ಗಜಲ್ – ಕೊಂಚ ಬಿಡುವು ಮಾಡಿಕೊ

ರಟ್ಟೀಹಳ್ಳಿ ರಾಘವಾಂಕುರ

moonನಿನ್ನೊಂದಿಗೆ ಸ್ವಲ್ಪ ಮಾತಾಡುವುದಿದೆ ಚಂದ್ರ ಕೊಂಚ ಬಿಡುವು ಮಾಡಿಕೊ
ಬರುವ ಹುಣ್ಣಿಮೆಗೆ ಇಲ್ಲಿ ಬಂದ್ಹೋಗುವಾಗ ಕೊಂಚ ಬಿಡುವು ಮಾಡಿಕೊ

ಬಾಲ್ಯದಲ್ಲಿ ಅಮ್ಮ ತೋರಿದ ಚಂದಮಾಮನಲ್ಲಪ್ಪ ನೀನೀಗ ದೊಡ್ಡವನಾಗಿದ್ದೀಯ
ಆಗ ನಂಬಿ ತುತ್ತುನುಂಗಿ ಮೋಸಹೋದೆ ಮಾತಾಡುವುದಿದೆ ಕೊಂಚ ಬಿಡುವು ಮಾಡಿಕೊ

ಅದೇನು ಇತ್ತೀಚೆಗೆ ಬರೀ ಭೂಮಿ-ಸೂರ್ಯನ ಸುತ್ತವೇ ಸುತ್ತುತ್ತೀಯಂತೆ
ಮೊನ್ನೆ ಯಾರೋ ಹೇಳಿದರು ನೋಡುವುದಿದೆ ಕೊಂಚ ಬಿಡುವು ಮಾಡಿಕೊ

ನನ್ನ ಹಾಗೆ ಅದೆಷ್ಟೊ ಬಾಲ್ಯಗಳಿಗೆ ನೀನೆ ಅಲ್ಲವೆ ಮೋಸ ಮಾಡಿದ ಮೋಹಗಾರ
ಅದೆಷ್ಟು ತಾಯಂದಿರಿಗೆ ನೆಪವಾಗಿದ್ದೀಯೆಂದು ನೋಡಬೇಕು ಕೊಂಚ ಬಿಡುವು ಮಾಡಿಕೊ

ಯುಗಾದಿ-ರಂಜಾನ್‍ಗೆ ನೀನೆ ನೆಪವಲ್ಲವೆ ಆದರೂ ಚತುರ್ಥಿಗೆ ನೀನೆ ಅಪಶಕುನವಂತೆ
ಯಾಕಿಷ್ಟು ಬೇಗ ದೊಡ್ಡವನಾದೆ ಯಾರಿಗೂ ಹೇಳದೆ ಕೇಳಬೇಕು ಕೊಂಚ ಬಿಡುವು ಮಾಡಿಕೊ

ಯಾಕೆ ಬಾಲ್ಯದ ಮುಗ್ಧತೆ ಮಾರಿಕೊಂಡಿದ್ದೀಯಲ್ಲ ಛೆ ನೀನು ಹಾಗೇ ಇರಬೇಕಿತ್ತು
ಇತ್ತೀಚಿಗೆ ನೀನು ಅರ್ಥವಾಗುತ್ತಲೇ ಇಲ್ಲ ತಿಳಿದುಕೊಳ್ಳುವುದಿದೆ ಕೊಂಚ ಬಿಡುವು ಮಾಡಿಕೊ

ಅಪ್ಪನಾಗುತ್ತಿದ್ದಾನೆ ಅಂಕುರ ನಾಳೆ ಹೆರಿಗೆ ಅವಳಿಗೆ ಮಗಳೇ ಹುಟ್ಟುತ್ತಾಳಂತೆ
ತುತ್ತು ಬೇಡೆಂದು ಮಗಳು ಹಠವಿಡಿದಾಗ ನಿನ್ನ ತೋರಿಸಬೇಕಿದೆ ಕೊಂಚ ಬಿಡುವು ಮಾಡಿಕೊ

ನಿನ್ನೊಂದಿಗೆ ಸ್ವಲ್ಪ ಮಾತಾಡುವುದಿದೆ ಚಂದ್ರ ಕೊಂಚ ಬಿಡುವು ಮಾಡಿಕೊ
ನಿನಗೂ ಮಗಳಿದ್ದರೆ ಹೇಗಿದ್ದಾಳೆಂದು ನೋಡಬೇಕು ಕೊಂಚ ಬಿಡುವು ಮಾಡಿಕೊ

ರಟ್ಟೀಹಳ್ಳಿ ರಾಘವಾಂಕುರ

ಎಂ.ಎ ಪಿಎಚ್.ಡಿ (ಸಂ)
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ – 583 276
ತಾ. ಹೊಸಪೇಟೆ, ಜಿ. ಬಳ್ಳಾರಿ
ಮೊ. 8762825093

Leave a Reply

Your email address will not be published.