ಗುಜರಾತ್ ಚುನಾವಣೆ – ಪ್ರದಾನಮಂತ್ರಿಗಳ ಪ್ರತಿಷ್ಠೆ

ಕು.ಸ.ಮಧುಸೂದನರಂಗೇನಹಳ್ಳಿ   

2014ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲಬಾರಿಗೆ ಬಾಜಪ ಮತ್ತದರ  ರಾಷ್ಟ್ರೀಯ ನಾಯಕರುಗಳಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ರಾಜ್ಯವೊಂದರ ವಿದಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಖುದ್ದು ಪ್ರದಾನಮಂತ್ರಿಯವರೇ ಚುನಾವಣಾ ಕಣದ ಜಂಗೀ ಕುಸ್ತಿಯ ಅಖಾಡಕ್ಕಿಳಿದು ನಿರಂತರ ಪ್ರಚಾರ ಕೈಗೊಳ್ಳುವುದನ್ನು ನಾವು ಹಿಂದೆಂದೂ ಇತಿಹಾಸದಲ್ಲಿ ನೋಡಿರಲಿಲ್ಲ, ಕೇಳಿರಲಿಲ್ಲ. ಅದೀಗ ನಮ್ಮ ಕಾಲದಲ್ಲೇ ನಡೆಯುತ್ತಿದೆ.

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳು ಅಂತಹದೊಂದು  ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ.  ಕಳೆದ ಎರಡು ದಶಕಗಳಿಂದಲೂ ಸತತವಾಗಿ  ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಾಜಪಕ್ಕೆ ಮೊದಲ ಬಾರಿಗೆ ಸೋಲಿನ ಭಯ ಕಾಡುತ್ತಿದ್ದರೆ ಅದಕ್ಕೆ ಹಲವಾರು ಕಾರಣಗಳಿವೆ.  ಹೀಗಾಗಿ ಪ್ರದಾನಿಯವರ ತವರು ರಾಜ್ಯದಲ್ಲಿ ಪಕ್ಷ ಸೋಲುವುದು ರಾಷ್ಟ್ರಮಟ್ಟದಲ್ಲಿ ಅದರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತಾಗುತ್ತದೆ ಮತ್ತು  ಅಂತರರಾಷ್ಟ್ರೀಯವಾಗಿ ಅದು ಪ್ರದಾನಿಯವರ ಇಮೇಜಿಗೆ ಧಕ್ಕೆಯನ್ನೂ ತರಬಹುದು. ಹೀಗಾಗಿಯೇ ಗುಜರಾತ್ ಚುನಾವಣೆ ಕಾಂಗ್ರೇಸ್ಸಿಗಿಂತ ಬಾಜಪಕ್ಕೆ ಹೆಚ್ಚು ಪ್ರತಿಷ್ಠೆಯ ಮತ್ತು ಗೆಲ್ಲಲೇ ಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿದೆ.

ಹೀಗಾಗಿ ಸ್ವತ: ನರೇಂದ್ರ ಮೋದಿಯವರೇ ಗುಜರಾತ್ ಚುನಾವಣೆಯ ಮುಖ್ಯ ತಾರಾ ಪ್ರಚಾರಕರಾಗಿ ಬಾಜಪವನ್ನು ಗೆಲುವಿನ ದಡ ಸೇರಿಸಲು ಮುಂದಾಗುತ್ತಿದ್ದಾರೆ. ಪ್ರದಾನಮಂತ್ರಿಗಳಾದ ನರೇಂದ್ರಮೋದಿಯವರೆ ಇದೀಗ ಗುಜರಾತಿನ ಚುನಾವಣಾ ಅಖಾಡಕ್ಕೆ ಇಳಿದು ಪಕ್ಷವನ್ನು ಗೆಲ್ಲಿಸುವ  ರಣಕಹಳೆ ಮೊಳಗಿಸಿದ್ದಾರೆ. ಗುಜರಾತಿನ ಬಾಜಪ ಪಕ್ಷವು ಈಗ ನರೇಂದ್ರ ಮೋದಿಯವರಹೆಸರನ್ನು ಹೇಳಿಕೊಂಡೇ ಮತಬಿಕ್ಷೆ ಮಾಡುತ್ತಿದೆ. ದೆಹಲಿಯಲ್ಲಿ ಮೋದಿಯವರು ಅಧಿಕಾರದಲ್ಲಿ ಉಳಿಯಲು ಗುಜರಾತಿನಲ್ಲಿ ನೀವು ಬಾಜಪ ಪಕ್ಷವನ್ನು ಗೆಲ್ಲಿಬೇಕೆಂಬ ಬಾವನಾತ್ಮಕ ಮನವಿಯನ್ನು ಬಾಜಪ ಮಾಡುತ್ತಿದೆ.

ಹೀಗಾಗಿಯೇ ಕಳೆದ ಆರು ತಿಂಗಳಲ್ಲಿ ನರೇಂದ್ರ ಮೋದಿಯವರು ವಿವಿಧ ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಸುಮಾರು ಹತ್ತು ಬಾರಿ ಗುಜರಾತಿಗೆ ಬಂದು ಹೋಗಿದ್ದಾರೆ. ಹಾಗೆ ಬಂದು ಹೋದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಅವರು ಹೆಚ್ಚೂ ಕಡಿಮೆ ಚುನಾವಣಾ ಬಾಷಣಗಳನ್ನೇ ಮಾಡಿದ್ದಾರೆ. ನರ್ಮದಾ ಅಣೆಕಟ್ಟು ಉದ್ಘಾಟನಾ ಸಮಾರಂಭ ಮತ್ತು ಬುಲೆಟ್ ರೈಲು ಯೋಜನೆಯ ಶಂಕುಸ್ಥಾಪನೆಯಿಂದ ಹಿಡಿದು ನೂರಾರು ಯೋಜನೆಗಳಿಗೆ ಅಡಿಗಲ್ಲುಗಳನ್ನು ಹಾಕುವ ಕೆಲಸ ಮಾಡಿ ಚುನಾವಣಾ ಸಿದ್ದತೆಯನ್ನು ಮಾಡುತ್ತಲೇ ಬಂದಿದ್ದಾರೆ. ಇಷ್ಟಲ್ಲದೆ ಕಳೆದ ಮೂರು ತಿಂಗಳಿನಿಂದ ಕೇಂದ್ರ ಸಂಪುಟದ ಸುಮಾರು ಮುವತ್ತು ಸಚಿವರಿಗೆ ಗುಜರಾತನ್ನು ವಿವಿಧ ಭಾಗಗಳನ್ನಾಗಿ ಮಾಡಿ ಚುನಾವಣಾ ಜವಾಬ್ದಾರಿಯನ್ನು, ಸಂಪನ್ಮೂಲ ಕ್ರೋಢೀಕರಣದ ಹೊಣೆಯನ್ನು ನೀಡಲಾಗಿದೆ. ಇದೀಗ ಬಾಜಪ ಆಡಳಿತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಬಾಗವಹಿಸಬೇಕೆಂಬ ಅಲಿಖಿತ ಆದೇಶ ಹೊರಟಿದ್ದು  ಗುಜರಾತಿನ ಮೂಲೆಮೂಲೆಗಳಲ್ಲಿಯೂ ಬಾಜಪದ ನಾಯಕರುಗಳು ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ,ಪ್ರಕಾಶ್ ಜಾವ್ಡೇಕರ್ ಗುಜರಾತಿನಲ್ಲಿ ಮನೆಮನೆಗೆ ತೆರಳಿ ಪಾದ ಯಾತ್ರೆಯ ಮೂಲಕ ಮತಯಾಚನೆ ಮಾಡಲು ಆರಂಬಿಸಿದ್ದಾರೆ. ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಅಮಿತ್ ಷಾರವರು ಈಗಾಗಲೇ ಗುಜರಾತಿನ ಮೂಲೆಮೂಲೆಗಳಲ್ಲಿಯೂ ಪ್ರವಾಸ ಮಾಡುತ್ತ ಬೂತ್ ಮಟ್ಟದ ಕಾರ್ಯಕ್ರಮಗಳ ಸಭೆಗಳನ್ನು ನಡೆಸುತ್ತಿದ್ದಾರೆ,

ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಪ್ರದಾನಮಂತ್ರಿಗಳಾದ ನರೇಂದ್ರಮೋದಿಯವರು ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು ಜಿಲ್ಲೆಗೆ ಒಂದರಂತೆ ಮುವತ್ತೆರಡು   ರ್ಯಾಲಿಗಳಲ್ಲಿ ಬಾಗವಹಿಸಿ ಬಾಷಣ ಮಾಡಲಿದ್ದಾರೆ. ಈ ರ್ಯಾಲಿಗಳ ಜೊತೆ ಮೋದಿಯವರು ಸೂರತ್, ವಡೋದರ, ರಾಜಕೋಟ್ ಮತ್ತು ಅಹಮದಾಬಾದ್ ನಗರಗಳಲ್ಲಿ ಬೃಹತ್ ರೋಡ್ ಶೋಗಳನ್ನು ಸಹ ನಡೆಸಲಿದ್ದಾರೆ. ಬಾಜಪದ ಟಿಕೇಟು ಹಂಚಿಕೆಯ  ಕಾರ್ಯ ಬಹುತೇಕ ಈ ತಿಂಗಳ ಹದಿನೈದು ಮತ್ತು ಹದಿನಾರರಂದು ನಡೆಯಲಿದ್ದು ನವೆಂಬರ್ ಇಪ್ಪತ್ತನೇ ತಾರೀಖಿನ ನಂತರ ನರೇಂದ್ರ ಮೋದಿಯವರ ಗುಜರಾತ್ ಯಾತ್ರೆ ಪ್ರಾರಂಭವಾಗುವ ಅಂದಾಜಿದೆ.

ಈ ಹಿನ್ನೆಯಲ್ಲಿ ಅದಾಗಲೇ ಗುಜರಾತ್ ಬಾಜಪದ ನಾಯಕರುಗಳು ಮೋದಿಯವರ ಹೆಸರಲ್ಲಿ ಮತ ಕೇಳುತ್ತಿದ್ದು, ಗುಜರಾತಿಯೊಬ್ಬರು ದೇಶದ ಪ್ರದಾನಮಂತ್ರಿಯಾಗಿರಲು ಮೊದಲು ಗುಜರಾತ್ ಜನತೆ ಬಾಜಪವನ್ನು ಗೆಲ್ಲಿಸಬೇಕಾಗಿದೆಎಂಬ ಬಾವನಾತ್ಮಕ  ಮಾತುಗಳನ್ನಾಡುತ್ತ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಪ್ರದಾನಮಂತ್ರಿಗಳೊಬ್ಬರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳೇನೊ ಎನ್ನುವಂತೆ  ಚುನಾವಣಾ ಪ್ರಚಾರದ ಹೊಣೆಯನ್ನು ಹೊತ್ತುಕೊಂಡು ಪ್ರಚಾರ ಮಾಡುತ್ತ, ಗುಜರಾತ್ ಜನತೆಗೆ ಹಲವಾರು ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಯಾಕೆ ಗುಜರಾತಿನ ಈ ಚುನಾವಣೆಯನ್ನು ಸ್ವತ: ಪ್ರದಾನಮಂತ್ರಿಗಳು ತಮ್ಮ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡಿದ್ದಾರೆಂಬುದನ್ನು ನೋಡುತ್ತಾ ಹೋದರೆ ಸಿಗುವುದು ಬಾಜಪ ಈ ಬಾರಿ ಸೋಲಬಹುದೆಂಬ ಅವ್ಯಕ್ತ ಭಯ!ಹಾಗಿದ್ದರೆ ಯಾಕಾಗಿ ಬಾಜಪ ಗುಜರಾತಿನಲ್ಲಿ ಸೋಲಬಹುದೆಂಬುದನ್ನು ಸಂಕ್ಷಿಪ್ತವಾಗಿ ನೋಡೋಣ:

ಮೊದಲನೆಯಾಗಿ ಕಳೆದ ಎರಡು ದಶಕಗಳ  ಬಾಜಪ ಸರಕಾರದ ಆಡಳಿತ ಸಹಜವಾಗಿಯೇ ಆಡಳಿತ ವಿರೋಧಿ ಅಲೆಯೊಂದನ್ನು ಸೃಷ್ಠಿಸಿದ್ದು, ಕಾಂಗ್ರೇಸ್ ಅದನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಎರಡನೆಯದಾಗಿ ಶ್ರೀ ನರೇಂದ್ರಮೋದಿಯವರು ಪ್ರದಾನಮಂತ್ರಿಯಾಗಿ ಆಯ್ಕೆಯಾಗಿ ದೆಹಲಿಯತ್ತ ಮುಖ ಮಾಡಿದ ನಂತರ ರಾಜ್ಯ ಬಾಜಪದಲ್ಲಿ ಜನಪ್ರಿಯ ನಾಯಕನೊಬ್ಬನ ಕೊರತೆ ಕಾಣುತ್ತಿದೆ. ರಾಜ್ಯದಲ್ಲಿ ಪಕ್ಷವನ್ನು ತನ್ನ ಹೆಗಲ ಮೇಲೆ ಹೊತ್ತು ಚುನಾವಣೆ ಎದುರಿಸಬಲ್ಲ ಒಬ್ಬನೇ ಒಬ್ಬ  ಜನಸಮುದಾಯದ ನಾಯಕನೂ ಗುಜರಾತ್ ಬಾಜಪದಲ್ಲಿ ಕಂಡು ಬರುತ್ತಿಲ್ಲ.

ಇನ್ನು ಕಳೆದ ಮೂರು ವರ್ಷಗಳಿಂದ ನಡೆಯುತ್ತ ಬಂದ ಪಾಟೀದಾರರ ಮೀಸಲಾತಿ ಚಳುವಳಿ ಪಟೇಲ್ ಸಮುದಾಯವನ್ನು ಬಾಜಪದಿಂದ ದೂರ ಸರಿಸಿದ್ದು, ಆ ಚಳುವಳಿಯ ಯುವ ನಾಯಕ ಹಾರ್ದಿಕ್ ಪಟೇಲರೀಗ ಕಾಂಗ್ರೇಸ್ಸಿನ ಬೆಂಬಲ್ಕೆ ನಿಮತಿರುವುದು ಬಾಜಪಕ್ಕೆ ತಲೆನೋವಿನ ವಿಚಾರವಾಗಿದೆ. ಕೇಂದ್ರದಲ್ಲಿ ಬಾಜಪ ಅಧಿಕಾರಕ್ಕೆ ಬಂದನಂತರ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿದ್ದ ದಲಿತ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಗುಜರಾತಿಗೂ ವ್ಯಾಪಿಸಿದ್ದು, ಊನಾದಂತಹ ಪ್ರಕರಣಗಳು  ಗುಜರಾತ್ ಜನತೆಯ ಅಸಮಾದಾನಕ್ಕೆ ಕಾರಣವಾಗುತ್ತ ಹೋದವು. ದಲಿತರ ಮೇಲಿನ ಈ ಹಲ್ಲೆಯನ್ನು ಖಂಡಿಸಿ ನಡೆದ ಚಳುವಳಿಯ ನೇತೃತ್ವ ವಹಿಸಿದ ಯುವನಾಯಕರಾದ ಜಿಗ್ನೇಶ್ ಮೆವಾನಿಯಂತವರು ಸಹ ಬಾಜಪವನ್ನು ಸೋಲಿಸಲೆಂದೇ ಕಾಂಗ್ರೇಸ್ಸಿಗೆ ಬೆಂಬಲ ಘೋಷಿಸಿರುವುದು ಬಾಜಪಕ್ಕೆ ಕಷ್ಟವನ್ನು ತಂದಿಟ್ಟಿದೆ. ಇನ್ನು ಹಿಂದುಳಿದ ವಗ್ಗಳ ನಾಯಕರಾದ ಅಲ್ಪೇಶ್ ಠಾಕೂರ್ ಈಗಾಗಲೇ ಕಾಂಗ್ರೇಸ್ ಸೇರಿದ್ದು ಬಾಜಪದ ಸಂಕಷ್ಟವನ್ನು ಹೆಚ್ಚಿಸಿದೆ.

  ನೋಟ್ ಬ್ಯಾನಿನ ನಂತರ ಗುಜರಾತಿನ ಸಾಮಾನ್ಯ ಜನತೆ ಮಾತ್ರವಲ್ಲದೆ ಅಲ್ಲಿನ ವ್ಯಾಪಾರಸ್ಥರು ಸಹ ತೀವ್ರ ರೀತಿಯ ಸಂಕಷ್ಟ ಅನುಭವಿಸಬೇಕಾಯಿತು. ಇದರ ಹಿಂದೆಯೇ ಬಂದ ಜಿ.ಎಸ್.ಟಿ. ಕಾಯಿದೆ ಗುಜರಾತಿನ ಇಡಿ ವರ್ತಕ ಸಮುದಾಯದಲ್ಲಿ ತೀವ್ರ ಅಸಮಾದಾನವನ್ನು ಹುಟ್ಟು ಹಾಕಿತು. ಆ ಸಮುದಾಯ ಅಪಾರ ನಷ್ಬವನ್ನು ಅನುಭವಿಸಬೇಕಾಯಿತು. ಮೋದಿಯವರ ಜೊತೆಗೆಯೇ ದೆಹಲಿಯತ್ತ ನಡೆದು ಹೋದ ಅಮಿತ್ ಷಾರವರ ನಿರ್ಗಮನದಿಂದ ಗುಜರಾತ್ ಬಾಜಪದಲ್ಲಿ ಭಿನ್ನಮತೀಯ ಚಟುವಟಿಕೆಗಳು ಹೆಚ್ಚಾಗಿದ್ದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲವೆಂಬ ಸಂದೇಶದ ಜನರಿಗೆ ಈಗಾಗಲೇ ತಲುಪಿದೆ.

ಈ ಎಲ್ಲಾ ಕಾರಣಗಳು ಬಾಜಪದ ಸತತ ಗೆಲುಬಿನ ಓಟಕ್ಕೆ ತಡೆಯೊಡ್ಡಬಹುದೆಂಬ ರಾಜಕೀಯ ವಿಶ್ಲೇಷಕರ ಅನುಮಾನವೇ ಇದೀಗ ಬಾಜಪದ ನಿದ್ದೆಗೆಡಿಸಿದ್ದು, ಪ್ರದಾನಮಂತ್ರಿಗಳೇ  ಗುಜರಾತ್ ಗೆಲುವಿಗೆ ಪಣತೊಟ್ಟು ಮೈದಾನಕ್ಕಿಳಿದಿರುವಂತೆ ಗೋಚರವಾಗುತ್ತಿದೆ. ಆದರೆ ಬಾಜಪದ ಸೋಲಾಗಲಿ ಕಾಂಗ್ರೇಸ್ಸಿನ ಗೆಲುವಾಗಲಿ ನಾವಂದುಕೊಂಡಷ್ಟು ಸುಲಭವಾಗಿಲ್ಲ. ಯಾಕೆಂದರೆ ಸತತ ಸೋಲುಗಳಿಮದ ಕಂಗೆಟ್ಟಿರುವ ಗುಜರಾತಿನ ಕಾಂಗ್ರೇಸ್  ಹೇಗೆ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜಪದ ಸೋಲು-ಗೆಲುವು ನಿರ್ದಾರವಾಗಲಿದೆ ಎನ್ನುವುದಂತು ನಿಜ.

ರಾಜ್ಯವೊಂದರ ವಿದಾನಸಭಾ ಚುನಾವಣೆ ಪ್ರದಾನಿಯೊಬ್ಬರ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವತ: ಅವರೇ  ಪ್ರಚಾರಕ್ಕೆ ಈ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಅವರು ಅಲಂಕರಿಸಿರುವ ಹುದ್ದೆಗೆ ಘನತೆ ತರುವಂತಹುದೇನೂ ಅಲ್ಲ. ಆದರೆ ಇಂಡಿಯಾದ ಸಂಸದೀಯ ಪ್ರಜಾಸತ್ತೆಯಲ್ಲಿ ಚುನಾವಣೆಗಳ ಗೆಲುವೆ ಎಲ್ಲದಕ್ಕೂ ಮಾನದಂಡವಾಗಿರುವ ಸನ್ನಿವೇಶದಲ್ಲಿ ಇದೇನು ಅಚ್ಚರಿಯ ವಿಷಯವೂ ಅಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು, ಅಷ್ಟೇ!

 

 

 

Leave a Reply

Your email address will not be published.