ಗೌರಿ ನೆನಪಿನಲ್ಲಿ – ಚಿಂತನೆಗಳ ಹತ್ಯೆಯ ಜಾಡು ಹಿಡಿದು

ನಾ ದಿವಾಕರ

ಕಳೆದ ಸೆಪ್ಟಂಬರ್ 5 ರಂದು ಸಂಭವಿಸಿದ ಗೌರಿ ಲಂಕೇಶ್ ಅವರ ಹತ್ಯೆ ನಮ್ಮ ದೇಶ ಮತ್ತು ಸಮಾಜ ಸಾಗುತ್ತಿರುವ ಮಾರ್ಗದ ದಿಕ್ಸೂಚಿ . ಪ್ರತಿರೋಧದ ದನಿಗಳನ್ನು ಅಡಗಿಸುವ ವ್ಯವಸ್ಥಿತ ಸಂಚಿಗೆ ಗೌರಿ ಬಲಿಯಾದರು. ಗಾಂಧಿಯಿಂದ ಗೌರಿಯವರೆಗೆ ಈ ಹಂತಕ ಪರಂಪರೆ ತನ್ನ ಅಂತಃಸತ್ವವನ್ನು ಕಾಪಾಡಿಕೊಂಡೇ ಬಂದಿದೆ. ಕಳೆದ ಮೂರು ನಾಲ್ಕು ದಶಕಗಳ ರಾಜಕೀಯ ಬೆಳವಣಿಗೆಗಳು, ಸಾಂಸ್ಕøತಿಕ ಪಲ್ಲಟಗಳು, ಸಾಮಾಜಿಕ ಕ್ಷೋಭೆ ದೇಶಾದ್ಯಂತ ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಿರುವುದನ್ನು ಗೌರಿ ಹತ್ಯೆಯಲ್ಲಿ ಕಾಣಬಹುದು.

ಬಂದೂಕು ಸಂವಹನ ಮಾಧ್ಯಮದ ಒಂದು ಅಂಗವಾಗಿ ಪರಿಣಮಿಸಿದರೆ ಪ್ರಜಾತಂತ್ರ ಮೌಲ್ಯಗಳು ಮಾತ್ರವೇ ಅಲ್ಲ ಮಾನವೀಯ ಸಂವೇದನೆ ಮತ್ತು ಮೌಲ್ಯಗಳೂ ನಶಿಸಿಹೋಗುತ್ತವೆ ಎನ್ನುವ ದುರಂತ ಸತ್ಯ ನಮ್ಮ ಕಣ್ಣೆದುರಿದೆ. ಇಲ್ಲಿ ಪ್ರಶ್ನೆ ಹಂತಕರು ಯಾರು ಎನ್ನುವುದಲ್ಲ ಹತ್ಯೆ ಏಕೆ ನಡೆಯುತ್ತದೆ ಎನ್ನುವುದಾಗಿದೆ. ಅಥವಾ ಇದು ಕೆಲವೇ ವ್ಯಕ್ತಿಗಳು ಸಂಚು ರೂಪಿಸಿ ನಡೆಸುವ ದುಷ್ಕøತ್ಯವೂ ಅಲ್ಲ. ಒಂದು ವ್ಯವಸ್ಥಿತ ಪರಂಪರೆಯೇ ಈ ದುಷ್ಟಕೂಟದ ಹಿಂದಿರುವುದನ್ನು ಅಲ್ಲಗಳೆದರೆ ಬಹುಶಃ ಭಾರತದಲ್ಲಿ ಈ ದುರುಳತನಕ್ಕೆ ಬಲಿಯಾದವರಿಗೆ ಪ್ರತ್ಯೇಕ ಮಸಣವನ್ನೇ ನಿರ್ಮಿಸಬೇಕಾಗುತ್ತದೆ.

ಹೌದು ಗೌರಿ ಲಂಕೇಶ್ ಅವರ ಹತ್ಯೆ ಈ ಜಾಡನ್ನು ಸ್ಪಷ್ಟವಾಗಿ ತೋರುತ್ತದೆ. ವಿಚಾರವಾದಿ ಚಿಂತಕರಾದ ಗೋವಿಂದ ಪನ್ಸಾರೆ, ಧಬೋಲ್ಕರ್, ಎಂ ಎಂ ಕಲಬುರ್ಗಿಯವರ ಹತ್ಯೆಯ ನಿಗೂಢತೆ ಬಯಲಾಗುವ ಮುನ್ನವೇ ಈ ಸಾಲಿಗೆ ಗೌರಿ ಸೇರ್ಪಡೆಯಾದರು . ಇದು ವ್ಯಕ್ತಿಯ ವಿರುದ್ಧ ನಡೆದಿರುವ ದೌರ್ಜನ್ಯವಲ್ಲ, ಒಂದು ಚಿಂತನಾವಾಹಿನಿಯ ವಿರುದ್ಧ ಸಾರಿರುವ ಸಮರ. ಈ ಭೀಕರ ಸಮರದಲ್ಲಿ ಒಂದು ಪಡೆ ಶಸ್ತ್ರಸಜ್ಜಿತವಾಗಿ ರಣರಂಗದಲ್ಲಿದ್ದರೆ ಮತ್ತೊಂದು ಪಡೆ ಕೇವಲ ಬೌದ್ಧಿಕ ಅಸ್ತ್ರಗಳನ್ನು ಮಾತ್ರವೇ ಬಳಸುತ್ತಿದೆ. ಲೇಖನಿ ಕತ್ತಿಗಿಂತಲೂ ಹರಿತ ಎಂಬ ವಾಕ್ಕು ಸಾರ್ವಕಾಲಿಕ ಸತ್ಯ ಆದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಲೇಖನಿ ಬಳಸುವವರ ಚಿಂತನೆಗಳನ್ನೇ ಹೊಸಕಿ ಹಾಕಲು ಸಜ್ಜಾಗುತ್ತಿರುವುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ.

ಗೌರಿ ಲಂಕೇಶ್ ಹತ್ಯೆಗೆ ಸರ್ಕಾರದ ನಿರ್ಲಕ್ಷ್ಯ, ಕಾನೂನು ವೈಫಲ್ಯ, ಪ್ರಭುತ್ವದ ಧೋರಣೆ ಮೂಲ ಕಾರಣ ಎನ್ನುವುದು ಚರ್ಚಾಸ್ಪದ. ಆದರೆ ಅಪರಾಧಿಗಳನ್ನು ಶೋಧಿಸುವಲ್ಲಿ ಆಗುತ್ತಿರುವ ವಿಳಂಬ ಅಕ್ಷಮ್ಯ . ಭಾರತದ ಸಮಕಾಲೀನ ರಾಜಕಾರಣದಲ್ಲಿ ಪೋಷಿಸಿಕೊಂಡು ಬಂದಿರುವ ಒಂದು ವಿಕೃತ ಪರಂಪರೆ ಈ ಪ್ರಕ್ಷುಬ್ಧತೆಗೆ ಮೂಲಕ ಕಾರಣ ಎನ್ನುವುದು ನಿಸ್ಸಂದೇಹ ಸತ್ಯ . ವಿಚಾರವಾದ, ವೈಚಾರಿಕ ಮನೋಭಾವ, ವೈಜ್ಞಾನಿಕ ಧೋರಣೆ ಮತ್ತು ಸಮಾಜಮುಖಿ ಚಿಂತನೆಗಳ ವಿರುದ್ಧ ಅವ್ಯಾಹತವಾಗಿ ಹಲ್ಲೆ, ಆಕ್ರಮಣ, ದೌರ್ಜನ್ಯ ನಡೆಯುತ್ತಲೇ ಇದ್ದರೂ ಭಾರತೀಯ ಸಮಾಜದ ವಾಸ್ತವಕ್ಕೆ ವಿಮುಖವಾಗಿರುವುದು ನಾವು ನಾಗರಿಕತೆಯಿಂದ ಅನಾಗರಿಕ ಪ್ರಾಚೀನತೆಯತ್ತ ಹೊರಳುತ್ತಿರುವುದರ ಸಂಕೇತವಾಗಿ ತೋರುತ್ತದೆ.

ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳು ಇಡೀ ಜಗತ್ತನ್ನು ಒಂದು ಪುಟ್ಟ ಗ್ರಾಮವನ್ನಾಗಿ ಮಾಡುತ್ತದೆ ಎಂಬ ನವ ಉದಾರವಾದದ ಸಮರ್ಥಕರ ಮಾತುಗಳು ಇಂದು ಪ್ರಶ್ನಾರ್ಹವಾಗಿದೆ. ಏಕೆಂದರೆ ಈ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳು ಮಾನವೀಯ ಮೌಲ್ಯಗಳನ್ನು ಹೊಸಕಿ ಹಾಕುತ್ತಿವೆ. ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಚಿಂತನೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಮುಕ್ತವಾಗಿರುವುದು ಮನುಕುಲದ ದುರಂತ ಅಲ್ಲವೇ ? ಸಮಕಾಲೀನ ಭಾರತದ ಸಮಸ್ಯೆ ಎಂದರೆ ನಾಗರಿಕ ಸಮಾಜದ ಸಾಕ್ಷಿ ಪ್ರಜ್ಞೆ ಸತ್ತುಹೋಗಿದೆ. ಮಂದಿರ, ಮಸೀದಿಗಳ ಸಂಘರ್ಷದಲ್ಲಿ ಮಾನವೀಯ ನೆಲೆಗಳು ಭೂಗತವಾಗುತ್ತಿರುವುದನ್ನು ಕಂಡೂ ಕಾಣದಂತೆ ಮುನ್ನಡೆಯುತ್ತಿರುವ ಆಧುನಿಕ ಸಮಾಜ ತನ್ನೆಲ್ಲಾ ಜನಸಂಸ್ಕøತಿಯ ಕೊಂಡಿಗಳನ್ನು ಕಳಚಿಕೊಳ್ಳುತ್ತಿರುವುದನ್ನು ಮೌನವಾಗಿ ಗಮನಿಸುತ್ತಿದ್ದೇವೆ. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕತೆಯ ಅಸ್ಮಿತೆಗಳು ಮನುಜ ಪ್ರಜ್ಞೆಯನ್ನು ಸದ್ದಿಲ್ಲದೆ ಕೊಲ್ಲುತ್ತಿರುವುದನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ. ಹಾಗಾಗಿಯೇ ದಾದ್ರಿ, ಊನ ಮತ್ತು ಗೌರಿ ಕೆಲವೇ ಮನಸ್ಸುಗಳನ್ನು ಭಾಧಿಸುತ್ತವೆ. ಕೆಲವು ಮನಸ್ಸುಗಳ ಸಂಭ್ರಮಕ್ಕೆ ಕಾರಣವಾಗುತ್ತವೆ.

ಸಾವನ್ನು ಸಂಭ್ರಮಿಸುವ ವಿಕೃತ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುತ್ತಿರುವ ನವ ಭಾರತದ ಯುವ ಮನಸುಗಳು ಇತಿಹಾಸದ ಹೆಜ್ಜೆಗಳನ್ನೂ ಗುರುತಿಸದೆ, ಸಾಂಸ್ಕøತಿಕ ದನಿಗಳನ್ನೂ ಆಲಿಸದೆ, ಸಾಮಾಜಿಕ ಸ್ಪಂದನೆಯನ್ನೂ ಗ್ರಹಿಸದೆ ಕವಲು ಹಾದಿಯಲ್ಲಿ ನಿಂತಿದೆ. ಈ ಯುವ ಮನಸುಗಳನ್ನು ಮತಾಂಧತೆ, ಜಾತಿ ದ್ವೇóಷ ಮತ್ತು ಆರಾಧನಾ ಸಂಸ್ಕøತಿ ಮಲಿನಗೊಳಿಸುತ್ತಿದೆ. ಹಳೆಯ ಕನ್ನಡ ಸಿನಿಮಾ ಹಾಡೊಂದು ನೆನಪಾಗುತ್ತಿದೆ. ಕಲಾವತಿ ಚಿತ್ರದ ಜಯತೇ ಜಯತೇ ಸತ್ಯಮೇವ ಜಯತೇ ಹಾಡಿನಲ್ಲಿ “ ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ ” ಎಂಬ ಸಾಲು ಬರುತ್ತದೆ. ಈ ಸಾಲುಗಳು ಪ್ರಸ್ತುತ ಭಾರತದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವನ್ನು ಅಣಕಿಸುವಂತೆ ಕಾಣುತ್ತದೆ. ವ್ಯವಸ್ಥಿತವಾಗಿ ಬಿತ್ತಲಾಗಿರುವ ದ್ವೇಷದ ಬೀಜಗಳು ಮೊಳಕೆಯೊಡೆದಾಗ ಚಿವುಟಿ ಹಾಕುವ ಬದಲು ಸಂಭ್ರಮಿಸಿದ ಸಮಾಜ ಇಂದು ಈ ವಿಷವೃಕ್ಷಗಳಡಿ ನಲುಗಿಹೋಗುತ್ತಿದೆ. ಈ ವಿಷವೃಕ್ಷಗಳ ಟೊಂಗೆಗಳನ್ನು ಕಡಿದುಹಾಕಿದಷ್ಟೂ ಚಿಗುರುತ್ತವೆ. ಬಿತ್ತಲಾಗಿರುವ ವಿಷಬೀಜಗಳನ್ನು ಕಿತ್ತೊಗೆಯುವ ಪ್ರಯತ್ನಗಳನ್ನು ವ್ಯವಸ್ಥಿತ ಸಂಚಿನ ಮೂಲಕ ದಮನಿಸಲಾಗುತ್ತದೆ.

ಇಂದು ಭಾರತದ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾಗಿರುವುದು ಈ ಪ್ರಯತ್ನಗಳೇ ಆಗಿವೆ. ಸಂವೇದನೆ ಮತ್ತು ಮಾನವ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವ ಸಮಾಜದಲ್ಲಿ ಮತಾಂಧತೆ ಮತ್ತು ಮತೀಯ ಅಸ್ಮಿತೆಗಳೇ ಹುಟ್ಟು ಸಾವುಗಳನ್ನು ನಿರ್ಧರಿಸುವ ಮಾನದಂಡಗಳಾಗಿ ಪರಿಣಮಿಸಿರುವುದು ದುರಂತವಾದರೂ ಸತ್ಯ. ಇದೇ ಸಂದರ್ಭದಲ್ಲಿ ವಿಶ್ವಮಾನವ ಪ್ರಜ್ಞೆಯ ಸಾಕ್ಷಿ ಪ್ರಜ್ಞೆಯಾಗಿದ್ದ ಅಸಂಖ್ಯಾತ ದನಿಗಳು ಅಡಗಿಹೋಗಿವೆ. ಅಥವಾ ವ್ಯವಸ್ಥೆಯ ದಮನಕಾರಿ ಆಕ್ರಮಣಕ್ಕೆ ಅಂಜಿ ಮೌನಕ್ಕೆ ಶರಣಾಗಿವೆ. ವಿಷಬೀಜ ಬಿತ್ತಿದವರ ಮೌನಕ್ಕೂ ಈ ದನಿಗಳ ಮೌನಕ್ಕೂ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಸ್ಥಾಪಿತ ವ್ಯವಸ್ಥೆ ಮತ್ತು ಅಧಿಪತ್ಯ ರಾಜಕಾರಣ ಒಂದು ಕಾಲದ ಪ್ರತಿರೋಧದ ದನಿಗಳನ್ನು ಅಪ್ಪಿಕೊಂಡು ಆವಾಹನೆ ಮಾಡಿಕೊಂಡಿದ್ದು, ಪ್ರತಿರೋಧದ ದನಿಗಳು ಕ್ಷೀಣಿಸುತ್ತಲೇ ವ್ಯವಸ್ಥೆಯ ಗರ್ಭದಲ್ಲಿ ಲೀನವಾಗಿವೆ. ಈ ದನಿಗಳಿಗೆ ಮರು ಜೀವ ನೀಡುವುದು ಹೇಗೆ ? ಈ ಧ್ವನಿಗಳನ್ನು ಪ್ರತಿಧ್ವನಿಸುವುದು ಹೇಗೆ ? ಇದು ವೈಚಾರಿಕ ಪ್ರಜ್ಞೆಯ ಮುಂದಿರುವ ಸವಾಲು.
ಗೌರಿಯ ಜನ್ಮದಿನದಂದು (29 ಜನವರಿ) ಈ ಸವಾಲಿಗೆ ಸ್ಪಷ್ಟ ಉತ್ತರವನ್ನು ಕಂಡುಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ.

Leave a Reply

Your email address will not be published.