ಕೋವನ ಕಲೆ

-  ಗೋದೂರು ಪ್ರಸನ್

ಕೋವನ ಕಲೆಯ ಕೋರಿಕೆಗೆ

ಅಂಗ ತೊಟ್ಟು ಮಣ್ಣು ಮಡಿಕೆ ಯಾಯಿತು

ಕೋರಿಕೆಯ ಜೀವ ನೀ ನಿನ್ನ ತಾಯ್ಗೆ

ಕೋರಿ ಕೋರಿ ಜವ್ವನದ ಬಣ್ಣ

ತೊಟ್ಟಿರುವೆ ನೀ ನಿನ್ನ ಮೈಗೆ!

ಈಗ ಕೋವಿದನೂ ನೀನೆ !

ಕೋಲಿಡಿದವನೂ ನೀನೆ !

 

ತಬಲತಲೆಯೊಳಗೆ ಬಡಿದಷ್ಟೂ

ಗುಂಯ್ ಗುಡುವ ಸದ್ದು

ಮಿತಿ ಮೀರಿರುವ ಆಸೆಯ ಹದ್ದು

ನೆಲೆನಿಲ್ಲದೆ ಹಾರಾಡುತ್ತಿದೆ

ಅತ್ತ ಆ ಮನದಾಗಸದಿಂದ ಇತ್ತಲ

ಈ ಮನದ ಗಡಿಯವರೆಗೆ

ಸುತ್ತಲ ದಿಕ್ಕಿಗೂ ಸುಳಿದಾಡುತ್ತಿದೆ

ರೆಕ್ಕೆ ಬಡಿವ ಸದ್ದು ಸುತ್ತಲು ಕೇಳುತ್ತಿದೆ

 

ಬೆಸಲಲಿ ತಾಯಿ ಹೆತ್ತಿದ್ದು ನಿನ್ನನೇ

ನಿನ್ನ  ಕೆಂಪು ಅಂಗಾಲುಗಳ ಮುಟ್ಟಿ ಮುತ್ತಿಕ್ಕಿ

ಏನೊಂದನ್ನು ಬೆಸಗೊಳ್ಳದೆ ಪೊರೆದದ್ದು ನಿನ್ನನೇ

ಈಗ ನಿನ್ನ ತಾಯಿ ಕೋವಳು

ನೀ ಅವಳು  ಬಯಸಿ ಪಡೆದ ಹಣ್ಣು

ಬಾಳ ಸೂರ್ಯಾಸ್ತದ ಕೊನೆಯ ಕಣ್ಣು

 

ಕೋಲಿಡಿದು ನಿಂತಿದ್ದೀಯಾ ಕೋವಿಗನಾಗಿ

ಬೆಳ್ನವಿರ(ನೆರೆತ ಕೂದಲ)ಹಳೆಯ ಮಡಿಕೆ ಕಣ್ಣ ಮುಂದಿದೆ

ಕೋಲಾಟ ಆಡುವೆಯೋ

ಅವಳೆದೆಯ ಮೊದಲ ಹಾಲಹನಿಯ

ಕುಡಿದ ಮಗುವಾಗುವೆಯೋ

 

ಅವಳ ಕೋರಿಕೆಯ ಕೋವಿದನು ನೀನು

ಸುಖದ ಮೆಲ್ಸರಿಯ ಸಣ್ಣ ಹನಿಯು ನೀನು

 

 

Leave a Reply

Your email address will not be published.