ಕೊಟ್ಟೂರಿನ ಮಂಡಕ್ಕಿ ಮಿರ್ಚಿಯ ಗಮ್ಮತ್ತು

-ಸಿದ್ಧರಾಮ ಹಿರೇಮಠ.

FB_IMG_1477450426403ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳಿಗೆ ಹೇಗೆ ಆಗರವಾಗಿದೆಯೋ ಅಂತೆಯೇ ಇಲ್ಲಿನ ವಿಶಿಷ್ಟ ತಿನಿಸು ಪ್ರಸಿದ್ಧಿಯನ್ನು ಹೊಂದಿದೆ. ಈಗಾಗಲೇ ನೀವು ಅಂದುಕೊಂಡಂತೆಯೇ ಅದು ಇಲ್ಲಿನ ಮಂಡಕ್ಕಿ ಮೆಣಸಿನಕಾಯಿ.
ನಿನ್ನೆ ನಾನು ನನ್ನ ಪತ್ನಿ ಹಾಗೂ ನನ್ನ ಎರಡನೇ ಪತ್ನಿ(ಕೆಮರಾ) ಜೊತೆ ಕೊಟ್ಟೂರಿಗೆ ಹೋಗಿದ್ದೆ. ಮಾರ್ಗದಲ್ಲಿ ಅಡವಿಯಲ್ಲಿ ಸುತ್ತಾಡಿ, ಹೊರಪ್ರಪಂಚದ ಜಂಜಾಟವ ಮರೆತು ಪುಟ್ಟ ಗಿಡಮರಗಳ ಮಧ್ಯೆ ಸುತ್ತಾಡಿದೆವು. ಅಲ್ಲಿನ ಪ್ರಪಂಚವೇ ಬೇರೆ ಬಿಡಿ. ಮುಂದೆ ಕೊಟ್ಟೂರಿಗೆ ಹೋದ ಮೇಲೆ ಅಲ್ಲಿನ ತಿನಿಸನ್ನು ತಿನ್ನದೇ ಇರಲು ಸಾಧ್ಯವೆ? ನನ್ನ ಪತ್ನಿಗೆ ಕೇಳಿದೆ “ಕೊಟ್ಟೂರಿಗೆ ಬಂದ್ ಮ್ಯಾಲೆ ಇಲ್ಲಿ ಮೆಣಸಿನಕಾಯಿ ಮಂಡಕ್ಕಿ ತಿನದಿದ್ರ್ ಹೆಂಗ?” ಎಂದು. “ಮೊದಲು ನಿಮ್ ಹೊಟ್ಟಿ ನೋಡಿಕೊಳ್ರಿ, ತಿಂದು ಆಮ್ಯಾಲೆ ಗೋಳ್ಯಾಡಬ್ಯಾಡ್ರಿ” ಎಂದಳು. “ಹೊಟ್ಟಿ ನೋಡಕೊಂಡೇ ತಿನ್ನದು, ಇರ್ಲಿಬಿಡು ತಿಂದ್ರಾತು” ಎಂದು ಹೊರಟೆವು. ಕೊಟ್ಟೂರಿನ ಮಾರ್ಕೆಟ್ ನಲ್ಲಿರುವ ಶೇಖರಪ್ಪನವರ ಅಂಗಡಿಗೆ ಹೋಗಿ ಒಳಗೆ ಕುಳಿತೆವು. ನೆಲದ ಮೇಲೆ ಅಂದವಾಗಿ ಹಾಸಿದ್ದ ಚಾಪೆಯ ಮೇಲೆ ಹಾಯಾಗಿ ಕುಳಿತ ಸ್ವಲ್ಪ ಹೊತ್ತಿನೊಳಗೆ ಬಿಸಿಬಿಸಿ ಘಮ್ಮನೆ ಮೆಣಸಿನಕಾಯಿ, ಮಂಡಕ್ಕಿ, ಉಳ್ಳಾಗಡ್ಡಿ ಎದುರಿಗೆ ಬಂದು ಕುಳಿತಾಗ ಆಹಾ ಅದರ ಸೊಗಸೇ ಬೇರೆ. ನನ್ನ ಪತ್ನಿಯಂತೂ “ಫೋಟೊ ತೆಗೀರಿ ಎಷ್ಟು ಚಂದ ಕಾಣ್ತಾವ” ಎಂದಳು. ಪಟಪಟನೆ ಫೋಟೊ ತೆಗೆದೆ. ತೃಪ್ತಿಯಾಗುವಂತೆ ಮಂಡಕ್ಕಿ ಮೆಣಸಿನಕಾಯಿ ತಿಂದನಂತರ ಹೊರಬಂದು ಅಷ್ಟು ಮಧುರವಾದ ಮೆಣಸಿನಕಾಯಿ ಮಾಡಿಕೊಟ್ಟವರಿಗೆ ಹಣಕೊಟ್ಟು ಹಾರೈಸಿದೆ. ಮೆಣಸಿನಕಾಯಿ ಮಾಡುತ್ತಿದ್ದವರು ಶ್ರೀಕಾಂತ್. ಅವರೊಂದಿಗೆ ಹರಟೆ ಹೊಡೆದೆ. ನಾನು ಫೋಟೊ ತೆಗೆಯುವೆನೆಂದಾಗ ಸಹಕರಿಸಿದರು.
ಅದೇ ಸಂದರ್ಭದಲ್ಲಿ ಅಂಗಡಿಯ ಮಾಲಿಕರಾದ ಶೇಖರಪ್ಪನವರೇ ಬಂದರು. ಮಾತನಾಡಿದಾಗ ಗೊತ್ತಾಯಿತು ೧೯೭೭ರಿಂದಲೂ ತಮ್ಮ ಅಂಗಡಿಯಿದೆಯೆಂದು ಸಂತಸದಿಂದ ತಿಳಿಸಿದರು. ನಾನೂ ಸಹ ಬಹಳ ವರ್ಷಗಳಿಂದ ಆಗಾಗ ತಮ್ಮ ಅಂಗಡಿಗೆ ಭೇಟೀ ಕೊಟ್ಟು ಮೆಣಸಿನಕಾಯಿ ಮಂಡಕ್ಕಿಯ ರುಚಿ ಸವಿದಿದ್ದೇನೆಂದು ಹೇಳಿದೆ. ಆರಂಭದಲ್ಲಿ ಕೊಟ್ಟೂರಿನಲ್ಲಿ ಅಂಬಣ್ಣನವರ ಹಾಗೂ ತಮ್ಮ ಅಂಗಡಿಗಳು ಮಾತ್ರ ಇದ್ದವು ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಈಗ ಕೊಟ್ಟೂರಿನಲ್ಲಿ ಸಾಕಷ್ಟು ಅಂಗಡಿಗಳಾಗಿವೆ. ಎಲ್ಲ ಅಂಗಡಿಗಳಲ್ಲೂ ರುಚಿಕಟ್ಟಾದ ಮೆಣಸಿನಕಾಯಿ ಮಂಡಕ್ಕಿ ಸಿಗುತ್ತವೆ. ಇದು ಈ ಊರಿನ ವಿಶೇಷತೆ.
ಇಲ್ಲಿ ೫ ಸ್ಟಾರ್ ಹೋಟೆಲ್ ಗಳ ರೀತಿಯಲ್ಲಿ ಕುರ್ಚಿ, ಟೇಬಲ್ ಗಳು ಇಲ್ಲದಿರಬಹುದು, ವೈಭವಯುತ ನೆಲ, ಗೋಡೆ ಅಲಂಕಾರಗಳಿಲ್ಲದಿರಬಹುದು, ಬಂದೊಡನೆ ಗರಿಗರಿಯಾದ ಡ್ರೆಸ್ ನ ವ್ಯಕ್ತಿ ಬಂದು ನಿಮ್ಮೆದುರು ನಿಲ್ಲದಿರಬಹುದು, ಆದರೆ ಇಲ್ಲಿನ ಪ್ರತಿಯೊಂದು ಇಂತಹ ಅಂಗಡಿಗಳಲ್ಲಿ ಪ್ರೀತಿಯ ಮಾತುಗಳಿವೆ. ಅಪ್ಪಟ ದೇಸಿ ಮಾತುಕತೆ, ಸತ್ಕಾರ, ರುಚಿಕಟ್ಟಾದ ತಿನಿಸು ಇದೆ. ನೆಲದ ಮೇಲೆ ಕುಳಿತರೆ ಅದಕ್ಕಿಂತ ಸ್ವರ್ಗ ಯಾವುದಿದೆ. ಪ್ಲೇಟ್ ನಲ್ಲಿ ಹಾಳೆಯ ಮೇಲೆ ಮಂಡಕ್ಕಿ ಹಾಕಿ ಅದರ ಸುತ್ತಲೂ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಪಕ್ಕಕ್ಕೆ ಅಲಂಕಾರವೆಂಬಂತೆ ಬಂಗಾರದ ಬಣ್ಣದ ಬಿಸಿ ಬಿಸಿ ಮೆಣಸಿನಕಾಯಿ ಇಟ್ಟು ಕೊಟ್ಟರೆ, ಅದರ ಮುಂದೆ ೫ ಸ್ಟಾರ ಅಲ್ಲ ೧೦ ಸ್ಟಾರ್ ಹೋಟೆಲ್ ಗಳನ್ನೂ ನಿವಾಳಿಸಿ ಒಗೆಯಬೇಕು, ಅಂತಹ ಮಧುರ ಅನುಭವ.
ಪ್ರತಿ ಮೆಣಸಿನಕಾಯಿ ಅಂಗಡಿಗಳ ಮುಂದೆಯೂ ಒಂದು ಕಾಜಿನ ಪೆಟ್ಟಿಗೆ ಅದರಲ್ಲಿ ಕೊಟ್ಟೂರಿನಲ್ಲಿ ಮಾತ್ರ ವಿಶೇಷವಾಗಿ ಸಿದ್ಧಪಡಿಸುವ ಖಾರ ಸೇವನ್ನು ಎತ್ತರಕ್ಕೆ ಅಲಂಕಾರಿಕವಾಗೆ ದುಂಡಗೆ ಏರಿಸಿರುತ್ತಾರೆ. ಪಕ್ಕಕ್ಕೆ ಜಿಲೇಬಿ, ಮೈಸೂರಪಾಕ್, ಕೆಳಗಡೆ ದೊಡ್ಡ ಡಬ್ಬಿಯಲ್ಲಿ ಕೊಟ್ಟೂರಿನ ಗರಿಗರಿಯಾದ ಮಂಡಕ್ಕಿ, ಅದರ ಪಕ್ಕ ಉರಿಯುತ್ತಿರುವ ಒಲೆ, ಅದರ ಮೇಲೆ ದೊಡ್ಡ ಕಡಾಯಿಯಲ್ಲಿ ಕಾಯ್ದ ಎಣ್ಣೆ. ಕಡಲೆಹಿಟ್ಟನ್ನು ಹದವಾಗಿ ಕಲೆಸಿ, ಹಸಿಮೆಣಸಿನಕಾಯಿಯನ್ನು ಆ ಹಿಟ್ಟಿನಲ್ಲಿ ಅದ್ದಿ ಕಡಾಯಿಯಲ್ಲಿ ಬಿಡತೊಡಗಿದರೆ, ನೋಡುವುದೇ ಒಂದು ಸೊಗಸು. ಕಡಾಯಿಯಲ್ಲಿ ಹದವಾಗಿ ಅರಳಿ ಓಡಾಡುತ್ತ, ತೇಲಾಡುತ್ತ ಬೇಯುತ್ತಿರುವ ಬಂಗಾರ ಬಣ್ಣದ ಮೆಣಸಿನಕಾಯಿ ನೋಡಿದರೆ ತಿನ್ನಬಾರದೆಂದು ನಿರ್ಧರಿಸಿದವರೂ ತಿನ್ನದೇ ಇರಲಾರರು. ವಿಶ್ವಾಮಿತ್ರನ ಎದುರು ಮೇನಕೆ ಬಂದು ತಪೋಭಂಗ ಮಾಡಿದಂತೆ, ಬಾಯಿಚಪಲವನ್ನು ನಿಯಂತ್ರಿಸುವೆನೆನ್ನುವವರೂ ಒಮ್ಮೆ ಮೆಣಸಿನಕಾಯಿ ರುಚಿ ನೋಡಿಯೇ ಬಿಡಬೇಕೆಂದೆನಿಸುವುದು ಖಂಡಿತ.
FB_IMG_1477450421303ನಾಡಿನಾದ್ಯಂತ ಹೆಸರು ಮಾಡಿರುವ ಕೊಟ್ಟೂರು ಮೆಣಸಿನಕಾಯಿ ಮಂಡಕ್ಕಿ, ಜೇಬಿಗೆ ಹೊರೆಯಾಗದ, ಬಾಯಿಗೆ ರುಚಿ ನೀಡುವ, ಜನಸಾಮಾನ್ಯರಿಗೂ ನಿಲುಕುವ ಈ ತಿನಿಸು ನಮ್ಮ ತಾಲೂಕಿನದು ಎಂಬುದೇ ನಮಗೆಲ್ಲ ಹೆಮ್ಮೆ ಅಲ್ಲವೆ ? ನಮ್ಮ ತಾಲೂಕಿನವರಿಗಂತೂ ಕೊಟ್ಟೂರಿನ ಮಂಡಕ್ಕಿ ಮೆಣಸಿನಕಾಯಿ ತಿಂದುಬನ್ನಿ ಎಂದು ಹೇಳುವ ಅಗತ್ಯವೇ ಇಲ್ಲ. ನಮ್ಮ ಹೆಮ್ಮೆಯ ಕೂಡ್ಲಿಗಿಗೆ ರಾಜ್ಯದ ವಿವಿಧ ಭಾಗಗಳ ಸ್ನೇಹಿತರು ಸದಸ್ಯರಾಗಿದ್ದಾರೆ. ನಮ್ಮ ಕೂಡ್ಲಿಗಿ ತಾಲೂಕಿನ ಯಾವುದಾದರೂ ಭಾಗಕ್ಕೆ ನಮ್ಮ ಫೇಸ್ ಬುಕ್ ಸ್ನೇಹಿತರು ಭೇಟಿ ನೀಡಿದರೆ ಖಂಡಿತ ನಮ್ಮ ತಾಲೂಕಿನ ಕೊಟ್ಟೂರಿಗೆ ಒಮ್ಮೆ ಭೇಟಿ ಕೊಡಿ, ಅಲ್ಲಿಯ ರುಚಿ ರುಚಿಯಾದ ಮಂಡಕ್ಕಿ ಮೆಣಸಿನಕಾಯಿಯ ಸವಿ ನೋಡಿ ಎಂದು ಕೋರಿಕೆ.
ಅಂದಹಾಗೆ ಹೇಳುವುದು ಮರೆತೆ, ಎಲ್ಲ ಕಡೆಯೂ ಮೆಣಸಿನಕಾಯಿ ಮಾಡುತ್ತಾರೆ ಆದರೆ ಕೊಟ್ಟೂರಿನದೇನು ವಿಶೇಷ ಎಂದಿರಾ ? ಇಲ್ಲಿನ ಕಡಲೆಹಿಟ್ಟು, ಅದನ್ನು ಹದವಾಗಿ ಕಲೆಸಿ ಅದನ್ನು ಎಣ್ಣೆಯಲ್ಲಿ ಕರೆಯುವ ವಿಧಾನ, ಸಿದ್ಧಗೊಂಡ ಗರಿಗರಿಯಾದ ಮೆಣಸಿನಕಾಯಿ ಅದು ಇಲ್ಲಿನ ಪಾಕಶಾಸ್ತ್ರ ಪ್ರವೀಣರಿಗೆ ಮಾತ್ರ ಗೊತ್ತಿರುವ ವಿದ್ಯೆ. ಇಲ್ಲಿನ ಮೆಣಸಿನಕಾಯಿ ರುಚಿ ನೋಡಿದ ನಂತರ ಬೇರೆಡೆ ಎಲ್ಲಿಯೇ ನೀವು ಮೆಣಸಿನಕಾಯಿ ತಿಂದರೂ ಈ ರುಚಿ ಸಿಗುವುದಿಲ್ಲ. ಅದೇ ಇಲ್ಲಿನ ವಿಶೇಷತೆ. ಹೇಳುವುದರಲ್ಲೇನಿದೆ ಸೊಗಸು, ಒಮ್ಮೆ ರುಚಿ ನೋಡಿ ಹೇಳಿ.
ಧನ್ಯವಾದಗಳು

Leave a Reply

Your email address will not be published.