ಗಿಡ-ಮರಗಳನ್ನು ಮುಟ್ಟಿ ಮಾತನಾಡಿಸಿದ್ದೀರಾ?

-ಧನಂಜಯ ಜೀವಾಳ ಬಿ.ಕೆ.

hippeyakoleಮನುಷ್ಯರು, ಪ್ರಾಣಿಗಳು, ಕೀಟಗಳು ಹಾಗೂ ಚಲನೆಯಿರುವ ಎಷ್ಟೋ ಜೀವಿಗಳು ಮತ್ತು ಹಸಿರು ಸಸ್ಯವರ್ಗ ಎಲ್ಲವೂ ತಮ್ತಮ್ಮ ಬದುಕಿಗೆ ಪರಸ್ಪರ ಅವಲಂಬಿಸಿವೆ. ಈ ಜಗತ್ತಿನ ಅತ್ಯಮೂಲ್ಯ ಸಂಪತ್ತಾದ ಹಾಗು ನಮ್ಮೆಲ್ಲರಿಗೂ ಹೆಮ್ಮೆಯ ಪಶ್ಚಿಮಘಟ್ಟದ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ಕೊನೆಮೊದಲಿಲ್ಲದಂತೆ ಅತ್ಯಾಚಾರವೆಸಗಲಾಗುತ್ತಿದೆ.

ಮೂಡಿಗೆರೆಯ ಹ್ಯಾಂಡ್‍ಪೋಸ್ಟ್‍ನಿಂದ ಭೈರಾಪುರದ ನಾಣ್ಯದ ಭೈರವೇಶ್ವರ ದೇವಾಲಯದವರೆಗೆ ಅಗತ್ಯ, ಸಾಧ್ಯ ಮತ್ತು ಸಂಪನ್ಮೂಲ ಒದಗಿ ಬಂದರೆ 2 ಲೇನ್ ರಸ್ತೆಯನ್ನೇ ಮಾಡೋಣ. ಈ ಭಾಗದ ನಮ್ಮ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಬರಲಿ. ದೇವಾಲಯದ ಬಳಿ ಸುಸಜ್ಜಿತವಾದ ಪ್ರವಾಸಿಮಂದಿರ ನಿರ್ಮಾಣವಾಗಲಿ. ಅದರ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಸ್ಥಳೀಯ ಪಂಚಾಯ್ತಿಯೇ ಮಾಡಲಿ. ವರ್ಷದ ಯಾವುದೇ ಋತುವಿನಲ್ಲೂ ಕನಿಷ್ಠ 20 ಜನ ತಂಗಲು ಸಾಧ್ಯವಿರುವಂತೆ 10 ಕೊಠಡಿಗಳನ್ನು ನಿರ್ಮಾಣ ಮಾಡೋಣ. ದೇವಾಲಯ ಮತ್ತು ಚಾರಣ ಬಂದವರಿಗೆ ಶೌಚಾಲಯ ಮತ್ತು ಸ್ನಾನಗೃಹ ವ್ಯವಸ್ಥೆ ಮಾಡೋಣ. ಭೈರಾಪುರ ಗ್ರಾಮವನ್ನು ದಾಟಿಬರುವ ಎಲ್ಲ ಪ್ರವಾಸಿಗರು, ಚಾರಣಿಗರನ್ನು ಮದ್ಯ, ಮಾದಕ ಪದಾರ್ಥ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡುಹೋಗದಂತೆ ತಪಾಸಣೆಗೊಳಪಡಿಸಿ ತಲಾ ಕನಿಷ್ಠ 20 ರೂಪಾಯಿ ಪ್ರವೇಶ ಶುಲ್ಕ ವಿಧಿಸೋಣ.

ಈ ಎಲ್ಲಾ ಕಾರ್ಯ ನಿರ್ವಹಿಸಲು ಸ್ಥಳೀಯ ಯುವ ಜನತೆಗೇ ಉದ್ಯೋಗ ನೀಡೋಣ. ಇಲ್ಲಿ ಕಾಫಿ ಮಂದಿರ, ಹೋಟೆಲ್ ಕಟ್ಟಡ ನಿರ್ಮಿಸಿ ಸ್ಥಳೀಯರಿಗೇ ಗುತ್ತಿಗೆಗೆ ನೀಡೋಣ. ಇದೇ ರೀತಿಯ 4 ಪಥ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 75ರಿಂದ ಶಿಶಿಲ ಗ್ರಾಮದವರೆಗೂ ನಿರ್ಮಿಸಿ ಈ ಎಲ್ಲ ಸಾರ್ವಜನಿಕ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಅಲ್ಲಿನ ಸ್ಥಳೀಯ ಯುವಕರಿಗೇ ಉದ್ಯೋಗ ನೀಡೋಣ. ಆದರೆ ಈ ಎರಡೂ ರಸ್ತೆಗಳ ಕೊನೆಗಳನ್ನು ಲಿಂಕ್ ಮಾಡುವ ಅವಿವೇಕ ಮಾತ್ರ ಬೇಡವೇ ಬೇಡ.

ನಮಗೆ ನಿಜವಾದ ಹೆಮ್ಮೆ, ಅಭಿಮಾನ ಇರಬೇಕಾಗಿದ್ದು ರಸ್ತೆ, ಸೇತುವೆ, ಕಾಂಕ್ರೀಟ್ ಕಟ್ಟಡಗಳ ಮೇಲಲ್ಲ. ಇವನ್ನು ಯಾರೂ ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ ನಮ್ಮ ನಿಜವಾದ ಹೆಮ್ಮೆಯ ಸಂಪತ್ತು ನಮ್ಮ ಕಾಡುಗಳು. ಸಾವಿರಾರು ವರ್ಷಗಳಿಂದ ನಮ್ಮನ್ನು, ನಮ್ಮ ನಾಗರೀಕತೆಯನ್ನು ಕಾಪಾಡಿಕೊಂಡು ಬಂದಿರುವುದು ನಮ್ಮ ನೆಲೆವೀಡಾದ ನಮ್ಮ ಕಾಡುಗಳು. ಇಂದು ಸಂಶೋಧಕರು, ಪ್ರವಾಸಿಗರು, ಸಾಹಸಿಗಳು ನಮ್ಮೂರಿಗೆ ಬರುತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮೂರಿನ ರಸ್ತೆಗಳು, ಸೇತುವೆಗಳು, ಹೋಟೆಲುಗಳು ಮತ್ತು ರೆಸಾರ್ಟುಗಳಲ್ಲ. ವಾಸ್ತವ ಕಾರಣಗಳು ನಮ್ಮ ಕಾಡುಗಳು, ಅಲ್ಲಿಯ ಪ್ರಶಾಂತ ವಾತಾವರಣ, ಇಲ್ಲಿನ ಸ್ವಚ್ಛಗಾಳಿ, ಶುಭ್ರ ನೀರು, ಕಾಡಿನ ನಿಗೂಢತೆ, ಹೃದಯಸ್ಪರ್ಶಿ ಆಪ್ತತೆಯ ವಾತಾವರಣ ಮತ್ತು ಮನತಣಿಸುವ ಹಚ್ಚಹಸಿರು. ಇವನ್ನೆಲ್ಲ ಬದಿಗಿರಿಸಿ ರಸ್ತೆ ನಿರ್ಮಿಸಿ, ಇಲ್ಲಿ ಇನ್ನೊಂದು ಕೊಟ್ಟಿಗೆಹರ, ಇನ್ನೊಂದು ದೋಣೀಗಾಲನ್ನು ಸೃಷ್ಠಿ ಮಾಡುವುದು ಬೇಡ.

ಮಲೆನಾಡಿನ ಬಾಂಧವರೇ ನಾವೀಗ ಕವಲುಹಾದಿಯಲ್ಲಿ ನಿಂತಿದ್ದೇವೆ. ರಸ್ತೆ ನಿರ್ಮಿಸುವ ಆಯ್ಕೆಯ ಹಾದಿ ನಮಗೀಗ ವರ್ಣರಂಜಿತವಾಗಿ ಕಾಣುತ್ತಿರಬಹುದು. ಆದರೆ ಆ ಹಾದಿಯಲ್ಲಿ ನಾವು ಕ್ರಮಿಸಿದಲ್ಲಿ ಮುಂದೆಂದೂ ಹಿಂದಿರುಗಿ ಬರಲಾಗದ, ಸರಿಪಡಿಸಲು ಸಾಧ್ಯವಾಗದ ಅನಾಹುತಕ್ಕೆ ನಾವೇ ಕಾರಣವಾಗುತ್ತೇವೆ. ನೂರಾರು ವರ್ಷಗಳಿಂದ ಭೈರಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಕಾಪಾಡಿಕೊಂಡು ಬಂದಿರುವ ಸ್ವಾಭಿಮಾನ, ಆತ್ಮಗೌರವ, ಸಾಂಸ್ಕøತಿಕ ವೈಭವ, ಕಾಡನ್ನು ಉಳಿಸಿಕೊಂಡುಬಂದಿರುವ ಘನತೆ, ಪ್ರಕೃತಿಯೊಂದಿಗಿನ ಅನೋನ್ಯ ಬಾಂಧವ್ಯ, ಕೃಷಿಬದುಕಿನ ಅವಿನಾಭಾವ ಸಂಬಂಧ ಇವೆಲ್ಲವೂ ಹೆದ್ದಾರಿಯೆಂಬ ಹೆಮ್ಮಾರಿಯ ಪಾಲಾಗುತ್ತದೆ. ಇಲ್ಲಿನ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಬದುಕಿನಲ್ಲಿ ವಿನಾಶಕಾರೀ ಬಿರುಗಾಳಿಯೇಳುತ್ತದೆ. ಪರಕೀಯರ ಅನಪೇಕ್ಷಿತ ಆಗಮನವನ್ನು ನಿಯಂತ್ರಿಸಲಾಗದ ಇವತ್ತಿನ ಸ್ಥಿತಿಯಲ್ಲಿ ಈ ಭಾಗದಲ್ಲಿ ಸ್ಥಳೀಯರೇ ಮೂಲೆಗುಂಪಾಗುತ್ತಾರೆ.

FB_IMG_1475766921367ಕೃಷಿ ಮಾಡಿಕೊಂಡು ನೆಮ್ಮದಿಯ, ಸ್ವಾವಲಂಬೀ ಬದುಕು ಕಟ್ಟಿಕೊಂಡಿರುವ ಸ್ಥಳೀಯರು ಹದ ತಪ್ಪಿದ ಬದುಕಿನಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ದಯನೀಯ ಸ್ಥಿತಿ ತಲುಪುತ್ತಾರೆ. ನೈತಿಕ ಅದಃಪತನಕ್ಕೆ ಕಾರಣವಾಗುವ ಈ ಹೆದ್ದಾರಿಯೆಂಬ ಹೆಮ್ಮಾರಿ ಉಂಟುಮಾಡುವ ಕೆಡುಕಿಗೆ ಕೊನೆಯಿಲ್ಲದಂತಾಗುತ್ತದೆ.
ನೆಮ್ಮದಿಯಾಗಿರುವ ನಮ್ಮ ಭೈರಾಪುರ ಗ್ರಾಮಕ್ಕೆ ಸಮಾಜವಿರೋಧಿಗಳ ಪ್ರವೇಶವಾಗುತ್ತದೆ, ಭೂಗತಲೋಕದ ಅಪರಾಧಿಗಳು ಅವಿತುಕೊಳ್ಳಲು ಅವಕಾಶವಾಗುತ್ತದೆ. ಅನೈತಿಕ ಚಟುವಟಿಕೆಗಳು ಕಣ್ಣಮುಂದೆಯೇ ನಡೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆಯಿಂದ ತೊಳಲಾಡಬೇಕಾಗುತ್ತದೆ. ನೋಡನೋಡುತಿದ್ದಂತೆ ಮಹಾನಗರಗಳ ಕೊಳಗೇರಿಗಳಲ್ಲಿ ನಡೆಯುವ ಎಲ್ಲಾ ಅನಪೇಕ್ಷಿತ ಚಟುವಟಿಕೆಗಳು ನಮ್ಮದೇ ಗ್ರಾಮದೊಳಗೆ ಮತ್ತು ಹೆದ್ದಾರಿಯುದ್ದಕ್ಕೂ ಅವ್ಯಾಹತವಾಗಿ ನಡೆಯಲು ಶುರುವಾಗುತ್ತವೆ.

ಅಮಾಯಕ ಜನರಲ್ಲಿ ಇಲ್ಲಸಲ್ಲದ ಭ್ರಮೆ ಹುಟ್ಟಿಸಿರುವ ರಸ್ತೆ-ಸೇತುವೆ ಗುತ್ತಿಗೆದಾರರು, ಮರಗಳ್ಳ ಟಿಂಬರ್ ಲಾಬಿಯವರು, ಗುಂಜಪ್ಪಗಳಾದ ಸಂಬಂಧಿತ ಅಧಿಕಾರಿಗಳು, ಯಲ್ಲಮ್ಮನ ಜಾತ್ರೆಗೆ ಕಾದಿರುವ ರಾಜಕಾರಣಿಗಳು, ಉಂಡೋನೇಜಾಣರಾಗಲು ಕಾದಿರುವ ಅನಧಿಕೃತ ರೆಸಾರ್ಟ್‍ವೀರರುಗಳಿಗೆ ನಿಜವಾದ ಕಾಳಜಿಯಿದ್ದಲ್ಲಿ, ಈ ಭಾಗದ ಜನರ ಮೂಲಭೂತ ಅಗತ್ಯಗಳಾದ ರಸ್ತೆ, ನೀರು, ವಿದ್ಯುತ್, ಸಾರಿಗೆ ಸಂಪರ್ಕ ಮತ್ತು ಕಾಡುಪ್ರಾಣಿಗಳ ಉಪಟಳ ತಡೆ, ಅರ್ಹರಿಗೆ ಸ್ಥಳೀಯ ಉತ್ಪನ್ನಗಳಾದಾರಿತ ಉದ್ದಿಮೆಗಳನ್ನು ರೂಪಿಸಿಕೊಂಡು, ಸ್ವಾವಲಂಬೀ ಬದುಕು ಕಟ್ಟಿಕೊಳ್ಳಲು ಕೈಜೋಡಿಸಲಿ. ಉದಾಹರಣೆಗೆ ಕನಿಷ್ಠ ನೂರೈವತ್ತು ಜನರಿಗೆ ಉದ್ಯೋಗ ನೀಡುವ ಬೃಹತ್ ಮಿನರಲ್ ವಾಟರ್ ಬಾಟಲಿಂಗ್ ಘಟಕ, ಕಾಫೀಬೊಡ್ಡೆಯಿಂದ ಕರಕುಶಲವಸ್ತು ಮಾಡುವ ಕಾರ್ಯಾಗಾರ, ಸ್ಥಳೀಯವಾಗಿ ದೊರೆಯುವ ಕೃಷಿ ಉತ್ಪನ್ನ (ಬಾಳೆ, ಭತ್ತ, ಹಲಸು)ಗಳಿಂದ ಆಹಾರೋತ್ಪನ್ನ ತಯಾರಿ ಘಟಕ, ಶುಂಠಿ, ಏಲಕ್ಕಿ, ಕರಿಮೆಣಸು, ಜೇನು, ನಿಂಬೆಹುಲ್ಲು ಮುಂತಾದ ಕೃಷಿಉತ್ಪನ್ನUಳನ್ನು ಮೌಲ್ಯವರ್ಧನೆಗೊಳಿಸುವ ಸುಗಂಧದ್ರವ್ಯ ಉತ್ಪಾದನಾ ಕೈಗಾರಿಕೆಗಳನ್ನು ಸ್ಥಾಪಿಸಬಹುದು.

munarಈ ಪ್ರದೇಶದಲ್ಲಿ ಅರಣ್ಯಶಾಸ್ತ್ರ ಅಧ್ಯಯನಕ್ಕಾಗಿ ಒಂದು ಕಾಲೇಜನ್ನು ಸ್ಥಾಪಿಸಬಹುದು. ಕೃಷಿಕರು ಹಾಗು ಉದ್ಯೋಗಾಂಕ್ಷಿಗಳಿಗೆ ಸ್ವಾವಲಂಬಿ ಮತ್ತು ಗೌರವದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡುವತ್ತ ಸರ್ಕಾರ ಮುಂದಾಗಬೇಕು. ಈ ಅನಗತ್ಯ ರಸ್ತೆಗೆ ವ್ಯಯಮಾಡಲು ಇಟ್ಟುಕೊಂಡಿರುವ ಹಣವನ್ನು ಈ ಮೇಲಿನ ಉದ್ದೇಶಗಳಿಗೆ ಬಳಸಿದಲ್ಲಿ ನಮ್ಮ ನಿಮ್ಮೆಲ್ಲರ ಕಾಡೂ ಉಳಿಯುತ್ತದೆ ಮತ್ತು ಈ ಭಾಗದ ಜನರ ಬದುಕಿನಲ್ಲಿ ಒಂದು ಹೊಸ ಯುಗ ಆರಂಭವಾಗುತ್ತದೆ.
ಭೂದೇವಿಯ ತೋಳಿನ ಮೇಲೆ ಕಾಯ್ದ ಸಲಾಕೆಯಿಂದ ಇನ್ನೊಂದು ರಸ್ತೆಯೆಂಬ ಬರೆ ಎಳೆಯುವುದು ಬೇಡ. ಈ ವಿಚಾರದಲ್ಲಿ ರಾಜಕಾರಣಿಗಳ ತಿಣುಕಾಟ ಗಮನಿಸಿದರೆ, ಅವರೆಲ್ಲರಿಗೂ ಪರಿಸರಪ್ರಜ್ಞೆಯಿದೆ, ಹಾಗೆಯೇ ನಮ್ಮ ಕಾಡುಗಳನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯೂ ಇದೆ ಎನ್ನುವುದು ವೇದ್ಯವಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಚುನಾವಣಾ ರಾಜಕೀಯದ ದಾರುಣ ಅನಿವಾರ್ಯತೆಯೂ ಇದೆ ಎಂಬುದು ಅರ್ಥವಾಗುತ್ತದೆ.
ಹೆಮ್ಮಾರಿ ರಸ್ತೆ ಬರುವುದರಿಂದ ಈ ಭಾಗದ ಗ್ರಾಮಗಳ ಸ್ಥಿರಾಸ್ತಿ ಮೌಲ್ಯ ಹೆಚ್ಚುತ್ತದೆ ಎಂಬುದು ಸತ್ಯವಾದರೂ, ಆ ಹೆಚ್ಚಾದ ಮೌಲ್ಯದ ನಿಜ ಫಲಾನುಭವಿ ಯಾರು? ಅಲ್ಲಿನ ಮೂಲನಿವಾಸಿಗಳೇ ಆ ಭೂಮಿಯ ಮಾಲೀಕತ್ವವನ್ನು ಅನುಭವಿಸಬೇಕು. ಹಾಗೆಯೇ ನಿಮ್ಮ ಅಗತ್ಯಗಳನ್ನು ನೆಪವಾಗಿಟ್ಟುಕೊಂಡು ನಿಮ್ಮದೇ ಮನೆಯ ಜಂತಿಯನ್ನು ಹಿರಿದು ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರನ್ನು ದೂರವಿಡುವುದು ಭವಿಷ್ಯದ ದೃಷ್ಠಿಯಿಂದ ಒಳ್ಳೆಯದು.
ಕಾಡಿರುವುದರಿಂದಲೇ ಪುಣ್ಯಕ್ಷೇತ್ರಗಳು, ಗ್ರಾಮಗಳು, ಜನವಸತಿ, ಕೃಷಿ, ಆಹಾರ, ಪ್ರವಾಸೋದ್ಯಮ ಇತ್ಯಾದಿಗಳೇ ಹೊರತು ಇವುಗಳಿಂದ ಕಾಡಲ್ಲ ಎಂಬ ಸತ್ಯ ಅರಿವಾಗಲಿ.

ಭೂಮಿಯ ಮೇಲಿನ ಜನಸಂಖ್ಯೆಗಿಂತ ಹೆಚ್ಚು ಸಂಖ್ಯೆಯ ಸೂಕ್ಷ್ಮಜೀವಿಗಳು ಒಂದು ಚಮಚ ಮಣ್ಣಿನಲ್ಲಿರುತ್ತವೆ ಎಂಬುದು ಈ ಜೀವಜಗತ್ತಿನ ಅನನ್ಯತೆ, ಅಗಾಧತೆ ಮತ್ತು ಅಮೂಲ್ಯತೆಯನ್ನು ಹೇಳುತ್ತದೆ. ನಮ್ಮ ಪಶ್ಚಿಮಘಟ್ಟ 140 ಬಗೆಯ ಸಸ್ತನಿಗಳ, 510 ಪ್ರಭೇದದ ಪಕ್ಷಿಗಳ, 260 ರೀತಿಯ ಸರೀಸೃಪಗಳ, 18 ವಿಶಿಷ್ಠ ಉಭಯವಾಸಿಗಳ ಹಾಗೂ ಭಾರತದ ಶೇಖಡಾ 25ರಷ್ಟು ಜೀವವೈವಿಧ್ಯದ ಆವಾಸಸ್ಥಾನವಾಗಿದೆ. ಇದಕ್ಕಿಂತ ಭಾಗ್ಯ ಬೇರೇನಿದೆ? ಕೇವಲ ಒಂದು ಅನಗತ್ಯ ಹಾಗೂ ಅನಾಹುತಗಳಿಗೆಡೆಮಾಡುವ ಬೇಡದ ರಸ್ತೆಗಾಗಿ ಈ ಕಾಡಿನ ಒಡೆಯರು ನಾವು ಎಂಬ ಹೆಮ್ಮೆಯನ್ನು ಕಳೆದುಕೊಳ್ಳುವುದೇ?
-ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ. 9448421946.

2 Responses to "ಗಿಡ-ಮರಗಳನ್ನು ಮುಟ್ಟಿ ಮಾತನಾಡಿಸಿದ್ದೀರಾ?"

  1. ಮಲ್ಲಿಕಾರ್ಜುನ ಜವಳಗಿ  December 29, 2016 at 7:01 pm

    ಪರಿಸರದ ಕಾಳಜಿಯ ಯಾವ ವ್ಯಕ್ತಿಯಾದ ಇದನ್ನು ಒಪ್ಲೇ ಬೇಕಾಗುತ್ತೆ. ಉತ್ತಮ ಲೇಖನ.ಇದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯವಾಗುತ್ತೆ. ಆದರೆ ನಿದ್ದೆ ಮಾಡುವಂತೆ ನವವರನ್ನು ಹೇಗೆ ಎಬ್ಬಿಸುವದು?.

    Reply
  2. muragesh  January 1, 2017 at 1:58 pm

    Super

    Reply

Leave a Reply

Your email address will not be published.