ಕೊಟ್ಟೂರೇಶ್ವರ – ಧರ್ಮ – ರಾಜಕೀಯ

ಡಾ. ಸತೀಶ್ ಪಾಟೀಲ್

kottureshಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ದೈವವಾಗಿ ಆರಾಧನೆಗೊಳ್ಳುವ ಕೊಟ್ಟೂರೇಶ್ವರ ೧೬ ನೇ ಶತಮಾನದಲ್ಲಿ ಇದ್ದರೆಂದು ಪುರಾವೆ ಸಿಗುವ ಈ ಚಾರಿತ್ರಿಕ ವ್ಯಕ್ತಿ. ಇಂದು ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರನ  ರಥೋತ್ಸವವಿದೆ. ಈ ಸಂದರ್ಭ ದಲ್ಲಿ  ಡಾ.ಸತೀಶ್ ಪಾಟೀಲ್  ಅವರು ಬರೆದ ಬರಹ.

ರಾಜಕೀಯ ನಾಯಕರು ಗೆಲುವಿಗಾಗಿ ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದಕ್ಕಾಗಿ ಧಾರ್ಮಿಕ ಪುರುಷರ ಮೊರೆ ಹೋಗುವುದು, ಮಠಗಳಿಗೆ ಭೇಟಿಕೊಡುವುದು, ಸ್ವಾಮೀಜಿಗಳನ್ನು ಒಲಿಸಿಕೊಳ್ಳುವ ಸರ್ಕಸ್ ಮಾಡುವುದು ಸಹಜ.. ಕೊಟ್ಟೂರಿನ ಇತಿಹಾಸದಲ್ಲೂ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ರಾಜ-ಮಹಾರಾಜರು ಕೊಟ್ಟೂರೇಶ್ವರರನ್ನು ಒಲಿಸಿಕೊಳ್ಳಲು ವಿವಿಧ ಕಸರತ್ತು ಮಾಡಿದ್ದಾರೆ. ಕೊಟ್ಟೂರೇಶ್ವರರ ಜೀವನ ಚರಿತ್ರೆಯನ್ನು ಅವಲೋಕಿಸುತ್ತಾ ವರ್ತಮಾನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಈ ಲೇಖನದ್ದಾಗಿದೆ.

ಕೊಟ್ಟೂರೇಶ್ವರ ಜೀವನ ಚರಿತ್ರೆಯನ್ನು ಗಮನಿಸಿದರೆ ನಮಗೆ ಮುಖ್ಯವಾಗಿ ಕಂಡುಬರುವುದು ಈತನೊಟ್ಟಿಗೆ ಇದ್ದ ರಾಜಕೀಯ ಪ್ರಭುತ್ವದ ಸಂಬಂಧ. ಕೊಟ್ಟೂರೇಶ್ವರರ ಜೀವನ ಬಹಳ ಮುಖ್ಯವಾದ ಪವಾಡಗಳಂತೆ  “ಕೊಟ್ಟೂರು ಬಸವೇಶ್ವರ ಚಾರಿತ್ರ್ಯ” ದಲ್ಲಿ ವಿಸ್ತಾರವಾಗಿ ವಿಸ್ತರಿಸಲ್ಪಟ್ಟರುವುಗಳೆಲ್ಲವೂ ರಾಜಕೀಯ ನಾಯಕರೊಂದಿಗೆ ಕೊಟ್ಟೂರೇಶ್ವರರು ಹೊಂದಿರುವ ಸಂಬಂಧಗಳನ್ನು ಕುರಿತೇ ಹೇಳುತ್ತವೆ. ಕ್ರಿ.ಶ 1600 ರಲ್ಲಿ ಬರೆಯಲ್ಪಟ್ಟ ಸಿದ್ದನಂಜೇಶನ ಕೃತಿ “ ಗುರುರಾಜ ಚಾರಿತ್ರ್ಯ“ ದಲ್ಲಿ ಕೂಡ ಕೊಟ್ಟೂರೇಶ್ವರರು ಹರಪನಹಳ್ಳಿ ದೊರೆ ದಾದಿನಾಯಕ ಮತ್ತು ಬಹುಮನಿ ಸುಲ್ತಾನ ಕುತುಮ್ ಶಹಾ ನಿಜಾಮುಲಕನೊಂದಿಗೆ ಇರುವ ಸಂಬಂಧವನ್ನು ವಿವರಿಸುತ್ತವೆ.  ಕೊಟ್ಟೂರೇಶ್ವರರ ಬಗೆಗಿರುವ ಮತ್ತೊಂದು ಪುಟ್ಟ ಕೃತಿ ಮುತ್ತಿಗೆ ಪದ ಎನ್ನುವುದು ಕೂಡ  ಇವರು ಹರಪನಹಳ್ಳಿ ಸೋಮಶೇಖರ ನಾಯಕನ ಪರವಾಗಿ ಮದಕರಿ ನಾಯಕ, ಸಿದ್ಧೋಜಿ ಮತ್ತು ಮುರಾರಿಯೊಂದಿಗೆ ಯುದ್ಧ ಮಾಡುವುದನ್ನೇ ವಿವರಿಸುತ್ತವೆ.

kottureshvaraಯಾಕಾಗಿ ಕೊಟ್ಟೂರೇಶ್ವರರು ರಾಜಕೀಯ ಕೇಂದ್ರ ಶಕ್ತಿಯೊಂದಿಗೆ ಹೀಗೆ ಆಪ್ತರಾಗುತ್ತಾರೆ ಅಥವಾ ಇನ್ನ್ಯಾರೋ ರಾಜಕೀಯ ನಾಯಕರೊಟ್ಟಿಗೆ ಯುದ್ಧ ಮಾಡುತ್ತಾರೆ. ? ಅಕ್ಬರ್ ಕೊಟ್ಟಿದ್ದೆಂದು ತೋರಿಸಲಾಗುವು ಕೊಟ್ಟೂರಿನ ಹಿರೇಮಠದಲ್ಲಿರುವ ಖಡ್ಗ ಯಾವುದರ ಸಂಕೇತ ? ಸಂಡೂರಿನ ಪರವಿ ನಾಯಕ, ಸಾಸಲ ಭೈರವೇಂದ್ರ, ಬಿದರಿ, ಭಾಗನಗರ, ವಿಜಯನಗರ, ಕರ್ನಾಟಕ ಮಲೆಯಾದಿ ಸಕಲದೇಶದ ರಾಜರು ಕೊಟ್ಟೂರೇಶ್ವರರನ್ನು ಯಾಕಾಗಿ ಹುಡುಕಿಕೊಂಡು ಬಂದರು. ಇದನ್ನು ಬರೀ ರಾಜಕೀಯ ನಾಯಕರು ಭಕ್ತಿಯನ್ನು ವ್ಯಕ್ತಪಡಿಸಲಿಕ್ಕೆ ಮಾತ್ರ ಕೊಟ್ಟೂರಿಗೆ ಬಂದಿದ್ದರೆಂದು ತಿಳಿಯಬೇಕೆ ? ಅಥವಾ ಕೊಟ್ಟೂರೇಶ್ವರರ ಪವಾಡಗಳೆಲ್ಲವೂ ಬರೀ ಬೇಡಿ ಬಂದ ರಾಜಕೀಯ ನಾಯಕರನ್ನು ಉದ್ಧರಿಸುವಷ್ಟಕ್ಕೆ ಸೀಮಿತ ಎನ್ನಬೇಕೆ.

ರಾಜಕೀಯ ನಾಯಕರೊಂದಿಗಿನ ಪವಾಡಗಳು ಬರೀ ಕೊಟ್ಟೂರೇಶ್ವರರಿಗೆ ಮಾತ್ರ ಸೀಮಿತವಾಗಿಲ್ಲ, ಪಂಚಗಣಾಧೀಶ್ವರರಲ್ಲಿ ಪ್ರಮುಖರಾದ ನಾಯಕನಟ್ಟಿ ತಿಪ್ಪೇಸ್ವಾಮಿ, ಕೂಲಹಳ್ಳಿ ಮದ್ದಾನಸ್ವಾಮಿ ಸೇರಿದಂತೆ ಎಲ್ಲ ಧಾರ್ಮಿಕ ವ್ಯಕ್ತಿಗಳ ಬದುಕಿನಲ್ಲಿ ಕಂಡು ಬರುತ್ತವೆ. ಕೊಟ್ಟೂರೇಶ್ವರರು ಅದೆಷ್ಟೇ ವೈರಾಗ್ಯಶಾಲಿಗಳಾಗಿರಲಿ ಒಂದು ಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಬದುಕುತಿದ್ದರು. ಇದರಿಂದಾಗಿ ಅದಕ್ಕೆ ಪ್ರತಿಕ್ರಿಯಿಸಲೇ ಬೇಕಾಗಿತ್ತು. ಹಾಗಾಗಿ ಮಹಾನ್ ಧಾರ್ಮಿಕ ಪುರುಷನಾದ ಕೊಟ್ಟೂರೇಶ್ವರರ ಜೀವನ ರಾಜಕೀಯ ಅಧಿಕಾರದೊಂದಿಗೆ ಬಿಡಿಸಲಾರದ ನಂಟನ್ನು ಹೊಂದಿದೆ.

ವರ್ತಮಾನದಲ್ಲೂ ಇದೇನು ಬೇರೆಯಾಗಿಲ್ಲ.. ಈಗಲೂ ಅದೆಷ್ಟೋ ರಾಜಕೀಯ ನಾಯಕರು ಧಾರ್ಮಿಕ ಪುರುಷರಿಗೆ ಶರಣಾಗುತ್ತಾ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಕರ್ನಾಟಕದ ರಾಜಕೀಯ ಸ್ಥಿತಿಯನ್ನು ಗಮನಿಸಿದವರಿಗೆ ಇದಕ್ಕೆ ಸಾಕ್ಷಿಗಳನ್ನು ಕೊಡಬೇಕಿಲ್ಲ.
ಕೊಟ್ಟೂರೇಶ್ವರರು ಮಾಡುವ ಪವಾಡಗಳಲ್ಲಿ ಮುಖ್ಯವಾದದು ಹರಪನಹಳ್ಳಿ ಪಾಳೆಗಾರ ದಾದಿನಾಯಕನ ಮೂಲಕ ಕುರುಡನಿಗೆ ಕಣ್ಣುಬರುವಂತೆ ಮಾಡಿದ್ದು, ಈ ಬಗ್ಗೆ ಸಿದ್ಧನಂಜೇಶ (ಗುರುರಾಜ ಚಾರಿತ್ರ್ಯ) ಮತ್ತು ಬಸವಲಿಂಗಕವಿ (ಕೊಟ್ಟೂರ ಬಸವೇಶ್ವರ ಚಾರಿತ್ರ್ಯ) ಇಬ್ಬರೂ ವಿವರಿಸಿದ್ದಾರೆ. ಒಮ್ಮೆ ಕುರುಡನ1ಬ್ಬ ಗುರುಬಸವನ ಬಳಿ ಬಂದು ಕಣ್ಣುಗಳನ್ನು ಕೊಡು ಎಂದು ಬೇಡುತ್ತಾನೆ. ಆದರೆ ಕೊಟ್ಟೂರೇಶ್ವರರು ಕಣ್ಣುಗಳನ್ನು ನೀಡದೆ ಅಂದಿನ ಹರಪನಳ್ಳಿ ಪಾಳೆಗಾರ ದಾದಿನಾಯಕನ ಬಳಿ ಕಳುಹಿಸಿಕೊಡುತ್ತಾನೆ. ಆತನ ಮೂಲಕ ಕುರುಡನಿಗೆ ಕಣ್ಣು ಬರುವಂತೆ ಮಾಡುತ್ತಾರೆ.

ಯಾಕಾಗಿ ಕೊಟ್ಟೂರೇಶ್ವರರು ತಾನೇ ನೇರವಾಗಿ ಕಣ್ಣುಗಳನ್ನು ನೀಡದೆ ದಾದಿನಾಯಕನ ಮೂಲಕ ನೀಡಿದ ? ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಇದಕ್ಕೆ ಉತ್ತರ ತಿಳಿದು ಬರುತ್ತದೆ. ವಿಜಯನಗರ ಪತನಾನಂತರ ಹರಪನಹಳ್ಳಿ ಪಾಳೆಗಾರನಾದ ದಾದಿನಾಯಕನಿಗೆ ತನ್ನ ಅಧೀನ ಪ್ರದೇಶಗಳಲ್ಲಿನ ಅರಾಜಕತೆಯನ್ನು ಹೋಗಲಾಡಿಸಿ ಸುವ್ಯವಸ್ಥಿತ ಆಡಳಿತವನ್ನು ರೂಪಿಸಬೇಕಿತ್ತು. ಕೊಟ್ಟೂರೇಶ್ವರರು ಕಣ್ಣು ಬರಿಸುವ ಪವಾಡದ ಮೂಲಕ ದಾದಿನಾಯಕನಿಗೆ ಅಲೌಕಿಕ ಶಕ್ತಿಯಿದೆ ಎಂದು ರಾಜ್ಯಾಡಳಿತಕ್ಕೆ ಬೇಕಾದ ದೃಷ್ಟಿಕೋನವನ್ನು ರೂಪಿಸಿದರೆ ಅದಕ್ಕೆ ಬದಲಿಯಾಗಿ ಕೊಟ್ಟೂರೇಶ್ವರರಿಗೆ ತನ್ನ ಸಕಲ ಅಷ್ಟೈಶ್ವರ್ಯವನ್ನು ಒಪ್ಪಿಸಿ ನಾನು ನಿಮ್ಮ ಬಾಗಿಲು ಕಾಯುವ ಸೇವಕ (ನಿಮ್ಮ ರಾಜಮಂದಿರವ ಕಾದಿರ್ಪ ಕಿಂಕರನೆನ್ನ ವಂಶಪಾರಂಪರ್ಯದೊಳು ತ್ರೈಜನ್ನುತ ನೀನೆ ವಿಭುವಾಗಿ ಪಾಲಿಸುವುದು) ಎಂದು ದಾದಿನಾಯಕ ಶರಣಾಗುತ್ತಾನೆ. ಈ ರೀತಿ ಭಕ್ತಿಯನ್ನು ತೋರುವುದು ಬರೀ ದಾದಿನಾಯಕನಿಗೆ ಮಾತ್ರ ಸೀಮಿತವಾಗಿಲ್ಲ. ದೆಹಲಿಯ ದೊರೆ ಅಕ್ಬರ್ ಕೂಡ ಕೊಟ್ಟೂರಿಗೆ ಬಂದು ಏಳು  ದಿನಗಳವರೆಗೆ ಕಾದು ಎಂಟನೇ ದಿನ ಕೊಟ್ಟೂರೇಶ್ವರರನ್ನು ಕಂಡು ಧನ-ಕನಕಾದಿಗಳನ್ನು ಅರ್ಪಿಸಿ ಆಶಿರ್ವಾದ ಪಡೆಯುತ್ತಾನೆ. ಅಕ್ಬರ್ ಕೊಟ್ಟೂರಿಗೆ ಬಂದು ಹೋದ ನಂತರ “ ಧರಣಿಗತಿಶಯಮಾದ ಬಿದರಿ, ಭಾಗಾನಗರ ವರ ವಿಜಯನಗರಂಗಳಂ ಪಾಲಿಸುವ ನರೇಶ್ವರರತುಳಿ ಕರ್ನಾಟಕ ದೇಶ ಮಲದೇಶರಸದ ಜನಪದವಾದಿಯಾದ ಧರೆನಾಳವರಸರ್ ” ಬಂದು ಹೋದರೆಂದು ಕೊಟ್ಟೂರು ಬಸವೇಶ್ವರ ಚಾರಿತ್ರ್ಯ ವಿವರಿಸುತ್ತದೆ. ಸಾಲೇಂದ್ರ ಭೈರವ ತನ್ನ ಮಗ ಅಯ್ಯಣಾರ್ಯನನ್ನು ಈತನ ಕೃಪೆಗಾಗಿ ಕಳುಹಿಸಿಕೊಡುತ್ತಾನೆ.

FB_IMG_1487655801194 (1)ರಾಜರುಗಳು ತಾವಾಗಿಯೇ ಕೊಟ್ಟೂರೇಶ್ವರರನ್ನು ಹುಡುಕಿಕೊಂಡು ಬರಲು ಮುಖ್ಯ ಕಾರಣವೆಂದರೆ ಕೊಟ್ಟೂರೇಶ್ವರರು ಆಗಿನ ಕಾಲದಲ್ಲಿ ಧಾರ್ಮಿಕವಾಗಿ ಪ್ರಬಲರಾಗಿದ್ದರು ಎನ್ನುವುದು ಒಂದು ಕಾರಣವಾದರೆ, ಈತನಿಗೆ ತಮ್ಮ ಲಾಂಛನ, ಛತ್ರಿ, ಬಿರುದಾವಳಿಗಳನ್ನೆಲ್ಲಾ ಅರ್ಪಿಸಿ ಪರಮ ಭಕ್ತರಾಗುವ ಮೂಲಕ ಕೊಟ್ಟೋರೇಶ್ವರರನ್ನು ಅನುಸರಿಸುವ ಎಲ್ಲ ಜಾತಿಗಳ, ಎಲ್ಲ ಜನರನ್ನು ತಮ್ಮ ಪರವಾಗಿಸಿಕೊಳ್ಳುವ ಪ್ರಯತ್ನವನ್ನು ರಾಜರು ಮಾಡುತ್ತಿದ್ದರು.

ಈಗಲೂ ಕರ್ನಾಟಕದಲ್ಲಿ ಸಚಿವರಾಗುತ್ತಿದ್ದಂತೆ ಮಠಗಳಿಗೆ ಭೇಟಿಕೊಟ್ಟು ಆಶೀರ್ವಾದ ಪಡೆಯುವುದು. ಇಲ್ಲವೇ ಬಜೆಟ್ ನಲ್ಲಿ ಮಠಗಳಿಗೆ ಹಣ ಮೀಸಲಿಡುವ ಮೂಲಕ ಆಯಾ ಜಾತಿ-ಧರ್ಮಗಳನ್ನು ಒಲಿಸಿಕೊಳ್ಳುವ ಕೆಲಸವನ್ನು ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಧಾರ್ಮಿಕ – ಜಾತಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಜಾತಿ-ದರ್ಮದ ಆಧಾರದ ಮೇಲೆ ಜನರಿಗೆ ಹತ್ತಿರವಾಗುವುದುನ್ನು ನೋಡಬಹುದು. ಕರ್ನಾಟಕದ ಹಲವಾರು ಮಠಗಳು ಅಪಾರ ಕಾಣಿಕೆಗಳನ್ನು, ಬಿರುದಾವಳಿ, ಛತ್ರ-ಲಾಂಛನಗಳನ್ನು ಹೊಂದಿದ್ದರೆ, ಇನ್ನೊಂದೆಡೆ ಅಪಾರವಾದ ಜನಸಮುದಾಯದ ಬಲವನ್ನು ಹೊಂದುವ ಮೂಲಕ ರಾಜಪ್ರಭುತ್ವಕ್ಕೆ ಸಮನಾದ ಪರ್ಯಾಯ ಅಧಿಕಾರ ಶಕ್ತಿಯನ್ನು ಹೊಂದಿರುವುದು ಕಂಡು ಬರುತ್ತಿದೆ. ಅಪಾರ ಭಕ್ತರನ್ನು ಹೊಂದಿದ್ದ ಕೊಟ್ಟೂರೇಶ್ವರರು ತಮ್ಮ ಬದುಕಿನುದ್ದಕ್ಕೂ ರಾಜಕೀಯ ಶಕ್ತಿಗೆ ಪರ್ಯಾಯವೆಂಬಂತೆ ಬದುಕಿದ್ದರು. ಇದಕ್ಕಾಗಿಯೇ ಹರಪನಹಳ್ಳಿ ಪಾಳೆಗಾರ ಮತ್ತು ಚಿತ್ರದುರ್ಗದ ಮದಕರಿ ನಾಯಕ ಎಷ್ಟೇ ವೈರಿಗಳಾದರೂ ಕೊಟ್ಟೂರೇಶ್ವರರ ಭಕ್ತರಾಗುವ ಮೂಲಕ ಅವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಎಷ್ಟೇ ಯುದ್ದಗಳನ್ನು ಮಾಡಿ ಯಾರೇ ಗೆದ್ದರೂ ಕೊಟ್ಟೂರಿನ ಮೇಲೆ ಮಾತ್ರ ಮುತ್ತಿಗೆ ಹಾಕದೆ ಹೋಗುತ್ತಿದ್ದರು. ಅದೆಷ್ಟೋ ವಾಜ್ಯಗಳು ಅರಸರ ಮುಂದೆ ತೀರ್ಮಾನವಾಗುವ ಬದಲು ಈ ಸಂತನ ಹಿರೇಮಠದಲ್ಲಿ ತೀರ್ಮಾನವಾಗುತ್ತಿದ್ದವು.

ಕೊಟ್ಟೂರೇಶ್ವರರ ಕುರಿತು ಇನ್ನಷ್ಟು ಅಧ್ಯಯನ ಮಾಡಿದರೆ ನಮಗೆ ವರ್ತಮಾನದಲ್ಲಿ ಧರ್ಮ ಮತ್ತು ರಾಜಕೀಯ ನಾಯಕರ ಅದೆಷ್ಟೋ ವರ್ತನೆಗಳು ಅರ್ಥವಾಗುತ್ತವೆ. ಹಾಗಾಗಿಯೇ ಕೊಟ್ಟೂರೇಶ್ವರರನ್ನು ಅರ್ಥಮಾಡಿಕೊಳ್ಳುವುದೆಂದರೆ ಅದು ಬರೀ ಚರಿತ್ರೆಯನ್ನು ಕುರಿತು ಓದುವುದು ಮಾತ್ರವಲ್ಲ ವರ್ತಮಾನವನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ರೂಪಿಸಲು ದಾರಿದೀಪವೂ ಆಗಬಲ್ಲದು.

Leave a Reply

Your email address will not be published.