ಕೋಮುವಾದವು ಕರಾವಳಿ ಕರ್ನಾಟಕದ ಜೀವಂತ ಟೈಮ್ ಬಾಂಬ್

-ವಿಶ್ವನಾಥ್ ಮಳಲಿ

ಕರಾವಳಿಯು ಕೋಮುಗಲಭೆಗಳ ನಾಡು, ಧರ್ಮ-ಧರ್ಮಗಳ ಮದ್ಯೆ ದ್ವೇಷ ಹಾಗೂ ಹಿಂಸೆ ಎಂಬ ಎರಡು ಬೆಂಕಿಯುಂಡೆಗಳನ್ನು ತನ್ನ ಮಡಿಲಲ್ಲಿ  ಹೊತ್ತುಕೊಂಡಿರುವ ನಾಡು ಎಂದು ಪತ್ರಿಕೆಗಳ ವರದಿಗಳಿಂದ ನನಗೆ  ಮೇಲ್ನೋಟಕ್ಕೆ  ಅನ್ನಿಸಿತ್ತು.   ಇಲ್ಲಿನ ಜನರು ಧರ್ಮದ ಕಾರಣಗಳಿಗಾಗಿ ಒಡೆದು ಹೋಗಿದ್ದಾರೆ. ಧರ್ಮವು ಈ ಜನರನ್ನು ಬೇರ್ಪಡಿಸಿಬಿಟ್ಟಿದೆ. ಪರಸ್ಪರ ಪ್ರೀತಿಯಿಂದ ಹಾಗೂ ಅನ್ಯೋನ್ಯತೆಯಿಂದ ಬದುಕುವುದನ್ನು ಕಲಿಸಬೇಕಾದ ಧರ್ಮಗಳು ಇಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ಹಿಂಸೇ ಮತ್ತು ದ್ವೇಷವನ್ನು ಬಿತ್ತಿರುವುದನ್ನು ಕಂಡು ಆತಂಕವಾಗುತ್ತಿತ್ತು. ಆ ರೀತಿಯಲ್ಲಿ ಆತಂಕವಾಗಲು ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚರ್ಚೆಗಳೇ ಕಾರಣವಾಗಿದ್ದವು. ಧರ್ಮವು ಈ ಕಾಲಕ್ಕೆ ತುಂಬಾ ತಪ್ಪಾಗಿ ವಾಖ್ಯಾನವಾಗಿ ಅದೊಂದು ಸಮಸ್ಯೆಯಾಗಿ ಬೆಳೆದುಬಿಟ್ಟಿದೆ. ಅದಕ್ಕೆ ಕಾರಣವೆಂದರೆ ಅದು ಸಾಂಸ್ಥಿಕರಣಗೊಂಡಿದ್ದು. ಮನುಷ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಇರಬೇಕಾದ ಧರ್ಮ ಇಂದು ತುಂಬ ಸಂಕುಚಿತ ಭಾವ, ಸ್ವಾರ್ಥ ಹಾಗೂ ಹಿಂಸೆಯನ್ನು ಮೈತುಂಬಿಕೊಂಡು ಬದಲಾಗಿಬಿಟ್ಟಿದೆ. ಆ ರೀತಿ ತಮಗೆ ಮನಬಂದಂತೆ ಬದಲಾಯಿಸಿಬಿಟ್ಟಿದ್ದಾರೆ ಎಂಬುದು ಸೂಕ್ತ !

IMG_9061ಪತ್ರಿಕೋಧ್ಯಮ ಮತ್ತು ಸಂಶೋಧನೆ ಎಂಬ ಎರಡು ಹೊಸ ಕಣ್ಣೋಟಗಳಿಂದ ಕರಾವಳಿ ಕರ್ನಾಟಕವನ್ನು ನೋಡಲು, ಅಧ್ಯಯನ ಮಾಡಲು ಹಾಗೂ ಅರ್ಥೈಸಿಕೊಳ್ಳಲು ಹೊರಟ ನನಗೆ ಪ್ರಕೃತಿ ಸೌಂದರ್ಯದ ಮುಂದೆ ಮನುಷ್ಯ ಸೌಂದರ್ಯ ಗೌಣವಾಗಿ ಕಂಡಿತ್ತು. ಕರಾವಳಿ ಕರ್ನಾಟಕ ಉಳಿವು ಅಳಿವು ಮತ್ತು ಬೆಳವಣಿಗೆ ಇವೆಲ್ಲವೂ ಹೇಗಾದವು? ಬಹುತ್ವವು ಈ ಕರಾವಳಿ ಕರ್ನಾಟಕದ ಅಭಿವೃದ್ದಿಗೆ ಪೂರಕವಾಗಿದೆಯೋ? ಅಥವಾ ಮಾರಕವಾಗಿದೆಯೋ? ಎಂಬ ಪ್ರಶ್ನೆಯೂ ಆಗಾಗ ನನ್ನ ಮನದಲ್ಲಿ ಮೂಡುತ್ತಿತ್ತು. ಅದಕ್ಕೆ ಉತ್ತರ ಕಂಡುಕೊಳ್ಳಲು ಹಲವಾರು ವ್ಯಕ್ತಿಗಳು, ಘಟನೆಗಳು ಹಾಗೂ ಅನುಭವಗಳು ನನಗೆ ನೆರವಾದವು. ಗಿಡ-ಮರಗಳಿಂದ ಸುತ್ತುವರೆದು ಹಚ್ಚಹಸಿರಾಗಿ ಕಂಗೊಳಿಸುವ ಅಲ್ಲಿನ ನಿಸರ್ಗವನು ಕಂಡು ಆನಂದದಿಂದ ತೇಲಾಡಿದ್ದೆ. ಈ ನೆಲದಲ್ಲಿ  ಬರೀ ಪ್ರಾಕೃತಿಕ ಸೌಂದರ್ಯ ಮಾತ್ರ ಇದೆಯೋ ಅಥವಾ ಮಾನವೀಯ ಸೌಂಧರ್ಯವೂ ಅಡಗಿದೆಯೋ ಎಂದು ನನ್ನನ್ನು ನಾನು ಕೇಳಿಕೊಂಡಿದ್ದೆ.

ಪತ್ರಿಕೋಧ್ಯಮವನ್ನು ಅಧ್ಯಯನ ಮಾಡುತ್ತಿದ್ದ ನನಗೆ ಅಲ್ಲಿನ ಪತ್ರಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಸಹಜವಾದ ಕುತೂಹಲ ಖಂಡಿತ ಇತ್ತು. ಕರಾವಳಿ ಭಾಗದ ಗೆಳೆಯರಿಂದ ಕೇಳಲ್ಪಟ್ಟಿರುವಂತೆ ‘ಉದಯವಾಣಿ’ ಪತ್ರಿಕೆಯು ಇಲ್ಲಿನ ಹೆಚ್ಚು ಜನಪ್ರಿಯ ಹಾಗೂ ಹೆಚ್ಚು ಪ್ರಚಾರ ಸಂಖ್ಯೆಯುಳ್ಳ ಪತ್ರಿಕೆಯಾಗಿದೆ ಎಂದು ತಿಳಿಯಿತು. ಈ ಪತ್ರಿಕೆಯಲ್ಲಿ ಮೊದಲು ‘ಸಂಪಾದಕೀಯವೇ’ ಇರುತ್ತಿರಲಿಲ್ಲ ಎಂದು ಕೇಳ್ಪಟ್ಟಿದ್ದೆ. ಸಂಪಾದಕೀಯ ಎನ್ನುವುದು ಪತ್ರಿಕೆಯ ಜೀವನಾಡಿ, ‘ಜನಮನದ ಜೀವನಾಡಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಪತ್ರಿಕೆಯು ತನ್ನ ‘ಜೀವನಾಡಿಯಾದ ಸಂಪಾದಕೀಯವನ್ನೇ’ ಎಷ್ಟೋ ವರ್ಷಗಳ ಕಾಲ ಪ್ರಕಟಿಸಲಿಲ್ಲವಲ್ಲ ಎಂದು ಕೇಳಿ ಅಚ್ಚರಿ ಮತ್ತು ಬೇಸರ ಎರಡೂ ಒಟ್ಟೊಟ್ಟಿಗೆಯಾಗಿತ್ತು. ತದನಂತರದ ಬೆಳವಣಿಗೆಯಲ್ಲಿ ಸಂಪಾದಕೀಯ ಪತ್ರಿಕೆ ಅವಿಭಾಜ್ಯ ಅಂಗವಾಯಿತು ಆ ಮಾತು ಬೇರೆ. ಉಳಿದಂತೆ ಬೇರೆ ಪತ್ರಿಕೆಗಳೂ ಸಹ ಇಲ್ಲಿ ಸೌಹಾರ್ಧತೆಯನ್ನು ಮೂಡಿಸಲು ಹಾಗೂ ಬಹುಧರ್ಮೀಯ ಸಂಸ್ಕೃತಿ ಮದ್ಯೆ ಐಕ್ಯತೆಯನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲವೆಂದು ನನ್ನ ಗ್ರಹಿಕೆಗೆ ಸಿಗುತ್ತಿತ್ತು. ಕೆಲವೊಂದು ಪತ್ರಿಕೆಗಳು ಕೆಲವೊಂದು ಜಾತೀಯ, ಧರ್ಮೀಯರ ಕೈಯಲ್ಲಿ ಸಿಲುಕಿ ಅವುಗಳು ಉಸಿರುಗಟ್ಟಿ ನಿಂತಿರುವಂತೆ ನನಗೆ ಭಾಸವಾಗುತ್ತಿತ್ತು.  ಇತ್ತೀಚೆಗೆ ಮೊಬೈಲ್ ಮತ್ತು ಇಂಟರ್ನೆಟ್  ಬಳಕೆ ಹೆಚ್ಚಿದಂತೆ ಆನ್ ಲೈನ್ ಪತ್ರಿಕೆಗಳು ಬರಲಾರಂಭಿಸಿದವು. ಕರಾವಳಿ ಕರ್ನಾಟಕದ ಭಾಗದಲ್ಲಿ ತುಸು ಹೆಚ್ಚು ಎನಿಸುವಂತೆ ಅವು ಬೆಳೆದಿವೆ ಆದರೆ ಜನರ ಮದ್ಯೆ ಐಕ್ಯತೆ ಹಾಗೂ ಸೌಹಾರ್ಧತೆಯನ್ನು  ಬೆಳೆಸುವಲ್ಲಿ ಇಲ್ಲಿನ ಮಾಧ್ಯಮಗಳು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳು ರಕ್ತಸಿಕ್ತವಾಗಲಿವೆ.

ಹಿಂದು ಮುಸ್ಲಿಂ ಎಂಬ ಬೇಧ ಭಾವವಿಲ್ಲದೇ ನಾನು ನನ್ನ ಬಾಲ್ಯ ಹಾಗೂ ಪ್ರೌಢ ಜೀವನವನ್ನು ಕಳೆದಿದ್ದೆ. ಸ್ನೇಹಿತರ ಪಟ್ಟಿಯಲ್ಲಿ  ಎಲ್ಲರೂ  ಇರುತ್ತಿದ್ದರು. ಶಿವರಾಜ್, ದಾದಾಫೀರ, ವಿರುಪಾಕ್ಷ, ತಬರೇಜ್, ಶಂಕರ್, ವಾಸಿಂ, ನಾಗರಾಜ್, ಇಜಾಜ್,  ಶಬ್ಬೀರ್, ಮಲ್ಲಿಕಾರ್ಜುನ್, ಮಲ್ಲಿಕ್, ಅಡಿವೆಪ್ಪ,  ಶರೀಫ್,  ರಾಜಾಭಕ್ಷಿ, ರಾಜೇಸಾಭ್ ಹಾಗೂ ಇತರರು ಇದ್ದರು. ಅವರಲ್ಲಿ ದಲಿತರು, ಕೆಳವರ್ಗದವರು ಹಾಗೂ ಇತರೆ ಧರ್ಮದವರೂ ಇದ್ದರು. ಮನುಷ್ಯರನ್ನು ಧರ್ಮದ ಆಧಾರದಲ್ಲಿ ಅಥವಾ ಜಾತಿಯ ಆಧಾರದಲ್ಲಿ ಸಂಕುಚಿತರಾಗಿ ನೋಡದೇ, ಮನುಷ್ಯರನ್ನು ಮನುಷ್ಯರಾಗಿ ವಿಶಾಲದೃಷ್ಟಿಕೋನದಿಂದ ಮಾತ್ರ ನೋಡುವುದನ್ನು ಕಲಿತರೆ ಈ ಧರ್ಮದ ಕಾರಣದಿಂದ ಮಾನವೀಯತೆಗೆ ವಿರುದ್ಧವಾಗಿ ಹುಟ್ಟಿರುವ ಎಷ್ಟೋ ಸಮಸ್ಯೆಗಳು ತಂತಾನೇ ಪರಿಹಾರವಾಗುತ್ತವೆ ಎಂದುಕೊಂಡಿದ್ದೇನೆ ನಾನು. ಆದರೆ ಕರಾವಳಿ ಭಾಗ ನನ್ನ ಆಲೋಚನೆಗೆ ವಿರುದ್ಧವಾಗಿತ್ತು. ಇಲ್ಲಿ ಧರ್ಮದ ಆಧಾರದಲ್ಲಿ ಜನರನ್ನು ಗುರುತಿಸಲ್ಪಡುತ್ತಾರೆ ಹಾಗೂ ಅದೇ ಅವರು ಬಹುದೊಡ್ಡ ಸಮಸ್ಯೆಯಾಗಿದೆ ಎಂದು ನನಗೆ ಮನದಟ್ಟಾಯಿತು. ಈ ಭಾಗದ ಯಾವುದೇ ಮಠದ ಸ್ವಾಮೀಜಿಯೂ ಸಹ ಸರ್ವಧರ್ಮ ಸಮನ್ವಯತೆಗೆ ಪ್ರಯತ್ನಿಸಿ, ಧರ್ಮ- ಧರ್ಮಗಳ ಮದ್ಯೆ ಪ್ರೀತಿ ಎಂಬ ಅಮೃತದ ಬೀಜವನ್ನು ಬಿತ್ತುವ ಕಾರ್ಯವನ್ನು ಕೈಗೊಂಡಿಲ್ಲದೇ ಇರುವುದೇ ಇಷ್ಟೊಂದು ಹಿಂಸೆ ಮತ್ತು ದ್ವೇಷಕ್ಕೆ ಕಾರಣವಾಗಿದೆ ಎಂದೆನಿಸಿ ಇವರನ್ನು ಹೇಗೆ ಧಾರ್ಮಿಕರು, ಆಧ್ಯಾತ್ಮಿಕ ಸಂತರು ಎಂದು ಕರೆಯಬೇಕು ಎಂಬ ಗೊಂದಲ ನನ್ನನ್ನು ತೀವ್ರವಾಗಿ ಕಾಡಿತು. ಮಾನವೀಯತೆಯನ್ನು ಹೊರತುಪಡಿಸಿ ಧರ್ಮವಿಲ್ಲ, ಧರ್ಮದ ಜೀವಂತಿಕೆಯೇ ಮಾನವೀಯತೆ, ಮಾನವೀಯತೆ ಇಲ್ಲದಿರೆ ಅದು ಧರ್ಮವೇ ಅಲ್ಲ ಎಂದು ಶರಣರಿಂದ ಹಾಗೂ ವಚನಕಾರರಿಂದ ನಾನು ಗ್ರಹಿಸಲ್ಪಟ್ಟಿದ್ದೆ.

ಹುಡುಗ ಮತ್ತು ಹುಡುಗಿ ಹೊರಟಾಗ ಅವರನ್ನು ಅನುಮಾನದಿಂದ ನೋಡುವುದು, ಹುಡುಗ ಯಾವ ಜಾತಿ ಅಥವಾ ಧರ್ಮ, ಹುಡುಗಿ ಯಾವ ಜಾತಿ ಮತ್ತು ಧರ್ಮ ಎಂಬ ಕಣ್ಣಲ್ಲೇ ಪರೀಕ್ಷಿಸುವುದು ಇಲ್ಲಿನ ಕೆಲವು ಘಟನೆಗಳಿಂದ ತಿಳಿದುಬಂತು. ಹಾಗಾಗಿ ನಮ್ಮ ಮೇಷ್ಟ್ರುಗಳು ಈ ಭಾಗದಲ್ಲಿ ಹುಡುಗ-ಹುಡುಗಿಯರು ನೀವು ತುಂಬಾ ಜಾಗರೂಕರಾಗಿ, ಸೂಕ್ಷ್ಮತೆಯಿಂದ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಿ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದರು. ಈ ಎಚ್ಚರಿಕೆ ಅಲ್ಲಿನ ಸಾಂಧರ್ಬಿಕ ಸನ್ನಿವೇಷದ ಆಧಾರದ ಮೇಲೆ ಇತ್ತೆ ಹೊರತು ನಮ್ಮನ್ನು ನಿರ್ಭಂದನೆಗೊಳಪಡಿಸಲು ಆಗಿರಲಿಲ್ಲ. ಕೋಮುಗಲಭೆಯು ಇತ್ತೀಚೆಗೆ ಸುಮಾರು ೨೦೦೦ ಇಸವಿಯಿಂದ ಜನ್ಮತಳೆಯುತ್ತ ಬೆಳೆಯುತ್ತ ಬಂತೆಂದು ಅಲ್ಲಿ ಸಿಕ್ಕ ಮಾಹಿತಿಯಿಂದ ನನಗೆ ತಿಳಿಯಿತು ಆದರೆ ಕೋಮುವಾದವು ಯಾವ ಉದ್ದೇಶಕ್ಕೆ ಹುಟ್ಟಿತು? ಮತ್ತು ಬೆಳೆಯುತ್ತಿದೆ ಎಂದು ನಾವು ಕುಲಂಕುಷವಾಗಿ ವಿಮರ್ಷಿಸಿ ವಿಶ್ಲೇಷಿಸಿದಾಗ ಅದು ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆಂಬ ರಾಜಕಾರಣಿಗಳ ಸ್ವಾರ್ಥಕ್ಕೆ ಹುಟ್ಟಿತು ಎಂದೆನಿಸುತ್ತದೆ ನನಗೆ. ರಾಜಕೀಯ ಮನಸ್ಥಿತಿಯು  ಬಕಾಸುರತನಂತೆ ಅದು  ಧರ್ಮದ ಹೆಸರಿನಲ್ಲಿ ಮಾನವೀಯತೆಯನ್ನು ನುಂಗಿ ಹಾಕಿ ಬಿಡುತ್ತದೆ. ಈಗ ಕೋಮುವಾದವು ಕರಾವಳಿಯ ಕರ್ನಾಟಕದ ಜೀವಂತ ‘ ಟೈಮ್ ಬಾಂಬ್’. ಆಗಿ ಬೆಳೆದು ಬಿಟ್ಟಿದೆ.

ತನ್ನೊಡಲೊಳಗಿನ ಬೆಂಕಿ ತನ್ನನ್ನು ಸುಡದೇ ನೆರೆಯವರನ್ನು ಸುಟ್ಟಿತೇ? ಮೊದಲು ತನ್ನನ್ನು ಸುಟ್ಟುಕೊಂಡು ನಂತರ ಪರರನ್ನು ಸುಡುವ ಅತ್ಯಂತ ಅಪಾಯಕಾರಿಯಾದ ಗುಣ ಈ ಕೋಮುವಾದಕ್ಕಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಇವು ಕೋಮುವಾದದ ಪ್ರಯೋಗಶಾಲೆಗಳು ಎಂದು ಕುಖ್ಯಾತಿಯನ್ನು ಪಡೆದುಬಿಟ್ಟಿವೆ.  ಇತ್ತೀಚಿನ ಬೆಳವಣಿಗೆಯನ್ನು  ಗಮನಿಸಿದಾಗ ಕೋಮುವಾದ ಕರಾವಳಿ ಕರ್ನಾಟಕವನನ್ನು ದಾಟಿ ಉಳಿದ ಜಿಲ್ಲೆಗಳಿಗೂ ತುಸುವೇಗವಾಗಿ ಹಬ್ಬುತ್ತಿರುವುದು ಈ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ರಾಷ್ಟ್ರಕ್ಕೆ ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಪರರಿಗೆ ತೊಂದರೆ ಕೊಡದೇ ತನ್ನಷ್ಟಕ್ಕೆ ತಾನು ಬದುಕುವುದು ಹಾಗೂ ಉಳಿದವರನ್ನು ಸಹ ಬದುಕಲು ಬಿಡುವುದು ಈ ಸರಳ ಮತ್ತು ಸುಂದರ ತತ್ವವನ್ನು ಇಲ್ಕಿನ ಭಾಗದ ಜನ ಬಹುಬೇಗ ಅರ್ಥಮಾಡಿಕೊಳ್ಳಬೇಕಾಗಿದೆ. ಅರ್ಥ ಮಾಡಿಕೊಂಡು ಇಲ್ಲಿನ ಬಹು ಸಂಸ್ಕ ತಿಯನ್ನು ಕಾಪಾಡಿಕೊಂಡು ಪರಸ್ಪರ ಪ್ರೀತಿ ಹಾಗೂ ನಂಬಿಕೆಯಿಂದ ಬದುಕುವ ಪ್ರಯತ್ನಕ್ಕೆ ಆದಷ್ಟು ಬೇಗ ಮುಂದಾಗಬೇಕಿದೆ. ಈಗಾಗಲೇ ಕೋಮುವಾದ ಹಲವು ಜೀವಗಳ ಬಲಿಗಳನ್ನು ತೆಗೆದುಕೊಂಡು ಅವರ ಮನೆಯನ್ನು ಶೋಕ ತುಂಬಿಸಿ  ಕಾಡುತ್ತಲಿದೆ. ಪ್ರಜ್ಞಾವಂತ ಯುವಕರು ಕೋಮು ಕುತಂತ್ರಗಳಿಗೆ ಬಲಿಯಾಗದೇ ತಮ್ಮ ಸುಂದರ ಭವಿಷ್ಯವನ್ನು ಕಟ್ಟಿಕೊಂಡು ಬದುಕಬೇಕು. ಮಕ್ಕಳ ಆ ಸುಂದರ ಭವಿಷ್ಯದ ಕನಸು ಅವರ ತಂದೆ-ತಾಯಂದಿರದಾಗಿರುತ್ತದೆ. ಮುಂದಿನ ದಿನಮಾನಗಳಲ್ಲಿ ಕರಾವಳಿ ಕರ್ನಾಟಕ ಕೋಮುವಾದದ ಗಬ್ಬು ವಾಸನೆಯಿಲ್ಲದೆ, ಪ್ರೀತಿಯ ಮಲ್ಲಿಗೆಯ ಪರಿಮಳ ಮಾತ್ರ ಬೀರುವಂತಿರಬೇಕು ಎಂಬುದು ನನ್ನ ಹಾಗೂ ನನ್ನಂತೆ ಆಲೋಚಿಸುವವರ ಬಹುದೊಡ್ಡ ಆಶಯವಾಗಿದೆ.

One Response to "ಕೋಮುವಾದವು ಕರಾವಳಿ ಕರ್ನಾಟಕದ ಜೀವಂತ ಟೈಮ್ ಬಾಂಬ್"

 1. Shashwath shetty poonja  January 5, 2017 at 2:04 pm

  ನಮ್ಮನ್ನು ಕೋಮುವಾದಿ ಎಂದು ಕರೆಯುವ ಬದಲು ನಿಮ್ಮನ್ನು ಪ್ರಾಂತವಾದಿ ಎಂದು ಕರೆಯುವುದು ಲೇಸು….
  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆಯ ಬಗ್ಗೆ, ಸಂಸ್ಕೃತಿ ಬಗ್ಗೆ ,ಸ್ವಾಮೀಜಿಗಳ ಬಗ್ಗೆ ಕೇಳ ಮಟ್ಟದ ಲೇಖನ ಸರಿಯಲ್ಲ.
  (ಲೇಖನದ ಉಲ್ಲೇಖ :-“ಮಠದ ಸ್ವಾಮೀಜಿಗಳು..” ಲೇಖಕರೇ ನೀವು ಜಾತಿವಾದಿಯೇ? ಹಿಂದೂಗಳು ಕೋಮುವಾದಿಗಳು ಎಂದು ಬಣ್ಣಿಸಿದ್ದಿರಿ. ಕೇವಲ ಹಿಂದೂ ಧಾರ್ಮಿಕ ಗುರುಗಳಿಗೇ ಯಾಕೆ ಈ ಪ್ರಶ್ನೆ.)
  ಈ ನಾಡಿನಲ್ಲಿ ಎಲ್ಲಾ ಧರ್ಮ ಜಾತಿಗಳು ಏಕತೆಯಿಂದ ಬದುಕುತ್ತಿದೆ..
  “ಗುಣ ನಡತೆಯ ಮಾಪನ ಕೇವಲ ನೋಡುವ ಸರಿಯಾದ ದೃಷ್ಟಿ ಮಾತ್ರ. ……ನೆನಪಿರಲಿ ”

  . ..

  Reply

Leave a Reply

Your email address will not be published.