ಗುಜರಾತ್ ಚುನಾವಣೆ: ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೇಸ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ  

ಕಾಂಗ್ರೇಸ್ ಪಕ್ಷದ ಸರ್ವ ಪ್ರಯತ್ನಗಳ ನಂತರವೂ ಗುಜರಾತ್ ವಿದಾನಸಭಾ ಚುನಾವಣೆಗಳಲ್ಲಿ ಬಾಜಪ 99 ಸ್ಥಾನಗಳನ್ನು  ಗೆದ್ದು ಅದಿಕಾರ ಹಿಡಿಯುವಲ್ಲಿ  ಅದಕ್ಕೆ  ನೆರವಾಗಿದ್ದು  ಗುಜರಾತಿನ ಆದಿವಾಸಿಗಳ ಮತಗಳು. ನಿಜ, ಈ ಬಾರಿಯ ಚುನಾವಣೆಗಳನ್ನು ಗೆಲ್ಲಲು ಬೇಕಾದಂತಹ ಎಲ್ಲ ರೀತಿಯ ಜಾತಿ ಸಮೀಕರಣಗಳನ್ನು ಬಳಸಿದ  ಕಾಂಗ್ರೇಸ್ ಅದಕ್ಕಾಗಿಯೇ  ಹಾರ್ದಿಕ್ ಪಟೇಲ್ ಮೂಲಕ ಪಾಟೀದಾರರ, ಅಲ್ಪೇಶ್ ಠಾಕೂರ್ ಮೂಲಕ ಹಿಂದುಳಿದ ಮತದಾರರನ್ನು, ಜಿಗ್ನೇಶ್ ಮೆವಾನಿಯವರ ಮೂಲಕ ದಲಿತ ಸಮುದಾಯವನ್ನು ತನ್ನೆಡಗೆ ಸೆಳೆಯುವ ಸರ್ವ ಪ್ರಯತ್ನಗಳನ್ನೂ ಮಾಡಿ ಭಾಗಶ; ಯಶಸ್ಸನ್ನು ಕಂಡು ಬಾಜಪ ಮೂರಂಕಿಯನ್ನು ದಾಟದಂತೆ ನೋಡಿಕೊಂಡಿತು. ಈ ತಂತ್ರಗಾರಿಕೆಯಲ್ಲಿ ಕಾಂಗ್ರೇಸ್ ಒಂದು ದೊಡ್ಡ ತಪ್ಪನ್ನು ಮಾಡಿ ಬಾಜಪ ಮತ್ತೆ ಗೆಲ್ಲಲು ಕಾರಣವಾಯಿತು. ಅದು ಹೀಗಿದೆ.

ಗುಜರಾತಿನ ಒಟ್ಟು ಮತದಾರರ ಶೆಕಡಾ 14ರಷ್ಟಿರುವ  ಆದಿವಾಸಿ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೇಸ್ ಈ ಬಾರಿ ಹೆಚ್ಚಿನ ಪ್ರಯತ್ನ ಮಾಡಲೇ ಇಲ್ಲ.  ಸುಮಾರು 27 ಕ್ಷೇತ್ರಗಳಲ್ಲಿ ಈ ಆದಿವಾಸಿಗಳ ಮತಗಳೇ ನಿರ್ಣಾಯಕವಾಗಿದ್ದು ಅವುಗಳನ್ನು ದೃವೀಕರಿಸುವಲ್ಲಿ ಕಾಂಗ್ರೇಸ್  ನಾಯಕತ್ವ ಗಮನ ಹರಿಸದೆ ಹೋಗಿದ್ದು  ಅಲ್ಲಿನ 15 ಕ್ಷೇತ್ರಗಳನ್ನು ಬಾಜಪ ಗೆಲ್ಲಲು ಕಾರಣವಾಯಿತು. 2002ರ ಗೋದ್ರೋತ್ತರ ಚುನಾವಣೆಗಳಲ್ಲಿ ಬಾಜಪವನ್ನು  ಬೆಂಬಲಿಸಿದ್ದ ಆದಿವಾಸಿಗಳು 2007ರ ಹೊತ್ತಿಗೆ ಮತ್ತೆ ಕಾಂಗ್ರೇಸ್ಸಿನತ್ತ ಮುಖ ಮಾಡಿದ್ದರು. ಆಗ 27 ಸ್ಥಾನಗಳ ಪೈಕಿ ಬಾಜಪ ಕೇವಲ 8 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೇಸ್  ಉಳಿದ ಸ್ಥಾನಗಳಲ್ಲಿ ದಿಗ್ವಿಜಯ ಸಾದಿಸಿತ್ತು. ಇದನ್ನು ಅರಿತ ಅಂದಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೆ ತಂದರು. ತದನಂತರದಲ್ಲಿ 85 ಸಾವಿರ ಆದಿವಾಸಿ ಕುಟುಂಬಗಳಿಗೆ ಸುಮಾರು 13 ಲಕ್ಷ  ಹೆಕ್ಟೇರ್ ಭೂಮಿಯನ್ನು ಹಂಚಲಾಯಿತೆಂದು ಸರಕಾರಿ ಅಂಕಿ ಅಂಶಗಳ ಮೂಲಕ  ಆದಿವಾಸಿಗಳ ನಡುವೆ ಪ್ರಚುರ ಪಡಿಸಲಾಯಿತು.ಇಷ್ಟಲ್ಲದೆ 15 ಸಾವಿರ ಕೋಟಿಗಳ ‘ವನಬಂದು ಯೋಜನಾ’ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ 2012ರ ಹೊತ್ತಿಗೆ ಮತ್ತೆ ಆದಿವಾಸಿಗಳು ಬಾಜಪದತ್ತ ನಡೆಯ ತೊಡಗಿದರು. ಹೀಗಾಗಿ 2012ರ ಚುನಾವಣೆಗಳಲ್ಲಿ ಬಾಜಪ ಆ ಭಾಗದ 15 ಸ್ಥಾನಗಳನ್ನು ಗೆದ್ದು ಕಾಂಗ್ರೇಸ್ಸನ್ನು ಹಿಂದಿಕ್ಕಿತ್ತು.

ಸ್ಥಳೀಯ ಕಾಂಗ್ರೇಸ್ ಘಟಕ ಈ ಅಂಕಿಅಂಶಗಳನ್ನು ಗಂಬೀರವಾಗಿ ತೆಗೆದು ಕೊಳ್ಳಲೇ ಇಲ್ಲ. ಬದಲಿಗೆ ಚುನಾವಣಾ ತಂತ್ರಗಾರಿಕೆ ಮಾಡುವ ಸಮಯದಲ್ಲಿ ಕಾಂಗ್ರೇಸ್ ಆದಿವಾಸಿ ಜಿಲ್ಲೆಗಳ ಬಗ್ಗೆ ಯೋಚಿಸಲೇ ಇಲ್ಲ. ಅದು ಸಂಪೂರ್ಣವಾಗಿ ಆದಿವಾಸಿಯೇತರ ಜಾತಿಗಳ ದೃವೀಕರಣ ಮಾಡುವ ಮೂಲಕ ಮತಗಳಿಸುವ ತಂತ್ರಕ್ಕೆ ಮೊರೆ ಹೋಯಿತು.  ಈವಿಷಯದಲ್ಲಿ ಅದು ದಲಿತರ ಮೆವಾನಿಯ ಜೊತೆ, ಹಿಂದುಳಿದ ವರ್ಗಗಳ  ಅಲ್ಪೇಶ್ ಠಾಕೂರ್ ಜೊತೆ ಮಾತನಾಡಿತೇ ಹೊರತು ಅಪ್ಪಿತಪ್ಪಿಯೂ ಯಾವುದೇ ಆದಿವಾಸಿ ಹೋರಾಟಗಾರರನ್ನು ಮಾತನಾಡಿಸುವ ಗೋಜಿಗೆ ಹೋಗಲೇ ಇಲ್ಲ. ಅದರಲ್ಲೂ ತನ್ನ ಮೂರು ತಿಂಗಳ ಚುನಾವಣಾ ತಯಾರಿ ಮತ್ತು ಪ್ರಚಾರದ ಅವದಿಯಲ್ಲಿ ಹಾರ್ದಿಕ್ ಪಟೇಲ್ ಮೂಲಕ ಹೇಗೆ ಪಾಟೀದಾರರ ಮತಗಳನ್ನು ಸೆಳೆಯಬಹುದು ಎಂಬುದರ ಬಗ್ಗೆ ಹೆಚ್ಚು ತನ್ನ ಗಮನವನ್ನು ಕೇಂದ್ರೀಕರಿಸಿತೇ ಹೊರತು ಅಪ್ಪಿತಪ್ಪಿಯೂ ಆದಿವಾಸಿ ಜಿಲ್ಲೆಗಳ ಬಗ್ಗೆ ಯೋಚಿಸಲೇ ಇಲ್ಲ.

ಇದರ ಜೊತೆಗೆ ತನ್ನ ಚುನಾವಣಾ ಪ್ರಚಾರದಲ್ಲಿ ಕಾಂಗ್ರೇಸ್ ಅತಿಯಾಗಿ ಪ್ರಸ್ತಾಪಿಸಿದ ನೊಟುಬ್ಯಾನ್ ಮತ್ತು ಜಿಎಸ್ಟಿಯಂತಹ ವಿಚಾರಗಳಲ್ಲಿ ಆದಿವಾಸಿಗಳಿಗೆ ಯಾವುದೇ ಹೆಚ್ಚಿನ ಆಸಕ್ತಿ ಇರಲಿಲ್ಲ. ಅದರಿಂದಾಗಿ ಈ ವಿಚಾರಗಳು ಆದಿನಿವಾಸಿ ಸಮುದಾಯದಲ್ಲಿ ಯಾವುದೇ ಪರಿಣಾಮಗಳನ್ನೂ  ಬೀರಲಿಲ್ಲ.ಸಂಯುಕ್ತಜನತಾದಳದ ಮಾಜಿ ಶಾಸಕ ಶ್ರೀ ಚೋಟೂ ವಾಸವ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೂ ಅದು ಪರಿಣಾಮಕಾರಿಯಾಗೇನು ಕೆಲಸ ಮಾಡಲಿಲ್ಲ.

ಇದನ್ನು ಅರಿತುಕೊಂಡ ಬಾಜಪ ಆದಿವಾಸಿಗಳ ಪ್ರದೆಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ  ಪರಿವಾರದ ಸಂಘಟನೆಯಾದ ‘ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ್’ ಮೂಲಕ ಆದಿವಾಸಿಗಳನ್ನು  ತನ್ನಪರವಾಗಿ ಸಂಘಟಿಸಿ ಚುನಾವಣಾ ಪ್ರಚಾರ ಕೈಗೊಂಡಿತು. ಕೊನೆಗೆ ಇದು ಬಾಜಪಕ್ಕೆ ಯಶಸ್ಸನ್ನೂ ನೀಡಿತು. ಹಾಗಾಗಿ ಈಬಾರಿಯ ಚುನಾವಣೆಯಲ್ಲಿ ಆದಿವಾಸಿ ಪ್ರದೇಶಗಲ 15 ಸ್ಥಾನಗಳನ್ನುಗೆಲ್ಲುವ ಮೂಲಕಮತ್ತೆ ಅಧಿಕಾರಕ್ಕೆ ಬಂದಿತು. ಅಕಸ್ಮಾತ್ ಕಾಂಗ್ರೇಸ್ ಈ ಕ್ಷೇತ್ರಗಳಿಗೆ ಹೆಚ್ಚು ಗಮನ ನೀಡಿ ತನ್ನ ಪ್ರಚಾರತಂತ್ರವನ್ನು ಬದಲಾಯಿಸಿಕೊಂಡಿದ್ದರೆ ಅಂತಿಮಪಲಿತಾಂಶಗಳ ಚಿತ್ರಣವೇ ಬೇರೆಯದಾಗಿರುತ್ತಿತ್ತು.

 

 

 

Leave a Reply

Your email address will not be published.