ಗೌರಿಮಯ ಲೋಕದೊಳು..

ಅರುಣ್ ಜೋಳದಕೂಡ್ಲಿಗಿ

-1-
ಅಂದು ಗಾಂಧಿ ಪ್ರತಿಮೆಗಳಿಗೆ
ಕಣ್ಣೀರು ಬಂದದ್ದು ಪವಾಡವೆಂದು
ಮಾಧ್ಯಮಗಳು ಕತೆ ಕಟ್ಟಿದವು..

ಅಹಿಂಸೆಯ ತಿಳಿನೀರ ಹಂಚುತ್ತಿದ್ದ
ಮರಿಮಗಳನ್ನು ತನ್ನ ಕೊಂದವರೇ
ಇಲ್ಲವಾಗಿಸಿದರೆಂದು
ತಡೆದ ದುಃಖದ ಕಟ್ಟೆಯೊಡೆದು
ಗಾಂಧಿ ಬಿಕ್ಕಳಿಸಿದ್ದು ಮಾತ್ರ
ಯಾರಿಗೂ ಕೇಳಿಸಲಿಲ್ಲ..

-2-

ನೀನು ಅಸಂಖ್ಯ ಚುಕ್ಕಿಗಳನ್ನಿಟ್ಟೆ
ನಾವು ಚುಕ್ಕಿಯಿಂದ ಚುಕ್ಕಿಗೆ ಚಲಿಸಿ
ಕೂಡುಗೆರೆ ಎಳೆದೆವು
ಅದೀಗ ದೇಶ ಧರ್ಮ ಲಿಂಗದ
ಗಡಿಗಳ ಅಳಿಸಿಕೊಂಡು
ಜಗದಗಲ ಗೌರಿರಂಗೋಲಿಯಾಗಿದೆ

ಅವ್ವ ಹೇಳುತ್ತಿದ್ದಳು
ಮನೆಮುಂದೆ ರಂಗೋಲಿಯಿದ್ದರೆ
ವಿಷಜಂತುಗಳು ಒಳಬರುವುದಿಲ್ಲವೆಂದು
ಇದೀಗ ಲೋಕದ ಮನೆಯಂಗಳದಿ
ನಿನ್ನದೇ ರಂಗೋಲಿ..

-3-
ನೀನಿಲ್ಲದ ಕ್ಷಣದಿಂದ ಈತನಕ
ಮೋಡಗಳ ಬಿಕ್ಕಳಿಕೆ ನಿಂತಿಲ್ಲ
ಇದೀಗ ನಿತ್ಯ ಸುರಿವ ಮಳೆ
ನಿನ್ನಗಲಿಕೆಯ ಕಣ್ಣೀರು..

ಅದಕ್ಕೇ ಇರಬೇಕು,
ಕೆರೆ ಗುಂಡಿ ಹಳ್ಳ ಕೊಳ್ಳಗಳಲ್ಲಿ
ಹರಿದು ನಿಂತ ನೀರಲ್ಲಿ
ನಮ್ಮ ಮುಖ ನೋಡಿಕೊಂಡರೆ
ನಿನ್ನ ಬಿಂಬವೇ ನಗುತ್ತದೆ.

ನನಗೆ ಖಾತ್ರಿಯಿದೆ
ಮುಂದೆ ಈ ನೀರು
ತಾಯ್ತನದ ಅಂತರ್ಜಲವಾಗಿ
ಲೋಕದ ಬಾಯಾರಿಕೆಯ
ತಣಿಸುವುದೆಂದು..

-4-
ನೀ ಅದೆಷ್ಟು ಸೌಹಾರ್ಧದ
ಬೀಜಗಳ ಕೂಡಿಸಿದ್ದಿ ಮಾರಾಯ್ತಿ
ಮೊಗೆದಷ್ಟು ಸಿಗುತ್ತಿವೆ

ಲೋಕದ ಗೌರಿಯರೆಲ್ಲಾ
ಆ ಬೀಜಗಳನ್ನಿಡಿದು ನಡೆದಿದ್ದಾರೆ
ಇದೀಗ ನೆಲ ಹಸಿಯಾಗಿದೆ
ಬಿತ್ತಿದ ಬೀಜಗಳು ಹುಸಿಹೋಗುವುದಿಲ್ಲ..

ನೀ ನೋಡುತ್ತಿರು
ಲೋಕದಲಿ ಸಮತೆಯ
ಗಿಡಗಳು ನಳನಳಿಸುತ್ತವೆ,
ನೀಲಿ, ಕೆಂಪು, ಬಿಳಿ
ಹೂಗಳು ಮಂದಹಾಸ ಬೀರುತ್ತವೆ,
ದುಂಬಿಗಳು ಈ ಹೂಗಳ
ಮಕರಂದ ಹೀರಿದ ಜೇನಿನ
ಸಿಹಿಯನ್ನು ಲೋಕಕ್ಕೆ ಹಂಚುತ್ತವೆ..

-5-

ಅಂದು ನೀ ಒಂಟಿಯಾಗಿದ್ದು
ದಣಿದು ಸಣಕಲ ದೇಹದೊಳಗೆ
ಕೀಚಲು ಧ್ವನಿಯಲ್ಲಿ
ಮನುಷ್ಯತ್ವದ ಹಾಡು ಹಾಡುತ್ತಿದ್ದಿ

ಇದೀಗ ಅಸಂಖ್ಯ
ಗೌರಿಯರು ಒಟ್ಟಿಗಿದ್ದೇವೆ
ನಿನ್ನ ಕನಸಿನ ದಾರಿಯಲ್ಲಿ ನಾವು
ದಣಿವರಿಯದೆ ನಡೆಯುತ್ತಿದ್ದೇವೆ
ದಾರಿ ಸಾಗುತ್ತಿದೆ
ಸಮಸಮಾಜದ ದಿಕ್ಕಿನೆಡೆಗೆ..
**

Leave a Reply

Your email address will not be published.