ಕ್ರಿಕೆಟ್ ಮತ್ತು ಕ್ರಾಂತಿ

-ಡಾ. ಎಚ್. ನರಸಿಂಹಯ್ಯ

HNಈ ಶೀರ್ಷಿಕೆ ಓದಿ ನಿಮಗೆ ಆಶ್ಚರ್ಯವಾಗಬಹುದು. ಕ್ರಿಕೆಟ್‍ಗೂ ಕ್ರಾಂತಿಗೂ ಏನು ಸಂಬಂಧ ಎಂದು ಇಮಾಂ ಸಾಹೇಬರಿಗೂ ಗೋಕುಲಾಷ್ಟಮಿಗೂ ಪ್ರಯಾಸದಿಂದ ಸಂಬಂಧ ಕಲ್ಪಿಸಿದರೂ ಕಲ್ಪಸಬಹುದು, ಆದರೆ  ಕ್ರಿಕೆಟ್‍ಗೂ ಕ್ರಾಂತಿಗೂ ಯಾವ ನಂಟು ಎಂದು ಸೋಜಿಗಪಡುವುದು ಸಹಜವೇ.  ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಸುಮಾರು ಐದಾರು ಶತಮಾನಗಳ ಹಿಂದೆ ಹುಟ್ಟಿತು. ಆಗ ಅದರ ಸ್ವರೂಪ ಈಗಿನದಕ್ಕಿಂತ ತೀರಾ ಭಿನ್ನವಾಗಿತ್ತು ಎಂದು ಹೇಳಬೇಕಾದ ಆವಶ್ಯಕತೆಯೇ ಇಲ್ಲ. ಅಗಿನ ಕ್ರಿಕೆಟ್‍ಗೆ ವಿಕೆಟ್‍ಗಳೇ ಇರಲಿಲ್ಲ. ಈ ಆಟ ಕುರಿಕಾಯುವವರ ಗಮನ ಸೆಳೆದ ಮೇಲೆ ಕೆಲವು ಮಾರ್ಪಾಟುಗಳಾದುವು. ವಿಕೆಟ್‍ಗಳೂ ಬಂದವು. ಆಟದ ಅವಧಿಯೂ ಹೆಚ್ಚಿತು ಅಂತ ಕಾಣುತ್ತದೆ. ಕುರಿಕಾಯುವವರಿಗೆ ಕಾಲ ಕಳೆಯುವುದು ತುಂಬಾ ಕಷ್ಟ. ಕುರಿಗಳು ತಮ್ಮ ಪಾಡಿಗೆ ತಾವು ಮೇಯುತ್ತಿದ್ದಾಗ ಇವುಗಳ ಉಸ್ತುವಾರಿ ನಡೆಸುವವರು ಎಷ್ಟು ಹೊತ್ತು ಅಂತ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗುತ್ತದೆ? ಅದಕ್ಕಾಗಿಯೇ ಒಂದು ಆಟದಲ್ಲಿ ಕುರಿಕಾಯುವವರು ನಿರತರಾಗಿವುದನ್ನು ನಾವು ನೋಡಬಹುದು.

ಬ್ರಿಟಿಷರ ರಾಜಾಶ್ರಯದಲ್ಲಿ  ಇಂಗ್ಲೆಂಡ್ ಬಹಳ ವರ್ಷಗಳ ಕಾಲ ಸಾಮ್ರಾಜ್ಯಶಾಹಿ ದೇಶವಾಗಿದ್ದಿತು. ಪ್ರಪಂಚಾದ್ಯಂತ ದಶದಿಕ್ಕುಗಳಲ್ಲಿಯೂ ಇಂಗ್ಲೆಂಡ್ ವಸಾಹತುಗಳನ್ನು ಹೊಂದಿ ರವಿ ಮುಳುಗದ ಸಾಮ್ರಾಜ್ಯ ಎಂಬ ಖ್ಯಾತಿಯನ್ನು ಪಡೆದಿದ್ದಿತು. ನಮ್ಮ ದೇಶವೂ ಸುಮಾರು ಎರಡು ಶತಮಾನಗಳ ಕಾಲ ಅವರ ಅಧೀನದಲ್ಲಿದ್ದಿತು. ಇಂಗ್ಲೀಷಿನವರು ತಮ್ಮ ಆಡಳಿತಕ್ಕೆ ಒಳಪಟ್ಟ ಎಲ್ಲಾ ದೇಶಗಳನ್ನೂ ಯಥೇಚ್ಚವಾಗಿ ಶೋಷಣೆ ಮಾಡಿ ಬಂದ ಅತುಲೈಶ್ವರ್ಯದಿಂದ ಆ ಚಿಕ್ಕ ದೇಶ ತುಂಬಾ ಸಂಪದ್ಯುಕ್ತವಾಯಿತು. ಸಾಮಾನ್ಯ ಜನರಿಂದ ಮೊದಲಾದ ಕ್ರಿಕೆಟ್ ಆಟಕ್ಕೆ ಸಾಕಷ್ಟು ಕಾಲ ಮತ್ತು ಹಣವಿರುವ ವರ್ಗಗಳ ಆಶ್ರಯ ಸಿಕ್ಕಿದು ಅನಿರೀಕ್ಷತವೇನಲ್ಲ. ಇವರೆಲ್ಲರೂ ಸಮಾಜದ ಪ್ರತಿಷ್ಠತವರ್ಗಕ್ಕೆ ಸೇರಿದವರು. ರಾಜಾಶ್ರಯವೂ ಸಿಕ್ಕಿತು. ವರ್ತಮಾನ ಪತ್ರಿಕೆಗಳು ಸಹಜವಾಗಿಯೇ ಈ ಆಟಕ್ಕೆ ಎಲ್ಲ ಪುಷ್ಟಿಯನ್ನು ಕೊಟ್ಟವು. ಶ್ರೀಮಂತ ದೇಶವಾದದ್ದರಿಂದ ಪ್ರೇಕ್ಷಕರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಒಟ್ಟಿನಲ್ಲಿ ಬಹುಜನರ ಪ್ರೋತ್ಸಾಹ ಸಹಕಾರ ಹೊಂದಿ ಕಾಲಕ್ರಮೇಣ ಹಲವು ರೂಪಾಂತರಗಳನ್ನು ಹೊಂದಿ ಅತ್ಯಂತ ದೀರ್ಘವಾಗಿತು.
ಇಂಗ್ಲೆಂಡ್ ತಮ್ಮ ದೇಶದಲ್ಲಿ ತಯಾರಿಸ್ಪಟ್ಟ ವಸ್ತುಗಳನ್ನು ಅಧೀನದಲ್ಲಿದ್ದ ದೇಶಗಳಿಗೆ ರಪ್ತು ಮಾಡುವ ಹಾಗೆ, ಕ್ರಿಕೆಟ್ ಆಟವನ್ನೂ ಇಂಗ್ಲಿಷ್ ಭಾಷೆಯನ್ನೂ ರಪ್ತು ಮಾಡಿದರು. ದೊರೆಗಳ ದೇಶದಿಂದ ಬಂದ ಈ ಆಟಕ್ಕೆ ಅವರು ಕೃಪಾಶ್ರಯ ಪಡೆಯಲು ಕಾತುರರಾಗಿದ್ದ, ಸಾಮಾನ್ಯ ಜನರಿಗಿಂತ ಹೆಚ್ಚಿನ ಗುಲಾಮೀ ಪ್ರವೃತಿ ಹೊಂದಿದ್ದ ವಿದ್ಯಾವಂತರು, ಅಧಿಕಾರಿಗಳು ಮತ್ತು ಶ್ರೀಮಂತರು ಎಲ್ಲಾ ವಸಾಹತುಗಳಲ್ಲಿ ಸಾಕಷ್ಟು ಪುಷ್ಟಿಕೊಟ್ಟರು. ಆದುದರಿಂದಲೇ ಈ ಆಟ ಇಂಗ್ಲೆಂಡಿನ ಕಾಲೋನಿಗಳಾಗಿದ್ದು ಈಗ ಕಾಮನ್‍ವೆಲ್ತ್ ದೇಶಗಳಾಗಿರುವ ಇಂಡಿಯಾ, ಪಾಕಿಸ್ತಾನ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದು ಕ್ರೀಡಾಪ್ರಪಂಚದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

ಬ್ಯಾಟು, ಚೆಂಡು ಅಸ್ಪೃಶ್ಯ

ಕ್ರಿಕೆಟ್ ಆಡುವ ದೇಶಗಳೆಲ್ಲಾ ಸಾಮಾನ್ಯವಾಗಿ ಹಿಂದುಳಿದ ದೇಶಗಳು, ಹಲವು ತುಂಬಾ ಬಡದೇಶಗಳೂ ಹೌದು. ಮೇಲ್ಕಂಡ ದೇಶಗಳಲ್ಲಿ ಚೆನ್ನಾಗಿ ಬೇರೂರಿಕೊಂಡು ಸಾಕಷ್ಟು ಜನಪ್ರಿಯವಾದ ಈ ಆಟ ಪ್ರಪಂಚದಲ್ಲಿ ವೈಜ್ಞಾನಿಕ, ಕೈಗಾರಿಕಾ ಕ್ಷೇತ್ರದಲ್ಲಿ ಮಹೋನ್ನತ ಸ್ಥಾನವನ್ನು ಗಳಿಸಿರುವ ಮತ್ತು ಕ್ರಾಂತಿಗೆ ಹೆಸರಾದ ಯಾವ ದೇಶಗಳಿಗೂ ಹಬ್ಬದೆ ಇರುವುದು ತುಂಬಾ ಅರ್ಥಪೂರ್ಣವಾಗಿದೆ.  ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠವಾದ, ಮುಂದುವರಿದ ಅಮೆರಿಕಾ ದೇಶದೊಳಕ್ಕೆ ಕ್ರಿಕೆಟ್ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಅಮೇರಿಕಾ ದೇಶವನ್ನೇ ಮಣ್ಣು ಮುಕ್ಕಿಸುವ, ಕಾಲದ ಬೆಲೆಯನ್ನೂ ಅರಿತ, ಮುಷ್ಕರ ಹೂಡವುದಕ್ಕೂ ಪುರಸೊತ್ತಿಲ್ಲದ, ಅಸಾಮಾನ್ಯ ದೇಶವಾದ ಜಪಾನ್‍ನಲ್ಲಿ ಕ್ರಿಕೆಟ್ ಗಂಧವೇ ಇಲ್ಲ. ಮಾನವ ಕೋಟಿಗೆ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಎಂಬ ಕ್ರಾಂತಿಕಾರಕ ಸಂದೇಶಕೊಟ್ಟ, ಇಂಗ್ಲೆಂಡಿನಲ್ಲಿ ಬಾರಿಸಿದ ಚೆಂಡು ಬೀಳುವಷ್ಟು ಸಮೀಪದಲ್ಲಿ ಕೇವಲ ಒಂದು ಕಾಲುವೆ ಆಚೆ ಇರುವ ಫ್ರಾನ್ಸ್ ದೇಶದಲ್ಲಿ ಇಲ್ಲಿಯ ತನಕ ಬ್ಯಾಟ್ ಮತ್ತು ಚೆಂಡು ಎರಡೂ ಅಸ್ಪೃಶ್ಯ, ಎರಡನೇ ಯುದ್ದದಲ್ಲಿ ಬೆಂದು ಬೂದಿಯಾಗಿ ಆ ಬೂದಿಯಿಂದಲೇ ಪುನರ್ಜನ್ಮ ಪಡೆದು, ಆತ್ಮ ವಿಶ್ವಾಸದಿಂದ ಅಗಾಧ ಪ್ರಗತಿಯನ್ನು ಸಾಧಿಸಿ, ಜಗತ್ತಿನ ಅತ್ಯುತ್ತಮ ರಾಷ್ಟ್ರಗಳಿಗೆ ಸಾಟಿಯಾಗಿ ನಿಂತಿರುವ ಈಗಿನ ಎರಡು ಜರ್ಮನಿಗಳಲ್ಲಿಯಾಗಲಿ, ಪೂರ್ವಜನ್ಮದ ಒಂದೇ ಜರ್ಮನಿಯಲ್ಲಾಗಲೀ ಎಂದೂ ಕ್ರಿಕೆಟ್ ಗಾಳಿ ಬೀಸಿಲ್ಲ. ಕ್ರಾಂತಿಗೆ ತೌರುಮನೆಯಾದ ರಷ್ಯಾ ದೇಶದಲ್ಲಿ ಕ್ರಿಕೆಟ್ ತೀರಾ ಅಪರಿಚಿತ. ಅಗಾಧ ಸಮಸ್ಯೆಗಳನ್ನು ಅನೇಕ ಆಘಾತಗಳ ಪ್ರಹಾರದಿಂದ ಬಿಡಿಸಿಕೊಂಡು ಗಜರಾಜನಂತೆ ಹೆಮ್ಮೆಯಿಂದ ನಿಂತಿರುವ, ಪ್ರಪಂಚದಲ್ಲಿಯೇ ಅತ್ಯಂತ ಜನಬಾಹುಳ್ಯದಿಂದ ಕೂಡಿರುವ ಚೈನಾ ದೃಷ್ಟಿ ಕ್ರಿಕೆಟ್ ಕಡೆ ಎಂದೂ ಹರಿದಿಲ್ಲ. ಹರಿಯುವ ಸೂಚನೆಗಳಂತೂ ಇಲ್ಲವೇ ಇಲ್ಲ. ಯೂರೋಪ್ ಖಂಡದ ಉಳಿದ ಯಾವ ರಾಷ್ಟ್ರದಲ್ಲೂ ಕ್ರಿಕೆಟ್ ಸುದ್ದಿಯೇ ಇಲ್ಲ.

ಈ ಎಲ್ಲಾ ದೇಶಗಳಲ್ಲಿಯೂ ಕಾಲಕ್ಕೆ, ದುಡಿಮೆಗೆ ತುಂಬಾ ಮಹತ್ವವುಂಟು. ಹಲವಾರು ದಿನ ಸತತವಾಗಿ ಒಂದು ಆಟವನ್ನು ನೋಡುವಷ್ಟೂ ಬಿಡುವಾಗಲಿ ವ್ಯವಧಾನವಾಗಲಿ, ಅಥವಾ ಮನೋಭಾವವಾಗಲಿ ಇಲ್ಲ. ಆದರೆ ನಮ್ಮ ದೇಶದಲ್ಲಿ ಈ ಆಟಕ್ಕೆ ಮಿತಿ ಮೀರಿದ ಪ್ರೋತ್ಸಾಹ ವೃತ್ತ ಪತ್ರಿಕೆಗಳಿಂದ, ಮತ್ತು ಪ್ರತಿಷ್ಠಿತ ವರ್ಗಗಳಿಂದ ಸಿಕ್ಕಿದೆ, ಕ್ರಿಕೆಟ್ ಆಟ ನೋಡುವುದು, ಅದರ ವಿಷಯ ಮಾತನಾಡುವುದು, ಕಾಮೆಂಟರಿ ಕೇಳುವುದು ಇವೆಲ್ಲಾ ಹಲವಾರಲ್ಲಿ ಒಂದು ಸೋಗು ಆಗಿದೆ. ಕ್ರಿಕೆಟ್ ಜನಪ್ರಿಯ ಆಗುವುದಕ್ಕೆ ಅಂಧಾನುಕರಣೆಯೂ ಒಂದು ಪ್ರಬಲವಾದ ಕಾರಣ.

ಇಂಗ್ಲೆಂಡಿನ ಪ್ರಸಿದ್ದ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ “ಹನ್ನೊಂದು ಜನ ಮೂರ್ಖರ ಆಟವನ್ನು ಹನ್ನೊಂದು ಸಾವಿರ ಮೂರ್ಖರು ನೋಡುತ್ತಾರೆ’ ಎಂದು ಕಟುವಾಗಿ ಕ್ರಿಕೆಟ್ ಆಟವನ್ನು ದಶಕಗಳ ಹಿಂದೆಯೇ ಟೀಕಿಸಿದ್ದರು. ಅವರ ಕಾಲದಲ್ಲಿ ಕ್ರಿಕೆಟ್ ಕಾಮೆಂಟರಿ ಇರಲಿಲ್ಲ. ಇದ್ದಿದ್ದರೆ ಆ ಹನ್ನೊಂದು ಸಾವಿರದ ಹನ್ನೊಂದು ಮೂರ್ಖರ ಜೊತೆಗೆ ಅಸಂಖ್ಯಾತ ಮಂದಿ ಕಾಮೆಂಟರಿ ಕೇಳುವವರು ಸೇರಿ ಹೋಗುತ್ತಿದ್ದರು.
ಈ ಲೇಖನದ ಉದ್ದೇಶ ಕ್ರಿಕೆಟ್ ಆಟವನ್ನು ದೂಷಿಸುವುದಾಗಲಿ ಅವಹೇಳನ ಮಾಡುವುದಾಗಲೀ ಅಲ್ಲ. ನಮ್ಮ ದೇಶಕ್ಕೆ ನಮ್ಮ ಪರಿಸ್ಥಿತಿಗೆ ಯಾವುದು ಹೊಂದುತ್ತದೆಯೋ ಅಂತಹುದನ್ನು ನಾವು ಒಪ್ಪಬೇಕು. ಅಪ್ರಿಯವಾದ ಸತ್ಯವನ್ನು ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು. ಕ್ರಿಕೆಟ್ ಆಟದ ಗುಣಾವಗುಣಗಳನ್ನು, ಸಾಧಕ ಬಾಧಕಗಳನ್ನು ಯಾವ ಭಾವಾವೇಶವೂ ಇಲ್ಲದೆ, ನಿರ್ವಿಕಾರ ಮನೋಭಾವದಿಂದ,ತಾರ್ಕಿಕವಾಗಿ ಪರಿಶೀಲಿಸೋಣ.

ಲಂಪಟತೆ?
ಆಟವಾಡುವವರಿಗೆ ಸಾಕಷ್ಟು ದಾರ್ಢ್ಯ, ತಾಳ್ಮೆ, ನೈಪುಣ್ಯ, ಸಾಂಘಿಕ ಪ್ರವೃತ್ತಿ, ಜಯಾಪಜಯಗಳನ್ನು ಒಂದೇ ಮನಸ್ಸಿನಿಂದ ತೆಗೆದುಕೊಳ್ಳುವ ಸ್ವಭಾವ ಮುಂತಾದ ಗುಣಗಳು ವೃದ್ಧಿಯಾಗುತ್ತವೆ. ದಿನಗಟ್ಟಲೆ ನೋಡುವವರಿಗೆ, ಗಂಟೆಗಟ್ಟಲೆ ಕಾಮೆಂಟರಿ ಕೇಳುವವರಿಗೆ ಇದರ ಪರಿಣಾಮ ಅಷ್ಟು ಶ್ರೇಯಸ್ಕರವಾದುದಲ್ಲ. ಮೊಟ್ಟಮೊದಲನೆಯ ದೋಷ ಈ ಆಟ ಅತಿ ದೀರ್ಘಾವಧಿಯದು. ಹತ್ತು ಗಂಟೆಗೆ ಮೊದಲಾಗುವ ಈ ಆಟವನ್ನು ನೋಡಲು ಬೆಳಗಿನಿಂದಲೇ ತಯಾರಿ. ಶಾಲಾಕಾಲೇಜು ವಿದ್ಯಾರ್ಥಿಗಳಂತೂ ಅಷ್ಟಿಷ್ಟೂ ತಿಂಡಿಯನ್ನು, ಕುಡಿಯಲು ನೀರನ್ನು ಹೆಗಲ ಮೇಲಿನ ಚೀಲಗಳಲ್ಲಿ ತುಂಬಿಕೊಂಡು, ಬಸ್ ಸಿಕ್ಕದೆ ಎಷ್ಟೋ ಸಲ ಬೆಳಿಗ್ಗೆ ಆರು, ಏಳು ಗಂಟೆಗೆ ನಡೆದುಕೊಂಡು ಸ್ಟೇಡಿಯಂ ಕಡೆ ಯಾವುದೋ ದಂಡಯಾತ್ರೆಗೆ ಹೋಗುವವರಂತೆ ಹೋಗಿ ಕೆಲವು ಗಂಟೆಗಳ ಮುಂಚೆಯೇ ಆಯಕಟ್ಟಿನ ಜಾಗ ಹುಡುಕಿ ಕುಳಿತುಕೊಳ್ಳುತ್ತಾರೆ. ಆಟ ಸ್ವಭಾವತಃ ಸಾಮಾನ್ಯವಾಗಿ ಎಂತಹ ಉತ್ಸಾಹಿಗೂ ಬೇಜಾರು ತರುವಂತಹದು. ಮರುಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಓಯಸಿಸ್ ಸಿಗುವ ಹಾಗೆ, ವಿಕೆಟ್ ಬಿದ್ದಾಗಲೋ, ಕ್ಯಾಚ್ ಹಿಡಿದಾಗಲೋ, ಬೌಂಡರಿ ಬಾರಿಸಿದಾಗಲೋ ಸ್ವಲ್ಪ ಜೀವ ಬರುತ್ತದೆ. ಇಂತಹ ಘಟನೆಗಳಿಗಾಗಿ ಚಾತಕಪಕ್ಷಿಗಳಂತೆ ಕಾದುಕೊಂಡಿರುವ ಪ್ರೇಕ್ಷಕರು ಸುಸ್ತಿನಿಂದ ಯಾವುದೋ ಜ್ಞಾನದಲ್ಲೊ, ಮಂಪರಿನಲ್ಲೊ ಇದ್ದಾಗ, ವಿಕೆಟ್ ಪತನವೋ ಅಥವಾ ಅಂತಹುದೇ ಚೀತೋಹಾರಿ ಘಟನೆಯೋ ನಡೆದಾಗ “ ಅಯ್ಯೋ! ಎಣ್ಣೆ ಬಂದಾಗ ಕಣ್ಣುಮಚ್ಚಿಕೊಂಡೆವಲ್ಲಾ” ಎಂದು ಕೈ ಕೈ ಹಿಸುಕಿಕೊಳ್ಳುವ ಪ್ರಸಂಗಗಳಿಗೇನೂ ಕಡಿಮೆ ಇಲ್ಲ. ಸರಿಯಾದ ಅನ್ನ ನೀರಿಲ್ಲದೆ, ಅಲ್ಲಿ ಸಿಗುವ ಕಡಲೆಕಾಯಿಗೋ, ಸೌತೆಕಾಯಿಗೋ, ಬಾಳೆಹಣ್ಣಿಗೋ ಒಂದಕ್ಕೆ ನಾಲ್ಕರಷ್ಟು ದುಡ್ಡುಕೊಟ್ಟು ತಿಂದಾಗ ಅವರ ಕ್ಷುದ್ಬಾಧೆ ಇನ್ನೂ ತೀವ್ರವಾಗುವ ಸಂಭವವೇ ಹೆಚ್ಚು.

ಆಟ ಮುಗಿದ ಮೇಲೆ ಪ್ರೇಕ್ಷಕರನ್ನು ನೋಡಬೇಕು. ಸೊರಗಿದ ಮುಖ, ಕಳೆ ಇಲ್ಲ. ಸುಸ್ತು, ಬಸ್ ಸಿಗುವುದಿಲ್ಲ. ಕಾಲನ್ನು ಎಳೆದುಕೊಂಡು ಮನೆಗೆ ತಲುಪಿ ಊಟ ಮಾಡಿ ಮಲಗಿ ಬೆಳಿಗ್ಗೆ ಎದ್ದು ಪುನಃ ಹಿಂದಿನ ದಿನದ ಕಾರ್ಯಕ್ರಮವೇ. ನಾಲ್ಕೈದು ದಿನಗಳು ಹೀಗೇಯೇ ಉರುಳಿಹೋಗುತ್ತವೆ. ಸಹಸ್ರಾರು ಜನರು ಅಮೂಲ್ಯ ವೇಳೆ ವ್ಯಯವಾಗುತ್ತದೆ.ಇದು ದೇಶದ ನಷ್ಟವೂ ಹೌದು. ಜೊತೆಗೆ ನೋಡುವವರ ಮೇಲೆ, ಕಾಮೆಂಟರಿ ಕೇಳುವವರ ಮೇಲೆ ಅಹಿತಕರವಾದ ಪರಿಣಾಮವನ್ನುಂಟು ಮಾಡುತ್ತದೆ. ಕ್ರಿಕೆಟ್ ಮ್ಯಾಚ್ ಮುಗಿದ ಮೇಲು ಅದರ ಅಮಲು ಮುಂದುವರಿಯುತ್ತದೆ.ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲವಲ್ಲ. ನೋಡಿದ್ದನ್ನು, ಕೇಳಿದ್ದನ್ನು ಮೆಲುಕು ಹಾಕುವುದು, ಎಲ್ಲಾ ಚರ್ವಿತ ಚರ್ವಣ. ಕೆಲಸಕ್ಕೆ ಬಾರದ ಅಂಕಿ ಅಂಶಗಳನ್ನು, ಅಮೂಲ್ಯ ವಿಷಯಗಳೆಂದು ಪರಿಗಣಿಸಿ ಪುಂಖಾನುಪುಂSವಾಗಿ ಚರ್ಚೆ ಮಾಡುವುದು.

ಬೆನ್ನುಬಿಡದ ಭೂತ
ಸತತವಾಗಿ ಕಾಮೆಂಟರಿ ಕೇಳುವುದು ಒಂದು ದುರಭ್ಯಾಸವಾಗಿ ಹೋಗಿದೆ. ಗಂಡು ಮಕ್ಕಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಹುಚ್ಚು ಈಗ ಹೆಣ್ಣು ಮಕ್ಕಳಿಗೂ ಹಬ್ಬುತ್ತಾ ಇದೆ. ಭಗವಂತನೇ ಕಾಪಾಡಬೇಕು ನಮ್ಮ ದೇಶವನ್ನು! ಎಷ್ಟೋ ಮಂದಿ ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕಗಳೆ ಕಾಣುವುದಿಲ್ಲ. ಅವುಗಳ ಬದಲು ಟ್ರಾನ್ಸಿಸ್ಟರ್ ಅನ್ನು ನೋಡಬಹುದು. ಟೆಸ್ಟ್ ಮ್ಯಾಚ್ ಸಮಯದಲ್ಲಿ ಎಲ್ಲೆಲ್ಲೂ ಕಾಮೆಂಟರಿಮಯ. ಶಿಕ್ಷಣಸಂಸ್ಥೆಗಳು, ಹೋಟೆಲುಗಳು, ಸಾರ್ವಜನಿಕ ಸಂಸ್ಥೆಗಳು, ಮನೆಗಳು ಎಲ್ಲಾ ಕಡೆಯಿಂದ ಒಂದೇ ಸಂದೇಶ, ಒಂದೇ ಆರ್ತನಾದ.

ನನ್ನ ವಾಸ ಹಾಸ್ಟೇಲಿನಲ್ಲಿ. ನಮಗೂ ಆಸ್ಟ್ರೇಲಿಯಾಗೂ ಟೆಸ್ಟ್ ಮ್ಯಾಚ್ ಆಗುವ ಸಮಯದಲ್ಲಿ ನನ್ನ ರೂಮಿನಿಂದ ಈಚೆಗೆ ಬಂದೆ. ಒಬ್ಬ ಹುಡುಗ ಬಲಗೈಯಲ್ಲಿ ಬಟ್ಟೆ ಒಗೆಯುತ್ತಿದ್ದ. ಹಾಗೆಯೇ ಎಡಗೈಯಲ್ಲಿ ಟ್ರಾನ್ಸಿಸ್ಟರ್ ಕಿವಿಯ ಹತ್ತಿರ ಇಟ್ಟುಕೊಂಡು ಕಾಮೆಂಟರಿ ಕೇಳುತ್ತಿದ್ದ. ಊಟದ ಮನೆಗೆ ಹೋದರೆ ಅಲ್ಲಲ್ಲಿ ತೊಡೆಯ ಮೇಲೆ ಟ್ರಾನ್ಸಿಸ್ಟರ್‌ಗಳು. ಒಂದು ದಿನ ಬೆಳಗಿನ ಜಾವ 5-30 ಗಂಟೆ ಸಮಯದಲ್ಲಿ ನಾನು ಲಾಲ್‍ಬಾಗಿನಲ್ಲಿ ತಿರುಗಾಡುತ್ತಿದ್ದಾಗ ಲಯಬದ್ದ ಕಾಲು ಸಪ್ಪಳ, ಜೊತೆಗೆ ಬೆಳಗಿನ ಪ್ರಶಾಂತ ವಾತಾವರಣವನ್ನು ಕೆಡಿಸುವ ‘ಕೊಯ್ಯ ಪಿಯ್ಯ’ ಎಂಬ ಕೀರಲು ಧ್ವನಿ ಕೇಳಿಸಿತು. ಹಿಂದೆ ನೋಡ್ತೀನಿ, ಮೂರು ಜನ ಯುವಕರು ಸಾಮೂಹಿಕವಾಗಿ ಒಂದೇ ಲೈನಿನಲ್ಲಿ ಓಡಿ ಬರ್ತಾ ಇದ್ದಾರೆ. ಮಧ್ಯದವನ ಹೆಗಲ ಮೇಲೆ ಟ್ರಾನ್ಸಿಸ್ಟರ್. ‘ಈ ಕಾಮೆಂಟರಿ ಒಳ್ಳೆ ಬೆಂಬಿಡದ ಭೂತವಾಯಿತಲ್ಲಪ್ಪ, ಎಲ್ಲಿ ಹೋದರೂ ಇದರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ’ ಅಂತ ಅಂದುಕೊಂಡೆ.

ತರಗತಿಯಲ್ಲಿ ತ್ರಾನ್ಸಿಸ್ಟರುಗಳು ಆಯಕಟ್ಟಿನ ಜಾಗದಲ್ಲಿ ಅಲ್ಲಲ್ಲಿ ಅಜ್ಞಾತವಾಸದಲ್ಲಿರುತ್ತವೆ. ಮೇಲುಧ್ವನಿ, ಮೆಲುಧ್ವನಿ, ಅರೆಧ್ವನಿ, ಕಿರುಧ್ವನಿಗಳಲ್ಲಿ ತಮ್ಮ ಕರ್ತವ್ಯವನ್ನು ಮಾಡುತ್ತಿರುತ್ತವೆ. ವಿದ್ಯಾರ್ಥಿಗಳ ಕಣ್ಣು ಮಾತ್ರ ಉಪಾಧ್ಯಾಯರ ಕಡೆ. ಆದರೆ ಮನಸ್ಸು, ಕಿವಿ ಎಲ್ಲಾ ಆ ಧ್ವನಿಯ ಕಡೆ. ‘ಸದಾಶಿವನಿಗೆ ಅದೇ ಧ್ಯಾನ’ ಅಂತ ತದೇಕಚಿತ್ತರಾಗಿ ಕಾಮೆಂಟರಿಯನ್ನು ಆಲಿಸುತ್ತಿರುತ್ತಾರೆ. ಒಂದು ಪದವನ್ನೂ ಬಿಡದೆ ಶ್ರದ್ಧೆಯಿಂದ ಕೇಳುತ್ತಿರುತ್ತಾರೆ. ‘ಕಾಮೆಂಟರಿಗಿದ್ದ ಅದೃಷ್ಟ ನಮ್ಮ ಪಾಠಕ್ಕಿಲ್ಲವಲ್ಲಾ’ ಅಂತ ಎಷ್ಟೋ ಉಪಾಧ್ಯಾಯರು ಮರುಗಿದ್ದೂ ಉಂಟು. ಉಪಾಧ್ಯಾಯರಿಗೆ ಇದರ ಸುಳಿವು ಗೊತ್ತಾಗುವುದೇ ವಿಕೆಟ್ ಬಿದ್ದಾಗಲೋ, ಕ್ಯಾಚ್ ಹಿಡಿದಾಗಲೋ, ಬಿಟ್ಟಾಗಲೋ ವಿದ್ಯಾರ್ಥಿಗಳು ಮಾಡುವ ಚೀತ್ಕಾರದಿಂದ ಅಥವಾ ಸಾಮೂಹಿಕ ನಿಟ್ಟುಸಿರಿನಿಂದ. ಕೆಲವು ತರಗತಿಗಳಲ್ಲಿ ಕಾಮೆಂಟರಿ ಸುಮಾರಾದ ಧ್ವನಿಯಲ್ಲಿಯೇ ಸಾಗುತ್ತಿರುತ್ತದೆ. ಆದರೆ ತರಗತಿಯ ಮಾಮೂಲು ಗಲಾಟೆಯಲ್ಲಿ ಕಾಮೆಂಟರಿ ಕೂಡಿಹೋಗಿ, ತರಗತಿ ಎಂದಿನಂತೆ ಸಂತೆಯಂತಿದ್ದು ಉಪಾಧ್ಯಾಯರಿಗೆ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಮೊನ್ನೆ ಆಸ್ಟ್ರೇಲಿಯಾದಲ್ಲಿ ಆದ ಟೆಸ್ಟ್ ಮ್ಯಾಚ್‍ಗಳಿಂದಾದ ಒಂದು ಪರಿಣಾಮವೆಂದರೆ ಬೆಳಗಿನ ಜಾವ ಐದು ಗಂಟೆಗೆ ಜನ್ಮದಲ್ಲಿಯೇ ಏಳದಿದ್ದರೂ ಕೂಡ ಅನಿವಾರ್ಯವಾಗಿ ಕಾಮೆಂಟರಿ ಕೇಳಲು ಏಳಬೇಕಾದ ಪ್ರಮೇಯ ಬಂದದ್ದು.

ವೃತ್ತ ಪತ್ರಿಕೆಗಳಲ್ಲಿ ಸದಾ ಈ ಆಟಕ್ಕೆ ಪ್ರಚಾರದ ಸಿಂಹಪಾಲು ಮೀಸಲು. ಎಷ್ಟೋ ಸಲ ಮೊದಲನೆಯ ಪುಟದಿಂದಲೇ ಸಚಿತ್ರ ವಿವರಣೆ. ಇಡೀ ವರ್ಷದಲ್ಲಿ ಪ್ರಪಂಚದಲ್ಲಿ ಒಂದಲ್ಲ ಒಂದು ಕಡೆ ಮ್ಯಾಚ್‍ಗಳು, ಟೆಸ್ಟ್ ಮ್ಯಾಚ್‍ಗಳು ಆಗುತ್ತಲೇ ಇರುತ್ತವೆ. ಅಂದ ಮೇಲೆ ಕ್ರಿಕೆಟ್ ‘ಜ್ಯೋತಿ’ ನಂದಾದೀಪವಾಗಿ ಉರಿಯುತ್ತಲೇ ಇರುತ್ತದೆ. ಪಟ್ಟಣಗಳಿಗೆ ಸೀಮಿತವಾದ ಈ ಕ್ರಿಕೆಟ್ ತನ್ನ ಪರಧಿಯನ್ನು ಹೆಚ್ಚಿಸಿಕೊಂಡು ಜಿಲ್ಲೆ, ತಾಲ್ಲೂಕ್ ಮಟ್ಟಕ್ಕೆ ತಲುಪಿ ದೇಶದಾದ್ಯಂತ ತನ್ನದೇ ಆದ ವಿಶಿಷ್ಟ ವಾತಾವರಣವನ್ನು ಹಬ್ಬಿಸಲು ಪ್ರಯತ್ನಿಸುತ್ತಿದೆ. ಇದರ ವ್ಯಾಮೋಹಕ್ಕೆ ಸಿಕ್ಕಿದ ಬಹುಮಂದಿ ಮತ್ತು ಬಂದವರ ಹಾಗೆ ಕಾಣುತ್ತಾರೆ. ಅನೇಕ ವಿದ್ಯಾವಂತರು, ಬುದ್ಧಿಜೀವಿಗಳು, ಧ್ಯೇಯವಾದಿಗಳಾಗಬಹುದಾದ ವಿದ್ಯಾರ್ಧಿಗಳು, ಯುವಕರು ಕ್ರಿಕೆಟ್ ಪಾಶಕ್ಕೆ ಸಿಕ್ಕೆ ಬಲಿಯಾಗಿರುವುದು ದುರುದೃಷ್ಠಕರ. ಇವರ ಮನಸ್ಸು ಶತಮಾನಗಳಿಂದ ಬಂದ ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮಾನತೆ, ಶೋಷಣೆ, ಮೂಢನಂಬಿಕೆ ಇವುಗಳ ನಿರ್ಮೂಲನದ ಕಡೆ ಸಾಮಾನ್ಯವಾಗಿ ಹೋಗದ ಹಾಗೆ ಮಾಡುತ್ತದೆ ಕ್ರಿಕೆಟ್ ತನ್ನ ಸಮ್ಮೋಹನಾಸ್ತ್ರದಿಂದ.

ಪಟ್ಟಭದ್ರ ರಹಿತ
ಕ್ರಿಕೆಟ್ ಆಡುವವರು, ನೋಡುವವರು, ಕಾಮೆಂಟರಿ ಕೇಳುವವರು ಇವರೆಲ್ಲಾ ಪ್ರಗತಿ ವಿರೋಧಿಗಳು ಎಂದು ನಾನು ಹೇಳುವುದಿಲ್ಲ. ಆದರೆ ಕ್ರಿಕೆಟ್‍ನ ವಿವಿಧ ಮುಖಗಳಿಂದ ಮನಸ್ಸಿನ ಮೇಲೆ ಅಹಿತವಾದ ಪ್ರಭಾವ ಉಂಟಾಗಿ ಪ್ರಸ್ತುತ ತೀಕ್ಷ್ಣ ಸಮಸ್ಯೆಗಳ ಕಡೆ ಗಮನ ಹೋಗದೆ ಅನಾಸಕ್ತರುಗಳಾಗುವ ಸಂಭವ ಹೆಚ್ಚು. ದುಡಿಮೆಯೇ ಸಂಪತ್ತು ಎಂದು ಭಾಷಣ ಮಾಡುತ್ತೇವೆ. ಆದರೆ ಸೋಮಾರಿತನ, ಮಿತಿ ಮೀರಿದ ರಜೆಗಳು, ಕ್ರಿಯಾತ್ಮಕ, ಸೃಷ್ಟ್ಯಾತ್ಮಕವಲ್ಲದ ಕೆಲಸಗಳಿಗೆ ವಿಪರೀತ ಪ್ರೋತ್ಸಾಯವನ್ನು ಕೊಡುತ್ತೇವೆ. ಪಟ್ಟಭದ್ರ ಹಿತಗಳು ವಿವಿಧ ಮಾರ್ಗಗಳಿಂದ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತವೆ. ಮೇಲು ನೋಟಕ್ಕೆ ಎಲ್ಲವೂ ಬಹುತೇಕ ಸೂಕ್ತವಾಗಿಯೇ ಕಾಣಿಸುತ್ತದೆ. ಆದರೆ ಅದರ ಸಂಚು, ಒಳಸಂಚು ತಿಳಿಯಬೇಕಾದರೆ ಪ್ರತಿಯೊಂದನ್ನೂ ಕೂಲಂಕುಷವಾಗಿ, ತಾರ್ಕಿಕವಾಗಿ ವಿಮರ್ಶಿಸಬೇಕು. ಪಟ್ಟಭದ್ರ ಹಿತಗಳ ಜಾಲದಲ್ಲಿ ಸಿಕ್ಕಿ, ಸುಳಿಯಲ್ಲಿ ಸುತ್ತಿ, ಸನ್ನಿವೇಶದ ಪ್ರಭಾವದಿಂದ ಅಸಹಾಯಕರಾಗಿ, ಪರಿಣಾಮಕಾರಿಯಲ್ಲದ ಜನರಾಗುವ ಸಂಭವವೇ ಹೆಚ್ಚು. ನಾಲ್ಕಾರು ಕ್ರಾಂತಿಗಳಿಗಾಗುವಷ್ಟು ಫಲವತ್ತಾಗಿದೆ ನಮ್ಮ ದೇಶ ಎಂದು ತಜ್ಞರ ಅಭಿಮತ. ಆದರೆ ಈಗಿರುವ ವಾತಾವರಣದಲ್ಲಿ ಕ್ರಾಂತಿಯಾಗುವುದು ಬರೀ ಭ್ರಾಂತಿ. ಕ್ರಾಂತಿ ಆಗಲಿ, ಆಗದೇ ಹೋಗಲಿ, ವರ್ಷಕ್ಕೊಂದು ಸಲ ನಮ್ಮ ದೇಶದಲ್ಲಿ ಸಂಕ್ರಾಂತಿಯಂತೂ ಆಗಿಯೇ ಆಗುತ್ತದೆ. ಅಷ್ಟೆ ಸಮಾಧಾನ.

Leave a Reply

Your email address will not be published.