‘ಗಾನರತ್ನ’ ಗಂಗೂಬಾಯಿ ಗುಳೇದಗುಡ್ಡ-Gangubai Guledagudda

-ಮಲ್ಲಯ್ಯ ಸಂಡೂರು

mallayya sanduru-photo‘ಗಾನರತ್ನ’ ಬಿರುದಿನಿಂದ ಪ್ರಖ್ಯಾತರಾಗಿದ್ದ ಗಂಗೂಬಾಯಿ ಗುಳೇದಗುಡ್ಡದವರು (1902-1941) ಉತ್ತರ ಕರ್ನಾಟಕದ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಪ್ರಸಿದ್ಧ ಗಾಯಕನಟಿ ಯಲ್ಲೂಬಾಯಿಯವರ ಮಗಳಾಗಿದ್ದ ಗಂಗೂಬಾಯಿಗೆ ಚಿಕ್ಕಂದಿನಲ್ಲೆ ಸಂಗೀತದ ಪರಿಸರದಲ್ಲಿ ಬೆಳೆಯುವ ಅವಕಾಶ ಸಿಕ್ಕಿತು. ಗಂಗೂಬಾಯಿಯವರು ತಾಯಿಯ ಜತೆಯಲ್ಲೇ ಬೆಳೆದರು. ಇವರ ಪ್ರತಿಭೆಯನ್ನು ಗುರುತಿಸಿದ್ದು ಕೊಣ್ಣೂರ ಕಂಪನಿಯ ಮಾಲೀಕರಾದ ಶಿವಮೂರ್ತಿಸ್ವಾಮಿ ಕಣಬರ್ಗಿಮಠ ಅವರು.

ಅವರು ತಮ್ಮ ಕಂಪನಿಯಲ್ಲಿ ಪಾತ್ರವಹಿಸಲು ಗಂಗೂಬಾಯಿಯವರನ್ನು ಆಹ್ವಾನಿಸಿದರು. ಕೊಣ್ಣೂರ ಕಂಪನಿಯ ‘ಹರಿಶ್ಚಂದ್ರ’ ನಾಟಕದಲ್ಲಿ ಯಲ್ಲೂಬಾಯಿ ‘ಚಂದ್ರಮತಿ’ಯಾಗಿ ಅಭಿನಯಿಸುತ್ತಿದ್ದರೆ, ಆರು ವರ್ಷದ ಗಂಗೂಬಾಯಿ ‘ರೋಹಿತಾಶ’್ವನ ಪಾತ್ರದಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆದರು. ಹೀಗೆ ತಾಯಿಯ ಜೊತೆ ಬಾಲಪಾತ್ರಗಳನ್ನು ಮಾಡುತ್ತ ಬೆಳೆದ ಅವರು ಹದಿಮೂರನೇ ವಯಸ್ಸಿನಲ್ಲಿ ವಾಮನರಾಯರ ಕಂಪನಿಗೆ ಸೇರಿದರು. ಕೋಮಲ ಕಂಠವಿದ್ದ ಗಂಗೂಬಾಯಿ ಅವರಿಗೆ ವಾಮನರಾಯರು ಸಂಗೀತ ಪಾಠ ಹೇಳಿಕೊಟ್ಟರು. ಹದಿನಾಲ್ಕನೇ ವÀಯಸ್ಸಿನಲ್ಲಿಯೇ ‘ಜಲ್ಸಾ’ದಲ್ಲಿ ಭಾಗವಹಿಸಿ ಶಾಸ್ತ್ರೀಯ ಗಾಯನದಲ್ಲಿ ರಸಿಕರು ತಲೆದೂಗುವಂತೆ ಹಾಡುತ್ತಿದ್ದ ಗಂಗೂಬಾಯಿಯವರು ಸಹಜವಾಗಿಯೇ ರಂಗಗೀತೆಗಳನ್ನು ಹಾಡಿ ಬಹಳ ಬೇಗ ವಾಮನರಾಯರ ಮೆಚ್ಚಿನ ನಟಿಯಾದರು.

ಮುಂದೆ ಯಲ್ಲೂಬಾಯಿಯವರು ಇವರನ್ನು ಪುಣೆಯ ಬಾಲಕೃಷ್ಣಬುವಾ ಕಪಿಲೇಶ್ವರಿ ಅವರ ಬಳಿ ಸಂಗೀತವನ್ನು ಕಲಿಯಲು ವ್ಯವಸ್ಥೆ ಮಾಡಿದರು. ಕೆಲವು ಕಾಲ ಗಂಗೂಬಾಯಿ ಅಬ್ದುಲ್ ಕರೀಂಖಾನರ ಬಳಿ ಹಿಂದೂಸ್ತಾನಿ ಸಂಗೀತದಲ್ಲಿ ಸಾಧನೆ ಮಾಡಿದರು. ಆದರೆ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುವ ಸಾಧ್ಯತೆಯಿದ್ದರೂ, ಅವರು ಕಛೇರಿ ಮಾಡುವುದನ್ನು ಬಿಟ್ಟು ನಾಟ್ಯ ಸಂಗೀತದ ಕಡೆಗೆ ಗಮನಕೊಟ್ಟರು. ಮರಾಠಿಯ ಸುಪ್ರಸಿದ್ಧ ಗಾಯಕರಾಗಿದ್ದ ಶಂಕರರಾವ್ ಸರ್ನಾಯಕ್ ಅವರಿಂದ ನಾಟ್ಯ ಸಂಗೀತವನ್ನು ಅಭ್ಯಾಸ ನಡೆಸಿದರು.

gangubai guledaguddaಸರ್ನಾಯಕ್ ಅವರು ಎರಡು ವರ್ಷ ಕಾಲ ತಮ್ಮ ಮಂಡಳಿಯಲ್ಲಿಟ್ಟುಕೊಂಡು, ರಾಗ-ತಾನಗಳ ಶಿಕ್ಷಣ ಹೇಳಿಕೊಟ್ಟರು. ಹೀಗೆ ಗಂಗೂಬಾಯಿ ಮಹಾರಾಷ್ಟ್ರದ ಪ್ರಸಿದ್ಧ ಸಂಗೀತಗಾರರ ಸಾನಿಧ್ಯದಲ್ಲಿ ವಿಶೇಷ ಜ್ಞಾನ ಪಡೆದು ರಂಗಭೂಮಿಗೆ ಮರಳಿದರು. ವಾಮನರಾಯರ ಕಂಪನಿಯಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯ ಮಾಡುತ್ತಾ ಸಂಗೀತ-ಅಭಿನಯಗಳ ಜೋಡಿ ಪ್ರತಿಭೆಯಿಂದ ಪ್ರಸಿದ್ಧಿ ಪಡೆದರು. ಗಂಗೂಬಾಯಿ ಅವರು ‘ಸಂಪೂರ್ಣ ರಾಮಾಯಣ’ ನಾಟಕದಲ್ಲಿ ಸೀತೆಯ ಪಾತ್ರದಿಂದ ಹೆಚ್ಚು ಪ್ರಸಿದ್ಧರಾದರು. ‘

ಮಹಾನಂದಾ’ ನಾಟಕದಲ್ಲಿ ವೇಷಧಾರಿಯಾದ ಶಿವನನ್ನು ಗುರುತಿಸಿ ಪಾರ್ವತಿ ಪಾತ್ರದಲ್ಲಿ ಗಂಗೂಬಾಯಿ ಭೈರವಿ ರಾಗದಲ್ಲಿ-
ನಾ ಪೋಗೀ ಬರ್ಪೆ ನಾರಿಯರೇ, ಬೇಡುವೆನಾಜ್ಞೆಯಾ ||ಪ||
ಸಲೆ ಸಾರ್ಥಕ ಮಾಡುವೆ ಕಾಯಾ | ತೊಲಗುವೆ ಭವ
ಮಾಯಾಂಬುಧಿಯಾ | ಕೈಲಾಸಕೆ ಪತಿ ಸಹ ಪೋಗಿ |
ಪೊಂದುವೆ ಶಾಂತಿಯಾ
ಎಂಬ ರಂಗಗೀತೆಯನ್ನು ತಮ್ಮ ಅದ್ಭುತ ಕಂಠದಿಂದ ಹಾಡುತ್ತಿದ್ದರು.

ಇದೇ ನಾಟಕದಲ್ಲಿ “ಇವನೇ ಗಿರಿಜಾರಮಣನೇ | ಇವನೇ ಫಾಲಾಕ್ಷ ಶಿವನೇ ಇವನೇ ಪಿತೃವನನಿವಾಸಾ | ಜೀವಾತ್ಮಾ ಪರಮಾತ್ಮನೇ’’ ಎಂಬ ಗೀತೆಯನ್ನು ಖಮಾಜ್ ರಾಗದಲ್ಲಿ ಹಾಡುತ್ತಿದ್ದರು. ಆಗ ಪ್ರೇಕ್ಷಕರು ಸಂತೋಷದಿಂದ ‘ಒನ್ಸ್‍ಮೋರ್’ ಕರೆಗೊಡುತ್ತಿದ್ದರು. ಚಪ್ಪಾಳೆಗಳು ರಂಗಮಂದಿರದಲ್ಲಿ ಪ್ರತಿಧ್ವನಿಸುತ್ತಿದ್ದವು. ವಾಮನರಾಯರು ಗಂಗೂಬಾಯಿಯ ಸಂಗೀತ ಪ್ರತಿಭೆಗೆ ಅವಕಾಶವಿರುವ ನಾಟಕಗಳನ್ನೇ ಪ್ರದರ್ಶನಕ್ಕೆ ಎತ್ತಿಕೊಳ್ಳುತ್ತಿದ್ದರು. ‘ಪದ್ಮಾವತಿ ಪರಿಣಯ’, ‘ಸಂತ ಸಕ್ಕೂಬಾಯಿ’, ‘ಸಂದೇಹ ಸಾಮ್ರಾಜ್ಯ’ ನಾಟಕಗಳಲ್ಲಿ ವಾಮನರಾಯರು-ಗಂಗೂಬಾಯಿ ಗುಳೇದಗುಡ್ಡ ಅವರ ಜೋಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು.

ಗಂಗೂಬಾಯಿ ಅವರು ‘ಸಂದೇಹ ಸಾಮ್ರಾಜ್ಯ’ ನಾಟಕದಲ್ಲಿ ಹಾಡುವ ‘ನೇಮ್ಯವೇಯು ಕಾಣೇನಾ’ ಎನ್ನುವ ಹಾಡಿಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದರು. ‘ಸಂತ ಸಖೂಬಾಯಿ’ ನಾಟಕದಲ್ಲಿ ನಾಯಕಿಯಾಗಿ ಬಾಲಗಂಧರ್ವರ ‘ಗೀತ ಸುಜನ ಕಸಾಯ ಮನಜೋ’ ಎಂಬ ಹಾಡಿನ ಚಾಲನ್ನು ಅನುಸರಿಸಿ ಗಂಗೂಬಾಯಿಯವರು ‘ಯದುತನಯ ಗೋಪಾಲ’ ಎಂಬ ಗೀತೆಯನ್ನು ಹಾಡುತ್ತಿದ್ದರು. ಈ ನಾಟಕದಲ್ಲಿ ತಾಯಿಯಾದ ಯಲ್ಲೂಬಾಯಿ ಅತ್ತೆಯ ಪಾತ್ರವನ್ನು ಮಾಡಿದರೆ, ಗಂಗೂಬಾಯಿಯವರು ಸೊಸೆಯ ಪಾತ್ರವನ್ನು ಮಾಡುತ್ತಿದ್ದರು.

ಕೆ.ವಿ.ಆಚಾರ್ಯರ ಪ್ರಕಾರ ಗಂಗೂಬಾಯಿ “ಭಕ್ತಿ ಪ್ರಧಾನವಾದ ನಾಟಕಗಳಲ್ಲಿ ಹೆಚ್ಚು ಅಭಿನಯ ಕೌಶಲವನ್ನು ತೋರಿಸುತ್ತಿದ್ದರು. ಈಕೆಯ ಸರಳ ಸ್ವಭಾವ, ರಂಗಭೂಮಿಯ ನಾಯಕಿಯ ಪಾತ್ರಕ್ಕೆ ಸರಿಯೆನಿಸುವ ಮೈಕಟ್ಟು, ನಿಲುವು, ಸದಾ ಹಸನ್ಮುಖಿಯಾದ ಮುಖ, ಗಂಭೀರ ಸ್ವಭಾವ, ಬಳುಕುವ ದೇಹ, ನೀಳಜಡೆ, ನಸುಗಂಪಿನ ಕೋಲು ಮುಖ, ಮಾಟವಾದ ನಾಸಿಕ, ಅಭಿನಯ ಚತುರತೆಯೊಡನೆ ಸುಶ್ರಾವ್ಯವಾದ ಗಾಯನ ಇವೆಲ್ಲಾ ಸೇರಿ ಕಲಾವಿದೆಯಾಗಿ ಶ್ರೇಷ್ಠ ನಟಿಯಾಗಿ ಈ ಕಲಾವಿದೆ ಆ ಕಾಲದಲ್ಲಿ ಮೆರೆದಳು.”6 (ಕೆ.ವಿ.ಆಚಾರ್ಯ ‘ಕರ್ನಾಟಕ ರಂಗಭೂಮಿ’ ಪು.256)ಮುಂದೆ ಗಂಗೂಬಾಯಿ ವಾಮನರಾಯರ ಕಂಪನಿಯನ್ನು ಬಿಟ್ಟು, ತಮ್ಮದೇ ಆದ ಸ್ವಂತ ಕಂಪನಿಯನ್ನು ಕಟ್ಟಿದರು.

ತಮ್ಮ ಕೈಹಿಡಿದ ಜೀವನ ಸಂಗಾತಿ ಮಧ್ವರಾವ್ ದೇಶಪಾಂಡೆಯವರ ನೆರವಿನಿಂದ 1926 ರಲ್ಲಿ ‘ಶ್ರೀಕೃಷ್ಣ ನಾಟಕ ಮಂಡಳಿ’ ಎಂಬ ಸಂಸ್ಥೆಯನ್ನು ಗಂಗೂಬಾಯಿ ಸ್ಥಾಪಿಸಿದರು. ಅಲ್ಲಿ ಮರಾಠಿಯ ಖಾಡಿಲ್ಕರರ ಪ್ರಸಿದ್ಧ ನಾಟಕ ‘ಮಾನಪಮಾನ’ ಎಂಬ ಸಂಗೀತ ಪ್ರಧಾನ ನಾಟಕವನ್ನು `ಭಾಮಿನಿ’ ಹೆಸರಲ್ಲಿ ಕನ್ನಡಿಸಿ ಪ್ರದರ್ಶನ ಮಾಡಿದರು. ‘ಭಾಮಿನಿ’ ಪಾತ್ರದಲ್ಲಿ ಗಂಗೂಬಾಯಿ ಗುಳೇದಗುಡ್ಡ ಪ್ರಕಟಿಸುತ್ತಿದ್ದ ಹಾವ-ಭಾವÀ, ಹಾಡುತ್ತಿದ್ದ ಮಧುರವಾದ ರಂಗಗೀತೆಗಳನ್ನು ಪ್ರೇಕ್ಷಕರು ಕಂಡುಕೇಳಿ ಮೆಚ್ಚುಗೆ ಹರಿಸಿದರು. ಗಂಗೂಬಾಯಿಯವರ ಗಾಯನ ಕೇಳಿದ ಪ್ರಖ್ಯಾತಗಾಯಕಿ ಹೀರಾಬಾಯಿ ಬಡೋದೆಕರ ಅವರು ಗಂಗೂಬಾಯಿಗೆ ತಮ್ಮ ನಾಟಕಗಳನ್ನು ನೋಡಲು ಆಹ್ವಾನಿಸಿದರಂತೆ. ಗಂಗೂಬಾಯಿಯವರಿಗೆ ಬಿಜಾಪುರದ ನಾಗರಿಕರು, ‘ಗಾನರತ್ನ’ ಬಿರುದನ್ನು 1924ರಲ್ಲಿ ನೀಡಿ ಸತ್ಕರಿಸಿದರು. ಅಂದಿನಿಂದ ಗಾನರತ್ನ ಗಂಗೂಬಾಯಿ ಎಂಬ ಹೆಸರು ಈ ಕಲಾವಿದೆಗೆ ಗಟ್ಟಿಯಾಯಿತು.

ಮುಂದೆ ಸವಾಯಿ ಗಂಧರ್ವರ ಶಿಷ್ಯರಾದ ರಾಮದುರ್ಗರವರೂ ಗಂಗೂಬಾಯಿ ಅವರ ಕಂಪನಿಗೆ ಬಂದು
ಸೇರಿಕೊಂಡರು. ಗಂಗೂಬಾಯಿ ಕಂಪನಿ ಮರಾಠಿ ಕಂಪನಿಗಳಿಗೆ ದೊಡ್ಡ ಪೈಪೋಟಿ ಕೊಟ್ಟಿತು. ಇದನ್ನು ರಂಗಚರಿತ್ರೆಕಾರರು ಹೀಗೆ ದಾಖಲಿಸುವರು: “ಗಂಗೂಬಾಯಿ ಗುಳೇದಗುಡ್ಡ ಅವರ ಕಂಪನಿ ಸೊಲ್ಲಾಪುರದಲ್ಲಿ ಬೀಡುಬಿಟ್ಟಿತ್ತು. ಅದೇ ಕಾಲಕ್ಕೆ ಮಹಾರಾಷ್ಟ್ರದ ಬಾಲಗಂಧರ್ವರ ಮರಾಠಿ ನಾಟಕ ಕಂಪನಿಯೂ ಅಲ್ಲಿ ಮೊಕ್ಕಾಂ ಹೂಡಿತ್ತು. ‘ಮಾನಾಪಮಾನ’, ‘ಸಂಶಯ ಕಲ್ಲೋಲ’ ಮರಾಠಿ ನಾಟಕಗಳನ್ನು ಆಡುತ್ತಿದ್ದರು. ಎರಡೂ ಮಂದಿರಗಳಲ್ಲಿ ಒಂದೇ ನಾಟಕ. ಒಂದು ಕನ್ನಡ, ಇನ್ನೊಂದು ಮರಾಠಿ. ಮಹಾನಟ ಬಾಲಗಂಧರ್ವರಿಗೆ ಇರುಸು-ಮುರುಸು. ತಾವಾಡುವ ನಾಟಕಗಳನ್ನೇ ಕನ್ನಡ ನಾಟಕ ಮಂಡಳಿ ಆಡುತ್ತಿದೆಯೆಲ್ಲ ಎಂದು ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ಕಡೆಗೊಮ್ಮೆ ಕನ್ನಡ ನಾಟಕ ನೋಡಲು ಬಂದರು.

ಗಂಗೂಬಾಯಿ ಗುಳೇದಗುಡ್ಡ ಮತ್ತು ಬಸವರಾಜ ಮನಸೂರ ಅವರುಗಳ ಹಾಡುಗಾರಿಕೆ, ಅಭಿನಯ ಸಂಭಾಷಣೆಯ ಶೈಲಿಗಳನ್ನು ಕಂಡು ಅವಾಕ್ಕಾದರು. ಅನಂತರ ಬಾಯಿತುಂಬ ಇಬ್ಬರನ್ನು ಪ್ರಶಂಸಿಸಿದರು.”7 (ಹ.ವೆಂ.ಸೀತಾರಾಮಯ್ಯ, ಕರ್ನಾಟಕದ ರಂಗ ಕಲಾವಿದರು, ಪು.495) ಇನ್ನೊಂದು ಪ್ರಕರಣವನ್ನು ಕೆ.ವಿ.ಆಚಾರ್ಯ ಹೀಗೆ ದಾಖಲಿಸುತ್ತಾರೆ: “ಮೈಸೂರಿನಲ್ಲಿ ನಾಟಕಗಳನ್ನಾಡುತ್ತಿದ್ದಾಗ ಕರ್ನಾಟಕ ಸಂಗೀತ ವಿದ್ವಾಂಸರಾದ ದಿವಂಗತ ಶ್ರೀ ವಾಸುದೇವಾಚಾರ್ಯರು ಇವರ ಅಭಿನಯವನ್ನು ನೋಡಿ ಇವರ ಗಾನ ಮಾಧುರ್ಯವನ್ನೂ ಖಚಿತವಾದ ತಾಳಕ್ಕೆ ಸರಿಯಾಗಿ ಹಾಡುವುದನ್ನೂ ಮಧುರ ಕಂಠದಿಂದ ಹೊರಹೊಮ್ಮುವ ತಾನದ ಅಲೆಗಳನ್ನು ಕೇಳಿ ತನ್ಮಯರಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.”8(ಕೆ.ವಿ.ಆಚಾರ್ಯ ‘ಕರ್ನಾಟಕ ರಂಗಭೂಮಿ’ ಪು.258)

ಇದು ಒಂದು ಭಾಷೆಯ ಕಲಾವಿದರು ಮತ್ತೊಂದು ಭಾಷೆಯ ಕಲಾವಿದರನ್ನು ಗೌರವಿಸುವ ಸಂಪ್ರದಾಯವು ಕಂಪನಿಗಳ ಪೈಪೋಟಿಯ ಮಧ್ಯೆಯೂ ಜೀವಂತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಬಸವರಾಜ ಮನಸೂರರು ಗಂಗೂಬಾಯಿ ಕುರಿತು- “ಪ್ರತಿಫಲಾಪೇಕ್ಷೆಯೂ ಇಲ್ಲದೆ, ಸಂಭಾವನೆಯನ್ನೂ ಕೇಳದೆ ದುಡಿಯುವ ಏಕೈಕ ನಟಿ ಗಂಗೂಬಾಯಿ. ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಬಂದರೆ ‘ಅಸ್ವತ್ಥ ಗಂಗೂಬಾಯಿ ಇವಳೇ? ಎಂಬ ಸಂದೇಹ ಬರುವಂಥ ಅಭಿನಯ ತನ್ಮಯತೆ. ಗಂಗೂಬಾಯಿಯಂಥ ನಿಗರ್ವಿ, ನಿರಪೇಕ್ಷ ಭಾವದ ನಟಿಯನ್ನು ರಂಗಭೂಮಿಯಲ್ಲಿ ನಾನು ನೋಡಲಿಲ್ಲ.

ತನ್ನ ಸಂಕಟಗಳಿಗೂ ಎದೆಯಾನಿಸಿ ಇನ್ನೊಬ್ಬರಿಗೆ ಸಹಾಯ ಮಾಡುವ ಉದಾರ ಮನೋವೃತ್ತಿ ಅವಳದು” ಎಂದು ಮೆಚ್ಚುಗೆಯಾಡುತ್ತಾರೆ.9 (ಶಾ.ಮಂ. ಕೃಷ್ಣರಾಯ (ನಿರೂಪಣೆ), ಶ್ರೀಮತಿ ನೀಲಾಂಬಿಕಾ ಶಿ. ಅಮರಶೆಟ್ಟಿ (ಸಂ.) ಚಿಗುರು ನೆನಪು (ನಟಶೇಖರ ಪಂ. ಬಸವರಾಜ ಮನಸೂರರ ಆತ್ಮಕಥೆ), ಪು.64) ಗಂಗೂಬಾಯಿ ತಮ್ಮ ಕಂಪನಿ ನಿಂತ ನಂತರ ಬಸವರಾಜ ಮನ್ಸೂರ್‍ರವರ ‘ಕಲಾಪ್ರಕಾಶ ನಾಟಕ ಮಂಡಳಿ’(1939) ಸೇರಿದರು.

ಅಲ್ಲಿನ ‘ವೀರಅಭಿಮನ್ಯು’ ನಾಟಕದಲ್ಲಿ ನಾಯಕನ ನಾಯಕಿಯ ಪಾತ್ರವನ್ನೂ ವಹಿಸಿ ಗಾಯನ ಹರಿಸಿದರು. ಇವರ ಗಾನ ಮಾಧುರ್ಯದ ಬಗ್ಗೆ ಆದರವಿದ್ದ ಗುಬ್ಬಿ ವೀರಣ್ಣನವರು 1940ರಲ್ಲಿ ತಮ್ಮ ‘ಸುಭದ್ರಾ’ ಚಲನಚಿತ್ರದಲ್ಲಿ ‘ರುಕ್ಮಿಣಿ’ಯ ಪಾತ್ರವನ್ನು ಕೊಟ್ಟರು. ಈ ಚಿತ್ರದಲ್ಲಿ ಗಂಗೂಬಾಯಿ ರುಕ್ಮಿಣಿಯಾಗಿ ‘ಸಖನೆ ಕಮಲ ಮುಖನೆ ಏಳು ಸುಖವ ಬಯಪ ಸಖಿಯನಾಳು’ ಎಂದು ಹಾಡಿದ್ದಾರೆ. ಹೀಗೆ ನಟಿಯಾಗಿ, ಗಾಯಕಿಯಾಗಿ, ಸಿನಿಮಾ ನಟಿಯಾಗಿ, ನಾಟಕ ಮಂಡಳಿಯ ಒಡತಿಯಾಗಿ ಕೆಲಸ ಮಾಡಿದ ಗಂಗೂಬಾಯಿಯವರು 1941 ರಲ್ಲಿ ತೀರಿಕೊಂಡರು.

Leave a Reply

Your email address will not be published.