ಚಲ ಬಲ ಇರುವವರಿಗೆ ಮಾತ್ರ ಮ್ಯಾರಥಾನ್ 

ಬಾಲಾಜಿ ಕೆ.

mar-leadersಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು, ಓ ನನ್ನ ಚೇತನ ಆಗು ನೀ ಅನಿಕೇತನ- ಈ ವಚನಗಳು ಮ್ಯಾರಥಾನ್ ರಾಷ್ಟ್ರಗೀತೆಗಳು. ಇದೊಂದು ಓಡುವ ಆಟ. ಆರೋಗ್ಯಪಾಠ. ನೂರಕ್ಕೆ ನೂರು ನಮ್ಮ ದೇಹ ಕ್ರಿಯಾಶೀಲವಾಗಿರಬೇಕು ಎಂದರೆ ಇರುವ ಒಂದೇ ಒಂದು ಮಾರ್ಗ ವ್ಯಾಯಾಮ. ಅರ್ಥಾತ್ ಓಟ. ಮ್ಯಾರಥಾನ್ ಆಟದ ಹುಟ್ಟು, ಬೆಳವಣಿಗೆ, ಕ್ರಮಾಗತ ಇತಿಹಾಸದ ಜತೆಯಲ್ಲಿ ಈ ಆಟದಲ್ಲಿ ಪ್ರಭುತ್ವ ಸ್ಥಾಪಿಸಿದ ಕೀನ್ಯಾ, ಇಥಿಯೋಪಿಯಾ ದೇಶಗಳ ಆಟಗಾರರು  ಯಾಕಾಗಿ ದೂರದ ಓಟದಲ್ಲಿ ಮಿಂಚುತ್ತಾರೆ ಎಂಬುದರ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಸ್ಯಾನ್‍ಡಿಯಾಗೊದಲ್ಲಿ ನಡೆದ ಮ್ಯಾರಥಾನ್‍ನಲ್ಲಿ ಅಮೆರಿಕದ 92 ವರ್ಷದ ಹ್ಯಾರಿಯೆಟ್ ಥಾಮ್ಸನ್ ಏಳೂವರೆ ಗಂಟೆಯಲ್ಲಿ 26 ಮೈಲಿ ಓಡಿದರು. 10 ಮಂದಿ ಮೊಮ್ಮಕ್ಕಳ ಈ ಮುದ್ದಿನ ಅಜ್ಜಿ ಕ್ಯಾನ್ಸರ್‍ಗೆ ತುತ್ತಾಗಿದ್ದವರು ಎಂಬುದನ್ನು ಮರೆಯದಿರಿ. ಈ ಅಜ್ಜಿಯ ಕಾಲುಭಾಗ, ಅರ್ಧಭಾಗ ಆಯಷ್ಯ ಇರುವವರೇ  ನಾಲ್ಕು ಮೆಟ್ಟಿಲು ಹತ್ತಿಳಿದರೆ ಏದುಸಿರು ಬಿಡುವ ಜಮಾನಾ ಇದು. ಅಂಥದ್ದರಲ್ಲಿ 26 ಮೈಲಿದೂರವನ್ನು ಎಲ್ಲಿಯೂ ನಿಲ್ಲದೆ ಇಷ್ಟೊಂದು ದೂರ ಓಡಿ, ನಗು ನಗುತ್ತ ಆಟ ಮುಗಿಸಿದ್ದನ್ನು ಕಂಡವರು ಶಿವಾ ಎಂದು ಕಾಲುನೀಟಿ ಮಲಗಿದ್ದ ಹಿರಿ ಜೀವಗಳು ಒಂದಿಷ್ಟು ಲವಲವಿಕೆಯಿಂದ ಎದ್ದು ಓಡಾಡಿದರು. ಯಾವುದರಲ್ಲಿ ಮುಂದಿಲ್ಲದಿದ್ದರೂ ನಮ್ಮ ಹುಡುಗ, ಹುಡುಗಿಯರು ಸಾಮಾಜಿಕ ಜಾಲತಾಣಗಳನ್ನು ಜಾಲಾಡುವುದರಲ್ಲಿ ನಿಸ್ಸೀಮರು. ಆಧುನಿಕ ತಂತ್ರಜ್ಞಾನದ ರಾಯಭಾರಿಗಳು. ದೊಡ್ಡವರ ಪಾಲಿಗೆ ಗುರುಗಳು. ಈ ಅಜ್ಜಿ ಕತೆಯನ್ನು ತಮ್ಮ ಅಜ್ಜ ಅಜ್ಜಿಯರಿಗೆ ಹೇಳಿ ಅರೆ ಅಬ್ಬಾ ಎಂಬ ಉದ್ಗಾರ ಹೊರಡಿಸಿದರು. ಹ್ಯಾರಿಯೆಟ್‍ಗಿಂತ ವಯಸ್ಸಿನಲ್ಲಿ 46 ದಿನ ಕಿರಿಯರಾಗಿದ್ದ ಅಮೆರಿಕದವರೇ ಆದ ಗ್ಲಾಡಿಸ್ ಬುರ್ರಿಲ್ (92 ವರ್ಷ 19 ದಿನ) ಮ್ಯಾರಥಾನ್ ಓಡಿದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯನ್ನು ಬರೆದಿದ್ದರು.

ಇವರೆಲ್ಲರಿಗಿಂತ ಭಾರತೀಯ ಮೂಲದ ಫೌಜಾ ಸಿಂಗ್ ಮ್ಯಾರಾಥಾನ್ ಓಡಿದ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 101ನೇ ವಯಸ್ಸಿನಲ್ಲೂ ಮ್ಯಾರಾಥಾನ್ ಓಡಿ ದಾಖಲೆ ಸ್ಥಾಪಿಸಿದ್ದಾರೆ. ಪಂಜಾಬಿನ ಜಲಂಧರ ಬಳಿಯಿರುವ ಬ್ಯಾಸ್ ಗ್ರಾಮದ ಅಜ್ಜ ಲಂಡನ್ನಿನಲ್ಲಿ ನೆಲೆಸಿದ್ದಾರೆ. ಈ ಅಜ್ಜನಿಗೆ ಓಟವೆಂದರೆ ಬಲು ಪ್ರೀತಿ. ತಮ್ಮ ವಯೋಮಾನದ ಗುಂಪಿನಲ್ಲಿ ಒಂದೇ ದಿನದಲ್ಲಿ ಐದು ವಿಶ್ವದಾಖಲೆ ಬರೆದ ಹೆಗ್ಗಳಿಗೆ ಈ ಅಜ್ಜನದ್ದು. ಅಡಿದಾಸ್ ಜಾಹೀರಾತಿನಲ್ಲಿ ಡೇವಿಡ್ ಬೆಕ್ಹಂ, ಮೊಹಮದ್ ಅಲಿ ಅವರೊಂದಿಗೆ ಇವರೂ ಕಾಣಿಸಿಕೊಂಡಿದ್ದಾರೆ.

ಪ್ರತಿಚಲನೆ

ಓಡುವುದು ಮನುಷ್ಯನ ಆದಿಮ ಪ್ರವೃತ್ತಿ. ಆಹಾರ ಸಂಗ್ರಹಣೆ, ಬೇಟೆ, ಪಶುಪಾಲನೆಯಲ್ಲಿ ಆತ ಓಡುತ್ತಲೇ ಇದ್ದ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಹೆಚ್ಚಿದಂತೆ ಓಡುವುದಿರಲಿ ನಡಿಗೆಯೂ ಕಡಿಮೆಯಾಯ್ತು. ಬೊಜ್ಜು ಬೆಳೆಯಿತು. ಅನಾರೋಗ್ಯ ಉಲ್ಬಣಿಸಿತು. ನಿಂತಲ್ಲೇ ಹೆಜ್ಜೆ ಹಾಕುವುದಕ್ಕೆ ಇಲ್ಲವೇ ಮನೆಯ ಪುಟಾಣಿ ಕೊಠಡಿಯಲ್ಲಿ ಟ್ರೆಡ್‍ಮಿಲ್‍ನಲ್ಲಿ ಕಾಲಾಕುತ್ತ, ಬೆವರು ಬಸಿಯುವ ಮಟ್ಟಕ್ಕೆ ಮಟ್ಟಸವಾದ. ಪ್ರತಿಯೊಂದೂ ಒಂದು ಹಂತ ಮುಟ್ಟಿದ ನಂತರ ಪ್ರತಿಚಲನೆ ಉಂಟಾಗುತ್ತದೆ. ಪರಸ್ಪರ ವಿರುದ್ಧ ದಿಕ್ಕುಗಳಿಗೆ ಎಳೆಯುವ ಸೆಣಸಾಟ, ಪ್ರತಿಸೆಣಸಾಟಗಳು ಇದ್ದೇ ಇರುತ್ತವೆ.  ಆಧುನಿಕತೆಯ ಭಾರಿ ಸೆಳೆತದ ನಡುವೆಯೂ ಪಾರಂಪರಿಕ ಪ್ರವೃತ್ತಿಗಳ ಬಗ್ಗೆ ನಮ್ಮ ವ್ಯಾಮೋಹ ಕಡಿಮೆಯಾಗಿಲ್ಲ. ಫಾಸ್ಟ್ ಫುಡ್ ಜಾಗದಲ್ಲಿ ಅಮ್ಮನ ಕೈ ತುತ್ತು, ಜಿಎಂ(ಜಿನಿಟಿಕಲೀ ಮಾಡಿಫೈಡ್) ಫುಡ್ ಜಾಗದಲ್ಲಿ ಸಾವಯವ ಪದಾರ್ಥಗಳು, ಆಲೋಪತಿಗೆ ಪರ್ಯಾಯವಾಗಿ ನಿಸರ್ಗ ಚಿಕಿತ್ಸೆ ಹೀಗೆ ಪ್ರತಿಯೊಂದರಲ್ಲೂ ಬದಲಿಗಳನ್ನು ಹುಡುಕುತ್ತಿದ್ದೇವೆ. ಇಲ್ಲವೇ ನಮ್ಮ ಹಿಂದಿನ ಅತ್ಯುತ್ತಮವಾಗಿದ್ದೂ ವಿಸ್ಮøತಿಗೆ ಸರಿದಿದ್ದರ ಕಡೆಗೆ ಮತ್ತೆ ಕೈ ಚಾಚುತ್ತಿದ್ದೇವೆ.  ಓಟ ಕೂಡ ಇಂಥದ್ದೇ ಪ್ರವೃತ್ತಿಯ ಪಡಿಯಚ್ಚು.  ಒಂದು ಸ್ಥೂಲ ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ ಏನಿಲ್ಲವೆಂದರೂ  ಐನೂರಕ್ಕೂ ಹೆಚ್ಚು ಮ್ಯಾರಥಾನ್ ಸ್ಪರ್ಧೆಗಳು ನಡೆಯುತ್ತವೆ. ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ.

ಓಡಿದರೆ ಬದುಕು

ಲೆಕ್ಕಕ್ಕೆ ಸಿಗದ ಸಾವಿರಾರು ದೂರದ ಓಟಗಳು ನಡೆಯುತ್ತಲೇ ಇರುತ್ತವೆ. ಆಟದ ಉದ್ದೇಶಕ್ಕಿಂತ ಮಿಗಿಲಾಗಿ ಜಾಗೃತಿಗಾಗಿ ದೂರ ಓಟಗಳು ನಡೆಯುತ್ತವೆ. ಅಕ್ಷರ ಜಾಥಾ, ಏಡ್ಸ್ ಅರಿವು, ಮಾಹಿತಿ ಹಕ್ಕು ಪ್ರಸಾರ, ಹೆಣ್ಣುಮಕ್ಕಳ ಶಿಕ್ಷಣ, ಭ್ರೂಣ ಹತ್ಯೆ, ಸರಕಾರಿ ಸ್ಕೀಮುಗಳ ಅರಿವು- ಹೀಗೆ ಎಲ್ಲದಕ್ಕೂ ಓಟ. ಗುಂಪೊಂದು ಓಟಕ್ಕಿತ್ತರೆ ಅಲ್ಲಿ ಏನೋ ಇದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡುತ್ತದೆ. ಕುಂತರೆ ಕೆಟ್ಟೆವು, ಓಡಿದರೆ ಬದುಕಿದೆವು ಎಂಬುದು ಆಧುನಿಕ ಗಾದೆಯೇ ಆಗಿಬಿಟ್ಟಿದೆ. ಹೀಗಾಗಿ ಎಲ್ಲದಕ್ಕೂ ಓಡಬೇಕು. ಇನ್ನು ನಮ್ಮ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ನಿತ್ಯ ಸಂಚರಿಸುವವರು ಸಹಜ ಓಟಗಾರರಾಗಿರುತ್ತಾರೆ ಎಂಬುದು ತಮಾಷೆಯೇನೂ ಅಲ್ಲ. ಯಾವ ಆಟವನ್ನೂ ತೆಗೆದುಕೊಂಡರೂ ಅದಕ್ಕೊಂದು ರೋಮಂಚನಕಾರಿ ಚರಿತ್ರೆ ಇರುತ್ತದೆ, ಇದಕ್ಕೆ ದೂರ ಓಟವೂ ಕೂಡ ಹೊರತಲ್ಲ. ಪ್ರಾಯಶಃ ಈ ಆಟದ ಚರಿತ್ರೆಯನ್ನು ಗಟ್ಟು ಮಾಡಿಕೊಂಡ ಯಾರೇ ಆಗಲಿ ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಲ್ಲ. ಕೆಚ್ಚು, ಜಿಗುಟು, ಆತ್ಮವಿಶ್ವಾಸ, ಕೊನೆಯವರೆಗೂ ಹೋರಾಡುವ ಚಲ ಅವರಲ್ಲಿ ಮೈಗೂಡಿರುತ್ತದೆ. ಚರಿತ್ರೆ ಮತ್ತು ವರ್ತಮಾನಗಳು ಒಗ್ಗೂಡುತ್ತವೆ. ಕಸುವು ತುಂಬುತ್ತವೆ.

ಮ್ಯಾರಥಾನ್ ಹಿನ್ನೋಟ,  ಫಿಡಿಪಿಡೀಸ್ ಎಂಬ ಚಲದಂಕಮಲ್ಲ

ಕ್ರಿ.ಪೂ.490 ರಲ್ಲಿ ಒಮ್ಮೆ ಪರ್ಷಿಯನರು ಅಥೆನ್ಸಿನವರ ಮೇಲೆ ಯುದ್ಧಕ್ಕೆ ಬಂದರು. ಸುಮಾರು ಒಂದು ಲಕ್ಷ ಮಂದಿ ಪರ್ಷಿಯನರನ್ನು ಕೇವಲ 10 ಸಾವಿರ ಅಥೆನ್ಸಿನವರು ಮ್ಯಾರಥಾನ್ ಎಂಬಲ್ಲಿ ಎದುರಿಸಬೇಕಾಯಿತು. ಅಥೆನ್ನಿನವರು ತಮ್ಮ ನೆರವಿಗಾಗಿ ಸ್ಪಾರ್ಟನರಿಗೆ ಹೇಳಿ ಕಳುಹಿಸಿದರು. ಫಿಡಿಪಿಡೀಸ್ ಎಂಬ ಒಲಿಂಪಿಕ್ ಕ್ರೀಡಾಪಟು 150 ಮೈಲಿ ದೂರ ಓಡಿ ಸ್ಪಾರ್ಟನರಿಗೆ ಈ ಸಂದೇಶ ಮುಟ್ಟಿಸಿದ. ಹೀಗೆ ಓಡುವಾಗ ನದಿಗಳಿದ್ದಲ್ಲಿ ಈಜಿ, ಪರ್ವತವಿದ್ದಲ್ಲಿ ಹತ್ತಿ ಅವನು ಮಾರ್ಗ ಕ್ರಮಿಸಿದ್ದ. ಅವನು ಇದಕ್ಕೆ ತೆಗೆದುಕೊಂಡ ಕಾಲ ಕೇವಲ 48 ಗಂಟೆಗಳು.

ಸ್ಪಾಟನರು ಕೊಂಚ ಕಾಲ ತಡೆದು ಬರುವುದಾಗಿ ಹೇಳಿದಾಗ ಫಿಡಿಪಿಡೀಸ್ ಮತ್ತೆ ಹಿಂದಕ್ಕೆ ಓಡಿದ. ಸೈನಿಕರಿಗೆ ವಿಷಯ ತಿಳಿಸಿ, ತಾನೂ ಒಂದು ಈಟಿ, ಗುರಾಣಿ ತೆಗೆದುಕೊಂಡು ಪರ್ಷಿಯನ್ನರೊಡನೆ ಹೋರಾಡಿದ. ಸ್ಪಾರ್ಟನರು ಬರುವ ಮೊದಲೇ ಅಥೆನ್ಸಿನವರು ಪರ್ಷಿಯನ್ನರನ್ನು ಸೋಲಿಸಿದರು. ಆ ವಿಜಯ ವಾರ್ತೆಯೊಂದಿಗೆ ಫಿಡಿಪಿಡೀಸನೇ ಸುಮಾರು 22 ಮೈಲಿ ಓಡಿ ಅಥೆನ್ಸಿಗೆ ಬಂದು ಏದುಸಿರುಬಿಡುತ್ತಾ “ಆನಂದಿಸಿ! ನಾವು ಗೆದ್ದೆವು!”  ಎಂದು ನುಡಿದು ಅಲ್ಲೇ ಬಿದ್ದು ಪ್ರಾಣ ಬಿಟ್ಟ.

ಈ  ಪ್ರಚಂಡ ಸಾಹಸ ಇಂದಿನ ಮ್ಯಾರಥಾನ್ ಸ್ಪರ್ಧೆಗೆ ಮೂಲ. ಫಿಡಿಪಿಡೀಸ್ ವಿಜಯವಾರ್ತೆ ಹೊತ್ತು ಓಡಿದ ದೂರ 22 ಮೈಲಿ. 1470 ಗಜಗಳು. ಈ ದೂರವನ್ನೇ ಇಂದು ಕೊಂಚ ಬದಲಾಯಿಸಿ, 26 ಮೈಲಿ 385 ಗಜವನ್ನಾಗಿ (42,195 ಮಿ.) ಮಾಡಿದ್ದಾರೆ. ಈ ದೂರವನ್ನು ಓಡಿ ಯಾರ ಮೊದಲು ಬರುತ್ತಾರೋ ಅವರೇ ಮ್ಯಾರಥಾನ್ ವಿಜಯಿಗಳೆಂದು ತೀರ್ಮಾನಿಸುತ್ತಾರೆ.

ಒಲಿಂಪಿಕ್ಸ್ ವೈಭವ

ಫಿಡಿಪಿಡೀಸ್ ಸಾಹಸದ ನೆನಪಿಗಾಗಿ ಈ ದೂರದ ಓಟವನ್ನು ಆಧುನಿಕ ಸ್ಪರ್ಧೆಗಳಲ್ಲಿ ಒಂದನ್ನಾಗಿ ಮಾಡಬೇಕೆಂದು ಪ್ಯಾರಿಸಿನ ಮೈಕೆಲ್ ಬ್ರೆಯಲ್ ಸೂಚಿಸಿದರು. 1896 ರಲ್ಲಿ ಮರು ಆರಂಭವಾದ ಒಲಿಂಪಿಕ್ಸ್‍ನಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಆರಂಭಿಸಲಾಯಿತು.  ಮ್ಯಾರಥಾನ್‍ನಿಂದ ಅಥೆನ್ಸ್‍ವರೆಗೆ ಓಡುವ ಈ ಸ್ಪರ್ಧೆಯಲ್ಲಿ ಗೆದ್ದವರು ಸ್ಟೈರೋಸ್ ಲೂಯಿ. ಆತ ಕೂಡ ಗ್ರೀಸ್‍ನವನೇ. ಅಥೆನ್ಸ್ ಕ್ರೀಡಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಗ್ರೀಸಿನ ರಾಜ ಮತ್ತು ಯುವರಾಜ ಆತನನ್ನು ಪ್ರವೇಶದ್ವಾರದಲ್ಲಿ ಬರಮಾಡಿಕೊಂಡು ಕೊಂಚ ದೂರ ಆತನೊಂದಿಗೆ ಹೆಜ್ಜೆ ಹಾಕಿದರು. ಅಂಚೆ ಇಲಾಖೆಯಲ್ಲಿ ರನ್ನರ್ ಆಗಿದ್ದ ಆತ, ಬೆಟ್ಟಗುಡ್ಡಗಳಲ್ಲಿ ಕುರಿ ಮೇಕೆ ಮೇಯಿಸುತ್ತಿದ್ದಾಗ ಓಡುತ್ತಿದ್ದ.

ಒಲಿಂಪಿಕ್ಸ್‍ನಲ್ಲಿ  ಮ್ಯಾರಥಾನ್ ಓಟದ ದೂರ ಖಚಿತವಾಗಿರಲಿಲ್ಲ. 1924ರ ವರೆಗೆ 24ರಿಂದ 26 ಮೈಲಿ, 990 ಗಜಗಳವೆಗೆ ಸ್ಪರ್ಧೆ ಇಟ್ಟಿದ್ದರು. 24ರ ಒಲಿಂಪಿಕ್ಸ್‍ನಲ್ಲಿ ಈ ದೂರವನ್ನು 26 ಮೈಲಿ, 385 ಗಜ ಎಂದು ಗೊತ್ತುಪಡಿಸಲಾಯಿತು.  ಇಂದಿಗೂ ಈ ದೂರವನ್ನೇ  ಅನುಸರಿಸಲಾಗುತ್ತದೆ. ಓಟದ ಹಾದಿಯಲ್ಲಿ ಬೆಟ್ಟ ಗುಡ್ಡಗಳುಬಂದರೆ ದೂರ ಹೆಚ್ಚುಕಡಿಮೆಯಾಗುತ್ತದೆ.

ತರಬೇತಿ ಹೆಚ್ಚೋ ಮನೋಬಲವೋ?

26 ಮೈಲಿ 385 ಗಜದ ಓಟದಲ್ಲಿ ಗೆಲ್ಲಲು ಅಷ್ಟು ದೂರ ಓಡಿ ಅಭ್ಯಾಸ ಮಾಡಿರಬೇಕು ಎಂಬ ಅಭಿಪ್ರಾಯ ಮೊದಲು ಇತ್ತು. ಆದರೆ 1952ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ತರಬೇತಿಯಲ್ಲಿ  ಅಷ್ಟು ದೂರ ಓಡದಿದ್ದ ಜಕೊಸ್ಲೂವಾಕಿಯದ ಎಮಿಲ್ ಜಟೊಪೆಕ್ ಈ ದೂರವನ್ನು 2 ಗಂಟೆ 23 ನಿಮಿಷ, 32 ಸೆಕೆಂಡುಗಳಲ್ಲಿ ಓಡಿ ದಾಖಲೆ ಸ್ಥಾಪಿಸಿದರು. 1960 ರಲ್ಲಿ ಇಥಿಯೋಪಿಯದ ಚಕ್ರವರ್ತಿಯ ಅಂಗರಕ್ಷದ ಅಬೀಬಿ ಬಿಕಿಲ ಇದೇ ದೂರವನ್ನು ಬರಿಗಾಲಿನಲ್ಲಿ 2 ಗಂಟೆ 15 ನಿಮಿಷ 16.2 ಸೆಕೆಂಡುಗಳಲ್ಲಿಯೂ 1964 ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ

ಷೂ ಧರಿಸಿ 2 ಗಂಟೆ 12 ಮಿನಿಟು 11.2 ಸೆಕೆಂಡುಗಳಲ್ಲಿಯೂ ಓಡಿ ವಿಶ್ವ ದಾಖಲೆ ಸ್ಥಾಪಿಸಿದರು. 2008ರಲ್ಲಿ ಈ ದಾಖಲೆ ಪುಡಿಯಾಯ್ತು. ಕೀನ್ಯಾದ ಸಾಮ್ಯೂಯೆಲ್ ಕಮಾವು ವಾಂಜಿರು, 2 ಗಂಟೆ, ಆರು ನಿಮಿಷ, 32 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ ನೂತನ ವಿಶ್ವದಾಖಲೆ ಮಾಡಿದ್ದು ಅದೇ ಇಂದಿಗೂ ಉಳಿದುಕೊಂಡಿದೆ. ಮಹಿಳಾ ವಿಭಾಗದಲ್ಲಿ ಜಪಾನಿನ ನೌಕೊ ತಾಕಾಹಶಿ, 2000ದಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ 2 ಗಂಟೆ, 23 ನಿಮಿಷ 14 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿದರು.

ದೂರ ಓಟದ ಸರದಾರರು

ಒಲಿಂಪಿಕ್ಸ್ ಹೊರತುಪಡಿಸಿ ಇತರೆಡೆ ನಡೆಯುವ ಮ್ಯಾರಥಾನ್ ದಾಖಲೆಗಳಿಗೆ ಐಎಎಫ್ ಮಾನ್ಯತೆ ನೀಡಿರಲಿಲ್ಲ. ಆದರೆ 2004ರಿಂದೀಚೆಗೆ ದಾಖಲೆ ಸಮಯವನ್ನು ದಾಖಲು ಮಾಡಲಾಗುತ್ತಿದೆ. ಆದರೆ ಇದು ಪಕ್ಕಾ ಅಲ್ಲ. ಏಕೆಂದರೆ 26ಮೈಲಿ ಸಮತಟ್ಟಾದ ಮೈದಾನ ಎಲ್ಲಿಯೂ ಸಿಗುವುದಿಲ್ಲ. ಬೆಟ್ಟ ಗುಡ್ಡಗಳಿರುವೆಡೆ ದೂರ ಹೆಚ್ಚು ಕಡಿಮೆಯಾಗುತ್ತದೆ. ವಾತಾವರಣವೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ದಾಖಲೆಯ ನಿಖರತೆ ಅಸಾಧ್ಯ. ಆದರೂ ಪ್ರಸಕ್ತ ಡೆನಿಸ್ ಕಿಮೆಟ್ಟೊ (ಕೀನ್ಯಾ) ಬರ್ಲಿನ್‍ನಲ್ಲಿ ಕಳೆದ ವರ್ಷ  ದೂರ ಓಟದಲ್ಲಿ  2 ಗಂಟೆ, 2 ನಿಮಿಷ, 57 ಸೆಕೆಂಡ್ ಪೂರೈಸಿ ವಿಶ್ವದಾಖಲೆ ಮಾಡಿದ್ದಾರೆ.

ಇವರ ದಾಖಲೆಯನ್ನು 1908ರ ಒಲಿಂಪಿಕ್ಸ್‍ನಲ್ಲಿ  ಗೆದ್ದ ಜಾನ್ನಿ ಹೇಯ್ಸ್‍ಗೆ ಹೋಲಿಸಿದರೆ 52 ನಿಮಿಷಗಳಷ್ಟು ಸುಧಾರಣೆಯಾಗಿದೆ. ಯಾರು ಏನೇ ಹೇಳಿದರೂ ಮನುಷ್ಯನ ಸಾಮಥ್ರ್ಯ ಹೆಚ್ಚುತ್ತಲೇ ಇದೆ. ಶಾರ್ಟ್‍ಟರ್ಮ್ ಡಿಸ್ಟೆನ್ಸ್ ಓಟದ ದಾಖಲೆಗಳನ್ನು ಎದುರಿಗಿಟ್ಟುಕೊಂಡು ಬೇಕಾದರೆ ಈಮಾತನ್ನು ರುಜುವಾತುಪಡಿಸಬಹುದು. ಮಹಿಳೆಯರ ವಿಭಾಗದಲ್ಲಿ   ಬ್ರಿಟನ್‍ನ ಪೌಲಾ ರಾಡ್‍ಕ್ಲಿಫ್ 2003ರಲ್ಲಿ ಲಂಡನ್‍ನಲ್ಲಿ ನಡೆದ ಮ್ಯಾರಥಾನ್‍ನಲ್ಲಿ ಗೊತ್ತುಪಡಿಸಿದ ದೂರವನ್ನು 2 ಗಂಟೆ, 15ನಿಮಿಷ 25 ಸೆಕೆಂಡ್‍ಗಳಲ್ಲಿ ಕ್ರಮಿಸಿದರು.

ದೂರವಿರಲಿ, ಕಿರು ಓಟವಿರಲಿ, ಮನುಷ್ಯನ ಸಾಮಥ್ರ್ಯ ಪ್ರತಿವರ್ಷ ಹೆಚ್ಚುತ್ತಿದೆ ಎಂಬುದಕ್ಕೆ ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿರುವುದೇ ಸಾಕ್ಷಿ. ದೂರ ಓಟದಲ್ಲಿ ದೈಹಿಕ ಶಕ್ತಿಗಿಂತ ಮನೋಬಲವೇ ಮುಖ್ಯ ಎಂಬ ವಾದವಿದೆ. ಏನೇ ಹೇಳಿ ಸಾವಿರಾರು ಕೆಲವೊಮ್ಮೆ ಲಕ್ಷಾಂತರ ಮಂದಿ ರಸ್ತೆಗಿಳಿದು ಓಡುವುದು, ಬಲವಿರುವವರಿಗೆ ದಾರಿ ಮಾಡಿಕೊಡುವುದು, ವಿಶೇಷ ಚೇತನರಿಗೆ ಚೈತನ್ಯ ತುಂಬುವುದು ಮ್ಯಾರಥಾನ್ ಸತ್ವ. ಅದು ಅಕ್ಷಯ. ಅಮೋಘ.

ಓಡುವುದೇ ನಮ್ಮ ಬಿಸ್ನೆಸ್

ಮಹಿಳೆಯರ ಮ್ಯಾರಥಾನ್ 1984ರಲ್ಲಿ ಲಾಸ್ ಏಂಜಲೀಸ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಆರಂಭಿಸಲಾಯಿತು. ಅಮೆರಿಕದ ಜಾನ್ ಬೆನೋಯ್ಟ್  2:24:52 ಸೆಕೆಂಡ್‍ಗಳಲ್ಲಿ ಅಂತಿಮ ಹೆಜ್ಜೆ ತಲುಪಿ ಚಿನ್ನ ಗೆದ್ದರು ಮೊದಲಿಗೆ ಮ್ಯಾರಥಾನ್ ಓಟದ ದೂರ ಪಕ್ಕಾ ಇರಲಿಲ್ಲ. 1921ರಲ್ಲಿ ಇಂಟರ್‍ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್(ಐಎಎಫ್) 42.195 ಕಿಲೋಮೀಟರ್ (26 ಮೈಲಿ, 385 ಗಜ (42.195 ಕಿಮೀ) ದೂರವನ್ನು ನಿಗದಿಗೊಳಿಸಿತು

ಅಮೆರಿಕದಲ್ಲಿ ಸರಾಸರಿ ಮ್ಯಾರಥಾನ್ ಸಮಯ ಪುರುಷರಿಗೆ ನಾಲ್ಕು ಗಂಟೆ, 32 ನಿಮಿಷ, 8 ಸೆಕೆಂಡ್, ಮಹಿಳೆಯರಿಗೆ 5ಗಂಟೆ, ಆರುನಿಮಿಷ 8ಸೆಕೆಂಡ್‍ಗಳು. ಓಡಿದವರೆಲ್ಲ ಗುರಿ ಮುಟ್ಟುವುದಿಲ್ಲ. ಕೆಲ ದೇಶಗಳಲ್ಲಿ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಬೋಸ್ಟನ್‍ನಲ್ಲಿ ನಡೆಯುವ ದೂರ ಓಟದಲ್ಲಿ ಸ್ಪರ್ಧಿಗಳು ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗಿರಬೇಕು. ವಾಷಿಂಗ್ಟನ್‍ನಲ್ಲೂ ಇದೇ ಕ್ರಮ ಇದೆ.

ಓಡಿದವರೆಲ್ಲ ಗುರಿ ಮುಟ್ಟುವವರೆಗೆ ಕಾಯಬೇಕಾದರೆ ದಿನಗಳೇ ಬೇಕಾಗುತ್ತದೆ ಹೀಗಾಗಿ ಸಾಮಾನ್ಯವಾಗಿ ಆರುಗಂಟೆ ನಂತರ ಮಾರ್ಗವನ್ನು ಮುಕ್ತಗೊಳಿಸಲಾಗುತ್ತದೆ. ಹೀಗಾಗಿ ಸ್ಪರ್ಧಿಗಳು ಇನ್ನೂ ಎಲ್ಲೆಲ್ಲಿ ಓಡಿಬರುತ್ತಿರುತ್ತಾರೋ  ಅಲ್ಲಲ್ಲೇ ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ. ಕೆಲ ಸ್ಪರ್ಧೆಗಳಲ್ಲಿ ಕಾಯುವ ಅವಧಿ 8 ಗಂಟೆ ಇರುತ್ತದೆ. ನಾವು ಸೇವಿಸುವ ಕಾರ್ಬೋಹೈಡ್ರೇಡುಗಳನ್ನು ದೇಹ ಗ್ಲೈಕೋಜೆನ್ ಆಗಿ ಮಾರ್ಪಡಿಸುತ್ತದೆ. ಇದೊಂದು ಓಟಗಾರರಿಗೆ ಇಂಧನ. ದೇಹದಲ್ಲಿ ಎರಡುಸಾವಿರ ಕಿಲೋ ಕ್ಯಾಲೊರಿ ಗ್ಲೈಕೋಜೆನ್ ಇದ್ದರೆ 30 ಕಿಲೋಮೀಟರ್ ಸಾಗಬಹುದು. ಗ್ಲೈಕೋಜೆನ್ ಖಾಲಿಯಾದರೆ ಕೊಬ್ಬನ್ನು ಶಕ್ತಿಯಾಗಿ ಮಾರ್ಪಡಿಸಿ ಇಂಧನ ಒದಗಿಸುವ ಕೆಲಸವನ್ನು ನಮ್ಮ ದೇಹದ ಯಂತ್ರಾಂಗ ಮಾಡುತ್ತದೆ. ಓಟಗಾರರಿಗೆ ಎನರ್ಜಿ ಜೆಲ್ ನೀಡಲಾಗುತ್ತದೆ. ಓಟದ ನಂತರ ದೇಹದ ಕೆಳಭಾಗವನ್ನು 20 ನಿಮಿಷ ತಣ್ಣನೆಯ ಇಲ್ಲವೇ ಮಂಜುಗಡ್ಡೆ ನೀರಿನಲ್ಲಿ ಮುಳುಗಿಸಿ ಇಟ್ಟುಕೊಳ್ಳುವುದರಿಂದ ರಕ್ತವು ಕಾಲುಗಳ ಸ್ನಾಯುಗಳತ್ತ ಚಲಿಸುತ್ತದೆ. ಆಯಾಸಗೊಂಡವರು ಬಹುಬೇಗ ಚೇತರಿಸಿಕೊಳ್ಳುತ್ತಾರೆ. ಅಧ್ಯಯನದ ಪ್ರಕಾರ, ಮ್ಯಾರಥಾನ್ ಮುಗಿದ ನಂತರ 24 ಗಂಟೆಗಳಲ್ಲಿ ಹೃದಯಾಘಾತದ ತೀವ್ರತೆ ಐವತ್ತು ಸಾವಿರಕ್ಕೆ ಒಬ್ಬರಲ್ಲಿ ಇರುತ್ತದೆ.

ಅಮೆರಿಕದ ಪ್ರತಿಯೊಂದು ರಾಜ್ಯದಲ್ಲೂ ಮ್ಯಾರಥಾನ್ ಸ್ಪರ್ಧೆಗಳು ಆಯೋಜನೆಗೊಳ್ಳುತ್ತವೆ. ವಾಷಿಂಗ್ಟನ್‍ನಲ್ಲಿ ನಡೆಯುವ ಪ್ರತಿವರ್ಷದ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಆರಂಭಶೂರರು ಹೆಜ್ಜೆ ಹಾಕಿದರೂ 350ಕ್ಕೂ ಹೆಚ್ಚು ಸ್ಪರ್ಧಿಗಳು ಗುರಿ ಮುಟ್ಟುತ್ತಾರೆ. 2004ರಲ್ಲಿ ವಿಕಲಚೇತನ ಮಿಯಾಮಿಯ ಚಕ್ ಬ್ರಯಾಂಟ್ ದೂರವನ್ನು ಕ್ರಮಿಸಿದ ಮೊದಲ ವ್ಯಕ್ತಿ.  ಕೃತಕ ಕಾಲುಗಳಲ್ಲಿ ಈ ಮನುಷ್ಯ 59 ಮ್ಯಾರಥಾನ್‍ಗಳನ್ನು ಪೂರೈಸಿದ್ದಾರೆ. 2003ರಲ್ಲಿ ಬ್ರಿಟನ್ ಸಾಹಸಿಗರಾದ ಸರ್ ರಾನುಫ್  ಫಿನ್ನೆಸ್, ಏಳುದಿನಗಳಲ್ಲಿ ಏಳು ಖಂಡಗಳಲ್ಲಿ  ಏಳು ಮ್ಯಾರಥಾನ್ ಪೂರೈಸಿದ್ದರು. ಹೃದಯದ ಬೈ ಪಾಸ್ ಸರ್ಜರಿಗೂ ಇವರು ಒಳಗಾಗಿದ್ದರು. 2008ರಲ್ಲಿ 64 ವರ್ಷದ ಲ್ಯಾರಿ ಮ್ಯಾಕೋನ್ ಅವರು ಒಂದೇ ವರ್ಷದ ಅವಧಿಯಲ್ಲಿ 105 ಮ್ಯಾರಥಾನ್ ಓಡಿದ್ದರು.

ಬೆಂಗಳೂರು ಮ್ಯಾರಥಾನ್

ಮೇ 17 ರಂದು ಬೆಂಗಳೂರಿನಲ್ಲಿ ಟಿಸಿಎಸ್ ವರ್ಲ್ಡ್ 10ಕೆ(ಹತ್ತು ಕಿಲೋಮೀಟರ್)  ಸ್ಪರ್ಧೆ ನಡೆಯಿತು. ಇದರಲ್ಲಿ 25ಸಾವಿರ ಮಂದಿ ಪಾಲ್ಗೊಂಡಿದ್ದರು. ಮ್ಯಾರಥಾನ್‍ನಲ್ಲಿ ವಿಶ್ವದಾಖಲೆ ಹೊಂದಿರುವ ಮಲೈಕಾ ಭಾಗವಹಿಸಿದ್ದು ಸ್ಪರ್ಧೆಗೆ ಕಳೆ ಕಟ್ಟಿತ್ತು.   ಹತ್ತು ಮೈಲಿ ಓಟ (ಮುಕ್ತವಿಭಾಗ) ಮಜಾ ರನ್, ಹಿರಿಯ ನಾಗರಿಕರು ಮತ್ತು , ವಿಶೇಷಚೇತನಿಗೆ ಪ್ರತ್ಯೇಕ ಪ್ರಶಸ್ತಿಗಳಿದ್ದವು. ಬಹುಮಾನ ಮೊತ್ತ: ವಿಶ್ವ 10ಕೆ ಎಲೈಟï ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾಣ ಗಳಿಸಿದವರಿಗೆ 13 ಲಕ್ಷ ನಗದು ಬಹುಮಾನವಿತ್ತು. ಭಾರತೀಯ ವಿಭಾಗದಲ್ಲಿ ಈ ಮೊತ್ತ ಎರಡೂವರೆ ಲಕ್ಷ.

ಕೂಲ್ ಕೂಲ್ ಸಿಟಿಯಲ್ಲಿ ಮುಂಜಾನೆ ನಡೆದ ಸ್ಪರ್ಧೆಯಲ್ಲಿ  ಇಥಿಯೋಪಿಯಾದ ಮೋಸಿನೆಟ್ ಗೆರೆಮೆವ್ ಮತ್ತು ಅದೇ ದೇಶದ ಮಮಿತು ಡಸ್ಕಾ ಕ್ರಮವಾಗಿ ಎಲೈಟ್ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಭಾರತದಲ್ಲಿ ಮೂರನೇ ಬಾರಿಗೆ ದೂರ ಅಂತರ ಓಟದಲ್ಲಿ ಪಾಲ್ಗೊಂಡಿದ್ದ ಮೋಸಿನೆಟ್, 2012ರಲ್ಲಿ ಹೈದರಾಬಾದ್‍ನಲ್ಲಿ ನಡೆದ 10ಕಿ.ಮೀ.ರೇಸ್‍ನಲ್ಲಿ ಮೊದಲ ಸ್ಥಾನಗಳಿಸಿದ್ದರೆ, 2014ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಹ್ಯಾಪ್ ಮ್ಯಾರಥಾನ್‍ನಲ್ಲಿ ಮೂರನೇ ಸ್ಥಾನಗಳಿಸಿದ್ದರು.

ಭಾರತೀಯರ ವಿಭಾಗದಲ್ಲಿ ಅಚ್ಚರಿ ಫಲಿತಾಂಶ ನೀಡಿದ ಒಎನ್‍ಜಿಸಿ ತಂಡದ ಸುರೇಶ್ ಕುಮಾರ್ ಮತ್ತು ಫೆಡರೇಷನ್ ಕಪ್ ಚಾಂಪಿಯನ್ಸ್ ತಮಿಳುನಾಡಿನ ಸೂರ್ಯ.ಎಲ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಆದರೆ. ಹಾಲಿ ಚಾಂಪಿಯನ್ ಕರ್ನಾಟಕದ ಬಿ.ಸಿ ತಿಲಕ್ ಅಗ್ರ ಹತ್ತರೊಳಗೆ ಕಾಣಿಸಿಕೊಳ್ಳುವಲ್ಲಿಯೂ ಸಫಲರಾಗದೆ ಅಭಿಮಾನಿಗಳಲ್ಲಿ ನಿರಾಶೆಮೂಡಿಸಿದರು.

ಮೊದಲ ಮೂರು ಸ್ಥಾನಗಳಿಸಿದ ಎಲೈಟ್ ಪುರುಷ ಮತ್ತು ಮಹಿಳಾ ಅಥ್ಲೀಟ್‍ಗಳು ಕ್ರಮವಾಗಿ 13, 9.5 ಮತ್ತು 5.7 ಲಕ್ಷ ರೂ.ಬಹುಮಾನ ತಮ್ಮದಾಗಿಸಿಕೊಂಡರು. ಭಾರತೀಯ ವಿಭಾಗದಲ್ಲಿ ಒಎನ್‍ಜಿಸಿ ತಂಡದ ಸುರೇಶ್ ಕುಮಾರ್, ಮಿಲಿಟರಿ ಮ್ಯಾನ್ ಕೇತಾ ರಾಮ್, ಮತ್ತುಟಿ ಗೋಪಿ 1-2-3ನೇ ಸ್ಥಾನಗಳಿಸಿದರು. ಮಹಿಳಾ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ದೂರದ ಓಟದಲ್ಲಿ ಪಾಲ್ಗೊಂಡಿದ್ದ ಫೆಡರೇಷನ್ ಕಪ್ ಚಾಂಪಿಯನ್ ಸೂರ್ಯ.ಎಲ್ 0.35.58ಸೆಕೆಂಡ್‍ಗಳಲ್ಲಿ ಅಗ್ರಸ್ಥಾನಿಯಾಗಿ ಗುರಿ ಮುಟ್ಟಿ ಕಳೆದ ವರ್ಷ ಸ್ವಾತಿ ಗಢಾವೆ ದಾಖಲಿಸಿದ್ದ 37.22 ಸೆಕೆಂಡ್‍ಗಳ ದಾಖಲೆಯನ್ನು ಹಿಂದಿಕ್ಕಿದರು. ಗಢಾವೆ 0.36.15ಸೆಕೆಂಡ್‍ಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದರೆ, ಫೆಡರೇಷನ್ ಕಪ್ ನಾಲ್ಕನೇ ಸ್ಥಾನಿ ಮೋನಿಕಾ ಆತಾರೆ 36.54 ಸೆಕೆಂಡ್‍ಗಳಲ್ಲಿ ಮೂರನೇ ಅವರಾಗಿ ರೇಸ್ ಅಂತ್ಯಗೊಳಿಸಿದರು.

ಉಗ್ರರ ಕಾಟ

ಉಗ್ರರ ಕಾಟ ಮಿತಿಮೀರಿದೆ. ಸ್ನೇಹ, ಸೌಹಾರ್ದ ಮತ್ತು ಜೀವನಪ್ರೀತಿ ಬೆಳೆಸುವ ಕ್ರೀಡೆಯಲ್ಲೂ ಉಗ್ರರ ಬಂದೂಕುಗಳು ಗರ್ಜಿಸಿವೆ. ಬಾಂಬ್‍ಗಳು ಸ್ಫೋಟಿಸಿವೆ. ಏಪ್ರಿಲ್ 15, 2013ರಲ್ಲಿ ಬೋಸ್ಟನ್‍ನ ಬಾಯ್‍ಲ್‍ಸ್ಟೋನ್ ಬೀದಿಯಲ್ಲಿ  ಮ್ಯಾರಥಾನ್ ನಡೆಯುತ್ತಿದ್ದಾಗ ಬಾಂಬ್‍ಗಳು ಸ್ಫೋಟಿಸಿದವು. ಇದಕ್ಕೆ 3 ಜನ ಬಲಿಯಾಗಿ 264 ಮಂದಿ ಗಾಯಗೊಂಡರು. ಎಫ್‍ಬಿಐ ತನಿಖೆ ಕೈಗೆತ್ತಿಕೊಂಡಿತು. ಚೆಚೆನ್ಯಾ ಸಹೋದರ ಜ್ಹೋಖರ್ ತ್ಸರ್‍ನೋವ್ ತಮೆರ್ಲಾನ್ ಸರ್‍ನೋವ್ ಈ ದಾಳಿಗೆ ಕಾರಣ ಎಂದು ಹೇಳಿತು. ವಾಟರ್ ಟೌನ್ ಬಳಿ ಈ ಇಬ್ಬರು ಪೊಲೀಸರಿಗೆ ಮುಖಾಮುಖಿಯಾದರು. ಗುಂಡಿನ ಕಾಳಗ ನಡೆಯಿತು. ಇದರಲ್ಲಿ ಪೊಲೀಸರಿಗೆ ಗುಂಡೇಟು ತಗುಲಿತು.; ತಮೆರ್ಲಾನ್ ಸ್ಥಳದಲ್ಲೇ ಸತ್ತ. ಮತ್ತೊಬ್ಬ ಕಾಲಿಗೆ ಬುದ್ಧಿ ಹೇಳಿದ. ಏಪ್ರಿಲ್ 19ರಲ್ಲಿ ವಾಟರ್ ಟೌನ್‍ನಲ್ಲಿ ಕಾಣಿಸಿಕೊಂಡ. ಪೊಲೀಸರು ಭಾರಿ ಕಾರ್ಯಾಚರಣೆ ಮಾಡಿದರು. ಜ್ಹೋಕರ್ ಗಾಯಗೊಂಡು ಆಸ್ಪತ್ರೆ ಸೇರಿದ.ಕಳೆದ ವಾರ ಈತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ

 

Leave a Reply

Your email address will not be published.