ಕೊಲ್ಲುವ ಕೈಗಳ ಅಸ್ತ್ರವಾಗಿರುವ ದಲಿತ ಶೂದ್ರ ಯುವಕರು

ರಂಗನಾಥ ಕಂಟನಕುಂಟೆ

ನಮ್ಮ ದೇಶದ ಹೆಸರಾಂತ ಚಿಂತಕರಾದ ಡಾ. ಆನಂದ್ ತೇಲ್ತುಂಡೆ ಅವರು, 2002ರಲ್ಲಿ ಗುಜರಾತ್ ನಲ್ಲಿ ನಡೆದ ಜನಾಂಗ ನಿರ್ಮೂಲನೆಯ ಹತ್ಯಾಕಾಂಡದಲ್ಲಿ ದಲಿತರು, ಆದಿವಾಸಿಗಳು ಮತ್ತು ಶೂದ್ರರು ಪಾಲ್ಗೊಂಡು ಏನೂ ತಪ್ಪು ಮಾಡದವರನ್ನು ಕಗ್ಗೊಲೆ ಮಾಡಿ ತಮ್ಮ ಕೈಗಳನ್ನು ನೆತ್ತರ ಕೊಳದಲ್ಲಿ ಅದ್ದಿ ಅಪರಾಧಿಗಳಾದ ಸಂಗತಿಯನ್ನು ಚರ್ಚಿಸಿದ್ದಾರೆ. ಅವರೆನ್ನುವಂತೆ, “1992ರ ಬಾಬರಿ ಮಸೀದಿಯ ಧ್ವಂಸವಾಗಲಿ, ಅನಂತರ ಕಾಣಿಸಿಕೊಂಡ ಗಲಭೆಗಳ ಸಂದರ್ಭದಲ್ಲಾಗಲಿ ಅಥವಾ ಇತ್ತೀಚಿನ ಗುಜರಾತ್ ಕೋಮುವಾದಿ ಮಾರಣಹೋಮದಲ್ಲಾಗಲಿ ಸಂಘಪರಿವಾರದ ರಾಕ್ಷಸೀ ಕಾರ್ಯಕ್ರಮವನ್ನು ಜಾರಿಗೊಳಿಸಿದವರ ಆಜ್ಞೆ ಮತ್ತು ಆದೇಶಗಳನ್ನು ಶಿರಸಾವಹಿಸಿ ಪಾಲಿಸಿದವರು ದಲಿತರು, ಆದಿವಾಸಿಗಳು ಎನ್ನುವುದು ಸ್ಪಷ್ಟವಾಗಿದೆ. ಜೊತೆಗೆ ಹಿಂದುಳಿದ ಶೂದ್ರ ಜಾತಿಗಳು ಅವರೊಂದಿಗೆ ಕೈಜೋಡಿಸಿರುವುದನ್ನು ಕಾಣಬಹುದು” ಎನ್ನುತ್ತಾರೆ. ಅವರು ಈ ಬಗೆಗೆ ಗುಜರಾತಿನಲ್ಲಿ ಹಲವು ಸಾರಿ ಸುತ್ತಾಡಿ ಕ್ಷೇತ್ರಕಾರ್ಯದ ಅನುಭವದ ಆಧಾರದ ಮೇಲೆ ಈ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯವನ್ನು ಇಂದು ನಾವೆಲ್ಲರೂ ಗಂಭೀರವಾಗಿ ಯೋಚಿಸಲೇಬೇಕಿದೆ.

ನಮ್ಮ ದೇಶದ ಮತ್ತು ರಾಜ್ಯದ ಪ್ರಚಲಿತ ವಿದ್ಯಮಾನವನ್ನು ಗಮನಿಸಿದರೆ, ಇದು ಕೇವಲ ಗುಜರಾತ್ ಗಲಭೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆಗಳು, ಹಿಂದೂಧರ್ಮ ರಕ್ಷಣೆ, ದೇಶಭಕ್ತಿ-ದೇಶರಕ್ಷಣೆ, ಗೋರಕ್ಷಣೆಯ ಹೆಸರಿನಲ್ಲಿ ನಡೆವ ಎಲ್ಲ ಹಲ್ಲೆಗಳು ಕೊಲೆಗಳು, ವಿಚಾರವಾದಿಗಳ ಬಗೆಗೆ ಅನಾಗರಿಕ ಭಾಷೆ ಬಳಸಿ ಅವರ ಮೇಲೆ ನಿರಂತರವಾಗಿ ಮಾಡುವ ದಾಳಿಗಳು, ಸಮಾಜದಲ್ಲಿರುವ ಮೌಢ್ಯಗಳನ್ನು ವಿರೋಧಿಸಿದವರು, ಕÉೀಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೆಟ್ಟ ಯೋಜನೆಗಳನ್ನು ಟೀಕಿಸಿದರಿಗೆ ಮಾನಸಿಕವಾಗಿ ಕಿರುಕುಳಕೊಡುವ, ಬೆದರಿಕೆಯೊಡ್ಡುವ ಕೆಲಸ ಮಾಡಲಾಗುತ್ತದೆ. ವಿಭಿನ್ನ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸಲಾಗುತ್ತದೆ. ಬಂಡವಾಳಿಗರ ಕಪಿಮುಷ್ಟಿಯಲ್ಲಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು, ಟಿವಿ ಕಾರ್ಯಕ್ರಮಗಳನ್ನು ಗಮನಿಸಿದರೆ ಇದು ತಿಳಿದು ಬರುತ್ತದೆ.

ಈ ಎಲ್ಲ ಕೆಲಸದಲ್ಲಿಯೂ ಹೆಚ್ಚು ಮುಂಚೂಣಿಯಲ್ಲಿ ಇರುವವರು ದಲಿತ ಮತ್ತು ಶೂದ್ರ ಯುವಕರೇ ಆಗಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಇವರೇ ಬಹುಸಂಖ್ಯಾತರು ಕೂಡ. ಆದರೆ ಇಂತಹ ಕೆಲಸಗಳಿಂದ ಸಮಾಜಕ್ಕೆ, ದೇಶಕ್ಕೆ, ಯಾವುದೇ ಕೆಳಜಾತಿ ಸಮುದಾಯಗಳಿಗೆ ಒಳ್ಳೆಯದಾಗುವುದರ ಬದಲು ಕೆಡುಕೇ ಆಗುತ್ತಿರುತ್ತದೆ. ಇದರ ಅರಿವೇ ಇಲ್ಲದೆ ಆವೇಶ ಆಕ್ರೋಶಕ್ಕೆ ಒಳಗಾಗಿ ಭಾವುಕವಾಗಿ ವರ್ತಿಸಲಾಗುತ್ತದೆ. ಅವರು ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಅಪರಾಧಿಗಳಾಗುತ್ತಾರೆ. ಆದರೆ ಅವರಿಗೆ ಅದು ಅಪರಾಧ ಎನ್ನಿಸುವುದಿಲ್ಲ; ಬದಲಿಗೆ ದೇಶಪ್ರೇಮ ಮತ್ತು ಅದರ ರಕ್ಷಣೆಯಂತಹ ಕೆಲಸ ಮಾಡುತ್ತಿದ್ದು ಪವಿತ್ರ ಮತ್ತು ತ್ಯಾಗಮಯಿ ಕೆಲಸ ಮಾಡುತ್ತಿರುತ್ತೇವೆ ಎಂದು ನಂಬುತ್ತಾರೆ. ಅಂತಹವರನ್ನು ತಿದ್ದುವುದು ಅವರಿಗೆ ತಿಳಿ ಹೇಳುವುದು ಕೂಡ ಸದ್ಯದ ಸಂದರ್ಭದಲ್ಲಿ ಕಷ್ಟದ ಕೆಲಸವೇ. ಒಮ್ಮೆ ಅಂತಹ ವಿಚಾರಗಳ ಸೆಳೆತಕ್ಕೆ ಒಳಗಾಗಿ ಅದನ್ನು ಒಪ್ಪಿಕೊಂಡರೆ ಅಂತಹವರನ್ನು ಕೂಡಲೇ ಪರಿವರ್ತಿಸುವುದು ಕಷ್ಟಸಾಧ್ಯ. ಅಂತಹ ವಿಚಾರಗಳಿಗೆ ಆಕರ್ಷಿತರಾಗದಂತೆ ತಡೆಯುವುದೇ ಮೊದಲ ಆದ್ಯತೆಯ ಕೆಲಸವಾಗಬೇಕಿದೆ. ಅವರ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ತುಂಬಿಸಲಾಗಿರುವ ದ್ವೇಷದ ವಿಚಾರಧಾರೆಗಳು ಅವರಲ್ಲಿ ಆಳವಾಗಿ ಬೆಳೆದಿವೆ. ಅಂತಹ ದ್ವೇಷದ ಭಾವನೆಗಳನ್ನು ಹೊತ್ತುಕೊಂಡು ಕ್ರೌರ್ಯವನ್ನು ಆರಾಧಿಸುವ ಮನಸ್ಸು ಬೆಳೆದುಬಿಟ್ಟಿದೆ. ಯಾವುದೇ ಅಮಾಯಕರ ಕೊಲೆಗಳಾದಾಗ ಸಂಕಟಪಡಬೇಕಾದ ಮಾನವರ ಮನಸ್ಸು, ಸಂಭ್ರಮ ಪಡುವಂತಹ ಮಟ್ಟಕ್ಕೆ ಬದಲಾಗಿಬಿಟ್ಟಿದೆ. ಕ್ರೌರ್ಯವನ್ನೇ ಧರ್ಮದ, ದೇಶಪ್ರೇಮದ ಅಭಿವೃದ್ಧಿಯ ಮುಖವಾಡವನ್ನಾಗಿಸಿಕೊಂಡು ಅಬ್ಬರಿಸಲಾಗುತ್ತದೆ. ಗಲಭೆಗಳಲ್ಲಿ ಪ್ರೇತಗಳಂತೆ ವರ್ತಿಸಲಾಗುತ್ತದೆ.

ಇದು ನಿಜಕ್ಕೂ ಆತಂಕಕಾರಿ ವಿಷಯ. ಯಾಕೆಂದರೆ ದ್ವೇಷ ಮತ್ತು ಕ್ರೌರ್ಯಗಳಿಂದ ಯಾವುದೇ ಧರ್ಮ, ದೇಶ, ಭಾಷೆಗಳು ಏಳ್ಗೆ ಹೊಂದುವುದಿಲ್ಲ. ಯಾವುದಕ್ಕೂ ಘನತೆ ಬರುವುದಿಲ್ಲ. ಮತ್ತು ಯಾವ ಜನರೂ ನೆಮ್ಮದಿಯಾಗಿ ಬಾಳಲು ಸಾಧ್ಯವಿಲ್ಲ. ಅಂತಹ ಕೆಲಸದಲ್ಲಿ ತೊಡಗುವ ಯುವಕರು ಮತ್ತು ಅಂತಹ ಯುವಕರನ್ನು ಹೊಂದಿರುವ ಕುಟುಂಬ, ಊರು-ಕೇರಿ, ನಾಡು, ರಾಜ್ಯ, ದೇಶ ಯಾವುದೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಸದಾ ಒಂದಿಲ್ಲೊಂದು ಸಂಘರ್ಷದಲ್ಲಿ ತೊಡಗಿದ್ದಾಗ ಯಾರು ತಾನೆ ನೆಮ್ಮದಿಯಾಗಿರಲು ಸಾಧ್ಯ? ದ್ವೇಷವನ್ನೇ ಧ್ಯಾನಿಸುವವರಿಗೆ, ವಿಕೃತ ಮನಸ್ಸುಗಳಿಗೆ ಮಾನವೀಯ ಮೌಲ್ಯಗಳು ಕಣ್ಣಿಗೆ ಬೀಳುವವೆ? ಪ್ರೀತಿಯಿರದ ಕಡೆ ಶಾಂತಿ ನೆಮ್ಮದಿಗಳು ನೆಲೆಸಲು ಹೇಗೆ ಸಾಧ್ಯ? ಸಮಾಜವು ಇಡಿಯಾಗಿ ಅಪರಾದೀಕರಣಗೊಳ್ಳುತ್ತಿರುತ್ತದೆ ಅಷ್ಟೆ. ಹಾಗಾಗಿಯೇ ಇಂದು ಎಲ್ಲೆಡೆ ದೇಶದಲ್ಲಿ ಅಸಹಿಷ್ಣತೆಯ ವಾತಾವರಣ ರೂಪುಗೊಂಡಿರುವುದು. ಜಗಳ ದೊಂಬಿಗಳಲ್ಲಿ ಮುಂಚೂಣಿಯಲ್ಲಿದ್ದು ಪದಾತಿದಳವಾಗಿ ಕಾದಾಡುವುದು ಇಂತಹ ದಲಿತ ಶೂದ್ರ ಯುವಕರೇ ಹೊರತು ಬೇರಾವ ಮೇಲ್ಜಾತಿ ಮೇಲ್ವರ್ಗಗಳ ಯುವಕರು ಇರುವುದಿಲ್ಲ. ಇದ್ದರೂ ಕೂಡ ಅತ್ಯಂತ ಕನಿಷ್ಟವಾಗಿರುತ್ತದೆ. ಅಂದರೆ ದಲಿತ ಶೂದ್ರ ಯುವಕರು ತಮ್ಮದಲ್ಲದ, ತಮ್ಮ ವಿರೋಧಿಗಳ ಶತ್ರುಗಳ ಚಿಂತನೆಗಳಿಂದ ಪ್ರೇರಿತಗೊಂಡು ನಡೆಸುವ ಹಿಂಸಾಕಾಂಡಗಳಲ್ಲಿ ಇವರೇ ಅಪರಾಧಿಗಳಾಗಿ ಎದ್ದು ಕಾಣುತ್ತಾರೆ. ಇದಕ್ಕೆ ಯಾರನ್ನು ದೂರುವುದು?

ದ್ವೇಷದ ಕೆನ್ನಾಲಿಗೆ ಎಲ್ಲೆಡೆ ಚಾಚುವ ಹೊತ್ತಿನಲ್ಲಿ ಸಹಜವಾಗಿಯೇ ಈ ಯುವಕರು ಅದಕ್ಕೆ ಬಲಿಯಾಗಿ ಬೇರೆಯವರನ್ನು ಬಲಿತೆಗೆದುಕೊಳ್ಳುವ ಮಾತನ್ನೇ ಹೆಚ್ಚು ಆಡುತ್ತಾರೆ. ಅವಿಚಾರಿಗಳಾಗಿ ಒಂದಿಷ್ಟು ಹುಸಿ ದೇಶಪ್ರೇಮ, ಧರ್ಮರಕ್ಷಣೆಗಳ ಬಗೆಗೆ ಭಾವನಾತ್ಮಕ ಸಂಗತಿಗಳನ್ನು ಮೈದುಂಬಿಕೊಂಡು ದೊಂಬಿ ಹಿಂಸೆಗಳಲ್ಲಿ ತೊಡಗುವುದು ದೊಡ್ಡ ಸಾಧನೆಯೇ? ಇದನ್ನು ದೇಶಪ್ರೇಮ ಎನ್ನಲು ಸಾಧ್ಯವೆ? ಅವರು ನಂಬಿರುವಂತೆ ಅವರ ಕೆಲಸಗಳಿಂದ ದೇಶಕ್ಕೆ ಒಳ್ಳೆಯದಂತೂ ಆಗುವುದಿಲ್ಲ. ಬದಲಿಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರೇ ಬರುತ್ತದೆ. ಹಾಗಾಗಿ ದ್ವೇಷದ ಭಾವನೆಗಳನ್ನು ಬೆಳೆಸಿಕೊಳ್ಳುತ್ತಿರುವ ದಲಿತ ಮತ್ತು ಶೂದ್ರ ಯುವಕರು ಸಹನೆ, ಸಾಮರಸ್ಯ ಮತ್ತು ಬಹುತ್ವ ಸಂಸ್ಕøತಿಗಳ, ಕೂಡಿ ಬಾಳುವ ಜೀವನ ಕ್ರಮದÀ ವಿರೋಧಿಗಳಾಗಿ ಬದಲಾಗುತ್ತಿರುವುದು ಮತ್ತು ಅಮಾಯಕರ ಮೇಲೆ ದಾಳಿ ಮಾಡಲು ಮುಂದಾಗುತ್ತಿರುವುದು ಸಾಮಾಜಿಕ ಒಳಿತಿಗೆ ಮಾರಕವಾದುದು. ಇಂತಹ ವಿದ್ಯಮಾನದ ವಿಪರೀತದ ಬೆಳವಣಿಗೆಯಲ್ಲಿ ಕಾಲೇಜುಗಳಲ್ಲಿ ಅನೇಕ ವಿದ್ಯಾರ್ಥಿಗಳು ಬದಲಾಗಿರುವುದು; ಮತ್ತು ಅವರು ಈ ಬಗೆಗೆ ವಾದಿಸುವುದು; ಅವರಲ್ಲಿ ಕಾಣಿಸಿಕೊಳ್ಳುವ ವ್ಯಗ್ರತೆಯನ್ನು ಕಂಡವರಿಗೆ ಇದು ತಿಳಿದ ಸಂಗತಿಯಾಗಿದೆ. ಇಂತಹವರ ಜೊತೆಗೆ ಚರ್ಚೆಯೇ ಸಾಧ್ಯವಾಗದಷ್ಟರ ಮಟ್ಟಿಗೆ ಅವರು ಬದಲಾಗಿಬಿಟ್ಟಿರುತ್ತಾರೆ.

ಇದು ದಲಿತ ಶೂದ್ರ ಯುವಕರು ತಮ್ಮ ವಿರುದ್ಧ ತಾವೆ ಯುದ್ದ ಸಾರಿಕೊಳ್ಳುವ ಮತ್ತು ವೈಚಾರಿಕವಾಗಿ ಸಾಂಸ್ಕøತಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಕ್ರಮ. ಈ ಬಗೆಗೆ ಎಚ್ಚರವಹಿಸದಿದ್ದರೆ ವಂಚಕ ಜನವರ್ಗಗಳ ಹುನ್ನಾರಕ್ಕೆ ಬಲಿಯಾಗಬೇಕಾಗುತ್ತದೆ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ಟಿಪ್ಪು ಜಯಂತಿಯ ವಿವಾದ ಎದ್ದಿದೆ. ಟಿಪ್ಪು ಜಯಂತಿ ವಿರೋಧಿ ವೇದಿಕೆಯನ್ನು ಹುಟ್ಟಿಹಾಕಿ, ಇದನ್ನು ವಿರೋಧಿಸುವ ಹೊಣೆಗಾರಿಕೆಯನ್ನು ದಲಿತ ಮತ್ತು ಶೂದ್ರ ನಾಯಕರಿಗೆ ಬಿಜೆಪಿ ವಹಿಸಿಕೊಟ್ಟಿದೆ. ಟಿಪ್ಪು ಜಯಂತಿ ವಿರೋಧಿ ವೇದಿಕೆಯ ಮುಂಚೂಣಿಯಲ್ಲಿರುವವರೆಲ್ಲರೂ ಇವರೆ. ಇದು ಅನುದ್ದೇಶಿತವಲ್ಲ. ವ್ಯವಸ್ಥಿತವಾಗಿಯೇ ಇದನ್ನು ನಡೆಸಲಾಗುತ್ತದೆ. ಟಿಪ್ಪುವಿನ ಅಂದಿನ ರಾಜನೀತಿ ಏನೇ ಇದ್ದರೂ ಆತನ ಅನೇಕ ಸುಧಾರಣೆಯ ಕ್ರಮಗಳು ದಲಿತರ ಮತ್ತು ಶೂದ್ರ ಬೇಸಾಯಗಾರರ, ಹಾಗೂ ನಾಡಿನ ಏಳ್ಗೆಗೆ ನೆರವು ನೀಡಿವೆ. ಆದರೆ ಈ ಸತ್ಯವನ್ನು ಮರೆಮಾಚಿ ಆತ ಮುಸ್ಲಿಂ ಎಂಬ ಕಾರಣಕ್ಕಾಗಿಯೇ ವಿರೋಧ ವ್ಯಕ್ತಪಡಿಸುವುದು. ಟಿಪ್ಪುವನ್ನು ವಿರೋಧ ಮಾಡುವ ನೆಪದಲ್ಲಿ ಇಂದು ಬದುಕುತ್ತಿರುವ ಅಮಾಯಕ ಮುಸ್ಲಿಂ ಸಮುದಾಯದ ಜನರನ್ನು ಗುರಿಮಾಡಿ ದಾಳಿಮಾಡುವುದು ಅನ್ಯಾಯ. ಟಿಪ್ಪು ವಿರೋಧದ ಮುಂಚೂಣಿಯಲ್ಲಿರುವ ಬಿಜೆಪಿಯಲ್ಲಿರುವ ದಲಿತ ಶೂದ್ರ ನಾಯಕರಿಗೆ ಮತ್ತು ಜನರಿಗೆ ಇದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇಲ್ಲದಿರುವುದು ದೊಡ್ಡ ದುರಂತ.

ನಮ್ಮ ದೇಶದ ಸನಾತನವಾದಿ ಬ್ರಾಹ್ಮಣಶಾಹಿ, ಹಲವು ಜಾತಿಗಳ ಒಳಗಡೆ ಬೆಳೆದಿರುವ ನವಬ್ರಾಹ್ಮಣಶಾಹಿ ಗುಂಪುಗಳು ಹಾಗೂ ಬಂಡವಾಳಶಾಹಿ ವರ್ಗಗಳು ಈ ದುರಂತವನ್ನು ಸೃಷ್ಟಿಸಿವೆ. ಧರ್ಮ, ದೇಶ ಮತ್ತು ಸಂಸ್ಕøತಿಗಳ ಬಗೆಗೆ ಸುಳ್ಳು ವಿಚಾರಗಳನ್ನು ಈ ವರ್ಗ ಪೋಣಿಸಿ ಕಟ್ಟಿರುವ “ಹಿಂದೂ ಸಾಂಸ್ಕøತಿಕ ರಾಷ್ಟ್ರೀಯತೆ”ಯನ್ನು ಒಂದು ಹೆಣಿಗೆಯ ದಾರವನ್ನಾಗಿ ಬಳಸಿಕೊಂಡು ನಮ್ಮ ದೇಶದ ಸಾಮಾನ್ಯ ಜನರಲ್ಲಿ ತಪ್ಪು ವಿಚಾರಗಳನ್ನು ಬೆಳೆಸಲಾಗುತ್ತದೆ. ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರಗೊಳ್ಳುವ ಸುಳ್ಳುಗಳನ್ನೇ ನೋಡಿ ಪ್ರಭಾವಿತವಾಗುವ ಜನರು ಮತ್ತು ಯುವಕರು ಅದನ್ನು ನಿಜವೆಂದೇ ನಂಬಿದ್ದಾರೆ. ಈ ದೇಶದ ಮೇಲುಜಾತಿ ಮತ್ತು ವರ್ಗಗಳು ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದೇ ಕಟ್ಟಿಕೊಂಡಿರುವ ಸಿದ್ದಾಂತವೇ ಹಿಂದೂತ್ವವಾದಿ ಸಾಂಸ್ಕøತಿಕ ರಾಷ್ಟ್ರೀಯತೆ. ಇದು ಈ ದೇಶದ ದಲಿತರಿಗೆ ಶೂದ್ರರಿಗೆ ಉರುಳಿನ ರೂಪದಲ್ಲಿರುವ ತತ್ವಚಿಂತನೆ.
ಇಂತಹ ದುರುದ್ದೇಶಪೂರಿತವಾದ ಸಿದ್ದಾಂತದತ್ತ ದಲಿತ ಶೂದ್ರ ಯುವಕರನ್ನೇ ಆಕರ್ಷಿಸಿ, ಅವರನ್ನೇ ಬಳಸಿಕೊಂಡು ತಳಸಮುದಾಯಗಳಲ್ಲಿ ಹುಟ್ಟಿರುವ ಎಚ್ಚರ, ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಸ್ವಾತಂತ್ರ್ಯಾನಂತರದಲ್ಲಿ ಕೆಳಜಾತಿಗಳು ಪಡೆದುಕೊಂಡಿದ್ದ ಸಾಮಾಜಿಕ ಸವಲತ್ತುಗಳನ್ನು ಅವಕಾಶಗಳನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ. ಈ ಬಲಪಂಥೀಯ ಹಿಂದೂತ್ವವಾದಿ ರಾಷ್ಟ್ರೀಯತೆಯ ಚಿಂತನೆ ಎಲ್ಲ ದಲಿತರಿಗೆ ಶೂದ್ರರಿಗೆ ಮಹಿಳೆಯರಿಗೆ ವರದಾನವಾಗಿರುವ ಮೀಸಲಾತಿಯನ್ನು ವಿರೋಧಿಸುತ್ತದೆ. ಈ ವ್ಯವಸ್ಥೆಯ ಅನುಕೂಲದಿಂದ ಮೇಲೆ ಬರುತ್ತಿರುವ ಜನರನ್ನು ನೋಡಿ ಸಹಿಸಲಾಗದವರು ಅದನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ.

ಹಾಗೆಯೇ ದಲಿತರ ಶೂದ್ರರ ಆಹಾರದ ಹಕ್ಕನ್ನು ಸಂಸ್ಕøತಿಯನ್ನು ವಿರೋಧಿಸುತ್ತದೆ ಮತ್ತು ಅವಮಾನಿಸುತ್ತದೆ. ಈಚೆಗೆ ಮುಖ್ಯಮಂತ್ರಿಗಳು ಮೀನು ತಿಂದು ದೇವಾಲಯ ಹೊಕ್ಕರೆಂಬ ಕಾರಣಕ್ಕೆ ನಡೆಸಿದ ವಾಗ್ದಾಳಿಗಳು ಮಾಧ್ಯಮಗಳು ನಡೆಸಿದ ಅಪಪ್ರಚಾರ, ಕುತರ್ಕಗಳು ಆಹಾರ ಸಂಸ್ಕøತಿಯನ್ನು ಹಕ್ಕನ್ನು ಅವಮಾನಿಸಿದವು. ಒಂದು ರಾಜ್ಯದ ಮುಖ್ಯಮಂತ್ರಿಗಳನ್ನೇ ಈ ರೀತಿಯಾಗಿ ಅವಮಾನಿಸಲು ಹೇಸದವರು ಇನ್ನು ಜನಸಾಮಾನ್ಯರನ್ನು ಹೇಗೆ ನಡೆಸಿಕೊಂಡಾರು? ಇದು ಹೀಗೆ ಮುಂದುವರೆದು ದಲಿತರ ಮತ್ತು ಶೂದ್ರರ ಸ್ವಾಭಿಮಾನವನ್ನು ವಿರೋಧಿಸಲಾಗುತ್ತಿದೆ. ದಲಿತರು ಉದ್ದನೆಯ ಮೀಸೆ ಬಿಟ್ಟರು, ತಮ್ಮ ಎದುರೇ ಸೈಕಲ್ ತುಳಿದರು, ಹೊಸ ಬಟ್ಟೆ ತೊಟ್ಟರು ಎಂಬ ಕಾರಣಕ್ಕೆ ದಾಳಿ ಮಾಡಲಾಗುತ್ತಿದೆ. ಮಹಿಳಾ ಮುಕ್ತವಾಗಿ ಯೋಚಿಸುವುದು ಮತ್ತು ಬದುಕುವುದನ್ನು ಈ ಚಿಂತನೆ ಒಪ್ಪುವುದಿಲ್ಲ. ಈಚೆಗಂತೂ ದಲಿತ ಮತ್ತು ಶೂದ್ರರಲ್ಲಿ ಮಡಿ ಮೈಲಿಗೆಗಳ ಬಗೆಗೆ ಕೀಳರಿಮೆ ಬೆಳೆಸಿ ಅದನ್ನು ಪಾಲಿಸಲು ಶೂದ್ರರಿಗೆ ಸಾಧ್ಯವಿಲ್ಲ ಎಂಬ ಭಾವನೆ ಮೂಡಿಸಿ ಅವರ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಪುರೋಹಿತಶಾಹಿ ಹುನ್ನಾರ ನಡೆದಿದೆ. ಅಲ್ಲದೆ ದಲಿತರು ಶೂದ್ರರು ತಮ್ಮೊಳಗಡೆಯೇ ತಮ್ಮ ಬಗೆಗೆ ಕೀಳರಿಮೆ ಅಜ್ಞಾನ ಬೆಳೆಸಿಕೊಂಡು ತಮ್ಮ ದೇವಾಲಯಗಳನ್ನು ಪುರೋಹಿತಶಾಹಿ ಒಪ್ಪಿಸಲಾಗುತ್ತಿದೆ. ಇಲ್ಲಿ ಒಪ್ಪಿಸುವ ಮತ್ತು ಕಸಿಯುವ ಕೆಲಸ ನಡೆದಿದೆ.

ಈ ದೇಶದ ಎಲ್ಲರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಸಂವಿಧಾನವನ್ನೇ ಹಿಂದೂತ್ವವಾದಿ ಚಿಂತನೆ ಪಲ್ಲಟಿಸಲು ಬಯಸುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಹಿಂದೂ ಧರ್ಮ ಹೆಸರಿನಲ್ಲಿ ನಡೆವ ಕೃತ್ಯಗಳು ನೈಜ ಹಿಂದೂಧರ್ಮದ ಮತ್ತು ಬಹುಸಂಸ್ಕøತಿಯ ಬಹುಭಾಷೆಗಳ ವಿರೋಧಿಯಾದುದು. ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತ ಬ್ರಾಹ್ಮಣಶಾಹಿ ಪುರೋಹಿತಶಾಹಿ ಹೆಜಮನಿ ಮರುಸ್ಥಾಪನೆ ಮಾಡುವ ಉದ್ದೇಶವನ್ನು ಹೊಂದಿದೆ. ಸ್ವದೇಶಿ ಸ್ವದೇಶಿ ಎಂದು ಹೇಳುತ್ತಲೇ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಸೇವೆ ಮತ್ತು ದೇಶದ ಬಂಡವಾಳಶಾಹಿ ಕಂಪನಿಗಳ ಪೋಷಣೆ ಮಾಡುವ ಸಿದ್ದಾಂತವಿದು. ಇಲ್ಲಿ ಜನಸಾಮಾನ್ಯರು ಮತ್ತು ಮಧ್ಯಮ ವರ್ಗವನ್ನು ಯಾಮಾರಿಸುತ್ತಲೇ ದೇಶವನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿರುವ ವಂಚನೆಯ ಸಿದ್ದಾಂತವಿದು.

ಇದನ್ನು ಅರಿಯದ ದಲಿತ ಶೂದ್ರ ಯುವಕರು ಕುರುಡಾಗಿ ಬೆಂಬಲಿಸುತ್ತ ವಿಷಕಾರಿಯಾದ ಸಿದ್ದಾಂತದ ಬೆಳವಣಿಗೆಗೆ ಆ ಮೂಲಕ ಪ್ರಜಾಪ್ರಭುತ್ವದ ಬದಲಿಗೆ ಸರ್ವಾಧಿಕಾರಿ ವ್ಯವಸ್ಥೆ ಬೆಳೆಯಲು ಕಾರಣರಾಗುತ್ತಿದ್ದಾರೆ.
‘ನೀರಿಗೆ ಪಾಚಿಯೇ ಕಳಂಕ’ವಾಗುವಂತೆ, ‘ಮರಕ್ಕೆ ಕಾವು ಕಂಟಕ’ವಾದಂತೆ ಇಂದು ದಲಿತ ಶೂದ್ರ ಸಮುದಾಯಗಳಿಗೆ ಸೇರಿದ ಒಂದು ದೊಡ್ಡಸಂಖ್ಯೆಯ ದಲಿತ ಮತ್ತು ಶೂದ್ರ ಯುವಕರೇ ಆ ಸಮುದಾಯಗಳಿಗೆ, ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮೇಲೆ ಹೇಳಿದಂತೆ ಅವರಿಗೆ ತಪ್ಪು ಮಾರ್ಗದರ್ಶನ ಮಾಡಿ ದಿಕ್ಕು ತಪ್ಪಿಸಲಾಗುತ್ತಿದೆ. ಇಲ್ಲವೇ ಅವರಿಗೆ ಇಂದು ದೊರೆಯುತ್ತಿರುವ ಜನಪ್ರಿಯ ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸರವೇ ಅವರನ್ನು ದಿಕ್ಕು ತಪ್ಪಿಸಿದೆ. ಅದರಲ್ಲಿಯೂ ಹೊಸದಾಗಿ ಅಕ್ಷರ ಪಡೆದ ದಲಿತ ಮತ್ತು ಶೂದ್ರ ಸಮುದಾಯಗಳ ಹೊಸ ತಲೆಮಾರಿನ ಯುವಕರು ಹೆಚ್ಚು ಪ್ರಭಾವಿತರಾಗಿದ್ದಾರೆ. ತಮ್ಮ ಸಾಮಾಜಿಕ ಮೂಲನೆಲೆ ಮತ್ತು ನಮ್ಮ ದೇಶದ ಸಾಮಾಜಿಕ ಅಸಮಾನತೆಯ ಬಗೆಗೆ ಚಿಂತಿಸದೆ ದಾರಿತಪ್ಪಿಸುವ ಆಕ್ರಮಣಕಾರಿಯಾದ ಭಾವುಕ ಮತೀಯವಾದಿ ಚಿಂತನೆಗಳನ್ನು ನಂಬಿ ಅದನ್ನೇ ಸರಿ ಎಂದು ವಾದಿಸುತ್ತ ಕೊಲ್ಲುವ ಕೈಗಳ ಆಯುಧವಾಗಿ ಬಳಕೆಯಾಗುತ್ತಿದ್ದಾರೆ. ಏಣಿಯಾಕಾರದ ಅಸಮಾನತೆಯ ಸಮಾಜವನ್ನು ಮರುಸ್ಥಾಪಿಸುವ ಕೆಲಸಕ್ಕೆ ಸುಲಭವಾಗಿ ಸಿಕ್ಕ ಬಲಿಪಶುಗಳಂತೆ ಆಗಿದ್ದಾರೆ.

ಈ ಶತಮಾನದಲ್ಲಿ ಮೇಲ್ವರ್ಗ ಸಾರಿರುವ ಪ್ರತಿಕ್ರಾಂತಿಯಲ್ಲಿ ದಾಳಗಳಾಗಿ ಬಳಕೆಯಾಗುತ್ತಿದ್ದಾರೆ. ದೇಶದಲ್ಲಿ ಪ್ರತಿಕ್ರಾಂತಿ ನಡೆಸುತ್ತಿರುವ ಸಂಘಪರಿವಾರದ ಕೇಂದ್ರ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಾದ್ಯಂತ ಹಬ್ಬಿಕೊಂಡಿದೆ. ಎಡಪಂಥೀಯ ಕಮ್ಯುನಿಷ್ಟರ ಆಡಳಿತವಿದ್ದ ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕೂಡ ಸಾವಿರಾರು ಆರ್ ಎಸ್ ಎಸ್ ಶಾಖೆಗಳಿವೆ. ಅಂದರೆ ಎಲ್ಲೆಡೆ ಹಬ್ಬಿರುವುದು ಇಲ್ಲಿ ತಿಳಿಯುತ್ತದೆ. ಈಚೆಗೆ ಆರ್‍ಎಸ್‍ಎಸ್‍ನ ದೆಹಲಿ ಶಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 60 ಸಾವಿರ ಶಾಖೆಗಳಿವೆ. 15 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. 3 ಸಾವಿರಕ್ಕೂ ಅಧಿಕ ಪ್ರಚಾರಕರು ಇದ್ದಾರೆ. ಇವರೆಲ್ಲರೂ ಮೇಲ್ಜಾತಿಯವರೇನಲ್ಲ. ಈ ಸದಸ್ಯರಲ್ಲಿ ಲಕ್ಷಾಂತರ ದಲಿತ ಮತ್ತು ಹಿಂದುಳಿದ ವರ್ಗಗಳಿಂದ ಹೋಗಿರುವ ಸದಸ್ಯರು ಇದ್ದಾರೆ. ಇನ್ನೂ ಈ ಸಂಘಪರಿವಾರ ಇತರ ಸಂಘಟನೆಗಳಾದ ಎಬಿವಿಪಿ, ವಿಎಚ್‍ಪಿ, ಬಜರಂಗದಳ, ಹಿಂದೂಜಾಗರಣ ವೇದಿಕೆ ಮುಂತಾದ ಸಂಘಟನೆಗಳಿವೆ. ಇವುಗಳಲ್ಲಿಯೂ ಲಕ್ಷಾಂತರ ಸದಸ್ಯರು ದಲಿತ ಮತ್ತು ಶೂದ್ರ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಯುವಕರಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದಲಿತ ಶೂದ್ರ ಯುವಕರ ಸೇರ್ಪಡೆ ಹೆಚ್ಚಾಗಿದೆ. ಇದು ಮತ್ತೂ ಮುಂದುವರಿಯುತ್ತಿದೆ.

ಹೀಗೆ ನಿರಂತರವಾಗಿ ಸೇರ್ಪಡೆಗೊಳ್ಳುವ ಯುವಕರೆ ಸಂಘಪರಿವಾರದ ಕಾಲಾಳುಗಳು. ಇವರೇ ಬೀದಿ ಜಗಳದಲ್ಲಿ ಸಂಘರ್ಷಕ್ಕೆ ತೊಡಗುವವರು. ಇವರ ವಿರುದ್ದವೇ ನಡೆಯುತ್ತಿರುವ ಪ್ರತಿಕ್ರಾಂತಿಯಲ್ಲಿ ಬಲಿಯಾಗುತ್ತಿರುವ ಹವಿಸ್ಸುಗಳು. ಸುಳ್ಳು ಪ್ರಚಾರಗಳಿಗೆ ಮೋಸಕ್ಕೆ ಬಲಿಯಾಗಿ ಕನಿಷ್ಟ ವಿವೇಕವನ್ನು ಕಳೆದುಕೊಂಡು ಕಾನೂನಿನ ಕಣ್ಣಿನಲ್ಲಿ ಅಪರಾಧಿಗಳಾಗಿ ಬದಲಾಗುತ್ತಿರುವವರು ಇವರೇ ಆಗಿದ್ದಾರೆ.

ಈ ವಾಸ್ತವವನ್ನು ಎಲ್ಲ ಶೂದ್ರ ಮತ್ತು ದಲಿತ ಯುವಕರು ಅರಿತುಕೊಳ್ಳದೇ ಇರುವುದು ಇಲ್ಲಿನ ಸಮಸ್ಯೆ. ಇದನ್ನು ಅರಿಯಬೇಕಿರುವುದೇ ಅವರ ಮುಖ್ಯ ಕೆಲಸ. ಮತ್ತು ಅವರಿಗೆ ಅರ್ಥಮಾಡಿಸುವುದು ಪ್ರಜ್ಞಾವಂತ ಜನರ ಕೆಲಸ. ಇಂತಹ ಕೆಲಸ ದೇಶದಲ್ಲಿ ನಡೆಯುತ್ತಿರುವುದು ಆಶಾದಾಯಕ ಸಂಗತಿ. ಭಾರತೀಯ ಫ್ಯಾಸಿಸಂನ ಪ್ರಯೋಗಶಾಲೆ ಎಂದೇ ಬಿಂಬಿತವಾಗಿದ್ದ ಗುಜರಾತಿನಲ್ಲಿಯೇ ಇದು ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ತಮ್ಮ ಸ್ವಾರ್ಥದ ಉದ್ದೇಶಕ್ಕಾಗಿಯೇ ಆರಂಭವಾದ ಪಟೇಲರ ಮೀಸಲಾತಿ ಚಳವಳಿ ಹಿಂದೂತ್ವವಾದಿಗಳಿಗೆ ದೊಡ್ಡ ತಲೆನೋವಾಗಿ ಬೆಳೆದಿದೆ. ಇದರ ಭಾಗವಾಗಿ ಬೆಳೆದ ಹಾರ್ದಿಕ್ ಪಟೇಲ್ ಯುವ ನಾಯಕನಾಗಿ, ಹಾಗೆಯೇ ಊನಾ ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ನಂತರ ಜಿಗ್ನೇಶ್ ಮೇವಾನಿ ದಲಿತರ ಶೂದ್ರರ ಮತ್ತು ಎಲ್ಲ ಹಿಂದುಳಿದವರ ನಾಯಕನಾಗಿ ವಿಕಾಸವಾಗಿದ್ದಾರೆ. ಹಿಂದುಳಿದ ವರ್ಗಗಳ ಪ್ರತಿನಿದಿಯಾಗಿ ಅಲ್ಪೇಶ್ ಠಾಕೂರ್ ಬೆಳೆದಿದ್ದಾರೆ.

ಈ ಮೂವರು ಗುಜರಾತಿನೊಳಗಿನಿಂದಲೇ ಕಳೆದ ಕೆಲವು ವರ್ಷಗಳಲ್ಲಿ ಬೆಳೆದಿರುವ ಯುವ ನಾಯಕರು. ರೋಹಿತ್ ವೇಮುಲಾ ಸಾವಿನ ನಂತರ ಹೈದರಾಬಾದ್ ವಿಶ್ವವಿದ್ಯಾಲಯಗಳು, ಜವಹರಲಾಲ್ ನೆಹರು ವಿದ್ಯಾಲಯದಲ್ಲಿ ನಡೆದ ಬೆಳವಣಿಗೆಗಳು ದೇಶದಲ್ಲಿ ವಿದ್ಯಾರ್ಥಿ ಚಳವಳಿಗೆ ಹೊಸ ಹುರುಪು ನೀಡಿ ಕನ್ನಯ್ಯ ಕುಮಾರ್ ಮತ್ತು ಇತರ ವಿದ್ಯಾರ್ಥಿ ಯುವ ನಾಯಕರನ್ನು ಸೃಷ್ಟಿಸಿತು. ಕರ್ನಾಟಕದಲ್ಲಿಯೂ ಚಲೋ ಉಡುಪಿ ಕಾರ್ಯಕ್ರಮದ ನಂತರ ಸಾಮೂಹಿಕವಾಗಿ ಯುವಕರು ವಿದ್ಯಾರ್ಥಿಗಳು ಕೂಡಿ ನಡೆಸಿದ ಚಳವಳಿಯು ಹೊಸ ಚೈತನ್ಯ ಮತ್ತು ಭರವಸೆಯನ್ನು ಮೂಡಿಸಿದೆ. ಇದು ದೇಶದಲ್ಲಿ ಬೇರೆ ಬೇರೆ ಸ್ತರಗಳಲ್ಲಿ ನಡೆಯುತ್ತಿದೆ. ಆದರೆ ಈ ಹೊಸ ಚಲನೆಗೆ ದೊಡ್ಡ ಪ್ರಮಾಣದಲ್ಲಿ ಹಿಂದೂತ್ವವಾದಿ ಚಿಂತನೆಗೆ ಮಾರುಹೋಗುತ್ತಿರುವ ಬಲಿಯಾಗುತ್ತಿರುವ ಯುವಕರನ್ನು ತಡೆಯಲು ಇನ್ನೂ ಸಾಧ್ಯವಾಗುತ್ತಿಲ್ಲ. ಇದು ಪ್ರತಿರೋಧ ಒಡ್ಡುವ ಶಕ್ತಿಗಳು ಇನ್ನೂ ಸೀಮಿತ ಮತ್ತು ದುರ್ಬಲವಾದ ಸ್ಥಿತಿಯಲ್ಲಿಯೇ ಇರುವುದನ್ನು ತೋರಿಸುತ್ತದೆ.

ಈ ಸೀಮಿತ ಮತ್ತು ದುರ್ಬಲತೆಯ ಕಟ್ಟುಗಳನ್ನು ಮುರಿದು ತನ್ನ ಶಕ್ತಿಯನ್ನು ಹಿಗ್ಗಿಸಿಕೊಂಡು ಸಾಗರೋಪಾದಿಯಲ್ಲಿ ದಲಿತ ಶೂದ್ರ ಯುವಕರು ವಿದ್ಯಾರ್ಥಿಗಳು ಈ ದೇಶಕ್ಕೆ ಹೊಸದಾರಿಯನ್ನು ತೋರಬೇಕಿದೆ. ಇವರೇ ಭವಿಷ್ಯದಲ್ಲಿ ಭಾರತದ ತೋರುದೀಪಗಳು. ಕೊಲ್ಲುವ ಕೈಗಳ ಕಡ್ಗವಾಗುವ ಬದಲಿಗೆ ಲೋಕವನ್ನು ಬೆಳಗುವ ದೀಪಗಳಾಗಬೇಕಿದೆ. ಅದನ್ನು ಅರಿತು ಚಾರಿತ್ರಿಕವಾಗಿ ಈ ದೇಶಕ್ಕೆ ಎದುರಾಗಿರುವ ಬಿಕ್ಕಟ್ಟನ್ನು ಬಗೆಹರಿಸಬೇಕಿದೆ. ಬುದ್ಧ ಬಸವ ಫುಲೆ ಅಂಬೇಡ್ಕರ್ ಪೆರಿಯಾರ್ ಕುವೆಂಪು ಲಂಕೇಶ್ ಮುಂತಾದವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕಿದೆ. ಆಗ ಮಾತ್ರವೇ ಈ ದೇಶದಲ್ಲಿ ನಿಜವಾದ ಧರ್ಮ, ಪ್ರಜಾಪ್ರಭುತ್ವಗಳು ವಿಕಾಸಗೊಳ್ಳಲು ಸಾಧ್ಯ.

Leave a Reply

Your email address will not be published.