ಗಾಂಧೀಜಿಯ ಹೆಜ್ಜೆಗಳಲ್ಲಿ ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನ

-ಮಂಜುನಾಥ ಡಿ.ಡೊಳ್ಳಿನ

Paadayatre 1.j pg‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬುದು ಸರ್. ಎಂ. ವಿಶ್ವೇಶ್ವರಯ್ಯನವರ ಹೇಳಿಕೆ. ಹೌದು ದುಡಿವ ‘ಕೈ’ಗಳಿಗೆ ಕೆಲಸ ನೀಡಿದರೆ ಅದು ‘ಕೈ’ಗಾರಿಕೆ ಎನಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕಿನ ಮಟ್ಟವನ್ನೂ ಹೆಚ್ಚಿಸುತ್ತದೆ. ಆದರೆ ಇಂದು ಈ ಕ್ಷೇತ್ರ ಕೇವಲ ಬಂಡವಾಳಶಾಹಿಗಳ ಹೂಡುದಾಣ ಮಾತ್ರವಾಗಿದೆ. ಉದ್ಯೋಗ ಸೃಜನೆ ಎಂಬುದು ಕಾಗದಕ್ಕೆ ಸೀಮಿತವಾಗಿದೆ. ಉತ್ಪಾದನೆ, ಲಾಭಗಳಷ್ಟೇ ಮುಖ್ಯ. ದುಡಿಯುವ ಕೈಗಳು ಕಡಿಮೆಯಾದಷ್ಟೂ ಲಾಭ ಹೆಚ್ಚು ಎಂದು ಅವು ನಂಬಿವೆ. ಮಾನವ ಸಂಪನ್ಮೂಲವನ್ನು ಕಟ್ಟಕಡೆಯ ಆದ್ಯತೆಯಾಗಿಸಿಕೊಂಡು ಯಂತ್ರ ಪಾರಮ್ಯ ಅಳವಡಿಸಿಕೊಂಡು ಹುಟ್ಟುತ್ತಿರುವ ಉದ್ಯಮಗಳು ಖಂಡಿತ ‘ಕೈ’ಗಾರಿಕೆಗಳಲ್ಲ. ಅವು ಕಾರ್ಖಾನೆಗಳಷ್ಟೇ ಆಗಿವೆ .

ಅತಿಯಾದ ಯಂತ್ರಗಳ ಹಿಂದೆ ಬಿದ್ದಿರುವ ನೇಕಾರ, ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಅವಲಂಬಿಸಿರುವ ರೈತ ಇಂದು ಇಬ್ಬರೂ ಆತ್ಮಹತ್ಯೆಯ ಸುಳಿಗೆ ಸಿಲುಕಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಸರ್ವೋದಯದ ಕಲ್ಪನೆಯಲ್ಲಿ ಮಾತ್ರ ಇದಕ್ಕೆ ಪರಿಹಾರಗಳಿವೆ. ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ನಮಗೆ ಉಳಿವು ಎಂಬ ಅರಿವನ್ನು ದುಡಿಯುವ ನೇಕಾರವರ್ಗದಲ್ಲಿ ಮೂಡಿಸಲು ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಸಾಗಿರುವ ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನ ಪ್ರಯತ್ನಿಸುತ್ತಿದೆ. ಮಹಾತ್ಮಾ ಗಾಂಧೀಜಿಯವರ ಚರಕದಂತೆಯೇ ನಿರಂತರವಾಗಿ ಹಳ್ಳಿಗಳನ್ನು ಸುತ್ತುತ್ತಿರುವ ಈ ಆಂದೋಲನ ಗಾಂಧೀ ಜಯಂತಿಯನ್ನು ನಿತ್ಯ ಆಚರಿಸುತ್ತಿದೆ.Paadayatre

ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಕೃಷಿಭೂಮಿಯನ್ನು ನಿರಂತರವಾಗಿ ಕಸಿಯುತ್ತ ಹುಸಿ ಕನಸುಗಳನ್ನು ಬಿತ್ತಿ ಸಮಗ್ರ ಒಕ್ಕಲುತನವನ್ನೇ ಒಕ್ಕಲೆಬ್ಬಿಸಿ, ಒಕ್ಕಲಿಗನನ್ನು (ಕೃಷಿಕರನ್ನು) ಅತಂತ್ರವಾಗಿಸುವ ಕಾರ್ಯ ಭರಾಟೆಯಿಂದ ಸಾಗಿದೆ. ಝಗಮಗಿಸುವ ರಸ್ತೆ, ಕಟ್ಟಡಗಳ ನಿರ್ಮಾಣವಷ್ಟೇ ಅಭಿವೃದ್ಧಿ ಎಂದೆನಿಸಿಕೊಳ್ಳುತ್ತಿರುವಾಗ, ನಾವು ಸಾಗಬೇಕಾದ ಹಾದಿ ಇದಲ್ಲ, ಆರ್ಥಿಕಾಭಿವೃದ್ಧಿ ಮಾತ್ರ ಅಭಿವೃದ್ಧಿ ಅಲ್ಲ. ಉತ್ತಮ ಆರೋಗ್ಯ, ಆಹಾರ , ಶಿಕ್ಷಣ ಸೌಲಭ್ಯಗಳಿಂದ ಕೂಡಿದ ಆತ್ಮಗೌರವದ , ಸ್ವಾಭಿಮಾನದ ಬದುಕೇ ಸುಸ್ಥಿರ ಅಭಿವೃದ್ಧಿ. ಶ್ರೀಮಂತಿಕೆ ಇಲ್ಲದೆಯೂ ಸ್ವಾವಲಂಬಿಯಾದ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಜನರಿಗೆ ತಣ್ಣನೆಯ ರೀತಿಯಲ್ಲಿ ಮನವರಿಕೆ ಮಾಡಿಕೊಡುತ್ತಿದೆ.

ಇದೇ ಅಕ್ಟೋಬರ್ 2ಕ್ಕೆ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ನಾವೆಲ್ಲ ಆಚರಿಸಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಭಾರತದ ಸರ್ವರ ಏಳಿಗೆಗೆ ಸರ್ವೋದಯವೊಂದೇ ರಹದಾರಿ ಎಂದು ಸಾರಿ ಹೇಳಿದ ಮೋಹನದಾಸ ಕರಮಚಂದ ಗಾಂಧಿಯವರು ಭೌತಿಕವಾಗಿ ನಮ್ಮನ್ನಗಲಿ 67 ವರ್ಷಗಳು ಉರುಳಿವೆ. ಈ ನಡುವೆ ಸ್ವತಂತ್ರ ಭಾರತದ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಹದಿನೈದು ಲೋಕಸಭೆಗಳು ರಚನೆಯಾಗಿ, ವಿಸರ್ಜನೆಗೊಂಡಿವೆ ಈಗ ಹದಿನಾರನೇ ಲೋಕಸಭೆ ಅಸ್ತಿತ್ವದಲ್ಲಿದೆ. ಹತ್ತು ಹಲವು ಸರಕಾರಗಳು ಬಂದು ಹೋಗಿವೆ. ಆದರೆ ಸರ್ವೋದಯವೆಂಬುದು ಇಂದಿಗೂ ದಕ್ಕದೇ ಉಳಿದಿರುವ ಆದರ್ಶವಾಗಿಬಿಟ್ಟಿದೆ.Shramadaana.3

ಸುಸ್ಥಿರ ಅಭಿವೃದ್ಧಿ ಎಂಬುದು ಅರ್ಥವೇ ಆಗದ ಶಬ್ದಗಳಂತೆ ಭಾಸವಾಗುತ್ತಿದೆ. ಗಣಿ ಧೂಳು, ಬಹುರಾಷ್ಟ್ರೀಯ ಕಂಪನಿಗಳ ದಾಳಿಗೆ ದೇಶೀಯ ಕೃಷಿ, ನೇಕಾರಿಕೆ, ಗುಡಿಕೈಗಾರಿಕೆಗಳು ನಲುಗಿ ,ತತ್ತರಿಸಿ ಹೋಗುತ್ತಿವೆ. ಆದರೆ ನಾವು ಸಾಗಬೇಕಾದ ಹಾದಿ ಇದಲ್ಲ. ತುಳಿಯಬೇಕಾದ ಹೆಜ್ಜೆಗಳು ಇವುಗಳಲ್ಲ. ಬದುಕುವ ರೀತಿ ಇದಲ್ಲವೇ ಅಲ್ಲ ಎಂಬುದನ್ನು ಸದ್ದಿಲ್ಲದೇ ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದ ಬದನವಾಳು ಸುಸ್ಥಿರ ಬದುಕಿನ ಆಂದೋಲನ ತೋರಿಸಿಕೊಡುತ್ತಿದೆ. ಗಾಂಧೀಜಿಯವರ ಅಮೃತವಾಹಿನಿಯನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಲು ಶ್ರಮಿಸುತ್ತಿದೆ.

ಕಳೆದ ಐದಾರು ವರ್ಷಗಳಿಂದ ನೇಕಾರರ ಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಚಳುವಳಿಯು. ಗಾಂಧೀಜಿ ಸಭೆ ನಡೆಸಿದ್ದ ಚಾಮರಾಜನಗರ ಜಿಲ್ಲೆಯ ಬದನವಾಳು ಕೈಮಗ್ಗ ನೂಲಿನ ಕೇಂದ್ರದಿಂದ ಆರಂಭಗೊಂಡು ಬೆಂಗಳೂರಿನ ಗಾಂಧೀ ಭವನ, ಹಾಸನ ಜಿಲ್ಲೆಯ ಅರಸೀಕೆರೆ, ಗದಗ ಜಿಲ್ಲೆಯ ಗಜೇಂದ್ರಗಡ, ಕೊಪ್ಪಳ ಜಿಲ್ಲೆಯ ಭಾಗ್ಯನಗರ ,ಬಾಗಲಕೋಟ ಜಿಲ್ಲೆಯ ಹಲವೆಡೆ, ಹೀಗೆ ನೇಕಾರಿಕೆ ದಟ್ಟವಾಗಿರುವ ಅನೇಕ ಊರುಗಳಲ್ಲಿ ಸಂಚರಿಸುತ್ತಿದೆ. ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನದ ಸದಸ್ಯರು ನೇರವಾಗಿ ಸಾಮಾನ್ಯ ನೇಕಾರರ ಮಧ್ಯೆ ಹೋಗಿ ಅವರನ್ನು ಸಂಘÀಟಿಸಿ, ಪಾದಯಾತ್ರೆ ಮಾಡಿ, ಗಾಂಧೀಜಿಯವರ ಕಲ್ಪನೆಯಂತೆ ಶ್ರಮದಾನ ನಡೆಸಿ ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಜನರ ಉತ್ತಮ ಬದುಕಿಗೆ ಶುಚಿತ್ವದ ಅಗತ್ಯವನ್ನು ಮನಗಾಣಿಸುತ್ತಿದೆ. ಸ್ವಾವಲಂಬಿ ಬದುಕಿಗಾಗಿ ಸರಳವಾಗಿ ಆಚರಣೆಗೆ ತರಬಹುದಾದ ಒಂದಷ್ಟು ನಿಯಮಗಳ ಪ್ರತಿಜ್ಞೆಯನ್ನು ಈ ಆಂದೋಲನ ಮಾಡಿಸುತ್ತಿದೆ.

ಹಳ್ಳಿಗಳು ಕಸದ ತೊಟ್ಟಿಗಳಾಗಬಾರದು. ಶ್ರೀಮಂತರ ನಗರಗಳಾಗಿರುವ ಪ್ಯಾರಿಸ್, ಲಂಡನ್, ಬೆಂಗಳೂರಿಗಿಂತ ಉತ್ತಮವಾಗಿ ನಾವು ನಮ್ಮ ಊರುಗಳನ್ನು ಹೆಮ್ಮೆಯಿಂದ ಇಟ್ಟುಕೊಳ್ಳಬೇಕು. ಶ್ರಮ ಸಹಿತವಾದ ಸರಳ ಬದುಕನ್ನು ಶ್ರದ್ಧೆಯಿಂದ ಬಾಳಬೇಕು. ಶುಚಿತ್ವ ಮತ್ತು ಆತ್ಮಗೌರವಗಳು ಮಾತ್ರ ನಮ್ಮ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ ಎಂಬುದರ ಜಾಗೃತಿ ಉಂಟು ಮಾಡುತ್ತಿದೆ.
ಗ್ರಾಮೋದ್ಯೋಗಗಳನ್ನು ಪುನಶ್ಚೇತನಗೊಳಿಸುವ ಆಶಯದೊಂದಿಗೆ ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನ ನಾಡಿನುದ್ದಕ್ಕೂ ಸಂಚರಿಸುತ್ತಿದೆ. ಮಾಧ್ಯಮಗಳ ಪ್ರಚಾರ, ಕ್ಯಾಮೆರಾಗಳ ಫ್ಲ್ಯಾಷ್ ಲೈಟುಗಳಿಗಾಗಿ ಹಂಬಲಿಸದೇ, ಸದ್ದಿಲ್ಲದೇ ಈ ಆಂದೋಲನ ಕೆಲಸ ಮಾಡುತ್ತಿದೆ. ಗಾಂಧೀಜಿಯವರ ಹಾದಿಯಲ್ಲಿ ಸಾಗಿ ಸರ್ವೋದಯ ಕಲ್ಪನೆಯನ್ನು ಹೊಸ ಪೀಳಿಗೆಯಲ್ಲಿ ಮರುಬಿತ್ತನೆ ಮಾಡುವ ಕಾರ್ಯದಲ್ಲಿ ಜಿ.ಎಸ್.ಜಯದೇವ, ವಿಠ್ಠಪ್ಪ ಗೋರಂಟ್ಲಿ ,ಪ್ರೊ.ಎ.ಎಂ.ಶಿವಸ್ವಾಮಿ, ಪ್ರೊ. ಕೆಂಚರಡ್ಡಿ ಮತ್ತಿತರರು ನಿರತರಾಗಿದ್ದಾರೆ.Shramadaana.4

ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನವನ್ನು ತಮ್ಮೂರಿಗೂ ಆಹ್ವಾನಿಸಿ, ಅವರೊಂದಿಗೆ ಪಾದಯಾತ್ರೆ, ಶ್ರಮದಾನ, ಗ್ರಾಮೋದ್ಯೋಗಿಗಳ ಸಭೆ ನಡೆಸಿ ಸುಸ್ಥಿರ ಬದುಕಿನ ಸೂತ್ರ ಅಳವಡಿಸಿಕೊಂಡರೆ ಬದುಕು ಅರ್ಥ ಪಡೆದುಕೊಳ್ಳುತ್ತದೆ.

Leave a Reply

Your email address will not be published.