ಕ್ರೆಬ್ಸ್ ಎಂಬ ನೋಬಲ್ ವಿಜ್ಞಾನಿ

- ಎಂ. ನಾರಾಯಣಸ್ವಾಮಿ

“ಪ್ರಖ್ಯಾತ ವಿಜ್ಞಾನಿಗಳ ಬದುಕು ಮತ್ತವರ ಕೊಡುಗೆಗಳನ್ನು ಅರಿಯುವುದರ ಮೂಲಕ ಯಾವುದೇ ವಿಜ್ಞಾನಿ ತನ್ನ ಜ್ಞಾನವನ್ನು ಹಿಗ್ಗಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.” – ಬೆವೆರಿಡ್ಜ್

“ಜರ್ಮನಿ ಸಂಶೋಧಿಸುತ್ತದೆ, ಫ್ರ್ರಾನ್ಸ್ ಪ್ರಕಟಿಸುತ್ತದೆ, ಇಂಗ್ಲೆಂಡ್ ಅನುವಾದಿಸುತ್ತದೆ” ಇದು ವೈಜ್ಞಾನಿಕ ಸಂಶೋಧನೆಗಳ ಬಗೆಗಿದ್ದ ವಿಶ್ಲೇಷಣಾತ್ಮಕ ಜಾಗತಿಕ ಹೇಳಿಕೆ. ಜರ್ಮನಿ ಸಂಶೋಧನೆಗಳಲ್ಲಿ ಸದಾ ಮುಂದಿರುತ್ತದೆ, ಅದು ಸಂಶೋಧಿಸಿದ್ದನ್ನು ಫ್ರ್ರಾನ್ಸ್ ಮರುಸಂಶೋಧಿಸಿ ಬರೆದು ಪ್ರಕಟಿಸಿದರೆ, ಇಂಗ್ಲೆಂಡ್ ಮತ್ತಷ್ಟು ಮರುಸಂಶೋಧಿಸಿ ಆಂಗ್ಲಭಾಷೆಗದು ಅನುವಾದಿಸಲ್ಪಟ್ಟು ಪ್ರಕಟಗೊಂಡಾಗ ಆ ಜ್ಞಾನ ಜಗಜ್ಜಾಹೀರಾಗುತ್ತದೆ ಎನ್ನುವುದು ಈ ಹೇಳಿಕೆಯ ಸಾರಾಂಶ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ವೈಜ್ಞಾನಿಕ ಸಂಶೋಧನೆಗಳಲ್ಲಿ ಮಹತ್ತರವಾದ ಸಾಧನೆಗಳಾದವು. ಆರೋಗ್ಯಕರ ಸ್ಪರ್ಧೆಗಿಳಿದ ಐರೋಪ್ಯ ರಾಷ್ಟ್ರಗಳು ನಾ ಮುಂದು, ತಾ ಮುಂದು ಎಂದು ಒಂದಿಲ್ಲೊಂದು ಆವಿಷ್ಕಾರಗಳನ್ನು ಮಾನವ ಕುಲಕ್ಕೆ ಕೊಟ್ಟವು. ಅಂತಹ ನೋಬಲ್ ಪ್ರಶಸ್ತಿ ವಿಜೇತ ಆವಿಷ್ಕಾರಗಳಲ್ಲೊಂದು ಪ್ರತಿ ಜೀವಿಯ ಜೀವಕೋಶಗಳಲ್ಲಾಗುವ ಚೈತನ್ಯ ಕ್ರಿಯೆಯಾದ ಕ್ರೆಬ್ಸ್ ಸೈಕಲ್ (Kreb’s Cycle) ಅಥವಾ ಸಿಟ್ರಿಕ್ ಆಸಿಡ್ ಸೈಕಲ್ ಅಥವಾ ಟ್ರೈಕಾರ್ಬಾಕ್ಸಿಲಿಕ್ ಆಸಿಡ್ ಸೈಕಲ್.

ಕ್ರೆಬ್ಸ್ ಸೈಕಲ್ಲಿಗೆ ಸೇರಿಕೊಳ್ಳುವ ಶರ್ಕರ ಪಿಷ್ಟ, ಕೊಬ್ಬು ಮತ್ತು ಸಸಾರಜನಕ ಅಂತಿಮವಾಗಿ ಆರು ಇಂಗಾಲದ ಅಣುಗಳ ಸಿಟ್ರಿಕ್ ಆಮ್ಲವಾಗುತ್ತದೆ. ಸಿಟ್ರಿಕ್ ಆಮ್ಲದಲ್ಲಿ ಮೂರು ಆಮ್ಲ ಗುಂಪುಗಳಿರುವುದರಿಂದ ಅದನ್ನು ಟ್ರೈಕಾರ್ಬಾಕ್ಸಿಲಿಕ್ ಆಮ್ಲವೆಂತಲೂ ಕರೆಯುತ್ತಾರೆ. ಜೀವಕೋಶಗಳ ಮೈಟೋಖಾಂಡ್ರಿಯಾದಲ್ಲಿ ಸಿಟ್ರಿಕ್ ಆಮ್ಲವು ಉರಿದುರಿದು ಒಂದು ಕಡೆ ಶಕ್ತಿಯನ್ನು ಹೊಮ್ಮಿಸಿ ಇನ್ನೊಂದು ಕಡೆ ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ವಿಸರ್ಜಿಸುತ್ತಾ ಹೋಗಿ ಮತ್ತದೇ ರೂಪಕ್ಕೆ ಬಂದು ನಿಲ್ಲಬಲ್ಲುದು.

ಶರೀರ ಕ್ರಿಯೆಗಳಲ್ಲೇ ಇದೊಂದು ಅತಿಮುಖ್ಯ ಜೀವಕ್ರಿಯೆ, ಜೀವ ಚೈತನ್ಯ ಕ್ರಿಯೆ, ಜೀವದ್ರವ್ಯ ಕ್ರಿಯೆ, ಜೀವಾಳ ಕ್ರಿಯೆ. ಈ ಜೀವ ಚೈತನ್ಯ ಕ್ರಿಯೆಯ ಶೋಧಕ ಕ್ರೆಬ್ಸ್. ಹ್ಯಾನ್ಸ್ ಅಡಾಲ್ಪ್ ಕ್ರೆಬ್ಸ್ ಜರ್ಮನಿಯವನು. ಮನುಕುಲಕ್ಕೆ ಜೀವರಸಾಯನ ವಿಜ್ಞಾನದ ಅತಿ ಮುಖ್ಯ ಕ್ರಿಯೆಯನ್ನು ಶೋಧಿಸಿ ವಿವರಗಳನ್ನು ಒದಗಿಸಿಕೊಟ್ಟ ಕ್ರೆಬ್ಸ್ ಜೀವನ ವೃತ್ತಾಂತವನ್ನು ಓದುಗರ ಮುಂದಿಡುವ ಒಂದು ಪ್ರಯತ್ನವಿದು.RDC00000825-L

ಕಿವಿ, ಮೂಗು, ಗಂಟಲು ತಜ್ಞ ವೈದ್ಯರ ಮಗನಾಗಿ ಅಡಾಲ್ಪ್ ಹ್ಯಾನ್ಸ್ ಕ್ರೆಬ್ಸ್ ಹುಟ್ಟಿದ್ದು ಆಗಸ್ಟ್ 25, 1900 ರಲ್ಲಿ ಜರ್ಮನಿಯ ಒಂದು ಪುಟ್ಟ ಪಟ್ಟಣ ಹಿಲ್ಡೆಶೀಮ್‍ನಲ್ಲಿ. ತಂದೆ ಕಟ್ಟುನಿಟ್ಟಿನ ಶಿಸ್ತುಗಾರ. ಅಪ್ಪನ ಜತೆ ಆಚೀಚೆ ಓಡಾಡಿ ಗಿಡಗಂಟೆಗಳನ್ನು ಗಮನಿಸಿ ಹವ್ಯಾಸಿ ಸಸ್ಯಶಾಸ್ತ್ರಜ್ಞನಾದ ಕ್ರೆಬ್ಸ್ ಬಿಡುವಾದಾಗ ಕೈದೋಟದ ಕುಸುರಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ. 1918 ರಿಂದ 1923 ರವರೆಗೆ ವೈದ್ಯಕೀಯ ಪದವಿಯ ಅಧ್ಯಯನ. 1925 ರಲ್ಲಿ ಎಂ.ಡಿ. ಪದವಿ.

ವಿದ್ಯಾರ್ಥಿ ಜೀವನದಲ್ಲಿ ಇವರ ಮೇಲೆ ಗಾಢ ಪ್ರಭಾವ ಬೀರಿದ ಗುರುಗಳೆಂದರೆ ಜೀವ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ನೂಪ್‍ರವರು. ಆಗಿನ ಕಾಲಕ್ಕೇ “ಜೀವರಸಾಯನ ಶಾಸ್ತ್ರದ ವಿಜ್ಞಾನಿಗಳ ಆಟದ ಬಯಲು” ಎಂಬ ಖ್ಯಾತಿಯ ಬರ್ಲಿನ್‍ನ ಚಾರಿಟಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯುವ ಸುಸಂದರ್ಭದಲ್ಲಿ ಕ್ರೆಬ್ಸ್‍ಗೆ ವೆಬರ್ ಮತ್ತು ನಾಕ್ಮನ್‍ಸಾನ್‍ರಂತಹ ಜೀವದ ಗೆಳೆಯರು ದಕ್ಕಿದರು. ಜೀವರಸಾಯನಶಾಸ್ತ್ರದ ಘಟಾನುಘಟಿಗಳಾದ ಒಟ್ಟೋ ಮೆಯೆರಾಫ್ (ಎಂಬ್ಡನ್-ಮೆಯೆರಾಫ್ ಪಾಥ್‍ವೇ ಖ್ಯಾತಿ) ಹಾಗೂ ಕಾರ್ಲ್ ನ್ಯೂಬರ್ಗ್‍ರವರು ಕ್ರೆಬ್ಸ್‍ರ ಕುಟುಂಬದೊಂದಿಗೆ ವೈವಾಹಿಕವಾಗಿ ಬೆಸೆದುಕೊಂಡರು.

1930 ರವರೆಗೆ ವಾರ್ಬರ್ಗ್ ಎಂಬ ಸಿಡುಕು ಸ್ವಭಾವದ ಗುರುಗಳ ಸಂಶೋಧನಾಲಯದಲ್ಲಿ ಉದ್ಯೋಗ. ಅಲ್ಲಿ ಕ್ರೆಬ್ಸ್‍ರಿಂದ ಸಸ್ತನಿಗಳ ಮೂತ್ರಪಿಂಡ ಮತ್ತು ಯಕೃತ್ತಿನಲ್ಲಿ ಡಿ-ಅಮೈನೋ ಆಸಿಡ್ ಆಕ್ಸಿಡೇಸ್ ಎಂಬ ಕಿಣ್ವದ ಶೋಧ. ಆ ಮೂಲಕ ದೇಹದಲ್ಲಿ ಯೂರಿಯಾ ಸಂಶ್ಲೇಷಣೆಯ ಆರ್ನಿಥಿನ್ ಸೈಕಲ್‍ನ ಕ್ರಿಯೆಗಳತ್ತ ಚೆಲ್ಲಿದ ಬೆಳಕು. ಅದಾಗಲೇ ಜರ್ಮನಿಯಲ್ಲಿ ಟಿಸಿಲೊಡೆಯುತ್ತಿದ್ದ ಹಿಟ್ಲರನ ನಾಸಿಸಂ. ವಾರ್ಬರ್ಗ್‍ರವರ ಸಂಶೋಧನಾಲಯದಲ್ಲಿ ವೈಯಕ್ತಿಕ ಅಭಿಪ್ರಾಯಕ್ಕೆ ಮನ್ನಣೆಯಿಲ್ಲದ್ದರಿಂದ ಕ್ರೆಬ್ಸ್‍ರವರು ಫ್ರೈಬರ್ಗ್ ವಿಶ್ವವಿದ್ಯಾಲಯದಲ್ಲಿ ಪುಟ್ಟ ಸಂಶೋಧನಾಲಯ ತೆರೆದರು. ಅದು ಸದಾ ಜೀವರಸಾಯನಶಾಸ್ತ್ರದ ವಿಜ್ಞಾನಿಗಳಿಂದ ಗಿಜಿಗುಡುತ್ತಿತ್ತು. 1933ರಲ್ಲಿ ಕ್ರೆಬ್ಸ್‍ನ ಕೆಲಸವನ್ನು ಕಿತ್ತುಕೊಂಡಿತು. ಹಿಟ್ಲರನ ರಾಷ್ಟ್ರೀಯ ಸಮಾಜವಾದಿ ಸರ್ಕಾರ. ಆದರೇನಂತೆ, ಕೇಂಬ್ರಿಡ್ಜಿನ ಜೀವರಸಾಯನ ಶಾಸ್ತ್ರದ ಪ್ರಾಧ್ಯಾಪಕ ಸರ್ ಫ್ರೆಡೆರಿಕ್ ಗೌಲ್ಯಾಂಡ್ ಹಾಪ್‍ಕಿನ್ಸ್‍ರವರು ಇಂಗ್ಲೆಂಡಿಗೆ ಬರುವಂತೆ ಕ್ರೆಬ್ಸ್‍ಗೆ ಆಮಂತ್ರಣ ನೀಡಿದರು. ಅಲ್ಲಿಂದ ತಮ್ಮ ಜೀವಿತಾವಧಿಯ ಉಳಿದ ನಲವತ್ತೆಂಟು ಕ್ರಿಸ್‍ಮಸ್‍ಗಳನ್ನು ಇಂಗ್ಲೆಂಡಿನಲ್ಲೇ ಕಳೆದರು ಕ್ರೆಬ್ಸ್.

ಹಾಪ್‍ಕಿನ್ಸ್‍ರವರ ಅಭಿಲಾಷೆಯಿದ್ದುದು ಜೀವರಸಾಯನ ವಿಜ್ಞಾನವು ಶೈಕ್ಷಣಿಕವಾಗಿ ಒಂದು ಪ್ರತ್ಯೇಕ ಹಾಗೂ ಸ್ವತಂತ್ರವಾದ ಅಧ್ಯಯನ ವಿಷಯವಾಗಬೇಕೆಂಬುದು. ಈ ನಿಟ್ಟಿನಲ್ಲೇ ಮುತುವರ್ಜಿಯಿಂದ ನಡೆದುಕೊಂಡರು ಕ್ರೆಬ್ಸ್. ಕೇಂಬ್ರಿಡ್ಜಿನಲ್ಲಿ ಮಾನೋಮೆಟ್ರಿ ಮತ್ತು ಟಿಶ್ಯೂ ಸ್ಲೈಸ್ ಟೆಕ್ನಿಕ್‍ಗಳ ಬಗ್ಗೆ ಪರಿಣಾಮಕಾರಿ ಉಪನ್ಯಾಸಗಳನ್ನು ನೀಡಿದರು.

ಜರ್ಮನ್ ಮಾತೃಭಾಷೆಯಾಗಿದ್ದದ್ದರಿಂದ ಇಂಗ್ಲೀಷ್‍ನ ಪಾಂಡಿತ್ಯವನ್ನು ರೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿತು. ಅದಕ್ಕಾಗಿ ಗೆಳೆಯರೊಬ್ಬರು ನೀಡಿದ ಜೆರೋಮ್ ಕೆ. ಜೆರೋಮ್ ಬರೆದ “ಥ್ರೀ ಮ್ಯಾನ್ ಇನ್ ಎ ಬೋಟ್” ಕೃತಿಯನ್ನು ಓದುತ್ತಾ ಕ್ಲಿಷ್ಟಕರವಾದ ಹೊಸ ಪದ, ಪದಗುಚ್ಚಗಳನ್ನು ಮನನ ಮಾಡಿಕೊಂಡರು. ಕೇಂಬ್ರಿಡ್ಜ್‍ನ ಪ್ರಯೋಗಾಲಯದ ತಮ್ಮ ಕೋಣೆಯ ಬ್ಲಾಕ್‍ಬೋರ್ಡಿನ ಮೇಲೆ ಹೊಸ ಮತ್ತು ಅರಿವಿಲ್ಲದ ಆಂಗ್ಲ ಪದಗಳನ್ನು ಬರೆದು, ದಿನದಾಂತ್ಯಕ್ಕೆ ಅವನ್ನು ಒಂದು ನೋಟ್ ಪುಸ್ತಕಕ್ಕೆ ವರ್ಗಾಯಿಸಿಕೊಂಡು ಮನೆಯಲ್ಲಿ ಪದೇಪದೇ ಮೆಲುಕು ಹಾಕಿ ತಮ್ಮ ನೆನಪಿನ ಬುತ್ತಿಗೆ ರವಾನಿಸಿಕೊಳ್ಳುತ್ತಿದ್ದರು.

ಸಂಶೋಧನಾ ಬದುಕಿನ ಏರಿಳಿತಗಳನ್ನು ಕ್ರೆಬ್ಸ್‍ರವರು “ರೆಮಿನಿಸ್ಸೆನ್ಸಸ್ ಅಂಡ್ ರಿಫ್ಲೆಕ್ಷನ್ಸ್” ಮತ್ತು “ಬಯೋಗ್ರಾಫಿಕಲ್ ಮೆಮೋಯಿರ್” ಎಂಬ ಎರಡು ಗ್ರಂಥಗಳಲ್ಲಿ ದಾಖಲಿಸಿದ್ದಾರೆ.

ಶ್ರಮಜೀವಿಯ ಶ್ರೇಯಸ್ಸಿನ ಮೆಟ್ಟಿಲುಗಳು ಯಾವಾಗಲೂ ಏರುಮುಖವಾಗಿಯೇ ಇರುತ್ತವೆ. ಕೆಂಬ್ರಿಡ್ಜ್‍ನ ಹುದ್ದೆ ಹಂಗಾಮಿ ಹುದ್ದೆಯಾಗಿತ್ತು. 1935ರಲ್ಲಿ ಶೆಫ್ಫೀಲ್ಡ್ ವಿಶ್ವವಿದ್ಯಾಲಯದ ಖಾಯಂ ಉನ್ನತ ಹುದ್ದೆಗೆ ಕರೆಬಂತು. ಅಲ್ಲಿ ಕ್ರೆಬ್ಸ್ ಫಾರ್ಮಕಾಲಜಿಯ ಉಪನ್ಯಾಸಕರಾದರು. ಜತೆಗೆ ಹೊಸದಾಗಿ ರಚಿಸಲ್ಪಟ್ಟ ಜೀವರಸಾಯನ ವಿಜ್ಞಾನದ ಪ್ರಭಾರಿ ಉಪನ್ಯಾಸಕರಾದರು. ಶೆಫ್ಫೀಲ್ಡ್ ವಿವಿಯಲ್ಲಿದ್ದಾಗ ಮಾರ್ಗರೇಟ್ ಫೀಲ್ಡ್‍ಹೌಸ್‍ರವರನ್ನು ಮದುವೆಯಾದರು. ಈ ದಂಪತಿಗಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು.

ಅದು ಪ್ರಪಂಚದ ಎರಡನೇ ಮಹಾಯುದ್ದದ ಕಾಲ. ಇಡೀ ಜಗತ್ತು ಯುದ್ದದಾಹದಲ್ಲಿದ್ದಾಗ ಕ್ರೆಬ್ಸ್ ತಣ್ಣಗೆ ತನ್ನ ಶೆಫ್ಫೀಲ್ಡ್ ವಿವಿಯ ಸಂಶೋಧನಾಲಯದಲ್ಲಿ ಕುಳಿತು ಮೆಟಬಾಲಿಸಂನ ಒಳಹೊರಗನ್ನು ಅಭ್ಯಸಿಸುತ್ತಿದ್ದ. ಎರಡನೆಯ ಜಾಗತಿಕ ಮಹಾಯುದ್ದ ಸ್ಪೋಟಗೊಳ್ಳುವ ಎರಡು ವರ್ಷಗಳ ಮೊದಲೇ 1937ರಲ್ಲಿ ಟ್ರೈಕಾರ್ಬಾಕ್ಸಿಲಿಕ್ ಆಸಿಡ್ ಸೈಕಲ್‍ನ ವಿವರಗಳನ್ನು ಪರಿಕಲ್ಪನಾತ್ಮಕ ವಿಶ್ಲೇಷಣೆಯ ಮೂಸೆಯಲ್ಲಿ ಪೂರ್ಣಗೊಳಿಸಿದರು.

ಯಾವುದೇ ವಿಜ್ಞಾನಿ ತನ್ನ ಬದುಕಿನ ಮಹತ್ತರವಾದ ಶೋಧಗಳನ್ನು 40 ವರ್ಷದ ವಯಸ್ಸಿಗಿಂತ ಮೊದಲೇ ನೀಡುತ್ತಾನಂತೆ. ಕ್ರೆಬ್ಸ್ ವಿಷಯದಲ್ಲೂ ಅದೇ ನಿಜವಾಗಿತ್ತು. ಆತನ 37ನೇ ವಯಸ್ಸಿಗೆ ಕ್ರೆಬ್ಸ್ ಸೈಕಲ್ ಬೆಳಕಿಗೆ ಬಂತು. ಕ್ರೆಬ್ಸ್ ಸೈಕಲ್ ಸಂಶೋಧನೆಗೆ ಆತ ಬಳಸಿಕೊಂಡ ಅಂಗವೆಂದರೆ ಅತಿ ಹೆಚ್ಚು ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಪಾರಿವಾಳದ ಎದೆಯ ಮಾಂಸಖಂಡವನ್ನು. ಪಾರಿವಾಳದ ಯಕೃತ್ತನ್ನೂ ಇದೇ ಸಂಶೋಧನೆಗೆ ಒಳಪಡಿಸಲಾಯಿತು. ಪೆÇ್ರೀಟೋಜೋವಾದಂತಹ ಏಕಕೋಶ ಜೀವಿಗಳಿಂದಿಡಿದು ಸಸ್ತನಿಗಳ ಅತಿದೊಡ್ಡ ಜೀವಕೋಶಗಳಲ್ಲೂ ಈ ಕ್ರಿಯೆ ಅಭಾದಿತ ಎಂದು ಕ್ರೆಬ್ಸ್ ಗುರುತಿಸಿದನು.

1939ರಲ್ಲಿ ಎರಡನೆಯ ಮಹಾಯುದ್ದ ಆರಂಭವಾಯಿತು. ಯುದ್ದ ಸಂದರ್ಭದಲ್ಲಿ ಹೆಚ್ಚು ಸಮಯವನ್ನು ಸಂಶೋಧನೆಯಲ್ಲಿ ಕಳೆಯಲಾಗುತ್ತಿರಲಿಲ್ಲ. 1945ರಲ್ಲಿ ಮಹಾಯುದ್ದ ಮುಗಿಯುತ್ತಿದ್ದಂತೆ ಶೆಫ್ಫೀಲ್ಡ್ ವಿವಿಯ ಜೀವರಸಾಯನ ಶಾಸ್ತ್ರದ ಮುಖ್ಯಸ್ಥರಾದರು. 1953ರಲ್ಲಿ ಮೆಡಿಸಿನ್ ಯಾ ಫಿಶಿಯಾಲಜಿಗಾಗಿ ನೀಡುವ ನೋಬಲ್ ಪಾರಿತೋಷಕವನ್ನು ಫ್ರಿಟ್ಜ್ ಲಿಪ್‍ಮ್ಯಾನ್‍ನೊಂದಿಗೆ ಹಂಚಿಕೊಂಡ ಕ್ರೆಬ್ಸ್ ವಿಶ್ವವಿದ್ಯಾಲಯದ ಹುದ್ದೆಯಿಂದ ನಿವೃತ್ತರಾದದ್ದು 1967ರಲ್ಲಿ. ಕ್ರೆಬ್ಸ್‍ನ ಸಮಕಾಲೀನ ಗೆಳೆಯರೆಂದರೆ ದೇಹಕ್ಕೆ ಶಕ್ತಿ ನೀಡುವ ಮೂಲಗಳಲ್ಲೊಂದಾದ ಅಡಿನೋಸಿನ್ ಟ್ರೈಫಾಸ್ಪೇಟ್ (Adenosine Triphosphate, ATP) ಕಂಡುಹಿಡಿದ ಕಾರ್ಲ್ ಲೋಹ್‍ಮ್ಯಾನ್, ಫ್ಲೇವಿನ್ ಅಡಿನೈನ್ ಡೈನ್ಯೂಕ್ಲಿಯೋಟೈಡ್ ಕಂಡುಹಿಡಿದ ಗುರು ವಾರ್ಬರ್ಗ್, ಎಂಬ್ಡನ್-ಮೆಯೆರಾಫ್ ಪಾಥ್‍ವೇಯ ಮೆಯೆರಾಫ್ ಮತ್ತು ಸಾಮಾನ್ಯ ಅರಿವಳಿಕೆ ತತ್ವದ ಖ್ಯಾತಿಯ ಇಸಿಡಾರ್ ಟ್ರಾಬೆ.

ಕ್ರೆಬ್ಸ್ ತನ್ನ ಕೊನೆಯುಸಿರಿನ ತನಕ “ಅಡ್ವಾನ್ಸಸ್ ಇನ್ ಎಂಜೈಮ್ ರೆಗ್ಯುಲೇಷನ್” ಜರ್ನಲ್ಲಿಗೆ ನಿಯಮಿತವಾಗಿ ಲೇಖನಗಳನ್ನು ಬರೆದರು. ಹಳೆಯ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯ ಸಂಬಂಧಗಳನ್ನು ಇರಿಸಿಕೊಂಡಿದ್ದ ಆತ ತನ್ನ ನಂತರದ ಪೀಳಿಗೆಗೆ ಕೊಡಬೇಕಾದ್ದರ ಬಗ್ಗೆ ಇಳಿವಯಸ್ಸಿನಲ್ಲಿ ಅಗಾಧವಾಗಿ ಚಿಂತಿಸತೊಡಗಿದರು. ಆರಂಭಿಕ ಉದ್ಯೋಗದಲ್ಲಿ ಕಠೋರವಾಗಿ ವರ್ತಿಸಿ ಗೋಳು ಹೊಯ್ದುಕೊಂಡಿದ್ದ ಗುರು ವಾರ್ಬರ್ಗ್‍ಗೆ ತಮ್ಮ ಜೀವನ ಚರಿತ್ರೆಯಲ್ಲಿ ಸಲ್ಲಬೇಕಾದಷ್ಟು ನಮನಗಳನ್ನು ಸಲ್ಲಿಸಿದ್ದು ಇವರ ದೊಡ್ಡಗುಣ.

ಜೀವರಸಾಯನಶಾಸ್ತ್ರದ ಮಹತ್ತರ ಸಂಶೋಧನೆಗೆ ಕಾರಣವಾದ ಜೀವವೊಂದು ಎಂಬತ್ತೊಂದು ಕ್ರಿಸ್‍ಮಸ್‍ಗಳ ತುಂಬು ಬದುಕಿನ ನಂತರ ನವೆಂಬರ್ 22, 1981ರಂದು ಆಕ್ಸ್‍ಫರ್ಡಿನಲ್ಲಿ ಅಸ್ತಂಗತವಾಯಿತು. ಕ್ರೆಬ್ಸ್‍ನ ಹೆಸರು ಎಲ್ಲ ಜೀವವಿಜ್ಞಾನ ವಿದ್ಯಾರ್ಥಿಗಳ ಹಾಗೂ ನಿರ್ದಿಷ್ಟವಾಗಿ ವೈದ್ಯಕೀಯ, ಪಶುವಿಜ್ಞಾನ, ಕೃಷಿ ವಿಜ್ಞಾನ ವಿದ್ಯಾರ್ಥಿಗಳ ನಾಲಗೆಯ ಮೇಲೆ ನಲಿದಾಡುತ್ತಿರುತ್ತದೆ. ಕ್ರೆಬ್ಸ್ ನೆನಪು ಎಂದಿಗೂ ಮಾಸುವುದಿಲ್ಲ.

Leave a Reply

Your email address will not be published.