ಗೋರಖ್‍ಪುರದ ಮಕ್ಕಳೂ ಮಕ್ಕಳ ದಿನಾಚರಣೆಯೂ

ನಾ ದಿವಾಕರ

1954ರಲ್ಲಿ ಬಿಡುಗಡೆಯಾದ ಜಾಗೃತಿ ಹಿಂದಿ ಚಲನಚಿತ್ರದಲ್ಲಿ ರಾಷ್ಟ್ರೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬೆಸೆಯುವ ಮೂಲಕ ಅಸಂಖ್ಯಾತ ಗೀತೆಗಳನ್ನು ರಚಿಸಿರುವ ಮಹಾನ್ ಕವಿ ಪ್ರದೀಪ್ ( ಮೂಲ ನಾಮ ರಾಮಚಂದ್ರ ನಾರಾಯಣ್‍ಜಿ ದ್ವಿವೇದಿ) ಅವರ ಒಂದು ಹಾಡು ಹೀಗಿದೆ “ ಹಮ್ ಲಾಯೆ ಹೈ ತೂಫಾನ್ ಸೆ ಕಸ್ತಿ ನಿಕಾಲ್ ಕೇ ಇಸ್ ದೇಶ್ ಕೊ ರಖನಾ ಮೆರೆ ಬಚ್ಚೋ ಸಂಭಾಲ್ ಕೆ ” ( ನಾವು ಈ ನಾವೆಯನ್ನು ಚಂಡಮಾರುತದಿಂದ ರಕ್ಷಿಸಿ ಹೊರತಂದಿದ್ದೇವೆ ಮಕ್ಕಳೇ, ಈ ದೇಶವನ್ನು ಕಾಪಾಡುವ ಹೊಣೆ ನಿಮ್ಮದು).

A large number of children admited at ICU for encephalitis treatment ,At least 30 children lost their lives due to encephalitis in last 48 hours at Gorakhpur’s BRD Hospital after Supply of liquid oxygen was disrupted yesterday due to pending payment. Express photo by Vishal Srivastav 12.08.2017

ಕವಿ ಪ್ರದೀಪ್ ನವ ಭಾರತದ ಮಕ್ಕಳ ಹೆಗಲಿಗೆ ಎಂತಹ ಹೊರೆ ಹೊರಿಸಿದ್ದರು ಎನಿಸುವುದಿಲ್ಲವೇ ? ಇದು ಒಬ್ಬ ದಾರ್ಶನಿಕ ಕವಿಯ ಕನಸು ಎಂದರೂ ಅಡ್ಡಿಯಿಲ್ಲ. ಬ್ರಿಟೀಷರ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆದ ಭಾರತಕ್ಕೆ ಭವಿಷ್ಯ ಎನ್ನುವುದೇನಾದರೂ ಇದ್ದರೆ ಅದು ಈ ಮಕ್ಕಳಲ್ಲಿ ಮಾತ್ರ ಎಂಬ ಸಂದೇಶವನ್ನು ಈ ಹಾಡಿನ ಸಾಲುಗಳಲ್ಲಿ ಗ್ರಹಿಸಬಹುದು. ಇದೇ ಚಿತ್ರದಲ್ಲಿನ ಮತ್ತೊಂದು ಹಾಡಿನಲ್ಲಿ ಕವಿ ಪ್ರದೀಪ್ “ ಆವೋ ಬಚ್ಚೋ ತುಮೇ ದಿಖಾಯೇ ಝನಕಿ ಹಿಂದೂಸ್ತಾನ್ ಕಿ, ಇಸ್ ಮಿಟ್ಟಿ ಸೆ ತಿಲಕ್ ಕರೋ ಏ ಧರ್ತಿ ಹೈ ಬಲಿದಾನ್ ಕಿ ” ( ಬನ್ನಿ ಮಕ್ಕಳೇ ನಿಮಗೆ ಹಿಂದೂಸ್ತಾನದ ಒಂದು ಝಲಕ್ ತೋರುತ್ತೇನೆ ಈ ಮಣ್ಣಿನ ನಿಮ್ಮ ತಿಲಕ ಇಟ್ಟುಕೊಳ್ಳಿ ಇದು ಬಲಿದಾನಗಳ ಭೂಮಿ ) ಎಂದು ಹೇಳುತ್ತಾರೆ.

ಈ ಕವಿಯ ಕನಸಿನ ಸಾಲುಗಳನ್ನು ಪುನರ್ ಮನನ ಮಾಡುತ್ತಾ ಸ್ವತಂತ್ರ ಭಾರತದ 70 ವರ್ಷಗಳನ್ನು ಮೆಲುಕು ಹಾಕಿದಾಗ ಕವಿ ಪ್ರದೀಪ್ ತಮ್ಮ ಹಾಡಿನಲ್ಲಿ ಯಾವ ಮಕ್ಕಳನ್ನು ಉದ್ದೇಶಿಸಿದ್ದರು ಎಂಬ ಪ್ರಶ್ನೆಯೂ ಮೂಡುತ್ತದೆ. ಏಕೆಂದರೆ 1950ರ ದಶಕದ ಮಕ್ಕಳು ಇಂದಿನ ಹಿರಿಯ ಪ್ರಜೆಗಳಾಗಿದ್ದಾರೆ. ನಮ್ಮ ನಾಡನ್ನು ಆಳಿದ್ದಾರೆ, ಮೌಲ್ಯಗಳನ್ನು ಬಿತ್ತಿದ್ದಾರೆ, ಇನ್ನೂ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದಾರೆ. ಇಲ್ಲಿ ಮಕ್ಕಳು ಎನ್ನುವ ಪದವನ್ನು ವ್ಯಕ್ತಿಯ ನೆಲೆಗಿಂತಲೂ ವ್ಯಕ್ತಿತ್ವದ ನೆಲೆಯಲ್ಲಿ ಪ್ರದೀಪ್ ಬಳಸುವುದನ್ನು ಗಮನಿಸಬೇಕು. ಏನೂ ಅರಿಯದ ಮಕ್ಕಳ ಕಣ್ಣೋಟದ ಮೂಲಕ ಈ ದೇಶದ ಭವಿಷ್ಯದ ಒಳನೋಟವನ್ನು ಕಾಣಲು ಕವಿ ಪ್ರದೀಪ್ ಬಯಸುತ್ತಾರೆ.

ಇದು ಒಂದು ರೀತಿಯ ರೂಪಕ-ಪ್ರತಿಮೆಗಳ ಸಂಗಮ ಎನ್ನಲೂಬಹುದು. ಬಲಿದಾನಗಳ ಭೂಮಿ ನಮ್ಮದು ಎಂದು ಹೇಳುವ ಮೂಲಕ ಕವಿ ಪ್ರದೀಪ್ ಮಕ್ಕಳ ಮನದಾಳದಲ್ಲಿ ಈ ದೇಶದ ರಕ್ಷಣೆಯ ಕನಸನ್ನು ಕಾಣುತ್ತಾರೆ. ದಾರ್ಶನಿಕ ಕವಿಯ ಆಶಯಗಳನ್ನು ಸ್ವತಂತ್ರ ಭಾರತದ ಅಂದಿನ ಮಕ್ಕಳು ಸಾಕಾರಗೊಳಿಸಿದ್ದಾರೆಯೇ ಎಂದು ಒಮ್ಮೆ ಯೋಚಿಸಿದಾಗ 70 ವರ್ಷಗಳ ನಂತರದ ಗೋರಖ್‍ಪುರ ನಮ್ಮ ಕಣ್ಣೆದುರು ನಿಲ್ಲುತ್ತದೆ. ಬಲಿದಾನಗಳ ಭೂಮಿಯ ಪವಿತ್ರ ಮಣ್ಣಿನ ತಿಲಕ ಇಟ್ಟುಕೊಳ್ಳಬೇಕಾದ ಮಕ್ಕಳೇ ಬಲಿಪೀಠದಲ್ಲಿ ಹರಕೆಯ ಕುರಿಗಳಂತೆ ಅಂತ್ಯ ಕಾಣುತ್ತಿರುವ ವಿಷಮ ಸನ್ನಿವೇಶದಲ್ಲಿ ಭಾರತ ಮತ್ತೊಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದೆ.

ಕವಿ ಪ್ರದೀಪ್ ಉದ್ದೇಶಿಸಿದ ಮಕ್ಕಳು ಸ್ವತಂತ್ರ ಭಾರತದ ಏಳು ದಶಕಗಳನ್ನು ಕಂಡಿದ್ದಾರೆ. ದೇಶದ ಏಳು ಬೀಳುಗಳನ್ನು , ಮುನ್ನಡೆ ಹಿನ್ನಡೆಗಳನ್ನು, ಹಮ್ಮುಬಿಮ್ಮುಗಳನ್ನು ಹತ್ತಿರದಿಂದ ಕಂಡಿದ್ದಾರೆ. ಹಾಗೆಯೇ ಚಂಡಮಾರುತದಿಂದ ರಕ್ಷಿಸಲ್ಪಟ್ಟ ನಾವೆಯನ್ನು ಸುರಕ್ಷಿತವಾಗಿ ದಡ ಸೇರಿಸಲೂ ಶ್ರಮವಹಿಸಿದ್ದಾರೆ. ಮತ್ತೊಂದೆಡೆ ಇದೇ ಪೀಳಿಗೆಯ ಮಕ್ಕಳು ಭಾರತದ ಜನಸಂಸ್ಕøತಿಗೆ ತದ್ವಿರುದ್ಧವಾದ ವಿಕೃತಿಗಳನ್ನೂ ಸೃಷ್ಟಿಸಿದ್ದಾರೆ. ಮತಧರ್ಮ, ಜಾತಿ, ಭಾಷೆ, ಪ್ರಾದೇಶಿಕ ಅಸ್ಮಿತೆಗಳ ನೆಲೆಯಲ್ಲಿ ಭದ್ರ ಕೋಟೆಗಳನ್ನು ಛಿದ್ರಗೊಳಿಸಲೂ ಯತ್ನಿಸಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದ ಆರಂಭದ ಹೆಜ್ಜೆಗಳನ್ನು ಗಮನಿಸಿದಾಗ ಗೋಚರಿಸುವ ಕಠೋರ ಸತ್ಯಗಳಿಗೆ ಕವಿ ಕಲ್ಪನೆಯ ಮಕ್ಕಳು ಪ್ರತ್ಯಕ್ಷ ಸಾಕ್ಷಿಯಾಗಿರುವುದೂ ಹೌದು. ದುರಂತ ಎಂದರೆ ಈ ಹೆಜ್ಜೆಗುರುತುಗಳೇ ಇಂದು ಭಾರತ ಎಂಬ ನಾವೆಯನ್ನು ಮತ್ತೊಮ್ಮೆ ಚಂಡಮಾರುತಕ್ಕೆ ಸಿಲುಕಿಸಿದೆ. ಈ ನಾವೆಯನ್ನು ಸುರಕ್ಷಿತವಾಗಿ ಹೊರತರಲು ನಡೆಯುತ್ತಿರುವ ಪ್ರಯತ್ನಗಳ ನಡುವೆಯೇ 21ನೆಯ ಶತಮಾನದ ಮಕ್ಕಳು ಭವಿಷ್ಯದ ಹೆಜ್ಜೆಗುರುತುಗಳನ್ನು ಕಂಡುಕೊಳ್ಳುತ್ತಿವೆ.

ಆದರೆ ಸಮಕಾಲೀನ ಸಂದರ್ಭದ ರಾಜಕೀಯ ನಿಷ್ಕ್ರಿಯತೆ, ಸಾಂಸ್ಕøತಿಕ ಅವನತಿ, ನೈತಿಕ ಅಧಃಪತನ ಮತ್ತು ಅಮಾನವೀಯ ಧೋರಣೆಗಳ ನೆಲೆಯಲ್ಲಿ ನೋಡುವಾಗ ಈ ಮಕ್ಕಳಿಗೂ ಭವಿಷ್ಯ ಇದೆಯೇ ಎನ್ನುವ ಆತಂಕ ಮೂಡುವುದು ಸಹಜ. ಇಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರವಾದ ಗೋರಖ್‍ಪುರದಲ್ಲಿ ಸಂಭವಿಸಿದ ಮಕ್ಕಳ ಸಾವಿನ ಸರಣಿ ಹೆಚ್ಚು ಪ್ರಸ್ತುತ ಎನಿಸುತ್ತದೆ. ಗೋರಖ್‍ಪುರದ ಬಿಆರ್‍ಡಿ ಆಸ್ಪತ್ರೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಮಿದುಳು ಜ್ವರದಿಂದ ಅಸುನೀಗಿದ 72 ಮಕ್ಕಳು, ರಕ್ತಹೀನತೆ ಮತ್ತು ಅನಾರೋಗ್ಯದಿಂದ 2017ರಲ್ಲಿ ಮಡಿದ 1217 ಮಕ್ಕಳು, ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಭಾರತದ ಶೇ 60ರಷ್ಟು ಮಕ್ಕಳು, ಜಾಗತಿಕಮಟ್ಟದಲ್ಲಿ ಅಪೌಷ್ಟಿಕತೆಯಿಂದಲೇ ಪ್ರತಿವರ್ಷ ಮರಣಹೊಂದುತ್ತಿರುವ 30 ಲಕ್ಷ ಮಕ್ಕಳು, ಗೋರಖ್‍ಪುರದ ಆಸ್ಪತ್ರೆಯ ಗೋಡೆಗಳಲ್ಲಿ ಕಾಣುತ್ತಿದ್ದಾರೆ.

ದುರಂತ ಎಂದರೆ ಈ ಚಿತ್ರಗಳು ಆಳುವ ವರ್ಗಗಳಿಗೆ ಗೋಚರಿಸುತ್ತಿಲ್ಲ. ಭಾರತ ಕೋಟ್ಯಧಿಪತಿಗಳ ರಾಷ್ಟ್ರವಾಗುತ್ತಿದೆ, ವಿಶ್ವದ ನಂಬರ್ ಒನ್ ರಾಷ್ಟ್ರವಾಗುತ್ತಿದೆ, ಮಂಗಳ ಗ್ರಹದಲ್ಲಿ ಕಾಲಿರಿಸುತ್ತಿದೆ, ಚಂದ್ರಲೋಕದಲ್ಲಿ ವಿಹರಿಸುತ್ತಿದೆ ಎಂದು ಹೆಮ್ಮೆಯಿಂದ ಬೀಗುವ ಒಂದು ಸಮಾಜ, ಚಂದಮಾಮನ ದರ್ಶನವನ್ನೇ ಪಡೆಯದ ಲಕ್ಷಾಂತರ ಹಸುಳೆಗಳು ಪ್ರತಿವರ್ಷ ಕಣ್ಣು ತೆರೆಯುವ ಮುನ್ನವೇ ಅಂತಿಮ ಪಯಣದತ್ತ ಸಾಗುತ್ತಿರುವುದನ್ನು ಗಮನಿಸುತ್ತಲೇ ಇಲ್ಲ ಎಂದು ವಿಷಾದದಿಂದ ಹೇಳಬೇಕಿದೆ. ಭವ್ಯ ಪರಂಪರೆ ಮತ್ತು ಇತಿಹಾಸದ ಹಮ್ಮುಬಿಮ್ಮುಗಳು, ಶ್ರೇಷ್ಠತೆಯ ವ್ಯಸನ ಮತ್ತು ಅಭಿವೃದ್ಧಿ ಪಥದ ಗರಿಮೆ ನಾಗರಿಕ ಸಮಾಜದ ದೃಷ್ಟಿಯನ್ನೇ ಮಸುಕಾಗಿಸಿರುವುದನ್ನು ಈ ಮಕ್ಕಳ ಸಾವಿನಲ್ಲಿ ಕಾಣಬಹುದು. ಸತ್ತು ಮಸಣ ಸೇರಿರುವ ಮಕ್ಕಳ ಸುತ್ತ ರಾಜಕೀಯ ಭದ್ರಕೋಟೆಯನ್ನು ನಿರ್ಮಿಸುವ ಕ್ಷುದ್ರ ಮನಸುಗಳು ನಮ್ಮ ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವುದು ಸಾವಿಗಿಂತಲೂ ಘೋರ ಎನ್ನಬಹುದು.

ಹಾಗಾಗಿಯೇ ನಿತ್ಯ ಸಾವನ್ನು ಎದುರಿಸುತ್ತಿರುವ ಮಕ್ಕಳ ಬವಣೆ ನಮ್ಮನ್ನು ಕಾಡುತ್ತಿಲ್ಲ. ಗ್ರಾಮೀಣ ಭಾರತದಲ್ಲಿ ಮೊಳಕೆಯಲ್ಲೇ ಚಿವುಟಿಹೋಗುತ್ತಿರುವ ಎಳೆ ಜೀವಗಳು, ನಗರ ಜೀವನದಲ್ಲಿ ತಂತ್ರಜ್ಞಾನದ ಭ್ರಮಾಲೋಕದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಹಸುಳೆಗಳು ವಸ್ತುಶಃ ಯಂತ್ರಗಳಂತೆಯೇ ಕಾಣುತ್ತಿದ್ದಾರೆ. ಕವಿ ಪ್ರದೀಪ್ ತಮ್ಮ ಕವನದ ಸಾಲುಗಳಲ್ಲಿ ಉಲ್ಲೇಖಿಸುವ ಮಕ್ಕಳು ಇಂದು ವೃದ್ಧಾಪ್ಯ ಎದುರಿಸುತ್ತಿದ್ದು ಒಮ್ಮೆ ಹಿಂದಿರುಗಿ ನೋಡಿದಾಗ ತಾವು ಮೂಡಿಸಿರುವ ಹೆಜ್ಜೆ ಗುರುತುಗಳಲ್ಲಿನ ಕಪ್ಪು ಚುಕ್ಕೆಗಳು ಎದ್ದು ಕಾಣುತ್ತವೆ. ಮೌಲ್ಯಗಳೇ ಇಲ್ಲದ ಒಂದು ಸಮಾಜವನ್ನು ನಾವು ಭವಿಷ್ಯದ ಪೀಳಿಗೆಗೆ ಅರ್ಪಿಸುತ್ತಿದ್ದೇವೆ ಎಂಬ ಪಾಪಪ್ರಜ್ಞೆ ಈ 50ರ ದಶಕದ ಮಕ್ಕಳನ್ನು ಕಾಡಲೇಬೇಕಿದೆ. ಚಾಚಾ ನೆಹರೂ ಅಪ್ಪಿಕೊಂಡ ಎಳೆ ಹಸುಳೆಗಳು ಇಂದು ನೆಹರೂ ಜುಬ್ಬದ ಮೇಲಿನ ಗುಲಾಬಿ ಹೂವಿನ ಪಕಳೆಗಳಂತೆ ಉದುರಿಹೋಗುತ್ತಿರುವುದನ್ನು ಈ ದೇಶದ ಕೊಳೆಗೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಕಾಣುವಂತಾಗಿದೆ.

ಈ ದುರಂತಗಳ ನಡುವೆಯೇ ಮತ್ತೊಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಭ್ರೂಣಾವಸ್ಥೆಯಲ್ಲೇ ಮಸಣದ ಹಾದಿ ಹಿಡಿಯುವ ಹೆಣ್ಣು ಹೃದಯಗಳು ಈ ಸಂದರ್ಭದಲ್ಲಿ ನೆನಪೇ ಆಗದಷ್ಟು ಮಟ್ಟಿಗೆ ನಮ್ಮ ನಾಗರಿಕ ಸಮಾಜ ನಿಷ್ಕ್ರಿಯವಾಗಿದೆ. ಹಸಿವೆ ತಾಳಲಾರದೆ ಬಸವಳಿದ ಮಕ್ಕಳು, ಶಿಕ್ಷಣ ಪಡೆಯಲಾಗದೆ ಬೀದಿ ಪಾಲಾಗುವ ಮಕ್ಕಳು, ಪೋಷಕರ ಶ್ರಮದಲ್ಲಿ ತಮ್ಮ ಬೆವರು ಬೆರೆಸುವ ಮಕ್ಕಳು, ಅತ್ಯಾಚಾರ ದೌರ್ಜನ್ಯಕ್ಕೊಳಗಾಗುವ ಮಕ್ಕಳು, ಅಪೌಷ್ಟಿಕತೆ ಮತ್ತು ರೋಗರುಜಿನಗಳಿಂದ ಅಂತ್ಯ ಕಾಣುವ ಮಕ್ಕಳು, ಗರ್ಭದಲ್ಲೇ ಅಂತ್ಯಕಾಣುವ ಹೆಣ್ಣುಮಕ್ಕಳು ಡಿಜಿಟಲ್ ಯುಗದ ತಂತ್ರಾಂಶಗಳಂತೆ ಕಾಣುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ತಂತ್ರಾಂಶಗಳು ಬಿಕರಿಯಾಗುವಂತೆಯೇ ಅಮಾಯಕ ಹಸುಳೆಗಳ ಅಸ್ತಿತ್ವವೂ ಬಿಕರಿಯಾಗುತ್ತಿವೆ. ಹಾಗಾಗಿಯೇ ಗೋರಖ್‍ಪುರದ ಘೋರ ನಮ್ಮ ಪ್ರಜ್ಞೆಯನ್ನು ಕದಡುವುದಿಲ್ಲ.
ಈ ಪ್ರಜ್ಞಾಹೀನ ಸ್ಥಿತಿಯಲ್ಲೇ ಮತ್ತೊಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈಗ ಯಾರಾದರೂ “ ಆವೋ ಬಚ್ಚೋ ತುಮೇ ದಿಖಾಯೇ ಝನಕಿ ಹಿಂದೂಸ್ತಾನ್ ಕಿ, ಇಸ್ ಮಿಟ್ಟಿ ಸೆ ತಿಲಕ್ ಕರೋ ಏ ಧರ್ತಿ ಹೈ ಬಲಿದಾನ್ ಕಿ ” ಎಂದು ಹಾಡಲಾದೀತೇ ?

Leave a Reply

Your email address will not be published.