ಗೌರಿಯಾದಳು ಗೌರಿ

- ಶಿವಸುಂದರ್

ಗೌರಿ
ಸ್ವೈರ ವಿಹಾರಿ
ಪುಕ್ಕದಲ್ಲಿ ಸಿಲುಕಲೊಪ್ಪದ
ಅಪ್ಪನ ಮೆಚ್ಚಿನ ನವಿಲುಗರಿ

ಹಾರದ ಗರುಡಗಳು, ಓಡದ ಕುದುರೆಗಳ ನಡುವೆ
ತೆವಳುತ್ತಲೇ ಗಮ್ಯ ಸೇರಿದ ಇರುವೆ
ದೈತ್ಯ ಆಲದೊಳಗಿಂದ ಟಿಸಿಲೊಡೆದ
ಕೆಂಪುತಂಪಿನ ಹೊಂಗೆಯ ಹೂವೆ

ಕರ್ತೃ ಕರ್ಮಗಳು ಅರ್ಧದಲ್ಲೇ ನಿವೃತ್ತಿ ಘೋಷಿಸಿದರೂ
ಕ್ರಿಯೆಯಿಂದಲೇ ವಾಕ್ಯ ಪೂರೈಸಿದ ವಚನಕಾರ್ತಿ
ಸಂಭ್ರಮದ ವ್ಯಸನವಿಲ್ಲದೆ ಸಾರ್ಥಕತೆಯ ಗೀಳಿಲ್ಲದೆ
ಸತ್ತ ನಂತರವೂ ಸಾರ್ಥಕವಾಗಿ ಬದುಕುತ್ತಿರುವ ಸಂಗಾತಿ

ಹೊರಗೆ ಧಾವಂತವಿದ್ದರೂ ಒಳಗೆ ನಿಧಾನವಾದೆ
ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದೆ
ಒಳಗು ಹೊರಗೆಂಬ ಭಿನ್ನವಳಿಯುತ್ತಾ ಬಯಲು ಆಲಯವಾದೆ
ಜಗವನೆಲ್ಲಾ ತುಂಬಿಕೊಂಡ ಮಹಾಮನೆಯಾದೆ

ಸುಡುಸತ್ಯಗಳಿಗೆ ಸಂಯಮದ ನೀರೆರಚಲಿಲ್ಲ
ಬೆತ್ತಲೆಯ ಜಗತ್ತಿಗೆ ವಿದ್ವತ್ತಿನ ಬಟ್ಟೆ ತೊಡಿಸಲಿಲ್ಲ
ಸತ್ಯೋತ್ತರ ಮಿಥ್ಯೆಗಳಿಗೆ ಮಾಹಿತಿಯೆಂಬ ಮುದ್ರೆಯೊತ್ತಲಿಲ್ಲ
ಕಂಡದ್ದನ್ನು ಕಂಡಹಾಗೆಯಲ್ಲದೆ ಮತ್ತೇನನ್ನೂ ಬರೆಯಲಿಲ್ಲ

ಹೌದು,
ನಿನ್ನ ಮಾತಿನಲ್ಲಿ ಅಲ್ಲೆರಡು ಪದ, ಇಲ್ಲೊಂದು ಚಿಹ್ನೆ ಬೇಕಿರಲಿಲ್ಲ
ಅಂದಮಾತ್ರಕ್ಕೆ ಗುಂಡಿನ ಗುರಿಯೇನೂ ಬದಲಾಗುತ್ತಿರಲಿಲ್ಲ
ಕೊಂದಿದ್ದುಂಟೆ ಎಂದಾದರೂ ಅಡ್ಡಗೋಡೆಯ ಮೇಲೆ ಕೂತ ನಾಜೂಕಯ್ಯಗಳನ್ನು?
ಧರ್ಮಭೀರುವೇ ಆದರೂ ಕೊಂದರೇಕೆ ಗಾಂಧಿಯನ್ನು?

ಪ್ರೀತಿಯನ್ನು ಪ್ರೀತಿಸಿದೆ ಅದಕ್ಕೆ ದ್ವೇಷವನ್ನು ದ್ವೇಷಿಸಿದೆ
ಕರಗಿದೆ, ಕೊರಗಿದೆ, ಕಣ್ಣೀರಾದೆ..ಕನಲಿದೆ, ಕದನಕ್ಕಿಳಿದೆ
ಅಮ್ಮನಾದೆ, ಗುರುವಾದೆ, ಪದವಾದೆ, ಅರ್ಥವಾದೆ..ಅನ್ವರ್ಥವಾದೆ
ಕಪ್ಪಾದೆ, ಕೆಂಪಾದೆ, ನೀಲಿಯಾದೆ, ಹಸಿರಾದೆ, ಬಿಳಿಯಾದೆ..ಕಾಮನಬಿಲ್ಲಾದೆ
ಭರವಸೆಯಾದೆ, ಸಾಧ್ಯತೆಯಾದೆ, ಸಂಕೇತವಾದೆ, ಅಮರಳಾದೆ…
ಗೌರಿಯಾದೆ…ಗೌರಿಯಾದೆ..ಸಾವಿರದ ಗೌರಿಯಾದೆ..ಸಾವಿರಾರು ಗೌರಿಯರಾದೆ.

 

Leave a Reply

Your email address will not be published.