ಗೋಪಾಲನ ಜ್ಞಾನೋದಯ

-ಡಾ. ರಾಜೇಗೌಡ ಹೊಸಹಳ್ಳಿ

ಅಣ್ಣಾ ನಾನು ಓದಿದ್ದರೆ ಏನೇನೋ ಆಗಿರಬಹುದಿತ್ತಪ್ಪಾ! ಹಣೆಲಿ ಬರೆದಿರಬೇಕಲ್ಲಾ! ಅಂದ ಗೋಪಾಲ
ನಾನು : ಯಾಕೋ ಅಂತಾದೇನಾಗಿತ್ತು ಯಾರು ಬ್ಯಾಡ ಅಂದಿದ್ದರಪ್ಪಾ
ಅವನು : ಯಾರು ಬ್ಯಾಂಡಂತಾರೆ ಅವಳು ಅಕ್ಷರಮ್ಮ ಹಣೆಲಿ ಬರೆದಿರಬೇಕಲ್ಲಾ! ಅಂದ.
ನಾನು : ಯಾಕಪ್ಪಾ ವೊತ್ತಾರ್ನಾಗ ಎದ್ದು ಬೈಗಾತಲೆ ಕುಂತು ಓದಬೇಕಾಗಿತ್ತು.
ಅವನು : ವೊತ್ತಾರ್ನಾಗೆ ಓದ್ತಾ ಕುತ್ಕಂಡಿದ್ರೆ ನಮ್ಮಪ್ಪ ಅವ್ವ ಸುಮ್ಮನಿರೋರೋ ಏನೋ; ಏಹ್ ನಡೀ ಹಸಾ ಇಬ್ಬನಿ ಬಾಯಾಡಿಸ್ಕೊಂಡು ಬಾ ಅಂತಾ ಕಳುಸೋರು! ಆಹಾ ಹಿವಾ! ನುರುಜು ಕಲ್ಲು ಮೇಲೆ ಕಾಲಿಟ್ಟರೆ ಜೀವ ಹೋದಂಗೆ ಆಗೋದಾ! ಒಂದು ಅಂಗಿ ಒಂದು ಚಡ್ಡಿ ಏನು ಹಿವಾ ಚಳಿ ತಡೆದಾತು! ಗುಬರ್ಕೆಂಡು ಹೊಲಗದ್ದೆ ಬದುನಲ್ಲಿ ಹಸು ಮೇಯ್ತಾ ಇದ್ದರೆ ಚೊಳ್ಳೆ ಕುಂಡನೊಣ ಕಡಿಯೋದನ್ನು ಪಟಪಟನೆ ಹೊಡ್ಕಳೋದೆ ಆಗೋದು; ಹಸುಗಾದರೆ ಬಾಲ ಅಯ್ತಪ್ಪ ನನಗೇನಿದ್ದಾತು. ನಾಟಿ ಹಸುದ್ದು; ಎಂತಾ ಹಾಲು ಅಂತಿಯಾ ಈಟೆಯಾ! ನಮ್ಮವ್ವ ಕರೆದು ಒಂದು ಮಿಳ್ಳೆಲಿ ಹಿಡ್ಕೊಂಡು ಹೋಗೋಳು.

ನಾನು : ಎಷ್ಟಾದರೂ ಆಗಲಿ ಹೇಳು, ಈಗ ಸೀಮೆ ಹಸು ಹಾಲು ಬನಿ ಇಲ್ಲ ಅಂತಾರೆ.
ಅವನು : ಹಂಗನ್ನದೇನಣ್ಣೋ ಪಕ್ಕದ ಮನೆಲಿ ನಾಟಿ ಹಸ ಇದ್ದರೆ ಅದ್ಯಾಕೆ ಇಟ್ಕೊಂಡಿದಿಯಾ, ಅಂತಾ ಅಯ್ ತಗೀ ಅತ್ಲಾಗೆ ಅಂತಾ ಮಾರಿಸ್ತಾರೆ.
ನಾನು : ಅದೇನೋ ಸೀಮೆ ಹಸು ಹಾಲು ಕುಡಿದರೆ ಒಳ್ಳೆದಲ್ಲ ಕಾನ್ಸರ್ ಕೂಡ ಬರ್ತದೆ ಅಂತಾರಪ್ಪಾ!
ಅವನು : ಓಹೋ ಆಯ್ತಲಾ ಗತಿ! ಅದಕೆ ಮತೆ ಈ ವರ್ಷ ನಮ್ಮೂರಲಿ ಒಂಭತ್ತು ಜನ ಕ್ಯಾನ್ಸರಲಿ ಸತ್ತವೆ ಅನ್ನಪ್ಪಾ.
ನಾನು : ಇಂತಾ ಹಾಲು ಇಂತಾ ಸೀಮೆ ಗೊಬ್ಬರ ಔಷಧಿ ಹೊಡೆದದ್ದನ್ನೆಲ್ಲಾ ತಿಂದರೆ ಸಾಯ್ದೆ ಇರ್ತಾರಾ?
ಅದಿರಲಿ; ಹೈಸ್ಕೂಲಿಗೆ ನಾನು ಹೋಗಿದ್ದೆ ಅಂತಿಯಾ ಮುಂದೇನಾಯ್ತು? ಹೇಳಪ್ಪಾ ನಿನ್ನ ಸಾಹಸವಾ?

emmegaluಅವನು : ಹೋಗಿದ್ದು ಉಂಟಪ್ಪ. ನಮ್ಮೂರಲಿ ನಾಕು ಜನ ಹೋಗಿದ್ವಿ ಅನ್ನಪ್ಪಾ. ಕಡೆ ಬೆಂಚಲಿ ಕುಂತ್ಕಂತಿದ್ದಿವಿ. ಅಕ್ಷರ ಕಾಗುಣಿತ ಅಂದರೆ ಅದೆಂಗಿರ್ತದೆ ಅಂತಿದ್ವಪ್ಪಾ. ಒಬ್ಬರು ಕಾಲು ಐಬಿನೋರು ಹೆಡ್ ಮಾಸ್ಟರಿದ್ದರು. ಹಿಡಿ ಕೈಯ ಅಂದು ಬೆತ್ತ ಎತ್ತಿದಾಕ್ಷಣ ಬೇಕಂತಲೇ ಕೈ ಹಿಂದಕೆ ತಗೋ ಬಿಡ್ತಿದ್ದೆ. ಸ್ವಾಧೀನವಿಲ್ಲದ ಕಾಲಲ್ವೆ! ಮುಗ್ಗುರಿಸಿ ಮಕಾಡೆ ಬಿದ್ದು ಬಿಡೋರು. ಪಾಪ ಅನಿಸುತ್ತಪ್ಪ ಈಗ. ಆಮೇಲೊಬ್ಬರು ಕನ್ನಡ ಪಂಡಿತರು ಇಲ್ಲೆ ಮಗ್ಗೆ ಊರ್ನೋರು. ಬಂದವರೆ : ‘ನನ್ನ ಹೆಸರು ಕೆಂಚಪ್ಪ’ ಎಂದು ಬೋರ್ಡ್ ಮ್ಯಾಲೆ ಬರೆಯೋರು. ಏಹ್ ಹೊಸಳ್ಳಿಯೋರ ನಿಮ್ಮ ಚರ್ಮ ಸುಲಿತಿನಿ ಅನ್ನೋರು. ಹೇಳೋ ಕಾಗುಣಿತವಾ ಅನ್ನೋರು. ಬಂದರೆ ತಾನೇ ಹೇಳೋದು. ಮುಂಗೈನ ಗೆಣ್ಣು ಕಡೆ ತಿರುಗಿಸಿ ಗೆಣ್ಣು ಊದವರೆಗೂ ಹೊಡೆದುಬಿಡೋರು. ಎಷ್ಟು ಅಂತಾ ವದೆ ತಿನ್ನೋದು. ಆಲೂರು ಹೈಸ್ಕೂಲು ಹಿಂದುಗಡೆ ಗೌರ್ಮೆಂಟಿಂದು ಸೀಬೆ ತೋಟಲ್ಲವೆ ಅಲ್ಲಿಗೆ ಕದ್ದು ಹೋಗಿಬಿಡ್ತಿದಿವೀ ನಾವು ನಾಕಾಳು. ಇವರಿನ್ನೆಲ್ಲಿ ಹೋದಾರು ಅಂತಾ ಹುಡಕ್ತ ಬಂದರು ಮೇಷ್ಟರು. ಈಗಲೂ ಅವರ ಕೈಲಿ ಒದೆ ತಿನ್ನಕಾದೀತಾ. ಸುರು ಹಚ್ಗೆಂದ್ವಿ. ಓಡೋಗೋದು ಎದೆಗೆ ಒದೆಯೋದು; ಕಪಿಯಂಗೆ ಅಂಗಿ ಅರಿಯೋದು. ನಾವು ಕದ್ದು ಸಿನಿಮಾ ನೋಡಿ ಹೊಡೆದಾಟ ಕಲ್ತಿದ್ದರಲ್ಲವೆ! ಈ ಕಡಿಂದ ಒಬ್ಬ ಒದ್ದರೆ ಆ ಕಡಿಂದ ಒಬ್ಬ ಒದಿಯೋದು.

ಹಿಂಗೆ ನಾಕಾಳು ಆ ಕಡಿಂದ ಈ ಕಡಿಂದ ಪೈಟಿಂಗ್ ಮಾಡಿ ಮೇಷ್ಟ್ರನ ಕಯ್ಯೊಯ್ಯೋ ಅನಿಸಿದ್ವಿ. ಸ್ಕೂಲಿಗೆ ದೂರಲ್ಲವೇ ಸೀಬಿ ತೋಟ. ಅಂತೂ ನಾವಿನ್ನು ಹೆಂಗೆ ಸ್ಕೂಲಿಗೆ ಹೋಗೋದು! ಉಂಟೇ! ಮನೆಗೆ ಹೋದೋರು ಮಾತಾಡ್ವೆಂಡ್ವಿ. ಅಲ್ಲಿ ಇಲ್ಲಿ ಹತ್ತು ಇಪ್ಪತ್ತು ರೂಪಾಯಿ ಕದ್ಕಂಡು ಬೆಂಗಳೂರು ಬಸ್ ಹತ್ತಿ ಬಿಟ್ವಿ. ಅಲ್ಲಿ ಬೆಂಗಳೂರಲ್ವೆ ನೋಡಿದರೆ ಹೆದ್ರಿಕೆ ಆಗಿಬಿಡ್ತು. ಸುಮ್ಮನೆ ಗುಬ್ರ ಹಾಕೆಂಡು ನಿಂತಿದ್ವಿ. ಒಬ್ಬ ಪುಣ್ಯಾತ್ಮ ಬಂದ ನೀವು ಮನೆಬಿಟ್ಟು ಬಂದಿದಿರಿ. ಹೋಗಿ ಅಲ್ಲಿ ತುಳಸಿ ತೋಟ ಕಾಣ್ತದಲ್ಲ ಅಲ್ಲಿ ಕುತ್ಕಳಿ. ನಿಮಗೆ ಕೆಲಸ ಕೊಡಿಸೋರು ಅಲ್ಲಿರ್ತಾರೆ ಅಂದ. ಹೋದ್ವಿ. ನಮ್ಮ ನೋಡಿದರೆ ಗೊತ್ತಾಗಕಿಲ್ವೆ ಹತ್ತಿರಕೆ ಒಬ್ಬ ಬಂದ. ಮನೆಬಿಟ್ಟು ಬಂದಿದಿರೋ ಬನ್ನಿ ಕೆಲಸ ಕೊಡಿಸ್ತಿನಿ ಅಂದ. 118ನೇ ಬಸ್ಸು ಹತ್ತಿ ಹೋದ್ವಿ. ಕೆ.ಆರ್.ಪುರಂ ಬೃಂದಾವನ ಹೋಟೆಲ್ ಅಲ್ಲಿ ಇಬ್ಬರಿಗೆ ಲೋಟ ತೊಳೆಯೋ ಕೆಲಸ ಮತ್ತಿಬ್ಬರು ಅಷ್ಟು ದೂರದಲ್ಲಿ ಒಂದು ಹೋಟೇಲು ಅದೇ ಕೆಲಸ. ಒಂದು ಕೆಲಸ ಕೊಡಿಸಿದರೆ ಅವನಿಗೆ 100 ರೂಪಾಯಿ ಗುತ್ತಿಗೆಯಂತಪ್ಪಾ. ಇನ್ನು ಕೆಲಸ ಆಯ್ತಲ್ಲಾ ಉಡೋಕೆ ಬಟ್ಟೆ ಇಲ್ಲ ಹೊದಿಕೆ ಇಲ್ಲ. ಈರುಳ್ಳಿ ಚೀಲ ಕೊಡವೋದು ಕುತ್ತಿಗೆವರೆಗೂ ತೂರಿಕೊಂಡು ಮಲಗೋದು. ಅಲ್ಲೆ ಮಹಡಿ ಮೇಲೆ ಇರೋಕೆ ನಮಗೆ ಜಾಗ. ದಿನದಲ್ಲಿ ಒಂದು ಗಂಟೆ ರೆಸ್ಟು. ಅಲ್ಲೆ ರೇಲ್ವೆ ಸ್ಟೇಷನ್‍ವರೆಗೂ ಹೋಗೋದು ಹೋಟೆಲು ಕಾಣುವರೆಗೂ ತಿರುಗಾಡೋದು ಇದೇ ಆಯ್ತಪ್ಪಾ. ಇನ್ನು ಕಾಲು ಕೈಯಿ ಎಲ್ಲ ಜಿರ್ತು ಬೆಳ್ಳಗಾದವಲ್ಲ. ನೀರ ಅಂಟದೆ ಇರಲಿ ಅಂತಾ ಒಂದು ಮುಲಾಮು ಕೊಡೋರು. ಹೊಟ್ಟೆ ತುಂಬಾ ಉಂಡದ್ದೆ ಲಾಭ. ಫಸ್ಟ್ ತಿಂಗಳು 300 ರೂಪಾಯಿ ಸಂಬಳ ಕೊಟ್ಟರು. ಆಗ ಅಂಗಿ ಚಡ್ಡಿ ಬೆಡ್‍ಸೀಟು ತಗಂಡ್ವಿ ಅನ್ನಪ್ಪಾ.

ನಾನು : ಅಲ್ಲಿವರೆಗೂ ಸ್ನಾನಪಾನ ಏನ್ಮಾಡ್ತಿದ್ರಿ?
ಅವನು : ಅಯ್ ತಾನ ಅಂದರೇನು? ಕೂರೆಪಾರೆ ಆಗಿದ್ದವಾ ಅಂಗಿ ಚಡ್ಡಿ ಆಚೆಗೆ ಎಸೆದವಪ್ಪಾ. ಇನ್ನು ಒಂದಿನ ರೆಸ್ಟ್‍ಗೆ ಬಿಟ್ಟಾಗ ಕೇಳ್ಕೊಂಡು ಸಿನಿಮಾಕ್ಕೆ ಹೋದೆವಾ. ನರ್ತಕಿ ಟಾಕಿಸ್ ಟಿಕೆಟ್ಟ ತಗಂಡು ನಿಂತಿದಿವಿ! ಒಬ್ಬ ಬಂದ ಏನ್ರೋ ಬ್ಲಾಕಲ್ಲಿ ಮಾರ್ತೀರಾ ಅಂದ. ಟಿಕೆಟ್ ಕಿತ್ಕೊಂಡು ಹೋಗ್ತ ಅವನೆ. ನಾವು ಇನ್ನೇನು ಮಾಡೋದು ನೋಡ್ತ ನಿಂತ್ಕಂಡಿದ್ದು ಬಂದ್ವಿ. ಅದಾಯ್ತಲ್ಲಾ ಮೂರು ವರ್ಷ ಆಯ್ತು. ಮೈಸೂರಲ್ಲಿ ‘ಜೇನುಗೂಡು’ ಅಂತಾ ಹೋಟೆಲ್ ಅಯ್ತೆ. ಅಲ್ಲಿ ಹೋಗಿ ನಮ್ಮ ಹಾಸನ ಕಡೇರದು ಸಂಬಳನು ಚೆನ್ನಾಗಿ ಕೊಡ್ತರೆ ಅಂತಾ ಯಾರೋ ಅಂದರು. ಹೊಂಟಿವಿ. ಮೈಸೂರು ಬಸ್ಸು ಹತ್ತಿ ಹುಡುಕುತಾ ಹೋದ್ವಿ. ಅಲ್ಲಿ ಕೆಲಸಕ್ಕೆ ಆರ್ಡರ್ ಕೊಟ್ಟರು. ಯೂನಿಫಾರ್ಮ್ ಕೊಟ್ರು. ಅಲ್ಲಿ ಪ್ರಮೋಸನ್ನು. ಗಾಡಿ ನೂಕೆಂತಾ ಟೇಬಲ್ ಒರೆಸೋದು. ಅಯ್ಯಪ್ಪಾ ಯೂನಿಫಾರ್ಮ್ ಬಟ್ಟೇಲಿ ಬರೀ ಕೂರೆ ಕುಕ್ಕೋದೆ ಆಗದು. ಅದ್ಯಾರಾರು ಅದೆಷ್ಟು ಜನ ಹಾಕಿ ಓಡಿ ಹೋಗಿದ್ದಾರೋ ಕಾಣೆನಪ್ಪಾ! ಯವ್ವೀ! ಆಯ್ತಪ್ಪಾ ಅಂತೂ ಮೂರು ವರ್ಷ ಮತ್ತೆ ಆಯ್ತು. ಅಷ್ಟು ಇಷ್ಟ ದುಡ್ಡು ಉಳಿದಿತ್ತಲ್ಲಾ ನಾನು ಪಟೇಲರ ಮಗನಲ್ಲವೆ!

ಊರ ಕಡೆ ಗ್ಯಾನಾಗಿಬಿಡ್ತು. ಲೋ ಹೋಗಿ ಬಿಡೋಣ ನಡಿರೋ ಊರ ಕಡೆಗೆ ಅಂದು ಕೂಡಲೇ ಅವರಿಗೂ ಸಾಕಾಗಿತ್ತು. ಎಲ್ಲರೂ ಬೆಂಗಳೂರು-ಮೈಸೂರು ನೋಡಿ ಆಗಿತ್ತಲ್ಲಾ ಹೊಂಟವಿ. ಜೀನ್ಸ್ ಪ್ಯಾಂಟಾಕೆಂದು, ಕಪ್ಪು ಕನ್ನಡಕ ಹಾಕೆಂದು, ಕೈಲೊಂದು ಸೂಟುಕೇಸು ಹಿಡ್ಕೊಂಡು ಊರ ಮುಂದೆ ನಾಕಾಳು ಬಂದಿದ್ದ ನೋಡಿ, ಇವ್ರೇ ಅಂತಾ ಪತ್ತೆ ಹಿಡಿದರು. ಎಲಾ ನನ್ನ ಮಕ್ಕಳ ಸತ್ತು ಹೋಗಿದಾರೆ ಅಂತಿದ್ವಲಾ ಬನ್ನಿ ನನ್ನ ಮಕ್ಕಳ ಅಂತಾ ಗುದ್ದಲಿ ಕೈಲಿ ಕೊಟ್ಟು ನೇಗಿಲು ನೊಗ ಹೊರಿಸಿದರು. ಮದುವೆನು ಮಾಡಿದರು. ನೋಡಪ್ಪಾ ಹಿಂಗಿದಿವಿ. ಒಯ್ನಾಗಿ ಓದಿದ್ದರೆ ಆ ಮೇಷ್ಟ್ರು ಹೊಡೆದು ಓಡಿಹೋಗದೆಯಿದಿದ್ದರೆ ಹಿಂಗಿರ್ತಿದ್ದವಾ! ಅಂದ ಗೋಪಾಲ.

ನಾನು : ಅಂದರೆ ಬೆಂಗಳೂರು ಮೈಸೂರಿಗೆ ಎಲ್ಲ ಹೋಗ್ತರೆ ಹೋದೋರೆಲ್ಲ ಬರದೇ ಇದ್ದರೆ ನಿನಗಿಂತ ಚೆನ್ನಾಗಿದರೆ ಅಂತಿಯಾ?
ಅವನು : ಏನಪ್ಪಾ ಅದೇ ಯಂಕಣ್ಣನ ಮಗ ರಂಗಣ್ಣನ ಮಗ ಹೋಗಿದರಪ್ಪಾ! ಅಲ್ಲಿ ಅದೇ ಸೀಟುಮನೆ; ಸಂದಿಲಿ ವಾರಕ್ಕೊಂದು ನಾಕು ಬಿಂದಿಗೆ ನೀರು; ಗಾರ್ಮೆಂಟಿಗೆ ಪಾಪ ಅವರ ಹೆಂಡ್ತಿರು ಹೋಗ್ತಳಂತಪ್ಪಾ! ಆಗಲೇ ಗೂರಲು ರೋಗ. ಬೆಂಗಳೂರಲ್ಲಿ ಕುಡ್ಕ ಗಂಡರನ್ನ ಸಾಕೋದೊಂದು ಸಂಕಟ ಅಂತಾರಪ್ಪಾ.

ನಾನು ನೀನು ಹೇಗಿದಿಯಪ್ಪಾ ಈಗ? ಕುಡಿಯೋದು ಗಿಡಿಯೋದು?
ಅವನು : ಕುಡಿಯೋದ! ಅವಳು ನನ್ನ ಮನೆಯೊಳು ಬಿಡಬೇಕಲ್ಲ ಪೋಲೀಸ್ ನಾಯಿ ಥರಾ. ಹೆಂಗೋ ನಡಿತದೆ. ಅವಳು ಒಂದು ಕಣದಷ್ಟು ಅಗಲ ಕಾಕಡ ಹಾಕೆಂಡವಳೆ. ದಿನಾ ಹೂ ಕಟ್ಟಿ ಪ್ಯಾಟಿಗೆ ಕೊಟ್ಟರೆ ಸಂತೆ ಖರ್ಚಿಗೆ ಆಗ್ತದೆ. ಹೊಲಗದ್ದೆಲಿ ಹೊಟ್ಟೆಗೆ ಆಗ್ತದೆ. ಮಗ ಮಾತ್ರ ಚೆನ್ನಾಗಿ ಓದ್ತನೆ. ಅವನದು ಮಾತೇ ಕಮ್ಮಿ. ಯಾವಾಗಲೂ ಬುಕ್ಕು ಬುಕ್ಕು! ಏನಾರ ಆಗ್ಲಿ ಬಿಡಪ್ಪ. ಚೆನ್ನಾಗಿದಿವಿ! ಅಲ್ಲಾ ನನ್ನ ಸಾಹಸ ಹೇಳದೆ ಅಷ್ಟೆ. ಬದುಕೋಕೆ ಪ್ಯಾಟೆ ಆಗಬೇಕೇ! ಹಳ್ಳಿಯಾದರೇನು! ನೆಮ್ಮದಿ ಮುಖ್ಯವಲ್ಲವೇನಣ್ಣೋ ನೀನೇ ಹೇಳಪ್ಪಾ ಅಂದ ಗೋಪಾಲ
ನಾನು : ಹೌದು ಅಂತೂ ಜ್ಞಾನೋದಯ ನಿನಗಾಗಿದೆ ಬಿಡು. ಬಲು ಖುಷಿಯಾಗಿ ಓಡಾಡ್ತಿಯಲ್ಲವೆ? ಅಂದೆ.
ಕತ್ತು ಹಾಕಿದ. ಹುಸಿನಗೆ ಉಲ್ಲಾಸ ಹೇಳುತ್ತಿತ್ತು.

Leave a Reply

Your email address will not be published.