರಳುಗಳಲ್ಲಿ ಏಳಕ್ಕೆ ಹಸಿರು, ಕೆಂಪು, ನೀಲಿ, ಬಿಳಿ, ಕಪ್ಪು, ನೇರಳೆ, ಹಳದಿ ಹರಳುಳ್ಳ ಉಂಗುರಗಳು, ಮತ್ತೊಂದಕ್ಕೆ ಗಣೇಶನದ್ದು ಹಾಗೂ ಅರಿಶಿನ ಮೆತ್ತಿದ ಅಕ್ಕಿ ಕಾಳುಗಳನ್ನು ಹಿಡಿದಿಟ್ಟಿರುವ ಗುಂಗುರು ತಲೆಗೂದಲು. ಇವಿಷ್ಟು ಧರ್ಮನ ಐಡೆಂಟಿಟಿ. ಇವೆಲ್ಲವನ್ನೂ ಹುಟ್ಟಿದಾಗಿನಿಂದೇನು ಕಲಿತಿರಲಿಲ್ಲ. ಇದು ಅವರ ಮನೆಯ ಸಂಪ್ರದಾಯವೂ ಅಲ್ಲ. ರೇವಣ್ಣ ಗೌಡನ ಸಹವಾಸ ಹೀಗೆ ಅವನನ್ನು ಮಾಡಿತ್ತು.
ಧರ್ಮ ಅಂಬೇಡ್ಕರ್ ಕಾಲೋನಿ ವಾರ್ಡ್‍ನ ಕಾರ್ಪೊರೇಟರ್. ಮೀಸಲಾತಿ ವಾರ್ಡಾಗಿದ್ದರಿಂದ ರೇವಣ್ಣಗೌಡರ ಬಲದೊಂದಿಗೆ ತನ್ನದನ್ನೂ ಸೇರಿಸಿಕೊಂಡು ಗದ್ದುಗೆ ಏರಿದ್ದ. ಪಿಯುಸಿ ಫೇಲಾದ ಮೇಲೆ ಮಾಡಲು ಕೆಲಸವಿಲ್ಲದಿದ್ದಾಗ ರೇವಣ್ಣಗೌಡರೇ ತನ್ನೊಂದಿಗೆ ಹಾಕಿಕೊಂಡು ಸುತ್ತುತ್ತಿದ್ದರು. ತಾನು ಬೆಳೆಸಿದ ಹುಡುಗ ತನ್ನ ಜೊತೆಯೇ ಹತ್ತಾರು ವರ್ಷಗಳಿಂದ ಇದ್ದವನು ಎಂಬ ಕಾರಣಕ್ಕೆ ತನ್ನಂತೆ ಕಾರ್ಪೋರೇಟರ್ ಆಗಲು ಸಹಕರಿಸಿದ್ದರು. ಧರ್ಮನೂ ಅಷ್ಟೆ ಪ್ರತಿ ಕೆಲಸವನ್ನೂ ಚಾಚೂ ತಪ್ಪದೆ ರೇವಣ್ಣಗೌಡರಿಗೆ ತಿಳಿಸಿಯೇ ಮುಂದುವರೆಯುತ್ತಿದ್ದ. ಗೌಡರ ಕೃಪೆಯಿಂದ ಎರಡೇ ವರ್ಷದಲ್ಲಿ ಮನೆಯೂ ಮಾಡಿಕೊಂಡಿದ್ದ. ಜೊತೆಗೆ ಅಂಬೇಡ್ಕರ್ ಕಾಲೋನಿಯ ಯುವಕರ ಸಪೋರ್ಟ್ ಕೂಡ ಆತನನ್ನು ಈ ಎತ್ತರಕ್ಕೆ ಬೆಳೆಸಿತ್ತು. ಅದಕ್ಕಾಗಿ ಅವರಿಗೆ ಆಗಾಗ ಪಾರ್ಟಿಗಳು ನೆರವೇರುತ್ತಿದ್ದವು.

ರೇವಣ್ಣಗೌಡನ ಕಾರು ದೇವಸ್ತಾನದ ಬಳಿ ಬಂದೊಡನೆ ಜನಸ್ತೋಮ ತನ್ನ ಉದ್ಘೋಷಕ್ಕೆ ‘ಬಡವರ ಬಂಧು ರೇವಣ್ಣ ಗೌಡರಿಗೇ.. ಜೈ’ ಎಂಬುದನ್ನೂ ಸೇರಿಸಿಕೊಂಡಿತು. ರೇವಣ್ಣಗೌಡ ಬಂದವನೇ ಧರ್ಮನ ಕಿವಿಯಲ್ಲಿ ‘ಅಂಬೇಡ್ಕರ್ ಜಯಂತಿ ದಿನ ಅದೂ ಇದೇ ರಸ್ತೇಲಿ ಆ ಸಾಬಿ ಮಾಂಸ ಮಾರ್ತಾವ್ನಲ್ಲೋ. ಫಸ್ಟು ಆ ಅಂಗಡೀನ ಮುಚ್ಸು’ ಎಂದು ಪಿಸುಗುಟ್ಟಿದ. ಧರ್ಮ ಕೆಂಡಾಮಂಡಲವಾದವನೇ ತನ್ನ ಸಹಚರನ ಬೈಕಿನಲ್ಲಿ ಕುಳಿತು ಮಾಂಸದ ಅಂಗಡಿ ಹತ್ತಿರ ಬಂದ.
‘ಲೋ ಶಫಿ. ಇವತ್ತು ಅಂಬೇಡ್ಕರ್ ಜಯಂತಿ ಅಂತ ಗೊತ್ತಿಲ್ವೆನ್ಲಾ? ಅಂಗಡಿ ತಕ್ಕಂಡು ಕುಂತಿದ್ದಿ. ಮುಚ್ಲಾ ಅಂಗಡೀನ’ ಎಂದ.
‘ಅಣ್ಣಾ.. ಗೌರ್ಮೆಂಟು ಮಾಂಸ ಮಾರಾಟ ಮಾಡ್ಬೇಡಿ ಅಂತ ಹೇಳಿಲ್ವಲ್ಲ. ಅದುಕ್ಕೆ ತೆಗ್ದೆ ಅಣ್ಣ’ ಉತ್ತರಿಸಿದ ಶಫಿ.

‘ಇಲ್ಲಿ ನಾನೇ ಸರ್ಕಾರ. ಗಾಂಧಿ ಜಯಂತಿಗೆ ಅಂಗಡಿ ಬಂದ್ ಮಾಡಿದಂಗೆ ಇನ್ಮೇಲೆ ಇದುಕ್ಕೂ ಬಂದ್ ಅಷ್ಟೆ. ಹಾಕ್ಲಾ ಬಾಗ್ಲಾ’ ಎಂದು ಗದÀರಿದ.
‘ಆಯ್ತು ಬುಡಣ್ಣ. ಉಸ್ತವ ಮುಗುದ ಮ್ಯಾಲೆ ತಗಿತೀನಿ ಆಯ್ತಾ’
‘ಇವತ್ತೆಲ್ಲ ತೆಗಿಯಂಗೇ ಇಲ್ಲ ಕಣಲೇ. ಅಂತಾ ನಮ್ಮ ಚನ್ನಣ್ಣನೇ ಚಪ್ಪಲಿ ಅಂಗಡಿ ಮುಚ್ಚಿಲ್ವಾ? ಬಾಗ್ಲಾಕಂಡು ಮೆರವಣಿಗೆಗೆ ಬಾ. ಅಂಬೇಡ್ಕರ್ ಬರ್ದಿರೋ ಸಂವಿಧಾನದಿಂದ ಕಣಲೇ ನಾನು ನೀನು ಜೀವ್ನ ಮಾಡ್ತಿರದು ಇಲ್ಲಿ. ಹಾಕು ಬಾಗ್ಲು ಮಗನೇ’
‘ಆಯ್ತು ಬುಡಣ್ಣಾ’ ಎಂದ ಶಫಿ. ಬೈಕು ಹತ್ತುತ್ತಿದ್ದ ಧರ್ಮನನ್ನು ಅಮಾಯಕತೆಯಿಂದ ‘ಅಣ್ಣಾ ಅಂಬೇಡ್ಕರ್ ಬಾಡು ತಿಂತಿತಿಲ್ವಾ’ ಎಂದು ಪ್ರಶ್ನಿಸಿದ. ತಬ್ಬಿಬ್ಬಾದ ಧರ್ಮ ಮೆರವಣಿಗೆಗೆ ಬಾ ಹೇಳ್ತೀನಿ ಎಂದು ಹೊರಟ.

ಧರ್ಮ ಪಲ್ಲಕ್ಕಿಯ ಬಳಿ ಬರುತ್ತಿದ್ದಂತೆಯೇ ರೇವಣ್ಣಗೌಡ ‘ಆ ನನ್ಮಗಂಗೆ ಸರ್ಯಾಗಿ ಹೇಳಿ ಬಂದ್ಯಾ?’ ಎಂದ. ಅದಕ್ಕೆ ಕಣ್ಣು ಹೊಡೆದು ತಲೆಯಾಡಿಸಿದ ಧರ್ಮ ‘ರೇವಣ್ಣ ಗೌಡರಿಗೇ’ ಎಂದಾಗ ‘ಜೈ’ ಎಂದಿತು ಗುಂಪು. ಮತ್ತೆ ಘೋಷಣೆಗಳು ಮೊಳಗಿದವು. ಟ್ರ್ಯಾಕ್ಟರ್ ತನ್ನ ಸದ್ದು ಮಾಡಿ ಆರಂಭವಾಯಿತು. ಮುಂಬಾಗದಿಂದ ಹೊಗೆ ಬುಸುಬುಸನೇ ಮೇಲೇರಿತು. ರೇವಣ್ಣಗೌಡ ಜೋಶಿನಲ್ಲಿ ತಾನೇ ಟ್ರ್ಯಾಕ್ಟರ್ ಓಡಿಸಲು ಮುಂದಾದ. ಮತ್ತೆ ಗುಂಪು ಅವನಿಗೆ ಜೈಕಾರ ಹಾಕಿತು. ಅವನನ್ನು ಮೇಲೆತ್ತಿ ಕುಣಿದಾಡಿತು. ಗದ್ದಲದಲ್ಲಿ ಅವನ ಚಪ್ಪಲಿಯೂ ಹರಿಯಿತು. ಅದನ್ನು ಹೊಲೆದು ಕೊಡಲು ಕೈಯಲ್ಲಿ ಹೂಮಾಲೆ ಹಿಡಿದು ನಿಂತಿದ್ದ ಚನ್ನಣ್ಣನಿಗೆ ಗುಂಪಿನಲ್ಲೊಬ್ಬ ಒಪ್ಪಿಸಿದ. ‘ಇವತ್ತು ಅಂಬೇಡ್ಕರ್ ಉಸ್ತವ ಅಂತ ಅಂಗಡಿ ಬಾಗ್ಲಾಕಿಲ್ವ’ ಎಂದ ಚನ್ನಣ್ಣನಿಗೆ ‘ಇದು ರೇವಣ್ಣಗೌಡರ ಚಪ್ಪಲಿ’ ಎಂಬ ಉತ್ತರ ಸಿಕ್ಕಿದೊಡನೇ ಚಪ್ಪಲಿಯನ್ನು ಒಂದು ಕೈಯಲ್ಲಿ ಹಿಡಿದು ಅಂಗಡಿಯ ಬಳಿ ಓಡಿದ.

abnಚನ್ನಣ್ಣ ಅಂಬೇಡ್ಕರ್ ರಸ್ತೆಯಲ್ಲಿ ಪುಟ್ಟದೊಂದು ಚಪ್ಪಲಿ ಹೊಲೆಯುವ ಅಂಗಡಿ ಹಾಕಿಕೊಂಡಿದ್ದ. ಸರ್ಕಾರ ಅದಕ್ಕೆ ಅವನಿಗೆ ದುಡ್ಡು ಕೊಟ್ಟಿತ್ತು. ಆ ಪೆಟ್ಟಿಗೆ ಹೊರಗೆ ಮೈತುಂಬಾ ಅಂಬೇಡ್ಕರರನ್ನು ಹೊತ್ತುಕೊಂಡು ನಗುತ್ತಿತ್ತು. ಒಳಗೆಲ್ಲಾ ಹಳೆಯ ಹರಿದ ಚಪ್ಪಲಿಗಳು ಹೊಲೆಸಿಕೊಂಡು ಪಾಲಿಶ್ ಮಾಡಿಸಿಕೊಂಡು ನಗುತ್ತಿದ್ದವು. ಚನ್ನಣ್ಣನಿಗೆ ರೇವಣ್ಣಗೌಡನ ಪರಿಚಯ ತೀರ ಹಳೆಯದು. ಅವರಪ್ಪನೊಂದಿಗೆ ಚಪ್ಪಲಿಯನ್ನು ಕೊಡುಕೊಳ್ಳುವ ಸಂಬಂಧವನ್ನು ಇಟ್ಟುಕೊಂಡುಬಂದಿದ್ದ. ತಲತಲಾಂತರದಿಂದ ಮಾಡಿಕೊಂಡು ಬಂದಿದ್ದ ಕಾಯಕದಿಂದಾಗಿ ‘ಅಂಬೇಡ್ಕರ್ ಬೀದಿಯ ಚನ್ನಣ್ಣ’ ಎಂದೇ ಪರಿಚಿತವಾಗಿದ್ದ. ಇಂತಹ ಚನ್ನಣ್ಣನಿಗೆ ಅಂದು ರಾತ್ರಿ ಮನೆಯ ಬಳಿಯೇ ರೇವಣ್ಣಗೌಡನ ಮಗಳು ಹುಡುಕಿಕೊಂಡು ಬಂದಿದ್ದಳು. ಅವಳ ಅಂದವಾದ ಚಪ್ಪಲಿಯೊಂದು ಹರಿದುಹೋಗಿತ್ತು. ಬೆಳಿಗ್ಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದು ಈ ಚಪ್ಪಲಿಯನ್ನೇ ಹಾಕಿಕೊಂಡು ಹೋಗಬೇಕು, ಇದೇ ನಾಳೆ ಹಾಕಿಕೊಳ್ಳುವ ಬಟ್ಟೆಗೆ ಮ್ಯಾಚ್ ಆಗುವುದು ಎಂದು ಕೇಳಿಕೊಂಡಿದ್ದಕ್ಕೆ ಚನ್ನಣ್ಣ ಆಕೆಯನ್ನು ಒಂದು ಕ್ಷಣವೂ ತನ್ನ ಮನೆಯ ಮುಂದೆ ನಿಲ್ಲಿಸಿಕೊಳ್ಳದಂತೆ ಬೆಳಿಗ್ಗೆಯೇ ನಿಮ್ಮ ಮನೆಗೆ ಚಪ್ಪಲಿ ತಲುಪಿಸುತ್ತೀನಿ ಎಂದು ಹೇಳಿ ಕಳುಹಿಸಿದ್ದ. ರಾತ್ರೋ ರಾತ್ರಿ ಅಂಗಡಿ ಬಾಗಿಲು ತೆಗೆದು ಆ ಐಷಾರಾಮಿ ಚಪ್ಪಲಿಗೆ ಮೆರಗು ನೀಡಿದ್ದ.

ಆ ಚಪ್ಪಲಿಯನ್ನು ಗೌಡರ ಮನೆಗೆ ತಲುಪಿಸುವ ತನಕ ಅವನಿಗೆ ಸಮಾಧಾನವಿರಲಿಲ್ಲ. ಬೆಳಿಗ್ಗೆ ಸೂರ್ಯ ಕಣ್ಬಿಡುತ್ತಿದ್ದಂತೆ ಚಪ್ಪಲಿಗಳನ್ನು ತನ್ನ ಟವೆಲ್ಲಿನಲ್ಲಿ ಸುತ್ತಿಕೊಂಡು ರೇವಣ್ಣಗೌಡನ ಮನೆಯ ಬಳಿ ತೆರಳಿದ. ಸೆಕ್ಯುರಿಟಿ ಚಪ್ಪಲಿ ಕೊಟ್ಟುಹೋಗಲು ಹೇಳಿದನಾದರೂ ಇನ್ನೇನಾದರೂ ಸರಿ ಮಾಡುವುದಿರಬೇಕೆಂದು ಅವನನ್ನು ಕಾಂಪೌಂಡ್ ಒಳಗೆ ಬಿಟ್ಟುಕೊಂಡು ಗೌಡನ ಮಗಳನ್ನು ಕರೆಯಲು ಒಳ ಹೋಗಿದ್ದ. ಅರಮನೆಯಂತಹ ಮನೆಯನ್ನೊಮ್ಮೆ ಹೊರಗಡೆಯೇ ಕಣ್ತುಂಬ ತುಂಬಿಕೊಂಡು ನೋಡಿಕೊಂಡು ಅದರ ಅಂದಾಜು ಬೆಲೆಯನ್ನು ತನ್ನ ಮಟ್ಟಕ್ಕೆ ಲೆಕ್ಕ ಹಾಕುತ್ತಾ ಮನೆಯ ಬಳಿ ಬಂದು ಅಂಗಳದ ದೊಡ್ಡ ಕಂಬದ ಬುಡದಲ್ಲಿ ಕುಕ್ಕರಗಾಲಿನಲ್ಲಿ ಕುಳಿತ. ರೇವಣ್ಣಗೌಡ ಅದ್ಯಾರೊಂದಿಗೋ ಫೋನಿನಲ್ಲಿ ಮಾತಾಡಿಕೊಂಡು ಹೊರಬಂದು ಚನ್ನನ ಮುಖವನ್ನೊಮ್ಮೆ ನೋಡಿ ‘ಬೇವರ್ಸಿ ನನ್ನ ಮಗನೇ ಬೆಳ್ಳಂ ಬೆಳಿಗ್ಗೆ ನಿನ್ನ ಮುಖ ತೋರ್ಸಿದ್ಯಲ್ಲೋ. ಯಾವನೋ ನಿನ್ನ ಒಳಗೆ ಬಿಟ್ಟ ಬೋಳಿಮಗ’ ಎಂದು ಅರಚಾಡಲು ಶುರುವಿಟ್ಟ. ಓಡಿಬಂದ ಸೆಕ್ಯುರಿಟಿಯ ಕೆನ್ನೆ ಕೆಂಪಾಗಿಸಿ ‘ಈ ಅನಿಷ್ಟ ಮುಂಡೇ ಮಕ್ಕಳು ಮನೆಗೆ ಬರೋ ಹೊತ್ತೇನೋ ಇದು. ಇಷ್ಟೊತ್ತಲ್ಲಿ ಒಳಗ್ಯಾಕ್ ಬಿಟ್ಟೆ ಬೋಳಿಮಗನೇ’ ಕೆಂಡಕಾರುತ್ತಿದ್ದ ರೇವಣ್ಣಗೌಡನ ಮುಂದೆ ನಡುಗುತ್ತಾ ನಿಂತಿದ್ದ ಚನ್ನಣ್ಣ ಕೈಯಲ್ಲಿದ್ದ ಟವೆಲ್ಲನ್ನು ಬಿಚ್ಚಿ ಚಪ್ಪಲಿಗಳನ್ನು ತೋರಿಸುತ್ತಿದ್ದಂತೆ ‘ಅಯ್ಯೋ ಸೂಳೆ ಮಗನೇ ನಿನ್ನ ಮುಖ ತೋರ್ಸಿದಲ್ದೆ ಆ ಅನಿಷ್ಟ ಚಪ್ಪಲಿ ತೋರಿಸ್ತೀಯ’ ಎಂದು ಎಗರಿ ಬರುತ್ತಿದ್ದಂತೆ ಮಗಳು ಅಡ್ಡ ಬಂದು ‘ಅವು ನಂದೇ ಸ್ಲಿಪ್ಪರ್ ಡ್ಯಾಡಿ. ಯಾಕೆ ಏನಾಯ್ತು’ ಎಂದಳು. ಚನ್ನಣ್ಣ ಒಂದೂ ಮಾತಾಡದೇ ಟವೆಲ್ಲಿನ ಸಮೇತ ಚಪ್ಪಲಿಗಳನ್ನು ಅಲ್ಲೇ ಬಿಟ್ಟು ಬಂದಿದ್ದನು. ಮಗಳ ಮುಖವನ್ನೊಮ್ಮೆ ದುರುಗುಟ್ಟಿ ನೋಡಿ ರೇವಣ್ಣಗೌಡ ಒಳನಡೆದಿದ್ದನು.

ಜೇಬಿನಲ್ಲಿದ್ದ ಕೀಲಿಕೈ ಅಂಗಡಿಯ ಬಾಗಿಲು ತೆರೆಯಿತು. ಚನ್ನಣ್ಣ ತೊಟ್ಟಿದ್ದ ಬಿಳಿ ಅಂಗಿ, ಪಂಚೆ ಗೂಟಕ್ಕೆ ನೇತು ಬಿದ್ದವು. ಮಿಣಿಯೊಡನೆ ದಾರವೂ ಸೇರಿ ರೇವಣ್ಣಗೌಡನ ಚಪ್ಪಲಿಗಳನ್ನು ನೆಟ್ಟಗೆ ಮಾಡಲು ಇಳಿಯಿತು. ಕಿಂಚಿತ್ತು ಕಾಣದಂತೆ ದಾರವನ್ನು ಮಿಣಿ ಚಪ್ಪಲಿಯೊಳಗೆ ಸೇರಿಸುತ್ತಿತ್ತು. ಚನ್ನಣ್ಣನ ಗಮನ ಬೇರೆಲ್ಲೋ ಹರಿದಾಡುತ್ತಿತ್ತು. ತಿಮ್ಮಣ್ಣ ಅಂಗಡಿಯ ಮುಂದೆ ಬಂದು ಕಣ್ಣೀರಿಡುತ್ತಾ ಅದನ್ನು ಒರೆಸಿಕೊಳ್ಳುತ್ತಿರುವುದೂ ತಿಳಿಯದೆ ಚನ್ನಣ್ಣ ಚಿಂತಾಮಗ್ನನಾಗಿಹೋಗಿದ್ದ. ಉಮ್ಮಳಿಸಿ ಬರುತ್ತಿದ್ದ ಅಳುವನ್ನು ತಡೆಯಲೆತ್ನಿಸುತ್ತಿದ್ದ ತಿಮ್ಮಣ್ಣನ ಬಿಕ್ಕಳಿಕೆ ಚನ್ನಣ್ಣನನ್ನು ಬಡಿದೆಬ್ಬಿಸಿತು. ‘ಅಸಿಸಿ ಅದೆಷ್ಟು ದಿನಾಂತ ನೆನಸ್ಕಂಡು ಸಾಯ್ತಿ ತಿಮ್ಮ. ಆಗಿದ್ದು ಆಗೋಯ್ತು. ಕಾಲೋನಿ ಜನವೆಲ್ಲಾ ಖುಷಿಯಾಗಿರ್ವಾಗ ನಿಂದೆಂತ್ತಾದು ಕಣ್ಣೀರು. ಸುಮ್ಕಿರು’ ಎಂದ ಚನ್ನಣ್ಣ. ‘ಹೆಂಗೆ ಸುಮ್ಕಿರ್ಲಪ್ಪ. ಇದೇ ದಿನ ಅಲ್ವ ನಿನ್ನತ್ತಿಗೆ ಸುಟ್ಟೋಗಿದ್ದು’ ಎಂದು ಮತ್ತೆ ಕಣ್ಣೀರಿಟ್ಟ ತಿಮ್ಮಣ್ಣ. ದಾರವನ್ನು ರಂಪಿಯಿಂದ ಕತ್ತರಿಸಿ ಹಾಕಿ ಚಪ್ಪಲಿಯ ಸಂದು ಗುಂದುಗಳನ್ನು ಪರಿಶೀಲಿಸುತ್ತಾ ‘ಇದೇ ದಿನಾದ್ರೆನಂತೆ. ಪ್ರಪಂಚದಲ್ಲಿ ಈ ದಿನ ಯಾರು ಸಾಯಂಗಿಲ್ಲ ಬುಡು ನಿನ್ನ ಮಾತು ಕಟ್ಕಂಡ್ರೆ’ ಎಂದ ಚನ್ನಣ್ಣ. ಕಣ್ಣೊರೆಸಿಕೊಳ್ಳುತ್ತಾ ‘ಪ್ರಪಂಚದಲ್ಲಿ ಈ ದಿನ ಎಲ್ರೂ ಸಾಯ್ತರೆ ಆದ್ರೆ ಈ ಮೆರವಣಿಗೆಯಿಂದಾಗೆ ಸತ್ತಿಲ್ವಲ್ಲಣ್ಣ’ ಅಂದ ತಿಮ್ಮಣ್ಣ. ಅಂಗಡಿಯಿಂದ ಹೊರಬಂದು ತಿಮ್ಮಣ್ಣನ ಹೆಗಲ ಮೇಲೆ ಕೈ ಹಾಕಿ ಸಮಾಧಾನಪಡಿಸುತ್ತಾ ‘ಏನ್ ಮಾಡಕ್ಕಾಯ್ತದೆ. ಅವಳ ಹಣೆ ಬರಹದಲ್ಲಿ ಅದೇ ಬರ್ದಿತ್ತು ಅನುಸ್ತದೆ. ಒಂಟೋದ್ಲು. ಅದುಕ್ಕೆ ಈ ಮೆರವಣಗೇನೆ ಬ್ಯಾಡ ಅನ್ನಕಾಯ್ತದಾ? ಆ ಪುಣ್ಯಾತ್ಮ ಇಲ್ದಿದ್ರೆ ನನಗೆ ಈ ಅಂಗಡಿ, ನಿನಗೆ ಮನೆ, ಮಗನ್ಗೆ ಕೆಲ್ಸ ಕಾಲೋನಿಗೆ ಸೌಕರ್ಯ ಸಿಕ್ತಿತ್ತಾ? ಉಪ್ಪಿಲ್ಲದ ಸಾರಿಲ್ಲ ಸಾವಿಲ್ಲದ ಮನೆಯಿಲ್ಲ. ಸುಮ್ಕಿರು’ ಎಂದ ಚನ್ನಣ್ಣ. ತಿಮ್ಮಣ್ಣನ ಅಳು ಕರಗುತ್ತಾ ಬಂದಿತು. ಎರಡು ಬೀಡಿಗಳಿಗೆ ಬೆಂಕಿ ತಗುಲಿತು.

ಇಲ್ಲಿಗೆ ಮೂರು ವರ್ಷದ ಹಿಂದಿನ ಮಾತು. ಎಲ್ಲವೂ ಹೀಗೇ ಇತ್ತು ಏನೂ ಬದಲಾಗಿರಲಿಲ್ಲ. ಇದೇ ದಿನಾಂಕ, ಇದೇ ರಸ್ತೆ, ಇದೇ ಬಣ್ಣದ ಕಾಗದಗಳು, ಇದೇ ಸಡಗರ, ಇದೇ ಚನ್ನಣ್ಣನ ಮುಚ್ಚಿದ ಅಂಗಡಿ, ಇದೇ ಅಂಬೇಡ್ಕರ್ ಬೆಳ್ಳಿ ಪಲ್ಲಕ್ಕಿ ಉತ್ಸವ, ಆದರೆ ಬ್ಯಾನರುಗಳಲ್ಲಿ ಬದಲಿತ್ತು. ಕೈ ಮುಗಿದು ರೇವಣ್ಣಗೌಡನಿದ್ದ ಅವನ ಕೆಳಗೆ ಧರ್ಮನ ದೊಡ್ಡ ರುಂಡವಿತ್ತು ಅಂಬೇಡ್ಕರರ ಪ್ರತಿಮೆಗೆ ಮಾಮೂಲಿ ಕನ್ನಡಕವಿತ್ತು ಅಷ್ಟೆ. ಗಣೇಶನ ಗುಡಿಯಿಂದ ಮೆರವಣಿಗೆ ಹೊರಟಿತ್ತು. ಬಣ್ಣಗಳನ್ನು ಮೈಮೇಲೆಲ್ಲ ಚೆಲ್ಲಿಕೊಂಡು ಇತರರಿಗೂ ಎರಚಿಕೊಂಡು ಗುಂಪು ತಮಟೆಯ ಸದ್ದಿಗೆ ಕುಣಿಯುತ್ತಾ ರಸ್ತೆಯಲ್ಲಿ ಸಾಗಿತ್ತು. ಅಲ್ಲಲ್ಲಿ ಹೂವಿನ ಹಾರಗಳನ್ನು ಹಿಡಿದುಕೊಂಡು ರಸ್ತೆ ಬದಿಯ ಅಂಗಡಿಯವರು ನಿಂತಿದ್ದರು. ಪಲ್ಲಕ್ಕಿ ಹತ್ತಿರ ಬಂದಾಗ ಆ ಹೂವಿನ ಹಾರವನ್ನು ಅಂಬೇಡ್ಕರರ ಪ್ರತಿಮೆಗೆ ಹಾಕಲು ನೀಡಿ ಕೈ ಮುಗಿಯುತ್ತಿದ್ದರು. ಧರ್ಮನ ಹೆಗಲ ಮೇಲೆ ಕೈ ಹಾಕಿಕೊಂಡು ರೇವಣ್ಣಗೌಡ ಇತರರಿಗೂ ಕೈ ಬೀಸುತ್ತಿದ್ದ. ಮೆರವಣಿಗೆಗೆ ಬರಲು ಕರೆಯುತ್ತಿದ್ದ. ಆಗಾಗ ಗುಂಪಿನ ಮದ್ಯೆ ಹೋಗಿ ಕುಣಿಯುತ್ತಿದ್ದ. ಹೀಗೆ ಉತ್ಸವ ಜೋರಾಗಿಯೇ ನಡೆದು ಅರ್ಧ ದಾರಿಗೆ ಬಂದಿರುವಾಗ ದೂರದಲ್ಲಿ ಅಗ್ನಿಶಾಮಕ ವಾಹನದ ಗಂಟೆ ಸದ್ದು ಕೇಳುತ್ತಿತ್ತು. ಸಂಪೂರ್ಣ ಇಕ್ಕಟ್ಟಾಗಿ ಇರುವೆಯೂ ಹೊಕ್ಕದಂತಾಗಿದ್ದ ರಸ್ತೆಯಲ್ಲಿ ಅಗ್ನಿಶಾಮಕ ವಾಹನ ತೆರಳಬೇಕೆಂದರೆ ಅಂಬೇಡ್ಕರ್ ಪ್ರತಿಮೆಯನ್ನು ಹೊತ್ತಿದ್ದ ಪಲ್ಲಕ್ಕಿ ಉತ್ಸವ ಸ್ವಲ್ಪ ಹೊತ್ತು ಶಾಂತವಾಗಿ ನಿಂತು ಸಹಕರಿಸುವ ಅಗತ್ಯವಿತ್ತು.

ಆದರೇನು ಮಾಡುವುದು ಆ ಗಲುಗು ಗದ್ದಲದಲ್ಲಿ ಅಗ್ನಿ ಶಾಮಕದ ಗಂಟೆಯ ಸದ್ದು ಸೈರನ್ ಸದ್ದು ಅಲ್ಲಿದ್ದವರ ಕಿವಿಗೆ ಬೀಳಲಿಲ್ಲ. ಪೋಲೀಸರು ಬಂದು ರೇವಣ್ಣಗೌಡ ಮತ್ತು ಧರ್ಮನಲ್ಲಿ ವಿನಂತಿಸಿಕೊಂಡರು. ಅವರಿಗೆ ಆ ವಿಷಯ ತಿಳಿಸುವಷ್ಟರಲ್ಲೇ ಸಾಕು ಸಾಕಾಗಿ ಹೋಗಿದ್ದ ಪೋಲೀಸರಿಗೆ ಅತ್ತ ಕಡೆಯಿಂದ ‘ಆ ರೂಟಲ್ಲಿ ಬರಕ್ಕೇಳ್ರಿ ಸಾರ್. ಈಗ ಮೆರವಣಿಗೆ ನಿಲ್ಸಕಾಯ್ತದಾ’ ಎಂಬ ಉತ್ತರ ಬಂದಿತ್ತು. ಅಂಬೇಡ್ಕರ್ ಕಾಲೋನಿಯಲ್ಲಿ ಹತ್ತಿ ಉರಿಯುತ್ತಿದ್ದ ಬೆಂಕಿಯ ಹೊಗೆ ಆಕಾಶದೆತ್ತರಕ್ಕೆ ಚಾಚಿದ್ದರೂ ಒಬ್ಬರ ಕಣ್ಣೂ ಅತ್ತ ಕಡೆ ನಾಟಲಿಲ್ಲ. ಒಂದು ಗಂಟೆಯಲ್ಲಿ ಮೆರವಣಿಗೆ ಮುಗಿದಿತ್ತು. ಕುಣಿದು ಕುಪ್ಪಳಿಸಿದವರು ಕಂಠಪೂರ್ತಿ ನೀರು ಕುಡಿಯುತ್ತಿದ್ದರು. ಕಾಲೋನಿಯಿಂದ ಓಡಿ ಬಂದ ತಿಮ್ಮಣ್ಣ ಧರ್ಮನ ಮುಂದೆ ಕೂತು ಎದೆಬಡಿದುಕೊಂಡು ಅಳಲಾರಂಬಿಸಿದ.

ಸಾವಧಾನದಿಂದ ವಿಚಾರಿಸಲಾಗಿ ಕಾಲೋನಿಯ ತನ್ನ ಮನೆಗೆ ಬೆಂಕಿ ಬಿದ್ದು ಅಗ್ನಿಶಾಮಕದವರು ತಡವಾಗಿ ಬರಲಾಗಿ ಮನೆಯೊಂದಿಗೆ ಅದರಲ್ಲಿ ಕಾಯಿಲೆ ಬಿದ್ದು ಮಲಗಿದ್ದ ತನ್ನ ಹೆಂಡತಿಯೂ ಸುಟ್ಟು ಹೋದ ವಿಷಯ ತಿಳಿಸಿದ. ಧರ್ಮನಿಗೆ ಎಲ್ಲವೂ ಅರ್ಥವಾಗಿ ಹೋಯಿತು. ರೇವಣ್ಣಗೌಡನೊಂದಿಗೆ ಸುಟ್ಟ ಜೀವ ನೋಡಲು ತೆರಳಿದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರೊಂದಿಗೆ ಇವರೂ ಕಣ್ಣೀರಿಟ್ಟರು. ರೇವಣ್ಣಗೌಡ ನಿಂತಲ್ಲೇ ಹತ್ತು ಸಾವಿರದ ಕಟ್ಟು ತೆಗೆದು ತಿಮ್ಮಣ್ಣನಿಗೆ ನೀಡಿದ. ಹಿಂದೆ ಯಾವನೋ ‘ರೇವಣ್ಣಂಗೇ..’ ಎನ್ನುತ್ತಿದ್ದಂತೆ ಅವನ ಬಾಯಿ ಮುಚ್ಚಿಸಲಾಯಿತು. ಸರ್ಕಾರದಿಂದ ಮನೆ ಕಟ್ಟಿಸುವ ಭರವಸೆ ನೀಡಿ ಅಂತ್ಯಕ್ರಿಯೆಗೆ ಅಣಿಯಾಗಿಸಿದ. ಅಂಬೇಡ್ಕರ್ ಉತ್ಸವದಲ್ಲಿ ಅಚಾತುರ್ಯವೊಂದು ನಡೆದುಹೋಗಿದೆ ಎಂಬುದು ಜನಸ್ತೋಮದಲ್ಲಿ ಕಾಲಕ್ರಮೇಣ ವಿಸ್ಮøತಿಗೊಂಡಿತು. ಆದರೆ ಮನದೊಡತಿ ಕಳೆದುಕೊಂಡಿದ್ದ ತಿಮ್ಮಣ್ಣನ ಸ್ಮøತಿಗೆ ಗರಬಡಿದಿರಲಿಲ್ಲ.

ಮೆರವಣಿಗೆ ಭರ್ಜರಿಯಾಗಿಯೇ ನಡೆಯುತ್ತಿತ್ತು. ರೇವಣ್ಣಗೌಡ ಟ್ರ್ಯಾಕ್ಟರನ್ನು ಓಡಿಸುತ್ತಿರುವುದು ಕಾಲೋನಿ ಜನರಲ್ಲಿ ಅವನ ಮೇಲೆ ಭಕ್ತಿಯನ್ನು ಮೂಡಿಸುತಿತ್ತು. ಸಾಲಾಗಿ ರಸ್ತೆ ಬದಿಯಲ್ಲಿ ನಿಂತು ಕೈಯಲ್ಲಿ ಹೂವಿನ ಹಾರವಿಟ್ಟುಕೊಂಡಿದ್ದವರು ಅಂಬೇಡ್ಕರ್ ಕೊರಳಿಗೆ ಭಾರವಾಗಿಸಿ ಟ್ರ್ಯಾಕ್ಟರನ್ನೂ ಹೂವಿನಿಂದಲೇ ಮುಚ್ಚಿದ್ದರು. ಕಪ್ಪು ಅಂಬೇಡ್ಕರರಿಗೆ ತೊಡಿಸಿದ್ದ ಚಿನ್ನದ ಕನ್ನಡಕ ಇಂದಿನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಜನರ ಬಾಯಲ್ಲಿ ಅದರ ಅಂದ ಚೆಂದ ತುಳುಕಾಡುತ್ತಿತ್ತು. ಕಣ್ಣಿನಲ್ಲೇ ಅದರ ತೂಕ ಮಾಡಿ ಬೆಲೆಯನ್ನೂ ಕಟ್ಟಿ ಸೇಟ್‍ಜೀಯನ್ನೇ ಅಣಕಿಸುತ್ತಿದ್ದರು. ಅಲ್ಲಿ ನೆರೆದಿದ್ದವರೆಲ್ಲರ ಬಾಯಲ್ಲೂ ಚಿನ್ನದ ಕನ್ನಡಕದ್ದೇ ಮಾತು.
‘ಅಂಬೇಡ್ಕರ್ ಬದ್ಕಿದ್ದಾಗ ಚಿನ್ನದ ಕನ್ನಡಕ ಹಾಕಿದ್ರೋ ಇಲ್ಲೋ ಈಗಂತು ನಮ್ಮ ಧರ್ಮಣ್ಣನ ದಯೆಯಿಂದ ಹಾಕಂಗಾಗೈತೆ’
‘ಹೌದೌದು ಆ ಕಪ್ಪು ಮೂರ್ತಿಗೆ ಆ ಬಂಗಾರದ ಕನ್ನಡಕ ಅದೆಷ್ಟು ಹೊಂದೈತೆ ಅಂತೀನಿ’
‘ಈ ಸರಿ ಸೇರಿರೋಷ್ಟು ಜನಾನ ನಾನ್ಯಾವತ್ತೂ ನೋಡಿಲ್ಲ. ಎಲ್ಲಾ ಆ ಕನ್ನಡಕದ ಮಹಿಮೆ’
‘ರೇವಣ್ಣಗೌಡ್ರು ಇಲ್ದಿದ್ರೆ ಅಂಬೇಡ್ಕರುಗೆ ಚಿನ್ನದ ಕನ್ನಡಕ ಬತ್ತಿತ್ತಿಲ್ಲ ಬುಡು’
ಮಾತುಗಳು ಹಾರುತ್ತಿದ್ದವು.

ಚನ್ನಣ್ಣನ ಅಂಗಡಿಯ ಬಳಿ ಮೆರವಣಿಗೆ ಬಂದೇ ಬಿಟ್ಟಿತು. ‘ಅಯ್ಯೋ ನಾನೆಂತ ಹಡಕಸ್ಬಿ ನೋಡು. ಗೌಡ್ರುಗೆ ಚಪ್ಲಿ ಕೊಡದೇ ಮರ್ತು ಕುಂತಿವ್ನಿ’ ಮೇಲೆದ್ದು ಚನ್ನಣ್ಣ ತಲೆ ಬಗ್ಗಿಸಿಯೇ ರೇವಣ್ಣ ಗೌಡನ ಕಾಲಿಗೆ ಚಪ್ಪಲಿಯನ್ನು ಸೇರಿಸಿದ. ಅಂಗಡಿಯಲ್ಲಿದ್ದ ಹೂವಿನ ಹಾರವನ್ನು ತಂದು ಅಂಬೇಡ್ಕರ್ ಮೂರ್ತಿಗೆ ನೀಡಿ ಕೈ ಮುಗಿದು ನೋಡುತ್ತಾನೆ ಅಂಬೇಡ್ಕರರ ಕಣ್ಣಿಗೆ ಹಾಕಿದ್ದ ಚಿನ್ನದ ಕನ್ನಡಕವೇ ಕಾಣುತ್ತಿಲ್ಲ! ‘ಅಣ್ಣೋ.. ಚಿನ್ನದ ಕನ್ನಡಕ ಎಲ್ಲಿ?’ ಎಂದು ಕೂಗಿದ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಗದ್ದಲ ಉಂಟಾಯಿತು. ಕನ್ನಡಕ ಕಾಣದಾಗಿ ರೇವಣ್ಣಗೌಡನನ್ನು, ಧರ್ಮನನ್ನೂ ಅಲ್ಲಿ ನೆರೆದಿದ್ದವರೆಲ್ಲರನ್ನೂ ತಬ್ಬಿಬಾಗಿಸಿತು. ತಮಟೆ ಸದ್ದು ನಿಂತಿತು. ಎಲ್ಲ ಎಲ್ಲಿದ್ದರೋ ಅಲ್ಲಲ್ಲೆ ಪಕ್ಕದಲ್ಲಿ ತಡಕಾಡುತ್ತಾ ಓಡಾಡಿದರು. ‘ಅಲ್ಲೇ ಟ್ರ್ಯಾಕ್ಟರಿನಲ್ಲಿ ಬಿದ್ದಿರ್ತದೆ ನೋಡ್ರೊ’ ‘ಹೂವಿನ ಹಾರದಲ್ಲಿ ಸಿಕ್ಕಾಕಂಡಿರ್ತೈತ್ರಪ್ಪ’ ‘ಮೂರ್ತಿ ಅಕ್ಕ ಪಕ್ಕ ಇದ್ದವರ ಜೇಬು ಹುಡುಕ್ರೋ’ ಎತ್ತ ಕಡೆ ನೋಡಿದರೂ ಗಾಬರಿ ಗೊಂದಲ. ಅಂಬೇಡ್ಕರ್ ಪ್ರತಿಮೆಯ ಕೊರಳಿನಲ್ಲಿದ್ದ ಎಲ್ಲಾ ಹಾರವನ್ನೂ ಹರಿದು ತೆಗೆದು ತಡಕಾಡಿದರು. ಪಲ್ಲಕ್ಕಿಯಿಂದ ಅಂಬೇಡ್ಕರರ ಪ್ರತಿಮೆಯನ್ನು ಕೆಳಗಿಳಿಸಲಾಯಿತು.

ಟ್ರ್ಯಾಕ್ಟರಿನಲ್ಲಿದ್ದ ಹೂವಿನ ಹಾರವನ್ನು ಒಂದೊಂದಾಗಿ ಬಿಡಿಸಿ ಒದರಿ ಹೊರಹಾಕಲಾಯಿತು. ಪಲ್ಲಕ್ಕಿಯನ್ನು ಕೆಳಗಿಳಿಸಲಾಯಿತು. ಅದರ ಮೇಲಿದ್ದ ಹೂವೆಲ್ಲವನ್ನು ಹರಿದು ನೋಡಲಾಯಿತು. ಅಂಬೇಡ್ಕರರ ಘೋಷಣೆಗಳ ಬ್ಯಾನರುಗಳನ್ನು ಹರಿದು ತೂರಿ ಚಿನ್ನದ ಕನ್ನಡಕ ಹುಡುಕಲು ಜಾಗ ಮಾಡಿಕೊಂಡಾಯ್ತು. ಹತ್ತಾರು ಕೈಗಳು ಟ್ರ್ಯಾಕ್ಟರಿನಲ್ಲಿ ಹುಡುಕುತ್ತಿದ್ದರೆ ಮಿಕ್ಕವರು ಗಣೇಶನ ಗುಡಿಯಿಂದಲೂ ಹುಡುಕುತ್ತಾ ಬಂದರು. ಚಿನ್ನದ ಕನ್ನಡಕ ತನ್ನ ಮೆಲುಗೈ ಸಾಧಿಸಿ ಅಂಬೇಡ್ಕರರನ್ನು ಪಲ್ಲಕ್ಕಿಯಿಂದ ಕೆಳಗಿಳಿಸಿ ಅನಾಥವಾಗಿಸಿತ್ತು.

ಅಲ್ಲೆ ಕುಳಿತಿದ್ದ ತಿಮ್ಮಣ್ಣನ ದೃಷ್ಟಿ ಅಂಬೇಡ್ಕರ್ ಕಡೆ ಹರಿಯಿತು. ಮೆಲ್ಲನೆ ನಡೆದು ಬಂದವನೇ ಕಣ್ಣಲ್ಲಿ ನೀರು ತುಂಬಿಕೊಂಡ. ಬಿಸಿಲಿನ ತಾಪಕ್ಕೋ ತನ್ನವರ ಸ್ವಾರ್ಥಕ್ಕೋ ಕಾಣೆ ಪ್ರತಿಮೆ ಸುಡುತ್ತಿತ್ತು. ‘ಇಂತ ಪಾಪಿಗೊಳ್ಗ ತಂದೆ ಅಷ್ಟೆಲ್ಲಾ ಮಾಡ್ದೆ’ ಎಂದು ಅಂಬೇಡ್ಕರರನ್ನು ಒಮ್ಮೆ ಸವರಿದ. ಅಂಬೇಡ್ಕರ್ ಮತ್ತಷ್ಟು ಸುಡುತ್ತಿದ್ದರು. ಸೂರ್ಯನ ತಾಪಕ್ಕೆ ಕಣ್ಣು ಮಿಂಚುತ್ತಿದ್ದವು. ಕೈ ಮುಟ್ಟಿದ, ಕಾಲು ಮುಟ್ಟಿದ ಮುತ್ತಿಕ್ಕಿದ ಸಮಾಧಾನವೇ ಆಗುತ್ತಿಲ್ಲ. ಗಣೇಶನನ್ನು ಮುಟ್ಟುವುದಿರಲಿ ಒಳಗೇ ಪ್ರವೇಶವಿಲ್ಲ. ಹಾಗೆಯೇ ಅಂಬೇಡ್ಕರರ ಪ್ರತಿಮೆಯನ್ನು ಎತ್ತರದಲ್ಲಿರಿಸಿ ಬಡವರು ಹತ್ತಿ ಮುಟ್ಟದಂತೆ ಮಾಡಿಟ್ಟಿದ್ದರು. ದೊಡ್ಡೋರಿಗಷ್ಟೇ ಹೂವಿನ ಹಾರವಾಕುವ ಅವಕಾಶ. ಇವತ್ತು ಹಾಗಾಗಿಲ್ಲ. ಯಾರು ಬೇಕಾದರೂ ಮುಟ್ಟಬಹುದಿತ್ತು.

ಚನ್ನಣ್ಣನೂ ಜೊತೆಗೂಡಿ ಅಂಬೇಡ್ಕರ್ ಪ್ರತಿಮೆಯನ್ನು ಇಬ್ಬರೂ ಎತ್ತಿಕೊಂಡಾಗ ಹಲವರು ಓಡಿಬಂದು ಹಿಡಿದು ಚನ್ನಣ್ಣನ ಅಂಗಡಿಯ ಪಕ್ಕದಲ್ಲಿದ್ದ ಅರಳಿ ಮರದಡಿ ನಿಲ್ಲಿಸಿದರು. ಶಫಿ, ಸೂರಿ, ಹನುಮಂತ, ಹನುಮಕ್ಕ ಎಲ್ಲರೂ ಪ್ರತಿಮೆಯ ಸುತ್ತಾ ನೆರೆದರು. ಅಂಬೇಡ್ಕರರನ್ನು ಒಮ್ಮೆ ಮುಟ್ಟಿ ಕಣ್ಣಿಗೊತ್ತಿಕೊಂಡರು. ತಬ್ಬಿದರು ಮುದ್ದಾಡಿದರು. ಸೆರಗು, ಟವೆಲ್ಲುಗಳಲ್ಲಿ ಒರೆಸಿದರು. ಅಂಬೇಡ್ಕರರನ್ನೇ ಕಣ್ತುಂಬಿಕೊಂಡರು. ಮಕ್ಕಳು ತಾತನ ಸುತ್ತಾ ಸುತ್ತುತ್ತ ಸಂತೋಷಗೊಂಡರು. ತಿಮ್ಮಣ್ಣ ಮತ್ತೆ ಅಂಬೇಡ್ಕರರನ್ನು ಮುಟ್ಟಿದ ಪ್ರತಿಮೆ ತಣ್ಣಗಾಗಿತ್ತು. ಇದನ್ನೇ ಟ್ರ್ಯಾಕ್ಟರಿನಲ್ಲಿ ಕುಳಿತು ನೋಡುತ್ತಿದ್ದ ರೇವಣ್ಣಗೌಡ ಹುಸಿನಗೆಯಿಂದ ‘ಲೋ.. ಚನ್ನ ಇದೇ ನೋಡು ನಿಮ್ಮ ದ್ಯಾವುರ್ಗೆ ಸರಿಯಾದ ಜಾಗ’ ಎಂದು ಚಪ್ಪಲಿ ಅಂಗಡಿಯನ್ನೊಮ್ಮೆ ನೋಡಿದ.

‘ನಿಜ ಕಣಣ್ಣ. ಅಂಬೇಡ್ಕರ್ ನಮಗೂ ಸರಿಯಾದ ದಾರಿನೇ ತೋರ್ಸವ್ರೆ, ಅವ್ರೂ ಅರಳಿ ಮರದ ಕೆಳಗೇ ನಿಂತವ್ರೆ’ ಎಂದ ತಿಮ್ಮಣ್ಣನ ಮಗ ನವೀನ. ಅದಕ್ಕೆ ತಕ್ಕಂತೆ ಅಂಬೇಡ್ಕರರ ತೋರು ಬೆರಳು ಚಪ್ಪಲಿ ಅಂಗಡಿಯ ಮೇಲೆ ಹಾರಾಡುತ್ತಿದ್ದ ಕುಡುಗೋಲು-ಕಸಪೊರಕೆ ಬೆಸೆದ ಬಾವುಟ ತೋರಿಸುತ್ತಿತ್ತು. ಅದರ ಕೆಳಗೆ ‘ನಿನಗೆ ಎಲ್ಲಿ ಗೌರವವಿಲ್ಲವೋ ಅಲ್ಲಿ ನಿನ್ನ ಚಪ್ಪಲಿಗಳನ್ನೂ ಸಹ ಬಿಡಬೇಡ’ ಎಂದೂ ಬರೆದಿತ್ತು. ರೇವಣ್ಣಗೌಡ ನವೀನನ ಮೇಲೆ ಕಣ್ಣಿಟ್ಟ. ನವೀನ ಚಪ್ಪಲಿ ಅಂಗಡಿಯಲ್ಲಿದ್ದ ರಂಪಿಯನ್ನು ಹೊರತಂದು ಕಲ್ಲಿನ ಮೇಲೆ ಮಸೆಯುತ್ತಾ ಕುಂತ. ಇದ್ದಕ್ಕಿದ್ದಂತೆ ಯಾವನೋ ಉತ್ಸವದ ಕಹಳೆ ಊದಿದ. ರೇವಣ್ಣಗೌಡನಿಗೆ ಪಕ್ಕದಲ್ಲಿ ಆನೆಯೇ ಘೀಳಿಟ್ಟಂತಾಗಿ ಬೆಚ್ಚಿಬಿದ್ದು, ಟ್ರ್ಯಾಕ್ಟರಿನಿಂದ ಕೆಳಗಿಳಿದು ನಡುಗಲಾರಂಭಿಸಿದ.

Leave a Reply

Your email address will not be published.