ಗುಜರಾತ್ ಚುನಾವಣೆ: ಕಾಂಗ್ರೇಸ್ಸಿನ ಪುನಶ್ಚೇತನಕ್ಕೆ ಕಾರಣವಾಗಲಿವೆಯೇ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ರಾಷ್ಟ್ರ ರಾಜಕಾರಣದಲ್ಲಿ  ಸರಿಸಾಟಿಯಿರದಂತೆ ಬೆಳೆಯುತ್ತಿರುವ  ಬಾರತೀಯ ಜನತಾ ಪಕ್ಷಕ್ಕೆ ಕಡಿವಾಣ ಹಾಕಲು ಕರ್ನಾಟಕವೇ  ಸರಿಯಾದ ರಾಜ್ಯವೆಂಬ ಮಾತು ಕಾಂಗ್ರೇಸ್ಸಿಗರಿಂದ ಮಾತ್ರವಲ್ಲದೆ ಪಕ್ಷಾತೀತವಾಗಿರುವ ಜನರಿಂದಲೂ ಕೇಳಿ ಬರುತ್ತಿದೆ. ಉತ್ತರದ ರಾಜ್ಯಗಳಂತೆ ಕರ್ನಾಟಕದ ಜನತೆ ಮತಾಂಧತೆಯ  ಮತ್ತಿನಲ್ಲಿ ಮತಚಲಾಯಿಸಲಾರರೆಂಬ ನಂಬಿಕೆಯೇ ಆ ಮಾತಿನ ಹಿಂದಿರುವ ಭರವಸೆ.

ಆದರೆ  ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆಗಳಿಗೂ ಮುಂಚೆಯೇ ಬರಲಿರುವ  ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳನ್ನು ಸರಿಯಾದ ರೀತಿಯಲ್ಲಿ ನಿಬಾಯಿಸಿದರೆ  ಅಲ್ಲಿಯೂ ಬಾಜಪವನ್ನು ಹಿಮ್ಮೆಟ್ಟಿಸಿ ಎರಡು ದಶಕಗಳ ನಂತರ ಕಾಂಗ್ರೇಸ್ಸನ್ನು ಅಲ್ಲಿ ಅಧಿಕಾರಕ್ಕೆ ತರಬಹುದೆಂಬ ಮಾತುಗಳೂ  ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ಗುಜರಾತ್ ರಾಜ್ಯದ ವರ್ತಮಾನದ ರಾಜಕಾರಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಬೇಕಾಗುತ್ತದೆ. ಜೊತೆಗೆ 2002ರಿಂದಲೂ ಸತತವಾಗಿ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಬಾಜಪಕ್ಕೆ ಇರಬಹುದಾದ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳನ್ನೂ ನಾವು   ಅದ್ಯಯನ ಮಾಡಬೇಕಾದ ಅಗತ್ಯವಿದೆ.

ಕಳೆದ ಒಂದು ವರ್ಷದಿಂದಲೇ  ವಿದಾನಸಭಾ ಚುನಾವಣೆಗೆ ಸಿದ್ದವಾಗುತ್ತಿರುವ ಗುಜರಾತ್ ರಾಜ್ಯ ಬಾಜಪ ತನ್ನ ಹೈಕಮ್ಯಾಂಡಿನ ಆದೇಶದಂತೆ ತಂತ್ರಗಾರಿಕೆಗಳನ್ನು ಮಾಡುತ್ತ ಬರುತ್ತಿದ್ದು ಅದು ಅಂತಿಮವಾಗಿ ನಂಬಿಕೊಂಡಿರುವುದು ಪ್ರದಾನಮಂತ್ರಿಗಳಾದ ನರೇಂದ್ರಮೋದಿಯವರ ಜನಪ್ರಿಯತೆಯ ಮುಖವಾಡವನ್ನೇ! 2014ರ ಸಾರ್ವತ್ರಿಕ ಚುನಾವಣೆಗಳನ್ನು ಗೆಲ್ಲುವಲ್ಲಿ  ಇದೇ ನರೇಂದ್ರ ಮೋದಿಯವರು ಗುಜರಾತ್ ಮಾದರಿಯ ಅಭಿವೃದ್ದಿಯ ಪರಿಕಲ್ಪನೆಯನ್ನು ಜನರ ಮುಂದಿಟ್ಟು ಚುನಾವಣೆ ಗೆದ್ದಿದ್ದರು. ಆ ಗುಜರಾತ್ ಮಾದರಿಯ ಅಭಿವೃದ್ದಿಯ ಪ್ಯಾಕೇಜಿನಲ್ಲಿನ ಮಿಥ್ಯಗಳೇನೆ ಇದ್ದರೂ ದೇಶದ ಜನತೆ ಅಂತಹದೊಂದು  ಮಾತಿಗೆ ಮರುಳಾಗಿ ಮತಚಲಾಯಿಸಿದ್ದಂತು ಸತ್ಯ.

ಆದರೆ 2014ರಲ್ಲಿ ಪ್ರದಾನಮಂತ್ರಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ಅವರ ಜನಪ್ರಿಯತೆಗೆ ಸಾಟಿಯಾಗಬಲ್ಲ ಇನ್ನೊಬ್ಬ ನಾಯಕ ಬಾಜಪಕ್ಕೆ ದೊರೆಯಲಿಲ್ಲ. ಅಮಿತ್ಷಾ ಸಹ ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ನಂತರ ಗುಜರಾತ್ ಬಾಜಪದಲ್ಲಿ  ಬಲಿಷ್ಠ ನಾಯಕತ್ವದ ಕೊರತೆ ಎದುರಾಯಿತು. ಮೋದಿಯವರು ತೆರವುಗೊಳಿಸಿದ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ  ಆನಂದೀಬೇನ್ ಸಹ   ಸಮರ್ಥ ನಾಯಕಿಯಾಗಿ ರೂಪುಗೊಳ್ಳಲು ಸಾದ್ಯವಾಗಲಿಲ್ಲ. ಇದಕ್ಕಿದ್ದ ಮುಖ್ಯ ಕಾರಣ ಗುಜರಾತ್ ರಾಜ್ಯ ರಾಜಕಾರಣವನ್ನು ತೊರೆದು ಹೋದನಂತರವೂ ಮೋದಿ ಮತ್ತು ಅಮಿತ್ ಷಾ ಜೋಡಿ,  ಅಲ್ಲಿನ ಪಕ್ಷದ ರಾಜ್ಯಘಟಕ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಹ  ವಾತಾವರಣವನ್ನು ನಿರ್ಮಿಸಲೇ ಇಲ್ಲ. ಇವತ್ತು ವಿಜಯ್ ರೂಪಾನಿಯವರು ಮುಖ್ಯಮಂತ್ರಿಗಳಾಗಿದ್ದರೂ ತಮ್ಮ ಸ್ವಂತ ಬಲದಿಂದ ಪಕ್ಷವನ್ನು ಗೆಲ್ಲಿಸಿಕೊಂಡು ಬರಬಲ್ಲ ಸರ್ವಸಮ್ಮತ ವ್ಯಕ್ತಿತ್ವವನ್ನು ಹೊಂದಿಲ್ಲದಿರುವುದುಸಹ ಬಾಜಪದ ಹಿನ್ನಡೆಗೆ ಕಾರಣವಾಗಬಹುದು. ಇನ್ನು ಸತತವಾಗಿ ಇಪ್ಪತ್ತೆರಡು ವರ್ಷಗಳ ಕಾಲ ಆಡಳಿತ ನಡೆಸಿದ ಬಾಜಪ ಸರಕಾರದ ವಿರುದ್ದ ಇರುವ ಆಡಳಿತ ವಿರೋಧಿ ಅಲೆ ಕೂಡ ಬಾಜಪಕ್ಕೆ ತಲೆನೋವಿನ ಸಂಗತಿಯೇ ಆಗಿದೆ. ಇದೀಗ ಲಭ್ಯವಿರುವ 182 ಸ್ಥಾನಗಳ ಪೈಕಿಬಾಜಪ 150 ಸ್ಥಾನಗಳನ್ನು ಗೆಲ್ಲುವ ಮಾತಾಡುತ್ತಿದೆ. ತನ್ಮೂಲಕ ತನ್ನ ಸ್ಥಳೀಯ ನಾಯಕರುಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದರೆ ವಾಸ್ತವ ಹಾಗಿಲ್ಲ. ಯಾಕೆಂದರೆ ನರೇಂದ್ರ ಮೋದಿಯವರ ಜನಪ್ರಿಯತೆ ಉತ್ತುಂಗದಲ್ಲಿ ಇದ್ದಾಗಲೇ ಅಂದರೆ 2012ರಲ್ಲಿ ನಡೆದ ವಿದಾನಸಭಾ ಚುನಾವಣೆಯಲ್ಲಿ ಬಾಜಪಕ್ಕೆ ಗೆಲ್ಲಲು ಸಾದ್ಯವಾಗಿದ್ದು 129 ಸ್ಥಾನಗಳನ್ನು ಮಾತ್ರ.  ಹಾಗಾಗಿ 150 ಸ್ಥಾನಗಳ ಬಗ್ಗೆ ಮಾತನಾಡುತ್ತಿರುವ ಬಾಜಪ ಅದನ್ನು ಸಾಧಿಸಿಬಿಡುತ್ತದೆ ಎಂದು ನಂಬಲಂತು ಸಾದ್ಯವಲ್ಲ. ಅದೇ ಸಮಯದಲ್ಲಿ ಕಾಂಗ್ರೇಸ್ 2002 ರಲ್ಲಿ 51 ಸ್ಥಾನಗಳನ್ನು, 2007ರಲ್ಲಿ 59 ಸ್ಥಾನಗಳನ್ನು, 2012ರಲ್ಲಿ 60 ಸ್ಥಾನಗಳನ್ನು ಗೆದ್ದು  ಏರುಮುಖವಾಗಿ ಚಲಿಸುತ್ತಿರವಂತೆ ಕಾಣುತ್ತಿದೆ. ಅದೇ ರೀತಿ ಶೇಕಡಾವಾರು ಮತಗಳಿಕೆಯ ಪ್ರಮಾಣದಲ್ಲಿಯೂ ಏರಿಳಿತಗಳು ಕಂಡು ಬರುತ್ತಿವೆ.  ದೇಶದ ಜನರಿಗೆ ಗುಜರಾತ್ ಮಾದರಿಯ ಅಭಿವೃದ್ದಿ ಎಂಬ ಘೋಷಣೆಯನ್ನು ನೀಡಿದ ಹಾಗೆ  ಗುಜರಾತಿನ ಜನರನ್ನು ಅಷ್ಟು ಸುಲಭದಲ್ಲಿ ನಂಬಿಸಿ ಮತಗಳಿಸುವುದು ಬಾಜಪಕ್ಕೆ ಕಷ್ಟಸಾದ್ಯದ ಮಾತಾಗಿದೆ.

ಇನ್ನು ಹಾರ್ದಿಕ್ ಪಟೇಲರ ನೇತೃತ್ವದಲ್ಲಿ ನಡೆದ ಪಾಟಿದಾರರ ಮೀಸಲಾತಿ ಬೇಡಿಕೆಯ ಚಳುವಳಿಯಿಂದಾಗಿ ಪಟೇಲ್  ಸಮುದಾಯ ಬಾಜಪದ ಮೇಲೆ ಮುನಿಸಿಕೊಂಡಿದೆ. ಆಗ ಮುಖ್ಯಮಂತ್ರಿಯಾಗಿದ್ದ ಆನಂದಿ ಬೆನ್ ಹಾರ್ದಿಕ್ ಪಟೇಲರನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂಬ ಅಸಮಾದಾನ ಆ ಸಮುದಾಯದ್ದಾಗಿದೆ. ಪಟೇಲ್ ಸಮುದಾಯವನ್ನು ಒಲಿಸಿಕೊಳ್ಳಲು ಬಾಜಪ ಸರಕಾರ   ಅವರುಗಳಿಗೆ ಮೀಸಲಾತಿ ಕಲ್ಪಿಸುವ ಪ್ರಯತ್ಮವನ್ನೇನೊ ಮಾಡಿ ಕಾಯಿದೆಗಳನ್ನು ಜಾರಿಗೆ ತಂದರೂ ನ್ಯಾಯಾಲಯದ  ಮದ್ಯಪ್ರವೇಶದಿಂದ  ಆ ಕಾಯಿದೆಗಳೂ ಊರ್ಜಿತವಾಗಲಿಲ್ಲ. ಹೀಗಾಗಿ ಬಾಜಪ ಪಟೇಲರ ಓಲೈಕೆಗೆ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಪಾಟಿದಾರ್ ಸಂಘಟನೆಯನ್ನು ಒಡೆಯುವ ಯತ್ನದಲ್ಲಿದೆ.

ಸತ್ತ ದನಗಳ ಚರ್ಮ ಸುಲಿಯುವ ಕಾಯಕ ಮಾಡುತ್ತಿದ್ದ ದಲಿತ ಯುವಕರ ಮೇಲೆ ಸ್ವಘೋಷಿತ ಗೋರಕ್ಷಕರು ಮಾಡಿದ ಹಲ್ಲೆ( ಊನಾ ಪ್ರಕರಣ) ದಲಿತ ಮತ್ತು ಇತರೆ ತಳ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ.  ಈ ಊನಾ ಪ್ರಕರಣ ಬೆಳಕಿಗೆ ಬಂದ ಕೂಡಲೆ  ಜಿಗ್ನೇಶ್ ಮೆವಾನಿ ಎಂಬ ಯುವ ವಕೀಲರು ದಲಿತರನ್ನು ಬಾಜಪ ಸರಕಾರದ ವಿರುದ್ದ ಸಂಘಟಿಸಲು ಶುರು ಮಾಡಿದರು. ಇದಕ್ಕಾಗಿಯೇ ಅವರು ಅಸ್ಮಿತಾ ಯಾತ್ರೆಯನ್ನು ಹಮ್ಮಿಕೊಂಡಿದ್ದರು. ದಲಿತರ ಈ ಹೋರಾಟಕ್ಕೆ ಗುಜರಾತಿನ ಅಲ್ಪಸಂಖ್ಯಾತರೂ ಸಹ ಕೈ ಜೋಡಿಸಿದ್ದು ಬಾಜಪದ ಮಟ್ಟಿಗೆ ಆತಂಕಕಾರಿಯಾದ ವಿಚಾರವಾಗಿದೆ. ದಿನಕಳೆದಂತೆ ಈ ಹೋರಾಟ ಕೇವಲ ಗೋರಕ್ಷಕರ  ನೈತಿಕ ಪೋಲೀಸುಗಿರಿಯ ಬಗ್ಗೆ ಮಾತ್ರವಲ್ಲದೆ ಭೂಮಿಯ ಹಕ್ಕನ್ನು ಕೇಳುವ ಚಳುವಳಿಯಾಗಿ ಮಾರ್ಪಾಡಾಯಿತು. ಈ ಊನಾ ಘಟನೆಯಿಂದಾದ ರಾಷ್ಟ್ರ ಮಟ್ಟದ  ಋಣಾತ್ಮಕ ಪ್ರಚಾರದಿಂದ ಹೊರಬರಲೆಂದೇ ಬಾಜಪ ದಲಿತರೊಬ್ಬರನ್ನು ರಾಷ್ಟ್ರಪತಿಯನ್ನಾಗಿ ಮಾಡಲು ನಿರ್ದರಿಸಿದ್ದೆಂಬ  ಮಾತೂ ಇದೆ.

ಇನ್ನು ಕಳೆದ ವರ್ಷದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪಲಿತಾಂಶಗಳನ್ನು ನೋಡಿದರೆ ಬಾಜಪ ಗ್ರಾಮೀಣ ಭಾಗದಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಕೆಲ ಲಕ್ಷಣಗಳು ಗೋಚರಿಸುತ್ತವೆ. ಡಿಸೆಂಬರ್ 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೇಸ್ ಒಟ್ಟು 31 ಜಿಲ್ಲಾ ಪಂಚಾಯಿತಿಗಳ ಪೈಕಿ 23ನ್ನು ಗೆದ್ದು ಗ್ರಾಮೀಣ ಭಾಗದಲ್ಲಿ ತಾನು ಚೇತರಿಸಿಕೊಂಡಿರುವ ಬಗ್ಗೆ ಮೊದಲ ಸೂಚನೆಯನ್ನು ನೀಡಿತು. ಆದರೆ ಬಾಜಪ ನಗರ ಪಾಲಿಕೆಗಳಲ್ಲಿ  ಬಾರಿ ಬಹುಮತ ಪಡೆದು ದಿಗ್ವಿಜಯ ಸಾದಿಸಿತು. ಇದು ಗುಜರಾತಿನಲ್ಲಿ ಕಳೆದ 22 ವರ್ಷಗಳಿದ ಅಧಿಕಾರವಂಚಿತವಾಗಿದ್ದ ಕಾಂಗ್ರೇಸ್ ನಿದಾನವಾಗಿ ಗ್ರಾಮೀಣ ಭಾಗದಲ್ಲಿ ಮತ್ತೆ ತನ್ನ ನೆಲೆ ಕಂಡುಕೊಳ್ಳುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಇದಕ್ಕೆ ಅದರದೇ ಆದ ಕಾರಣಗಳೂ ಇವೆ. ಮೋದಿಯವರ ಗುಜರಾತ್ ಮಾದರಿಯ ಅಭಿವೃದ್ದಿಗಳೆಲ್ಲ ನಡೆದಿರುವುದು  ಆ ರಾಜ್ಯದ ನಗರ ಪ್ರದೇಶಗಳಲ್ಲಿ ಮಾತ್ರ. ಅದರಲ್ಲೂ ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳ ವಲಯದಲ್ಲಿ ಮಾತ್ರ. ಇಂತಹ ಅಭಿವೃದ್ದಿಗೆ ಗುಜರಾತಿನ ಗ್ರಾಮೀಣ ಭಾಗದ ಜನತೆ ತಮ್ಮ ಭೂಮಿಯನ್ನು ಕಳೆದುಕೊಂಡರೆ ಹೊರತು ಅದರ ಫಲ ಅವರಿಗೆ ದೊರೆಯಲಿಲ್ಲ. ಅದರಲ್ಲೂ ಗುಜರಾತಿನ ಕೃಷಿ ವಲಯ ಕಳೆದ ಹಲವಾರು ವರ್ಷಗಳಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದು ದೇಶದ ಇತರೆ ಭಾಗದ ರೈತರಿಗಿಂತ ಹೀನಸ್ಥಿತಿಯಲ್ಲಿ   ಅಲ್ಲಿನ ರೈತರು ಬದುಕುತ್ತಿದ್ದಾರೆ..  ಸತತವಾಗಿ  ಬರಗಾಲ ಎದುರಿಸುತ್ತಿರುವ ಗುಜರಾತಿನ ರೈತರ ನೆರವಿಗೆ ಬಾಜಪ ಸರಕಾರದ ಯಾವ ಅಬಿವೃದ್ದಿ ಕಾರ್ಯಗಳೂ ನೆರವಿಗೆಬಂದಿಲ್ಲ. ರಾಜ್ಯದ ಶಿಕ್ಷಣ ಕ್ಷೇತ್ರವಾಗಲಿ ಇತರ ಮೂಲ ಸೌಕರ್ಯಗಳ ಕ್ಷೇತ್ರದಲ್ಲಾಗಲಿ ಯಾವ ಬದಲಾವಣೆಯನ್ನೂ ಕಂಡಿಲ್ಲ. ಇದು ಗ್ರಾಮೀಣ ಭಾಗದ ಜನರಲ್ಲಿ ಅಸಹನೆಯನ್ನು ಹುಟ್ಟು ಹಾಕಿದೆ. ಇನ್ನು ಇತ್ತೀಚೆಗೆ ಜಾರಿಗೊಂಡ ಜಿ.ಎಸ್.ಟಿ.   ಗುಜರಾತಿನ ಉದ್ಯಮಿಗಳ ಅಸಮಾದಾನಕ್ಕೂ ಕಾರಣವಾಗಿದ್ದ ಅದನ್ನು ವಿರೋಧಿಸಿ ವಾರಗಟ್ಟಲೆ ಮುಷ್ಕರಗಳೂ ನಡೆದಿದ್ದವು. ಇವೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಮುಂದಿನ ಗುಜರಾತ್ ವಿದಾನಸಭಾ ಚುನಾವಣೆಗಳಲ್ಲಿ ಕಾಂಗ್ರೇಸ್ಸಿಗೆ ಗೆಲ್ಲಬಲ್ಲ ಅವಕಾಶಗಳ ಹಾದಿಯೊಂದು ತೆರೆದಂತೆ ಕಾಣುತ್ತಿದೆ.

ಆದರೆ ಇವೆಲ್ಲವೂ ನಾವಂದುಕೊಂಡಷ್ಟು ಸುಲಭವೂ ಅಲ್ಲ. ಯಾಕೆಂದರೆ ರಾಜ್ಯಗಳಲ್ಲಿನ ಪಕ್ಷದ ಘಟಕಗಳನ್ನು ನಿರ್ವಹಿಸುವ  ಕ್ರಿಯೆಯಲ್ಲಿ ಕಾಂಗ್ರೇಸ್ ಹೈಕಮ್ಯಾಂಡ್ ವಿಫಲವಾಗುತ್ತಿರುವುದನ್ನು ನಾವು ಗಮನಿಸುತ್ತಲೇ ಇದ್ದೇವೆ. ಗುಜರಾತಿನಲ್ಲಿಯೂ ಸದ್ಯಕ್ಕೆ ಕಾಂಗ್ರೇಸ್ ಅದೇ ತಪ್ಪನ್ನು ಮಾಡಿಕೊಂಡಿದೆ. ಒಂದು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕ್ಷತ್ರಿಯ ಸಮುದಾಯದ ಬಲಿಷ್ಠ ನಾಯಕರಾದ ಶಂಕರ್ ಸಿಂಗ್ ವಘೇಲಾರವರು  ಇದೀಗ ಕಾಂಗ್ರೇಸ್ ಪಕ್ಷವನ್ನು ತೊರೆದಿರುವುದು  ಆ ಪಕ್ಷದ ಮಟ್ಟಿಗೆ ದೊಡ್ಡ ಹೊಡೆತವೇ ಹೌದು.  ಅಹಮದ್ ಪಟೇಲ್ ಮತ್ತು ವಘೇಲಾರ ನಡುವಿನ ಶೀಥಲ ಸಮರದಲ್ಲಿ ವಘೇಲಾರವರ ಬೇಡಿಕೆಯನ್ನ ನಿರಾಕರಿಸಿದ ಕಾಂಗ್ರೇಸ್ ನಷ್ಟ ಅನುಭವಿಸಿದೆ. ತಮ್ಮನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ವಘೇಲಾರವರು ಹೈಕಮ್ಯಾಂಡಿಗೆ ಮನವಿ ಸಲ್ಲಿಸಿದ್ದರು ಕಾಂಗ್ರೇಸ್ ಪಕ್ಷದ ಹಿತದೃಷ್ಠಿಯಿಂದ ಇದು ಸೂಕ್ತವೂ ಆಗಿತ್ತು. ಯಾಕೆಂದರೆ ಸಂಘಪರಿವಾರದ ಮೂಲದಿಂದ ಬಂದ ವಘೇಲಾರವರಿಗೆ ಬಾಜಪದ ಬಹುತೇಕ ಪಟ್ಟುಗಳು ಗೊತ್ತಿದ್ದವು. ಜೊತೆಗೆ ಕ್ಷತ್ರಿಯ ಸಮುದಾಯದ ಹಿರಿಯ ನಾಯಕರಾಗಿ ಗುಜರಾತಿನ ಗ್ರಾಮೀಣ ಭಾಗದಲ್ಲಿ ಪ್ರಬಾವಶಾಲಿಯಾಗಿದ್ದವರು ಮತ್ತು ರಾಜ್ಯದ ಕನಿಷ್ಠ  ಮುವತ್ತರಿಂದ ನಲವತ್ತು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬಲ್ಲ ಸಾಮಥ್ರ್ಯ ಹೊದಿದ್ದವರು. ಇಂತಹವರ ಬೇಡಿಕೆಯನ್ನು ಕಾಂಗ್ರೇಸ್ ತಿರಸ್ಕರಿಸಿದಾಗ ಸಹಜವಾಗಿಯೇ ವಘೇಲಾರವರು ಪಕ್ಷತೊರೆದರು. ಅವರು ಪಕ್ಷ ಬಿಟ್ಟುಹೋದ ಕೆಲ ದಿನಗಳಲ್ಲಿಯೇ ಕಾಂಗ್ರೇಸ್ಸಿನ ಕೆಲ ಅತೃಪ್ತ ಶಾಸಕರನ್ನು ಬಾಜಪ ಸೆಳೆದುಕೊಂಡಿತು. ಇವರಲ್ಲಿ ಹಲವರು ವಘೇಲರ ಬೆಂಬಲಿಗರು ಇದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಅಹಮದ್ ಪಟೇಲರನ್ನು ಸೋಲಿಸುವ ಹಟಕ್ಕೆ ಬಿದ್ದ ಬಾಜಪ ಕಾಂಗ್ರೇಸ್ ಶಾಸಕರನ್ನು ಖರೀಧಿಸಲು ಪ್ರಯತ್ನಿಸಿದಾಗಲೇ ಕಾಂಗ್ರೇಸ್ ಉಳಿದ ಶಾಸಕರನ್ನು ನಮ್ಮ ರಾಜ್ಯಕ್ಕೆಕಳಿಸಿಕೊಟ್ಟಿದ್ದು.( ಆ ವಿಷಯ ಮತ್ತೊಂದು ದೊಡ್ಡ ಲೇಖನವಾದೀತು) ಅಂತೂ ಇದೀಗ ಅನೇಕ ವಿವಾದಗಳ ನಡುವೆಯೇ ರಾಜ್ಯಸಬಾ ಚುನಾವಣೆಗಳಲ್ಲಿ ಅಹಮದ್ ಪಟೇಲ್  ಗೆದ್ದಿದ್ದಾರೆ. ಇದೀಗ ಕುಸಿದು ಹೋಗಿರುವ ಗುಜರಾತ್ ಕಾಂಗ್ರೇಸ್ಸನ್ನು ಮತ್ತೆ ಕಟ್ಟಬೇಕಾದ ಹೊಣೆಗಾರಿಕೆ ಹೈಕಮ್ಯಾಂಡ್ ಮೇಲಿದೆ.

ಹೀಗೆ ಇವೆಲ್ಲವನ್ನೂ ಅವಲೋಕಿಸಿದರೆ 2014ರ ನಂತರ ಮೊದಲ ಬಾರಿಗೆ ಏಕಾಂಗಿಯಾಗಿ  ಬಾಜಪವನ್ನು ಮಣಿಸುವ ಅವಕಾಶ ಕಾಂಗ್ರೇಸ್ಸಿಗೆ ಇರುವಂತಿದೆ. ಆದರೆ ಎಷ್ಟರಮಟ್ಟಿಗೆ ಇದನ್ನು ಉಪಯೋಗಿಸಿಕೊಳ್ಳಲು ಕಾಂಗ್ರೇಸ್ ಪ್ರಯತ್ನಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಮೋದಿ ಮತ್ತು ಅಮಿತ್ ಷಾ ಜೋಡಿ ಸುಲಭಕ್ಕೆ ಸೋಲನ್ನೊಪ್ಪಿಕೊಳ್ಳುವ ವ್ಯಕ್ತಿಗಳಲ್ಲ. ಅದೂ ಅಹಮದ್ ಪಟೇಲರ ಗೆಲುವು ಅಮಿತ್ ಷಾರನ್ನು ಇನ್ನಷ್ಟು ರೊಚ್ಚಿಗೇಳಿಸಿದ್ದರೆ ಅಚ್ಚರಿಯೇನೂ ಇಲ್ಲ.

ಹಾಗಾಗಿಯೇ ಈ ವರ್ಷದ ಕೊನೆಯ ಚುನಾವಣೆಯಾಗಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳು ದೇಶದ ಜನರಲ್ಲಿ ಬಾರಿಕುತೂಹಲವನ್ನಂತು ಮೂಡಿಸಿವೆ.

 

 

 

Leave a Reply

Your email address will not be published.