ಚಂಡೀಘಡ್ ನ ರಾಕ್‍ಗಾರ್ಡನ್

-ಪ್ರೊ. ಎಂ. ಲೀಲಾವತಿ

mlನಗರಗಳು ಯಾಂತ್ರಿಕವಾಗಿ ಬೆಳೆಯುತ್ತಾ ಹೋದಂತೆ ಅನೇಕ ಸಮಸ್ಯೆಗಳ ಆಗರಗಳಾಗಿ ಬಿಡುತ್ತಿರುವುದು ವಾಸ್ತವ ಸಂಗತಿಯಾಗಿದೆ. ಹುಚ್ಚಾಪಟ್ಟೆ ಬೆಳೆಯುತ್ತಿರುವ ನಗರಗಳನ್ನು ನೋಡುವಾಗ ಇವುಗಳ ನಿಯಂತ್ರಣವಾಗಬಾರದೇ ಎನಿಸುತ್ತದೆ. ಆದರೂ ಇದೆಲ್ಲದರ ನಡುವೆ ನಗರಗಳಿಗೊಂದು ಪೂರ್ವಯೋಜಿತ ಕ್ರಮವಿದ್ದು ಅದರಂತೆ ರೂಪುಗೊಂಡರೆ ನಗರಗಳು ಸಹ್ಯವಾಗಲೂ ಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪಂಜಾಬ್‍ನ ಚಂಡೀಘಡ್.

ಚಂದೀಘಡ್ ಒಂದು ಸುಂದರವಾದ ನಗರ. ಪೂರ್ವಯೋಜನೆಯೊಡನೆ ಕಟ್ಟಲ್ಪಟ್ಟಿರುವುದು. ಒಟ್ಟು ನಗರವೇ ವಿಶಾಲವಾದ ರಸ್ತೆಗಳಿಂದ, ಸುಸಜ್ಜಿತವಾದ ಕಟ್ಟಡಗಳಿಂದ, ಕೂಡಿದ್ದು ‘ಟ್ರ್ಯಾಫಿಕ್ ಜಾಮ್’ ಗಳಿಂದ ಮುಕ್ತವಾಗಿದೆ. ಬೆಂಗಳೂರಿನ ಜನದಟ್ಟಣೆಯ, ತಲೆ ಚಿಟ್ಟುಹಿಡಿಸುವ ವಾಹನ ಸಂಚಾರದ ಗಜಿಬಿಜಿಯಿಂದ ಬಂದ ನನ್ನಂತವರಿಗೂ ಇದೊಂದು ನೆಮ್ಮದಿಯ ತಾಣವಾಗಿ ಕಂಡದ್ದು ಸಹಜವೇ ಆಗಿತ್ತು. ಈ ನಗರದಲ್ಲಿ ಮತ್ತು ಸುತ್ತಮುತ್ತ ಕೆಲವು ಮೈಲಿಗಳ ಅಂತರದಲ್ಲಿ ಅನೇಕ ಸುಂದರವಾದ ಪ್ರೇಕ್ಷಣೀಯ ಸ್ಥಳಗಳು ಗಿರಿಧಾಮಗಳುಯಿವೆ.

ನಾನು ನೋಡಿದ ಅದ್ಭುತವಾದ ಸ್ಥಳ ಚಂಡೀಘಡ್‍ನ ಹೃದಯ ಭಾಗದಲ್ಲಿರುವ ‘ರಾಕ್‍ಗಾರ್ಡನ್’ (ಕಲ್ಲಿನ ವನ) ಕಲ್ಲಿನಂಥ ಕಲ್ಲೂ ಸಹ ಹೃದಯವಂತರ ಕೈಗೆ ಸಿಕ್ಕಾಗ ಸುಕೋಮಲವಾಗಿ ಕಲಾತ್ಮಕವಾಗಿ ಅರಳಿ ನಿಲ್ಲಬಹುದೆಂಬುದಕ್ಕೆ ಕರ್ನಾಟಕದ ಶಿಲ್ಪವೈಭವಗಳ ತಾಣವಾಗಿರುವ ಬೇಲೂರು, ಹಳೇಬೀಡು, ಸುಮಾತಪುರ ಮುಂತಾದವು ಚಿರಸಾಕ್ಷಿಯಾಗಿವೆ. ಇವು ಶತಮಾನಗಳ ಹಿಂದಿನ ಕಲಾಕೃತಿಗಳು. ಆದರೆ ಈ ಆಧುನಿಕ ಸಂದರ್ಭದಲ್ಲಿ ನಮ್ಮ ಸುತ್ತಲಿನ ಪ್ರಕೃತಿಯ ಮೇಲೆ ಧಾಳಿಯಿಡುತ್ತಿರುವ ನಮ್ಮ ಆಕ್ರಮಣಶೀಲ ಪ್ರವೃತ್ತಿಗೆ ಅಲ್ಲಲ್ಲಿ ಆಗಾಗ ಕೆಲವು ಸಂವೇದನಾಶೀಲರು ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿರುವುದರಿಂದ ‘ಕಲ್ಲಿನ ವನಗಳು’ ತಲೆ ಎತ್ತಿವೆ. (ಕರ್ನಾಟಕದ ಕೆಲವು ಭಾಗಗಳಲ್ಲಿ, ಭಾರತದ ಕೆಲವು ಕಡೆಗಳಲ್ಲಿ ಈ ಪ್ರಯತ್ನಗಳು ನಡೆದಿವೆ).

chandighar 1 dec 15 042ಚಂಡೀಘಡ್‍ನ ರಾಕ್‍ಗಾರ್ಡನ್ ವಿಶಾಲವಾದ ಸುಂದರವಾದ ಸಖ್‍ನಾಲೇಕ್‍ನ ಪಕ್ಕದಲ್ಲಿದೆ. ಪದ್ಮಶ್ರೀ ನೇಕ್‍ಚಂದ್ ಎನ್ನುವ ಮಹಾನ್ ಸಹೃದಯಿಯ ಸಾಹಸದಿಂದ ಇದು ತಲೆಯೆತ್ತಿದೆ. ನೇಕ್‍ಚಂದ್ 1947 ರ ಸಮಯದಲ್ಲಿ ಭಾರತ ವಿಭಜನೆಯ ಹಿನ್ನೆಲೆಯಲ್ಲಿ ಅಂದಿನ ಪಾಕಿಸ್ತಾನದಿಂದ ಇಂದಿನ ಚಂಡೀಘಡ್‍ಗೆ ವಲಸೆ ಬಂದ ಕುಟುಂಬದವನು. (ಇವನ ಜನ್ಮಸ್ಥಳ ಶಂಕರ್‍ಘಡ್, ಗುರದಾಸ್‍ಪುರ ಜಿಲ್ಲೆ ಈಗ ಇದು ಪಾಕಿಸ್ತಾನದಲ್ಲಿದೆ)

1951 ರ ಹೋತ್ತಿಗೆ ಚಂಡೀಘಡ್‍ನ್ನು ಯೋಜಿತ ನಗರ ಮಾಡುತ್ತಿದ್ದ ಸಂದರ್ಭದಲ್ಲಿ ಈತ ಠಿತಿಜಯಲ್ಲಿ ರೋಡ್ಸ್ ಇನ್ಸ್ ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ. ಯೋಜಿತ ನಗರ ನಿರ್ಮಾಣದ ಸಂದರ್ಭದಲ್ಲಿ ಅನೇಕ ಕಟ್ಟಡಗಳನ್ನು ಉರುಳಿಸಲಾಗುತ್ತಿತ್ತು. ನೇಕ್‍ಚಂದ್ ತನ್ನ ಬಿಡುವಿನ ವೇಳೆಯಲ್ಲಿ ನಿರ್ನಾಮಗೊಳ್ಳುತ್ತಿದ್ದ ಕಟ್ಟಡಗಳ ಹಲವು ವಿಧಧ ಸಿರಾಮಿಕ್ ಗಾಜು, ಮೊಸಾಯಿಕ್, ಕಲ್ಲುಗಳ ಚೂರುಗಳು ಹೀಗೆ ಕಸವಾಗುತ್ತಿದ್ದ ಅನೇಕ ತುಣುಕುಗಳನ್ನು ಸಂಗ್ರಹಿಸಿಕೊಂಡು ಸುಖನಾಲೇಕ್‍ನ ಹಿಂಭಾಗದಲ್ಲಿದ್ದ ದಟ್ಟ ಕಾಡಿನಲ್ಲಿ ಇರಿಸುತ್ತಿದ್ದ. 1902 ರಲ್ಲಿ ಜನರು ಈ ಸ್ಥಳಕ್ಕೆ ಹೋಗದಂತೆ ಸರ್ಕಾರ ನಿಶಿದ್ಧವನ್ನು ಘೋಶಿಸಿತು.
ಈ ಸ್ಥಳ ಜನವಸತಿಗೆ ಯೋಗ್ಯವಲ್ಲದ ಸ್ಥಳವೆಂದೂ ಸರ್ಕಾರ ನಿರ್ಧರಿಸಿತ್ತು. ಈ ಸ್ಥಳದಲ್ಲಿಯೇ ಬಹಳ ಗೋಪ್ಯವಾಗಿ (1957 ರಿಂದ) ಈತ ಪವಿತ್ರವಾದ ಸುಖ್ರಾನಿರಾಜ ಮನೆತನದ ಒಂದು ಹಿನ್ನೆಲೆಯಲ್ಲಿ ತನ್ನ ಕಲ್ಪನೆಗೆ ಅನುಗುಣವಾಗಿ ತಾನು ಸಂಗ್ರಹಿಸಿದ್ದ ಕಚ್ಚಾವಸ್ತುಗಳಿಂದ ಸುಂದರವಾದ ಕೋಟೆಯನ್ನು ನಿರ್ಮಿಸಿದ. ಇದು ಅತ್ಯಂತ ರಹಸ್ಯವಾಗಿತ್ತು. ನಂತರ ಸುಮಾರು ಹದಿನೆಂಟು ವರ್ಷಗಳವರೆಗೆ ಅಗೋಚರವಾಗಿತ್ತು. ಸುಮಾರು ಹದಿಮೂರು ಎಕರೆ ಜಾಗದಲ್ಲಿ ಕಲ್ಲಿನವನದ ಹಾಗೆ ಕಾಣುವ ಒಂದು ವಿಶಿಷ್ಟ ಆಕಾರದ ಕೋಟೆಯಿದಾಗಿತ್ತು. ಸುಮಾರು 1975 ರ ಹೊತ್ತಿಗೆ ಈ ಸ್ಥಳ ಇಲ್ಲಿ ನಿರ್ಮಾಣವಾಗಿರುವ ಈ ಅಪೂರ್ವ ವನ ಸರ್ಕಾರದ ಗಮನಕ್ಕೆ ಬಂದಿತು. ಆಗ ಇದೊಂದು ಕಾನೂನುಬಾಹಿರ ಕೆಲಸವೆಂದು ಸರ್ಕಾರ ಇದನ್ನು ನಾಶಪಡಿಸುವ ಆಲೋಚನೆಯನ್ನು ಮಾಡಿತ್ತು.

chandighar 1 dec 15 031ಆದರೆ ಜನರ ಬೆಂಬಲದಿಂದ ಇದೊಂದು ಪ್ರವಾಸಿ ತಾಣವಾಗಿ ಉಳಿಸಿಕೊಳ್ಳಲು ಸೀಕ್‍ಚಂದ್ ಪ್ರಯತ್ನವನ್ನು ಮಾಡಿ ಯಶಸ್ವಿಯಾದ. ಈತನ ಹೋರಾಟಕ್ಕೆ ಫಲ ದೊರೆತು 1986ರ ನಂತರ ಸಾರ್ವಜನಿಕ ವೀಕ್ಷಣೆಗೆ ತೆರವಾಯಿತು. ಈತನನ್ನು ಸಖ್‍ಡಿವಿಜನ್‍ಲ್ ಎಂಜನಿಯರ್ ಆಫ್ ರಾಕ್‍ಗಾರ್ಡನ್ ಎಂದು ನೇಮಿಸಿ 50 ಜನ ಕೆಲಸಗಾರರನ್ನು ಇವನ ನೆರವಿಗೆ ಕೊಟ್ಟು ಈ ಸ್ಥಳವನ್ನು ಮತ್ತಷ್ಟು ಸುಂದರ ಸುಸಜ್ಜಿತ ತಾಣವಾನ್ನಾಗಿಸಲು ಸರ್ಕಾರ ಸಹಕರಿಸಿತು. ರಾಕ್‍ಗಾರ್ಡನ್ ಚಿತ್ರಹೊಂದಿದ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ವೀಕ್ಷಕರ ಆಕರ್ಷಣೆಯಲ್ಲಿ ತಾಜ್‍ಮಹಲಿನ ನಂತರ ಸ್ಥಾನ ಇದಕ್ಕಿದೆ ಎಂದು ಹೇಳುತ್ತಾರೆ. ಹೀಗೆ ‘ಕಸದಿಂದ ರಸ’ ಎನ್ನುವಂತೆ ಕಸದರಾಶಿಯಿಂದ ಮೈದಳೆದು ಸುಂದರ ಕಲಾಕೃತಿಯಾಗಿ ಇಂದು ಜನಾಕರ್ಷಕ ಸ್ಥಳವಾಗಿ ನಿಂತಿರುವುದು ಕಲಾಸಹೃದಯಿಯೊಬ್ಬನ ಅಪೂರ್ವ ಶ್ರಮದಿಂದ.

ಗಾರ್ಡನ್‍ನ ಒಳಕ್ಕೆ ಪ್ರವೇಶಿಸುವ ಮುಂಭಾಗದಲ್ಲಿ ಪರಿಚಯಾತ್ಮಕ ಶಿಲಾಫಲಕವನ್ನು ನಿಲ್ಲಿಸಲಾಗಿದೆ. ಒಳಹೋಗುತ್ತಿದ್ದಂತೆ ಪುರಾತನವಾದ ಪಂಜಾಬಿನ ಹಳ್ಳಿಯ ಮನೆಯ ಪ್ರಾಕಾರದೊಳಹೊಕ್ಕ ಅನುಭವ ನಮಗಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ಅನೇಕ ಸಣ್ಣ ಸಣ್ಣ ಚಣಕು ಕಲ್ಲನ್ನು ಜೋಡಿಸಿ ಮಾಡಿದ ಗೋಡೆಗಳು ಅದರ ಮೇಲ್ಭಾಗದಲ್ಲಿ ಅನೇಕ ಪ್ರಾಣಿಗಳನ್ನು ಕಲ್ಲನ್ನು ಜೋಡಿಸಿ ನಿರ್ಮಿಸಿ ನಿಲ್ಲಿಸಲಾಗಿದೆ. ಕೋತಿಗಳು, ಜಿಂಕೆಗಳು, ಶ್ವಾನಗಳು, ಹಕ್ಕಿಗಳು ಹೀಗೆ ಸಣ್ಣ ಸಣ್ಣ ಕಲ್ಲುಗಳನ್ನು ಜೋಡಿಸಿ ನಿಲ್ಲಿಸಲಾಗಿದೆ. ಮುಂದುವರೆದಂತೆ ಗೋಡೆಗಳಿಗೆ ನೀರಿನಕೊರೆತದಿಂದ ವಿವಿಧಾಕಾರದಲ್ಲಿ ಕೊರಕಲಾದ ಕಲ್ಲುಗಳ ಸುಂದರ ಜೋಡಣೆಯ ಸಾಲುಗಳು ಅಲ್ಲಲ್ಲಿ ಕಲ್ಲುಗಳು ಸಹಜವಾಗಿಯೇ ಕೆಲವು ಸ್ವರೂಪಗಳನ್ನು ಪಡೆದಿರುವಂಥವುಗಳನ್ನು ತಂದು ನಿಲ್ಲಿಸಿದ್ದಾರೆ.
ಅವುಗಳಲ್ಲಿ ಕೆಲವು ಮನುಷ್ಯರ ಹಾಗೆ, ನಂದಿಗಳ ಹಾಗೆ, ಕೋತಿಗಳ ಹಾಗೆ, ಆನೆಗಳ ಹಾಗೆ-ಹೀಗೆ ವಿವಿಧ ರೀತಿಯಲ್ಲಿ ಪ್ರಾಕೃತಿಕವಾಗಿಯೇ ನಿರ್ಮಿತವಾದ ಅನೇಕ ಸಣ್ಣ-ದೊಡ್ಡ ಕಲ್ಲುಗಳನ್ನು ಕಲಾತ್ಮಕವಾಗಿ ಯೋಚಿಸಿ ನಿಲ್ಲಿಸಲಾಗಿದೆ. ಅಲ್ಲಲ್ಲಿ ಸಣ್ಣ-ದೊಡ್ಡ ಕಲ್ಲು ಹಾಸು ಮಂಟಪಗಳು ನಿರ್ಮಾಣಗೊಂಡಿವೆ. ಅಲ್ಲಿ ನಡುಮಧ್ಯದಲ್ಲೊಮ್ಮೆ ನಿಂತು ತಲೆ ಎತ್ತಿ ನೋಡಿದರೆ ಮೇಲೆ ನೀಲಾಗಾಸ ನಮ್ಮ ಸುತ್ತಲೂ ವಿಶಿಷ್ಟರೀತಿಯ ಶಿಲಾವಿನ್ಯಾಸಗಳು ಒಂದು ಕ್ಷಣ ನಮ್ಮನ್ನು ಶಿಲಾಯುಗದೊಳಗೆ ನಿಲ್ಲಿಸಿಬಿಡುತ್ತವೆ.

ಹೀಗೆ ಮುಂದೆ ಸಾಗುತ್ತಿದ್ದಂತೆ ಹಲವು ಕಡೆಯಲ್ಲಿ ನಾವು ಪ್ರವೇಶಿಸುವ ದ್ವಾರ ಅತಿಸಣ್ಣದಾಗಿ ಬಿಡುತ್ತದೆ. ಜಾಗರೂಕತೆಯಿಂದ ತಲೆತಗ್ಗಿಸಿ ಸಾಗಬೇಕಾಗುತ್ತದೆ. ಮಧ್ಯಭಾಗದಲ್ಲಿ ಒಂದು ವಿಶಾಲವಾದ ವೇದಿಕೆ ನಿರ್ಮಾಣಗೊಂಡಿದೆ. ಮೆಟ್ಟಿಲುಗಳನ್ನು ಅರ್ಧಚಂದ್ರಾಕಾರದಲ್ಲಿ ನಿರ್ಮಿಸಿ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ರಂಗಮಂದಿರ (ಬಯಲು) ಇದೆ. ಪಕ್ಕದಲ್ಲಿ ಒಂದು ಸಣ್ಣ ಜಲಪಾತಗಳನ್ನು (ಝರಿ) ನಿರ್ಮಿಸಿದ್ದಾರೆ. ತೆಳುವಾಗಿ ಮೇಲಿಂದ ಬೀಳುವ ಝರಿಯ ನಡುವೆ ನಿಂತು ಪೋಟೋ ತೆಗೆಸಿಕೊಳ್ಳುವ ವೀಕ್ಷಕರ ದಂಡಂತು ಇಲ್ಲಿ ನಿರಂತರ. ಈ ಭಾಗದಿಂದ ಎರಡು ಹಂತಗಳಲ್ಲಿ ಸಾಗುವ ಹಾಗೆ ಹಾದಿಯನ್ನು ನಿರ್ಮಿಸಿದ್ದಾರೆ. ಸುತ್ತಲೂ ಬಂಡೆಗಳು ಬಂಡೆಗಳ ನಡುವೆ ಸಾಗಿ ಹೋಗುವ ಹಾದಿ ಕೆಳ ಹಂತದಿಂದ ಮೇಲು ಹಂತಕ್ಕೆ ಹೋದರೆ ಜಯಪುರದ ಅರಮನೆಯಲ್ಲಿ ಯೋಜಿಸಿರುವ ಹಾಗೆ ಕಾಣುವ ಸಣ್ಣ ಸಣ್ಣ ಬಾಲ್ಕಾನಿಗಳನ್ನು ನಿರ್ಮಿಸಿದ್ದಾರೆ.

ಸಣ್ಣ ಜಲಪಾತದ ಮಧ್ಯದಿಂದ ಒಂದು ಗೋಲಾಕಾರದ ಬಂಡೆಯನ್ನು ನಿರ್ಮಿಸಿ ಅಲ್ಲಿಂದ ಮತ್ತೊಂದು ಕಡೆಗೆ ಸ್ವಲ್ಪ ದೂರದಲ್ಲಿ ಮತ್ತಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಕಾಣುವಂತೆ ನಿರ್ಮಿಸಲಾಗಿದೆ. ಇದೊಂದು ಸುಂದರ ದೃಶ್ಯವಾಗಿ ನೋಡುವ ಕಣ್ಣಿಗೆ ಆನಂದದ ಹಬ್ಬ. ನೆಲಹಾಸಿನ ಮೇಲೆ ಕೆಲವು ಕಡೆಗಳಲ್ಲಿ ಬಹಳ ಜೋಪಾನವಾಗಿ ನಡೆಯಬೇಕು. ಏಕೆಂದರೆ ಕೆಂಪುಬಣ್ಣದ ಗ್ರಾನೈಟ್‍ನಂತಹ ಕಲ್ಲುಗಳು ಜಾರುವ ಸಂಭವವೂ ಉಂಟು. ಈ ಹಾದಿಯ ಉದ್ದಕ್ಕೂ ಅನೇಕ ರೀತಿಯ ಕಲ್ಲಿನ ಗೊಂಬೆಗಳು ನಮ್ಮನ್ನು ಎದುರುಗೊಳ್ಳುತ್ತವೆ. ರಾಜಾಸ್ಥಾನಿ, ಪಂಜಾಬಿಯ ವಿಶಿಷ್ಟ ಜಾನಪದ ಶೈಲಿಯ ವಿನ್ಯಾಸದ ಬೊಂಬೆಗಳು ಎಲ್ಲವೂ ಕಲ್ಲಿನವು ಕೆತ್ತಿರುವ ಕಲ್ಲಿನವಲ್ಲ. ಬದಲಾಗಿ ಕಲ್ಲುಗಳನ್ನೇ ಜೋಡಿಸಿ ಮಾಡಲಾಗಿದೆ. ಕೆಲವು ಗೊಂಬೆಗಳಲ್ಲಿ ಆಕರ್ಷಕ ಗಾಢ ಬಣ್ಣಗಳನ್ನು ಬಳಿದು ಮತ್ತೂ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ.

ಎರಡು, ಮೂರು ಅಂತಸ್ತುಗಳನ್ನು ನಿರ್ಮಿಸಿ, ಎಲ್ಲ ಅಂತಸ್ತುಗಳಲ್ಲೂ ಬೇರೆ-ಬೇರೆ ಜಾತಿಯ ಕಲ್ಲುಗಳ ಜೋಡಣೆ, ಜೇನುಗೂಡಿನ ಹಾಗೆ ಕಾಣುವ ತಿಳಿಕೆಂಪುಬಣ್ಣದ ಕಲ್ಲುಗಳನ್ನು ಜೋಡಿಸಿರುವುದು ಅತಿಕಷ್ಟದ ಕುಸುರಿ ಕೆಲಸವಾಗಿದೆ. ಇಲ್ಲಿಂದ ಮುಂದೆ ಸಾಗಿದಂತೆ ಸಣ್ಣದೊಂದು ಕೊರಕಲು ಹಾದಿಗುಂಟ ಸಾಗಿ ಬಂದರೆ, ಅಲ್ಲಿ ಈ ಹಿಂದೆ ಬಂಡೆಯನಡುವಿನಿಂದ ಕಂಡ ಜಲಪಾತದ ನೇರ ನೋಟವನ್ನು ನಾವು ಅನುಭವಿಸುತ್ತೇವೆ. ಇದು ಸಾಕಷ್ಟು ಎತ್ತರದಿಂದ ನೀರು ಧುಮ್ಮಿಕ್ಕುವಂತೆ ನಿರ್ಮಿಸಲಾಗಿದೆ. ಇದನ್ನು ಕಟಕಟೆಯ ಆಚೆನಿಂತು ವೀಕ್ಷಿಸುವಂತೆ ಮಾಡಿದ್ದಾರೆ. ಸುತ್ತಲೂ ಸಣ್ಣ-ದೊಡ್ಡ ಮರಗಳನ್ನು ಬೆಳೆಸಿ ಸಣ್ಣದೊಂದು ಕಾಡಿನ ನಡುವಿನ ಜಲಪಾತದ ಹಾಗೆ ಮಾಡಿ, ಅದಕ್ಕೊಂದು ಸಹಜತೆಯನ್ನು ನೀಡಲಾಗಿದೆ. ಅಲ್ಲಿಂದ ಮುಂದೆ ಬಂದರೆ, ಅದೊಂದು ವಿಶಾಲವಾದ ಬಯಲಿಗೆ ನಾವು ಬರುತ್ತೇವೆ.

chandighar 1 dec 15 021ಈ ಬಯಲಿಗೆ ಸುತ್ತ ದೊಡ್ಡ ಪ್ರಕಾರದ ಗೋಡೆ ನಿರ್ಮಿತವಾಗಿದೆ. ಈ ಗೋಡೆಗಳ ಮೇಲೆ ದೊಡ್ಡ ಪ್ರಮಾಣದ ಪ್ರಾಣಿಗಳ ಗೊಂಬೆಗಳನ್ನು ಚೂರು ಕಲ್ಲುಗಳನ್ನು ಬಳಸಿ ನಿರ್ಮಿಸಿ ನಿಲ್ಲಿಸಿದ್ದಾರೆ. ಪ್ರಾಕಾರದ ಗೋಡೆಗಳ ಕೆಳಗೆ ಸುಮಾರು ಇಪ್ಪತ್ತು ಮೂವತ್ತು ಉಯ್ಯಾಲೆಗಳನ್ನು ತೂಗುಹಾಕಿದ್ದಾರೆ. ಪ್ರವಾಸಿಗರಿಗಂತೂ ಈ ಉಯ್ಯಾಲೆಗಳು ಮತ್ತೊಂದು ಆಕರ್ಷಣೆ ಪಂಜಾಬಿನ ಜನರಿಗಂತೂ ಇದು ಸಂಭ್ರಮದ ‘ಬೈಸಾಕಿ ಹಬ್ಬದ’ (ನಮ್ಮ ಯುಗಾದಿ ಹಬ್ಬ ಇಲ್ಲಿ ಬೈಸಾಕಿ ಎಂದು ಆಚರಿಸಲ್ಪಡುತ್ತದೆ.) ನೆನಪನ್ನು ಮಾಡಿಕೊಡುತ್ತದೆ. ಈ ಆವರಣದಲ್ಲಿಯೂ ದೊಡ್ಡ ಬಯಲು ರಂಗಮಂದಿರವನ್ನು ನಿರ್ಮಿಸಿ ಸಾಂಸ್ಕøತಿಕ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅನುವುಮಾಡಿಕೊಡಲಾಗಿದೆ.

ಇಲ್ಲಿಂದ ಹೊರಗೆ ಬರುವ ದಾರಿಯನ್ನು ನಿರ್ಮಿಸಲಾಗಿದೆ. ಹೊರಕ್ಕೆ ಬರುವಾಗಲೂ ಮತ್ತೆ ಕೋಟೆಯಂತೆ ನಿರ್ಮಾಣಗೊಂಡ ಭಾಗದಿಂದ ಬರಬೇಕು. ಈ ಕೋಟೆಯ ಇಕ್ಕೆಲಗಳಲ್ಲಿ ಬಳೆಯಚೂರುಗಳನ್ನು ಬೀಳ್ಕೊಡುತ್ತವೆ. ಹೊರಬಂದಾಗ ನಾವೊಂದು ಅದ್ಭುತ ಪ್ರಪಂಚದೊಳಗೆ ಸುಮಾರು ಎರಡು-ಮೂರು ಗಂಟೆಗಳ ಕಾಲ ವಿಹರಿಸಿಬಂದ ಧನ್ಯತಾಭಾವ ನಮ್ಮದಾಗಿತ್ತು.

Leave a Reply

Your email address will not be published.