ಡಿ.ಕೆ.ಶಿ ಮನೆಯ ಮೇಲಿನ ಆದಾಯತೆರಿಗೆ ದಾಳಿ ಹಿಂದಿರುವ ಸತ್ಯಗಳು

-ಕು.ಸ.ಮಧುಸೂದನನಾಯರ್

ಅಗಸ್ಟ್ ಎಂಟರ ಗುಜರಾತಿನ ರಾಜ್ಯಸಭಾ ಚುನಾವಣೆಗೂ, ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಆದಾಯ ತೆರಿಗೆ ದಾಳಿಗೂ ಎತ್ತಣಿಂದೆತ್ತ ಸಂಬಂದವಯ್ಯಾ  ಎಂದು ಅಚ್ಚರಿ ಪಡುವ ಅಗತ್ಯವೇನಿಲ್ಲ. ಕಳೆದ ಮೂರು ವರ್ಷಗಳ ಕಾಲದ ದೇಶದ ರಾಜಕೀಯದ ಚದುರಂಗದಾಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ   ಇವೆರಡರ ಹಿಂದಿರುವ ನಿಗೂಢ ರಹಸ್ಯ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಈ ಬೆಳವಣಿಗೆಗಳನ್ನು   ಒಂದು ಕಡೆಯಿಂದ ನೋಡುತ್ತ ಹೋಗಬೇಕಾಗುತ್ತದೆ:

ಆಗಸ್ಟ್ ಎಂಟನೆ ತಾರೀಖಿನಂದು ಗುಜರಾತಿನ ವಿದಾನಸಭೆಯಿಂದ ರಾಜ್ಯಸಭೆಗೆ ಮೂರು ಜನ ಸದಸ್ಯರು ಆಯ್ಕೆಯಾಗಿ ಹೋಗಬೇಕಾಗಿದೆ. ಸದ್ಯದ ವಿದಾನಸಭೆಯ ಬಲಾಬಲಗಳನ್ನು ನೋಡಿದರೆ ಬಾಜಪ ಯಾವ ಗೊಂದಲಕ್ಕೂ ಆಸ್ಪದವಿರದಂತೆ ತನ್ನ ಇಬ್ಬರು ಅಭ್ಯರ್ಥಿಗಳನ್ನು  ಸುಲಭವಾಗಿ ರಾಜ್ಯಸಭೆಗೆ ಆರಿಸಿಕಳಿಸಬಹುದಾಗಿದೆ. 121  ಶಾಸಕರನ್ನು ಹೊಂದಿರುವ ಬಾಜಪಕ್ಕೆ ಇದೇನು ಕಷ್ಟದ ಮಾತಾಗಿರಲಿಲ್ಲ. ಈ ಎರಡು ಸ್ಥಾನಗಳನ್ನು ಗೆಲ್ಲಲು ತನ್ನ ಸದಸ್ಯರಿಗೆ ವಿಪ್ ನೀಡಬೇಕಾಗಿದ್ದ ಯಾವುದೇ ಜರೂರತ್ತು ಸಹ ಆ ಪಕ್ಷಕ್ಕಿರಲಿಲ್ಲ. ಕಾಂಗ್ರೇಸ್ ಅಹಮದ್ ಪಟೇಲರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಹಾಗಾಗಿ ಬಾಜಪ ತನ್ನ ರಾಷ್ಟ್ರೀಯ ಅದ್ಯಕ್ಷರಾದ ಅಮಿತ್ ಷಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿ ನಾಮಪತ್ರ ಸಲ್ಲಿಸಿಯಾಗಿತ್ತು. ಇವರಿಬ್ಬರ ಆಯ್ಕೆಯ ವಿಚಾರದಲ್ಲಿ  ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ಸಮಸ್ಯೆ ಶುರುವಾಗಿದ್ದು, ಬಾಜಪ ತನ್ನ ಶಕ್ತಿಯನ್ನೂ ಮೀರಿ ತನ್ನ ಪಕ್ಷದಿಂದ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಿದಾಗ. ಇಲ್ಲಿ ಆಸಕ್ತಿದಾಯಕ ಮತ್ತು ಆತಂಕದ ವಿಚಾರವೆಂದರೆ ಆ ಮೂರನೇ ಅಭ್ಯರ್ಥಿ ಯಾರೆಂಬುದೇ ಆಗಿದೆ. ಮೊನ್ನೆಯ ತನಕ ಗುಜರಾತ್ ಶಾಸಕಾಂಗ ಪಕ್ಷದ  ಕಾರ್ಯದರ್ಶಿಯಾಗಿದ್ದ ಬಲವಂತ ಸಿನ್ಹಾ ರಜಪೂತ್ ಅವರನ್ನು ಬಾಜಪ ತನ್ನ ಮೂರನೇ ಅಭ್ಯರ್ಥಿಯನ್ನಾಗಿಸಿದೆ. ಬಾಜಪ ರಾಜ್ಯಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ತಾನು  ಯಾವ ದಾರಿಯನ್ನು ಬೇಕಾದರು ಹಿಡಿಯಬಲ್ಲೆನೆಂಬುದನ್ನು ತೋರಿಸಿಕೊಟ್ಟಿತು.

ಹೀಗೆ ಬಾಜಪ  ಕಾಂಗ್ರೇಸ್ಸಿಗೆ ರಾಜಿನಾಮೆ ನೀಡಿ ಹೊರಬಂದ ರಜಪೂತ್ ಅವರನ್ನು ಆ ದಿನವೇ ಬಾಜಪದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಹಿನ್ನೆಲೆಯಲ್ಲಿ  ಅದಕ್ಕಿದ್ದುದು ಕೆಲವು ಮುಖ್ಯ ಉದ್ದೇಶಗಳು ಹೀಗಿವೆ: ಮೊದಲನೆಯದು,  ಹೇಗಾದರು ಮಾಡಿ ರಾಜ್ಯಸಭೆಯಲ್ಲಿ  ಬಹುಮತ ಪಡೆಯುವುದು. ಎರಡನೆಯದು, ಈ ವರ್ಷದ ಕೊನೆಯಲ್ಲಿ  ಎದುರಾಗಲಿರುವ ವಿದಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೇಸ್ ಪಕ್ಷದ ಬಲವನ್ನು, ಆತ್ಮವಿಶ್ವಾಸವನ್ನು ಕುಗ್ಗಿಸುವುದಾಗಿತ್ತು. ಇನ್ನು ಮೂರನೆಯ ಉದ್ದೇಶವೆಂದರೆ ಕಾಂಗ್ರೇಸ್  ಅದ್ಯಕ್ಷೆಯಾದ ಸೋನಿಯಾ ಗಾಂದಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಅಹಮದ್ ಪಟೇಲರನ್ನು ಈ ಚುನಾವಣೆಯಲ್ಲಿ ಸೋಲಿಸಿ ಮೂಲೆಗುಂಪು ಮಾಡುವುದಾಗಿತ್ತು. ಸೋನಿಯಾಗಾಂದಿಯವರಿಗೆ ಆಪ್ತರಾಗಿರುವ ಅಹಮದ್ ಪಟೇಲರು 1993ರಿಂದಲೂ ಸತತವಾಗಿ ರಾಜ್ಯಸಭೆಯಲ್ಲಿ ಗುಜರಾತನ್ನು ಪ್ರತಿನಿಧಿಸುತ್ತಿದ್ದು  ಕಾಂಗ್ರೇಸ್ಸಿನ ರಾಜಕೀಯ ತಂತ್ರಗಾರಿಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ ಬಂದಂತವರು. ಅಂತಹವರನ್ನು ಸೋಲಿಸುವುದರಿಂದ ಸ್ವತ: ಸೋನಿಯರವರ ಆತ್ಮವಿಶ್ವಾಸವನ್ನೂ ಉಡುಗಿಸಬಹುದೆಂಬ ಲೆಕ್ಕಾಚಾರ ಹಾಕಿಯೇ ಅಮಿತ್ಷಾ ಇಂತಹದೊಂದು ನಿರ್ಣಯ ಕೈಗೊಂಡಿರುವುದು ಸತ್ಯ.  ಬಹುಶ:  ಗುಜರಾತ್ ಕಾಂಗ್ರೇಸ್ಸಿನ ಆಂತರೀಕ ವಿದ್ಯಾಮಾನಗಳು ಸಹ  ಬಾಜಪಕ್ಕೆ ಪೂರಕವಾಗಿಯೇ ನಡೆಯುತ್ತ ಹೋಗಿದ್ದು  ಇಲ್ಲಿನ ವಿಶೇಷ!

ಸಂಘಪರಿವಾರ ಮೂಲದ ಶಂಕರಸಿಂಗ್ ವಘೇಲಾರವರು ಕಳೆದ ಎರಡು ದಶಕಗಳಿಂದಲೂ ಕಾಂಗ್ರೇಸ್ಸಿನಲ್ಲಿದ್ದು ಪ್ರಬಾವಶಾಲಿ ನಾಯಕರಾಗಿದ್ದವರು.  ಹಿಂದೆ  ಒಂದು ವರ್ಷದ ಮಟ್ಟಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ವಘೇಲಾರವರು  ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವಂತೆ ಕಾಂಗ್ರೇಸ್ ಹೈಕಮ್ಯಾಂಡಿಗೆ ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೇಸ್ ಈ ಪ್ರಸ್ತಾವನೆಗೆ ಒಪ್ಪಿರಲಿಲ್ಲ. ಬಹುಶ: ವಘೇಲಾರವರು ಇಪ್ಪತ್ತು ವರ್ಷಗಳ ಕಾಲ ಕಾಂಗ್ರೇಸ್ಸಿನಲ್ಲಿದ್ದರೂ ಅವರ ಪ್ರಭಾವಶಾಲಿ ನಾಯಕತ್ವದ ಬಗ್ಗೆ ಕಾಂಗ್ರೇಸ್ ಸಂಪೂರ್ಣವಾಗಿ ನಂಬಿಕೆಯನ್ನು ಇಡಲಿಲ್ಲ. ಇದರ ಜೊತಗೆ ಅಹಮದ್ ಪಟೇಲ್ ಮತ್ತು ವಘೇಲಾರವರ ನಡುವಿನ ಅಭಿಪ್ರಾಯಬೇದಗಳು ಸಹ ಇಂತಹ ಘೋಷಣೆಗೆ ಅಡ್ಡಿಯಾಗಿದ್ದವು. ಯಾವಾಗ ಕಾಂಗ್ರೇಸ್ ತನ್ನ ಬೇಡಿಕೆಯನ್ನು ತಿರಸ್ಕರಿಸಿತೊ ವಘೇಲಾರವರು ಪಕ್ಷ ಬಿಡುವ ನಿರ್ದಾರಕ್ಕೆಬಂದರು. ಇದನ್ನು ಅರ್ಥಮಾಡಿಕೊಳ್ಳದ ಕಾಂಗ್ರೇಸ್ ನಾಯಕತ್ವ  ಉದಾಸೀನತೆಯ ಧೋರಣೆ ತೋರಿಸುತ್ತ ಹೋಯಿತು. ಇದರ ಪರಿಣಾಮವಾಗಿ  ಕಳೆದ ತಿಂಗಳು ತಮ್ಮ ಎಪ್ಪತ್ತೇಳನೇ ಹುಟ್ಟುಹಬ್ಬದ ಸಮಾರಂಭದಲ್ಲಿ ವಘೇಲಾರವರು ಕಾಂಗ್ರೇಸ್ಸಿಗೆ ರಾಜಿನಾಮೆ ನೀಡಿ ಹೊರಬಂದರು. ಸದ್ಯಕ್ಕಂತು ಅವರು ಬಾಜಪ ಸೇರುವುದಿಲ್ಲವೆಂದು ಹೇಳಿದ್ದು, ಪ್ರಾದೇಶಿಕ ಪಕ್ಷವೊಂದನ್ನು  ಹುಟ್ಟು ಹಾಕುವ ಸಿದ್ದತೆಯಲ್ಲಿ ಇದ್ದಾರೆಂದು ಹೇಳಲಾಗುತ್ತಿದೆ.

ಹೀಗೆ  ವಘೇಲಾರವರು ರಾಜಿನಾಮೆ ನೀಡಿಹೊರಬಂದ ಕೆಲವೆ ಸಮಯದಲ್ಲಿ ಕಾಂಗ್ರೇಸ್ಸಿನ ಆರು ಜನ ಶಾಸಕರು ಸಹ ಕಾಂಗ್ರೇಸ್ಸಿಗೆ ರಾಜಿನಾಮೆ ನೀಡಿ ಬಾಜಪದತ್ತ ಸರಿದು ಹೋಗಿದ್ದಾರೆ.  ಹೀಗೆ ರಾಜಿನಾಮೆ ನೀಡಿ ಬಂದ ಆರು ಶಾಸಕರನ್ನು ನಂಬಿಯೇ ಬಾಜಪ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯಾದರೂ ತನ್ನ ಗುರಿ ಈಡೇರಿಕೆಗಾಗಿ ಅದು ಇನ್ನಷ್ಟು ಕಾಂಗ್ರೇಸ್ ಶಾಸಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿರುವುದೇನು ಸುಳ್ಳಲ್ಲ. ಹೀಗಾಗಿಯೇ ಕಾಂಗ್ರೇಸ್ ತನ್ನ ನಲವತ್ತೆರಡು ಶಾಸಕರನ್ನು  ಹಿಡಿದಿಟ್ಟುಕೊಳ್ಳಲು  ತನ್ನ  ಸರಕಾರವೇ ಇರುವ ಕರ್ನಾಟಕಕ್ಕೆ ಕಳಿಸಿಕೊಟ್ಟು ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕರ್ನಾಟಕದ ಇಂದನ ಖಾತೆ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿತು.

ಇದೇ ಸಮಯದಲ್ಲಿ ಶಿವಕುಮಾರ್ ಅವರ ಮನೆ ಮತ್ತು ಅವರ ಆಪ್ತರ ಮನೆ ಮೇಲೆ ನಡೆದ ಆದಾಯ ತೆರಿಗೆ ದಾಳಿಗಳು  ಕಾಂಗ್ರೇಸ್ಸನ್ನು ತಲ್ಲಣಗೊಳಿಸಿವೆ. ಕಾಂಗ್ರೇಸ್ಸಿನ ಪ್ರಕಾರ ಇದು ಸೇಡಿನ ರಾಜಕಾರಣವಾಗಿದ್ದರೆ, ಬಾಜಪದ ಪ್ರಕಾರ ಇದು ಭ್ರಷ್ಟಾಚಾರದ ವಿರುದ್ದ ಮತ್ತೊಂದು ಕಾರ್ಯಾಚರಣೆಯಾಗಿದೆ. ಸತ್ಯ ಇವೆರಡರ ನಡುವೆ ಇದೆಯೇ? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತು ಸಿಕ್ಕಿಲ್ಲ.

ಆದರೆ ಒಂದಂತು ಖಾತರಿಯಾಗಿದೆ.   ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಾಜಪ ದೇಶದ ಎಲ್ಲ ರಾಜ್ಯಗಳಲ್ಲಿಯೂ ತನ್ನ  ಅಧಿಕಾರವನ್ನು ಸ್ಥಾಪಿಸಲು ಗಮನ ಕೊಡುತ್ತಿದ್ದು. ಅದಕ್ಕಾಗಿ ಅದು ಏನು ಬೇಕಾದರು ಮಾಡಬಲ್ಲ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಿದೆ. ದಶಕದ ಹಿಂದೆ ಅದು ಹೇಳುತ್ತಿದ್ದ ಮತ್ತು ಇತರೆ ರಾಜಕೀಯ ಪಕ್ಷಗಳಿಂದ ಬಯಸುತ್ತಿದ್ದ ರಾಜಕೀಯ ನೈತಿಕತೆಯನ್ನೀಗ ತಾನೇ ಗಾಳಿಗೆ ತೂರಿದಂತೆ ಕಾಣುತ್ತಿದೆ. ಬಾಜಪ ತನ್ನ ರಾಜಕೀಯ ಲಾಭಕ್ಕಾಗಿ ನೆಲದ ಫೆಡರಲ್ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತ, ರಾಜ್ಯಗಳ ಸ್ವಾಯತ್ತತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ  ಹೋಗುತ್ತಿದೆ.

 

Leave a Reply

Your email address will not be published.